Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 28ನೇ ಜನೇವರಿ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಟಿಪ್ಪು ಸುಲ್ತಾನ್.

2. ‘ಇಂಡಿಯಾಸ್ ವುಮೆನ್ ಅನ್‌ಸಂಗ್ ಹೀರೋಸ್’ ಎಂಬ ಸಚಿತ್ರ ಪುಸ್ತಕದ ಬಿಡುಗಡೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಮಧ್ಯ ಏಷ್ಯಾ ಸಭೆ.

2. WTO ದ ವಿವಾದ ಇತ್ಯರ್ಥ ಕಾರ್ಯವಿಧಾನ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಔಪಚಾರಿಕವಾಗಿ ಟಾಟಾ ಸಮೂಹಕ್ಕೆ ಹಸ್ತಾಂತರಗೊಂಡ ಏರ್ ಇಂಡಿಯಾ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

ಟಿಪ್ಪು ಸುಲ್ತಾನ್:


ಸಂದರ್ಭ:

ಮುಂಬೈನಲ್ಲಿ ಟಿಪ್ಪು ಸುಲ್ತಾನ್ ಹೆಸರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಮುಂಬೈನ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿನ ಆಟದ ಮೈದಾನ ವೊಂದಕ್ಕೆ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಹೆಸರನ್ನು ಇಡಲು ಕಾಂಗ್ರೆಸ್ ಪಕ್ಷವು ಯೋಜಿಸುತ್ತಿದೆ ಎಂದು ಮುಂಬೈನಲ್ಲಿರುವ ಭಾರತೀಯ ಜನತಾ ಪಕ್ಷವು ಆರೋಪಿಸಿದೆ.

‘ಟಿಪ್ಪು ಸುಲ್ತಾನ್’ ಯಾರು?

 1. ಟಿಪ್ಪು ಸುಲ್ತಾನ್ ಮೈಸೂರು ಸಾಮ್ರಾಜ್ಯದ ಆಡಳಿತಗಾರ ಮತ್ತು ಮೈಸೂರು ಸುಲ್ತಾನನಾದ ಹೈದರ್ ಅಲಿಯ ಹಿರಿಯ ಮಗ.
 2. ವ್ಯಾಪಕವಾದ ರಾಷ್ಟ್ರೀಯ ಇತಿಹಾಸದಲ್ಲಿ, ಟಿಪ್ಪು ಇಲ್ಲಿಯವರೆಗೆ ಕಾಲ್ಪನಿಕ ಮತ್ತು ಧೈರ್ಯಶಾಲಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾನೆ ಮತ್ತು ಒಬ್ಬ ಅದ್ಭುತ ಮಿಲಿಟರಿ ತಂತ್ರಜ್ಞ, ತನ್ನ 17 ವರ್ಷಗಳ ಅಲ್ಪಾವಧಿಯ ಆಳ್ವಿಕೆಯಲ್ಲಿ, ಭಾರತದಲ್ಲಿನ ಬ್ರಿಟಿಷ್ ಕಂಪನಿಗೆ ಅತ್ಯಂತ ಗಂಭೀರ ಸವಾಲನ್ನು ಒಡ್ಡಿದ್ದ.

ಟಿಪ್ಪು ಸುಲ್ತಾನರ ಕೊಡುಗೆಗಳು:

 1. ಟಿಪ್ಪು ಸುಲ್ತಾನ್ ತನ್ನ 17 ನೇ ವಯಸ್ಸಿನಲ್ಲಿ ಮೊದಲ ಆಂಗ್ಲೋ-ಮೈಸೂರು ಯುದ್ಧದಲ್ಲಿ (1767-69) ಮತ್ತು ನಂತರ, ಮರಾಠರ ವಿರುದ್ಧ ಮತ್ತು ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ (1780–84) ಭಾಗವಹಿಸಿದ್ದರು.
 2. ಅವರು 1767-99ರ ಅವಧಿಯಲ್ಲಿ ಕಂಪನಿಯ ಪಡೆಗಳೊಂದಿಗೆ ನಾಲ್ಕು ಯುದ್ಧಗಳನ್ನು ಮಾಡಿದರು ಮತ್ತು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ತಮ್ಮ ರಾಜಧಾನಿ ಶ್ರೀರಂಗಪಟ್ಟಣವನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಮರಣ ಹೊಂದಿದರು.
 3. ಟಿಪ್ಪು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸೈನ್ಯವನ್ನು ಯುರೋಪಿಯನ್ ಮಾರ್ಗಗಳಲ್ಲಿ ಮರುಸಂಘಟಿಸಿದನು ಮತ್ತು ತನ್ನ ಸೈನ್ಯದಲ್ಲಿ ಮೊದಲ ಬಾರಿಗೆ ಯುದ್ಧ ರಾಕೆಟ್‌ಗಳನ್ನು ಸೇರಿಸಿ ಬಳಸಿದನು.
 4. ವಿವರವಾದ ಸಮೀಕ್ಷೆ ಮತ್ತು ವರ್ಗೀಕರಣದ ಆಧಾರದ ಮೇಲೆ ಅವರು ಭೂ-ಕಂದಾಯ ವ್ಯವಸ್ಥೆಯನ್ನು ರೂಪಿಸಿದರು, ರೈತರ ಮೇಲೆ ನೇರವಾಗಿ ತೆರಿಗೆ ವಿಧಿಸಲಾಗುತ್ತಿತ್ತು ಮತ್ತು ಈ ತೆರಿಗೆಗಳನ್ನು ಸಂಬಳ ಪಡೆಯುವ ಏಜೆಂಟರ ಮೂಲಕ ನಗದು ರೂಪದಲ್ಲಿ ಸಂಗ್ರಹಿಸಿ ರಾಜ್ಯದ ಸಂಪನ್ಮೂಲ-ಆಧಾರವನ್ನು ವಿಸ್ತರಿಸಿದರು.
 5. ಅವರು ಕೃಷಿಯನ್ನು ಆಧುನೀಕರಿಸಿದರು, ಬಂಜರು ಜಮೀನುಗಳ ಅಭಿವೃದ್ಧಿಗೆ ತೆರಿಗೆ ವಿನಾಯಿತಿ ನೀಡಿದರು, ನೀರಾವರಿ ಮೂಲಸೌಕರ್ಯಗಳನ್ನು ನಿರ್ಮಿಸಿದರು ಮತ್ತು ಹಳೆಯ ಅಣೆಕಟ್ಟುಗಳನ್ನು ದುರಸ್ತಿ ಪಡಿಸಿದರು. ಕೃಷಿ ಉತ್ಪನ್ನಗಳು ಮತ್ತು ರೇಷ್ಮೆ ಕೃಷಿಯನ್ನು ಪ್ರೋತ್ಸಾಹಿಸಿದರು. ವ್ಯಾಪಾರವನ್ನು ಬೆಂಬಲಿಸಲು ನೌಕಾಪಡೆಯೊಂದನ್ನು ರಚಿಸಲಾಯಿತು.
 6. ಕಾರ್ಖಾನೆಗಳನ್ನು ಸ್ಥಾಪಿಸಲು ಅವರು “ರಾಜ್ಯ ವಾಣಿಜ್ಯ ನಿಗಮ” ವನ್ನು ರಚಿಸಿದರು.

‘ಟಿಪ್ಪು ಸುಲ್ತಾನ್’ ಕುರಿತ ವಿವಾದಗಳಿಗೆ ಕಾರಣಗಳು:

ಬಹುತೇಕ ಎಲ್ಲ ಐತಿಹಾಸಿಕ ವ್ಯಕ್ತಿಗಳು ಟಿಪ್ಪು ಸುಲ್ತಾನ್ ಬಗ್ಗೆ ಆಸಕ್ತಿ ತೋರಿಸಿದ್ದಾರೆ ಮತ್ತು ಬಹುತೇಕ ಎಲ್ಲರೂ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ.

 1. ಬಲವಾದ ಪ್ರಾದೇಶಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದ ಹೈದರ್ ಮತ್ತು ಟಿಪ್ಪು ಇಬ್ಬರೂ ತಮ್ಮ ರಾಜ್ಯವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಗಳೊಂದಿಗೆ, ಮೈಸೂರಿನ ಹೊರಗಿನ ಸಾಮ್ರಾಜ್ಯಗಳ ಮೇಲೆ ಆಕ್ರಮಣ ಮಾಡಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು. ಈ ದಾಳಿಯ ಸಮಯದಲ್ಲಿ, ಅವರು ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳನ್ನು ಸುಟ್ಟುಹಾಕಿದರು, ನೂರಾರು ದೇವಾಲಯಗಳು ಮತ್ತು ಚರ್ಚುಗಳನ್ನು ನಾಶಪಡಿಸಿದರು ಮತ್ತು ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸಿದರು.
 2. ಐತಿಹಾಸಿಕ ದಾಖಲೆಗಳಲ್ಲಿ, “ನಾಸ್ತಿಕರನ್ನು” ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುವ ಮತ್ತು ಅವರ ಪೂಜಾ ಸ್ಥಳಗಳನ್ನು ನಾಶಪಡಿಸಿದ ಬಗ್ಗೆ ಟಿಪ್ಪು ಹೆಮ್ಮೆಪಡುವ ದಾಖಲೆ ಇದೆ.
 3. ಟಿಪ್ಪುಗೆ ಸಂಬಂಧಿಸಿದಂತೆ ಎರಡು ರೀತಿಯ ಭಿನ್ನ ಅಭಿಪ್ರಾಯ ಹೊಂದಿದ ಜನರಿದ್ದಾರೆ, ಒಬ್ಬರು ಅವರನ್ನು “ಮೈಸೂರು ಹುಲಿ” ಎಂದು ಬಣ್ಣಿಸುತ್ತಾರೆ, ವಸಾಹತುಶಾಹಿಯ ವಿರುದ್ಧದ ಪ್ರತಿರೋಧ ಮತ್ತು ಅವರನ್ನು ಕರ್ನಾಟಕದ ಮಹಾನ್ ಮಗನಾಗಿ ನೋಡುವವರು ಮತ್ತು ಇತರರು, ಟಿಪ್ಪು ನನ್ನು ದೇವಾಲಯಗಳನ್ನು ನಾಶಪಡಿಸಿದವನು ಮತ್ತು ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಬಲವಂತವಾಗಿ ಮತಾಂತರ ಗೊಳಿಸಿದವನು ಎಂದು ಆರೋಪಿಸಿ ಅವನನ್ನು ಮತಾಂಧ ಮತ್ತು ದಬ್ಬಾಳಿಕೆಯ ಪ್ರವೃತ್ತಿಯವನೆಂದು ಕರೆಯುತ್ತಾರೆ.

ದಯವಿಟ್ಟು ಗಮನಿಸಿ:

ಟಿಪ್ಪು ಜನ್ಮದಿನ ಬದಲು: ಹೊಸ ಸಂಶೋಧನೆ:

ನಿರಂತರ ಸಂಶೋಧನೆಯ ಫಲವಾಗಿ ಟಿಪ್ಪು ಸುಲ್ತಾನ್ ಜನ್ಮದಿನ 1 ಡಿಸೆಂಬರ್ 1751 ಎನ್ನುವುದು ದೃಢಪಟ್ಟಿದೆ ಎಂದು ಇತಿಹಾಸ ತಜ್ಞ, ಸಂಶೋಧಕ ನಿಧಿನ್ ಓಲಿಕಾರ್‌ ಹೇಳಿದ್ದಾರೆ.

ಇದುವರೆಗೂ ಟಿಪ್ಪು ಜನ್ಮದಿನ 20 ನವೆಂಬರ್ 1750 ಎಂದು ನಂಬಲಾಗಿದೆ. ನಿಖರವಾದ ಸತ್ಯ ತಿಳಿಯಲು ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿದ್ದೇನೆ. ಲಂಡನ್‍ ಮ್ಯೂಸಿಯಂನ ಅಧಿಕೃತ ಪತ್ರಗಳ ಸಮಗ್ರ ಅಧ್ಯಯನ ನಡೆಸಿರುವೆ. ಪ್ರಮುಖ ಮೂರು ದಾಖಲೆ ಸಲ್ಲಿಸಿದ್ದೇನೆ. ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಇತಿಹಾಸಜ್ಞ ಪ್ರೊ.ಶೇಖ್‍ ಅಲಿ ಅವರು ಅನುಮೋದಿಸಿದ್ದಾರೆ. ಅಧ್ಯಯನದ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಟಿಪ್ಪು ಜನ್ಮದಿನ 1 ಡಿಸೆಂಬರ್ 1751 ಆಗಬೇಕು ಎಂದು ಮನವಿ ಮಾಡಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಿಧಿನ್ ಅವರು ಲಂಡನ್‍ಗೆ ತೆರಳಿದಾಗ ಅಲ್ಲಿನ ಬ್ರಿಟಿಷ್ ಗ್ರಂಥಾಲಯದಲ್ಲಿ ಟಿಪ್ಪುಗೆ ಸಂಬಂಧಿಸಿದ ಪರ್ಶಿಯನ್ ಭಾಷೆಯ ‘ಫತೇ ಉಲ್ ಮುಜಾಹಿದ್ದೀನ್’ ಹಸ್ತಪ್ರತಿ ಸಿಕ್ಕಿತು. ಅದು ಸ್ವತಃ ಟಿಪ್ಪು ತಾನೇ ಬರೆಸಿದ ಕೈಪಿಡಿ. ಆ ಕೈಪಿಡಿಯಲ್ಲಿ ಜಕ್ರಿ ಮಾಸದ 14ನೇ ದಿನ 1165 ಇಜ್ರಿ ದಿನ ಸೂರ್ಯೋದಯವಾದ 10 ಗಂಟೆಗಳ ನಂತರ ನನ್ನ ಜನ್ಮದಿನ ಆಚರಿಸಬೇಕು. ಮೈಸೂರು ಸಂಸ್ಥಾನದ ಸಮಸ್ತ ಪ್ರಜೆಗಳು ಸಂಭ್ರಮದಲ್ಲಿ ಭಾಗವಹಿಸಬೇಕು ಎಂಬ ಉಲ್ಲೇಖವಿದೆ. ಈ ಆಧಾರದ ಮೇಲೆ ಆಂಗ್ಲ ಕ್ಯಾಲೆಂಡರ್‌ಗೆ ಬದಲಾಯಿಸಿಕೊಂಡು ಅಧ್ಯಯನ ನಡೆಸಲಾಗಿದೆ. ಕೆಲವು ಹಸ್ತ ಪ್ರತಿಗಳಲ್ಲೂ ಜನ್ಮದಿನದ ಸುಳಿವು ದೊರೆತಿದೆ’ ಎಂದು ಇತಿಹಾಸಕಾರ ಖಂಡೋಬ ರಾವ್ ವಿವರ ನೀಡಿದರು.

(ಕೃಪೆ;ಪ್ರಜಾವಾಣಿ).

 

ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

‘ಇಂಡಿಯಾಸ್ ವುಮೆನ್ ಅನ್‌ಸಂಗ್ ಹೀರೋಸ್’ ಎಂಬ ಸಚಿತ್ರ ಪುಸ್ತಕದ ಬಿಡುಗಡೆ:


(Comic book ‘India’s Women Unsung Heroes’ released)

ಸಂದರ್ಭ:

ಇತ್ತೀಚೆಗೆ, ಸಂಸ್ಕೃತಿ ಸಚಿವಾಲಯವು ‘ಆಜಾದಿ ಕಾ ಮಹೋತ್ಸವ’ ಕಾರ್ಯಕ್ರಮದ ಅಂಗವಾಗಿ ‘ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮರೆತುಹೋದ ನಾಯಕಿಯರು’ ಕುರಿತು ಸಚಿತ್ರ ಪುಸ್ತಕವನ್ನು ಬಿಡುಗಡೆ ಮಾಡಿದೆ. ಈ ಪುಸ್ತಕವು ಭಾರತದ 20 ಮರೆತುಹೋದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಒಳಗೊಂಡಿದೆ.

 1. ಸಂಸ್ಕೃತಿ ಸಚಿವಾಲಯವು ‘ಅಮರ್ ಚಿತ್ರ ಕಥಾ’ ಸಹಯೋಗದೊಂದಿಗೆ ಸ್ವಾತಂತ್ರ್ಯ ಸಂಗ್ರಾಮದ ಮರೆತುಹೋದ 75 ವೀರರ ಕುರಿತು ಸಚಿತ್ರ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.
 2. ಎರಡನೇ ಆವೃತ್ತಿಯು 25 ಅನಾಮಧೇಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ಒಳಗೊಂಡಿರುತ್ತದೆ ಮತ್ತು ಇದು ಪ್ರಕ್ರಿಯೆಯಲ್ಲಿದೆ ಮತ್ತು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೂರನೇ ಮತ್ತು ಅಂತಿಮ ಆವೃತ್ತಿಯು ಇತರ ಪ್ರದೇಶಗಳಿಂದ 30 ಮರೆತುಹೋದ ವೀರರನ್ನು ತೆಗೆದುಕೊಳ್ಳುತ್ತದೆ.

Current Affairs

ಪುಸ್ತಕದಲ್ಲಿ ಒಳಗೊಂಡಿರುವ ಕೆಲವು ಪ್ರಮುಖ ನಾಯಕಿಯರು:

ರಾಣಿ ಅಬ್ಬಕ್ಕ:

ರಾಣಿ ಅಬ್ಬಕ್ಕ ಕರ್ನಾಟಕದ ಚೌಟ ಉಳ್ಳಾಲದ ಮೊದಲ ತುಳುವ ರಾಣಿಯಾಗಿದ್ದರು.ಅವರು 16 ನೇ ಶತಮಾನದಲ್ಲಿ ಪ್ರಬಲ ಪೋರ್ಚುಗೀಸರ ವಿರುದ್ಧ ಹೋರಾಡಿದರು ಮತ್ತು ಅವರನ್ನು ಸೋಲಿಸಿದರು.

ಅವಳು ದೇವಾಲಯಗಳ ನಗರವಾದ ಮೂಡುಬಿದಿರೆಯಿಂದ ಆಳ್ವಿಕೆ ನಡೆಸುತ್ತಿದ್ದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರ ಉಳ್ಳಾಲ ಅವರ ಉಪ ರಾಜಧಾನಿಯಾಗಿತ್ತು. ಚೌಟ ರಾಜವಂಶದ ಆಳ್ವಿಕೆಯು ಭಾರತದ ಕರಾವಳಿ ಕರ್ನಾಟಕದ (ತುಳುನಾಡು) ಭಾಗಗಳಲ್ಲಿ ಹರಡಿತು. ಅವರ ರಾಜಧಾನಿ ಪುತ್ತಿಗೆ.

ಮಾತಂಗಿನಿ ಹಾಜರಾ (Matangiri Hazra):

ಮಾತಂಗಿನಿ ಹಾಜರಾ ಅವರು ಬಂಗಾಳದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು.

ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. 1930 ರಲ್ಲಿ, ಅವರು ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು ಮತ್ತು ಉಪ್ಪಿನ ಕಾಯಿದೆಯನ್ನು ಮುರಿದ ಕಾರಣ ಬಂಧಿಸಲಾಯಿತು.

29 ಸೆಪ್ಟೆಂಬರ್ 1942 ರಂದು, ಅವರು ತಮ್ಲುಕ್ ಪೊಲೀಸ್ ಠಾಣೆಯ ಮುಂದೆ (ಹಿಂದಿನ ಮಿಡ್ನಾಪುರ ಜಿಲ್ಲೆ) ಬ್ರಿಟಿಷ್ ಇಂಡಿಯನ್ ಪೋಲೀಸರ ಗುಂಡಿಗೆ ಬಲಿಯಾದರು.

ಜನಪ್ರಿಯವಾಗಿ ಅವರನ್ನು ‘ಬುಡಿ ಗಾಂಧಿ’ / ವೃದ್ಧೆಗಾಂಧಿ ಎಂದು ಕರೆಯಲಾಗುತ್ತಿತ್ತು.

Current Affairs

 

ಗುಲಾಬ್ ಕೌರ್ (Gulab Kaur):

ಗುಲಾಬ್ ಕೌರ್ ಸ್ವಾತಂತ್ರ್ಯ ಹೋರಾಟಗಾರ್ತಿ ಯಾಗಿದ್ದರು, ಬ್ರಿಟಿಷ್ ರಾಜ್ ವಿರುದ್ಧ ಹೋರಾಡಲು ಮತ್ತು ಭಾರತೀಯ ಜನರನ್ನು ಸಂಘಟಿಸಲು ಅವರು ತಮ್ಮ ಜೀವನದ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಮತ್ತು ವಿದೇಶದಲ್ಲಿ ಜೀವನ ನಡೆಸುವ ತಮ್ಮ ಕನಸುಗಳನ್ನು ತ್ಯಾಗ ಮಾಡಿದರು.

ಗುಲಾಬ್ ಕೌರ್, ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ, ಭಾರತೀಯ ಉಪಖಂಡವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ವಲಸಿಗ ಭಾರತೀಯರು ಸ್ಥಾಪಿಸಿದ ಗದರ್ ಪಾರ್ಟಿಗೆ ಸೇರಿದರು.

ಪದ್ಮಜಾ ನಾಯ್ಡು (Padmaja Naidu):

ಪದ್ಮಜಾ ನಾಯ್ಡು ಅವರು ಸರೋಜಿನಿ ನಾಯ್ಡು ಅವರ ಮಗಳು ಮತ್ತು ತಮ್ಮದೇ ಶೈಲಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

 1. ರಾಜನೀತಜ್ಞರು ಆಗಿದ್ದ ಅವರು ಸ್ವಾತಂತ್ರ್ಯದ ನಂತರ 3 ನವೆಂಬರ್ 1956 ರಿಂದ 1 ಜೂನ್ 1967 ರವರೆಗೆ ಪಶ್ಚಿಮ ಬಂಗಾಳದ 5 ನೇ ರಾಜ್ಯಪಾಲರಾಗಿದ್ದರು.
 2. 21 ನೇ ವಯಸ್ಸಿನಲ್ಲಿ, ಅವರು ಹೈದರಾಬಾದ್ ನಿಜಾಮನ ಆಳ್ವಿಕೆಯ ರಾಜಪ್ರಭುತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ‘ಸಹ-ಸ್ಥಾಪಿಸಿದರು’.
 3. 1942 ರಲ್ಲಿ “ಕ್ವಿಟ್ ಇಂಡಿಯಾ” ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ಸೆರೆವಾಸವನ್ನು ಅನುಭವಿಸಿದರು. ಸ್ವಾತಂತ್ರ್ಯದ ನಂತರ, ಅವರು 1950 ರಲ್ಲಿ ಭಾರತೀಯ ಸಂಸತ್ತಿಗೆ ಆಯ್ಕೆಯಾದರು.

Current Affairs

 

ರಾಣಿ ವೇಲು ನಚಿಯಾರ್ (Velu Nachiyar):

ಶಿವಗಂಗೆಯ ರಾಣಿ ವೇಲು ನಚಿಯಾರ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಮಾಡಿದ ಮೊದಲ ಭಾರತೀಯ ರಾಣಿಯಾಗಿದ್ದಾರೆ.

ಅವರು 1780-1790 ರವರೆಗೆ ಶಿವಗಂಗಾ ರಾಜ್ಯದ ರಾಣಿಯಾಗಿ ಆಳ್ವಿಕೆ ನಡೆಸಿದರು.

ಆಕೆಯನ್ನು ತಮಿಳರು ವೀರಮಂಗೈ (ಧೈರ್ಯಶಾಲಿ ಮಹಿಳೆ) ಎಂದು ಕರೆಯುತ್ತಾರೆ.

ಅವರು ಹೈದರ್ ಅಲಿಯ ಸೈನ್ಯ, ಸಾಮಂತರು, ಮರುದು ಸಹೋದರರು, ದಲಿತ ಸೇನಾಪತಿಗಳು ಮತ್ತು ತಂಡಾವರಾಯನ ಪಿಳ್ಳೈ ಅವರ ಸಹಾಯದಿಂದ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋರಾಡಿದರು.

 

ಝಲ್ಕಾರಿ ಬಾಯಿ (Jhalkari Bai):

ಝಲ್ಕಾರಿ ಬಾಯಿ ಒಬ್ಬ ಮಹಿಳಾ ಯೋಧೆ ಮತ್ತು ಝಾನ್ಸಿ ರಾಣಿಯ ಮುಖ್ಯ ಸಲಹೆಗಾರರಲ್ಲಿ ಒಬ್ಬರಾಗಿದ್ದರು.

ಅವರು ಭಾರತೀಯ ಸ್ವಾತಂತ್ರ್ಯದ ಪ್ರಥಮ ಯುದ್ಧವಾದ 1857 ರ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಝಾನ್ಸಿಯ ಮುತ್ತಿಗೆಯ ಉತ್ತುಂಗದ ಸಮಯದಲ್ಲಿ, ಅವಳು ಸ್ವತಃ ರಾಣಿ ಲಕ್ಷ್ಮೀಬಾಯಿಯಂತೆ ವೇಷ ಧರಿಸಿ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಟವನ್ನು ಮುನ್ನಡೆಸಿದರು. ಇದರಿಂದಾಗಿ ಝಾನ್ಸಿ ರಾಣಿಗೆ ಕೋಟೆಯಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕಿತು. ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ವೀರಗತಿಯನ್ನು ಪಡೆದಳು.

Current Affairs

 

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ಮಧ್ಯ ಏಷ್ಯಾ ಸಭೆ:


(India-Central Asia Summit)

ಸಂದರ್ಭ:

ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆ (India-Central Asia Summit) ಯನ್ನು ಆಯೋಜಿಸಿದ್ದರು.

ಈ ಶೃಂಗಸಭೆಯಲ್ಲಿ ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಳ ಅಧ್ಯಕ್ಷರು ಭಾಗವಹಿಸಿದ್ದರು.

ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 30 ನೇ ವಾರ್ಷಿಕೋತ್ಸವದಂದು ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆಯನ್ನು ಏರ್ಪಡಿಸಲಾಗಿತ್ತು.

Current Affairs

 

ಶೃಂಗಸಭೆಯ ಫಲಿತಾಂಶಗಳು-“ದೆಹಲಿ ಘೋಷಣೆ:

 1. ಶೃಂಗಸಭೆಯ ಸಮಯದಲ್ಲಿ, ಭಾರತ ಮತ್ತು ಮಧ್ಯ ಏಷ್ಯಾದ ಭೂ ಆವೃತ ದೇಶಗಳ ನಡುವೆ ಭೂ ಸಂಪರ್ಕದ ಕೊರತೆಯ ಬಗ್ಗೆ ಭಾರತದಿಂದ ಕಳವಳ ವ್ಯಕ್ತಪಡಿಸಲಾಯಿತು.
 2. ನವದೆಹಲಿಯಲ್ಲಿ “ಮಧ್ಯ ಏಷ್ಯಾ ಕೇಂದ್ರ” ವನ್ನು (Central Asia Centre) ಸ್ಥಾಪಿಸುವ ಯೋಜನೆಯನ್ನು ಸಮ್ಮೇಳನದಲ್ಲಿ ಭಾಗವಹಿಸುವ ನಾಯಕರು ಘೋಷಿಸಿದರು.
 3. ಅಫ್ಘಾನಿಸ್ತಾನ ಮತ್ತು ಚಬಹಾರ್ ಬಂದರು ಯೋಜನೆಯಲ್ಲಿ ಎರಡು “ಜಂಟಿ ಕಾರ್ಯನಿರತ ಗುಂಪಿನ” (Joint Working Groups) ರಚನೆಯನ್ನು ನಾಯಕರು ಘೋಷಿಸಿದರು.
 4. ಈ ನಾಯಕರು ತುರ್ಕಮೆನಿಸ್ತಾನದ ‘ಗಲ್ಕನಿಷ್ಕ್ ಆಯಿಲ್ ಫೀಲ್ಡ್’ (Galknyshk oil fields) ನಿಂದ ಆರಂಭಗೊಂಡು ಅಫ್ಘಾನಿಸ್ತಾನದ ಹೆರಾತ್ ಮತ್ತು ಕಂದಹಾರ್ ವರೆಗೆ ಮತ್ತು ಪಾಕಿಸ್ತಾನದ ಕ್ವೆಟ್ಟಾ ಮತ್ತು ಮುಲ್ತಾನ್ ಮೂಲಕ ಭಾರತದ ಫಾಜಿಲ್ಕಾದವರೆಗೆ ‘TAPI ಗ್ಯಾಸ್ ಪೈಪ್‌ಲೈನ್ ಯೋಜನೆ’ಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು.

ಮಧ್ಯ ಏಷ್ಯಾಕ್ಕೆ ಲಭ್ಯವಿರುವ ಪರ್ಯಾಯ ಮಾರ್ಗಗಳು:

ಮಧ್ಯ ಏಷ್ಯಾದ ಈ ಭೂ ಆವೃತ ದೇಶಗಳನ್ನು ಭಾರತವು ಸಮುದ್ರ ಮಾರ್ಗದ ಮೂಲಕ ಚಾಬಹಾರ್ ಪೋರ್ಟ್ ಟರ್ಮಿನಲ್ ಮತ್ತು ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ (INSTC) ಮೂಲಕ ತಲುಪಬಹುದು. ಚಬಹಾರ್ ಪೋರ್ಟ್ ಟರ್ಮಿನಲ್ ಅನ್ನು ಭಾರತವು ನಿರ್ವಹಿಸುತ್ತಿದೆ ಮತ್ತು ಇರಾನ್‌ನ ಬಂದರ್ ಅಬ್ಬಾಸ್ ಮೂಲಕ ಹಾದುಹೋಗುವ ಅಂತರರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ (INSTC) ಅನ್ನು ರಷ್ಯಾ ಮತ್ತು ಇರಾನ್ ಅಭಿವೃದ್ಧಿಪಡಿಸುತ್ತಿವೆ.

ಮಧ್ಯ ಏಷ್ಯಾದ ಭೂ-ಕಾರ್ಯತಂತ್ರದ ಪ್ರಾಮುಖ್ಯತೆ:

 1. ಮಧ್ಯ ಏಷ್ಯಾವು ಯುರೋಪ್ ಮತ್ತು ಏಷ್ಯಾದ ನಡುವೆ ‘ಪ್ರವೇಶ ಬಿಂದು’ವಾಗಿ ಆಯಕಟ್ಟಿನ ಸ್ಥಾನದಲ್ಲಿ ನೆಲೆಗೊಂಡಿದೆ ಮತ್ತು ವ್ಯಾಪಾರ, ಹೂಡಿಕೆ ಮತ್ತು ಅಭಿವೃದ್ಧಿಗೆ ವ್ಯಾಪಕವಾದ ಸಾಧ್ಯತೆಗಳನ್ನು ನೀಡುತ್ತದೆ.
 2. ಮಧ್ಯ ಏಷ್ಯಾವು ಭಾರತದ ತಕ್ಷಣದ ನೆರೆಹೊರೆಯವರ ಭಾಗವಲ್ಲ, ಮತ್ತು ಅದು ಭಾರತದೊಂದಿಗೆ ಗಡಿಯನ್ನು ಹಂಚಿಕೊಳ್ಳುವುದಿಲ್ಲ, ಆದ್ದರಿಂದ ಎರಡು ಪ್ರದೇಶಗಳ ನಡುವಿನ ‘ಸಂಪರ್ಕ’ ವಿಷಯವು ಅತ್ಯಂತ ಮಹತ್ವದ್ದಾಗಿದೆ.

ಮಧ್ಯ ಏಷ್ಯಾದ ಭೂ ಆರ್ಥಿಕ ಪ್ರಾಮುಖ್ಯತೆ:

ಮಧ್ಯ ಏಷ್ಯಾ ಪ್ರದೇಶವು ಕಚ್ಚಾ ತೈಲ, ನೈಸರ್ಗಿಕ ಅನಿಲ, ಚಿನ್ನ, ತಾಮ್ರ, ಅಲ್ಯೂಮಿನಿಯಂ ಮತ್ತು ಕಬ್ಬಿಣದಂತಹ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ.

INSTC ಕುರಿತು:

ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ -INSTC ) ಸರಕು ಸಾಗಣೆಗಾಗಿ 7,200 ಕಿ.ಮೀ ಉದ್ದದ ಬಹು-ವಿಧದ (ಮಲ್ಟಿ-ಮೋಡ್) ಹಡಗುಗಳು, ರೈಲ್ವೆಗಳು ಮತ್ತು ರಸ್ತೆಮಾರ್ಗಗಳ ಜಾಲವಾಗಿದೆ.

ಒಳಗೊಂಡಿರುವ ಪ್ರದೇಶಗಳು: ಭಾರತ, ಇರಾನ್, ಅಫ್ಘಾನಿಸ್ತಾನ, ಅಜೆರ್ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್.

2014 ರಲ್ಲಿ, ಅದರ ಎರಡು ಮಾರ್ಗಗಳನ್ನು ಈ ಮೊದಲೇ ಪರೀಕ್ಷಿಸಲಾಗಿದೆ:

ಮೊದಲನೆಯದಾಗಿ, ಮುಂಬೈನಿಂದ ಅಜರ್ಬೈಜಾನ್‌ನ ಬಾಕುಗೆ ‘ಬಂದರ್ ಅಬ್ಬಾಸ್’ ಮೂಲಕ.

ಎರಡನೆಯದಾಗಿ, ಮುಂಬೈಯಿಂದ ‘ಬಂದರ್ ಅಬ್ಬಾಸ್’ ಮೂಲಕ ಅಸ್ಟ್ರಾಖಾನ್, ಟೆಹ್ರಾನ್ ಮತ್ತು ಬಂದರ್-ಎ-ಅಂಜಲಿವರೆಗೆ.

ಈ ಕಾರಿಡಾರ್‌ನ ಪ್ರಾಮುಖ್ಯತೆ:

 1. ‘ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್’ (INSTC) ಅನ್ನು ಚೀನಾದ ‘ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್’ (BRI) ಗೆ ಬಹಳ ಹಿಂದೆಯೇ ಕಲ್ಪಿಸಲಾಗಿತ್ತು. INSTC ಯು, ಭಾರತದಿಂದ ರಷ್ಯಾ ಮತ್ತು ಯುರೋಪ್ ಗಳಿಗೆ ಇರಾನ್‌ ಮೂಲಕ ಸಾಗಿಸುವ ಸರಕುಗಳ ಸಾಗಣೆ ವೆಚ್ಚ ಮತ್ತು ಸಮಯವನ್ನು ಉಳಿಸುತ್ತದೆ ಮತ್ತು ಅದೇ ಸಮಯದಲ್ಲಿ, ಯುರೇಷಿಯನ್ ದೇಶಗಳ ಸಂಪರ್ಕಕ್ಕೆ ಪರ್ಯಾಯ ಮಾರ್ಗವನ್ನು ಸಹ ಒದಗಿಸುತ್ತದೆ.
 2. ಇದು ಮಧ್ಯ ಏಷ್ಯಾ ಮತ್ತು ಪರ್ಷಿಯನ್ ಕೊಲ್ಲಿಗೆ ಸರಕುಗಳನ್ನು ಸಾಗಿಸಲು ಅನುಕೂಲವಾಗುವಂತೆ ಅಂತರರಾಷ್ಟ್ರೀಯ ಸಾರಿಗೆ ಮತ್ತು ಸಾರಿಗೆ ಕಾರಿಡಾರ್ ಅನ್ನು ರಚಿಸುವುದಕ್ಕಾಗಿ ಭಾರತ, ಒಮಾನ್, ಇರಾನ್, ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಕಜಾಕಸ್ಥಾನ್ ಗಳು ಸಹಿ ಮಾಡಿದ ‘ಅಶ್ಗಬತ್ ಒಪ್ಪಂದ’ (the Ashgabat agreement) ಎಂದು ಕರೆಯಲ್ಪಡುವ ವಿವಿಧೋದ್ದೇಶ ಸಾರಿಗೆ ಒಪ್ಪಂದದೊಂದಿಗೆ ಸಿಂಕ್ರೊನೈಸ್ ಆಗಲಿದೆ.

Current Affairs

 

TAPI ಯೋಜನೆ:

 1. ತುರ್ಕಮೆನಿಸ್ತಾನ್-ಅಫ್ಘಾನಿಸ್ತಾನ್-ಪಾಕಿಸ್ತಾನ-ಇಂಡಿಯಾ (TAPI) ಯೋಜನೆಯನ್ನು 2015 ರಲ್ಲಿ ಉದ್ಘಾಟಿಸಲಾಯಿತು.
 2. ಇದು ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆಯಾಗಿದ್ದು, ಇದನ್ನು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಅಭಿವೃದ್ಧಿಪಡಿಸುತ್ತಿದೆ.
 3. ಈ ಯೋಜನೆಯು ಭಾರತ-ಪಾಕಿಸ್ತಾನದ ಉದ್ವಿಗ್ನತೆ ಮತ್ತು ಅಫ್ಘಾನಿಸ್ತಾನದ ಆಂತರಿಕ ಪರಿಸ್ಥಿತಿಯಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ.

ಭಾರತಕ್ಕೆ ಈ ಯೋಜನೆಯ ಪ್ರಯೋಜನಗಳು:

 1. ಇಂಧನದ ಬೇಡಿಕೆಯು ಪ್ರಪಂಚದಾದ್ಯಂತ ಬೆಳೆಯುತ್ತಿರುವ ಅಗತ್ಯವಾಗಿದೆ ಮತ್ತು ಭಾರತವು ಇರಾನ್ ಮತ್ತು ಇತರ ದೇಶಗಳಿಂದ ತನ್ನ ಹೆಚ್ಚಿನ ಇಂಧನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತದೆ. ತುರ್ಕಮೆನಿಸ್ತಾನದ ಇಂಧನ ನಿಕ್ಷೇಪಗಳು ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿವೆ ಮತ್ತು ಈ ಇಂಧನ ನಿಕ್ಷೇಪಗಳಿಗೆ ಪ್ರವೇಶವು ಯೋಜನೆಯನ್ನು ಭಾರತಕ್ಕೆ ಆಕರ್ಷಕ ಪ್ರತಿಪಾದನೆಯನ್ನಾಗಿ ಮಾಡುತ್ತದೆ.
 2. ಈ ಯೋಜನೆಯಿಂದ ಭಾರತಕ್ಕೆ ಬೇಕಾದ ಇಂಧನ ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯಲಿದೆ ಮತ್ತು ಯೋಜನೆಯು ಪೂರ್ಣಗೊಳ್ಳುವವರೆಗೆ, ಭಾರತವು ಅದರ ಮೂಲಕ ತನ್ನ ಅಂದಾಜು ಅಗತ್ಯಗಳ ಸುಮಾರು 15% ಅನ್ನು ಸುಲಭವಾಗಿ ಪೂರೈಸಿಕೊಳ್ಳುತ್ತದೆ.
 3. ಈ ಯೋಜನೆಯು ಮಧ್ಯ ಏಷ್ಯಾದಲ್ಲಿ ತನ್ನ ಆಸಕ್ತಿಯನ್ನು ಭದ್ರಪಡಿಸಿಕೊಳ್ಳಲು ಭಾರತಕ್ಕೆ ಅವಕಾಶವನ್ನು ಒದಗಿಸುತ್ತದೆ. TAPI ಯೋಜನೆಯ ಯಶಸ್ಸು ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಇತರ ವಿಷಯಗಳಲ್ಲಿ ಸಹಕಾರದ ಮಾರ್ಗಗಳನ್ನು ಕಂಡುಕೊಳ್ಳುವುದನ್ನು ಖಚಿತಪಡಿಸುತ್ತದೆ.

 

ವಿಷಯಗಳುಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

WTO ದ ವಿವಾದ ಇತ್ಯರ್ಥ ಕಾರ್ಯವಿಧಾನ:


(WTO’s dispute settlement mechanism)

ಸಂದರ್ಭ:

ಇತ್ತೀಚೆಗೆ, ತೈವಾನ್‌ ಕುರಿತ ತನ್ನ ನಿಲುವಿನಿಂದಾಗಿ ಚೀನಾ ಲಿಥುವೇನಿಯಾ (Lithuania)ವನ್ನು ಗುರಿಯಾಗಿಸಿದ ನಂತರ ಯುರೋಪಿಯನ್ ಯೂನಿಯನ್ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (WTO) ಬೀಜಿಂಗ್ ವಿರುದ್ಧ ಪ್ರಕರಣವನ್ನು ಪ್ರಾರಂಭಿಸಿದೆ.

 1. ಲಿಥುವೇನಿಯಾ ಜುಲೈನಲ್ಲಿ ತೈವಾನ್ ಗೆ ವಿಲ್ನಿಯಸ್ ನಗರದಲ್ಲಿ ರಾಜತಾಂತ್ರಿಕ ರಾಯಭಾರ ಕಚೇರಿಯನ್ನು ತೆರೆಯಲು ಅವಕಾಶ ನೀಡುವ ಮೂಲಕ ಕೋಲಾಹಲವನ್ನು ಸೃಷ್ಟಿಸಿತು.
 2. ಲಿಥುವೇನಿಯಾದ ಈ ನಡೆ ಬೀಜಿಂಗ್ ಅನ್ನು ಕೆರಳಿಸಿತು. ಚೀನಾ ತೈವಾನ್ ಅನ್ನು ರಾಷ್ಟ್ರವೆಂದು ಗುರುತಿಸುವುದಿಲ್ಲ ಅಲ್ಲದೆ ಸ್ವಯಂ-ಆಡಳಿತದ ಪ್ರಜಾಪ್ರಭುತ್ವ ದ್ವೀಪವನ್ನು ತನ್ನ ಮುಖ್ಯ ಭೂಭಾಗದ ಬಂಡಾಯ ಪ್ರದೇಶವೆಂದು ಪರಿಗಣಿಸುತ್ತದೆ.

Current Affairs

 

ಲಿಥುವೇನಿಯಾ:

 1. ಇದು ಬಾಲ್ಟಿಕ್ ಸಮುದ್ರದ (Baltic Sea) ಪೂರ್ವ ಕರಾವಳಿಯಲ್ಲಿರುವ ಮೂರು ಬಾಲ್ಟಿಕ್ ದೇಶಗಳಲ್ಲಿ ಒಂದಾಗಿದೆ.
 2. ಲಿಥುವೇನಿಯಾವು ಉತ್ತರಕ್ಕೆ ಲಾಟ್ವಿಯಾ, ಪೂರ್ವ ಮತ್ತು ದಕ್ಷಿಣಕ್ಕೆ ಬೆಲಾರಸ್, ದಕ್ಷಿಣಕ್ಕೆ ಪೋಲೆಂಡ್ ಮತ್ತು ನೈಋತ್ಯಕ್ಕೆ ರಷ್ಯಾದ ಕಲಿನಿನ್ಗ್ರಾಡ್ ಒಬ್ಲಾಸ್ಟ್ನೊಂದಿಗೆ ಭೂ ಗಡಿಗಳನ್ನು ಹಂಚಿಕೊಂಡಿದೆ.

ವಿವಾದ ಇತ್ಯರ್ಥ:

ವ್ಯಾಪಾರ ವಿವಾದಗಳನ್ನು ಪರಿಹರಿಸುವುದು WTO ದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ.

 1. WTO ದ ಯಾವುದೇ ಸದಸ್ಯ ರಾಷ್ಟ್ರಕ್ಕೆ, ಮತ್ತು ಸದಸ್ಯ ರಾಷ್ಟ್ರವು ಡಬ್ಲ್ಯೂನಲ್ಲಿ ಮಾಡಿದ ಒಪ್ಪಂದದ ಬದ್ಧತೆಯನ್ನು ಉಲ್ಲಂಘಿಸುತ್ತಿದೆ ಎಂದು ಬಲವಾಗಿ ನಂಬಿದಾಗ ವಿವಾದಗಳು ಉಂಟಾಗುತ್ತವೆ.
 2. ‘WTO’ ದ ವಿವಾದ ಇತ್ಯರ್ಥ ವ್ಯವಸ್ಥೆಯು ವಿಶ್ವದ ಅತ್ಯಂತ ಸಕ್ರಿಯವಾದ ‘ಅಂತರರಾಷ್ಟ್ರೀಯ ವಿವಾದ ಇತ್ಯರ್ಥ’ ಕಾರ್ಯವಿಧಾನಗಳಲ್ಲಿ ಒಂದಾಗಿದೆ. 1995 ರಿಂದ, 609 ವಿವಾದಗಳನ್ನು WTO ಗೆ ತರಲಾಗಿದೆ ಮತ್ತು 350 ಕ್ಕೂ ಹೆಚ್ಚು ತೀರ್ಪುಗಳನ್ನು ಅದು ನೀಡಿದೆ.

WTO ನಲ್ಲಿ ದೂರು ಸಲ್ಲಿಸಿದ ನಂತರ ವಿವಾದವನ್ನು ಪರಿಹರಿಸಲು ಎರಡು ಮುಖ್ಯ ಮಾರ್ಗಗಳಿವೆ:

 1. ಪಕ್ಷಗಳು ಪರಸ್ಪರ ಒಪ್ಪಿಗೆಯ ಪರಿಹಾರವನ್ನು ವಿಶೇಷವಾಗಿ ದ್ವಿಪಕ್ಷೀಯ ಸಮಾಲೋಚನೆಯ ಹಂತದಲ್ಲಿ ಕಂಡುಕೊಳ್ಳುತ್ತವೆ.
 2. ಸಮಿತಿ ಮತ್ತು ಮೇಲ್ಮನವಿ ಸಂಸ್ಥೆಯ ವರದಿಯ ಅನುಷ್ಠಾನದ ನಂತರ, ವಿವಾದ ಪರಿಹಾರ ಮಂಡಳಿಯು ಈ ವಿಷಯದ ಕುರಿತು ತೀರ್ಮಾನವನ್ನು ಪ್ರಕಟಿಸುತ್ತದೆ. ಈ ತೀರ್ಮಾನವು ಸಂಬಂಧಪಟ್ಟ ಪಕ್ಷಗಳ ಮೇಲೆ ಬಾಧ್ಯಸ್ಥ ವಾಗಿರುತ್ತದೆ.

WTO ‘ವಿವಾದ ಇತ್ಯರ್ಥ ಪ್ರಕ್ರಿಯೆಯಲ್ಲಿ ಮೂರು ಮುಖ್ಯ ಹಂತಗಳಿವೆ:

 1. ಪಕ್ಷಗಳ ನಡುವೆ ಸಮಾಲೋಚನೆಗಳು (consultations between the parties).
 2. ಸಮಿತಿಯ ಮೂಲಕ ನಿರ್ಧಾರ, ಮತ್ತು ಒಂದು ವೇಳೆ ಅನ್ವಯಿಸಿದರೆ, ಮೇಲ್ಮನವಿ ಸಂಸ್ಥೆಯಿಂದ ತೀರ್ಮಾನ.
 3. ತೀರ್ಪಿನ ಅನುಷ್ಠಾನ. ಇದರ ಅಡಿಯಲ್ಲಿ, ತೀರ್ಪನ್ನು ಕಾರ್ಯಗತಗೊಳಿಸಲು ವಿಫಲವಾದ ಪಕ್ಷದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬಹುದು.

WTO ನ ಮೇಲ್ಮನವಿ ಸಂಸ್ಥೆ:

 1. 1995 ರಲ್ಲಿ ಸ್ಥಾಪಿಸಲಾದ WTO ನ ಮೇಲ್ಮನವಿ ಸಂಸ್ಥೆಯು ಏಳು ಸದಸ್ಯರ ಸ್ಥಾಯಿ ಸಮಿತಿಯಾಗಿದ್ದು, WTO ಸದಸ್ಯ ರಾಷ್ಟ್ರಗಳು ತಂದ ವ್ಯಾಪಾರ ವಿವಾದಗಳಲ್ಲಿ ನೀಡಲಾದ ತೀರ್ಪುಗಳ ವಿರುದ್ಧ ಮೇಲ್ಮನವಿಗಳನ್ನು ಆಲಿಸುತ್ತದೆ.
 2. WTO ಒಪ್ಪಂದ ಅಥವಾ ನಿಗದಿತ ಕಟ್ಟುಪಾಡುಗಳ ಉಲ್ಲಂಘನೆಗೆ ಸಂಬಂಧಿಸಿದ ವಿವಾದಗಳಲ್ಲಿ ಭಾಗಿಯಾಗಿರುವ ದೇಶಗಳು ಈ ವಿಷಯವನ್ನು ತನಿಖೆ ಮಾಡಲು ರಚಿಸಲಾದ ಸಮಿತಿಯ ವರದಿಯನ್ನು ಕಾನೂನಿನ ಅಂಶಗಳ ಮೇಲೆ ಪರಿಶೀಲಿಸಬೇಕು ಎಂದು ಭಾವಿಸಿದರೆ ಮೇಲ್ಮನವಿ ಸಂಸ್ಥೆಯನ್ನು ಸಂಪರ್ಕಿಸಬಹುದು.
 3. ಆದಾಗ್ಯೂ, ಮೇಲ್ಮನವಿ ಸಂಸ್ಥೆಯು ಅಸ್ತಿತ್ವದಲ್ಲಿರುವ ಸಾಕ್ಷ್ಯವನ್ನು ಮರು-ಪರಿಶೀಲಿಸುವುದಿಲ್ಲ ಆದರೆ ಕಾನೂನು ವ್ಯಾಖ್ಯಾನಗಳನ್ನು ಪರಿಶೀಲಿಸುತ್ತದೆ.
 4. ಮೇಲ್ಮನವಿ ಸಂಸ್ಥೆಯು ವಿವಾದವನ್ನು ಆಲಿಸಿದ ಸಮಿತಿಯ ಕಾನೂನು ಸಂಶೋಧನೆಗಳನ್ನು ಎತ್ತಿಹಿಡಿಯಬಹುದು, ಮಾರ್ಪಡಿಸಬಹುದು ಅಥವಾ ರದ್ದುಪಡಿಸಬಹುದು. ಸಮಿತಿಯ ನಿರ್ಧಾರವನ್ನು ವಿವಾದಕ್ಕೆ ಸಂಬಂಧಿಸಿದ ಒಂದು ಪಕ್ಷ ಅಥವಾ ಎರಡೂ ಪಕ್ಷಗಳು ಮೇಲ್ಮನವಿ ಸಲ್ಲಿಸಬಹುದು.

 

ವಿಷಯಗಳು: ಮೂಲಸೌಕರ್ಯ-ಇಂಧನ.

ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಭಾರತದ ಸ್ವಾವಲಂಬನೆ:


(India’s Self Reliance for Renewable Energy Manufacturing)

ಸಂದರ್ಭ:

2030 ರ ವೇಳೆಗೆ 300 GW ಸೌರಶಕ್ತಿಯ ಗುರಿಯನ್ನು ಸಾಧಿಸಲು ಭಾರತವು ಮುಂಬರುವ ವರ್ಷಗಳಲ್ಲಿ ಕೆಲವು ಬೃಹತ್ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯದ ಸೇರ್ಪಡೆಯ ಕುರಿತು ಆಲೋಚಿಸುತ್ತಿದೆ.

 1. 2021 ರ ಮೂರನೇ ತ್ರೈಮಾಸಿಕದ ಕೊನೆಯಲ್ಲಿ ದೇಶದ ಸಂಚಿತ ಸ್ಥಾಪಿತ ಸೌರ ಸಾಮರ್ಥ್ಯವು ಸುಮಾರು 47 GW ಆಗಿತ್ತು.
 2. ಫೆಬ್ರವರಿ 1, 2022 ರಂದು ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ, ಸೌರ ಶಕ್ತಿ ಕ್ಷೇತ್ರವು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಭಾರತೀಯ ಸೌರ ಉದ್ಯಮಕ್ಕೆ ವಿಶೇಷ ಕೊಡುಗೆಯೂ ಸಿಗಬಹುದು ಎಂದು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ.

ಇಂಧನ ಪರಿವರ್ತನೆಯಲ್ಲಿ (Energy Transition) ಭಾರತ ಹೇಗೆ ವಿಶ್ವ ನಾಯಕರಾಗಿ ಹೊರಹೊಮ್ಮಿದೆ?

 1. ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಬೆಳವಣಿಗೆಯ ದರವು ಈ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ವೇಗದ ದರಗಳಲ್ಲಿ ಒಂದಾಗಿದೆ.
 2. ಪ್ಯಾರಿಸ್ ನಲ್ಲಿ ಆಯೋಜಿಸಲಾಗಿದ್ದ COP-21 ರಲ್ಲಿ, 2030 ರ ವೇಳೆಗೆ, ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 40% ರಷ್ಟು ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ಆಗುತ್ತದೆ ಎಂದು ಭಾರತವು ವಾಗ್ದಾನ ಮಾಡಿದೆ.
 3. ಭಾರತವು 2030 ರ ವೇಳೆಗೆ 450 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ.
 4. ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಪ್ರತಿ ಗ್ರಾಮ ಮತ್ತು ಪ್ರತಿ ಕುಗ್ರಾಮಗಳನ್ನು ಸಂಪರ್ಕಿಸುವ ಮೂಲಕ ಮತ್ತು ಸೌಭಾಗ್ಯ ಯೋಜನೆಯಡಿ ಪ್ರತಿ ಮನೆಗಳನ್ನು ಸಂಪರ್ಕಿಸುವ ಮೂಲಕ ದೇಶದಲ್ಲಿ ವಿದ್ಯುತ್ ಸಂಪರ್ಕದ ಸಾರ್ವತ್ರಿಕ ಪ್ರವೇಶವನ್ನು ಸಾಧಿಸಲಾಗಿದೆ.
 5. ಇದು ವಿಶ್ವದಲ್ಲಿ ಅತಿ ವೇಗದ ಹಾಗೂ ಅತಿ ದೊಡ್ಡ ವಿದ್ಯುತ್ ಸೌಲಭ್ಯದ ವಿಸ್ತರಣೆಯಾಗಿದೆ.
 6. COVID-19 ರ ಪ್ರಭಾವದ ಹೊರತಾಗಿಯೂ, ಭಾರತವು ಈಗಾಗಲೇ 200 GW ಬೇಡಿಕೆಯನ್ನು ಮುಟ್ಟಿದೆ.
 7. ಹಸಿರು ಹೈಡ್ರೋಜನ್ ಮತ್ತು ಹಸಿರು ಅಮೋನಿಯದಲ್ಲಿ ಭಾರತವು ನಾಯಕನಾಗಿ ಹೊರಹೊಮ್ಮುತ್ತಿದೆ.

ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ:

 1. ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (DDUGJY), ಇದು ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ ಮತ್ತು ವಿದ್ಯುತ್ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದೆ.
 2. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ವಿದ್ಯುದೀಕರಣ ಮತ್ತು ವಿದ್ಯುತ್ ವಿತರಣಾ ಮೂಲಸೌಕರ್ಯಗಳನ್ನು ಒದಗಿಸಲು ಹಿಂದಿನ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ (RGGVY) ಯೋಜನೆಯನ್ನು DDUGJY ಯೋಜನೆಯಲ್ಲಿ ಅಳವಡಿಸಲಾಗಿದೆ.

ಉದ್ದೇಶಗಳು:

 1. ಎಲ್ಲಾ ಗ್ರಾಮಗಳು ಮತ್ತು ಮನೆಗಳನ್ನು ವಿದ್ಯುದ್ದೀಕರಣ ಗೊಳಿಸುವುದು.
 2. ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಮತ್ತು ಕೃಷಿಯೇತರ ಗ್ರಾಹಕರಿಗೆ ವಿದ್ಯುತ್ ಸರಬರಾಜನ್ನು ನ್ಯಾಯಯುತವಾಗಿ ಪೂರೈಸಲು ಅನುಕೂಲವಾಗುವಂತೆ ಕೃಷಿ ಮತ್ತು ಕೃಷಿಯೇತರ ಫೀಡರ್‌ಗಳನ್ನು ಬೇರ್ಪಡಿಸುವುದು.
 3. ಪೂರೈಕೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಉಪ ಪ್ರಸರಣ ಮತ್ತು ವಿತರಣಾ ಜಾಲದ ಮೂಲಸೌಕರ್ಯಗಳ ಬಲವರ್ಧನೆ ಮತ್ತು ಸುಧಾರಣೆ.
 4. ನಷ್ಟವನ್ನು ಕಡಿಮೆ ಮಾಡಲು ಮೀಟರ್‌ಗಳನ್ನು ಅಳವಡಿಸುವುದು.

ಅನುಷ್ಠಾನಕ್ಕೆ ನೋಡಲ್ ಏಜೆನ್ಸಿ: ಗ್ರಾಮೀಣ ವಿದ್ಯುದ್ದೀಕರಣ ನಿಗಮ ಲಿಮಿಟೆಡ್ (Rural Electrification Corporation Limited – REC).

‘ಸೌಭಾಗ್ಯ’ ಯೋಜನೆ:

(Saubhagya scheme)

ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಪಿಎಂ ಸೌಭಾಗ್ಯ- ಪ್ರತಿ ಮನೆಗೂ ಸಹಜ ವಿದ್ಯುತ್ ಯೋಜನೆ) ಅನ್ನು ಸೆಪ್ಟೆಂಬರ್ 2017 ರಲ್ಲಿ ಪ್ರಾರಂಭಿಸಲಾಯಿತು. 2018 ರ ಡಿಸೆಂಬರ್ ವೇಳೆಗೆ ಎಲ್ಲಾ ಮನೆಗಳಿಗೆ ವಿದ್ಯುತ್ ಒದಗಿಸುವುದು ಇದರ ಉದ್ದೇಶವಾಗಿತ್ತು.

 1. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲಾ ಮನೆಗಳಿಗೆ ಕೊನೆಯ ಮೈಲಿ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕಗಳನ್ನು ಒದಗಿಸುವ ಮೂಲಕ ಸಾರ್ವತ್ರಿಕ ಮನೆಯ ವಿದ್ಯುದೀಕರಣವನ್ನು ಸಾಧಿಸುವುದು ಈ ಯೋಜನೆಯ ಉದ್ದೇಶವಾಗಿದೆ.
 2. ಈ ಗುರಿಯನ್ನು 2019 ರ ಮಾರ್ಚ್ 31 ಕ್ಕೆ ವಿಸ್ತರಿಸಲಾಯಿತು.
 3. ಅಂತಿಮವಾಗಿ, ಎಲ್ಲಾ ‘ಸಿದ್ಧ’ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಕೇಂದ್ರ ಪ್ರಕಟಿಸಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


ಔಪಚಾರಿಕವಾಗಿ ಟಾಟಾ ಸಮೂಹಕ್ಕೆ ಹಸ್ತಾಂತರಗೊಂಡ ಏರ್ ಇಂಡಿಯಾ:

(Air India now formally handed over to Tata Group)

ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು 67 ವರ್ಷಗಳ ಬಳಿಕ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಸೇರಿದೆ.

ಇದರಿಂದಾಗಿ ಏರ್‌ ಇಂಡಿಯಾದ ಖಾಸಗೀಕರಣವು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಂಪನಿಯ ಶೇಕಡ 100ರಷ್ಟು ಷೇರುಗಳನ್ನು ಆಡಳಿತಾತ್ಮಕ ನಿಯಂತ್ರಣದೊಂದಿಗೆ ಟೆಲೆಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಹಸ್ತಾಂತರಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ಅವರು ತಿಳಿಸಿದ್ದಾರೆ. ಟೆಲೆಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯು ಟಾಟಾ ಸಮೂಹದ ಅಂಗಸಂಸ್ಥೆ.

 1. ಏರ್ ಇಂಡಿಯಾ, ಇಂಡಿಯನ್ ಏರ್‌ಲೈನ್ಸ್ ಮತ್ತು ಮಹಾರಾಜನಂತಹ ಪ್ರತಿಷ್ಠಿತ ಬ್ರಾಂಡ್‌ಗಳ ಮಾಲೀಕತ್ವದೊಂದಿಗೆ ಏರ್ ಇಂಡಿಯಾದ 141 ವಿಮಾನಗಳ ಫ್ಲೀಟ್ ಅನ್ನು ಟಾಟಾ ಸಮೂಹವು ಪಡೆಯಲಿದೆ.
 2. ಏಕಕಾಲದಲ್ಲಿ, ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ 13,500 ಖಾಯಂ ಮತ್ತು ಗುತ್ತಿಗೆ ನೌಕರರು ಸಹ ಟಾಟಾ ಸಮೂಹಕ್ಕೆ ಸೇರಿಕೊಳ್ಳುತ್ತಾರೆ ಮತ್ತು ಟಾಟಾ ಈ ಉದ್ಯೋಗಿಗಳನ್ನು ಕನಿಷ್ಠ ಒಂದು ವರ್ಷದ ಅವಧಿಗೆ ಸೇವೆಯಲ್ಲಿ ಉಳಿಸಿಕೊಳ್ಳುವುದು ಕಡ್ಡಾಯವಾಗಿದೆ.

ಟಾಟಾ ಸಮೂಹವು ಈಗ ವಿಸ್ತಾರಾದೊಂದಿಗೆ ಮೂರು ವಿಮಾನಯಾನ ಸಂಸ್ಥೆಗಳನ್ನು ಹೊಂದಿದೆ. TATA ಸಮೂಹವು ವಿಸ್ತಾರಾದಲ್ಲಿ 51% ಪಾಲನ್ನು ಹೊಂದಿದೆ ಮತ್ತು AirAsia ಇಂಡಿಯಾ ದಲ್ಲಿ 84% ಪಾಲನ್ನು ಹೊಂದಿದೆ. ಮೂರೂ ವಿಮಾನಯಾನ ಸಂಸ್ಥೆಗಳು ಒಟ್ಟಾರೆಯಾಗಿ ವಿಮಾನಯಾನ ವಲಯದಲ್ಲಿ ಶೇ.24 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ.

ಈ ವಿಮಾನಯಾನ ಸಂಸ್ಥೆಯ ಸಂಕ್ಷಿಪ್ತ ಇತಿಹಾಸ:

 1. ಜೆಆರ್‌ಡಿ ಟಾಟಾ ಕರಾಚಿ ಮತ್ತು ಬಾಂಬೆ ನಡುವೆ ಮೊದಲ ವಿಮಾನವನ್ನು ಸ್ವತಃ ತಾವೇ ಚಲಾಯಿಸುವ ಮೂಲಕ 1932 ರಲ್ಲಿ ಏರ್‌ಲೈನ್ ಸ್ಥಾಪನೆಗೆ ಕಾರಣರಾದರು.
 2. ಆಗ ಇದನ್ನು ಟಾಟಾ ಏರ್‌ಲೈನ್ಸ್ ಎಂದು ಕರೆಯಲಾಗುತ್ತಿತ್ತು. ಸರ್ಕಾರವು 1948 ರಲ್ಲಿ ವಿಮಾನಯಾನ ಸಂಸ್ಥೆಯಿಂದ 49% ಪಾಲನ್ನು ಸ್ವಾಧೀನಪಡಿಸಿಕೊಂಡಿತು, ನಂತರ 1953 ರಲ್ಲಿ ಅದನ್ನು ರಾಷ್ಟ್ರೀಕರಣ ಮಾಡಲಾಯಿತು.
 3. ಏರ್‌ಲೈನ್ಸ್‌ನ ಹೆಸರನ್ನು ‘ಏರ್ ಇಂಡಿಯಾ ಇಂಟರ್‌ನ್ಯಾಶನಲ್’ ಎಂದು ಮರುನಾಮಕರಣ ಮಾಡಲಾಯಿತು ಮತ್ತು ದೇಶೀಯ ವಿಮಾನಗಳನ್ನು ಇಂಡಿಯನ್ ಏರ್‌ಲೈನ್ಸ್‌ಗೆ ವರ್ಗಾಯಿಸಲಾಯಿತು.
 4. 2007 ರಲ್ಲಿ, ಎರಡೂ ವಿಮಾನಯಾನ ಸಂಸ್ಥೆಗಳನ್ನು ವಿಲೀನಗೊಳಿಸಲಾಯಿತು. ಇದರ ನಂತರ ಹೊಸ ಘಟಕವು ಕೆಲವು ವರ್ಷಗಳ ಹಿಂದೆ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ಆರ್ಡರ್‌ ಮಾಡುವ ಮೂಲಕ ಸಾಲದಲ್ಲಿ ಮುಳುಗಿತು, ಏಕೆಂದರೆ ಅದು ಸ್ಥಾಪನೆಯಾದಾಗಿನಿಂದ ಲಾಭವನ್ನು ಗಳಿಸಲು ವಿಫಲವಾಗಿತ್ತು.

Currrent Affairs

 

ಖಾಸಗೀಕರಣದ ಹಾದಿ:

1932: ಜೆಹಂಗೀರ್ ರತನ್‌ಜೀ ದಾದಾಭಾಯ್ (ಜೆಆರ್‌ಡಿ) ಟಾಟಾ ಅವರು ಟಾಟಾ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದರು

1946: ಏರ್‌ ಇಂಡಿಯಾ ಎಂದು ಮರುನಾಮಕರಣ.

1948: ಏರ್‌ ಇಂಡಿಯಾದಿಂದ ಅಂತರರಾಷ್ಟ್ರೀಯ ಸೇವೆ ಆರಂಭ. ಅಂತರರಾಷ್ಟ್ರೀಯ ಸೇವಾ ಘಟಕದಲ್ಲಿ ಸರ್ಕಾರವು ಶೇ 49ರಷ್ಟು, ಟಾಟಾ ಸನ್ಸ್ ಶೇ 25ರಷ್ಟು ಮತ್ತು ಸಾರ್ವಜನಿಕರು ಉಳಿದ ಷೇರುಗಳನ್ನು ಹೊಂದಿದ್ದರು.

1953: ಏರ್‌ ಇಂಡಿಯಾ ರಾಷ್ಟ್ರೀಕರಣ. ಕಂಪನಿಯು ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಬಂತು. ನಂತರದ ನಾಲ್ಕು ದಶಕಗಳ ಕಾಲ ಏರ್‌ ಇಂಡಿಯಾ ಭಾರತದ ವಿಮಾನಯಾನ ಕ್ಷೇತ್ರದ ಅನಭಿಷಿಕ್ತ ‘ಮಹಾರಾಜ’ನಾಗಿತ್ತು.

1994-95: ವಿಮಾನಯಾನದಲ್ಲಿ ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಗೆ ಅವಕಾಶ. ಹಲವು ಕಂಪನಿಗಳಿಂದ ವಿಮಾನಯಾನ ಸೇವೆ ಆರಂಭ. ಖಾಸಗಿ ಕಂಪನಿಗಳ ದರ ಸಮರದೊಂದಿಗೆ ಸ್ಪರ್ಧಿಸಲಾರದೆ ಏರ್‌ ಇಂಡಿಯಾ ನಷ್ಟ ಅನುಭವಿಸಲಾರಂಭಿಸಿತು.

2000-01: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಏರ್‌ ಇಂಡಿಯಾ ಖಾಸಗೀಕರಣಕ್ಕೆ ಯತ್ನ. ಕಾರ್ಮಿಕ ಸಂಘಟನೆಗಳ ಪ್ರತಿಭಟನೆ, ವಿರೋಧದ ಕಾರಣ ಖಾಸಗೀಕರಣ ಕೈಬಿಟ್ಟ ಸರ್ಕಾರ.

2007-08: ಏರ್‌ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ವಿಲೀನ.

2012:ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರದ ಅವಧಿಯಲ್ಲಿ, ಏರ್‌ ಇಂಡಿಯಾ ಪುನಶ್ಚೇತನಕ್ಕೆ ಯೋಜನೆ.

2017-18: ಏರ್ ಇಂಡಿಯಾದ ಭಾಗಶಃ ಖಾಸಗೀಕರಣಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಯತ್ನ. ಏರ್‌ ಇಂಡಿಯಾದ ಶೇ 70ರಷ್ಟು ಸಾಲ ಮತ್ತು ಶೇ 76ರಷ್ಟು ಪಾಲನ್ನು ಮಾರಾಟ ಮಾಡಲು ಯತ್ನ. ಯಾವುದೇ ಕಂಪನಿ ಮುಂದೆ ಬರಲಿಲ್ಲ.

2019: ₹60,000 ಕೋಟಿ ಸಾಲದಲ್ಲಿ ₹23,000 ಕೋಟಿ ಸಾಲದ ಹೊಣೆಯೊಂದಿಗೆ ಏರ್‌ ಇಂಡಿಯಾದ ಪೂರ್ಣ ಪಾಲು ಮಾರಾಟ ಮಾಡಲು ವಿಫಲ ಯತ್ನ.

2020: ಏರ್‌ ಇಂಡಿಯಾದ ಪೂರ್ಣ ಪಾಲು ಮತ್ತು ಖರೀದಿದಾರರು ಬಯಸುವಷ್ಟು ಸಾಲವನ್ನು ಮಾತ್ರ ವರ್ಗಾವಣೆ ಮಾಡಲು ಅವಕಾಶ ನೀಡಿ, ಮತ್ತೆ ಮಾರಾಟಕ್ಕೆ ಯತ್ನ.

2021ರ ಏಪ್ರಿಲ್‌: ಬಿಡ್ ಆಹ್ವಾನ. ಬಿಡ್ ಸಲ್ಲಿಕೆಗೆ ಸೆಪ್ಟೆಂಬರ್ ಮಧ್ಯದವರೆಗೆ ಅವಕಾಶ. ಟಾಟಾ ಸಮೂಹ ಮತ್ತು ಸ್ಪೈಸ್‌ಜೆಟ್‌ನಿಂದ ಬಿಡ್ ಸಲ್ಲಿಕೆ.

2021ರ ಅಕ್ಟೋಬರ್ 8: ಬಿಡ್‌ ಗೆದ್ದುಕೊಂಡ ಟಾಟಾ ಸಮೂಹ.

2021ರ ಅಕ್ಟೋಬರ್‌ 11: ಟಾಟಾ ಸಮೂಹಕ್ಕೆ ಮಾರಾಟ ಮಾಡುವ ಆಸಕ್ತಿ ಸೂಚಿಸಿ ಕೇಂದ್ರದಿಂದ ಪತ್ರ.

2021ರ ಅಕ್ಟೋಬರ್‌ 25: ಷೇರು ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮತ್ತು ಟಾಟಾ ಸನ್ಸ್‌ ಸಹಿ.

2022ರ ಜನವರಿ 27: ಟಾಟಾ ಸಮೂಹಕ್ಕೆ ಏರ್‌ ಇಂಡಿಯಾ ಹಸ್ತಾಂತರ.

(ಕೃಪೆ;ಪ್ರಜಾವಾಣಿ).


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos