Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 11ನೇ ಮಾರ್ಚ್ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ನ್ಯಾಯಾಂಗದಲ್ಲಿ ಮಹಿಳೆಯರು.

2. ರಾಜಕೀಯ ಪಕ್ಷಗಳ ನೋಂದಣಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. RBI ನ $5 ಶತಕೋಟಿ ಡಾಲರ್-ರೂಪಾಯಿ ವಿನಿಮಯದ ಅರ್ಥವೇನು?

2. “ಪ್ರಜಾತಿ ಶ್ರೀಮಂತಿಕೆ” ಸಮೀಕ್ಷೆ.

3. ಭಾರತದಲ್ಲಿ ಹುಲಿ ಸಾಂದ್ರತೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಧರ್ಮ ಗಾರ್ಡಿಯನ್.

2. ಮಂಕಾಡಿಂಗ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು : ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ನ್ಯಾಯಾಂಗದಲ್ಲಿ ಮಹಿಳೆಯರು:


(Women in Judiciary)

 ಸಂದರ್ಭ:

ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 37 ಮಹಿಳೆಯರಲ್ಲಿ 17 ಮಹಿಳೆಯರನ್ನು ಮಾತ್ರ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ, ಉಳಿದ ಶಿಫಾರಸುಗಳು ಇನ್ನೂ ಸರ್ಕಾರದ ಬಳಿ ಬಾಕಿ ಉಳಿದಿವೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಾಮನ್ ಅದನ್ನು “ದುರದೃಷ್ಟಕರ” ಎಂದು ಬಣ್ಣಿಸಿದ್ದಾರೆ.

 

‘ಭಾರತದ ಮುಖ್ಯ ನ್ಯಾಯಾಧೀಶರು’ ನೀಡಿದ ಸಲಹೆಗಳು:

 1. ಮಹಿಳಾ ನ್ಯಾಯಾಧೀಶರ ನೇಮಕವು “ಸಾಂಕೇತಿಕ” ಚಿಹ್ನೆಗಳಿಗೆ ಸೀಮಿತವಾಗಬಾರದು.
 2. ಮಹಿಳಾ ನ್ಯಾಯಾಧೀಶರು ನ್ಯಾಯ ತೀರ್ಮಾನದ ಸಂದರ್ಭದಲ್ಲಿ ತಮ್ಮ ಅಗಾಧ ಅನುಭವವನ್ನು ಧಾರೆ ಎರೆಯುತ್ತಾರೆ ಮತ್ತು ಕೆಲವು ಕಾನೂನುಗಳು ಪುರುಷ ಮತ್ತು ಮಹಿಳೆಯರ ಮೇಲೆ ಬೀರಬಹುದಾದ ವಿವಿಧ ಪರಿಣಾಮಗಳ ಸೂಕ್ಷ್ಮವಾದ ತಿಳುವಳಿಕೆಯನ್ನು ನ್ಯಾಯಾಲಯಕ್ಕೆ ತರುತ್ತಾರೆ.

 

ಭಾರತೀಯ ನ್ಯಾಯಾಂಗದಲ್ಲಿ ಮಹಿಳೆಯರ ಸ್ಥಿತಿ:

 1. ಸರ್ವೋಚ್ಚ ನ್ಯಾಯಾಲಯದ 71 ವರ್ಷಗಳ ಇತಿಹಾಸದಲ್ಲಿ, ಕೇವಲ 11 ಮಹಿಳಾ ನ್ಯಾಯಾಧೀಶರು (ಆಧಾರ – ವಿಕಿಪೀಡಿಯ) ವರಿಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ – ಮೊದಲನೆಯವರು ನ್ಯಾಯಮೂರ್ತಿ ಫಾತಿಮಾ ಬೀವಿ, ಇವರು ವರಿಷ್ಠ ನ್ಯಾಯಾಲಯವು ಸ್ಥಾಪನೆಯಾದ ದಿನಾಂಕದಿಂದ 39 ವರ್ಷಗಳ ಸುದೀರ್ಘ ಅಂತರದ ನಂತರ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು.
 2. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮಂಜೂರಾಗಿರುವ 1,113 ನ್ಯಾಯಾಧೀಶರ ಪೈಕಿ ಕೇವಲ 81 ಮಹಿಳಾ ನ್ಯಾಯಾಧೀಶರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 3. ಮಣಿಪುರ, ಮೇಘಾಲಯ, ಪಾಟ್ನಾ, ತ್ರಿಪುರಾ, ತೆಲಂಗಾಣ ಮತ್ತು ಉತ್ತರಾಖಂಡ ಈ ಆರು ಹೈಕೋರ್ಟ್‌ಗಳಲ್ಲಿ ಹಾಲಿ ಮಹಿಳಾ ನ್ಯಾಯಾಧೀಶರು ಇಲ್ಲ.

 

ಸುಪ್ರೀಂ ಕೋರ್ಟ್‌ನಲ್ಲಿ ವೈವಿಧ್ಯತೆ ಮತ್ತು ಲಿಂಗ ಪ್ರಾತಿನಿಧ್ಯದ ಪ್ರಯೋಜನಗಳು:

 1. ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಸ್ಥಳಗಳಲ್ಲಿ ಮಹಿಳಾ ನ್ಯಾಯಾಧೀಶರನ್ನು ಸೇರಿಸುವುದು ನ್ಯಾಯಾಂಗವನ್ನು ಹೆಚ್ಚು ಪಾರದರ್ಶಕ, ಅಂತರ್ಗತ ಮತ್ತು ಪ್ರಾತಿನಿಧಿಕವಾಗಿ ಗ್ರಹಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ.
 2. ಕೇವಲ ತಮ್ಮ ಉಪಸ್ಥಿತಿಯಿಂದ, ಮಹಿಳಾ ನ್ಯಾಯಾಧೀಶರು ನ್ಯಾಯಾಲಯಗಳ ನ್ಯಾಯಸಮ್ಮತತೆಯನ್ನು ಹೆಚ್ಚಿಸುತ್ತಾರೆ, ನ್ಯಾಯಾಲಯಗಳು ಮುಕ್ತವಾಗಿವೆ ಮತ್ತು ನ್ಯಾಯವನ್ನು ಆಶ್ರಯಿಸಿ ಬರುವವರಿಗೆ ನ್ಯಾಯಾಲಯಗಳು ಸದಾ ತೆರೆದಿರುತ್ತವೆ ಎಂಬ ಪ್ರಬಲ ಸಂಕೇತವನ್ನು ಕಳುಹಿಸುತ್ತಾರೆ.
 3. ಮಹಿಳಾ ನ್ಯಾಯಾಧೀಶರು ಕೇವಲ ನ್ಯಾಯದ ನಿರೀಕ್ಷೆಯನ್ನು ಸುಧಾರಿಸುವುದಕ್ಕಿಂತ ಹೆಚ್ಚಿನ ಕೊಡುಗೆ ನೀಡಬಹುದು: ಅವರು ನಿರ್ಣಯ ಮಾಡುವ ಗುಣಮಟ್ಟಕ್ಕೆ ಮಹತ್ವದ ಕೊಡುಗೆ ನೀಡುವ ಮೂಲಕ ನ್ಯಾಯದ ಗುಣಮಟ್ಟಕ್ಕೆ ಗಣನೀಯ ಕೊಡುಗೆ ನೀಡುತ್ತಾರೆ.
 4. ಕಾನೂನುಗಳು ಮತ್ತು ತೀರ್ಪುಗಳು ಲಿಂಗ ಸ್ಟೀರಿಯೊಟೈಪ್‌ಗಳನ್ನು ಹೇಗೆ ಆಧರಿಸಿರಬಹುದು ಅಥವಾ ಮಹಿಳೆಯರು ಮತ್ತು ಪುರುಷರ ಮೇಲೆ ಹೇಗೆ ವಿಭಿನ್ನ ಪ್ರಭಾವ ಬೀರಬಹುದು ಎಂಬುದನ್ನು ವಿವರಿಸುವ ಮೂಲಕ,ಲಿಂಗ ದೃಷ್ಟಿಕೋನವು ತೀರ್ಪಿನ ನ್ಯಾಯೋಚಿತತೆಯನ್ನು ಹೆಚ್ಚಿಸುತ್ತದೆ.
 5. ಮಹಿಳಾ ನ್ಯಾಯಾಧೀಶರು ತಮ್ಮ ಹಿಂದಿನ ಅನುಭವಗಳನ್ನು ತಮ್ಮ ನ್ಯಾಯಾಂಗ ಕೆಲಸದಲ್ಲಿ ಬಳಸುತ್ತಾರೆ,ಅಂತಹ ಅನುಭವಗಳು ಹೆಚ್ಚು ಸಮಗ್ರ ಮತ್ತು ಸಹಾನುಭೂತಿಯ ವಿಧಾನಕ್ಕೆ ಕಾರಣವಾಗುತ್ತವೆ.
 6. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಸುಧಾರಿಸುವುದು, ಹೆಚ್ಚು ಸಮತೋಲಿತ ಮತ್ತು ಸಹಾನುಭೂತಿಯ ವಿಧಾನವು ಬಹಳ ಮುಖ್ಯವೆಂದು ಸಾಬೀತುಪಡಿಸಬಹುದು.

 

ನ್ಯಾಯಾಂಗ ಕ್ಷೇತ್ರವನ್ನು ಪ್ರವೇಶಿಸಲು ಮಹಿಳೆಯರು ಎದುರಿಸುವ ಸವಾಲುಗಳು:

ಜಿಲ್ಲಾ ನ್ಯಾಯಾಧೀಶರಾಗಿ ಮಹಿಳಾ ನೇಮಕಾತಿಗೆ ಪ್ರಮುಖ ತಡೆಗೋಡೆ ಎಂದರೆ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅರ್ಹತೆಯ ಮಾನದಂಡವಾಗಿದೆ.

 1. ನ್ಯಾಯಾಧೀಶರಾಗಲು,ವಕೀಲರು ಏಳು ವರ್ಷಗಳ ನಿರಂತರ ಕಾನೂನು ಅಭ್ಯಾಸವನ್ನು ಹೊಂದಿರಬೇಕು ಮತ್ತು 35-45 ವಯಸ್ಸಿನ ವ್ಯಾಪ್ತಿಯಲ್ಲಿರಬೇಕು.
 2. ಅನೇಕರು ಈ ವಯಸ್ಸಿನ ವೇಳೆಗೆ ಮದುವೆಯಾಗಿರುವುದರಿಂದ ಮಹಿಳೆಯರಿಗೆ ಈ ಷರತ್ತು ಅನನುಕೂಲವಾಗಿದೆ.

ಇದಲ್ಲದೆ, ಕಾನೂನು ಕ್ಷೇತ್ರದಲ್ಲಿ ದೀರ್ಘ ಮತ್ತು ಕಟ್ಟುನಿಟ್ಟಾದ ಕೆಲಸದ ಸಮಯಗಳು, ಕುಟುಂಬದ ಜವಾಬ್ದಾರಿಗಳೊಂದಿಗೆ ಸೇರಿಕೊಂಡು, ಅನೇಕ ಮಹಿಳೆಯರನ್ನು ವಕೀಲಿ ವೃತ್ತಿಯ ಅಭ್ಯಾಸದಿಂದ ಹೊರಗುಳಿಯುವಂತೆ ಒತ್ತಾಯಿಸುತ್ತದೆ ಮತ್ತು ಅವರು ನಿರಂತರ ಕಾನೂನು ಅಭ್ಯಾಸದ ಅಗತ್ಯವನ್ನು ಪೂರೈಸಲು ವಿಫಲರಾಗುತ್ತಾರೆ.

 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ರಾಜಕೀಯ ಪಕ್ಷಗಳ ನೋಂದಣಿ:


(Registration of political parties)

 ಸಂದರ್ಭ:

ಇತ್ತೀಚೆಗೆ ನಡೆದ 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಏಕೈಕ ಪ್ರಮುಖ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಟ್ರೆಂಡ್‌ಗಳ ಪ್ರಕಾರ, ಪಕ್ಷವು ಪಂಜಾಬ್‌ನಲ್ಲಿ 91 ಸ್ಥಾನಗಳ ಮುನ್ನಡೆಯೊಂದಿಗೆ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ ಮತ್ತು 6% ಮತ ಹಂಚಿಕೆ ಸೇರಿದಂತೆ ಗೋವಾದಲ್ಲಿ ಎರಡು ಸ್ಥಾನಗಳೊಂದಿಗೆ ತನ್ನ ಖಾತೆಯನ್ನು ತೆರೆಯಲು ಸಜ್ಜಾಗಿದೆ.

 

‘ಆಮ್ ಆದ್ಮಿ ಪಕ್ಷ’ ವು ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳಬಹುದೇ?

ಇನ್ನೂ ಇಲ್ಲ.

ಒಂದು ಪಕ್ಷವು ‘ರಾಷ್ಟ್ರೀಯ ಪಕ್ಷ’ ಎಂದು ಗುರುತಿಸಿಕೊಳ್ಳಲು ನಿಗದಿ ಪಡಿಸಲಾದ ಮೂರು ಸೆಟ್ ಮಾನದಂಡಗಳಲ್ಲಿ ಒಂದನ್ನು ಪೂರೈಸುವ ಅಗತ್ಯವಿದೆ – ಮತ್ತು ಇದೀಗ AAP ಅವುಗಳಲ್ಲಿ ಇನ್ನೂ ಯಾವುದನ್ನೂ ಪೂರೈಸುತ್ತಿಲ್ಲ.

 

ರಾಜಕೀಯ ಪಕ್ಷಗಳ ನೋಂದಣಿ:

ರಾಜಕೀಯ ಪಕ್ಷಗಳ ನೋಂದಣಿಯನ್ನು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ( ಜನಪ್ರತಿನಿಧಿ ಕಾಯ್ದೆ) ಸೆಕ್ಷನ್ 29 ಎ ನಿಬಂಧನೆಗಳ ಅಡಿಯಲ್ಲಿ ಮಾಡಲಾಗುತ್ತದೆ.

 1. ರಾಜಕೀಯ ಪಕ್ಷವನ್ನು ನೋಂದಾಯಿಸಲು, ರಚನೆಯಾದ 30 ದಿನಗಳ ಅವಧಿಯಲ್ಲಿ, ಮೇಲಿನ ವಿಭಾಗದ ಅಡಿಯಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಇದಕ್ಕಾಗಿ, ಭಾರತದ ಚುನಾವಣಾ ಆಯೋಗವು ಭಾರತದ ಸಂವಿಧಾನದ 324 ನೇ ವಿಧಿ ಮತ್ತು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ’ ಯ ಸೆಕ್ಷನ್ 29 ಎ ಯಿಂದ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸಲು ಮಾರ್ಗಸೂಚಿಗಳನ್ನು ನೀಡುತ್ತದೆ.

 

ಭಾರತದ ‘ರಾಷ್ಟ್ರೀಯ ರಾಜಕೀಯ ಪಕ್ಷ’ವಾಗಿ ಅರ್ಹತೆ ಪಡೆಯಲು:

 1. ರಾಜಕೀಯ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಬೇಕಾದರೆ, ಯಾವುದೇ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು ಆರು ಪ್ರತಿಶತದಷ್ಟು ಮಾನ್ಯವಾದ ಮತಗಳನ್ನು ಪಡೆಯುವುದು ಕಡ್ಡಾಯವಾಗಿದೆ.
 2. ಅಲ್ಲದೆ, ಇದಕ್ಕಾಗಿ ಯಾವುದೇ ರಾಜ್ಯ ಅಥವಾ ರಾಜ್ಯಗಳಿಂದ ಕನಿಷ್ಠ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.
 3. ಲೋಕಸಭಾ ಚುನಾವಣೆಯಲ್ಲಿ, ಒಟ್ಟು ಲೋಕಸಭಾ ಸ್ಥಾನಗಳಲ್ಲಿ 2 ಪ್ರತಿಶತ (ಪ್ರಸ್ತುತ 543 ಸದಸ್ಯರ ಪೈಕಿ 11 ಸದಸ್ಯರು) ಆ ರಾಜಕೀಯ ಪಕ್ಷದಿಂದ ಗೆದ್ದಿದ್ದರೆ ಮತ್ತು ಈ ಸದಸ್ಯರು ಕನಿಷ್ಠ ಮೂರು ವಿಭಿನ್ನ ರಾಜ್ಯಗಳಿಂದ ಆಯ್ಕೆ ಯಾಗಿರಬೇಕು.

 

ರಾಜ್ಯ ರಾಜಕೀಯ ಪಕ್ಷವಾಗಿ (ಪ್ರಾದೇಶಿಕ ಪಕ್ಷ ) ಅರ್ಹತೆ ಪಡೆಯಲು:

 1. ರಾಜಕೀಯ ಪಕ್ಷವನ್ನು ‘ರಾಜ್ಯ ಮಟ್ಟದ ರಾಜಕೀಯ ಪಕ್ಷ’ ಎಂದು ಗುರುತಿಸಬೇಕಾದರೆ, ರಾಜ್ಯದಲ್ಲಿ ನಡೆಯುವ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇಕಡಾ 6 ರಷ್ಟು ಮಾನ್ಯ ಮತಗಳನ್ನು ಪಡೆಯುವುದು ಕಡ್ಡಾಯವಾಗಿದೆ.
 2. ಇದಲ್ಲದೆ, ಅದು ಸಂಬಂಧಪಟ್ಟ ರಾಜ್ಯದ ವಿಧಾನಸಭೆಯಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಗೆಲ್ಲಬೇಕು.
 3. ರಾಜಕೀಯ ಪಕ್ಷವೊಂದು, ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿ 3 ಪ್ರತಿಶತ ಅಥವಾ 3 ಸ್ಥಾನಗಳು, ಯಾವುದು ಹೆಚ್ಚೋ ಅದನ್ನು ಪಡೆಯಬೇಕು.

 

ಪ್ರಯೋಜನಗಳು:

 1. ‘ರಾಜ್ಯ ಮಟ್ಟದ ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಟ್ಟ ಯಾವುದೇ ನೋಂದಾಯಿತ ಪಕ್ಷವು ಪಕ್ಷಕ್ಕೆ ಕಾಯ್ದಿರಿಸಿದ ಚುನಾವಣಾ ಚಿಹ್ನೆಯನ್ನು ಆಯಾ ರಾಜ್ಯದ ಅಭ್ಯರ್ಥಿಗಳಿಗೆ ಹಂಚುವ ಅರ್ಹತೆಯನ್ನು ಹೊಂದಿದೆ. ಮತ್ತು, ‘ರಾಷ್ಟ್ರೀಯ ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಟ್ಟ ಯಾವುದೇ ನೋಂದಾಯಿತ ಪಕ್ಷವು ಭಾರತದಾದ್ಯಂತ ತನ್ನ ಅಭ್ಯರ್ಥಿಗಳಿಗೆ ಪಕ್ಷಕ್ಕೆ ಕಾಯ್ದಿರಿಸಿದ ಚಿಹ್ನೆಯನ್ನು ನಿಗದಿಪಡಿಸುವ ಅರ್ಹತೆಯನ್ನು ಹೊಂದಿರುತ್ತದೆ.
 2. ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸುವಾಗ ಕೇವಲ ಒಬ್ಬ ಪ್ರಸ್ತಾಪಕರ ಅಗತ್ಯವಿದೆ. ಅಲ್ಲದೆ, ಮತದಾರರ ಪಟ್ಟಿಗಳ ತಿದ್ದುಪಡಿ ಸಮಯದಲ್ಲಿ ಎರಡು ಸೆಟ್ ಮತದಾರರ ಪಟ್ಟಿಗಳನ್ನು ಉಚಿತವಾಗಿ ಪಡೆಯಲು ಅವರಿಗೆ ಅಧಿಕಾರವಿದೆ ಮತ್ತು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಒಂದು ಸೆಟ್ ಮತದಾರರ ಪಟ್ಟಿಯ ಒಂದು ನಕಲು ಪ್ರತಿಯನ್ನು ಸಂಬಂಧಿಸಿದ ಪಕ್ಷದ ಅಭ್ಯರ್ಥಿಗಳು ಉಚಿತವಾಗಿ ಪಡೆಯುತ್ತಾರೆ.
 3. ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅವರಿಗೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
 4. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರ (Star Campaigner) ಪ್ರಯಾಣದ ವೆಚ್ಚವನ್ನು ಆ ಪಕ್ಷದ ಅಭ್ಯರ್ಥಿ ಅಥವಾ ಪಕ್ಷದ ವೆಚ್ಚಗಳಿಗೆ ಸೇರಿಸಲಾಗುವುದಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ , ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

 RBI ನ $5 ಶತಕೋಟಿ ಡಾಲರ್-ರೂಪಾಯಿ ವಿನಿಮಯದ ಅರ್ಥವೇನು?


(What does RBI’s $5 billion dollar-rupee swap mean?)

 ಸಂದರ್ಭ:

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ದ್ರವ್ಯತೆ ನಿರ್ವಹಣೆಯ ಉಪಕ್ರಮದ” (Liquidity Management Initiative) ಭಾಗವಾಗಿ $ 5 ಬಿಲಿಯನ್ ಮೌಲ್ಯದ ‘ಡಾಲರ್-ರೂಪಾಯಿ ಸ್ವಾಪ್’ (Dollar-Rupee Swap Auction) ಹರಾಜನ್ನು ಆಯೋಜಿಸಿದೆ.ಇದರಿಂದಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಡಾಲರ್ ಗಳ ಒಳಹರಿವು ಉಂಟಾಗಿದ್ದು, ರೂಪಾಯಿಯನ್ನು ಆರ್ಥಿಕ ವ್ಯವಸ್ಥೆಯಿಂದ ಹೊರತೆಗೆಯಲಾಗಿದೆ.

 

‘ಡಾಲರ್-ರುಪಾಯಿ ಸ್ವಾಪ್’ ಹರಾಜಿನ ಬಗ್ಗೆ:

‘ಡಾಲರ್-ರೂಪಾಯಿ ಸ್ವಾಪ್’ ಹರಾಜು (Dollar–Rupee Swap auction) ಒಂದು ‘ವಿದೇಶಿ ವಿನಿಮಯ ಸಾಧನ’ (Forex Tool) ವಾಗಿದ್ದು, ಕೇಂದ್ರ ಬ್ಯಾಂಕ್‌ಗಳು ತಮ್ಮ ಕರೆನ್ಸಿಯನ್ನು ಮತ್ತೊಂದು ಕರೆನ್ಸಿಯನ್ನು ಖರೀದಿಸಲು ಅಥವಾ ತಮ್ಮ ಕರೆನ್ಸಿಯನ್ನು ಮತ್ತೊಂದು ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಲು ಬಳಸುತ್ತವೆ.

 

 1. ಡಾಲರ್-ರೂಪಾಯಿ ಖರೀದಿ/ಮಾರಾಟದ ವಿನಿಮಯದಲ್ಲಿ, ಡಾಲರ್‌ಗಳನ್ನು (US ಡಾಲರ್‌ಗಳು ಅಥವಾ US$) ಭಾರತೀಯ ರೂಪಾಯಿಗಳಿಗೆ (INR) ವಿನಿಮಯವಾಗಿ ಕೇಂದ್ರ ಬ್ಯಾಂಕ್‌ ಬ್ಯಾಂಕ್‌ಗಳಿಂದ ಖರೀದಿಸುತ್ತದೆ ಮತ್ತು ನಂತರದ ದಿನಾಂಕದಲ್ಲಿ ‘ಕಾಂಟ್ರಾಸ್ಟ್ ಡೀಲ್’ ಅಂದರೆ ‘ಡಾಲರ್‌ಗೆ ರೂಪಾಯಿಯನ್ನು ಖರೀದಿಸುವುದು’ ಒಪ್ಪಂದವನ್ನು ಡಾಲರ್‌ಗಳನ್ನು ಮಾರಾಟ ಮಾಡುವ ಭರವಸೆಯನ್ನು ನೀಡುವ  ಬ್ಯಾಂಕುಗಳೊಂದಿಗೆ ತಕ್ಷಣವೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

 

ಕೇಂದ್ರ ಬ್ಯಾಂಕ್‌ಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಕಾರಣಗಳು:

ವಿದೇಶೀ ವಿನಿಮಯ (Forex swaps) ವಿನಿಮಯಗಳು ‘ದ್ರವ್ಯ ನಿರ್ವಹಣೆ’ಯಲ್ಲಿ ಸಹಾಯ ಮಾಡುತ್ತವೆ.

ಈ ಪ್ರಕ್ರಿಯೆಯು ಸೀಮಿತ ರೀತಿಯಲ್ಲಿ ಕರೆನ್ಸಿ ದರಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

‘ಡಾಲರ್-ರೂಪಾಯಿ ಖರೀದಿ/ಮಾರಾಟ ಸ್ವಾಪ್’ (Dollar–Rupee Buy/Sell Swap) ನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಡಾಲರ್‌ಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ ಮತ್ತು ಭಾರತೀಯ ರೂಪಾಯಿಯು ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರವೇಶಿಸುತ್ತದೆ ಮತ್ತು ‘ಡಾಲರ್-ರೂಪಾಯಿ ಮಾರಾಟ/ಖರೀದಿ ಸ್ವಾಪ್’ (Dollar–Rupee Sell/Buy Swap) ವಿರುದ್ಧವಾಗಿ ಸಂಭವಿಸುತ್ತದೆ, ಅಂದರೆ ಭಾರತೀಯ ರೂಪಾಯಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ನಿರ್ಗಮಿಸುತ್ತದೆ ಮತ್ತು ಡಾಲರ್ ಪ್ರವೇಶಿಸುತ್ತದೆ.

 

ಪ್ರಸ್ತುತ RBI ಈ ಉಪಕರಣವನ್ನು ಬಳಸುವುದಕ್ಕೆ ಕಾರಣಗಳು:

ಇತ್ತೀಚೆಗೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ‘ಹೆಚ್ಚುವರಿ ದ್ರವ್ಯತೆಯನ್ನು’ 7.5 ಲಕ್ಷ ಕೋಟಿ ರೂ. ಗೆ ನಿಗದಿಪಡಿಸಲಾಗಿದೆ.ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಈ ‘ಹೆಚ್ಚುವರಿ ದ್ರವ್ಯತೆಯನ್ನು’ ಕಡಿಮೆ ಮಾಡಬೇಕಾಗಿದೆ.

 1. ಸಾಮಾನ್ಯವಾಗಿ, ಅಂತಹ ಪರಿಸ್ಥಿತಿಯಲ್ಲಿ, ‘ರೆಪೋ ದರ’ ಹೆಚ್ಚಿಸುವುದು ಅಥವಾ ‘ನಗದು ಮೀಸಲು ಅನುಪಾತ’ (CASH RESERVE RATIO – CRR) ಹೆಚ್ಚಿಸುವಂತಹ ಸಾಂಪ್ರದಾಯಿಕ ವಿಧಾನಗಳನ್ನು ಕೇಂದ್ರ ಬ್ಯಾಂಕ್ ಬಳಸುತ್ತದೆ, ಆದರೆ ಪ್ರಸ್ತುತ ಅದು ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
 2. ಆದ್ದರಿಂದ, ಕಳೆದ ವರ್ಷ RBI ಇನ್ನೊಂದು ಸಾಧನ/ಟೂಲ್‌ಕಿಟ್ – ‘ವೇರಿಯಬಲ್ ರೇಟ್ ರಿವರ್ಸ್ ರೆಪೋ ಹರಾಜು’ (Variable Rate Reverse Repo Auction – VRRR) ಅನ್ನು ಬಳಸಿತು.

 

ಪರಿಣಾಮಗಳು:

‘ಫಾರೆಕ್ಸ್ ಸ್ವಾಪ್’ / ವಿದೇಶಿ ವಿನಿಮಯ ವಿನಿಮಯಗಳು ಎಂದರೆ ‘ಲಿಕ್ವಿಡಿಟಿ ಮ್ಯಾನೇಜ್ಮೆಂಟ್’ / ದ್ರವ್ಯತೆಯನ್ನು ನಿರ್ವಹಿಸುವುದಾಗಿದೆ. ಆದ್ದರಿಂದ, ಕರೆನ್ಸಿಯ ಮೇಲೆ ಅವುಗಳ ಪರಿಣಾಮವು ಕೇವಲ ‘ಪ್ರಾಸಂಗಿಕ’ವಾಗಿರುತ್ತದೆ.

ಆರ್‌ಬಿಐ ಎರಡು ಹಂತಗಳಲ್ಲಿ ಅಮೆರಿಕದ ಡಾಲರ್‌ನ ಮಾರಾಟ, ರೂಪಾಯಿಯ ಅಸ್ಥಿರತೆಯ ಮೇಲೆ ನಿಯಂತ್ರಣ ಇಡುತ್ತದೆ ಮತ್ತು ಅದರ ಸವಕಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಹಾಯ ಮಾಡುತ್ತದೆ.

 

ಈ ಪ್ರಕ್ರಿಯೆಯು ಬಾಂಡ್ ಮಾರುಕಟ್ಟೆಯ (Bond Market) ಮೇಲೆ ಸ್ಪಷ್ಟ ಪರಿಣಾಮ ಬೀರಬಹುದು.

ಬಾಂಡ್‌ಗಳ ಇಳುವರಿಯು (Bonds yields) ಈಗಾಗಲೇ ಇಳಿಜಾರಿನತ್ತ ಟ್ರೆಂಡ್ ಆಗುತ್ತಿದೆ. ಸ್ವಾಪ್‌ಗಳ ಮೂಲಕ ‘ಲಿಕ್ವಿಡಿಟಿ ಮಧ್ಯಸ್ಥಿಕೆಯು’ ‘ಸಾಂಪ್ರದಾಯಿಕ ಉಪಕರಣಗಳ’ ಬದಲಿಗೆ ಪ್ರತ್ಯೇಕ ‘ಟೂಲ್‌ಕಿಟ್’ ಅನ್ನು ಬಳಸುವ RBI ನ ಯೋಜನೆಯನ್ನು ಸೂಚಿಸುತ್ತದೆ, ಮತ್ತು ಇದು ಕೇಂದ್ರ ಬ್ಯಾಂಕ್‌ ಗೆ ಅಗತ್ಯವಿದ್ದಾಗ ‘ಬಾಂಡ್‌ಗಳನ್ನು ಖರೀದಿಸಲು’ ಅವಕಾಶಗಳನ್ನು ನೀಡುತ್ತದೆ. ಪರಿಣಾಮವಾಗಿ, ಈ ತಂತ್ರವು ಸಕಾರಾತ್ಮಕ ‘ಬಾಂಡ್ ಯಿಲ್ಡ್’ ನ ಪ್ರಾಪ್ತಿಯನ್ನೂ ಒಳಗೊಂಡಿರುತ್ತದೆ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

“ಪ್ರಜಾತಿ ಶ್ರೀಮಂತಿಕೆ/ಸಮೃದ್ಧಿ” ಸಮೀಕ್ಷೆ:


(“Species Richness” Survey)

ಸಂದರ್ಭ:

ಪಂಜಾಬ್‌ನ ‘ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆ'(Department of Forests and Wildlife Preservation)ಯು ಪ್ರತಿ ವರ್ಷ ‘ಜಲ ಪಕ್ಷಿಗಳ / ನೀರು ಹಕ್ಕಿಗಳ ಗಣತಿ ಪ್ರಕ್ರಿಯೆ’ (Waterbirds Census Exercise)ಯನ್ನು ‘ಆರು ಪ್ರಮುಖ ಮತ್ತು ಅತ್ಯಂತ ಜೀವವೈವಿಧ್ಯದ ಜೌಗು ಪ್ರದೇಶ’ಗಳಲ್ಲಿ ಆಯೋಜಿಸುತ್ತದೆ.

ಈ ಆರು ಜೌಗು ಪ್ರದೇಶಗಳು ಎಂದರೆ, ನಂಗಲ್ ವನ್ಯಜೀವಿ ಅಭಯಾರಣ್ಯ, ರೋಪರ್ ಸಂರಕ್ಷಣಾ ಮೀಸಲು, ಹರಿಕೆ ವನ್ಯಜೀವಿ ಅಭಯಾರಣ್ಯ, ಕಂಜಲಿ ವೆಟ್‌ಲ್ಯಾಂಡ್, ಕೇಶೋಪುರ್-ಮಿಯಾನಿ ಸಮುದಾಯ ಮೀಸಲು(Keshopur–Miani Community Reserve) ಮತ್ತು ರಂಜಿತ್ ಸಾಗರ್ ಸಂರಕ್ಷಣಾ ಮೀಸಲು.

ಆದರೆ, ಈ ವರ್ಷ ದಟ್ಟ ಮಂಜಿನಿಂದಾಗಿ ಗಣತಿ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ, ಅದರ ಸ್ಥಾನದಲ್ಲಿ “ಪ್ರಜಾತಿ ಶ್ರೀಮಂತಿಕೆ” (“Species Richness” Survey) ಸಮೀಕ್ಷೆಯನ್ನು ‘ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆ’ ಯು WWF-ಭಾರತದ ಸಹಯೋಗದೊಂದಿಗೆ ನಡೆಸಿತು.

Current Affairs

 

What are waterbirds?

ನೀರು ಹಕ್ಕಿಗಳು ಎಂದರೆ ಯಾವುವು?

ವೆಟ್‌ಲ್ಯಾಂಡ್ಸ್ ಇಂಟರ್‌ನ್ಯಾಷನಲ್ (Wetlands International) ಪ್ರಕಾರ, ನೀರು ಹಕ್ಕಿಗಳು ಪಾರಿಸಾರಿಕವಾಗಿ ಜೌಗು ಪ್ರದೇಶಗಳ ಮೇಲೆ ಅವಲಂಬಿತವಾಗಿರುವ  ಪಕ್ಷಿ ಜಾತಿಗಳಲ್ಲೊಂದು ಎಂದು ವ್ಯಾಖ್ಯಾನಿಸಲಾಗಿದೆ. ಈ ಪಕ್ಷಿಗಳನ್ನು ಜೌಗು ಭೂಮಿ ವಲಯದ ಪ್ರಮುಖ ಆರೋಗ್ಯ ಸೂಚಕಗಳೆಂದು ಪರಿಗಣಿಸಲಾಗಿದೆ.

 

ಸಮೀಕ್ಷೆಯ ಪ್ರಮುಖ ಅಂಶಗಳು:

 1. ಸಮೀಕ್ಷೆಯ ಸಮಯದಲ್ಲಿ, ರಾಜ್ಯದ ಆರು ಸಂರಕ್ಷಿತ ಜೌಗು ಪ್ರದೇಶಗಳಿಂದ 91 ಜಾತಿಯ ಜಲಪಕ್ಷಿಗಳು ದಾಖಲಾಗಿವೆ.
 2. ಹರಿಕೆ ವನ್ಯಜೀವಿ ಅಭಯಾರಣ್ಯವು ಅತಿ ಹೆಚ್ಚು ಜಲಪಕ್ಷಿಗಳನ್ನು ಹೊಂದಿದೆ, ನಂತರದ ಸ್ಥಾನದಲ್ಲಿ ಕೇಶೋಪುರ್-ಮಿಯಾನಿ ಸಮುದಾಯ ಮೀಸಲು, ರೋಪರ್ ಸಂರಕ್ಷಣಾ ಮೀಸಲು ಮತ್ತು ನಂಗಲ್ ವನ್ಯಜೀವಿ ಅಭಯಾರಣ್ಯ ಗಳಿವೆ.
 3. ‘ಕೇಶೋಪುರ್-ಮಿಯಾನಿ’ ಮತ್ತು ‘ಶಾಲ್ಪಟ್ಟನ್’ (Shallpattan) ನಂತಹ ಜೌಗು ಪ್ರದೇಶಗಳು ಪಂಜಾಬ್‌ನಲ್ಲಿ ‘ಕಾಮನ್ ಕ್ರೇನ್’ ನ ವಲಸೆ ಜನಸಂಖ್ಯೆ ಮತ್ತು ‘ಸ್ಟೋರ್ಕ್ ಕ್ರೇನ್’ ನ ನಿವಾಸಿ ಜನಸಂಖ್ಯೆಯು (Resident Population), ಕಂಡುಬರುವ ಏಕೈಕ ಜೌಗು ಪ್ರದೇಶಗಳಾಗಿವೆ.
 4. ರೋಪರ್ ಮತ್ತು ನಂಗಲ್ ಜೌಗು ಪ್ರದೇಶಗಳು ಪೊಡಿಸಿಪೆಡಿಡೆ (Podicipedidae) ಕುಟುಂಬದ ಮೂರು ವಲಸೆ ನೀರಿನ ಪ್ರಭೇದಗಳಿಗೆ ನೆಲೆಯಾಗಿದೆ ಅಥವಾ ಆಶ್ರಯ ತಾಣವಾಗಿದೆ, ಅವುಗಳೆಂದರೆ ‘ಬ್ಲ್ಯಾಕ್-ನೆಕ್ಡ್ ಗ್ರೀಬ್'(Black-Necked Grebe), ಹಾರ್ನ್ಡ್ ಗ್ರೀಬ್ ಮತ್ತು ಗ್ರೇಟರ್ ಕ್ರೆಸ್ಟೆಡ್ ಗ್ರೀಬ್ ಮತ್ತು ‘ಲಿಟಲ್ ಗ್ರೀಬ್’ ಎಂಬ ನಿವಾಸಿ ನೀರಿನ ಜಾತಿಗಳು.
 5. ಸಮೀಕ್ಷೆಯ ಸಮಯದಲ್ಲಿ ಪಂಜಾಬ್‌ನ ಬಹುತೇಕ ಎಲ್ಲಾ ಸಂರಕ್ಷಿತ ಜೌಗು ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಜಲಪಕ್ಷಿಗಳಲ್ಲಿ ಯುರೇಷಿಯನ್ ಕೂಟ್ (Eurasian Coot) ಕೂಡ ಒಂದಾಗಿದೆ.

 

ಸಮೀಕ್ಷೆಯ ಸಮಯದಲ್ಲಿ ದಾಖಲಿಸಲಾದ ‘ಸಂರಕ್ಷಣೆಗಾಗಿ ಅತ್ಯಂತ ಕಾಳಜಿಯ ಪ್ರಮುಖ ಜಾತಿಗಳು’:

Bonelli’s Eagle, Greater Spotted Eagle, Northern Lapwing, Peregrine Falcon, Steppe Eagle, Western Black-tailed Godwit, Black-headed Ibis, Sarus Crane, Painted Stork, Woolly-necked Stork, Common Pochard, Common Crane, Ferruginous Pochard, Pallid Harrier, River Tern, Indian Spotted Eagle, River Lapwing, Oriental Darter, and Eurasian Curlew.

Current Affairs

 

‘ಮಧ್ಯ ಏಷ್ಯನ್ ಫ್ಲೈವೇ’:

ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ, ಸೆಂಟ್ರಲ್ ಏಷ್ಯನ್ ಫ್ಲೈವೇ (Central Asian flyway – CAF) ಮೂಲಕ ಅನೇಕ ಪಕ್ಷಿಗಳು ಭಾರತಕ್ಕೆ ಬರುತ್ತವೆ. ಈ ‘ಫ್ಲೈವೇ’ ಅಡಿಯಲ್ಲಿ, ಯುರೋಪ್-ಏಷ್ಯಾದ ದೊಡ್ಡ ಭೂಖಂಡದ ಪ್ರದೇಶವು ಆರ್ಕ್ಟಿಕ್ ಮತ್ತು ಹಿಂದೂ ಮಹಾಸಾಗರಗಳ ನಡುವೆ ಬರುತ್ತದೆ.

 

‘ವಲಸೆ’ ಮತ್ತು ಅದರ ಪ್ರಾಮುಖ್ಯತೆ:

ವಲಸೆಯು, ಹಕ್ಕಿಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಶೀತ ಪ್ರದೇಶಗಳಲ್ಲಿ ಆಹಾರದ ಅಲಭ್ಯತೆಯನ್ನು ಜಯಿಸಲು ಸಹಾಯ ಮಾಡುವ ಒಂದು ‘ಅಳವಡಿಕೆಯ ಕಾರ್ಯವಿಧಾನ’ವಾಗಿದೆ.

 1. ಪರಿಸರ ವ್ಯವಸ್ಥೆಗಳ ಆರೋಗ್ಯದ ಮೇಲೆ ಪಕ್ಷಿ ವಲಸೆಯ ಪ್ರಾಮುಖ್ಯತೆಯು ಚೆನ್ನಾಗಿ ಸಾಬೀತಾಗಿದೆ.
 2. ವಲಸೆ ಹಕ್ಕಿಗಳನ್ನು ಉಳಿಸುವುದು ಎಂದರೆ ಜೌಗು ಪ್ರದೇಶಗಳು, ಭೂಮಿಯ ಆವಾಸಸ್ಥಾನಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಉಳಿಸುವುದು ಮತ್ತು ಜೌಗು ಪ್ರದೇಶಗಳನ್ನು ಅವಲಂಬಿಸಿರುವ ಸಮುದಾಯಗಳಿಗೆ ಪ್ರಯೋಜನವನ್ನು ನೀಡುವುದು ಆಗಿದೆ.

 

ವಲಸೆ ಹಕ್ಕಿಗಳು ಎದುರಿಸುವ ಸವಾಲುಗಳು:

 1. ಕಳೆದ ದಶಕದಲ್ಲಿ ಜಾಗತಿಕವಾಗಿ ಅವರ ಆವಾಸಸ್ಥಾನಗಳ ನಿರಂತರ ನಾಶ.
 2. ಜಲಮೂಲಗಳು, ಜೌಗು ಪ್ರದೇಶಗಳು, ನೈಸರ್ಗಿಕ ಹುಲ್ಲುಗಾವಲುಗಳು ಮತ್ತು ಕಾಡುಗಳ ಅಡಿಯಲ್ಲಿ ಪ್ರದೇಶವನ್ನು ಕಡಿಮೆಗೊಳಿಸುವುದು.
 3. ಹೆಚ್ಚಿದ ಹವಾಮಾನ ವ್ಯತ್ಯಾಸ ಮತ್ತು ಹವಾಮಾನ ಬದಲಾವಣೆಯು ವಲಸೆ ಹಕ್ಕಿಗಳಿಗೆ ಅಗತ್ಯವಾದ ‘ಜೀವವೈವಿಧ್ಯ’ ದ ನಷ್ಟಕ್ಕೆ ಕಾರಣವಾಗಿದೆ.

 

ವಾಯು ಮಾರ್ಗ / ಫ್ಲೈವೇ ಎಂದರೇನು?

ಫ್ಲೈವೇ ಭೌಗೋಳಿಕ ಪ್ರದೇಶವಾಗಿದ್ದು, ವಲಸೆ ಹಕ್ಕಿ ಅಥವಾ ವಲಸೆ ಜಾತಿಯ ಗುಂಪು ತನ್ನ ವಾರ್ಷಿಕ ಚಟುವಟಿಕೆಗಳಾದ ಸಂತಾನೋತ್ಪತ್ತಿ, ಮೌಲ್ಟಿಂಗ್, ವಸತಿ ಮತ್ತು ಸಂತಾನೋತ್ಪತ್ತಿ ಮಾಡುವಿಕೆಯ ತನ್ನ ವಾರ್ಷಿಕ ಚಕ್ರವನ್ನು ಪೂರ್ಣಗೊಳಿಸುತ್ತದೆ.

 

‘ಮಧ್ಯ ಏಷ್ಯನ್ ಫ್ಲೈವೇ’ ಬಗ್ಗೆ:

 1. ಮಧ್ಯ ಏಷ್ಯನ್ ಫ್ಲೈವೇ (CAF) ಯುರೇಷಿಯಾದ ಒಂದು ದೊಡ್ಡ ಪ್ರದೇಶವನ್ನು ಆರ್ಕ್ಟಿಕ್ ಮತ್ತು ಹಿಂದೂ ಮಹಾಸಾಗರಗಳನ್ನು ಒಳಗೊಂಡಿದೆ.
 2. ಭಾರತ ಸೇರಿದಂತೆ 30 ಇತರ ದೇಶಗಳು ಸೆಂಟ್ರಲ್ ಏಶಿಯನ್ ಫ್ಲೈವೇ ಅಡಿಯಲ್ಲಿ ಬರುತ್ತವೆ.
 3. ‘ಸೆಂಟ್ರಲ್ ಏಶಿಯನ್ ಫ್ಲೈವೇ’ ಜಲಪಕ್ಷಿಗಳಿಗಾಗಿ ಹಲವಾರು ಪ್ರಮುಖ ವಲಸೆ ಮಾರ್ಗಗಳನ್ನು ಒಳಗೊಂಡಿದೆ, ಇವುಗಳಲ್ಲಿ ಹೆಚ್ಚಿನವು ಸೈಬೀರಿಯಾದ ಉತ್ತರದ ಸಂತಾನೋತ್ಪತ್ತಿ ಪ್ರದೇಶದಿಂದ, ದಕ್ಷಿಣದ  ಸಂತಾನೋತ್ಪತ್ತಿ ಚಟುವಟಿಕೆಗಳನ್ನು ಹೊಂದಿರದ ಚಳಿಗಾಲದ ಮೈದಾನಗಳ ವರೆಗೆ ಅಂದರೆ,ಪಶ್ಚಿಮ ಏಷ್ಯಾ, ಭಾರತ, ಮಾಲ್ಡೀವ್ಸ್ ಮತ್ತು ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶದವರಿಗೆ ವ್ಯಾಪಿಸಿದೆ.

Current Affairs

 

ಫ್ಲೈವೇಗಳನ್ನು ರಕ್ಷಿಸುವ ಅಗತ್ಯತೆ:

 1. ಪ್ರಪಂಚದ 11,000 ಪಕ್ಷಿ ಪ್ರಭೇದಗಳಲ್ಲಿ ಸರಿಸುಮಾರು ಐದರಲ್ಲಿ ಒಂದು ವರ್ಷಕ್ಕೆ ವಲಸೆ ಹೋಗುತ್ತದೆ, ಅವುಗಳಲ್ಲಿ ಕೆಲವು ಬಹಳ ದೂರ ಪ್ರಯಾಣಿಸುತ್ತವೆ. ವಲಸೆ ಹಕ್ಕಿಗಳ ಸಂರಕ್ಷಣೆಗೆ ದೇಶಗಳ ನಡುವೆ ಮತ್ತು ರಾಷ್ಟ್ರೀಯ ಗಡಿಗಳ ನಡುವಿನ ಫ್ಲೈವೇಗಳಲ್ಲಿ ಸಹಕಾರ ಮತ್ತು ಸಮನ್ವಯದ ಅಗತ್ಯವಿದೆ.
 2. ಫ್ಲೈವೇಗಳನ್ನು ರಕ್ಷಿಸುವುದು ಎಂದರೆ ಪಕ್ಷಿಗಳನ್ನು ಪರಭಕ್ಷಕಗಳಿಂದ ರಕ್ಷಿಸುವುದು ಮತ್ತು ಜೌಗು ಪ್ರದೇಶಗಳನ್ನು ಪುನಶ್ಚೇತನಗೊಳಿಸುವುದು ಇತ್ಯಾದಿ. ಜೌಗು ಪ್ರದೇಶಗಳನ್ನು ರಕ್ಷಿಸುವುದು ಭೂಮಿಯ ಆವಾಸಸ್ಥಾನ ಪರಿಸರ ವ್ಯವಸ್ಥೆಯನ್ನು ಉಳಿಸುವ ದೊಡ್ಡ ಉದ್ದೇಶವನ್ನು ಪೂರೈಸಲು ಸಹಾಯ ಮಾಡುತ್ತದೆ.

Current Affairs

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಭಾರತದಲ್ಲಿ ಹುಲಿ ಸಾಂದ್ರತೆ:


(Tiger Density in India)

 ಸಂದರ್ಭ:

ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ನಡೆಸಿದ ಅಧ್ಯಯನದ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಸುಂದರ್‌ಬನ್ಸ್‌ನಲ್ಲಿನ ಹುಲಿಗಳ ಸಾಂದ್ರತೆಯು ಮ್ಯಾಂಗ್ರೋವ್ ಅರಣ್ಯಗಳು ಅವುಗಳನ್ನು ಸಲಹುವ ಸಾಮರ್ಥ್ಯದ ಅತ್ಯುನ್ನತ ಮಟ್ಟವನ್ನು ತಲುಪಿವೆ, ಇದರಿಂದಾಗಿ ಹುಲಿಗಳ ಕಾಡಿನಿಂದ ಹೊರ ಹೋಗುವ ಘಟನೆಗಳು ಮತ್ತು ಮಾನವ – ವನ್ಯಜೀವಿ ಸಂಘರ್ಷದ ಹೆಚ್ಚಳಕ್ಕೆ ಕಾರಣವಾಗಿದೆ.

ಹುಲಿಗಳ ಹೆಚ್ಚಿನ ಸಾಂದ್ರತೆಯು ಕಾಡುಗಳಿಂದ ಹೊರಬಂದು ಹೊಸ ಪ್ರದೇಶಗಳನ್ನು ಹುಡುಕಲು ಅವುಗಳನ್ನು ಒತ್ತಾಯಿಸುತ್ತದೆ. ಇತ್ತೀಚೆಗೆ, ಸುಮಾರು ಎಂಟು ಹುಲಿಗಳು ಸುಂದರಬನದ ಹಳ್ಳಿಗಳಿಗೆ ಪ್ರವೇಶಿಸಿದ್ದವು ಮತ್ತು ನಂತರ ಅವುಗಳೆಲ್ಲವನ್ನು ಸೆರೆಹಿಡಿದು ಕಾಡಿಗೆ ಬಿಡಲಾಯಿತು.

 

ಸಲಹುವ ಸಾಮರ್ಥ್ಯ:

 1. ತೆರಾಯಿ ಮತ್ತು ಶಿವಾಲಿಕ್ ಬೆಟ್ಟಗಳಲ್ಲಿ ನೆಲೆಗೊಂಡಿರುವ ಆವಾಸಸ್ಥಾನಗಳಲ್ಲಿ – ಉದಾಹರಣೆಗೆ ಜಿಮ್ ಕಾರ್ಬೆಟ್ ಹುಲಿ ಮೀಸಲಿನಲ್ಲಿ, – ಪ್ರತಿ 100 ಚದರ ಕಿ.ಮೀ.ಗೆ ಕೇವಲ 10-16 ಹುಲಿಗಳು ಬದುಕಬಲ್ಲವು.
 2. ಇದು ಬಂಡೀಪುರದಂತಹ ಉತ್ತರ-ಮಧ್ಯ ಪಶ್ಚಿಮ ಘಟ್ಟಗಳ ಮೀಸಲು ಪ್ರದೇಶದಲ್ಲಿ ಈ ಸಂಖ್ಯೆ 100 ಚದರ ಕಿ.ಮೀ.ಗೆ 7-11 ಹುಲಿಗಳಿಗೆ ಇಳಿಯಬಹುದು.
 3. 2018 ರ ‘ಅಖಿಲ ಭಾರತ ಹುಲಿ ವರದಿ’ ಪ್ರಕಾರ, ಸುಂದರಬನ್ಸ್ ನಲ್ಲಿ 100 ಚದರ ಕಿ.ಮೀ.ಗೆ ಸುಮಾರು 4 ಹುಲಿಗಳನ್ನು ಸಲಹುವ ಸಾಮರ್ಥ್ಯವಿದೆ.

 

ಹುಲಿ ಸಾಂದ್ರತೆಯನ್ನು ನಿರ್ಧರಿಸುವ ಅಂಶಗಳು:

 1. ಆಹಾರ ಮತ್ತು ಸ್ಥಳಾವಕಾಶದ ಲಭ್ಯತೆ.
 2. ಸಹಿಷ್ಣುತೆಯ ಮಟ್ಟ: ಹುಲಿ-ಆವಾಸಸ್ಥಾನದ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯ ಜನರ ಮೂಲಕ ನಿರ್ವಹಣಾ ತಂತ್ರಗಳನ್ನು ನಿರ್ಧರಿಸುವ ನೀತಿ ನಿರೂಪಕರಿಗೆ ಪ್ರದರ್ಶಿಸಲಾಗುವ ‘ಸಹಿಷ್ಣುತೆಯ ಮಟ್ಟ’.

 

ಮಾನವ ವನ್ಯಜೀವಿ ಸಂಘರ್ಷಕ್ಕೆ ಕಾರಣಗಳು:

ಭೌತಿಕ (ಸ್ಥಳ) ಮತ್ತು ಜೈವಿಕ (ಅರಣ್ಯ ಉತ್ಪಾದಕತೆ) ಅಂಶಗಳು ಅಭಯಾರಣ್ಯದಲ್ಲಿ ಹುಲಿಗಳು ಬದುಕುವ ಸಾಮರ್ಥ್ಯದ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತವೆ. ಇದಲ್ಲದೆ, ವಿವಿಧ ಭೂ ಬಳಕೆಗಳು ಅತಿಕ್ರಮಿಸಿದಾಗ ಮತ್ತು ಹೆಚ್ಚಿನ ಸಂಖ್ಯೆಯ ಜನರು ಜೀವನೋಪಾಯಕ್ಕಾಗಿ ಅರಣ್ಯ ಸಂಪನ್ಮೂಲಗಳ ಮೇಲೆ ಅವಲಂಬಿತರಾದಾಗ, ‘ಮಾನವ ವನ್ಯಜೀವಿ ಸಂಘರ್ಷ’ದ ಸಂಭವವು ಹೆಚ್ಚಾಗುತ್ತದೆ.

 

ಹುಲಿ ಸಾಂದ್ರತೆಯ ಪ್ರದೇಶಗಳಲ್ಲಿ ಸಂಘರ್ಷವನ್ನು ತಪ್ಪಿಸಲು ಮುಂದಿರುವ ಮಾರ್ಗ:

 1. ಅಭಯಾರಣ್ಯದಲ್ಲಿ ಕೃತಕವಾಗಿ ಬೇಟೆಯ ‘ಬೇಸ್-ಏರಿಯಾ’ವನ್ನು ಅಥವಾ ನೆಲೆಯನ್ನು ಹೆಚ್ಚಿಸುವುದು.
 2. ಹುಲಿ ಕಾರಿಡಾರ್‌ಗಳು: ಅರಣ್ಯಗಳ ನಡುವೆ ಸುರಕ್ಷಿತ ಸಂಪರ್ಕ ಮಾರ್ಗಗಳನ್ನು ರಚಿಸಬೇಕು ಮತ್ತು ಹುಲಿಗಳು ಹೊಸ ಪ್ರದೇಶಗಳಿಗೆ ಸುರಕ್ಷಿತವಾಗಿ ವಲಸೆ ಹೋಗಲು ಅವಕಾಶ ನೀಡಬೇಕು.

 

ಹುಲಿಗಳ ಸಂಖ್ಯೆ ಗೆ ಸಂಬಂಧಿಸಿದ ಪ್ರಮುಖ ಸಂಗತಿಗಳು:

ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಪ್ರಕಾರ, ಕಳೆದ 150 ವರ್ಷಗಳಲ್ಲಿ ಹುಲಿ ಗಳಸಂಖ್ಯೆಯು 95 ಪ್ರತಿಶತದಷ್ಟು ಕಡಿಮೆಯಾಗಿದೆ.

ಭಾರತದಲ್ಲಿ ‘ರಾಯಲ್ ಟೈಗರ್ಸ್’ ಕಂಡುಬರುತ್ತವೆ ಮತ್ತು ಪ್ರಸ್ತುತ 2967 ಹುಲಿಗಳಿವೆ, ಇದು ಜಾಗತಿಕವಾಗಿ ಹುಲಿಗಳ ಒಟ್ಟು ಸಂಖ್ಯೆಯ ಶೇಕಡಾ 70 ರಷ್ಟಿದೆ.

ಮಧ್ಯಪ್ರದೇಶ (526) ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ, ಕರ್ನಾಟಕ (524) ಮತ್ತು ಉತ್ತರಾಖಂಡ (442) ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ಮಧ್ಯಪ್ರದೇಶದ ಬಾಂಧವಗಢ ರಾಷ್ಟ್ರೀಯ ಉದ್ಯಾನವನವು ರಾಯಲ್ ಬೆಂಗಾಲ್ ಟೈಗರ್‌ಗಳಿಗೆ ಹೆಸರುವಾಸಿಯಾಗಿದೆ ಮತ್ತು ಭಾರತದಲ್ಲಿ ಅತಿ ಹೆಚ್ಚು ಹುಲಿಗಳ ಸಾಂದ್ರತೆಯನ್ನು ಹೊಂದಿದೆ.

ಮಧ್ಯಪ್ರದೇಶದ ‘ಕನ್ಹಾ ಟೈಗರ್ ರಿಸರ್ವ್’ ಅಥವಾ ಹುಲಿ ಸಂರಕ್ಷಿತ ಪ್ರದೇಶ ವು ‘ಭೂರ್ ಸಿಂಗ್ ಬಾರಾಸಿಂಗ’ ಎಂಬ ಮ್ಯಾಸ್ಕಾಟ್ ಅನ್ನು ಅಧಿಕೃತವಾಗಿ ಪರಿಚಯಿಸಿದ ಭಾರತದ ಮೊದಲ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

 

ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹುಲಿ ಸಂರಕ್ಷಣಾ ಪ್ರಯತ್ನಗಳು:

 1. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ದ (NTCA) ವತಿಯಿಂದ ಅರಣ್ಯ ಸಿಬ್ಬಂದಿಗಾಗಿ ಮೊಬೈಲ್ ಮಾನಿಟರಿಂಗ್ ಸಿಸ್ಟಮ್, M-STrIPES– ಮಾನಿಟರಿಂಗ್ ಸಿಸ್ಟಮ್ ಫಾರ್ ಟೈಗರ್ಸ್ ಇಂಟೆನ್ಸಿವ್ ಪ್ರೋಟೆಕ್ಷನ್ ಅಂಡ್ ಎಕಲೋಜಿಕಲ್ ಸ್ಟೇಟಸ್  (Monitoring system for Tigers’ Intensive Protection and Ecological Status) ಎಂಬ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.
 2. 2010 ರ ಪೀಟರ್ಸ್‌ಬರ್ಗ್ ಹುಲಿ ಶೃಂಗಸಭೆಯಲ್ಲಿ, ಜಾಗತಿಕವಾಗಿ 13 ಹುಲಿ ಶ್ರೇಣಿಯ ದೇಶಗಳ ನಾಯಕರು ‘T X 2’ ಎಂಬ ಜನಪ್ರಿಯ ಘೋಷಣೆಯೊಂದಿಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಹೆಚ್ಚಿನದನ್ನು ಮಾಡಲು ಪ್ರತಿಜ್ಞೆ ಮಾಡಿದರು.
 3. ವಿಶ್ವ ಬ್ಯಾಂಕ್, ತನ್ನ ‘ಗ್ಲೋಬಲ್ ಟೈಗರ್ ಇನಿಶಿಯೇಟಿವ್’ (GTI) ಕಾರ್ಯಕ್ರಮದ ಮೂಲಕ, ತನ್ನ ಉಪಸ್ಥಿತಿ ಮತ್ತು ಸಂಘಟನೆಯ ಸಾಮರ್ಥ್ಯವನ್ನು ಬಳಸಿಕೊಂಡು ಹುಲಿ ಕಾರ್ಯಸೂಚಿಯನ್ನು ಬಲಪಡಿಸಲು ಜಾಗತಿಕ ಪಾಲುದಾರರನ್ನು ಒಟ್ಟುಗೂಡಿಸಿದೆ.
 4. ಕಳೆದ ಕೆಲವು ವರ್ಷಗಳಲ್ಲಿ, ‘ಗ್ಲೋಬಲ್ ಟೈಗರ್ ಇನಿಶಿಯೇಟಿವ್’ (GTI) ಉಪಕ್ರಮವನ್ನು ‘ಗ್ಲೋಬಲ್ ಟೈಗರ್ ಇನಿಶಿಯೇಟಿವ್ ಕೌನ್ಸಿಲ್ (GTIC)’ ಎಂದು ಸಾಂಸ್ಥಿಕಗೊಳಿಸಲಾಗಿದೆ ಮತ್ತು ಈಗ ಗ್ಲೋಬಲ್ ಟೈಗರ್ ಫೋರಮ್ (Global Tiger Forum) ಮತ್ತು ಗ್ಲೋಬಲ್ ಸ್ನೋ ಲೆಪರ್ಡ್ ಇಕೋಸಿಸ್ಟಮ್ ಪ್ರೊಟೆಕ್ಷನ್ ಪ್ರೋಗ್ರಾಂ (Global Snow Leopard Ecosystem Protection Program) ಮೂಲಕ ಹುಲಿ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
 5. ಭಾರತದಲ್ಲಿ 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಲಾಯಿತು, ಇದು ಪ್ರಸ್ತುತ 50 ಕ್ಕೂ ಹೆಚ್ಚು ಸಂರಕ್ಷಿತ ಪ್ರದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ, ಇದು ದೇಶದ ಭೌಗೋಳಿಕ ಪ್ರದೇಶದ ಸುಮಾರು 2% ನಷ್ಟು ಪ್ರದೇಶಕ್ಕೆ ಸಮನಾಗಿರುತ್ತದೆ.

 

ಹುಲಿಗಳ ಸಂರಕ್ಷಣೆಯ ಸ್ಥಿತಿ:

 1. ಭಾರತೀಯ ವನ್ಯಜೀವಿ (ರಕ್ಷಣೆ) ಕಾಯಿದೆ, 1972: ಅನುಸೂಚಿ-I
 2. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಕೆಂಪು ಪಟ್ಟಿ: ಅಳಿವಿನಂಚಿನಲ್ಲಿರುವ
 3. ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯ ಪ್ರಭೇದಗಳಲ್ಲಿ ಅಂತರಾಷ್ಟ್ರೀಯ ವ್ಯಾಪಾರದ ಸಮಾವೇಶ (CITES): ಅನುಬಂಧ-I

Current Affairs

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


 ಧರ್ಮ ಗಾರ್ಡಿಯನ್:

(Exercise Dharma Guardian)

 1. ‘ಧರ್ಮ ಗಾರ್ಡಿಯನ್ ಮಿಲಿಟರಿ ಸಮರಾಭ್ಯಾಸ’ ವು ಭಾರತೀಯ ಸೇನೆ ಮತ್ತು ಜಪಾನಿನ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ ನಡುವೆ ಜರಗುವ ವಾರ್ಷಿಕ ಸಮರಾಭ್ಯಾಸವಾಗಿದೆ.
 2. ಇದರ ಇತ್ತೀಚಿನ ಆವೃತ್ತಿಯು ಇತ್ತೀಚೆಗೆ ಕರ್ನಾಟಕದ ಬೆಳಗಾವಿಯಲ್ಲಿ ಮುಕ್ತಾಯಗೊಂಡಿದೆ.
 3. ಭಾರತ ಮತ್ತು ಜಪಾನ್ ನಡುವಿನ ಮಿಲಿಟರಿ ಸಹಕಾರವನ್ನು ಉತ್ತೇಜಿಸಲು, ನವೆಂಬರ್ 2018 ರಲ್ಲಿ ವೈರಾಂಗ್ಟೆಯಲ್ಲಿರುವ ಭಾರತೀಯ ಸೇನೆಯ ‘ಕೌಂಟರ್ ಇನ್ಸರ್ಜೆನ್ಸಿ ವಾರ್‌ಫೇರ್ ಸ್ಕೂಲ್’ ನಲ್ಲಿ ‘ಧರ್ಮ ಗಾರ್ಡಿಯನ್ ಸಮರಭ್ಯಾಸ’ದ ಮೊದಲ ಆವೃತ್ತಿಯನ್ನು ನಡೆಸಲಾಯಿತು.

Current Affairs  

ಮಂಕಡಿಂಗ್:

(Mankading)

 ಕ್ರಿಕೆಟ್‌ನಲ್ಲಿ ಇನ್ನು ಮುಂದೆ ನಾನ್‌ಸ್ಟ್ರೈಕರ್‌ ಬ್ಯಾಟರ್‌ಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ’ಮಂಕಡಿಂಗ್’ ಮಾಡುವುದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ನಡೆಯಲ್ಲ. ಅದನ್ನು ರನ್‌ಔಟ್ ಎಂದೇ ಪರಿಗಣಿಸಲಾಗುವುದೆಂದು ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ (Marylebone Cricket Club) ತಿಳಿಸಿದೆ.

ಏನಿದು ಮಂಕಡ್ ರನ್‌ಔಟ್?

ಮಂಕಡಿಂಗ್ ಸುದೀರ್ಘ ಕಾಲದಿಂದ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಾನ್‌ಸ್ಟ್ರೈಕರ್ ತುದಿಯಲ್ಲಿರುವ ಬ್ಯಾಟರ್, ಬೌಲರ್ ಎಸೆತ ಹಾಕುವ ಮುನ್ನವೇ ಕ್ರೀಸ್‌ ಬಿಟ್ಟಿದ್ದರೆ ರನ್‌ಔಟ್ ಮಾಡುವುದನ್ನು ಮಂಕಡಿಂಗ್ ಎನ್ನಲಾಗುತ್ತದೆ. ಇದುವರೆಗೂ ಈ ರೀತಿ 1948ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ  ಭಾರತದ ಎಡಗೈ ಸ್ಪಿನ್ನರ್ ವಿನೂ ಮಂಕಡ್ ಅವರು ಬೌಲಿಂಗ್ ಮಾಡುವಾಗ ನಾನ್‌ ಸ್ಟ್ರೈಕರ್‌ ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಬಿಲ್ಲಿ ಬ್ರೌನ್ ಕ್ರೀಸ್‌ ಬಿಟ್ಟಿದ್ದರು. ಮಂಕಡ್ ಬೌಲಿಂಗ್ ಆ್ಯಕ್ಷನ್ ಮಾಡದೇ ಬೇಲ್ಸ್‌ ಎಗರಿಸಿದರು. ಆ ಪ್ರವಾಸದ ಸಂದರ್ಭದಲ್ಲಿ ಮಂಕಡ್‌ ಅವರು ಬ್ರೌನ್‌ ಅವರಿಗೆ ಎರಡನೇ ಬಾರಿ ಈ ರೀತಿ ಮಾಡಿದ್ದರು. ಮೊದಲ ಬಾರಿ ಅವರು ಬ್ರೌನ್‌ಗೆ ಎಚ್ಚರಿಕೆ ನೀಡಿದ್ದರು. ಎರಡನೇ ಬಾರಿ ರನ್‌ಔಟ್ ನೀಡಲಾಯಿತು. ಆಗ ಆಸ್ಟ್ರೇಲಿಯಾ ಮಾಧ್ಯಮಗಳು ಮಂಕಡ್ ಅವರನ್ನು ಟೀಕಿಸಿದ್ದವು. ‘ಮಂಕಡಿಂಗ್‌’ ಎಂದು ಕರೆದಿದ್ದವು  ಈ ರೀತಿ ಕರೆಯುವುದು ದಿಗ್ಗಜ ವಿನೂ ಮಂಕಡ್‌ ಅವರಿಗೆ ಮಾಡುವ ಅವಮಾನ ಎಂದು ಸುನಿಲ್ ಗಾವಸ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.

MCC ನಿಯಮ 41.16ರಲ್ಲಿ  ನಾನ್‌ ಸ್ಟ್ರೈಕರ್ ರನ್‌ಔಟ್ ಕುರಿತು ಉಲ್ಲೇಖವಿದೆ.  ಈಗ ಇದನ್ನು ನಿಯಮ 41 (ಅನ್‌ಫೇರ್ ಪ್ಲೇ) ನಿಂದ ನಿಯಮ 38 (ರನ್‌ಔಟ್‌)ಕ್ಕೆ ಬದಲಾವಣೆ ಮಾಡಲಾಗಿದೆ.

ಸುದ್ದಿಯಲ್ಲಿ ಇರಲು ಕಾರಣ:

MCCಯು ಕ್ರಿಕೆಟ್‌ ನಿಯಮಾವಳಿಯಲ್ಲಿ ಮಹತ್ವದ ಪರಿಷ್ಕರಣೆ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಬಹುಚರ್ಚಿತವಾದ ಮಂಕಡಿಂಗ್ ನಿಯಮವೂ ಒಂದು. ಅಲ್ಲದೇ ಬೌಲರ್‌ಗಳು ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಅಥವಾ ಬೆವರು ಲೇಪನ ಮಾಡುವುದನ್ನೂ ಶಾಶ್ವತವಾಗಿ ನಿಷೇಧಿಸಲಾಗಿದೆ.

Note:

2019ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆರ್‌. ಅಶ್ವಿನ್ ಅವರು, ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್‌ ಅವರನ್ನು ಮಂಕಡಿಂಗ್ ಮಾಡಿದ್ದರು. ಆಗ ವಿವಾದದ ಕಿಡಿ ಹೊತ್ತಿಕೊಂಡಿತ್ತು.

ಆದರೆ, ಭಾರತ ಸೇರಿದಂತೆ ಕೆಲವು ದೇಶಗಳ  ಕ್ರಿಕೆಟಿಗರು ಅಶ್ವಿನ್ ನಡೆಯನ್ನು ಬೆಂಬಲಿಸಿದ್ದರು. ಅಂದಿನಿಂದಲೂ ಅಶ್ವಿನ್ ಮಂಕಡಿಂಗ್ ನಿಯಮಬಾಹಿರವಲ್ಲ ಎಂದೇ ವಾದಿಸಿದ್ದರು.

Current Affairs

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos