Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 14ನೇ ಮಾರ್ಚ್ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಮಾರ್ಚ್ 12 ದಂಡಿ ಸತ್ಯಾಗ್ರಹ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಎಜುಕೇಶನ್ ಪ್ಲಸ್‌ಗಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (UDISE+) 2020-21.

2. ಮ್ಯಾನುಯಲ್ ಸ್ಕ್ಯಾವೆಂಜಿಂಗ್.

3. ‘ಅತ್ಯಂತ ಪರಮಾಪ್ತ ರಾಷ್ಟ್ರ’ ಸ್ಥಾನಮಾನ.

4. ಯುದ್ಧಕಾಲದ ಜಿನೀವಾ ಕನ್ವೆನ್ಷನ್ಸ್ ಮಾರ್ಗಸೂಚಿಗಳು.

5. ಭಾರತ – ಕೆನಡಾ ನಡುವೆ CEPA ಪುನರಾರಂಭ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಚಿಲ್ಕಾ ಸರೋವರ.

2. ಮ್ಯೂಸಿಯಂ ಆಫ್ ದಿ ಫ್ಯೂಚರ್.

3. ನ್ಯೂಟ್ರಾಸ್ಯುಟಿಕಲ್ಸ್ ಉತ್ಪನ್ನಗಳು.

4. ಹೈದರಾಬಾದ್‌ನಲ್ಲಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಸ್ವಾತಂತ್ರ್ಯ ಹೋರಾಟ –  ಅದರ ವಿವಿಧ ಹಂತಗಳು ಮತ್ತು ದೇಶದ ವಿವಿಧ ಭಾಗಗಳಿಂದ ಪ್ರಮುಖ ಕೊಡುಗೆದಾರರು ಮತ್ತು ಅವರ ಕೊಡುಗೆಗಳು.

ಮಾರ್ಚ್ 12 ದಂಡಿ ಸತ್ಯಾಗ್ರಹ:

 

ಸಂದರ್ಭ:

1930 ರ ಮಾರ್ಚ್ ನಿಂದ ಏಪ್ರಿಲ್ ವರೆಗೆ ನಡೆದ ದಂಡಿ ಉಪ್ಪಿನ ಸತ್ಯಾಗ್ರಹವು ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಲು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ನಾಗರಿಕ ಅಸಹಕಾರ ಚಳುವಳಿಯಾಗಿದೆ.

 

ದಂಡಿ ಉಪ್ಪಿನ ಸತ್ಯಾಗ್ರಹದ ಕುರಿತು:

ಮಾರ್ಚ್ 12, 1930 ರಂದು, ಮಹಾತ್ಮ ಗಾಂಧಿ, ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋಧಿಸಿ, ತಮ್ಮ 78 ಸಹಚರರೊಂದಿಗೆ ಗುಜರಾತ್‌ನ ಅಹಮದಾಬಾದ್‌ನ ಸಾಬರಮತಿ ಆಶ್ರಮದಿಂದ ರಾಜ್ಯದ ಕರಾವಳಿ ತೀರದ ಐತಿಹಾಸಿಕ ದಾಂಡಿ ಮಾರ್ಚ್ / ದಂಡಿ ಉಪ್ಪಿನ ಸತ್ಯಾಗ್ರಹ ವನ್ನು ಪ್ರಾರಂಭಿಸಿದರು.

 1. ಉಪ್ಪಿನ ಸತ್ಯಾಗ್ರಹವು 12 ಮಾರ್ಚ್ 1930 ರಿಂದ ಆರಂಭಗೊಂಡು 06 ಏಪ್ರಿಲ್ 1930 ರ ವರೆಗೆ ಮುಂದುವರೆಯಿತು.
 2. ಈ 24 ದಿನಗಳ ಪಾದಯಾತ್ರೆಯು ಸಂಪೂರ್ಣವಾಗಿ ಅಹಿಂಸಾತ್ಮಕ ಸ್ವರೂಪದ್ದಾಗಿತ್ತು ಮತ್ತು ಐತಿಹಾಸಿಕವಾಗಿ ಮಹತ್ವದ್ದಾಗಿತ್ತು, ಏಕೆಂದರೆ ಇದು ವ್ಯಾಪಕವಾದ ನಾಗರಿಕ ಅಸಹಕಾರ ಚಳವಳಿಯ ಆರಂಭಕ್ಕೆ ಕಾರಣವಾಯಿತು.
 3. ದಂಡಿಯ ಸಮುದ್ರತೀರವನ್ನು ತಲುಪಿದ ನಂತರ ಮಹಾತ್ಮ ಗಾಂಧಿ ಅಕ್ರಮವಾಗಿ ಉಪ್ಪು ತಯಾರಿಸುವ ಮೂಲಕ ಉಪ್ಪಿನ ಕಾನೂನು ಮುರಿದರು.
 4. ದಂಡಿಯಲ್ಲಿ ಉಪ್ಪನ್ನು ತಯಾರಿಸಿದ ನಂತರ, ಗಾಂಧಿಯವರು ದಂಡಿಯ ದಕ್ಷಿಣಕ್ಕೆ 40 ಕಿಮೀ ದೂರದಲ್ಲಿರುವ ಧರಾಸನಾ ಸಾಲ್ಟ್ ವರ್ಕ್ಸ್‌ಗೆ ತೆರಳಿದರು, ಆದರೆ ಮೇ 5 ರಂದು ಅವರನ್ನು ಬಂಧಿಸಲಾಯಿತು.

 

ಉಪ್ಪಿನ ಸತ್ಯಾಗ್ರಹಕ್ಕೆ ಸಂಬಂಧಿಸಿದ ಸಂಗತಿಗಳು:

 1. ಡಿಸೆಂಬರ್ 1929 ರ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ಪೂರ್ಣ ಸ್ವರಾಜ್ ನಿರ್ಣಯವನ್ನು ಅಂಗೀಕರಿಸಿತು. ಇದನ್ನು ಜನವರಿ 26,1930 ರಂದು ಘೋಷಿಸಲಾಯಿತು ಮತ್ತು ಅದನ್ನು ಸಾಧಿಸುವ ಮಾರ್ಗ ನಾಗರಿಕ ಅಸಹಕಾರ ಚಳವಳಿ (civil disobedience) ಎಂದು ನಿರ್ಧರಿಸಲಾಯಿತು.
 2. ಮಹಾತ್ಮಾ ಗಾಂಧಿಯವರು ಬ್ರಿಟಿಷ್ ಸರ್ಕಾರದ ವಿರುದ್ಧ ಉಪ್ಪಿನ ತೆರಿಗೆಯನ್ನು ಮುರಿಯಲು ಅಹಿಂಸಾ ಮಾರ್ಗವನ್ನು ಆರಿಸಿಕೊಂಡರು.

 

ನಾಗರಿಕ ಅಸಹಕಾರ ಚಳವಳಿಯನ್ನು ಪ್ರಾರಂಭಿಸಲು ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ಏಕೆ ಆಯ್ಕೆ ಮಾಡಿಕೊಂಡರು?

 1. ಪ್ರತಿ ಭಾರತೀಯ ಮನೆಯಲ್ಲೂ ಉಪ್ಪು ಅನಿವಾರ್ಯವಾಗಿತ್ತು, ಆದರೂ ಅದನ್ನು ಹೆಚ್ಚಿನ ಬೆಲೆಗೆ ಅಂಗಡಿಗಳಿಂದ ಖರೀದಿಸಲು ಜನರನ್ನು ಒತ್ತಾಯಿಸಲಾಯಿತು, ಅಲ್ಲದೆ ಜನರು ದೇಶೀಯ ಬಳಕೆಗಾಗಿ ಅಥವಾ ಗೃಹ ಬಳಕೆಗಾಗಿ ಸಹ ಉಪ್ಪನ್ನು ತಯಾರಿಸುವುದನ್ನು ನಿಷೇಧಿಸಲಾಗಿತ್ತು.
 2. ಉಪ್ಪಿನ ಮೇಲೆ ರಾಜ್ಯದ ಏಕಸ್ವಾಮ್ಯದೊಂದಿಗೆ, ಸಾರ್ವಜನಿಕರಲ್ಲಿ ತೀವ್ರ ಕೋಪವಿತ್ತು, ಇದರ ಉದ್ದೇಶದಿಂದ, ಗಾಂಧೀಜಿ ಬ್ರಿಟಿಷ್ ಆಡಳಿತದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನಾಂದೋಲನವನ್ನು ರೂಪಿಸಲು ಯೋಚಿಸಿದರು.
 3. ಉಪ್ಪನ್ನು ಪ್ರತಿಯೊಬ್ಬ ಭಾರತೀಯನಿಗೆ ಮೂಲಭೂತ ಹಕ್ಕು ಇರುವ ವಸ್ತುವಾಗಿ ಪರಿಗಣಿಸಲಾಗಿದ್ದರಿಂದ ಉಪ್ಪನ್ನು ‘ಕಾನೂನು ಅಸಹಕಾರ ಚಳವಳಿಯ’ ಆರಂಭದ ಸಂಕೇತವಾಗಿ ಆಯ್ಕೆಮಾಡಲಾಯಿತು.
 4. ಉಪ್ಪಿನ ಸತ್ಯಾಗ್ರಹದ ಮೂಲಕ ಹಿಂದೂ ಮುಸ್ಲಿಂ ಏಕತೆಯನ್ನು ಸಾಧಿಸಲು ಮಹಾತ್ಮಗಾಂಧೀಜಿಯವರು ಪ್ರಯತ್ನಿಸಿದರು.

 

ದಂಡಿ ಅಥವಾ ಉಪ್ಪಿನ ಸತ್ಯಾಗ್ರಹದ ಫಲಿತಾಂಶಗಳು:

 1. ಮಹಿಳೆಯರು, ದಮನಕ್ಕೆ ಒಳಗಾದ ವರ್ಗ ಸೇರಿದಂತೆ ಸಮಾಜದ ಅನೇಕರು ಒಗ್ಗೂಡಿದರು.
 2. ಸ್ವಾತಂತ್ರ್ಯ ಸಾಧಿಸಲು ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ಈ ಚಳುವಳಿಯು ಅಹಿಂಸಾ ಮಾರ್ಗಕ್ಕೆ ಇರುವ ಶಕ್ತಿಯನ್ನು ತೋರಿಸಿತು.
 3. 1931 ರಲ್ಲಿ, ಮಹಾತ್ಮಾ ಗಾಂಧಿಯವರು ಸೆರೆವಾಸದಿಂದ ಬಿಡುಗಡೆಯಾದರು ಮತ್ತು ನಾಗರಿಕ ಅಸಹಕಾರ ಚಳುವಳಿಯನ್ನು ಕೊನೆಗೊಳಿಸಲು ಬಯಸಿದ್ದ ಲಾರ್ಡ್ ಇರ್ವಿನ್ ಅವರನ್ನು ಭೇಟಿಯಾದರು.
 4. ಇದರ ಪರಿಣಾಮವಾಗಿ ಗಾಂಧಿ-ಇರ್ವಿನ್ ರ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಯಿತು, ನಾಗರಿಕ ಅಸಹಕಾರ ಚಳುವಳಿಯು ಕೊನೆಗೊಂಡಿತು ಮತ್ತು ಭಾರತೀಯರಿಗೆ ಗೃಹಬಳಕೆಗಾಗಿ ಉಪ್ಪನ್ನು ತಯಾರಿಸಲು ಅನುಮತಿಸಲಾಯಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಎಜುಕೇಶನ್ ಪ್ಲಸ್‌ಗಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (UDISE+) 2020-21.


Unified District Information System for Education Plus (UDISE+) 2020-21:

 

ಸಂದರ್ಭ:

ಕೇಂದ್ರ ಶಿಕ್ಷಣ ಸಚಿವಾಲಯವು, ಭಾರತದ ಶಾಲಾ ಶಿಕ್ಷಣದ ಕುರಿತ ಎಜುಕೇಶನ್ ಪ್ಲಸ್‌ಗಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ 2020-21 ರ (Unified District Information System for Education Plus (UDISE+) 2020-21) ಸಮಗ್ರ ವರದಿಯನ್ನು ಬಿಡುಗಡೆ ಮಾಡಿದೆ.

 

UDISE+ ಕುರಿತು:

ಶಾಲೆಗಳಿಂದ ಆನ್‌ಲೈನ್ ಡೇಟಾ ಸಂಗ್ರಹಣೆಯ UDISE+ ವ್ಯವಸ್ಥೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2018-19 ರಲ್ಲಿ ಅಭಿವೃದ್ಧಿಪಡಿಸಿದೆ.

 1. 2012-13 ರಿಂದ ಕಾಗದದ ಸ್ವರೂಪದಲ್ಲಿ ಮಾನವ ಶ್ರಮದ ಮೂಲಕ ಡೇಟಾವನ್ನು ಭರ್ತಿ ಮಾಡುವ ಹಿಂದಿನ ಅಭ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ UDISE ಡೇಟಾ ಸಂಗ್ರಹಣಾ ವ್ಯವಸ್ಥೆಯಲ್ಲಿ ಬ್ಲಾಕ್ ಅಥವಾ ಜಿಲ್ಲಾ ಮಟ್ಟದಲ್ಲಿ ಕಂಪ್ಯೂಟರ್‌ನಲ್ಲಿ ಅದೇ ದತ್ತಾಂಶಗಳನ್ನು ಭರ್ತಿ ಮಾಡುವಲ್ಲಿನ ಸಮಸ್ಯೆಗಳನ್ನು  ನಿವಾರಿಸುವ ಗುರಿಯನ್ನು ಇದು ಹೊಂದಿದೆ.
 2. UDISE+ ವ್ಯವಸ್ಥೆಯಲ್ಲಿ, ವಿಶೇಷವಾಗಿ ಡೇಟಾ ಕ್ಯಾಪ್ಚರ್, ಡೇಟಾ ಮ್ಯಾಪಿಂಗ್ ಮತ್ತು ಡೇಟಾ ಪರಿಶೀಲನೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ.

 

ಈ ವರದಿಯ ಪ್ರಮುಖ ಅಂಶಗಳು:

ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು:

 1. 2020-21ರಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಶಿಕ್ಷಣದ ವರೆಗೆ ದಾಖಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 25.38 ಕೋಟಿ.
 2. 2019-20ರಲ್ಲಿ ಆದ 25.10 ಕೋಟಿ ದಾಖಲಾತಿಗೆ ಹೋಲಿಸಿದರೆ  2020-21 ರಲ್ಲಿ ದಾಖಲಾತಿಗಳ ಸಂಖ್ಯೆಯಲ್ಲಿ 28.32 ಲಕ್ಷ ರಷ್ಟು ಹೆಚ್ಚಳವಾಗಿದೆ.

 

 1. ಒಟ್ಟು ದಾಖಲಾತಿ ಅನುಪಾತ (Gross Enrolment Ratio (GER):

ಭಾಗವಹಿಸುವಿಕೆಯ ಸಾಮಾನ್ಯ ಮಟ್ಟವನ್ನು ಅಳೆಯುವ ಒಟ್ಟು ದಾಖಲಾತಿ ಅನುಪಾತವು (GER), 2019-20 ಕ್ಕೆ ಹೋಲಿಸಿದರೆ ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ 2020-21 ರಲ್ಲಿ ಸುಧಾರಿಸಿದೆ.

 1. 2019-20 ಕ್ಕೆ ಹೋಲಿಸಿದರೆ 2020-21 ರಲ್ಲಿ ಸ್ಥಾನವಾರು ಒಟ್ಟು ದಾಖಲಾತಿ ಅನುಪಾತ (GER): ಉನ್ನತ ಪ್ರಾಥಮಿಕ ಹಂತದಲ್ಲಿ 89.7% ರಿಂದ 92.2%, ಎಲಿಮೆಂಟರಿ ಹಂತದಲ್ಲಿ 97.8% ರಿಂದ 99.1%, ಪ್ರೌಢಶಾಲಾ ಹಂತದಲ್ಲಿ 77.9% ರಿಂದ 79.8% ಮತ್ತು ಉನ್ನತ ಪ್ರೌಢಶಾಲಾ ಹಂತದಲ್ಲಿ 51.4% ರಿಂದ 53.8% ವರೆಗೆ ದಾಖಲಾತಿ ಆಗಿವೆ.
 2. 2020-21ರಲ್ಲಿ 96.96 ಲಕ್ಷ ಶಿಕ್ಷಕರು ಶಾಲಾ ಶಿಕ್ಷಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
 3. 2019-20 ರಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ನಿರತರಾಗಿದ್ದ ಶಿಕ್ಷಕರ ಸಂಖ್ಯೆಗೆ ಹೋಲಿಸಿದರೆ ಇದು ಸುಮಾರು 8800 ರಷ್ಟು ಹೆಚ್ಚಾಗಿದೆ.

 

ವಿದ್ಯಾರ್ಥಿ ಶಿಕ್ಷಕರ ಅನುಪಾತ (The Pupil Teacher Ratio (PTR):

 1. 2020-21 ರಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತವು (PTR) ಪ್ರಾಥಮಿಕ ಶಾಲಾ ಹಂತದಲ್ಲಿ 26 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ, ಉನ್ನತ ಪ್ರಾಥಮಿಕ  ಶಾಲಾ ಹಂತದಲ್ಲಿ 19 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ, ಮಾಧ್ಯಮಿಕ ಶಾಲಾ ಹಂತದಲ್ಲಿ 18 ಮತ್ತು ಉನ್ನತ ಪ್ರೌಢಶಾಲಾ ಹಂತದಲ್ಲಿ 26 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ, ರಂತೆ ಅನುಪಾತವಿತ್ತು 2018-19 ರಿಂದ ಈ ವಿದ್ಯಾರ್ಥಿ-ಶಿಕ್ಷಕರ ಅನುಪಾತದಲ್ಲಿ ಸುಧಾರಣೆಯು ಕಂಡುಬರುತ್ತಿದೆ.
 2. 2018-19ರಲ್ಲಿ ಪ್ರಾಥಮಿಕ, ಉನ್ನತ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಪ್ರೌಢಶಾಲಾ ಹಂತದಲ್ಲಿ  ವಿದ್ಯಾರ್ಥಿ-ಶಿಕ್ಷಕರ ಅನುಪಾತವು ಕ್ರಮವಾಗಿ 28, 20, 21 ಮತ್ತು 30 ಆಗಿತ್ತು.
 3. 2020-21 ರಲ್ಲಿ 12.2 ಕೋಟಿಗೂ ಹೆಚ್ಚು ಹುಡುಗಿಯರು ಪ್ರಾಥಮಿಕ ಮತ್ತು ಉನ್ನತ ಪ್ರೌಢ ಶಾಲೆಗೆ ದಾಖಲಾಗಿದ್ದಾರೆ, ಇದು 2019-20 ರಲ್ಲಿ ಆದ ಬಾಲಿಕೆಯರ ದಾಖಲಾತಿಗೆ ಹೋಲಿಸಿದರೆ 11.8 ಲಕ್ಷ  ರಷ್ಟು ಹೆಚ್ಚು ಬಾಲಕಿಯರು ಶಾಲಾ ಶಿಕ್ಷಣ ವ್ಯವಸ್ಥೆಗೆ ದಾಖಲಾಗಿದ್ದಾರೆ.

 

ಶಾಲಾ ಮೂಲಸೌಕರ್ಯ:

 1. ವಿದ್ಯುತ್ ಸಂಪರ್ಕ ಹೊಂದಿರುವ ಶಾಲೆಗಳು 2020-21ರ ಅವಧಿಯಲ್ಲಿ 57,799 ಶಾಲೆಗಳ ನಿವ್ವಳ ಸೇರ್ಪಡೆಯೊಂದಿಗೆ ಮೆಚ್ಚುಗೆಯ ಪ್ರಗತಿಯನ್ನು ಸಾಧಿಸಿವೆ.
 2. 2018-19 ರ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಹೊಂದಿದ್ದ 73.85% ರಷ್ಟು ಶಾಲೆಗಳಿಗೆ ಹೋಲಿಸಿದರೆ ಈಗ ಒಟ್ಟು ಶಾಲೆಗಳಲ್ಲಿ 84% ಪ್ರತಿಶತದಷ್ಟು ಶಾಲೆಗಳು ಕ್ರಿಯಾತ್ಮಕ ವಿದ್ಯುತ್ ಸೌಲಭ್ಯವನ್ನು ಹೊಂದಿದ್ದು, ಈ ಅವಧಿಯಲ್ಲಿ 10.15% ರಷ್ಟು ಗಮನಾರ್ಹ ಸುಧಾರಣೆಯನ್ನು ತೋರಿಸಿದೆ.
 3. ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿರುವ ಶಾಲೆಗಳ ಶೇಕಡಾವಾರು ಪ್ರಮಾಣ 2019-20 ರಲ್ಲಿದ್ದ 93.7 % ರಿಂದ 2020-21 ರಲ್ಲಿ 95.2 % ಕ್ಕೆ ಹೆಚ್ಚಾಗಿದೆ.
 4. 2019-20 ರಲ್ಲಿದ್ದ 93.2 %ಬಾಲಕಿಯರ ಶೌಚಾಲಯ ಸೌಲಭ್ಯವನ್ನು ಹೊಂದಿರುವ ಶಾಲೆಗಳ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ  2020-21 ರಲ್ಲಿ ಅವುಗಳ ಸಂಖ್ಯೆ 93.91 % ಕ್ಕೆ ಹೆಚ್ಚಿದೆ, 2020-21 ರ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿಯಾಗಿ 11,933 ಶಾಲೆಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.
 5. ಕಾರ್ಯನಿರತ ಕಂಪ್ಯೂಟರ್‌ಗಳನ್ನು ಹೊಂದಿರುವ ಶಾಲೆಗಳ ಸಂಖ್ಯೆಯು  2019-20ರಲ್ಲಿದ್ದ 5.5 ಲಕ್ಷದಿಂದ 2020-21ರಲ್ಲಿ 6 ಲಕ್ಷಕ್ಕೆ ಏರಿಕೆಯಾಗಿದ್ದು, 3% ಹೆಚ್ಚಳವನ್ನು ತೋರಿಸಿದೆ. ಈಗ, 40% ಶಾಲೆಗಳು ಕ್ರಿಯಾತ್ಮಕ ಕಂಪ್ಯೂಟರ್‌ಗಳನ್ನು ಹೊಂದಿವೆ.
 6. ಇಂಟರ್ನೆಟ್ ಸೌಲಭ್ಯ ಹೊಂದಿರುವ ಶಾಲೆಗಳ ಸಂಖ್ಯೆಯು 2019-20ರಲ್ಲಿದ್ದ 3.36 ಲಕ್ಷದಿಂದ 2020-21ರಲ್ಲಿ 3.7 ಲಕ್ಷಕ್ಕೆ 2.6% ಪ್ರತಿಶತ ದೊಂದಿಗೆ ಹೆಚ್ಚಳವಾಗಿದೆ.

 

ಮಕ್ಕಳ ಶಾಲಾ ದಾಖಲಾತಿಯ ಮೇಲೆ COVID-19 ಸಾಂಕ್ರಾಮಿಕದ ಪರಿಣಾಮ:

2020-21ರಲ್ಲಿ ಸರ್ಕಾರಿ ಅನುದಾನಿತ, ಖಾಸಗಿ ಶಾಲೆಗಳ 39.7ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ.

 

ವಿಷಯಗಳು: ಸಮಾಜದ ದುರ್ಬಲ ವರ್ಗಗಳ ರಕ್ಷಣೆ.

ಮ್ಯಾನುಯಲ್ ಸ್ಕ್ಯಾವೆಂಜಿಂಗ್:


(Manual Scavenging)

ಸಂದರ್ಭ:

ಇತ್ತೀಚೆಗೆ, ಮುಂಬೈನಲ್ಲಿ ಚರಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಪದ್ಧತಿ/ ‘ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್’ ಗೆ ನೇಮಕ ಗೊಂಡಿದ್ದ ಮೂವರು ಕಾರ್ಮಿಕರು ‘ಸೆಪ್ಟಿಕ್ ಟ್ಯಾಂಕ್’ ನಲ್ಲಿ ವಿಷಕಾರಿ ಹೊಗೆಯ ಸೇವನೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

 1. ಭಾರತದಲ್ಲಿ ‘ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್’ ಅನ್ನು ನಿಷೇಧಿಸಲಾಗಿದ್ದರೂ, ದೇಶದ ಹಲವು ಭಾಗಗಳಲ್ಲಿ ಈ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ.

 

‘ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್’ ಎಂದರೇನು?

ಚರಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಪದ್ಧತಿ/ ‘ಮ್ಯಾನುಯಲ್ ಸ್ಕ್ಯಾವೆಂಜಿಂಗ್’ ಎಂದರೆ ಯಾವುದೇ ವಿಶೇಷ ರಕ್ಷಣಾ ಸಾಧನಗಳಿಲ್ಲದೆ ತನ್ನ ಸ್ವಂತ ಕೈಗಳಿಂದ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ನಿಂದ ಮಾನವ ಮಲವನ್ನು (human excreta) ಸ್ವಚ್ಛಗೊಳಿಸುವ ಅಥವಾ ಅಂತಹ ತ್ಯಾಜ್ಯವನ್ನು ತನ್ನ ತಲೆಯ ಮೇಲೆ ಸಾಗಿಸುವ ಅಭ್ಯಾಸ ವಾಗಿದೆ.

 1. ‘ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ, 2013’ (Prohibition of Employment as Manual Scavengers and their Rehabilitation Act, 2013 – PEMSR) ಅಡಿಯಲ್ಲಿ ಈ ಅಭ್ಯಾಸವನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
 2. ಈ ಕಾಯಿದೆಯು ಚರಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಪದ್ಧತಿಯನ್ನು “ಅಮಾನವೀಯ ಅಭ್ಯಾಸ” ಎಂದು ವಿವರಿಸಿದೆ ಮತ್ತು “ಮಾನವ ಸ್ಕ್ಯಾವೆಂಜರ್‌ಗಳು ಅನುಭವಿಸಿದ ಐತಿಹಾಸಿಕ ಅನ್ಯಾಯ ಮತ್ತು ಅವಮಾನವನ್ನು ಸರಿಪಡಿಸುವ” ಅಗತ್ಯವನ್ನು ಉಲ್ಲೇಖಿಸುತ್ತದೆ.

 

ಭಾರತದಲ್ಲಿ ‘ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್’ ಅಭ್ಯಾಸ ಇನ್ನೂ ಮುಂದುವರೆಯಲು ಕಾರಣಗಳು:

 1. ಕಾಯ್ದೆ ಜಾರಿಯ ಕೊರತೆ.
 2. ಕೌಶಲ್ಯರಹಿತ ಕಾರ್ಮಿಕರ ಶೋಷಣೆ.
 3. ಜಾತಿ, ವರ್ಗ ಮತ್ತು ಆದಾಯದ ವಿಭಜನೆಯಿಂದ ಪ್ರೇರಿತವಾದ ಪದ್ಧತಿ.

 

ಸಾಂವಿಧಾನಿಕ ಖಾತರಿ:

ಸಂವಿಧಾನದ 21 ನೇ ವಿಧಿಯು ಎಲ್ಲ ವ್ಯಕ್ತಿಗಳಿಗೂ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಈ ಹಕ್ಕು ನಾಗರಿಕರಿಗೆ ಮತ್ತು ನಾಗರಿಕರಲ್ಲದವರಿಗೆ ಲಭ್ಯವಿದೆ. ಆದ್ದರಿಂದ ‘ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್’ ಪದ್ಧತಿಯ ನಿಷೇಧವನ್ನು ಅಕ್ಷರಶಃ ಜಾರಿಗೆ ತರಬೇಕು.

 

ತೆಗೆದುಕೊಳ್ಳಲಾದ ಇತರ ಕ್ರಮಗಳು:

‘ಮ್ಯಾನ್ಯುಯಲ್ ಸ್ಕ್ಯಾವೆಂಜರ್’ಗಳಾಗಿ ಕೆಲಸ ಮಾಡುವ 90% ಕ್ಕಿಂತ ಹೆಚ್ಚು ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರು, ಆದ್ದರಿಂದ ‘ದೌರ್ಜನ್ಯ ತಡೆ ಕಾಯಿದೆ, 1989’  (Prevention of Atrocities Act, 1989) ಜಾರಿಯ ನಂತರ ಅದು ‘ನೈರ್ಮಲ್ಯ ಕಾರ್ಮಿಕರ’ ಏಕೀಕೃತ ಕಾವಲುಗಾರನಾಗಿ ಮಾರ್ಪಟ್ಟಿದೆ.ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ನಿರ್ದಿಷ್ಟ ಸಾಂಪ್ರದಾಯಿಕ ಆಚರಣೆಗಳಿಂದ ಮುಕ್ತಗೊಳಿಸಲು ಈ ಕಾಯಿದೆಯು ಪ್ರಮುಖ ಮೈಲಿಗಲ್ಲಾಗಿದೆ.

ಸಫಾಯಿಮಿತ್ರ ಸುರಕ್ಷಾ ಚಾಲೆಂಜ್: ಇದನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2020 ರಲ್ಲಿ ವಿಶ್ವ ಶೌಚಾಲಯ ದಿನದಂದು (ನವೆಂಬರ್ 19) ಪ್ರಾರಂಭಿಸಿತು.

‘ಸ್ವಚ್ಛತಾ ಅಭಿಯಾನ ಆ್ಯಪ್’: ಕೊಳಕು ಶೌಚಾಲಯಗಳು ಮತ್ತು ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ಡೇಟಾವನ್ನು ಗುರುತಿಸಲು ಮತ್ತು ಜಿಯೋಟ್ಯಾಗ್ ಮಾಡಲು ಇದನ್ನು ಅಭಿವೃದ್ಧಿಪಡಿಸಲಾಗಿದೆ, ಇದರಿಂದಾಗಿ ನಿರ್ಮಲ ಶೌಚಾಲಯಗಳನ್ನು ಸ್ಯಾನಿಟರಿ ಲ್ಯಾಟ್ರಿನ್‌ಗಳೊಂದಿಗೆ ಬದಲಾಯಿಸಬಹುದು ಮತ್ತು ಎಲ್ಲಾ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ಪುನರ್ವಸತಿ ಕಲ್ಪಿಸಿ ಅವರಿಗೆ ಘನತೆಯ ಜೀವನವನ್ನು ಒದಗಿಸಬಹುದು.

ಸುಪ್ರೀಂಕೋರ್ಟ್ ತೀರ್ಪು: 2014 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 1993 ರಿಂದ ಒಳಚರಂಡಿ ಕಾಮಗಾರಿಯಲ್ಲಿ ಸಾವನ್ನಪ್ಪಿದ ಎಲ್ಲರನ್ನು ಗುರುತಿಸಿ ಅವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ನೀಡುವುದು ಸರ್ಕಾರದ ಕಡ್ಡಾಯವಾದ ಆದ್ಯ ಕರ್ತವ್ಯವಾಗಿದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು

‘ಅತ್ಯಂತ ಪರಮಾಪ್ತ ರಾಷ್ಟ್ರ’ ಸ್ಥಾನಮಾನ:


(‘Most favoured nation’ status)

ಸಂದರ್ಭ:

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕಾರಣದಿಂದಾಗಿ ಅದಕ್ಕೆ ನೀಡಿರುವ “ಅತ್ಯಂತ ಪರಮಾಪ್ತ ರಾಷ್ಟ್ರ” (MFN) ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್, ಬ್ರಿಟನ್, ಕೆನಡಾ ಮತ್ತು ಜಪಾನ್ ಜಂಟಿಯಾಗಿ   ಯೋಜಿಸುತ್ತಿವೆ.

 

ಅತ್ಯಂತ ಪರಮಾಪ್ತ ರಾಷ್ಟ್ರ (MFN) ಕುರಿತು:

ಮೋಸ್ಟ್ ಫೇವರ್ಡ್ ನೇಷನ್ ಎನ್ನುವುದು ಇತರ ವ್ಯಾಪಾರ ಪಾಲುದಾರರಿಗೆ ಹೋಲಿಸಿದರೆ ಎರಡು ದೇಶಗಳ ನಡುವೆ ತಾರತಮ್ಯ ರಹಿತ ವ್ಯಾಪಾರವನ್ನು ಖಚಿತಪಡಿಸಿಕೊಳ್ಳಲು ವ್ಯಾಪಾರ ಪಾಲುದಾರರಿಗೆ ನೀಡಲಾದ ವಿಶೇಷ ವ್ಯವಸ್ಥೆಯಾಗಿದೆ.

WTO ನಿಯಮಗಳ ಅಡಿಯಲ್ಲಿ, ಸದಸ್ಯ ರಾಷ್ಟ್ರವು ತನ್ನ ವ್ಯಾಪಾರ ಪಾಲುದಾರರ ನಡುವೆ ತಾರತಮ್ಯ ಮಾಡುವಂತಿಲ್ಲ. ವ್ಯಾಪಾರ ಪಾಲುದಾರರಿಗೆ ವಿಶೇಷ ಸ್ಥಾನಮಾನವನ್ನು ನೀಡಿದರೆ, ಅದನ್ನು WTO ನ ಎಲ್ಲಾ ಸದಸ್ಯರಿಗೆ ವಿಸ್ತರಿಸಬೇಕು.

 

MFN ಸ್ಥಿತಿ ಎಂದರೆ ‘ಆದ್ಯತೆಯ ನಡವಳಿಕೆ’ ಎಂದರ್ಥವೇ?

ಅಕ್ಷರಶಃ ವ್ಯಾಖ್ಯಾನದಲ್ಲಿ, ‘ಮೋಸ್ಟ್ ಫೇವರ್ಡ್ ನೇಷನ್’ (MFN) ಎಂದರೆ ‘ಪ್ರಾಶಸ್ತ್ಯದ ವ್ಯವಹರಣೆ’ ಎಂದಲ್ಲ. ಬದಲಿಗೆ, ಇದು ‘ತಾರತಮ್ಯರಹಿತ ವ್ಯಾಪಾರ’ವನ್ನು ಉಲ್ಲೇಖಿಸುತ್ತದೆ, ಇದು MFN ಸ್ಥಾನಮಾನವನ್ನು ಪಡೆಯುವ ದೇಶವು ಅದನ್ನು ನೀಡಿದ ದೇಶದ ಇತರ ವ್ಯಾಪಾರ ಪಾಲುದಾರರಿಗೆ ಹೋಲಿಸಿದರೆ ಅನನುಕೂಲತೆಯನ್ನು ಹೊಂದಿಲ್ಲ ಎಂದು ಖಚಿತಪಡಿಸುತ್ತದೆ.

 1. ಒಂದು ದೇಶಕ್ಕೆ MFN ಸ್ಥಾನಮಾನವನ್ನು ನೀಡಿದಾಗ, ಅದು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಸುಂಕಗಳನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
 2. ಈ ಸ್ಥಿತಿಯು ಪಾಲುದಾರರ ನಡುವೆ ಮಾರುಕಟ್ಟೆಗಳನ್ನು ತೆರೆಯುವ ನಿರೀಕ್ಷೆಯಿದೆ, ಇದು ಸರಕುಗಳ ಹೆಚ್ಚಿನ ವ್ಯಾಪಾರ ಮತ್ತು ಸರಕುಗಳ ಮುಕ್ತ ಹರಿವಿಗೆ ಅವಕಾಶ ನೀಡುತ್ತದೆ.

 

MFN ಸ್ಥಾನಮಾನವನ್ನು ಹಿಂತೆಗೆದು ಕೊಳ್ಳುವುದು:

‘ಮೋಸ್ಟ್ ಫೇವರ್ಡ್ ನೇಷನ್’ (MFN) ಸ್ಥಿತಿಯನ್ನು ಅಮಾನತುಗೊಳಿಸಲು ಯಾವುದೇ ಔಪಚಾರಿಕ ಕಾರ್ಯವಿಧಾನವನ್ನು ನಿಗದಿಪಡಿಸಲಾಗಿಲ್ಲ ಮತ್ತು ಸದಸ್ಯ ರಾಷ್ಟ್ರಗಳು ಹಾಗೆ ಮಾಡಿದರೆ ‘WTO’ ಗೆ ತಿಳಿಸಲು ಬಾಧ್ಯತೆ ಇದೆಯೇ ಎಂಬುದು ಅಸ್ಪಷ್ಟವಾಗಿದೆ.

 1. ಪಾಕಿಸ್ತಾನ ಮೂಲದ ಇಸ್ಲಾಮಿಸ್ಟ್ ಗುಂಪಿನ ಆತ್ಮಹತ್ಯಾ ದಾಳಿಯಲ್ಲಿ 40 ಭಾರತೀಯ ಪೊಲೀಸರು ಸಾವನ್ನಪ್ಪಿದ ನಂತರ ಭಾರತವು 2019 ರಲ್ಲಿ ಪಾಕಿಸ್ತಾನಕ್ಕೆ ನೀಡಿದ್ದ MFN ಸ್ಥಾನಮಾನವನ್ನು ಅಮಾನತುಗೊಳಿಸಿತು. ಪಾಕಿಸ್ತಾನ ಎಂದಿಗೂ ಭಾರತಕ್ಕೆ MFN ಸ್ಥಾನಮಾನವನ್ನು ನೀಡಿಲ್ಲ.

 

MFN ಸ್ಥಿತಿಯ ಪ್ರಯೋಜನಗಳು:

 1. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮೋಸ್ಟ್ ಫೇವರ್ಡ್ ನೇಷನ್ (MFN) ಸ್ಥಿತಿ ಬಹಳ ಪ್ರಯೋಜನಕಾರಿಯಾಗಿದೆ.
 2. ಈ ಸ್ಥಿತಿಯು ವ್ಯಾಪಾರದ ಸರಕುಗಳಿಗೆ ವ್ಯಾಪಕ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತದೆ.
 3. ಅತ್ಯಂತ ಕಡಿಮೆ ಸುಂಕಗಳು ಮತ್ತು ವ್ಯಾಪಾರ ಅಡೆತಡೆಗಳು ರಫ್ತು ಸರಕುಗಳ ಕಡಿಮೆ ಬೆಲೆಗೆ ಕಾರಣವಾಗುತ್ತವೆ.
 4. ಹೆಚ್ಚು ಸ್ಪರ್ಧಾತ್ಮಕ ವ್ಯಾಪಾರಕ್ಕೆ ಕಾರಣವಾಗುತ್ತದೆ.
 5. ಈ ಸ್ಥಿತಿಯು ಅಧಿಕಾರಶಾಹಿ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲಾ ಆಮದುಗಳಿಗೆ ಸಮಾನವಾಗಿ ವಿವಿಧ ಸುಂಕಗಳನ್ನು ಅನ್ವಯಿಸಲು ಅನುವು ಮಾಡಿಕೊಡುತ್ತದೆ.
 6. ಇದು ಸರಕುಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆ ಮತ್ತು ರಫ್ತು ವಲಯಕ್ಕೆ ಉತ್ತೇಜನವನ್ನು ಹೆಚ್ಚಿಸುತ್ತದೆ.
 7. MFN ಸ್ಥಿತಿಯು ವ್ಯಾಪಾರ ರಕ್ಷಣೆಯ ಕಾರಣದಿಂದಾಗಿ ಆರ್ಥಿಕತೆಯ ಮೇಲೆ ಉಂಟಾದ ನಕಾರಾತ್ಮಕ ಪ್ರಭಾವವನ್ನು ಸರಿಪಡಿಸುತ್ತದೆ.

 

MFN ಸ್ಥಿತಿಯ ಅನನುಕೂಲಗಳು:

 1. ಇದರ ಮುಖ್ಯ ಅನನುಕೂಲವೆಂದರೆ MFN ಸ್ಥಿತಿಯ ದೇಶವು WTO ಸದಸ್ಯರಾಗಿರುವ ಎಲ್ಲಾ ಇತರ ವ್ಯಾಪಾರ ಪಾಲುದಾರರನ್ನು ಸಮಾನವಾಗಿ ಪರಿಗಣಿಸಬೇಕು ಎಂಬುದಾಗಿದೆ.
 2. ಈ ಸ್ಥಿತಿಯು ಬೆಲೆ ಸಮರ ಮತ್ತು ಅದರ ಪರಿಣಾಮವಾಗಿ ದೇಶೀಯ ಉದ್ಯಮದ ದುರ್ಬಲತೆಗೆ ಪರಿವರ್ತಿಸುತ್ತದೆ.
 3. MFN ಸ್ಥಿತಿಯ ದೇಶವು ದೇಶೀಯ ಉದ್ಯಮವನ್ನು ಅಗ್ಗದ ಆಮದುಗಳಿಂದ ರಕ್ಷಿಸಲು ಸಾಧ್ಯವಾಗುವುದಿಲ್ಲ, ಮತ್ತು ಈ ಬೆಲೆ ಸಮರದಲ್ಲಿ, ಕೆಲವು ದೇಶೀಯ ಉದ್ಯಮಗಳು ಭಾರೀ ನಷ್ಟ ಅಥವಾ ಅಭಿವೃದ್ಧಿ ನಿರ್ಬಂಧಗಳನ್ನು ಎದುರಿಸುತ್ತವೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಯುದ್ಧಕಾಲದ ಜಿನೀವಾ ಕನ್ವೆನ್ಷನ್ಸ್ ಮಾರ್ಗಸೂಚಿಗಳು:


(The Geneva Conventions guidelines during wartime)

 

ಸಂದರ್ಭ:

ಫೆಬ್ರವರಿ 24 ರಿಂದ ಪ್ರಾರಂಭವಾದ ಉಕ್ರೇನ್‌ನ ಮೇಲೆ ರಷ್ಯಾದ ಸಶಸ್ತ್ರ ಆಕ್ರಮಣವು ಉಕ್ರೇನಿಯನ್ ನೆಲದ ಮೇಲಿನ ಹಗೆತನದಲ್ಲಿ ಸ್ಥಿರವಾದ ಉಲ್ಬಣವನ್ನು ಉಂಟುಮಾಡಿದೆ ಮತ್ತು ಅನೇಕ ಸಂದರ್ಭಗಳಲ್ಲಿ ನಾಗರಿಕ ಮೂಲಸೌಕರ್ಯ ಮತ್ತು ಹೋರಾಟಗಾರರಲ್ಲದವರ ಮೇಲೆ ಪರಿಣಾಮ ಬೀರಿದೆ.

 

 1. ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯದ ಸುತ್ತ ಕಳವಳಗಳು ಹೆಚ್ಚುತ್ತಿವೆ.

ಮುಂದಿನ ನಡೆ ಏನು?

ನಾಗರಿಕ ಜನಸಂಖ್ಯೆಯಲ್ಲಿನ ಸಾವುನೋವುಗಳ ಪುರಾವೆಗಳು ಹೆಚ್ಚುತ್ತಲೇ ಇರುವುದರಿಂದ, ಆಕ್ರಮಣಕಾರಿ ರಷ್ಯಾದ ಪಡೆಗಳನ್ನು ಹಿಡಿದಿಟ್ಟುಕೊಳ್ಳುವ ಮಾನದಂಡಗಳಿಗಾಗಿ ಜಗತ್ತು ಜಿನೀವಾ ಒಪ್ಪಂದಗಳತ್ತ ಹೆಚ್ಚು ಗಮನಹರಿಸುತ್ತದೆ.

 1. ಅಂತಿಮವಾಗಿ, ಯುದ್ಧಾಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು, ನರಮೇಧ ಮತ್ತು ಆಕ್ರಮಣದ ಅಪರಾಧಕ್ಕಾಗಿ ಹೋರಾಟಗಾರರನ್ನು ವಿಚಾರಣೆಗೆ ಒಳಪಡಿಸಲು ಬಲವಾದ ಪ್ರಕರಣವಿದ್ದರೆ, ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ (ICC) ತನಿಖೆ ಮತ್ತು ವಿಚಾರಣೆಗಾಗಿ ಪುರಾವೆಗಳನ್ನು ಸಂಗ್ರಹಿಸುವುದು ಅಚಿಂತ್ಯವಲ್ಲ.

 

ಅವುಗಳು ಯಾವುವು?

ಜಿನೀವಾ ಕನ್ವೆನ್ಶನ್ಸ್ ಸಾರ್ವಜನಿಕ ಅಂತರಾಷ್ಟ್ರೀಯ ಕಾನೂನಿನ ಒಂದು ಘಟಕವಾಗಿದೆ, ಇದನ್ನು ಸಶಸ್ತ್ರ ಸಂಘರ್ಷಗಳ ಮಾನವೀಯ ಕಾನೂನು (Humanitarian Law of Armed Conflicts) ಎಂದೂ ಕರೆಯುತ್ತಾರೆ, ಇದರ ಉದ್ದೇಶವು ಕನಿಷ್ಠ ರಕ್ಷಣೆಗಳು, ಮಾನವೀಯ ಚಿಕಿತ್ಸೆಯ ಮಾನದಂಡಗಳು ಮತ್ತು ಸಶಸ್ತ್ರ ಸಂಘರ್ಷಗಳಿಗೆ ಬಲಿಯಾದ ವ್ಯಕ್ತಿಗಳಿಗೆ ಗೌರವದ ಮೂಲಭೂತ ಖಾತರಿಗಳನ್ನು ಒದಗಿಸುವುದು.

 

ಇಂದಿನ ಅನಿಶ್ಚಿತತೆಯ ಜಗತ್ತಿನಲ್ಲಿ ಜಿನೀವಾ ಒಪ್ಪಂದಗಳ ಪ್ರಾಮುಖ್ಯತೆ:

ರಾಷ್ಟ್ರಗಳ ನಡುವಿನ ಯುದ್ಧದಂತಹ ಸ್ಥಳಗಳಲ್ಲಿಯೂ ಸಹ ಪ್ರತಿ ವ್ಯಕ್ತಿಯ ಕುರಿತು ಗಮನಹರಿಸಲು ಜಿನೀವಾ ಒಪ್ಪಂದವು ನಮಗೆ ನೆನಪಿಸುತ್ತದೆ.

ಒಪ್ಪಂದವು ಯುದ್ಧದ ಪರಿಸ್ಥಿತಿಯಲ್ಲಿ ಸೆರೆಹಿಡಿಯಲ್ಪಟ್ಟ ಕೈದಿಗಳ ಚಿಕಿತ್ಸೆಗಾಗಿ ನಿಯಮಗಳನ್ನು ನಿಗದಿಪಡಿಸಿದೆ, ಯುದ್ಧ ಕೈದಿಗಳು (ಪಿಒಡಬ್ಲ್ಯುಗಳು) ಅವರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯ ಕೈದಿಗಳಾಗಿರುತ್ತಾರೆಯೇ ಹೊರತು ಅವರನ್ನು ವಶಪಡಿಸಿಕೊಂಡ ಘಟಕದ ಕೈದಿಗಳಲ್ಲ; ಮತ್ತು ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ಮಾನವೀಯ ಪರಿಸ್ಥಿತಿಗಳಲ್ಲಿ ಬದುಕಲು ಅವಕಾಶ ನೀಡಬೇಕು.

ಯುದ್ಧ ಕೈದಿಗಳು ತಮ್ಮ ಹೆಸರುಗಳು ಮತ್ತು ಶ್ರೇಯಾಂಕಗಳನ್ನು ಮಾತ್ರ ಸತ್ಯವಾಗಿ ನೀಡಬೇಕು ಮತ್ತು ಅವರು ತಮ್ಮನ್ನು ಅಥವಾ ಅವರು ತೊಡಗಿಸಿಕೊಂಡಿರುವ ಕಾರ್ಯಾಚರಣೆಗಳ ಬಗ್ಗೆ ಇತರ ವಿವರಗಳನ್ನು ಬಹಿರಂಗಪಡಿಸಲು ಒತ್ತಾಯಿಸಲಾಗುವುದಿಲ್ಲ ಎಂದು ಪ್ರೋಟೋಕಾಲ್ ಸ್ಥಾಪಿಸಿತು.

ಈ ಎಲ್ಲಾ ಎಚ್ಚರಿಕೆಗಳು ವ್ಯಕ್ತಿಯನ್ನು ಮಾನವೀಯತೆಯ ಲಿಂಚ್ಪಿನ್ ಎಂದು ಸ್ಥಾಪಿಸುವುದು.

ಮೂಲತಃ ಕಾದಾಳಿಗಳ (combatants) ಚಿಕಿತ್ಸೆಯನ್ನು ಮಾತ್ರ ಉದ್ದೇಶಿಸಿರುವ ಜಿನೀವಾ ಒಪ್ಪಂದಗಳು ನಂತರ ಹೋರಾಟಗಾರರಲ್ಲದವರು ಮತ್ತು ನಾಗರಿಕರನ್ನು ಇದರಲ್ಲಿ ಸೇರಿಸುವ ಮೂಲಕ ಇದರ ಪ್ರತಿಯನ್ನು ವಿಸ್ತರಿಸಲಾಯಿತು.

 

ಮೇಲ್ವಿಚಾರಣೆ:

ಜಿನೀವಾ ಕನ್ವೆನ್ಶನ್ಸ್ “ಸಂರಕ್ಷಿಸುವ ಅಧಿಕಾರಗಳ” ವ್ಯವಸ್ಥೆಯನ್ನು ಹೊಂದಿದ್ದು, ಸಂಘರ್ಷದಲ್ಲಿ ಭಾಗಿಯಾಗಿರುವ ಪಕ್ಷಗಳು ಸಂಪ್ರದಾಯಗಳ ನಿಬಂಧನೆಗಳನ್ನು ಅನುಸರಿಸುತ್ತಿವೆ ಎಂದು ಖಚಿತಪಡಿಸುತ್ತದೆ. ಸೈದ್ಧಾಂತಿಕವಾಗಿ, ಪ್ರತಿ ಪಕ್ಷವು ಸಂಘರ್ಷದ ಪಕ್ಷವಲ್ಲದ ರಾಜ್ಯಗಳನ್ನು ಅವರ “ರಕ್ಷಿಸುವ ಶಕ್ತಿಗಳು” ಎಂದು ಗೊತ್ತುಪಡಿಸಬೇಕು. ಪ್ರಾಯೋಗಿಕವಾಗಿ, ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್ ಸಾಮಾನ್ಯವಾಗಿ ಈ ಪಾತ್ರವನ್ನು ವಹಿಸುತ್ತದೆ.

 

ಜಿನೀವಾ ಸಮಾವೇಶಕ್ಕೆ ದೇಶಗಳು ಸಹಿ ಹಾಕಿದ ದೇಶಗಳು?

ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಸೇರಿದಂತೆ 196 ದೇಶಗಳು ಜಿನೀವಾ ಒಪ್ಪಂದಗಳನ್ನು ಅಂಗೀಕರಿಸಿವೆ.

 1. ಜಿನೀವಾ ಕನ್ವೆನ್ಶನ್‌ಗಳ ನಾಲ್ಕು ಒಪ್ಪಂದಗಳು ಮತ್ತು ಮೊದಲ ಎರಡು ಪ್ರೋಟೋಕಾಲ್‌ಗಳನ್ನು ಸೋವಿಯತ್ ಒಕ್ಕೂಟವು ಅನುಮೋದಿಸಿದೆ, ವರ್ತಮಾನದ ರಷ್ಯಾ ಅಲ್ಲ, ಆದ್ದರಿಂದ ಇಂದಿನ ರಷ್ಯಾದ ಸರ್ಕಾರವು ಸಮಾವೇಶಗಳ ಅಡಿಯಲ್ಲಿ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದನ್ನು  ಸಂಪೂರ್ಣವಾಗಿ  ನಿರಾಕರಿಸುವ ಅಪಾಯವಿದೆ.

 

ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ಭಾರತ – ಕೆನಡಾ ನಡುವೆ CEPA ಪುನರಾರಂಭ:


(Re-launch of CEPA between India – Canada)

 ಸಂದರ್ಭ:

ದ್ವಿಪಕ್ಷೀಯ ವ್ಯಾಪಾರದ ಸಂಪೂರ್ಣ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು   ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (Comprehensive Economic Partnership Agreement (CEPA)) ಮಾತುಕತೆಗಳನ್ನು ಪುನರಾರಂಭಿಸಲು ಭಾರತ – ಕೆನಡಾ ಗಳು ಒಪ್ಪಿಕೊಂಡಿವೆ.

ಎರಡೂ ದೇಶಗಳಿಗೆ ಆರಂಭಿಕ ವಾಣಿಜ್ಯ ಲಾಭವನ್ನು ತರಬಹುದಾದ ಮಧ್ಯಂತರ ಒಪ್ಪಂದ ಅಥವಾ ಆರಂಭಿಕ ಪ್ರಗತಿ ವ್ಯಾಪಾರ ಒಪ್ಪಂದವನ್ನು ಜಾರಿಗೆ ತರುವ ಕುರಿತು (Early Progress Trade Agreement -EPTA) ಎರಡೂ ಪಕ್ಷಗಳು ಪರಿಗಣಿಸುತ್ತಿವೆ.

 

ಅಗತ್ಯತೆ:

ವ್ಯಾಪಾರ ಒಪ್ಪಂದವು ಕ್ಷೇತ್ರಗಳಾದ್ಯಂತ ಸಾಮರ್ಥ್ಯವನ್ನು ಮುಕ್ತ ಗೊಳಿಸುವ ಮೂಲಕ ಸರಕು ಮತ್ತು ಸೇವೆಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

ಭಾರತ-ಕೆನಡಾ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA):

ಸೆಪ್ಟೆಂಬರ್ 2008 ರಲ್ಲಿ, ಭಾರತ-ಕೆನಡಾ CEO ಮಟ್ಟದ ರೌಂಡ್ ಟೇಬಲ್ ಸಭೆಯು ಭಾರತ ಮತ್ತು ಕೆನಡಾ ದ್ವಿಪಕ್ಷೀಯ ವ್ಯಾಪಾರದಲ್ಲಿನ ಗಣನೀಯ ಪ್ರಮಾಣದ ಸುಂಕಗಳನ್ನು ತೆಗೆದುಹಾಕುವ ಮೂಲಕ CEPA ಯಿಂದ ಅಗಾಧವಾಗಿ ಪ್ರಯೋಜನ ಪಡೆಯಬಹುದು ಎಂದು ಶಿಫಾರಸು ಮಾಡಿತು.

 1. CEPA ಸರಕುಗಳ ವ್ಯಾಪಾರ, ಸೇವೆಗಳಲ್ಲಿನ ವ್ಯಾಪಾರ, ಮೂಲದ ನಿಯಮಗಳು, ನೈರ್ಮಲ್ಯ ಮತ್ತು ಫೈಟೊಸಾನಿಟರಿ ಕ್ರಮಗಳು, ವ್ಯಾಪಾರಕ್ಕೆ ತಾಂತ್ರಿಕ ಅಡೆತಡೆಗಳು ಮತ್ತು ಆರ್ಥಿಕ ಸಹಕಾರದ ಇತರ ಕ್ಷೇತ್ರಗಳನ್ನು ಒಳಗೊಂಡಿದೆ.

 

‘ಸಮಗ್ರ ಆರ್ಥಿಕ ಸಹಕಾರ ಒಪ್ಪಂದ'(CECA) ‘ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ'(CEPA) ಮತ್ತು ‘ಮುಕ್ತ ವ್ಯಾಪಾರ ಒಪ್ಪಂದ’ (FTA) ಗಳ ನಡುವಿನ ವ್ಯತ್ಯಾಸ:

CECA ಮತ್ತು CEPA ನಡುವಿನ ಪ್ರಮುಖ “ತಾಂತ್ರಿಕ” ವ್ಯತ್ಯಾಸವೆಂದರೆ CECA ಋಣಾತ್ಮಕ ಪಟ್ಟಿ ಮತ್ತು ಸುಂಕದ ದರ ಕೋಟಾ (TRQ) ಐಟಂಗಳನ್ನು ಹೊರತುಪಡಿಸಿ ಪಟ್ಟಿ ಮಾಡಲಾದ/ಎಲ್ಲಾ ಐಟಂಗಳ ಮೇಲೆ ಹಂತ ಹಂತವಾಗಿ “ಸುಂಕ ಕಡಿತ/ ಸುಂಕದ ತೆಗೆದುಹಾಕುವಿಕೆಯನ್ನು ಮಾತ್ರ ಒಳಗೊಂಡಿರುತ್ತದೆ.

 1. CECA ಅಡಿಯಲ್ಲಿ, ಕಸ್ಟಮ್ಸ್ ಸಹಕಾರ, ಸ್ಪರ್ಧೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಂತಹ ಕ್ಷೇತ್ರಗಳಲ್ಲಿ ವ್ಯಾಪಾರ ಅನುಕೂಲ ಮತ್ತು ಮಾತುಕತೆಗಳನ್ನು ಸಹ ಪರಿಗಣಿಸಬಹುದು.
 2. ಪಾಲುದಾರಿಕೆ ಒಪ್ಪಂದಗಳು ಅಥವಾ ಸಹಕಾರ ಒಪ್ಪಂದಗಳು ಮುಕ್ತ ವ್ಯಾಪಾರ ಒಪ್ಪಂದಗಳಿಗಿಂತ (Free Trade Agreements – FTAs) ಹೆಚ್ಚು ಸಮಗ್ರವಾಗಿರುತ್ತವೆ.
 3. ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA), ವ್ಯವಹಾರದ ನಿಯಂತ್ರಕ ಅಂಶವನ್ನು ಸಹ ನೋಡುತ್ತದೆ ಮತ್ತು ಇದು ನಿಯಂತ್ರಕ ಸಮಸ್ಯೆಗಳನ್ನು ಒಳಗೊಂಡ ಒಪ್ಪಂದಗಳನ್ನು ಸಹ ಒಳಗೊಂಡಿದೆ.

 

 1. CEPA, ಸೇವೆಗಳು ಮತ್ತು ಹೂಡಿಕೆ ಮತ್ತು ಆರ್ಥಿಕ ಪಾಲುದಾರಿಕೆಯ ಇತರ ಕ್ಷೇತ್ರಗಳಲ್ಲಿನ ವ್ಯಾಪಾರವನ್ನು ಸಹ ಒಳಗೊಂಡಿದೆ.
 2. ಆದ್ದರಿಂದ CEPA ಎಂಬುದು CECA ಗಿಂತ ವಿಶಾಲವಾದ ಪದವಾಗಿದೆ ಮತ್ತು ವಿಶಾಲ ವ್ಯಾಪ್ತಿಯನ್ನು ಹೊಂದಿದೆ.
 3. ಸಾಮಾನ್ಯವಾಗಿ, CECA ಯನ್ನು ದೇಶದೊಂದಿಗೆ ಮೊದಲು ಸಹಿ ಮಾಡಲಾಗುತ್ತದೆ ಮತ್ತು ಅದರ ನಂತರ, CEPA ಗಾಗಿ ಮಾತುಕತೆಗಳು ಪ್ರಾರಂಭವಾಗಬಹುದು.
 4. ಇದು ಒಂದು ರೀತಿಯ ಮುಕ್ತ ವ್ಯಾಪಾರ ಒಪ್ಪಂದವಾಗಿದ್ದು, ಇದು ಸೇವೆಗಳು ಮತ್ತು ಹೂಡಿಕೆಗಳಲ್ಲಿನ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆಯ ಇತರ ಕ್ಷೇತ್ರಗಳ ಮೇಲೆ ಮಾತುಕತೆಗಳನ್ನು ಒಳಗೊಳ್ಳುತ್ತದೆ.
 5. ವ್ಯಾಪಾರ ಸುಗಮಗೊಳಿಸುವಿಕೆ ಮತ್ತು ಕಸ್ಟಮ್ಸ್ ಸಹಕಾರ, ಸ್ಪರ್ಧೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಂತಹ ಕ್ಷೇತ್ರಗಳ ಮೇಲೆ ಮಾತುಕತೆಗಳನ್ನು ಸಹ ಇದು ಪರಿಗಣಿಸಬಹುದು.
 6. ಪಾಲುದಾರಿಕೆ ಒಪ್ಪಂದಗಳು ಅಥವಾ ಸಹಕಾರ ಒಪ್ಪಂದಗಳು ಮುಕ್ತ ವ್ಯಾಪಾರ ಒಪ್ಪಂದ (FTA) ಗಳಿಗಿಂತ ಹೆಚ್ಚು ಸಮಗ್ರವಾಗಿವೆ.
 7. CEPA ವ್ಯಾಪಾರದ ನಿಯಂತ್ರಕ ಅಂಶವನ್ನು ಸಹ ನೋಡುತ್ತದೆ ಮತ್ತು ನಿಯಂತ್ರಕ ಸಮಸ್ಯೆಗಳನ್ನು ಒಳಗೊಳ್ಳುವ ಒಪ್ಪಂದವನ್ನು ಒಳಗೊಳ್ಳುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


ಚಿಲ್ಕಾ ಸರೋವರ:

ವಲಸೆ ಹಕ್ಕಿಗಳ ಪ್ರಮುಖ ತಾಣವಾದ ಚಿಲ್ಕಾ ಸರೋವರದ ಮಂಗಳಜೋಡಿ ಪ್ರದೇಶದಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ಬಳಕೆಯನ್ನು ನಿಷೇಧಿಸಲು ಒಡಿಶಾ ಸರ್ಕಾರವು ಪ್ರಸ್ತಾಪಿಸಿದೆ, ಆ ಮೂಲಕ ಬಾನಾಡಿ ಅತಿಥಿಗಳಿಗೆ ಪ್ರತಿ ವರ್ಷ ಆರು ತಿಂಗಳ ಕಾಲ ತೊಂದರೆಯಾಗದ ಪರಿಸರ ವ್ಯವಸ್ಥೆಯನ್ನು ಒದಗಿಸಲು ಉದ್ದೇಶಿಸಿದೆ.

 1. ಮಂಗಳಜೋಡಿಯು ಪಕ್ಷಿಗಳ ಸಂರಕ್ಷಣೆಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟ ಪ್ರಮುಖ ಸ್ಥಳವಾಗಿದೆ.

 

ಚಿಲ್ಕಾ ಸರೋವರದ ಕುರಿತು:

 1. ಚಿಲಿಕಾ (Chilika) ದಕ್ಷಿಣೊತ್ತರ ವಾಗಿ 64 ಕಿ.ಮೀ ಉದ್ದ ಮತ್ತು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ 13.5 ಕಿ.ಮೀ ಅಗಲವಿದೆ.
 2. ಸತ್ಪಾಡಾ ಬಳಿಯ ಆಳವಿಲ್ಲದ ಮತ್ತು ಕಿರಿದಾದ ಕಾಲುವೆಯ ಮೂಲಕ ಈ ಸರೋವರವು ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.
 3. ಈ ಚಾನಲ್‌ನಲ್ಲಿ, ಅನೇಕ ಷೋಲ್‌ಗಳು,(sholas) ಮರಳು ದಿಣ್ಣೆಗಳು, ಮರಳು ದಿಬ್ಬಗಳು ಕಂಡುಬರುತ್ತವೆ, ಇವು ಸರೋವರದ ನೀರಿನ ಹೊರ ಹರಿವನ್ನು ನಿರ್ಬಂಧಿಸುತ್ತವೆ, ಮತ್ತು ಈ ರಚನೆಗಳು ಸಮುದ್ರದ ಉಬ್ಬರವಿಳಿತದ ಹರಿವು ಸರೋವರಕ್ಕೆ ಬರದಂತೆ ತಡೆಯುತ್ತದೆ.
 4. ಚಿಲ್ಕಾ ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಆವೃತ ಪ್ರದೇಶವಾಗಿದೆ.
 5. ಇದು ಭಾರತೀಯ ಉಪಖಂಡದ ವಲಸೆ ಹಕ್ಕಿಗಳಿಗೆ ಅತಿದೊಡ್ಡ ಚಳಿಗಾಲದ ಆವಾಸಸ್ಥಾನವಾಗಿದೆ ಮತ್ತು ಇದು ಅನೇಕ ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ.
 6. 1981 ರಲ್ಲಿ, ರಾಮ್ಸರ್ ಸಮಾವೇಶದ ಅಡಿಯಲ್ಲಿ ಚಿಲಿಕಾ ಸರೋವರವನ್ನು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಮೊದಲ ಭಾರತೀಯ ಜೌಗು ಭೂಮಿ ಎಂದು ಹೆಸರಿಸಲಾಯಿತು.
 7. ಚಿಲಿಕಾದ ಪ್ರಮುಖ ಆಕರ್ಷಣೆ ಇರ್ರಾವಾಡಿ ಡಾಲ್ಫಿನ್‌ಗಳು, ಇದನ್ನು ಸತ್ಪಾಡಾ ದ್ವೀಪದ ಹತ್ತಿರ ಹೆಚ್ಚಾಗಿ ಕಾಣಬಹುದು.
 8. ಈ ಆವೃತ ಪ್ರದೇಶದ ಸರಿಸುಮಾರು 16 ಚದರ ಕಿ.ಮೀ ವ್ಯಾಪ್ತಿಯಲ್ಲಿರುವ ದೊಡ್ಡ ನಲ್ಬಾನ ದ್ವೀಪ (Nalbana Bird Sanctuary) (ರೀಡ್ಸ್ ಅರಣ್ಯ), ವನ್ನು 1987 ರಲ್ಲಿ ‘ಪಕ್ಷಿಧಾಮ’ ಎಂದು ಘೋಷಿಸಲಾಯಿತು.
 9. ಕಾಲಿಜೈ ದೇವಸ್ಥಾನ – ಚಿಲಿಕಾ ಸರೋವರದ ದ್ವೀಪವೊಂದರಲ್ಲಿ ಇದೆ.

 

ಮ್ಯೂಸಿಯಂ ಆಫ್ ದಿ ಫ್ಯೂಚರ್:

 ದುಬೈನಲ್ಲಿರುವ ಮ್ಯೂಸಿಯಂ ಆಫ್ ದಿ ಫ್ಯೂಚರ್ (Museum of the Future) ಅನ್ನು ಇತ್ತೀಚೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಗೊಳಿಸಲಾಯಿತು.

 1. ಮ್ಯೂಸಿಯಂ ಆಫ್ ದಿ ಫ್ಯೂಚರ್ ವು ನವೀನ ಮತ್ತು ಭವಿಷ್ಯದ ಸಿದ್ಧಾಂತಗಳು, ಸೇವೆಗಳು ಮತ್ತು ಉತ್ಪನ್ನಗಳ ಪ್ರದರ್ಶನ ಸ್ಥಳವಾಗಿದೆ.
 2. ಈ ವಸ್ತುಸಂಗ್ರಹಾಲಯದ ಗುರಿಯು ವಿಶೇಷವಾಗಿ ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳಲ್ಲಿ ತಾಂತ್ರಿಕ ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವುದಾಗಿದೆ.

  

ನ್ಯೂಟ್ರಾಸ್ಯುಟಿಕಲ್ಸ್ ಉತ್ಪನ್ನಗಳು:

(Nutraceuticals products)

ನ್ಯೂಟ್ರಾಸ್ಯುಟಿಕಲ್ಸ್ ಎಂಬುದು ವಿಶಾಲ ಅರ್ಥವನ್ನು ಹೊಂದಿರುವ ಪದವಾಗಿದ್ದು, ಆಹಾರದಲ್ಲಿ ಕಂಡುಬರುವ ಮೂಲಭೂತ ಪೌಷ್ಟಿಕಾಂಶದ ಮೌಲ್ಯದ ಜೊತೆಗೆ ಹೆಚ್ಚುವರಿ ಆರೋಗ್ಯ ಪ್ರಯೋಜನಗಳೊಂದಿಗೆ ಆಹಾರ ಮೂಲಗಳಿಂದ ಪಡೆದ ಯಾವುದೇ ಉತ್ಪನ್ನವನ್ನು ವಿವರಿಸಲು ಬಳಸಲಾಗುತ್ತದೆ.

ಸಾಮಾನ್ಯ ಯೋಗಕ್ಷೇಮವನ್ನು ಉತ್ತೇಜಿಸಲು, ರೋಗಲಕ್ಷಣಗಳನ್ನು ನಿಯಂತ್ರಿಸಲು ಮತ್ತು ಮಾರಣಾಂತಿಕ ಪ್ರಕ್ರಿಯೆಗಳನ್ನು ತಡೆಗಟ್ಟಲು ಬಳಸಲಾಗುವ ನಿರ್ದಿಷ್ಟವಲ್ಲದ ಜೈವಿಕ ಚಿಕಿತ್ಸೆಗಳು ಎಂದು ಪರಿಗಣಿಸಬಹುದು.

“ನ್ಯೂಟ್ರಾಸ್ಯುಟಿಕಲ್” ಎಂಬ ಪದವು ಎರಡು ಪದಗಳನ್ನು ಸಂಯೋಜಿಸುತ್ತದೆ – “ಪೌಷ್ಠಿಕಾಂಶ” “nutrient” (ಪೋಷಣೆಯ ಆಹಾರ ಘಟಕ-a nourishing food component) ಮತ್ತು “ಔಷಧಿ” “pharmaceutical” (ವೈದ್ಯಕೀಯ ಔಷಧ -a medical drug).

ಸಂದರ್ಭ:

ಪ್ರವೇಶಿಸಬಹುದಾದ, ಪ್ರಮಾಣಿತ ಮತ್ತು ಕೈಗೆಟುಕುವ ಜೆನೆರಿಕ್ ಔಷಧಿಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಕೇಂದ್ರಗಳು ತನ್ನ ಗ್ರಾಹಕರಿಗೆ ಮಾರಾಟ ಮಾಡಲು ಪ್ರೋಟೀನ್ ಪೌಡರ್ ಮತ್ತು ಬಾರ್, ಮಾಲ್ಟ್ ಆಧಾರಿತ ಆಹಾರ ಪೂರಕಗಳು ಮತ್ತು ಇಮ್ಯುನಿಟಿ ಬಾರ್ ಸೇರಿದಂತೆ ನ್ಯೂಟ್ರಾಸ್ಯುಟಿಕಲ್ಸ್ ಉತ್ಪನ್ನಗಳನ್ನು ತನ್ನ ಕೇಂದ್ರಗಳಲ್ಲಿ ಸೇರಿಸಿಕೊಂಡಿದೆ.

 

ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ:

(International Arbitration Centre in Hyderabad)

ಭಾರತದ ಮುಖ್ಯ ನ್ಯಾಯಮೂರ್ತಿಗಳು ಹೈದರಾಬಾದ್‌ನಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು:

 1. ಇದನ್ನು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆ ಕೇಂದ್ರ ಟ್ರಸ್ಟ್‌ನಿಂದ (IAMC) ಪ್ರಸ್ತಾಪಿಸಲಾಗಿದೆ.
 2. IAMC-ಹೈದರಾಬಾದ್ ವಿವಾದ ಪರಿಹಾರಕ್ಕಾಗಿ ಭಾರತದ ಮೊದಲ ಪರ್ಯಾಯ ಮಧ್ಯಸ್ಥಿಕೆ ಕೇಂದ್ರವಾಗಿದೆ.

ಮಧ್ಯಸ್ಥಿಕೆ (arbitration) ಎಂದರೇನು?

ಮಧ್ಯಸ್ಥಿಕೆಯು ಪರ್ಯಾಯ ವಿವಾದ ಪರಿಹಾರ (ADR) ಕಾರ್ಯವಿಧಾನವಾಗಿದ್ದು, ವಿವಾದದ ಮೇಲೆ ಬಂಧಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಒಬ್ಬ ಅಥವಾ ಹೆಚ್ಚಿನ ಮಧ್ಯಸ್ಥಗಾರರಿಗೆ ಪಕ್ಷಗಳ ಒಪ್ಪಂದದ ಮೂಲಕ ವಿವಾದವನ್ನು ಸಲ್ಲಿಸಲಾಗುತ್ತದೆ.ಮಧ್ಯಸ್ಥಿಕೆಯನ್ನು ಆಯ್ಕೆಮಾಡುವಾಗ, ಪಕ್ಷಗಳು ನ್ಯಾಯಾಲಯಕ್ಕೆ ಹೋಗುವ ಬದಲು ಖಾಸಗಿ ವಿವಾದ ಪರಿಹಾರ ವಿಧಾನವನ್ನು ಆರಿಸಿಕೊಳ್ಳುತ್ತವೆ.

ಸಮನ್ವಯ ( Conciliation) ಎಂದರೇನು?

ಸಮನ್ವಯವು ಸಹ ಪರ್ಯಾಯ ವಿವಾದ ಪರಿಹಾರದ ಒಂದು ಸಾಧನವಾಗಿದೆ, ಅಲ್ಲಿ ಪಕ್ಷಗಳು ತಟಸ್ಥ ಮೂರನೇ ವ್ಯಕ್ತಿಯಂತೆ ಕಾರ್ಯನಿರ್ವಹಿಸುವ ಸಂಧಾನಕಾರನ ಸಹಾಯದಿಂದ ಸೌಹಾರ್ದಯುತವಾಗಿ ವಿವಾದವನ್ನು ಇತ್ಯರ್ಥ ಪಡಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇದೊಂದು ಸ್ವಯಂಪ್ರೇರಿತ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಭಾಗಿಯಾಗಿರುವ ಪಕ್ಷಗಳು ತೀರ್ಮಾನವನ್ನು ಒಪ್ಪಿಕೊಳ್ಳಲು ಮುಕ್ತವಾಗಿರುತ್ತವೆ ಮತ್ತು ರಾಜಿ ಸಂಧಾನದ ಮೂಲಕ ತಮ್ಮ ವಿವಾದವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತವೆ.

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos