ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಮಹಿಳೆಯರ ವಿವಾಹ ವಯಸ್ಸನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಪರಿಶೀಲಿಸಲಿರುವ ಸದನ ಸಮಿತಿ.
2. ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಬೆಳಗಾವಿ ಗಡಿ ವಿವಾದ.
3. ಮೇಕೆದಾಟು ಸಮಸ್ಯೆ.
4. ಕ್ಸಿನ್‌ಜಿಯಾಂಗ್ ವಿವಾದ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST).
2. ಉಡಾನ್ ಯೋಜನೆಯೊಳಗಿನ ಸಮಸ್ಯೆಗಳು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ಶಿರೋಮಣಿ ಅಕಾಲಿದಳ (SAD).
2. ಭಾರತೀಯ ಸಂವಿಧಾನದ 31 ಡಿ.
3. ಚಿಲ್ಲೈ ಕಲಾನ್.
4. ಅಲ್ಬಿನೋ ಇಂಡಿಯನ್ ಫ್ಲಾಪ್‌ಶೆಲ್ ಟರ್ಟಲ್.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.
ಮಹಿಳೆಯರ ವಿವಾಹ ವಯಸ್ಸನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಪರಿಶೀಲಿಸಲಿರುವ ಸದನ ಸಮಿತಿ:
(House panel to review Bill on raising marriage age of women)
ಸಂದರ್ಭ:
ಇತ್ತೀಚೆಗೆ, ಲೋಕಸಭೆಯು ‘ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ, 2021’ (Prohibition of Child Marriage (Amendment) Bill, 2021’) ಅನ್ನು ಪರಿಶೀಲನೆಗಾಗಿ ‘ಸ್ಥಾಯಿ ಸಮಿತಿ’ (standingcommittee) ಗೆ ಕಳುಹಿಸಿದೆ. ಈ ತಿದ್ದುಪಡಿ ಮಸೂದೆಯಲ್ಲಿ ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಕಾನೂನನ್ನು ಜಾರಿಗೊಳಿಸುವುದರ ಹಿಂದಿನ ತಾರ್ಕಿಕತೆ:
ಮದುವೆಯ ವಯಸ್ಸು ಎಲ್ಲಾ ಧರ್ಮಗಳು, ಜಾತಿಗಳು, ಪಂಥಗಳಿಗೆ ಏಕರೂಪವಾಗಿ ಅನ್ವಯಿಸಬೇಕು ಮತ್ತು ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಯಾವುದೇ ಸಂಪ್ರದಾಯ ಅಥವಾ ಕಾನೂನನ್ನು ನಿಷೇಧಿಸಬೇಕು ಎಂಬುದಾಗಿದೆ.
ಮಸೂದೆಯು ಈ ಕೆಳಗಿನ ಕಾನೂನುಗಳನ್ನು ಸಹ ತಿದ್ದುಪಡಿ ಮಾಡುತ್ತದೆ:
- ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ, 1972
- ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯಿದೆ, 1936
- ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಕಾಯಿದೆ, 1937
- ವಿಶೇಷ ವಿವಾಹ ಕಾಯಿದೆ, 1954
- ಹಿಂದೂ ವಿವಾಹ ಕಾಯಿದೆ, 1955
- ವಿದೇಶಿ ವಿವಾಹ ಕಾಯಿದೆ, 1956
ಸಂಸದೀಯ ಸಮಿತಿಗಳು ಯಾವುವು?
ಲೋಕಸಭಾ ವೆಬ್‌ಸೈಟ್‌ನ ಪ್ರಕಾರ, ಸಂಸದೀಯ ಸಮಿತಿ (Parliamentary Committee) ಎಂದರೆ “ಸದನದಿಂದ ನೇಮಕಗೊಂಡ ಅಥವಾ ಚುನಾಯಿತವಾದ ಅಥವಾ ಸ್ಪೀಕರ್ ರವರಿಂದ ನಾಮನಿರ್ದೇಶನಗೊಂಡಿರುವ ಮತ್ತು ಸ್ಪೀಕರ್ ನಿರ್ದೇಶನದಂತೆ ಕಾರ್ಯನಿರ್ವಹಿಸುವ ಮತ್ತು ಅದರ ವರದಿಯನ್ನು ಸದನಕ್ಕೆ ಅಥವಾ ಸ್ಪೀಕರ್‌ಗೆ ಮತ್ತು ಸಚಿವಾಲಯಕ್ಕೆ ನೀಡುವ ಸಮಿತಿ” ಯಾಗಿದೆ.
ಸಂಸದೀಯ ಸಮಿತಿಗಳು ಎರಡು ಬಗೆಯದಾಗಿವೆ :ಸ್ಥಾಯಿ ಸಮಿತಿಗಳು ಮತ್ತು ತಾತ್ಕಾಲಿಕ ಸಮಿತಿಗಳು ಅಥವಾ ಆಯ್ದ ಸಮಿತಿಗಳು.
ಸ್ಥಾಯಿ ಸಮಿತಿಗಳು (Standing Committees), ನಿರಂತರ ಸ್ವರೂಪವನ್ನು ಹೊಂದಿವೆ, ಅಂದರೆ, ಅವುಗಳ ಕಾರ್ಯವು ಸಾಮಾನ್ಯವಾಗಿ ನಿರಂತರವಾಗಿ ನಡೆಯುತ್ತದೆ. ಅಂತಹ ಸಮಿತಿಗಳನ್ನು ವಾರ್ಷಿಕ ಆಧಾರದ ಮೇಲೆ ನಿಯತಕಾಲಿಕವಾಗಿ ಆಯ್ಕೆ ಮಾಡಲಾಗುತ್ತದೆ.
ತಾತ್ಕಾಲಿಕ ಸಮಿತಿಗಳನ್ನು (ad hoc Committees), ನಿರ್ದಿಷ್ಟ ಉದ್ದೇಶಕ್ಕಾಗಿ ನೇಮಿಸಲಾಗುತ್ತದೆ ಮತ್ತು ಅವುಗಳು ತಮ್ಮ ಕೆಲಸವನ್ನು ಮುಗಿಸಿ ವರದಿಯನ್ನು ಸಲ್ಲಿಸಿದ ನಂತರ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ.
ಸಾಂವಿಧಾನಿಕ ನಿಬಂಧನೆಗಳು:
ಸಂಸದೀಯ ಸಮಿತಿಗಳು ತಮ್ಮ ಅಧಿಕಾರವನ್ನು ಆರ್ಟಿಕಲ್ 105 ರಿಂದ (ಸಂಸತ್ತಿನ ಸದಸ್ಯರ ಸವಲತ್ತುಗಳು) ಮತ್ತು 118 ನೇ ವಿಧಿ (ಸಂಸತ್ತಿನ ಕಾರ್ಯವಿಧಾನ ಮತ್ತು ನಡಾವಳಿಗಳ ನಿಯಮಗಳನ್ನು ರೂಪಿಸುವ ಸಂಸತ್ತಿನ ಅಧಿಕಾರ) ಮೂಲಕ ಪಡೆದಿವೆ.
ಇಲಾಖಾ ಸಂಬಂಧಿತ ಸ್ಥಾಯಿ ಸಮಿತಿಗಳ ರಚನೆ (DRSCs):
ಇಲಾಖೆಗಳಿಗೆ 24 ಸ್ಥಾಯಿ ಸಮಿತಿಗಳನ್ನು ಜೋಡಿಸಲಾಗಿದೆ, ಅವರ ವ್ಯಾಪ್ತಿಯಲ್ಲಿ ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು / ಇಲಾಖೆಗಳು ಬರುತ್ತವೆ.
- 13 ನೇ ಲೋಕಸಭೆಯ ಹೊತ್ತಿಗೆ, ಪ್ರತಿ DRSC ಗಳಲ್ಲಿ 45 ಸದಸ್ಯರಿದ್ದರು – ಈ ಪೈಕಿ 30 ಸದಸ್ಯರನ್ನು ಲೋಕಸಭೆಯಿಂದ ಮತ್ತು 15 ಸದಸ್ಯರನ್ನು ರಾಜ್ಯಸಭೆಯಿಂದ ನಾಮನಿರ್ದೇಶನ ಮಾಡಲಾಗಿದೆ.
- ಜುಲೈ 2004 ರಲ್ಲಿ ಇಲಾಖೆಗಳ ಸ್ಥಾಯಿ ಸಮಿತಿಗಳ ಮರುಸಂಘಟನೆಯ ನಂತರ, ಈ ಪ್ರತಿಯೊಂದು ಸಮಿತಿಗಳು 31 ಸದಸ್ಯರನ್ನು ಒಳಗೊಂಡಿವೆ – ಲೋಕಸಭೆಯಿಂದ 21 ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಕ್ರಮವಾಗಿ ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ನಾಮಕರಣ ಮಾಡುತ್ತಾರೆ.
- ಈ ಸಮಿತಿಗಳನ್ನು ಗರಿಷ್ಠ ಒಂದು ವರ್ಷದವರೆಗೆ ರಚಿಸಲಾಗುತ್ತದೆ ಮತ್ತು ಪ್ರತಿವರ್ಷ ಸಮಿತಿಗಳ ಪುನರ್ರಚನೆಯಲ್ಲಿ ಎಲ್ಲಾ ಪಕ್ಷಗಳ ಸದಸ್ಯರಿಗೂ ಪ್ರಾತಿನಿಧ್ಯ ನೀಡಲಾಗುತ್ತದೆ.
ಹಣಕಾಸು ಸಮಿತಿಗಳ ಸಂಯೋಜನೆ:
- ಅಂದಾಜು ಸಮಿತಿಯು 30 ಸದಸ್ಯರನ್ನು ಒಳಗೊಂಡಿದೆ ಮತ್ತು ಎಲ್ಲಾ ಸದಸ್ಯರನ್ನು ಲೋಕಸಭೆಯಿಂದ ನಾಮನಿರ್ದೇಶನ ಮಾಡಲಾಗುತ್ತದೆ.
- ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಸಾರ್ವಜನಿಕ ವ್ಯವಹಾರ ಸಮಿತಿ ಎರಡೂ 22 ಸದಸ್ಯರನ್ನು ಹೊಂದಿವೆ – ಅವರಲ್ಲಿ 15 ಮಂದಿ ಲೋಕಸಭೆಯಿಂದ ಮತ್ತು 7 ಮಂದಿ ರಾಜ್ಯಸಭೆಯಿಂದ ನಾಮನಿರ್ದೇಶನ ಗೊಳ್ಳುತ್ತಾರೆ.
ಸಂಸದೀಯ ಸಮಿತಿ ವ್ಯವಸ್ಥೆಯ ಪ್ರಾಮುಖ್ಯತೆ:
- ಅಂತರ ಸಚಿವಾಲಯದ ನಡುವೆ ಸಮನ್ವಯಕ್ಕಾಗಿ.
- ವಿವರವಾದ ಪರಿಶೀಲನೆಗಾಗಿ ಪರಿಕರವಾಗಿ.
- ಮಿನಿ ಸಂಸತ್ತಿನ ರೂಪದಲ್ಲಿ ಒಂದು ಕಾರ್ಯನಿರ್ವಹಣೆ ಸಂಸ್ಥೆಯಾಗಿ.
ದಯವಿಟ್ಟು ಗಮನಿಸಿ:
ವಿವಾಹದ ವಯಸ್ಸು: ವಿಶ್ಲೇಷಿಸುವ ಸಮಯ
- ದೇರ್ ಈಸ್ ನೋ ರಾಂಗ್ ಟೈಮ್ ಟು ಡು ದ ರೈಟ್ ಥಿಂಗ್’ (ಸರಿಯಾದುದನ್ನು ಮಾಡಲು ಸರಿಯಲ್ಲದ ಸಮಯ ಎಂಬುದಿಲ್ಲ) ಎಂಬುದೊಂದು ಪ್ರಸಿದ್ಧ ಹೇಳಿಕೆ. ಮದುವೆ ಎನ್ನುವುದೂ ಒಂದು ಸರಿಯಾದ, ಎಲ್ಲರ ಜೀವನದಲ್ಲಿ ಆಗಬೇಕಾದ ‘ಒಳ್ಳೆಯ’ ಸಂಗತಿ ಎನ್ನುವುದನ್ನು ನಮ್ಮಲ್ಲಿ ಹೆಚ್ಚಿನವರು ಒಪ್ಪುತ್ತಾರೆ. ಆದರೆ ಅದಕ್ಕೆ ಮಾತ್ರ ಮುಹೂರ್ತ- ಒಳ್ಳೆಯ ದಿನ ಹುಡುಕುವಂತೆ, ಸರಿಯಾದ ವಯಸ್ಸಿಗೆ ಮದುವೆಯಾಗುವುದು ಕೂಡ ಅಗತ್ಯ ಎಂಬುದನ್ನು ದೇಹ- ಮನಸ್ಸುಗಳೆರಡಕ್ಕೂ ಸಂಬಂಧಿಸಿದ ಆರೋಗ್ಯ ಕ್ಷೇತ್ರ ಒತ್ತಿ ಹೇಳುತ್ತದೆ.
- ಸರಿಯಾದ ವಯಸ್ಸು’ ಅಂದರೆ ಯಾವುದು? ಭಾರತದ ಕಾನೂನು ವ್ಯವಸ್ಥೆಯಲ್ಲಿ ವಿವಾಹದ ಕನಿಷ್ಠ ವಯಸ್ಸಿನ ಮಿತಿ ಬದಲಾಗುವ ಹಂತದಲ್ಲಿರುವುದೇ ಈ ಪ್ರಶ್ನೆಗೆ ವೈಜ್ಞಾನಿಕವಾಗಿ ಇರುವ ಆಧಾರವನ್ನು ಶೋಧಿಸಿ ನೋಡುವುದಕ್ಕೆ ಸ್ಫೂರ್ತಿಯಾಗಬೇಕು.
- ಮನೋವಿಜ್ಞಾನ ಮತ್ತು ನರಮಂಡಲ ವಿಜ್ಞಾನಗಳೆರಡೂ ಈ ಬಗ್ಗೆ ವಿವರಿಸಿವೆ. ಮೊದಲು ಮಿದುಳಿನ ಕಡೆ ನೋಡೋಣ. ಮಿದುಳಿನ ‘ಫ್ರಾಂಟಲ್ ಲೋಬ್’ ಎಂಬ ಮುಂಭಾಗವು ಪ್ರಬುದ್ಧತೆಗೆ ಮುಖ್ಯ ಕಾರಣ. ನೈತಿಕತೆ- ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಭಾವನಾತ್ಮಕವಾಗಿ ಸಂಬಂಧಗಳಲ್ಲಿ ಎಷ್ಟು ತೊಡಗಿಸಿಕೊಳ್ಳಬೇಕು- ಬೇಡ ಇವುಗಳನ್ನು ನಿರ್ದೇಶಿಸುವುದು ಮಿದುಳಿನ ಈ ಭಾಗವೇ. ಇದು ಸರಿಯಾಗಿ ಬೆಳವಣಿಗೆಯಾಗುವುದು 24- 25 ವರ್ಷಗಳ ಹೊತ್ತಿಗೇ. ಹಾಗಾಗಿ ಜೀವನದ ಯಾವುದೇ ಮುಖ್ಯ ದೀರ್ಘಕಾಲಿಕ ನಿರ್ಧಾರಗಳಿಗೆ ಈ ವಯಸ್ಸಿನ ಮಿದುಳು ಸರಿಯಾಗಿ ಕೆಲಸ ಮಾಡುವ ಸಾಧ್ಯತೆ ಹೆಚ್ಚು.
- ಗೋಲ್ಡಿಲಾಕ್ಸ್ ಎಂಬುದು ಮನೋವಿಜ್ಞಾನದ ಒಂದು ಸಿದ್ಧಾಂತ. ಇದರ ಪ್ರಕಾರ, ತೀರಾ ಚಿಕ್ಕ ವಯಸ್ಸು ಅಥವಾ ತೀರಾ ‘ವಯಸ್ಸಾಗುವಿಕೆ’ ಎರಡರಿಂದಲೂ ಮದುವೆಯ ಬಂಧ ಗಟ್ಟಿಯಾಗಿ ಉಳಿಯುವುದಿಲ್ಲ. ಅಂದರೆ ನಿಜವಾದ ಸಾಂಗತ್ಯ ಮತ್ತು ಆ ಕ್ಷಣದ ಆಕರ್ಷಣೆಯ ಪ್ರೇಮದ ನಡುವೆ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಷ್ಟು ವಯಸ್ಸು- ಬುದ್ಧಿ- ಮನಸ್ಸುಗಳು ಪ್ರಬುದ್ಧವಾಗಿರಬೇಕು.
- ಅದೇ ಜೀವನಶೈಲಿ, ದೈನಂದಿನ ಅಭ್ಯಾಸಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲೇ ಆಗದಷ್ಟು ವಯಸ್ಸು ಮುಂದೆ ಸಹ ಹೋಗಿರಬಾರದು! ವಿಚ್ಛೇದನಗಳು ಸುಲಭವಾಗಿ ಸಿಕ್ಕುವ ಅಮೆರಿಕ- ಬ್ರಿಟನ್‍ನಲ್ಲಿ ನಡೆದ ಒಂದು ಅಧ್ಯಯನದಲ್ಲಿ, 25 ವರ್ಷಕ್ಕೆ ಮದುವೆಯಾದ ವ್ಯಕ್ತಿಗಳಲ್ಲಿ 20 ವರ್ಷಕ್ಕೆ ಮದುವೆಯಾದ ವ್ಯಕ್ತಿಗಳಿಗೆ ಹೋಲಿಸಿದರೆ ವಿಚ್ಛೇದನದ ಪ್ರಮಾಣ ಶೇ 50ರಷ್ಟು ಕಡಿಮೆ ಎಂಬುದು ಕಂಡುಬಂದಿದೆ.
- ಮಿದುಳು ಪೂರ್ತಿ ಬೆಳವಣಿಗೆಯಾಗಿದೆ ಎಂಬುದೂ ಒಳಗೊಂಡಂತೆ ಹಲವು ಕಾರಣಗಳನ್ನು ಇಲ್ಲಿ ಊಹಿಸಬಹುದು. ಇಬ್ಬರೂ ಕೆಲಸದಲ್ಲಿ ನೆಲೆ ನಿಂತಿರುವುದು, ಆರ್ಥಿಕ ಸಬಲತೆ, ‘ಪ್ರೀತಿ’ ಎಂಬುದರ ಬಗ್ಗೆ ಅತಿ ಆದರ್ಶದ ಪರಿಕಲ್ಪನೆ ಕಡಿಮೆಯಾಗಿ, ಸಂಗಾತಿಯಿಂದ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿರುವುದು, ಇವೆಲ್ಲ ಆ ಕಾರಣಗಳು. ಆದರೆ ‘ಮದುವೆ’ ಎನ್ನುವುದು ಬರೀ ಇಂತಹ ವೈಜ್ಞಾನಿಕ ಸಂಗತಿ- ಅಧ್ಯಯನ- ಅಂಕಿ ಅಂಶಗಳಿಗಷ್ಟೇ ಸಂಬಂಧಿಸಿಲ್ಲ ಎನ್ನುವುದು ಗಮನಾರ್ಹ. ಧಾರ್ಮಿಕ- ಸಾಮಾಜಿಕ ಅಂಶಗಳು, ನಮ್ಮ ರೂಢಿಗತ ಧೋರಣೆಗಳು, ಹೆಣ್ಣು ಮಕ್ಕಳ ಸ್ಥಿತಿ ಇವೆಲ್ಲಕ್ಕೂ ‘ಮದುವೆ’ ಸಂಬಂಧಿಸಿದೆ. ಮದುವೆಯಲ್ಲಿ ಸರಿ- ತಪ್ಪು, ಒಪ್ಪು- ಬಿಡುಗಳ ವಿಶ್ಲೇಷಣೆಗೆ ನಿಲುಕದ, ‘ಇದಮಿತ್ಥಂ’ ಎಂದು ಹೇಳಲಾಗದ ಹಲವು ವಿಷಯಗಳೂ ಇವೆ.
- ಹುಡುಗ– ಹುಡುಗಿಯ ವಯಸ್ಸಿನ ಅಂತರ, ಇಬ್ಬರ ನಡುವಿನ ದುಡಿಮೆಯ ಅಂತರ (ಹುಡುಗಿಗೆ ಹೆಚ್ಚು ಸಂಬಳ-ಹುಡುಗನಿಗೆ ಕಡಿಮೆ ಸಂಬಳ), ಹುಡುಗಿ ಹೊರಗೆ ಕೆಲಸ ಮಾಡುವ ‘ಅವಶ್ಯಕತೆ’ ಇರದಿರುವುದು (ಹೆಂಡತಿ ಮನೆಯಲ್ಲಿ ಜವಾಬ್ದಾರಿ ನೋಡಿಕೊಂಡರೆ ಸಾಕೇ ಸಾಕು) ಎಂಬಂತಹ ಮನೋಭಾವಗಳು ಎಲ್ಲೆಡೆ ವ್ಯಾಪಕವಾಗಿವೆ. ಇವೆಲ್ಲಕ್ಕೂ ಕೆಳಮಧ್ಯಮ ವರ್ಗ, ಕೆಳ ವರ್ಗಗಳ ಕುಟುಂಬಗಳು ಕಂಡುಕೊಳ್ಳುವ ಸುಲಭ ಉತ್ತರ ‘ಆದಷ್ಟು ಬೇಗ, ಅಂದರೆ ಪಿಯು ಮುಗಿದ ತಕ್ಷಣ ಮನೆಯ ಮಗಳಿಗೆ ಮದುವೆ ಮಾಡುವುದು’. ಕೆಲವು ಸಮುದಾಯಗಳಲ್ಲಂತೂ ಹತ್ತನೇ ತರಗತಿಯ ನಂತರ ಹೆಣ್ಣು ಮಕ್ಕಳು ಶಾಲೆಗೆ ಹೋಗುವ ಅವಶ್ಯಕತೆಯೇ ಅಪ್ಪ- ಅಮ್ಮಂದಿರಿಗೆ ಕಾಣಿಸುವುದಿಲ್ಲ. ಇಂತಹ ಬಾಲಕಿಯರು ದೈಹಿಕವಾಗಿ ಪ್ರಬುದ್ಧವಾಗುವುದಷ್ಟೇ ಅವರಿಗೆ ಬೇಕಾದ ರಹದಾರಿಯಾಗಿಬಿಡುತ್ತದೆ.
- ಹಾಗೆ 16 ವರ್ಷಕ್ಕೆ ಮಕ್ಕಳನ್ನು ಹೆರಲು ಮಾತ್ರ ಸಾಧ್ಯವಾಗುವ, ಉಳಿದ ಯಾವ ಪ್ರಬುದ್ಧತೆಯನ್ನೂ ಪಡೆಯದ, ಆದರೂ ಮದುವೆಯಾಗುವ ಎಷ್ಟು ಪ್ರಕರಣಗಳು ಪ್ರತಿದಿನ ತೆರೆಮರೆಯಲ್ಲಿ ನಡೆಯುತ್ತಿರಬಹುದು?ಇವುಗಳಲ್ಲೆಲ್ಲ ಶಿಕ್ಷೆ ಸಾಧ್ಯವಾಗಿದೆಯೇ? ವಿವಾಹಕ್ಕೆಂದು ಕಾನೂನು ಕನಿಷ್ಠ ವಯಸ್ಸನ್ನು ನಿಗದಿಪಡಿಸುವುದರ ಹಿಂದೆ ಬಾಲ್ಯವಿವಾಹಗಳನ್ನು ತಡೆಯುವ ಮತ್ತು ಅಪ್ರಬುದ್ಧ ವಯಸ್ಕರ ಮೇಲಿನ ದೌರ್ಜನ್ಯವನ್ನು ತಡೆಯುವ ಮುಖ್ಯ ಉದ್ದೇಶಗಳಿವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ಜನರಲ್ಲಿ ಅರಿವಿಲ್ಲದೆ ಬರೀ ಕಾನೂನಿನಿಂದ ಯಾವ ಬದಲಾವಣೆಯನ್ನೂ ತರಲಾಗದು.
- ಪ್ರಸ್ತುತ ಆಡಳಿತ ವ್ಯವಸ್ಥೆಯು ಮದುವೆಯ ವಯಸ್ಸಿನ ಕನಿಷ್ಠ ಮಿತಿಯನ್ನು ಪುನರ್ ಪರಿಶೀಲಿಸುತ್ತಿರುವುದು ಸ್ವಾಗತಾರ್ಹವೇ. ಆದರೆ ನಿರೀಕ್ಷೆಯಂತೆ ಇದು ಪರಿಣಾಮ ಬೀರದಿರುವ ಸಾಧ್ಯತೆಗಳನ್ನೂ ನಾವು ಗಮನಿಸಬೇಕು. ‘ಬೇಗ ಮದುವೆ- ಬೇಗ ಮಕ್ಕಳು’ ಎಂಬ ಪರಿಸ್ಥಿತಿ ರೂಢಿಗತ ಧೋರಣೆಯಿಂದಲೂ ಚಾಲ್ತಿಯಲ್ಲಿ ಇರುವಂಥದ್ದೇ. ಈ ಧೋರಣೆ ಬದಲಾಗದೆ ಶಿಶುಮರಣ, ಮಾತೃಮರಣಗಳಲ್ಲಿ ಮದುವೆಯ ವಯಸ್ಸು ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಹಾಗಾಗಿಯೇ ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು ಏರಿಸುವಂತೆ ಶಿಫಾರಸು ಮಾಡಿರುವ ಜಯಾ ಜೇಟ್ಲಿ ನೇತೃತ್ವದ ಕಾರ್ಯಪಡೆಯು ಹೆಣ್ಣು ಮಕ್ಕಳಿಗೆ ಶಾಲಾ ಕಾಲೇಜುಗಳ ಮುಕ್ತ ಲಭ್ಯತೆ, ಕೌಶಲ ಮತ್ತು ವಾಣಿಜ್ಯ ತರಬೇತಿ, ಶಾಲೆಗಳಲ್ಲಿ ಕೌಟುಂಬಿಕ ಜೀವನ ಮತ್ತು ಲೈಂಗಿಕ ಶಿಕ್ಷಣ ನೀಡುವುದು- ಇವು ಮೊದಲು ನಡೆಯದಿದ್ದರೆ, ಕಾನೂನು ವಿಫಲವಾಗುವ ಮುನ್ಸೂಚನೆಯನ್ನೂ ನೀಡಿದೆ.
- ಕಾನೂನನ್ನು ಹೇಗಾದರೂ ಮಾಡಿ ಹೇರುವ ಬದಲು, ಮದುವೆಯ ವಯಸ್ಸನ್ನು ಏರಿಸುವುದರಿಂದ ಮಹಿಳೆಗೆ, ಎಲ್ಲರ ಜೀವನಕ್ಕೆ, ಇಡೀ ಸಮಾಜಕ್ಕೆ ಇರುವ ಉಪಯೋಗಗಳ ಬಗೆಗೆ ದೊಡ್ಡ ಮಟ್ಟದಲ್ಲಿ ಅರಿವು ಹೆಚ್ಚಿಸಬೇಕೆಂದು ಕಾರ್ಯಪಡೆಯು ಸೂಚಿಸಿರುವುದು ಪ್ರಶಂಸನೀಯ. ಆಗ ಈ ಸಂಬಂಧದ ಕಾನೂನಿನ ಒಪ್ಪುವಿಕೆ- ಪಾಲಿಸುವಿಕೆ ವಿಶೇಷವಾಗಿ ಕೆಳವರ್ಗ, ಕೆಳ ಮಧ್ಯಮ ವರ್ಗಗಳಲ್ಲಿ ಸಾಧ್ಯವಾಗಬಹುದು. ತತ್‍ಕ್ಷಣಕ್ಕೆ ಇದನ್ನು ವಿರೋಧಿಸಬಹುದಾದ ಯಾರೂ ಮೊದಲು ಕಾರ್ಯಪಡೆಯು ಯಾವ ಆಧಾರದ ಮೇಲೆ ಈ ಶಿಫಾರಸನ್ನು ಮಾಡಿದೆ ಎಂಬುದನ್ನೂ ಗಮನಿಸಬೇಕು.
- ದೇಶದಾದ್ಯಂತ 16 ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವಜನರ ಸಮೀಕ್ಷೆ, 15ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳಿಂದ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಗ್ರಾಮೀಣ ಪ್ರದೇಶಗಳ ಸಮೀಕ್ಷೆ ನಡೆಸಿ ಕಾರ್ಯಪಡೆ ಈ ಶಿಫಾರಸು ಮಾಡಿದೆ. ಮುಖ್ಯವಾಗಿ ನಗರ- ಗ್ರಾಮೀಣ ಪ್ರದೇಶಗಳು ಮತ್ತು ಎಲ್ಲಾ ಧರ್ಮಗಳ ಅಭಿಪ್ರಾಯವನ್ನು ಸಮಾನವಾಗಿ ಪರಿಗಣಿಸಲಾಗಿದೆ ಎನ್ನುವುದು ವಿಶೇಷ. ಹಾಗಾಗಿ ಕೇವಲ ರಾಜಕೀಯ ಭೇದದಿಂದ, ಎಡ- ಬಲ ಎಂಬ ವ್ಯತ್ಯಾಸದಿಂದ ಇದನ್ನು ತಳ್ಳಿಹಾಕುವಂತಿಲ್ಲ ಅಥವಾ ಕಾನೂನು ಉಲ್ಲಂಘಿಸುವುದು ಹೆಚ್ಚಾದೀತೆಂಬ ಭಯದಿಂದ ಕಾಲಕ್ಕೆ ಸರಿಯಾಗಿ, ವೈಜ್ಞಾನಿಕ ಆಧಾರವಿರುವ ಸಂಗತಿಗಾಗಿ ಕಾನೂನನ್ನು ಮಾರ್ಪಡಿಸುವ, ಅರಿವು ಮೂಡಿಸುವ ಪ್ರಯತ್ನವನ್ನೇ ಮಾಡದಿರುವುದೂ ನೈತಿಕತೆಯ ಪ್ರಶ್ನೆಯಿಂದ ವಿದ್ಯಾವಂತರಾದ ನಾವು ಮಾಡುವ ಅಪರಾಧವೇ!
- ಹುಡುಗಿಯರ ಹೆಚ್ಚಿದ ವಿದ್ಯಾಭ್ಯಾಸವನ್ನು, ಆರ್ಥಿಕ ಸಬಲತೆಯನ್ನು ಇಂದು ವಿವಾಹ ವಿಚ್ಛೇದನಗಳ ಪ್ರಮುಖ ಕಾರಣವಾಗಿ ನೋಡುವವರು ಬಹಳಷ್ಟು ಮಂದಿ. ಆದರೆ ವಿಚ್ಛೇದನವಾಗದ ಮಾತ್ರಕ್ಕೆ, ಮೂಕವಾಗಿ ನರಳುವ ಮದುವೆಗಳು ಅದೆಷ್ಟೋ! ಅಂತಹ ಪರಿಸ್ಥಿತಿಗಳಲ್ಲಿ ಮದುವೆಯ ಕನಿಷ್ಠ ವಯಸ್ಸಿನ ಮಿತಿ ಏರುವಿಕೆ ಉಪಯುಕ್ತ ಎನಿಸುತ್ತದೆ. ಸಹಾಯ ಪಡೆಯಲು, ಸ್ವಾವಲಂಬಿಯಾಗಲು, ಆರೋಗ್ಯದ ಅರಿವು ಪಡೆಯಲು ಮಹಿಳೆಯ ವಿವಾಹಕ್ಕೆ 21 ವರ್ಷಗಳ ವಯಸ್ಸಿನ ಕನಿಷ್ಠ ವಯಸ್ಸಿನ ಮಿತಿ ಏರಿವಿಕೆ ಅತ್ಯಗತ್ಯ ಅನಿಸುತ್ತದೆ. ಇದು ಕೇವಲ ಮಹಿಳೆಗಷ್ಟೇ ಅಲ್ಲ, ಮಕ್ಕಳ ಆರೋಗ್ಯಕ್ಕೆ, ಕೌಟುಂಬಿಕ ಸುಭದ್ರತೆಗೆ ಅವಶ್ಯಕ. ಹಾಗಾಗಿ ಮಾಡಬೇಕಾದ ಕೆಲಸ ಬೇಕಾದಷ್ಟಿದ್ದರೂ ಕ್ರಮಿಸಬೇಕಾದ ಹಾದಿ ಬಹಳವಿದ್ದರೂ ಬಹುದಿನಗಳಿಂದ ಕಾಲಕ್ಕನುಗುಣವಾಗಿ ಬದಲಾಗಲೇಬೇಕಿದ್ದ ವಿವಾಹದ ಕನಿಷ್ಠ ವಯಸ್ಸಿನ ಮಿತಿಯ ಕಾನೂನು, ಬದಲಾವಣೆಯತ್ತ ಹೆಜ್ಜೆ ಇಟ್ಟಿರುವುದನ್ನು ಅರಿವಿನಿಂದ ಸ್ವಾಗತಿಸೋಣ. ಅರಿವು ಹೆಚ್ಚಿಸಲು ದುಡಿಯೋಣ.
ಮಹಿಳೆಯರ ವಿವಾಹದ ವಯಸ್ಸು 21 ವರ್ಷಕ್ಕೆ ಹೆಚ್ಚಳ:
- ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 18 ವರ್ಷದಿಂದ 21 ವರ್ಷಕ್ಕೆ ಏರಿಸುವುದಕ್ಕಾಗಿ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪುರುಷರ ಮದುವೆಯ ಕನಿಷ್ಠ ವಯಸ್ಸು ಈಗ 21 ವರ್ಷವೇ ಇದೆ.
- ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
- ಸಮತಾ ಪಾರ್ಟಿಯ ಮುಖ್ಯಸ್ಥೆಯಾಗಿದ್ದ ಜಯಾ ಜೇಟ್ಲಿ ಅವರ ನೇತೃತ್ವದಲ್ಲಿ ನೀತಿ ಆಯೋಗವು 2020ರ ಜೂನ್‌ನಲ್ಲಿ ಕಾರ್ಯಪಡೆಯೊಂದನ್ನು ರಚಿಸಿತ್ತು. ತಾಯಿಯಾಗುವ ವಯಸ್ಸು, ಹೆರಿಗೆ ಸಂದರ್ಭದಲ್ಲಿ ತಾಯಿಯಂದಿರ ಸಾವಿನ ಪ್ರಮಾಣ ತಗ್ಗಿಸುವುದು, ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕತೆ ಹೆಚ್ಚಳದಂತಹ ವಿಚಾರಗಳ ಬಗ್ಗೆ ಶಿಫಾರಸುಗಳನ್ನು ಸಲ್ಲಿಸುವುದು ಈ ಕಾರ್ಯಪಡೆಯ ಹೊಣೆಯಾಗಿತ್ತು.
- ಕಾರ್ಯಪಡೆಯು ಯುವ ಜನರು ಮತ್ತು ಸಂಘಟನೆಗಳ ಜತೆಗೆ ಸಮಾಲೋಚನೆ ನಡೆಸಿತ್ತು. ದೇಶದ ಎಲ್ಲ ಪ್ರದೇಶಗಳ 16 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರಶ್ನಾವಳಿ ಕೊಟ್ಟು ಪ್ರತಿಕ್ರಿಯೆ ಪಡೆದುಕೊಳ್ಳಲಾಗಿತ್ತು. ಮದುವೆಯ ಕನಿಷ್ಠ ವಯಸ್ಸನ್ನು 22 ಅಥವಾ 23 ವರ್ಷಕ್ಕೆ ಹೆಚ್ಚಿಸಬೇಕು ಎಂದು ಹೆಚ್ಚಿನವರು ಹೇಳಿದ್ದರು. ಆದರೆ, ನಾವು ಮದುವೆಯ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸಲು ಶಿಫಾರಸು ಮಾಡಿದ್ದೆವು’ ಎಂದು ಜಯಾ ಜೇಟ್ಲಿ ಹೇಳಿದ್ದಾರೆ.
- ತಾಯಂದಿರು ಮತ್ತು ನವಜಾತ ಶಿಶುಗಳು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕು, ಹೆಣ್ಣು ಮಕ್ಕಳ ಆರೋಗ್ಯ ತಪಾಸಣೆಯನ್ನು ಶಾಲೆಯಲ್ಲಿ ಪ್ರತಿ ತಿಂಗಳು ನಡೆಸಲು ವ್ಯವಸ್ಥೆ ಮಾಡಬೇಕು ಎಂಬುದು ಈ ಶಿಫಾರಸುಗಳಲ್ಲಿ ಸೇರಿವೆ. ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣವನ್ನೂ ಸೇರಿಸಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ.
- ‘ಶೇ 50ರಿಂದ ಶೇ 60ರಷ್ಟು ಹೆಣ್ಣು ಮಕ್ಕಳಿಗೆ 21 ವರ್ಷಕ್ಕೆ ಮೊದಲೇ ಮದುವೆ ಆಗುತ್ತಿದೆ. ಕಾಯ್ದೆಗೆ ತಿದ್ದುಪಡಿ ಆದರೆ, ಇಂತಹ ಎಲ್ಲ ಮದುವೆಯು ಅಪರಾಧ ಎಂದು ಪರಿಗಣಿತವಾಗುತ್ತದೆ. ಕಾಯ್ದೆಯೊಂದರಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ. ಮೇಲ್ಮಧ್ಯಮ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಮದುವೆ 21 ವರ್ಷಗಳಿಗಿಂತಲೂ ಬಹಳ ತಡವಾಗಿಯೇ ಆಗುತ್ತದೆ. ಕಾಯ್ದೆಯ ನಿರ್ಬಂಧ ಇಲ್ಲದೆಯೇ ಇದು ಸಾಧ್ಯವಾಗಿದೆ’ ಎಂದು ಆಕ್ಸ್‌ಫ್ಯಾಮ್ ಇಂಡಿಯಾದ ಲಿಂಗತ್ವ ನ್ಯಾಯ ಘಟಕದ ಪ್ರಧಾನ ತಜ್ಞೆ ಅಮಿತಾ ಪಿತ್ರೆ ಹೇಳಿದ್ದಾರೆ.
- ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು ಹೆಚ್ಚಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದರು.
43 ವರ್ಷದ ಬಳಿಕ ಬದಲಾವಣೆ
- ಮದುವೆಯ ಕನಿಷ್ಠ ವಯಸ್ಸು 43 ವರ್ಷದ ಬಳಿಕ ಬದಲಾವಣೆಯಾಗಿದೆ. ಬಾಲ್ಯವಿವಾಹ ನಿರ್ಬಂಧ ಕಾಯ್ದೆ 1929ಕ್ಕೆ 1978ರಲ್ಲಿ ತಿದ್ದುಪಡಿ ತಂದು ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 15ರಿಂದ 18ಕ್ಕೆ ಏರಿಸಲಾಗಿತ್ತು. ಬಾಲ್ಯವಿವಾಹ ನಿರ್ಬಂಧ ಕಾಯ್ದೆ 1929ರ ಬದಲಿಗೆ ಬಾಲ್ಯವಿವಾಹ ತಡೆ ಕಾಯ್ದೆಯನ್ನು 2006ರಲ್ಲಿ ತರಲಾಗಿತ್ತು.
- ಮೊದಲಿಗೆ ಬಾಲ್ಯ ವಿವಾಹ ತಡೆ ಕಾಯ್ದೆ 2006ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ನಂತರ, ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ 1955ರಂತಹ ವೈಯಕ್ತಿಕ ಕಾನೂನುಗಳಿಗೂ ತಿದ್ದುಪಡಿ ತರಬೇಕಾಗುತ್ತದೆ. ಈ ಎಲ್ಲ ಕಾಯ್ದೆಗಳಲ್ಲಿ ಹೆಣ್ಣಿನ ಮದುವೆಯ ಕನಿಷ್ಠ ವಯಸ್ಸು 18 ಮತ್ತು ಗಂಡಿನ ಮದುವೆಯ ಕನಿಷ್ಠ ವಯಸ್ಸು 21 ಎಂದು ಇದೆ. (ಕೃಪೆ; ಪ್ರಜಾವಾಣಿ)
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳ ಕಾರ್ಯಗಳು ಮತ್ತು ಜವಾಬ್ದಾರಿಗಳು, ಫೆಡರಲ್ ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು, ಸ್ಥಳೀಯ ಮಟ್ಟದಲ್ಲಿ ಅಧಿಕಾರ ಮತ್ತು ಹಣಕಾಸು ಹಂಚಿಕೆ ಮತ್ತು ಅದರಲ್ಲಿನ ಸವಾಲುಗಳು.
ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಬೆಳಗಾವಿ ಗಡಿ ವಿವಾದ:
ಸಂದರ್ಭ:
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ‘ಅಂತರ-ರಾಜ್ಯ ವಿವಾದ’ ವು ಸ್ವಾತಂತ್ರ್ಯದ ಅವಧಿಯಷ್ಟು ಮತ್ತು 1956 ರಲ್ಲಿ ‘ಭಾಷಾವಾರು ರಾಜ್ಯಗಳ ಮರುಸಂಘಟನೆ’ಯ ನಂತರದ್ದಷ್ಟು ಹಿಂದಿನದ್ದಾಗಿದೆ, ಅದು ಮತ್ತೆ ಕರ್ನಾಟಕದ ಬೆಳಗಾವಿ ಪ್ರದೇಶದಲ್ಲಿ ತಲೆ ಎತ್ತಿದೆ.
- ಇತ್ತೀಚೆಗಿನ ಸಣ್ಣಪುಟ್ಟ ಘಟನೆಗಳು ವಿವಾದದ ತೀವ್ರತೆಗೆ ಎಡೆಮಾಡಿಕೊಟ್ಟಿದ್ದು, ಗಡಿಯ ಎರಡೂ ಕಡೆ ಕನ್ನಡ ಮತ್ತು ಮರಾಠಿ ಪರ ಭಾವನೆಗಳು ಭುಗಿಲೆದ್ದಿವೆ.
ವಿವಾದದ ಮೂಲ:
ಹಿಂದಿನ ಬಾಂಬೆ ಪ್ರೆಸಿಡೆನ್ಸಿಯು ಇಂದಿನ ಕರ್ನಾಟಕ ರಾಜ್ಯದ ಬಿಜಾಪುರ, ಬೆಳಗಾವಿ, ಧಾರವಾಡ ಮತ್ತು ಉತ್ತರ-ಕನ್ನಡ ಜಿಲ್ಲೆಗಳನ್ನು ಒಳಗೊಂಡ ಬಹುಭಾಷಾ ಪ್ರಾಂತ್ಯವಾಗಿತ್ತು. ಮರಾಠಿ, ಗುಜರಾತಿ ಮತ್ತು ಕನ್ನಡ ಭಾಷೆಗಳನ್ನು ಮಾತನಾಡುವ ಜನರು ಬಾಂಬೆ ಪ್ರೆಸಿಡೆನ್ಸಿಯಲ್ಲಿ ವಾಸಿಸುತ್ತಿದ್ದರು.
- 1948 ರಲ್ಲಿ, ಬೆಳಗಾವಿ ಪುರಸಭೆಯು ಪ್ರಧಾನವಾಗಿ ಮರಾಠಿ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯನ್ನು ಪ್ರಸ್ತಾವಿತ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕೆಂದು ವಿನಂತಿಸಿತು.
- ಆದಾಗ್ಯೂ, ರಾಜ್ಯಗಳ ಮರುಸಂಘಟನೆ ಕಾಯಿದೆ, 1956 ರ ರಾಜ್ಯಗಳನ್ನು ಭಾಷಾವಾರು ಮತ್ತು ಆಡಳಿತಾತ್ಮಕ ರೀತಿಯಲ್ಲಿ ವಿಭಜಿಸಿ ಬೆಳಗಾವಿ ಮತ್ತು ಬಾಂಬೆ ಪ್ರೆಸಿಡೆನ್ಸಿಯ ಇತರ 10 ತಾಲೂಕುಗಳನ್ನು ಅಂದಿನ ಮೈಸೂರು ರಾಜ್ಯದ (1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು) ಭಾಗವನ್ನಾಗಿ ಮಾಡಿತು.
ಮಹಾಜನ್ ಆಯೋಗದ ವರದಿ:
ರಾಜ್ಯಗಳ ಮರುಸಂಘಟನೆ ಆಯೋಗವು ರಾಜ್ಯಗಳ ಗಾಡಿಗಳನ್ನು ಗುರುತಿಸಿ, 50% ಕ್ಕಿಂತ ಹೆಚ್ಚು ಕನ್ನಡ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಲು ಇಚ್ಚಿಸಿತು.
- ಈ ಪ್ರದೇಶವನ್ನು ಮೈಸೂರಿನಲ್ಲಿ ಸೇರಿಸುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. 1956ರಲ್ಲಿ ಅಲ್ಲಿ ನೆಲೆಸಿದ್ದ ಕನ್ನಡ ಭಾಷಿಕರಿಗಿಂತ ಈ ಭಾಗದಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದೆ ಎಂದು ಪ್ರತಿಭಟನೆ ನಡೆಸಿದವರು ಹೇಳಿದರು.
- ಸೆಪ್ಟೆಂಬರ್ 1957 ರಲ್ಲಿ, ಅವರ ಬೇಡಿಕೆಯನ್ನು ಬಾಂಬೆ ಸರ್ಕಾರವು ಪ್ರತಿಧ್ವನಿಸಿತು ಮತ್ತು ಕೇಂದ್ರಕ್ಕೆ ಪ್ರತಿಭಟನೆಯನ್ನು ಸಲ್ಲಿಸಿತು, ಇದರ ಪರಿಣಾಮವಾಗಿ ಅಕ್ಟೋಬರ್ 1966 ರಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಮಹಾಜನ್ ಆಯೋಗವನ್ನು ರಚಿಸಲಾಯಿತು.
ಆಯೋಗದ ಶಿಫಾರಸುಗಳು:
ಆಯೋಗವು ಆಗಸ್ಟ್ 1967 ರಲ್ಲಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದಂತೆ – 264 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ (1960 ರಲ್ಲಿ ರೂಪುಗೊಂಡಿತು) ಮತ್ತು ಬೆಳಗಾವಿ ಮತ್ತು 247 ಗ್ರಾಮಗಳನ್ನು ಕರ್ನಾಟಕದಲ್ಲೇ ಉಳಿಯಬೇಕೆಂದು ಶಿಫಾರಸು ಮಾಡಿತು.
ನಂತರದ ಬೆಳವಣಿಗೆಗಳು:
- ಮಹಾರಾಷ್ಟ್ರವು ವರದಿಯನ್ನು ತಿರಸ್ಕರಿಸಿತು ಮತ್ತು ಅದನ್ನು ಪಕ್ಷಪಾತದಿಂದ ಕೂಡಿದೆ ಮತ್ತು ತರ್ಕಬದ್ಧವಲ್ಲ ಎಂದು ಕರೆದು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿತು.
- ಕರ್ನಾಟಕ ವರದಿಯನ್ನು ಸ್ವಾಗತಿಸಿದೆ ಮತ್ತು ಅದರ ಅನುಷ್ಠಾನಕ್ಕೆ ಒತ್ತಾಯಿಸುತ್ತಿದೆ. ಆದರೆ, ಅದನ್ನು ಕೇಂದ್ರವು ಔಪಚಾರಿಕವಾಗಿ ಅಂಗೀಕರಿಸಿಲ್ಲ.
- ಪ್ರಸ್ತುತ ಕರ್ನಾಟಕದ ಭಾಗವಾಗಿರುವ ಬೆಳಗಾವಿ ನಗರ ಸೇರಿದಂತೆ ಗಡಿಯುದ್ದಕ್ಕೂ ಇರುವ 814 ಹಳ್ಳಿಗಳ ಮೇಲೆ ಮಹಾರಾಷ್ಟ್ರವು ಹಕ್ಕು ಸಾಧಿಸುತ್ತಿದೆ. (ಮಹಾರಾಷ್ಟ್ರದ ಈ ಬೇಡಿಕೆಗೆ ಮನ್ನಣೆ ಸಿಕ್ಕರೆ ಕರ್ನಾಟಕದಲ್ಲಿ ಆರ್ಥಿಕ ವಿಪತ್ತು ಸೃಷ್ಟಿಯಾಗುತ್ತದೆ ಎಂದು ಮಹಾಜನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ’).
- ಈ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಬೇಡಿಕೆ ಮಂಡಿಸುತ್ತಿವೆ-ಆದರೆ ಈ ಬೇಡಿಕೆಗಳನ್ನು ಕರ್ನಾಟಕವು ಸಾರಸಗಟಾಗಿ ವಿರೋಧಿಸುತ್ತಿದೆ.
ದಯವಿಟ್ಟು ಗಮನಿಸಿ:
ಬೆಳಗಾವಿ ಗಡಿ ವಿವಾದ: (ಅವಲೋಕನ)
- ರಾಜ್ಯಗಳ ಪುನರ್ ವಿಂಗಡಣೆಯಾದ ಲಾಗಾಯ್ತಿನಿಂದ ಬೆಳಗಾವಿ ಮೇಲೆ ಕಣ್ಣು ಹಾಕಿರುವ ಮಹಾರಾಷ್ಟ್ರಿಗರು ಈಗ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ. ಹೋಗಿ ಒಂಬತ್ತು ವರ್ಷಗಳೇ ಆದುವು. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ವೈ.ವಿ.ಚಂದ್ರಚೂಡರ ನೇತೃತ್ವದ ಸಮಿತಿಯ ಸಲಹೆಯಂತೆ ಮಹಾರಾಷ್ಟ್ರ ಸರ್ಕಾರ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಬೆಳಗಾವಿಯನ್ನು ತನಗೆ ವಹಿಸಿಕೊಡಬೇಕು ಎಂದು ಕೋರಿಕೊಂಡಿದೆ. ‘ಕರ್ನಾಟಕಕ್ಕೆ ಬೆಳಗಾವಿ ಸೇರಿದಾಗಿನಿಂದಲೂ ಅಲ್ಲಿನ ಮರಾಠಿಗರಿಗೆ ರಕ್ಷಣೆಯಿಲ್ಲ, ಮರಾಠಿ ಅಸ್ಮಿತೆಗೆ ಧಕ್ಕೆಯಾಗುತ್ತಿದೆ’ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿದೆ. ಸುಪ್ರೀಂ ಕೋರ್ಟಿನ ಹಿಂದಿನ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರು ಎರಡೂ ಪಕ್ಷಗಳು ತಮ್ಮ ತಮ್ಮ ಪರವಾಗಿ ಸಾಕ್ಷ್ಯಾಧಾರಗಳನ್ನು ನಿವೃತ್ತ ನ್ಯಾಯಮೂರ್ತಿ ಮನಮೋಹನ್ ಸರೀನ್ ಅವರ ಎದುರು ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ. ಇಂಥ ಪ್ರಕರಣಗಳಲ್ಲಿ ಯಾವಾಗಲೂ ವಾದಿ ಮೊದಲು ತನ್ನ ಸಾಕ್ಷ್ಯಾಧಾರಗಳನ್ನು ಸಲ್ಲಿಸಬೇಕು. ಪ್ರತಿವಾದಿ ನಂತರ ತನ್ನ ಪರವಾಗಿ ಇರುವ ಪುರಾವೆಗಳನ್ನು ಸಲ್ಲಿಸಬೇಕು. ನ್ಯಾಯಾಲಯದ ಆದೇಶಗಳು ಒಂದೊಂದು ಸಾರಿ ವಿಚಿತ್ರವಾಗಿರುತ್ತವೆ. ಏನೂ ಮಾಡಲು ಆಗುವುದಿಲ್ಲ.
- ಹೋಗಲಿ, ಸುಪ್ರೀಂ ಕೋರ್ಟು ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ವಿಚಾರಣೆಗೆ ಪರಿಶೀಲಿಸಬಹುದೇ? ಇಂಥ ಒಂದು ಅರ್ಜಿ ತನ್ನ ಮುಂದೆ ಬಂದ ಕೂಡಲೇ ಅದು ವಿಚಾರಣೆಗೇ ಅರ್ಹವಾಗಿಲ್ಲ ಎಂದು ಅದು ವಜಾ ಮಾಡಬೇಕಿತ್ತು. ಏಕೆಂದರೆ ಸಂವಿಧಾನದ ನಿರ್ಮಾಪಕರು ರಾಜ್ಯಗಳ ರಚನೆಯನ್ನು, ರಾಜ್ಯಗಳ ಗಡಿಗಳ ಪುನರ್ ವಿಂಗಡಣೆಯನ್ನು, ಯಾವುದಾದರೂ ಒಂದು ರಾಜ್ಯದ ಕೆಲ ಭಾಗವನ್ನು ಇನ್ನೊಂದು ರಾಜ್ಯಕ್ಕೆ ಬಿಟ್ಟುಕೊಡುವುದನ್ನು ನ್ಯಾಯಾಲಯದ ತೀರ್ಮಾನಕ್ಕೆ ಒಪ್ಪಿಸಿಲ್ಲ. ಅದು ಸಂಸತ್ತಿನ ಪರಮಾಧಿಕಾರ ಎಂದು ಅವರು ಹೇಳಿದ್ದಾರೆ. ಸಂವಿಧಾನದ ಮೂರನೇ ಪರಿಚ್ಛೇದ ಈ ವಿಚಾರದಲ್ಲಿ ಅತ್ಯಂತ ಸ್ಪಷ್ಟವಾಗಿದೆ. ಅದರಲ್ಲಿ ರಾಜ್ಯಗಳ ರಚನೆ, ರಾಜ್ಯಗಳ ಗಡಿಯ ವಿಸ್ತರಣೆ ಮಾಡುವುದು, ಕಡಿಮೆ ಮಾಡುವುದು ಅಥವಾ ಬದಲಿಸುವುದು ಹಾಗೂ ರಾಜ್ಯಗಳಿಗೆ ಹೆಸರು ಇಡುವುದೆಲ್ಲ ಸಂಸತ್ತಿನ ಅಧಿಕಾರ ಎಂದು ಸ್ಪಷ್ಟಪಡಿಸಲಾಗಿದೆ ಮತ್ತು ರಾಷ್ಟ್ರಪತಿಗಳ ಸೂಚನೆಯಂತೆ ಸಂಬಂಧಪಟ್ಟ ರಾಜ್ಯಗಳ ವಿಧಾನಮಂಡಲಗಳಲ್ಲಿ ಈ ಕುರಿತು ನಿರ್ದಿಷ್ಟ ಅವಧಿಯಲ್ಲಿ ನಿರ್ಣಯ ಆಗಬೇಕು ಎಂದೂ ಸೂಚಿಸಲಾಗಿದೆ. ಅಲ್ಲಿ ನಿರ್ಣಯ ಆಗದೇ ಇದ್ದರೆ ಸಂಸತ್ತು ತನ್ನ ಪರಮಾಧಿಕಾರ ಚಲಾಯಿಸುತ್ತದೆ. ಆಂಧ್ರ ರಾಜ್ಯದ ವಿಭಜನೆ ವಿಚಾರದಲ್ಲಿ ಇದು ಆಗಿದ್ದುದು ಈಚಿನ ಇತಿಹಾಸ. ಆಂಧ್ರ ವಿಧಾನಸಭೆಯಲ್ಲಿ ಆ ರಾಜ್ಯದ ವಿಭಜನೆಗೆ ಒಪ್ಪಿಗೆ ಸಿಗಲಿಲ್ಲ. ತೆಲಂಗಾಣ ರಚನೆ ಆಗಬೇಕು ಎನ್ನುವವರು ಯಾರೂ ಸುಪ್ರೀಂ ಕೋರ್ಟಿಗೆ ಹೋಗಿರಲಿಲ್ಲ. ಸಂವಿಧಾನದ ಕರ್ತೃಗಳು ನ್ಯಾಯಾಲಯಗಳಿಗೆ ಈ ಅಧಿಕಾರವನ್ನು ಏಕೆ ಕೊಡಲಿಲ್ಲ ಎಂದರೆ ಇವೆಲ್ಲ ರಾಜಕೀಯ ಮತ್ತು ಆಡಳಿತಾತ್ಮಕ ತೀರ್ಮಾನಗಳು ಎಂಬ ಕಾರಣಕ್ಕಾಗಿ.
- ಈ ಎಲ್ಲ ಕಾರಣಗಳಿಂದಾಗಿಯೇ ಮಹಾರಾಷ್ಟ್ರದ ಅರ್ಜಿಯನ್ನು ಸುಪ್ರೀಂ ಕೋರ್ಟು ವಜಾ ಮಾಡಬೇಕಿತ್ತು. ಕೋರ್ಟು ಅದನ್ನು ಈಗಲೇನೂ ವಿಚಾರಣೆಗೆ ಅಂಗೀಕರಿಸಿಲ್ಲ. ಆದರೆ, ಎರಡೂ ಕಡೆಯವರು ಸಾಕ್ಷ್ಯ ಪುರಾವೆ ಸಲ್ಲಿಸಬೇಕು ಎಂದು ಹೇಳಿರುವುದರಿಂದ ಮುಂದೆ ಒಂದು ದಿನ ವಿಚಾರಣೆಗೆ ಅಂಗೀಕರಿಸಿಬಿಟ್ಟರೆ ಏನು ಮಾಡುವುದು ಎಂಬ ಚಿಂತೆ ಬೆಳಗಾವಿ ಕನ್ನಡಿಗರದು. ಮಳೀಮಠರಂಥ ನ್ಯಾಯವೇತ್ತರಿಗೂ ಈ ಅಳುಕು ಇದ್ದಂತೆ ಇದೆ. ಈ ಪ್ರಕರಣದ ವಿಚಾರಣೆಯ ಒಂದು ಹಂತದಲ್ಲಿ ‘ಇದು ಕಾಯ್ದೆ ಪ್ರಕಾರ ನಿಲ್ಲುವ ಪ್ರಕರಣವೇ ಅಲ್ಲ’ ಎಂದು ಹೇಳಿದ ಕೇಂದ್ರ ಸರ್ಕಾರ ತಕ್ಷಣ ತನ್ನ ಹೇಳಿಕೆ ವಾಪಸು ತೆಗೆದುಕೊಂಡು ಮೌನ ತಾಳಿರುವುದು ಕೂಡ ಆತಂಕಕ್ಕೆ ಕಾರಣವಾಗಿರಬಹುದು.
- ನಮ್ಮ ಅಳುಕನ್ನು ಆಧರಿಸಿಯೇ ಮಹಾರಾಷ್ಟ್ರಿಗರು ಏನೇನೋ ದಾಖಲೆಗಳನ್ನು ಸಂಗ್ರಹಿಸಲು ತೊಡಗಿದ್ದಾರೆ. ಆದರೆ, ಯಾವಾಗಲೂ ದಾಖಲೆಗಳು ಅವರ ಪರವಾಗಿ ಇರಲಿಲ್ಲ. ಬೆಳಗಾವಿ ಕರ್ನಾಟಕದ್ದು ಎನ್ನುವುದಕ್ಕೆ ಮೊದಲ ಅಧಿಕೃತ ದಾಖಲೆ ಸಿಗುವುದು ಜಾನ್ ಪೇತಫುಲ್ ಫ್ಲೀಟ್ ಅವರು ಬರೆದ ಬಾಂಬೆ ಪ್ರೆಸಿಡೆನ್ಸಿಯ ಗ್ಯಾಜೆಟಿಯರ್‌ನಲ್ಲಿ. ‘ಸದಾಶಿವಗಡದಿಂದ ಬೆಳಗಾವಿ, ಹುಕ್ಕೇರಿ, ಸೊಲ್ಲಾಪುರದ ಮೂಲಕ ಬೀದರ್‌ವರೆಗಿನದು ಕ್ಯಾನರೀಸ್ ಪ್ರದೇಶ’ ಎಂದು ಅವರು ಹೇಳುತ್ತಾರೆ. ‘ಇದರಲ್ಲಿ ಕೊಲ್ಲಾಪುರ ಬಿಟ್ಟು ಹೋಗಿದೆ, ವಾಸ್ತವದಲ್ಲಿ ಅದು ಕೂಡ ಕ್ಯಾನರೀಸ್ ಪ್ರದೇಶವೇ’ ಎಂದೂ ಅವರು ಹೇಳುತ್ತಾರೆ. ಅದಕ್ಕೆ ಅವರು ಕೊಡುವ ವಿವರಣೆ : ‘ಪಶ್ಚಿಮ ಚಾಲುಕ್ಯರು, ಕಳಚೂರ್ಯರು ಮತ್ತು ದೇವಗಿರಿಯ ಯಾದವರು ಅನೇಕ ಶತಮಾನಗಳಿಂದ ಈ ಪ್ರದೇಶವನ್ನು ಆಳಿಕೊಂಡು ಬಂದಿದ್ದಾರೆ ಮತ್ತು ಇಲ್ಲಿ ಬರೀ ಕನ್ನಡದ ಶಾಸನಗಳು ಸಿಗುತ್ತವೆಯೇ ಹೊರತು ಮರಾಠಿಯ ಒಂದು ಶಾಸನವೂ ಸಿಗುವುದಿಲ್ಲ. ಎಲ್ಲಿಯೋ ಒಂದು ಎರಡು ಪ್ರಾಕೃತ ಶಾಸನಗಳು ಸಿಗುತ್ತವೆ. ಈ ಪ್ರದೇಶ ಆಗಿನಿಂದಲೂ ಕನ್ನಡದ ಆಡಳಿತಕ್ಕೇ ಒಳಪಟ್ಟಿತ್ತು. ಇದು ದಕ್ಷಿಣದ ಮರಾಠಾ ದೇಶ ಎಂದು ಹೇಳುವುದು ದಾರಿ ತಪ್ಪಿಸುವ ಅಭಿಪ್ರಾಯ. ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಆಡಳಿತದ ಪ್ರತಿನಿಧಿಗೆ ಕರ್ನಾಟಕ ಪ್ರಾಂತ ಪೊಲಿಟಿಕಲ್ ಏಜೆಂಟ್ ಎಂದೇ ಕರೆಯುತ್ತಾರೆ…’
- ಆಗೇನೂ ಮರಾಠಿಗರ ಮತ್ತು ಕನ್ನಡಿಗರ ನಡುವೆ ಈಗಿನ ಹಾಗೆ ಯಾವ ವ್ಯಾಜ್ಯವೂ ಇರಲಿಲ್ಲ. ಅಷ್ಟು ಹಿಂದೆ ಏಕೆ? 1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದಾಗ ಯಾವ ಮರಾಠಿ ನಾಯಕರೂ ಗಡಿ ವಿವಾದವನ್ನು ಪ್ರಸ್ತಾಪಿಸುವುದಿಲ್ಲ. 1960ರ ದಶಕದಲ್ಲಿ ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ಅವರು ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಕುರಿತು ತಮ್ಮ ವರದಿ ಸಲ್ಲಿಸುವಾಗ ಈ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾರೆ. ‘ಎನ್.ಸಿ.ಕೇಳ್ಕರ್ ಅವರಂಥ ಮರಾಠಿ ಮುಖಂಡರು ಆ ಎಐಸಿಸಿ ಅಧಿವೇಶನದಲ್ಲಿ ಮೌನವಾಗಿದ್ದರು’ ಎಂದು ಅವರು ಎತ್ತಿ ಹೇಳುತ್ತಾರೆ.
- ಮಹಾಜನ್ ಅವರು ಕೇವಲ ಭಾಷೆಯ ಆಧಾರದ ಮೇಲೆ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ವರದಿ ನೀಡಲಿಲ್ಲ. ಅದು ರಾಜ್ಯಗಳ ಪುನರ್ ವಿಂಗಡಣೆಗೆ ರಚನೆಯಾಗಿದ್ದ ಖಾನ್ ಬಹಾದ್ದೂರ್ ಸೈಯದ್ ಆಸಿಫ್ ಸರ್ ಫಜಲ್ ಅಲಿ ಅವರ ನೇತೃತ್ವದ ಆಯೋಗವು, ‘ಬೆಳಗಾವಿ ಕರ್ನಾಟಕದಲ್ಲಿಯೇ ಇರಬೇಕು’ ಎಂದು ಏಕೆ ಹೇಳಿತು ಎಂಬುದನ್ನೂ ಗಮನಕ್ಕೆ ತೆಗೆದುಕೊಂಡಿದ್ದರು ಮತ್ತು ಅವರು ಆ ಅಂಶವನ್ನು ತಮ್ಮ ವರದಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದರು. ‘ಒಂದು ಪ್ರದೇಶದಲ್ಲಿ ಒಂದು ಭಾಷೆಯವರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ ಎಂಬ ಒಂದೇ ಅಂಶವನ್ನು ಇಟ್ಟುಕೊಂಡು ರಾಜ್ಯಗಳ ಗಡಿ ನಿರ್ಣಯಿಸುವುದು ಅಪಾಯಕಾರಿ’ ಎಂಬ ಪಾಠವನ್ನು ಆಂಧ್ರ ಪ್ರದೇಶ ರಾಜ್ಯ ರಚನೆ ಸಮಯದಲ್ಲಿಯೇ ಆಗಿನ ಕೇಂದ್ರ ಸರ್ಕಾರ ಕಂಡುಕೊಂಡಿತು. ಆಂಧ್ರ ರಾಜ್ಯದ ರಚನೆ ತೀವ್ರಸ್ವರೂಪದ ಒತ್ತಡ ಹಾಗೂ ಭಾವುಕ ವಾತಾವರಣದಲ್ಲಿ ಆಯಿತು. ಪೊಟ್ಟಿ ಶ್ರೀರಾಮುಲು ಅವರು 56 ದಿನಗಳ ಕಾಲ ಉಪವಾಸ ಕುಳಿತು ಜೀವ ಕಳೆದುಕೊಂಡ ನಂತರ ಹುಟ್ಟಿಕೊಂಡ ಒತ್ತಡದಲ್ಲಿ ಆ ರಾಜ್ಯದ ರಚನೆ ಆಯಿತು. ತದನಂತರ 1953ರಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಯಿತು. ‘ರಾಜ್ಯಗಳ ಪುನರ್ ವಿಂಗಡಣೆ ಎಂಬುದು ಯಾವ ಭಾವಾವೇಶಕ್ಕೂ ಒಳಗಾಗದೆ, ವಸ್ತುನಿಷ್ಠವಾಗಿ ತೆಗೆದುಕೊಳ್ಳಬೇಕಾದ ತೀರ್ಮಾನ. ಒಂದು ರಾಜ್ಯದ ರಚನೆ ಆಗುವಾಗ ಭಾಷಾ ಸಾಮರಸ್ಯ ಎಂಬುದು ಬಹುಮುಖ್ಯ ಅಂಶವಾದರೂ ಅದೊಂದನ್ನೇ ಪರಿಗಣಿಸಲು ಆಗದು. ಹಾಗೆ ಮಾಡಿದರೆ ಅದು ಒಂದು ನಿರ್ದಿಷ್ಟತೆಯನ್ನು ನಿರ್ಮಿಸುತ್ತದೆ. ಅದು ಒಟ್ಟು ದೇಶದ ಭಾವೈಕ್ಯಕ್ಕೆ ಒಳ್ಳೆಯದಲ್ಲ’ ಎಂದು ಆ ಎಐಸಿಸಿ ಅಧಿವೇಶನದಲ್ಲಿ ನಿರ್ಣಯಿಸಲಾಯಿತು. ಫಜಲ್ ಅಲಿ ಆಯೋಗವು, ಬೆಳಗಾವಿ ತನಗೆ ಬೇಕು ಎಂಬ ಮಹಾರಾಷ್ಟ್ರದ ಬೇಡಿಕೆಯನ್ನು ಈ ಮುಖ್ಯ ಅಂಶದ ಆಧಾರದ ಮೇಲೆಯೇ ತಿರಸ್ಕರಿಸಿತು. ಫಜಲ್ ಅಲಿ ಆಯೋಗವು ರಾಜ್ಯಗಳ ಪುನರ್ ವಿಂಗಡಣೆ ಮಾಡುವಾಗ ಜಿಲ್ಲೆಯನ್ನು ಒಂದು ಘಟಕ ಎಂದು ಪರಿಗಣಿಸಿತ್ತು. ಆದರೆ, ಮಹಾರಾಷ್ಟ್ರಿಗರು ಯಾವಾಗಲೂ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಬಂದಿದ್ದಾರೆ. ಬೆಳಗಾವಿಯನ್ನು ಒಂದು ಜಿಲ್ಲೆ ಎಂದು ಪರಿಗಣಿಸಿದಾಗ ಅಲ್ಲಿ ವಾಸವಾಗಿರುವ ಮರಾಠಿ ಭಾಷಿಕರ ಸಂಖ್ಯೆ ಖಂಡಿತವಾಗಿಯೂ ಕನ್ನಡಿಗರಿಗಿಂತ ಬಹಳ ಕಡಿಮೆ ಇದೆ. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದಕ್ಕೆ ಅಲ್ಲಿನ ಕನ್ನಡಿಗರು ಆಕ್ಷೇಪಿಸುವುದಕ್ಕೆ ಇದು ಕೂಡ ಒಂದು ಮುಖ್ಯ ಕಾರಣ.
- ಮಹಾಜನ್ ಆಯೋಗ ರಚನೆ ಆಗುವಾಗ ಆಗಿನ ಮಹಾರಾಷ್ಟ್ರದ ಮುಖ್ಯಮಂತ್ರಿ ವಿ.ಪಿ.ನಾಯಕ್ ಅವರು ಈ ಆಯೋಗ ಕೊಡುವ ತೀರ್ಪಿಗೆ ತಮ್ಮ ರಾಜ್ಯ ಬದ್ಧವಾಗಿರುತ್ತದೆ ಎಂದಿದ್ದರು. ನಂತರ ಅವರು ತಿರುಗಿ ಬಿದ್ದರು. ಕರ್ನಾಟಕ ಈಗಲೂ ಮಹಾಜನ್ ಆಯೋಗದ ವರದಿಗೆ ಬದ್ಧವಾಗಿದೆ. ಮಹಾರಾಷ್ಟ್ರ ಕೊಟ್ಟ ಮಾತು ಉಳಿಸಿಕೊಳ್ಳುವ ‘ಸಭ್ಯಗೃಹಸ್ಥ’ನಂತೆ ನಡೆದುಕೊಂಡಿಲ್ಲ.
- ಮಹಾಜನ್ ಆಯೋಗದ ವರದಿ ಈಗಲೂ ಸಂಸತ್ತಿನ ಮುಂದೆ ಇದೆ. ರಾಜಕೀಯವಾಗಿ ಮಹಾರಾಷ್ಟ್ರದ ಪ್ರಭಾವ ನಮಗಿಂತ ಜಾಸ್ತಿ. ಅದು ಸಂಸತ್ತಿನ ಮುಂದೆ ಕೊಳೆಯುತ್ತಿರುವುದಕ್ಕೆ ಅವರ ಪ್ರಭಾವವೇ ಕಾರಣ. ಮಹಾಜನ್ ಆಯೋಗವೇನೂ ಕರ್ನಾಟಕದ ಕೋರಿಕೆಯಂತೆ ರಚನೆಯಾದುದು ಅಲ್ಲ. ಆಗಿನ ಮಹಾರಾಷ್ಟ್ರದ ನಾಯಕರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಮೇಲೆ ಒತ್ತಡ ತಂದು, ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಕೈ ತಿರುಚಿ ನಮ್ಮ ಮೇಲೆ ಹೇರಿದ ಆಯೋಗವದು. ಅದರ ವರದಿ ಅನುಸಾರ ನಿಪ್ಪಾಣಿ ಮತ್ತು ಖಾನಾಪುರದಂಥ ವಾಣಿಜ್ಯ ಚಟುವಟಿಕೆಯಿಂದ ಹಾಗೂ ಅರಣ್ಯಗಳಿಂದ ಕೂಡಿರುವ ಪ್ರದೇಶಗಳು ಮತ್ತು ಕೆಲವು ಹಳ್ಳಿಗಳು ಕರ್ನಾಟಕದ ಕೈ ತಪ್ಪುತ್ತವೆ. ಕೇರಳ ರಾಜ್ಯದಲ್ಲಿ ಈಗ ಇರುವ ಕಾಸರಗೋಡು ನಮಗೆ ಬರುತ್ತದೆ.
- ಈ ವರದಿ ತನ್ನ ಪರವಾಗಿ ಬರಲಿಲ್ಲ ಎಂದು ಬೆಳಗಾವಿಯ ಮೇಲೆ ಕಣ್ಣು ಇಟ್ಟಿರುವ ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಕೃಪಾಪೋಷಣೆಯಲ್ಲಿ ಬೆಳಗಾವಿಯಲ್ಲಿ ಸದಾಕಾಲ ಕಿರಿಕಿರಿ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಗಳು ಸೇರಿಕೊಂಡು ನಡೆಸಿದ ಯಾವ ಚಳವಳಿಗಳೂ ಫಲ ನೀಡದ ಕಾರಣ 2006ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟಿನ ಮೆಟ್ಟಿಲು ಏರಿವೆ. ಬೆಳಗಾವಿ ಪಾಲಿಕೆಯನ್ನು ವಿಸರ್ಜಿಸಿದ್ದನ್ನು, ಆಗಿನ ಮೇಯರ್ ವಿಜಯ್ ಮೋರೆ ಅವರ ಮುಖಕ್ಕೆ ಕನ್ನಡ ಚಳವಳಿಗಾರರು ಮಸಿ ಬಳಿದ ಘಟನೆಗಳನ್ನು ಉಲ್ಲೇಖಿಸಿ ತಮಗೆ ಅಭದ್ರತೆ ಕಾಡುತ್ತಿದೆ ಎಂದು ವಾದಿಸಿದ್ದಾರೆ. ಇದು ಎಷ್ಟು ದುರ್ಬಲ ವಾದ ಎಂದು ಯಾರಿಗಾದರೂ ಅರ್ಥ ಆಗುತ್ತದೆ. ಸುಪ್ರೀಂ ಕೋರ್ಟಿನ ಆಗಿನ ಮುಖ್ಯ ನ್ಯಾಯಮೂರ್ತಿ ಲೋಧಾ ಅವರು ‘ನಿಮ್ಮ ನಿಮ್ಮ ಪರವಾಗಿ ಇರುವ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೊಡಿ’ ಎಂದು ಹೇಳಿದ್ದರಿಂದ ಮರಾಠಿಗರು ಮರಾಠಿ ಪ್ರಭಾವ ಇರುವ ಗ್ರಾಮ ಪಂಚಾಯ್ತಿಗಳಲ್ಲಿ ಮಹಾರಾಷ್ಟ್ರ ಪರ ನಿರ್ಣಯಗಳನ್ನು ಅಂಗೀಕರಿಸುವಂತೆ ಮಾಡುತ್ತಿದ್ದಾರೆ. ಹೀಗೆಲ್ಲ ಮಾಡಿದರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗಿ ಬಿಡುತ್ತದೆ ಎಂದು ಹೆದರಬೇಕಿಲ್ಲ. ನಾವು ಬೆಳಗಾವಿಯಲ್ಲಿ ಸುವರ್ಣ ಸೌಧವನ್ನೇ ಕಟ್ಟಿದ್ದೇವೆ. ವರ್ಷದಲ್ಲಿ ಒಂದು ಸಾರಿ ಅಧಿವೇಶನವನ್ನೂ ನಡೆಸುತ್ತಿದ್ದೇವೆ. ಅದು ಹೇಗೆ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗಲು ಸಾಧ್ಯ? (ಕೃಪೆ ಪ್ರಜಾವಾಣಿ).
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಮೇಕೆದಾಟು ಸಮಸ್ಯೆ:
(Mekedatu issue)
ಸಂದರ್ಭ:
ಇತ್ತೀಚೆಗೆ, ಕರ್ನಾಟಕವು,‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ (CWMA) ಕ್ಕೆ ತನ್ನ ಮುಂದಿನ ಸಭೆಯಲ್ಲಿ ‘ಮೇಕೆದಾಟು ಸಮಾನಾಂತರ ಜಲಾಶಯ ಯೋಜನೆ’ (Mekedatu Balancing Reservoir Project) ಕುರಿತ ತಾನು ಸಲ್ಲಿಸಿದ ‘ವಿವರವಾದ ಯೋಜನಾ ವರದಿ’ (DPR) ಗೆ ಅನುಮೋದನೆ ನೀಡುವಂತೆ ಒತ್ತಾಯಿಸಿದೆ.
ಏನಿದು ಪ್ರಕರಣ?
ಮೇಕೆದಾಟು ಎಂಬಲ್ಲಿ ಕಾವೇರಿ ನದಿಗೆ ಜಲಾಶಯ ನಿರ್ಮಿಸುವ ಕರ್ನಾಟಕದ ಕ್ರಮವನ್ನು ವಿರೋಧಿಸಿ ತಮಿಳುನಾಡು ಪ್ರತಿಭಟನೆ ನಡೆಸುತ್ತಿದೆ. ಆದಾಗ್ಯೂ, ಕರ್ನಾಟಕ ಸರ್ಕಾರವು ‘ಮೇಕೆದಾಟು ಯೋಜನೆ’ಯಲ್ಲಿ ಯಾವುದೇ “ರಾಜಿ” ಇಲ್ಲ ಎಂದು ಸಮರ್ಥಿಸುತ್ತದೆ ಮತ್ತು ರಾಜ್ಯವು ಈ ಯೋಜನೆಯನ್ನು ಆದ್ಯತೆಯ ವಿಷಯವಾಗಿ ಕೈಗೆತ್ತಿಕೊಳ್ಳುತ್ತದೆ ಎಂದು ತಿಳಿಸಿದೆ.
ಈ ವಿವಾದಕ್ಕೆ ಪರಿಹಾರ:
ಮೇಕೆದಾಟು ಯೋಜನೆ ಆರಂಭಿಸಲು ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿ (ಡಿಪಿಆರ್)ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಅನುಮತಿಯ ಅಗತ್ಯವಿದೆ. ಅಲ್ಲದೆ, ಯೋಜನೆಗೆ ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳ ಸಮ್ಮತಿಯೂ ಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
- ಕರ್ನಾಟಕ ಸಲ್ಲಿಸಿರುವ ‘ಸಮಗ್ರ ಯೋಜನಾ ವರದಿಯನ್ನು (Detail Project Report – DPR) ಅನುಮೋದನೆಗಾಗಿ ಹಲವು ಬಾರಿ CWMA ಮುಂದೆ ಇಡಲಾಗಿದೆ, ಆದರೆ ವಿವಾದಕ್ಕೆ ಸಂಬಂಧಿಸಿದ ರಾಜ್ಯಗಳಾದ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಒಮ್ಮತದ ಕೊರತೆಯಿಂದಾಗಿ ಈ ವಿಷಯದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
- ‘ಅನುಮತಿ ಕೋರಿ ಅರ್ಜಿ ಸಲ್ಲಿಸಿದ 6 ತಿಂಗಳೊಳಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡದಿದ್ದರೆ, ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಭಾವಿಸಬಹುದಲ್ಲವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರವು, ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಭಾವಿಸುವುದು ಸಹಜ. ಆದರೆ, ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿದ್ದ ಐತೀರ್ಪನ್ನು ಪ್ರಶ್ನಿಸಿ ಕಣಿವೆ ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ನೀಡಿರುವ ಅಂತಿಮ ತೀರ್ಪಿನ ಅನ್ವಯ, ಯಾವುದೇ ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ.
- ಈ ಯೋಜನೆಯನ್ನು ಅಂತಾರಾಜ್ಯ ನದಿಗೆ ಅಡ್ಡಲಾಗಿ ಪ್ರಸ್ತಾಪಿಸಲಾಗಿರುವುದರಿಂದ, ಅಂತಾರಾಜ್ಯ ಜಲ ವಿವಾದ ಕಾಯಿದೆಯ ಪ್ರಕಾರ, ಕಣಿವೆಯ ಕೆಳಹಂತದ ರಾಜ್ಯಗಳಾದ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳ ಸಮ್ಮತಿ ಪಡೆಯುವುದು ಅಗತ್ಯ ಎಂದು ಕರ್ನಾಟಕವು ಡಿಪಿಆರ್ ಸಲ್ಲಿಸಿದಾಗಲೇ ತಿಳಿಸಲಾಗಿದೆ ಎಂದೂ ಸರ್ಕಾರವು ಲೋಕಸಭೆಗೆ ತಿಳಿಸಿದೆ.
ಮೇಕೆದಾಟು ಯೋಜನೆ ಕುರಿತು:
- ಮೇಕೆದಾಟು ಒಂದು ಬಹುಪಯೋಗಿ (ಕುಡಿಯುವ ನೀರು ಮತ್ತು ಜಲ ವಿದ್ಯುತ್) ಯೋಜನೆಯಾಗಿದೆ.
- ಯೋಜನೆಯ ಅಡಿಯಲ್ಲಿ, ಕರ್ನಾಟಕದ ರಾಮನಗರ ಜಿಲ್ಲೆಯ ಕನಕಪುರದ ಬಳಿ ‘ಸಮತೋಲನ ಜಲಾಶಯ’ (Balancing Reservoir) ನಿರ್ಮಿಸಲು ಉದ್ದೇಶಿಸಲಾಗಿದೆ.
- ಈ ಯೋಜನೆಯ ಉದ್ದೇಶ ಬೆಂಗಳೂರು ನಗರ ಮತ್ತು ಅದರ ಪಕ್ಕದ ಪ್ರದೇಶಗಳಿಗೆ ಕುಡಿಯುವ ನೀರನ್ನು (4.75 ಟಿಎಂಸಿ) ಸಂಗ್ರಹಿಸುವುದು ಮತ್ತು ಪೂರೈಸುವುದಾಗಿದೆ. ಈ ಯೋಜನೆಯ ಮೂಲಕ ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕೂಡ ಪ್ರಸ್ತಾಪಿಸಲಾಗಿದೆ.
- ಯೋಜನೆಯ ಅಂದಾಜು ವೆಚ್ಚ 9,000 ಕೋಟಿ ರೂ.ಗಳು.
ತಮಿಳುನಾಡು, ಈ ಯೋಜನೆಯನ್ನು ವಿರೋಧಿಸಲು ಕಾರಣಗಳು:
- ‘ಸುಪ್ರೀಂ ಕೋರ್ಟ್’ ಮತ್ತು ‘ಕಾವೇರಿ ನದಿ ನೀರು ವಿವಾದ ಪ್ರಾಧಿಕಾರ’ (CWDT) ‘’ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ನೀರು ಸಂಗ್ರಹಣೆ ಮತ್ತು ವಿತರಣೆಗೆ ಶೇಖರಣಾ ಸೌಲಭ್ಯಗಳು ಸಾಕಷ್ಟಿವೆ, ಹಾಗಾಗಿ ಕರ್ನಾಟಕದ ಈ ಪ್ರಸ್ತಾವನೆ ಸಮರ್ಥನೀಯವಲ್ಲ ಅದರಿಂದ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗುವುದು ಎಂದು ತಮಿಳುನಾಡು ಹೇಳುತ್ತದೆ.
- ತಮಿಳುನಾಡಿನ ಪ್ರಕಾರ- ಉದ್ದೇಶಿತ ಜಲಾಶಯದ ನಿರ್ಮಾಣವು ಕೇವಲ ಕುಡಿಯುವ ನೀರಿಗಾಗಿ ಮಾತ್ರ ವಾಗಿರದೆ, ನಿರಾವರಿ ಕ್ಷೇತ್ರದ ಪ್ರಮಾಣವನ್ನು ಹೆಚ್ಚಿಸಲು ಸಹ ನಿರ್ಮಿಸಲಾಗುತ್ತದೆ,ಇದು ‘ಕಾವೇರಿ ಜಲ ವಿವಾದ ತೀರ್ಪಿನ’ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದು ಅದರ ವಾದವಾಗಿದೆ.
ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳು:
ಕಾವೇರಿ ಜಲವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ‘ಕಾವೇರಿ ಜಲವಿವಾದ ನ್ಯಾಯಮಂಡಳಿ’ (CWDT) ಅನ್ನು 1990 ರಲ್ಲಿ ಸ್ಥಾಪಿಸಲಾಗಿತ್ತು ಮತ್ತು ಅದು 2007ರಲ್ಲಿ ತನ್ನ ಅಂತಿಮ ಐತೀರ್ಪು ಪ್ರಕಟಿಸಿ ಶೇ.30ರ ಅವಲಂಬನಾ ಸೂತ್ರದಡಿ ಕಾವೇರಿ ನದಿ ನೀರಿನ ಒಟ್ಟು ಪ್ರಮಾಣವನ್ನು 740 ಟಿಎಂಸಿ ಎಂದು ಲೆಕ್ಕ ಹಾಕಿತ್ತು. ಬಳಿಕ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳ ರಾಜ್ಯಕ್ಕೆ 30 ಟಿಎಂಸಿ, ಪಾಂಡಿಚೇರಿಗೆ 7 ಟಿಎಂಸಿ ಹಾಗೂ ಉಳಿದಂತೆ 17 ಟಿಎಂಸಿ ನೀರನ್ನು ಪರಿಸರ ಬಳಕೆ, ಆವಿಯಾಗುವಿಕೆ ಮುಂದಾದವುಗಳಿಗೆ ಹಂಚಿಕೆ ಮಾಡಿತ್ತು.
ಆದಾಗ್ಯೂ, ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳು ಈ ನದಿ ನೀರು ಹಂಚಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವು ಮತ್ತು ನೀರು ಹಂಚಿಕೆಗಾಗಿ ಎರಡೂ ರಾಜ್ಯಗಳಲ್ಲಿ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದವು. ಇದರ ನಂತರ ಈ ವಿಷಯವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ತನ್ನ 2018 ರ ತೀರ್ಪಿನಲ್ಲಿ, ತಮಿಳುನಾಡಿನ ಈ ಹಿಂದಿನ ಪಾಲನ್ನು ವಿಭಜಿಸಿ, 14.75 ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಕರ್ನಾಟಕಕ್ಕೆ ಹಂಚಿಕೆ ಮಾಡಿತು.
- ಹೀಗಾಗಿ, ಹೊಸದಾಗಿ ಮಾಡಲಾದ ಹಂಚಿಕೆಯ ಪ್ರಕಾರ, ತಮಿಳುನಾಡಿಗೆ 404.25 ಟಿಎಂಸಿ ಅಡಿ ನೀರು ಸಿಕ್ಕಿತು ಮತ್ತು ಕರ್ನಾಟಕಕ್ಕೆ 284.75 ಟಿಎಂಸಿ ಅಡಿ ನೀರನ್ನು ನೀಡಲಾಗಿದೆ. ಕೇರಳ ಮತ್ತು ಪುದುಚೇರಿಯ ಪಾಲು ಬದಲಾಗದೆ ಉಳಿದಿದೆ.
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಕ್ಸಿನ್‌ಜಿಯಾಂಗ್ ವಿವಾದ (ಉಯಿಘರ್ ಗಳು):
(Xinjiang issue-Uighurs)
ಸಂದರ್ಭ:
ದೇಶದ ವಾಯುವ್ಯ ಪ್ರದೇಶವಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ದುರ್ವ್ಯವಹಾರದ ದೂರುಗಳ ಮೇಲೆ ಚೀನಾದ ಅಧಿಕಾರಿಗಳಿಗೆ ವಿಧಿಸಲಾದ ದಂಡಗಳಿಗೆ ಪ್ರತಿಕ್ರಿಯೆಯಾಗಿ ಚೀನಾವು ಅಮೇರಿಕಾ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಅಂತರರಾಷ್ಟ್ರೀಯ ಆಯೋಗದ ನಾಲ್ಕು ಸದಸ್ಯರ ಮೇಲೆ ನಿರ್ಬಂಧಗಳನ್ನು ಘೋಷಿಸಿದೆ.
ಹಿನ್ನೆಲೆ:
‘ಕ್ಸಿನ್‌ಜಿಯಾಂಗ್ ಪ್ರಾಂತ್ಯ’ದಲ್ಲಿ ಕೈಗೊಳ್ಳಲಾಗುತ್ತಿರುವ ದಮನಕಾರಿ ನೀತಿಯಿಂದಾಗಿ ಚೀನಾದ ಹಲವು ಜೈವಿಕ ತಂತ್ರಜ್ಞಾನ ಮತ್ತು ಕಣ್ಗಾವಲು ಕಂಪನಿಗಳ ಮೇಲೆ ಯುಎಸ್ ಹೊಸ ನಿರ್ಬಂಧಗಳನ್ನು ವಿಧಿಸಿದೆ.ಇದು ಚೀನಾದ ಪಶ್ಚಿಮ ಪ್ರದೇಶದಲ್ಲಿನ ‘ಉಯಿಘರ್ ಮುಸ್ಲಿಮರ’ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಬೀಜಿಂಗ್ ವಿರುದ್ಧ ಯುಎಸ್ ತೆಗೆದುಕೊಂಡ ಇತ್ತೀಚಿನ ಕ್ರಮವಾಗಿದೆ.
ಏನಿದು ಪ್ರಕರಣ?
ಕ್ಸಿನ್‌ಜಿಯಾಂಗ್‌ನಲ್ಲಿರುವ ಮುಸ್ಲಿಂ ಉಯಿಘರ್ ಸಮುದಾಯಕ್ಕೆ “ಕಾನೂನಿನ ಆಡಳಿತದ ಸಂಪೂರ್ಣ ಗೌರವವನ್ನು ಖಚಿತಪಡಿಸಿಕೊಳ್ಳಲು” ಹಲವಾರು ದೇಶಗಳು ಚೀನಾಕ್ಕೆ ಕರೆ ನೀಡಿವೆ.
ಚಿತ್ರಹಿಂಸೆ, ಬಲವಂತದ ಗರ್ಭಪಾತ, ಸಂತಾನಹರಣ ಮತ್ತು ಬಲವಂತದ ನಾಪತ್ತೆಗಳು ಸೇರಿದಂತೆ ಉಯಿಘರ್‌ಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಲಿಟನಿಯನ್ನು ಚೀನಾ ವಿರುದ್ಧ ಆರೋಪಿಸಿವೆ.
ಕ್ಸಿನ್‌ಜಿಯಾಂಗ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ನಿರಂಕುಶವಾಗಿ ಮನಸೋ ಇಚ್ಛೆ ಬಂಧಿಸಲಾಗಿದೆ ಮತ್ತು ಉಯಿಘರ್‌ಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನು ಅನುಚಿತವಾಗಿ ಗುರಿಯಾಗಿಸಿಕೊಂಡು ವ್ಯಾಪಕವಾದ ಕಣ್ಗಾವಲು ನಡೆಸಲಾಗುತ್ತಿದೆ ಮತ್ತು ಉಯಿಘರ್ ಸಂಸ್ಕೃತಿ ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಲಾಗಿದೆ ಎಂದು ನಂಬಲರ್ಹ ವರದಿಗಳು ಸೂಚಿಸುತ್ತವೆ.
ಈ ಆರೋಪಗಳಿಗೆ ಚೀನಾದ ಪ್ರತಿಕ್ರಿಯೆ:
ಸಾಕಷ್ಟು ಪುರಾವೆಗಳ ಹೊರತಾಗಿಯೂ ಚೀನಾ ಉಯಿಘರ್‌ಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವದನ್ನು ನಿರಾಕರಿಸುತ್ತದೆ ಮತ್ತು ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಚೀನಾದ ಆಡಳಿತದ ವಿರುದ್ಧ ವರ್ಷಗಳ ಹಿಂಸಾತ್ಮಕ ಘಟನೆಗಳ ನಂತರ ಜಿಹಾದಿ ಪ್ರಚಾರದಿಂದ ಪ್ರಭಾವಿತರಾದವರನ್ನು ಆಮೂಲಾಗ್ರವಾಗಿ ಮನ ಪರಿವರ್ತಿಸಲು ವೃತ್ತಿಪರ ತರಬೇತಿ ಮತ್ತು ಸಮಾಲೋಚನೆ ನೀಡುತ್ತಿರುವುದಾಗಿ ಚೀನಾ ಹೇಳಿದೆ.
ಉಯಿಘರ್ ಗಳು ಯಾರು?
ಉಯಿಘರ್ ಗಳು ಚೀನಾದ ವಾಯುವ್ಯ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ. ಅವರು ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟಿದ್ದಾರೆ.
- ಚೀನಾಕ್ಕಿಂತ ಟರ್ಕಿ ಮತ್ತು ಮಧ್ಯ ಏಷ್ಯಾದ ಇತರ ದೇಶಗಳೊಂದಿಗೆ ಉಯಿಘರ್ ಗಳು ಹೆಚ್ಚು ನಿಕಟವಾದ ಜನಾಂಗೀಯ ಸಂಬಂಧವನ್ನು ಹೊಂದಿದ್ದಾರೆ.
- ಉಯಿಘರ್ ಸಮುದಾಯವು ತಮ್ಮದೇ ಆದ ಭಾಷೆಯನ್ನು ಟರ್ಕಿಶ್ ಭಾಷೆಯೊಂದಿಗೆ ನಿಕಟವಾಗಿ ಮಾತನಾಡುತ್ತಾರೆ ಮತ್ತು ತಮ್ಮನ್ನು ಸಾಂಸ್ಕೃತಿಕವಾಗಿ ಮತ್ತು ಜನಾಂಗೀಯವಾಗಿ ಮಧ್ಯ ಏಷ್ಯಾದ ದೇಶಗಳಿಗೆ ಹತ್ತಿರವೆಂದು ಪರಿಗಣಿಸುತ್ತಾರೆ.
- ಚೀನಾ ಈ ಸಮುದಾಯವನ್ನು ಕೇವಲ ಪ್ರಾದೇಶಿಕ ಅಲ್ಪಸಂಖ್ಯಾತರೆಂದು ಗುರುತಿಸುತ್ತದೆ ಮತ್ತು ಅವರನ್ನು ದೇಶದ ಮೂಲನಿವಾಸಿಗಳು ಅಥವಾ ಸ್ಥಳೀಯ ಗುಂಪು ಎಂದು ಪರಿಗಣಿಸಲು ನಿರಾಕರಿಸುತ್ತದೆ.
- ಪ್ರಸ್ತುತ, ಉಯಿಘರ್ ಜನಾಂಗೀಯ ಸಮುದಾಯದ ಅತಿದೊಡ್ಡ ಜನಸಂಖ್ಯೆಯು ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ವಾಸಿಸುತ್ತಿದೆ.
- ನೆರೆಯ ಮಧ್ಯ ಏಷ್ಯಾದ ದೇಶಗಳಾದ ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಕಜಾಕಸ್ಥಾನ್ ಗಳಲ್ಲೂ ಉಯಿಘರ್ ಗಳು ಹೆಚ್ಚಿನ ಜನಸಂಖ್ಯೆ ಕಂಡುಬರುತ್ತಾರೆ.
ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಕಿರುಕುಳ, ಬಲವಂತದ ಬಂಧನ, ತೀವ್ರ ತನಿಖೆ, ಕಣ್ಗಾವಲು ಮತ್ತು ಗುಲಾಮಗಿರಿಯಂತಹ ಸುಳ್ಳು ಆರೋಪಗಳ ಅಡಿಯಲ್ಲಿ ಉಯಿಗರ್ ಮುಸ್ಲಿಮರನ್ನು ದಶಕಗಳಿಂದ ಚೀನಾದ ಸರ್ಕಾರವು ನಿಂದಿಸುತ್ತಿದೆ.
ಚೀನಾ ಉಯಿಘರ್ ಗಳನ್ನು ಏಕೆ ಗುರಿಯಾಗಿಸಿಕೊಂಡಿದೆ?
ಕ್ಸಿನ್‌ಜಿಯಾಂಗ್ ತಾಂತ್ರಿಕವಾಗಿ ಚೀನಾದ ಸ್ವಾಯತ್ತ ಪ್ರದೇಶವಾಗಿದೆ. ಕ್ಸಿನ್‌ಜಿಯಾಂಗ್ ಚೀನಾದ ಅತಿದೊಡ್ಡ ಪ್ರದೇಶವಾಗಿದೆ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಈ ಪ್ರಾಂತ್ಯವು ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಎಂಟು ದೇಶಗಳೊಂದಿಗೆ ಗಡಿ ಹಂಚಿಕೊಡಿದೆ.
- ಕಳೆದ ಕೆಲವು ದಶಕಗಳಲ್ಲಿ, ಕ್ಸಿನ್‌ಜಿಯಾಂಗ್ ಪ್ರಾಂತ್ಯವು ಆರ್ಥಿಕವಾಗಿ ಸಮೃದ್ಧವಾಗಿದೆ, ಹೆಚ್ಚಿನ ಸಂಖ್ಯೆಯ ‘ಹಾನ್ ಚೈನೀಸ್’ (Han Chinese) ಸಮುದಾಯವು ಈ ಪ್ರದೇಶದಲ್ಲಿ ನೆಲೆಸಿದೆ ಮತ್ತು ಉತ್ತಮ ಉದ್ಯೋಗಗಳನ್ನು ಹೊಂದಿದೆ. ಹಾನ್ ಚೈನೀಸ್ ಉಯಿಘರ್ ಗಳಿಗೆ ಜೀವನೋಪಾಯ ಮತ್ತು ಗುರುತಿನ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ.
- ಈ ಕಾರಣಗಳಿಗಾಗಿ, ವಿರಳ ಹಿಂಸಾಚಾರ ಸಂಭವಿಸಿತು ಮತ್ತು 2009 ರಲ್ಲಿ, ಕ್ಸಿನ್‌ಜಿಯಾಂಗ್ ಪ್ರಾಂತ್ಯದ ರಾಜಧಾನಿ ಉರುಮ್ಕಿಯಲ್ಲಿ 200 ಜನರು ಹೆಚ್ಚಾಗಿ ಹಾನ್ ಚೈನೀಸ್ ಕೊಲ್ಲಲ್ಪಟ್ಟರು, ಅಂದಿನಿಂದ ಇನ್ನೂ ಅನೇಕ ಹಿಂಸಾತ್ಮಕ ಘಟನೆಗಳು ನಡೆದಿವೆ.
- ಬೀಜಿಂಗ್, ಈ ಸಮುದಾಯವು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ಬಯಸಿದೆ ಮತ್ತು ಟರ್ಕಿ ಮತ್ತು ಇತರ ಮಧ್ಯ ಏಷ್ಯಾದ ದೇಶಗಳೊಂದಿಗಿನ ಉಯ್ಘರ್‌ಗಳ ಸಾಂಸ್ಕೃತಿಕ ಸಂಪರ್ಕದಿಂದಾಗಿ, ಪಾಕಿಸ್ತಾನದಂತಹ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಅಂಶಗಳು ಕ್ಸಿನ್‌ಜಿಯಾಂಗ್‌ನಲ್ಲಿನ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸ ಬಹುದೆಂದು ಭಯಪಡುತ್ತಿದೆ.
- ಆದ್ದರಿಂದ, ಇಡೀ ಸಮುದಾಯವನ್ನು ಅನುಮಾನಾಸ್ಪದವೆಂದು ಪರಿಗಣಿಸಲು ಮತ್ತು ಉಯಿಘರ್ ಗಳ ಪ್ರತ್ಯೇಕ ಗುರುತನ್ನು ತೊಡೆದುಹಾಕಲು ವ್ಯವಸ್ಥಿತ ಯೋಜನೆಯನ್ನು ಪ್ರಾರಂಭಿಸುವುದು ಚೀನಾದ ನೀತಿಯಾಗಿದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ:
(James Webb Space Telescope)
ಸಂದರ್ಭ:
ಇತ್ತೀಚೆಗೆ, ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ NASA ಡಿಸೆಂಬರ್ 24 ರಂದು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (James Webb Space Telescope – JWST) ವನ್ನು ಉಡಾವಣೆ ಮಾಡುವುದಾಗಿ ಘೋಷಿಸಿದೆ.
- ಪ್ರಪಂಚದ ಪ್ರಮುಖ ಬಾಹ್ಯಾಕಾಶ ವಿಜ್ಞಾನ ವೀಕ್ಷಣಾಲಯವಾದ JWST, ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ನಾಸಾದ ಪ್ರಮುಖ ದೂರದರ್ಶಕವಾದ ಹಬಲ್ ಬಾಹ್ಯಾಕಾಶ ದೂರದರ್ಶಕದ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿದೆ.
ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST) ಬಗ್ಗೆ:
ಜೆಡಬ್ಲ್ಯೂಎಸ್ಟಿ (JWST) ಯು ಅಮೆರಿಕನ್ ಸ್ಪೇಸ್ ಏಜೆನ್ಸಿ (NASA), ಯುರೋಪಿಯನ್ ಸ್ಪೇಸ್ ಏಜೆನ್ಸಿ (European Space Agency) ಮತ್ತು ಕೆನಡಿಯನ್ ಸ್ಪೇಸ್ ಏಜೆನ್ಸಿ (Canadian Space Agency) ಗಳ ಜಂಟಿ ಉಪಕ್ರಮವಾಗಿದೆ.
- ‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಬಾಹ್ಯಾಕಾಶದಲ್ಲಿ ಪರಿಭ್ರಮಿಸುತ್ತಿರುವ ಅವೆಗೆಂಪು ವೀಕ್ಷಣಾಲಯ(Infrared Observatory) ವಾಗಿದ್ದು, ದೀರ್ಘವಾದ ತರಂಗಾಂತರ ವ್ಯಾಪ್ತಿ ಮತ್ತು ಉತ್ತಮವಾದ ಸೂಕ್ಷ್ಮತೆಯನ್ನು ಹೊಂದಿದೆ, ಇದು ‘ಹಬಲ್ ಸ್ಪೇಸ್ ಟೆಲಿಸ್ಕೋಪ್’ (Hubble Space Telescope) ಮತ್ತು ಅದರ ಸಂಶೋಧನೆಗಳನ್ನು ಬೆಂಬಲಿಸುತ್ತದೆ.
- ಮೊದಲು, ಜೆಡಬ್ಲ್ಯೂಎಸ್‌ಟಿ (JWST)ಯನ್ನು ಎನ್‌ಜಿಎಸ್‌ಟಿ (New Generation Space Telescope – NGST) ಎಂದು ಕರೆಯಲಾಗುತ್ತಿತ್ತು, ನಂತರ 2002 ರಲ್ಲಿ ಇದನ್ನು ಹಿಂದಿನ ನಾಸಾ ಆಡಳಿತಾಧಿಕಾರಿ ‘ಜೇಮ್ಸ್ ವೆಬ್’ ಎಂದು ಮರುನಾಮಕರಣ ಮಾಡಲಾಯಿತು.
- ಇದು 6.5 ಮೀ ಪ್ರಾಥಮಿಕ ದರ್ಪಣವನ್ನು ಹೊಂದಿರುವ ದೊಡ್ಡ ಅತಿಗೆಂಪು ದೂರದರ್ಶಕವಾಗಿರುತ್ತದೆ.
ಟೆಲಿಸ್ಕೋಪ್ ನ ಉದ್ದೇಶ ಮತ್ತು ಕಾರ್ಯಗಳು:
‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ (JWST) ಅನ್ನು ಬಿಗ್ ಬ್ಯಾಂಗ್ ನಂತರ ರೂಪುಗೊಂಡ ಮೊದಲ ನಕ್ಷತ್ರಗಳು ಮತ್ತು ಗೆಲಕ್ಸಿಗಳನ್ನು ಪತ್ತೆಹಚ್ಚಲು ಮತ್ತು ನಕ್ಷತ್ರಗಳ ಸುತ್ತಲಿನ ಗ್ರಹಗಳ ಪರಿಸರವನ್ನು ಅಧ್ಯಯನ ಮಾಡಲು ನಿರ್ಮಿಸಲಾಗಿದೆ.
- ಈ ದೂರದರ್ಶಕವು ಬ್ರಹ್ಮಾಂಡದ ಆಳವಾದ ಅವಲೋಕನಗಳನ್ನು ಮಾಡುತ್ತದೆ ಮತ್ತು ‘ಹಬಲ್ ಬಾಹ್ಯಾಕಾಶ ದೂರದರ್ಶಕ’ದೊಂದಿಗೆ ಕೆಲಸ ಮಾಡುತ್ತದೆ.
- ಟೆಲಿಸ್ಕೋಪ್ 22 ಮೀಟರ್ (ಟೆನಿಸ್ ಕೋರ್ಟ್ ಗಾತ್ರದ) ಸೋಲಾರ್ ಶೀಲ್ಡ್ / ಸೌರ-ಸುರಕ್ಷಾ ಕವಚ (Sunshield)ಮತ್ತು 6.5 ಮೀಟರ್ ಅಗಲದ ದರ್ಪಣ ಮತ್ತು ಇನ್ಫ್ರಾರೆಡ್ ಸಾಮರ್ಥ್ಯಗಳನ್ನು ಹೊಂದಿರುವ ಉಪಕರಣಗಳನ್ನು ಹೊಂದಿರುತ್ತದೆ.
- ಬ್ರಹ್ಮಾಂಡದ ಈ ‘ಸೆಟ-ಅಪ್’5 ಬಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಬಿಗ್ ಬ್ಯಾಂಗ್ ಘಟನೆಯ ಪರಿಣಾಮವಾಗಿ ರೂಪುಗೊಂಡ ಮೊದಲ ಗೆಲಕ್ಸಿಗಳನ್ನು ನೋಡಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಆಶಿಸಿದ್ದಾರೆ.
ಕಕ್ಷೀಯ ಪರಿಭ್ರಮಣೆ:
- ಹಬಲ್ ಬಾಹ್ಯಾಕಾಶ ದೂರದರ್ಶಕವು ಸುಮಾರು 570 ಕಿಮೀ ಎತ್ತರದಲ್ಲಿ ಭೂಮಿಯ ಸುತ್ತ ಸುತ್ತುತ್ತದೆ.
- ‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ವಾಸ್ತವವಾಗಿ ಭೂಮಿಯನ್ನು ಸುತ್ತುವುದಿಲ್ಲ, ಬದಲಾಗಿ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಭೂಮಿ-ಸೂರ್ಯ ಲಾಗ್ ರೇಂಜ್ (Earth-Sun Lagrange Point 2) ಪಾಯಿಂಟ್ 2 ರಲ್ಲಿ ಸ್ಥಾಪಿತ ಗೊಳ್ಳುತ್ತದೆ.
- ಲಾಗ್ರೇಂಜ್ ಪಾಯಿಂಟ್ 2 (L2) ನಲ್ಲಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ನ ಸೋಲಾರ್ ಶೀಲ್ಡ್ ಸೂರ್ಯ, ಭೂಮಿ ಮತ್ತು ಚಂದ್ರನಿಂದ ಬರುವ ಬೆಳಕನ್ನು ತಡೆಯುತ್ತದೆ,ಇದು ಟೆಲಿಸ್ಕೋಪ್ ತಂಪಾಗಿರಲು ಸಹಾಯ ಮಾಡುತ್ತದೆ. ಯಾವುದೇ ‘ಅತಿಗೆಂಪು ದೂರದರ್ಶಕ’ಕ್ಕೆ ತಂಪಾಗಿರುವುದು ಬಹಳ ಮುಖ್ಯ.
ದಯವಿಟ್ಟು ಗಮನಿಸಿ:
ಜೇಮ್ಸ್ ವೆಬ್ ದೂರದರ್ಶಕ ಬಾಹ್ಯಾಕಾಶಕ್ಕೆ ಭೂತಕನ್ನಡಿ:
ವಿಶ್ವದ ಈವರೆಗಿನ ಅತ್ಯಂತ ದೊಡ್ಡ ದೂರದರ್ಶಕ, ‘ಜೇಮ್ಸ್ ವೆಬ್’ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಅಂತಿಮ ಹಂತದ ಸಿದ್ಧತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇದೇ 22ರಂದು (ಪರಿಷ್ಕೃತ ಡಿಸೆಂಬರ್ 24) ಈ ದೂರದರ್ಶಕವನ್ನು ಹೊತ್ತ ಏರಿಯನ್–5 ನೌಕೆಯು ಬಾಹ್ಯಾಕಾಶದತ್ತ ಪ್ರಯಾಣ ಅರಂಭಿಸಲಿದೆ.
ಜೇಮ್ಸ್ ವೆಬ್ ದೂರದರ್ಶಕವು ಕಕ್ಷೆ ಸೇರಿ, ತನ್ನ ಫಲಕಗಳನ್ನು ಅರಳಿಸಿ, ನಮ್ಮ ಸೌರಮಂಡಲದಾಚೆಗೆ ತನ್ನ ದರ್ಪಣಗಳನ್ನು ತೆರೆದುಕೊಂಡು ನಿಲ್ಲಲಿದೆ. ನಾವು ಬಾಹ್ಯಾಕಾಶವನ್ನು ನೋಡುವ ಬಗೆಯನ್ನೇ ಬದಲಿಸುವಂತಹ ವಿಚಾರಗಳನ್ನು ಈ ದೂರದರ್ಶಕವು ಭೂಮಿಗೆ ಕಳುಹಿಸಿ ಕೊಡಲಿದೆ. ಜಗತ್ತು ಹೇಗಿತ್ತು ಎಂಬುದನ್ನು ದೂರದರ್ಶಕಗಳು ತೋರಿಸುತ್ತವೆಯೇ ಹೊರತು, ಈಗ ಹೇಗಿದೆ ಎಂಬುದನ್ನಲ್ಲ. ಹೀಗಾಗಿ ನಮ್ಮ ವಿಶ್ವದ ಇತಿಹಾಸವನ್ನು ಈ ಹಿಂದೆ ನೋಡಿರದೇ ಇರುವ ರೀತಿಯಲ್ಲಿ ನೋಡಲು ಈ ದೂರದರ್ಶಕವು ಅನುವು ಮಾಡಿಕೊಡುತ್ತದೆ. ನಾವು ಈವರೆಗೆ ನೋಡಿರುವ ಗೆಲಾಕ್ಸಿಗಳಿಗಿಂತಲೂ ಬಹುದೂರವಿರುವ ಗೆಲಾಕ್ಸಿಗಳನ್ನು ಈ ದೂರದರ್ಶಕವು ನಮಗೆ ತೋರಿಸುತ್ತದೆ’ ಎಂದು ನಾಸಾ ವಿವರಿಸಿದೆ.
ಈಗಿನ ಅತ್ಯಂತ ದೊಡ್ಡ ದೂರದರ್ಶಕ ಎನಿಸಿರುವ ಹಬಲ್ ದೂರದರ್ಶಕಕ್ಕಿಂತ ಹಲವು ಪಟ್ಟು ದೂರದಲ್ಲಿನ ಅರ್ಥಾತ್ ಹಿಂದಿನ ಬಾಹ್ಯಾಕಾಶ ವಿದ್ಯಮಾನಗಳನ್ನು ಅಥವಾ ವಿಶ್ವದ ಭೂತಕಾಲದ ವಿದ್ಯಮಾನಗಳನ್ನು ಜೇಮ್ಸ್ ವೆಬ್ ನಮ್ಮ ಎದುರು ತೆರೆದಿಡಲಿದೆ. ವಿಶ್ವವು ಹೇಗೆ ಉಗಮವಾಯಿತು ಎಂಬುದನ್ನು ಅರಿತುಕೊಳ್ಳುವಲ್ಲಿ, ಮನುಷ್ಯನನ್ನು ಮತ್ತಷ್ಟು ಮುಂದಕ್ಕೆ (ಇತಿಹಾಸದಲ್ಲಿ ಹಿಂದಕ್ಕೆ) ಕರೆದುಕೊಂಡು ಹೋಗುವ ಸಾಮರ್ಥ್ಯ ಈ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕಕ್ಕೆ ಇದೆ.
ಭೂಮಿಯ ನೆರಳಿನಲ್ಲಿ ಸೂರ್ಯನ ಸುತ್ತುವ ವೆಬ್
ಜೇಮ್ಸ್ ವೆಬ್ ದೂರದರ್ಶಕವನ್ನು ಭೂಮಿಯ ಕಕ್ಷೆಯಾಚೆಗಿನ ‘ಲ್ಯಾಂಗ್ರೇಜ್ ಪಾಯಿಂಟ್’ನಲ್ಲಿ ಇರಿಸಲಾಗುತ್ತದೆ. ಜೇಮ್ಸ್ ವೆಬ್ ಸದಾ ಭೂಮಿಯ ನೆರಳಿನಲ್ಲಿ ಇರುತ್ತದೆ. ಈ ದೂರದರ್ಶಕದ ಚಲನೆ ವೇಳೆ ಬೇಕಾಗುವ ಶಕ್ತಿಯನ್ನು ಕಡಿಮೆ ಮಾಡಲು ಲ್ಯಾಂಗ್ರೇಜ್ ಪಾಯಿಂಟ್‌ನಲ್ಲಿ ಇರಿಸಲಾಗುತ್ತದೆ. ಸೂರ್ಯನನ್ನು ಭೂಮಿ ಸುತ್ತುತ್ತದೆ. ಹೀಗೆ ಸುತ್ತುವಾಗ ಭೂಮಿಯ ಹಿಂದೆ, ಸುರಕ್ಷಿತ ಅಂತರದಲ್ಲಿ ಈ ದೂರದರ್ಶಕವೂ ಸೂರ್ಯನನ್ನು ಸುತ್ತುವಂತೆ ಸಂಯೋಜನೆ ಮಾಡಲಾಗಿರುತ್ತದೆ. ಈ ಸಂಯೋಜನೆಯನ್ನೇ ಲ್ಯಾಂಗ್ರೇಜ್ ಪಾಯಿಂಟ್ ಎನ್ನಲಾಗುತ್ತದೆ.
ಈ ಸಂಯೋಜನೆಯಲ್ಲಿ ಸೂರ್ಯ ಮತ್ತು ದೂರದರ್ಶಕದ ನಡುವೆ ಭೂಮಿ ಇರುತ್ತದೆ. ಸೂರ್ಯ, ಭೂಮಿ ಮತ್ತು ದೂರದರ್ಶಕವು ಒಂದೇ ಸರಳರೇಖೆಯಲ್ಲಿ ಇರುತ್ತವೆ. ಈ ಸಂಯೋಜನೆಯಲ್ಲಿ ಭೂಮಿಯ ನೆರಳಿನ ಪ್ರದೇಶದಲ್ಲಿ ಸೂರ್ಯನ ಗುರುತ್ವ ಬಲ ಸ್ವಲ್ಪ ಕಡಿಮೆ ಇರುತ್ತದೆ. ಹೀಗಾಗಿ ಸೂರ್ಯನ ಗುರುತ್ವ ಬಲವನ್ನು ತಪ್ಪಿಸಿಕೊಂಡು, ಸೂರ್ಯನನ್ನು ಸುತ್ತಲು ಈ ದೂರದರ್ಶಕವು ಹೆಚ್ಚಿನ ಶಕ್ತಿ ವ್ಯಯ ಮಾಡಬೇಕಾಗುವುದಿಲ್ಲ. ಈ ಕಾರಣದಿಂದ ಲ್ಯಾಂಗ್ರೇಜ್ ಪಾಯಿಂಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ವೆಬ್ ದೂರದರ್ಶಕವನ್ನು ಸೂರ್ಯನಿಗೆ ಬೆನ್ನುಮಾಡಿ ಇರುವಂತೆ ಸಂಯೋಜನೆ ಮಾಡಲಾಗುತ್ತದೆ. ನಮ್ಮ ಸರಮಂಡಲ ಆಚೆಗಿನ ವಿಶ್ವವನ್ನು ವೀಕ್ಷಿಸಬೇಕಿರುವ ಕಾರಣ, ದೂರದರ್ಶಕವನ್ನು ಸೂರ್ಯನಿಗೆ ಬೆನ್ನುಮಾಡಿ ಇರಿಸಲಾಗುತ್ತದೆ. ದೂರದರ್ಶಕದ ದರ್ಪಣಗಳು ನಮ್ಮ ಸೌರಮಮಂಡಲದಾಚೆ ಮುಖಮಾಡಿರುತ್ತವೆ.
ಈ ದೂರದರ್ಶಕವು ಇನ್ಫ್ರಾರೆಡ್ ಕಿರಣಗಳನ್ನು ಗ್ರಹಿಸಿ, ಪರಿವೀಕ್ಷಣೆ ಕೆಲಸ ಮಾಡುತ್ತದೆ. ಸೂರ್ಯನ ಬೆಳಕು ದೂರದರ್ಶಕದ ಬೆನ್ನಿನ ಮೇಲೆ ನೇರವಾಗಿ ಬಿದ್ದರೆ, ಅತ್ಯಂತ ಸೂಕ್ಷ್ಮ ಇನ್ಫ್ರಾರೆಡ್ ಕಿರಣಗಳನ್ನು ಗ್ರಹಿಸುವುದು ಕಷ್ಟವಾಗುತ್ತದೆ. ದೂರದರ್ಶಕವು ಸದಾ ಭೂಮಿಯ ನೆರಳಿನಲ್ಲಿ ಇರುವಂತೆ ಸಂಯೋಜನೆ ಮಾಡಿರುವುದಕ್ಕೆ ಸೂರ್ಯನ ಬೆಳಕು ನೇರವಾಗಿ ದೂರದರ್ಶಕದ ಮೇಲೆ ಬೀಳುವುದನ್ನು ತಪ್ಪಿಸುವ ಉದ್ದೇಶವೂ ಇದೆ.
ಬಾಹ್ಯಾಕಾಶಕ್ಕೆ ಅತಿದೊಡ್ಡ ದರ್ಪಣ
ಜೇಮ್ಸ್ ವೆಬ್ ದೂರದರ್ಶಕವನ್ನು ಬಿಚ್ಚಿದರೆ, ಒಂದು ಟೆನ್ನಿಸ್ ಮೈದಾನದಷ್ಟು ವಿಸ್ತಾರವಾಗಿ ಕಾಣುತ್ತದೆ. ಆದರೆ ಇದೇ ಗಾತ್ರದಲ್ಲಿ ಉಡಾವಣೆ ಮಾಡುವ ಯಾವುದೇ ರಾಕೆಟ್‌ಗಳು ಸದ್ಯಕ್ಕೆ ಲಭ್ಯವಿಲ್ಲ. ಈ ದೂರದರ್ಶಕವನ್ನು ‘ಏರಿಯನ್ 5’ ಎಂಬ ರಾಕೆಟ್‌ನ ಒಳಗೆ ಮಡಚಿಟ್ಟು ಉಡಾವಣೆ ಮಾಡಿ, ಬಾಹ್ಯಾಕಾಶದಲ್ಲಿ ಹಂತಹಂತವಾಗಿ ಅದು ಬಿಚ್ಚಿಕೊಳ್ಳುವಂತೆ ಯೋಜಿಸಲಾಗಿದೆ.
ಸೂರ್ಯಶಾಖದಿಂದ ರಕ್ಷಣೆ ನೀಡುವ ‘ಸನ್‌ಶೀಲ್ಡ್’ ಈ ದೂರದರ್ಶಕದ ಪ್ರಮುಖ ಅಂಗ. ಇದರ ಪ್ರಮುಖ ದರ್ಪಣವು 270 ಚದರ ಅಡಿ ವಿಸ್ತೀರ್ಣದ್ದು. ಇದನ್ನು ರಾಕೆಟ್‌ನಲ್ಲಿ ಕೂರಿಸಲು ಆಗದು. ಹೀಗಾಗಿ ಇದನ್ನು 18 ಷಡ್ಭುಜದ ಚಿಕ್ಕ ಭಾಗಗಳಾಗಿ ವಿಭಾಗಿಸಲಾಗಿದೆ. ಉಡಾವಣೆ ಬಳಿಕ ಈ ಎಲ್ಲವೂ ಕೂಡಿಕೊಂಡು ಒಂದೇ ದರ್ಪಣವಾಗಿ ಕೆಲಸ ಮಾಡಲಿವೆ. ಇದು ಬಾಹ್ಯಾಕಾಶಕ್ಕೆ ಕಳುಹಿಸುತ್ತಿರುವ ಅತಿದೊಡ್ಡ ದರ್ಪಣ ಎನಿಸಿದೆ. ಎರಡನೇ ದರ್ಪಣವು 2.4 ಅಡಿ ವ್ಯಾಸ ಹೊಂದಿದೆ.
ಅತ್ಯಾಧುನಿಕ ಉಪಕರಣಗಳ ಸಂಗ್ರಹ
ಈವರೆಗೆ ತಯಾರಿಸದ ಅತ್ಯಾಧುನಿಕ ದೂರದರ್ಶಕವನ್ನು ವಿನ್ಯಾಸಗೊಳಿಸುವುದು ವಿಜ್ಞಾನಿಗಳ ಉದ್ದೇಶವಾಗಿತ್ತು. ಅತ್ಯಂತ ಕಡಿಮೆ ತಂಪು ವಾತಾವರಣದಲ್ಲಿ ಕೆಲಸ ಮಾಡಬಲ್ಲ, ಹಗುರವಾದ ರಚನೆ ಇದಾಗಿದ್ದು, ಅತಿಸೂಕ್ಷ್ಮ ಇನ್‌ಫ್ರಾರೆಡ್ ಬೆಳಕನ್ನು ಪತ್ತೆಹಚ್ಚುವ ಉಪಕರಣಗಳನ್ನು ಅಳವಡಿಸಲಾಗಿದೆ. ಸನ್‌ಶೀಲ್ಡ್ ಐದು ಪದರಗಳನ್ನು ಹೊಂದಿದ್ದು, ಪ್ರತಿಯೊಂದು ಪದರವೂ ಭಿನ್ನ ಗಾತ್ರ ಹೊಂದಿವೆ. ಬಿಸಿಲು ಅಥವಾ ಬೆಳಕು ನೇರವಾಗಿ ತಲುಪದಂತೆ ತಡೆಯುವುದು ಇದರ ಉದ್ದೇಶ. ದೂರದರ್ಶಕದ ಒಂದು ಬದಿ ಅತಿ ತಂಪಾಗಿದ್ದರೆ, ಮತ್ತೊಂದು ಬದಿ ಅತಿ ಬಿಸಿಯಿರುತ್ತದೆ. ಈ ಎರಡೂ ಸ್ಥಿತಿಗಳನ್ನು ನಿರ್ವಹಿಸಲು ಐದು ಪದರಗಳ ವಿನ್ಯಾಸ ಮಾಡಲಾಗಿದೆ.
ಮನುಷ್ಯನ ಕೂದಲಿನಷ್ಟು ದಪ್ಪ ಗಾತ್ರದ, ಸಾವಿರಾರು ಕಿಂಡಿಗಳಿಂದ ಕೂಡಿರುವ ‘ಮೈಕ್ರೊಷಟರ್’ ಎಂಬ ಉಪಕರಣವು ಏಕಕಾಲದಲ್ಲಿ ಸಾವಿರಾರು ಕಣಗಳ/ವಸ್ತುಗಳ ತರಂಗಾಂತರ ಮತ್ತು ಆವರ್ತನಗಳನ್ನು ಮಾಪನ ಮಾಡುತ್ತದೆ. ‘ಕ್ರಯೊಕೂಲರ್’ ಎಂಬ ಮತ್ತೊಂದು ಉಪಕರಣವು ಇನ್‌ಫ್ರಾರೆಡ್ ಬೆಳಕು ಪತ್ತೆಚ್ಚುವ ಸಾಧನಗಳನ್ನು ನಿರಂತರವಾಗಿ ತಂಪುಗೊಳಿಸುತ್ತದೆ.
ಸಾವಿರಾರು ಮೈಲಿ ದೂರದ ಪಯಣ
ಉಡಾವಣೆಗೊಂಡ ಬಳಿಕ ಸಾವಿರಾರು ಮೈಲಿ ಪ್ರಯಾಣ ಮಾಡಿ, ‘ಎಲ್2’ ಎಂಬ ನಿಗದಿತ ಕಕ್ಷೆಯನ್ನು ದೂರದರ್ಶಕ ತಲುಪಬೇಕಿದೆ. ಈ ಹಾದಿಯಲ್ಲಿ ಹಲವು ಪ್ರಕ್ರಿಯೆಗಳು ಜರುಗಲು ಕೆಲವು ವಾರಗಳೇ ಬೇಕು. ವೈಜ್ಞಾನಿಕ ಉಪಕರಣಗಳ ಕಾರ್ಯಾಚರಣೆ ಆರಂಭವಾಗುವುದಕ್ಕೂ ಮುನ್ನ ಅದನ್ನು ಮೈನಸ್ 380 ಡಿಗ್ರಿ ಫ್ಯಾರನ್‌ಹೀಟ್‌ಗೆ ತಣಿಸುವುದು ಮುಖ್ಯವಾದ ಕೆಲಸ. ಮುಖ್ಯ ದರ್ಪಣವು ಬಿಚ್ಚಿಕೊಂಡು, ಅದರ 18 ಭಾಗಗಳು ಏಕ ದರ್ಪಣವಾಗಿ ಸಂಯೋಜನೆಗೊಂಡು ಕೆಲಸ ಮಾಡುವಂತೆ ಸಿದ್ಧಪಡಿಸಬೇಕು. ರಾಕೆಟ್ ಉಡಾವಣೆಯಾದ ಬಳಿಕ, ದೂರದರ್ಶಕವು ಕಾರ್ಯಾಚರಣೆ ಆರಂಭಿಸಲು ಆರು ತಿಂಗಳು ಬೇಕು.
ಕಾರ್ಯಾಚರಣೆ ಹೇಗೆ?
ದೂರದರ್ಶಕದಲ್ಲಿ ಅಳವಡಿಸಿರುವ ವಿವಿಧ ಕ್ಯಾಮರಾ ಕಣ್ಣುಗಳು ಇನ್‌ಫ್ರಾರೆಡ್ ಬೆಳಕಿನ ಕಿರಣಗಳನ್ನು ಚಿತ್ರ ಸೆರೆಹಿಡಿಯುತ್ತವೆ. ಅಧ್ಯಯನಕ್ಕಾಗಿ, ಸ್ಪೆಕ್ಟ್ರೋಗ್ರಾಫ್ ಮೂಲಕ ಈ ಬೆಳಕನ್ನು ವಿವಿಧ ಬಣ್ಣಗಳಾಗಿ ವಿಭಾಗಿಸಲಾಗುತ್ತದೆ. ಈ ಇನ್‌ಫ್ರಾರೆಡ್ ಬೆಳಕಿನ ಕಿರಣವನ್ನು ಆಧರಿಸಿ, ಸಮೀಪದ ಆಕಾಶಕಾಯಗಳ ಉಗಮದ ಅಧ್ಯಯನ ಮಾಡಲಾಗುತ್ತದೆ.
ಜೇಮ್ಸ್ ವೆಬ್ ಯಾರು?
ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಮಾಜಿ ಆಡಳಿತಾಧಿಕಾರಿ ಜೇಮ್ಸ್ ವೆಬ್ ಅವರ ಹೆಸರನ್ನು ಅವರ ಗೌರವಾರ್ಥವಾಗಿ ಈ ಬೃಹತ್ ದೂರದರ್ಶಕಕ್ಕೆ ಇರಿಸಲಾಗಿದೆ. ಅಪೋಲೊ ನೌಕೆ ಉಡಾವಣೆ ಹಾಗೂ ಕಾರ್ಯಾಚರಣೆಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.
ಯಶಸ್ವಿ ದೂರದರ್ಶಕ ‘ಹಬಲ್’:
1990ರಲ್ಲಿ ನಾಸಾ ಉಡ್ಡಯನ ಮಾಡಿದ್ದ ‘ಹಬಲ್’ ದೂರದರ್ಶಕವು ಬಾಹ್ಯಾಕಾಶದ ಬಗ್ಗೆ ಇದ್ದ ಜ್ಞಾನವನ್ನು ಇನ್ನಷ್ಟು ವಿಸ್ತರಿಸಿತು. ಸೌರ ವ್ಯವಸ್ಥೆ, ಧೂಮಕೇತು ಹಾಗೂ ಗ್ರಹಗಳ ಬಗ್ಗೆ ಅರಿಯಲು ವಿಜ್ಞಾನಿಗಳಿಗೆ ನೆರವಾಯಿತು. ಗ್ರಹಗಳು ಹಾಗೂ ಗ್ಯಾಲಕ್ಸಿ ಹುಟ್ಟಿದ್ದು ಹೇಗೆ ಎಂದು ತಿಳಿದುಕೊಳ್ಳುವಲ್ಲಿ ನೆರವಾಯಿತು. ಕೋಟ್ಯಂತರ ನಕ್ಷತ್ರಗಳನ್ನು ಹೊಂದಿರುವ, ಅಲ್ಲಿವರೆಗೆ ಕಾಣಿಸದಿದ್ದ ಗ್ಯಾಲಕ್ಸಿಗಳ ಚಿತ್ರಗಳನ್ನು ಸೆರೆಹಿಡಿದು ಕಳುಹಿಸಿತು. ಹಬಲ್‌ನ ಚಿತ್ರಗಳನ್ನು ಆಧರಿಸಿಯೇ, ವಿಶ್ವವು 140 ಕೋಟಿ ವರ್ಷ ಹಳೆಯದು ಎಂದು ಅಂದಾಜು ಮಾಡಲು ಸಾಧ್ಯವಾಯಿತು.
ಪ್ಲುಟೊ ಆಕಾಶಕಾಯದ ಸುತ್ತಲಿದ್ದ ಉಪಗ್ರಹಗಳನ್ನು ಮೊದಲಿಗೆ ಗುರುತಿಸಿದ್ದು ಇದೇ ಹಬಲ್. ಕಪ್ಪುಕುಳಿಗಳನ್ನು ಹಬಲ್ ಪತ್ತೆಮಾಡಿತು. ಕಪ್ಪುಕುಳಿಗಳು ಬೆಳಕನ್ನೂ ಒಳಗೊಂಡಂತೆ, ತಮ್ಮ ಸುತ್ತಲಿನ ಎಲ್ಲವನ್ನೂ ಕಬಳಿಸುತ್ತವೆ ಎಂದು ಗೊತ್ತಾಯಿತು. ದೊಡ್ಡ ನಕ್ಷತ್ರಗಳು ಸ್ಫೋಟ ವಿದ್ಯಮಾನದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿತ್ತು. ಈ ಹಬಲ್‌ನ ಯಶಸ್ಸಿನ ಉತ್ತರಾಧಿಕಾರಿಯಾಗಿ ಜೇಮ್ಸ್ ವೆಬ್ ಕಾರ್ಯಾಚರಣೆಗೆ ಇಳಿಯಲು ಸಜ್ಜಾಗಿದೆ. ಹಬಲ್ ಅನ್ನು ಮೀರಿಸಿದ ಹೆಚ್ಚಿನ ಹೊಳಹುಗಳು ಸಿಗುವ ಭಾರಿ ನಿರೀಕ್ಷೆಯಿದೆ.
(ಕೃಪೆ; ಪ್ರಜಾವಾಣಿ)
ವಿಷಯಗಳು:ಮೂಲಸೌಕರ್ಯಗಳು -ವಿಮಾನಯಾನ.
ಉಡಾನ್ ಯೋಜನೆಯೊಳಗಿನ ಸಮಸ್ಯೆಗಳು:
(The problems within the UDAN scheme)
ಸಂದರ್ಭ:
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (Airports Authority of India – AAI) ವು ಇದುವರೆಗೆ ಉಡಾನ್ ಯೋಜನೆಯಡಿ 948 ವಿಮಾನ ಮಾರ್ಗಗಳಿಗೆ ಅನುಮೋದನೆ ನೀಡಿದ್ದು, ಈ ಪೈಕಿ 65 ವಿಮಾನ ನಿಲ್ದಾಣಗಳು ಮತ್ತು 8 ಹೆಲಿಪೋರ್ಟ್‌ಗಳನ್ನು ಸಂಪರ್ಕಿಸುವ 403 ಮಾರ್ಗಗಳಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ. ಆದಾಗ್ಯೂ,ಪ್ರಾರಂಭವಾದ ಕೆಲವು ವಿಮಾನ ಮಾರ್ಗಗಳು ಸ್ಥಗಿತಗೊಂಡಿವೆ.
- ಇದಕ್ಕೆ ಮುಖ್ಯ ಕಾರಣವೆಂದರೆ ಭೂಮಿಯ ಲಭ್ಯತೆಯ ಕೊರತೆಯಿಂದಾಗಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ, ವಿಮಾನಯಾನ ಸಂಸ್ಥೆಗಳು ಕಾರ್ಯಾಚರಿಸುತ್ತಿರುವ ಮಾರ್ಗಗಳು ಲಾಭದಾಯಕವಾಗಿಲ್ಲ ಮತ್ತು COVID-19 ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮಗಳು.
- ಅನೇಕ ಸಣ್ಣ, ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳ ಕಳಪೆ ಆರ್ಥಿಕ ಸ್ಥಿತಿಯು ಯೋಜನೆಗೆ ಒಂದು ಶಾಪವಾಗಿ ಪರಿಣಮಿಸಿದೆ.
ಉಡಾನ್ ಯೋಜನೆಯ ಬಗ್ಗೆ:
- ದೇಶದ ದೂರದ ಮತ್ತು ಪ್ರಾದೇಶಿಕ ಪ್ರದೇಶಗಳಿಗೆ ಸಂಪರ್ಕವನ್ನು ಹೆಚ್ಚಿಸುವುದು ಮತ್ತು ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
- ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿಯ ಪ್ರಮುಖ ಅಂಶವಾಗಿದೆ ಮತ್ತು ಇದನ್ನು ಜೂನ್ 2016 ರಲ್ಲಿ ಪ್ರಾರಂಭಿಸಲಾಯಿತು.
- ಬಳಕೆಯಾಗದ ಮತ್ತು ಕನಿಷ್ಠ ಬಳಕೆಯಾದ ವಿಮಾನ ನಿಲ್ದಾಣಗಳ ಪುನರುಜ್ಜೀವನದ ಮೂಲಕ II ಮತ್ತು III ನೇ ಹಂತದ ನಗರಗಳಿಗೆ ವಾಯು ಸಂಪರ್ಕವನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ, ಇದನ್ನು ‘ಪ್ರಾದೇಶಿಕ ಸಂಪರ್ಕ ಯೋಜನೆ (Regional Connectivity Scheme – RCS)’ ಎಂದೂ ಕರೆಯಲಾಗುತ್ತದೆ.
- ಈ ಯೋಜನೆಯಡಿಯಲ್ಲಿ, ಉಡಾನ್ ವಿಮಾನಗಳಲ್ಲಿನ ಅರ್ಧದಷ್ಟು ಆಸನಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ, ಮತ್ತು ಭಾಗವಹಿಸುವ ವಿಮಾನ ಸಂಸ್ಥೆಗಳಿಗೆ ನಿರ್ದಿಷ್ಟ ಪ್ರಮಾಣದ ‘ಕಾರ್ಯಸಾಧ್ಯತೆಯ ಅಂತರ ನಿಧಿ’ (viability gap funding- VGF) ಯನ್ನು ನೀಡಲಾಗುತ್ತದೆ, ಮತ್ತು ಇದು ಕೇಂದ್ರ ಮತ್ತು ಆಯಾ ರಾಜ್ಯಗಳ ನಡುವೆ ಹಂಚಿಕೆಯಾದ ಮೊತ್ತವಾಗಿದೆ.
- ಈ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹಣ ನೀಡಲಿವೆ.
- ಈ ಯೋಜನೆ 10 ವರ್ಷಗಳವರೆಗೆ ಮುಂದುವರಿಯುತ್ತದೆ ಮತ್ತು ನಂತರ ಅದನ್ನು ವಿಸ್ತರಿಸಬಹುದು.
ಯೋಜನೆಯ ಪ್ರಮುಖ ಅಂಶಗಳು:
- ಈ ಕಾರ್ಯಕ್ರಮದ ಅಡಿಯಲ್ಲಿ ಹರಾಜು ಪ್ರಕ್ರಿಯೆಯ ಮೂಲಕ ಕಾರ್ಯನಿರ್ವಹಿಸಲು ಏರ್‌ಲೈನ್‌ಗಳಿಗೆ ‘ಮಾರ್ಗಗಳನ್ನು’ ನೀಡಲಾಗುತ್ತದೆ ಮತ್ತು ಪ್ರತಿ ಗಂಟೆಗೆ ವಿಮಾನದ ಪ್ರಯಾಣ ದರವನ್ನು 2,500 ರೂ. ಎಂದು ದರ ನಿಗದಿ ಮಾಡಬೇಕು.
- ವಿಮಾನದಲ್ಲಿನ ಒಟ್ಟು ಸೀಟುಗಳ ಪೈಕಿ ಕನಿಷ್ಠ 50% ರಷ್ಟು ಸೀಟುಗಳನ್ನು ಕಡಿಮೆ ದರದಲ್ಲಿ ನೀಡಬೇಕು.
- ಕೈಗೆಟುಕುವ ದರಗಳನ್ನು ನೀಡಲು ವಿಮಾನಯಾನ ಸಂಸ್ಥೆಗಳನ್ನು ಸಕ್ರಿಯಗೊಳಿಸಲು, ಅವುಗಳಿಗೆ ಮೂರು ವರ್ಷಗಳ ಅವಧಿಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ.
- ಮೊದಲ ಮೂರು ವರ್ಷಗಳಲ್ಲಿ 50 ವಿಮಾನ ನಿಲ್ದಾಣಗಳ ಪುನಶ್ಚೇತನಕ್ಕಾಗಿ ಸರ್ಕಾರವು 4,500 ಕೋಟಿ ರೂ. ಗಳನ್ನು ತೆಗೆದಿರಿಸಿದೆ.
ಉಡಾನ್ 4.0:
- ಭಾರತದ ಈಶಾನ್ಯ ಪ್ರದೇಶಗಳು, ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪಗಳ ಮೇಲೆ ವಿಶೇಷ ಗಮನಹರಿಸಿ ನಾಲ್ಕನೇ ಸುತ್ತಿನ ಉಡಾನ್ (UDAN 4.0) ಯೋಜನೆಯನ್ನು ಡಿಸೆಂಬರ್ 2019 ರಲ್ಲಿ ಪ್ರಾರಂಭಿಸಲಾಯಿತು.
- ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಈಗಾಗಲೇ ಅಭಿವೃದ್ಧಿಪಡಿಸಿರುವ ವಿಮಾನ ನಿಲ್ದಾಣಗಳಿಗೆ ಯೋಜನೆಯಡಿ ಕಾರ್ಯಸಾಧ್ಯತೆ ಅಂತರ ನಿಧಿ (VGF) ನೀಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
- ಉಡಾನ್ 4.0 ಅಡಿಯಲ್ಲಿ, ಹೆಲಿಕಾಪ್ಟರ್ ಮತ್ತು ಸಮುದ್ರ-ವಿಮಾನ(seaplanes) ಕಾರ್ಯಾಚರಣೆಗಳನ್ನು ಸಹ ಸೇರಿಸಲಾಗಿದೆ.
ಸವಾಲುಗಳು:
- ಅನೇಕ ಸಣ್ಣ, ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳ ಕಳಪೆ ಆರ್ಥಿಕ ಸ್ಥಿತಿಯು ಯೋಜನೆಗೆ ಶಾಪವಾಗಿದೆ.
- ಯೋಜನೆಯಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರು ಒಂದು ಅಥವಾ ಎರಡಕ್ಕಿಂತ ಹೆಚ್ಚು ವಿಮಾನಗಳನ್ನು ಹೊಂದಿಲ್ಲ ಮತ್ತು ಸಾಮಾನ್ಯವಾಗಿ ಅವುಗಳ ನಿರ್ವಹಣೆ ಕಳಪೆ ಯಾಗಿರುತ್ತದೆ. ಈ ಚಿಕ್ಕ ಪಾಲುದಾರರಿಗೆ ಹೊಸ ವಿಮಾನವು ತುಂಬಾ ದುಬಾರಿಯಾಗಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಶಿರೋಮಣಿ ಅಕಾಲಿದಳ (SAD):
ಶಿರೋಮಣಿ ಅಕಾಲಿದಳ ರಚನೆಯಾಗಿ 100 ವರ್ಷಗಳಾಗಿವೆ.
- ಗುರುದ್ವಾರಗಳನ್ನು ಮಹಂತರ ನಿಯಂತ್ರಣದಿಂದ ಮುಕ್ತಗೊಳಿಸಲು 1920ರ ಡಿಸೆಂಬರ್ 14ರಂದು ‘ಸ್ವಯಂಸೇವಕ ಸಂಸ್ಥೆ’ಯಾಗಿ SAD ರೂಪುಗೊಂಡಿತು.
- ಇದು ಶಾಂತಿಯುತ ಹೋರಾಟವನ್ನು ಪ್ರಾರಂಭಿಸಿತು ಅದು ನಾಲ್ಕು ವರ್ಷಗಳ ಕಾಲ ನಡೆಯಿತು. ಈ ಸಂಘರ್ಷದ ಸಮಯದಲ್ಲಿ, ಸುಮಾರು 4,000 ಪ್ರತಿಭಟನಾಕಾರರು ಮಹಂತರು ಮತ್ತು ಬ್ರಿಟಿಷ್ ಆಡಳಿತದ ದಾಳಿಯಿಂದ ಕೊಲ್ಲಲ್ಪಟ್ಟರು.
- ಮೋರ್ಚಾ ಅಂತಿಮವಾಗಿ ‘ಸಿಖ್ ಗುರುದ್ವಾರ ಕಾಯಿದೆ 1925’ ಅನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಯಿತು, ಅದರ ಅಡಿಯಲ್ಲಿ ಗುರುದ್ವಾರಗಳ ನಿಯಂತ್ರಣವು ‘ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ’ ಯ (SGPC) ನಿಯಂತ್ರಣಕ್ಕೆ ಬಂದಿತು.
- ನಂತರ, ವಸಾಹತುಶಾಹಿ ಸರ್ಕಾರದ ವಿರುದ್ಧ ಹೋರಾಡಲು ರಾಜಕೀಯ ಪಕ್ಷವನ್ನು ಬೆಳೆಸುವುದರೊಂದಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಗೆ ದಾರಿ ಮಾಡಿಕೊಟ್ಟಿತು.
ಭಾರತೀಯ ಸಂವಿಧಾನದ ಅನುಚ್ಚೇಧ 31 ಡಿ:
ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಸರ್ಕಾರ ಸ್ಪಷ್ಟನೆ ನೀಡಿದ್ದು, ಯಾವುದೇ ಕಾನೂನಿನಲ್ಲಿ ‘ರಾಷ್ಟ್ರ ವಿರೋಧಿ’ ಎಂಬ ಪದವನ್ನು ವ್ಯಾಖ್ಯಾನಿಸಿಲ್ಲ ಎಂದು ತಿಳಿಸಿದೆ.
1976 ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ‘ದೇಶ ವಿರೋಧಿ ಚಟುವಟಿಕೆ’ ಯನ್ನು ಸಂವಿಧಾನದಲ್ಲಿ ಸೇರಿಸಲಾಯಿತು ಆದರೆ ನಂತರ ಅದನ್ನು ತೆಗೆದುಹಾಕಲಾಯಿತು.
- ಸಂವಿಧಾನದ (ನಲವತ್ತೆರಡನೇ ತಿದ್ದುಪಡಿ) ಕಾಯಿದೆ, 1976 ರ ಪ್ರಕಾರ ಸಂವಿಧಾನದಲ್ಲಿ ವಿಧಿ 31D ಅನ್ನು (ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ) ಸೇರಿಸಿತು, ಇದು ‘ದೇಶ ವಿರೋಧಿ ಚಟುವಟಿಕೆಗಳನ್ನು’ ವ್ಯಾಖ್ಯಾನಿಸುತ್ತದೆ.
- ಈ ಆರ್ಟಿಕಲ್ 31D ಅನ್ನು ನಂತರ ಸಂವಿಧಾನ (43ನೇ ತಿದ್ದುಪಡಿ) ಕಾಯಿದೆ, 1977 ರ ಮೂಲಕ ರದ್ದುಗೊಳಿಸಲಾಯಿತು.
ಚಿಲ್ಲೈ ಕಲಾನ್:
ಡಿಸೆಂಬರ್ 21 ರಂದು ಕಾಶ್ಮೀರ ಕಣಿವೆಯ ಮೇಲಿನ ಪ್ರದೇಶಗಳಲ್ಲಿ ಸಾಂಪ್ರದಾಯಿಕ 40 ದಿನಗಳ ಕಠಿಣ ಚಳಿಗಾಲವು ಪ್ರಾರಂಭವಾಗಿದೆ. ಈ ಅವಧಿಯನ್ನು ‘ಚಿಲ್ಲೈ-ಕಾಲನ್’ (Chillai kalan) ಎಂದು ಕರೆಯಲಾಗುತ್ತದೆ.
‘ಚಿಲ್ಲೈ ಕಲಾನ್’ ಎಂಬುದು ಪರ್ಷಿಯನ್ ಪದವಾಗಿದ್ದು, ಇದರರ್ಥ ‘ಮಹಾ ಚಳಿಗಾಲ’ (major cold) ಎಂದಾಗಿದೆ.
- ಈ ಅವಧಿಯಲ್ಲಿ ಕಾಶ್ಮೀರದ ಪರ್ವತಗಳು ವಾರಗಟ್ಟಲೆ ಹಿಮದಿಂದ ಆವೃತವಾಗಿರುತ್ತವೆ ಮತ್ತು ಶೀತ ಅಲೆಯು ಅದರ ಉತ್ತುಂಗವನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಪ್ರಸಿದ್ಧ ದಾಲ್ ಸರೋವರವು ಜನವರಿ ಅಂತ್ಯದ ವೇಳೆಗೆ ತನ್ನ ಘನೀಕರಣದ ಹಂತವನ್ನು ತಲುಪುತ್ತದೆ.
- ಚಿಲ್ಲೈ-ಕಲನ್ ನಂತರದ 20 ದಿನಗಳನ್ನು ಚಿಲ್ಲೈ ಖುರ್ದ್ (Chillai Khurd) ಎಂದು ಕರೆಯಲಾಗುತ್ತದೆ ಮತ್ತು ಅದರ ನಂತರದ 10 ದಿನಗಳನ್ನು ಚಿಲ್ಲೈ ಬಚ್ಚಾ (Chillai Baccha) ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಅಲ್ಬಿನೋ ಇಂಡಿಯನ್ ಫ್ಲಾಪ್‌ಶೆಲ್ ಟರ್ಟಲ್:
(Albino Indian Flapshell turtle)
- ಇತ್ತೀಚೆಗೆ ತೆಲಂಗಾಣದ ನಿಜಾಮಾಬಾದ್‌ನ ಸಿರ್ನಾಪಲ್ಲಿ ಅರಣ್ಯದಲ್ಲಿ ಪರ್ವತಾರೋಹಿಗಳಿಗೆ ಅಪರೂಪದ ಜಾತಿಯ ‘ಅಲ್ಬಿನೋ ಇಂಡಿಯನ್ ಫ್ಲಾಪ್‌ಶೆಲ್ ಆಮೆ’ ಕಾಣಿಸಿಕೊಂಡಿದೆ.
- ಪಾಕಿಸ್ತಾನ, ಶ್ರೀಲಂಕಾ, ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಂತಹ ದಕ್ಷಿಣ ಏಷ್ಯಾದ ದೇಶಗಳಲ್ಲಿ ‘ಇಂಡಿಯನ್ ಫ್ಲಾಪ್‌ಶೆಲ್ ಆಮೆ’ ಸಾಮಾನ್ಯವಾಗಿ ಕಂಡುಬರುತ್ತದೆ.
- ಆಮೆಗಳ ಅಪರೂಪದ ಹಳದಿ ಬಣ್ಣವು ‘ಟೈರೋಸಿನ್’ ಎಂಬ ವರ್ಣದ್ರವ್ಯದ ಕೊರತೆಯಿಂದಾಗಿರಬಹುದು, ಇದು ಸರೀಸೃಪಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪ್ರಾಯಶಃ ಆನುವಂಶಿಕ ರೂಪಾಂತರ ಅಥವಾ ಸಂಭವನೀಯ ಜನ್ಮಜಾತ ಅಸ್ವಸ್ಥತೆಯು ಟೈರೋಸಿನ್ ಕೊರತೆಗೆ ಕಾರಣವಾಗಬಹುದು.
- ಇಂಡಿಯನ್ ಫ್ಲಾಪ್‌ಶೆಲ್ ಆಮೆಗಳು ಸಾಮಾನ್ಯವಾಗಿ ಕೇವಲ 9 ರಿಂದ 14 ಇಂಚುಗಳು (22 cm ನಿಂದ 35 cm) ಉದ್ದವಿರುತ್ತವೆ ಮತ್ತು ಕಪ್ಪೆಗಳು, ಬಸವನ ಹುಳು ಮತ್ತು ಜಲಸಸ್ಯಗಳನ್ನು ತಿನ್ನಲು ಇಷ್ಟ ಪಡುತ್ತವೆ.
ಸಂರಕ್ಷಣೆಯ ಸ್ಥಿತಿ:
- IUCN ಕೆಂಪು ಪಟ್ಟಿ: ಅಪಾಯಕ್ಕೊಳ್ಳಗಾಗಬಲ್ಲ.(Vulnerable).
- CITES: ಅನುಬಂಧ II
- ವನ್ಯಜೀವಿ (ರಕ್ಷಣೆ) ಕಾಯಿದೆ, 1972: ಶೆಡ್ಯೂಲ್ I


















