Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 17ನೇ ಮಾರ್ಚ್ 2022

 

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

  1. ಶಾಖ ಅಲೆ/ ಬಿಸಿ ಗಾಳಿ ಎಂದರೇನು?

ಸಾಮಾನ್ಯ ಅಧ್ಯಯನ ಪತ್ರಿಕೆ 2:

  1. ಹಿಜಾಬ್ ಇಸ್ಲಾಂ ಧರ್ಮದ ಅತ್ಯವಶ್ಯಕ ಆಚರಣೆ ಅಲ್ಲ, ಕರ್ನಾಟಕ ಹೈಕೋರ್ಟ್ ನ ಮಹತ್ವದ ತೀರ್ಪು.
  2. ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G).

ಸಾಮಾನ್ಯ ಅಧ್ಯಯನ ಪತ್ರಿಕೆ 3:

  1. ಭಾರತವು ರೂ 24,000 ಕೋಟಿ ಸಾರ್ವಭೌಮ ಹಸಿರು ಬಾಂಡ್ ವಿತರಣೆಯನ್ನು ಯೋಜಿಸಿದೆ.
  2. ರಾಷ್ಟ್ರೀಯ ನಾಗರಿಕರ ನೋಂದಣಿ (NRC).
  3. LAC ಯಲ್ಲಿ ಭಾರತದ ಮೂಲಸೌಕರ್ಯ ವರ್ಧನೆ.

ಪ್ರಿಲಿಮ್ಸ್‌ಗೆ ಸಂಬಂಧಿಸಿದ ಸಂಗತಿಗಳು:

  1. ಬಹಿನಿ ಯೋಜನೆ.
  2. MANPADS.
  3. ಫೂಲ್ ಡೀ.
  4. 13 ಪ್ರಮುಖ ನದಿಗಳ ಪುನರುಜ್ಜೀವನ.
  5. ತಾಯಿ ಮರಣ ದರ.

ಸಾಮಾನ್ಯ ಅಧ್ಯಯನ ಪತ್ರಿಕೆ : 1


ವಿಷಯಗಳು : ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.

ಶಾಖ ಅಲೆ/ ಬಿಸಿ ಗಾಳಿ/ ಹೀಟ್ ವೇವ್ ಎಂದರೇನು?

(What are heat waves?) 

ಸಂದರ್ಭ: 

ಇತ್ತೀಚಿನ ದಿನಗಳಲ್ಲಿ, ಮುಂಬೈ ಸೇರಿದಂತೆ ಕೊಂಕಣ ತೀರ ಪ್ರದೇಶದಲ್ಲಿ ಬಿಸಿಲಿನ ತಾಪವು ಹೆಚ್ಚಾಗಿದ್ದು, ಗರಿಷ್ಠ ತಾಪಮಾನವು 40 ಡಿಗ್ರಿ ವರೆಗೆ ತಲುಪಿದೆ.

ಹಾಗಾದರೆ, ಕೊಂಕಣ ಪ್ರದೇಶವು ಶಾಖದ ಅಲೆಯನ್ನು ಏಕೆ ಅನುಭವಿಸುತ್ತಿದೆ?

ಮುಂಬೈ ಸೇರಿದಂತೆ ಕೊಂಕಣ ಪ್ರದೇಶದಲ್ಲಿ ಕಂಡುಬರುತ್ತಿರುವ ಶಾಖದ ಅಲೆಗೆ (Heatwave) ಕಾರಣ ಗುಜರಾತ್‌ನ ಉತ್ತರ ಭಾಗದ ಸೌರಾಷ್ಟ್ರ-ಕಚ್ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಶಾಖದ ಅಲೆಯ ನೇರ ಪ್ರಭಾವವಾಗಿದೆ.

  1. ವಾಯುವ್ಯ ಭಾರತದಿಂದ ಬೀಸುತ್ತಿರುವ ಬಿಸಿ ಮತ್ತು ಶುಷ್ಕ ಮಾರುತಗಳು ಕೊಂಕಣದ ಭಾಗಗಳನ್ನು ತಲುಪುತ್ತಿವೆ.
  2. ಇದರ ಜೊತೆಗೆ, ಮಹಾರಾಷ್ಟ್ರ ಕರಾವಳಿಯಲ್ಲಿ ಸಮುದ್ರದ ಗಾಳಿಯ ನಿಧಾನಗತಿಯ ಚಲನೆ ಮತ್ತು ಒಟ್ಟಾರೆ ತಿಳಿಯಾದ ಆಕಾಶದ ಪರಿಸ್ಥಿತಿಗಳು ಒಟ್ಟಾಗಿ ಇಂತಹ ಬಿಸಿ ಗಾಳಿ ಪರಿಸ್ಥಿತಿಗಳಿಗೆ ಕಾರಣವಾಗಿವೆ.

ಬಿಸಿಗಾಳಿ ಎಂದರೇನು?

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮೈದಾನ ಅಥವಾ ಬಯಲು ಸೀಮೆಗಳಲ್ಲಿ ಗರಿಷ್ಠ ತಾಪಮಾನವು ಕನಿಷ್ಠಪಕ್ಷ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾಗಿ, ಕರಾವಳಿ ಪ್ರದೇಶಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾಗಿ ಮತ್ತು ಗುಡ್ಡಗಾಡು/ಪರ್ವತ ಪ್ರದೇಶಗಳಲ್ಲಿ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವು ದಾಖಲಾಗಿದ್ದರೆ ಅದನ್ನು ಬಿಸಿಗಾಳಿ ಅಥವಾ ಶಾಖ ಅಲೆಗಳು ಎಂದು ಪರಿಗಣಿಸಲಾಗುತ್ತದೆ.

ಬಿಸಿಗಾಳಿಯನ್ನು ನಿರ್ಧರಿಸುವ ಮಾನದಂಡಗಳು ಯಾವುವು?

ತಾಪಮಾನದಲ್ಲಿ, ಸಾಮಾನ್ಯ ತಾಪಮಾನಕ್ಕಿಂತ 4.5 ರಿಂದ 6.4 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆಯಲ್ಲಿ ಹೆಚ್ಚಳವಾದರೆ ಅದನ್ನು ಬಿಸಿಗಾಳಿ ಎಂದು ಮತ್ತು ಉಷ್ಣತೆಯಲ್ಲಿನ / ತಾಪಮಾನದಲ್ಲಿನ ಹೆಚ್ಚಳವು 6.4 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಅದನ್ನು ತೀವ್ರವಾದ ಶಾಖದ ಅಲೆ/ ತೀವ್ರವಾದ ಬಿಸಿಗಾಳಿಯ ಪರಿಸ್ಥಿತಿ ಎಂದು ಘೋಷಿಸಲಾಗುತ್ತದೆ.

  1. ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ, ವಾಸ್ತವಿಕ ಗರಿಷ್ಠ ತಾಪಮಾನದ ಆಧಾರದ ಮೇಲೆ, ನಿಜವಾದ ಗರಿಷ್ಠ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಅದನ್ನು ಬಿಸಿಗಾಳಿಯೆಂದು ಮತ್ತು 47 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕವಾದಾಗ ತೀವ್ರವಾದ ಬಿಸಿಗಾಳಿಯ ಪರಿಸ್ಥಿತಿ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ಪರಿಗಣಿಸುತ್ತದೆ.

ಭಾರತವು ಹೆಚ್ಚಿನ ಬಿಸಿಗಾಳಿಯ ಪರಿಸ್ಥಿತಿಗಳನ್ನು ಅನುಭವಿಸಲು ಕಾರಣಗಳು:

  1. ನಗರ ಪ್ರದೇಶಗಳಲ್ಲಿ ಸುಸಜ್ಜಿತ ಮತ್ತು ಕಾಂಕ್ರೀಟ್ ಮೇಲ್ಮೈಗಳ ವರ್ಧಿತ ಪರಿಣಾಮ ಮತ್ತು ಮರದ ಹೊದಿಕೆಯ ಕೊರತೆ.
  2. ನಗರ ಶಾಖ ದ್ವೀಪದ ಪರಿಣಾಮಗಳಿಂದಾಗಿ ಸುತ್ತಮುತ್ತಲಿನ ತಾಪಮಾನವು ನಿಜವಾದ ತಾಪಮಾನಕ್ಕಿಂತ 3 ರಿಂದ 4 ಡಿಗ್ರಿಗಳಷ್ಟು ಹೆಚ್ಚು ಅನುಭವಿಸಬಹುದು.
  3. ಕಳೆದ 100 ವರ್ಷಗಳಲ್ಲಿ ಜಾಗತಿಕವಾಗಿ ತಾಪಮಾನದಲ್ಲಿ ಸರಾಸರಿ 0.8 ಡಿಗ್ರಿಗಳಷ್ಟು ಏರಿಕೆಯಾಗಿರುವುದರಿಂದ ಹೆಚ್ಚಿನ ಶಾಖದ ಅಲೆಗಳನ್ನು ನಿರೀಕ್ಷಿಸಲಾಗಿದೆ. ರಾತ್ರಿಯ ಸಮಯದ ತಾಪಮಾನವೂ ಹೆಚ್ಚುತ್ತಿದೆ.
  4. ಹವಾಮಾನ ಬದಲಾವಣೆಯಿಂದಾಗಿ ದೈನಂದಿನ ಗರಿಷ್ಠ ಮತ್ತು ದೀರ್ಘ ಅವಧಿಯ ತಾಪಮಾನದಿಂದಾಗಿ, ಹೆಚ್ಚು ತೀವ್ರವಾದ ಬೇಸಿಗೆ ಅಲೆಗಳ ಆವರ್ತನವು ಜಾಗತಿಕವಾಗಿ ಹೆಚ್ಚಾಗಿ ಹಾಗೂ ನಿರಂತರವಾಗಿ ಕಂಡುಬರುತ್ತಿದೆ.
  5. ಮಧ್ಯಮ-ಗರಿಷ್ಠ ಶಾಖ ತರಂಗ ವಲಯದಲ್ಲಿ ನೇರಳಾತೀತ (UV) ಕಿರಣಗಳ ಹೆಚ್ಚಿನ ತೀವ್ರತೆ.
  6. ಅಸಾಧಾರಣ ಶಾಖದ ಒತ್ತಡ ಮತ್ತು ಪ್ರಧಾನವಾಗಿ ಗ್ರಾಮೀಣ ಜನಸಂಖ್ಯೆಯ ಸಂಯೋಜನೆಯು ಭಾರತವನ್ನು ಶಾಖದ ಅಲೆಗಳಿಗೆ/ ಬಿಸಿಗಾಳಿಗೆ ಅತಿ ಹೆಚ್ಚು ಗುರಿಯಾಗಿಸುತ್ತದೆ. 

ಭಾರತದ ಮುಂದಿರುವ ದಾರಿ- ಭಾರತವು ಬಿಸಿಗಾಳಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು?

  1. ಹವಾಮಾನ ದತ್ತಾಂಶಗಳ ಸರಿಯಾದ ಟ್ರ್ಯಾಕಿಂಗ್ ಮೂಲಕ ಶಾಖದ ಹಾಟ್-ಸ್ಪಾಟ್‌ಗಳನ್ನು(heat-hot-spots) ಗುರುತಿಸುವುದು ಮತ್ತು ಆಯಕಟ್ಟಿನ ಅಂತರ-ಏಜೆನ್ಸಿ ಸಮನ್ವಯದೊಂದಿಗೆ ದುರ್ಬಲ ಗುಂಪುಗಳನ್ನು ಗುರಿಯಾಗಿಸಿಕೊಂಡು ಸ್ಥಳೀಯ ಶಾಖ ಕ್ರಿಯಾ ಯೋಜನೆಗಳ ಸಮಯೋಚಿತ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ಉತ್ತೇಜಿಸುವುದು.
  2. ಹವಾಮಾನ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಕಾರ್ಮಿಕರ ಸುರಕ್ಷತೆಗಾಗಿ ಅಸ್ತಿತ್ವದಲ್ಲಿರುವ ಔದ್ಯೋಗಿಕ ಆರೋಗ್ಯ ಮಾನದಂಡಗಳು, ಕಾರ್ಮಿಕ ಕಾನೂನುಗಳು ಮತ್ತು ವಲಯದ ನಿಯಮಗಳ ವಿಮರ್ಶೆ ಮಾಡುವುದು.
  3. ಆರೋಗ್ಯ, ನೀರು ಮತ್ತು ವಿದ್ಯುತ್ ಎಂಬ ಮೂರು ಕ್ಷೇತ್ರಗಳಲ್ಲಿ ನೀತಿ ಹಸ್ತಕ್ಷೇಪ ಮತ್ತು ಸಮನ್ವಯ ಅಗತ್ಯ.
  4. ಮನೆಯೊಳಗೆ ಉಳಿಯುವುದು ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಸೇರಿದಂತೆ ಅನೇಕ ಸಾಂಪ್ರದಾಯಿಕ ಅಳವಡಿಕೆ ವಿಧಾನಗಳನ್ನು ಉತ್ತೇಜಿಸುವುದು.
  5. ಸರಳ ವಿನ್ಯಾಸದ ವೈಶಿಷ್ಟಪೂರ್ಣ ನೆರಳಿನ ಕಿಟಕಿಗಳು, ಭೂಗತ ನೀರು ಸಂಗ್ರಹ ಟ್ಯಾಂಕ್‌ಗಳು ಮತ್ತು ಶಾಖ – ನಿರೋಧಕ ವಸತಿ ಸಾಮಗ್ರಿಗಳನ್ನು ಪರಿಚಯಿಸುವುದು
  6. ಸ್ಥಳೀಯ ಶಾಖ ಕ್ರಿಯಾ ಯೋಜನೆಗಳ (Heat Action Plan) ಮುಂಗಡ ಅನುಷ್ಠಾನ, ಜೊತೆಗೆ ಪರಿಣಾಮಕಾರಿ ಅಂತರ-ಏಜೆನ್ಸಿ ಸಮನ್ವಯವು ಒಂದು ಪ್ರಮುಖ ಪ್ರತಿಕ್ರಿಯೆಯಾಗಿದ್ದು, ದುರ್ಬಲ ಗುಂಪುಗಳನ್ನು ರಕ್ಷಿಸಲು ಸರ್ಕಾರವು ಸ್ಥಳೀಯ ಮಟ್ಟದಲ್ಲಿ ನಿಯೋಜಿಸಬಹುದು.


ಸಾಮಾನ್ಯ ಅಧ್ಯಯನ ಪತ್ರಿಕೆ 2 :


ವಿಷಯಗಳು : ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಹಿಜಾಬ್ ಇಸ್ಲಾಂ ಧರ್ಮದ ಅತ್ಯವಶ್ಯಕ ಆಚರಣೆ ಅಲ್ಲ, ಕರ್ನಾಟಕ ಹೈಕೋರ್ಟ್ ನ ಮಹತ್ವದ ತೀರ್ಪು:

ಸಂದರ್ಭ:

ಸಮವಸ್ತ್ರದ ಜತೆ ಹಿಜಾಬ್ (hijab) ಧರಿಸಲು ಅನುಮತಿ ಕೋರಿ ಮುಸ್ಲಿಂ ಬಾಲಿಕೆಯರು ಹಾಗೂ ಅವರ ಪೋಷಕರು ಸಲ್ಲಿಸಿದ್ದ, ರಿಟ್ ಅರ್ಜಿಗಳನ್ನು ಹೈಕೋರ್ಟ್ ಪೂರ್ಣ ಪೀಠ ವಜಾಗೊಳಿಸಿದೆ.

ನ್ಯಾಯಾಲಯ ಹೇಳಿರುವುದೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಮುಖ ವಿವಾದಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹೈಕೋರ್ಟ್ ತ್ರಿಸದಸ್ಯ ಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ತೀರ್ಪಿನಲ್ಲಿ ಅರ್ಜಿದಾರರ ಯಾವ ಹಕ್ಕುಗಳನ್ನು ಕೂಡ ಸರ್ಕಾರದ ಆದೇಶ ಅಥವಾ ಶಿಕ್ಷಣ ಸಂಸ್ಥೆಗಳು ಹಿಜಾಬ್ ನಿರ್ಬಂಧಿಸಿದ ಕ್ರಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೀಠ ಪ್ರಕಟಿಸಿದ ತೀರ್ಪಿನ ಸಾರಾಂಶ ಹೀಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನಾಲ್ಕು ಅಂಶಗಳ ಪ್ರಶ್ನೆಗಳನ್ನು ಪರಿಗಣಿಸಿದ್ದೆವು:

  1. ಇಸ್ಲಾಂನ ನಂಬಿಕೆಯಂತೆ ಹಿಜಾಬ್ ಅಥವಾ ಸ್ಕಾರ್ಫ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆಯೇ ಹಾಗೂ ಸಂವಿಧಾನದ ವಿಧಿ 25ರ ಅಡಿ ರಕ್ಷಿಸಲ್ಪಟ್ಟಿದೆಯೇ?
  2. ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ. ಇಸ್ಲಾಂ ನಂಬಿಕೆಯಂತೆ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆಯಲ್ಲ.
  3. “ಕುರಾನ್‌ನಲ್ಲೇ ಇಲ್ಲ: ‘ಕುರಾನ್‌ನಲ್ಲಿ ಅನೇಕ ಪ್ರಕಾರದ ವ್ಯಾಖ್ಯಾನಗಳಿದ್ದು, ಯಾವ ಕುರಾನ್‌ ಅನ್ನು ಒಪ್ಪಬೇಕು ಎಂಬ ಪ್ರಶ್ನೆ ಎದುರಾಯಿತು. ಕಡೆಗೆ ಸುಪ್ರೀಂ ಕೋರ್ಟ್‌ ಈಗಾಗಲೇ ಶಾಬಾನು ಪ್ರಕರಣ, ಶಾಯಿರಾಬಾನು ಪ್ರಕರಣ ಹಾಗೂ ಸಿದ್ದಿಖಿ ಪ್ರಕರಣಗಳಲ್ಲಿ ಅಬ್ದುಲ್ಲಾ ಯೂಸುಫ್‌ ಅಲಿ ಅವರು ಇಂಗ್ಲಿಷ್‌ಗೆ ಭಾಷಾಂತರ ಮಾಡಿರುವ ಕುರಾನ್‌ನ ಅಧಿಕೃತತೆಯನ್ನು ಅವಲಂಬಿಸಿ ತೀರ್ಪು ನೀಡಿದ್ದನ್ನೇ ಇಲ್ಲೂ ಪರಿಗಣಿಸಿದ್ದೇವೆ. ಇದರ ಅನುಸಾರ ಅಬ್ದುಲ್ಲಾ ಯೂಸುಫ್‌ ಅಲಿ ಅವರ ಭಾಷಾಂತರ ಮಾಡಿರುವ ಕುರಾನ್‌ನಲ್ಲಿ ಎಲ್ಲೂ ಕೂಡಾ ಹಿಜಾಬ್‌ ಪ್ರಸ್ತಾಪವೇ ಇಲ್ಲ’ ಎಂಬ ಅಂಶವನ್ನು ನ್ಯಾಯಪೀಠ ಎತ್ತಿ ತೋರಿಸಿದೆ.”

 

  1. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನಿಗದಿ ಮಾಡಿರುವುದು ಸಂವಿಧಾನದ ವಿಧಿ 19(1)(ಎ) ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ವಿಧಿ 21ರ ಅಡಿ ನೀಡಲಾಗಿರುವ ಖಾಸಗಿ ಹಕ್ಕನ್ನು ನಿರ್ಬಂಧಿಸಲಿದೆಯೇ?
  2. ನಮ್ಮ ಅಭಿಪ್ರಾಯದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನಿಗದಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ. ಕೆಲವೊಂದು ವಿಚಾರಗಳಲ್ಲಿ ನಿರ್ಬಂಧಗಳನ್ನು ವಿಧಿಸಲು ಸರ್ಕಾರಕ್ಕೆ ಸಾಂವಿಧಾನಿಕ ಹಕ್ಕಿದೆ. ಇದನ್ನು ವಿದ್ಯಾರ್ಥಿಗಳು ಆಕ್ಷೇಪಿಸಲಾಗದು.
  3. ರಾಜ್ಯ ಸರ್ಕಾರ 2022ರ ಫೆಬ್ರವರಿ 5ರಂದು ಸಮವಸ್ತ್ರ ಸಂಹಿತೆ ನಿಗದಿಪಡಿಸುವ ಸಂಬಂಧ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿ ಹೊರಡಿಸರುವ ಆದೇಶ ನಿಯಮಬಾಹಿರವೇ ಹಾಗೂ ಇದು ಸಂವಿಧಾನದ ವಿಧಿ 14 ಮತ್ತು 15ನ್ನು ಉಲ್ಲಂಘಿಸಲಿದೆಯೇ?
  4. ಸಮವಸ್ತ್ರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಅದರಂತೆ 2022ರ ಫೆ.5ರ ಸರ್ಕಾರದ ಆದೇಶವನ್ನು ಅಂಸಿಧುಗೊಳಿಸುವ ಯಾವುದೇ ಕಾನೂನಾತ್ಮಕ ಅಂಶಗಳಿಲ್ಲ.
  5. ಉಡುಪಿ ಕಾಲೇಜಿನಲ್ಲಿ ಸಮವಸ್ತ್ರ ನಿಗದಿ ಮಾಡಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಬರದಂತೆ ನಿರ್ಬಂಧಿಸಿರುವ ಕ್ರಮದಲ್ಲಿ ಕಾಲೇಜಿಗೆ ನಿರ್ದೇಶನ ನೀಡುವ ಅಗತ್ಯವಿದೆಯೇ?
  6. ಶಿಕ್ಷಣ ಸಂಸ್ಥೆಗಳ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿ ಹಾಗೂ ಸಮವಸ್ತ್ರ ಸಂಹಿತೆ ಹೇರದಂತೆ ನಿರ್ದೇಶನ ಕೋರಿರುವ ಮನವಿಯನ್ನು ಪರಿಗಣಿಸಲಾಗದು. ಹೀಗಾಗಿ ಕಾಲೇಜಿನ ವಿರುದ್ಧ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ.

ಹೀಗೆ ನಾಲ್ಕು ಪ್ರಶ್ನೆಗಳಿಗೂ ಉತ್ತರ ನಕಾರಾತ್ಮಕವಾಗಿ ಕಂಡುಬಂದಿವೆ. ಆದ್ದರಿಂದ ಎಲ್ಲ ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಅತ್ಯವಶ್ಯಕ ಧಾರ್ಮಿಕ ಆಚರಣೆ ಯಾವುದು? ಅದನ್ನು ಯಾರು ನಿರ್ಧರಿಸುತ್ತಾರೆ?

1954 ರ ಶಿರೂರು ಮಠ ಪ್ರಕರಣ:ಅತ್ಯವಶ್ಯಕತೆಯ” ಸಿದ್ಧಾಂತ (doctrine of “essentiality”)ವನ್ನು ಸುಪ್ರೀಂ ಕೋರ್ಟ್ ಕಂಡುಹಿಡಿದಿದೆ. “ಧರ್ಮ” ಎಂಬ ಪದವು ಒಂದು ಧರ್ಮಕ್ಕೆ “ಅವಿಭಾಜ್ಯ” ಎಂದು ಪರಿಗಣಿಸಲಾಗಿರುವ ಎಲ್ಲಾ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಒಳಗೊಳ್ಳುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ ಮತ್ತು ಧರ್ಮದ ಅಗತ್ಯ ಮತ್ತು ಅನಿವಾರ್ಯವಲ್ಲದ ಆಚರಣೆಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಸ್ವತಃ ತಾನೇ ವಹಿಸಿಕೊಂಡಿದೆ.

ಸಮಂಜಸವಾದ ನಿರ್ಬಂಧಗಳು:

  1. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ.
  2. ದೇಶದ ಭದ್ರತೆ.
  3. ವಿದೇಶಗಳೊಂದಿಗೆ ಸೌಹಾರ್ದ ಸಂಬಂಧ.
  4. ಸಾರ್ವಜನಿಕ ಸುವ್ಯವಸ್ಥೆ.
  5. ಸಭ್ಯತೆ ಅಥವಾ ನೈತಿಕತೆ.
  6. ನ್ಯಾಯಾಂಗ ನಿಂದನೆ.
  7. ಮಾನನಷ್ಟ.
  8. ಅಪರಾಧಕ್ಕೆ ಪ್ರಚೋದನೆ.

ಹಿಜಾಬ್ ಕುರಿತು ಕೇರಳ ಹೈಕೋರ್ಟ್‌ನ ತೀರ್ಪುಗಳು:

ಅಮ್ನಾ ಬಿಂತ್ ಬಶೀರ್ ವಿರುದ್ಧ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (2016) ಪ್ರಕರಣದಲ್ಲಿ, ಕೇರಳ ಹೈಕೋರ್ಟ್ ಹಿಜಾಬ್ ಧರಿಸುವ ಅಭ್ಯಾಸವು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಆದರೆ CBSE ಸೂಚಿಸಿದ ಡ್ರೆಸ್ ಕೋಡ್ ಅನ್ನು ರದ್ದುಗೊಳಿಸುವುದಿಲ್ಲ ಎಂದು ಹೇಳಿದೆ. ಅಗತ್ಯವಿದ್ದಾಗ ಪೂರ್ಣ ತೋಳುಗಳನ್ನು ಧರಿಸಿರುವ ವಿದ್ಯಾರ್ಥಿಗಳನ್ನು ಪರೀಕ್ಷಿಸುವಂತಹ ಹೆಚ್ಚುವರಿ ಅಧಿಕಾರಗಳನ್ನು ಸಹ ಈ ತೀರ್ಪು ಒದಗಿಸಿದೆ.

“ಸಂವಿಧಾನದ 25ನೇ ವಿಧಿಯು ಧಾರ್ಮಿಕ ಆಚರಣೆಯ ರಕ್ಷಣೆಗಳ ಬಗ್ಗೆ ವಿವರಿಸುತ್ತದೆ. ಆದರೆ, ಅತ್ಯಾವಶ್ಯಕ ಧಾರ್ಮಿಕ ಆಚರಣೆಯ ಬಗ್ಗೆ ಹೇಳಿಲ್ಲ. ಆದಾಗ್ಯೂ, ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿಸುವ ಅಧಿಕಾರ ಸಂವಿಧಾನದಲ್ಲಿ ಪ್ರದತ್ತವಾಗಿದೆ. ಈ ಅಂಶವನ್ನು ಸುಪ್ರೀಂ ಕೋರ್ಟ್‌ ಶಿರೂರು ಮಠದ ಪ್ರಕರಣದಿಂದ ಹಿಡಿದು ಶಬರಿಮಲೆ ಪ್ರಕರಣದವರೆಗೂ ಈಗಾಗಲೇ ಸ್ಪಷ್ಟಪಡಿಸಿದೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.”

ಫಾತಿಮಾ ತಸ್ನೀಮ್ VS ಕೇರಳ ರಾಜ್ಯ (2018) ಪ್ರಕರಣದಲ್ಲಿ, ಅರ್ಜಿದಾರರ ವೈಯಕ್ತಿಕ ಹಕ್ಕುಗಳಿಗಿಂತ ಸಂಸ್ಥೆಯೊಂದರ ಸಾಮೂಹಿಕ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಕೇರಳ ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಇಬ್ಬರು ಹುಡುಗಿಯರು ತಲೆಗೆ ಸ್ಕಾರ್ಫ್ / ಹಿಜಾಬ್ ಧರಿಸಲು ಬಯಸಿದ್ದರು. ತಲೆಗೆ ಸ್ಕಾರ್ಫ್ ಧರಿಸಲು  ಶಾಲೆಯು ಅನುಮತಿಸಲಿಲ್ಲ .ಆದಾಗ್ಯೂ, ಪ್ರತಿವಾದಿ-ಶಾಲೆಯ ಪಟ್ಟಿಯಲ್ಲಿ ವಿದ್ಯಾರ್ಥಿಗಳ ಹೆಸರು ಇಲ್ಲದಿರುವುದರಿಂದ ನ್ಯಾಯಾಲಯವು ಈ ಹುಡುಗಿಯರ ಮೇಲ್ಮನವಿಯನ್ನು ವಜಾಗೊಳಿಸಿತು.

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G):

ಸಂದರ್ಭ:

ಇತ್ತೀಚಿಗೆ,ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ PMAY-G ಅಡಿಯಲ್ಲಿ ಮನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಉಪಕ್ರಮಗಳನ್ನು ತೆಗೆದುಕೊಂಡಿದೆ:

  1. ಉದ್ದೇಶಿತ ಮನೆಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯದ ಮಟ್ಟದಲ್ಲಿ ಪ್ರಗತಿಯ ನಿಯಮಿತ ಪರಿಶೀಲನೆ.
  2. ಮನೆಗಳ ಮಂಜೂರಾತಿಯಲ್ಲಿನ ಅಂತರ, PMAY-G ಯ PWL ಅನ್ನು ಸ್ವಚ್ಛಗೊಳಿಸುವುದು ಮುಂತಾದ ವಿವಿಧ ನಿಯತಾಂಕಗಳ ಮೇಲೆ ದೈನಂದಿನ ಮೇಲ್ವಿಚಾರಣೆ.
  3. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಗುರಿಗಳನ್ನು ಸಮಯೋಚಿತವಾಗಿ ಹಂಚಿಕೆ ಮಾಡುವುದು ಮತ್ತು ಸಚಿವಾಲಯದ ಮಟ್ಟದಲ್ಲಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುವುದು.
  4. ಮನೆ ನಿರ್ಮಾಣಕ್ಕಾಗಿ ಪರಿಸರ ಸ್ನೇಹಿ ಮತ್ತು ನವೀನ ತಂತ್ರಜ್ಞಾನಗಳ ಪ್ರಚಾರ.
  5. ಗುಣಮಟ್ಟದ ಮನೆಗಳ ತ್ವರಿತ ನಿರ್ಮಾಣಕ್ಕೆ ಕಾರಣವಾಗುವ ತರಬೇತಿ ಪಡೆದ ಮೇಸ್ತ್ರಿಗಳ ಲಭ್ಯತೆಯನ್ನು ಹೆಚ್ಚಿಸುವ ಗ್ರಾಮೀಣ ಮೇಸನ್ ತರಬೇತಿ (Rural Mason Training-RMT) ಕಾರ್ಯಕ್ರಮದ ವ್ಯಾಪ್ತಿಯನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

PMAY-G ಯ ಕಾರ್ಯಕ್ಷಮತೆ:

ಈ ಯೋಜನೆಯಡಿ, ಫಲಾನುಭವಿಗಳಿಗೆ 2.28 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, 9 ಮಾರ್ಚ್ 2022 ರ ವೇಳೆಗೆ 1.75 ಕೋಟಿ ಮನೆಗಳನ್ನು ಪೂರ್ಣಗೊಳಿಸಲಾಗಿದೆ.

PMAY- G ಯ ಕುರಿತು:

ಅನುಷ್ಠಾನ ಸಚಿವಾಲಯ: ಗ್ರಾಮೀಣಾಭಿವೃದ್ಧಿ ಸಚಿವಾಲಯ.

ಈ ಹಿಂದಿನ ಗ್ರಾಮೀಣ ವಸತಿ ಯೋಜನೆಯಾದ ಇಂದಿರಾ ಆವಾಸ್ ಯೋಜನೆ (Indira Awaas yojana-IAY) ಯನ್ನು 01.04.2016 ರಿಂದ ಜಾರಿಗೆ ಬರುವಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆ -ಗ್ರಾಮೀಣ (PMAY-G) ಯಲ್ಲಿ ವಿಲೀನಗೊಳಿಸಲಾಗಿದೆ.

PMAY-G ಯೋಜನೆಯು 2024 ರ ವೇಳೆಗೆ ಎಲ್ಲಾ ವಸತಿರಹಿತರಿಗೆ ಮತ್ತು ಕಚ್ಚಾ ಮತ್ತು ಪಾಳುಬಿದ್ದ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಪಕ್ಕಾ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಗುರಿ: 2024 ರ ವೇಳೆಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ 2.95 ಕೋಟಿ ಮನೆಗಳ ನಿರ್ಮಾಣ. 

ವೆಚ್ಚ ಹಂಚಿಕೆ:

ಈ ಯೋಜನೆಯಲ್ಲಿ ಘಟಕ ಸಹಾಯದ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು   ಬಯಲು / ಮೈದಾನ ಪ್ರದೇಶಗಳಲ್ಲಿ 60:40 ಅನುಪಾತದಲ್ಲಿ ಮತ್ತು ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಲ್ಲಿ 90: 10 ಅನುಪಾತದಲ್ಲಿ ಹಂಚಿಕೊಳ್ಳುತ್ತವೆ.

ಈ ಯೋಜನೆಯಡಿಯಲ್ಲಿ ಕೆಲಸಗಾರಿಕೆಯಲ್ಲಿ ಶ್ರೇಷ್ಟತೆ ಮತ್ತು ಮನೆಗಳ ನಿರ್ಮಾಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಗ್ರಾಮೀಣ ಮೇಸ್ತ್ರಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ, ಅದೇ ಸಮಯದಲ್ಲಿ ನುರಿತ ಮೇಸ್ತ್ರಿಗಳ ಲಭ್ಯತೆಯನ್ನು ಹೆಚ್ಚಿಸುವುದು ಮತ್ತು ಅಂತಹ ಮೇಸ್ತ್ರಿಗಳ ಉದ್ಯೋಗಾವಕಾಶವನ್ನು ಹೆಚ್ಚಿಸುವುದು ಆಗಿದೆ.

ಫಲಾನುಭವಿಗಳ ಆಯ್ಕೆ:

2011 ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿಯ (SECC) ವಸತಿ ರಹಿತತೆಯ ನಿಯತಾಂಕಗಳನ್ನು ಆಧರಿಸಿ,13 ಅಂಶಗಳ ಹೊರಗಿಡುವ ಮಾನದಂಡಕ್ಕೆ ಒಳಪಟ್ಟು  ನಂತರ ಗ್ರಾಮ ಸಭೆ ಪರಿಶೀಲನೆಯೊಂದಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

  1. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ನಿಗದಿಪಡಿಸಿದ ನಿಯತಾಂಕಗಳ ಪ್ರಕಾರ ಗಂಡ, ಹೆಂಡತಿ ಮತ್ತು ಅವಿವಾಹಿತ ಮಕ್ಕಳ ಕುಟುಂಬವನ್ನು ಮನೆಯೆಂದು ಪರಿಗಣಿಸಲಾಗುತ್ತದೆ. ಈ ಯೋಜನೆಯಡಿ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸುವ ಫಲಾನುಭವಿಯು ತನ್ನ ಹೆಸರಿನಲ್ಲಿ ಅಥವಾ ಅವನ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ, ಭಾರತದ ಯಾವುದೇ ಭಾಗದಲ್ಲಿ ಪಕ್ಕಾ ಮನೆ ಹೊಂದಿರಬಾರದು.
  2. 21 ಚದರ ಮೀಟರ್‌ಗಿಂತ ಕಡಿಮೆ ಇರುವ ಪಕ್ಕಾ ಮನೆ ಹೊಂದಿರುವ ಜನರನ್ನು ಈಗಿರುವ ಮನೆಯ ವರ್ಧನೆಯಡಿಯಲ್ಲಿ ಸೇರಿಸಿಕೊಳ್ಳಬಹುದು.
  3. ಒಂದು ಕುಟುಂಬದ ವಯಸ್ಕ ಸಂಪಾದಿಸುವ ಸದಸ್ಯರನ್ನು ಪ್ರತ್ಯೇಕ ಕುಟುಂಬವೆಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ, ಅವರ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಯೋಜನೆಯ ಫಲಾನುಭವಿ.
  4. ವಿವಾಹಿತ ದಂಪತಿಗಳ ವಿಷಯದಲ್ಲಿ, ಸಂಗಾತಿಗಳು ಅಥವಾ ಜಂಟಿ ಮಾಲೀಕತ್ವದಲ್ಲಿ ಇಬ್ಬರೂ ಒಂದೇ ಮನೆಗೆ ಅರ್ಹರಾಗಿರುತ್ತಾರೆ, ಅವರು ಯೋಜನೆಯಡಿ ಮನೆಯ ಆದಾಯ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ.
  5. EWS ವರ್ಗದ ಫಲಾನುಭವಿಗಳು ಎಲ್ಲಾ ನಾಲ್ಕು ಲಂಬಗಳಲ್ಲಿ ಸಹಾಯಕ್ಕಾಗಿ ಅರ್ಹರಾಗಿದ್ದಾರೆ, ಆದರೆ ಎಲ್ಐಜಿ / ಎಂಐಜಿ ವರ್ಗವು ಮಿಷನ್‌ನ ಸಿಎಲ್‌ಎಸ್ಎಸ್ ಘಟಕದ ಅಡಿಯಲ್ಲಿ ಮಾತ್ರ ಅರ್ಹವಾಗಿದೆ.
  6. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿಭಾಗಗಳಿಗೆ ಸೇರಿದ ಜನರು ಮತ್ತು ಇಡಬ್ಲ್ಯೂಎಸ್ ಮತ್ತು ಎಲ್‌ಐಜಿಗೆ ಸೇರಿದ ಮಹಿಳೆಯರು ಕೂಡ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಸವಲತ್ತು ಪಡೆಯಲು ಅರ್ಹರಾಗಿದ್ದಾರೆ.

ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು :  ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಭಾರತವು ರೂ 24,000 ಕೋಟಿ ಸಾರ್ವಭೌಮ ಹಸಿರು ಬಾಂಡ್ ವಿತರಣೆಯನ್ನು ಯೋಜಿಸಿದೆ:

(India plans Rs 24,000 crore sovereign green bond issuance).

ಸಂದರ್ಭ:

ಕಡಿಮೆ ಇಂಗಾಲ ಹೊರಸೂಸುವಿಕೆಯ ಆರ್ಥಿಕತೆಯಾಗುವತ್ತ ದೇಶವು ದಾಪುಗಾಲಿಡತ್ತಿರುವುದರಿಂದ ಭಾರತವು ಕನಿಷ್ಠ ರೂ 24,000 ಕೋಟಿ ($3.3 ಶತಕೋಟಿ) ಸಾರ್ವಭೌಮ ಹಸಿರು ಬಾಂಡ್‌ಗಳನ್ನು (sovereign green bonds) ಬಿಡುಗಡೆ ಮಾಡಲಿದೆ.

ಇದರ ಅವಶ್ಯಕತೆ:

2070 ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ (net-zero emissions) ಗುರಿಯನ್ನು ಪೂರೈಸಲು ಸಹಾಯ ಮಾಡುವ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಹಣವನ್ನು ನೀಡಲು ಯೋಜಿಸುತ್ತಿರುವಾಗ ಹಸಿರು ಬಾಂಡ್ ಜಾಗಕ್ಕೆ ಭಾರತದ ಮೊದಲ ಪ್ರವೇಶವು ಬರುತ್ತದೆ.

  1. ಸುಸ್ಥಿರ ಹೂಡಿಕೆಯಲ್ಲಿ ಜಾಗತಿಕ ಉತ್ಕರ್ಷದ ಮಧ್ಯೆ ಯೋಜಿತ ವಿತರಣೆಯು ಬರುತ್ತದೆ.
  2. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಹಸಿರುಮನೆ ಅನಿಲಗಳನ್ನು ಹೊರಸೂಸುವ ದೇಶವಾಗಿದೆ ಮತ್ತು 2030 ರ ವೇಳೆಗೆ ತನ್ನ ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ನಾಲ್ಕು ಪಟ್ಟು ಹೆಚ್ಚು ಮಾಡಲು ಯೋಜಿಸಿದೆ.

‘ಗ್ರೀನ್ ಬಾಂಡ್ಸ್’ ಎಂದರೇನು?

‘ಗ್ರೀನ್ ಬಾಂಡ್‌ಗಳು’ ಒಂದು ರೀತಿಯ ‘ಸ್ಥಿರ ಆದಾಯ’ ಸಾಧನವಾಗಿದ್ದು, ಹವಾಮಾನ ಮತ್ತು ಪರಿಸರ ಸಂಬಂಧಿತ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು ನಿರ್ದಿಷ್ಟವಾಗಿ ಮೀಸಲಿಡಲಾಗಿದೆ.

ಈ ಬಾಂಡ್‌ಗಳು ಸಾಮಾನ್ಯವಾಗಿ ಆಸ್ತಿಗೆ ಲಿಂಕ್ ಆಗಿರುತ್ತವೆ ಮತ್ತು ವಿತರಿಸುವ ಘಟಕದ ಬ್ಯಾಲೆನ್ಸ್ ಶೀಟ್‌ನಿಂದ ಬೆಂಬಲಿತವಾಗಿದೆ, ಆದ್ದರಿಂದ ಈ ಬಾಂಡ್‌ಗಳಿಗೆ ವಿತರಕರ ಇತರ ಸಾಲದ ಬಾಧ್ಯತೆಗಳಂತೆಯೇ ಅದೇ ‘ಕ್ರೆಡಿಟ್ ರೇಟಿಂಗ್’ ನೀಡಲಾಗುತ್ತದೆ.

  1. ಗ್ರೀನ್ ಬಾಂಡ್’ಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರನ್ನು ಆಕರ್ಷಿಸಲು ಪ್ರೋತ್ಸಾಹಕವಾಗಿ ‘ತೆರಿಗೆ’ ವಿನಾಯಿತಿಗಳಂತಹ ಕೆಲವು ಪ್ರೋತ್ಸಾಹಕಗಳನ್ನು ಸಹ ನೀಡಬಹುದು.
  2. ವಿಶ್ವ ಬ್ಯಾಂಕ್ ‘ಹಸಿರು ಬಾಂಡ್‌ಗಳು’ / ಗ್ರೀನ್ ಬಾಂಡ್‌ಗಳ ಪ್ರಮುಖ ವಿತರಕವಾಗಿದೆ. ಇದು 2008 ರಿಂದ 164 ‘ಗ್ರೀನ್ ಬಾಂಡ್’ಗಳನ್ನು ಬಿಡುಗಡೆ ಮಾಡಿದೆ, ಇದರ ಒಟ್ಟು ಮೌಲ್ಯ $14.4 ಬಿಲಿಯನ್. ‘ಕ್ಲೈಮೇಟ್ ಬಾಂಡ್ ಇನಿಶಿಯೇಟಿವ್’ ಪ್ರಕಾರ, 2020 ರಲ್ಲಿ ಸುಮಾರು $270 ಬಿಲಿಯನ್ ಮೌಲ್ಯದ ಹಸಿರು ಬಾಂಡ್‌ಗಳನ್ನು ವಿತರಿಸಲಾಗಿದೆ.

‘ಗ್ರೀನ್ ಬಾಂಡ್’ ಕಾರ್ಯನಿರ್ವಹಣೆ:

ಹಸಿರು ಬಾಂಡ್‌ಗಳು ಇತರ ಯಾವುದೇ ಕಾರ್ಪೊರೇಟ್ ಬಾಂಡ್ ಅಥವಾ ಸರ್ಕಾರಿ ಬಾಂಡ್‌ಗಳಂತೆಯೇ ಕಾರ್ಯನಿರ್ವಹಿಸುತ್ತವೆ.

  1. ಪರಿಸರ ವ್ಯವಸ್ಥೆಯ ಮರುಸ್ಥಾಪನೆ ಅಥವಾ ಮಾಲಿನ್ಯದ ತಗ್ಗಿಸುವಿಕೆಯಂತಹ ‘ಸಕಾರಾತ್ಮಕ ಪರಿಸರ ಪ್ರಭಾವ’ವನ್ನು ಹೊಂದಿರುವ ಯೋಜನೆಗಳಿಗೆ ‘ಹಣಕಾಸು’ ಒದಗಿಸುವಿಕೆಯನ್ನು ಸುರಕ್ಷಿತಗೊಳಿಸಲು ಸಾಲಗಾರರಿಂದ ಈ ಭದ್ರತೆಗಳನ್ನು ನೀಡಲಾಗುತ್ತದೆ.
  2. ಈ ಬಾಂಡ್‌ಗಳನ್ನು ಖರೀದಿಸುವ ಹೂಡಿಕೆದಾರರು ತಮ್ಮ ಬಾಂಡ್ಗಳ ಅವಧಿಯ ಮುಕ್ತಾಯದ ಮೇಲೆ ಸಮಂಜಸವಾದ ಲಾಭವನ್ನು ಪಡೆಯುವುದನ್ನು ನಿರೀಕ್ಷಿಸಬಹುದು.
  3. ಹೆಚ್ಚುವರಿಯಾಗಿ, ಹಸಿರು ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯವಾಗಿ ‘ತೆರಿಗೆ’ ಪ್ರಯೋಜನಗಳೊಂದಿಗೆ ಬರುತ್ತದೆ

ಗ್ರೀನ್ ಬಾಂಡ್ Vs ಬ್ಲೂ ಬಾಂಡ್:

‘ಬ್ಲೂ ಬಾಂಡ್‌ಗಳು’ (Blue Bonds)ಸಾಗರ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಯೋಜನೆಗಳಿಗೆ ಹಣಕಾಸು ನೀಡಲು ಒದಗಿಸಲಾದ ‘ಸುಸ್ಥಿರತೆಯ ಬಾಂಡ್‌ಗಳು’.

  1. ಸಮರ್ಥನೀಯ ಮೀನುಗಾರಿಕೆ, ಹವಳದ ಬಂಡೆಗಳು ಮತ್ತು ಇತರ ದುರ್ಬಲ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಅಥವಾ ಮಾಲಿನ್ಯ ಮತ್ತು ಆಮ್ಲೀಕರಣವನ್ನು ಕಡಿಮೆ ಮಾಡುವ ಯೋಜನೆಗಳಿಗೆ ಈ ಬಾಂಡ್‌ಗಳನ್ನು ನೀಡಬಹುದಾಗಿದೆ.
  2. ಎಲ್ಲಾ ನೀಲಿ ಬಾಂಡ್ ಗಳು ‘ಹಸಿರು ಬಾಂಡ್ ಗಳು ಆದರೆ ಎಲ್ಲಾ ‘ಹಸಿರು ಬಾಂಡ್ ಗಳು ನೀಲಿ ಬಾಂಡ್ಗಳಲ್ಲ.

‘ಗ್ರೀನ್ ಬಾಂಡ್‌ಗಳು VS ಕ್ಲೈಮೇಟ್ ಬಾಂಡ್‌ಗಳು’:

“ಹಸಿರು ಬಾಂಡ್‌ಗಳು” ಮತ್ತು “ಕ್ಲೈಮೇಟ್ ಬಾಂಡ್‌ಗಳನ್ನು” ಕೆಲವೊಮ್ಮೆ ಒಂದನ್ನು ಮತ್ತೊಂದರ ಪರ್ಯಾಯದಂತೆ ಬಳಸಲಾಗುತ್ತದೆ, ಆದರೆ ‘ಹವಾಮಾನ ಬಾಂಡ್ ಗಳು’ ಎಂಬ ಪದವನ್ನು ಕೆಲವು ಅಧಿಕಾರಿಗಳು ನಿರ್ದಿಷ್ಟವಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಅಥವಾ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಯೋಜನೆಗಳಿಗೆ ಬಳಸುತ್ತಾರೆ.

ವಿಷಯಗಳು : ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ರಾಷ್ಟ್ರೀಯ ನಾಗರಿಕರ ನೋಂದಣಿ (NRC):

(National Register of Citizens -NRC)

 ಸಂದರ್ಭ:

ಅಸ್ಸಾಂ ಸರ್ಕಾರವು, ಆಗಸ್ಟ್, 2019 ರಲ್ಲಿ ಪ್ರಕಟಿಸಿದ ‘ರಾಷ್ಟ್ರೀಯ ನಾಗರಿಕರ ನೋಂದಣಿ’ (National Register of Citizens – NRC) ಯ ಪೂರಕ ಪಟ್ಟಿಯಲ್ಲಿ ಹೆಸರಿಲ್ಲದ 19 ಲಕ್ಷ ಜನರ ಸಮಸ್ಯೆಯನ್ನು ಪರಿಶೀಲಿಸಲು ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸಿದೆ.

ಏನಿದು ಸಮಸ್ಯೆ? 

ಈ ಜನರ ಬಯೋಮೆಟ್ರಿಕ್ ವಿವರಗಳು ಲಾಕ್ ಆಗಿರುವ ಕಾರಣ ಅವರು ಆಧಾರ್ ಕಾರ್ಡ್‌ಗಳನ್ನು ಪಡೆಯಲು ಸಾಧ್ಯವಾಗಿಲ್ಲ, ಇದರಿಂದಾಗಿ ಅವರು ಸರ್ಕಾರದ ಕಲ್ಯಾಣ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ಅವಶ್ಯಕತೆಯಿದೆ.

ಹಿನ್ನೆಲೆ:

ಅಸ್ಸಾಂ ರಾಜ್ಯದಲ್ಲಿ ಆಗಸ್ಟ್ 31, 2019 ರಂದು ಪ್ರಕಟಿಸಲಾದ ಅಂತಿಮ ಕರಡು ಪ್ರತಿಯಲ್ಲಿ, 3.29 ಕೋಟಿ ಅರ್ಜಿದಾರರಲ್ಲಿ 19 ಲಕ್ಷಕ್ಕೂ ಹೆಚ್ಚು ಜನರನ್ನು ‘ರಾಷ್ಟ್ರೀಯ ನಾಗರಿಕರ ನೋಂದಣಿ’ (NRC) ಪಟ್ಟಿಯಿಂದ ಹೊರಗಿಡಲಾಗಿದೆ. ಈ ಪಟ್ಟಿ ಸಿದ್ಧಪಡಿಸಲು ₹ 1,220 ಕೋಟಿ ವೆಚ್ಚ ಮಾಡಲಾಗಿದೆ.

ಸರ್ಕಾರವು ಪ್ರಸ್ತುತ ರೂಪದಲ್ಲಿ ‘ರಾಷ್ಟ್ರೀಯ ನಾಗರಿಕರ ನೋಂದಣಿ’ ಯನ್ನು ತಿರಸ್ಕರಿಸಿದೆ ಮತ್ತು ಈ ನವೀಕರಿಸಿದ ನಾಗರಿಕರ ಪಟ್ಟಿಯಲ್ಲಿ ಬಾಂಗ್ಲಾದೇಶದ ಗಡಿಯಲ್ಲಿರುವ ಪ್ರದೇಶಗಳಲ್ಲಿ ಕನಿಷ್ಠ 30% ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ 10% ಹೆಸರುಗಳನ್ನು ಮರುಪರಿಶೀಲಿಸುವಂತೆ ಕೇಳಿದೆ.

Note:

ಅಸ್ಸಾಂ ರಾಜ್ಯದಲ್ಲಿ, ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ, 1951 ರ ‘ರಾಷ್ಟ್ರೀಯ ನಾಗರಿಕ ನೋಂದಣಿ’ ಯನ್ನು ನವೀಕರಿಸುವ ಪ್ರಕ್ರಿಯೆಯು ಪೂರ್ಣಗೊಂಡಿತ್ತು. ಇದರ ಅಡಿಯಲ್ಲಿ, ಒಟ್ಟು 3.30 ಕೋಟಿ ಅರ್ಜಿದಾರರಲ್ಲಿ 19 ಲಕ್ಷ ಅರ್ಜಿದಾರರು ‘ರಾಷ್ಟ್ರೀಯ ನಾಗರಿಕ ನೋಂದಣಿ’ (National Register of Citizens- NRC) ಯ ನವೀಕರಿಸಿದ ಪಟ್ಟಿಯಿಂದ ಹೊರಗುಳಿದಿದ್ದಾರೆ. 

‘ರಾಷ್ಟ್ರೀಯ ನಾಗರಿಕ ನೋಂದಣಿ’ ಎಂದರೇನು?

  1. ರಾಷ್ಟ್ರೀಯ ನಾಗರಿಕ ನೋಂದಣಿ (NRC) ಮುಖ್ಯವಾಗಿ ಕಾನೂನುಬದ್ಧ ಭಾರತೀಯ ನಾಗರಿಕರ ಅಧಿಕೃತ ದಾಖಲೆಯಾಗಿದೆ. ‘ಪೌರತ್ವ ಕಾಯ್ದೆ, 1955 ರ ಪ್ರಕಾರ, ಭಾರತದ ನಾಗರಿಕರಾಗಿ ಅರ್ಹತೆ ಪಡೆದ ಎಲ್ಲ ವ್ಯಕ್ತಿಗಳ ಜನಸಂಖ್ಯಾ ವಿವರಗಳನ್ನು ಇದು ಒಳಗೊಂಡಿದೆ.
  2. 1951 ರ ಜನಗಣತಿಯ ನಂತರ ಈ ರಿಜಿಸ್ಟರ್ ಅನ್ನು ಮೊದಲು ತಯಾರಿಸಲಾಯಿತು. ಇದರ ನಂತರ, ಇದನ್ನು ನವೀಕರಿಸಲಾಗಿರಲಿಲ್ಲ. ಆದರೆ ಇತ್ತೀಚೆಗೆ ಇದನ್ನು ನವೀಕರಿಸಲಾಗಿದೆ.
  3. ಬಾಂಗ್ಲಾದೇಶ ಮತ್ತು ಇತರ ಪಕ್ಕದ ಪ್ರದೇಶಗಳಿಂದ ಕಾನೂನುಬಾಹಿರ ವಲಸೆಯ ಪ್ರಕರಣಗಳನ್ನು ಹೊರಹಾಕಲು, NRC ನವೀಕರಣವನ್ನು ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ಮತ್ತು ಅಸ್ಸಾಂ ಒಪ್ಪಂದದಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ ಕೈಗೊಳ್ಳಲಾಯಿತು.
  4. ವಿಶ್ವಸಂಸ್ಥೆಯ ತಜ್ಞರು ಅಸ್ಸಾಂನಲ್ಲಿರುವ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಲಕ್ಷಾಂತರ ನಾಗರಿಕರನ್ನು ದೇಶರಹಿತರನ್ನಾಗಿಸಬಹುದು ಮತ್ತು ಭಾರತದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಬಹುದು ಎಂದು ಎಚ್ಚರಿಸಿದ್ದಾರೆ.

ಅಸ್ಸಾಂನಲ್ಲಿ ‘ರಾಷ್ಟ್ರೀಯ ನಾಗರಿಕ ನೋಂದಣಿ’:

ಇಲ್ಲಿಯವರೆಗೆ, ಅಸ್ಸಾಂ ರಾಜ್ಯಕ್ಕೆ ಮಾತ್ರ ಅಂತಹ ಡೇಟಾಬೇಸ್ ಸಿದ್ಧಪಡಿಸಿ ನಿರ್ವಹಿಸಲಾಗಿದೆ.

ಅಸ್ಸಾಂನಲ್ಲಿ NRC ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತು ‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ (AASU) ಮತ್ತು ‘Akhil Asom Gana Sangram Parishad’ (AAGSP) ನಡುವೆ 1985 ರಲ್ಲಿ ಸಹಿ ಮಾಡಿದ ‘1985 ರ ಅಸ್ಸಾಂ ಒಪ್ಪಂದ’ (Assam Accord of 1985) ದ ನಂತರ ಪ್ರಾರಂಭಿಸಲಾಯಿತು.ಈ ಒಪ್ಪಂದದಲ್ಲಿ, ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು, ಮತಚಲಾವಣೆಯ ಅಧಿಕಾರ ನೀಡದಿರಲು ಮತ್ತು ಗಡೀಪಾರು ಮಾಡಲು ಷರತ್ತುಗಳನ್ನು ಹಾಕಲಾಗಿದೆ.

ಅಸ್ಸಾಂನಲ್ಲಿ ‘ರಾಷ್ಟ್ರೀಯ ನಾಗರಿಕ ನೋಂದಣಿ’ ನವೀಕರಿಸಲು ಕಾರಣಗಳೇನು?

2014 ರಲ್ಲಿ, ಸುಪ್ರೀಂ ಕೋರ್ಟ್, ಪೌರತ್ವ ಕಾಯ್ದೆ, 1955 ಮತ್ತು ಪೌರತ್ವ ನಿಯಮಗಳು, 2003 ರ ಪ್ರಕಾರ, ಅಸ್ಸಾಂನ ಎಲ್ಲಾ ಭಾಗಗಳಲ್ಲಿ ‘ರಾಷ್ಟ್ರೀಯ ನಾಗರಿಕ ನೋಂದಣಿ’ ಪ್ರಕ್ರಿಯೆಯನ್ನು ನವೀಕರಿಸಲು ಆದೇಶಿಸಿತು. ಈ ಪ್ರಕ್ರಿಯೆಯು ಅಧಿಕೃತವಾಗಿ 2015 ರಲ್ಲಿ ಪ್ರಾರಂಭವಾಯಿತು. 

ಪ್ರಸ್ತುತ ಸಮಸ್ಯೆಗಳು:

  1. 2018 ರಲ್ಲಿ ಪ್ರಕಟವಾದ ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಕರಡು ಪಟ್ಟಿಯಿಂದ ಲಕ್ಷಾಂತರ ಜನರು ಹೊರಗುಳಿದಿದ್ದಾರೆ.
  2. ಸುಪ್ರೀಂ ಕೋರ್ಟ್ ಆದೇಶದ ನಿಯಮಗಳ ಪ್ರಕಾರ, ಕರಡು NRC ಪಟ್ಟಿಯಿಂದ ಹೊರಗುಳಿದವರು ‘ಹಕ್ಕುಗಳ’ (ತಮ್ಮನ್ನು NRC ಯಲ್ಲಿ ಸೇರಿಸಿಕೊಳ್ಳಲು) ಮತ್ತು ‘ಆಕ್ಷೇಪಣೆಗಳು’ (ಬೇರೆಯವರ ಸೇರ್ಪಡೆಗೆ ಆಕ್ಷೇಪಿಸಲು) ಪ್ರಕ್ರಿಯೆಯ ವಿಚಾರಣೆಯ ಸಮಯದಲ್ಲಿ ಕಡ್ಡಾಯವಾಗಿ ತಮ್ಮ ಬಯೋಮೆಟ್ರಿಕ್ ಸಲ್ಲಿಸಬೇಕು.
  3. 2018 ರಲ್ಲಿ ಪ್ರಕಟವಾದ ಪಟ್ಟಿಯಿಂದ ಹೊರಗುಳಿದ 27 ಲಕ್ಷ ಜನರು ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಸಲ್ಲಿಸಿದರು ಮತ್ತು ಈ ಪೈಕಿ ಕೇವಲ 8 ಲಕ್ಷ ಜನರು 2019 ರಲ್ಲಿ ಪ್ರಕಟಿಸಿದ ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದಾಗ್ಯೂ, ಈ 8 ಲಕ್ಷ ಜನರು ಆಧಾರ್ ಪಡೆಯಲು ಹೆಣಗಾಡುತ್ತಿದ್ದಾರೆ ಮತ್ತು ಲಿಂಕ್ ಮಾಡಲಾದ ಆಧಾರ್ ನಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಕಾಳಜಿ ಹೊಂದಿದ್ದಾರೆ.
  4. ಯಾವುದೇ ಸ್ಪಷ್ಟ ಮಾರ್ಗವಿಲ್ಲದ ಕಾರಣ ಮತ್ತು ‘ಆಧಾರ್’ ಆಧಾರಿತ ಪ್ರಯೋಜನಗಳು ಲಭ್ಯವಿಲ್ಲದಿರುವುದರಿಂದ, ಈ ವ್ಯಕ್ತಿಗಳು ಅಪಾರ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದಾರೆ.
  5. ಈ ಪರಿಸ್ಥಿತಿಯು ಮುಖ್ಯವಾಗಿ ‘ರಾಷ್ಟ್ರೀಯ ನಾಗರಿಕರ ನೋಂದಣಿ’ ಪ್ರಕ್ರಿಯೆಯ ಸ್ಪಷ್ಟತೆಯ ಕೊರತೆಯಿಂದಾಗಿ ಉದ್ಭವಿಸಿದೆ. ಏಕೆಂದರೆ, ಸಂಪೂರ್ಣ ಮತ್ತು ಅಂತಿಮ ‘ರಾಷ್ಟ್ರೀಯ ನಾಗರಿಕರ ನೋಂದಣಿ’ ಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ, ಮತ್ತು ಈ ಕಾರಣದಿಂದಾಗಿ, ನವೀಕರಿಸಿದ ಪಟ್ಟಿಯಲ್ಲಿ ಸೇರಿಸಲಾದ ಈ ವ್ಯಕ್ತಿಗಳಿಗೆ ‘ಆಧಾರ್ ಸಂಖ್ಯೆ’ ನೀಡುವುದನ್ನು ಸರ್ಕಾರ ತಡೆಹಿಡಿದಿದೆ. 

ವಿಷಯಗಳು: ಗಡಿ ಪ್ರದೇಶಗಳಲ್ಲಿ ಭದ್ರತಾ ಸವಾಲುಗಳು ಮತ್ತು ಅವುಗಳ ನಿರ್ವಹಣೆ – ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯ ನಡುವಿನ ಸಂಬಂಧ.

LAC ಯಲ್ಲಿ ಭಾರತದ ಮೂಲಸೌಕರ್ಯ ವರ್ಧನೆ:

(Major upgrade for India infrastructure along LAC)

ಸಂದರ್ಭ:

ಗೃಹ ವ್ಯವಹಾರಗಳ ಇಲಾಖೆ-ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ವರದಿಯ ಪ್ರಕಾರ:

  1. 2020 ರಲ್ಲಿ ಗಾಲ್ವಾನ್‌ನಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಚಕಮಕಿಗಳ ನಂತರ ಭಾರತ-ಚೀನಾ ಗಡಿಯಲ್ಲಿನ ಮೂಲಸೌಕರ್ಯವು ಪ್ರಮುಖ ನವೀಕರಣಕ್ಕೆ ಒಳಗಾಗುತ್ತಿದೆ.
  2. ಇಂಡೋ-ಚೀನಾ ಗಡಿ ರಸ್ತೆಗಳ ಯೋಜನೆಯಡಿ 18 ಗಡಿ ರಸ್ತೆಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿವೆ ಮತ್ತು ಕಾರ್ಯನಿರ್ವಹಿಸುತ್ತಿವೆ, 7  ಗಡಿ ರಸ್ತೆಗಳು ಇನ್ನೇನು ಪೂರ್ಣಗೊಳ್ಳಲಿವೆ ಮತ್ತು ಇಂಡೋ-ಚೀನಾ ಗಡಿ ರಸ್ತೆಗಳ ಯೋಜನೆಯ 11 ನೇ ಹಂತದ ಅಡಿಯಲ್ಲಿ 8 ರಸ್ತೆಗಳಲ್ಲಿ ಕೆಲಸ ಪ್ರಗತಿಯಲ್ಲಿದೆ.

ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮದ ವೈಬ್ರಂಟ್ ವಿಲೇಜ್ ಉಪಕ್ರಮದಡಿ, ರಸ್ತೆಗಳು, ಮೊಬೈಲ್ ಟವರ್‌ಗಳು, ಬ್ಯಾಂಕ್‌ಗಳು ಇತ್ಯಾದಿಗಳನ್ನು ನಿರ್ಮಿಸುವ ಮೂಲಕ ಗಡಿ ಗ್ರಾಮಗಳಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸಲಾಗುವುದು.

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (LAC) ಮೂಲಸೌಕರ್ಯ ಅಭಿವೃದ್ಧಿಯ ಪ್ರಾಮುಖ್ಯತೆ:

ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ನ ಉದ್ದಕ್ಕೂ ಅನೇಕ ಹಂತಗಳಲ್ಲಿ ಚೀನಾದೊಂದಿಗಿನ ಇತ್ತೀಚಿನ ಗಡಿ ಉದ್ವಿಗ್ನತೆಗಳು ಹಿಂದಿನ ಘಟನೆಗಳಿಗಿಂತ ಹೆಚ್ಚು ಗಂಭೀರವಾಗಿದೆ, ಇದು ಚೀನಾದ ಯೋಜನೆ ಮತ್ತು ದೀರ್ಘಾವಧಿಯ ಸ್ಟ್ಯಾಂಡ್-ಆಫ್ ನ ಸಾಧ್ಯತೆಯನ್ನು ಸೂಚಿಸುತ್ತದೆ.

  1. ಆದ್ದರಿಂದ, ಮೂಲಸೌಕರ್ಯಗಳ ನಿರ್ಮಾಣವು “ಈ ಪ್ರದೇಶಗಳನ್ನು ಒಳನಾಡಿನೊಂದಿಗೆ ಸಂಯೋಜಿಸಲು ಸಹಾಯ ಮಾಡುತ್ತದೆ, ದೇಶದಿಂದ ಕಾಳಜಿಯ ಸಕಾರಾತ್ಮಕ ಗ್ರಹಿಕೆಯನ್ನು ಸೃಷ್ಟಿಸುತ್ತದೆ ಮತ್ತು  ಸುರಕ್ಷಿತ ಗಡಿ ಪ್ರದೇಶಗಳಲ್ಲಿ  ನೆಲೆಸಲು ಜನರನ್ನು ಪ್ರೋತ್ಸಾಹಿಸುತ್ತದೆ”.

ಭಾರತ-ಚೀನಾ ಗಡಿ:

  1. ಭಾರತ ಮತ್ತು ಚೀನಾ 3,488 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ದುರದೃಷ್ಟವಶಾತ್, ಸಂಪೂರ್ಣ ಗಡಿ ಪ್ರದೇಶವು ವಿವಾದಿತವಾಗಿದೆ. ಎರಡು ದೇಶಗಳ ನಡುವಿನ ಗಡಿರೇಖೆಯನ್ನು ರೂಪಿಸಿದ ಸರ್ ಹೆನ್ರಿ ಮೆಕ್ ಮಹೊನ್ (Sir Henry McMahon) ಅವರ ಸ್ಮರಣಾರ್ಥ ಭಾರತ-ಚೀನಾ ಗಡಿಯನ್ನು  ಜನಪ್ರಿಯವಾಗಿ ಮೆಕ್ ಮಹೊನ್ ರೇಖೆ ಎಂದು ಕರೆಯಲಾಗುತ್ತದೆ.
  2. 1913 ರಲ್ಲಿ, ಬ್ರಿಟಿಷ್-ಭಾರತ ಸರ್ಕಾರವು ತ್ರಿಪಕ್ಷೀಯ ಸಮ್ಮೇಳನವನ್ನು ಕರೆದಿತ್ತು, ಇದರಲ್ಲಿ ಭಾರತ ಮತ್ತು ಟಿಬೆಟಿಯನ್ನರ ನಡುವಿನ ಚರ್ಚೆಯ ನಂತರ ಭಾರತ ಮತ್ತು ಟಿಬೆಟ್ ನಡುವಿನ ಗಡಿಯನ್ನು ಔಪಚಾರಿಕಗೊಳಿಸಲಾಯಿತು. ಈ ಸಂದರ್ಭದಲ್ಲಿ ಒಂದು ನಿರ್ಣಯವನ್ನು ಅಂಗೀಕರಿಸಲಾಯಿತು, ಇದು ಇಂಡೋ-ಟಿಬೆಟಿಯನ್ ಗಡಿಯ ಡಿಲಿಮಿಟೇಶನ್‌ಗೆ ಕಾರಣವಾಯಿತು. ಆದಾಗ್ಯೂ, ಈ ಗಡಿಯು ಚೀನಾದಿಂದ ವಿವಾದಕ್ಕೊಳಗಾಗಿದೆ, ಏಕೆಂದರೆ ಅದು ಇದನ್ನು ಕಾನೂನುಬಾಹಿರ ಕೃತ್ಯ ಎಂದು ಕರೆದಿದೆ.
  3. 1957 ರಲ್ಲಿ ಚೀನಾ ಅಕ್ಸಾಯ್ ಚಿನ್ ಪ್ರದೇಶವನ್ನು ವಶಪಡಿಸಿಕೊಂಡಿತು ಮತ್ತು ಅಲ್ಲಿ ರಸ್ತೆಯನ್ನೂ ನಿರ್ಮಿಸಿತು. ಈ ವಿಷಯವು ಗಡಿಯಲ್ಲಿ ನಿರಂತರ ಘರ್ಷಣೆಗಳಿಗೆ ಕಾರಣವಾಯಿತು, ಮತ್ತು ಇದು ಅಂತಿಮವಾಗಿ 1962 ರ  ಯುದ್ಧದಲ್ಲಿ ಕೊನೆಗೊಂಡಿತು.
  4. ಯುದ್ಧದ ನಂತರ ಅಸ್ತಿತ್ವಕ್ಕೆ ಬಂದ ಗಡಿಯನ್ನು ವಾಸ್ತವ ನಿಯಂತ್ರಣ ರೇಖೆ / ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಎಂದು ಕರೆಯಲಾಯಿತು. ಇದು ಮಿಲಿಟರಿ ಹಿಡಿತದ ರೇಖೆಯಾಗಿದೆ. 

ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮದ (BADP) ಕುರಿತು:

  1. ಏಳನೇ ಪಂಚವಾರ್ಷಿಕ ಯೋಜನೆ (1985-1990) ಸಮಯದಲ್ಲಿ, ‘ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ’ವು ಪಶ್ಚಿಮ ಪ್ರದೇಶದ ಗಡಿ ರಾಜ್ಯಗಳಲ್ಲಿ ಪ್ರಾರಂಭವಾಯಿತು ಮತ್ತು ಅದನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲಾಯಿತು.
  2. ಕಾರ್ಯಕ್ರಮವು ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿರುವ 16 ರಾಜ್ಯಗಳ 119 ಗಡಿ ಜಿಲ್ಲೆಗಳ 456 ಬ್ಲಾಕ್ ಗಳನ್ನು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
  3. BADP ಅನ್ನು ಗೃಹ ವ್ಯವಹಾರಗಳ ಸಚಿವಾಲಯವು 1986-87ರಲ್ಲಿ ಗಡಿ ನಿರ್ವಹಣೆಯ ಸಮಗ್ರ ವಿಧಾನದ ಭಾಗವಾಗಿ ಪ್ರಾರಂಭಿಸಿತು.
  4. ಗಡಿ ಪ್ರದೇಶಗಳ ಸಮತೋಲಿತ ಅಭಿವೃದ್ಧಿಯನ್ನು ಮೂಲಸೌಕರ್ಯಗಳ ಅಭಿವೃದ್ಧಿಯ ಮೂಲಕ ಮತ್ತು ಗಡಿ ಪ್ರದೇಶದಲ್ಲಿ ವಾಸಿಸುವ ಜನಸಂಖ್ಯೆಯಲ್ಲಿ ಭದ್ರತೆಯ ಪ್ರಜ್ಞೆಯನ್ನು ಉತ್ತೇಜಿಸಲು ಇದನ್ನು ಪ್ರಾರಂಭಿಸಲಾಗಿದೆ.
  5. ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳನ್ನು ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮವು (BADP) ಒಳಗೊಂಡಿದೆ. 

ಉದ್ದೇಶಗಳು:

ಅಂತರರಾಷ್ಟ್ರೀಯ ಗಡಿಯ ಬಳಿ ಇರುವ ದೂರದ ಮತ್ತು ಪ್ರವೇಶಿಸಲಾಗದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿಶೇಷ ಅಭಿವೃದ್ಧಿ ಅಗತ್ಯಗಳು ಮತ್ತು ಸೌಕರ್ಯಗಳನ್ನು ಒದಗಿಸುವುದು ‘ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ’ದ ಮುಖ್ಯ ಉದ್ದೇಶವಾಗಿದೆ ಮತ್ತು, ಕೇಂದ್ರ / ರಾಜ್ಯ / BADP / ಸ್ಥಳೀಯ ಯೋಜನೆಗಳ ಒಗ್ಗೂಡಿಸುವಿಕೆ ಮತ್ತು ಭಾಗವಹಿಸುವಿಕೆಯ ವಿಧಾನದ ಮೂಲಕ, ಗಡಿ ಪ್ರದೇಶಗಳು ಸಂಪೂರ್ಣ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರಬೇಕು.

ಧನಸಹಾಯ:

ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ (BADP) 100% ‘ನಾನ್ ಲ್ಯಾಪ್ಸ್ಡ್’ ವಿಶೇಷ ಅನುದಾನವನ್ನು ಕೇಂದ್ರ ಸಹಾಯವಾಗಿ ರಾಜ್ಯಗಳಿಗೆ ಒದಗಿಸಲಾಗುತ್ತದೆ.


ಪ್ರಿಲಿಮ್ಸ್‌ಗೆ ಸಂಬಂಧಿಸಿದ ಸಂಗತಿಗಳು:


ಬಹಿನಿ ಯೋಜನೆ:

(Bahini Scheme)

ಇದು ಮಹಿಳೆಯರ ಅಭ್ಯುದಯಕ್ಕಾಗಿ ಸಿಕ್ಕಿಂ ಸರ್ಕಾರ ಘೋಷಿಸಲಿರುವ ಹೊಸ ಯೋಜನೆಯಾಗಿದೆ.

ರಾಜ್ಯಾದ್ಯಂತ ಇರುವ ತನ್ನ ಎಲ್ಲಾ 210 ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಸರ್ಕಾರಿ ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ವಿತರಣಾ ಯಂತ್ರಗಳನ್ನು ಸ್ಥಾಪಿಸಲು ಇದು ಪ್ರಯತ್ನಿಸುತ್ತದೆ.

  1. ಈ ಯೋಜನೆಯು “ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಶಾಲೆಗೆ ಹೋಗುವ ಹುಡುಗಿಯರಿಗೆ 100 ಪ್ರತಿಶತ ಉಚಿತ ಮತ್ತು ಸುರಕ್ಷಿತ ಸ್ಯಾನಿಟರಿ ಪ್ಯಾಡ್‌ಗಳನ್ನು” ಒದಗಿಸುವ ಗುರಿಯನ್ನು ಹೊಂದಿದೆ.
  2. ಇದು ಹೆಣ್ಣುಮಕ್ಕಳು ಶಾಲೆಗಳನ್ನು ಬಿಡುವುದನ್ನು ತಡೆಯುವುದು ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
  3. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು 9-12ನೇ ತರಗತಿಯಲ್ಲಿ ಓದುತ್ತಿರುವ ಎಲ್ಲ ಬಾಲಕಿಯರನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿಸಲು ನಿರ್ಧಾರ ಕೈಗೊಂಡಿದೆ.

MANPADS:

ಅಮೆರಿಕ ಮತ್ತು ಅದರ ನ್ಯಾಟೋ ಮಿತ್ರರಾಷ್ಟ್ರಗಳು ರಷ್ಯಾದ ಮಿಲಿಟರಿಯ ದಾಳಿಯನ್ನು ಎದುರಿಸಲು ಉಕ್ರೇನಿಯನ್ ಪಡೆಗಳಿಗೆ ಸಹಾಯ ಮಾಡಲು ಉಕ್ರೇನ್‌ಗೆ ಶಸ್ತ್ರಾಸ್ತ್ರ ರವಾನೆಯನ್ನು ಮಾಡುತ್ತಿವೆ, ಇದರಲ್ಲಿ ಯುಎಸ್ ನಿರ್ಮಿತ ಸ್ಟಿಂಗರ್ ಕ್ಷಿಪಣಿಗಳು ಸೇರಿವೆ, ಅವುಗಳು ಒಂದು ರೀತಿಯ ಭುಜದ-ಮೇಲೆ ಹೊತ್ತುಕೊಂಡು ದಾಲಿಮಾಡಬಲ್ಲ ಮ್ಯಾನ್-ಪೋರ್ಟಬಲ್ ಏರ್-ಡಿಫೆನ್ಸ್ ಸಿಸ್ಟಮ್ಸ್ (Man-Portable Air-Defence Systems -MANPADS) ಆಗಿವೆ.

  1. ಸೈನಿಕರು ಸುಲಭವಾಗಿ ಸಾಗಿಸಬಹುದಾದ ಈ ವಾಯು ರಕ್ಷಣಾ ವ್ಯವಸ್ಥೆಯು (MANPADS) ಅಲ್ಪ-ಶ್ರೇಣಿಯ, ಹಗುರವಾದ ಮತ್ತು ಚಿಕ್ಕದಾದ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ಗಳಾಗಿವೆ. ಅವುಗಳನ್ನು ವಿಮಾನ ಅಥವಾ ಹೆಲಿಕಾಪ್ಟರ್‌ಗಳನ್ನು ನಾಶಮಾಡಲು ವ್ಯಕ್ತಿಗಳು ಅಥವಾ ವ್ಯಕ್ತಿಗಳ ಸಣ್ಣ ಗುಂಪುಗಳ ಮೂಲಕ ದಾಳಿ ಮಾಡಬಹುದಾಗಿದೆ. 
  2. MANPADS ಅನ್ನು ಭುಜದ ಮೇಲೆ ಹೊತ್ತು ಹಾರಿಸಬಹುದು, ನೆಲದ ಮೇಲಿನ ಸ್ಥಿರವಾಹನದ ಮೂಲಕ ಉಡಾಯಿಸಬಹುದು, ಟ್ರೈಪಾಡ್ ಅಥವಾ ಸ್ಟ್ಯಾಂಡ್‌ನಿಂದ ಮತ್ತು ಹೆಲಿಕಾಪ್ಟರ್ ಅಥವಾ ಚಿಕ್ಕ ದೋಣಿಗಳ ಮೂಲಕವೂ ದಾಳಿ ಮಾಡ ಬಹುದಾಗಿದೆ.

ಶ್ರೇಣಿ: ಮ್ಯಾನ್‌ಪ್ಯಾಡ್‌ಗಳು ಗರಿಷ್ಠ 8 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿವೆ ಮತ್ತು 4.5 ಕಿಮೀ ಎತ್ತರದಲ್ಲಿರುವ ಗುರಿಗಳನ್ನು ಸುಲಭವಾಗಿ ಹೊಡೆದುರುಳಿಸಬಲ್ಲವು.

ಫೂಲ್ ಡೀ:
(Phool dei)

ಇದನ್ನು ಉತ್ತರಾಖಂಡದ ಗರ್ವಾಲ್ ಮತ್ತು ಕುಮಾವುನ್ ಪ್ರದೇಶಗಳಲ್ಲಿ ಪ್ರತಿ ವರ್ಷ ಹೂಬಿಡುವ ಋತುವಿನಲ್ಲಿ / ವಸಂತ ಋತುವಿನಲ್ಲಿ (ಮಾರ್ಚ್-ಏಪ್ರಿಲ್) ಸುಮಾರು ಒಂದು ತಿಂಗಳ ಕಾಲ ಆಚರಿಸಲಾಗುತ್ತದೆ.

  1. ಮನೆ ಬಾಗಿಲಿನಲ್ಲಿ ದೇವರಿಗೆ ಹೂವುಗಳನ್ನು ಇಡುವುದರಿಂದ ತಮಗೆ ಸಮೃದ್ಧಿ ಮತ್ತು ಆಶೀರ್ವಾದ ಸಿಗುತ್ತದೆ ಎಂಬುದು ಅವರ ಸ್ಥಳೀಯ ನಂಬಿಕೆಯಾಗಿದೆ.
  2. ಫೂಲ್ಯಾರಿ (Phoolyari) ಎಂದು ಕರೆಯಲ್ಪಡುವ ಮಕ್ಕಳ ಗುಂಪುಗಳು ಪ್ರತಿದಿನ ಮನೆಗಳಿಗೆ ಹೂವುಗಳನ್ನು ತಲುಪಿಸುತ್ತವೆ ಮತ್ತು ವಸಂತಕಾಲದ ಕೊನೆಯ ದಿನದಂದು ಪ್ರತಿ ಕುಟುಂಬದಿಂದ ಹಣ ಮತ್ತು ಸಿಹಿತಿಂಡಿಗಳನ್ನು ಸ್ವೀಕರಿಸುತ್ತವೆ.

ಈ ಹಬ್ಬವು ಸಮುದಾಯಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ.

13 ಪ್ರಮುಖ ನದಿಗಳ ಪುನರುಜ್ಜೀವನ:

ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಮತ್ತು ಕೇಂದ್ರ ಜಲ ಶಕ್ತಿ ಸಚಿವರು ಅರಣ್ಯ ಮಧ್ಯಸ್ಥಿಕೆಗಳ ಮೂಲಕ ಹದಿಮೂರು ಪ್ರಮುಖ ನದಿಗಳ ಪುನರುಜ್ಜೀವನದ ಕುರಿತು ವಿವರವಾದ ಯೋಜನಾ ವರದಿಗಳನ್ನು (DPR) ಬಿಡುಗಡೆ ಮಾಡಿದ್ದಾರೆ.

ಝೀಲಂ, ಚೆನಾಬ್, ರವಿ, ಬಿಯಾಸ್, ಸಟ್ಲೆಜ್, ಯಮುನಾ, ಬ್ರಹ್ಮಪುತ್ರ, ಲುನಿ, ನರ್ಮದಾ, ಗೋದಾವರಿ, ಮಹಾನದಿ, ಕೃಷ್ಣಾ ಮತ್ತು ಕಾವೇರಿ ನದಿಗಳನ್ನು ಈ ಯೋಜನೆಯಡಿ ಪುನರುಜ್ಜೀವನಕ್ಕೆ ಆಯ್ಕೆಮಾಡಲಾಗಿದೆ.

ಈ 13 ನದಿಗಳು ಒಟ್ಟಾರೆಯಾಗಿ ದೇಶದ ಒಟ್ಟು ಭೌಗೋಳಿಕ ಪ್ರದೇಶದ 45% ಅನ್ನು ಪ್ರತಿನಿಧಿಸುತ್ತವೆ.

ಧನ ಸಹಾಯ: ಯೋಜನೆಗೆ ರಾಷ್ಟ್ರೀಯ ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿ ಮಂಡಳಿಯಿಂದ ಹಣ ನೀಡಲಾಗುತ್ತದೆ.

ನದಿಗಳ ಪುನರುಜ್ಜೀವನ ಯೋಜನೆಯ ಪ್ರಮುಖ ಗುರಿಗಳು:

  1. ನದಿಗಳು ಮತ್ತು ಅವುಗಳ ಭೂದೃಶ್ಯಗಳ ಸುಸ್ಥಿರ ನಿರ್ವಹಣೆ.
  2. ಜೀವವೈವಿಧ್ಯ ಸಂರಕ್ಷಣೆ ಮತ್ತು ಪರಿಸರ ಪುನಃಸ್ಥಾಪನೆ.
  3. ಸುಸ್ಥಿರ ಜೀವನೋಪಾಯವನ್ನು ಸುಧಾರಿಸುವುದು.
  4. ಜ್ಞಾನ ನಿರ್ವಹಣೆ.

ತಾಯಿ ಮರಣ ದರ:

ಕೇರಳವು,ತಾಯಿ ಮತ್ತು ಮಕ್ಕಳ ಆರೋಗ್ಯದ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ, ದೇಶದಲ್ಲಿಯೇ ಅತಿ ಕಡಿಮೆ ತಾಯಂದಿರ ಮರಣ ಅನುಪಾತವನ್ನು ದಾಖಲಿಸಿದೆ.

ಒಟ್ಟಾರೆಯಾಗಿ, ಭಾರತದ ತಾಯಿ ಮರಣ ದರವು (MMR) 10 ಅಂಕಗಳಷ್ಟು ಕುಸಿದಿದೆ. ಇದು 2016-18 ರಲ್ಲಿದ್ದ 113 ರಿಂದ 2017-19 ರಲ್ಲಿ 103 ಕ್ಕೆ ಇಳಿದಿದೆ (8.8 % ಕುಸಿತ).

ಕೇಂದ್ರ ಆರೋಗ್ಯ ಸಚಿವಾಲಯದ ತಾಯಿ ಮತ್ತು ಮಕ್ಕಳ ವಿಭಾಗವು ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್‌) ವರದಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು 92ರಿಂದ 83ಕ್ಕೆ ಇಳಿಕೆ ಕಂಡಿದೆ

ಹೆರಿಗೆ ವೇಳೆ ತಾಯಂದಿರ ಮರಣದ ಅನುಪಾತ ಕುರಿತಂತೆ ಪ್ರತಿ ಎರಡು ವರ್ಷಕ್ಕೊಮ್ಮೆ ಎಸ್‌ಆರ್‌ಎಸ್‌ ವರದಿ ಬಿಡುಗಡೆ ಮಾಡಲಾಗುತ್ತಿದೆ. 2016-18ರ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ 92 ತಾಯಂದಿರು ಮೃತಪಡುತ್ತಿದ್ದರು. 2017-19ರಲ್ಲಿ ಮರಣ ಪ್ರಮಾಣ ಇಳಿಕೆಯಾಗಿದೆ. ಇದರಿಂದಾಗಿ ರಾಜ್ಯ 9ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಇಳಿಕೆಯಾಗಿದೆ. ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಹೆರಿಗೆ ನಡೆಯುವ ರಾಜ್ಯಗಳನ್ನು ಮಾತ್ರ ಸಮೀಕ್ಷೆಗೆ ಪರಿಗಣಿಸಲಾಗುತ್ತಿದೆ. ಹೀಗಾಗಿ, ದೇಶದ 19 ರಾಜ್ಯಗಳು ಸಮೀಕ್ಷೆಗೆ ಒಳಪಟ್ಟಿದ್ದವು

ಕಡಿಮೆ ಮರಣ ಪ್ರಮಾಣ ಹೊಂದಿರುವ ರಾಜ್ಯಗಳಲ್ಲಿ ಕೇರಳ (30), ಮಹಾರಾಷ್ಟ್ರ (38), ತೆಲಂಗಾಣ (56), ಆಂಧ್ರಪ್ರದೇಶ (58) ಹಾಗೂ ತಮಿಳುನಾಡು (58) ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಅಸ್ಸಾಂ (205) ಕಡೆಯ ಸ್ಥಾನದಲ್ಲಿದೆ. ದಕ್ಷಿಣದ ಐದು ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರ ಮರಣ ವರದಿಯಾಗುತ್ತಿದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos