ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2 :
1. ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (BBMB).
2. ಫಿನ್ಲ್ಯಾಂಡ್ ಮತ್ತು ಸ್ವೀಡನ್ ಗಳ NATO ಸದಸ್ಯತ್ವ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾದ ಬಾಹ್ಯಾಕಾಶ ಸಂಸ್ಥೆಯಿಂದ ಬೆದರಿಕೆ.
2. ಡಿಜಿಟಲ್ ಲೆಂಡಿಂಗ್ ಮತ್ತು ಸಂಬಂಧಿತ ಸಮಸ್ಯೆಗಳು.
3. ‘ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಹಕ್ಕುಗಳ ಮಾನ್ಯತೆ / ಗುರುತಿಸುವಿಕೆ ಕಾಯಿದೆ)’.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ಎಮ್ನಾಟಿ ಚಂಡಮಾರುತ.
2. ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆ.
3. ECGC ಲಿಮಿಟೆಡ್.
4. ಭಾಷಾ ಪ್ರಮಾಣಪತ್ರ ಸೆಲ್ಫಿ ಅಭಿಯಾನ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳ ಕಾರ್ಯಗಳು ಮತ್ತು ಜವಾಬ್ದಾರಿಗಳು, ಫೆಡರಲ್ ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು, ಸ್ಥಳೀಯ ಮಟ್ಟದಲ್ಲಿ ಅಧಿಕಾರ ಮತ್ತು ಹಣಕಾಸು ಹಂಚಿಕೆ ಮತ್ತು ಅದರಲ್ಲಿನ ಸವಾಲುಗಳು.
ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (BBMB):
(Bhakra Beas Management Board)
ಸಂದರ್ಭ:
ಇತ್ತೀಚೆಗೆ, ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯಲ್ಲಿ (Bhakra Beas Management Board -BBMB) ಸದಸ್ಯರ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ವಿದ್ಯುತ್ ಸಚಿವಾಲಯವು ತಿದ್ದುಪಡಿ ಮಾಡಿದೆ. ಇಲ್ಲಿಯವರೆಗೆ, ‘ಭಾಕ್ರಾ ಬಿಯಾಸ್ ಮ್ಯಾನೇಜ್‌ಮೆಂಟ್ ಬೋರ್ಡ್ ರೂಲ್ಸ್’ 1974 ರ ಪ್ರಕಾರ – BBMB ಯಲ್ಲಿ ವಿದ್ಯುತ್ ಸದಸ್ಯರ ನೇಮಕಾತಿಯನ್ನು ಪಂಜಾಬ್‌ನಿಂದ ಮತ್ತು ನೀರಾವರಿ ಸದಸ್ಯರನ್ನು ಹರಿಯಾಣದಿಂದ ಮಾಡಲಾಗುತ್ತಿತ್ತು. 2022 ರಲ್ಲಿ ಮಾಡಿದ ತಿದ್ದುಪಡಿಗಳ ಅಡಿಯಲ್ಲಿ, ಈ ಎರಡೂ ನೇಮಕಾತಿಗಳನ್ನು ಈ ಎರಡೇ ರಾಜ್ಯಗಳಿಂದ ಮಾತ್ರ ಭರ್ತಿ ಮಾಡಬೇಕೆಂಬ ಕಡ್ಡಾಯ ಷರತ್ತನ್ನು ತೆಗೆದುಹಾಕಲಾಗಿದೆ.
ಇತ್ತೀಚಿನ ಬದಲಾವಣೆಗಳು:
- ಇಲ್ಲಿಯವರೆಗೆ ಪಂಜಾಬ್ ಮತ್ತು ಹರಿಯಾಣದ ಅಧಿಕಾರಿಗಳನ್ನು ಕ್ರಮವಾಗಿ ವಿದ್ಯುಚ್ಛಕ್ತಿ ಸದಸ್ಯ ಮತ್ತು ನೀರಾವರಿ ಸದಸ್ಯ ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು.
- ವಿದ್ಯುತ್ ಸಚಿವಾಲಯವು ಅಧಿಸೂಚನೆ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ಇತರ ರಾಜ್ಯಗಳ ಅಧಿಕಾರಿಗಳು ಸಹ ಈ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.
- ಸಂಬಂಧಿಸಿದ ರಾಜ್ಯಗಳು ವಿದ್ಯುತ್ ಸಚಿವಾಲಯಕ್ಕೆ ಕಳುಹಿಸಿದ ಎಂಜಿನಿಯರ್‌ಗಳ ಸಮಿತಿಯಿಂದ ಆಯ್ಕೆಯಾದ ನಂತರ ಕೇಂದ್ರ ಸರ್ಕಾರವು ಇಬ್ಬರು ಸದಸ್ಯರನ್ನು ನೇಮಿಸುತ್ತದೆ.
ವಿಮರ್ಶೆಗಳು:
- ನಿಯಮಗಳಲ್ಲಿ ಬದಲಾವಣೆ ಮಾಡಿರುವ ಬಗ್ಗೆ ವಿವಾದ ಎದ್ದಿದೆ. ಹೊಸ ನಿಯಮಗಳ ಅನುಷ್ಠಾನದ ನಂತರ, ಪಂಜಾಬ್‌ನ ಅಭ್ಯರ್ಥಿಗಳು BBMB ಗೆ ಆಯ್ಕೆಯಾಗುವುದು ಕಷ್ಟಕರವಾಗುತ್ತದೆ ಎಂದು ಮಧ್ಯಸ್ಥಗಾರರ ಒಂದು ವಿಭಾಗವು ವಾದಿಸುತ್ತಿದೆ.
- ಈ ಸಂಸ್ಥೆ ಅಂದರೆ BBMB ಮೇಲಿನ ರಾಜ್ಯಗಳಲ್ಲಿ ನೀರಿನ ನಿರ್ವಹಣೆಗೆ ಸಂಬಂಧಿಸಿದೆ, ಮಂಡಳಿಯ ಪೂರ್ಣ ಸಮಯದ ಸದಸ್ಯರನ್ನು ಈ ರಾಜ್ಯಗಳಿಂದ ಮಾತ್ರ ತೆಗೆದುಕೊಳ್ಳಬೇಕು ಏಕೆಂದರೆ ಅವರು ಸ್ಥಳೀಯ ಸಮಸ್ಯೆಗಳು ಮತ್ತು ತಂತ್ರಜ್ಞಾನದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ ಎಂದು ಮಂಡಳಿಯ ಕೆಲವು ಉದ್ಯೋಗಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯಗಳ ನಡುವೆ ಹಂಚಿಕೆ:
1966 ರಲ್ಲಿ ಪಂಜಾಬ್ ರಾಜ್ಯದ ಮರುಸಂಘಟನೆಯ ನಂತರ, BBMB ಗೆ ಸೇರಿದ ವಿದ್ಯುತ್ ಯೋಜನೆಗಳಲ್ಲಿ 58:42 ಅನುಪಾತದಲ್ಲಿ ಪಂಜಾಬ್ ಮತ್ತು ಹರಿಯಾಣಕ್ಕೆ ಪಾಲು ನೀಡಲಾಯಿತು. ನಂತರ ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೂ ಈ ಯೋಜನೆಗಳಲ್ಲಿ ಪಾಲು ನೀಡಲಾಯಿತು.
ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯ ಕುರಿತು:
ನವೆಂಬರ್ 1, 1966 ರಂದು ಹಿಂದಿನ ಪಂಜಾಬ್ ರಾಜ್ಯದ ಮರುಸಂಘಟನೆಯ ಸಮಯದಲ್ಲಿ, ‘ಪಂಜಾಬ್ ಮರುಸಂಘಟನೆ ಕಾಯಿದೆ’, 1966 ರ ಸೆಕ್ಷನ್ 79 ರ ಅಡಿಯಲ್ಲಿ ‘ಭಾಕ್ರಾ ನಿರ್ವಹಣಾ ಮಂಡಳಿ’ (BMB) ಯನ್ನು ರಚಿಸಲಾಯಿತು.
ಭಾಕ್ರಾ ನಂಗಲ್ ಯೋಜನೆಯ ಆಡಳಿತ, ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು 1 ಅಕ್ಟೋಬರ್, 1967 ರಿಂದ ಜಾರಿಗೆ ಬರುವಂತೆ ‘ಭಾಕ್ರಾ ನಿರ್ವಹಣಾ ಮಂಡಳಿ’ಗೆ ಹಸ್ತಾಂತರಿಸಲಾಯಿತು.
- ಬಿಯಾಸ್ ಯೋಜನೆಯನ್ನು ಪೂರ್ಣಗೊಳಿಸಿದ ನಂತರ, ಭಾರತ ಸರ್ಕಾರವು ಪಂಜಾಬ್ ಮರುಸಂಘಟನೆ ಕಾಯಿದೆ 1966 ರ ಸೆಕ್ಷನ್ 80 ರ ಪ್ರಕಾರ ಬಿಯಾಸ್ ನಿರ್ಮಾಣ ಮಂಡಳಿಯನ್ನು (Beas Construction Board – BCB) ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಗೆ ವರ್ಗಾಯಿಸಿತು.
- ಅದರ ಪ್ರಕಾರ ‘ಭಾಕ್ರಾ ನಿರ್ವಹಣಾ ಮಂಡಳಿಯ’ ಹೆಸರನ್ನು 15 ಮೇ 1976 ರಿಂದ ಜಾರಿಗೆ ಬರುವಂತೆ ‘ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ’ (BBMB) ಎಂದು ಮರುನಾಮಕರಣ ಮಾಡಲಾಯಿತು.
- ಅಂದಿನಿಂದ, ‘ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ’ ಯು ರಾಷ್ಟ್ರದ ಸೇವೆಗೆ ಸಮರ್ಪಿತವಾಗಿದೆ ಮತ್ತು ಭಾಕ್ರಾ ನಂಗಲ್ ಮತ್ತು ಬಿಯಾಸ್ ಯೋಜನೆಗಳಿಂದ ಪಂಜಾಬ್, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ದೆಹಲಿ ಮತ್ತು ಚಂಡೀಗಢಕ್ಕೆ ನೀರು ಮತ್ತು ವಿದ್ಯುತ್ ನ ತಡೆರಹಿತ ವಿತರಣೆಗೆ ಬದ್ಧವಾಗಿದೆ.
- ಇದು ಒಂದು ಶಾಸನಬದ್ಧ ಸಂಸ್ಥೆ (Statutory Body)ಯಾಗಿದೆ.
ಕಾರ್ಯಗಳು:
- ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಿಗೆ ಸಟ್ಲೆಜ್, ರವಿ ಮತ್ತು ಬಿಯಾಸ್‌ನಿಂದ ನೀರು ಪೂರೈಕೆಯ ನಿಯಂತ್ರಣ.
- ಭಾಕ್ರಾ ನಂಗಲ್ ಮತ್ತು ಬಿಯಾಸ್ ಯೋಜನೆಗಳಿಂದ ಉತ್ಪಾದಿಸಲಾಗುವ ವಿದ್ಯುತ್ ನ ಸರಬರಾಜು ಮತ್ತು ನಿಯಂತ್ರಣ.
- BBMB ವ್ಯವಸ್ಥೆಯ ಒಳಗೆ ಮತ್ತು ಹೊರಗೆ ಹೊಸ ಜಲವಿದ್ಯುತ್ ಯೋಜನೆಗಳ ನಿರ್ಮಾಣ.
ಭಾಕ್ರಾ ನಂಗಲ್ ಅಣೆಕಟ್ಟೆಯ ಇತಿಹಾಸ:
- ಭಾಕ್ರಾ-ನಂಗಲ್ ಅಣೆಕಟ್ಟು ಭಾರತದ ಸ್ವಾತಂತ್ರ್ಯದ ನಂತರ ಕೈಗೊಂಡ ಆರಂಭಿಕ ನದಿ ಕಣಿವೆ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾಗಿದೆ.
- ಈ ಯೋಜನೆಗೆ ಆಗಿನ ಪಂಜಾಬ್ ಕಂದಾಯ ಮಂತ್ರಿ ಸರ್ ಛೋಟು ರಾಮ್ ಮತ್ತು ಬಿಲಾಸ್‌ಪುರದ ರಾಜ ನ ನಡುವೆ ನವೆಂಬರ್ 1944 ರಲ್ಲಿ ಸಹಿ ಹಾಕಲ್ಪಟ್ಟಿತು ಮತ್ತು 8 ಜನವರಿ 1945 ರಂದು ಅಂತಿಮಗೊಳಿಸಲಾಯಿತು.
- ಈ ವಿವಿದೋದ್ದೇಶ ಅಣೆಕಟ್ಟಿನ ನಿರ್ಮಾಣವನ್ನು ಆರಂಭದಲ್ಲಿ ಪಂಜಾಬ್‌ನ ಆಗಿನ ಲೆಫ್ಟಿನೆಂಟ್ ಗವರ್ನರ್ ಸರ್ ಲೂಯಿಸ್ ಡೇನ್ ಪ್ರಾರಂಭಿಸಿದರು.
- ಆದರೆ, ದೇಶದಲ್ಲಿ ತಕ್ಷಣದ ಘಟನೆಗಳು ನಿರ್ಮಾಣ ಕಾರ್ಯವನ್ನು ವಿಳಂಬಗೊಳಿಸಿದವು ಮತ್ತು ಸ್ವಾತಂತ್ರ್ಯದ ನಂತರ, ಮುಖ್ಯ ವಾಸ್ತುಶಿಲ್ಪಿ ರಾಯ್ ಬಹದ್ದೂರ್ ಕುನ್ವರ್ ಸೇನ್ ಗುಪ್ತಾ ನೇತೃತ್ವದಲ್ಲಿ ಯೋಜನೆಯನ್ನು ಪುನರಾರಂಭಿಸಲಾಯಿತು.
- 1963 ರಲ್ಲಿ ಪೂರ್ಣಗೊಂಡ ಭಾಕ್ರಾ-ನಂಗಲ್ ಅಣೆಕಟ್ಟನ್ನು ಪ್ರಧಾನಿ ಜವಾಹರಲಾಲ್ ನೆಹರು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.
ಅಣೆಕಟ್ಟೆಯ ವೈಶಿಷ್ಟ್ಯಗಳು:
ಭಾಕ್ರಾ-ನಂಗಲ್ ಅಣೆಕಟ್ಟನ್ನು ಸಟ್ಲೆಜ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
- ಈ ಅಣೆಕಟ್ಟಿನ ಎತ್ತರವು ಸುಮಾರು 207.26 ಮೀಟರ್ ಆಗಿದೆ ಮತ್ತು ಇದು ತೆಹ್ರಿ ಅಣೆಕಟ್ಟಿನ ನಂತರ (ಎತ್ತರ ಸುಮಾರು 261 ಮೀಟರ್)ಏಷ್ಯಾದ ಎರಡನೇ ಅತಿ ಎತ್ತರದ ಅಣೆಕಟ್ಟು ಆಗಿದೆ. ತೆಹ್ರಿ ಅಣೆಕಟ್ಟು ಸಹ ಭಾರತದ ಉತ್ತರಾಖಂಡ ರಾಜ್ಯದಲ್ಲಿಯೇ ಇದೆ.
- ಭಾಕ್ರಾ-ನಂಗಲ್ ಅಣೆಕಟ್ಟಿನ ‘ಗೋಬಿಂದ್ ಸಾಗರ್ ಜಲಾಶಯ’ 9.34 ಬಿಲಿಯನ್ ಕ್ಯೂಬಿಕ್ ಮೀಟರ್‌ಗಳಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಫಿನ್ಲ್ಯಾಂಡ್ ಮತ್ತು ಸ್ವೀಡನ್ ಗಳ NATO ಸದಸ್ಯತ್ವ:
(Finland and Sweden’s NATO membership)
ಸಂದರ್ಭ:
ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಗಳು ನ್ಯಾಟೋಗೆ ಸೇರ್ಪಡೆಗೊಳ್ಳುವುದರಿಂದ ಉಂಟಾಗುವ “ಗಂಭೀರ ಮಿಲಿಟರಿ-ರಾಜಕೀಯ ಪರಿಣಾಮಗಳ” ಬಗ್ಗೆ ರಷ್ಯಾ ಎಚ್ಚರಿಸಿದೆ. ಆದರೆ ಇದನ್ನು ಈ ಎರಡೂ ದೇಶಗಳು ತಿರಸ್ಕರಿಸಿವೆ.
- ಆದಾಗ್ಯೂ, ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಕೆಲವು ಮಿತ್ರರಾಷ್ಟ್ರಗಳು ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಅನ್ನು ನ್ಯಾಟೋಗೆ “ಸೆಳೆಯಲು” ನಡೆಸಿದ ಪ್ರಯತ್ನವಾಗಿದೆ ಎಂದು ರಷ್ಯಾ ಕಳವಳ ವ್ಯಕ್ತಪಡಿಸಿದೆ ಮತ್ತು ಈ ಎರಡು ದೇಶಗಳು ‘ನ್ಯಾಟೋ ಮೈತ್ರಿ’ಗೆ ಸೇರಿದರೆ ಮಾಸ್ಕೋ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದೆ.
ರಷ್ಯಾದ ಬೇಡಿಕೆಗಳು:
ವ್ಲಾಡಿಮಿರ್ ಪುಟಿನ್ ಪೂರ್ವ ಉಕ್ರೇನ್‌ನಲ್ಲಿ ತನ್ನ ಪ್ರಾಕ್ಸಿ ಯುದ್ಧವನ್ನು ಪ್ರಾರಂಭಿಸಿ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ ರಷ್ಯಾ ಮತ್ತು ಪಶ್ಚಿಮದ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.
- ಪ್ರತಿಕ್ರಿಯೆಯಾಗಿ, ರಷ್ಯಾದ ಆಕ್ರಮಣಕ್ಕೆ ಗುರಿಯಾಗುವ ದೇಶಗಳಿಗೆ ಸಹಾಯ ಮಾಡಲು NATO ತನ್ನ ಪಡೆಗಳನ್ನು ಕಳುಹಿಸಿದೆ.
- ಡಿಸೆಂಬರ್‌ನಲ್ಲಿ, ಮಾಸ್ಕೋ ತನ್ನ ಭದ್ರತಾ ಬೇಡಿಕೆಗಳನ್ನು ಎರಡು ದಾಖಲೆಗಳಲ್ಲಿ ಮಂಡಿಸಿತು-ಯುಎಸ್‌ನೊಂದಿಗೆ ಪ್ರಸ್ತಾವಿತ ಒಪ್ಪಂದ ಮತ್ತು NATO ನೊಂದಿಗೆ ಒಪ್ಪಂದ.
- ಮುಖ್ಯವಾಗಿ, ರಷ್ಯಾ ಈಗ NATO ತನ್ನ ಪೂರ್ವದ ವಿಸ್ತರಣೆಯನ್ನು ನಿಲ್ಲಿಸಲು, ಉಕ್ರೇನ್ ಮತ್ತು ಇತರ ಹಿಂದಿನ ಸೋವಿಯತ್ ದೇಶಗಳಿಗೆ ಸದಸ್ಯತ್ವವನ್ನು ನಿರಾಕರಿಸಲು ಮತ್ತು ಮಧ್ಯ ಮತ್ತು ಪೂರ್ವ ಯುರೋಪ್‌ಗೆ ತನ್ನ ಮಿಲಿಟರಿ ನಿಯೋಜನೆಯನ್ನು ಹಿಂತೆಗೆದುಕೊಳ್ಳಲು NATO ನಿಂದ ಖಾತರಿಗಳನ್ನು ಬಯಸುತ್ತದೆ.
NATO ನೊಂದಿಗೆ ರಷ್ಯಾದ ವಿವಾದದ ಮೂಲ:
ಹಿಂದಿನ ವಾರ್ಸಾ ಒಪ್ಪಂದದ ರಾಷ್ಟ್ರಗಳು ಮತ್ತು ಹಿಂದಿನ ಸೋವಿಯತ್ ಗಣರಾಜ್ಯಗಳಿಗೆ NATO, ವಿಶೇಷವಾಗಿ 1990 ರ ದಶಕದ ಉತ್ತರಾರ್ಧದಲ್ಲಿ (ಜೆಕ್ ರಿಪಬ್ಲಿಕ್, ಹಂಗೇರಿ ಮತ್ತು ಪೋಲೆಂಡ್) ಮತ್ತು 2000 ರ ದಶಕದ ಆರಂಭದಲ್ಲಿ (ಬಲ್ಗೇರಿಯಾ, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ರೊಮೇನಿಯಾ, ಸ್ಲೋವಾಕಿಯಾ ಮತ್ತು ಸ್ಲೊವೇನಿಯಾ) ತನ್ನ ಮೈತ್ರಿಯ ಬಾಗಿಲುಗಳನ್ನು ತೆರೆದ ನಂತರ NATO ದ ಪೂರ್ವ ದಿಕ್ಕಿನ ವಿಸ್ತರಣೆಯ ಬಗ್ಗೆ ರಷ್ಯಾದ ನಾಯಕರು ಬಹಳ ಹಿಂದಿನಿಂದಲೂ ಜಾಗರೂಕರಾಗಿದ್ದರು.
ಜಾರ್ಜಿಯಾ ಮತ್ತು ಉಕ್ರೇನ್ ಅನ್ನು ತನ್ನ NATO ಮೈತ್ರಿಕೂಟದಲ್ಲಿ ಸೇರಿಸಿಕೊಳ್ಳುವ ಉದ್ದೇಶವನ್ನು NATO ಘೋಷಿಸಿದ ನಂತರ ರಷ್ಯಾದ ನಾಯಕರ ಈ ಭಯವು 2000 ರ ದಶಕದ ಅಂತ್ಯದಲ್ಲಿ ಮತ್ತಷ್ಟು ಹೆಚ್ಚಾಯಿತು.
ಪ್ರಸ್ತುತ NATO ಮತ್ತು USA ದ ಎದುರು ರಷ್ಯಾದ ಬೇಡಿಕೆಗಳು:
ರಷ್ಯಾದಿಂದ ಎರಡು ಒಪ್ಪಂದದ ಕರಡುಗಳನ್ನು ಸಲ್ಲಿಸಲಾಗಿದೆ, ಇದು ಯುನೈಟೆಡ್ ಸ್ಟೇಟ್ಸ್ ಮತ್ತು NATO ನಿಂದ ಕ್ರಮವಾಗಿ ಸ್ಪಷ್ಟವಾದ, ಕಾನೂನುಬದ್ಧವಾಗಿ ಬಂಧಿಸುವ ಭದ್ರತಾ ಖಾತರಿಗಳನ್ನು ಕೇಳುತ್ತದೆ:
- ಈ ಕರಡುಗಳು ಪೂರ್ವದಲ್ಲಿ NATO ತನ್ನ ವಿಸ್ತರಣೆಯನ್ನು ಕೊನೆಗೊಳಿಸಲು ಮತ್ತು ನಿರ್ದಿಷ್ಟವಾಗಿ, ಉಕ್ರೇನ್‌ನಂತಹ ಹಿಂದಿನ ಸೋವಿಯತ್ ಒಕ್ಕೂಟದ ದೇಶಗಳಿಗೆ ಭವಿಷ್ಯದ ಸದಸ್ಯತ್ವವನ್ನು ನಿರಾಕರಿಸಲು ಕರೆ ನೀಡುತ್ತವೆ. ಇದರ ಹೊರತಾಗಿ, ಹಿಂದಿನ ಸೋವಿಯತ್ ಒಕ್ಕೂಟದ ದೇಶಗಳೊಂದಿಗೆ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಸಹಕಾರವನ್ನು ಹೊಂದದಂತೆ ಅಥವಾ ಈ ದೇಶಗಳಲ್ಲಿ ಸೈನಿಕ ನೆಲೆಗಳನ್ನು ನಿರ್ಮಿಸದಂತೆ ತಡೆಯುವ ಬೇಡಿಕೆಗಳೂ ಇವೆ.
- ಈ ದಾಖಲೆಗಳು ಎರಡೂ ಸಹಿದಾರರು ತಮ್ಮ ರಾಷ್ಟ್ರೀಯ ಗಡಿಯ ಹೊರಗಿನ ಪ್ರದೇಶಗಳಲ್ಲಿ ಮಿಲಿಟರಿ ಸ್ವತ್ತುಗಳನ್ನು ನಿಯೋಜಿಸುವುದನ್ನು ತಡೆಯಲು ಪ್ರಯತ್ನಿಸುತ್ತವೆ, ಅಂತಹ ನಿಯೋಜನೆಯನ್ನು “ಇತರ ಪಕ್ಷವು ತನ್ನ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸಬಹುದಾಗಿದೆ”.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾದ ಬಾಹ್ಯಾಕಾಶ ಸಂಸ್ಥೆಯಿಂದ ಬೆದರಿಕೆ:
(Russian space agency’s threat on International Space Station)
ಸಂದರ್ಭ:
ಯುಎಸ್ ಹೇರಿದ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ಬಾಹ್ಯಾಕಾಶಕ್ಕೆ ಬೀಳದಂತೆ ತಡೆಯುವಲ್ಲಿ ರಷ್ಯಾ ತನ್ನ ಪಾತ್ರವನ್ನು ಕೊನೆಗೊಳಿಸಬಹುದು,ಇದರ ಪರಿಣಾಮವಾಗಿ ISS ಬಾಹ್ಯಾಕಾಶದಿಂದ ಕೆಳಗೆ ಬೀಳುತ್ತದೆ ಎಂದು ಪ್ರಸ್ತುತ ನಡೆಯುತ್ತಿರುವ ಯುದ್ಧದ ಮಧ್ಯೆ, ರಷ್ಯಾದ ಬಾಹ್ಯಾಕಾಶ ಸಂಸ್ಥೆ ಹೀಗೆ ಹೇಳುವ ಮೂಲಕ ಬೆದರಿಕೆ ಹಾಕಿದೆ.
ಅಂತಹ ಕ್ರಿಯೆಗಳಿಂದ ಬಾಹ್ಯಾಕಾಶ ನಿಲ್ದಾಣವನ್ನು ಹೇಗೆ ರಕ್ಷಿಸಲಾಗುತ್ತದೆ?
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station Intergovernmental Agreement) ವನ್ನು ಅಂತರಸರ್ಕಾರಿ ಒಪ್ಪಂದದ ಮೂಲಕ ನಿಯಂತ್ರಿಸಲಾಗುತ್ತದೆ.
‘ಬಾಹ್ಯಾಕಾಶ ನಿಲ್ದಾಣ ಯೋಜನೆ’ಯಲ್ಲಿ ತೊಡಗಿರುವ ಹದಿನೈದು ರಾಷ್ಟ್ರಗಳ ಸರ್ಕಾರಗಳು 29 ಜನವರಿ 1998 ರಂದು ಈ ಒಪ್ಪಂದಕ್ಕೆ ಸಹಿ ಹಾಕಿದವು.
ಶಾಶ್ವತವಾಗಿ ವಾಸಿಸುವ ‘ನಾಗರಿಕ ಬಾಹ್ಯಾಕಾಶ ನಿಲ್ದಾಣ’ದ ವಿವರವಾದ ವಿನ್ಯಾಸ, ಅಭಿವೃದ್ಧಿ, ಕಾರ್ಯಾಚರಣೆ ಮತ್ತು ಬಳಕೆಗಾಗಿ ನಿಜವಾದ ಪಾಲುದಾರಿಕೆಯ ಆಧಾರದ ಮೇಲೆ ಶಾಂತಿಯುತ ಉದ್ದೇಶಗಳಿಗಾಗಿ ದೀರ್ಘಾವಧಿಯ ಅಂತರರಾಷ್ಟ್ರೀಯ ಸಹಕಾರ ಚೌಕಟ್ಟನ್ನು ಈ ಒಪ್ಪಂದದಲ್ಲಿ ಸ್ಥಾಪಿಸಲಾಗಿದೆ.
‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ದ ಮೇಲೆ ಅಧಿಕಾರ:
ಈ ಅಂತರಸರ್ಕಾರಿ ಒಪ್ಪಂದದಲ್ಲಿ, ಬಾಹ್ಯಾಕಾಶ ನಿಲ್ದಾಣದ ಭಾಗವಹಿಸುವ ರಾಷ್ಟ್ರಗಳಿಗೆ ತಮ್ಮ ‘ರಾಷ್ಟ್ರೀಯ ನ್ಯಾಯವ್ಯಾಪ್ತಿ’ಯನ್ನು ಬಾಹ್ಯ ಬಾಹ್ಯಾಕಾಶಕ್ಕೆ ವಿಸ್ತರಿಸುವ ಹಕ್ಕನ್ನು ನೀಡಲಾಗಿದೆ ಮತ್ತು ಅವರು ಒದಗಿಸಿದ ಅಂಶಗಳನ್ನು (ಉದಾಹರಣೆಗೆ ಪ್ರಯೋಗಾಲಯಗಳು) ಭಾಗವಹಿಸುವ ದೇಶಗಳ ಪ್ರಾಂತ್ಯಗಳಲ್ಲಿ ಸಂಯೋಜಿಸಲಾಗುತ್ತದೆ.
- ಒಪ್ಪಂದದ ಮೂಲಭೂತ ನಿಯಮವೆಂದರೆ ‘ಪ್ರತಿಯೊಂದು ಭಾಗವಹಿಸುವ ದೇಶವು ತಾನು ನೋಂದಾಯಿಸುವ ಅಂಶಗಳ ಮೇಲೆ ಅಧಿಕಾರ/ನ್ಯಾಯ ವ್ಯಾಪ್ತಿ ಮತ್ತು ನಿಯಂತ್ರಣವನ್ನು ನಿರ್ವಹಿಸಬೇಕು ಮತ್ತು ಬಾಹ್ಯಾಕಾಶ ನಿಲ್ದಾಣದಲ್ಲಿ ಅಥವಾ ಅಂಶಗಳ ಮೇಲೆ ನೆಲೆಗೊಂಡಿರುವ ತನ್ನ ದೇಶದ ನಾಗರಿಕ ಸಿಬ್ಬಂದಿಯ ಮೇಲೆ ನಿಯಂತ್ರಣವನ್ನು ಹೊಂದಿರಬೇಕು’ (ಅಂತರ ಸರ್ಕಾರಿ ಒಪ್ಪಂದದ ಅನುಚ್ಚೇಧ 5).
- ಇದರರ್ಥ, ಬಾಹ್ಯಾಕಾಶ ನಿಲ್ದಾಣದ ಅಧಿಕಾರಸ್ಥರು/ಮಾಲೀಕರು – ಯುನೈಟೆಡ್ ಸ್ಟೇಟ್ಸ್, ರಷ್ಯಾ, ಯುರೋಪ್‌ನ ಪಾಲುದಾರ ರಾಷ್ಟ್ರಗಳು, ಜಪಾನ್ ಮತ್ತು ಕೆನಡಾ – ಅವರು ಒದಗಿಸುವ ಸಂಬಂಧಿತ ಅಂಶಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗಿರುತ್ತಾರೆ.
ಏನಾದರೂ ತಪ್ಪಾದಲ್ಲಿ ಹೊಣೆಗಾರಿಕೆ ಯಾರದು?
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾನೂನು ಚೌಕಟ್ಟು, ಹೊಣೆಗಾರಿಕೆ ಸಮಾವೇಶ-1972 (Liability Convention –1972) ನಂತಹ ಅಂತರಾಷ್ಟ್ರೀಯ ಬಾಹ್ಯಾಕಾಶ ಕಾನೂನು ಒಪ್ಪಂದಗಳಲ್ಲಿ ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದ ‘ಮೂಲ ಹೊಣೆಗಾರಿಕೆ ನಿಯಮಗಳನ್ನು’ ಗುರುತಿಸುತ್ತದೆ.
- ಅಂತರಸರ್ಕಾರಿ ಒಪ್ಪಂದದಲ್ಲಿ, ಕ್ರಾಸ್- ವೆವರ್ ಲಯಾಬಿಲಿಟಿ’ಗೆ (Cross-Waiver of Liability) ಅವಕಾಶ ಕಲ್ಪಿಸಲಾಗಿದೆ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಚಟುವಟಿಕೆಗಳಿಂದ ಉಂಟಾಗುವ ಹಾನಿಗಳಿಗೆ ಐದು ಪಾಲುದಾರರಲ್ಲಿ ಯಾರಾದರೂ ಅಥವಾ ಅವರ ಸಂಬಂಧಿತ ಘಟಕಗಳು (ಗುತ್ತಿಗೆದಾರರು, ಉಪ-ಗುತ್ತಿಗೆದಾರರು, ಬಳಕೆದಾರರು, ಗ್ರಾಹಕರು) ಯಾವುದೇ ಇತರ ಪಾಲುದಾರರ (ಅಥವಾ ಅದಕ್ಕೆ ಸಂಬಂಧಿಸಿದ ಘಟಕಗಳು) ವಿರುದ್ಧ ಉಂಟಾದ ಹಾನಿಗಾಗಿ ಪರಿಹಾರ ಪಡೆಯುವುದನ್ನು ನಿಷೇಧಿಸಲಾಗಿದೆ (ಅಂತರಸರ್ಕಾರಿ ಒಪ್ಪಂದದ ಆರ್ಟಿಕಲ್ 16).
- ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರತಿಯೊಬ್ಬ ಭಾಗವಹಿಸುವವರು ತನ್ನದೇ ಆದ ಗುತ್ತಿಗೆದಾರರು ಮತ್ತು ಉಪಗುತ್ತಿಗೆದಾರರೊಂದಿಗಿನ ಒಪ್ಪಂದಗಳಲ್ಲಿ ಈ ಬಾಧ್ಯತೆಯನ್ನು ಜಾರಿಗೊಳಿಸುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಇತರ ಅಂತರಾಷ್ಟ್ರೀಯ ಬಾಹ್ಯಾಕಾಶ ಕಾನೂನು ಒಪ್ಪಂದಗಳು ಮತ್ತು ತತ್ವಗಳು:
ಬಾಹ್ಯಾಕಾಶದ ಶಾಂತಿಯುತ ಉಪಯೋಗಗಳ ಕುರಿತ ಸಮಿತಿಯು ಅಂತರರಾಷ್ಟ್ರೀಯ ಬಾಹ್ಯಾಕಾಶ ಕಾನೂನನ್ನು ಅಭಿವೃದ್ಧಿಪಡಿಸುವ ಪ್ರಮುಖ ವೇದಿಕೆಯಾಗಿದೆ.
ಸಮಿತಿಯು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಚಟುವಟಿಕೆಗಳ ಐದು ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಐದು ಸೆಟ್ ತತ್ವಗಳನ್ನು ರೂಪಿಸಿದೆ, ಅವುಗಳೆಂದರೆ:
- “ಬಾಹ್ಯ ಬಾಹ್ಯಾಕಾಶ ಒಪ್ಪಂದ”(Outer Space Treaty).
- “ಪಾರುಗಾಣಿಕಾ ಒಪ್ಪಂದ”(Rescue Agreement).
- “ಬಾಧ್ಯತಾ ಸಮಾವೇಶ” (Liability Convention).
- “ನೋಂದಣಿ ಸಮಾವೇಶ” (Registration Convention).
- “ಚಂದ್ರನ ಒಪ್ಪಂದ”(Moon Agreement).
ಐದು ಘೋಷಣೆಗಳು ಮತ್ತು ಕಾನೂನು ತತ್ವಗಳು ಈ ಕೆಳಗಿನಂತಿವೆ:
- “ಕಾನೂನು ತತ್ವಗಳ ಘೋಷಣೆ” (Declaration of Legal Principles).
- “ಪ್ರಸಾರ ತತ್ವಗಳು” (Broadcasting Principles).
- “ರಿಮೋಟ್ ಸೆನ್ಸಿಂಗ್ ಪ್ರಿನ್ಸಿಪಲ್ಸ್” (Remote Sensing Principles).
- “ಪರಮಾಣು ಶಕ್ತಿ ಮೂಲಗಳು” ತತ್ವಗಳು (‘Nuclear Power Sources’ Principles).
- “ಬೆನಿಫಿಟ್ ಘೋಷಣೆ” (Benefits Declaration).
ಇತರ ಬಾಹ್ಯಾಕಾಶ ಕೇಂದ್ರಗಳು:
- ಪ್ರಸ್ತುತ ಕಕ್ಷೆಯಲ್ಲಿರುವ ಏಕೈಕ ಬಾಹ್ಯಾಕಾಶ ನಿಲ್ದಾಣವೆಂದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS). ISS ಯುನೈಟೆಡ್ ಸ್ಟೇಟ್ಸ್, ರಷ್ಯಾ, ಯುರೋಪ್, ಜಪಾನ್ ಮತ್ತು ಕೆನಡಾ ಗಳ ಬೆಂಬಲವನ್ನು ಹೊಂದಿವೆ.
- ಇಲ್ಲಿಯವರೆಗೆ, ಚೀನಾ ಟಿಯಾಂಗಾಂಗ್ -1 ಮತ್ತು ಟಿಯಾಂಗಾಂಗ್ -2 (Tiangong-1 and Tiangong-2) ಎಂಬ ಎರಡು ಪ್ರಾಯೋಗಿಕ ಬಾಹ್ಯಾಕಾಶ ನಿಲ್ದಾಣಗಳನ್ನು ಕಕ್ಷೆಗೆ ಕಳುಹಿಸಿದೆ.
- ಭಾರತವು 2030 ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಪ್ರಾರಂಭಿಸಲು ಯೋಜಿಸುತ್ತಿದೆ.
- ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ‘(ISS) ಭೂಮಿಯ ಕೆಳ ಕಕ್ಷೆಯಲ್ಲಿರುವ’(ನಿಕಟವರ್ತಿ ಕಕ್ಷೆಯಲ್ಲಿ) ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣ ‘(ವಾಸಯೋಗ್ಯ ಕೃತಕ ಉಪಗ್ರಹ) ವಾಗಿದೆ.
ಮಹತ್ವ:
- ಅರ್ಥಪೂರ್ಣ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸಲು, ವಿಶೇಷವಾಗಿ ಜೈವಿಕ ಪ್ರಯೋಗಗಳಿಗೆ ಬಾಹ್ಯಾಕಾಶ ಕೇಂದ್ರಗಳು ಅಗತ್ಯವಾಗಿವೆ.
- ‘ಬಾಹ್ಯಾಕಾಶ ನಿಲ್ದಾಣಗಳು’ ಇತರ ಬಾಹ್ಯಾಕಾಶ ವಾಹನಗಳಲ್ಲಿ ಲಭ್ಯವಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಮತ್ತು ದೀರ್ಘಾವಧಿಯವರೆಗೆ ವೈಜ್ಞಾನಿಕ ಅಧ್ಯಯನಗಳಿಗೆ ವೇದಿಕೆಗಳನ್ನು ಒದಗಿಸುತ್ತವೆ.
- ಕ್ರೀವ್ ನ ಪ್ರತಿಯೊಬ್ಬ ಸದಸ್ಯರು ವಾರಗಳು ಅಥವಾ ತಿಂಗಳುಗಳವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುತ್ತಾರೆ, ಆದರೆ ಅವರ ಬಾಹ್ಯಾಕಾಶ ಹಾರಾಟದ ಅವಧಿಯು ಸಾಮಾನ್ಯವಾಗಿ ಒಂದು ವರ್ಷವನ್ನು ಮೀರುವುದಿಲ್ಲ.
- ಬಾಹ್ಯಾಕಾಶ ನಿಲ್ದಾಣಗಳನ್ನು ಮಾನವ ದೇಹದ ಮೇಲೆ ದೀರ್ಘಾವಧಿಯ ಬಾಹ್ಯಾಕಾಶ ಹಾರಾಟದ ಪರಿಣಾಮಗಳನ್ನು ಅಧ್ಯಯನ ಮಾಡಲು ಬಳಸಲಾಗುತ್ತದೆ.
ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.
ಡಿಜಿಟಲ್ ಲೆಂಡಿಂಗ್ ಮತ್ತು ಸಂಬಂಧಿತ ಸಮಸ್ಯೆಗಳು:
(Digital lending and issues associated)
ಸಂದರ್ಭ:
ಕಳೆದ ವಾರ, ನವದೆಹಲಿಯ ‘PC ಫೈನಾನ್ಷಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಗೆ ರಿಸರ್ವ್ ಬ್ಯಾಂಕ್ ನೀಡಿದ್ದ ‘ನೋಂದಣಿ ಪ್ರಮಾಣಪತ್ರ ((Certificate of Registration – CoR))’ ವನ್ನು ರದ್ದುಗೊಳಿಸಿದೆ. ಈ ಸಂಸ್ಥೆಯು ಪ್ರಾಥಮಿಕವಾಗಿ ‘CASHBEAN’ ಎಂಬ ಅಪ್ಲಿಕೇಶನ್ ಮೂಲಕ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸಾಲ-ನಿರ್ವಹಣೆ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿತ್ತು.
‘PC ಫೈನಾನ್ಶಿಯಲ್’ ನ ಪರವಾನಗಿ ರದ್ದತಿಗೆ ಕಾರಣ:
- RBI ಪ್ರಕಾರ, ಕಂಪನಿಯ ‘ನೋಂದಣಿ ಪ್ರಮಾಣಪತ್ರ’ ವನ್ನು(CoR) ಹೊರಗುತ್ತಿಗೆ ಮತ್ತು ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ ನಿಯಮಗಳ ಸಂಪೂರ್ಣ ಉಲ್ಲಂಘನೆಯಂತಹ ಮೇಲ್ವಿಚಾರಣಾ ಕಾಳಜಿಗಳ ಕಾರಣಗಳಿಂದಾಗಿ ರದ್ದುಗೊಳಿಸಲಾಗಿದೆ.
- ಈ ಕಂಪನಿಯು ‘ನ್ಯಾಯಯುತ ಕಾರ್ಯವಿಧಾನದ ಕೋಡ್’ ಅನ್ನು ಉಲ್ಲಂಘಿಸಿ ಅದರ ಸಾಲಗಾರರಿಂದ ಅತಿಯಾದ ಬಡ್ಡಿ ದರಗಳು ಮತ್ತು ಇತರ ಶುಲ್ಕಗಳೊಂದಿಗೆ ಅಪಾರದರ್ಶಕವಾಗಿ ಸಾಲ ವಸೂಲಿ ಮಾಡಿರುವುದು ಕಂಡುಬಂದಿದೆ,ಮತ್ತು ಸಾಲಗಾರರಿಂದ ಹಣ ವಸೂಲಿ ಮಾಡಲು ಆರ್‌ಬಿಐ ಮತ್ತು ಕೇಂದ್ರೀಯ ತನಿಖಾ ದಳದ ‘ಲೋಗೋ’ಗಳ ಅನಧಿಕೃತ ಬಳಕೆಯಲ್ಲಿ ತೊಡಗಿರುವುದು ಕಂಡುಬಂದಿದೆ.
ಪ್ರಸ್ತುತ ಕಾಳಜಿಗಳು:
- ‘ಡಿಜಿಟಲ್ ಲೆಂಡಿಂಗ್’ ನಿಯಂತ್ರಣಕ್ಕಾಗಿ ನವೆಂಬರ್ 2021 ರಲ್ಲಿ ಸ್ಥಾಪಿಸಲಾದ ಡಿಜಿಟಲ್ ಸಾಲದ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ವರ್ಕಿಂಗ್ ಗ್ರೂಪ್ (Reserve Bank of India Working Group (WG) on digital lending) ಸಂಶೋಧನೆಗಳ ಪ್ರಕಾರ,ಪ್ರಸ್ತುತ 80 ಆಪ್ ಸ್ಟೋರ್‌ಗಳಲ್ಲಿ ಭಾರತೀಯ ಆಂಡ್ರಾಯ್ಡ್ ಬಳಕೆದಾರರಿಗೆ ಸಾಲ ನೀಡಲು 1100 ಅಪ್ಲಿಕೇಶನ್‌ಗಳು ಲಭ್ಯವಿದ್ದು, ಅವುಗಳಲ್ಲಿ 600 ಕಾನೂನುಬಾಹಿರ ಅಪ್ಲಿಕೇಶನ್ ಗಳಾಗಿವೆ.
- ಮತ್ತು ಸಾಲ ನೀಡುವ ಅಪ್ಲಿಕೇಶನ್‌ಗಳ ಸಂಖ್ಯೆಯು ಹೆಚ್ಚಾದಂತೆ, ಕಾನೂನುಬಾಹಿರ ಅಪ್ಲಿಕೇಶನ್‌ಗಳ ಸಂಖ್ಯೆಯು ಹೆಚ್ಚಾಗುತ್ತದೆ, ಏಕೆಂದರೆ ಸಾಲ ಒದಗಿಸುವ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಬಳಕೆದಾರರು ಆ ಅಪ್ಲಿಕೇಶನ್ ಕಾನೂನುಬದ್ಧವಾಗಿದೆಯೇ ಎಂದು ಗುರುತಿಸಲು ಸಾಧ್ಯವಿಲ್ಲ.
- ಇದಲ್ಲದೇ ಅಂತರ್ಜಾಲದಲ್ಲಿ ಅನೇಕ ನಕಲಿ ಆಪ್‌ಗಳು ಮತ್ತು ವೆಬ್‌ಸೈಟ್‌ಗಳು ಅಣಬೆಗಳಂತೆ ಪ್ರವರ್ಧಮಾನಕ್ಕೆ ಬರುವ ಸಾಧ್ಯತೆಯೂ ಇದೆ.
- ಇಂತಹ ಕಾನೂನುಬಾಹಿರ ಅಪ್ಲಿಕೇಶನ್‌ಗಳು ಬಳಕೆದಾರರ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ (Personally Identifiable Information), ಹಣಕಾಸಿನ ಡೇಟಾ ಮತ್ತು ಇತರ ಸೂಕ್ಷ್ಮ ವಿವರಗಳನ್ನು ಸಂಗ್ರಹಿಸಬಹುದು,ಬಳಕೆದಾರರ ಖಾತೆಗಳನ್ನು, ಫಿಶಿಂಗ್ ದಾಳಿಗಳನ್ನು ಮಾಡಲು ಇದನ್ನು ಬಳಸಬಹುದು ಮತ್ತು ಗುರುತು ಕಳ್ಳತನ ಅಥವಾ ‘ಐಡೆಂಟಿಟಿ ಥೆಫ್ಟ್’ (Identity Theft) ಅನ್ನು ಕೈಗೊಳ್ಳಲು ಬಳಸಬಹುದು.
RBI ಕಾರ್ಯನಿರತ ಗುಂಪು:
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ – ನಿಯಂತ್ರಿತ ಮತ್ತು ಅನಿಯಂತ್ರಿತ ಹಣಕಾಸು ವಲಯದಲ್ಲಿ ಡಿಜಿಟಲ್ ಸಾಲ ನೀಡುವ ಚಟುವಟಿಕೆಗಳ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡಿಜಿಟಲ್ ಸಾಲ ನೀಡುವ ಬಗ್ಗೆ ರಚಿಸಿದ್ದ ಕಾರ್ಯನಿರತ ಗುಂಪು (Reserve Bank of India Working Group (WG) on digital lending) 2021ರ ನವಂಬರ್ ನಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.
ಪ್ರಮುಖ ಶಿಫಾರಸುಗಳು:
- ಈ ರೀತಿಯ ಸಾಲಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಕಾನೂನು ರೂಪಿಸಬೇಕು.
- ಡಿಜಿಟಲ್ ಲೆಂಡಿಂಗ್ ಆಪ್ (Digital Lending Apps)ಗಳ ತನಿಖೆಗೆ ನೋಡಲ್ ಏಜೆನ್ಸಿ ಇರಬೇಕು.
- ಡಿಜಿಟಲ್ ಸಾಲ ನೀಡುವ ಪರಿಸರ ವ್ಯವಸ್ಥೆಯಲ್ಲಿ ಭಾಗವಹಿಸುವವರಿಗೆ ‘ಸ್ವಯಂ-ನಿಯಂತ್ರಕ ಸಂಸ್ಥೆ’ಯನ್ನು ಸ್ಥಾಪಿಸಬೇಕು.
- ಕೆಲವು ಮೂಲಭೂತ ತಂತ್ರಜ್ಞಾನದ ಮಾನದಂಡಗಳನ್ನು ಅಭಿವೃದ್ಧಿಪಡಿಸಿ ಮತ್ತು ಡಿಜಿಟಲ್ ಸಾಲ ಪರಿಹಾರಗಳನ್ನು ಪರಿಚಯಿಸಲು ಪೂರ್ವ-ಷರತ್ತಾಗಿ ಆ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಿ.
- ಸಾಲವನ್ನು ನೇರವಾಗಿ ಸಾಲಗಾರರ ಬ್ಯಾಂಕ್ ಖಾತೆಗಳಿಗೆ ವಿತರಿಸಬೇಕು ಮತ್ತು ಸಾಲಗಳ ವಿತರಣೆ ಮತ್ತು ಸೇವೆಯನ್ನು ಡಿಜಿಟಲ್ ಸಾಲದಾತರ ಬ್ಯಾಂಕ್ ಖಾತೆಗಳ ಮೂಲಕ ಮಾತ್ರ ಮಾಡಬೇಕು.
- ಪರಿಶೀಲಿಸಬಹುದಾದ ಆಡಿಟ್ ಟ್ರೇಲ್‌ಗಳೊಂದಿಗೆ ಸಾಲಗಾರರ ಪೂರ್ವ ಮತ್ತು ಸ್ಪಷ್ಟ ಒಪ್ಪಿಗೆಯೊಂದಿಗೆ ಡೇಟಾ ಸಂಗ್ರಹಣೆಯನ್ನು ಮಾಡಬೇಕು ಮತ್ತು ಎಲ್ಲಾ ಡೇಟಾವನ್ನು ಭಾರತದಲ್ಲಿ ನೆಲೆಗೊಂಡಿರುವ ಸರ್ವರ್‌ಗಳಲ್ಲಿ ಸಂಗ್ರಹಿಸಬೇಕು.
ಡಿಜಿಟಲ್ ಸಾಲ ನೀಡುವಿಕೆಯ ಪ್ರಯೋಜನಗಳು:
ಡಿಜಿಟಲ್ ಸಾಲವು ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳಿಗೆ ಹೆಚ್ಚು ನ್ಯಾಯೋಚಿತ, ಪರಿಣಾಮಕಾರಿ ಮತ್ತು ಅಂತರ್ಗತ ಪ್ರವೇಶವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.
ಫಿನ್‌ಟೆಕ್ ನೇತೃತ್ವದಲ್ಲಿ ಈ ನಾವೀನ್ಯತೆಯು, ಕೆಲವು ವರ್ಷಗಳ ಹಿಂದೆ ದ್ವಿತೀಯ ಪೋಷಕ ಪಾತ್ರದಿಂದ ಮುಂದೆ ಬಂದು ಈಗ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳ ವಿನ್ಯಾಸ, ಬೆಲೆ ಮತ್ತು ವಿತರಣೆಗಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಈ ಸಮಯದ ಅವಶ್ಯಕತೆ:
ಡೇಟಾ ಸುರಕ್ಷತೆ, ಖಾಸಗಿತನ, ಗೌಪ್ಯತೆ ಮತ್ತು ಗ್ರಾಹಕರ ರಕ್ಷಣೆಯನ್ನು ಖಾತ್ರಿಪಡಿಸುವಾಗ ನಾವೀನ್ಯತೆಯನ್ನು ಬೆಂಬಲಿಸಲು ಈ ನಿಯಂತ್ರಕ ಸಂಸ್ಥೆಗಳು ಸಮತೋಲಿತ ವಿಧಾನವನ್ನು ಅನುಸರಿಸಬೇಕು.
ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳೊಂದಿಗಿನ ಸಮಸ್ಯೆಗಳು ಯಾವುವು?
- ಅವು ಸಾಲಗಾರರನ್ನು ತ್ವರಿತವಾಗಿ ಮತ್ತು ತೊಂದರೆ ಮುಕ್ತ ರೀತಿಯಲ್ಲಿ ಸಾಲ ನೀಡುವ ಭರವಸೆಯೊಂದಿಗೆ ಆಕರ್ಷಿಸುತ್ತವೆ.
- ಆದರೆ ,ಸಾಲಗಾರರಿಂದ ಹೆಚ್ಚುವರಿ ಬಡ್ಡಿದರಗಳು ಮತ್ತು ಹೆಚ್ಚುವರಿ ಗುಪ್ತ ಶುಲ್ಕಗಳನ್ನು ಕೇಳಲಾಗುತ್ತದೆ.
- ಅಂತಹ ಪ್ಲಾಟ್‌ಫಾರ್ಮ್‌ಗಳು ಸಾಲ ವಸೂಲಾತಿಗೆ ಸ್ವೀಕಾರಾರ್ಹವಲ್ಲದ ಮತ್ತು ಉನ್ನತ-ಬಲ ಪ್ರಯೋಗದ ಕಠಿಣ ವಿಧಾನಗಳನ್ನು ಅಳವಡಿಸಿಕೊಳ್ಳುತ್ತವೆ.
- ಸಾಲಗಾರರ ಮೊಬೈಲ್ ಫೋನ್‌ಗಳಲ್ಲಿರುವ ದತ್ತಾಂಶವನ್ನು ಜಾಲಾಡುವ ಮೂಲಕ ಅವುಗಳು ಒಪ್ಪಂದಗಳನ್ನು ದುರುಪಯೋಗಪಡಿಸಿಕೊಳ್ಳುತ್ತವೆ.
ಆರ್‌ಬಿಐ ನ ಸಲಹೆಗಳು:
ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ನೀಡಲು ತಮ್ಮ ಡಿಜಿಟಲ್ ವೇದಿಕೆಯನ್ನು ಬಳಸಲಿ ಅಥವಾ ಹೊರಗುತ್ತಿಗೆ ಆಧಾರದ ವೇದಿಕೆಯನ್ನೇ ಬಳಸಲಿ, ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಳೆದ ವರ್ಷದ ಜೂನ್ ತಿಂಗಳಲ್ಲಿ ಆರ್‌ಬಿಐ ಸೂಚನೆ ನೀಡಿತ್ತು.
- ಸಾಲ ಪಡೆಯುವುದಕ್ಕೂ ಮುನ್ನ ಇಂಥ ಆ್ಯಪ್‌ಗಳ ಮೂಲ ಹಾಗೂ ಹಿನ್ನೆಲೆಗಳನ್ನು ವಿವರವಾಗಿ ಪರಿಶೀಲಿಸಿಕೊಳ್ಳಿ.
- ಅಜ್ಞಾತ ವ್ಯಕ್ತಿಗಳ ಜತೆಗೆ ಅಥವಾ ಆ್ಯಪ್‌ಗಳ ಜತೆಗೆ ಯಾವ ಕಾರಣಕ್ಕೂ ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ಕುರಿತ ಮಾಹಿತಿ ಮತ್ತು ದಾಖಲೆಗಳನ್ನು ಹಂಚಿಕೊಳ್ಳಬೇಡಿ.
- ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪರವಾಗಿ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸಮಾಡುವ ಆ್ಯಪ್‌ಗಳು ಕಡ್ಡಾಯವಾಗಿ ಸಾಲ ನೀಡುವ ಸಂಸ್ಥೆಯ ಹೆಸರನ್ನು ಸಾಲ ಪಡೆಯುವವರಿಗೆ ಒದಗಿಸಬೇಕು.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
‘ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಹಕ್ಕುಗಳ ಮಾನ್ಯತೆ / ಗುರುತಿಸುವಿಕೆ ಕಾಯಿದೆ)’:
(The ‘Scheduled Tribes and Other Traditional Forest Dwellers (Recognition of Rights Act)’
ಸಂದರ್ಭ:
ಹಿಮಾಚಲ ಪ್ರದೇಶ ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ, 2006 ರ ‘ಅರಣ್ಯ ಹಕ್ಕುಗಳ ಕಾಯ್ದೆ’ (FRA) ಸೆಕ್ಷನ್ 3(1) ಅಡಿಯಲ್ಲಿ ಸಲ್ಲಿಸಲಾದ 164 ಕ್ಲೈಮ್‌ಗಳು ಮತ್ತು ಸೆಕ್ಷನ್ 3(2) ಅಡಿಯಲ್ಲಿ ದಾಖಲಿಸಲಾದ 1,811 ಪ್ರಕರಣಗಳನ್ನು ರಾಜ್ಯವು ಇತ್ಯರ್ಥಪಡಿಸಿದೆ.
ಅರಣ್ಯ ಹಕ್ಕುಗಳ ಕಾಯ್ದೆಯ ಕುರಿತು:
2006 ರಲ್ಲಿ ಅಂಗೀಕರಿಸಲ್ಪಟ್ಟ ಈ ಕಾಯಿದೆಯು ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಗಳಿಗೆ ಕಾನೂನು ಮಾನ್ಯತೆಯನ್ನು ನೀಡುತ್ತದೆ.
ಕಾಯಿದೆಯಡಿ ನೀಡಲಾದ ಹಕ್ಕುಗಳು:
ಮಾಲೀಕತ್ವದ ಹಕ್ಕುಗಳು – ಡಿಸೆಂಬರ್ 13, 2005 ರವರೆಗೆ ಅರಣ್ಯವಾಸಿಗಳು ಅಥವಾ ಬುಡಕಟ್ಟು ಜನರು ಕೃಷಿ ಮಾಡುತ್ತಿರುವ ಭೂಮಿಯು 4 ಹೆಕ್ಟೇರ್ ಮೀರಬಾರದು; ಆ ದಿನಾಂಕದವರೆಗೆ ಕೃಷಿಯನ್ನು ಮಾಡುತ್ತಿರುವ ಸಂಬಂಧಪಟ್ಟ ಕುಟುಂಬಕ್ಕೆ ಭೂ ಮಾಲೀಕತ್ವದ ಹಕ್ಕುಗಳನ್ನು ನೀಡಲಾಗುವುದು. ಅಂದರೆ, ಬೇರೆ ಯಾವುದೇ ಹೊಸ ಭೂಮಿಯನ್ನು ಒದಗಿಸಲಾಗುವುದಿಲ್ಲ.
ಬಳಕೆ ಹಕ್ಕುಗಳು – ಅರಣ್ಯವಾಸಿಗಳು ಅಥವಾ ಬುಡಕಟ್ಟು ಜನಾಂಗದವರಿಗೆ, ಕಿರು ಅರಣ್ಯ ಉತ್ಪನ್ನಗಳು (ಮಾಲೀಕತ್ವ ಸೇರಿದಂತೆ), ದನಗಳನ್ನು ಮೇಯಿಸಲು ಹುಲ್ಲುಗಾವಲು ಪ್ರದೇಶ ಮತ್ತು ಗ್ರಾಮೀಣ ಮಾರ್ಗಗಳ ಬಗ್ಗೆ ಹಕ್ಕುಗಳು ಲಭ್ಯವಿರುತ್ತವೆ.
ಪರಿಹಾರ ಮತ್ತು ಅಭಿವೃದ್ಧಿ ಹಕ್ಕುಗಳು – ಅರಣ್ಯ ನಿವಾಸಿಗಳು ಅಥವಾ ಬುಡಕಟ್ಟು ಜನಾಂಗದವರ ಅಕ್ರಮ ಸ್ಥಳಾಂತರಿಸುವಿಕೆ ಅಥವಾ ಬಲವಂತದ ಸ್ಥಳಾಂತರದ ಸಂದರ್ಭದಲ್ಲಿ ಪುನರ್ವಸತಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಮತ್ತು ಅರಣ್ಯ ಸಂರಕ್ಷಣೆಯ ನಿರ್ಬಂಧಗಳಿಗೆ ಒಳಪಟ್ಟು ಮೂಲಭೂತ ಸೌಲಭ್ಯಗಳ ಹಕ್ಕನ್ನು ಹೊಂದಿರುತ್ತಾರೆ.
ಅರಣ್ಯ ನಿರ್ವಹಣಾ ಹಕ್ಕುಗಳು – ಕಾಡುಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವ ಹಕ್ಕುಗಳಿವೆ.
ಅರ್ಹತಾ ಮಾನದಂಡಗಳು:
ಅರಣ್ಯ ಹಕ್ಕುಗಳ ಕಾಯ್ದೆ (FRA) ಯ ಸೆಕ್ಷನ್ 2 (ಸಿ) ಪ್ರಕಾರ, ಅರಣ್ಯ ವಾಸದ ಪರಿಶಿಷ್ಟ ಪಂಗಡ (Forest Dwelling Scheduled Tribe – FDST) ವಾಗಿ ಅರ್ಹತೆ ಪಡೆಯಲು ಮತ್ತು FRA ಅಡಿಯಲ್ಲಿ ಹಕ್ಕುಗಳನ್ನು ಗುರುತಿಸಲು ಅರ್ಹರಾಗಲು, ಅರ್ಜಿದಾರನು ಈ ಕೆಳಗಿನ ಮೂರು ಷರತ್ತುಗಳನ್ನು ಪೂರ್ಣಗೊಳಿಸಬೇಕಾದುದು ಅಗತ್ಯವಾಗಿದೆ.
ವೈಯಕ್ತಿಕ ಅಥವಾ ಸಮುದಾಯ;
- ಹಕ್ಕು ಪಡೆಯುವ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ಸದಸ್ಯರಾಗಿರಬೇಕು;
- 13-12-2005ರ ಮೊದಲು ಮೂಲತಃ ಅರಣ್ಯ ಅಥವಾ ಅರಣ್ಯ ಭೂಮಿಯ ನಿವಾಸಿಯಾಗಿರಬೇಕು;
- ಅವರು ನಿಜವಾಗಿಯೂ ಜೀವನೋಪಾಯಕ್ಕಾಗಿ ಅರಣ್ಯ ಅಥವಾ ಅರಣ್ಯ ಭೂಮಿಯನ್ನು ಅವಲಂಬಿಸಿರಬೇಕು.
- ಮತ್ತು, ಇತರ ಸಾಂಪ್ರದಾಯಿಕ ಅರಣ್ಯವಾಸಿ (Other Traditional Forest Dweller -OTFD) ಯಾಗಿ ಅರ್ಹತೆ ಪಡೆಯಲು ಮತ್ತು ಎಫ್‌ಆರ್‌ಎ ಅಡಿಯಲ್ಲಿ ಹಕ್ಕುಗಳನ್ನು ಗುರುತಿಸಲು ಅರ್ಹರಾಗಲು, ಈ ಕೆಳಗಿನ ಎರಡು ಷರತ್ತುಗಳನ್ನು ಪೂರೈಸಬೇಕು:
ವೈಯಕ್ತಿಕ ಅಥವಾ ಸಮುದಾಯ;
- ಡಿಸೆಂಬರ್ 13, 2005 ರ ಮೊದಲು ಕನಿಷ್ಠ ಮೂರು ತಲೆಮಾರುಗಳವರೆಗೆ (75 ವರ್ಷಗಳು) ಅರಣ್ಯ ಅಥವಾ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವವರಾಗಿರಬೇಕು.
- ಜೀವನೋಪಾಯಕ್ಕಾಗಿ ನಿಜವಾಗಿಯೂ ಅರಣ್ಯ ಅಥವಾ ಅರಣ್ಯ ಭೂಮಿಯನ್ನು ಅವಲಂಬಿಸಿರಬೇಕು.
ಹಕ್ಕುಗಳಿಗೆ ಮಾನ್ಯತೆ ನೀಡುವ ವಿಧಾನ:
- ಗ್ರಾಮ ಸಭೆಯಿಂದ ನಿರ್ಣಯವನ್ನು ಅಂಗೀಕರಿಸಲಾಗುವುದು,ಇದರಲ್ಲಿ,ಯಾವ ಸಂಪನ್ಮೂಲಗಳ ಮೇಲೆ ಯಾರ ಹಕ್ಕುಗಳನ್ನು ಗುರುತಿಸಬೇಕು ಎಂಬುದರ ಕುರಿತು ಶಿಫಾರಸುಗಳನ್ನು ಮಾಡಲಾಗುತ್ತದೆ.
- ಅದರ ನಂತರ, ಪ್ರಸ್ತಾವನೆಯನ್ನು ಉಪವಿಭಾಗ (ಅಥವಾ ತಾಲ್ಲೂಕು) ಮಟ್ಟದಲ್ಲಿ ಮತ್ತು ನಂತರ ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಅನುಮೋದಿಸಲಾಗುತ್ತದೆ.
ಈ ಸ್ಕ್ರೀನಿಂಗ್ ಸಮಿತಿಗಳು ಅರಣ್ಯ, ಕಂದಾಯ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳ ಮೂವರು ಸರ್ಕಾರಿ ಅಧಿಕಾರಿಗಳು ಮತ್ತು ಆ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಯ ಚುನಾಯಿತ ಮೂವರು ಸದಸ್ಯರನ್ನು ಒಳಗೊಂಡಿವೆ. ಈ ಸಮಿತಿಗಳು ಅರಣ್ಯ ಹಕ್ಕುಗಳ ಮಾನ್ಯತೆಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಸಹ ಕೇಳುತ್ತವೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
ಎಮ್ನಾಟಿ ಚಂಡಮಾರುತ:
(Cyclone Emnati)
ಎಮ್ನಾಟಿ ಚಂಡಮಾರುತವು ಪ್ರಸ್ತುತ ‘ಮಡಗಾಸ್ಕರ್’ನಲ್ಲಿ ವಿನಾಶ ವನ್ನುಂಟುಮಾಡುತ್ತಿದೆ.
ಎಮ್ನಾಟಿಯು ಈ ವರ್ಷದ ಹವಾಮಾನ ವೈಪರೀತ್ಯದ ಐದನೇ ಘಟನೆಯಾಗಿದೆ. ಇದು ಒಂದು ತಿಂಗಳಲ್ಲಿ ಮಡಗಾಸ್ಕರ್‌ಗೆ ಅಪ್ಪಳಿಸಿದ ನಾಲ್ಕನೇ ಉಷ್ಣವಲಯದ ಚಂಡಮಾರುತವಾಗಿದೆ. ಮಡಗಾಸ್ಕರ್‌ನಲ್ಲಿ ಅದರ ಹಿಂದಿನ ಉಷ್ಣವಲಯದ ಚಂಡಮಾರುತಗಳೆಂದರೆ ಅನಾ, ಬಟ್ಸಿರಾಯ್ ಮತ್ತು ಡುಮಾಕೊ.
ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆ:
(Armed Forces Preparatory School)
ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆಯು ದೆಹಲಿ ಸರ್ಕಾರವು ತನ್ನ 2021 ರ ‘ದೇಶಭಕ್ತಿ ಬಜೆಟ್’ನಲ್ಲಿ ಘೋಷಿಸಿದ ಯೋಜನೆಗಳ ಒಂದು ಭಾಗವಾಗಿದೆ.
- ಉದ್ದೇಶ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಇತರ ಸೇವೆಗಳಿಗೆ ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುವುದು.
- ಇದು ದೆಹಲಿ ಸರ್ಕಾರ ಸ್ಥಾಪಿಸಿದ ಮೊದಲ ‘ಸಂಪೂರ್ಣ ವಸತಿ ಶಾಲೆ’ಯಾಗಿದೆ.
- ಅರ್ಹತೆ: ಈ ಶಾಲೆಯು IX ರಿಂದ XII ತರಗತಿಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ತರಗತಿಯಲ್ಲಿ 100 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ. ಈ ಪ್ರತಿಯೊಂದು ತರಗತಿಯಲ್ಲಿ 60 ಹುಡುಗರು ಮತ್ತು 40 ಹುಡುಗಿಯರು ಇರುತ್ತಾರೆ.
- ಶಾಲೆಯು ‘ಅಕಾಡೆಮಿಕ್ ವಿಂಗ್’ ಮತ್ತು ‘ಸರ್ವಿಸ್ ಪ್ರಿಪರೇಟರಿ ವಿಂಗ್’ ಅನ್ನು ಹೊಂದಿರುತ್ತದೆ.
- ‘ಸೇವಾ ಪೂರ್ವಸಿದ್ಧತಾ ವಿಭಾಗ’ದ ಉದ್ದೇಶವು “ಗುರುತಿಸಲಾದ ಸಾಮರ್ಥ್ಯವನ್ನು ಪೋಷಿಸುವುದು ಮತ್ತು ಗುರುತಿಸಲಾದ ಅಂತರಗಳು/ಕೆಲಸದ ಪ್ರದೇಶಗಳನ್ನು ಸುಧಾರಿಸುವುದು” ಮತ್ತು ವಿದ್ಯಾರ್ಥಿಗಳಲ್ಲಿ “ಅಧಿಕಾರಿಗಳಂತಹ ಗುಣಗಳನ್ನು” ಬೆಳೆಸುವುದು.
ECGC ಲಿಮಿಟೆಡ್:
ಇತ್ತೀಚೆಗೆ, ರಷ್ಯಾವನ್ನು ECGC ಲಿಮಿಟೆಡ್‌ನಿಂದ ನಿರ್ಬಂಧಿತ ಕವರ್ ವರ್ಗದಲ್ಲಿ (RCC-I) ಇರಿಸಲಾಗಿದೆ, ಮೊದಲು ರಷ್ಯಾವನ್ನು ‘ಓಪನ್ ಕವರ್’ ವಿಭಾಗದಲ್ಲಿ ಸೇರಿಸಲಾಗಿದೆ. ‘ಓಪನ್ ಕವರ್’ ವರ್ಗವು ಪಾಲಿಸಿದಾರರಿಗೆ ಹೆಚ್ಚು ಉದಾರವಾದ ಆಧಾರದ ಮೇಲೆ ರಕ್ಷಣೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ECGC ಲಿಮಿಟೆಡ್ ಕುರಿತು:
ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್- (Export Credit Guarantee Corporation of India Ltd- ECGC), ಸರ್ಕಾರಿ ಸ್ವಾಮ್ಯದ ರಫ್ತು ಕ್ರೆಡಿಟ್ ಪೂರೈಕೆದಾರ ಕಂಪನಿಯಾಗಿದೆ.
- ಇದು ಭಾರತೀಯ ರಫ್ತುದಾರರಿಗೆ ‘ರಫ್ತು ಕ್ರೆಡಿಟ್ ವಿಮೆ ಸಹಾಯ’ ಒದಗಿಸುತ್ತದೆ.
- ಇದು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಇದು ಮುಂಬೈನಲ್ಲಿದೆ.
- ಇದನ್ನು 1957 ರಲ್ಲಿ ಸ್ಥಾಪಿಸಲಾಯಿತು.
ಭಾಷಾ ಪ್ರಮಾಣಪತ್ರ ಸೆಲ್ಫಿ ಅಭಿಯಾನ:
(Bhasha Certificate Selfie campaign)
ಶಿಕ್ಷಣ ಸಚಿವಾಲಯದಿಂದ,ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸಲು, ಬಹುಭಾಷಾವಾದವನ್ನು ಉತ್ತೇಜಿಸಲು ಮತ್ತು ‘ಏಕ್ ಭಾರತ್, ಶ್ರೇಷ್ಠ ಭಾರತ’ದ ಮನೋಭಾವವನ್ನು ಹರಡಲು ‘ಭಾಷಾ ಪ್ರಮಾಣಪತ್ರ ಸೆಲ್ಫಿ’ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
- ‘ಭಾಷಾ ಸರ್ಟಿಫಿಕೇಟ್ ಸೆಲ್ಫಿ’ಯ ಈ ಉಪಕ್ರಮವು ಶಿಕ್ಷಣ ಸಚಿವಾಲಯ ಮತ್ತು MyGov ಇಂಡಿಯಾ (MyGov India) ಅಭಿವೃದ್ಧಿಪಡಿಸಿದ ಭಾಷಾ ಸಂಗಮ ಮೊಬೈಲ್ ಅಪ್ಲಿಕೇಶನ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
- ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು 22 ಅಧಿಸೂಚಿತ ಭಾರತೀಯ ಭಾಷೆಗಳಲ್ಲಿ ದೈನಂದಿನ ಬಳಕೆಯ 100 ಕ್ಕೂ ಹೆಚ್ಚು ವಾಕ್ಯಗಳನ್ನು ಕಲಿಯಬಹುದು.
- ‘ಏಕ್ ಭಾರತ್ ಶ್ರೇಷ್ಠ ಭಾರತ್’ ಅಡಿಯಲ್ಲಿ ಪ್ರಾರಂಭಿಸಲಾದ ಉಪಕ್ರಮವು ಭಾರತೀಯ ಭಾಷೆಗಳಲ್ಲಿ ಜನರು ಮೂಲಭೂತ ಸಂವಹನ ಕೌಶಲ್ಯಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
- ಈ ಉದ್ದೇಶವನ್ನು ಈಡೇರಿಸಲು, 75 ಲಕ್ಷ ಜನರಿಗೆ ಮೂಲಭೂತ ಸಂವಹನ ಕೌಶಲ್ಯಗಳನ್ನು ಪಡೆದುಕೊಳ್ಳುವ ಗುರಿಯನ್ನು ನಿಗದಿಪಡಿಸಲಾಗಿದೆ.