ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2 :
1. ಆಕ್ಟ್ ಈಸ್ಟ್ ಪಾಲಿಸಿ
2. ಸಾಮಾಜಿಕ ಷೇರು ವಿನಿಮಯ ಕೇಂದ್ರ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಅಗ್ರಿಸ್ಟಾಕ್.
2. ತೋಟಗಾರಿಕೆ.
3. ಮೈಕ್ರೋಫೈನಾನ್ಸ್ ನಿಯಂತ್ರಣಗಳು.
4. ಸುಧಾರಣೆ-ಆಧಾರಿತ ಮತ್ತು ಫಲಿತಾಂಶ-ಸಂಯೋಜಿತ, ಪರಿಷ್ಕರಿಸಿದ ವಿತರಣಾ ವಲಯದ ಯೋಜನೆ.
5. ಭಾರತದಲ್ಲಿ ನಿರುದ್ಯೋಗ.
ಪ್ರಿಲಿಮ್ಸ್‌ಗೆ ಸಂಬಂಧಿಸಿದ ಸಂಗತಿಗಳು:
1. ಇಸ್ಲಾಮೋಫೋಬಿಯಾವನ್ನು ಎದುರಿಸಲು ಅಂತರಾಷ್ಟ್ರೀಯ ದಿನ.
ಸಾಮಾನ್ಯ ಅಧ್ಯಯನ ಪತ್ರಿಕೆ 2:
ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗೆ ಸಂಬಂಧಗಳು.
ಆಕ್ಟ್ ಈಸ್ಟ್ ಪಾಲಿಸಿ:
(Act East Policy)
ಸಂದರ್ಭ:
ಇತ್ತೀಚಿಗೆ ಆಕ್ಟ್ ಈಸ್ಟ್ ಪಾಲಿಸಿಯ ಕುರಿತು ಜಾಲ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಏನಿದು ಆಕ್ಟ್ ಈಸ್ಟ್ ಪಾಲಿಸಿ?
ಭಾರತದ ‘ಆಕ್ಟ್ ಈಸ್ಟ್’ ನೀತಿಯು ವಿವಿಧ ಹಂತಗಳಲ್ಲಿ ವಿಶಾಲವಾದ ಏಷ್ಯಾ-ಪೆಸಿಫಿಕ್ ಪ್ರದೇಶದೊಂದಿಗೆ ಆರ್ಥಿಕ, ಕಾರ್ಯತಂತ್ರ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಉತ್ತೇಜಿಸುವ ರಾಜತಾಂತ್ರಿಕ ಉಪಕ್ರಮವಾಗಿದೆ.
- ಇದನ್ನು 1991 ರಲ್ಲಿ ಆಗಿನ ಪ್ರಧಾನಿ ವಿ.ನರಸಿಂಹ ರಾವ್ ಅವರು ಆರಂಭಿಸಿದ ‘ಲುಕ್ ಈಸ್ಟ್ ಪಾಲಿಸಿ’ (Look East Policy- ಪೂರ್ವದತ್ತ ನೋಟ)ಯ ಮುಂದುವರೆದ ಆಧುನಿಕ ಆವೃತ್ತಿ ಎಂದು ಪರಿಗಣಿಸಲಾಗಿದೆ.
- ‘ಲುಕ್ ಈಸ್ಟ್ ಪಾಲಿಸಿ’ಯ ಮುಖ್ಯ ಉದ್ದೇಶವು ದೇಶದ ವ್ಯಾಪಾರ ವಹಿವಾಟನ್ನು ಪಶ್ಚಿಮದ ದೇಶಗಳಿಂದ ಮತ್ತು ನೆರೆಹೊರೆಯ ದೇಶಗಳಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಆಗ್ನೇಯ ಏಷ್ಯಾದ ದೇಶಗಳಿಗೆ ವರ್ಗಾಯಿಸುವುದಾಗಿದೆ.
- ನವೆಂಬರ್ 2014 ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ “ಆಕ್ಟ್ ಈಸ್ಟ್ ಪಾಲಿಸಿ” ಅನ್ನು ಪ್ರಾರಂಭಿಸಲಾಯಿತು.
- “ಆಕ್ಟ್ ಈಸ್ಟ್ ಪಾಲಿಸಿ” ಅಡಿಯಲ್ಲಿ ಸರ್ಕಾರವು ಆಸಿಯಾನ್ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಅಭಿವೃದ್ಧಿಪಡಿಸಲು 3 ಸಿ (ಸಂಸ್ಕೃತಿ, ಸಂಪರ್ಕ ಮತ್ತು ವಾಣಿಜ್ಯ – Culture, Connectivity, and Commerce) ಮೇಲೆ ಅವಲಂಬಿತವಾಗಿದೆ.
‘ಲುಕ್ ಈಸ್ಟ್ ಪಾಲಿಸಿ’ ಮತ್ತು ಆಕ್ಟ್ ಈಸ್ಟ್ ಪಾಲಿಸಿ ಯ ನಡುವಿನ ವ್ಯತ್ಯಾಸಗಳು:
“ಲುಕ್ ಈಸ್ಟ್ ಪಾಲಿಸಿ” ಯ ಉದ್ದೇಶವು ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಆರ್ಥಿಕ ಏಕೀಕರಣವನ್ನು ಹೆಚ್ಚಿಸುವುದು ಮತ್ತು ಈ ಪ್ರದೇಶವು ಆಗ್ನೇಯ ಏಷ್ಯಾಕ್ಕೆ ಮಾತ್ರ ಸೀಮಿತವಾಗಿತ್ತು.
ಮತ್ತೊಂದೆಡೆ “ಆಕ್ಟ್ ಈಸ್ಟ್ ಪಾಲಿಸಿ” ಯ ಗಮನವು ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಆರ್ಥಿಕ ಮತ್ತು ಭದ್ರತಾ ಏಕೀಕರಣವನ್ನು ಸಾಧಿಸುವುದಾಗಿದೆ ಮತ್ತು ಕೇಂದ್ರೀಕೃತ ಪ್ರದೇಶವನ್ನು ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾದ ದೇಶಗಳಿಗೆ ವಿಸ್ತರಿಸಲಾಗಿದೆ.
‘ಆಕ್ಟ್ ಈಸ್ಟ್ ಪಾಲಿಸಿ’ ಉದ್ದೇಶಗಳು:
- ಪ್ರಾದೇಶಿಕ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಹಂತಗಳಲ್ಲಿ ನಿರಂತರ ಸಂಪರ್ಕದ ಮೂಲಕ ಏಷ್ಯಾ-ಪೆಸಿಫಿಕ್ ಪ್ರದೇಶದ ದೇಶಗಳೊಂದಿಗೆ ಆರ್ಥಿಕ ಸಹಕಾರ, ಸಾಂಸ್ಕೃತಿಕ ಸಂಬಂಧಗಳನ್ನು ಉತ್ತೇಜಿಸುವುದು ಮತ್ತು ಕಾರ್ಯತಂತ್ರದ ಸಂಬಂಧವನ್ನು ಅಭಿವೃದ್ಧಿಪಡಿಸುವುದಾಗಿದೆ.
- ಇತರ ನೆರೆಯ ದೇಶಗಳೊಂದಿಗೆ ಈಶಾನ್ಯ ಭಾರತದ ರಾಜ್ಯಗಳ ಸಂವಹನವನ್ನು ಹೆಚ್ಚಿಸಲು.
- ಸಾಂಪ್ರದಾಯಿಕ ವ್ಯಾಪಾರ ಪಾಲುದಾರರಿಗೆ ಪರ್ಯಾಯಗಳನ್ನು ಕಂಡುಹಿಡಿಯಲು; ಆಗ್ನೇಯ ಏಷ್ಯಾದ ದೇಶಗಳ ಜೊತೆಗೆ ಪೆಸಿಫಿಕ್ ದೇಶಗಳ ಮೇಲೆ ಹೆಚ್ಚು ಗಮನಹರಿಸಲಾಗುತ್ತದೆ.
- ಆಸಿಯಾನ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ನಿಗ್ರಹಿಸುವುದು.
“ಆಕ್ಟ್ ಈಸ್ಟ್ ಪಾಲಿಸಿ” ಅಡಿಯಲ್ಲಿ ಸರ್ಕಾರವು ಆಸಿಯಾನ್ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಅಭಿವೃದ್ಧಿಪಡಿಸಲು 3 ಸಿ (ಸಂಸ್ಕೃತಿ, ಸಂಪರ್ಕ ಮತ್ತು ವಾಣಿಜ್ಯ) ಮೇಲೆ ಅವಲಂಬಿತವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಮಹತ್ವ:
ಆಕ್ಟ್ ಈಸ್ಟ್ ಪಾಲಿಸಿ (AEP) ಅಡಿಯಲ್ಲಿ, ಇಂಡೋ-ಪೆಸಿಫಿಕ್ ಸಹಕಾರದ ಮಹತ್ವವನ್ನು ಒತ್ತಿಹೇಳುವ ಮೂಲಕ ಭಾರತ-ಜಪಾನ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಒಯ್ಯಲಾಗಿದೆ.
- ಭಾರತವು ಸ್ವತಂತ್ರ, ಮುಕ್ತ ಮತ್ತು ಅಂತರ್ಗತವಾಗಿರುವ ಮತ್ತು ಸಹಕಾರಿ ಮತ್ತು ಸಂಯೋಜನಾತ್ಮಕ ನಿಯಮಗಳ-ಆಧಾರಿತ ಆದೇಶದ ಮೇಲೆ ಸ್ಥಾಪಿತವಾಗಿರುವ ಇಂಡೋ-ಪೆಸಿಫಿಕ್ ನಲ್ಲಿ ನಂಬಿಕೆ ಇರಿಸುತ್ತದೆ.
- ಆಸಿಯಾನ್ ಕೇಂದ್ರೀಯತೆಯು ಪ್ರಾದೇಶಿಕ ಮಟ್ಟದಲ್ಲಿ ಇಂಡೋ-ಪೆಸಿಫಿಕ್‌ನ ಸಮಕಾಲೀನ ಲಕ್ಷಣವಾಗಿದೆ.
- ಭಾರತವು ‘ಇಂಡೋ-ಪೆಸಿಫಿಕ್’ ವಲಯವನ್ನು ದಕ್ಷಿಣ, ಆಗ್ನೇಯ ಮತ್ತು ಪೂರ್ವ ಏಷ್ಯಾದ ದೇಶಗಳೊಂದಿಗೆ ತನ್ನ ಸೃಜನಾತ್ಮಕ ಸಂಬಂಧಗಳ ಹೃದಯಭಾಗದಲ್ಲಿ ಇರಿಸಿದೆ. ಕ್ರಮೇಣ, ಆಕ್ಟ್ ‘ಈಸ್ಟ್’ ಎಂಬುದು ಆಕ್ಟ್ ‘ಇಂಡೋ-ಪೆಸಿಫಿಕ್’ ಆಗಿ ರೂಪಾಂತರಗೊಳ್ಳುತ್ತಿದೆ.
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
ಸಾಮಾಜಿಕ ಷೇರು ವಿನಿಮಯ ಕೇಂದ್ರ:
(Social Stock Exchange)
ಸಂದರ್ಭ:
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟಾಕ್-ಸಂಬಂಧಿತ ಸಲಹೆಗಳನ್ನು ನೀಡುವ ಶೇರುಪೇಟೆಯಲ್ಲಿ ನೋಂದಾಯಿಸದ ಸಲಹೆಗಾರರ ಮೇಲೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (SEBI) ಕೈಗೊಂಡಿರುವ ಶಿಸ್ತು ಕ್ರಮ ಗಳಿಗೆ ಸರ್ಕಾರವು ಬೆಂಬಲವನ್ನು ನೀಡಿದೆ.
ಏನಿದು ಸಮಸ್ಯೆ?
ಯೂಟ್ಯೂಬ್, ಟ್ವಿಟರ್, ಟೆಲಿಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸೆಬಿಯಲ್ಲಿ ನೋಂದಣಿ ಹೊಂದಿರದ ಸಲಹೆಗಾರರು ಷೇರು ಮಾರುಕಟ್ಟೆಗಳ ಕುರಿತು ಸಲಹೆ ನೀಡುತ್ತಿದ್ದಾರೆ.
- ಈಗ, SEBI ಅಂತಹ ಸಲಹೆಗಾರರ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲಿದೆ ಏಕೆಂದರೆ ಇದು ಹೂಡಿಕೆದಾರರನ್ನು ಆಗಾಗ್ಗೆ ತಪ್ಪುದಾರಿಗೆಳೆಯುತ್ತದೆ ಮತ್ತು ಮಾರುಕಟ್ಟೆಗೆ ಅನವಶ್ಯಕವಾಗಿ ತುಂಬಲಾಗದ ಹಾನಿ ಉಂಟು ಮಾಡುತ್ತದೆ.
ಹಿನ್ನೆಲೆ:
ದೇಶದಲ್ಲಿ ಸಾಮಾಜಿಕ ಷೇರು ವಿನಿಮಯ ಕೇಂದ್ರ
(Social Stock Exchange) ಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮೊದಲು 2019 ರ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಯಿತು.
- ಸೆಪ್ಟೆಂಬರ್ 2019 ರಲ್ಲಿ, ಸೆಬಿಯು ಟಾಟಾ ಗ್ರೂಪ್ ನ ಅನುಭವಿ ಇಶಾತ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರತ ಗುಂಪನ್ನು (working group) ಅನ್ನು ರಚಿಸಿತು.
- ಸೆಪ್ಟೆಂಬರ್ 2020 ರಲ್ಲಿ, ಸೆಬಿಯು ತಾಂತ್ರಿಕ ಗುಂಪು (Technical Group- TG) ಅನ್ನು ರಚಿಸಿತು ಏಕೆಂದರೆ ಕಾರ್ಯನಿರತ ಗುಂಪಿನ (WG) ಶಿಫಾರಸಿನ ಕುರಿತಂತೆ ಹೆಚ್ಚಿನ ತಜ್ಞರ ಸಲಹೆ ಮತ್ತು ಸ್ಪಷ್ಟತೆಯ ಅಗತ್ಯವಿದೆ ಎಂದು ಭಾವಿಸಿತು.
- ಈ ತಜ್ಞರ (Technical Group- TG) ಸಮಿತಿಯ ಅಧ್ಯಕ್ಷತೆಯನ್ನು ನಬಾರ್ಡ್‌ನ ಮಾಜಿ ಅಧ್ಯಕ್ಷ ಹರ್ಷ್ ಭನ್ವಾಲಾ ವಹಿಸಿದ್ದರು.
ಸಮಿತಿಯ ಪ್ರಮುಖ ಶಿಫಾರಸುಗಳು:
ಅರ್ಹತೆ:
ಲಾಭ ಸಹಿತ (for-profit: FP) ಮತ್ತು ಲಾಭರಹಿತ ಸಂಸ್ಥೆಗಳಿಗೆ (not-for-profit organisations- NPO) ಸಾಮಾಜಿಕ ಉದ್ದೇಶಗಳು ಮತ್ತು ಸಾಮಾಜಿಕ ಪ್ರಭಾವ ಎರಡೂ ಅವರ ಪ್ರಮುಖ ಗುರಿಯಾಗಿದೆ ಎಂದು ಸಾಬೀತುಪಡಿಸಿದರೆ ‘ಸಾಮಾಜಿಕ ಷೇರು ವಿನಿಮಯ ಕೇಂದ್ರಗಳಲ್ಲಿ’ (Social stock exchanges- SSE) ಸಾಧ್ಯತೆಗಳನ್ನು ಅನ್ವೇಷಿಸಲು ಅವಕಾಶ ನೀಡಬೇಕು.
‘ಸಾಮಾಜಿಕ ಷೇರು ವಿನಿಮಯ ’ (SSE) ಕಾರ್ಯವಿಧಾನವನ್ನು ಬಳಸಿಕೊಂಡು ಹಣವನ್ನು ಸಂಗ್ರಹಿಸಲು ಮುಂದಾಗುವ ರಾಜಕೀಯ ಮತ್ತು ಧಾರ್ಮಿಕ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಫೌಂಡೇಶನ್ ಗಳನ್ನು ಅನರ್ಹಗೊಳಿಸಬೇಕು.
ನಿಧಿಸಂಗ್ರಹಕ್ಕಾಗಿ ಲಭ್ಯವಿರುವ ವಿಧಾನಗಳು:
ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ (NPO), ಇಕ್ವಿಟಿ, ಜೀರೋ ಕೂಪನ್ ಜೀರೋ ಪ್ರಧಾನ ಬಾಂಡ್‌ಗಳು (ZCZP), ಅಭಿವೃದ್ಧಿ ಪರಿಣಾಮದ ಬಾಂಡ್‌ಗಳು, ಸಾಮಾಜಿಕ ಪ್ರಭಾವದ ಬಾಂಡ್‌ಗಳು (Social Impact Bond) (ಪ್ರಸ್ತುತ 100 ಪ್ರತಿಶತ ಅನುದಾನದೊಂದಿಗೆ ಸಾಮಾಜಿಕ ಪ್ರಭಾವ ನಿಧಿ (SVP) ಆಗಿ ಚಾಲ್ತಿಯಲ್ಲಿದೆ) ಮತ್ತು ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆದಾರರಿಂದ ದೇಣಿಗೆಗಳನ್ನು (Fundraising) ಸಂಗ್ರಹಿಸಲು ಅನುಮತಿಸಲಾಗಿದೆ.
ಲಾಭಕ್ಕಾಗಿನ (for-profit: FP) ಉದ್ಯಮಗಳಿಗೆ ಈಕ್ವಿಟಿ, ಸಾಲ, ಅಭಿವೃದ್ಧಿ ಪರಿಣಾಮ ಬಾಂಡ್‌ಗಳು ಮತ್ತು ಸಾಮಾಜಿಕ ಉದ್ಯಮ ನಿಧಿಗಳ (Fundraising) ಮೂಲಕ ಹಣವನ್ನು ಸಂಗ್ರಹಿಸಲು ಅನುಮತಿಸಬಹುದು.
ನಿಧಿಯ ಗಾತ್ರ: ಅಂತಹ ನಿಧಿಯ ಕನಿಷ್ಠ ಮೊತ್ತವನ್ನು 20 ಕೋಟಿಯಿಂದ 5 ಕೋಟಿಗೆ ಇಳಿಸಬೇಕು ಮತ್ತು ಅವರ ಕನಿಷ್ಠ ಸದಸ್ಯತ್ವ ಮೊತ್ತವನ್ನು 1 ಕೋಟಿಯಿಂದ 2 ಲಕ್ಷ ರೂಪಾಯಿಗೆ ಇಳಿಸಬೇಕು.
‘ಸಾಮಾಜಿಕ ಸ್ಟಾಕ್ ಎಕ್ಸ್ಚೇಂಜ್’ಗಾಗಿ ಸಾಮರ್ಥ್ಯ ವೃದ್ಧಿ ನಿಧಿ:
ಇದು 100 ಕೋಟಿ ರೂ. ಮೊತ್ತದ ನಿಧಿಯನ್ನು ನಬಾರ್ಡ್ ಅಡಿಯಲ್ಲಿ ಇಡಬೇಕು. ವಿನಿಮಯ ಕೇಂದ್ರಗಳು ಮತ್ತು SIDBI ನಂತಹ ಇತರ ಅಭಿವೃದ್ಧಿ ಏಜೆನ್ಸಿಗಳಿಗೆ ಈ ನಿಧಿಗೆ ಕೊಡುಗೆ ನೀಡುವಂತೆ ಕೇಳಬೇಕು.
‘ಸಾಮಾಜಿಕ ಸ್ಟಾಕ್ ಎಕ್ಸ್ಚೇಂಜ್’ನಲ್ಲಿ ಭಾಗವಹಿಸಬಹುದಾದ ಸುಸ್ಥಿರ ಅಭಿವೃದ್ಧಿ ಗುರಿಗಳ ಅಡಿಯಲ್ಲಿ ನೀತಿ ಆಯೋಗ ಗುರುತಿಸಿದ ಸಮಗ್ರ ಚಟುವಟಿಕೆಗಳ ಪಟ್ಟಿ:
ಈ ಚಟುವಟಿಕೆಗಳಲ್ಲಿ, ಹಸಿವು ನಿರ್ಮೂಲನೆ (Eradicating Hunger); ಬಡತನ, ಅಪೌಷ್ಟಿಕತೆ ಮತ್ತು ಅಸಮಾನತೆ; LGBTQIA + ಸಮುದಾಯಗಳು ಮತ್ತು ಮಹಿಳಾ ಸಬಲೀಕರಣದ ಮೂಲಕ ಲಿಂಗ ಸಮಾನತೆಯನ್ನು ಉತ್ತೇಜಿಸುವುದು; ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ತರಬೇತಿ; ಮತ್ತು ಕೈಗೆಟುಕುವ ವಸತಿ ಸೇರಿದಂತೆ ಕೊಳೆಗೇರಿ ಪ್ರದೇಶದ ಅಭಿವೃದ್ಧಿ.
ಸಾಮಾಜಿಕ ಷೇರು ವಿನಿಮಯ (SSE)ಎಂದರೇನು?
- ಸಾಮಾಜಿಕ ಷೇರು ವಿನಿಮಯ ಭಾರತದಲ್ಲಿ ಹೊಸ ಪರಿಕಲ್ಪನೆಯಾಗಿದೆ. ಈ ಷೇರು ವಿನಿಮಯ ಕೇಂದ್ರದಲ್ಲಿ ಸಾಮಾಜಿಕ ಉದ್ಯಮಗಳು ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಪಟ್ಟಿ ಮಾಡಲಾಗುವುದು. ಇದರ ಅಡಿಯಲ್ಲಿ, ಸಾಮಾಜಿಕ ಸಂಸ್ಥೆಗಳು ಈಕ್ವಿಟಿ ಮತ್ತು ಬಾಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಂತಹ ಘಟಕಗಳನ್ನು ನೀಡುವ ಮೂಲಕ ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
- ಅಂದರೆ ಖಾಸಗಿ ಮತ್ತು ಲಾಭೋದ್ದೇಶವಿಲ್ಲದ ವಲಯದ ಪೂರೈಕೆದಾರರಿಗೆ ಹೆಚ್ಚಿನ ಬಂಡವಾಳವನ್ನು ಒದಗಿಸುವ ಮೂಲಕ ಅವರಿಗೆ ಸೇವೆ ಸಲ್ಲಿಸುವುದು ಇದರ ಉದ್ದೇಶವಾಗಿದೆ.
- ಪ್ರಸ್ತಾವನೆಯ ಪ್ರಕಾರ, ಅಸ್ತಿತ್ವದಲ್ಲಿರುವ ಷೇರು ವಿನಿಮಯ ಕೇಂದ್ರಗಳಾದ BSE ಮತ್ತು/ಅಥವಾ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ‘ಸಾಮಾಜಿಕ ಷೇರು ವಿನಿಮಯ ಕೇಂದ್ರಗಳನ್ನು’ ಇರಿಸಬಹುದು.
ಮಹತ್ವ:
- ಇದರೊಂದಿಗೆ, ಸಾಮಾಜಿಕ ಕಲ್ಯಾಣ ಉದ್ಯಮಗಳು ಮತ್ತು ಲಾಭೋದ್ದೇಶವಿಲ್ಲದವರಿಗೆ ಪಾರದರ್ಶಕ ಎಲೆಕ್ಟ್ರಾನಿಕ್ ವೇದಿಕೆಯಲ್ಲಿ ಸಾಮಾಜಿಕ ಬಂಡವಾಳ ಎಂದು ಕರೆಯಲ್ಪಡುವ ನಿಧಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ, ಇದು ಕೊರೊನೊವೈರಸ್ ಸಾಂಕ್ರಾಮಿಕದಿಂದ ಧ್ವಂಸಗೊಂಡ ಜೀವನೋಪಾಯಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ.
- ಸಮಿತಿಯ ಈ ಶಿಫಾರಸುಗಳು ಪ್ಯಾಕೇಜ್‌ನಂತೆ ಕಾರ್ಯಗತಗೊಂಡರೆ,ಒಂದು ರೋಮಾಂಚಕ ಮತ್ತು ಬೆಂಬಲಿತ ಪರಿಸರ ವ್ಯವಸ್ಥೆಗೆ ಕಾರಣವಾಗಬಹುದು, ಲಾಭೋದ್ದೇಶವಿಲ್ಲದ ವಲಯವು ಸಾಮಾಜಿಕ ಪ್ರಭಾವವನ್ನು ಸೃಷ್ಟಿಸಲು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಲು ಅನುವು ಮಾಡಿಕೊಡುತ್ತದೆ.
ಸಾಮಾಜಿಕ ಬಂಡವಾಳದ ಅವಶ್ಯಕತೆ:
ಭಾರತವು ತನ್ನ ಆರ್ಥಿಕತೆಯ ಆಧಾರವಾಗಿರುವ ಉದ್ಯೋಗದ ಸಾಧನಗಳನ್ನು ಸರಿಪಡಿಸಲು ಮತ್ತು ಪುನರ್ನಿರ್ಮಿಸಲು, ಗಮನಾರ್ಹ ಪ್ರಮಾಣದ ಸಹಿಷ್ಣು ಬಂಡವಾಳ ಹೊಂದುವ (Patient Capital) ಅಗತ್ಯವಿದೆ. ಆರ್ಥಿಕ ಲಾಭಕ್ಕೆ ಆದ್ಯತೆ ನೀಡುವ ಸಾಂಪ್ರದಾಯಿಕ ಬಂಡವಾಳ (Conventional capital), ಅಂತಹ ಹೊರೆಯನ್ನು ಸಂಪೂರ್ಣವಾಗಿ ಸ್ವತಃ ತಾನೇ ಹೊರಲು ಸಾಧ್ಯವಾಗುವುದಿಲ್ಲ.
- ಮತ್ತೊಂದೆಡೆ, ಸಾಮಾಜಿಕ ಬಂಡವಾಳ (Social capital) ಈ ಪಾತ್ರಕ್ಕೆ ಹೆಚ್ಚು ಸೂಕ್ತವಾಗಿದೆ. ಇದು ಸಹಿಷ್ಣು ಮಾತ್ರವಲ್ಲ, ಕೋವಿಡ್ -19 ರ ಕಾರಣದಿಂದಾಗಿ ಕುಸಿತದ ಅಂಚಿನಲ್ಲಿರುವ ಸಾಮಾಜಿಕ ರಚನೆಗಳನ್ನು ಬೆಂಬಲಿಸುವ ಮತ್ತು ಬಲಪಡಿಸುವ ಗುರಿಯನ್ನು ಹೊಂದಿದೆ.
ಸಾಮಾಜಿಕ ಉದ್ಯಮ ಎಂದರೇನು?
ಸಾಮಾಜಿಕ ಉದ್ಯಮಗಳು (social enterprise) ಆದಾಯ ಗಳಿಸುವ ವ್ಯವಹಾರಗಳಾಗಿವೆ. ಆರೋಗ್ಯ ಅಥವಾ ಶುದ್ಧ ಇಂಧನದಂತಹ ಸಾಮಾಜಿಕ ಉದ್ದೇಶವನ್ನು ಸಾಧಿಸುವುದು ಇದರ ಮುಖ್ಯ ಪ್ರಾಥಮಿಕ ಉದ್ದೇಶ/ ಗುರಿಯಾಗಿದೆ.
- ಸಾಮಾಜಿಕ ಉದ್ಯಮವು ಹೆಚ್ಚು ಲಾಭದಾಯಕವಾಗಲು ಸಾಧ್ಯವಿಲ್ಲ ಎಂಬುದು ಇದರ ಅರ್ಥವಲ್ಲ. ವಾಸ್ತವವಾಗಿ, ಹೆಚ್ಚಿನ ಸಾಮಾಜಿಕ ಉದ್ಯಮಗಳು ಸಾಂಪ್ರದಾಯಿಕ ವ್ಯವಹಾರಗಳಂತೆ ಕಾಣುತ್ತವೆ ಮತ್ತು ಕಾರ್ಯನಿರ್ವಹಿಸುತ್ತವೆ. ಒಂದೇ ವ್ಯತ್ಯಾಸವೆಂದರೆ, ಈ ಘಟಕಗಳಿಂದ ಉತ್ಪತ್ತಿಯಾಗುವ ಲಾಭವು ಮಧ್ಯಸ್ಥಗಾರರಿಗೆ ಪಾವತಿಸಲು ಅಗತ್ಯವಾಗಿ ಬಳಸಲಾಗುವುದಿಲ್ಲ, ಬದಲಿಗೆ ಅವರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮರುಹೂಡಿಕೆ ಮಾಡಲಾಗುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.
ಅಗ್ರಿಸ್ಟಾಕ್:
(AgriStack)
ಸಂದರ್ಭ:
ಮೂಲ ಭೂ ದಾಖಲೆಗಳನ್ನು ಹೊಂದಿರುವ ಕೃಷಿ ದತ್ತಾಂಶಗಳ ಡಿಜಿಟಲ್ ‘ಸ್ಟಾಕ್’ ಮೇಲೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಆದರೆ, ಅಂತಹ ಕೇಂದ್ರೀಕೃತ ಸ್ಟಾಕ್ ಹಳೆಯ ಮತ್ತು ನಿಖರವಲ್ಲದ ಭೂ ದಾಖಲೆಗಳನ್ನು ಬಳಸುತ್ತದೆ; ಪ್ರಬಲವಾದ ದತ್ತಾಂಶ ಸಂರಕ್ಷಣಾ ಕಾನೂನು ಇಲ್ಲದೆ ರೈತರ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳನ್ನು ಬಳಸಬಹುದಾಗಿದೆ; ಮತ್ತು ಗ್ರಾಮೀಣ ಪ್ರದೇಶದ ಜನರು ತುಂಬಾ ಕಡಿಮೆ ಮಟ್ಟದ ಡಿಜಿಟಲ್ ಸಾಕ್ಷರತೆಯನ್ನು ಹೊಂದಿದ್ದಾರೆ. ಹಾಗಾಗಿ, ಇಂತಹ ‘ಅಗ್ರಿಸ್ಟ್ಯಾಕ್’ ಸಮಸ್ಯಾತ್ಮಕವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಏನಿದು ಅಗ್ರಿಸ್ಟಾಕ್?
AgriStack ಭಾರತದ ರೈತರು ಮತ್ತು ಕೃಷಿ ವಲಯವನ್ನು ಕೇಂದ್ರೀಕರಿಸುವ ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ತಂತ್ರಜ್ಞಾನಗಳು ಮತ್ತು ಡಿಜಿಟಲ್ ಡೇಟಾಬೇಸ್‌ಗಳ ಸಂಗ್ರಹವಾಗಿದೆ.
- ಕೃಷಿ ಪೂರೈಕೆ ಸರಪಳಿಯಲ್ಲಿನ ವ್ಯರ್ಥ ಸಾಲದ ಕಳಪೆ ಪ್ರವೇಶದಂತಹ ಸಮಸ್ಯೆಗಳನ್ನು ನಿಭಾಯಿಸಲು ಈ ಹೊಸ ಡೇಟಾಬೇಸ್‌ಗಳನ್ನು ಪ್ರಾಥಮಿಕವಾಗಿ ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ವೈಶಿಷ್ಟ್ಯಗಳು ಮತ್ತು ಮಹತ್ವ:
- AgriStack’ ಅಡಿಯಲ್ಲಿ, ‘ಸ್ಮಾರ್ಟ್ ಮತ್ತು ಸುಸಂಘಟಿತ ಕೃಷಿ’ಗಾಗಿ ರೈತ ಇಂಟರ್‌ಫೇಸ್ ಅನ್ನು ಅಭಿವೃದ್ಧಿಪಡಿಸಲು ಮೈಕ್ರೋಸಾಫ್ಟ್‌ಗೆ ರೈತರ ವೈಯಕ್ತಿಕ ಮಾಹಿತಿಯ ‘ಅಗತ್ಯವಿರುವ ಡೇಟಾ ಸೆಟ್‌ಗಳನ್ನು’ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.
- ಡಿಜಿಟಲ್ ರೆಪೊಸಿಟರಿಯು ಸಬ್ಸಿಡಿಗಳು, ಸೇವೆಗಳು ಮತ್ತು ನೀತಿಗಳ ನಿಖರವಾದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಈ ಕಾರ್ಯಕ್ರಮದ ಅಡಿಯಲ್ಲಿ, ದೇಶದ ಪ್ರತಿಯೊಬ್ಬ ರೈತರು FID ಎಂದು ಕರೆಯಲ್ಪಡುವ ರೈತರ ಐಡಿಯನ್ನು ಪಡೆಯುತ್ತಾರೆ, ಅವುಗಳನ್ನು ಅನನ್ಯವಾಗಿ ಗುರುತಿಸಲು ಭೂ ದಾಖಲೆಗಳಿಗೆ ಲಿಂಕ್ ಮಾಡಲಾಗಿರುತ್ತದೆ. ಭಾರತವು ಪ್ರಸ್ತುತ 140 ಮಿಲಿಯನ್ ಕೃಷಿ-ಭೂ ಹಿಡುವಳಿಗಳನ್ನು ಹೊಂದಿದೆ.
ಈ ನಡೆಯ ಹಿಂದಿನ ಸಮಸ್ಯೆಗಳು:
ಕೃಷಿಯು ಸರ್ಕಾರದಿಂದ ‘ಟೆಕ್ನೋ ಪರಿಹಾರವಾದ’ (techno solutionism) ದ ಉತ್ತೇಜನವನ್ನು ಪಡೆಯುತ್ತಿರುವ ನವೀನ ವಲಯವಾಗಿದೆ.
- ಆದರೆ ಅದು ಅಂದಿನಿಂದ, ಡೇಟಾ ಗೌಪ್ಯತೆ ಮತ್ತು ಕಣ್ಗಾವಲು ಕುರಿತು ಸಂಪೂರ್ಣ ಚರ್ಚೆಯನ್ನು ಪ್ರವೇಶಿಸಿದ ಇತ್ತೀಚಿನ ವಲಯವಾಗಿದೆ.
- ತಿಳಿವಳಿಕೆ ಪತ್ರಗಳಿಗೆ (MoU) ಸಹಿ ಹಾಕಿದಾಗಿನಿಂದ, ಖಾಸಗಿ ಕಂಪನಿಗಳೊಂದಿಗೆ ರೈತರ ಡೇಟಾವನ್ನು ಹಂಚಿಕೊಳ್ಳಲು ಸಂಬಂಧಿಸಿದ ಹಲವಾರು ಕಾಳಜಿಗಳನ್ನು ಎತ್ತಲಾಗಿದೆ.
- ಈ ಬೆಳವಣಿಗೆಯು ಮಾಹಿತಿಯ ಅಸಿಮ್ಮೆಟ್ರಿ, ಡೇಟಾ ಗೌಪ್ಯತೆ ಮತ್ತು ಒಪ್ಪಿಗೆ, ರೈತರ ಪ್ರೊಫೈಲಿಂಗ್, ತಪ್ಪು ನಿರ್ವಹಣೆಯ ಭೂ ದಾಖಲೆಗಳು ಮತ್ತು ಕೃಷಿಯ ಕಾರ್ಪೊರೇಟೀಕರಣದ ಬಗ್ಗೆ ಗಂಭೀರ ಕಾಳಜಿಯನ್ನು ಹುಟ್ಟುಹಾಕಿದೆ.
- ‘ಅಗ್ರಿಸ್ಟಾಕ್’ ಡಿಜಿಟಲ್ ಮತ್ತು ಖಾಸಗಿ ಕ್ಷೇತ್ರಕ್ಕೆ ಬದಲಾಗುವುದರಿಂದ ಅವುಗಳ ರಚನೆಯು ಕೃಷಿ ವಿಸ್ತರಣಾ ಚಟುವಟಿಕೆಗಳ ವಾಣಿಜ್ಯೀಕರಣವನ್ನು ಸೂಚಿಸುತ್ತದೆ.
ಏಕೆ ಅಷ್ಟೊಂದು ಕಳವಳ?
- ಡೇಟಾ ಸಂರಕ್ಷಣಾ ಶಾಸನದ ಅನುಪಸ್ಥಿತಿಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
- ಖಾಸಗಿ ದತ್ತಾಂಶ ಸಂಸ್ಕರಣಾ ಘಟಕಗಳು ರೈತರ ಜಮೀನಿನ ಬಗ್ಗೆ ರೈತರಿಗಿಂತ ಹೆಚ್ಚು ತಿಳಿದಿರುವ ಕಾರ್ಯಕ್ರಮವಾಗಿ ಇದು ಕೊನೆಗೊಳ್ಳಬಹುದು.
- ಸುರಕ್ಷತೆಗಳಿಲ್ಲದೆ, ಖಾಸಗಿ ಸಂಸ್ಥೆಗಳು ರೈತರ ಡೇಟಾವನ್ನು ಅವರು ಮನಬಂದಂತೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
- ತಂತ್ರಜ್ಞಾನ ಕಂಪನಿಗಳ ಕಡೆಗೆ ವಾಲಿರುವ ಈ ಮಾಹಿತಿಯ ಅಸಿಮ್ಮೆಟ್ರಿಯು ರೈತರನ್ನು, ವಿಶೇಷವಾಗಿ ಸಣ್ಣ ಮತ್ತು ಅಂಚಿನ ರೈತರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸಬಹುದು.
ಅಗತ್ಯತೆ:
- ಪ್ರಸ್ತುತ, ಭಾರತದಾದ್ಯಂತದ ಬಹುಪಾಲು ರೈತರು ಸುಧಾರಿತ ತಂತ್ರಜ್ಞಾನಗಳು ಅಥವಾ ಔಪಚಾರಿಕ ಸಾಲಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುವ ಸಣ್ಣ ಮತ್ತು ಅಂಚಿನ ರೈತರಾಗಿದ್ದು ಅದು ಅವರ ಉತ್ಪಾದನೆಯನ್ನು ಸುಧಾರಿಸಲು ಮತ್ತು ಉತ್ತಮ ಬೆಲೆಗಳನ್ನು ಪಡೆಯಲು ಸಹಾಯ ಮಾಡುತ್ತದೆ.
- ಕಾರ್ಯಕ್ರಮದ ಅಡಿಯಲ್ಲಿ ಹೊಸ ಪ್ರಸ್ತಾವಿತ ಡಿಜಿಟಲ್ ಕೃಷಿ ತಂತ್ರಜ್ಞಾನಗಳು ಮತ್ತು ಸೇವೆಗಳ ಅಡಿಯಲ್ಲಿ ಪಶುಗಳ ನಿರ್ವಹಣೆ ಮಾಡಲು ಸಂವೇದಕಗಳು, ಮಣ್ಣನ್ನು ಪರೀಕ್ಷಿಸಿ ವಿಶ್ಲೇಷಿಸಲು ಮತ್ತು ಕೀಟನಾಶಕವನ್ನು ಅನ್ವಯಿಸಲು ಡ್ರೋನ್‌ಗಳನ್ನು ಒಳಗೊಂಡಿವೆ, ಕೃಷಿ ಇಳುವರಿಯನ್ನು ಗಮನಾರ್ಹವಾಗಿ ಸುಧಾರಿಸಬಹುದು ಮತ್ತು ರೈತರ ಆದಾಯವನ್ನು ಹೆಚ್ಚಿಸಬಹುದು.
ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.
ತೋಟಗಾರಿಕೆ:
(Horticulture)
ಸಂದರ್ಭ:
ಭಾರತದ ಹಸಿರುಮನೆ ತೋಟಗಾರಿಕೆ (Greenhouse Horticulture) ಮಾರುಕಟ್ಟೆಯು 2021 ರಲ್ಲಿ USD 190.84 ಮಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ ಮತ್ತು 2030 ರ ವೇಳೆಗೆ USD 271.25 ಮಿಲಿಯನ್ ತಲುಪ ಬಹುದು ಎಂದು ಅಂದಾಜಿಸಲಾಗಿದೆ.
- ಯೋಜಿತ ಅವಧಿಯಲ್ಲಿ ಮಾರುಕಟ್ಟೆಯು 4.19% ಬೆಳವಣಿಗೆ ದರವನ್ನು ದಾಖಲಿಸುವ ನಿರೀಕ್ಷೆಯಿದೆ. 2021 ರಲ್ಲಿ, ಭಾರತದ ಹಸಿರುಮನೆ ತೋಟಗಾರಿಕೆ ಉತ್ಪಾದನೆಯು 27.71 ಮಿಲಿಯನ್ ಟನ್‌ಗಳಷ್ಟಿತ್ತು.
ಹಸಿರುಮನೆ ತೋಟಗಾರಿಕೆ ಎಂದರೇನು?
ಹಸಿರುಮನೆ ತೋಟಗಾರಿಕೆಯನ್ನು ಸಂರಕ್ಷಿತ ಬೆಳೆ ಎಂದೂ ಕರೆಯಲಾಗುತ್ತದೆ. ಇದು ಮಾರ್ಪಡಿಸಿದ ಬೆಳವಣಿಗೆಯ ಪರಿಸ್ಥಿತಿಗಳನ್ನು ಒದಗಿಸುವುದಕ್ಕಾಗಿ ರಚನೆಗಳ ಒಳಗೆ, ಅಡಿಯಲ್ಲಿ ಅಥವಾ ಆಶ್ರಯದಲ್ಲಿ ತೋಟಗಾರಿಕಾ ಬೆಳೆಗಳ ಉತ್ಪಾದನೆಯಾಗಿದೆ ಮತ್ತು/ಅಥವಾ ಪ್ರತಿಕೂಲ ಹವಾಮಾನ, ಕೀಟಗಳು ಮತ್ತು ರೋಗಗಳಿಂದ ರಕ್ಷಣೆ ಒದಗಿಸುವುದಾಗಿದೆ.
ಹಸಿರುಮನೆ ತೋಟಗಾರಿಕೆಯ ಬೆಳವಣಿಗೆಗೆ ಕಾರಣವಾದ ಅಂಶಗಳು:
ಜನಸಂಖ್ಯೆ ಮತ್ತು ಆಹಾರದ ಬೇಡಿಕೆಯಲ್ಲಿ ಸ್ಥಿರವಾದ ಹೆಚ್ಚಳ.
ಸರ್ಕಾರದ ಮಧ್ಯಪ್ರವೇಶದಿಂದ ತೋಟಗಾರಿಕೆಯಲ್ಲಿ ಉದ್ಯಮಶೀಲತೆ ಹೆಚ್ಚುತ್ತಿದೆ.
ತೋಟಗಾರಿಕೆ ಎಂದರೇನು?
ತೋಟಗಾರಿಕೆ ಎಂಬ ಪದವು ಎರಡು ಲ್ಯಾಟಿನ್ ಪದಗಳಾದ ಹೊರ್ಟಸ್ (hortus) ಮತ್ತು ಕಲ್ಚುರಾ (cultura) ದಿಂದ ಬಂದಿದೆ, ಹೊರ್ಟಸ್ ಇದರರ್ಥ ‘ಉದ್ಯಾನ’ ಮತ್ತು ಕಲ್ಚುರಾ ಎಂದರೆ ‘ಕೃಷಿ’ ಎಂದರ್ಥ. ಆದ್ದರಿಂದ ಉದ್ಯಾನ ಕೃಷಿಯಲ್ಲಿ ಬೆಳೆಸುವ ಬೆಳೆಗಳು.
- ಇದು ಮಾನವನ ಆಹಾರ, ಆಹಾರೇತರ ಬಳಕೆಗಳು ಮತ್ತು ಸಾಮಾಜಿಕ ಅಗತ್ಯಗಳಿಗಾಗಿ ಹಣ್ಣುಗಳು, ತರಕಾರಿಗಳು, ಹೂವುಗಳು ಮತ್ತು ಇತರ ಸಸ್ಯಗಳ ಉತ್ಪಾದನೆ, ಬಳಕೆ ಮತ್ತು ಸುಧಾರಣೆಯ ಒಂದು ವಿಜ್ಞಾನ ಮತ್ತು ಕಲೆ ಎರಡೂ ಆಗಿದೆ.
- L.H. ಬೈಲಿಯನ್ನು ಅಮೇರಿಕನ್ ತೋಟಗಾರಿಕೆಯ ಪಿತಾಮಹ ಎಂದು ಪರಿಗಣಿಸಲಾಗಿದೆ ಮತ್ತು M.H ಮರಿಗೌಡ (ಮಾರಗೌಡನಹಳ್ಳಿ ಹೊಂಬೇಗೌಡ ಮರಿಗೌಡ) ಅವರನ್ನು ಭಾರತದ ತೋಟಗಾರಿಕೆಯ ಪಿತಾಮಹ ಎಂದು ಕರೆಯಲಾಗುತ್ತದೆ.
ಮಹತ್ವ:
- ಭಾರತದಲ್ಲಿನ ವೈವಿಧ್ಯಮಯ ಕೃಷಿ-ಹವಾಮಾನ ಪರಿಸ್ಥಿತಿಗಳು ಎಲ್ಲಾ ರೀತಿಯ ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಔಷಧೀಯ ಸಸ್ಯಗಳ ಉತ್ಪಾದನೆಯನ್ನು ಖಚಿತಪಡಿಸುತ್ತದೆ.
- ತೋಟಗಾರಿಕೆ ಬೆಳೆಗಳು ಉದ್ಯೋಗವನ್ನು ಸೃಷ್ಟಿಸುವ ಮೂಲಕ ಭಾರತೀಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ, ವಿವಿಧ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತವೆ ಮತ್ತು ವಿದೇಶಿ ವಿನಿಮಯದಿಂದ ಹೆಚ್ಚಿನ ಉತ್ಪಾದನೆ ಮತ್ತು ರಫ್ತು ಗಳಿಕೆಯಿಂದಾಗಿ ಹೆಚ್ಚಿನ ಕೃಷಿ ಲಾಭದಾಯಕತೆಯನ್ನು ಹೊಂದಿವೆ.
- ತೋಟಗಾರಿಕಾ ಬೆಳೆಗಳ ಪ್ರತಿ ಯೂನಿಟ್ ಪ್ರದೇಶದ ತುಲನಾತ್ಮಕ ಉತ್ಪಾದನೆಯು ಹೊಲದ ಬೆಳೆಗಳಿಗಿಂತ ಹೆಚ್ಚಾಗಿರುತ್ತದೆ.
- ಅಂತಹ ಬೆಳೆಗಳು ಹೆಚ್ಚಿನ ಮೌಲ್ಯವನ್ನು ಹೊಂದಿವೆ, ಶ್ರಮದಾಯಕ ಮತ್ತು ವರ್ಷವಿಡೀ ಉದ್ಯೋಗವನ್ನು ಸೃಷ್ಟಿಸುತ್ತವೆ. ಕೃಷಿಯ ಒಟ್ಟು ಮೌಲ್ಯವರ್ಧನೆಯಲ್ಲಿ ಬೆಳೆಯುತ್ತಿರುವ ಪಾಲನ್ನು ಕೊಡುಗೆಯಾಗಿ ನೀಡುವಲ್ಲಿ ಇದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
- ಅವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಬೇಡಿಕೆಯನ್ನು ಹೊಂದಿವೆ ಮತ್ತು ವಿದೇಶಿ ವಿನಿಮಯದ ಉತ್ತಮ ಮೂಲವಾಗಿದೆ.
- 2050 ರ ವೇಳೆಗೆ ದೇಶದ ಅಂದಾಜು 650 MT ಹಣ್ಣುಗಳು ಮತ್ತು ತರಕಾರಿಗಳ ಬೇಡಿಕೆಯನ್ನು ಪೂರೈಸುವುದು ಅನಿವಾರ್ಯವಾಗಿದೆ.
ದತ್ತಾಂಶ ವಿಶ್ಲೇಷಣೆ:
- ಭಾರತವು ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸುವ ದೇಶವಾಗಿದೆ.
- ತೋಟಗಾರಿಕಾ ಬೆಳೆಗಳು ಭಾರತದಲ್ಲಿನ ಒಟ್ಟು ಕೃಷಿ ಉತ್ಪನ್ನದ ಗಮನಾರ್ಹ ಭಾಗವನ್ನು ಹೊಂದಿವೆ. ತೋಟಗಾರಿಕಾ ಬೆಳೆಗಳು ವ್ಯಾಪಕವಾದ ಕೃಷಿ ಪ್ರದೇಶವನ್ನು ಆವರಿಸುತ್ತವೆ ಮತ್ತು ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಸುಮಾರು 28 ಪ್ರತಿಶತವನ್ನು ಕೊಡುಗೆ ನೀಡುತ್ತವೆ.
- ಈ ಬೆಳೆಗಳು ಭಾರತದಿಂದ ರಫ್ತಾಗುವ ಒಟ್ಟು ಕೃಷಿ ಸರಕುಗಳಲ್ಲಿ ಶೇಕಡಾ 37 ರಷ್ಟು ಪಾಲನ್ನು ಹೊಂದಿವೆ.
- 2019-20ನೇ ಸಾಲಿನಲ್ಲಿ, ದೇಶವು 25.66 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಸಾರ್ವಕಾಲಿಕ ಗರಿಷ್ಠ 320.77 ಮಿಲಿಯನ್ ಟನ್‌ಗಳಷ್ಟು ತೋಟಗಾರಿಕೆ ಉತ್ಪಾದನೆಯನ್ನು ದಾಖಲಿಸಿದೆ.
ಸವಾಲುಗಳು:
- ಯಂತ್ರೋಪಕರಣಗಳು ಮತ್ತು ಸಲಕರಣೆಗಳಿಂದ ಕಡಿಮೆ ಅಥವಾ ಸೀಮಿತ ಬಳಕೆಯಿಂದಾಗಿ ಸುಗ್ಗಿಯ ನಂತರದ ಹೆಚ್ಚಿನ ನಷ್ಟ ಮತ್ತು ಸುಗ್ಗಿಯ ನಂತರದ ನಿರ್ವಹಣೆಯಲ್ಲಿ ಅಂತರವನ್ನು ಎದುರಿಸುತ್ತಿದೆ.
- ಕೋಲ್ಡ್ ಸ್ಟೋರೇಜ್ ಮತ್ತು ಸುಸಜ್ಜಿತ ಸಾರಿಗೆ ಜಾಲಗಳಂತಹ ಪೂರೈಕೆ ಸರಪಳಿಯ ಮೂಲಸೌಕರ್ಯಗಳ ಕೊರತೆ.
- ಮುಖ್ಯವಾಗಿ ರಫ್ತಿಗೆ ಹೆಚ್ಚಿನ ಇನ್‌ಪುಟ್ ವೆಚ್ಚಗಳು ಮತ್ತು ಮಾರುಕಟ್ಟೆ ಇಂಟಲಿಜೆನ್ಸ್ ನ ಸೀಮಿತ ಲಭ್ಯತೆಯಿಂದಾಗಿ ಇವುಗಳನ್ನು ಬೆಳೆಯಲು ರೈತರು ತೊಂದರೆ ಎದುರಿಸುತ್ತಾರೆ.
- ಆಹಾರ ಧಾನ್ಯಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆ (MSP) ಯಂತಹ ಯಾವುದೇ ಸುರಕ್ಷತಾ ನಿಬಂಧನೆಗಳು ತೋಟಗಾರಿಕೆ ಬೆಳೆಗಳಿಗೆ ಇಲ್ಲ.
- ದೇಶದಲ್ಲಿ ತೋಟಗಾರಿಕಾ ಉತ್ಪನ್ನಗಳಿಗೆ ಈಗಿರುವ ಬೇಡಿಕೆಗೆ ಹೋಲಿಸಿದರೆ ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆಯು ತೀರಾ ಕಡಿಮೆ ಮಟ್ಟದಲ್ಲಿದೆ.
ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆಯ (MIDH) ಕುರಿತು:
ಇದು ಭಾರತೀಯ ತೋಟಗಾರಿಕೆ ಕ್ಷೇತ್ರದ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಇರುವ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
MIDH ಅಡಿಯಲ್ಲಿ, ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಭಾರತ ಸರ್ಕಾರ (GOI) ಒಟ್ಟು ಹಣದ 60% ಕೊಡುಗೆಯನ್ನು ನೀಡುತ್ತದೆ, ಮತ್ತು ರಾಜ್ಯ ಸರ್ಕಾರಗಳು 40% ಪಾಲನ್ನು ನೀಡುತ್ತವೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳ ವಿಷಯದಲ್ಲಿ, ಭಾರತ ಸರ್ಕಾರದ ಕೊಡುಗೆ ಶೇಕಡಾ 90 ರಷ್ಟು ಆಗಿದೆ.
- ತರಕಾರಿಗಳು, ಬೇರುಗಳು ಮತ್ತು ಗೆಡ್ಡೆ ಬೆಳೆಗಳು, ಅಣಬೆಗಳು, ಮಸಾಲೆಗಳು, ಹೂಗಳು, ಆರೊಮ್ಯಾಟಿಕ್ ಸಸ್ಯಗಳು, ತೆಂಗಿನಕಾಯಿ, ಗೋಡಂಬಿ ಇತ್ಯಾದಿಗಳನ್ನು ಈ ಕೇಂದ್ರ ಪ್ರಾಯೋಜಿತ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.
- MIDH ಅಡಿಯಲ್ಲಿ, ರಾಜ್ಯ ತೋಟಗಾರಿಕೆ ಕಾರ್ಯಾಚರಣೆಗಳು, ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ (RKVY), ಕೇಸರಿ ಮಿಷನ್ ಮತ್ತು ರಾಷ್ಟ್ರೀಯ ಸುಸ್ಥಿರ ಕೃಷಿ ಮಿಷನ್ (NMSA) ಗೆ ತಾಂತ್ರಿಕ ನೆರವು ಮತ್ತು ಸಲಹೆಯನ್ನು ಸಹ ನೀಡಲಾಗುತ್ತದೆ.
- ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಅನ್ನು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಜಾರಿಗೆ ತರಲಾಗುತ್ತಿದೆ.
ಉಪ ಯೋಜನೆಗಳು:
ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM).
ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ ತೋಟಗಾರಿಕೆ ಮಿಷನ್ (HMNEH).
ರಾಷ್ಟ್ರೀಯ ಬಿದಿರಿನ ಮಿಷನ್ (NBM).
ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB).
ತೆಂಗಿನಕಾಯಿ ಅಭಿವೃದ್ಧಿ ಮಂಡಳಿ (CBD).
ಕೇಂದ್ರ ತೋಟಗಾರಿಕೆ ಸಂಸ್ಥೆ (CIH).
ವಿಷಯಗಳು: ಅಂತರ್ಗತ ಅಭಿವೃದ್ಧಿ ಮತ್ತು ಅದರಿಂದ ಉದ್ಭವಿಸುವ ವಿವಾದಗಳು.
ಮೈಕ್ರೋಫೈನಾನ್ಸ್ ನಿಯಂತ್ರಣಗಳು:
(Microfinance Regulations)
ಸಂದರ್ಭ:
RBI ಹೊಸ ಕಿರು ಹಣಕಾಸು ಸಂಸ್ಥೆಗಳು ಸಾಲ ನೀಡುವ ಮಾನದಂಡಗಳನ್ನು (microfinance lending norms) ಬಿಡುಗಡೆ ಮಾಡಿದೆ. ಈ ಮಾನದಂಡಗಳ ಪ್ರಕಾರ:
- ಎಲ್ಲಾ ಘಟಕಗಳು, ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (NBFCs), ಮತ್ತು ಕಿರು ಹಣಕಾಸು ಸಂಸ್ಥೆಗಳು (MFIs) ಪ್ರಸ್ತುತ RBI ಬಿಡುಗಡೆ ಮಾಡಿರುವ ನಿಯಮಗಳಿಗೆ ಒಳಪಟ್ಟಿರುತ್ತವೆ.
- ಕಿರುಬಂಡವಾಳ ಸಾಲವನ್ನು ಆರ್‌ಬಿಐ ವಾರ್ಷಿಕ 3 ಲಕ್ಷ ರೂ.ವರೆಗಿನ ಕುಟುಂಬದ ಆದಾಯ ಹೊಂದಿರುವ ಕುಟುಂಬಕ್ಕೆ ನೀಡಿದ ‘ಮೇಲಾಧಾರ-ಮುಕ್ತ’ ಸಾಲ (collateral-free) ಎಂದು ವ್ಯಾಖ್ಯಾನಿಸುತ್ತದೆ.
- ಕಡಿಮೆ-ಆದಾಯದ ಕುಟುಂಬಗಳಿಗೆ ನೀಡಲಾಗುವ ಎಲ್ಲಾ ಮೇಲಾಧಾರ-ಮುಕ್ತ ಸಾಲಗಳು, ಅಂತಿಮ ಬಳಕೆ ಮತ್ತು ಅಪ್ಲಿಕೇಶನ್/ಸಂಸ್ಕರಣೆ/ವಿತರಣೆ ವಿಧಾನಗಳನ್ನು ಲೆಕ್ಕಿಸದೆ, ಕಿರುಬಂಡವಾಳ ಸಾಲಗಳೆಂದು ಪರಿಗಣಿಸಲಾಗುತ್ತದೆ.
- ಸಾಲಗಾರರ ಅವಶ್ಯಕತೆಗಳಿಗೆ ಅನುಗುಣವಾಗಿ ಮೈಕ್ರೋಫೈನಾನ್ಸ್ ಸಾಲಗಳ ಮರುಪಾವತಿಯ ಅವಧಿಯ ನಮ್ಯತೆಯನ್ನು ಒದಗಿಸಲು ಹಣಕಾಸು ಘಟಕಗಳು ಮಂಡಳಿ-ಅನುಮೋದಿತ ನೀತಿಯನ್ನು ಹೊಂದಿರಬೇಕು. ಅವು ಕೌಟುಂಬಿಕ ಆದಾಯದ ಮೌಲ್ಯಮಾಪನಕ್ಕಾಗಿ ಮಂಡಳಿಯಿಂದ ಅನುಮೋದಿತ ನೀತಿಯನ್ನು ಹೊಂದಿರಬೇಕು.
ಮೈಕ್ರೋಫೈನಾನ್ಸ್ ಕುರಿತು:
ಕಿರುಬಂಡವಾಳವು ಬಡ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಕಿರು ಸಾಲಗಳು ಮತ್ತು ಇತರ ಹಣಕಾಸು ಸೇವೆಗಳನ್ನು ಒದಗಿಸುವ ಹಣಕಾಸಿನ ಸೇವೆಯ ಒಂದು ರೂಪವಾಗಿದೆ.
- ಕಿರು ಹಣಕಾಸು ಸಂಸ್ಥೆಗಳು (MFIs) ಬ್ಯಾಂಕಿಂಗ್ ಸೌಲಭ್ಯಗಳಿಗೆ ಯಾವುದೇ ಪ್ರವೇಶವನ್ನು ಹೊಂದಿರದ ಜನರಿಗೆ ಕಿರು ಸಾಲಗಳನ್ನು ಒದಗಿಸುವ ಹಣಕಾಸು ಕಂಪನಿಗಳಾಗಿವೆ.
- “ಕಿರು ಸಾಲಗಳ” ವ್ಯಾಖ್ಯಾನವು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಭಾರತದಲ್ಲಿ, ರೂ.1 ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ಸಾಲಗಳನ್ನು ಮೈಕ್ರೋಲೋನ್ ಅಥವಾ ಕಿರು ಸಾಲ ಎಂದು ಪರಿಗಣಿಸಬಹುದು.
ಮೈಕ್ರೋಕ್ರೆಡಿಟ್ ಅನ್ನು ವಿವಿಧ ಸಾಂಸ್ಥಿಕ ಸಂಸ್ಥೆಗಳ ಮೂಲಕ ವಿತರಿಸಲಾಗುತ್ತದೆ:
- ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು (SCBs) (ಸಣ್ಣ ಹಣಕಾಸು ಬ್ಯಾಂಕುಗಳು (SFBs) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs) ಸೇರಿದಂತೆ).
- ಸಹಕಾರಿ ಬ್ಯಾಂಕುಗಳು.
- ಬ್ಯಾಂಕೇತರ ಹಣಕಾಸು ಕಂಪನಿಗಳು (NBFCs).
- NBFC ಗಳ ರೂಪದಲ್ಲಿ ಮತ್ತು ಇತರ ರೂಪಗಳಲ್ಲಿ ನೋಂದಾಯಿಸಲಾದ ಮೈಕ್ರೋಫೈನಾನ್ಸ್ ಸಂಸ್ಥೆಗಳು (MFI ಗಳು).
ಈ ಪ್ರಸ್ತಾಪದ ಮಹತ್ವ:
- ಈ ಕ್ರಮದೊಂದಿಗೆ, ಮೈಕ್ರೋಫೈನಾನ್ಸ್ ವಲಯದ ಪರಿಪಕ್ವತೆಯ ಬಗ್ಗೆ ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿದೆ.
- ಇದು ಪಾರದರ್ಶಕವಾದ ನಿಯಮಗಳ ಮೇಲೆ ಸಮಂಜಸವಾದ ಬಡ್ಡಿದರಗಳನ್ನು ನಿಗದಿಪಡಿಸುವ ಜವಾಬ್ದಾರಿಯು ಸಂಸ್ಥೆಯದ್ದಾಗಿದೆ ಎಂದು ಹೇಳುವ RBI ನ ಮುಂದಾಲೋಚನೆಯ ಕ್ರಮವಾಗಿದೆ.
ವಿಷಯಗಳು: ಉದ್ಯೋಗ ಸಂಬಂಧಿತ ಸಮಸ್ಯೆಗಳು.
ಭಾರತದಲ್ಲಿ ನಿರುದ್ಯೋಗ:
ಸಂದರ್ಭ:
ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಇತ್ತೀಚಿನ ಆವರ್ತಕ ಕಾರ್ಮಿಕ ಬಲದ ಸಮೀಕ್ಷೆಯ (Periodic Labour Force Survey -PLFS) ಪ್ರಕಾರ:
- 2021 ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ನಗರ ನಿರುದ್ಯೋಗ ದರವು 2021 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿದ್ದ ಶೇಕಡಾ 9.3 ಕ್ಕೆ ಹೋಲಿಸಿದರೆ ಶೇಕಡಾ 12.6 ಕ್ಕೆ ಹೆಚ್ಚಳಗೊಂಡಿದೆ.
- ಆದಾಗ್ಯೂ, ಇದು ಕೋವಿಡ್ ಸಾಂಕ್ರಾಮಿಕದ ಮೊದಲ ತರಂಗದಲ್ಲಿ ಕಂಡುಬಂದ 20.8% ರ ಮಟ್ಟಕ್ಕಿಂತ ಕಡಿಮೆಯಾಗಿದೆ.
COVID19 ಸಾಂಕ್ರಾಮಿಕದ ಪರಿಣಾಮ:
ಸಾಂಕ್ರಾಮಿಕ ರೋಗದ ದೊಡ್ಡ ಹೊಡೆತವೆಂದರೆ ನಿರುದ್ಯೋಗ. CMIE ವರದಿಯ ಪ್ರಕಾರ, ದೇಶದ ನಿರುದ್ಯೋಗ ದರವು ಏಪ್ರಿಲ್‌ನಲ್ಲಿ 7.4% ಕ್ಕೆ ಏರಿದೆ ಮತ್ತು ಮಾರ್ಚ್‌ನಲ್ಲಿದ್ದ 6.5% ಕ್ಕಿಂತ ಗಮನಾರ್ಹವಾಗಿ 8% ಕ್ಕೆ ಹೆಚ್ಚಳವಾಗುವ ಬೆದರಿಕೆಯನ್ನು ಒಡ್ಡಿದೆ.
- ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ಸರಿಸುಮಾರು 10 ಮಿಲಿಯನ್ ಸಂಬಳದ ಉದ್ಯೋಗಗಳು ಕಳೆದುಹೋಗಿವೆ ಮತ್ತು ಎಷ್ಟು ಜನರು ತಮ್ಮ ಜೀವನೋಪಾಯವನ್ನು ಮರಳಿ ಪಡೆಯುತ್ತಾರೆ ಎಂಬುದು ಖಚಿತವಾಗಿಲ್ಲ.
- ನಗರ ಪ್ರದೇಶದ ಹೆಣ್ಣು ಮಕ್ಕಳ ಸ್ಥಿತಿಯು ನಗರ ಪುರುಷರಿಗಿಂತ ಕೆಟ್ಟದಾಗಿದೆ. 15-29 ವಯಸ್ಸಿನ ಗುಂಪಿನಲ್ಲಿ, ಏಪ್ರಿಲ್-ಜೂನ್ 2021 ರ ಅವಧಿಯಲ್ಲಿ ಪುರುಷರ ನಿರುದ್ಯೋಗ ದರದ 24 ಪ್ರತಿಶತಕ್ಕೆ ಹೋಲಿಸಿದರೆ ನಗರ ಪ್ರದೇಶದ ಮಹಿಳೆಯರ ನಿರುದ್ಯೋಗ ದರವು 31 ಪ್ರತಿಶತದಷ್ಟಿದೆ.
- 2020 ರ ಏಪ್ರಿಲ್-ಜೂನ್‌ನಲ್ಲಿ ನಗರ ಪ್ರದೇಶದ ಮಹಿಳೆಯರು ಮತ್ತು ಪುರುಷರ ನಿರುದ್ಯೋಗ ದರವು ಕ್ರಮವಾಗಿ ಶೇಕಡಾ 36 ಮತ್ತು 34.3 ರಷ್ಟಿತ್ತು.
ಭಾರತದಲ್ಲಿ ನಿರುದ್ಯೋಗದ ವಿಧಗಳು:
ಮರೆ ಮಾಚಿದ ನಿರುದ್ಯೋಗ:
ಇದು ವಾಸ್ತವವಾಗಿ ಅಗತ್ಯಕ್ಕಿಂತ ಹೆಚ್ಚು ಜನರು ಉದ್ಯೋಗದಲ್ಲಿರುವ ಒಂದು ವಿದ್ಯಮಾನವಾಗಿದೆ.
ಇದನ್ನು ಪ್ರಾಥಮಿಕವಾಗಿ ಭಾರತದ ಕೃಷಿ ಮತ್ತು ಅಸಂಘಟಿತ ವಲಯಗಳಲ್ಲಿ ಗುರುತಿಸಲಾಗಿದೆ.
ಋತುಮಾನಿಕ ನಿರುದ್ಯೋಗ:
ಇದು ವರ್ಷದ ಕೆಲವು ಋತುಗಳಲ್ಲಿ ಸಂಭವಿಸುವ ನಿರುದ್ಯೋಗವಾಗಿದೆ.
ಭಾರತದಲ್ಲಿ ಕೃಷಿ ಕಾರ್ಮಿಕರು ವರ್ಷವಿಡೀ ಕೆಲಸ ಮಾಡುವುದು ಅಪರೂಪ.
ರಚನಾತ್ಮಕ ನಿರುದ್ಯೋಗ:
ರಚನಾತ್ಮಕ ನಿರುದ್ಯೋಗವು ಮೂಲಭೂತ ಆರ್ಥಿಕ ಸಮಸ್ಯೆಗಳು ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿ ಅಂತರ್ಗತವಾಗಿರುವ ಅಸಮರ್ಥತೆಗಳ ಮೇಲೆ ಕೇಂದ್ರೀಕರಿಸುತ್ತದೆ. ಅಗತ್ಯ ಕೌಶಲ್ಯ ಸೆಟ್ ಹೊಂದಿರುವ ಕಾರ್ಮಿಕರ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಸಮಾನತೆಯನ್ನು ಇದು ಒಳಗೊಂಡಿದೆ. ತಂತ್ರಜ್ಞಾನ ಬದಲಾವಣೆಗಳು ಅಥವಾ ಪರಿಣಾಮಕಾರಿಯಲ್ಲದ ಸರ್ಕಾರದ ನೀತಿಗಳು ರಚನಾತ್ಮಕ ನಿರುದ್ಯೋಗಕ್ಕೆ ಕಾರಣವಾಗಬಹುದು.
ಘರ್ಷಣಾತ್ಮಕ ನಿರುದ್ಯೋಗ:
ಯಾವುದೇ ಆರ್ಥಿಕತೆಯಲ್ಲಿ ನಿರುದ್ಯೋಗ ಅಸ್ತಿತ್ವದಲ್ಲಿದೆ ಏಕೆಂದರೆ ಜನರು ಒಂದು ಉದ್ಯೋಗದಿಂದ ಇನ್ನೊಂದಕ್ಕೆ ಹೋಗುತ್ತಿದ್ದಾರೆ.
ಆವರ್ತಕ ನಿರುದ್ಯೋಗ:
ಇದು ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆಯು ಪೂರ್ಣ ಉದ್ಯೋಗವನ್ನು ಬೆಂಬಲಿಸದ ಸ್ಥಿತಿಯನ್ನು ಉಂಟುಮಾಡುತ್ತದೆ. ಇದು ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಸಮಯದಲ್ಲಿ ಅಥವಾ ಅವನತಿಯ ಸಮಯದಲ್ಲಿ ಸಂಭವಿಸುತ್ತದೆ. ಒಂದು ಉದಾಹರಣೆ ಆರ್ಥಿಕ ಹಿಂಜರಿತವಾಗಿರಬಹುದು.
ಆವರ್ತಕ ನಿರುದ್ಯೋಗ:
ಇದು ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆಯು ಪೂರ್ಣ ಉದ್ಯೋಗವನ್ನು ಬೆಂಬಲಿಸದ ಸ್ಥಿತಿಯನ್ನು ಉಂಟುಮಾಡುತ್ತದೆ. ಇದು ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಸಮಯದಲ್ಲಿ ಅಥವಾ ಅವನತಿಯ ಸಮಯದಲ್ಲಿ ಸಂಭವಿಸುತ್ತದೆ. ಒಂದು ಉದಾಹರಣೆ ಆರ್ಥಿಕ ಹಿಂಜರಿತವಾಗಿರಬಹುದು.
ತಾಂತ್ರಿಕ ನಿರುದ್ಯೋಗ:
ತಂತ್ರಜ್ಞಾನದಲ್ಲಿನ ಬದಲಾವಣೆಯಿಂದ ಸಂಭವಿಸುವ ನಿರುದ್ಯೋಗವಾಗಿದೆ.
2016 ರಲ್ಲಿ, ವಿಶ್ವಬ್ಯಾಂಕ್ ಮಾಹಿತಿಯು ಭಾರತದಲ್ಲಿ ಆಟೋಮೇಷನ್‌ನಿಂದ ಅಪಾಯದಲ್ಲಿರುವ ಉದ್ಯೋಗಗಳ ಪ್ರಮಾಣವು ವರ್ಷದಿಂದ ವರ್ಷಕ್ಕೆ 69% ಆಗಿದೆ ಎಂದು ಭವಿಷ್ಯ ನುಡಿದಿದೆ.
ನಿರುದ್ಯೋಗಕ್ಕೆ ಕಾರಣಗಳು:
- ಬೃಹತ್ ಜನಸಂಖ್ಯೆ.
- ಕೆಲಸ ಮಾಡುವ ಜನಸಂಖ್ಯೆಯ ಕೊರತೆ ಅಥವಾ ಯಾವುದೇ ಶೈಕ್ಷಣಿಕ ಮಟ್ಟಗಳು ಮತ್ತು ವೃತ್ತಿಪರ ಕೌಶಲ್ಯಗಳು ಇಲ್ಲದಿರುವುದು.
- ರಾಜ್ಯದ ಅಸಮರ್ಪಕ ಬೆಂಬಲ, ಕಾನೂನು ಸಂಕೀರ್ಣತೆಗಳು ಮತ್ತು ಸಣ್ಣ/ಗುಡಿ ಕೈಗಾರಿಕೆಗಳಿಗೆ ಮೂಲಸೌಕರ್ಯ, ಹಣಕಾಸು ಮತ್ತು ಮಾರುಕಟ್ಟೆ ಸಂಪರ್ಕಗಳ ಕೊರತೆ.
- ಅಗತ್ಯವಿರುವ ಶಿಕ್ಷಣ/ಕೌಶಲ್ಯಗಳ ಕೊರತೆಯಿಂದಾಗಿ ಅನೌಪಚಾರಿಕ ವಲಯಕ್ಕೆ ಸಂಬಂಧಿಸಿದ ಬೃಹತ್ ಕಾರ್ಯಪಡೆಯು ಯಾವುದೇ ಉದ್ಯೋಗದ ಡೇಟಾದಲ್ಲಿ ನಮೂದಿಸಲ್ಪಟ್ಟಿಲ್ಲ. ಉದಾಹರಣೆಗೆ: ಮನೆ ಕೆಲಸದವರು, ನಿರ್ಮಾಣ ಕೆಲಸಗಾರರು ಇತ್ಯಾದಿ.
- ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕಲಿಸುವ ಪಠ್ಯಕ್ರಮವು ಕೈಗಾರಿಕೆಗಳ ಪ್ರಸ್ತುತ ಅವಶ್ಯಕತೆಗಳಿಗೆ ಅನುಗುಣವಾಗಿಲ್ಲ. ಇದು ರಚನಾತ್ಮಕ ನಿರುದ್ಯೋಗದ ಮುಖ್ಯ ಕಾರಣವಾಗಿದೆ.
- ಮೂಲಸೌಕರ್ಯಗಳ ಅಸಮರ್ಪಕ ಬೆಳವಣಿಗೆ ಮತ್ತು ಉತ್ಪಾದನಾ ವಲಯದಲ್ಲಿ ಕಡಿಮೆ ಹೂಡಿಕೆಗಳು, ಆದ್ದರಿಂದ ದ್ವಿತೀಯ ವಲಯದ ಉದ್ಯೋಗ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ.
- ಕೃಷಿ ವಲಯದಲ್ಲಿ ಕಡಿಮೆ ಉತ್ಪಾದಕತೆಯು ಕೃಷಿ ಕಾರ್ಮಿಕರಿಗೆ ಪರ್ಯಾಯ ಅವಕಾಶಗಳ ಕೊರತೆಯೊಂದಿಗೆ ಸೇರಿಕೊಂಡು ಪ್ರಾಥಮಿಕದಿಂದ ಮಾಧ್ಯಮಿಕ ಮತ್ತು ತೃತೀಯ ಕ್ಷೇತ್ರಗಳಿಗೆ ಪರಿವರ್ತನೆ ಕಷ್ಟಕರವಾಗಿದೆ.
- ಮಹಿಳೆಯರು ಉದ್ಯೋಗವನ್ನು ತೆಗೆದುಕೊಳ್ಳುವುದರಿಂದ ಅಥವಾ ಅದರಲ್ಲಿ ಮುಂದುವರಿಯುವುದರಿಂದ ಅವರನ್ನು ತಡೆಯುವ ಕಠಿಣ ಸಾಮಾಜಿಕ ನಿಯಮಗಳು.
ನಿರುದ್ಯೋಗದ ಪರಿಣಾಮಗಳು:
ಹೆಚ್ಚಿನ ನಿರುದ್ಯೋಗವು ಆರ್ಥಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ, ಆರ್ಥಿಕ ಬೆಳವಣಿಗೆಗೆ ಹಾನಿ ಮಾಡುತ್ತದೆ. ನಿರುದ್ಯೋಗವು ಉತ್ಪಾದಕತೆಯನ್ನು ಹಾನಿಗೊಳಿಸುತ್ತದೆ ಏಕೆಂದರೆ;
- ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತದೆ. ಪುನರ್ವಿತರಣೆ ಒತ್ತಡಗಳನ್ನು ಸೃಷ್ಟಿಸುತ್ತದೆ ಮತ್ತು ವಿರೂಪಗಳನ್ನು ಉಂಟುಮಾಡುತ್ತದೆ;
- ಜನರನ್ನು ಬಡತನಕ್ಕೆ ತಳ್ಳುತ್ತದೆ;
- ಲಿಕ್ವಿಡಿಟಿಯನ್ನು ಮಿತಿಗೊಳಿಸುತ್ತದೆ, ಅನೇಕ ಜನರಿಗೆ ಉದ್ಯೋಗವಿಲ್ಲ, ಆದ್ದರಿಂದ ಕಡಿಮೆ ನಗದು ಇದೆ;
- ಕಾರ್ಮಿಕ ಚಲನಶೀಲತೆಯನ್ನು ನಿರ್ಬಂಧಿಸುತ್ತದೆ;
- ಸ್ವಾಭಿಮಾನವನ್ನು ಕುಗ್ಗಿಸುತ್ತದೆ ಸಾಮಾಜಿಕ ಸ್ಥಳಾಂತರ, ಅಸ್ಥಿರತೆ ಮತ್ತು ಸಂಘರ್ಷ.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳು:
ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು 1980 ರಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮವನ್ನು (IRDP) ಪ್ರಾರಂಭಿಸಲಾಯಿತು.
ಸ್ವಯಂ ಉದ್ಯೋಗಕ್ಕಾಗಿ ಗ್ರಾಮೀಣ ಯುವಕರಿಗೆ ತರಬೇತಿ (TRYSEM): 18 ರಿಂದ 35 ವರ್ಷ ವಯಸ್ಸಿನ ನಿರುದ್ಯೋಗಿ ಗ್ರಾಮೀಣ ಯುವಕರು ಸ್ವಯಂ ಉದ್ಯೋಗಕ್ಕಾಗಿ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು 1979 ರಲ್ಲಿ ಪ್ರಾರಂಭಿಸಲಾಯಿತು. ಇದರಲ್ಲಿ ಎಸ್‌ಸಿ/ಎಸ್‌ಟಿ ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.
RSETI/RUDSETI: ಯುವಜನರಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಜಂಟಿಯಾಗಿ 1982ರಲ್ಲಿ “ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ” ಯನ್ನು RUDSETI ಎಂಬ ಸಂಕ್ಷಿಪ್ತ ರೂಪದೊಂದಿಗೆ ಕರ್ನಾಟಕದ ಧರ್ಮಸ್ಥಳದ ಬಳಿ ಸ್ಥಾಪಿಸಲಾಯಿತು.ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು/ಆರ್‌ಎಸ್‌ಇಟಿಐಗಳನ್ನು ಈಗ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಕ್ರಿಯ ಸಹಕಾರದೊಂದಿಗೆ ಬ್ಯಾಂಕ್‌ಗಳು ನಿರ್ವಹಿಸುತ್ತಿವೆ.
ಹಿಂದಿನ ಎರಡು ವೇತನ ಆಧಾರಿತ ಉದ್ಯೋಗ ಕಾರ್ಯಕ್ರಮಗಳಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ (NREP) ಮತ್ತು ಗ್ರಾಮೀಣ ಭೂರಹಿತ ಉದ್ಯೋಗ ಖಾತರಿ ಕಾರ್ಯಕ್ರಮ (RLEGP) ಗಳನ್ನು ವಿಲೀನಗೊಳಿಸುವ ಮೂಲಕ – ಜವಾಹರ್ ರೋಜ್‌ಗಾರ್ ಯೋಜನೆ (JRY) ಎಂಬ ಹೊಸ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯಗಳ 80:20 ವೆಚ್ಚ ಹಂಚಿಕೆ ಆಧಾರದ ಮೇಲೆ ಏಪ್ರಿಲ್ 1, 1989 ರಿಂದ ಜಾರಿಗೆ ಬರುವಂತೆ ಪ್ರಾರಂಭಿಸಲಾಯಿತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MNREGA): ಇದು 2005 ರಲ್ಲಿ ಪ್ರಾರಂಭವಾದ ಉದ್ಯೋಗ ಯೋಜನೆಯಾಗಿದ್ದು, ವಯಸ್ಕ ಸದಸ್ಯರು ಕೌಶಲ್ಯರಹಿತ ಕಾರ್ಮಿಕ-ತೀವ್ರತೆಯ ಕೆಲಸವನ್ನು ಆಯ್ಕೆ ಮಾಡುವ ಎಲ್ಲಾ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ವೇತನ ಸಹಿತ ಕೆಲಸವನ್ನು ಖಾತರಿಪಡಿಸುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸಲು ಪ್ರಾರಂಭಿಸಲಾಗಿದೆ. ಈ ಕಾಯಿದೆಯು ಜನರಿಗೆ ಕೆಲಸ ಮಾಡುವ ಹಕ್ಕನ್ನು ಒದಗಿಸುತ್ತದೆ.
2015 ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY), ಹೆಚ್ಚಿನ ಸಂಖ್ಯೆಯ ಭಾರತೀಯ ಯುವಕರು ಉದ್ಯಮ-ಸಂಬಂಧಿತ ಕೌಶಲ್ಯ ತರಬೇತಿಯನ್ನು ಪಡೆಯಲು ಅನುವು ಮಾಡಿಕೊಡುವ ಉದ್ದೇಶವನ್ನು ಹೊಂದಿದೆ, ಅದು ಅವರಿಗೆ ಉತ್ತಮ ಜೀವನೋಪಾಯವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.
2016 ರಲ್ಲಿ ಪ್ರಾರಂಭವಾದ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯು ದೇಶಾದ್ಯಂತ ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಪೋಷಿಸುವ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
2016 ರಲ್ಲಿ ಪ್ರಾರಂಭವಾದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು ಗ್ರೀನ್‌ಫೀಲ್ಡ್ ಉದ್ಯಮವನ್ನು ಅಥವಾ ಹೊಸ ಉದ್ಯಮವನ್ನು ಸ್ಥಾಪಿಸಲು ಮುಂದೆಬರುವ ಕನಿಷ್ಠ ಒಬ್ಬ ಎಸ್‌ಸಿ ಅಥವಾ ಎಸ್‌ಟಿ ಸಾಲಗಾರರಿಗೆ ಮತ್ತು ಕನಿಷ್ಠ ಒಬ್ಬ ಮಹಿಳಾ ಸಾಲಗಾರರಿಗೆ ಪ್ರತಿ ಬ್ಯಾಂಕ್ ಶಾಖೆಗಳ ಮೂಲಕ ರೂ 10 ಲಕ್ಷದಿಂದ 1 ಕೋಟಿ ರೂ.ವರೆಗಿನ ಬ್ಯಾಂಕ್ ಸಾಲಗಳನ್ನು ನೀಡುವ ಗುರಿಯನ್ನು ಹೊಂದಿದೆ.
ವಿಷಯಗಳು: ಮೂಲಸೌಕರ್ಯ-ಇಂಧನ.
ಸುಧಾರಣೆ-ಆಧಾರಿತ ಮತ್ತು ಫಲಿತಾಂಶ-ಸಂಯೋಜಿತ, ಪರಿಷ್ಕರಿಸಿದ ವಿತರಣಾ ವಲಯದ ಯೋಜನೆ:
(Reforms-Based and Results-Linked, Revamped Distribution Sector Scheme)
ಸಂದರ್ಭ:
ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯವು ಪ್ರಾರಂಭಿಸಿದ 3.03 ಲಕ್ಷ ಕೋಟಿ ರೂಪಾಯಿಗಳ ಪರಿಷ್ಕೃತ ವಿತರಣಾ ವಲಯ ಯೋಜನೆ (RDSS) ಗಾಗಿ ಸಾಲ ನೀಡುವ ನೋಡಲ್ ಸಂಸ್ಥೆಗಳಾಗಿರುವ REC ಮತ್ತು PFC, ಮೊದಲ ಹಂತದ ಹಣವನ್ನು ಮಾರ್ಚ್ 31 ರೊಳಗೆ ಉತ್ತರ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ಸೇರಿದಂತೆ ಹಲವು ರಾಜ್ಯಗಳಿಗೆ ಬಿಡುಗಡೆ ಮಾಡುತ್ತವೆ.
- ಹಣವನ್ನು ಕೇಂದ್ರ ಸರ್ಕಾರದಿಂದ ತಾತ್ಕಾಲಿಕವಾಗಿ 10% ಅನುದಾನದ ರೂಪದಲ್ಲಿ ವಿತರಿಸಲಾಗುವುದು, ಆದರೆ ಉಳಿದ ವಿತರಣೆಯು ಯೋಜನೆಯಡಿಯಲ್ಲಿ ವಿಧಿಸಲಾದ ವಿವಿಧ ಷರತ್ತುಗಳನ್ನು ಪೂರೈಸುವ ಸಂಬಂಧಿತ ಡಿಸ್ಕಾಮ್‌ಗಳನ್ನು ಅವಲಂಬಿಸಿರುತ್ತದೆ.
ಯೋಜನೆಯ ಬಗ್ಗೆ:
- 3.03 ಲಕ್ಷ ಕೋಟಿ ರೂಪಾಯಿಗಳ ಮೊತ್ತದ ಈ ಯೋಜನೆಯಲ್ಲಿ ಕೇಂದ್ರದ ಪಾಲು ರೂ. 97,631 ಕೋಟಿ ರೂಪಾಯಿಗಳಾಗಿದೆ.
- ಇದು ಡಿಸ್ಕಾಮ್‌ಗಳ (ಖಾಸಗಿ ವಲಯದ ಡಿಸ್ಕಾಂಗಳನ್ನು ಹೊರತುಪಡಿಸಿ) ಕಾರ್ಯಾಚರಣೆಯ ದಕ್ಷತೆ ಮತ್ತು ಆರ್ಥಿಕ ಸ್ಥಿರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಯೋಜನೆಯ ಮುಖ್ಯಾಂಶಗಳು:
- ಇದು ಸುಧಾರಣಾ ಆಧಾರಿತ ಮತ್ತು ಫಲಿತಾಂಶ-ಸಂಬಂಧಿತ ಯೋಜನೆಯಾಗಿದೆ.
- ಖಾಸಗಿ ವಲಯದ ಡಿಸ್ಕಾಮ್‌ಗಳನ್ನು ಹೊರತುಪಡಿಸಿ ಎಲ್ಲಾ DISCOMs / ವಿದ್ಯುತ್ ಇಲಾಖೆಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸಲು ಇದು ಪ್ರಯತ್ನಿಸುತ್ತದೆ.
- ಪೂರೈಕೆ ಮೂಲಸೌಕರ್ಯಗಳನ್ನು (Supply Infrastructure) ಬಲಪಡಿಸಲು DISCOMಗಳಿಗೆ ಷರತ್ತುಬದ್ಧ ಹಣಕಾಸಿನ ನೆರವು ನೀಡಲು ಈ ಯೋಜನೆ ರೂಪಿಸಿದೆ.
- ಪೂರ್ವ ಅರ್ಹತಾ ಮಾನದಂಡಗಳನ್ನು ಪೂರೈಸುವ ಜೊತೆಗೆ ತಳಮಟ್ಟದಲ್ಲಿ ಕನಿಷ್ಠ ಮಾನದಂಡಗಳನ್ನು ಪೂರೈಸುವ DISCOMಗಳ ಸಾಧನೆಯ ಆಧಾರದ ಮೇಲೆ ನೆರವು ನೀಡಲಾಗುವುದು.
- ಯೋಜನೆಯಡಿಯಲ್ಲಿ, ವಿದ್ಯುತ್ ಫೀಡರ್ನಿಂದ ಗ್ರಾಹಕ ಹಂತದವರೆಗೆ ವಿತರಣಾ ವಲಯದಲ್ಲಿ ‘ಕಡ್ಡಾಯ ಸ್ಮಾರ್ಟ್ ಮೀಟರಿಂಗ್ ಪರಿಸರ ವ್ಯವಸ್ಥೆ’ ಅನ್ನು ಸೇರಿಸಲಾಗಿದೆ – ಇದು ಸುಮಾರು 250 ಮಿಲಿಯನ್ ಕುಟುಂಬಗಳನ್ನು ಒಳಗೊಳ್ಳುತ್ತದೆ.
- ಸಂಪರ್ಕವಿಲ್ಲದ ಫೀಡರ್ಗಳಿಗಾಗಿ ಫೀಡರ್ ವರ್ಗೀಕರಣಕ್ಕೆ ಧನಸಹಾಯವನ್ನು ಈ ಯೋಜನೆ ಕೇಂದ್ರೀಕರಿಸುತ್ತದೆ.
- ಈ ಯೋಜನೆಯಲ್ಲಿ, ಫೀಡರಗಳ ಸೌರೀಕರಣವು ನೀರಾವರಿಗಾಗಿ ಹಗಲಿನಲ್ಲಿ ಅಗ್ಗದ / ಉಚಿತ ವಿದ್ಯುತ್ ಒದಗಿಸುತ್ತದೆ ಮತ್ತು ರೈತರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ.
ಅನುಷ್ಠಾನ:
- ಅಸ್ತಿತ್ವದಲ್ಲಿರುವ ವಿದ್ಯುತ್ ಕ್ಷೇತ್ರದ ಸುಧಾರಣಾ ಯೋಜನೆಗಳಾದ ಇಂಟಿಗ್ರೇಟೆಡ್ ಪವರ್ ಡೆವಲಪ್ಮೆಂಟ್ ಸ್ಕೀಮ್, ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (DDUGJY), ಮತ್ತು ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ ಈ ಅಂಬ್ರೆಲಾ ಕಾರ್ಯಕ್ರಮದಲ್ಲಿ ವಿಲೀನಗೊಳಿಸಲಾಗುವುದು.
- ಪ್ರತಿಯೊಂದು ರಾಜ್ಯವು ‘ಒಂದು-ಗಾತ್ರ-ಎಲ್ಲರಿಗೂ-ಸರಿಹೊಂದುತ್ತದೆ’ (one-size-fits-all) ವಿಧಾನಕ್ಕಿಂತ ಹೆಚ್ಚಾಗಿ ಯೋಜನೆಯ ಅನುಷ್ಠಾನಕ್ಕೆ ತನ್ನದೇ ಆದ ಕ್ರಿಯಾ ಯೋಜನೆಯನ್ನು ಹೊಂದಿರುತ್ತದೆ.
- ಯೋಜನೆಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಗ್ರಾಮೀಣ ವಿದ್ಯುದ್ದೀಕರಣ ನಿಗಮ (Rural Electrification Corporation -REC) ಲಿಮಿಟೆಡ್ ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಗಳನ್ನು ನೋಡಲ್ ಏಜೆನ್ಸಿಗಳಾಗಿ ನೇಮಿಸಲಾಗಿದೆ.
ಯೋಜನೆಯ ಉದ್ದೇಶಗಳು:
- 2024-25ರ ವೇಳೆಗೆ ಅಖಿಲ ಭಾರತ ಮಟ್ಟದಲ್ಲಿ ಒಟ್ಟು ತಾಂತ್ರಿಕ ಮತ್ತು ವಾಣಿಜ್ಯ ನಷ್ಟವನ್ನು (aggregate technical and commercial loss- AT&C loss) ಸರಾಸರಿ 12-15% ರಷ್ಟು ಕಡಿಮೆ ಮಾಡುವುದು.
- 2024-25ರ ವೇಳೆಗೆ ವಿದ್ಯುತ್ ವೆಚ್ಚ ಮತ್ತು ಪೂರೈಕೆ-ಬೆಲೆಯ ಅಂತರವನ್ನು ಶೂನ್ಯಕ್ಕೆ ತಗ್ಗಿಸುವುದು.
- ಆಧುನಿಕ ಡಿಸ್ಕಾಮ್‌ಗಳಿಗೆ ಸಾಂಸ್ಥಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು.
- ಆರ್ಥಿಕವಾಗಿ ಸುಸ್ಥಿರ ಮತ್ತು ಕಾರ್ಯಾಚರಣೆಯ ದಕ್ಷ ವಿತರಣಾ ಕ್ಷೇತ್ರದ ಮೂಲಕ ಗ್ರಾಹಕರಿಗೆ ವಿದ್ಯುತ್ ಸರಬರಾಜಿನ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಕೈಗೆಟುಕುವಿಕೆಯನ್ನು ಸುಧಾರಿಸುವುದು.
ಪ್ರಿಲಿಮ್ಸ್‌ಗೆ ಸಂಬಂಧಿಸಿದ ಸಂಗತಿಗಳು:
ಇಸ್ಲಾಮೋಫೋಬಿಯಾವನ್ನು ಎದುರಿಸಲು ಅಂತರಾಷ್ಟ್ರೀಯ ದಿನ:
(International Day to Combat Islamophobia)
- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾರ್ಚ್ 15 ಅನ್ನು ಇಸ್ಲಾಮೋಫೋಬಿಯಾವನ್ನು ಎದುರಿಸುವ ಅಂತರಾಷ್ಟ್ರೀಯ ದಿನವೆಂದು ಘೋಷಿಸಲು ನಿರ್ಣಯವನ್ನು ಅಂಗೀಕರಿಸಿತು.
- ಆದಾಗ್ಯೂ, ಭಾರತವು “ಒಂದು ಧರ್ಮವನ್ನು ಅಂತಾರಾಷ್ಟ್ರೀಯ ದಿನದ ಮಟ್ಟಕ್ಕೆ ಏರಿಸುವ” ಫೋಬಿಯಾ ಬಗ್ಗೆ ಕಳವಳ ವ್ಯಕ್ತಪಡಿಸಿದೆ.












