Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 17ನೇ ಫೆಬ್ರುವರಿ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  2 :

1. ಜಾತಿ ದತ್ತಾಂಶದ ಪ್ರಾಮುಖ್ಯತೆ.

2. ನ್ಯಾಟೋ

3. AUKUS ಮೈತ್ರಿಕೂಟ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ.

2. ಭಾರತ ಮತ್ತು ಹಸಿರು ಹೈಡ್ರೋಜನ್ ಸಂಭಾವ್ಯತೆ.

3. AFSPA.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ.

2. ಚೆನ್ನವೀರ ಕಣವಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಜಾತಿ ದತ್ತಾಂಶದ ಪ್ರಾಮುಖ್ಯತೆ:


(The importance of caste data)

 ಸಂದರ್ಭ:

ಕಳೆದ ತಿಂಗಳು, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಾಗಿ ಅಖಿಲ ಭಾರತ ಕೋಟಾದ ಸೀಟುಗಳಲ್ಲಿ (All-India Quota seats for the National Eligibility-cum-Entrance Test) ಇತರ ಹಿಂದುಳಿದ ವರ್ಗಗಳಿಗೆ (OBCs) ನೀಡಲಾಗಿರುವ 27% ಕೋಟಾವನ್ನು ಅಥವಾ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯು ಒಂದು ವಿನಾಯಿತಿಯಲ್ಲ, ಆದರೆ ಸಂವಿಧಾನದ ಆರ್ಟಿಕಲ್ 15(1) ರಲ್ಲಿ ಖಾತರಿ ಪಡಿಸಲಾಗಿರುವ ಸಮಾನತೆಯ ತತ್ವದ ಅಡಿಯಲ್ಲಿನ ವಿಸ್ತರಣೆಯಾಗಿದೆ ಎಂದು ಪುನರುಚ್ಚರಿಸಿದೆ. ಹಾಗೆಯೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವುದು ಮೆರಿಟ್‌ಗೆ ವಿರುದ್ಧವಲ್ಲ ಬದಲಿಗೆ ವಿತರಣಾ ಪರಿಣಾಮವನ್ನು ಹೆಚ್ಚಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

 1. ಇದು ಭಾರತೀಯ ಸನ್ನಿವೇಶದಲ್ಲಿ ಧನಾತ್ಮಕ ತಾರತಮ್ಯವಾಗಿ (positive discrimination) ಕಂಡುಬರುತ್ತದೆ.

 

ಈಗಿನ ಸಮಸ್ಯೆ ಏನು?

ಒಳಗೊಂಡಿರುವ ಒಳ್ಳೆಯ ಉದ್ದೇಶಗಳ ಹೊರತಾಗಿಯೂ, ಧನಾತ್ಮಕ ತಾರತಮ್ಯವು ಒಂದು ವಿವಾದಾತ್ಮಕ ವಿಷಯವಾಗಿದೆ. ಮೀಸಲಾತಿಯಂತಹ ಸಕಾರಾತ್ಮಕ ಕ್ರಮಗಳನ್ನು ಅನೇಕರು ವಿರೋಧಿಸುತ್ತಾರೆ; ಅಂತಹ ನಿಬಂಧನೆಗಳು ಜಾತಿ ಭಿನ್ನತೆಗಳನ್ನು ಮಾತ್ರ ಶಾಶ್ವತಗೊಳಿಸುತ್ತವೆ ಎಂದು ಅವರು ನಂಬುತ್ತಾರೆ ಮತ್ತು ಅವರು “ಜಾತಿರಹಿತ ಸಮಾಜ” ದ ನಿರ್ಮಾಣಕ್ಕಾಗಿ ಕರೆ ನೀಡುತ್ತಾರೆ.

 1. ಆದರೆ, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಅವರು “ಜಾತಿರಹಿತತೆ” ಎಂಬುದು ಮೇಲ್ಜಾತಿಯವರು ಮಾತ್ರ ಪಡೆಯಲು ಸಾಧ್ಯವಾಗುವ ಒಂದು ಸವಲತ್ತು, ಏಕೆಂದರೆ ಅವರ ಜಾತಿ ಸವಲತ್ತು ಈಗಾಗಲೇ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸವಾಲತ್ತಾಗಿ ಪರಿವರ್ತನೆಗೊಂಡಿದೆ ಎಂದು ಹೇಳಿ ಗಮನಸೆಳೆದರು.
 2. ಮತ್ತೊಂದೆಡೆ, ಐತಿಹಾಸಿಕ ಹಾನಿಯನ್ನು ಗುರುತಿಸುವ ಮೀಸಲಾತಿಯಂತಹ ಕ್ರಮಗಳ ಪ್ರಯೋಜನಗಳನ್ನು ಪಡೆಯಲು ಕೆಳ ಜಾತಿಗಳಿಗೆ ಸೇರಿದ ವ್ಯಕ್ತಿಗಳು ತಮ್ಮ ಜಾತಿಯ ಗುರುತನ್ನು ಉಳಿಸಿಕೊಳ್ಳಬೇಕು.
 3. ಸಂವಿಧಾನದ “15(4) ಮತ್ತು 15(5)ನೇ ವಿಧಿಗಳು ಮೂಲಭೂತ ಸಮಾನತೆಯ ಅಂಶಗಳಾಗಿವೆ. ಕೆಲವು ವರ್ಗಗಳಿಗೆ ಇರುವ ಆರ್ಥಿಕ ಸಾಮಾಜಿಕ ಅನುಕೂಲಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಪ್ರತಿಬಿಂಬಿಸುತ್ತಿಲ್ಲ. ಮೆರಿಟ್‌ ಎಂಬುದು ಸಾಮಾಜಿಕವಾಗಿ ಸಂದರ್ಭೋಚಿತವಾಗಿರಬೇಕಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವುದು ಅರ್ಹತೆಗೆ (ಮೆರಿಟ್‌) ವಿರುದ್ಧವಲ್ಲ ಬದಲಿಗೆ ಅದರ ವಿತರಣಾ ಪರಿಣಾಮವನ್ನು ಹೆಚ್ಚಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

 

ಈ ಸಮಯದ ಅವಶ್ಯಕತೆ:

ಜಾತಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಳ್ಳುವವರೆಗೆ ನಮ್ಮ ನಾಗರಿಕರ ನಂಬಿಕೆಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ.

 1. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಡೇಟಾವನ್ನು ಜನಗಣತಿಯಲ್ಲಿ ಸೇರಿಸಲಾಗಿದ್ದರೂ ಸಹ, ಇತರೆ ಹಿಂದುಳಿದ ವರ್ಗ (OBC) ಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಡೇಟಾ ಇಲ್ಲ.
 2. 2011 ರಲ್ಲಿ ನಡೆಸಿದ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯನ್ನು (Socio-Economic and Caste Census -SECC) “ದೋಷಪೂರಿತ” ಮತ್ತು “ವಿಶ್ವಾಸಾರ್ಹವಲ್ಲ” ಎಂದು ಕರೆಯಲಾಗುತ್ತದೆ.
 3. ಮಂಡಲ್ ಆಯೋಗದ ಶಿಫಾರಸುಗಳು ಸಹ ಆಯೋಗದ ಸದಸ್ಯರ “ವೈಯಕ್ತಿಕ ಜ್ಞಾನ” ಮತ್ತು ಮಾದರಿ ಸಮೀಕ್ಷೆಗಳನ್ನು ಆಧರಿಸಿವೆ ಎಂದು ಟೀಕಿಸಲಾಗಿದೆ.

 

ಜಾತಿಯಾಧಾರಿತ ಗಣತಿಯ ಅವಶ್ಯಕತೆ:

2011 ರ ಸಾಮಾಜಿಕ-ಆರ್ಥಿಕ ಜಾತಿ ಗಣತಿಯಲ್ಲಿ (Socio-Economic Caste Census – SECC) ಸಂಗ್ರಹಿಸಿದ ಜಾತಿ ಆಧಾರಿತ ದತ್ತಾಂಶವು “ನಿರುಪಯುಕ್ತ” ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಆದರೆ 2016 ರಲ್ಲಿ, ‘ಭಾರತದ ರಿಜಿಸ್ಟ್ರಾರ್-ಜನರಲ್ ಮತ್ತು ಜನಗಣತಿ ಆಯುಕ್ತರು’  (Registrar-General and Census Commissioner of India)  ಗ್ರಾಮೀಣ ಅಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡುವಾಗ, 98.87 ಪ್ರತಿಶತದಷ್ಟು ವೈಯಕ್ತಿಕ ಜಾತಿ ಮತ್ತು ಧರ್ಮದ ಕುರಿತ ಡೇಟಾವನ್ನು ದೋಷ ರಹಿತವಾಗಿ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

 

ಸರ್ಕಾರದ ಪ್ರಕಾರ ಈ ದತ್ತಾಂಶವು ಏಕೆ ನಿರುಪಯುಕ್ತ ವಾಗಿದೆ?

 1. ಸರ್ಕಾರದ ಪ್ರಕಾರ, 1931 ರಲ್ಲಿ ಸಮೀಕ್ಷೆ ಮಾಡಲಾದ ಒಟ್ಟು ಜಾತಿಗಳ ಸಂಖ್ಯೆ 4,147 ಆಗಿದ್ದು, ಸಾಮಾಜಿಕ-ಆರ್ಥಿಕ ಜಾತಿ ಗಣತಿಯ (ಎಸ್‌ಇಸಿಸಿ) ಮಾಹಿತಿಯ ಪ್ರಕಾರ ದೇಶದಲ್ಲಿ 46 ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಗಳಿವೆ. ಕೆಲವು ಜಾತಿಗಳು ಉಪ-ಜಾತಿಗಳಾಗಿ ವಿಭಜನೆ ಗೊಂಡಿರಬಹುದು, ಆದರೆ ಅವುಗಳ ಒಟ್ಟು ಸಂಖ್ಯೆಯು ಇಷ್ಟರ ಮಟ್ಟಿಗೆ ಇರಲಾರದು ಎಂದು ಉಹಿಸಬಹುದಾಗಿದೆ.
 2. ಒಂದೇ ಜಾತಿಗೆ ವಿವಿಧ ಕಾಗುಣಿತಗಳನ್ನು ಗಣತಿದಾರರು ಬಳಸಿದ್ದರಿಂದ ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ಸಂಪೂರ್ಣ ಕಾರ್ಯವು ನಿಷ್ಪ್ರಯೋಜಕವಾಗಿದೆ. ಅನೇಕ ಸಂದರ್ಭಗಳಲ್ಲಿ ಪ್ರತಿವಾದಿಗಳು ತಮ್ಮ ಜಾತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಸರ್ಕಾರ ಹೇಳಿದೆ.

 

ಸರ್ವೋಚ್ಚ ನ್ಯಾಯಾಲಯದ ಅವಲೋಕನಗಳು:

 1. ಸುಪ್ರೀಂ ಕೋರ್ಟ್ ಇಂದಿರ ಸಾಹ್ನಿ ಪ್ರಕರಣದಲ್ಲಿ, ಸರಿಯಾದ ಮೌಲ್ಯಮಾಪನ ಮತ್ತು ವಸ್ತುನಿಷ್ಠ ಮೌಲ್ಯಮಾಪನದ ನಂತರವೇ ರಾಜ್ಯಗಳು ನಿರ್ದಿಷ್ಟ ವರ್ಗದ ಜನರ “ಹಿಂದುಳಿದಿರುವಿಕೆ” ಯನ್ನು ತೀರ್ಮಾನಿಸಬೇಕು ಎಂದು ಹೇಳಿದೆ.
 2. ಅಂತಹ ತೀರ್ಮಾನವು ನಿಯತಕಾಲಿಕವಾಗಿ ಪರಿಣಿತರನ್ನು ಒಳಗೊಂಡಿರುವ ಶಾಶ್ವತ ನಿಕಾಯದ ಪರಿಶೀಲನೆಗೆ ಒಳಪಟ್ಟಿರಬೇಕು ಎಂದು ಅದು ಹೇಳಿದೆ.

 

ಇಲ್ಲಿಯವರೆಗೆ ‘ಜಾತಿ-ಸಂಬಂಧಿತ’ ವಿವರಗಳನ್ನು ಸಂಗ್ರಹಿಸಿದ ವಿಧಾನ:

 1. ಗಣತಿದಾರರು,‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ’ ವಿವರಗಳನ್ನು ಜನಗಣತಿಯ ಭಾಗವಾಗಿ ಸಂಗ್ರಹಿಸುತ್ತಾರೆ, ಆದರೆ ಇದರ ಅಡಿಯಲ್ಲಿ, ಇತರ ಜಾತಿಗಳ ವಿವರಗಳನ್ನು ಅವರು ಸಂಗ್ರಹಿಸುವುದಿಲ್ಲ.
 2. ಜನಗಣತಿಯ ಮೂಲ ವಿಧಾನದ ಪ್ರಕಾರ, ಎಲ್ಲಾ ನಾಗರಿಕರು ಗಣತಿದಾರರಿಗೆ ‘ಸ್ವಯಂ ಘೋಷಿತ’ ಮಾಹಿತಿಯನ್ನು ಒದಗಿಸುತ್ತಾರೆ.

ಇಲ್ಲಿಯವರೆಗೆ, ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಕಂಡುಹಿಡಿಯಲು ವಿವಿಧ ರಾಜ್ಯಗಳಲ್ಲಿನ ‘ಹಿಂದುಳಿದ ವರ್ಗಗಳ ಆಯೋಗಗಳು’ ತಮ್ಮದೇ ಆದ ಲೆಕ್ಕಾಚಾರಗಳನ್ನು ಮಾಡುತ್ತಿದ್ದವು.

 

ಜನಗಣತಿಯಲ್ಲಿ ಯಾವ ರೀತಿಯ ಜಾತಿ ದತ್ತಾಂಶವನ್ನು ಪ್ರಕಟಿಸಲಾಗಿದೆ?

ಸ್ವತಂತ್ರ ಭಾರತದಲ್ಲಿ, 1951 ಮತ್ತು 2011 ರ ನಡುವೆ ನಡೆಸಿದ ಪ್ರತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಡೇಟಾವನ್ನು ಮಾತ್ರ ಪ್ರಕಟಿಸಲಾಗಿದೆ. ಇತರೆ ಜಾತಿಗಳ ವಿವರಗಳನ್ನು ಗಣತಿಯಲ್ಲಿ ಪ್ರಕಟಿಸಲಾಗಿಲ್ಲ.

ಆದಾಗ್ಯೂ, ಇದಕ್ಕೂ ಮೊದಲು, 1931 ರವರೆಗೂ ನಡೆಸಲಾದ ಪ್ರತಿ ಜನಗಣತಿಯಲ್ಲಿ ಜಾತಿ ಡೇಟಾವನ್ನು ಪ್ರಕಟಿಸಲಾಗಿದೆ.

 

ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (SECC) 2011 ಕುರಿತು:

2011 ರಲ್ಲಿ ನಡೆಸಿದ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯು (Socio-Economic and Caste Census- SECC) ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಒಂದು ಪ್ರಮುಖ ಕಾರ್ಯಕ್ರಮವಾಗಿತ್ತು.

 1. ಇದು ಎರಡು ಘಟಕಗಳನ್ನು ಹೊಂದಿತ್ತು: ಮೊದಲನೆಯದಾಗಿ, ಗ್ರಾಮೀಣ ಮತ್ತು ನಗರ ಮನೆಗಳ ಸಮೀಕ್ಷೆ ಮತ್ತು ಪೂರ್ವನಿರ್ಧರಿತ ನಿಯತಾಂಕಗಳ ಆಧಾರದ ಮೇಲೆ ಈ ಮನೆಗಳ ಶ್ರೇಯಾಂಕ, ಮತ್ತು ಎರಡನೆಯದಾಗಿ, ‘ಜಾತಿ ಗಣತಿ’.
 2. ಆದಾಗ್ಯೂ, ಗ್ರಾಮೀಣ ಮತ್ತು ನಗರ ಮನೆಗಳಲ್ಲಿನ ಜನರ ಆರ್ಥಿಕ ಸ್ಥಿತಿಯ ವಿವರಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಜಾತಿ ಡೇಟಾವನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿಲ್ಲ.

 

ಸಾರ್ವತ್ರಿಕ ಜನಗಣತಿ ಮತ್ತು ಸಾಮಾಜಿಕ ಆರ್ಥಿಕ ಜಾತಿ ಗಣತಿ  (SECC) ನಡುವಿನ ವ್ಯತ್ಯಾಸ:

 1. ಜನಗಣತಿಯು ಭಾರತದ ಜನಸಂಖ್ಯೆಯ ಚಿತ್ರಣವನ್ನು ಒದಗಿಸುತ್ತದೆ, ಆದರೆ ‘ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ’ (SECC)ಯು ರಾಜ್ಯ-ಅನುದಾನಿತ ಫಲಾನುಭವಿಗಳನ್ನು ಗುರುತಿಸುವ ಸಾಧನವಾಗಿದೆ.
 2. ‘ಜನಗಣತಿ’ಯು’ 1948 ರ ಜನಗಣತಿ ಕಾಯ್ದೆ ‘ಅಡಿಯಲ್ಲಿ ಬರುತ್ತದೆ ಮತ್ತು ಅದರ ಎಲ್ಲಾ ಡೇಟಾವನ್ನು ಗೌಪ್ಯವೆಂದು ಪರಿಗಣಿಸಲಾಗುತ್ತದೆ, ಆದರೆ SECC ಅಡಿಯಲ್ಲಿ ಒದಗಿಸಲಾದ ಎಲ್ಲಾ ವೈಯಕ್ತಿಕ ಮಾಹಿತಿಯು ಸರ್ಕಾರಿ ಇಲಾಖೆಗಳಿಂದ ಕುಟುಂಬಗಳಿಗೆ ಪ್ರಯೋಜನಗಳನ್ನು ಒದಗಿಸಲು ಮತ್ತು/ಅಥವಾ ನಿರ್ಬಂಧಿಸಲು ಮುಖವಾಗಿರುತ್ತದೆ.

 

ಜಾತಿ ಗಣತಿಯ ಪ್ರಯೋಜನಗಳು:

ಎಲ್ಲರಿಗೂ ಸಮಾನವಾದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಜಾತಿಯ ನಿಖರವಾದ ಜನಸಂಖ್ಯೆಯು ಮೀಸಲಾತಿ ನೀತಿಯನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ.

ಸಂಬಂಧಿತ ಕಾಳಜಿಗಳು:

 1. ಜಾತಿ ಗಣತಿಯು ಕೆಲವು ಸಮುದಾಯಗಳಲ್ಲಿ ಅಸಮಾಧಾನವನ್ನು ಸೃಷ್ಟಿಸುವ ಸಾಧ್ಯತೆಯಿದೆ ಮತ್ತು ಕೆಲವು ಸಮುದಾಯಗಳು ತಮಗಾಗಿ ಹೆಚ್ಚಿನ ಅಥವಾ ಪ್ರತ್ಯೇಕ ಕೋಟಾವನ್ನು ಕೋರುವ ಸಾಧ್ಯತೆ ಇರುತ್ತದೆ.
 2. ವ್ಯಕ್ತಿಗಳನ್ನು ನಿರ್ದಿಷ್ಟವಾಗಿ ಒಂದು ಜಾತಿಗೆ ಸೇರಿದವರು ಎಂದು ಹಣೆಪಟ್ಟಿ ಕಟ್ಟುವುದರಿಂದ, ಜಾತಿ ವ್ಯವಸ್ಥೆಯನ್ನು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬಲ್ಲದು ಎಂದು ನಂಬಲಾಗಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

 ನ್ಯಾಟೋ (NATO):


ಸಂದರ್ಭ:

 ಕ್ರಿಮಿಯಾದಲ್ಲಿ ಕೈಗೊಂಡಿದ್ದ ಯುದ್ಧ ತಾಲೀಮು ಮುಕ್ತಾಯವಾಗಿದ್ದು, ಸೇನಾ ತುಕಡಿಗಳು ತಮ್ಮ ನೆಲೆಗಳಿಗೆ ವಾಪಸ್‌ ಆಗುತ್ತಿವೆ ಎಂದು ರಷ್ಯಾ ಬುಧವಾರ ಹೇಳಿದೆ. ಆದರೆ ಉಕ್ರೇನ್‌ ಗಡಿಯಿಂದ ತನ್ನ ಸೇನಾ ತುಕಡಿಗಳನ್ನು ವಾಪಸ್‌ ಕರೆಸಿಕೊಂಡಿರುವ ರಷ್ಯಾದ ಹೇಳಿಕೆಗಳನ್ನು ಪರಿಶೀಲನೆಗೆ ಒಳಪಡಿಸಲು ಸಾಧ್ಯವಿರುವ ಮತ್ತಷ್ಟು ಸಾಕ್ಷ್ಯಗಳ ಅಗತ್ಯವಿದೆ ಎಂದು ಅಮೆರಿಕ ಮತ್ತು NATO ರಾಷ್ಟ್ರಗಳು ಹೇಳಿವೆ.

 

ಏನಿದು ಪ್ರಕರಣ?

ಪೂರ್ವ ಉಕ್ರೇನ್‌ನಲ್ಲಿ ಪ್ರಮುಖವಾಗಿ ಸಂಘರ್ಷವು ಉಲ್ಬಣಗೊಳ್ಳುವ ಭೀತಿ ಹೆಚ್ಚುತ್ತಿದೆ, ಅಲ್ಲಿ ಉಕ್ರೇನ್ ನ ಸರ್ಕಾರಿ ಪಡೆಗಳು ಮುಖ್ಯವಾಗಿ ರಷ್ಯನ್ ಭಾಷೆ ಮಾತನಾಡುವ ಡಾನ್‌ಬಾಸ್ ಪ್ರದೇಶದಲ್ಲಿನ ಪ್ರತ್ಯೇಕತಾವಾದಿಗಳ ವಿರುದ್ಧ 2014 ರಿಂದ ಹೋರಾಡುತ್ತಿವೆ. ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಮಾಸ್ಕೋ 2014 ರಲ್ಲಿ ಸ್ವಾಧೀನಪಡಿಸಿಕೊಂಡಿದೆ.

 

ಆದರೆ, ರಷ್ಯಾ ನ್ಯಾಟೋ ಬಗ್ಗೆ ಏಕೆ ಕಳವಳ ಗೊಂಡಿದೆ?

ಉಕ್ರೇನ್ ಎಂದಿಗೂ ಮೈತ್ರಿಗೆ ಸೇರುವುದಿಲ್ಲ ಎಂದು ನ್ಯಾಟೋ ಖಾತರಿಪಡಿಸಬೇಕು ಎಂದು ರಷ್ಯಾ ಒತ್ತಾಯಿಸಿದೆ. ನ್ಯಾಟೊ ಪಡೆಗಳನ್ನು ಸೇರಬೇಕು ಎಂಬ ತನ್ನ ಮಹತ್ವಾಕಾಂಕ್ಷೆಯಿಂದ ಉಕ್ರೇನ್‌ ಹಿಂದೆ ಸರಿಯಬೇಕು’ ಎಂದು ರಷ್ಯಾ ಹೇಳಿದೆ.

 1. ನ್ಯಾಟೋ ರಷ್ಯಾವನ್ನು “ಸುತ್ತುವರಿಯುತ್ತಿದೆ” (encircling) ಮತ್ತು ಬೆದರಿಕೆಯನ್ನು ಒಡ್ಡುತ್ತಿದೆ ಎಂದು ರಷ್ಯಾ ಭಾವಿಸಿದೆ.
 2. ನ್ಯಾಟೋದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ರಷ್ಯಾದ ಭದ್ರತೆಗೆ ಬೆದರಿಕೆ ಹಾಕುತ್ತದೆ ಎಂದು ಹೇಳಲಾಗುತ್ತಿದೆ.
 3. ಎಲ್ಲಕ್ಕಿಂತ ಹೆಚ್ಚಾಗಿ, NATO  ಯಾವಾಗಲೂ ರಷ್ಯಾವನ್ನು ಪ್ರತ್ಯೇಕಿಸಲು ಅಥವಾ ಅಂಚಿನಲ್ಲಿಡಲು ಪ್ರಯತ್ನಿಸುವ ಒಂದು ಅಮೆರಿಕ ಪ್ರೇರಿತ ಭೌಗೋಳಿಕ ರಾಜಕೀಯ (geopolitical) ಯೋಜನೆ ಎಂದು ನಂಬಲಾಗಿದೆ.

 

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ-NATO ಕುರಿತು:

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ- NATO ಒಂದು ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿಕೂಟವಾಗಿದೆ.

ಇದನ್ನು ವಾಷಿಂಗ್ಟನ್ ಒಪ್ಪಂದದ ಮೂಲಕ ಏಪ್ರಿಲ್ 4, 1949 ರಂದು ಸ್ಥಾಪಿಸಲಾಯಿತು.

ಪ್ರಧಾನ ಕಚೇರಿ – ಬ್ರಸೆಲ್ಸ್, ಬೆಲ್ಜಿಯಂ.

ಮೈತ್ರಿಕೂಟದ ಕಮಾಂಡ್ ಕಾರ್ಯಾಚರಣೆಗಳ ಪ್ರಧಾನ ಕಚೇರಿ – ಮೊನ್ಸ್, ಬೆಲ್ಜಿಯಂ.

 

NATO ದ ಮಹತ್ವ:

ನ್ಯಾಟೋ ಒಂದು ಸಾಮೂಹಿಕ ರಕ್ಷಣಾ ವ್ಯವಸ್ಥೆಯನ್ನು ರೂಪಿಸುತ್ತದೆ, ಅದರ ಅಡಿಯಲ್ಲಿ ಅದರ ಸ್ವತಂತ್ರ ಸದಸ್ಯ ರಾಷ್ಟ್ರಗಳು ಯಾವುದೇ ಬಾಹ್ಯ ಆಕ್ರಮಣದ ಸಂದರ್ಭದಲ್ಲಿ ಸಾಮೂಹಿಕ ರಕ್ಷಣೆಯನ್ನು ಒದಗಿಸಲು ಸಿದ್ಧವಾಗಿವೆ.

 

ಸಂರಚನೆ:

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (NATO) ಯು 12 ಮೂಲ ಸ್ಥಾಪಕ ಸದಸ್ಯ ದೇಶಗಳಿಂದ ಸ್ಥಾಪಿತವಾಯಿತು, ಪ್ರಸ್ತುತ ಅದರ ಸದಸ್ಯತ್ವ 30 ಕ್ಕೆ ಹೆಚ್ಚಳಗೊಂಡಿದೆ. ಈ ಗುಂಪಿಗೆ ಸೇರ್ಪಡೆಗೊಂಡ ಇತ್ತೀಚಿನ ದೇಶ ಉತ್ತರ ಮ್ಯಾಸಿಡೋನಿಯಾ, ಇದನ್ನು ಮಾರ್ಚ್ 27, 2020 ರಂದು ನ್ಯಾಟೋ ಮೈತ್ರಿಕೂಟದಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.

ನ್ಯಾಟೋ ಸದಸ್ಯತ್ವವು ‘ಈ ಒಪ್ಪಂದದ ತತ್ವಗಳನ್ನು ಮತ್ತಷ್ಟು ಹೆಚ್ಚಿಸುವ, ಗೌರವಿಸುವ ಮತ್ತು ಉತ್ತರ ಅಟ್ಲಾಂಟಿಕ್ ಪ್ರದೇಶದ ಸುರಕ್ಷತೆಗೆ ಕೊಡುಗೆ ನೀಡುವ ಯಾವುದೇ ಯುರೋಪಿಯನ್ ದೇಶಕ್ಕೆ’ ಮುಕ್ತವಾಗಿದೆ.

 

ಉದ್ದೇಶಗಳು:

ರಾಜಕೀಯ – ನ್ಯಾಟೋ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉತ್ತೇಜಿಸುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು, ಪರಸ್ಪರ ನಂಬಿಕೆಯನ್ನು ಬೆಳೆಸಲು ಮತ್ತು ದೀರ್ಘಾವಧಿಯಲ್ಲಿ ಸಂಘರ್ಷವನ್ನು ತಡೆಗಟ್ಟಲು ರಕ್ಷಣಾ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಾಲೋಚಿಸಲು ಮತ್ತು ಸಹಕರಿಸಲು ಸದಸ್ಯ ರಾಷ್ಟ್ರಗಳಿಗೆ ಅನುವು ಮಾಡಿಕೊಡುತ್ತದೆ.

 

ಮಿಲಿಟರಿ – ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಲು ನ್ಯಾಟೋ ಬದ್ಧವಾಗಿದೆ. ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ, ಬಿಕ್ಕಟ್ಟು-ನಿರ್ವಹಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅದು ಮಿಲಿಟರಿ ಶಕ್ತಿಯನ್ನು ಹೊಂದಿದೆ. ಈ ಪ್ರಕ್ರಿಯೆಗಳನ್ನು ನ್ಯಾಟೋದ ಸಂಸ್ಥಾಪಕ ಒಪ್ಪಂದದ (ವಾಷಿಂಗ್ಟನ್ ಒಪ್ಪಂದ) ಸಾಮೂಹಿಕ ರಕ್ಷಣಾ ಷರತ್ತು (ವಿಧಿ 5) ಅಥವಾ ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಏಕಾಂಗಿಯಾಗಿ ಅಥವಾ ಇತರ ದೇಶಗಳು ಮತ್ತು ಅಂತರಾಷ್ಟ್ರೀಯ ಸಂಘಟನೆಗಳ ಸಹಕಾರದೊಂದಿಗೆ ಜಾರಿಗೆ ತರಲಾಗುವುದು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

AUKUS ಮೈತ್ರಿಕೂಟ:


(AUKUS Alliance)

 ಸಂದರ್ಭ:

ಚೀನಾವು ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಕ್ವಾಡ್ ಗುಂಪನ್ನು AUKUS (ಆಸ್ಟ್ರೇಲಿಯಾ, U.K., U.S.) ರಕ್ಷಣಾ ಒಪ್ಪಂದದೊಂದಿಗೆ ಸಮೀಕರಿಸಿದೆ, ಎರಡೂ “ವಿಶೇಷ ಗುಂಪುಗಳು” ಬಿಡೆನ್ ಆಡಳಿತದ “ದುರುದ್ದೇಶಪೂರಿತ” ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಭಾಗವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

 1. ಈ ‘ತಂತ್ರ’ವು ಶೀತಲ ಸಮರ ಸಮಯದ ಮನಸ್ಥಿತಿಯನ್ನು ಪುನರುತ್ಥಾನಗೊಳಿಸುತ್ತದೆ ಮತ್ತು ಇದು ಏಷ್ಯಾ-ಪೆಸಿಫಿಕ್‌ ಪ್ರದೇಶಕ್ಕೆ ವಿಭಜನೆ ಮತ್ತು ಪ್ರಕ್ಷುಬ್ಧತೆಯನ್ನು ಮಾತ್ರ ತರುತ್ತದೆ ಎಂದು ಅದು ಹೇಳಿದೆ.

 

AUKUS ಒಪ್ಪಂದದ ಬಗ್ಗೆ:

 1. ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ 2021ರಲ್ಲಿ ಏಷ್ಯಾ-ಪೆಸಿಫಿಕ್‌ ವಲಯದಲ್ಲಿ ನೂತನ ಐತಿಹಾಸಿಕ ರಕ್ಷಣಾ ಮೈತ್ರಿಯನ್ನು ಘೋಷಿಸಿದವು. ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಾಬಲ್ಯವನ್ನು ಎದುರಿಸುವ ಮತ್ತು ಮುಕ್ತ ಸಮುದ್ರ ಯಾನ ಸಾಧ್ಯವಾಗಿಸುವ  ಉದ್ದೇಶದಿಂದ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಅಮೆರಿಕವು ಹೇಳಿದೆ. ಇದನ್ನು ಆಸ್ಟ್ರೇಲಿಯಾ ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ (AUKUS)ಒಪ್ಪಂದ ಮತ್ತು AUKUS ಮೈತ್ರಿಕೂಟ ಎಂದು ಕರೆಯಲಾಗುತ್ತದೆ.
 2. AUKUS ಮೈತ್ರಿಯ ಅಡಿಯಲ್ಲಿ, ಮೂರು ರಾಷ್ಟ್ರಗಳು ಜಂಟಿ ಸಾಮರ್ಥ್ಯಗಳು ಮತ್ತು ತಂತ್ರಜ್ಞಾನ ಹಂಚಿಕೆಯನ್ನು ಅಭಿವೃದ್ಧಿಪಡಿಸಲು, ಭದ್ರತೆ ಮತ್ತು ರಕ್ಷಣಾ-ಸಂಬಂಧಿತ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕಾ ನೆಲೆಗಳು ಮತ್ತು ಪೂರೈಕೆ ಸರಪಳಿಗಳ ಆಳವಾದ ಏಕೀಕರಣವನ್ನು ಉತ್ತೇಜಿಸಲು ಒಪ್ಪಿಕೊಂಡಿವೆ.
 3. AUKUS ನ ಮೊದಲ ಪ್ರಮುಖ ಉಪಕ್ರಮದ ಅಡಿಯಲ್ಲಿ, ಆಸ್ಟ್ರೇಲಿಯಾವು ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಯುಎಸ್ ಮತ್ತು ಯುಕೆ ಸಹಾಯದಿಂದ ನಿರ್ಮಿಸುತ್ತದೆ, ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

 

ಚೀನಾದ ಪ್ರತಿಕ್ರಿಯೆ:

ಈ ಒಪ್ಪಂದವನ್ನು “ಅತ್ಯಂತ ಬೇಜವಾಬ್ದಾರಿ” ತನದಿಂದ ಕೂಡಿದೆ ಎಂದು ಚೀನಾ ಖಂಡಿಸಿದೆ.

ಚೀನಾ ವ್ಯಕ್ತಪಡಿಸಿರುವ ಕಳವಳಗಳು:

 1. ಈ ಒಕ್ಕೂಟವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತೀವ್ರಗೊಳಿಸುತ್ತದೆ.
 2. ಇದು “ಶೀತಲ ಸಮರದ ಮನಸ್ಥಿತಿ ಮತ್ತು ಸೈದ್ಧಾಂತಿಕ ಪೂರ್ವಾಗ್ರಹ” ವನ್ನು ಮತ್ತೊಮ್ಮೆ ಮುನ್ನೆಲೆಗೆ ತರುತ್ತದೆ.
 3. ಈ ಮೈತ್ರಿಕೂಟವು ಹಿಂದೂ ಮಹಾಸಾಗರ-ಪೆಸಿಫಿಕ್‌ ಪ್ರದೇಶದಲ್ಲಿ ಅಣ್ವಸ್ತ್ರ ಪೈಪೋಟಿಗೆ ಕಾರಣವಾಗಲಿದೆ. ಇಲ್ಲಿನ ಸುಸ್ಥಿರತೆಯನ್ನು ಹಾಳುಗೆಡವಲಿದೆ. ಇದು ಕಳವಳಕಾರಿ ಬೆಳವಣಿಗೆ.

 

ಈ ಮೈತ್ರಿಕೂಟದ ರಚನೆಯ ಹಿಂದಿನ ತರ್ಕ:

ಹೊಸ ಪಾಲುದಾರಿಕೆಯನ್ನು ಜಂಟಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಾಯಿತು. ಚೀನಾವನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಮೂವರು ನಾಯಕರು  ಚೀನಾವನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಭದ್ರತಾ ಕಾಳಜಿಗಳು “ಗಣನೀಯವಾಗಿ ಬೆಳೆದಿವೆ” ಎಂದು ಪದೇ ಪದೇ ಉಲ್ಲೇಖಿಸಿದರು.

 1. ಇತ್ತೀಚಿನ ವರ್ಷಗಳಲ್ಲಿ, ಬೀಜಿಂಗ್ ದಕ್ಷಿಣ ಚೀನಾ ಸಮುದ್ರದಂತಹ ವಿವಾದಿತ ಪ್ರದೇಶಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ ಎಂದು ಆರೋಪಿಸಲಾಗಿದೆ.
 2. ಪಾಶ್ಚಿಮಾತ್ಯ ರಾಷ್ಟ್ರಗಳು ಪೆಸಿಫಿಕ್ ದ್ವೀಪಗಳಲ್ಲಿ ಚೀನಾದ ಮೂಲಸೌಕರ್ಯ ಹೂಡಿಕೆಯ ಬಗ್ಗೆ ಜಾಗರೂಕರಾಗಿವೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ವಿರುದ್ಧ ಚೀನಾದ ವ್ಯಾಪಾರ ನಿರ್ಬಂಧಗಳನ್ನು ಸಹ ಟೀಕಿಸಿವೆ.

 

ಪರಮಾಣು ಚಾಲಿತ ಜಲಾಂತರ್ಗಾಮಿಗಳ ಅವಶ್ಯಕತೆ ಏನು?

ಸಾಂಪ್ರದಾಯಿಕವಾಗಿ ಕಾರ್ಯನಿರ್ವಹಿಸುವ ಸಾಮರಿಕ ನೌಕೆಗಳಿಗಿಂತ ಈ ಜಲಾಂತರ್ಗಾಮಿ ನೌಕೆಗಳು ಹೆಚ್ಚು ವೇಗವಾಗಿರುತ್ತವೆ ಮತ್ತು ಇವುಗಳನ್ನು ಪತ್ತೆಹಚ್ಚುವುದು ಕಷ್ಟ. ಈ ಜಲಾಂತರ್ಗಾಮಿ ನೌಕೆಗಳು  ತಿಂಗಳುಗಳ ಕಾಲ ನೀರಿನಲ್ಲಿ ಮುಳುಗಿ ಉಳಿಯಬಹುದು, ಕ್ಷಿಪಣಿಗಳನ್ನು ಹೆಚ್ಚು ದೂರದ ವರೆಗೆ ಉಡಾಯಿಸಬಲ್ಲ ಸಮರ್ಥ್ಯವನ್ನು ಹೊಂದಿರುತ್ತವೆ.

 1. ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾ ಪ್ರದೇಶದಲ್ಲಿ ನಿಯೋಜಿಸುವುದು ಈ ಪ್ರದೇಶದಲ್ಲಿ ಅಮೆರಿಕಾದ ಪ್ರಭಾವಕ್ಕೆ ನಿರ್ಣಾಯಕವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
 2. ಯುಎಸ್ ತನ್ನ ಜಲಾಂತರ್ಗಾಮಿ ತಂತ್ರಜ್ಞಾನವನ್ನು 50 ವರ್ಷಗಳ ನಂತರ ಮೊದಲ ಬಾರಿಗೆ ಇನ್ನೊಂದು ದೇಶದೊಂದಿಗೆ ಹಂಚಿಕೊಳ್ಳುತ್ತಿದೆ. ಇದು ಈ ಹಿಂದೆ ಯುಕೆ ನೊಂದಿಗೆ ಮಾತ್ರ ಈ ತಂತ್ರಜ್ಞಾನವನ್ನು ಹಂಚಿಕೊಂಡಿತ್ತು.
 3. ಯುಎಸ್, ಯುಕೆ, ಫ್ರಾನ್ಸ್, ಚೀನಾ, ಭಾರತ ಮತ್ತು ರಷ್ಯಾ ನಂತರ ಆಸ್ಟ್ರೇಲಿಯಾವು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ವಹಿಸುವ ವಿಶ್ವದ ಏಳನೇ ರಾಷ್ಟ್ರವಾಗಲಿದೆ.
 4. ನಾವು ಅಣುಶಕ್ತಿ ಆಧಾರಿತ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸುತ್ತಿದ್ದೇವೆಯೇ ಹೊರತು, ಅಣ್ವಸ್ತ್ರ ಇರುವ ನೌಕೆಯನ್ನಲ್ಲ. ಇದರಲ್ಲಿ ಕಳವಳ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ ಎಂದು ಆಸ್ಟ್ರೇಲಿಯಾ ದೃಢವಾಗಿ ಹೇಳಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ:


(World Sustainable Development Summit):

 ಸಂದರ್ಭ:

ಇತ್ತೀಚೆಗೆ, ‘ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯ’ 21ನೇ ಆವೃತ್ತಿಯನ್ನು ಉದ್ಘಾಟಿಸಲಾಯಿತು. ಇದನ್ನು ಜಾಲ ಗೋಷ್ಠಿಯ (virtual format) ಮೂಲಕ ನಡೆಸಲಾಗುತ್ತಿದೆ.

ಈ ಶೃಂಗಸಭೆಯ ವಿಷಯವೆಂದರೆ: ಸ್ಥಿತಿಸ್ಥಾಪಕ /ಚೇತರಿಸಿಕೊಳ್ಳುವ (Resilient) ಗ್ರಹದ ಕಡೆಗೆ: ಸುಸ್ಥಿರ ಮತ್ತು ಸಮಾನ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವುದು. (Theme: Towards a Resilient Planet: Ensuring a Sustainable and Equitable Future).

 

ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯ ಕುರಿತು:

 1. ಇದು ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ (ಟೆರಿ) (The Energy and Resources Institute-TERI) ಪ್ರತಿವರ್ಷ ಆಯೋಜಿಸುವ ಪ್ರಮುಖ ಕಾರ್ಯಕ್ರಮವಾಗಿದೆ.
 2. ಇದು, ಜಾಗತಿಕ ವಿಷಯಗಳ ಕುರಿತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಏಕೈಕ ಶೃಂಗಸಭೆ ಯಾಗಿದೆ.
 3. ಜಾಗತಿಕ ನಾಯಕರು ಮತ್ತು ಕಾರ್ಯಕರ್ತರಿಗೆ ಸಾರ್ವತ್ರಿಕ ಪ್ರಾಮುಖ್ಯತೆಯ ಹವಾಮಾನ ಸಮಸ್ಯೆಗಳ ಕರಿತಂತೆ ಚರ್ಚಿಸಲು ಮತ್ತು ಉದ್ದೇಶಪೂರ್ವಕವಾಗಿ ಚರ್ಚಿಸಲು ಇದು ಒಂದು ವೇದಿಕೆಯನ್ನು ಒದಗಿಸುತ್ತದೆ.
 4. ವಿಶ್ವದ ಅತ್ಯಂತ ಪ್ರಬುದ್ಧ ನಾಯಕರು ಮತ್ತು ಚಿಂತಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಮೂಲಕ ಜಾಗತಿಕ ಸಮುದಾಯದ ಹಿತದೃಷ್ಟಿಯಿಂದ ದೀರ್ಘಕಾಲೀನ ಪರಿಹಾರಗಳನ್ನು ಒದಗಿಸಲು ಅದು ಪ್ರಯತ್ನಿಸುತ್ತದೆ.

ಇದು ದೆಹಲಿ ಸುಸ್ಥಿರ ಅಭಿವೃದ್ಧಿ ಶೃಂಗಸಭೆ- (Delhi Sustainable Development Summit-DSDS) ಸಂಪ್ರದಾಯವನ್ನು ಮುಂದುವರೆಸಿದೆ. ಜಾಗತಿಕವಾಗಿ ‘ಸುಸ್ಥಿರ ಅಭಿವೃದ್ಧಿ’ ಯನ್ನು ಸಾಮಾನ್ಯ ಗುರಿಯನ್ನಾಗಿ ಮಾಡುವ ಉದ್ದೇಶದಿಂದ DSDS ಅನ್ನು 2001 ರಲ್ಲಿ ಪ್ರಾರಂಭಿಸಲಾಯಿತು.

 

ಸುಸ್ಥಿರ ಅಭಿವೃದ್ಧಿ ಎಂದರೇನು?

‘ಭವಿಷ್ಯದ ಪೀಳಿಗೆಯ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯವನ್ನು ರಾಜಿಗೊಳಪಡಿಸದೆ ವರ್ತಮಾನದ ಅಗತ್ಯಗಳನ್ನು ಪೂರೈಸುವ ಅಭಿವೃದ್ಧಿ’ಯನ್ನು ಸುಸ್ಥಿರ ಅಭಿವೃದ್ಧಿ ಎನ್ನುವರು.

 

 1. ಸಸ್ಟೈನಬಲ್ ಡೆವಲಪ್‌ಮೆಂಟ್‌ ಕುರಿತು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ವ್ಯಾಖ್ಯಾನವನ್ನು ಬ್ರಂಡ್ಟ್‌ಲ್ಯಾಂಡ್ ಕಮಿಷನ್ “ಅವರ್ ಕಾಮನ್ ಫ್ಯೂಚರ್” (Our Common Future (1987) (1987) ಎಂಬ ತನ್ನ ವರದಿಯಲ್ಲಿ ನೀಡಿದೆ.
 2. ಸುಸ್ಥಿರ ಅಭಿವೃದ್ಧಿ (SD) ಯು ಜನರು ಮತ್ತು ಗ್ರಹಕ್ಕಾಗಿ ಅಂತರ್ಗತ, ಸಮರ್ಥನೀಯ ಮತ್ತು ಚೇತರಿಸಿಕೊಳ್ಳುವ ಭವಿಷ್ಯವನ್ನು ನಿರ್ಮಿಸಲು ಸಂಘಟಿತ ಪ್ರಯತ್ನಗಳಿಗೆ ಕರೆ ನೀಡುತ್ತದೆ.

ಸುಸ್ಥಿರ ಅಭಿವೃದ್ಧಿಯ ಮೂರು ಪ್ರಮುಖ ಅಂಶಗಳು:

ಆರ್ಥಿಕ ಅಭಿವೃದ್ಧಿ (Economic growth), ಸಾಮಾಜಿಕ ಸೇರ್ಪಡೆ/ಒಳಗೊಳ್ಳುವಿಕೆ (social inclusion) ಮತ್ತು ಪರಿಸರ ರಕ್ಷಣೆ (environmental protection). ಅವುಗಳನ್ನು ಸಮನ್ವಯಗೊಳಿಸುವುದು ಬಹಳ ಮುಖ್ಯ.

Current Affairs

 

ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ  (TERI):

 1. ಟೆರಿ, ಭಾರತದ ಮತ್ತು ದಕ್ಷಿಣ ಜಗತ್ತಿನ ‘ಸುಸ್ಥಿರ ಅಭಿವೃದ್ಧಿ’ಗಾಗಿ ಸಂಶೋಧನೆಗೆ ಮೀಸಲಾಗಿರುವ ಪ್ರಮುಖ ಚಿಂತಕರ ಚಾವಡಿ (ಥಿಂಕ್ ಟ್ಯಾಂಕ್) ಆಗಿದೆ.
 2. ಇದನ್ನು 1974 ರಲ್ಲಿ ಇಂಧನ ವಿಷಯಗಳ ಮಾಹಿತಿ ಕೇಂದ್ರವಾಗಿ ಸ್ಥಾಪಿಸಲಾಯಿತು.
 3. ಆದಾಗ್ಯೂ, ನಂತರದ ದಶಕಗಳಲ್ಲಿ, ‘ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ’ (ಟೆರಿ) ಯು ಸಂಶೋಧನಾ ಸಂಸ್ಥೆಯಾಗಿ ಹೊಸ ಛಾಪನ್ನು ಮೂಡಿಸಿತು, ಅವರ ನೀತಿಗಳು ಮತ್ತು ತಂತ್ರಜ್ಞಾನ ಪರಿಹಾರಗಳು ಜನರ ಜೀವನ ಮತ್ತು ಪರಿಸರದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಯಿತು.

Current Affairs

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಭಾರತ ಮತ್ತು ಹಸಿರು ಹೈಡ್ರೋಜನ್ ಸಾಮರ್ಥ್ಯ:


(India and the Green Hydrogen Potential)

ಸಂದರ್ಭ:

ಭಾರತವು ಉಷ್ಣವಲಯದ ದೇಶವಾಗಿರುವುದರಿಂದ, ಅದರ ಅನುಕೂಲಕರ ಭೌಗೋಳಿಕ ಪರಿಸ್ಥಿತಿಗಳು ಮತ್ತು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿಂದಾಗಿ ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಗಮನಾರ್ಹ ಅವಕಾಶವನ್ನು ಹೊಂದಿದೆ.

 1. ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯಿಂದ ಹೈಡ್ರೋಜನ್ ಅನ್ನು ಉತ್ಪಾದಿಸುವುದು ನೈಸರ್ಗಿಕ ಅನಿಲದಿಂದ ಉತ್ಪಾದಿಸುವುದಕ್ಕಿಂತ ಅಗ್ಗವಾಗಿದೆ.

 

ಅವಶ್ಯಕತೆ:

 1. ಕೈಗಾರಿಕಾ ಹೈಡ್ರೋಜನ್‌ನ ಬಹುಪಾಲು, ಸುಮಾರು 70 ಮೆಟ್ರಿಕ್ ಟನ್‌ಗಳು (MT), ಪ್ರಸ್ತುತ ನೈಸರ್ಗಿಕ ಅನಿಲದಿಂದ ಸ್ಟೀಮ್ ಮೀಥೇನ್ ರಿಫಾರ್ಮಿಂಗ್ (steam methane reforming-SMR) ಎಂದು ಕರೆಯಲ್ಪಡುವ ಒಂದು ಸಾಂಪ್ರದಾಯಿಕ ಪ್ರಕ್ರಿಯೆಯ ಮೂಲಕ ಉಪ ಉತ್ಪನ್ನ CO2 ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.
 2. ಹೈಡ್ರೋಜನ್ ಉತ್ಪಾದನೆಗೆ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ಮೇಲಿನ ಅವಲಂಬನೆ ಎಂದರೆ   ಇದು ಗಮನಾರ್ಹ ಪ್ರಮಾಣದಲ್ಲಿ CO2 ಹೊರಸೂಸುವಿಕೆಯನ್ನು ಸೂಚಿಸುತ್ತದೆ.

 

ಸವಾಲುಗಳು:

ದೇಶದಲ್ಲಿ ‘ಗ್ರೀನ್ ಹೈಡ್ರೋಜನ್’ ಬಳಕೆಯ ಹಾದಿ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಪ್ರಸ್ತುತ ‘ಗ್ರೀನ್ ಹೈಡ್ರೋಜನ್’ ಉತ್ಪಾದನೆಯು ‘ಗ್ರೇ ಹೈಡ್ರೋಜನ್’ (Grey Hydrogen) ಗಿಂತ ಸ್ವಲ್ಪ ದುಬಾರಿಯಾಗಿದೆ.

 

ಗ್ರೀನ್ ಹೈಡ್ರೋಜನ್ / ಹಸಿರು ಜಲಜನಕ ಎಂದರೇನು?

ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು ‘ವಿದ್ಯುದ್ವಿಭಜನೆ’ (Electrolysis)ಯಿಂದ  ಉತ್ಪತ್ತಿಯಾಗುವ ಹೈಡ್ರೋಜನ್ ಅನ್ನು ‘ಗ್ರೀನ್ ಹೈಡ್ರೋಜನ್’ (Green Hydrogen) ಎಂದು ಕರೆಯಲಾಗುತ್ತದೆ. ಇದು ಇಂಗಾಲದ ಯಾವುದೇ ಕುರುಹುಗಳನ್ನು(Carbon–Footprint) ಹೊಂದಿರುವುದಿಲ್ಲ.

 

ಹಸಿರು ಹೈಡ್ರೋಜನ್ ಪ್ರಾಮುಖ್ಯತೆ:

 1. ಭಾರತವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (Nationally Determined Contribution- INDC) ಗುರಿಗಳನ್ನು ಪೂರೈಸಲು ಮತ್ತು ಪ್ರಾದೇಶಿಕ ಮತ್ತು ರಾಷ್ಟ್ರೀಯ ಇಂಧನ ಸುರಕ್ಷತೆ, ಪ್ರವೇಶ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಹಸಿರು ಹೈಡ್ರೋಜನ್ ಶಕ್ತಿಯು ನಿರ್ಣಾಯಕವಾಗಿದೆ.
 2. ಹಸಿರು ಹೈಡ್ರೋಜನ್ “ಶಕ್ತಿ ಶೇಖರಣಾ ಆಯ್ಕೆ” ಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಭವಿಷ್ಯದಲ್ಲಿ ನವೀಕರಿಸಬಹುದಾದ ಶಕ್ತಿಯ ಅಂತರವನ್ನು ನಿವಾರಿಸಲು ನಿರ್ಣಾಯಕವಾಗಿರುತ್ತದೆ.
 3. ಚಲನಶೀಲತೆಗೆ ಸಂಬಂಧಿಸಿದಂತೆ, ನಗರಗಳಲ್ಲಿ ಅಥವಾ ರಾಜ್ಯಗಳ ಒಳಗೆ ದೂರದ ಪ್ರಯಾಣಕ್ಕಾಗಿ, ಸರಕು ಸಾಗಣೆಗೆ, ರೈಲ್ವೆಗಳು, ದೊಡ್ಡ ಹಡಗುಗಳು, ಬಸ್ಸುಗಳು ಅಥವಾ ಟ್ರಕ್‌ಗಳು ಇತ್ಯಾದಿಗಳಲ್ಲಿ ಹಸಿರು ಹೈಡ್ರೋಜನ್ ಅನ್ನು ಬಳಸಬಹುದು.

 

ಹಸಿರು ಹೈಡ್ರೋಜನ್ ನ ಅನ್ವಯಗಳು:

 1. ಅಮೋನಿಯಾ ಮತ್ತು ಮೆಥನಾಲ್ ನಂತಹ ಹಸಿರು ರಾಸಾಯನಿಕಗಳನ್ನು ಅಸ್ತಿತ್ವದಲ್ಲಿರುವ ಅಗತ್ಯಗಳಾದ ರಸಗೊಬ್ಬರಗಳು, ಚಲನಶೀಲತೆ, ವಿದ್ಯುತ್, ರಾಸಾಯನಿಕಗಳು, ಸಾಗಾಟ ಇತ್ಯಾದಿಗಳಲ್ಲಿ ನೇರವಾಗಿ ಬಳಸಬಹುದು.
 2. ವ್ಯಾಪಕವಾದ ಸ್ವೀಕಾರವನ್ನು ಪಡೆಯಲು ಸಿಜಿಡಿ ನೆಟ್‌ವರ್ಕ್‌ನಲ್ಲಿ ಶೇಕಡಾ 10 ರಷ್ಟು ಹಸಿರು ಹೈಡ್ರೋಜನ್ ಮಿಶ್ರಣವನ್ನು ಅಳವಡಿಸಿಕೊಳ್ಳಬಹುದು.

 

ಪ್ರಯೋಜನಗಳು:

 1. ಇದು ಶುದ್ಧ ದಹನಕಾರಿ ಅಣುವಾಗಿದ್ದು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕಗಳು ಮತ್ತು ಸಾರಿಗೆಯಂತಹ ಕ್ಷೇತ್ರಗಳನ್ನು ಡಿಕಾರ್ಬೊನೈಸ್ ಮಾಡುವ ಸಾಮರ್ಥ್ಯ ಹೊಂದಿದೆ.
 2. ಹಸಿರು ಹೈಡ್ರೋಜನ್ ಶಕ್ತಿಯ ಶೇಖರಣೆಗಾಗಿ ಖನಿಜಗಳು ಮತ್ತು ಅಪರೂಪದ-ಭೂಮಿಯ ಅಂಶ ಆಧಾರಿತ ಬ್ಯಾಟರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 3. ಗ್ರಿಡ್‌ನಿಂದ ಸಂಗ್ರಹಿಸಲಾಗದ ಅಥವಾ ಬಳಸಲಾಗದ ನವೀಕರಿಸಬಹುದಾದ ಶಕ್ತಿಯನ್ನು ಹೈಡ್ರೋಜನ್ ಉತ್ಪಾದಿಸಲು ಬಳಸಿಕೊಳ್ಳಬಹುದು.

 

ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಭಾರತ ಸರ್ಕಾರ ಕೈಗೊಂಡ ಕ್ರಮಗಳು ಯಾವುವು?

 1. ಫೆಬ್ರವರಿ 2021 ರಲ್ಲಿ ನಡೆದ ಬಜೆಟ್ ಭಾಷಣದಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ನವೀಕರಿಸಬಹುದಾದ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು ಹೈಡ್ರೋಜನ್ ಎನರ್ಜಿ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
 2. ಅದೇ ತಿಂಗಳಲ್ಲಿ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗ್ರೀನ್‌ಸ್ಟಾಟ್ ನಾರ್ವೆ (Greenstat Norway)ಯೊಂದಿಗೆ ಹೈಡ್ರೋಜನ್ ಆನ್ ಎಕ್ಸಲೆನ್ಸ್ ಸೆಂಟರ್ (Centre of Excellence on Hydrogen -CoE-H) ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿತು. ಇದು ನಾರ್ವೇಜಿಯನ್ ಮತ್ತು ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು / ವಿಶ್ವವಿದ್ಯಾಲಯಗಳ ನಡುವೆ ಹಸಿರು ಮತ್ತು ನೀಲಿ ಹೈಡ್ರೋಜನ್ ಉತ್ಪಾದನೆಗೆ ಸಂಶೋಧನೆ ಮತ್ತು ಅಭಿವೃದ್ಧಿ (R & D) ಯೋಜನೆಗಳನ್ನು ಉತ್ತೇಜಿಸುತ್ತದೆ.
 3. ಇತ್ತೀಚೆಗೆ, ಭಾರತ ಮತ್ತು ಅಮೆರಿಕ ಹಣಕಾಸು ಸಂಗ್ರಹಿಸಲು ಮತ್ತು ಹಸಿರು ಇಂಧನ ಅಭಿವೃದ್ಧಿಯನ್ನು ವೇಗಗೊಳಿಸಲು ಸ್ಟ್ರಾಟೆಜಿಕ್ ಕ್ಲೀನ್ ಎನರ್ಜಿ ಪಾರ್ಟ್‌ನರ್‌ಶಿಪ್ (Strategic Clean Energy Partnership -SCEP) ಆಶ್ರಯದಲ್ಲಿ ಕಾರ್ಯಪಡೆ ಸ್ಥಾಪಿಸಿವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


  ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಫೆಬ್ರವರಿ 15 ರಂದು ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989 ಅನ್ನು ತಿದ್ದುಪಡಿ ಮಾಡಲು ಅಧಿಸೂಚನೆಯನ್ನು ಹೊರಡಿಸಿಡೆ, ಇದರಡಿಯಲ್ಲಿ ಒಂಬತ್ತು ತಿಂಗಳಿಂದ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಎರಡು ಸುರಕ್ಷತಾ ಸಾಧನಗಳನ್ನು ಕಡ್ಡಾಯಗೊಳಲು ತಿಳಿಸಲಾಗಿದೆ.

ಅಧಿಸೂಚನೆಯ ಒಂದು ವರ್ಷದ ನಂತರ ಹೊಸ ನಿಯಮವು ಜಾರಿಗೆ ಬರುತ್ತದೆ.

 1. ರಸ್ತೆ ಸುರಕ್ಷತೆ ಮತ್ತು ಅಪಘಾತಗಳ ಪರಿಣಾಮಕಾರಿ ನಿರ್ವಹಣೆಗಾಗಿ ಹಲವು ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರ, ಈಗ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಹೊಸ ನಿಯಮ ಘೋಷಿಸಿದೆ.ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ,(Road and Highway Ministry) ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕೊಂಡೊಯ್ಯುವ ಮುನ್ನ ಪಾಲಿಸಬೇಕಾದ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ  ಹೊಸ ಸುರಕ್ಷತಾ ನಿಯಮಗಳನ್ನು  ಪ್ರಕಾರ, ಮಕ್ಕಳಿಗೆ ಹೆಲ್ಮೆಟ್ (helmet) ಧರಿಸುವುದು ಕಡ್ಡಾಯಗೊಳಿಸುತ್ತದೆ. ಜೊತೆಗೆ, ಸರಂಜಾಮು ಬೆಲ್ಟ್ ಧರಿಸುವುದು ಕೂಡ ಕಡ್ಡಾಯವಾಗಲಿದೆ. ಅಲ್ಲದೆ, ಮಕ್ಕಳಿರುವ ದ್ವಿಚಕ್ರ ವಾಹನಗಳ ವೇಗದ ಮಿತಿಯನ್ನು ಕೇವಲ 40 ಕಿಮೀಗೆ ಮಿತಿಗೊಳಿಸಲಾಗಿದೆ.
 2. ಇಷ್ಟೇ ಅಲ್ಲ, ಇನ್ನು ಮುಂದೆ ಮಕ್ಕಳಿರುವ ದ್ವಿಚಕ್ರ ವಾಹನಗಳನ್ನು ಮಿತಿಮೀರಿದ ವೇಗದಲ್ಲಿ ಓಡಿಸುವುದಕ್ಕೆ ಕೂಡ ಬ್ರೇಕ್‌ ಬೀಳಲಿದೆ. ಈ ವಾಹನಗಳಿಗೆ 40 ಕಿ.ಮೀ. ವೇಗ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ. ಹೊಸ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ 1,000 ರೂ. ದಂಡ ಮತ್ತು ಮೂರು ತಿಂಗಳ ಅವಧಿಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.
 3. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ನಿಯಮದಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿ ಸಚಿವಾಲಯವು ಕರಡು ಅಧಿಸೂಚನೆಯನ್ನು (Draft notification) ಹೊರಡಿಸಿತ್ತು. ಸವಾರರು ಮಕ್ಕಳಿಗೆ ಸುರಕ್ಷತಾ ಸರಂಜಾಮು ಮತ್ತು ಕ್ರ್ಯಾಶ್ ಹೆಲ್ಮೆಟ್ ಬಳಸುವುದನ್ನು ಕಡ್ಡಾಯಗೊಳಿಸಲು ಅದು ಪ್ರಸ್ತಾಪಿಸಿತ್ತು. ಈ ಅದರ ಅಂತಿಮ ಅಂತಿಮ ಅಧಿಸೂಚನೆ ಹೊರಬಿದ್ದಿದೆ.
 4. ಮಕ್ಕಳ ಹೆಲ್ಮೆಟ್‍ಗಳನ್ನು ತಯಾರಿಸಲು ಸರ್ಕಾರವು ಭಾರತೀಯ ಹೆಲ್ಮೆಟ್ ತಯಾರಕರಿಗೆ ಸೂಚಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ, ಸುರಕ್ಷತಾ ಜಾಕೆಟ್‌ಗಳಿಗೆ ಭುಜದ ಕುಣಿಕೆಗಳನ್ನು ರೂಪಿಸುವ ಒಂದು ಜೋಡಿ ಪಟ್ಟಿಗಳೊಂದಿಗೆ ತಯಾರಿಸಲಾಗುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್(ಬಿಐಎಸ್) ಪ್ರಕಾರ, ಹೆಲ್ಮೆಟ್ ಕಡಿಮೆ ತೂಕ, ಹೊಂದಾಣಿಕೆ, ಜಲನಿರೋಧಕ ಹಾಗೂ ಬಾಳಿಕೆ ಬರುವಂತಹದ್ದಾಗಿರಬೇಕು.

 

ಚೆನ್ನವೀರ ಕಣವಿ:

 1. ಕನ್ನಡದ ಚೆಂಬೆಳಕಿನ ಕವಿ’ ಖ್ಯಾತಿಯ ಹಿರಿಯ ಕವಿ, ವಿಮರ್ಶಕ ಮತ್ತು ಪ್ರಾಧ್ಯಾಪಕ  ಡಾ. ಚೆನ್ನವೀರ ಕಣವಿ (93)  ಇತ್ತೀಚೆಗೆ ನಿಧನರಾದರು. ಅವರ ಕವಿತೆಗಳು ಜೀವನದ ಸರಳತೆಯ ಬಗ್ಗೆ ಮಾತನಾಡುತ್ತವೆ.
 2. 15ಕ್ಕೂ ಹೆಚ್ಚು ಕವನ ಸಂಕಲನ, ವಿಮರ್ಶೆ ಹಾಗೂ ಪ್ರಬಂಧ ಸಂಕಲನ, ಮಕ್ಕಳ ಬರಹಗಳು ಸೇರಿದಂತೆ ಹಲವು ಬಗೆ ಸಾಹಿತ್ಯ ರಚಿಸಿದ್ದಾರೆ. ಅವರ ‘ಜೀವಧ್ವನಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
 3. ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿಗಳಲ್ಲದೆ, ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಅವರಿಗೆ ಪಂಪ ಮತ್ತು ನಾಡೋಜ ಪ್ರಶಸ್ತಿಗಳನ್ನು ನೀಡಲಾಗಿದೆ.
 4. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ, ಬೆಂಗಳೂರು ನಗರ ಸಾರಿಗೆ ಸಂಸ್ಥೆ ನೀಡುವ ನೃಪತುಂಗ ಪ್ರಶಸ್ತಿ, ಎಸ್.ಬಂಗಾರಪ್ಪ ಪ್ರತಿಷ್ಠಾನ ಹಾಗೂ ವಿಚಾರ ವೇದಿಕೆಯ ಸಾಹಿತ್ಯ ಬಂಗಾರ ಪ್ರಶಸ್ತಿ, ದುಬೈ ಯುಎಇ ಕನ್ನಡ ಸಂಘದ ಕನ್ನಡ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಡಾ. ಚೆನ್ನವೀರ ಕಣವಿ ಅವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರಪ್ಪ ಅವರು ಪ್ರಾಥಮಿಕ ಶಾಲೆ ಶಿಕ್ಷಕರು ಹಾಗೂ ತಾಯಿ ಪಾರ್ವತವ್ವ ಗೃಹಿಣಿ. ಊರಲ್ಲಿಯೇ ಅಕ್ಷರಾಭ್ಯಾಸ ಮುಗಿಸಿದ ಕಣವಿ ಅವರು ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. ನಂತರ ಅದೇ ವಿಭಾಗದ ನಿರ್ದೇಶಕರಾದರು.

 1. ಕಣವಿ ಮೊದಲ ಕವನ ಸಂಕಲನ ‘ಕಾವ್ಯಸಾಕ್ಷಿ’ಯಿಂದ ಇತ್ತೀಚಿನ ‘ಭೂಮಿ ಬದುಕು’ ಸಂಕಲನದವರೆಗೆ ಆರುನೂರು ಕವಿತೆಗಳನ್ನು ರಚಿಸಿದ ಕಣವಿ ಅವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.
 2. ಹೂವು ಹೊರಳುವವು ಸೂರ್ಯನ ಕಡೆಗೆ. ನಮ್ಮ ದಾರಿ ಬರಿ ಚಂದ್ರನವರೆಗೆ’ ಪ್ರಸಿದ್ಧವಾದ ಕವಿತೆ.
 3. ಗೋಕಾಕ ಚಳವಳಿಯ ಹೋರಾಟದಲ್ಲಿ ಅವರು ಕನ್ನಡಕ್ಕಾಗಿ ಜೈಲು ವಾಸವನ್ನೂ ಅನುಭವಿಸಿದ್ದರು. ಕನ್ನಡ ಶಕ್ತಿಕೇಂದ್ರದ ಅಧ್ಯಕ್ಷರಾಗಿ, ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಮಾರ್ಗದರ್ಶಕರಾಗಿ ಭಾಷಾ ಚಳವಳಿಯಲ್ಲಿ ದುಡಿದರು. ಅವರ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ/ ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ’ ಗೀತೆ ಗೋಕಾಕ ಚಳವಳಿಯಲ್ಲಿ ರಾಜ್ಯದಾದ್ಯಂತ ಪ್ರಚಾರ ಪಡೆಯಿತು. ಕಣವಿ ಅವರು ಬರೆದ ‘ವಿಶ್ವಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಭೇರಿ’ ಗೀತೆ ನನ್ನಲ್ಲಿ ರೋಮಾಂಚನವನ್ನುಂಟು ಮಾಡಿತು ಎಂದು ಕುವೆಂಪು ಅವರ ಉದ್ಗರಿಸಿದ್ದರು.
 4. ಚೆನ್ನವೀರ ಕಣವಿ ಅವರು ‘ಸುನೀತಗಳ ಸಾಮ್ರಾಟ್’ ಎಂದೇ ಪ್ರಸಿದ್ಧರು. ಹೊಸಗನ್ನಡ ಕಾವ್ಯದಲ್ಲಿ ಅವರಷ್ಟು ಸುನೀತಗಳನ್ನು ಬರೆದ ಕವಿ ಇನ್ನೊಬ್ಬರಿಲ್ಲ. ಕಳೆದ ಶತಮಾನದ ನವೋದಯ ಪ್ರಗತಿಶೀಲ, ನವ್ಯ, ನವ್ಯೋತ್ತರ ಚಳವಳಿಗಳಲ್ಲಿ ನಿರಂತರವಾಗಿ ಸುನೀತಗಳನ್ನು ಬರೆಯುತ್ತ ಬಂದ ಚೆನ್ನವೀರ ಕಣವಿ ಅವರು ತಮ್ಮ ಸುನೀತಗಳ ಮೂಲಕ ಒಂದು ಕಲಾಶಾಲೆಯನ್ನೇ ನಿರ್ಮಿಸಿದ್ದಾರೆ.
 5. ಕನ್ನಡದಲ್ಲಿ ಕುವೆಂಪು ಸೂರ್ಯೋದಯದ ಕವಿ, ಬೇಂದ್ರೆ ಶ್ರಾವಣದ ಕವಿ, ಕಣವಿ ಮಳೆಗಾಲದ ಕವಿ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos