Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 31ನೇ ಜನೇವರಿ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಬಾಂಬ್ ಸೈಕ್ಲೋನ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂಸತ್ತಿನ ಬಜೆಟ್ ಅಧಿವೇಶನ.

2. ಕೇರಳದ ಸಿಲ್ವರ್ ಲೈನ್ ಯೋಜನೆ.

3. ಭಾರತದೊಂದಿಗಿನ ಸಂಬಂಧ ‘ಗೆಹ್ರಿ ದೋಸ್ತಿ’; ಇಸ್ರೇಲ್ ಪ್ರಧಾನಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬ್ಯಾಡ್ ಬ್ಯಾಂಕ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಹೊಂಡುರಾಸ್ ನ ಮೊದಲ ಮಹಿಳಾ ಅಧ್ಯಕ್ಷರು.

2. ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಅನಂತ ನಾಗೇಶ್ವರನ್ ಅವರನ್ನು ನೇಮಕ ಮಾಡಿದ ಕೇಂದ್ರ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಬಾಂಬ್ ಚಂಡಮಾರುತ (ಸೈಕ್ಲೋನ್):


(Bomb Cyclone)

ಸಂದರ್ಭ:

ಅಮೆರಿಕದ ಪೂರ್ವ ಕರಾವಳಿಯಲ್ಲಿ, ಮಧ್ಯ ಅಟ್ಲಾಂಟಿಕ್‌ನಿಂದ ಬರುವ ಬಾಂಬ್ ಚಂಡಮಾರುತ” (Bomb Cyclone) ಅಥವಾ ನಾರ್’ಎಸ್ಟರ್ (Nor’easter) ಅನ್ನು ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

Current Affairs

 

ಬಾಂಬ್ ಚಂಡಮಾರುತದ ಕುರಿತು:

ಈ ರೀತಿಯ ಸೈಕ್ಲೋನ್‌ಗಳಿಗೆ ‘ಬೊಂಬೊಜೆನೆಸಿಸ್’ (Bombogenesis) ಎಂಬುದು ಒಂದು ತಾಂತ್ರಿಕ ಪದವಾಗಿದೆ. ಮಾಧ್ಯಮ/ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಚಿಕ್ಕ ಮತ್ತು ಉತ್ತಮ ಬಳಕೆಗಾಗಿ ‘ಬಾಂಬ್ ಸೈಕ್ಲೋನ್’  (Bomb Cyclone) ಎಂದು ಕರೆಯಲಾಗುತ್ತದೆ.”

  1. ಇದು ಮಧ್ಯ-ಅಕ್ಷಾಂಶದ ಚಂಡಮಾರುತವಾಗಿದ್ದು, ಕಡಿಮೆ ಅವಧಿಯಲ್ಲಿ ವೇಗವಾಗಿ ತೀವ್ರಗತಿಯನ್ನು ಪಡೆಯುತ್ತದೆ.
  2. ಇದು ತನ್ನ ಕೇಂದ್ರದಲ್ಲಿ ಕಡಿಮೆ ಗಾಳಿಯ ಒತ್ತಡವನ್ನು ಹೊಂದಿದೆ ಮತ್ತು ಇದರಲ್ಲಿ ಪ್ರತಿಕೂಲ ಹವಾಮಾನ ಮತ್ತು ಹಿಮಪಾತಗಳಿಂದ ಹಿಡಿದು ಗುಡುಗು ಸಹಿತ ಭಾರೀ ಮಳೆಯವರೆಗೆ ಹವಾಮಾನ ಸಂಬಂಧಿತ ಹಲವು ರೂಪಗಳು ಕಾಣಸಿಗುತ್ತವೆ.

ಬಾಂಬ್ ಚಂಡಮಾರುತದ ಉಗಮ ಅಥವಾ ರಚನೆ:

ಸಾಮಾನ್ಯವಾಗಿ, ಚಂಡಮಾರುತದ ಕೇಂದ್ರದಲ್ಲಿ’ ವಾತಾವರಣದ ಒತ್ತಡವು 24 ಗಂಟೆಗಳಲ್ಲಿ ಕನಿಷ್ಠ 24 ಮಿಲಿಬಾರ್‌ಗಳಷ್ಟು ಕಡಿಮೆಯಾದಾಗ, ಅದರ ತೀವ್ರತೆಯಲ್ಲಿ ತ್ವರಿತ ಹೆಚ್ಚಳವನ್ನು ಉಂಟುಮಾಡುತ್ತದೆ, ಇದನ್ನು ‘ಬಾಂಬ್ ಸೈಕ್ಲೋನ್’ ಎಂದು ಕರೆಯಲಾಗುತ್ತದೆ ಅಥವಾ ಬಾಂಬ್ ಸೈಕ್ಲೋನ್ ಉತ್ಪತ್ತಿಯಾಗುತ್ತದೆ. ಚಂಡಮಾರುತದ ಕೇಂದ್ರದಲ್ಲಿ ಗಾಳಿಯ ಒತ್ತಡವು ಎಷ್ಟು ಕಡಿಮೆ ಇರುತ್ತದೆಯೋ ಚಂಡಮಾರುತವು ಅಷ್ಟೇ ಪ್ರಚಂಡ ವಾಗಿರುತ್ತದೆ.

Currrent Affairs

 

ಇದು ಹರಿಕೇನ್ ಗಿಂತ ಹೇಗೆ ಭಿನ್ನವಾಗಿದೆ?

  1. ‘ಬಾಂಬ್ ಸೈಕ್ಲೋನ್’ ಮುಖ್ಯವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಚಂಡಮಾರುತ ವ್ಯವಸ್ಥೆಯನ್ನು ಹೋಲುತ್ತದೆ, ಇದು ‘ಉಷ್ಣವಲಯದ ಚಂಡಮಾರುತ ಚಂಡಮಾರುತಗಳಿಂದ’ ಭಿನ್ನವಾಗಿದೆ. ಉಷ್ಣವಲಯದ ಚಂಡಮಾರುತವು ಮಧ್ಯ ಅಕ್ಷಾಂಶಗಳಲ್ಲಿ ವಾರ್ಮ್ ಏರ್ ಫ್ರಂಟ್ ಮತ್ತು ಕೋಲ್ಡ್ ಏರ್ ಫ್ರಂಟ್  ಗಳ ಸಂಧಿಸುವಿಕೆಯಿಂದ ನಿರ್ಮಾಣಗೊಳ್ಳುತ್ತದೆ, ಆದರೆ ಬೇಸಿಗೆಯ ಕೊನೆಯಲ್ಲಿ ಸಮುದ್ರದ ನೀರಿನ ಪ್ರಕ್ಷುಬ್ಧ ಸ್ಥಿತಿಯು ‘ಬಾಂಬ್ ಸೈಕ್ಲೋನ್’ ರಚನೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
  2. ಬಾಂಬ್ ಸೈಕ್ಲೋನ್‌ಗಳಲ್ಲಿ ತಣ್ಣನೆಯ ಗಾಳಿ ಮತ್ತು ಫ್ರಂಟ್ ಗಳು ಕಂಡುಬರುತ್ತವೆ. ಶೀತ ಗಾಳಿಯು ‘ಚಂಡಮಾರುತ’ವನ್ನು ತ್ವರಿತವಾಗಿ ದುರ್ಬಲಗೊಳಿಸುತ್ತದೆ, ಆದರೆ ಇದು ಬಾಂಬ್ ಸೈಕ್ಲೋನ್‌ಗಳ ಅತಿ ಮುಖ್ಯ ಅಂಶವಾಗಿದೆ.
  3. ಚಳಿಗಾಲದಲ್ಲಿ ಬಾಂಬ್ ಚಂಡಮಾರುತಗಳು ರೂಪುಗೊಳ್ಳುತ್ತವೆ. ಚಂಡಮಾರುತ ಹರಿಕೇನ್ ಗಳು ಬೇಸಿಗೆಯ ಆರಂಭದಿಂದ ಚಳಿಗಾಲದ ಆರಂಭದವರೆಗೆ ಹುಟ್ಟಿಕೊಳ್ಳುತ್ತವೆ.ಆದರೆ ಬಾಂಬ್ ಚಂಡಮಾರುತಗಳು ಚಳಿಗಾಲದ ಆರಂಭದಿಂದ ಬೇಸಿಗೆಯ ಆರಂಭದವರೆಗೆ ರೂಪುಗೊಳ್ಳುತ್ತವೆ.
  4. ಬಾಂಬ್ ಸೈಕ್ಲೋನ್‌ಗಳು ಉನ್ನತ ಅಕ್ಷಾಂಶಗಳಲ್ಲಿ ಉತ್ಪತ್ತಿಯಾಗುತ್ತವೆ. ಹರಿಕೇನ್ ಗಳು ಉಷ್ಣವಲಯದ ನೀರಿನಲ್ಲಿ ರೂಪುಗೊಳ್ಳುತ್ತವೆ, ಆದರೆ ‘ಬಾಂಬ್ ಸೈಕ್ಲೋನ್‌ಗಳು’ ವಾಯುವ್ಯ ಅಟ್ಲಾಂಟಿಕ್, ವಾಯುವ್ಯ ಪೆಸಿಫಿಕ್ ಮಹಾಸಾಗರ ಮತ್ತು ಕೆಲವೊಮ್ಮೆ ಮೆಡಿಟರೇನಿಯನ್ ಸಮುದ್ರದ ಮೇಲೆ ಹುಟ್ಟಿಕೊಳ್ಳುತ್ತವೆ.

Current Affairs

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು,ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಸಂಸತ್ತಿನ ಬಜೆಟ್(ಆಯವ್ಯಯ) ಅಧಿವೇಶನ:


(Budget Session of Parliament)

ಸಂದರ್ಭ :

ಸಂಸತ್ತಿನ ಬಜೆಟ್ ಅಧಿವೇಶನ (Budget Session of Parliament,2022) ಪ್ರಾರಂಭವಾಗಿದೆ ಮತ್ತು ಏಪ್ರಿಲ್ 8 ರಂದು ಮುಕ್ತಾಯಗೊಳ್ಳಲಿದೆ.

ಮೊದಲಿಗೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೆಂಟ್ರಲ್ ಹಾಲ್ ನಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಮುಂದಿನ ಹಂತ:

2021-22 ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನವರಿ 31 ರಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

ಬಜೆಟ್ ಅಧಿವೇಶನದ ಮೊದಲ ಎರಡು ದಿನ ಸಂಸತ್ತಿನ ಉಭಯ ಸದನಗಳಲ್ಲಿ ಶೂನ್ಯ ವೇಳೆ  (Zero Hour) ಮತ್ತು ಪ್ರಶ್ನೋತ್ತರ ಅವಧಿ (Question Hour) ಇರುವುದಿಲ್ಲ.

ಬಜೆಟ್ ಮಂಡನೆಯ ನಂತರದ ಅಧಿವೇಶನದ ಫೆಬ್ರವರಿ 2-11 ರ ವರೆಗಿನ ಮೊದಲ ಭಾಗದಲ್ಲಿ, ಪ್ರಶ್ನೆ ಕೇಳಲು, ಖಾಸಗಿ ಸದಸ್ಯರ ವ್ಯವಹಾರ, ವಂದನಾ ನಿರ್ಣಯದ ಮೇಲಿನ ಚರ್ಚೆ, ಒಕ್ಕೂಟದ ಬಜೆಟ್ ಇತ್ಯಾದಿಗಳ ಮೇಲೆ ಸಾಮಾನ್ಯ ಚರ್ಚೆಯಂತಹ ವಿವಿಧ ವ್ಯವಹಾರಗಳಿಗೆ 40 ಗಂಟೆಗಳ ಸಾಮಾನ್ಯ ಸಮಯ ಲಭ್ಯವಿರುತ್ತದೆ.

ಸಾಂವಿಧಾನಿಕ ನಿಬಂಧನೆಗಳು:

  1. ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚಿನ ಅಂತರವಿರಬಾರದು ಎಂದು ಭಾರತ ಸಂವಿಧಾನದ 85 ನೇ ವಿಧಿಯು ತಿಳಿಸುತ್ತದೆ.
  2. ಆದರೆ ಸಂವಿಧಾನವು ಸಂಸತ್ತು ಯಾವಾಗ ಅಥವಾ ಎಷ್ಟು ದಿನಗಳವರೆಗೆ ಸಭೆ ಸೇರಬೇಕು ಎಂಬುದರ ಕುರಿತು ಸ್ಪಷ್ಟನೆ ನೀಡಿಲ್ಲ.

ಭಾರತದಲ್ಲಿ ಬಜೆಟ್ ಪ್ರಕ್ರಿಯೆ:

ಲೋಕಸಭೆಯಲ್ಲಿ ಬಜೆಟ್ ಮಂಡನೆ ಮತ್ತು ಅದರ ಅಂಗೀಕಾರದ ಕಾರ್ಯವಿಧಾನವನ್ನು ಭಾರತದ ಸಂವಿಧಾನದ ಅನುಚ್ಛೇದ 112-117, ವ್ಯವಹಾರದ ನಡವಳಿಕೆಯ ನಿಯಮಗಳು 204-221 ಮತ್ತು 331-E ಮತ್ತು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ಸ್ಪೀಕರ್ ನಿರ್ದೇಶನಗಳ ನಿರ್ದೇಶನ 19-B ಅನ್ವಯ ಮಾಡಲಾಗುತ್ತದೆ.

ಮುಖ್ಯವಾಗಿ ಬಜೆಟ್‌ ಆರು ಹಂತಗಳನ್ನು ಒಳಗೊಂಡಿದೆ:

  1. ಬಜೆಟ್ ಮಂಡನೆ.
  2. ಸಾಮಾನ್ಯ ಚರ್ಚೆಗಳು.
  3. ಇಲಾಖಾ ಸಮಿತಿಗಳ ಪರಿಶೀಲನೆ.
  4. ಅನುದಾನಕ್ಕಾಗಿ ಬೇಡಿಕೆಗಳ ಮೇಲೆ ಮತದಾನ ಅಥವಾ ವಿವಿಧ ಇಲಾಖೆಗಳಿಗೆ ಹಣಕಾಸು ಹಂಚಿಕೆ ಪ್ರಸ್ತಾವದ ಮೇಲೆ ಮತದಾನ
  5. ಧನವಿನಿಯೋಗದ ಮಸೂದೆಯ ಅಂಗೀಕಾರ .
  6. ಹಣಕಾಸು ಮಸೂದೆಯ ಅಂಗೀಕಾರ.

 

ಪ್ರಸ್ತುತಿ/ಬಜೆಟ್ ಮಂಡನೆ:

ರಾಷ್ಟ್ರಪತಿಗಳು ಗೊತ್ತುಪಡಿಸಿದ ದಿನದಂದು ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.

ಬಜೆಟ್ ಮಂಡನೆಯಾದ ತಕ್ಷಣ, 2003 ರ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯಿದೆಯ ಅಡಿಯಲ್ಲಿ ಈ ಕೆಳಗಿನ ಮೂರು ಹೇಳಿಕೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ:

  • ಮಧ್ಯಮ-ಅವಧಿಯ ಹಣಕಾಸು ನೀತಿ ಹೇಳಿಕೆ (Medium-Term Fiscal Policy Statement);
  • ಹಣಕಾಸು ನೀತಿ ಕಾರ್ಯತಂತ್ರದ ಹೇಳಿಕೆ (Fiscal Policy Strategy Statement); ಮತ್ತು
  • ಮ್ಯಾಕ್ರೋ ಎಕನಾಮಿಕ್ ಫ್ರೇಮ್‌ವರ್ಕ್ ಹೇಳಿಕೆ (Macro Economic Framework Statement).

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕೇರಳದ ಸಿಲ್ವರ್ ಲೈನ್ ಯೋಜನೆ:


(Kerala’s SilverLine Project)

ಸಂದರ್ಭ:

ಕೇರಳದಾದ್ಯಂತ ಸಿಲ್ವರ್‌ಲೈನ್ ಯೋಜನೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದರು, ಸಿಪಿಐ(ಎಂ) ನೇತೃತ್ವದ ಸರ್ಕಾರವು ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಚಲವಾಗಿದೆ.

ಏನಿದು ಪ್ರಕರಣ?

ಸಿಲ್ವರ್‌ಲೈನ್ ಯೋಜನೆಯ ‘ಆರ್ಥಿಕ ಕಾರ್ಯಸಾಧ್ಯತೆ’ಕೊರತೆ ಮತ್ತು ಪರಿಸರ ಮತ್ತು ಸಾಮಾಜಿಕ ಪರಿಣಾಮದ “ಕೊರತೆ” ಯ ಬಗ್ಗೆ ದೊಡ್ಡ ವರ್ಗದ ಜನರು ವಿರೋಧಿಸುತ್ತಿದ್ದಾರೆ.

ಯೋಜನೆಯ ಬಗ್ಗೆ ಎತ್ತಬೇಕಾದ ಪ್ರಶ್ನೆಗಳಲ್ಲಿ ಈ ಕೆಳಗಿನವುಗಳನ್ನು ಒಳಗೊಂಡಿವೆ:

  1. ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯವು ಈ ಯೋಜನೆಯನ್ನು ಹೇಗೆ ನಿಭಾಯಿಸುತ್ತದೆ;
  2. ಹವಾಮಾನ ಬದಲಾವಣೆಯನ್ನು ನಿಭಾಯಿಸಲು ರಾಜ್ಯವು ಎಷ್ಟು ‘ಪರಿಸರ ವೆಚ್ಚ’ವನ್ನು ಪಾವತಿಸಬೇಕಾಗುತ್ತದೆ;
  3. ಸಿಲ್ವರ್‌ಲೈನ್ ನಿರ್ಮಾಣದ ವೆಚ್ಚವನ್ನು ಪರಿಗಣಿಸಿದರೆ ಈ ರೈಲು ಸೇವೆ ಕೈಗೆಟುಕುತ್ತದೆಯೇ;
  4. ಮತ್ತು, ಸ್ಥಳಾಂತರಗೊಂಡವರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಏನು?

ಆದರೆ, ‘ಸಮಾಲೋಚನೆಯ ಕೊರತೆ’ ಅತ್ಯಂತ ದೊಡ್ಡ ಕಳವಳವಾಗಿದೆ ಎಂದು ಹೇಳಲಾಗುತ್ತದೆ, ಈ ನಿಟ್ಟಿನಲ್ಲಿ ಸರ್ಕಾರವು ಸಂಬಂಧಪಟ್ಟವರೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸಿಲ್ಲ.

Current Affairs

ಏನಿದು ಸಿಲ್ವರ್ ಲೈನ್ ಪ್ರೊಜೆಕ್ಟ್?

  1. ಇದು ಕೇರಳದ ಪ್ರಮುಖ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಯಾಗಿದ್ದು, ರಾಜ್ಯದ ಉತ್ತರ ಮತ್ತು ದಕ್ಷಿಣ ತುದಿಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.
  2. ಇದು ಕೇರಳದ ದಕ್ಷಿಣ ತುದಿ ಮತ್ತು ರಾಜ್ಯ ರಾಜಧಾನಿ ತಿರುವನಂತಪುರಂ ಅನ್ನು ಅದರ ಉತ್ತರದ ತುದಿಯಲ್ಲಿರುವ ಕಾಸರಗೋಡಿನೊಂದಿಗೆ ಸಂಪರ್ಕಿಸುತ್ತದೆ.
  3. 11 ಜಿಲ್ಲೆಗಳನ್ನು ಒಳಗೊಂಡ ಈ ಮಾರ್ಗವು 529.45 ಕಿ.ಮೀ ಉದ್ದವಿದೆ.
  4. ಈ ಯೋಜನೆಯನ್ನು ಕೇರಳ ರೈಲು ಅಭಿವೃದ್ಧಿ ನಿಗಮ ಲಿಮಿಟೆಡ್ (Kerala Rail Development Corporation Limited) ನಿರ್ವಹಿಸುತ್ತಿದೆ. KRDCL, ಅಥವಾ ಕೆ-ರೈಲು, ಕೇರಳ ಸರ್ಕಾರ ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ಜಂಟಿ ಯೋಜನೆಯಾಗಿದೆ.

ಯೋಜನೆಯ ಪ್ರಮುಖ ಅಂಶಗಳು:

  1. ಈ ಯೋಜನೆಯಲ್ಲಿ, ‘ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್’ (EMU) ಮಾದರಿಯ ರೈಲುಗಳನ್ನು ಬಳಸಲಾಗುವುದು, ಪ್ರತಿ ರೈಲಿನಲ್ಲಿ ಒಂಬತ್ತು ಕೋಚ್‌ಗಳನ್ನು ಬಳಸಲಾಗುವುದು ಮತ್ತು ಅವುಗಳ ಸಂಖ್ಯೆಯನ್ನು 12 ಕ್ಕೆ ಹೆಚ್ಚಿಸಬಹುದಾಗಿದೆ.
  2. ಒಂಬತ್ತು ಬೋಗಿಗಳ ಈ ರೈಲು ವಿಶೇಷ ಮತ್ತು ಸಾಮಾನ್ಯ ವರ್ಗದ ಬೋಗಿಗಳಲ್ಲಿ ಗರಿಷ್ಠ 675 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.
  3. ಈ ರೈಲುಗಳು ಸ್ಟ್ಯಾಂಡರ್ಡ್ ಗೇಜ್ ಟ್ರ್ಯಾಕ್‌ನಲ್ಲಿ ಗರಿಷ್ಠ 220 ಕಿಮೀ / ಗಂ ವೇಗದಲ್ಲಿ ಚಲಿಸಬಹುದು ಮತ್ತು ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಯಾವುದೇ ದಿಕ್ಕಿನಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಬಹುದು.
  4. ಪ್ರತಿ 500 ಮೀಟರ್‌ಗಳಿಗೆ ‘ಸರ್ವಿಸ್ ರಸ್ತೆಗಳು’ ಸೇರಿದಂತೆ ಸಂಪೂರ್ಣ ಟ್ರ್ಯಾಕ್‌ನ ಉದ್ದಕ್ಕೂ ಅಂಡರ್-ಪಾಸೇಜ್‌ಗಳನ್ನು ನಿರ್ಮಿಸಲಾಗುತ್ತದೆ.

ಸಿಲ್ವರ್‌ಲೈನ್ ಯೋಜನೆಯ ಅವಶ್ಯಕತೆಗಳು:

  1. ಸಮಯದ ಉಳಿತಾಯ: ಅಸ್ತಿತ್ವದಲ್ಲಿರುವ ನೆಟ್‌ವರ್ಕ್‌ನಲ್ಲಿ, ಕಾಸರಗೋಡಿನಿಂದ ತಿರುವನಂತಪುರಕ್ಕೆ ಪ್ರಯಾಣಿಸಲು 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಯೋಜನೆಯು ಪೂರ್ಣಗೊಂಡ ನಂತರ, ಈ ದೂರವನ್ನು 200 ಕಿಮೀ / ಗಂ ವೇಗದಲ್ಲಿ ಕೇವಲ ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಬಹುದು.
  2. ಭೂಪ್ರದೇಶದಲ್ಲಿನ ಮಿತಿಗಳು: ಅಸ್ತಿತ್ವದಲ್ಲಿರುವ ಟ್ರ್ಯಾಕ್‌ನಲ್ಲಿ ಅನೇಕ ವಕ್ರಾಕೃತಿಗಳು ಮತ್ತು ತಿರುವುಗಳಿಂದಾಗಿ ಹೆಚ್ಚಿನ ರೈಲುಗಳು ಸರಾಸರಿ 45 ಕಿಮೀ / ಗಂ ವೇಗದಲ್ಲಿ ಚಲಿಸುತ್ತವೆ.
  3. ರಸ್ತೆ ಸಾರಿಗೆಯ ಮೇಲಿನ ಒತ್ತಡ ಕಡಿಮೆ ಮಾಡುವುದು (De-trafficking): ಯೋಜನೆ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿನ ರಸ್ತೆ ಸಂಚಾರ ದಟ್ಟಣೆಯನ್ನು ‘ಸಿಲ್ವರ್‌ಲೈನ್‌ ರೈಲ್‌’ ಯೋಜನೆಯು ಗಮನಾರ್ಹವಾಗಿ ಕಡಿಮೆಗೊಳಿಸುತ್ತದೆ, ಮತ್ತು ಪ್ರಯಾಣಿಕರಿಗೆ ವೇಗದ ಪ್ರಯಾಣಕ್ಕೆ ಅನುಕೂಲವಾಗಲಿದ್ದು, ರಸ್ತೆ ಸಾರಿಗೆಯ ವೇಗವನ್ನು ಸಹ ಹೆಚ್ಚಿಸಲಿದೆ, ಹಾಗೂ ಅಪಘಾತಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
  4. ಈ ಯೋಜನೆಯು ‘ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು’ ಕಡಿಮೆ ಮಾಡುತ್ತದೆ, ‘ರೋ-ರೋ ಸೇವೆಗಳ’ (Ro-Ro services) ವಿಸ್ತರಣೆಗೆ ಸಹಾಯ ಮಾಡುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಇದು ವಿಮಾನ ನಿಲ್ದಾಣಗಳು ಮತ್ತು ಐಟಿ ಕಾರಿಡಾರ್‌ಗಳನ್ನು ಸಂಪರ್ಕಿಸುತ್ತದೆ ಮತ್ತು ಅದು ಹಾದುಹೋಗುವ ಮಾರ್ಗದಲ್ಲಿನ ನಗರಗಳ ತ್ವರಿತ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ.

ಯೋಜನೆಗೆ ಸಂಬಂಧಿಸಿದ ವಿವಾದಗಳು:

ರಾಜಕೀಯ ವಾಗ್ದಾಳಿ: ಯೋಜನೆಯನ್ನು ವಿರೋಧಿಸಿ ಎಲ್ಲ ರಾಜಕೀಯ ಪಕ್ಷಗಳು ಪ್ರತ್ಯೇಕ ಪ್ರತಿಭಟನೆ ನಡೆಸುತ್ತಿವೆ.

ಬೃಹತ್ ಬಂಡವಾಳದ ಅವಶ್ಯಕತೆ: ಈ ಯೋಜನೆಯು “ದೊಡ್ಡ ಹಗರಣ” ಮತ್ತು ರಾಜ್ಯವನ್ನು ಮತ್ತಷ್ಟು ಸಾಲದ ಸುಳಿಯಲ್ಲಿ ಮುಳುಗಿಸುತ್ತದೆ ಎಂದು ವಿರೋಧಿಗಳು ವಾದಿಸುತ್ತಾರೆ.

ಕುಟುಂಬಗಳ ಸ್ಥಳಾಂತರ: ಈ ಯೋಜನೆಯು ಆರ್ಥಿಕವಾಗಿ ಅಪ್ರಾಯೋಗಿಕವಾಗಿದೆ ಮತ್ತು 30,000 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲು ಕಾರಣವಾಗುತ್ತದೆ.

ಪರಿಸರ ಹಾನಿ: ಯೋಜನೆಯು ಅಮೂಲ್ಯವಾದ ಜೌಗು ಪ್ರದೇಶಗಳು, ಭತ್ತದ ಗದ್ದೆಗಳು ಮತ್ತು ಬೆಟ್ಟಗಳ ಮೂಲಕ ಹಾದು ಹೋಗುವುದರಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ.

ಪ್ರವಾಹದ ಅಪಾಯ: ಯೋಜನೆಯ ಹೆಚ್ಚಿನ ಭಾಗಗಳಲ್ಲಿ, ಸಿಲ್ವರ್ ಲೈನ್ ನ ಎರಡೂ ಬದಿಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗುತ್ತದೆ, ಇದು ನೈಸರ್ಗಿಕ ಜಲಾನಯನ ವ್ಯವಸ್ಥೆಯನ್ನು ನಿರ್ಬಂಧಿಸುತ್ತದೆ ಮತ್ತು ಭಾರೀ ಮಳೆಯ ಸಮಯದಲ್ಲಿ ಪ್ರವಾಹವನ್ನು ಉಂಟುಮಾಡುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ, 2018 ರ ಪ್ರವಾಹದ ಹಿನ್ನೆಲೆಯಲ್ಲಿ ಇಡೀ ರಾಜ್ಯವು ಮುಳುಗಿದ ಹಿನ್ನೆಲೆಯಲ್ಲಿ ಪರಿಸರ ಕಾಳಜಿ ಇದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಭಾರತದೊಂದಿಗಿನ ಸಂಬಂಧವನ್ನು ‘ಗೆಹ್ರಿ ದೋಸ್ತಿ’ ಎಂದು ಬಣ್ಣಿಸಿದ ಇಸ್ರೇಲ್ ಪ್ರಧಾನಿ:


(‘Gehri dosti’ says Israel PM about ties with India)

ಸಂದರ್ಭ:

ಇಸ್ರೇಲ್ ಮತ್ತು ಭಾರತ, ಎರಡು ದೇಶಗಳ ನಡುವಿನ 30 ವರ್ಷಗಳ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯನ್ನು ಆಚರಿಸುತ್ತಿವೆ.

  1. ಇಸ್ರೇಲ್ ದೇಶವನ್ನು ಭಾರತವು ಸೆಪ್ಟೆಂಬರ್ 17, 1950 ರಂದು ಮಾನ್ಯ ಮಾಡಿದ್ದರೂ, ಎರಡೂ ದೇಶಗಳ ನಡುವೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಗಳನ್ನು ಜನವರಿ 29, 1992 ರಂದು ಸ್ಥಾಪಿಸಲಾಯಿತು.

ಭಾರತ-ಇಸ್ರೇಲ್ ಸಂಬಂಧಗಳ ಕುರಿತು ಇಸ್ರೇಲ್ ಪ್ರಧಾನಿ ಮಾಡಿದ ಅವಲೋಕನಗಳು:

  1. ಎರಡು ದೇಶಗಳು “ಆಳವಾದ ಸ್ನೇಹ” (“gehri dosti” -deep friendship) ಹೊಂದಿವೆ.
  2. ಎರಡು ದೇಶಗಳ ನಡುವೆ ಸಹಕಾರಕ್ಕಾಗಿ “ಅನಂತ” ಅವಕಾಶಗಳಿವೆ.

ಇಸ್ರೇಲ್ ಪ್ಯಾಲೆಸ್ಟೀನ್ ಸಂಘರ್ಷದ ಕುರಿತು ಭಾರತದ ನಿಲುವು:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಧ್ಯಪ್ರಾಚ್ಯದ ಕುರಿತು ಬಹಿರಂಗ ಚರ್ಚೆಯಲ್ಲಿ, ಪ್ಯಾಲೆಸ್ತೀನ್ ಸಮಸ್ಯೆಯ ಶಾಂತಿಯುತ ಇತ್ಯರ್ಥಕ್ಕೆ ಭಾರತವು ತನ್ನ ದೃಢ ಮತ್ತು ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದೆ ಮತ್ತು ಎರಡು-ರಾಷ್ಟ್ರ (Two-State Solution) ಪರಿಹಾರದ ಕುರಿತು ಮಾತುಕತೆಗಳನ್ನು ಬೆಂಬಲಿಸಿದೆ.

  1. ಈ ಸಭೆಯಲ್ಲಿ, ‘ಎರಡು-ರಾಷ್ಟ್ರ ಪರಿಹಾರ’ದ ವೈಫಲ್ಯವನ್ನು ತಡೆಗಟ್ಟಲು ಅಂತರಾಷ್ಟ್ರೀಯ ಸಮುದಾಯದ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಲು ಭದ್ರತಾ ಮಂಡಳಿಯು ನಿರ್ಣಯ 2334 ಅನ್ನು ಅಂಗೀಕರಿಸಿದೆ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ- ಐತಿಹಾಸಿಕ ಹಿನ್ನೆಲೆಯಂತಹ ವಿವರಗಳಿಗಾಗಿ 20-1-2022 ರ ಲೇಖನವನ್ನು ಪರಾಮರ್ಶಿಸಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

 ವಿಷಯಗಳು:ಅಂತರ್ಗತ ಬೆಳವಣಿಗೆ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳು.

ಬ್ಯಾಡ್ ಬ್ಯಾಂಕ್:


ಸಂದರ್ಭ:

ಈ ವರ್ಷದ (2021) ಬಜೆಟ್‌ನಲ್ಲಿ ಘೋಷಿಸಲಾದ ಪ್ರಮುಖ ಪ್ರಸ್ತಾವನೆ – ನಷ್ಟದಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಒತ್ತಡದ ಸ್ವತ್ತುಗಳನ್ನು ಎದುರಿಸಲು ‘ಬ್ಯಾಡ್ ಬ್ಯಾಂಕ್’ ಅನ್ನು ಸ್ಥಾಪಿಸುವುದು – ಎಲ್ಲಾ ನಿಯಂತ್ರಕ ಅನುಮೋದನೆಯನ್ನು (a bad bank to deal with stressed assets in the loss-laden banking system, has received all regulatory approvals) ಪಡೆದಿದೆ.

ಏನಿದು ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ ಲಿಮಿಟೆಡ್‌?

  1. ಸಾಲಗಾರರ ಒತ್ತಡದ ಸ್ವತ್ತುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಉದ್ದೇಶಿತ ಕೆಟ್ಟ ಬ್ಯಾಂಕ್ ಅಥವಾ ಬ್ಯಾಡ್ ಬ್ಯಾಂಕ್ ಅಂದರೆ ‘ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ ಲಿಮಿಟೆಡ್‌’ (NARCL) ಸ್ಥಾಪಿಸುವ ಪ್ರಸ್ತಾಪವನ್ನು 2021-22ರ ಕೇಂದ್ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
  2. ಪ್ರಕಟಣೆಯ ಪ್ರಕಾರ, 500 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಸಾಲವನ್ನು ನಿರ್ವಹಿಸಲು ಕೆಟ್ಟ ಬ್ಯಾಂಕ್ (Bad Bank) ಅನ್ನು ಸ್ಥಾಪಿಸಲಾಗುವುದು ಮತ್ತು ಇದು, ‘ಆಸ್ತಿ ಪುನರ್ನಿರ್ಮಾಣ ಕಂಪನಿ (Asset Reconstruction Company- ARC)’ ಮತ್ತು ‘ಆಸ್ತಿ ನಿರ್ವಹಣಾ ಕಂಪನಿ’ (Asset Management Company- AMC) ಅನ್ನು ಒಳಗೊಂಡಿರುತ್ತದೆ. ಇಂತಹ ವ್ಯವಸ್ಥೆಯ ಮೂಲಕ ನಿಷ್ಪ್ರಯೋಜಕ ಸ್ವತ್ತು (dud assets) ಗಳನ್ನು ನಿರ್ವಹಿಸಲಾಗುತ್ತದೆ ಮತ್ತು ಮರುಪಡೆಯಲು ಪ್ರಯತ್ನಿಸಲಾಗುವುದುತ್ತದೆ.
  3. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳ ಸಹಯೋಗದೊಂದಿಗೆ ಈ ಹೊಸ ಘಟಕವನ್ನು ಸ್ಥಾಪಿಸಲಾಗುತ್ತಿದೆ.
  4. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಬಹುಪಾಲು ಷೇರುಗಳನ್ನು ಹೊಂದಿರುವ NARCL ಗೆ ಇಂಡಿಯಾ ಡೆಟ್ ರೆಸಲ್ಯೂಷನ್ ಕಂಪನಿ ಲಿಮಿಟೆಡ್ (India Debt Resolution Company Ltd – IDRCL) ಸಹಾಯ ಮಾಡುತ್ತದೆ. IDRCL ಖಾಸಗಿ ಬ್ಯಾಂಕ್‌ಗಳ ಬಹುಪಾಲು ಷೇರು ಹೊಂದಿರುವ, ‘ಪ್ರಧಾನ-ಏಜೆಂಟ್’ ರೂಪದಲ್ಲಿ, ನಿರ್ಣಯ ಪ್ರಕ್ರಿಯೆಯ ಒಂದು ಭಾಗವಾಗಿರುತ್ತದೆ.

ಅಸ್ತಿತ್ವದಲ್ಲಿರುವ ಆಸ್ತಿ ಪುನರ್ರಚನೆ ಕಂಪನಿಗಳಿಂದ (ARC) NARCL ಹೇಗೆ ಭಿನ್ನವಾಗಿರುತ್ತದೆ?

  1. ಆಲೋಚನೆಯನ್ನು ಸರ್ಕಾರವು ಮುಂದಿಟ್ಟಿರುವುದರಿಂದ ಮತ್ತು ಹೆಚ್ಚಿನ ಮಾಲೀಕತ್ವವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಬಳಿ ಇರುವ ಸಾಧ್ಯತೆ ಇರುವುದರಿಂದ, ಈ ಉದ್ದೇಶಿತ ಕೆಟ್ಟ ಬ್ಯಾಂಕಿನ ಸ್ವರೂಪವು ಸಾರ್ವಜನಿಕ ವಲಯದ್ದಾಗಿರುತ್ತದೆ.
  2. ಪ್ರಸ್ತುತ, ‘ಆಸ್ತಿ ಪುನರ್ರಚನೆ ಕಂಪನಿಗಳು’(ARC) ಸಾಮಾನ್ಯವಾಗಿ ಸಾಲಗಳ ಮೇಲೆ ಕಡಿದಾದ(ಹೆಚ್ಚಿನ) ರಿಯಾಯಿತಿಯನ್ನು ಬಯಸುತ್ತವೆ. ಇದು ಸರ್ಕಾರದ ಉಪಕ್ರಮವಾಗಿರುವುದರಿಂದ, ಉದ್ದೇಶಿತ ಕೆಟ್ಟ ಬ್ಯಾಂಕಿನೊಂದಿಗೆ ಯಾವುದೇ ಮೌಲ್ಯಮಾಪನ ಸಮಸ್ಯೆ ಇರುವುದಿಲ್ಲ.
  3. ಸರ್ಕಾರದ ಬೆಂಬಲಿತ ‘ಆಸ್ತಿ ಪುನರ್ರಚನೆ ಕಂಪನಿ’ ದೊಡ್ಡ ಖಾತೆಗಳನ್ನು ಖರೀದಿಸಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿರುತ್ತದೆ, ಆದ್ದರಿಂದ ಬ್ಯಾಂಕುಗಳು ಈ ಕೆಟ್ಟ ಖಾತೆಗಳನ್ನು ತಮ್ಮ ಖಾತೆ ಪುಸ್ತಕಗಳಲ್ಲಿ ಇಡುವುದರಿಂದ ಮುಕ್ತವಾಗಿರುತ್ತವೆ.

ಆಸ್ತಿ ಪುನರ್ ನಿರ್ಮಾಣ ಕಂಪನಿ (ARC) ಎಂದರೇನು?

ಆಸ್ತಿ ಪುನರ್ ನಿರ್ಮಾಣ ಕಂಪನಿಗಳು (ARC), ವಿಶೇಷ ಹಣಕಾಸು ಸಂಸ್ಥೆಗಳಾಗಿದ್ದು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿನ ‘ಕಾರ್ಯನಿರ್ವಹಿಸದ ಸ್ವತ್ತುಗಳನ್ನು ಅಥವಾ ವಸೂಲಾಗದ ಸಾಲಗಳನ್ನು’ (Non-Performing Assets- NPAs) ಖರೀದಿಸುತ್ತವೆ, ಇದರಿಂದ ಅವುಗಳು ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ಸ್ವಚ್ಛಗೊಳಿಸಲು ಸಹಾಯಕವಾಗುತ್ತದೆ.

  1. ‘ಆಸ್ತಿ ಪುನರ್ನಿರ್ಮಾಣ ಕಂಪನಿ’ ಅಥವಾ ‘ARC’ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಡಿಯಲ್ಲಿ ನೋಂದಾಯಿಸಲಾಗಿದೆ.

ಕಾನೂನು ಆಧಾರಗಳು:

ಹಣಕಾಸು ಸ್ವತ್ತುಗಳ ಭದ್ರತೆ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ (Securitization and Reconstruction of Financial Assets and Enforcement of Security Interest –SARFAESI) ಕಾಯ್ದೆ 2002, ಭಾರತದಲ್ಲಿ’ ಆಸ್ತಿ ಪುನರ್ನಿರ್ಮಾಣ ಕಂಪನಿಗಳ ‘(ARC ಗಳು) ರಚನೆಗೆ ಶಾಸನಬದ್ಧ ಆಧಾರವನ್ನು ಒದಗಿಸುತ್ತದೆ.

ARC ಗಳಿಗೆ ಬಂಡವಾಳದ ಅಗತ್ಯತೆ:

  1. 2016 ರಲ್ಲಿ, SARFAESI ಕಾಯ್ದೆಯಲ್ಲಿ, ಮಾಡಿದ ತಿದ್ದುಪಡಿಗಳ ಪ್ರಕಾರ, ‘ಆಸ್ತಿ ಪುನರ್ನಿರ್ಮಾಣ ಕಂಪನಿ’ಗಳು (ARCs) ಕನಿಷ್ಠ 2 ಕೋಟಿ ರೂ.ಗಳ ನಿವ್ವಳ ಸ್ವಾಮ್ಯದ ನಿಧಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಮೊತ್ತವನ್ನು ರಿಸರ್ವ್ ಬ್ಯಾಂಕ್ 2017 ರಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಿದೆ.
  2. ARC ಗಳು ಅಪಾಯದ ತೂಕದ ಸ್ವತ್ತುಗಳ 15% ನಷ್ಟು ಬಂಡವಾಳದ ಸಮರ್ಪಕ ಅನುಪಾತವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಇದರ ಅಗತ್ಯತೆ:

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒತ್ತಡದ ಸ್ವತ್ತುಗಳ ಒಟ್ಟು ಮೊತ್ತವು 15 ಲಕ್ಷ ಕೋಟಿ ರೂ.ಗಿಂತ ಅಧಿಕವಾಗಿದೆ. ಒತ್ತಡದ ಸ್ವತ್ತುಗಳು ಮತ್ತು ಸೀಮಿತ ಬಂಡವಾಳದಿಂದ ಬಳಲುತ್ತಿರುವ ಬ್ಯಾಂಕುಗಳು ‘ಕಾರ್ಯನಿರ್ವಹಿಸದ ಸ್ವತ್ತುಗಳನ್ನು’ (NPA) ನಿರ್ವಹಿಸುವುದು ಕಷ್ಟಕರವಾಗಿರುತ್ತದೆ. ಸರ್ಕಾರವು ಸೀಮಿತ ಬಂಡವಾಳವನ್ನು ಮಾತ್ರ ಒದಗಿಸಬಹುದು. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ, ಕೆಟ್ಟ ಬ್ಯಾಂಕ್(ಬ್ಯಾಡ್ ಬ್ಯಾಂಕ್) ಮಾದರಿಯು ಸರ್ಕಾರ ಮತ್ತು ಬ್ಯಾಂಕುಗಳಿಗೆ ಸಹಾಯ ಮಾಡುತ್ತದೆ.

 ‘ಬ್ಯಾಡ್ ಬ್ಯಾಂಕ್’ ಪರಿಕಲ್ಪನೆ:

  1. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ವಸೂಲಾಗದ ಸಾಲ ಮತ್ತು ಇತರ ಅನುತ್ಪಾದಕ ಆಸ್ತಿಗಳನ್ನು ‘ಬ್ಯಾಡ್‌ ಬ್ಯಾಂಕ್’ ಖರೀದಿಸುತ್ತದೆ. ಬ್ಯಾಂಕ್‌ಗಳ ಬ್ಯಾಲೆನ್ಸ್‌ ಶೀಟ್‌ನಲ್ಲಿ ಲೆಕ್ಕಚುಕ್ತವಾಗುತ್ತದೆ.
  2. ಗಮನಾರ್ಹವಾದ ಲಾಭರಹಿತ ಸ್ವತ್ತುಗಳನ್ನು ಹೊಂದಿರುವ ಸಂಸ್ಥೆಯು ಈ ಹಿಡುವಳಿಗಳನ್ನು ಕೆಟ್ಟ ಬ್ಯಾಂಕ್‌ಗೆ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುತ್ತದೆ.
  3. ಅಂತಹ ಸ್ವತ್ತುಗಳನ್ನು ಕೆಟ್ಟ ಬ್ಯಾಂಕ್‌ಗೆ ವರ್ಗಾಯಿಸುವ ಮೂಲಕ, ಮೂಲ ಸಂಸ್ಥೆಯು ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಸರಿಪಡಿಸಬಹುದು -ಆದರೂ ಅದನ್ನು ಬರೆಡಿದುವಂತೆ ಒತ್ತಾಯಿಸಲಾಗುತ್ತದೆ ಅಥವಾ ಆದರೂ ಅವರು ಸ್ವತ್ತುಗಳ ಅಂದಾಜು ಮೌಲ್ಯವನ್ನು ಕಡಿತಗೊಳಿಸಬೇಕಾಗುತ್ತದೆ.
  4. ಬ್ಯಾಡ್‌ ಬ್ಯಾಂಕ್‌ಗಳ ಪರಿಕಲ್ಪನೆ ಹೊಸತೇನೂ ಅಲ್ಲ. ಬ್ಯಾಂಕ್‌ಗಳು ದಿವಾಳಿಯಾಗುವ ಸ್ಥಿತಿ ಬಂದಾಗ ಮತ್ತು NPA ಪ್ರಮಾಣ ಹೆಚ್ಚಾದಾಗ ವಿಶ್ವದ ವಿವಿಧ ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಆರ್ಥಿಕತೆ ಕುಸಿತದ ಹಾದಿಯಲ್ಲಿ ಇದ್ದಾಗ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಈಗ ಭಾರತವೂ ಈ ಹಾದಿ ಹಿಡಿದಿದೆ.
  5. ಸರ್ಕಾರ ಬೆಂಬಲಿತ ಬ್ಯಾಡ್‌ ಬ್ಯಾಂಕ್‌ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವಿದೆ. ಹೀಗಾಗಿ ಇಂತಹ ವ್ಯವಸ್ಥೆ ಹೆಚ್ಚು ಚಾಲ್ತಿಯಲ್ಲಿ ಇದೆ. ಭಾರತದಲ್ಲೂ ಈಗ ಇಂತಹದ್ದೇ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಉದಾ: ಸರಳ ಭಾಷೆಯಲ್ಲಿ ಹೇಳುವುದಾದರೆ (ಕೇವಲ ಪರಿಕಲ್ಪನೆ ಮಾತ್ರ) A ಎಂಬ ಬ್ಯಾಂಕ್‌ B ಎಂಬ ಕಾರ್ಪೊರೇಟ್ ಸಂಸ್ಥೆಗೆ ಸಾಲ ಕೊಟ್ಟಿದೆ ಎಂದುಕೊಳ್ಳೋಣ. B ಸಂಸ್ಥೆ ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗುತ್ತದೆ. ಆಗ A ಎಂಬ ಬ್ಯಾಂಕ್‌ ತನ್ನ ಇಡೀ ಸಾಲವನ್ನು (ಅಕೌಂಟ್) ಬ್ಯಾಡ್‌ ಬ್ಯಾಂಕ್‌ಗೆ ಮಾರಿಬಿಡುತ್ತದೆ. ಅಲ್ಲಿಂದಾಚೆಗೆ B ಸಂಸ್ಥೆಯಿಂದ ಸಾಲ ವಸೂಲಿ ಮಾಡಿಕೊಳ್ಳುವುದು ಬ್ಯಾಡ್‌ ಬ್ಯಾಂಕ್‌ನ ಹೊಣೆಯಾಗುತ್ತದೆ. ಸಾಲ ಕೊಟ್ಟಿದ್ದ ಮೂಲ ಬ್ಯಾಂಕ್‌ನ ಲೆಕ್ಕದ ಪುಸ್ತಕಗಳಿಂದ NPA ಹೊಣೆಗಾರಿಕೆ ಮಾಯವಾಗುತ್ತದೆ.

ಕೆಟ್ಟ ಸಾಲಗಳ ಬಗ್ಗೆ ಏಕೆ ಕಾಳಜಿ ವಹಿಸಬೇಕು?

  1. ಭಾರತೀಯ ಬ್ಯಾಂಕುಗಳ ಕೆಟ್ಟ ಸಾಲಗಳ ರಾಶಿಯು ಆರ್ಥಿಕತೆಯ ಮೇಲೆ ಭಾರಿ ಒತ್ತಡವನ್ನು ಸೃಷ್ಟಿಸುತ್ತದೆ.
  2. ಇದು ಬ್ಯಾಂಕುಗಳ ಲಾಭದ ಸೋರಿಕೆಗೆ ಕಾರಣವಾಗುತ್ತದೆ ಹಾಗೂ ಲಾಭಾಂಶಗಳು ಕರಗುವುದರಿಂದ, ಕೆಟ್ಟ ಸಾಲಗಳ ಬಹುಪಾಲು ಹೊರೆಯನ್ನು ಹೊಂದಿರುವ ಸಾರ್ವಜನಿಕ ವಲಯದ ಬ್ಯಾಂಕುಗಳು (PSB) ತಮ್ಮ ಬೆಳವಣಿಗೆಯನ್ನು ವೃದ್ಧಿಸಲು ಸಾಕಷ್ಟು ಬಂಡವಾಳವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.
  3. ಸಾಲದ ಬೆಳವಣಿಗೆಯ ಅನುಪಸ್ಥಿತಿಯಲ್ಲಿ, ಆರ್ಥಿಕತೆಯು 8% ಬೆಳವಣಿಗೆಯ ದರವನ್ನು ಸಾಧಿಸಲು ಅಡ್ಡಿಯಾಗುತ್ತದೆ. ಆದ್ದರಿಂದ, ಕೆಟ್ಟ ಸಾಲಗಳ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕಾಗಿದೆ. ಅಥವಾ, ಕೆಟ್ಟ ಸಾಲದ ಸಮಸ್ಯೆಗೆ ಪರಿಣಾಮಕಾರಿ ಪರಿಹಾರದ ಅಗತ್ಯವಿದೆ.

ಪ್ರಯೋಜನಗಳು:

  1. ಇದು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಕೆಟ್ಟ ಸಾಲಗಳನ್ನು ವರ್ಗಾವಣೆ ಮಾಡುವ ಮೂಲಕ ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳು ತಮ್ಮ ಪ್ರಮುಖ ವ್ಯವಹಾರವಾದ ಸಾಲ ಚಟುವಟಿಕೆಗಳತ್ತ ಗಮನ ಹರಿಸಲು ಸಹಾಯಕವಾಗುತ್ತದೆ.
  2. ದೊಡ್ಡ ಸಾಲಗಾರರು ಅನೇಕ ಸಾಲಗಾರರನ್ನು ಹೊಂದಿದ್ದಾರೆ.ಆದ್ದರಿಂದ ಸಾಲಗಳು ಒಂದು ಏಜೆನ್ಸಿಯಲ್ಲಿ ಕೇಂದ್ರೀಕೃತವಾಗಿರುವುದರಿಂದ ಕೆಟ್ಟ ಬ್ಯಾಂಕ್ ಸಮನ್ವಯದ ಸಮಸ್ಯೆಯನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ.
  3. ವಿವಿಧ ಬ್ಯಾಂಕುಗಳನ್ನು ಬೇರ್ಪಡಿಸುವ ಮೂಲಕ, ಕೆಟ್ಟ ಬ್ಯಾಂಕ್ ಸಾಲಗಾರರೊಂದಿಗೆ ವೇಗವಾಗಿ ರಾಜಿ ಮಾಡಿಕೊಳ್ಳಬಹುದು.
  4. ಇದು ಸಾಲಗಾರರೊಂದಿಗೆ ಉತ್ತಮ ಚೌಕಾಶಿ ಮಾಡಲು ಮತ್ತು ಅವರ ವಿರುದ್ಧ ಹೆಚ್ಚು ಕಠಿಣ ಕ್ರಮ ಕೈಗೊಳ್ಳಲು ಕಾರಣವಾಗಬಹುದು.
  5. ಇದು ಹಣಕ್ಕಾಗಿ ಸರ್ಕಾರದ ಕಡೆಗೆ ಮಾತ್ರ ನೋಡುವುದಕ್ಕಿಂತ ಸಾಂಸ್ಥಿಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಬಹುದು.

ಅಂತಹ ಬ್ಯಾಂಕುಗಳ ಕುರಿತ ಕಾಳಜಿಯ ವಿಷಯಗಳು ಅಥವಾ ದೋಷಗಳು ಯಾವುವು?

  1. ಉದಾಹರಣೆಗೆ, ಬ್ಯಾಂಕೊಂದು ಕೆಟ್ಟ ಸಾಲಗಳನ್ನು ಮಾರುತ್ತದೆ ಎಂದು ಭಾವಿಸೋಣ. ನಂತರ, ಇದು ಹಣದ ಕಡಿತವನ್ನು ಒಪ್ಪಿಕೊಳ್ಳಬೇಕಾಗುತ್ತದೆ.ಏಕೆಂದರೆ 100 ರೂ ಕೆಟ್ಟದಾದಾಗ, ಮರಳಿ ನಿರೀಕ್ಷಿಸಬಹುದಾದ ನಿಜವಾದ ಮೊತ್ತವು 100 ರೂ.ಗಿಂತ ಕಡಿಮೆಯಿರುತ್ತದೆ ಮತ್ತು ಅದು ಹಣದ ಕಡಿತಕ್ಕೆ ಕಾರಣವಾಗುತ್ತದೆ. ಅದು P&L (ಲಾಭ ಮತ್ತು ನಷ್ಟ) ಮೇಲೆ ಪರಿಣಾಮ ಬೀರುತ್ತದೆ.
  2. ಆದ್ದರಿಂದ, ಆ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸುವವರೆಗೆ, ಹೊಸ ರಚನೆಯನ್ನು ಅಸ್ತಿತ್ವಕ್ಕೆ ತರುವುದು ಸಮಸ್ಯೆಯನ್ನು ಪರಿಹರಿಸುವಲ್ಲಿ ಶಕ್ತಿಯುತವಾಗಿರುವುದಿಲ್ಲ,/ ಸಮರ್ಥವಾಗಿರುವುದಿಲ್ಲ ಎ೦ದು ಹೇಳಲಾಗುತ್ತಿದೆ.

ಮುಂದಿನ ದಾರಿ:

  1. ಚಿಲ್ಲರೆ ವಹಿವಾಟು, ಸಗಟು ವಹಿವಾಟು, ರಸ್ತೆಗಳು ಮತ್ತು ಜವಳಿ ಮುಂತಾದ ಕ್ಷೇತ್ರಗಳಲ್ಲಿನ ಕಂಪನಿಗಳು ಒತ್ತಡವನ್ನು ಎದುರಿಸುತ್ತಿವೆ ಎಂದು ಕೆ ವಿ ಕಾಮತ್ ಸಮಿತಿ ಹೇಳಿದೆ.
  2. ಕೋವಿಡ್‌ ಪೂರ್ವದಲ್ಲಿ ಒತ್ತಡದಲ್ಲಿದ್ದ ಕ್ಷೇತ್ರಗಳಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು(NBFC), ವಿದ್ಯುತ್, ಉಕ್ಕು, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಗಳು ಸೇರಿವೆ.
  3. ಈ ಹಿನ್ನೆಲೆಯಲ್ಲಿ ಕೆಟ್ಟ ಬ್ಯಾಂಕನ್ನು ಸ್ಥಾಪಿಸುವುದು ನಿರ್ಣಾಯಕವೆಂದು ಪರಿಗಣಿಸಲಾಗಿದೆ.

ಇಲ್ಲೆಲ್ಲಾ ಈಗಾಗಲೇ ಬ್ಯಾಡ್‌ ಬ್ಯಾಂಕ್ ಇದೆ:

ಈಗಾಗಲೇ ಅಮೆರಿಕ, ಫಿನ್‌ಲೆಂಡ್, ಇಂಡೊನೇಷಿಯಾ, ಬೆಲ್ಜಿಯಂ ಮತ್ತು ಸ್ವಿಡನ್‌ಗಳಲ್ಲಿ ಈಗಾಗಲೇ ಅಂಥ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಬ್ಯಾಡ್‌ ಬ್ಯಾಂಕ್‌ಗಳ ಯಶಸ್ಸಿಗೆ ಅನೇಕ ಅಂಶಗಳು ಕಾರಣವಾಗುತ್ತವೆ. ಅದರಲ್ಲಿ ಮುಖ್ಯವಾದುದು ಸರ್ಕಾರದ ಪಾತ್ರ. ನೀತಿ, ಲೆಕ್ಕಪತ್ರಗಳ ನಿರ್ವಹಣೆ ಮತ್ತು ಹಣಕಾಸು ನೆರವು ಸಹ ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ಬ್ಯಾಡ್‌ ಬ್ಯಾಂಕ್‌ ಎಂದರೇನು?

ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ವಸೂಲಾಗದ ಸಾಲಗಳ (NPA) ನಿರ್ವಹಣೆ ಮಾಡಲೆಂದೇ ಸ್ಥಾಪಿಸುವ ಪ್ರತ್ಯೇಕ ಬ್ಯಾಂಕ್‌ ಅನ್ನುಬ್ಯಾಡ್‌ ಬ್ಯಾಂಕ್ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ NPAಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ಹೀಗೆ ಮಾಡಿದಾಗ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಸಾಲ ನೀಡಲು ಬ್ಯಾಂಕ್‌ಗಳ ಬಳಿ ಹಣ ಉಳಿಯುತ್ತದೆ. ಬ್ಯಾಂಕ್‌ಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಸರಾಗವಾಗಿ ನಡೆಸಲು ಸಾಧ್ಯವಾಗುತ್ತದೆ.

ಎಲ್ಲೆಲ್ಲಿ ಬ್ಯಾಡ್‌ ಬ್ಯಾಂಕ್‌ ಇದೆ, ಸ್ಥಿತಿಗತಿ ಏನು?

  1. ಸದ್ಯ ವಿಶ್ವದಲ್ಲಿ ಎಲ್ಲಿಯೂ ಸರ್ಕಾರದ ಬೆಂಬಲದ ಬ್ಯಾಡ್‌ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿ, ಆರ್ಥಿಕ ಬಿಕ್ಕಟ್ಟು ಪರಿಹಾರವಾದ ನಂತರ ಅವುಗಳನ್ನು ಮುಚ್ಚಿವೆ.
  2. 1980ರಲ್ಲಿ ಅಮೆರಿಕದ ಮೆಲ್ಲನ್ ಬ್ಯಾಂಕ್‌ ದಿವಾಳಿ ಹಂತ ತಲುಪಿದಾಗ ಬ್ಯಾಡ್‌ ಬ್ಯಾಂಕ್‌ ಅನ್ನು ಸ್ಥಾಪಿಸುವ ಪ್ರಸ್ತಾವವನ್ನು ಇಡಲಾಗಿತ್ತು. ಈ ಪ್ರಸ್ತಾವ ಕಾರ್ಯರೂಪಕ್ಕೆ ಬಂದಿದ್ದು, 1988ರಲ್ಲಿ. ಈ ಬ್ಯಾಡ್‌ ಬ್ಯಾಂಕ್‌ನ ಸ್ಥಾಪನೆಯ ಉದ್ದೇಶ ಈಡೇರಿದ ನಂತರ 1995ರಲ್ಲಿ ಅದನ್ನು ರದ್ದುಪಡಿಸಲಾಯಿತು. ಭಾರತದಲ್ಲಿ 2004ರಲ್ಲಿ IDBI ಅನ್ನು ಎನ್‌ಪಿಎ ಇಂದ ರಕ್ಷಿಸಲು ಮತ್ತು ಬ್ಯಾಂಕ್‌ ಆಗಿ ಪರಿವರ್ತಿಸಲು ‘ಸ್ಟ್ರೆಸ್ಡ್‌ ಅಸೆಟ್ಸ್ ಸ್ಟೆಬಿಲೈಸೇಷನ್‌ ಫಂಡ್‌’ ಅನ್ನು ಸ್ಥಾಪಿಸಲಾಗಿತ್ತು. ಈ ನಿಧಿಯ ಸ್ಥಾಪನೆಯಿಂದ ಐಡಿಬಿಐಗೆ ₹ 9,000 ಕೋಟಿ ಲಭ್ಯವಾಗಿತ್ತು.
  3. 2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವಿಶ್ವದ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಕೆಲವು ಬ್ಯಾಂಕ್‌ಗಳು ತಮ್ಮದೇ ಪ್ರತ್ಯೇಕ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿಕೊಂಡಿದ್ದವು. ಕೆಲವು ದೇಶಗಳಲ್ಲಿ ಸರ್ಕಾರಗಳೇ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬ್ಯಾಂಕ್‌ ಆಫ್ ಅಮೆರಿಕ, ಸಿಟಿಗ್ರೂಪ್ ಬ್ಯಾಂಕ್‌, ಸ್ವೀಡ್‌ಬ್ಯಾಂಕ್‌ಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬೆಲ್ಜಿಯಂ, ಐರ್ಲೆಂಡ್‌, ಇಂಡೊನೇಷ್ಯಾ, ಜರ್ಮನಿ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಆರ್ಥಿಕತೆ ಪ್ರಗತಿಯತ್ತ ಹೊರಳಿದ ನಂತರ ಈ ಬ್ಯಾಡ್‌ ಬ್ಯಾಂಕ್‌ಗಳನ್ನು ಮುಚ್ಚಲಾಯಿತು.

ಭಾರತಕ್ಕೆ  ಬ್ಯಾಡ್‌ ಬ್ಯಾಂಕ್‌ನ ಅಗತ್ಯವಿದೆಯೇ?

  1. ಭಾರತದ ಈಗಿನ ಆರ್ಥಿಕ ಸ್ಥಿತಿಗತಿಯಲ್ಲಿ ಬ್ಯಾಡ್‌ ಬ್ಯಾಂಕ್‌ನ ಅವಶ್ಯಕತೆ ಇದೆ ಎಂದು ಭಾರತದ ಬ್ಯಾಂಕ್‌ಗಳು, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಸಲ್ಲಿಸಿರುವ ಮನವಿಯಲ್ಲಿ ವಿವರಿಸಿವೆ. ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಬ್ಯಾಂಕ್‌ಗಳ ಎನ್‌ಪಿಎ ಹೊರೆ ಕಡಿಮೆಯಾಗುತ್ತದೆ. ಬ್ಯಾಲೆನ್ಸ್ ಶೀಟ್‌ನಲ್ಲಿ ಸಮತೋಲನ ಇರುತ್ತದೆ. ಇದರಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಉತ್ತಮವಾಗುತ್ತದೆ. ಸಾಲ ನೀಡಿಕೆಯಿಂದ ಆರ್ಥಿಕತೆಗೆ ಚಾಲನೆ ದೊರೆಯುತ್ತದೆ ಎಂದು ಬ್ಯಾಂಕ್‌ಗಳು ಪ್ರತಿಪಾದಿಸಿವೆ.
  2. ದೇಶದಲ್ಲಿ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಲಿದೆ. ಆರಂಭಿಕ ಹಂತದಲ್ಲಿ ಸರ್ಕಾರವು ₹ 10,000 ಕೋಟಿಯಿಂದ ₹15,000 ಕೋಟಿ ಅನುದಾನವನ್ನು ಬ್ಯಾಡ್‌ ಬ್ಯಾಂಕ್‌ಗೆ ನೀಡುವ ಸಾಧ್ಯತೆ ಇದೆ. ಇದು ತೆರಿಗೆದಾರರ ಹಣ. ಅಲ್ಲದೆ ಅಗತ್ಯವಿರುವ ಮತ್ತಷ್ಟು ಬಂಡವಾಳವನ್ನು ಬ್ಯಾಡ್‌ ಬ್ಯಾಂಕ್, ಮಾರುಕಟ್ಟೆಯಿಂದ ಸಂಗ್ರಹಿಸಲಿದೆ. ಈ ಬಂಡವಾಳದಿಂದಲೂ NPAಗಳನ್ನು ಖರೀದಿಸಲಾಗುತ್ತದೆ.
  3. NPA ಗಳು ವಸೂಲಿಯಾದರೆ ಸರ್ಕಾರ ಹೂಡಿರುವ ಬಂಡವಾಳ ಮತ್ತು ಹೂಡಿಕೆದಾರರ ಬಂಡವಾಳವು ವಾಪಸ್ ಆಗಲಿದೆ. ಎನ್‌ಪಿಎ ವಸೂಲಿ ಆಗದಿದ್ದರೆ, ತೆರಿಗೆದಾರರ ಹಣ ಮತ್ತು ಹೂಡಿಕೆದಾರರ ಹಣ ನಷ್ಟವಾಗಲಿದೆ. ಅಲ್ಲದೆ ಬ್ಯಾಡ್‌ ಬ್ಯಾಂಕ್‌, NPAಗಳ ಗೋದಾಮು ಆಗುವ ಅಪಾಯವೂ ಇದೆ.

ಬ್ಯಾಡ್ ಬ್ಯಾಂಕ್ ಕುರಿತ  ಪರ– ವಿರೋಧ ವಾದ:

  1. ಬ್ಯಾಡ್‌ ಬ್ಯಾಂಕ್‌ ಕಲ್ಪನೆಯ ಬಗ್ಗೆ ಪರ–ವಿರೋಧ ವಾದಗಳಿವೆ. ವಸೂಲಾಗದ ಸಾಲವನ್ನು ಬೇರೆಕಡೆಗೆ ಹಸ್ತಾಂತರಿಸಿದರೆ ಬ್ಯಾಂಕ್‌ಗಳು ತಮ್ಮ ಮೂಲ ಚಟುವಟಿಕೆಯಾದ ಸಾಲ ನೀಡಿಕೆಯ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತದೆ. ಜತೆಗೆ ವಸೂಲಾತಿಯ ಹೊಣೆಯನ್ನು ತಜ್ಞರಿಗೆ ವಹಿಸಿದಂತಾಗುತ್ತದೆ. ಇದರಿಂದ ವಸೂಲಾತಿ ಪ್ರಮಾಣ ಹೆಚ್ಚಾಗುತ್ತದೆ ಎಂದು ಬ್ಯಾಡ್‌ ಬ್ಯಾಂಕ್‌ ಪರ ವಾದಿಸುವವರು ಹೇಳುತ್ತಾರೆ.
  2. ಬೇರೆಬೇರೆ ಬ್ಯಾಂಕ್‌ಗಳು ಸೇರಿ ನೀಡಿರುವ ಸಾಲವು ವಸೂಲಾಗದೆ ಇದ್ದಾಗ, ಸಾಲಗಾರರ ಆಸ್ತಿ ಮಾರಾಟ ಮಾಡಿ ಹಣ ವಸೂಲು ಮಾಡಲು ಅವಕಾಶ ಇದೆ. ಆದರೆ ಖರೀದಿದಾರರು ಎಲ್ಲಾ ಬ್ಯಾಂಕ್‌ಗಳ ಜತೆಗೆ ವ್ಯವಹಾರ ಮಾಡಬೇಕಾಗುತ್ತದೆ. ಬ್ಯಾಡ್‌ ಬ್ಯಾಂಕ್‌ ರಚನೆಯಾದರೆ ಖರೀದಿದಾರರು ಒಂದೇ ಸಂಸ್ಥೆಯ ಜತೆಗೆ ವ್ಯವಹರಿಸಬಹುದಾಗಿದೆ ಎಂದು ಇಂಥವರು ವಾದಿಸುತ್ತಾರೆ.
  3. ಆದರೆ, ‘ಒಂದು ಮಾದರಿಯ ಪರಿಹಾರವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಾರದು’ ಎಂದು ಬ್ಯಾಡ್‌ ಬ್ಯಾಂಕ್‌ ಚಿಂತನೆಯನ್ನು ವಿರೋಧಿಸುವವರು ಹೇಳುತ್ತಾರೆ.
  4. ರಘುರಾಂ ರಾಜನ್ ಅವರು RBI ಗವರ್ನರ್‌ ಆಗಿದ್ದ ಕಾಲದಲ್ಲೇ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪನೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಸ್ವತಃ ರಾಜನ್‌ ಅವರು ಈ ಚಿಂತನೆಯನ್ನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


ಹೊಂಡುರಾಸ್ ನ ಮೊದಲ ಮಹಿಳಾ ಅಧ್ಯಕ್ಷರು:

ಇತ್ತೀಚೆಗೆ, ಎಡಪಂಥೀಯ ವಿಚಾರಧಾರೆಯನ್ನು ಹೊಂದಿರುವ ಕ್ಸಿಯೋಮಾರಾ ಕ್ಯಾಸ್ಟ್ರೋ (Xiomara Castro) ಅವರು ಹೊಂಡುರಾಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೊಂಡುರಾಸ್ ಮಧ್ಯ ಅಮೆರಿಕದ ಒಂದು ದೇಶವಾಗಿದೆ.

ಗಡಿಗಳು: ಹೊಂಡುರಾಸ್ ನ ಪಶ್ಚಿಮಕ್ಕೆ ಗ್ವಾಟೆಮಾಲಾ, ನೈಋತ್ಯಕ್ಕೆ ಎಲ್ ಸಾಲ್ವಡಾರ್, ಆಗ್ನೇಯಕ್ಕೆ ನಿಕರಾಗುವಾ, ದಕ್ಷಿಣಕ್ಕೆ ಪೆಸಿಫಿಕ್ ಮಹಾಸಾಗರದಿಂದ ಫೊನ್ಸೆಕಾ ಕೊಲ್ಲಿ ಮತ್ತು ಉತ್ತರಕ್ಕೆ ಕೆರಿಬಿಯನ್ ಸಮುದ್ರದ ದೊಡ್ಡ ಒಳಹರಿವು ಹೊಂಡುರಾಸ್ ಕೊಲ್ಲಿಯಿಂದ ಆವೃತವಾಗಿದೆ.

Current Affairs 

 

ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಅನಂತ ನಾಗೇಶ್ವರನ್ ಅವರನ್ನು ನೇಮಕ ಮಾಡಿದ ಕೇಂದ್ರ:


ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಗೆ ಡಾ.ವಿ.ಅನಂತ ನಾಗೇಶ್ವರನ್ ಅವರನ್ನು ನೇಮಕ ಮಾಡಲಾಗಿದೆ.

  1. ಅನಂತ ನಾಗೇಶ್ವರನ್ ಅವರು ಲೇಖಕ, ಪ್ರಾಧ್ಯಪಕ ಹಾಗೂ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಭಾರತ ಮತ್ತು ಸಿಂಗಾಪುರದಲ್ಲಿ ಹಲವಾರು ವ್ಯಾಪಾರ ಮತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ.
  2. ಅನಂತ ನಾಗೇಶ್ವರನ್‌ ಅವರು ‘ಐಎಫ್‌ಎಂಆರ್‌ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌’ನ ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ.
  3. 2019 ರಿಂದ 2021 ರವರೆಗೆ ಪ್ರಧಾನಿ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯರೂ ಆಗಿದ್ದರು.
  4. ‘ಮುಖ್ಯ ಆರ್ಥಿಕ ಸಲಹೆಗಾರರು’ (CEA) ಭಾರತದ ಹಣಕಾಸು ಸಚಿವರಿಗೆ ವರದಿ ಸಲ್ಲಿಸುತ್ತಾರೆ.
  5. ‘ಮುಖ್ಯ ಆರ್ಥಿಕ ಸಲಹೆಗಾರ’ ಹುದ್ದೆಯು ಭಾರತ ಸರ್ಕಾರದ ಕಾರ್ಯದರ್ಶಿಯ ಹುದ್ದೆಗೆ ಸಮಾನವಾಗಿದೆ.
  6. CEA ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ.

Current Affairs

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos