Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 21ನೇ ಮಾರ್ಚ್ 2022

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 2:

 1. ವಿಶ್ವ ಸಂತೋಷದ ವರದಿ.

ಸಾಮಾನ್ಯ ಅಧ್ಯಯನ ಪತ್ರಿಕೆ 3:

 1. MGNREGA.
 2. ಮಹಿಳಾ ರೈತರಿಗಾಗಿ ಯೋಜನೆ.
  ಚೀತಾ ಮರುಪರಿಚಯ ಯೋಜನೆ.
 3. ಭಾರತ ಮತ್ತು ಆರ್ಕ್ಟಿಕ್.
 4. ಫೇಮ್ ಇಂಡಿಯಾ ಸ್ಕೀಮ್.

ಪ್ರಿಲಿಮ್ಸ್‌ಗೆ ಸಂಬಂಧಿಸಿದ ಸಂಗತಿಗಳು:

 1. ವೇದಂತಂಗಲ್ ಪಕ್ಷಿಧಾಮ.
 2. ಅರಣ್ಯ ಆನೆಗಳು.
 3. ವಿಶ್ವ ಗುಬ್ಬಚ್ಚಿ ದಿನ.

ಸಾಮಾನ್ಯ ಅಧ್ಯಯನ ಪತ್ರಿಕೆ 2:


 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

 

ವಿಶ್ವ ಸಂತೋಷ ವರದಿ:

(World Happiness Report)

 

ಸಂದರ್ಭ:

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ ಸಹ ಇದು ಕನಿಷ್ಠ ಸಂತೋಷದ ದೇಶಗಳಲ್ಲಿ ಒಂದಾಗಿದೆ.

 

 1. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷದ ವರದಿ 2022ರ ಪಟ್ಟಿಯಲ್ಲಿ 149 ದೇಶಗಳ ಪೈಕಿ ಭಾರತ 136ನೇ ಸ್ಥಾನದಲ್ಲಿದೆ. ಫಿನ್ಲೆಂಡ್ ಸತತವಾಗಿ ಐದನೇ ವರ್ಷವೂ ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯ ಕೆಳಗಿನಿಂದ ಹತ್ತನೇ ಸ್ಥಾನದಲ್ಲಿದೆ.

 

ವಿಶ್ವ ಸಂತೋಷದ ವರದಿ:

Gallup World Poll data ಪ್ರಾಯೋಜಕತ್ವದ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲವು ವಿಶ್ವ ಸಂತೋಷದ ವರದಿ 2022ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೋವಿಡ್-19 ಪರಿಣಾಮಗಳು ಜಗತ್ತಿನಾದ್ಯಂತ ಜನರ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಕೇಂದ್ರಿಕರಿಸಿದೆ.

 

ಪ್ರತಿ ದೇಶದ ನಾಗರಿಕರು ಎಷ್ಟು ಸಂತೋಷದಿಂದ ಇರುತ್ತಾರೆ ಎಂಬುದನ್ನು ವರದಿಯು ತಿಳಿಸುತ್ತದೆ. ಭಾರತವು 2021 ರಲ್ಲಿ 139ನೇ ಸ್ಥಾನದಲ್ಲಿದ್ದು, 2020 ರ ವರದಿಯಲ್ಲಿ ಭಾರತವು 156 ದೇಶಗಳಲ್ಲಿ 144 ನೇ ಸ್ಥಾನದಲ್ಲಿ ಮತ್ತು 2019ರಲ್ಲಿ 140ನೇ ಸ್ಥಾನದಲ್ಲಿತ್ತು.

 

ವಿಶ್ವಸಂಸ್ಥೆಯು 2013 ರಲ್ಲಿ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲು ಪ್ರಾರಂಭಿಸಿತು ಆದರೆ ಅದಕ್ಕಾಗಿ ಒಂದು ನಿರ್ಣಯವನ್ನು ಜುಲೈ 12, 2012 ರಂದು ಅಂಗೀಕರಿಸಲಾಯಿತು. ಈ ವರ್ಷದ ವಿಷಯವೆಂದರೆ ಎಲ್ಲರಿಗೂ, ಎಂದೆಂದಿಗೂ ಸಂತೋಷ ಎಂಬುದಾಗಿದೆ. ಇದು ಪ್ರಪಂಚದಾದ್ಯಂತದ ಜನರಿಗೆ ಸಂತೋಷದ ಮಹತ್ವವನ್ನು ಸೂಚಿಸುತ್ತದೆ. ಜನರ ದೈನಂದಿನ ಜೀವನದಲ್ಲಿ ಸಂತೋಷದ ಮಹತ್ವವನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಮಾರ್ಚ್ 20 ರಂದು ಈ ದಿನವನ್ನು ಅಂತಾರಾಷ್ಟ್ರೀಯ ಸಂತೋಷ ದಿನ ಅಥವಾ ಇಂಟರ್‌ನ್ಯಾಷನಲ್‌ ಡೇ ಆಫ್‌ ಹ್ಯಾಪಿನೆಸ್‌ ಎಂದು ಆಚರಿಸುತ್ತಾರೆ.

 

ಮೊದಲು ಭೂತಾನ್ ಪ್ರಾರಂಭಿಸಿತು..

ವಿಶ್ವಸಂಸ್ಥೆಯು 2013 ರಲ್ಲಿ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲು ಪ್ರಾರಂಭಿಸಿತು ಆದರೆ ಅದಕ್ಕಾಗಿ ಒಂದು ನಿರ್ಣಯವನ್ನು ಜುಲೈ 12, 2012 ರಂದು ಅಂಗೀಕರಿಸಲಾಯಿತು. ಈ ನಿರ್ಣಯವನ್ನು ಮೊದಲು ಭೂತಾನ್ ಪ್ರಾರಂಭಿಸಿತು. ಇದು 1970 ರ ದಶಕದ ಆರಂಭದಿಂದಲೂ ರಾಷ್ಟ್ರೀಯ ಆದಾಯಕ್ಕಿಂತ ರಾಷ್ಟ್ರೀಯ ಸಂತೋಷದ ಮಹತ್ವವನ್ನು ಒತ್ತಿಹೇಳಿತು. ಆ ಮೂಲಕ ಒಟ್ಟು ರಾಷ್ಟ್ರೀಯ ಉತ್ಪನ್ನದ ಮೇಲೆ ಒಟ್ಟು ರಾಷ್ಟ್ರೀಯ ಸಂತೋಷವನ್ನು ಅಳವಡಿಸಿಕೊಂಡಿದೆ.

 

ಸಮೀಕ್ಷೆಯು ಗ್ಯಾಲಪ್ ವರ್ಲ್ಡ್ ಪೋಲ್ ಅನ್ನು ಬಳಸಿತು. ಅದರ ಮೂಲಕ ಜನರನ್ನು ಮೂರು ಸೂಚಕಗಳಲ್ಲಿ ಮತ ಚಲಾಯಿಸಲು ಕೇಳಲಾಯಿತು. ಜೀವನ ಮೌಲ್ಯಮಾಪನಗಳು, ಸಕಾರಾತ್ಮಕ ಭಾವನೆಗಳು ಮತ್ತು ನಕಾರಾತ್ಮಕ ಭಾವನೆಗಳು. ಇವುಗಳ ಹೊರತಾಗಿ, ಸಮೀಕ್ಷೆಯು ದೇಶಗಳ ತಲಾ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮತ್ತು ಜೀವಿತಾವಧಿ, ಸಾಮಾಜಿಕ ಬೆಂಬಲ, ಆಯ್ಕೆಗಳನ್ನು ಮಾಡುವ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರದ ಗ್ರಹಿಕೆಗಳಂತಹ ಇತರ ಸೂಚಕಗಳಿಗೆ ಸಂಬಂಧಿಸಿದ ಡೇಟಾವನ್ನು ಪರಿಗಣಿಸಿ ಮೌಲ್ಯಮಾಪನ ಮಾಡಿದೆ.

 

 1. ತನ್ನ ಹತ್ತನೇ ವರ್ಷದಲ್ಲಿರುವ ವರದಿಯು ಆರ್ಥಿಕ ಮತ್ತು ಸಾಮಾಜಿಕ ನಿಯತಾಂಕಗಳನ್ನು ಹೊರತುಪಡಿಸಿ ಜನರು ತಮ್ಮ ಸ್ವಂತ ಜೀವನವನ್ನು ಹೇಗೆ ಮೌಲ್ಯಮಾಪನ ಮಾಡುತ್ತಾರೆ ಎಂಬುದರ ಕುರಿತು ವರದಿ ಮಾಡಲು ಜಾಗತಿಕ ಸಮೀಕ್ಷೆ ಡೇಟಾವನ್ನು ಬಳಸುತ್ತದೆ.
 2. ಶ್ರೇಯಾಂಕಗಳು 2019-2021 ರ ಮೂರು ವರ್ಷಗಳ ಅವಧಿಯ ಸರಾಸರಿ ಡೇಟಾವನ್ನು ಆಧರಿಸಿವೆ.
 3. ವರ್ಲ್ಡ್ ಹ್ಯಾಪಿನೆಸ್ ವರದಿಯು ಜಿಡಿಪಿ, ಸಾಮಾಜಿಕ ಬೆಂಬಲ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರತಿ ರಾಷ್ಟ್ರದಲ್ಲಿನ ಭ್ರಷ್ಟಾಚಾರದ ಮಟ್ಟಗಳಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಂತೋಷದ ಮಟ್ಟವನ್ನು ಮೌಲ್ಯಮಾಪನ ಮಾಡುತ್ತದೆ.

 

ವಿಶ್ವಸಂತೋಷ ವರದಿ 2022ರ ಪ್ರಮುಖಾಂಶಗಳು:

 1. ವರ್ಲ್ಡ್ ಹ್ಯಾಪಿನೆಸ್ ವರದಿಯ 10 ನೇ ಆವೃತ್ತಿಯ ಪ್ರಕಾರ ಫಿನ್ಲೆಂಡ್ ಸತತ ಐದನೇ ಬಾರಿಗೆ ಅಗ್ರಸ್ಥಾನದಲ್ಲಿದೆ.
 2. ಫಿನ್ಲೆಂಡ್ ನಂತರ ಡೆನ್ಮಾರ್ಕ್, ಐಸ್ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ಸ್ ಗಳಿವೆ.
 3. ಇತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, ಯುನೈಟೆಡ್ ಸ್ಟೇಟ್ಸ್ 16 ನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಬ್ರಿಟನ್ 17 ನೇ ಮತ್ತು ಫ್ರಾನ್ಸ್ 20 ನೇ ಸ್ಥಾನವನ್ನು ಪಡೆದುಕೊಂಡಿದೆ.
 4. ವಿಶ್ವ ಸಂತೋಷ ಸೂಚ್ಯಂಕದಲ್ಲಿ ಭಾರತವು ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದೆ, ಅದರ ಸ್ಥಾನವು ಕಳೆದ ವರ್ಷದ 139 ಕ್ಕೆ ಹೋಲಿಸಿದರೆ ಈ ವರ್ಷ 136 ಕ್ಕೆ  ಏರಿಕೆ ಕಂಡು ಸ್ವಲ್ಪ ಸುಧಾರಿಸಿದೆ.
 5. ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ, ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನ ಮಾತ್ರ ಭಾರತಕ್ಕಿಂತ ಕೆಟ್ಟ ಪರಿಸ್ಥಿತಿಯಿಂದ ಕೂಡಿದೆ.
 6. 146 ದೇಶಗಳ ಸೂಚ್ಯಂಕದಲ್ಲಿ ಅಫ್ಘಾನಿಸ್ತಾನವನ್ನು ವಿಶ್ವದ ಅತ್ಯಂತ ಅತೃಪ್ತ ದೇಶ ಎಂದು ಹೆಸರಿಸಲಾಗಿದೆ.
 7. ನೇಪಾಳ (84), ಬಾಂಗ್ಲಾದೇಶ (94), ಪಾಕಿಸ್ತಾನ (121) ಮತ್ತು ಶ್ರೀಲಂಕಾ (127) ಪಟ್ಟಿಯಲ್ಲಿ ಉತ್ತಮ ಶ್ರೇಯಾಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. 
 8. ಕಳೆದ 10 ವರ್ಷಗಳಲ್ಲಿ ಜೀವನ ಮೌಲ್ಯಮಾಪನದಲ್ಲಿ 0 ರಿಂದ 10 ಸ್ಕೇಲ್‌ನಲ್ಲಿ ಪೂರ್ಣ ಬಿಂದುವಿನ ಕುಸಿತವನ್ನು ಕಂಡ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಹ್ಯಾಪಿನೆಸ್ ವರದಿ ಹೇಳಿದೆ.

 

ಮಹತ್ವ:

 1. ಕಳೆದ ಕೆಲವು ವರ್ಷಗಳಲ್ಲಿ, ಸಂತೋಷವು ಕೇವಲ ದೇಶಗಳನ್ನು ಮಾತ್ರವಲ್ಲದೆ ಕಾರ್ಪೊರೇಟ್‌ ಕಂಪೆನಿಗಳನ್ನೂ ಟ್ರ್ಯಾಕ್ ಮಾಡಲು ಪ್ರಮುಖ ಮಾನದಂಡ ಆಗಿದೆ.
 2. ಯೋಗಕ್ಷೇಮದ ಪ್ರಮುಖ ನಿರ್ಧಾರಕಗಳನ್ನು ಗುರುತಿಸುವುದು ವರದಿಯ ಹಿಂದಿನ ಗುರಿಯಾಗಿದೆ.
 3. ಈ ಮಾಹಿತಿಯು ಸಂತೋಷದಿಂದ ಕೂಡಿದ ಸಮಾಜಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ನೀತಿಗಳನ್ನು ರೂಪಿಸಲು ದೇಶಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

ಕಾನೂನು, ಆಡಳಿತ ಮತ್ತು ಸಂತೋಷದ ನಡುವಿನ ಪರಸ್ಪರ ಸಹ ಸಂಬಂಧಗಳು: ಈ ಸಂಪರ್ಕಗಳು ಏಕೆ ಮುಖ್ಯವಾಗಿವೆ?

 1. ಸಂತೋಷವನ್ನು ಸಾರ್ವಜನಿಕ ನೀತಿಯ ಗುರಿಯಾಗಿ ಸ್ವೀಕರಿಸಲಾಗಿದೆ. ಮತ್ತು ಈ ವಿಷಯವು ಕಾನೂನು, ಆಡಳಿತ ಮತ್ತು ಸಂತೋಷದ ನಡುವಿನ ಪರಸ್ಪರ ಸಂಬಂಧಗಳನ್ನು ಹುಡುಕುತ್ತಿರುವ ಹೊಸ ನಿರೂಪಣೆಗೆ ಪೂರಕವಾಗಿದೆ.
 2. ಹಲವಾರು ರಾಷ್ಟ್ರಗಳ ಅನುಭವಗಳಿಂದ ಹೆಚ್ಚಿನ GDP ಮತ್ತು ಹೆಚ್ಚಿನ ತಲಾ ಆದಾಯವನ್ನು ಹೊಂದಿರುವ ದೇಶಗಳು ಸಂತೋಷ ಭರಿತ ದೇಶಗಳಲ್ಲ ಮತ್ತು ಸಂತೋಷದ ಸ್ಥಿತಿ ಮತ್ತು ಕಾನೂನಿನ ನಡುವೆ ಸಂಬಂಧವಿದೆ ಎಂದು ತಿಳಿದುಬರುತ್ತದೆ.

 

ವಿಶ್ವಸಂತೋಷ ವರದಿಗಳು, ಹಿಂದಿನ ವರ್ಷಗಳಲ್ಲಿ, ಜನರು ಈ ಕೆಳಗಿನ ಸ್ಥಿತಿಯನ್ನು ಹೊಂದಿರುವುದನ್ನು ದೃಢಪಡಿಸಿವೆ:

 

 1. ಕಳಪೆ ಮಾನಸಿಕ ಆರೋಗ್ಯ.
 2. ವ್ಯಕ್ತಿನಿಷ್ಠ ಯೋಗಕ್ಷೇಮದ ಕನಿಷ್ಠ ಮಟ್ಟ.
 3. ಹೆಚ್ಚಿನ ಆದಾಯದ ಹೊರತಾಗಿಯೂ ಆಡಳಿತ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳಪೆ ಗ್ರಹಿಕೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ :3


 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು, ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

 

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (MGNREGA):

 

ಸಂದರ್ಭ:

MGNREGA ಕಾರ್ಯನಿರ್ವಹಣೆಯ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸದೀಯ ಸ್ಥಾಯಿ ಸಮಿತಿಯು ಲೋಕಸಭೆಗೆ ತನ್ನ ವರದಿಯನ್ನು ಸಲ್ಲಿಸಿದೆ.

 

ಹೈಲೈಟ್ ಮಾಡಲಾದ ಸವಾಲುಗಳು/ಕಾಳಜಿಗಳು:

 1. ಈ ಹಿಂದಿನ ವರ್ಷಗಳಲ್ಲಿ ಯಾವಾಗಲೂ ಬಜೆಟ್ ಅಂದಾಜಿಗಿಂತ ಪರಿಷ್ಕೃತ ಅಂದಾಜಿನಲ್ಲಿ ಹೆಚ್ಚಳ ಕಂಡುಬಂದಿದೆ.
 2. ಹಣ ಬಿಡುಗಡೆಯಲ್ಲಿ ವಿಳಂಬ.
 3. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೂಲಿ ದರದಲ್ಲಿ ವ್ಯಾಪಕ ಅಸಮಾನತೆಯಿದೆ.
 4. ನಕಲಿ ಜಾಬ್ ಕಾರ್ಡ್‌ಗಳು, ವ್ಯಾಪಕ ಭ್ರಷ್ಟಾಚಾರ ಮತ್ತು ಮಸ್ಟರ್ ರೋಲ್‌ಗಳನ್ನು ತಡವಾಗಿ ಅಪ್‌ಲೋಡ್ ಮಾಡುವುದು.

 

ಮಾಡಲಾದ ಶಿಫಾರಸ್ಸುಗಳು:

 1. ಖಾತರಿಪಡಿಸಿದ ಕೆಲಸದ ದಿನಗಳ ಸಂಖ್ಯೆಯನ್ನು 100 ರಿಂದ ಕನಿಷ್ಠ 150 ಕ್ಕೆ ಹೆಚ್ಚಿಸುವುದು.
 2. ಸ್ಥಳೀಯ ಭೌಗೋಳಿಕ ಭೂಪ್ರದೇಶ ಮತ್ತು ಸ್ಥಳೀಯ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ಅನುಮತಿಸಬಹುದಾದ ಕೆಲಸವನ್ನು ಹೆಚ್ಚಿಸಬೇಕು.
 3. ಸರ್ಕಾರವು ತನ್ನ ಲೆಕ್ಕಾಚಾರವನ್ನು ಮರುಪರಿಶೀಲಿಸಬೇಕು ಮತ್ತು ಬಜೆಟ್ ಕೊರತೆಯಿಂದಾಗಿ ಕುಂಠಿತಗೊಂಡಿರುವ ಗ್ರಾಮೀಣಾಭಿವೃದ್ಧಿ ಯೋಜನೆಗಳ ವೇಗವನ್ನು ಹೆಚ್ಚಿಸುವ ಸಲುವಾಗಿ ಹೆಚ್ಚಿನ ಅನುದಾನಕ್ಕಾಗಿ ಹಣಕಾಸು ಸಚಿವಾಲಯವನ್ನು ಸಂಪರ್ಕಿಸಬೇಕು.

 

ಸುಧಾರಣೆಯ ಅವಶ್ಯಕತೆ:

 

ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ:

 

 1. ಮೊದಲ ಲಾಕ್‌ಡೌನ್ ಸಮಯದಲ್ಲಿ ಉತ್ತುಂಗಕ್ಕೇರಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (MGNREGA) ಯೋಜನೆಯಡಿ ಕೆಲಸಕ್ಕಾಗಿನ ಬೇಡಿಕೆಯು ಈಗ ಕುಸಿದಿದೆ, ಆದರೆ ಇದು ಇನ್ನೂ ಸಾಂಕ್ರಾಮಿಕ (KOVID-19) ಪೂರ್ವದ ಮಟ್ಟಕ್ಕಿಂತ ಹೆಚ್ಚಾಗಿದೆ.
 2. ಈ ಯೋಜನೆಯಡಿಯಲ್ಲಿ ಕೆಲಸಕ್ಕೆ ಹೆಚ್ಚಿನ ಬೇಡಿಕೆಯು ಸಾಮಾನ್ಯವಾಗಿ ಕಾರ್ಮಿಕರ ಸ್ಥಳೀಯ ಅಥವಾ ಮೂಲ ರಾಜ್ಯಗಳಿಗಿಂತ ಹೆಚ್ಚಾಗಿ ವಲಸೆ ಕಾರ್ಮಿಕರ ಗಮ್ಯಸ್ಥಾನದ ರಾಜ್ಯಗಳಲ್ಲಿ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

 

MGNREGA ಯೋಜನೆಯ ಕುರಿತು:

 

ಈ ಯೋಜನೆಯನ್ನು 2005 ರಲ್ಲಿ “ಕೆಲಸದ ಹಕ್ಕನ್ನು”(Right to Work) ಖಾತರಿಪಡಿಸುವ ಸಾಮಾಜಿಕ ಕ್ರಮವಾಗಿ ಪರಿಚಯಿಸಲಾಯಿತು.

ಈ ಸಾಮಾಜಿಕ ಅಳತೆ ಮತ್ತು ಕಾರ್ಮಿಕ ಕಾನೂನಿನ ಪ್ರಮುಖ ಸಿದ್ಧಾಂತವೆಂದರೆ ಗ್ರಾಮೀಣ ಭಾರತದಲ್ಲಿ ಸ್ಥಳೀಯ ಸರ್ಕಾರವು ಗ್ರಾಮೀಣ ಕೌಶಲ್ಯರಹಿತ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಕಾನೂನುಬದ್ಧವಾಗಿ ಕನಿಷ್ಠ 100 ದಿನಗಳ ವೇತನದ ಉದ್ಯೋಗವನ್ನು ಒದಗಿಸಬೇಕಾಗುತ್ತದೆ.

ಪ್ರಮುಖ ಉದ್ದೇಶಗಳು:

 

 1. ಕೌಶಲ್ಯರಹಿತ ಕಾಮಗಾರಿಗಳನ್ನು ಮಾಡಲು ಸಿದ್ಧರಿರುವ ಪ್ರತಿ ಕುಟುಂಬದ ವಯಸ್ಕ ಕಾರ್ಮಿಕರಿಗೆ 100 ದಿನಗಳಿಗಿಂತ ಕಡಿಮೆಯಿಲ್ಲದ ಅಥವಾ ಕನಿಷ್ಠ 100 ದಿನಗಳ ಸಂಬಳ ಸಹಿತ ಗ್ರಾಮೀಣ ಉದ್ಯೋಗದ ಒದಗಿಸುವಿಕೆ.
 2. ಗ್ರಾಮೀಣ ಬಡವರ ಜೀವನೋಪಾಯವನ್ನು ಬಲಪಡಿಸುವ ಮೂಲಕ ಸಾಮಾಜಿಕ ಸೇರ್ಪಡೆಗಾಗಿ ಪೂರ್ವಭಾವಿಯಾಗಿ ಖಾತರಿನೀಡುವುದು.
 3. ಬಾವಿಗಳು, ಕೊಳಗಳು, ರಸ್ತೆಗಳು ಮತ್ತು ಕಾಲುವೆಗಳಂತಹ ಗ್ರಾಮೀಣ ಪ್ರದೇಶಗಳಲ್ಲಿ ಬಾಳಿಕೆ ಬರುವ ಸ್ಥಿರ ಆಸ್ತಿಗಳ ಸೃಷ್ಟಿ.
 4. ಗ್ರಾಮೀಣ ಪ್ರದೇಶಗಳಿಂದ ನಗರ ವಲಸೆಯನ್ನು ಕಡಿಮೆ ಮಾಡುವುದು.
 5. ತರಬೇತಿ ರಹಿತ ಗ್ರಾಮೀಣ ಕಾರ್ಮಿಕರನ್ನು ಬಳಸಿಕೊಂಡು ಗ್ರಾಮೀಣ ಮೂಲಸೌಕರ್ಯಗಳನ್ನು ರಚಿಸುವುದು.

 

MGNREGA ಯೋಜನೆಯಡಿ ಪ್ರಯೋಜನಗಳನ್ನು ಪಡೆಯುವ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:

 1. MGNREGA ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅವರು ಭಾರತದ ನಾಗರಿಕರಾಗಿರಬೇಕು.
 2. ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಆ ವ್ಯಕ್ತಿಯು 18 ವರ್ಷಗಳನ್ನು ಪೂರೈಸಿರಬೇಕು.
 3. ಅರ್ಜಿದಾರನು ಸ್ಥಳೀಯ ಪ್ರದೇಶದ ಭಾಗವಾಗಿರಬೇಕು (ಅಂದರೆ ಸ್ಥಳೀಯ ಗ್ರಾಮ ಪಂಚಾಯಿತಿಯ ಮೂಲಕ ಅರ್ಜಿ ಸಲ್ಲಿಸಬೇಕು).
 4. ಅರ್ಜಿದಾರರು ಸ್ವಯಂಪ್ರೇರಣೆಯಿಂದ ಕೌಶಲ್ಯರಹಿತ ಕೆಲಸಗಳನ್ನು ಮಾಡಲು ಮುಂದೆ ಬರಬೇಕು. 

 

ಯೋಜನೆಯ ಅನುಷ್ಠಾನ:

 1. ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಿದ 15 ದಿನಗಳಲ್ಲಿ ಅಥವಾ ಕೆಲಸಕ್ಕೆ ಅರ್ಜಿ ಸಲ್ಲಿಸಿದ ದಿನಾಂಕದಿಂದ, ಅರ್ಜಿದಾರರಿಗೆ ವೇತನ ಉದ್ಯೋಗವನ್ನು ಒದಗಿಸಲಾಗುತ್ತದೆ.
 2. ಉದ್ಯೋಗವು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ಅರ್ಜಿಯನ್ನು ಸಲ್ಲಿಸಿದ ಹದಿನೈದು ದಿನಗಳಲ್ಲಿ ಅಥವಾ ಕೆಲಸ ಕೋರಿದ ದಿನಾಂಕದಿಂದ ಉದ್ಯೋಗವನ್ನು ಒದಗಿಸದಿದ್ದಲ್ಲಿ ನಿರುದ್ಯೋಗ ಭತ್ಯೆ ಪಡೆಯುವ ಹಕ್ಕು.
 3. MGNREGA ಕಾರ್ಯಚಟುವಟಿಕೆಗಳ ಸಾಮಾಜಿಕ ಲೆಕ್ಕಪರಿಶೋಧನೆಯು ಕಡ್ಡಾಯವಾಗಿದೆ, ಆ ಮೂಲಕ ಕಾರ್ಯಕ್ರಮದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಾತರಿ ಪಡಿಸಲಾಗಿದೆ.
 4. ವೇತನ ಪಡೆಯುವವರು ಧ್ವನಿ ಎತ್ತುವ ಮತ್ತು ದೂರುಗಳನ್ನು ಸಲ್ಲಿಸುವ ಪ್ರಮುಖ ವೇದಿಕೆ ಗ್ರಾಮಸಭೆಯಾಗಿದೆ.
 5. MGNREGA ಅಡಿಯಲ್ಲಿ ಮಾಡಲಾಗುವ ಕಾಮಗಾರಿಗಳಿಗೆ ಅನುಮೋದನೆ ನೀಡುವುದು ಮತ್ತು ಅವುಗಳಿಗೆ ಆದ್ಯತೆಯನ್ನು ನೀಡುವ ಜವಾಬ್ದಾರಿಯು ಗ್ರಾಮಸಭೆ ಮತ್ತು ಗ್ರಾಮ ಪಂಚಾಯಿತಿಗಳದಾಗಿರುತ್ತದೆ. 

 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

 

ಮಹಿಳಾ ರೈತರಿಗಾಗಿ ಯೋಜನೆ:

(Scheme for Women Farmers)

 

ಸಂದರ್ಭ:

ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿನ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಮಹಿಳೆಯರನ್ನು ಪರಿಚಿತರನ್ನಾಗಿಸಲು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆಗಳ ಅಡಿಯಲ್ಲಿ ಮಹಿಳಾ ರೈತರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ.

 1. ಕೃಷಿ ಮತ್ತು ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ (DAC&FW) ವಿವಿಧ ಫಲಾನುಭವಿ-ಆಧಾರಿತ ಯೋಜನೆಗಳ ಮಾರ್ಗಸೂಚಿಗಳು, ರಾಜ್ಯಗಳು ಮತ್ತು ಇತರ ಅನುಷ್ಠಾನ ಸಂಸ್ಥೆಗಳು ಮಹಿಳಾ ರೈತರ ಮೇಲೆ ಕನಿಷ್ಠ 30% ವೆಚ್ಚವನ್ನು ಭರಿಸುವಂತೆ ಸೂಚಿಸುತ್ತವೆ.

 

ಕೆಳಗಿನ ಯೋಜನೆಗಳು ಮಹಿಳಾ ಕೃಷಿಕರ ಕಲ್ಯಾಣಕ್ಕಾಗಿ ನಿರ್ದಿಷ್ಟ ಅಂಶಗಳನ್ನು ಹೊಂದಿವೆ:

 1. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್,
 2. ಎಣ್ಣೆಬೀಜ ಮತ್ತು ಪಾಮ್ ಎಣ್ಣೆಯ ರಾಷ್ಟ್ರೀಯ ಮಿಷನ್,
 3. ಸುಸ್ಥಿರ ಕೃಷಿಯ ರಾಷ್ಟ್ರೀಯ ಮಿಷನ್,
 4. ಬೀಜ ಮತ್ತು ನೆಡುವ ವಸ್ತುಗಳಿಗಾಗಿರುವ ಉಪ-ಮಿಷನ್,
 5. ಕೃಷಿ ಯಾಂತ್ರೀಕರಣದ ಉಪ-ಮಿಷನ್ ಮತ್ತು
 6. ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿನ ಮಿಷನ್.

 

ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನಾ (MKSP):

 1. ಗ್ರಾಮೀಣಾಭಿವೃದ್ಧಿ ಇಲಾಖೆಯು ‘ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನಾ (MKSP)’ ಎಂಬ ನಿರ್ದಿಷ್ಟ ಯೋಜನೆಯನ್ನು ಪ್ರಾರಂಭಿಸಿದೆ.
 2. ಇದು DAY-NRLM (ದೀನದಯಾಳ್ ಅಂತ್ಯೋದಯ ಯೋಜನೆ — ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್) ನ ಉಪವಿಭಾಗವಾಗಿದೆ.
 3. ಈ ಯೋಜನೆಯನ್ನು 2011 ರಿಂದ ಜಾರಿಗೊಳಿಸಲಾಗಿದೆ.
 4. ಯೋಜನೆಯ ಉದ್ದೇಶಗಳು: ಗ್ರಾಮೀಣ ಭಾಗದ ಮಹಿಳೆಯರ ಕೃಷಿ ಆಧಾರಿತ ಜೀವನೋಪಾಯ ಚಟುವಟಿಕೆಗಳನ್ನು ಸೃಷ್ಟಿಸುವುದು ಮತ್ತು ಬಲಪಡಿಸುವುದು, ವ್ಯವಸ್ಥಿತ ಹೂಡಿಕೆಗಳ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು, ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರ ಸಬಲೀಕರಣ ಮಾಡುವುದು.
 5. ಕಾಲಾವಧಿ: ಈ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರವು 3 ವರ್ಷಗಳ ಕಾಲಾವಧಿಯನ್ನು ನಿಗದಿಪಡಿಸಿ ಯೋಜನೆಯ ಗುರಿಯನ್ನು ಸಾಧಿಸಲು ಕಾರ್ಯಕ್ರಮವನ್ನು ರೂಪಿಸಿದೆ.
 6. ಕಾರ್ಯತಂತ್ರ: ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳು ಜ್ಞಾನ ಮತ್ತು ರೈತ ಕೇಂದ್ರದ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸಮುದಾಯ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳ ಸಮನ್ವಯದೊಂದಿಗೆ ಸಂಘಟಿತ ಕ್ರಮ ಸುಸ್ಥಿರ ಪ್ರಮಾಣದಲ್ಲಿ ಜೀವನೋಪಾಯ ಚಟುವಟಿಕೆಯನ್ನು ನಡೆಸುವ ನಿಟ್ಟಿನಲ್ಲಿ ಅಗತ್ಯವಿರುವ ಕೌಶಲ್ಯವನ್ನು ಅಭಿವದ್ಧಿಪಡಿಸುವುದು, ಕಡುಬಡವ ಹಾಗೂ ದುರ್ಬಲ ವರ್ಗದ ಮಹಿಳೆಯರು ಅಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರು ಮತ್ತು ಬುಡಕಟ್ಟು ಜನಾಂಗದವರನ್ನು ಗುರಿಯಾಗಿಟ್ಟುಕೊಂಡಿರುವುದು, ಗುರಿಯಾದಾರಿತ ಗುಂಪುಗಳನ್ನು ಆಯ್ಕೆಮಾಡುವಾಗ ಮಹಿಳಾ ನೇತತ್ವದ ಕುಟುಂಬಗಳು ಕಷಿ ಮತ್ತು ಕಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಬಡಕುಟುಂಬಗಳಿಗೆ ಹೆಚ್ಚಿನ ಆದ್ಯತೆ ನೀಡುವುದು.
 7. ಅನುಷ್ಠಾನ: ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (SRLM) ಮೂಲಕ ಪ್ರಾಜೆಕ್ಟ್ ಇಂಪ್ಲಿಮೆಂಟಿಂಗ್ ಏಜೆನ್ಸಿಗಳ ಮೂಲಕ ಪ್ರಾಜೆಕ್ಟ್ ಮೊಡ್ ನಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.

 

ರೈತ ಮಹಿಳೆಗೆ ಉತ್ತೇಜನ ಅಗತ್ಯ:

ಭಾರತದಲ್ಲಿನ ಕೃಷಿ ಬೆಂಬಲ ವ್ಯವಸ್ಥೆಯು ಕೃಷಿ ಕಾರ್ಮಿಕರು ಮತ್ತು ಕೃಷಿಕರಾಗಿ ಮಹಿಳೆಯರನ್ನು ಅವರ ಹಕ್ಕುಗಳಿಂದ ಹೊರಗಿಡುವುದನ್ನು ಬಲಪಡಿಸುತ್ತದೆ. 

 

 1. ಭಾರತ ಸೇರಿದಂತೆ ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಯಲ್ಲಿ ಗ್ರಾಮೀಣ ಮಹಿಳೆಯರು ಹೆಚ್ಚು ಉತ್ಪಾದಕ ಕಾರ್ಯಪಡೆಯನ್ನು ರೂಪಿಸುತ್ತಾರೆ. 80% ಕ್ಕಿಂತ ಹೆಚ್ಚು ಗ್ರಾಮೀಣ ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
 2. ವಿಧವೆಯಾದ್ದರಿಂದ, ತೊರೆದು ಹೋಗುವಿಕೆ ಅಥವಾ ಪುರುಷ ವಲಸೆಯ ಕಾರಣದಿಂದ ಸುಮಾರು 20 ಪ್ರತಿಶತದಷ್ಟು ಕೃಷಿ ಜೀವನೋಪಾಯಗಳನ್ನು ಸ್ತ್ರೀಯರು ಮುನ್ನಡೆಸುತ್ತಾರೆ.
 3. ಮಾತೃಪ್ರಧಾನ ಕುಟುಂಬಗಳು ವಿಸ್ತರಣಾ ಸೇವೆಗಳನ್ನು, ರೈತ ಸಂಸ್ಥೆಗಳು ಮತ್ತು ಬೀಜ, ನೀರು, ಸಾಲ, ಸಬ್ಸಿಡಿ ಮುಂತಾದ ಉತ್ಪಾದನಾ ಆಸ್ತಿಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಮಹಿಳಾ ಕೃಷಿಕಾರ್ಮಿಕರಿಗೆ ಪುರುಷ ಕೃಷಿ ಕಾರ್ಮಿಕರಿಗಿಂತ ಕಡಿಮೆ ವೇತನ ನೀಡಲಾಗುತ್ತದೆ.

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

 

ಭಾರತ ಮತ್ತು ಆರ್ಕ್ಟಿಕ್:

(India and the Arctic)

 

ಸಂದರ್ಭ:

ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಪರಿಸರವನ್ನು ರಕ್ಷಿಸುವ ಗುರಿಯೊಂದಿಗೆ ಸರ್ಕಾರವು ಭಾರತದ ಆರ್ಕ್ಟಿಕ್ (India’s Arctic Policy) ನೀತಿಯನ್ನು ಅನಾವರಣಗೊಳಿಸಿದೆ.

 1. ಆರ್ಕ್ಟಿಕ್ ಕೌನ್ಸಿಲ್‌ನ 13 ವೀಕ್ಷಕ ಸ್ಥಾನಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. 

 

ಭಾರತದ ಆರ್ಕ್ಟಿಕ್ ನೀತಿ:

 1. ಭಾರತದ ಆರ್ಕ್ಟಿಕ್ ನೀತಿಯನ್ನು ಆರು ಕೇಂದ್ರ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ:
 2. ವಿಜ್ಞಾನ ಮತ್ತು ಸಂಶೋಧನೆ.
 3. ಪರಿಸರ ಸಂರಕ್ಷಣೆ.
 4. ಆರ್ಥಿಕ ಮತ್ತು ಮಾನವ ಅಭಿವೃದ್ಧಿ.
 5. ಸಾರಿಗೆ ಮತ್ತು ಸಂಪರ್ಕ.
 6. ಆಡಳಿತ ಮತ್ತು ಅಂತರಾಷ್ಟ್ರೀಯ ಸಹಕಾರ.
 7. ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ.

 

ಈ ನೀತಿಯ ಪ್ರಮುಖ ಅಂಶಗಳು:

 1. ಆರ್ಕ್ಟಿಕ್ ಪ್ರದೇಶದಲ್ಲಿ ವೈಜ್ಞಾನಿಕ ಸಂಶೋಧನೆ, “ಸುಸ್ಥಿರ ಪ್ರವಾಸೋದ್ಯಮ” ಮತ್ತು ಖನಿಜ ತೈಲ ಮತ್ತು ಅನಿಲ ಪರಿಶೋಧನೆಯನ್ನು ವಿಸ್ತರಿಸಲು ನೀತಿಯು ಬದ್ಧವಾಗಿದೆ.
 2. ಇದು ಆರ್ಕ್ಟಿಕ್ ಮತ್ತು ಭಾರತೀಯ ಮಾನ್ಸೂನ್‌ಗಳ ನಡುವಿನ ವೈಜ್ಞಾನಿಕ ಮತ್ತು ಹವಾಮಾನ-ಸಂಬಂಧಿತ ಸಂಪರ್ಕಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಭಾರತದ ಆರ್ಕ್ಟಿಕ್ ಮಿಷನ್‌ನಲ್ಲಿ ಗುರಿಗಳನ್ನು ವಿವರಿಸುತ್ತದೆ.
 3. ಇದು ಧ್ರುವೀಯ ಸಂಶೋಧನೆಯನ್ನು ಮೂರನೇ ಧ್ರುವದೊಂದಿಗೆ (ಹಿಮಾಲಯ) ಸಮನ್ವಯಗೊಳಿಸಲು ಮತ್ತು ಭಾರತದೊಳಗೆ ಆರ್ಕ್ಟಿಕ್‌ನ ಅಧ್ಯಯನ ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.
 4. ಆರ್ಕ್ಟಿಕ್‌ನಿಂದ ನೈಸರ್ಗಿಕ ಸಂಪನ್ಮೂಲಗಳು ಮತ್ತು ಖನಿಜಗಳ ಜವಾಬ್ದಾರಿಯುತ ಪರಿಶೋಧನೆಗಾಗಿ ಪರಿಶೋಧನೆಯ ಅವಕಾಶಗಳಿಗೆ ನೀತಿಯು ಕರೆ ನೀಡುತ್ತದೆ ಮತ್ತು “ಕಡಲಾಚೆಯ ಪರಿಶೋಧನೆ/ಗಣಿಗಾರಿಕೆ, ಬಂದರುಗಳು, ರೈಲ್ವೆಗಳು ಮತ್ತು ವಿಮಾನ ನಿಲ್ದಾಣಗಳಂತಹ ಪ್ರದೇಶಗಳಲ್ಲಿ ಆರ್ಕ್ಟಿಕ್ ಮೂಲಸೌಕರ್ಯದಲ್ಲಿ ಹೂಡಿಕೆಗೆ ಅವಕಾಶಗಳನ್ನು ಗುರುತಿಸುತ್ತದೆ.

 

ಆರ್ಕ್ಟಿಕ್ ವಲಯ:

 1. ಆರ್ಕ್ಟಿಕ್ ಪ್ರದೇಶವು ಆರ್ಕ್ಟಿಕ್ ಮಹಾಸಾಗರ ಮತ್ತು ಕೆನಡಾ, ಡೆನ್ಮಾರ್ಕ್ (ಗ್ರೀನ್ಲ್ಯಾಂಡ್), ನಾರ್ವೆ, ರಷ್ಯಾ, ಯುಎಸ್ಎ (ಅಲಾಸ್ಕಾ), ಫಿನ್ಲ್ಯಾಂಡ್, ಸ್ವೀಡನ್ ಮತ್ತು ಐಸ್ಲ್ಯಾಂಡ್ನಂತಹ ದೇಶಗಳ ಭಾಗಗಳನ್ನು ಒಳಗೊಂಡಿದೆ.
 2. ಈ ಎಲ್ಲ ದೇಶಗಳು ಒಟ್ಟಾಗಿ ಆರ್ಕ್ಟಿಕ್ ಕೌನ್ಸಿಲ್ನ ಮುಖ್ಯ ಭಾಗವನ್ನು ರೂಪಿಸುತ್ತವೆ, ಇದೊಂದು ಅಂತರ್ ಸರ್ಕಾರಿ ವೇದಿಕೆಯಾಗಿದೆ. ಈ ಪ್ರದೇಶವು ಸುಮಾರು ನಾಲ್ಕು ಮಿಲಿಯನ್ ನಿವಾಸಿಗಳಿಗೆ ನೆಲೆಯಾಗಿದೆ, ಅದರಲ್ಲಿ ಹತ್ತನೇ ಒಂದು ಭಾಗದಷ್ಟು  ಜನರು ಈ ಪ್ರದೇಶದ ಮೂಲ ನಿವಾಸಿಗಳಾಗಿದ್ದಾರೆ. 

 

ಆರ್ಕ್ಟಿಕ್ ಮತ್ತು ಭಾರತ:

 1. ನಾರ್ವೆ, ಯುಎಸ್, ಡೆನ್ಮಾರ್ಕ್, ಫ್ರಾನ್ಸ್, ಇಟಲಿ, ಜಪಾನ್, ನೆದರ್ಲ್ಯಾಂಡ್ಸ್, ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಮತ್ತು ಸ್ಪಿಟ್ಸ್‌ಬರ್ಗೆನ್‌ಗೆ ಸಂಬಂಧಿಸಿದಂತೆ ಬ್ರಿಟಿಷ್ ಸಾಗರೋತ್ತರ ಡೊಮಿನಿಯನ್ಸ್ ಮತ್ತು ಸ್ವೀಡನ್ ನಡುವೆ ಪ್ಯಾರಿಸ್‌ನಲ್ಲಿ ಫೆಬ್ರವರಿ 1920 ರಲ್ಲಿ ಸ್ವಾಲ್ಬಾರ್ಡ್ ಒಪ್ಪಂದಕ್ಕೆ (Svalbard Treaty) ಭಾರತವು ಸಹಿ ಹಾಕುವುದರೊಂದಿಗೆ ಆರ್ಕ್ಟಿಕ್‌ನೊಂದಿಗೆ ಭಾರತದ ಸಂಬಂಧವು ಪ್ರಾರಂಭವಾಯಿತು. ಅಂದಿನಿಂದ ಭಾರತವು ಆರ್ಕ್ಟಿಕ್ ಪ್ರದೇಶದಲ್ಲಿನ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
 2. ಭಾರತವು ತನ್ನ ಆರ್ಕ್ಟಿಕ್ ಸಂಶೋಧನಾ ಕಾರ್ಯಕ್ರಮವನ್ನು 2007 ರಲ್ಲಿ ಈ ಪ್ರದೇಶದಲ್ಲಿ ಹವಾಮಾನ ಬದಲಾವಣೆಯ ಮೇಲೆ ಕೇಂದ್ರೀಕರಿಸಿತು. ಆರ್ಕ್ಟಿಕ್ ಹವಾಮಾನ ಮತ್ತು ಭಾರತೀಯ ಮಾನ್ಸೂನ್ ನಡುವಿನ ದೂರಸಂಪರ್ಕಗಳನ್ನು ಅಧ್ಯಯನ ಮಾಡುವುದು, ಉಪಗ್ರಹ ಡೇಟಾವನ್ನು ಬಳಸಿಕೊಂಡು ಆರ್ಕ್ಟಿಕ್ನಲ್ಲಿ ಸಮುದ್ರದ ಮಂಜುಗಡ್ಡೆಯನ್ನು ನಿರೂಪಿಸಲು, ಜಾಗತಿಕ ತಾಪಮಾನ ಏರಿಕೆಯ ಪರಿಣಾಮವನ್ನು ಅಂದಾಜು ಮಾಡಲು ಉದ್ದೇಶಗಳು ಒಳಗೊಂಡಿವೆ.
 3. ಭಾರತವು ಈಗಾಗಲೇ ಆರ್ಕ್ಟಿಕ್ ನಲ್ಲಿ, ಸಂಶೋಧನಾ ಕಾರ್ಯಕ್ಕಾಗಿ ಹಿಮಾದ್ರಿ ಎಂಬ ಸಂಶೋಧನಾ ಕೇಂದ್ರವನ್ನು ಹೊಂದಿದೆ.

 

ಭಾರತಕ್ಕೆ ಆರ್ಟಿಕ್ ಪ್ರದೇಶದಲ್ಲಿ ನಡೆಸುವ ಅಧ್ಯಯನದ ಪ್ರಾಮುಖ್ಯತೆ:

 1. ಭಾರತದ ಯಾವುದೇ ಭೂಪ್ರದೇಶವು ನೇರವಾಗಿ ಆರ್ಕ್ಟಿಕ್ ಪ್ರದೇಶದಲ್ಲಿ ಬರುವುದಿಲ್ಲವಾದರೂ, ಆರ್ಕ್ಟಿಕ್ ಭೂಮಿಯ ಪರಿಸರ ವ್ಯವಸ್ಥೆಯ ವಾತಾವರಣ, ಸಾಗರಶಾಸ್ತ್ರ (oceanographic)  ಮತ್ತು ಜೈವಿಕ ರಾಸಾಯನಿಕ ಚಕ್ರಗಳ ಮೇಲೆ (biogeochemical cycles) ಪ್ರಭಾವ ಬೀರುವುದರಿಂದ ಇದು ನಿರ್ಣಾಯಕ ಪ್ರದೇಶವಾಗಿದೆ.
 2. ಹವಾಮಾನ ಬದಲಾವಣೆಯಿಂದಾಗಿ, ಈ ಪ್ರದೇಶವು ಸಮುದ್ರದ ಮಂಜುಗಡ್ಡೆ, ಹಿಮ ಗಡ್ಡೆಗಳ ನಷ್ಟವನ್ನು ಎದುರಿಸುತ್ತಿದೆ  ಮತ್ತು ಸಮುದ್ರದ ಉಷ್ಣತೆಯು ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ.
 3. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮಂಜುಗಡ್ಡೆಯನ್ನು ಕಳೆದುಕೊಳ್ಳುತ್ತಲೇ ಇರುವ ಫ್ರಿಜಿಡ್ ಆರ್ಕ್ಟಿಕ್, ಭಾರತೀಯ ಮಾನ್ಸೂನ್‌ಗಳಲ್ಲಿನ ವ್ಯತ್ಯಾಸಗಳನ್ನು ಪೋಷಿಸುವ ಚಾಲಕ ಶಕ್ತಿಗಳಲ್ಲಿ  ಒಂದಾಗಿದೆ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

 

ಚೀತಾ ಮರುಪರಿಚಯ ಯೋಜನೆ:

(Cheetah reintroduction project)

 

ಸಂದರ್ಭ:

ಸ್ವಾತಂತ್ರ್ಯದ ನಂತರ ಭಾರತದಲ್ಲಿ ಅಳಿದುಹೋದ ಬೆಕ್ಕಿನ ಪ್ರಭೇದವಾದ ಚಿತಾ (Cheetah 🐆) ಗಳು ಕೇಂದ್ರ ಸರ್ಕಾರವು ಪ್ರಾರಂಭಿಸಿದ ಹೊಸ ಕ್ರಿಯಾ ಯೋಜನೆಯೊಂದಿಗೆ ಭರತ ಭೂಮಿಗೆ ಕಾಲಿಡಲು ಸಜ್ಜಾಗಿವೆ.

ಕೇಂದ್ರ ಸರ್ಕಾರವು ಪ್ರಾರಂಭಿಸಿದ ಹೊಸ ಕ್ರಿಯಾ ಯೋಜನೆಯ ಅಡಿಯಲ್ಲಿ ಐದು ವರ್ಷಗಳ ಅವಧಿಯಲ್ಲಿ ದೇಶದ ವಿವಿಧ ಉದ್ಯಾನವನಗಳಿಗೆ ಒಟ್ಟು 50 ಚಿರತೆಗಳನ್ನು ಪರಿಚಯಿಸಲು ಯೋಜಿಸಲಾಗಿದೆ.

 

ಮುಂದಿನ ನಡೆ ಏನು?

ಈ ನಿಟ್ಟಿನಲ್ಲಿ ‘ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಭಾರತದಲ್ಲಿ ಚಿತಾ ಪುನರ್ವಸತಿ ಕ್ರಿಯಾ ಯೋಜನೆ’ಯನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಬೆಕ್ಕಿನ ಪ್ರಭೇದದ 50 ದೊಡ್ಡ ಬೆಕ್ಕು (Cheetah) ಗಳನ್ನು ದೇಶದ ವಿವಿಧ ರಾಷ್ಟ್ರೀಯ ಉದ್ಯಾನವನಗಳಲ್ಲಿ ಪರಿಚಯಿಸಲಾಗುವುದು.

 

 1. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) 19 ನೇ ಸಭೆಯಲ್ಲಿ ಈ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಲಾಯಿತು.

 

‘ಮರುಪರಿಚಯಿಸುವಿಕೆ’ ಎಂದರೇನು ಮತ್ತು ಚಿರತೆಗಳನ್ನು ದೇಶಕ್ಕೆ ಮರಳಿ ತರುವ ಅವಶ್ಯಕತೆ:

 1. ಒಂದು ಜಾತಿಯ ಮರುಪರಿಚಯಿಸುವಿಕೆ (Reintroduction) ಎಂದರೆ ಅದು ಬದುಕಲು ಸಮರ್ಥವಾಗಿರುವ ಪ್ರದೇಶಕ್ಕೆ ಆ ಪ್ರಭೇದವನ್ನು ಬಿಡುಗಡೆ ಮಾಡುವುದು.
 2. ‘ದೊಡ್ಡ ಮಾಂಸಾಹಾರಿಗಳ ಮರುಪರಿಚಯಿಸುವಿಕೆ’ ಯು ಅಪಾಯದಲ್ಲಿರುವ ಜಾತಿಗಳನ್ನು ಸಂರಕ್ಷಿಸುವ ಮತ್ತು ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸುವ ಕಾರ್ಯತಂತ್ರವೆಂದು ಗುರುತಿಸಲ್ಪಟ್ಟಿದೆ.
 3. ಚೀತಾ, ಐತಿಹಾಸಿಕ ಕಾಲದಿಂದಲೂ ಅತಿಯಾಗಿ ಬೇಟೆಯಾಡುವಿಕೆಯಿಂದಾಗಿ ಭಾರತದಲ್ಲಿ ಅಳಿದುಹೋದ ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿಯಾಗಿದೆ.
 4. ಭಾರತವು ಪ್ರಸ್ತುತ, ನೈತಿಕ ಮತ್ತು ಪರಿಸರ ಕಾರಣಗಳಿಗಾಗಿ ತನ್ನ ಕಳೆದುಹೋದ ನೈಸರ್ಗಿಕ ಪರಂಪರೆಯನ್ನು ಮರುಸ್ಥಾಪಿಸಲು ಪರಿಗಣಿಸಲು ಆರ್ಥಿಕವಾಗಿ ಸಮರ್ಥವಾಗಿದೆ.

 

 

ಪ್ರಮುಖ ಸಂಗತಿಗಳು:

 1. ಚಿತಾ ( Acinonyx jubatus), ದೊಡ್ಡ ಬೆಕ್ಕಿನ  ಅತ್ಯಂತ ಹಳೆಯ ಪ್ರಜಾತಿಗಳಲ್ಲಿ ಒಂದು. ಇದರ ಪೂರ್ವಜರನ್ನು ಐದು ಮಿಲಿಯನ್ ವರ್ಷಗಳ ಹಿಂದೆ ‘ಮಯೋಸೀನ್ ಯುಗ’ದಲ್ಲಿ ಗುರುತಿಸಬಹುದಾಗಿದೆ.
 2. ಚಿತಾ (Cheetah) ವಿಶ್ವದ ಅತಿ ವೇಗದ ಭೂ ಸಸ್ತನಿ ಕೂಡ ಆಗಿದೆ.
 3. ಇದನ್ನು IUCN ನ ಕೆಂಪು ಪಟ್ಟಿಯಲ್ಲಿರುವ ಜಾತಿಗಳಲ್ಲಿ ‘ದುರ್ಬಲ’ (Vulnerable) ಎಂದು ಪಟ್ಟಿ ಮಾಡಲಾಗಿದೆ.
 4. ದೇಶದಲ್ಲಿ ಕೊನೆಯದಾಗಿ ಕಂಡುಬಂದ ಈ ‘ಚುಕ್ಕೆ ಬೆಕ್ಕು’ 1947 ರಲ್ಲಿ ಛತ್ತೀಸ್‌ಗಢದಲ್ಲಿ ಸಾವನ್ನಪ್ಪಿತು. ನಂತರ, 1952 ರಲ್ಲಿ ಭಾರತದಲ್ಲಿ ಚಿತಾ ಪ್ರಭೇದವು ನಿರ್ನಾಮವಾಗಿದೆ ಎಂದು ಘೋಷಿಸಲಾಯಿತು.
 5. IUCN ಕೆಂಪು ಪಟ್ಟಿಯು ಏಷಿಯಾಟಿಕ್ ಚಿತಾವನ್ನು “ತೀವ್ರವಾಗಿ ಅಳಿವಿನಂಚಿನಲ್ಲಿರುವ” ಪ್ರಭೇದ ವೆಂದು ವರ್ಗೀಕರಿಸಿದೆ ಮತ್ತು ಇರಾನ್‌ನಲ್ಲಿ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಏಕೈಕ ಜಾತಿ ಎಂದು ನಂಬಲಾಗಿದೆ. 

 

ಭಾರತದಲ್ಲಿ ಚೀತಾ ಮರು ಪರಿಚಯಿಸುವ ಕಾರ್ಯಕ್ರಮ:

ಡೆಹ್ರಾಡೂನ್‌ನಲ್ಲಿರುವ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಏಳು ವರ್ಷಗಳ ಹಿಂದೆಯೇ 260 ಕೋಟಿ ರೂಪಾಯಿ ವೆಚ್ಚದಲ್ಲಿ ‘ಚೀತಾ ಮರು ಪರಿಚಯಿಸುವ ಯೋಜನೆ’ಯನ್ನು ಸಿದ್ಧಪಡಿಸಿದೆ.

 1. ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಪ್ರದೇಶದ ‘ಶಿಯೋಪುರ್’ ಮತ್ತು ‘ಮೊರೆನಾ’ ಜಿಲ್ಲೆಗಳಲ್ಲಿ ವಿಸ್ತೃತ ‘ಕುನೊ ರಾಷ್ಟ್ರೀಯ ಉದ್ಯಾನವನ’ದಲ್ಲಿ ಚಿರತೆಗಳನ್ನು ಮರು-ಪರಿಚಯಿಸಲು ಭಾರತವು ಯೋಜಿಸಿದೆ.
 2. ಇದು ಪ್ರಾಯಶಃ ಪ್ರಪಂಚದ ಮೊದಲ ‘ಖಂಡಾಂತರ ಚಿರತೆ ವರ್ಗಾವಣೆ ಯೋಜನೆ’ ಯಾಗಿರಬಹುದು.

 

ಅವಸಾನಕ್ಕೆ ಕಾರಣಗಳು:

 1. ಅಳಿವಿನ ಎಲ್ಲಾ ಕಾರಣಗಳ ಮೂಲವನ್ನು ಮಾನವ ಹಸ್ತಕ್ಷೇಪದಿಂದ ಕಂಡುಹಿಡಿಯಬಹುದು. ಮಾನವ-ವನ್ಯಜೀವಿ ಸಂಘರ್ಷ, ಆವಾಸಸ್ಥಾನದ ನಷ್ಟ ಮತ್ತು ಆಹಾರವಾಗಿ ಬೇಟೆಯಾಡಲು ಪ್ರಾಣಿಗಳ ಕೊರತೆ ಮತ್ತು ಅಕ್ರಮ ಸಾಗಾಣಿಕೆಯಂತಹ ಸಮಸ್ಯೆಗಳು ಚಿರತೆಗಳ ವಿನಾಶಕ್ಕೆ ಕಾರಣವಾಗಿವೆ.
 2. ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ಮಾನವ ಜನಸಂಖ್ಯೆಯು ಈ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಿದೆ.
 3. ವನ್ಯಜೀವಿಗಳಿಗೆ ಲಭ್ಯವಿರುವ ಭೂಮಿಯಲ್ಲಿನ ಇಳಿಕೆಯೊಂದಿಗೆ, ಚಿರತೆಗಳಂತಹ ಹೆಚ್ಚಿನ ಪ್ರಾದೇಶಿಕ ವ್ಯಾಪ್ತಿಯ ಅಗತ್ಯವಿರುವ ಪ್ರಭೇದಗಳು ಇತರ ಪ್ರಾಣಿಗಳು ಮತ್ತು ಮನುಷ್ಯರೊಂದಿಗೆ ಸ್ಪರ್ಧಿಸಬೇಕಾಗುತ್ತದೆ ಮತ್ತು ಲಭ್ಯವಿರುವ ಕಡಿಮೆ ಭೂಮಿಗೋಸ್ಕರ ಸಂಘರ್ಷವನ್ನು ಎದುರಿಸಬೇಕಾಗುತ್ತದೆ. 

 

ಸುಪ್ರೀಂ ಕೋರ್ಟ್ ನ ಅಭಿಪ್ರಾಯವೇನು?

ಸುಪ್ರೀಂ ಕೋರ್ಟ್‌ನ 2013 ರ ಆದೇಶವು ಭಾರತದಲ್ಲಿ ಆಫ್ರಿಕನ್ ಚಿರತೆಗಳನ್ನು ಪರಿಚಯಿಸುವ ಯೋಜನೆಯನ್ನು ಅದರಲ್ಲೂ ಹೆಚ್ಚು ನಿರ್ದಿಷ್ಟವಾಗಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕನ್ ಚಿರತೆಗಳನ್ನು ಪರಿಚಯಿಸುವ ಯೋಜನೆಯನ್ನು ರದ್ದುಗೊಳಿಸಿತು.

 1. ಆಫ್ರಿಕನ್ ಚಿರತೆಗಳು ಈ ಆವಾಸಸ್ಥಾನಗಳಲ್ಲಿ ಅಗ್ರ ಪರಭಕ್ಷಕದ  ಪಾತ್ರವನ್ನು ನಿರ್ವಹಿಸುವ ಅಗತ್ಯವಿಲ್ಲ ಎಂದು ಗುರುತಿಸಿದ ಸುಪ್ರೀಂಕೋರ್ಟ್ ಕುನೊ ರಾಷ್ಟ್ರೀಯ ಉದ್ಯಾನವನವು ಈಗಾಗಲೇ ನಿವಾಸಿ ಚಿರತೆಗಳು, ವಲಸೆ ಹುಲಿಗಳನ್ನು ಹೊಂದಿದೆ ಮತ್ತು ಏಷ್ಯಾಟಿಕ್ ಸಿಂಹಗಳ ಸ್ಥಳಾಂತರದ ಸ್ಥಳವಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
 2. ಕಳೆದ ವರ್ಷ ಜನೇವರಿ (2021), ನಮೀಬಿಯಾದಿಂದ ಆಫ್ರಿಕನ್ ಚೀತಾಗಳನ್ನು ಭಾರತೀಯ ಆವಾಸಸ್ಥಾನಕ್ಕೆ ಪರಿಚಯಿಸುವ ಪ್ರಸ್ತಾಪದ ಮೇಲೆ ಸುಪ್ರೀಂ ಕೋರ್ಟ್ ತನ್ನ ಏಳು ವರ್ಷಗಳ ನಿರ್ಬಂಧವನ್ನು ತೆಗೆದುಹಾಕಿತು.
 3. 2021 ರಲ್ಲಿ, ಆರು ಉದ್ಯಾನವನಗಳು ಮತ್ತು ಅಭಯಾರಣ್ಯಗಳ ಸೂಕ್ತತೆಯನ್ನು ವಿಶ್ಲೇಷಿಸಿದ ಆಳವಾದ ಕಾರ್ಯಸಾಧ್ಯತೆಯ ಮೌಲ್ಯಮಾಪನದ ಫಲಿತಾಂಶಗಳನ್ನು ವೈಲ್ಡ್‌ಲೈಫ್‌ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಕಟಿಸಿತು (WII). ಅಂತಿಮವಾಗಿ, ದೆಹಲಿಯಿಂದ ದಕ್ಷಿಣಕ್ಕೆ ಸುಮಾರು 500 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾವನ್ನು ಪುನಃ ಪರಿಚಯಿಸಲು ಅನುಕೂಲಕರ ತಾಣವಾಗಿ MoEF, NTCA, ಮತ್ತು WII ಆಯ್ಕೆ ಮಾಡಿದೆ.
 4. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮಚ್ಚೆಯುಳ್ಳ ಜಿಂಕೆ ಎಂದೂ ಕರೆಯಲ್ಪಡುವ ಕಾಡು ಜಾನುವಾರು ಮತ್ತು ಚಿಟಲ್ ಹೇರಳವಾಗಿ ಕಂಡುಬರುತ್ತವೆ. ಇದಲ್ಲದೆ, ಕಾಡುಹಂದಿ ಇರುವಿಕೆಯು ಈ ಚೀತಾಗಳಿಗೆ ಉತ್ತಮ ಬೇಟೆ ನೀಡುತ್ತವೆ.

 

ವಿಷಯಗಳು: ಮೂಲಸೌಕರ್ಯ: ಇಂಧನ, ಬಂದರುಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ಇತ್ಯಾದಿ.

 

ಫೇಮ್ ಇಂಡಿಯಾ ಯೋಜನೆ:

(FAME India scheme)

 

ಸಂದರ್ಭ:

FAME-India ಯೋಜನೆಯಡಿಯಲ್ಲಿ, ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಬೆಲೆಯಲ್ಲಿ ಮುಂಗಡ ಕಡಿತದ ರೂಪದಲ್ಲಿ ಪ್ರೋತ್ಸಾಹಕಗಳನ್ನು (incentives) ನೀಡಲಾಗುತ್ತದೆ.

 1. ಕಂದಾಯ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ದರವು 5% ಆಗಿದೆ.
 2. ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳ ಆಧಾರದ ಮೇಲೆ ಜಿಎಸ್‌ಟಿ ದರಗಳನ್ನು ನಿಗದಿಪಡಿಸಲಾಗಿದೆ.
 3. ಎಲೆಕ್ಟ್ರಿಕ್ ವಾಹನಗಳು ಈಗಾಗಲೇ ಕಡಿಮೆ ದರದ 5% ಸ್ಲ್ಯಾಬ್‌ನಲ್ಲಿವೆ.

 

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದೆ:

 1. ದೇಶದಲ್ಲಿ ಬ್ಯಾಟರಿ ಬೆಲೆಗಳನ್ನು ತಗ್ಗಿಸುವ ಸಲುವಾಗಿ ದೇಶದಲ್ಲಿ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಉತ್ಪಾದನೆಗೆ ಉತ್ಪಾದನಾ ಆಧಾರಿತ ಪ್ರೋತ್ಸಾಹ (Production Linked Incentive -PLI) ಯೋಜನೆಯನ್ನು ಸರ್ಕಾರವು 12 ಮೇ 2021 ರಂದು ಅನುಮೋದಿಸಿದೆ. ಬ್ಯಾಟರಿ ಬೆಲೆಯಲ್ಲಿನ ಕುಸಿತವು ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ವೆಚ್ಚದಲ್ಲಿನ ಇಳಿಕೆಗೆ ಕಾರಣವಾಗುತ್ತದೆ.
 2. ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು 12% ರಿಂದ 5% ಕ್ಕೆ ಇಳಿಸಲಾಗಿದೆ; ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜರ್‌ಗಳು/ಚಾರ್ಜಿಂಗ್ ಸ್ಟೇಷನ್‌ಗಳ ಮೇಲಿನ ಜಿಎಸ್‌ಟಿಯನ್ನು 18% ರಿಂದ 5% ಕ್ಕೆ ಇಳಿಸಲಾಗಿದೆ.
 3. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಬ್ಯಾಟರಿ ಚಾಲಿತ ವಾಹನಗಳಿಗೆ ಹಸಿರು ಪರವಾನಗಿ ಫಲಕಗಳನ್ನು ನೀಡಲಾಗುತ್ತದೆ ಮತ್ತು ಪರವಾನಗಿಯ ಅಗತ್ಯತೆಗಳಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಘೋಷಿಸಿತು.
 4. EVಗಳ ಮೇಲಿನ ರಸ್ತೆ ತೆರಿಗೆಯನ್ನು ಮನ್ನಾ ಮಾಡಲು ರಾಜ್ಯಗಳಿಗೆ ಸಲಹೆ ನೀಡುವ ಅಧಿಸೂಚನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ವು ಹೊರಡಿಸಿತು, ಇದು EV ಗಳ ಆರಂಭಿಕ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

FAME India ಯೋಜನೆಯ ಕುರಿತು:

 

ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆ ಮತ್ತು ಉತ್ಪಾದನೆಗಾಗಿ ಕೇಂದ್ರ ಸರ್ಕಾರ ಫೇಮ್‌ ಇಂಡಿಯಾ ( Faster Adoption and Manufacturing of Hybrid & Electric Vehicles in India-FAME India) ಯೋಜನೆಯನ್ನು ಬಾರಿ ಕೈಗಾರಿಕೆ ಇಲಾಖೆಯ ಅಧ್ಯಯನದಲ್ಲಿ ಜಾರಿಗೊಳಿಸಿದೆ. 

 1. ಫೇಮ್ ಇಂಡಿಯಾ ಯೋಜನೆಯಡಿ ದೇಶದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ವಾಹನಗಳ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ ಸರ್ಕಾರ ಮುಂದಾಗಿದೆ. 
 2. ಈ ಯೋಜನೆಯು ಸರ್ಕಾರದ ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಯೋಜನೆಯ (NEMMP) ಅವಿಭಾಜ್ಯ ಅಂಗವಾಗಿದೆ. 
 3. 2020 ರ ವೇಳೆಗೆ 6-7 ಮಿಲಿಯನ್ ಎಲೆಕ್ಟ್ರಿಕಲ್ ಮತ್ತು ಹೈಬ್ರಿಡ್ ವಾಹನಗಳ ಮಾರಾಟವನ್ನು ಸಾಧಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. 
 4. 2015ರಲ್ಲಿ ಫೇಮ್‌ ಇಂಡಿಯಾ ಮೊದಲ ಹಂತವನ್ನು ಆರಂಭಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ 2019ರಿಂದ ಫೇಮ್‌ ಇಂಡಿಯಾ ಹಂತ-2ಕ್ಕೆ ಚಾಲನೆ ನೀಡಲಾಗಿದೆ. 
 5. ಈ ಯೋಜನೆಯನ್ನು ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯವು ಅನುಷ್ಠಾನಗೊಳಿಸಿ, ಮೇಲ್ವಿಚಾರಣೆ ಮಾಡುತ್ತಿದೆ.

current Affairs

ಈ ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗುತ್ತಿದೆ:

 1. ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆ ಮತ್ತು ಉತ್ಪಾದನೆಗಾಗಿ 2015ರಲ್ಲಿ ಫೇಮ್‌ ಇಂಡಿಯಾ ಮೊದಲ ಹಂತವನ್ನು ಆರಂಭಿಸಲಾಗಿತ್ತು. 
 2. ಇದರ ಮುಂದುವರಿದ ಭಾಗವಾಗಿ 2019ರಿಂದ ಫೇಮ್‌ ಇಂಡಿಯಾ ಹಂತ-2ಕ್ಕೆ ಚಾಲನೆ ನೀಡಲಾಗಿದೆ. 

 

ಫೇಮ್ ಇಂಡಿಯಾ ಯೋಜನೆಯ ಹಂತ-1:

 1. ಫೇಮ್-ಇಂಡಿಯಾ ಯೋಜನೆಯ ಹಂತ-I ರ ಅಡಿಯಲ್ಲಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸರ್ಕಾರವು ಸುಮಾರು 500 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಬೆಂಬಲ ನೀಡಿದೆ.
 2. FAME-India ಯೋಜನೆಯ ಹಂತ-I ರ ಅಡಿಯಲ್ಲಿ ಮಂಜೂರಾದ ಸುಮಾರು 500 ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಸುಮಾರು 230 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ.
 3. ಇದಲ್ಲದೆ, ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಎನರ್ಜಿ ಎಫಿಶಿಯೆನ್ಸಿ ಸರ್ವೀಸಸ್ ಲಿಮಿಟೆಡ್ (EESL) ದೇಶದಲ್ಲಿ EV ಗಳಿಗಾಗಿ 65 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿಯೋಜಿಸಿದೆ.

 

ಫೇಮ್ ಇಂಡಿಯಾ ಯೋಜನೆಯ ಹಂತ-2:

 

 1. FAME ಇಂಡಿಯಾ ಯೋಜನೆಯ ಹಂತ-2 ವಿದ್ಯುತ್ ಚಾಲಿತ ವಾಹನಗಳ ಚಲನಶೀಲತೆಯನ್ನು ಹೆಚ್ಚಿಸಲು ಮತ್ತು ವಾಣಿಜ್ಯ ಫ್ಲೀಟ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
 2. ಎಲೆಕ್ಟ್ರಿಕ್ ಬಸ್‌ಗಳು, ತ್ರಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಸರ್ಕಾರವು ಪ್ರೋತ್ಸಾಹವನ್ನು ನೀಡುತ್ತದೆ.
 3. ಸಾರ್ವಜನಿಕ ವಲಯದ ಘಟಕಗಳು ಮತ್ತು ಖಾಸಗಿ ಕಂಪನಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಕೇಂದ್ರವು ಹೂಡಿಕೆ ಮಾಡುತ್ತದೆ.
 4. ಚಾರ್ಜಿಂಗ್ ಮೂಲಸೌಕರ್ಯ ಯೋಜನೆಗಳು ಪ್ಯಾಂಟೋಗ್ರಾಫ್ ಚಾರ್ಜಿಂಗ್ ಮತ್ತು ಫ್ಲ್ಯಾಷ್ ಚಾರ್ಜಿಂಗ್‌ನಂತಹ ಚಾಲನೆಯಲ್ಲಿರುವ ವಾಹನಗಳಿಗೆ ವಿದ್ಯುದ್ದೀಕರಣವನ್ನು ವಿಸ್ತರಿಸಲು ಅಗತ್ಯವಿರುವವುಗಳನ್ನು ಒಳಗೊಂಡಿರುತ್ತದೆ.
 5. FAME 2 ಯೋಜನೆಯು ಚಾರ್ಜಿಂಗ್ ಮೂಲಸೌಕರ್ಯದೊಂದಿಗೆ ನವೀಕರಿಸಬಹುದಾದ ಇಂಧನ ಮೂಲಗಳ ಪರಸ್ಪರ ಲಿಂಕ್ ಅನ್ನು ಪ್ರೋತ್ಸಾಹಿಸುತ್ತದೆ.
 6. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಫೇಮ್‌ ಇಂಡಿಯಾ – 2.0 (FAME-II) (ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್) ಅನ್ನು ಘೋಷಿಸಿದೆ. ಈ ಯೋಜನೆಯಡಿ ಹೊಸದಾಗಿ ಖರೀದಿಸಿದ ವಿದ್ಯುತ್ ವಾಹನಗಳ ಮೇಲೆ ಸಬ್ಸಿಡಿ ಮತ್ತು ಇನ್ನಿತರ ಪ್ರಯೋಜನ ಒದಗಿಸಲಾಗುತ್ತದೆ. 

 

ಈ ಸಮಯದ ಅವಶ್ಯಕತೆ:

 1. ಎಲೆಕ್ಟ್ರಿಕ್ ವಾಹನಗಳ ಚಲನಶೀಲತೆಯ ಪರಿವರ್ತನೆಯನ್ನು ಸುಲಭಗೊಳಿಸಲು ಭಾರತಕ್ಕೆ ಆಟೋ ಉದ್ಯಮದ ಸಕ್ರಿಯ ಭಾಗವಹಿಸುವಿಕೆಯ ಅಗತ್ಯವಿದೆ. ಗ್ರಾಹಕರ ಜಾಗೃತಿಯನ್ನು ಹೆಚ್ಚಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಆಟೋ ಮತ್ತು ಬ್ಯಾಟರಿ ಉದ್ಯಮಗಳು ಸಹಕರಿಸಬಹುದು.
 2. EV ಗಳನ್ನು ಉತ್ತೇಜಿಸಲು, EV ಗಳು ಮತ್ತು ಬ್ಯಾಟರಿಗಳ ಹಂತಹಂತವಾಗಿ ಉತ್ಪಾದನೆ ಮಾಡಲು ಹಣಕಾಸಿನ ಮತ್ತು ಹಣಕಾಸೇತರ ಪ್ರೋತ್ಸಾಹವನ್ನು ನೀಡಲು ಸರ್ಕಾರವು ಹಂತ ಹಂತದ ಉತ್ಪಾದನಾ ಯೋಜನೆಯ ಕಡೆಗೆ ಗಮನಹರಿಸಬೇಕು.

 

ಫೇಮ್ ಇಂಡಿಯಾ-2.0 ಯೋಜನೆಯಡಿ ಸಬ್ಸಿಡಿ ಪ್ರಮಾಣ:

ಫೇಮ್ ಇಂಡಿಯಾ ಹಂತ- 2 ಯೋಜನೆಯಡಿ 10 ಲಕ್ಷ ವಿದ್ಯುತ್ ದ್ವಿಚಕ್ರ ವಾಹನಗಳಿಗೆ ತಲಾ 20,000 ರೂ. ಸಬ್ಸಿಡಿ ನೀಡಲಾಗುತ್ತದೆ. 35,000 ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳ ಮೇಲೆ ರೂ.1.5 ಲಕ್ಷದವರೆಗೆ ಸಬ್ಸಿಡಿ ಒದಗಿಸಲಾಗುತ್ತದೆ. 2019 ರ ಏಪ್ರಿಲ್ ನಿಂದ ಈ ಯೋಜನೆ ಮುಂದಿನ 3 ವರ್ಷಗಳ ಅವಧಿಗೆ ಅನ್ವಯವಾಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆಗೆ ರೂ.10,000 ಕೋಟಿ ಇರಿಸಿದೆ.

 

ಯೋಜನೆಯ ಲಾಭಗಳು: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳ ಮೇಲೆ ಸಬ್ಸಿಡಿ ಮತ್ತು ಪ್ರಯೋಜನಗಳು ಸಿಗಲಿದೆ.

ಫಲಾನುಭವಿಗಳು: ವಿದ್ಯುತ್ ವಾಹನಗಳ ಮಾಲೀಕರು

ಬಜೆಟ್: ರೂ. 10,000 ಕೋಟಿ

ಜಾರಿ ದಿನಾಂಕ: ಏಪ್ರಿಲ್ 2019 ಅವಧಿ: 3 ವರ್ಷ

 

ಫೇಮ್ ಇಂಡಿಯಾ ಹಂತ-2 ಯೋಜನೆಯ ಲಾಭಗಳು:

ದ್ವಿಚಕ್ರ ವಾಹನಗಳು: ರೂ. 20,000 ಸಬ್ಸಿಡಿ

ಕಾರುಗಳು: ರೂ. 1.5 ಲಕ್ಷದ ಇನ್ಸೆಂಟಿವ್ಸ್

ಬಸ್ಸುಗಳು: ರೂ. 5 ಲಕ್ಷ

ಇ-ರಿಕ್ಷಾಗಳು: ರೂ. 50,000.

 


ಪ್ರಿಲಿಮ್ಸ್‌ಗೆ ಸಂಬಂಧಿಸಿದ ಸಂಗತಿಗಳು:


 

ವೇದಂತಂಗಲ್ ಪಕ್ಷಿಧಾಮ:

 

 1. ವೇದಂತಂಗಲ್ ಪಕ್ಷಿಧಾಮವು (Vedanthangal Bird Sanctuary) ತಮಿಳುನಾಡಿನಲ್ಲಿದೆ.
 2. ಈ ಅಭಯಾರಣ್ಯವನ್ನು 1963 ರಲ್ಲಿ ‘ಮದ್ರಾಸ್ ಕಾಯಿದೆ 1882’ ಅಡಿಯಲ್ಲಿ ‘ಮೀಸಲು ಅರಣ್ಯ’ ( Reserve Forest) ಎಂದು ಅಧಿಸೂಚಿಸಲಾಯಿತು.
 3. ನಂತರ 1998 ರಲ್ಲಿ, ‘ವನ್ಯಜೀವಿ ಸಂರಕ್ಷಣಾ ಕಾಯ್ದೆ’ 1972 ರ ಸೆಕ್ಷನ್ 26 (i) ಅಡಿಯಲ್ಲಿ ಅಭಯಾರಣ್ಯವನ್ನು ಅಧಿಸೂಚಿಸಲಾಯಿತು.
 4. ಸುಮಾರು 28,000 ಟೆರೆಸ್ಟ್ರಿಯಲ್ ಮತ್ತು ನೀರಿನ ಪಕ್ಷಿಗಳು ಈ ಸಾಂಪ್ರದಾಯಿಕ ಜೌಗುಭೂಮಿ ಅಭಯಾರಣ್ಯಕ್ಕೆ ಭೇಟಿ ನೀಡುತ್ತವೆ.
 5. ಅಭಯಾರಣ್ಯವು ಪಿನ್‌ಟೈಲ್, ಗಾರ್ಗನೀಸ್, ಗ್ರೇ ವ್ಯಾಗ್‌ಟೈಲ್, ನೀಲಿ ರೆಕ್ಕೆಯ ಟೀಲ್, ಸಾಮಾನ್ಯ ಸ್ಯಾಂಡ್‌ಪೈಪರ್ ಮತ್ತು ಅಂತಹುದೇ ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ.
 6. ಇದು ದೇಶದ ಅತ್ಯಂತ ಹಳೆಯ ಜಲ ಪಕ್ಷಿಧಾಮವಾಗಿದೆ.
 7. ವೇದಂತಂಗಳ್ ಎಂದರೆ ತಮಿಳು ಭಾಷೆಯಲ್ಲಿ ‘ಬೇಟೆಗಾರರ ​​ಗ್ರಾಮ’ ಎಂದರ್ಥ.

 

ಸುದ್ದಿಯಲ್ಲಿರಲು ಕಾರಣ?

ವೇದಂತಂಗಲ್ ಪಕ್ಷಿಧಾಮದ “ಪರಿಸರ ಸಂರಕ್ಷಣೆ ಮತ್ತು ಆವಾಸಸ್ಥಾನ ಪರಿಸರ” ವನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು ಅರಣ್ಯ ಇಲಾಖೆ ವಿವಾದಾತ್ಮಕ ಪ್ರಸ್ತಾಪವನ್ನು ಹಿಂಪಡೆಯಲು ನಿರ್ಧರಿಸಿದೆ. ಪ್ರಸ್ತಾವನೆಯು ಅಭಯಾರಣ್ಯದ ಕೋರ್ ಪ್ರದೇಶವನ್ನು ಕಡಿಮೆ ಮಾಡಲು ಪ್ರಯತ್ನಿಸಿತ್ತು.

Current Affairs

ಕಾಡಾನೆಗಳು/ಅರಣ್ಯ ಆನೆಗಳು:

ಆಫ್ರಿಕನ್ ಖಂಡದಲ್ಲಿ ಆಫ್ರಿಕನ್ ಆನೆಗಳ – ಅರಣ್ಯ ಮತ್ತು ಸವನ್ನಾ – ದಲ್ಲಿನ ಎರಡೂ ಪ್ರಾಜಾತಿಗಳ ಸಂಖ್ಯೆಯು ಆವಾಸಸ್ಥಾನದ ನಷ್ಟ, ಬೇಟೆಯಾಡುವುದು ಮತ್ತು ಮಾನವ-ವನ್ಯಜೀವಿ ಸಂಘರ್ಷದಿಂದಾಗಿ ಕ್ಷೀಣಿಸುತ್ತಿದೆ.

 

 1. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ನಿಂದ ಅರಣ್ಯ ಆನೆಗಳನ್ನು “ತೀವ್ರವಾಗಿ ಅಳಿವಿನಂಚಿನಲ್ಲಿರುವ” ಪ್ರಜಾತಿ ಎಂದು ಪಟ್ಟಿ ಮಾಡಲಾಗಿದೆ. ಮೂರು ತಲೆಮಾರುಗಳೊಳಗೆ 80 ಪ್ರತಿಶತಕ್ಕಿಂತ ಹೆಚ್ಚು ಕಡಿಮೆಯಾದ ಜಾತಿಗಳನ್ನು “ತೀವ್ರವಾಗಿ ಅಳಿವಿನಂಚಿನಲ್ಲಿರುವ”(Critically Endangered) ಎಂದು ಪಟ್ಟಿ ಮಾಡಲಾಗಿದೆ.
 2. IUCN ನಿಂದ ‘ಸವನ್ನಾ ಆನೆಗಳ’ ನ್ನು (Savanna Elephants)   “ಅಳಿವಿನಂಚಿನಲ್ಲಿರುವ” (Endangered) ಎಂದು ಪಟ್ಟಿಮಾಡಲಾಗಿದೆ. ಮೂರು ತಲೆಮಾರುಗಳೊಳಗೆ 50 ಪ್ರತಿಶತಕ್ಕಿಂತ ಹೆಚ್ಚಿನ ಅವನತಿಯನ್ನು ಸೂಚಿಸುವ ಪ್ರಜಾತಿಗಳನ್ನು “ಅಳಿವಿನಂಚಿನಲ್ಲಿರುವ” ಎಂದು ಪಟ್ಟಿ ಮಾಡಲಾಗಿದೆ. 

 

ಅರಣ್ಯ ಆನೆಗಳು:

ಅರಣ್ಯ ಆನೆಗಳು ಪಶ್ಚಿಮ ಆಫ್ರಿಕಾ ಮತ್ತು ಕಾಂಗೋ ಜಲಾನಯನ ಪ್ರದೇಶದ ಜೌಗು ಭೂಮಿಯ ಕಾಡುಗಳಿಗೆ ಸ್ಥಳೀಯವಾಗಿವೆ.

ಇದು ಮೂರು ಜೀವಂತ ಆನೆ ಜಾತಿಗಳಲ್ಲಿ ಚಿಕ್ಕದಾಗಿದೆ, ಇದು 2.4 ಮೀ (7 ಅಡಿ 10 ಇಂಚು) ಭುಜದ ಎತ್ತರವನ್ನು ತಲುಪುತ್ತದೆ.

Current Affairs

ವಿಶ್ವ ಗುಬ್ಬಚ್ಚಿ ದಿನ:

 

ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ನೇಚರ್ ಫಾರ್ ಎವರ್ ಸೊಸೈಟಿಯ ಸಂಸ್ಥಾಪಕ ಮೊಹ್ಮದ್ ದಿಲಾವರ್ ಮತ್ತು ಎಕೊ- ಸಿಸ್ ಆ್ಯಕ್ಷನ್ ಫೌಂಡೇಷನ್ ಫ್ರಾನ್ಸ್ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. 

 1. 2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತು. ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆಯ (IUCN) ವರದಿಯ ಪ್ರಕಾರ, 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿಯು ಶೇ.71ರಷ್ಟು ಕುಸಿದಿದೆ. ಈ ಸಂತತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಸಂರಕ್ಷಿಸಲು ಗುಬ್ಬಚ್ಚಿಯನ್ನು 2012ರಲ್ಲಿ ದೆಹಲಿಯ ರಾಜ್ಯ ಪಕ್ಷಿಯಾಗಿ ಘೋಷಿಸಲಾಯಿತು. ಬಿಹಾರ ರಾಜ್ಯವು ಕೂಡ ಗುಬ್ಬಚ್ಚಿಯನ್ನು ರಾಜ್ಯ ಪಕ್ಷಿಯಾಗಿ ಘೋಷಿಸಿತು’ ಎಂದು ಅವರು ವಿವರಿಸಿದರು.

 

 1. “ಪೃಕೃತಿಯ ಭಾಗವೇ ಆಗಿರುವ ಮನೆಯಂಗಳದ ಮೆಚ್ಚಿನ ಗುಬ್ಬಚ್ಚಿಗಳು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನಿಸರ್ಗದ ಸಮತೋಲನ ಕಾಪಾಡುವಲ್ಲಿ ಈ ಪುಟ್ಟ ಪಕ್ಷಿಗಳ ಕೊಡುಗೆ ಕೂಡ ಅಪಾರ.”
 2. “ಆದರೆ, ಆಧುನಿಕ ಮಾನವನ ದುರಾಸೆಯ ಭರಾಟೆಗೆ ಸಿಕ್ಕು ಭೂಮಿ ಮೇಲೆ ಇರಬೇಕಾದ ನಿಜವಾದ ನಿಸರ್ಗ ಸಂಪತ್ತು ಕರಗುತ್ತಾ ಸಾಗುತ್ತಿದೆ. ಇದರಿಂದ ಗುಬ್ಬಚ್ಚಿ ಸೇರಿದಂತೆ ಅನೇಕ ಪಕ್ಷಿಗಳು ಇಂದು ಅಳವಿನಂಚಿಗೆ ಸೇರುತ್ತಿರುವುದು ಆತಂಕಕಾರಿ ಸಂಗತಿ.
 3. ಗುಬ್ಬಚ್ಚಿಗಳ ಮಹತ್ವ ಸಾರಲು ಹಾಗೂ ಅವುಗಳ ರಕ್ಷಣೆ ಕಾಳಜಿ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ 20 ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತಿದೆ.”
 4. “ಭಾರತದ ನೇಚರ್ ಫಾರೆವರ್ ಸೊಸೈಟಿಯ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ವಿಶ್ವ ಗುಬ್ಬಚ್ಚಿ ದಿನಕ್ಕೆ, ಫ್ರಾನ್ಸಿನ ಇಕೋ-ಸಿಸ್ ಆಕ್ಷನ್ ಫೌಂಡೆಶನ್ ಮತ್ತು ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ. ನೇಚರ್ ಫಾರೆವರ್ ಸೊಸೈಟಿಯ ಸ್ಥಾಪಕ  ಮೊಹಮ್ಮದ್ ದಿಲ್ವಾರ್ ಅವರು 2010ರಲ್ಲಿ ಗುಬ್ಬಚ್ಚಿಗಳ ದಿನವನ್ನು ಜಗತ್ತಿಗೆ ಪರಿಚಯಿಸಿದರು. ಈ ಮೂಲಕ ಗುಬ್ಬಚ್ಚಿಗಳ ಸಂರಕ್ಷಣೆಗೆ ವಿಶ್ವದ ಸುಮಾರು 50 ಕ್ಕೂ ಹೆಚ್ಚು ರಾಷ್ಟ್ರಗಳು ಕೈ ಜೋಡಿಸಿವೆ.

 

ಕಾಣದ ಗುಬ್ಬಚ್ಚಿಗಳು:

ಗುಬ್ಬಚ್ಚಿಗಳು ಹೊಲ ಗದ್ದೆಗಳಲ್ಲಿ ಕಟಾವು ಮುಗಿಯುತ್ತಿದ್ದಂತೆ ಒಂದೊಂದೇ ಹುಲ್ಲಿನ ತುಂಡು ಹೆಕ್ಕುತ್ತ ಸಾಗುವ ತವಕ ಸೋಜಿಗವನ್ನು ಉಂಟುಮಾಡುತ್ತದೆ. ಮುಂಗಾರಿಗೂ ಮುನ್ನ ಗೂಡು ಕಟ್ಟಿಕೊಂಡು ಮರಿಗಳೊಡನೆ ಹಾಡುವ ಗಾನದ ಪುಳಕ ಸೂಜಿಗ ಮೂಡಿಸುತ್ತದೆ. ಬಿಸಿಲಿನ ಬೇಗೆ ಏರುತ್ತಿದ್ದಂತೆ ಪುಟ್ಟ ಪುಟ್ಟ ನೀರಿನ ಒರತೆಗಳ ಬಳಿ ಮಿಂದೆದ್ದು ಸಂಭ್ರಮಿಸುವ ಗುಬ್ಬಿಗಳ ಕಿಚಕಿಚ ಶಬ್ದ ಮಕ್ಕಳ ಸ್ಫೂರ್ತಿಗೆ ಕಾರಣವಾಗುತ್ತದೆ.

 

ಆದರೆ, ಇಂತಹ ಸಂತಸ-ಸಡಗರ ತಂದೊಡ್ಡುತ್ತಿದ್ದ ಗುಬ್ಬಚ್ಚಿ ಸಂಸಾರದ ಗುನುಗು, ಗುಂಗು ಈಗ ಕಾಣದಾಗಿದೆ. ಮಾನವ ಸಂಪರ್ಕಕ್ಕೆ ಸದಾ ಹಾತೊರೆಯುತ್ತಿದ್ದ ಗುಬ್ಬಚ್ಚಿಗಳ ಆವಾಸದಲ್ಲಿ ಆಗುತ್ತಿರುವ ಪಲ್ಲಟದಿಂದ ಇವುಗಳ ಸಂತತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿದೆ.

 

ಗ್ರಾಮೀಣ ಭಾಗಗಳ ಮನೆಯಂಗಳಗಳಲ್ಲಿ ಈಗಲೂ ನೇಸರನ ಆಗಮನದೊಂದಿಗೆ ಚೆಲ್ಲಾಟ ಆಡುವ ಹಕ್ಕಿಗಳನ್ನು ಕಾಣಬಹುದು. ಅವುಗಳಲ್ಲಿ ಗುಬ್ಬಚ್ಚಿಗಳದ್ದೇ ಕಾರುಬಾರು. ಮುಂಜಾನೆ ಬಂದು ಕಾಳು ಹೆಕ್ಕಿ ಪರಿಸರವನ್ನು ಸ್ವಚ್ಛಗೊಳಿಸುತ್ತವೆ. ಈಗ ಗುಂಪುಗಳಿಗೆ ಬದಲಾಗಿ ಬೆರಳೆಣಿಕೆಯಲ್ಲಿ ಆಗಮಿಸುತ್ತಿವೆ. ಬರುತ್ತಲೇ ಚಿಂವ್ ಚಿಂವ್ ಸಂಗೀತದ ಲಹರಿ ಹರಿಸುತ್ತವೆ. ತನ್ನ ಬಳಗಕ್ಕೆ ಬೇಕಾದ ಆಹಾರ ಅರಸುತ್ತದೆ. ಈಗಲೂ, ಭಯ ಇಲ್ಲದೆ ಜನ ಜಂಗುಳಿಯ ನಡುವೆ ಹಾದು ಬರುವ ಗುಬ್ಬಚ್ಚಿಗಳ ದರ್ಶನ ನಿಸರ್ಗದ ಚಲುವನ್ನು ವಿಸ್ತರಿಸುತ್ತದೆ ಎನ್ನುತ್ತಾರೆ ಪಕ್ಷಿ ಪ್ರಿಯರು.

 

ಸಂತತಿ ಕ್ಷೀಣಿಸಲು ಕಾರಣವೇನು?

ಹಿಂದಿನ ದಿನಗಳಲ್ಲಿ ಧಾನ್ಯಗಳನ್ನು ಅಂಗಡಿ/ ಸಂತೆಯಿಂದ ತಂದು ಮರದಿಂದ ಸ್ವಚ್ಛಗೊಳಿಸುವಾಗ ಕಾಳುಗಳನ್ನು ಮನೆ ಅಂಗಳಗಳಲ್ಲಿ ಗುಬ್ಬಿಗೋಸ್ಕರವೇ ಚೆಲ್ಲುತ್ತಿದ್ದರು. ಇದರಿಂದ ಗುಬ್ಬಿಗಳಿಗೆ ಹೇರಳವಾಗಿ ಆಹಾರ ಸಿಗುತ್ತಿತ್ತು. ಬದಲಾದ ಆಧುನಿಕ ಜೀವನ ಶೈಲಿಯಿಂದಲೂ, ಸೀಸ ಮಿಶ್ರಿತ ಪೆಟ್ರೋಲ್ ಬಳಕೆ, ಮೊಬೈಲ್ ಗೋಪುರದಿಂದ ಹೊರಸೂಸುವ ವಿದ್ಯುತ್ ಕಾಂತೀಯ ಸೂಕ್ಷ್ಮ ತರಂಗಗಳಿಂದ ಮೊಟ್ಟೆಯಿಂದ ಮರಿಯಾಗುವ ಪ್ರಕ್ರಿಯೆಗೆ ತೊಂದರೆ, ಮಿತಿಮೀರಿದ ಶಬ್ದಮಾಲಿನ್ಯದಿಂದಾಗಿ ಸಹ ಗುಬ್ಬಿಗಳ ಸಂಖ್ಯೆ ಕ್ಷೀಣಿಸಲು ಕಾರಣವೆನ್ನಬಹುದು. ಮನೆಗುಬ್ಬಿಗಳು ಪರಿಸರದ ನಿರಂತರ ಅವನತಿ/ ವಿಘಟನೆಯ ಸೂಚಕಗಳಾಗಿವೆ ಎಂದು ಮಂಜುನಾಥ ನಾಯಕ ಹೇಳುತ್ತಾರೆ.

 

ವಿಶ್ವ ಗುಬ್ಬಚ್ಚಿ ದಿನ: ಕೆಲವು ಆಸಕ್ತಿದಾಯಕ ಸಂಗತಿಗಳು:

ಸಾಮಾನ್ಯ ಹೆಸರು: ಮನೆ ಗುಬ್ಬಚ್ಚಿ

ವೈಜ್ಞಾನಿಕ ಹೆಸರು: ಪಾಸರ್ ಡೊಮೆಸ್ಟಿಕಸ್

ಎತ್ತರ: 16 ಸೆಂಟಿಮೀಟರ್

ರೆಕ್ಕೆಗಳು: 21 ಸೆಂಟಿಮೀಟರ್

ತೂಕ: 25-40 ಗ್ರಾಂ.

 

ದೇಶದಲ್ಲಿವೆ ಐದು ಜಾತಿಯ ಗುಬ್ಬಿಗಳು:

ಈವರೆಗೆ ವಿಶ್ವದಲ್ಲಿ 26 ವಿವಿಧ ಜಾತಿಯ ಗುಬ್ಬಿಗಳನ್ನು ಗುರುತಿಸಿದ್ದು, ಇದರಲ್ಲಿ ನಮ್ಮ ದೇಶದಲ್ಲಿ ಪಾಸರ್ ಡೊಮೆಸ್ಟಿಕಸ್, ಪಾಸರ್ ಹಿಸ್ಪಾನಿಯೊಲೆನ್ಸಸ್, ಪಾಸರ್ ಪೈರೊನಾಟಸ್, ಪಾಸರ್ ರುಟಿಲನ್ಸ್, ಪಾಸರ್ ಮೊಂಟನಸ್ ಎಂಬ 5 ವಿಭಿನ್ನ ಜಾತಿಯ ಗುಬ್ಬಿಗಳನ್ನು ಕಾಣಬಹುದು. ಇದರಲ್ಲಿ ಮನೆಗುಬ್ಬಿ ಸರ್ವವ್ಯಾಪಿ. ಇದರ ಜೀವಿತಾವಧಿ 3 ವರ್ಷ. ಪರಿಸರ ನಾಶ ಮತ್ತು (ಆಧುನಿಕ ಕಾಂಕ್ರೀಟ್ ಕಟ್ಟಡಗಳು ಗೂಡು ನಿರ್ಮಿಸಲು ಸೂಕ್ತವಲ್ಲ) ಗೂಡುಕಟ್ಟುವ ತಾಣಗಳ ನಾಶದಿಂದ, ಮೊಬೈಲ್ ಟವರ್, ಅವು ಹೊರಸೂಸುವ ತರಂಗಗಳು, ಶಬ್ದಮಾಲಿನ್ಯ, ಸೂಕ್ಷ್ಮ ಮಾಲಿನ್ಯ ಮತ್ತು ಮಿತಿಮೀರಿದ ಕೀಟನಾಶಕದ ಬಳಕೆಯಿಂದ ಗುಬ್ಬಿಯ ಸಂತತಿಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿದೆ.