Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 11ನೇ ಡಿಸೆಂಬರ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂವಿಧಾನದ ಆರನೇ ಅನುಸೂಚಿ.

2. ಪೂರಕ ಮಕ್ಕಳ ಪೋಷಣೆ/ಮಕ್ಕಳಿಗೆ ಪೂರಕ ಪೌಷ್ಟಿಕಾಂಶ.

3. ಬಲೂಚಿಸ್ತಾನ್ ಬಂದರಿನಲ್ಲಿ ಚೀನಾದ ಯೋಜನೆ.

4. ಸೌರ ಒಕ್ಕೂಟಕ್ಕೆ ವಿಶ್ವಸಂಸ್ಥೆಯ ವೀಕ್ಷಕ ಸ್ಥಾನಮಾನ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ದೇಶದ್ರೋಹ ಕಾನೂನು.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ರಾಯಲ್ ಗೋಲ್ಡ್ ಮೆಡಲ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಮಹಿಳೆಯರು ಮತ್ತು ಮಹಿಳಾ ಸಂಘಟನೆಯ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.

ಬೇಟಿ ಬಚಾವೋ,ಬೇಟಿ ಪಡಾವೋ ಯೋಜನೆ:


(Beti Bachao Beti Padhao Scheme)

ಸಂದರ್ಭ:

‘ಬೇಟಿ ಬಚಾವೋ, ಬೇಟಿ ಪಢಾವೋ’ (Beti Bachao, Beti Padhao – BBBP)  ಯೋಜನೆಯಡಿ ಸರ್ಕಾರ ಮೀಸಲಿಟ್ಟ ಶೇ 80ರಷ್ಟು ಹಣವನ್ನು ಮಾಧ್ಯಮ ಪ್ರಚಾರಕ್ಕೆ ವ್ಯಯಿಸಲಾಗಿದೆ ಎಂದು ‘ಮಹಿಳಾ ಸಬಲೀಕರಣ’ ಕುರಿತು ರಚಿಸಲಾಗಿರುವ ಸಂಸದೀಯ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಅಗತ್ಯತೆ:

 1. ಕಳೆದ ಆರು ವರ್ಷಗಳಲ್ಲಿ, ‘ಬೇಟಿ ಬಚಾವೋ, ಬೇಟಿ ಪಢಾವೋ’ (BBBP) ಮೇಲೆ ಕೇಂದ್ರೀಕರಿಸಿದ ಅಭಿಯಾನದ ಮೂಲಕ, ಈ ಕಾರ್ಯಕ್ರಮವು ಹೆಣ್ಣು ಮಗುವಿನ ಮಹತ್ವದ ಕಡೆಗೆ ರಾಜಕೀಯ ನಾಯಕತ್ವ ಮತ್ತು ರಾಷ್ಟ್ರೀಯ ಪ್ರಜ್ಞೆಯ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
 2. ಸರ್ಕಾರವು ಈಗ ಈ ಕಾರ್ಯತಂತ್ರವನ್ನು ಮರುಪರಿಶೀಲಿಸಬೇಕು ಮತ್ತು ಅಳೆಯಬಹುದಾದ ಫಲಿತಾಂಶಗಳನ್ನು ಸಾಧಿಸಲು ಹೆಣ್ಣುಮಕ್ಕಳ ಆರೋಗ್ಯ ಮತ್ತು ಶಿಕ್ಷಣದಲ್ಲಿ ಹೂಡಿಕೆ ಮಾಡಬೇಕು.

ಬೇಟಿ ಬಚಾವೋ, ಬೇಟಿ ಪಢಾವೋ /ಮಗಳನ್ನು ಉಳಿಸಿ ಮಗಳನ್ನು ಓದಿಸಿ  (Beti Bachao, Beti Padhao ) ಯೋಜನೆಯ ಕುರಿತು:

ಪ್ರಾರಂಭ ಮತ್ತು ವಿಸ್ತರಣೆ:

 1. ‘ಬೇಟಿ ಬಚಾವೋ, ಬೇಟಿ ಪಢಾವೋ –BBBP’ ಯೋಜನೆಯನ್ನು ಜನವರಿ 2015 ರಲ್ಲಿ ಲಿಂಗ ಆಯ್ಕೆಯ ಗರ್ಭಪಾತ ಮತ್ತು ಮಕ್ಕಳ ಲಿಂಗ ಅನುಪಾತವನ್ನು ಕಡಿಮೆ ಮಾಡಲು ಪ್ರಾರಂಭಿಸಲಾಯಿತು. 2011 ರಲ್ಲಿ ಮಕ್ಕಳ ಲಿಂಗ ಅನುಪಾತವು 918/1,000 ಆಗಿತ್ತು.
 2. ಹರಿಯಾಣದ ಪಾಣಿಪತ್‌ನಲ್ಲಿ 2015 ರ ಜನವರಿಯಲ್ಲಿ ‘ಬೇಟಿ ಬಚಾವೊ, ಬೇಟಿ ಪಢಾವೊ’ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು 2018 ರ ಮಾರ್ಚ್ 8 ರಂದು, ರಾಜಸ್ಥಾನದ ಝನ್ ಝನು ಜಿಲ್ಲೆಯಲ್ಲಿ ಪುನರಾರಂಭಿಸುವ ಮೂಲಕ ದೇಶದ ಎಲ್ಲಾ 640 ಜಿಲ್ಲೆಗಳಲ್ಲಿ (2011 ರ ಜನಗಣತಿಯ ಪ್ರಕಾರ) ‘ಬೇಟಿ ಬಚಾವೊ, ಬೇಟಿ ಪಢಾವೊ’ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು.
 3. ಇದು ಮೂರು ಕೇಂದ್ರ ಸಚಿವಾಲಯಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳ ಜಂಟಿ ಪ್ರಯತ್ನವಾಗಿದೆ.

ಅನುಷ್ಠಾನ:

ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಜಿಲ್ಲಾ ಮಟ್ಟದ ಘಟಕಕ್ಕೆ 100% ಆರ್ಥಿಕ ನೆರವು ನೀಡಲಾಗುತ್ತದೆ  ಮತ್ತು ಯೋಜನೆಯ ಸುಗಮ ಕಾರ್ಯಾಚರಣೆಗಾಗಿ ನಿಧಿಯ ನೆರವು ಮೊತ್ತವನ್ನು ನೇರವಾಗಿ ಜಿಲ್ಲಾಧಿಕಾರಿ / ಜಿಲ್ಲಾ ಮ್ಯಾಜಿಸ್ಟ್ರೇಟ್ ರವರ  ಖಾತೆಗೆ ಬಿಡುಗಡೆ ಮಾಡಲಾಗುತ್ತದೆ.

ಉದ್ದೇಶಗಳು:

 1. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಮಕ್ಕಳ ಲಿಂಗಾನುಪಾತ (Child Sex Ratio) ದಲ್ಲಿನ ಕಡಿತ ಮತ್ತು ಜೀವನ-ಚಕ್ರ ನಿರಂತರತೆಯ (life-cycle continuum) ಹಿನ್ನೆಲೆಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದಾಗಿದೆ.
 2. ಯೋಜನೆಯ ನಿರ್ದಿಷ್ಟ ಉದ್ದೇಶಗಳು ಲಿಂಗ-ಪಕ್ಷಪಾತದ ಲಿಂಗ ಆಯ್ಕೆಯ ನಿರ್ಮೂಲನೆಯನ್ನು ತಡೆಯುವುದು; ಬಾಲಕಿಯರ ಜೀವನ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು ಮತ್ತು ಬಾಲಕಿಯರ ಶಿಕ್ಷಣ ಮತ್ತು ಭಾಗವಹಿಸುವಿಕೆಯನ್ನು ಖಾತರಿಪಡಿಸುವುದು.

ಯೋಜನೆಯ ಫಲಿತಾಂಶಗಳು:

 1. ಆರೋಗ್ಯ ಸಚಿವಾಲಯದ ಪ್ರಕಾರ, ಜನನದ ಸಮಯದಲ್ಲಿನ ಲಿಂಗಾನುಪಾತವು ಸುಧಾರಣೆಯ ಭರವಸೆಯ ಪ್ರವೃತ್ತಿಯನ್ನು ತೋರಿಸುತ್ತಿದೆ ಮತ್ತು 2014-15 ರಲ್ಲಿದ್ದ 918 ರಿಂದ 2019-20 ರಲ್ಲಿ 934 ಕ್ಕೆ ಏರಿಕೆಯಾಗಿ 16 ಅಂಶಗಳಷ್ಟು ಸುಧಾರಿಸಿದೆ.
 2. ಪ್ರಸವಪೂರ್ವ ಆರೈಕೆಯ ಮೊದಲ ತ್ರೈಮಾಸಿಕದಲ್ಲಿ, (first trimester Antenatal Care –ANC) ಆರೋಗ್ಯ ಸೂಚಿಯು ಶೇಕಡಾವಾರು ಸುಧಾರಣೆಯ ಪ್ರವೃತ್ತಿಯನ್ನು ತೋರಿಸಿದೆ, ಮತ್ತು ಇದು 2014-15ರಲ್ಲಿ 61 ಪ್ರತಿಶತದಿಂದ 2019-20ರಲ್ಲಿ 71 ಪ್ರತಿಶತಕ್ಕೆ ಏರಿಕೆ ಕಂಡಿದೆ.
 3. ಪ್ರೌಢಶಾಲಾ ಹಂತದ ಶಾಲೆಗಳಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತವು 2014-15ರಲ್ಲಿದ್ದ45 ಪ್ರತಿಶತದಿಂದ 2018-19ರಲ್ಲಿ 81.32 ಪ್ರತಿಶತ ಕ್ಕೆ ಏರಿದೆ. (ತಾತ್ಕಾಲಿಕ ಅಂಕಿಅಂಶಗಳು).

 

ದಯವಿಟ್ಟು ಗಮನಿಸಿ:

ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆ ಅನುಷ್ಠಾನದ ಹಿನ್ನಡೆ: ಸಂಸತ್ ಸಮಿತಿ ವರದಿ

ರಾಜ್ಯಗಳ ವೆಚ್ಚದ ಮೇಲೆ ಕೇಂದ್ರಕ್ಕೆ ನಿಗಾ ಇಲ್ಲ: ಮಹಿಳೆಯರ ಸಬಲೀಕರಣ ಸಮಿತಿ:

‘ಬೇಟಿ ಬಚಾವೊ ಬೇಟಿ ಪಢಾವೊ’ ಯೋಜನೆಯಡಿಯಲ್ಲಿ ರಾಜ್ಯಗಳು ಮಾಡುವ ವೆಚ್ಚದ ಲೆಕ್ಕವನ್ನು ಕೇಂದ್ರ ಇರಿಸಿಕೊಳ್ಳಬೇಕು ಎಂದು ಸಂಸತ್ತಿನ ಮಹಿಳೆಯರ ಸಬಲೀಕರಣ ಸಮಿತಿಯು ಸರ್ಕಾರಕ್ಕೆ ಹೇಳಿದೆ.

 1. ಈ ಯೋಜನೆಯ ಅಡಿಯಲ್ಲಿ ಬಿಡುಗಡೆ ಮಾಡಲಾದ ನಿಧಿಯನ್ನೇ ರಾಜ್ಯಗಳು ಪೂರ್ಣವಾಗಿ ಬಳಸಿಕೊಂಡಿಲ್ಲ. ಹಾಗಿದ್ದರೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಜ್ಯಗಳಿಗೆ ಹೆಚ್ಚುವರಿ ನಿಧಿಯನ್ನು ಬಿಡುಗಡೆ ಮಾಡುತ್ತಲೇ ಇದೆ. ಯಾವ ರಾಜ್ಯವು ಎಷ್ಟು ಹಣವನ್ನು ವೆಚ್ಚ ಮಾಡಿದೆ ಎಂಬ ಮಾಹಿತಿಯೇ ಸಚಿವಾಲಯದ ಬಳಿ ಇಲ್ಲ ಎಂದು ಸಮಿತಿಯು ಹೇಳಿದೆ.
 2. ಯೋಜನೆಗೆ ಮೀಸಲಿಟ್ಟ ಒಟ್ಟು ಮೊತ್ತದಲ್ಲಿ ವೆಚ್ಚ ಆಗಿದ್ದು ಶೇ 25ರಷ್ಟು ಮಾತ್ರ.
 3. ಹೆಣ್ಣು ಶಿಶುವಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮೂರು ಸಚಿವಾಲಯಗಳ ಕಾರ್ಯಕ್ರಮವಾಗಿ ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಯನ್ನು 2015ರಲ್ಲಿ ಆರಂಭಿಸಲಾಯಿತು. ಲಿಂಗಾನುಪಾತದ ಅಂತರ ತಗ್ಗಿಸುವುದು, ಹೆಣ್ಣು ಮಕ್ಕಳ ಶಿಕ್ಷಣ ಹೆಚ್ಚಳ ಮತ್ತು ಗರ್ಭಧಾರಣೆ ಮುಂಚೆ ಮತ್ತು ಪ್ರಸವಪೂರ್ವ ಪರೀಕ್ಷೆ ತಂತ್ರಜ್ಞಾನ ಕಾಯ್ದೆಯ ಪರಿಣಾಮಕಾರಿ ಜಾರಿಯು ಈ ಯೋಜನೆಯ ಉದ್ದೇಶವಾಗಿತ್ತು.
 4. ರಾಜ್ಯಗಳು ಯೋಜನೆಯ ನಿಧಿಯನ್ನು ಬಳಸಿಕೊಳ್ಳದೇ ಇದ್ದಾಗಲೂ ಹೆಚ್ಚುವರಿ ಮೊತ್ತವನ್ನು ಸಚಿವಾಲಯವು ಮಂಜೂರು ಮಾಡಿದೆ ಎಂದು ಅವರು ಹೇಳಿದ್ದಾರೆ. ‘ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಯ ಅಡಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಇತರ ಉಪಕ್ರಮಗಳಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಷ್ಟು ಹಣ ವೆಚ್ಚ ಮಾಡಿವೆ ಎಂಬ ಮಾಹಿತಿಯೂ ನೋಡಲ್‌ ಸಚಿವಾಲಯದ ಬಳಿ ಇಲ್ಲ’ ಎಂದು ಸಮಿತಿಯ ವರದಿಯು ಹೇಳಿದೆ.
 5. ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಗೂ ವರ್ಷಕ್ಕೆ ₹50 ಲಕ್ಷ ಅನುದಾನ ನೀಡಲಾಗುತ್ತಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದು ಸಂಪೂರ್ಣವಾಗಿ ಕೇಂದ್ರದ ಅನುದಾನದ ಯೋಜನೆ. ಯೋಜನೆಯ ಅನುದಾನವು ಸರಿಯಾಗಿ ಬಳಕೆ ಆಗುತ್ತಿಲ್ಲ ಎಂದು ಮಹಾಲೇಖಪಾಲರು 2016–17ರ ವರದಿಯಲ್ಲಿ ಟೀಕಿಸಿದ್ದರು.
 6. ಹೆಣ್ಣು ಶಿಶುವಿನ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಇದೆ. ಆದರೆ, ಯೋಜನೆಯು ಪರಿಣಾಮಕಾರಿಯಾಗಿ ಜಾರಿ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು, ಬದ್ಧತೆ ಪ್ರದರ್ಶಿಸಬೇಕು ಎಂದು ಸಮಿತಿಯು ಹೇಳಿದೆ.
 7. ‘ಬಿಡುಗಡೆ ಮಾಡುವ ನಿಧಿಯ ಮೇಲೆ ನಿಗಾ ಇರಿಸದಿದ್ದರೆ, ನೀವು ಯೋಜನೆಯನ್ನೇ ಅನುಪಯುಕ್ತ ಮಾಡಿದಂತೆ. ಕೋವಿಡ್‌ ಸಂದರ್ಭದಲ್ಲಿ, ಡಿಜಿಟಲ್‌ ಅಸಮಾನತೆಯಿಂದಾಗಿ ಹಲವು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಬೆಂಬಲ ವ್ಯವಸ್ಥೆ ಬೇಕಾಗಿದೆ’ ಎಂದು ಕೂಡ ಸಮಿತಿಯು ಒತ್ತಿ ಹೇಳಿದೆ.

 

(ಕೃಪೆ; ಪ್ರಜಾವಾಣಿ)

ಬೇಟಿ ಬಚಾವೋ, ಬೇಟಿ ಪಡಾವೋ-ಹೆಣ್ಣು ಮಕ್ಕಳ ರಕ್ಷಣೆ:

ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು.

 1. “ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.”- ತಾವು ದತ್ತು ಪಡೆದಿರುವ ಜಯಪುರ ಗ್ರಾಮದಲ್ಲಿ -ಪ್ರಧಾನ ಮಂತ್ರಿ ನರೇಂದ್ರ ಮೋದಿ.
 2. 2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.
 3. ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅನುಷ್ಠಾನ ಮತ್ತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳು ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
 4. ಎನ್ ಡಿ ಎ ಸರಕಾರವು, ಹೆಣ್ಣು ಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶ ಹೊಂದಿದೆ. ಪುತ್ರಿಯೊಂದಿಗೆ ಸೆಲ್ಫಿ ಅಭಿಯಾನ ಆರಂಭಿಸಿದ ಹರಿಯಾಣದ ಬಿಬಿಪುರದ ಸರಪಂಚನನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಇದಾದ ಬಳಿಕ ಪ್ರಧಾನ ಮಂತ್ರಿಯವರು ದೇಶದ ಎಲ್ಲಾ ತಂದೆಯಂದಿರಿಗೂ ಮಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳುವಂತೆ ಕರೆ ನೀಡಿದ್ದರು. ಇದಕ್ಕೆ ಭಾರೀ ಪ್ರತಿಕ್ರಿಯೆ ಲಭ್ಯವಾಗಿತ್ತು. ಕೇವಲ ಭಾರತವಷ್ಟೇ ಅಲ್ಲ, ವಿದೇಶಗಳಿಂದಲೂ ಜನರು ತಮ್ಮ ಮಗಳ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅಲ್ಲದೆ, ಇದು ಹೆಣ್ಣು ಮಕ್ಕಳನ್ನು ಹೊಂದಿರುವ ತಂದೆಯಂದಿರಿಗೆ ಹೆಮ್ಮೆಯ ಕ್ಷಣವೂ ಆಗಿತ್ತು.
 5. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಆರಂಭಿಸಿದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಬಹುಸ್ತರೀಯ ಜಿಲ್ಲಾ ಕಾರ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ನೀಡುವ ಉದ್ದೇಶದಿಂದ, ತರಬೇತುದಾರರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 2015ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ, ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ಹಂತದ ತರಬೇತಿಗಳನ್ನು ನಡೆಸಿದೆ.

ಕೆಲವು ಸ್ಥಳೀಯ ಹೆಜ್ಜೆಗಳು:

 1. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಪಿತೋರಘಡ್ ಜಿಲ್ಲೆಯು ಹೆಣ್ಣು ಶಿಶುವಿನ ರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಿಲ್ಲಾ ಕಾರ್ಯಪಡೆಗಳನ್ನು ಮತ್ತು ವಿಭಾಗೀಯ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈ ಘಟಕಗಳ ಸಭೆಗಳನ್ನೂ ಆಯೋಜಿಸಲಾಗಿದೆ. ಮಕ್ಕಳ ಲಿಂಗಾನುಪಾತಕ್ಕೆ ಸಂಬಂಧಿಸಿ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರಚಿಸಲಾಗಿದೆ.
 2. ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು, ಯೋಜನೆಯ ಮಾಹಿತಿಯನ್ನು ಜನರಿಗೆ ತಿಳಿಸಲು ಬಾರೀ ಪ್ರಮಾಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳು, ಸೇನಾ ಶಾಲೆಗಳು ಮತ್ತು ಸರಕಾರಿ ಇಲಾಖೆಗಳನ್ನು ಬಳಸಿಕೊಂಡು ಹಲವು ಸಮಾವೇಶಗಳನ್ನು ಆಯೋಜಿಸಲಾಗಿದೆ.
 3. ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಪಿತೋರಘಡ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಕುರಿತು ಬೀದಿ ನಾಟಕಗಳನ್ನೂ ಆಯೋಜಿಸಲಾಗಿದೆ. ಈ ಬೀದಿ ನಾಟಕಗಳನ್ನು ಕೇವಲ ಹಳ್ಳಿಗಳಲ್ಲಿ ಪ್ರದರ್ಶನ ಮಾಡಿಲ್ಲ, ಮಾರುಕಟ್ಟೆಗಳಲ್ಲೂ ಪ್ರದರ್ಶಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಲುಪುವ ಪ್ರಯತ್ನ ಮಾಡಲಾಗಿದೆ.
 4. ಚಿತ್ರಕಥೆಗಳ ಮೂಲಕ ದೃಶ್ಯಗಳ ಮೂಲಕ ಲಿಂಗ ಆಧರಿತ ಗರ್ಭಪಾತಗಳ ಪರಿಣಾಮದ ಕುರಿತು ಜನರಲ್ಲಿ ಅರಿವು ಮೂಡತೊಡಗಿದೆ. ಹೆಣ್ಣು ಮಕ್ಕಳ ಸಮಸ್ಯೆಗಳು, ಜೀವನಪೂರ್ತಿ ಅವಳು ಅನುಭವಿಸಬೇಕಾದ ಕಷ್ಟಗಳ ಬಗ್ಗೆ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.
 5. ಸಹಿ ಸಂಗ್ರಹ ಅಭಿಯಾನ, ಪ್ರಮಾಣ ಮೊದಲಾದ ಕಾರ್ಯಕ್ರಮಗಳ ಮೂಲಕ ಈ ಯೋಜನೆಯ ಸಂದೇಶವನ್ನು ಪಿಜಿ ಕಾಲೇಜುಗಳು ಮತ್ತು ಸೇನಾ ಯೋಧರು ಸೇರಿದಂತೆ ಸುಮಾರು 700 ಮಂದಿಗೆ ತಲುಪಿಸಲಾಗಿದೆ.
 6. ಪಂಜಾಬ್ ನ ಮನ್ಸಾ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೇರಣೆ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಡಾನ್ ಎಂಬ ಹೆಸರಿನ ಯೋಜನೆಯಡಿ ಒಂದು ದಿನವಾದರೂ ನಿಮ್ಮ ಕನಸನ್ನು ಈಡೇರಿಸಿಕೊಳ್ಳಿ ಎಂದು ಹುರಿದುಂಬಿಸಲಾಗುತ್ತಿದೆ. ಈ ಯೋಜನೆಯಡಿ 6-10ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿದ್ಯಾರ್ಥಿನಿಯರಿಗೆ ಅವರು ಬಯಸುವ ವೈದ್ಯರು, ಪೊಲೀಸ್ ಅಧಿಕಾರಿಗಳು, ಇಂಜಿನಿಯರ್ ಗಳು ಐಎಎಸ್ ಮತ್ತು ಪಿಪಿಎಸ್ ಅಧಿಕಾರಿಗಳು ಜೊತೆಗೆ ಒಂದು ದಿನ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ. ಈ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು ಈಗಾಗಲೇ, ಸುಮಾರು 70ಕ್ಕೂ ವಿದ್ಯಾರ್ಥಿಗಳಿಗೆ ಅಧಿಕಾರಿಗಳ ಜೊತೆ ಕೆಲಸ ಮಾಡುವ ಅವಕಾಶ ದೊರೆತಿದೆ. ಕೆಲಸ ಮಾಡುವ ವಿಧಾನ ಮತ್ತು ಪರಿಸರದ ಬಗ್ಗೆ ತಿಳಿದುಕೊಳ್ಳುವಲ್ಲಿ ನೆರವಾಗಿದೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗಲಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಸಂವಿಧಾನದ ಆರನೇ ಅನುಸೂಚಿ:


(6th Schedule of the Indian Constitution)

ಸಂದರ್ಭ:

ಲಡಾಖ್‌ನ ವಿವಿಧ ನಾಗರಿಕ ಸಮಾಜದ ಗುಂಪುಗಳು ಲಡಾಖ್’ ಅನ್ನು ಸಂವಿಧಾನದ ಆರನೇ ಅನುಸೂಚಿಗೆ (Sixth Schedule of the Constitution) ಸೇರಿಸಬೇಕೆಂದು ಒತ್ತಾಯಿಸುತ್ತಿವೆ.

ಅಗತ್ಯತೆ:

ಲಡಾಖ್ ಸ್ವಾಯತ್ತ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಮಂಡಳಿಯು (Ladakh Autonomous Hill Development Council – LAHDC) ಅದರ ಪ್ರಸ್ತುತ ರೂಪದಲ್ಲಿ ಬುಡಕಟ್ಟು ಹಿತಾಸಕ್ತಿಗಳನ್ನು ರಕ್ಷಿಸಲು ಸಮರ್ಥವಾಗಿಲ್ಲ, ಏಕೆಂದರೆ ಅದು ಭೂಮಿ, ಉದ್ಯೋಗ ಮತ್ತು ಸಂಸ್ಕೃತಿಯಂತಹ ವಿಷಯಗಳ ಮೇಲೆ ಕಾನೂನುಗಳನ್ನು ಮಾಡುವ ಅಥವಾ ನಿಯಮಗಳನ್ನು ಮಾಡುವ ಅಧಿಕಾರವನ್ನು ಹೊಂದಿರಲಿಲ್ಲ.ಈ ಹಿನ್ನೆಲೆಯಲ್ಲಿ ನಾಗರಿಕ ಸಮುದಾಯಗಳಿಂದ ಆರನೇ ಅನುಸೂಚಿಗೆ ಬೇಡಿಕೆ ಶುರುವಾಗಿದೆ.

 1. ಲಡಾಖ್‌ನ ಜನಸಂಖ್ಯೆಯ 90 ಕ್ಕಿಂತ ಹೆಚ್ಚು ಪ್ರತಿಶತವು ಬುಡಕಟ್ಟು ಜನಾಂಗದವರಾಗಿದ್ದಾರೆ. ಬಾಲ್ಟಿ, ಬೇಡಾ, ಬೋಟ್ ಅಥವಾ ಬೊಟೊ, ಬ್ರೋಕ್ಪಾ, ಡ್ರೊಕ್ಪಾ, ದರ್ದ್, ಶಿನ್, ಚಾಂಗ್ಪಾ, ಗರ್ರಾ, ಮೊನ್ ಮತ್ತು ಪುರಿಗ್ಪಾ ಲಡಾಖ್‌ನ ಪ್ರಮುಖ ಪರಿಶಿಷ್ಟ ಬುಡಕಟ್ಟುಗಳುಗಳಾಗಿವೆ. The primary Scheduled Tribes (STs) in Ladakh are Balti Beda, Bot (or Boto), Brokpa (or Drokpa, Dard, Shin), Changpa, Garra, Mon and Purigpa.
 2. ಆದ್ದರಿಂದ, ಲಡಾಖ್ ಪ್ರದೇಶದಲ್ಲಿ ಈ ಸಮುದಾಯಗಳ ಹಲವಾರು ವಿಭಿನ್ನ ಸಾಂಸ್ಕೃತಿಕ ಪರಂಪರೆಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಅವಶ್ಯಕತೆಯಿದೆ.

ಆರನೇ ಅನುಸೂಚಿಯ ಕುರಿತು:

 1. ಸಂವಿಧಾನದ ಆರನೇ ಅನುಸೂಚಿಯು ಬುಡಕಟ್ಟು ಜನಸಂಖ್ಯೆಗೆ ರಕ್ಷಣೆ ನೀಡುತ್ತದೆ ಮತ್ತು ‘ಸ್ವಾಯತ್ತ ಅಭಿವೃದ್ಧಿ ಮಂಡಳಿಗಳನ್ನು’ ರಚಿಸುವ ಮೂಲಕ ಈ ಸಮುದಾಯಗಳಿಗೆ ಸ್ವಾಯತ್ತತೆಯನ್ನು ನೀಡುತ್ತದೆ. ಈ ಸ್ವಾಯತ್ತ ಮಂಡಳಿಗಳಿಗೆ ಭೂಮಿ, ಸಾರ್ವಜನಿಕ ಆರೋಗ್ಯ, ಕೃಷಿ ಮತ್ತು ಇತರ ವಿಷಯಗಳ ಬಗ್ಗೆ ಕಾನೂನುಗಳನ್ನು ರೂಪಿಸುವ ಮತ್ತು ಜಾರಿಗೊಳಿಸುವ ಹಕ್ಕಿದೆ.
 2. ಪ್ರಸ್ತುತ, ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿ 10 ಸ್ವಾಯತ್ತ ಮಂಡಳಿಗಳು ಅಸ್ತಿತ್ವದಲ್ಲಿವೆ.
 3. ಈ ವಿಶೇಷ ನಿಬಂಧನೆಯನ್ನು ಸಂವಿಧಾನದ 244 (2) ಮತ್ತು 275 (1) ವಿಧಿಯ ಅಡಿಯಲ್ಲಿ ನೀಡಲಾಗಿದೆ.

ಪ್ರಮುಖ ನಿಬಂಧನೆಗಳು:

 1. ‘ಸ್ವಾಯತ್ತ ಜಿಲ್ಲೆಗಳನ್ನು’ ಸಂಘಟಿಸಲು ಮತ್ತು ಮರುಸಂಘಟಿಸಲು ರಾಜ್ಯಪಾಲರಿಗೆ ಅಧಿಕಾರವಿದೆ.
 2. ಸ್ವಾಯತ್ತ ಜಿಲ್ಲೆಯಲ್ಲಿ ವಿಭಿನ್ನ ಬುಡಕಟ್ಟು ಜನಾಂಗದವರು ಇದ್ದರೆ, ರಾಜ್ಯಪಾಲರು ಆ ಜಿಲ್ಲೆಯನ್ನು ಹಲವಾರು ಸ್ವಾಯತ್ತ ಪ್ರದೇಶಗಳಾಗಿ ವಿಂಗಡಿಸಬಹುದು.
 3. ಸಂಯೋಜನೆ: ಪ್ರತಿ ಸ್ವಾಯತ್ತ ಜಿಲ್ಲೆಯಲ್ಲಿ 30 ಸದಸ್ಯರನ್ನು ಒಳಗೊಂಡಿರುವ ಜಿಲ್ಲಾ ಪರಿಷತ್ ಇರುತ್ತದೆ, ಅವರಲ್ಲಿ ನಾಲ್ವರು ರಾಜ್ಯಪಾಲರಿಂದ ನಾಮನಿರ್ದೇಶನಗೊಳ್ಳುತ್ತಾರೆ ಮತ್ತು ಉಳಿದ 26 ಜನರನ್ನು ವಯಸ್ಕರ ಮತದಾನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
 4. ಅಧಿಕಾರಾವಧಿ: ಚುನಾಯಿತ ಸದಸ್ಯರು ಐದು ವರ್ಷಗಳ ಅವಧಿಗೆ (ಕೌನ್ಸಿಲ್ ಪೂರ್ಣಾವಧಿಗೂ ಮೊದಲೇ ವಿಸರ್ಜನೆಯಾಗದಿದ್ದರೆ) ಮತ್ತು ರಾಜ್ಯಪಾಲರ ಇಚ್ಛೆ ಇರುವವರೆಗೂ ನಾಮನಿರ್ದೇಶಿತ ಸದಸ್ಯರು ಅಧಿಕಾರದಲ್ಲಿರುತ್ತಾರೆ.
 5. ಪ್ರತಿಯೊಂದು ಸ್ವಾಯತ್ತ ಪ್ರದೇಶಕ್ಕೂ ಪ್ರತ್ಯೇಕ ಪ್ರಾದೇಶಿಕ ಮಂಡಳಿ ಇರುತ್ತದೆ.
 6. ಮಂಡಳಿಗಳ ಅಧಿಕಾರಗಳು: ಜಿಲ್ಲಾ ಮತ್ತು ಪ್ರಾದೇಶಿಕ ಮಂಡಳಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ನಿರ್ವಹಿಸುತ್ತವೆ. ಅವುಗಳು ಭೂಮಿ, ಅರಣ್ಯ, ಕಾಲುವೆ ನೀರು, ಸ್ಥಳಾಂತರ ಬೇಸಾಯ, ಗ್ರಾಮ ಆಡಳಿತ, ಆಸ್ತಿಯ ಆನುವಂಶಿಕತೆ, ಮದುವೆ ಮತ್ತು ವಿಚ್ಛೇದನ, ಸಾಮಾಜಿಕ ಪದ್ಧತಿಗಳು ಮುಂತಾದ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಶಾಸನ ರಚಿಸಬಹುದು, ಆದರೆ ಅಂತಹ ಎಲ್ಲಾ ಕಾನೂನುಗಳಿಗೆ ರಾಜ್ಯಪಾಲರ ಒಪ್ಪಿಗೆಯ ಅಗತ್ಯವಿರುತ್ತದೆ.
 7. ಗ್ರಾಮ ಮಂಡಳಿಗಳು:ಜಿಲ್ಲಾ ಮತ್ತು ಪ್ರಾದೇಶಿಕ ಮಂಡಳಿಗಳು ತಮ್ಮ ವ್ಯಾಪ್ತಿಯಲ್ಲಿ ಬುಡಕಟ್ಟು ಜನಾಂಗದವರ ನಡುವಿನ ಮೊಕದ್ದಮೆಗಳು ಮತ್ತು ಪ್ರಕರಣಗಳನ್ನು ಆಲಿಸಲು ಗ್ರಾಮ ಪರಿಷತ್ತುಗಳು ಅಥವಾ ನ್ಯಾಯಾಲಯಗಳನ್ನು ರಚಿಸಬಹುದು. ಈ ನ್ಯಾಯಾಲಯಗಳು ಅವರ ಮನವಿಯನ್ನು ಆಲಿಸುತ್ತವೆ. ಈ ಮೊಕದ್ದಮೆಗಳು ಮತ್ತು ಪ್ರಕರಣಗಳ ಕುರಿತ ಹೈಕೋರ್ಟ್ ನ ಅಧಿಕಾರ ವ್ಯಾಪ್ತಿಯನ್ನು ರಾಜ್ಯಪಾಲರು ನಿರ್ದಿಷ್ಟಪಡಿಸುತ್ತಾರೆ.

 

ವಿಷಯಗಳು:ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಪೂರಕ ಮಕ್ಕಳ ಪೋಷಣೆ/ಮಕ್ಕಳಿಗೆ ಪೂರಕ ಪೌಷ್ಟಿಕಾಂಶ:


(Supplementary Child Nutrition)

ಸಂದರ್ಭ:

ಸರ್ಕಾರವು,ಲಾಕ್‌ಡೌನ್ ಸಮಯದಲ್ಲಿ ‘ಪೂರಕ ಮಕ್ಕಳ ಪೋಷಣೆ’(Supplementary Child Nutrition) ಗಾಗಿ ತೆಗೆದುಕೊಂಡ ಕ್ರಮಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

 1. ಫಲಾನುಭವಿಗಳಿಗೆ ನಿರಂತರ ಪೌಷ್ಟಿಕಾಂಶದ ಬೆಂಬಲವನ್ನು ಖಚಿತಪಡಿಸಿಕೊಳ್ಳಲು, ಕೋವಿಡ್-19 ಸಮಯದಲ್ಲಿ 15 ದಿನಗಳಿಗೊಮ್ಮೆ ಫಲಾನುಭವಿಗಳ ಮನೆ ಬಾಗಿಲಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ‘ಪೂರಕ ಪೌಷ್ಟಿಕಾಂಶ’ (Supplementary Nutrition)  ವಿತರಿಸಿದರು.ಏಕೆಂದರೆ ಸಾಂಕ್ರಾಮಿಕ ರೋಗದ ಪ್ರಭಾವವನ್ನು ಮಿತಿಗೊಳಿಸಲು ದೇಶಾದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳು ಮುಚ್ಚಿದ್ದವು.
 2. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸ್ಥಳೀಯ ಆಡಳಿತಕ್ಕೆ ಸಮುದಾಯದ ಮೇಲ್ವಿಚಾರಣೆ ಮತ್ತು ಜಾಗೃತಿ ಮೂಡಿಸುವುದರ ಜೊತೆಗೆ ಕಾಲಕಾಲಕ್ಕೆ ನಿಯೋಜಿಸಲಾದ ಇತರ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಹಕರಿಸಿದರು.

ಅಗತ್ಯತೆ:

 1. ಸಾಂಕ್ರಾಮಿಕ ರೋಗದಿಂದಾಗಿ ಜೀವನೋಪಾಯದ ನಷ್ಟ, ಆಹಾರ ಮತ್ತು ಆರೋಗ್ಯ ಸೇವೆಗಳಿಗೆ ಉಂಟಾದ ಅಡಚಣೆಗಳು ಅಪೌಷ್ಟಿಕತೆಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿವೆ.
 2. 2019 ಕ್ಕೆ ಹೋಲಿಸಿದರೆ, ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ 2022 ರಲ್ಲಿ ಹೆಚ್ಚುವರಿ 9.3 ಮಿಲಿಯನ್ ಹೆಚ್ಚಾಗಬಹುದು; ಇದರಲ್ಲಿ ಸುಮಾರು 2.6 ಮಿಲಿಯನ್ ಹೆಚ್ಚುವರಿ ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದು ಮತ್ತು ಐದು ವರ್ಷದೊಳಗಿನ ಸುಮಾರು 1,68,000 ಹೆಚ್ಚುವರಿ ಮಕ್ಕಳು ಸಾಯುವ ಸಂಭವವಿದೆ.

ಭಾರತದಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆಯ ಮೇಲೆ COVID-19 ರ ಪರಿಣಾಮ:

 1. ಅಪೌಷ್ಟಿಕತೆಯ ಕ್ಷೀಣಿಸುತ್ತಿರುವ ಸ್ಥಿತಿಯು ದೇಶದಲ್ಲಿ ಗಂಭೀರ ಕಾಳಜಿಯ ವಿಷಯವಾಗಿಯೇ ಮುಂದುವರೆದಿದೆ, ಇದು COVID-19 ರ ಹರಡುವಿಕೆಯೊಂದಿಗೆ ಇನ್ನಷ್ಟು ಹದಗೆಟ್ಟಿದೆ.
 2. ಲಾಕ್‌ಡೌನ್‌ನಿಂದ ಅಂಗನವಾಡಿ ಕೇಂದ್ರಗಳ (AWCs) ಭಾಗಶಃ ಮುಚ್ಚುವಿಕೆ ಮತ್ತು ನಿರಂತರ ಲಾಕ್‌ಡೌನ್‌ನಿಂದ ಪೂರೈಕೆ ಸರಪಳಿಯಲ್ಲಿನ ಅಡ್ಡಿಯು ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಸ್ಥಗಿತಗೊಳಿಸಲು ಕಾರಣವಾಯಿತು, ಮನೆಗೆ ಪಡಿತರವನ್ನು ತೆಗೆದುಕೊಳ್ಳುವ ಪ್ರವೇಶವನ್ನು ಕಡಿಮೆ ಮಾಡಿತು ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಅಗತ್ಯವಾದ ಸಾರಿಗೆ ಸೇವೆಯನ್ನು ಸಹ ಸೀಮಿತಗೊಳಿಸಿತು.
 3. ಜರ್ನಲ್ ಗ್ಲೋಬಲ್ ಹೆಲ್ತ್ ಸೈನ್ಸ್ 2020 ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, COVID-19 ಒಡ್ಡಿದ ಸವಾಲುಗಳು ಇನ್ನೂ ನಾಲ್ಕು ಮಿಲಿಯನ್ ಮಕ್ಕಳನ್ನು ತೀವ್ರ ಅಪೌಷ್ಟಿಕತೆಗೆ ತಳ್ಳಲು ಕಾರಣವಾಗಬಹುದು.
 4. ಈ ಪರಿಸ್ಥಿತಿಯು ‘ಗ್ಲೋಬಲ್ ಹಂಗರ್ ಇಂಡೆಕ್ಸ್’ 2020 ರಲ್ಲಿ ಭಾರತದ ಕಳಪೆ ಶ್ರೇಯಾಂಕದಿಂದಲೂ ಸ್ಪಷ್ಟವಾಗಿದೆ, 2020ರ ‘ಹಸಿವಿನ ಸೂಚ್ಯಂಕ’ದಲ್ಲಿ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿದ್ದ ಭಾರತ, ಈ ವರ್ಷ 116 ದೇಶಗಳ ಪೈಕಿ 101ನೇ ಸ್ಥಾನ ಪಡೆದಿದೆ. ನೆರೆದೇಶಗಳಾದ ಬಾಂಗ್ಲಾದೇಶ (76), ಪಾಕಿಸ್ತಾನ (92), ನೇಪಾಳ (76) ಹಾಗೂ ಮ್ಯಾನ್ಮಾರ್‌ (71) ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿವೆ.

ಅಪೌಷ್ಟಿಕತೆಯನ್ನು ಎದುರಿಸಲು ಸರ್ಕಾರದ ಪ್ರಯತ್ನಗಳು:

 1. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY)
 2. ಪೋಷಣೆ ಅಭಿಯಾನ
 3. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA), 2013
 4. ಮಧ್ಯಾಹ್ನದ ಬಿಸಿಯೂಟ (MDM) ಯೋಜನೆ
 5. ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ICDS)
 6. ರಾಷ್ಟ್ರೀಯ ಪೌಷ್ಟಿಕಾಂಶ ತಂತ್ರ (National Nutrition Strategy).

ದಯವಿಟ್ಟು ಗಮನಿಸಿ:

ಅಪೌಷ್ಟಿಕತೆಯ ದೂರಗಾಮಿ ಪರಿಣಾಮ:

 1. ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾದ ಜಾಗತಿಕ ಹಸಿವು ಸೂಚ್ಯಂಕವು ಸಮೀಕ್ಷೆಗೆ ಒಳಪಡಿಸಲಾದ 116 ರಾಷ್ಟ್ರಗಳ ಪೈಕಿ ಭಾರತವು 101ನೇ ಸ್ಥಾನದಲ್ಲಿರುವುದನ್ನು ತೋರಿಸಿದೆ. ಒಟ್ಟು ಶ್ರೇಯಾಂಕವನ್ನು ಆಧರಿಸಿ ಹೇಳುವುದಾದಲ್ಲಿ, ಭಾರತದಲ್ಲಿನ ಹಸಿವಿನ ಸಮಸ್ಯೆ ‘ಗಂಭೀರ’ವಾದದ್ದು. ಬೇಸರದ ಸಂಗತಿ ಎಂದರೆ, ಕಳೆದ ದಶಕದಲ್ಲಿ ಭಾರತದ ಶ್ರೇಯಾಂಕ ಕುಸಿದಿರುವ ಪ್ರಮಾಣ ಅತ್ಯಂತ ತೀವ್ರತರವಾದದ್ದು. 2011ರಲ್ಲಿ, 122 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 67ರಲ್ಲಿತ್ತು. ಈಗ, ತನ್ನ ಅಕ್ಕಪಕ್ಕದ ನೆರೆ ರಾಷ್ಟ್ರಗಳಿಗಿಂತ ಭಾರತವು ಕೆಳಗಿನ ಸ್ಥಾನ ದಲ್ಲಿರುವುದನ್ನು 2021ರ ಶ್ರೇಯಾಂಕ ತೋರಿಸುತ್ತಿದೆ.
 2. ಹಸಿವಿಗೂ ಅಪೌಷ್ಟಿಕತೆಗೂ ನೇರ ಸಂಬಂಧ ಇದೆ. ಆರಂಭದ ಬಾಲ್ಯ ಕಾಲದಲ್ಲಿನ ಅಪೌಷ್ಟಿಕತೆಯ ಪರಿಣಾಮವು ದೀರ್ಘಾವಧಿಯಲ್ಲಿ ತುಂಬಾ ಗಂಭೀರ ವಾದುದಾಗಿರುತ್ತದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅರ್ಧದಷ್ಟು ಸಾವುಗಳು ಪೌಷ್ಟಿಕತೆಯ ಕೊರತೆಯಿಂದಲೇ ಸಂಭವಿಸುತ್ತವೆ. ಎಳೆಯ ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆಯು ಕೆಟ್ಟದೊಂದು ಸುಳಿಯ ಭಾಗ ವಾಗಿಬಿಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಅಪೌಷ್ಟಿಕತೆ ಹೊಂದಿದ ಮಕ್ಕಳು ಸೋಂಕುಗಳಿಗೆ ಬೇಗ ತುತ್ತಾಗುತ್ತಾರೆ. ಇದರಿಂದ ಉಂಟಾಗುವ ಕಾಯಿಲೆ ಗಳಿಂದಾಗಿ ಮತ್ತಷ್ಟು ದುರ್ಬಲರಾಗಿ ಇನ್ನಷ್ಟು ತೀವ್ರತರ ಕಾಯಿಲೆಗಳಿಗೆ ಈಡಾಗುವ ಸಂಭವವಿರುತ್ತದೆ. ಮೊದಲ 1,000 ದಿನಗಳಲ್ಲಿ ಸರಿಯಾದ ಪೌಷ್ಟಿಕ ಆಹಾರ ಲಭಿಸದಿದ್ದಲ್ಲಿ ಜೀವನಪರ್ಯಂತ ಮಗು ಹಲವು ಅನನುಕೂಲ
 3. ಗಳಿಂದ ನರಳುವಂತಾಗಬಹುದು. ಮಿದುಳಿನ ಬೆಳವಣಿಗೆ, ಅರಿವಿನ ಶಕ್ತಿ ಹಾಗೂ ಶಾಲೆಗಳಲ್ಲಿ ಶೈಕ್ಷಣಿಕ ಗುರಿ ಸಾಧನೆಗಳಂತಹ ವಿಚಾರಗಳಲ್ಲಿ ಸಮಸ್ಯೆಗಳನ್ನು ಎದುರಿಸುವಂತಾಗಬಹುದು. ಇದು ಶಾಲೆ, ಕ್ರೀಡೆ ಹಾಗೂ ಇತರ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇತರ ಮಕ್ಕಳ ಜೊತೆಗೆ ಸಾಮಾಜಿಕವಾಗಿ ಬೆರೆಯುವ ಅವರ ಸಾಮರ್ಥ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಇಂತಹ ಮಕ್ಕಳು ಮಧ್ಯದಲ್ಲೇ ಶಾಲೆ ಬಿಡುವ ಪ್ರಮಾಣವೂ ಹೆಚ್ಚಿರುತ್ತದೆ. ಪರಿಣಾಮವಾಗಿ, ಅಪೌಷ್ಟಿಕತೆಯಿಂದ ನರಳುವ ಮಕ್ಕಳು ವಯಸ್ಕರಾದಾಗ, ಮಾಮೂಲು ಬೆಳವಣಿಗೆ ಇರುವ ಮಕ್ಕಳು ವಯಸ್ಕರಾದಾಗ ಗಳಿಸುವುದ ಕ್ಕಿಂತ ಶೇಕಡ 20ರಷ್ಟು ಕಡಿಮೆ ವರಮಾನ ಗಳಿಸುತ್ತಾರೆ ಎಂಬುದು ಸಂಶೋಧನೆಗಳಿಂದ ವ್ಯಕ್ತವಾಗಿದೆ.
 4. ಸಮೀಕ್ಷೆ ನಡೆಸಲಾದ 17 ರಾಜ್ಯಗಳ ಪೈಕಿ 11 ರಾಜ್ಯಗಳಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು (ಸ್ಟಂಟಿಂಗ್) ತೀವ್ರತರವಾಗಿದೆ ಎಂಬುದನ್ನು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ- 5 (ಎನ್ಎಫ್ಎಚ್ಎಸ್-5; 2019-2020) ತೋರಿಸಿದೆ. ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವ ಈ ಸಮಸ್ಯೆಯು ದೀರ್ಘಕಾಲದಿಂದ ಪೀಳಿಗೆ ಪೀಳಿಗೆಗಳಿಂದ ಹಾದುಬಂದಂತಹ ಅಪೌಷ್ಟಿಕತೆ, ಪುನರಾವರ್ತಿತ ಕಾಯಿಲೆ ಹಾಗೂ ಅಸಮರ್ಪಕ ಪರಿಸರಗಳಿಗೆ ಸೂಚಕವಾಗಿದೆ. ಇದೇ ವಯೋಮಾನದ ಮಕ್ಕಳ ಗುಂಪಿಗೆ ಸಂಬಂಧಿಸಿದಂತೆ, 17 ರಾಜ್ಯಗಳ ಪೈಕಿ 13 ರಾಜ್ಯಗಳಲ್ಲಿ, ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವ (ವೇಸ್ಟಿಂಗ್) ಸಮಸ್ಯೆಯೂ ಹೆಚ್ಚಾಗಿದೆ. ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು, ಇತ್ತೀಚಿನ ತೀವ್ರತರವಾದ ತೂಕ ನಷ್ಟವನ್ನು ಸಾಮಾನ್ಯವಾಗಿ ಸೂಚಿಸುತ್ತದೆ.
 5. ಕೋವಿಡ್ -19 ಸಾಂಕ್ರಾಮಿಕ ಹರಡುವುದಕ್ಕೆ ಮೊದಲೇ ಈ ಸಮೀಕ್ಷೆಯನ್ನು ನಡೆಸಲಾಗಿತ್ತು ಎಂಬು ದನ್ನು ನಾವು ನೆನಪಿಸಿಕೊಳ್ಳಬೇಕು. ಕೋವಿಡ್-19ರ ಸಂದರ್ಭದಲ್ಲಿ ಕಾಯಿಲೆ ಹಾಗೂ ಜೀವನೋಪಾಯ ನಷ್ಟಗಳಿಂದಾಗಿ ವಿಶೇಷವಾಗಿ ಬಡ ಕುಟುಂಬಗಳಲ್ಲಿ ಅಪೌಷ್ಟಿಕತೆ ಸಮಸ್ಯೆಯು ಮತ್ತಷ್ಟು ತೀವ್ರವಾಗಿದೆ.
 6. ಎನ್ಎಫ್ಎಚ್ಎಸ್-4 (2015-16) ಹಾಗೂ ಎನ್ಎಫ್ಎಚ್ಎಸ್-5 ಮಧ್ಯೆ ಕರ್ನಾಟಕದಲ್ಲಿ ಪರಿಸ್ಥಿತಿಯು ಒಟ್ಟಾರೆಯಾಗಿ ಹದಗೆಟ್ಟಿಲ್ಲದಿದ್ದರೂ ದಾಖಲೆಯು ಮಂಕಾಗಿಯೇ ಇದೆ. ರಾಜ್ಯದಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂವರು ಮಕ್ಕಳಲ್ಲಿ ಒಂದು ಮಗು ತನ್ನ ವಯಸ್ಸಿಗೆ ತಕ್ಕ ಎತ್ತರ ಹೊಂದಿರದೆ ಕುಬ್ಜವಾಗಿ ಇದೆ; ಹಾಗೆಯೇ ಹತ್ತು ಮಕ್ಕಳಲ್ಲಿ ಒಂದು ಮಗು ತೀರಾ ಸಣ್ಣಗಿದೆ. ಈ ಸಮಸ್ಯೆಯು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿ ಇದೆ. ಉದಾಹರಣೆಗೆ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ವಯಸ್ಸಿಗೆ ತಕ್ಕ ಎತ್ತರ ಇಲ್ಲದ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರಮಾಣ ಶೇಕಡ 3-4ರಷ್ಟು ಹೆಚ್ಚಾಗಿದೆ.

ಪರಿಸ್ಥಿತಿ ಸುಧಾರಿಸಲು ಏನು ಮಾಡಬೇಕು? ಡಬ್ಲ್ಯುಎಚ್ಒ ಶಿಫಾರಸುಗಳಲ್ಲಿ ಕೆಲವಷ್ಟನ್ನೇ ಆಯ್ಕೆ ಮಾಡಿಕೊಂಡು ಕೈಗೊಳ್ಳುವ ಕೆಲವೊಂದು ತಕ್ಷಣದ ಕ್ರಮಗಳು ಭಾರಿ ಪರಿಣಾಮ ಬೀರಬಹುದು:

 1. ಶಿಶು ಹಾಗೂ ಮಕ್ಕಳ ಬೆಳವಣಿಗೆಯ ನಿಯಮಿತ ಮೇಲ್ವಿಚಾರಣೆಯು ಕಡ್ಡಾಯವಾಗಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಶಾಲಾ ಆರೋಗ್ಯ ಕಾರ್ಯಕ್ರಮದ ಅಡಿ ಪ್ರಾಥಮಿಕ ಶಾಲೆಗಳಲ್ಲಿ ಇದು ಈಗಾಗಲೇ ಒಂದು ಅವಶ್ಯಕತೆಯಾಗಿ ಇದ್ದೇ ಇದೆ. ಮಕ್ಕಳ ತೂಕ ಹಾಗೂ ಎತ್ತರವನ್ನು ನಿಕಟವಾಗಿ ಪರಿಶೀಲಿಸುತ್ತಲೇ ಸಾಗುವುದರಿಂದ ಅಪೌಷ್ಟಿಕತೆಯ ಅಪಾಯದಲ್ಲಿರುವ ಮಕ್ಕಳನ್ನು ಗುರುತಿಸಿ ಸಕಾಲದ ಚಿಕಿತ್ಸೆ ಹಾಗೂ ನಂತರದ ನಿರಂತರ ಮೇಲುಸ್ತುವಾರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸಿಕೊಡಬಹುದು. ಈ ಪ್ರಕ್ರಿಯೆಯಲ್ಲಿ ಪೋಷಕರನ್ನೂ ತೊಡಗಿಸಿಕೊಂಡು ಬೇಗನೇ ಚಿಕಿತ್ಸೆ ಕೊಡಿಸುವುದರ ಮಹತ್ವದ ಬಗ್ಗೆ ಅರಿವು ಮೂಡಿಸಬಹುದು.
 2. ಅಂಗನವಾಡಿ ಹಾಗೂ ಶಾಲೆಗಳಲ್ಲಿ ನೀಡಲಾಗುವ ಆಹಾರ ಕಾರ್ಯಕ್ರಮಗಳು ಬಹಳ ಮುಖ್ಯವಾದವು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಶಾಲೆಗಳು ಮುಚ್ಚಿದ್ದರಿಂದ ಈ ಆಹಾರ ಕಾರ್ಯಕ್ರಮಗಳ ಮಹತ್ವ ಮತ್ತಷ್ಟು ಸ್ಪಷ್ಟವಾಯಿತು. ಹೀಗಿದ್ದೂ, ಈ ಊಟದ ಪೌಷ್ಟಿಕತೆಯ ಮೌಲ್ಯವನ್ನು ಪರಿಶೀಲಿಸುವ ಕಾಲ ಬಂದಿದೆ. ಅಕ್ಕಿ ಅಥವಾ ಗೋಧಿ ಪ್ರಮಾಣ ಹೆಚ್ಚಿರುವ ಊಟ ಹೊಟ್ಟೆಯನ್ನು ತುಂಬಿಸುತ್ತದೆ. ಆದರೆ, ದೇಹಕ್ಕೆ ಅತ್ಯಗತ್ಯ ವಾದ ಪ್ರೋಟೀನ್ ಹಾಗೂ ಸೂಕ್ಷ್ಮ ಪೋಷಕಾಂಶ ಗಳನ್ನು ಇದು ಒದಗಿಸುವುದಿಲ್ಲ. ಕರ್ನಾಟಕದಲ್ಲಿರುವಂತೆ ಹಾಲನ್ನು ಒದಗಿಸುವುದು ಹಾಗೂ ರಾಜ್ಯದಲ್ಲಿ ಹೆಚ್ಚು ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿನ ಮಕ್ಕಳಿಗೆ ಮೊಟ್ಟೆ ಒದಗಿಸುವ ಪ್ರಸ್ತಾವಗಳು ತುಂಬಾ ಉತ್ತಮವಾದ ಸೇರ್ಪಡೆಗಳು. ಆದರೆ ಇನ್ನೂ ಹೆಚ್ಚಿನದನ್ನು ಮಾಡಬಹುದು. ಉದಾಹರಣೆಗೆ, ಪೋಷಕಾಂಶ ಹೆಚ್ಚಿರುವ ರಾಗಿಯನ್ನು ವಾರದ ಕೆಲವು ದಿನಗಳಲ್ಲಿ ನೀಡಬಹುದು. ಸ್ವತಃ ಆಹಾರ ಬೆಳೆ ಬೆಳೆದು ತಮ್ಮ ಊಟವನ್ನು ಎಷ್ಟೊಂದು ಸಮೃದ್ಧಗೊಳಿಸಿಕೊಳ್ಳಬಹುದು ಎಂಬುದನ್ನು ಕಲಿಸಲು ತರಕಾರಿ ತೋಟ ಅಭಿವೃದ್ಧಿಪಡಿಸುವುದನ್ನು ಮಕ್ಕಳಲ್ಲಿ ಉತ್ತೇಜಿಸಬಹುದು.
 3. ಮಕ್ಕಳ ಪೌಷ್ಟಿಕತೆಗಾಗಿ ಮಾಡುವ ವೆಚ್ಚ ಗಣನೀಯ ಪ್ರಮಾಣದಲ್ಲಿ ಹೆಚ್ಚಬೇಕು. 2022ರೊಳಗೆ 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಕುಂಠಿತ ಬೆಳವಣಿಗೆಯನ್ನು ತಗ್ಗಿಸುವ ಗುರಿಯನ್ನು ಸರ್ಕಾರ ಆರಂಭಿಸಿರುವ ಮಿಷನ್ ಪೋಷಣ್ 2.0 ಕಾರ್ಯಕ್ರಮ ಹೊಂದಿದೆ. ಆಹಾರದ ಜೊತೆಗೆ ಪೂರಕ ಪೋಷಕಾಂಶಗಳು, ಮಾತೃತ್ವ ಸೌಲಭ್ಯಗಳು, ಪೂರಕ ಸೂಕ್ಷ್ಮ ಪೋಷಕಾಂಶಗಳು ಹಾಗೂ ಪೌಷ್ಟಿಕತೆ ಕುರಿತಂತಹ ಸಲಹಾ ಸೇವೆಗಳನ್ನು ಪೂರ್ಣಪ್ರಮಾಣದಲ್ಲಿ ಒದಗಿಸಲು ಸುಮಾರು ₹38,500 ಕೋಟಿಯಷ್ಟು ಹೂಡಿಕೆ ಅಗತ್ಯವಿದೆ ಎಂದು ಸಂಶೋಧಕರು ಅಂದಾಜು ಮಾಡಿದ್ದಾರೆ. ಹೀಗಿದ್ದೂ, 2019-20ರಲ್ಲಿ ಪೌಷ್ಟಿಕತೆಗಾಗಿ ಬಜೆಟ್‌ನಲ್ಲಿ ಒದಗಿಸಿದ್ದ ಹಣ ಸುಮಾರು ₹17,600 ಕೋಟಿ. ಎಂದರೆ, ಅರ್ಧದಷ್ಟು ಕಡಿಮೆ.

ಅಪೌಷ್ಟಿಕತೆಯಿಂದಾಗಿ ಉತ್ಪಾದಕತೆಯ ನಷ್ಟವು ಭಾರತದ ಜಿಡಿಪಿಯಲ್ಲಿ ಬಹುತೇಕ ಶೇ 3ರಷ್ಟಿರುತ್ತಿದೆ ಎಂದು ವಿಶ್ವ ಬ್ಯಾಂಕ್ (2005) ಅಂದಾಜು ಮಾಡಿದೆ. ಪ್ರತಿವರ್ಷ ಜಿಡಿಪಿಯ ಶೇ 0.8ರಿಂದ ಶೇ 2.5ರಷ್ಟು ಪ್ರಮಾಣದಲ್ಲಿ ಭಾರತದ ಆರ್ಥಿಕತೆಗೆ ಸೂಕ್ಷ್ಮ ಪೋಷಕಾಂಶ ಕೊರತೆಯೊಂದೇ ನಷ್ಟವುಂಟು ಮಾಡುತ್ತಿದೆ ಎಂದೂ ಅಂದಾಜು ಮಾಡಲಾಗಿದೆ. ಮಕ್ಕಳ ಅಪೌಷ್ಟಿಕತೆ ನಿರ್ವಹಣೆಗೆ ರಾಷ್ಟ್ರೀಯ ಕಾರ್ಯತಂತ್ರವೊಂದರ ಬಗ್ಗೆ ಗಂಭೀರವಾಗಿ ಮರು ಆಲೋಚಿಸುವ ಕಾಲ ಬಂದಿದೆ. ದಿಟ್ಟವಾದಂತಹ ಸಂರಚನಾತ್ಮಕ ಸುಧಾರಣೆಗಳು ಹಾಗೂ ಬಜೆಟ್‌ನಲ್ಲಿ ಹಣ ಹಂಚಿಕೆ  ದ್ವಿಗುಣಗೊಳಿಸುವುದು ಮುಖ್ಯವಾಗುತ್ತವೆ. ಮಾನವೀಯ ವಾದ ಅಭಿವೃದ್ಧಿಪರ ಆರ್ಥಿಕ ದೃಷ್ಟಿಕೋನಗಳಿಂದ ಸಿಗುವ ಪ್ರಯೋಜನ ದೊಡ್ಡದು. ಈ ದಿಸೆಯಲ್ಲಿನ ಹಣ ಹೂಡಿಕೆಗಳಿಂದ ದಕ್ಕುವ ಲಾಭಗಳು ಹಲವು ಪಟ್ಟು ಹೆಚ್ಚಾಗಿರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಜಾಗತಿಕ ಹಸಿವಿನ ಸೂಚ್ಯಂಕ: ಭಾರತಕ್ಕೆ ಸ್ವವಿಮರ್ಶೆಗೆ ಎಚ್ಚರಿಕೆ ಗಂಟೆ

‘ಜಾಗತಿಕ ಹಸಿವಿನ ಸೂಚ್ಯಂಕ– 2021’ರಲ್ಲಿ ಭಾರತ ತೀರಾ ಕೆಳಗಿನ ರ್‍ಯಾಂಕ್‌ ಪಡೆದಿರುವುದು ದೇಶದಲ್ಲಿ ಚಾಲ್ತಿಯಲ್ಲಿರುವ ಅಭಿವೃದ್ಧಿ ಪರಿಕಲ್ಪನೆಗಳ ಟೊಳ್ಳುತನವನ್ನು ಸೂಚಿಸುವಂತಿದೆ. 2020ರ ‘ಹಸಿವಿನ ಸೂಚ್ಯಂಕ’ದಲ್ಲಿ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿದ್ದ ಭಾರತ, ಈ ವರ್ಷ 116 ದೇಶಗಳ ಪೈಕಿ 101ನೇ ಸ್ಥಾನ ಪಡೆದಿದೆ. ನೆರೆದೇಶಗಳಾದ ಬಾಂಗ್ಲಾದೇಶ (76), ಪಾಕಿಸ್ತಾನ (92), ನೇಪಾಳ (76) ಹಾಗೂ ಮ್ಯಾನ್ಮಾರ್‌ (71) ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿವೆ.

ದಕ್ಷಿಣ ಏಷ್ಯಾದಲ್ಲಿ ಯುದ್ಧ ಮತ್ತು ಆಂತರಿಕ ಸಂಘರ್ಷದ ದಳ್ಳುರಿಗೆ ಸಿಲುಕಿರುವ ಅಫ್ಗಾನಿಸ್ತಾನ ಮಾತ್ರ ಭಾರತಕ್ಕಿಂತ ಕಳಪೆ ಸ್ಥಿತಿಯಲ್ಲಿದೆ. ಐರ್ಲೆಂಡ್‌ನ ‘ಕನ್ಸರ್ನ್‌ ವರ್ಲ್ಡ್‌ವೈಡ್‌’ ಮತ್ತು ಜರ್ಮನಿಯ ‘ವೆಲ್ತ್‌ ಹಂಗರ್‌ ಹಿಲ್ಫ್‌’ ಸಂಸ್ಥೆಗಳು, ವಿಶ್ವದ 116 ದೇಶಗಳಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ‘ಹಸಿವಿನ ಸೂಚ್ಯಂಕ’ (ಜಿಎಚ್‌ಐ) ಸಿದ್ಧಪಡಿಸಿವೆ.

ಅಪೌಷ್ಟಿಕತೆ, ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ, ಎತ್ತರ ಮತ್ತು ತೂಕ ಕಡಿಮೆ ಇರುವುದನ್ನು ಪರಿಗಣಿಸಿ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ‘ಭಾರತದಲ್ಲಿನ ಹಸಿವಿನ ಪರಿಸ್ಥಿತಿಯು ಅಪಾಯಕಾರಿ’ ಎಂದು ಜಿಎಚ್‌ಐ ವರದಿ ಆತಂಕ ವ್ಯಕ್ತಪಡಿಸಿದೆ. ಯೆಮನ್‌ ಮತ್ತು ಸೊಮಾಲಿಯಾದಂತಹ ಹದಿನೈದು ಕಡು ಬಡ ದೇಶಗಳ ಸಾಲಿಗೆ ಭಾರತ ಸೇರಿಕೊಂಡಿದೆ.

ಈ ದುಃಸ್ಥಿತಿ ನಮಗೆ ಕಳವಳ ಹುಟ್ಟಿಸಬೇಕು, ಅವಮಾನ ಉಂಟು ಮಾಡಬೇಕು. ಹಸಿವಿನ ಸೂಚ್ಯಂಕದಲ್ಲಿ ಪಡೆದಿರುವ ಕಳಪೆ ಸ್ಥಾನ ದೇಶದ ಅಭಿವೃದ್ಧಿ ಕಾರ್ಯಕ್ರಮಗಳ ವೈಫಲ್ಯವನ್ನು ಸೂಚಿಸುತ್ತಿದೆ. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದೆ. ಕೊರೊನಾ ವೈರಾಣುವನ್ನು ನಿಯಂತ್ರಿಸುವ ಉದ್ದೇಶದಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ ಜನರ ಮೇಲೆ ತೀವ್ರ ಪರಿಣಾಮ ಬೀರಿರುವುದು ಭಾರತದ ಕಳಪೆ ಸಾಧನೆಗೆ ಕಾರಣಗಳಲ್ಲೊಂದಾಗಿದೆ.

ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶ ಎನ್ನುವ ಹೆಗ್ಗಳಿಕೆಯೊಂದಿಗೆ, ಬಡತನ, ಹಸಿವು ಹಾಗೂ ಅಪೌಷ್ಟಿಕತೆಯ ನೆಲೆಯೂ ಆಗಿರುವುದು ವಿಪರ್ಯಾಸ. ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತ 2015ರಲ್ಲಿ 93 ಹಾಗೂ 2000ದಲ್ಲಿ 83ನೇ ಸ್ಥಾನ ಪಡೆದಿತ್ತು. ಈಗಿನ 101ನೇ ಸ್ಥಾನವನ್ನು ಗಮನಿಸಿದರೆ, ಕಳೆದ ಎರಡು ದಶಕಗಳ ಅವಧಿಯಲ್ಲಿ ಆಹಾರದ ಸಮಸ್ಯೆಯನ್ನು ಪರಿಹರಿಸುವ ಸವಾಲಿನಲ್ಲಿ ನಾವು ಇನ್ನಷ್ಟು ಹಿಂದುಳಿದಿರುವುದು ಸ್ಪಷ್ಟವಾಗುತ್ತದೆ. ಈ ಹಿನ್ನಡೆಯನ್ನು ಪ್ರಾಂಜಲ ಮನಸ್ಸಿನಿಂದ ನೋಡುವುದು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಸಿವಿನ ಸೂಚ್ಯಂಕದ ವರದಿಗೆ ಸರ್ಕಾರದ ಕಡೆಯಿಂದ ಸ್ವವಿಮರ್ಶೆಯ ಪ್ರತಿಕ್ರಿಯೆ ವ್ಯಕ್ತವಾಗುವ ಬದಲು, ಭಾರತದ ವರ್ಚಸ್ಸನ್ನು ಕುಂದಿಸುವ ಪಿತೂರಿಯ ರೂಪದಲ್ಲಿ ವರದಿಯನ್ನು ನೋಡಲಾಗುತ್ತಿದೆ. ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯು ವಾಸ್ತವವನ್ನು ಒಪ್ಪಿಕೊಳ್ಳುವುದೇ ಆಗಿದೆ. ಸತ್ಯವನ್ನು ಒಪ್ಪಿಕೊಳ್ಳಲು ಹಿಂದೆಮುಂದೆ ನೋಡುವುದು ಹಾಗೂ ಸಮಾಜದಲ್ಲಿ ಎಲ್ಲವೂ ಸರಿ ಇದೆ ಎನ್ನುವ ಭ್ರಮೆಯನ್ನು ಹುಟ್ಟಿಸುವುದರಿಂದ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಗೋಡೆಗಳನ್ನು ಕಟ್ಟುವ ಮೂಲಕ ಕೊಳೆಗೇರಿಗಳನ್ನು ಮರೆಮಾಚಬಹುದೇ ಹೊರತು ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸ್ವಾತಂತ್ರ್ಯಾನಂತರದ ಏಳೂವರೆ ದಶಕಗಳ ನಂತರವೂ ಪಡಿತರ ವಿತರಣೆಯಲ್ಲಿನ ಅವ್ಯವಸ್ಥೆ ಹೋಗಲಾಡಿಸಲು ಸಾಧ್ಯವಾಗಿಲ್ಲ; ತಾಯಂದಿರು ಮತ್ತು ಹಸುಗೂಸುಗಳ ಪೋಷಣೆ ಗಂಭೀರ ಸಮಸ್ಯೆಯಾಗಿಯೇ ಉಳಿದಿದೆ. ಈ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಸರ್ಕಾರ ಸ್ಪಷ್ಟ ಕಾರ್ಯಯೋಜನೆ ರೂಪಿಸಬೇಕೇ ವಿನಾ ಸಮಸ್ಯೆಯನ್ನೇ ನಿರಾಕರಿಸುವುದು ವಿವೇಕದ ನಡವಳಿಕೆಯಲ್ಲ.

ಹಸಿವಿನ ಸಮಸ್ಯೆಯ ಜೊತೆಗೆ ಆಹಾರವನ್ನು ಪೋಲು ಮಾಡುವ ಹಾಗೂ ಗೋದಾಮುಗಳಲ್ಲಿ ಕೊಳೆಯಿಸುವ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಬೇಕು. ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಂಡು, ಲಕ್ಷಾಂತರ ವಲಸೆ ಕಾರ್ಮಿಕರು ಹಸಿವಿನಿಂದ ಒದ್ದಾಡುತ್ತಿದ್ದ ಸಮಯದಲ್ಲೇ ಸುಮಾರು 8 ಕೋಟಿ ಟನ್‌ ಆಹಾರಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುವ ಸ್ಥಿತಿಯಲ್ಲಿದ್ದವು ಹಾಗೂ ಮುಗ್ಗಲು ಅಕ್ಕಿಯಿಂದ ಸ್ಯಾನಿಟೈಸರ್‌ ತಯಾರಿಸಬೇಕೆನ್ನುವ ಚಿಂತನೆ ವ್ಯಕ್ತವಾಗಿತ್ತು. ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಪ್ರತಿವರ್ಷ ಮೂರು ಸಾವಿರ ಟನ್‌ಗೂ ಹೆಚ್ಚಿನ ಆಹಾರಧಾನ್ಯಗಳು ಹಾಳಾಗುತ್ತಿರುವುದರ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಸಾವಿರಾರು ಟನ್‌ ಆಹಾರ ಧಾನ್ಯಗಳು ಅಧಿಕಾರಿಗಳ ನಡುವಿನ ಸಂವಹನದ ಕೊರತೆಯಿಂದಾಗಿ ಕೊಳೆತುಹೋಗಿದ್ದ ಘಟನೆ ಕಳೆದ ವರ್ಷ ವರದಿಯಾಗಿತ್ತು. ಶ್ರೀಮಂತವರ್ಗ ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಐದನೇ ಒಂದು ಪಾಲು ಪೋಲಾಗುತ್ತಿದೆ ಎನ್ನುವ ವರದಿಯೂ ಇದೆ. ಬಡತನ ಮತ್ತು ಹಸಿವು ನಿರ್ಮೂಲನೆಗೆ ‘ಗರೀಬಿ ಹಠಾವೊ’ದಿಂದ ‘ಅನ್ನಭಾಗ್ಯ’ದವರೆಗಿನ ಹಲವು ಯೋಜನೆಗಳು ದೇಶದಲ್ಲಿ ಜಾರಿಗೊಂಡಿವೆ. ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಪಡಿತರ ವಿತರಿಸುವ ಯೋಜನೆಗಳು ಎಲ್ಲ ರಾಜ್ಯಗಳಲ್ಲೂ ಇವೆ. ಇಷ್ಟೆಲ್ಲ ಯೋಜನೆಗಳ ನಂತರವೂ ಹಸಿವಿನ ಸಮಸ್ಯೆ ಬಗೆಹರಿದಿಲ್ಲ. ‘ಹಸಿವುಮುಕ್ತ ಭಾರತ’ದ ಘೋಷಣೆ ಮಾತಿನ ರೂಪದಿಂದ ಕಾರ್ಯರೂಪಕ್ಕೆ ತರುವ ದಿಸೆಯಲ್ಲಿ, ಆಹಾರಧಾನ್ಯಗಳ ವೈಜ್ಞಾನಿಕ ಸಂಗ್ರಹ ಮತ್ತು ವಿತರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

(ಕೃಪೆ;ಪ್ರಜಾವಾಣಿ)

 

ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು.

ಬಲೂಚಿಸ್ತಾನ್ ಬಂದರಿನಲ್ಲಿ ಚೀನಾದ ಯೋಜನೆ:


(Chinese project at Balochistan port)

ಸಂದರ್ಭ:

ನವೆಂಬರ್ ಎರಡನೇ ವಾರದಿಂದ, ‘ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್’ (China-Pakistan Economic Corridor – CPEC) ಭಾಗವಾಗಿ, ‘ಬಂದರು ನಗರ’ದ ಬೃಹತ್ ಅಭಿವೃದ್ಧಿ ಯೋಜನೆಗಳ ವಿರುದ್ಧ ಬಲೂಚಿಸ್ತಾನದ ಗ್ವಾದರ್‌ನಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ.

ಏನಿದು ಪ್ರಕರಣ?

ಬಂದರಿನ ಅಭಿವೃದ್ಧಿಯಲ್ಲಿ ಸ್ಥಳೀಯ ಜನರನ್ನು ಕಡೆಗಣಿಸಿರುವ ಬಗ್ಗೆ ಗಮನ ಸೆಳೆಯಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಸ್ಥಳೀಯರು ತಮ್ಮನ್ನು ಈ ಯೋಜನೆಗಳಿಂದ ಹೊರಗಿಟ್ಟಿರುವುದು ಮಾತ್ರವಲ್ಲದೆ, ಪ್ರಸ್ತುತ ಅವರ ಜೀವನವೂ ಅಪಾಯದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಕಾಳಜಿಗಳು:

ಬಲೂಚಿಸ್ತಾನ್, ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಲ್ಲಿ ಅತ್ಯಂತ ಸಂಪನ್ಮೂಲ-ಸಮೃದ್ಧವಾಗಿದ್ದರೂ, ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಒಂದಾಗಿದೆ. ಈ ಪ್ರದೇಶದ ಜನರ ಮುಖ್ಯ ಜೀವನೋಪಾಯವೆಂದರೆ ಮೀನುಗಾರಿಕೆ. ಬಲೂಚಿಸ್ತಾನದ ಜನರು ಕುಡಿಯುವ ನೀರು, ವಿದ್ಯುತ್ ಮತ್ತು ಈ ಪ್ರದೇಶದ ಮುಖ್ಯ ಸಂಪನ್ಮೂಲವಾಗಿರುವ ಗ್ಯಾಸ್ ಸೌಲಭ್ಯಕ್ಕಾಗಿ ಅತ್ಯಂತ ಕಡಿಮೆ ಪ್ರವೇಶವನ್ನು ಹೊಂದಿದ್ದಾರೆ.

ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳ ಕಾಳಜಿಗಳು:

ಗ್ವಾದರ್ ಬಂದರು ಚೀನಾಕ್ಕೆ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಕಾರ್ಯತಂತ್ರದ ಪ್ರವೇಶವನ್ನು ನೀಡುತ್ತದೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಇದನ್ನು ಚೀನೀ ನೌಕಾಪಡೆಯ (PLAN) ಬಳಕೆಗಾಗಿ ದ್ವಿ-ಉದ್ದೇಶದ ಬಂದರಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಮತ್ತು ವ್ಯಾಪಾರ ‘ಮರು-ರಫ್ತು ಬಂದರು’ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಜೊತೆಗೆ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಚೀನಾ ತನ್ನ ಅಸ್ತಿತ್ವವನ್ನು ಅಥವಾ ಉಪಸ್ಥಿತಿಯನ್ನು ‘ಗ್ವಾದರ್ ಬಂದರು’ ಮೂಲಕ ಮ್ಯಾನ್ಮಾರ್‌ನ ಕ್ಯಕ್‌ಪ್ಯು ಮತ್ತು ಶ್ರೀಲಂಕಾದ ಹಂಬಂಟೋಟಾದವರೆಗೆ ವಿಸ್ತರಿಸಲು  ಉದ್ದೇಶಿಸಿದೆ.

ಪಶ್ಚಿಮ ಏಷ್ಯಾದಲ್ಲಿ ತನ್ನ ಪ್ರಮುಖ ಮಿಲಿಟರಿ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಗ್ವಾದರ್‌ನಲ್ಲಿ ಚೀನಾದ ಉಪಸ್ಥಿತಿಯ ಬಗ್ಗೆ ಯುಎಸ್ ಕೂಡ ಕಳವಳ ವ್ಯಕ್ತಪಡಿಸಿದೆ.

Current Affairs

 

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಕುರಿತು:

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC)ವು ಬಹು-ಶತಕೋಟಿ-ಡಾಲರ್ ಮೊತ್ತದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ನ ಪ್ರಮುಖ ಯೋಜನೆಯಾಗಿದೆ, ಚೀನಾ ಅನುದಾನಿತ ಮೂಲಸೌಕರ್ಯ ಯೋಜನೆಗಳ ಮೂಲಕ ವಿಶ್ವದಾದ್ಯಂತ ಬೀಜಿಂಗ್‌ನ ಪ್ರಭಾವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

 1. 3,000 ಕಿ.ಮೀ ಉದ್ದದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಹೆದ್ದಾರಿಗಳು, ರೈಲ್ವೆಜಾಲಗಳು ಮತ್ತು ಪೈಪ್‌ಲೈನ್‌ಗಳನ್ನು ಒಳಗೊಂಡಿದೆ.
 2. ಈ ಯೋಜನೆಯು ಅಂತಿಮವಾಗಿ ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಗ್ವಾದರ್ ನಗರವನ್ನು ಚೀನಾದ ವಾಯುವ್ಯ ಪ್ರಾಂತ್ಯವಾದ ಕ್ಸಿನ್‌ಜಿಯಾಂಗ್‌ಗೆ ಹೆದ್ದಾರಿಗಳು ಮತ್ತು ರೈಲ್ವೆಗಳ ವಿಶಾಲ ಜಾಲದ ಮೂಲಕ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
 3. ಪ್ರಸ್ತಾವಿತ ಯೋಜನೆಗೆ ಹಣಕಾಸಿನ ನೆರವನ್ನು ಚೀನಿ ಬ್ಯಾಂಕು ಗಳು ಭಾರಿ ಸಬ್ಸಿಡಿ ರೂಪದ ಸಾಲದ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ವಿವರಿಸುತ್ತೇವೆ.

ಆದರೆ, ಇದು ಭಾರತಕ್ಕೆ ಏಕತೆ ಕಳವಳ ಕಾರಿ ವಿಷಯವಾಗಿದೆ?

Current Affairs

 

ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK)ಮೂಲಕ ಹಾದು ಹೋಗುತ್ತದೆ.

 1. ಹಿಂದೂ ಮಹಾಸಾಗರದಲ್ಲಿ ಹೆಚ್ಚಿನ ಉಪಸ್ಥಿತಿಯೊಂದಿಗೆ ಗ್ವಾದರ್ ಬಂದರಿನ ಮೂಲಕ ತನ್ನ ಸರಬರಾಜು ಮಾರ್ಗಗಳನ್ನು ಸುರಕ್ಷಿತ ಮತ್ತು ಕಡಿಮೆ ಅಂತರದನ್ನಾಗಿ ಮಾಡಿಕೊಳ್ಳಲು ಚೀನಾ CPEC ಯೋಜನೆಯನ್ನು ಅವಲಂಬಿಸಿದೆ. ಆದ್ದರಿಂದ, CPEC ಯಶಸ್ಸಿನ ನಂತರ, ವ್ಯಾಪಕವಾದ ಚೀನೀ ಉಪಸ್ಥಿತಿಯಿಂದಾಗಿ ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ವ್ಯಾಪಕವಾಗಿ ನಂಬಲಾಗಿದೆ.
 2. CPEC ಯು ಪಾಕಿಸ್ತಾನದ ಆರ್ಥಿಕತೆಯನ್ನು ಯಶಸ್ವಿಯಾಗಿ ಪರಿವರ್ತಿಸಿದರೆ ಅದು ಭಾರತಕ್ಕೆ (red rag) ಪ್ರಕೋಪದಾಯಕವಾಗಬಹುದು, ಮತ್ತು ಭಾರತವು ಶ್ರೀಮಂತ ಮತ್ತು ಪ್ರಬಲವಾದ ಪಾಕಿಸ್ತಾನದ ಮುಂದೆ ಕೈ ಚಾಚುವ ಸ್ಥಿತಿಯಲ್ಲಿ ಉಳಿಯಬಹುದು ಎಂದು ವಾದಿಸಲಾಗುತ್ತಿದೆ.
 3. ಇದಲ್ಲದೆ,ಭಾರತವು ಚೀನಾ ಮತ್ತು ಪಾಕಿಸ್ತಾನದೊಂದಿಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಮತ್ತು ಎರಡರೊಂದಿಗೂ ಸಂಘರ್ಷದ ಇತಿಹಾಸವನ್ನು ಹೊಂದಿದೆ. ಪರಿಣಾಮವಾಗಿ, ಯೋಜನೆಯನ್ನು ಪ್ರಾಯೋಗಿಕವಾಗಿ ಮರು-ಸಂಪರ್ಕಿಸಲು ಸಲಹೆಗಳನ್ನು ನೀಡಲಾಗಿದ್ದರೂ, ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಭಾರತದ ಸಮೀಕರಣಗಳನ್ನು ಮುಂದುವರೆಸಬೇಕಾಗಿರುವುದರಿಂದ ವಿವಾದದ ತತ್ವಗಳನ್ನು ಯಾವುದೇ ವಕೀಲರು ರದ್ದುಗೊಳಿಸಿಲ್ಲ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಸೌರ ಒಕ್ಕೂಟಕ್ಕೆ ವಿಶ್ವಸಂಸ್ಥೆಯ ವೀಕ್ಷಕ ಸ್ಥಾನಮಾನ:


(UN Observer status to Solar Alliance)

ಸಂದರ್ಭ:

ಇತ್ತೀಚೆಗೆ, ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ (International Solar Alliance – ISA) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ‘ವೀಕ್ಷಕ ಸ್ಥಾನಮಾನ’ (Observer Status) ನೀಡಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಭಾರತ ಬಣ್ಣಿಸಿದೆ.

ವೀಕ್ಷಕ ಸ್ಥಾನಮಾನದ ಪ್ರಾಮುಖ್ಯತೆ:

ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA)  ಮತ್ತು ವಿಶ್ವಸಂಸ್ಥೆಯ ನಡುವೆ ನಿಯಮಿತ ಮತ್ತು ಉತ್ತಮವಾಗಿ ವ್ಯಾಖ್ಯಾನಿಸಲಾದ  ಸಹಕಾರವನ್ನು ಸ್ಥಾಪಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ (ISA) ವೀಕ್ಷಕ ಸ್ಥಾನಮಾನವನ್ನು ನೀಡಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಇಂಧನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರಯೋಜನವನ್ನು ನೀಡುತ್ತದೆ.

ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA) ಕುರಿತು:

 1. ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA) ವನ್ನು ಭಾರತ ಮತ್ತು ಫ್ರಾನ್ಸ್‌ನ ಜಂಟಿ ಪ್ರಯತ್ನವಾಗಿ ‘ಸೌರ ಶಕ್ತಿ ಪರಿಹಾರಗಳ’ ನಿಯೋಜನೆಯ ಮೂಲಕ ಹವಾಮಾನ ಬದಲಾವಣೆಯ ವಿರುದ್ಧ ಪ್ರಯತ್ನಗಳನ್ನು ಸಜ್ಜುಗೊಳಿಸಲು ಕಲ್ಪಿಸಲಾಗಿದೆ.
 2. ಇದನ್ನು ಭಾರತದ ಪ್ರಧಾನ ಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷರು 30 ನವೆಂಬರ್ 2015 ರಂದು ಫ್ರೆಂಚ್ ರಾಜಧಾನಿ ಪ್ಯಾರಿಸ್‌ನಲ್ಲಿ ಆಯೋಜಿಸಲಾದ COP-21 ಸಮಯದಲ್ಲಿ ಪ್ರಾರಂಭಿಸಿದರು.
 3. ಭಾರತ ಪ್ರಾರಂಭಿಸಿದ ISA 122 ಕ್ಕೂ ಹೆಚ್ಚು ದೇಶಗಳ ಒಕ್ಕೂಟವಾಗಿದೆ.
 4. ISA ಸೌರಶಕ್ತಿಯನ್ನು ಬಳಸಿಕೊಂಡು ತಮ್ಮ ಶಕ್ತಿಯ ಅಗತ್ಯಗಳನ್ನು ಪೂರೈಸಲು ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಸಂಪೂರ್ಣವಾಗಿ ಅಥವಾ ಭಾಗಶಃ ನೆಲೆಗೊಂಡಿರುವ ಸೌರ ಸಂಪನ್ಮೂಲ ಶ್ರೀಮಂತ ರಾಷ್ಟ್ರಗಳ ಒಕ್ಕೂಟವಾಗಿದೆ.
 5. ಪ್ಯಾರಿಸ್ ಘೋಷಣೆಯಲ್ಲಿ, ಐಎಸ್ಎ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಸೌರಶಕ್ತಿಯ ಉತ್ತೇಜನಕ್ಕೆ ಮೀಸಲಾಗಿರುವ ಒಕ್ಕೂಟವೆಂದು ಘೋಷಿಸಲಾಗಿದೆ.
 6. ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಅಸ್ತಿತ್ವದಲ್ಲಿರುವ ಸೌರ ತಂತ್ರಜ್ಞಾನಗಳ ದೊಡ್ಡ-ಪ್ರಮಾಣದ ನಿಯೋಜನೆಯನ್ನು ಸುಗಮಗೊಳಿಸುತ್ತದೆ ಮತ್ತು ಸಹಯೋಗದ ಸೌರ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯ ನಿರ್ಮಾಣವನ್ನು ಉತ್ತೇಜಿಸುತ್ತದೆ.
 7. ISA ಜಾಗತಿಕ ಬೇಡಿಕೆಯನ್ನು ಒಟ್ಟುಗೂಡಿಸಲು ಶ್ರೀಮಂತ ಸೌರ ಸಾಮರ್ಥ್ಯ ಹೊಂದಿರುವ ದೇಶಗಳನ್ನು ಒಟ್ಟುಗೂಡಿಸುತ್ತದೆ, ಇದರಿಂದಾಗಿ ಬೃಹತ್ ಖರೀದಿಯ ಮೂಲಕ ಬೆಲೆಗಳನ್ನು ಕಡಿಮೆ ಮಾಡುತ್ತದೆ.

ಸಚಿವಾಲಯ:

 1. ಗುರುಗ್ರಾಮ’ದಲ್ಲಿ ಭಾರತ ಮತ್ತು ಫ್ರಾನ್ಸ್ ಗಳು ಜಂಟಿಯಾಗಿ ‘ಇಂಟರ್‌ನ್ಯಾಷನಲ್ ಸೋಲಾರ್ ಅಲಯನ್ಸ್’ ಪ್ರಧಾನ ಕಛೇರಿಯ ಅಡಿಪಾಯವನ್ನು ಹಾಕಿದವು.
 2. ಹರಿಯಾಣದ ಗುರುಗ್ರಾಮ್‌ನಲ್ಲಿರುವ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ ಕಾಂಪ್ಲೆಕ್ಸ್’ ನಲ್ಲಿ ISA ನ ಮಧ್ಯಂತರ ಸೆಕ್ರೆಟರಿಯೇಟ್ ಅನ್ನು ಅವರು ಉದ್ಘಾಟಿಸಿದರು.

ಉದ್ದೇಶಗಳು:

 1. ಅಂತರರಾಷ್ಟ್ರೀಯ ಸೌರ ಒಕ್ಕೂಟ’ದ ಪ್ರಮುಖ ಉದ್ದೇಶಗಳು ಜಾಗತಿಕವಾಗಿ 1,000GW ಸೌರ ಉತ್ಪಾದನಾ ಸಾಮರ್ಥ್ಯವನ್ನು ನಿಯೋಜಿಸುವುದು ಮತ್ತು 2030 ರ ವೇಳೆಗೆ ಸೌರ ಶಕ್ತಿಯಲ್ಲಿ US $ 1000 ಶತಕೋಟಿಗಿಂತ ಹೆಚ್ಚಿನ ಹೂಡಿಕೆಯನ್ನು ಸಜ್ಜುಗೊಳಿಸುವುದು.
 2. ISA ಅಡಿಯಲ್ಲಿ, ತಂತ್ರಜ್ಞಾನ ಲಭ್ಯತೆ ಮತ್ತು ಆರ್ಥಿಕ ಸಂಪನ್ಮೂಲಗಳ ಅಭಿವೃದ್ಧಿ, ಮತ್ತು ಶೇಖರಣಾ ತಂತ್ರಜ್ಞಾನದ ಅಭಿವೃದ್ಧಿ, ದೊಡ್ಡ ಪ್ರಮಾಣದ ಉತ್ಪಾದನೆ ಮತ್ತು ನಾವೀನ್ಯತೆಗಳ ಲಭ್ಯತೆ ಮತ್ತು ಅಭಿವೃದ್ಧಿಗಾಗಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಯೋಜಿಸಲಾಗಿದೆ.

ಸಹಿ:

ಒಟ್ಟು 80 ದೇಶಗಳು ‘ಅಂತರರಾಷ್ಟ್ರೀಯ ಸೌರ ಒಕ್ಕೂಟ’ ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಅನುಮೋದಿಸಿವೆ,ಮತ್ತು 101 ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಅವಶ್ಯಕತೆ:

ಕಡಿಮೆ ವೆಚ್ಚದ ತಂತ್ರಜ್ಞಾನದೊಂದಿಗೆ ಹೆಚ್ಚು ಮಹತ್ವಾಕಾಂಕ್ಷೆಯ ಸೌರಶಕ್ತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು.

ಸೌರ ಶಕ್ತಿಯು ಅಗ್ಗದ ಮತ್ತು ವಿಶ್ವಾಸಾರ್ಹ ಶಕ್ತಿಯ ಪ್ರಮುಖ ಮೂಲವಾಗಿದೆ. ಯೋಜನೆಯ ಯಶಸ್ವಿ ಅನುಷ್ಠಾನವು ಯುನಿವರ್ಸಲ್ ಎನರ್ಜಿ ಆಕ್ಸೆಸ್ ಗೋಲ್ (SDG 7) ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಅಂತರರಾಷ್ಟ್ರೀಯ ಸೌರ ಒಕ್ಕೂಟ’ದ ಆರು ಪ್ರಮುಖ ಕಾರ್ಯಕ್ರಮಗಳು ಪರಿಸರ ಸಂರಕ್ಷಣೆಗಾಗಿ ‘ಗೇಮ್ ಚೇಂಜರ್’ ಎಂದು ಸಾಬೀತುಪಡಿಸಬಹುದು.

 1. ಕೃಷಿ ಬಳಕೆಗಾಗಿ ಸೌರ ಅನ್ವಯಗಳು,
 2. ಹೆಚ್ಚು ಕೈಗೆಟುಕುವ ಹಣಕಾಸು,
 3. ಮಿನಿ ಗ್ರಿಡ್ ಗಳು,
 4. ಸೌರ ಛಾವಣಿಗಳು
 5. ‘ಸೋಲಾರ್ ಇ-ಮೊಬಿಲಿಟಿ’ ಮತ್ತು ಸ್ಟೋರೇಜ್ ಮತ್ತು ದೊಡ್ಡ ಪ್ರಮಾಣದ ಸೌರ ಉದ್ಯಾನವನ.

solar

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ದೇಶದ್ರೋಹದ ಕಾನೂನು:


(Sedition law)

ಸಂದರ್ಭ:

‘ದೇಶದ್ರೋಹ’ಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 124A ಅನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ಸ್ಪಷ್ಟಪಡಿಸಿದೆ.

ಹಿನ್ನೆಲೆ:

ದೇಶದ್ರೋಹ ಕಾನೂನನ್ನು,ವಿಮರ್ಶಕರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಕೆದಾರರು, ಸರ್ಕಾರದ ಕೋವಿಡ್ -19 ನಿರ್ವಹಣೆಯ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ನೋವುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ  ಅಥವಾ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ, ವೈದ್ಯಕೀಯ ಸೇವೆಗಳು, ಉಪಕರಣಗಳು, ಔಷಧಿಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಪಡೆಯಲು ಸಹಾಯವನ್ನು ಕೋರಿದ ಕಾರ್ಯಕರ್ತರು ಮತ್ತು ನಾಗರಿಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೇಶದ್ರೋಹ ಕಾನೂನನ್ನು ಬಳಸಲಾಗಿದೆ.

ಸಮಯದ ಅವಶ್ಯಕತೆ:

ಉನ್ನತ ನ್ಯಾಯಾಲಯದ ಪ್ರಕಾರ, “ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 124A, 153A ಮತ್ತು 505 ರ ನಿಬಂಧನೆಗಳು” ನಿರ್ದಿಷ್ಟವಾಗಿ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮದ ಸುದ್ದಿ, ಮಾಹಿತಿ ಮತ್ತು ದೇಶದ ಯಾವುದೇ ಭಾಗದಲ್ಲಿ ಅಸ್ತಿತ್ವದಲ್ಲಿರುವ ಆಡಳಿತವನ್ನು ಟೀಕಿಸುವ ಹಕ್ಕನ್ನು ಸಂವಹನ ಮಾಡುವ ಹಕ್ಕನ್ನು ಉಲ್ಲೇಖಿಸುತ್ತದೆ. ಇದರ ವ್ಯಾಪ್ತಿ ಮತ್ತು ನಿಯತಾಂಕಗಳನ್ನು ವಿವರಿಸಬೇಕಾಗದ ಅವಶ್ಯಕತೆಯಿದೆ.

(ದೇಶದ್ರೋಹದ ಕಾನೂನು: 6-12-2021 ರ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ).

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ರಾಯಲ್ ಗೋಲ್ಡ್ ಮೆಡಲ್:

ವಾಸ್ತು ವಿನ್ಯಾಸಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಭಾರತ ದೇಶದ ಪ್ರಸಿದ್ಧ ವಾಸ್ತು ವಿನ್ಯಾಸಕ ಬಾಲಕೃಷ್ಣ ದೋಶಿ ಅವರು ಬ್ರಿಟನ್‌ನ ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ರಿಟಿಷ್‌ (ಆರ್‌ಐಬಿಎ) ನೀಡುವ ಪ್ರತಿಷ್ಠಿತ ‘ರಾಯಲ್‌ ಗೋಲ್ಡ್‌ ಮೆಡಲ್‌–2022’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ವಾಸ್ತುಶಿಲ್ಪ ಕ್ಷೇತ್ರದಲ್ಲಿ ನೀಡಲಾಗುವ ವಿಶ್ವದ ಅತ್ಯುನ್ನತ ಗೌರವ ಇದಾಗಿದೆ.

 1. 94 ವರ್ಷದ ಬಾಲಕೃಷ್ಣ ದೋಶಿ ಅವರು 70 ವರ್ಷಗಳ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ಯೋಜನೆಗಳಿಗೆ ವಾಸ್ತು ರಚನೆ ಮಾಡಿದ್ದಾರೆ. ವೃತ್ತಿಪರ ಕೆಲಸದ ಜತೆಗೆ ಅವರು ಭಾರತ ಸೇರಿದಂತೆ ನೆರೆಯ ದೇಶಗಳಲ್ಲಿ ಬೋಧನಾ ಕಾರ್ಯದಲ್ಲೂ ತೊಡಗಿದ್ದಾರೆ. ಈ ಮೂಲಕ ಅವರು ವಾಸ್ತು ವಿನ್ಯಾಸ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದಾರೆ ಎಂದು ಆರ್‌ಐಬಿಎ ಪ್ರಕಟಣೆಯಲ್ಲಿ ತಿಳಿಸಿದೆ.
 2. ‘ರಾಯಲ್‌ ಗೋಲ್ಡ್‌ ಮೆಡಲ್‌’ ಅನ್ನು ವಾಸ್ತು ವಿನ್ಯಾಸ ಕ್ಷೇತ್ರದ ಪ್ರಗತಿ ಮತ್ತು ಅದರ ಮೇಲೆ ಮಹತ್ವದ ಪ್ರಭಾವ ಬೀರಿದ ವ್ಯಕ್ತಿ ಅಥವಾ ಜನರ ಗುಂಪಿಗೆ ನೀಡಲಾಗುತ್ತದೆ. ಈ ಕ್ಷೇತ್ರದಲ್ಲಿ ದೋಶಿ ಅವರ ಜೀವಮಾನ ಶ್ರೇಷ್ಠ ಸಾಧನೆಯನ್ನು ಗುರುತಿಸಿ ರಾಣಿ ಎಲಿಜಬೆತ್‌–2 ಅವರು ಅನುಮೋದನೆ ನೀಡಿದ್ದಾರೆ.

Current Affairs


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos