Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 30ನೇ ನವೆಂಬರ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಸಂಸದರ ಅಮಾನತು.

2. ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ.

3. ಕೃಷ್ಣಾ ನದಿ ನೀರು ವಿವಾದ.

 

ಸಾಮಾನ್ಯ ಜ್ಞಾನ ಪತ್ರಿಕೆ 3:

1. LEO ಉಪಗ್ರಹಗಳ ಮೂಲಕ ಇಂಟರ್ನೆಟ್.

2. ನಾಸಾದ ಪರ್ಸೇವೆರನ್ಸ್ ರೋವರ್

3. ಅಫಘಾನಿಸ್ತಾನದಲ್ಲಿ ಮಾದಕ ವಸ್ತು ಕಳ್ಳಸಾಗಣೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಅಫ್ಘಾನಿಸ್ತಾನದ ಹಜಾರಾಗಳು.

2. ತಿವಾ ಬುಡಕಟ್ಟು ಮತ್ತು ವಂಚುವಾ ಹಬ್ಬ

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಸಂಸದರ ಅಮಾನತು:


(Suspension of MPs)

ಸಂದರ್ಭ:

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಪ್ರಸ್ತುತ ಸಂಸತ್ ಅಧಿವೇಶನದ ಉಳಿದ ಅವಧಿಗೆ 12 ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಲು ಸದನದ ಅನುಮೋದನೆಯನ್ನು ಕೋರಿದ್ದಾರೆ.

ಸಂಸತ್ತಿನ ಮುಂಗಾರು/ಮಾನ್ಸೂನ್ ಅಧಿವೇಶನದ ಕೊನೆಯ ದಿನದಂದು ಅಭೂತಪೂರ್ವ ದುರ್ನಡತೆ, ಅವಹೇಳನಕಾರಿ, ಅಶಿಸ್ತಿನ ಮತ್ತು ಹಿಂಸಾತ್ಮಕ ನಡವಳಿಕೆ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕ ದಾಳಿ ಎಸಗಿದ್ದಕ್ಕಾಗಿ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ.

ಸಭಾಧ್ಯಕ್ಷರು ಅಮಾನತು ಪ್ರಕ್ರಿಯೆಯನ್ನು ಯಾವಾಗ ಪ್ರಾರಂಭಿಸಬಹುದು?

ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ಬಗ್ಗೆ ಸಾಮಾನ್ಯ ‘ನಿಯಮ 255’:

 1. ರಾಜ್ಯಸಭೆಯ ಅಧ್ಯಕ್ಷರು ಈ ಸಂಸದರನ್ನು ಅಮಾನತುಗೊಳಿಸುವ ಸಲುವಾಗಿ, ರಾಜ್ಯಸಭೆಯಲ್ಲಿ ಸಾಮಾನ್ಯ ನಿಯಮಗಳು ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 255 ಅನ್ನು ಜಾರಿಗೊಳಿಸುತ್ತಾರೆ.
 2. ರಾಜ್ಯಸಭೆಯಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 255 ರ ಪ್ರಕಾರ (ಸದನದಿಂದ ಸದಸ್ಯರ ನಿರ್ಗಮನ) – “ಅಧ್ಯಕ್ಷರು ತಮ್ಮ ಅಭಿಪ್ರಾಯದಲ್ಲಿ ಸದನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದಾರೆ ಎಂದು ಮನಗಂಡರೆ ಯಾವುದೇ ಸದಸ್ಯರನ್ನು ರಾಜ್ಯಸಭೆಯಿಂದ ಹೊರಹೋಗುವಂತೆ ನಿರ್ದೇಶಿಸಬಹುದು. “ಮತ್ತು ನಿರ್ಗಮಿಸಲು ಆದೇಶಿಸಲ್ಪಟ್ಟ ಸದಸ್ಯರು ತಕ್ಷಣವೇ ಸದನದಿಂದ ನಿರ್ಗಮಿಸಬೇಕು ಮತ್ತು ಆ ದಿನದ ಉಳಿದ ಅವಧಿಗೆ ಗೈರುಹಾಜರಾಗಬೇಕು.”

‘ನಿಯಮ 255’ರ ಅಡಿಯಲ್ಲಿ ಅಮಾನತು ಹೇಗೆ ‘ನಿಯಮ 256’ ಅಡಿಯಲ್ಲಿನ ಅಮಾನತ್ತಿಗಿಂತ ಭಿನ್ನವಾಗಿದೆ?

ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ಬಗ್ಗೆ ಸಾಮಾನ್ಯ ‘ನಿಯಮ 256’ ರಲ್ಲಿ ‘ಒಬ್ಬ ಸದಸ್ಯನ ಅಮಾನತು’ಗೆ ಅವಕಾಶ ನೀಡುತ್ತದೆ; ಆದರೆ ‘ನಿಯಮ 255’ ಕಡಿಮೆ ಶಿಕ್ಷೆಯನ್ನು ಒದಗಿಸುತ್ತದೆ.

 1. ನಿಯಮ 256 ರ ಅಡಿಯಲ್ಲಿ, “ರಾಜ್ಯಸಭೆಯ ಅಧ್ಯಕ್ಷರು ಅಗತ್ಯವೆಂದು ಭಾವಿಸಿದರೆ, ಪ್ರಸ್ತುತ ಅಧಿವೇಶನದ ಉಳಿದ ಅವಧಿಯನ್ನು ಮೀರದಂತೆ ಯಾವುದೇ ಸದಸ್ಯರನ್ನು ಸದನದಿಂದ ಅಮಾನತುಗೊಳಿಸಬಹುದು.”

ಸಂಸದೀಯ ಶಿಷ್ಟಾಚಾರದ ನಿಯಮಗಳು:

ಸಂಸದರು ಸಂಸದೀಯ ಶಿಷ್ಟಾಚಾರದ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

 1. ಉದಾಹರಣೆಗೆ, ಲೋಕಸಭೆಯ ನಿಯಮ ಪುಸ್ತಕವು ಸಂಸದರಿಗೆ ಇತರರ ಭಾಷಣಗಳಿಗೆ ಅಡ್ಡಿ ಮಾಡಬಾರದು, ಶಾಂತಿಯನ್ನು ಕಾಪಾಡಬೇಕು ಮತ್ತು ಚರ್ಚೆಯ ಸಮಯದಲ್ಲಿ ಕಾಮೆಂಟ್‌ಗಳನ್ನು ಮಾಡುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸಬಾರದು ಎಂದು ನಿರ್ದಿಷ್ಟಪಡಿಸುತ್ತದೆ.

ಪ್ರತಿಭಟನೆಯ ಹೊಸ ರೂಪಗಳಿಂದಾಗಿ ಈ ನಿಯಮಗಳನ್ನು 1989 ರಲ್ಲಿ ನವೀಕರಿಸಲಾಯಿತು.

 1. ಹೊಸ ನಿಯಮಗಳ ಪ್ರಕಾರ, ಸದಸ್ಯರು ಸದನದಲ್ಲಿ ಘೋಷಣೆಗಳನ್ನು ಕೂಗಲು, ಫಲಕಗಳನ್ನು ಪ್ರದರ್ಶಿಸಲು, ಪ್ರತಿಭಟನೆಯಲ್ಲಿ ದಾಖಲೆಗಳನ್ನು ಹರಿದು ಹಾಕಲು ಮತ್ತು ಕ್ಯಾಸೆಟ್‌ಗಳು ಅಥವಾ ಟೇಪ್ ರೆಕಾರ್ಡರ್‌ಗಳನ್ನು ಪ್ಲೇ ಮಾಡಲು ಅನುಮತಿಸುವುದಿಲ್ಲ.

ಇದೇ ನಿಯಮಗಳು ರಾಜ್ಯಸಭೆಯಲ್ಲೂ ಅನ್ವಯಿಸುತ್ತವೆ. ಕಲಾಪವನ್ನು ಸುಗಮವಾಗಿ ನಡೆಸಲು ನಿಯಮ ಪುಸ್ತಕವು ಉಭಯ ಸದನಗಳ ಪೀಠಾಧಿಪತಿಗಳಿಗೂ ಕೆಲವು ಸಮಾನ ಅಧಿಕಾರಗಳನ್ನು ಒದಗಿಸುತ್ತದೆ.

ಲೋಕಸಭೆಯ ಸಭಾಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರು ಅಧಿಕಾರದ ನಡುವಿನ ವ್ಯತ್ಯಾಸ:

 1. ಲೋಕಸಭೆಯ ಸ್ಪೀಕರ್‌ನಂತೆ, ರಾಜ್ಯಸಭೆಯ ಅಧ್ಯಕ್ಷರು, ರಾಜ್ಯಸಭೆಯಲ್ಲಿನ ನಿಯಮ ಕೈಪಿಡಿಯ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮ ಸಂಖ್ಯೆ 255 ರ ಅಡಿಯಲ್ಲಿ, ರಾಜ್ಯಸಭೆಯ “ಯಾವುದೇ ಸದಸ್ಯನ ನಡವಳಿಕೆ, ಅವರ ಅಭಿಪ್ರಾಯದಲ್ಲಿ, ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ, ಎಂದು ಕಂಡುಬಂದರೆ ತಕ್ಷಣವೇ ರಾಜ್ಯಸಭೆಯಿಂದ ಹೊರನಡೆಯುವಂತೆ” ನಿರ್ದೇಶನ ನೀಡುವ ಅಧಿಕಾರವನ್ನು ಹೊಂದಿದ್ದಾರೆ.
 2. ಆದರೆ, ಲೋಕಸಭೆಯ ಸಭಾಪತಿ ಗಳಂತೆ ರಾಜ್ಯಸಭೆಯ ಅಧ್ಯಕ್ಷರಿಗೆ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರವಿಲ್ಲ.

ರಾಜ್ಯಸಭೆಯ ಸದಸ್ಯರನ್ನು ಅಮಾನತು ಮಾಡಲು ಅನುಸರಿಸಬೇಕಾದ ವಿಧಾನ:

 1. ರಾಜ್ಯಸಭೆಯ ಅಧ್ಯಕ್ಷರು,ಸಭಾ ಪೀಠದ ಅಧಿಕಾರವನ್ನು ನಿರ್ಲಕ್ಷಿಸುವ ಅಥವಾ ರಾಜ್ಯಸಭೆಯ ವ್ಯವಹಾರ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಪದೇ ಪದೇ ಹಾಗೂ ಉದ್ದೇಶಪೂರ್ವಕವಾಗಿ ತಡೆಯುವ ಮೂಲಕ ರಾಜ್ಯಸಭೆಯ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುವ ಸದಸ್ಯರನ್ನು ಹೆಸರಿಸಬಹುದು.
 2. ಹೀಗೆ ಒಬ್ಬ ಸದಸ್ಯನನ್ನು ಅಧ್ಯಕ್ಷರು ಹೆಸರಿಸಿದರೆ, ಅವರು, ತಿದ್ದುಪಡಿ, ಮುಂದೂಡಿಕೆ ಅಥವಾ ಚರ್ಚೆಯಿಲ್ಲದೆ, ಪ್ರಸಕ್ತ ಅಧಿವೇಶನದ ಉಳಿದ ಅವಧಿಗೆ ಆ ಸದಸ್ಯನನ್ನು ರಾಜ್ಯಸಭೆಯ ಸೇವೆಯಿಂದ ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಸದನವು ಅಂಗೀಕರಿಸಬಹುದು.
 3. ರಾಜ್ಯಸಭೆಯು ಯಾವುದೇ ಸಮಯದಲ್ಲಿ, ಒಂದು ನಿಲುವಳಿ ಯನ್ನು ಮಂಡಿಸುವ ಮೂಲಕ ಅಮಾನತು ಆದೇಶವನ್ನು ರದ್ದುಗೊಳಿಸಬಹುದು.

ಸದನದಲ್ಲಿ ಸುವ್ಯವಸ್ಥೆ ಕಾಪಾಡುವ ಪ್ರಯತ್ನಗಳು:

ರಾಜ್ಯಸಭೆಯ ಅಧ್ಯಕ್ಷರಾಗಿ, ಉಪರಾಷ್ಟ್ರಪತಿ ಅನ್ಸಾರಿ ಅವರು ಸದನದಲ್ಲಿ ಆದೇಶವನ್ನು ತರಲು ಹಲವಾರು ಕ್ರಮಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು. 2013 ರಲ್ಲಿ, ಅವರು ಸದನದಲ್ಲಿ ಶಿಸ್ತನ್ನು ನಿರ್ವಹಿಸಲು ಹಲವಾರು ಕ್ರಾಂತಿಕಾರಿ ಪರಿಹಾರಗಳನ್ನು ಪ್ರಸ್ತುತಪಡಿಸಿದರು. ಅವುಗಳು ಇಂತಿವೆ.

 1. ರಾಜ್ಯಸಭೆಯ ನಿಯಮಗಳನ್ನು ಉಲ್ಲಂಘಿಸುವ ಸಂಸದರ ಹೆಸರನ್ನು ರಾಜ್ಯಸಭಾ ಬುಲೆಟಿನ್ ನಲ್ಲಿ ಪ್ರಕಟಿಸುವುದು ಮತ್ತು ಅವಮಾನಿಸುವುದು.
 2. ಅಧ್ಯಕ್ಷರ ಪೀಠದ ಮುಂದೆ ಇರುವ ಬಾವಿಗೆ ಬಂದು ಫಲಕಗಳನ್ನು ಪ್ರದರ್ಶಿಸುವ ಅಥವಾ ಅಸಭ್ಯ ನಡವಳಿಕೆಯನ್ನು ತೋರುವ ಸದಸ್ಯರ ಹೆಸರನ್ನು ರಾಜ್ಯಸಭೆಯ ಬುಲೆಟಿನ್ ನಲ್ಲಿ ಸೇರಿಸುವುದು.
 3. ಸದನದಲ್ಲಿ ಅಸ್ವಸ್ಥತೆಯ ದೃಶ್ಯಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ತಡೆಯಲು ‘ಸದನದ ಪ್ರಕ್ರಿಯೆಗಳ’ ಪ್ರಸಾರವನ್ನು ಮುಂದೂಡುವುದು.

ಸಂಸದರ ಅಮಾನತ್ತಿನ ಸಮರ್ಥನೆ ಹೇಗೆ? ಇದು ಅಶಿಸ್ತಿನ ನಡವಳಿಕೆಯನ್ನು ನಿಲ್ಲಿಸಲು ತೆಗೆದುಕೊಂಡ ತೀವ್ರತರದ ಕ್ರಮವಲ್ಲವೇ?

ಸಂಸದರ ಅಶಿಸ್ತಿನ ವರ್ತನೆಗೆ ಪರಿಹಾರವು ದೀರ್ಘಕಾಲೀನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿರಬೇಕು.

 1. ಸದನದಲ್ಲಿ ವಿಚಾರಣೆಯ ಸುಗಮ ನಡವಳಿಕೆಗಾಗಿ, ಪ್ರಿಸೈಡಿಂಗ್ ಅಧಿಕಾರಿಯ ಅತ್ಯುನ್ನತ ಅಧಿಕಾರವನ್ನು ಜಾರಿಗೊಳಿಸುವುದು ಅತ್ಯಗತ್ಯ ಎಂಬುದರಲ್ಲಿ ಸಂದೇಹವಿಲ್ಲ.
 2. ಆದಾಗ್ಯೂ, ಪೀಠಾಧಿಕಾರಿಯು ಸಮತೋಲನವನ್ನು ಕಾಯ್ದುಕೊಳ್ಳಬೇಕು. ಪೀಠಾಧಿಕಾರಿಯ ಕಾರ್ಯವು ಸದನವನ್ನು ನಡೆಸುವುದೇ ಹೊರತು ಅದನ್ನು ಆಳುವುದಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಸದನದಲ್ಲಿ ಗಲಾಟೆ ಮಾಡಿದ /ಅಸಭ್ಯ ವರ್ತನೆಯನ್ನು ತೋರಿದ ಸಂಸದರನ್ನು ಎಷ್ಟು ಬಾರಿ ಅಮಾನತು ಮಾಡಲಾಗಿದೆ?

 1. ಇಂತಹ ಮೊದಲ ಘಟನೆ ನಡೆದದ್ದು 1963ರಲ್ಲಿ. ಕೆಲವು ಲೋಕಸಭಾ ಸಂಸದರು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಜಂಟಿಭಾಷಣ ಮಾಡುವಾಗ ಮೊದಲು ಭಾಷಣಕ್ಕೆ ಅಡ್ಡಿಪಡಿಸಿ ನಂತರ ಸಭಾತ್ಯಾಗ ಮಾಡಿದರು.
 2. ಅಂದಿನ ಲೋಕಸಭೆಯು ಈ ಸಂಸದರಿಗೆ ಛೀಮಾರಿ ಹಾಕುವುದರೊಂದಿಗೆ ಕೊನೆಗೊಂಡಿತು. 1989 ರಲ್ಲಿ, ಠಾಕರ್ ಆಯೋಗದ ವರದಿಯ ಚರ್ಚೆಯ ನಂತರ 63 ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಯಿತು.
 3. ಇತ್ತೀಚೆಗೆ, 2010 ರಲ್ಲಿ, ‘ಮಹಿಳಾ ಮೀಸಲಾತಿ ಮಸೂದೆ’ಯನ್ನು ಸಚಿವರಿಂದ ಕಿತ್ತುಕೊಂಡಿದ್ದಕ್ಕಾಗಿ 7 ಸಂಸದರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಯಿತು.

ಅಂದಿನಿಂದ ಸಂಸದರು ಸದನದಲ್ಲಿ ಘೋಷಣೆ, ಪೇಪರ್ ಸ್ಪ್ರೇ, ಫಲಕಗಳನ್ನು ಬಳಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ:


(National Court of Appeal)

ಸಂದರ್ಭ:

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ನಾಲ್ಕು ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ (National Court of Appeal)  ಗಳನ್ನು ಒಳಗೊಂಡಂತೆ ನ್ಯಾಯಾಂಗ ವ್ಯವಸ್ಥೆಯನ್ನು ಪುನರ್ರಚಿಸುವಂತೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ನೀಡಿದ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

 1. ಸ್ವಾತಂತ್ರ್ಯದ ನಂತರ ನ್ಯಾಯಾಂಗ ರಚನೆಯು ಬಹುತೇಕ ಸ್ಥಬ್ಧವಾಗಿದೆ ಮತ್ತು ನಾಲ್ಕು ಮೇಲ್ಮನವಿ ನ್ಯಾಯಾಲಯಗಳೊಂದಿಗೆ, ನ್ಯಾಯಾಲಯಗಳ ಮುಂದೆ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ ಎಂದು ಅವರು ಟೀಕಿಸಿದ್ದಾರೆ.

ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ (National Court of Appeal) ಕುರಿತು:

ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಲ್ಲಿನ ಪ್ರಾದೇಶಿಕ ಪೀಠಗಳೊಂದಿಗೆ ‘ನ್ಯಾಷನಲ್ ಕೋರ್ಟ್ ಆಫ್ ಅಪೀಲ್’ (NCA) ಉದ್ದೇಶವು ಸಿವಿಲ್, ಕ್ರಿಮಿನಲ್, ಕಾರ್ಮಿಕ ಮತ್ತು ಕಂದಾಯ ವಿಷಯಗಳಲ್ಲಿ ತನ್ನ ಅಧಿಕಾರ ವ್ಯಾಪ್ತಿಯೊಳಗೆ ಹೈಕೋರ್ಟ್‌ಗಳು ಮತ್ತು ಟ್ರಿಬ್ಯೂನಲ್‌ಗಳ ನಿರ್ಧಾರಗಳ ವಿರುದ್ಧದ ಮೇಲ್ಮನವಿಗಳನ್ನು ವ್ಯವಹರಿಸುವ ‘ಅಂತಿಮ ನ್ಯಾಯಾಲಯ’ವಾಗಿದೆ.

 1. ಅಂತಹ ಸನ್ನಿವೇಶದಲ್ಲಿ, ದೆಹಲಿಯಲ್ಲಿರುವ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಕೆಲಸದ ಹೊರೆ ಕಡಿಮೆಯಾಗುತ್ತದೆ ಮತ್ತು ಅದು ಸಾಂವಿಧಾನಿಕ ಕಾನೂನು ಮತ್ತು ಸಾರ್ವಜನಿಕ ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಆಲಿಸುತ್ತದೆ.

ನ್ಯಾಷನಲ್ ಕೋರ್ಟ್ ಆಫ್ ಅಪೀಲ್’ ನ ಪರವಾದ ವಾದಗಳು:

 1. ಪ್ರಸ್ತುತ, ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರೀತಿಯ ಪ್ರಕರಣಗಳನ್ನು ನಿರ್ವಹಿಸುತ್ತಿರುವುದರಿಂದ, ‘ನ್ಯಾಷನಲ್ ಕೋರ್ಟ್ ಆಫ್ ಅಪೀಲ್’ (NCA) ಕಲ್ಪನೆಯು ಸೂಕ್ತವೆಂದು ತೋರುತ್ತದೆ.
 2. ಮೇಲ್ಮನವಿಗಳ ವಿಚಾರಣೆಗೆ ಭೌಗೋಳಿಕ ಸ್ಥಾನಕ್ಕೆ ಅನುಗುಣವಾಗಿ ವಿವಿಧ ಪ್ರಾದೇಶಿಕ ಪೀಠಗಳನ್ನು ರಚಿಸುವುದು ಸೂಕ್ತವಾಗಿರುತ್ತದೆ. ಈಗಿನಂತೆ, ಎಲ್ಲಾ ಮೇಲ್ಮನವಿಗಳನ್ನು ನವದೆಹಲಿಯಲ್ಲಿ ಆಲಿಸಲಾಗುತ್ತಿದೆ, ಇದು ದೇಶದ ಇತರ ಭಾಗಗಳಲ್ಲಿ ಉದ್ಭವಿಸುವ ಪ್ರಕರಣಗಳಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ.
 3. ಮೇಲ್ಮನವಿ ನ್ಯಾಯಾಲಯಗಳು ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಅತ್ಯುತ್ತಮ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತವೆ.ಅಂತಹ ಬಗೆಹರಿಸಲಾಗದ ಕಾನೂನು ವಿಷಯಗಳು ಸ್ಪಷ್ಟೀಕರಣದ ಅಗತ್ಯದಿಂದಾಗಿ ಮುಂಚೂಣಿಗೆ ಬಂದಾಗ, ಅಂತಹ ಪರಿಸ್ಥಿತಿಯಲ್ಲಿ ಮೇಲ್ಮನವಿ ನ್ಯಾಯಾಲಯವು (Court of Appeal) ಈ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ಸುಪ್ರೀಂ ಕೋರ್ಟ್‌ಗೆ ಕಳುಹಿಸಬಹುದು.ಇದರಿಂದ ವಿವಿಧ ವಯಕ್ತಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಮಾತ್ರವಲ್ಲದೆ ಕಾನೂನು ಕ್ಷೇತ್ರಗಳನ್ನು ಸಹ ಇತ್ಯರ್ಥ ಗೊಳಿಸಬಹುದು ಮತ್ತು ಸ್ಪಷ್ಟವಾದ ಪೂರ್ವ ನಿದರ್ಶನವನ್ನು ಸಹ ನೀಡಬಹುದು.
 4. ಸುಪ್ರೀಂ ಕೋರ್ಟ್‌ನ ಮುಂದೆ ಪ್ರಮುಖ ಮತ್ತು ನಿರ್ಣಾಯಕ ವಿಷಯಗಳು ಮಾತ್ರ ಬಂದಾಗ, ನ್ಯಾಯಾಂಗ ಪ್ರಕ್ರಿಯೆಯು ಹೆಚ್ಚು ಸುವ್ಯವಸ್ಥಿತವಾಗಿರುತ್ತದೆ ಮತ್ತು ದಾವೆದಾರರಿಗೆ ಮತ್ತು ನ್ಯಾಯಾಲಯಗಳಿಗೆ ಸಾಕಷ್ಟು ಸಮಯ ಮತ್ತು ವೆಚ್ಚವನ್ನು ಉಳಿಸುತ್ತದೆ.

‘ನ್ಯಾಷನಲ್ ಕೋರ್ಟ್ ಆಫ್ ಅಪೀಲ್’ ನ ವಿರುದ್ಧದ ವಾದಗಳು:

 1. ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯಗಳ ಸ್ಥಾಪನೆಯಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಇದಲ್ಲದೆ, ಹೆಚ್ಚಿನ ಸಂಖ್ಯೆಯ ಬಾಕಿ ಪ್ರಕರಣಗಳು ಅಧೀನ ನ್ಯಾಯಾಲಯಗಳಲ್ಲಿವೆ, ಆದರೆ ಉನ್ನತ ನ್ಯಾಯಾಲಯಗಳಲ್ಲಿ ಅಂತಹ ಸಮಸ್ಯೆ ಇಲ್ಲ.
 2. ಇದು ತೀರ್ಪಿಗೆ ಇನ್ನೂ ಒಂದು ಪದರವನ್ನು ಮಾತ್ರ ಸೇರಿಸುತ್ತದೆ.
 3. ಇದು ಸಾಂವಿಧಾನಿಕವಾಗಿ ಅಸಾಧ್ಯ, ಏಕೆಂದರೆ ‘ಮೇಲ್ಮನವಿಗಳ ವಿಚಾರಣೆ’ಯು ಸಂವಿಧಾನದ ಮೂಲ ರಚನೆಯಲ್ಲಿ ಸೇರಿದೆ, ಇದು ‘ನ್ಯಾಷನಲ್ ಕೋರ್ಟ್ಸ್ ಆಫ್ ಅಪೀಲ್’ ಸ್ಥಾಪನೆಯಿಂದ ಕಾರ್ಯಗತಗೊಳ್ಳುತ್ತದೆ.
 4. ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯಗಳ ಸ್ಥಾಪನೆಯು ವಕೀಲರಿಗೆ ಮಾತ್ರ ವರದಾನವಾಗಲಿದೆ.
 5. ಈ ಸಲಹೆಯನ್ನು ಕಾರ್ಯಗತಗೊಳಿಸಲು, ಸಂವಿಧಾನದ 130 ನೇ ವಿಧಿ’ಗೆ ತಿದ್ದುಪಡಿ ಮಾಡಬೇಕಾಗಿದೆ, ಇದು ಸುಪ್ರೀಂ ಕೋರ್ಟ್ನ ರಚನೆಯನ್ನು ಸಂಪೂರ್ಣವಾಗಿ ಬದಲಾಯಿಸುವ  ಕಾರಣ ಅದನ್ನು ಅನುಮತಿಸಲಾಗಿಲ್ಲ (Impermissible).

ಸರ್ಕಾರದ ನಿಲುವು:

ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯಗಳ ಸ್ಥಾಪನೆಯು ತೀರ್ಪಿಗೆ ಮತ್ತೊಂದು ಪದರವನ್ನು ಸೇರಿಸುತ್ತದೆ ಮತ್ತು ಇದರಿಂದ ವ್ಯಾಜ್ಯಗಳ ಸಂಖ್ಯೆಯಲ್ಲಿ ಕಡಿಮೆ ಯಾಗುವುದಿಲ್ಲ.ಇದು ವಕೀಲರಿಗೆ ಮಾತ್ರ ವರದಾನವಾಗಲಿದೆ. ಇದು ದಾವೆದಾರರಿಗೆ ಇನ್ನೂ ಹೆಚ್ಚಿನ ತೊಂದರೆ ಉಂಟುಮಾಡಲಿದೆ.

ಈಗ ಮಾಡಬೇಕಿರುವುದೇನು?

ಅಧೀನ ನ್ಯಾಯಾಂಗವನ್ನು (ಹೈಕೋರ್ಟ್‌ಗಳು) ಬಲಪಡಿಸಲು ಪ್ರಯತ್ನಿಸಬೇಕು, ಇದರಿಂದ ಸರಿಯಾದ ನ್ಯಾಯವನ್ನು ನೀಡಬಹುದು.

ಸುಪ್ರೀಂ ಕೋರ್ಟ್‌,ನ್ಯಾಯಾಂಗ ಶ್ರೇಣಿಯ ಮೇಲ್ಭಾಗಕ್ಕೆ ಹೈಕೋರ್ಟ್‌ಗಳನ್ನು ಕೇವಲ ‘ಮೆಟ್ಟಿಲು ಕಲ್ಲು’ಗಳಾಗಿ ಬಳಸುವುದನ್ನು ನಿರುತ್ಸಾಹಗೊಳಿಸಬೇಕು.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕೃಷ್ಣಾ ನದಿ ನೀರು ವಿವಾದ:


(Krishna River water dispute)

ಸಂದರ್ಭ:

ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು, ಕಳೆದ 14 ವರ್ಷಗಳಿಂದ ಕರ್ನಾಟಕದಿಂದ ಕೃಷ್ಣಾ ನದಿಯ ನೀರನ್ನು ಎಷ್ಟು ಪ್ರಮಾಣದಲ್ಲಿ ತಿರುಗಿಸಲಾಗಿದೆ ಎಂಬ ಬಗ್ಗೆ ಕರ್ನಾಟಕದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿವೆ.

 1. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕವು, ಕೃಷ್ಣಾ ನದಿಯಿಂದ ಸಮುದ್ರಕ್ಕೆ ಸಾಕಷ್ಟು ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ವಾದಿಸಿದೆ. ಮತ್ತು ಒಣ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸಲು ಮತ್ತು ನೀರಾವರಿ ಪುನರ್ಭರ್ತಿಗಾಗಿ ಇದನ್ನು ಬಳಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದೆ.

ಕರ್ನಾಟಕದ ಬೇಡಿಕೆ:

ನವೆಂಬರ್ 16, 2011 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ ವಿನಾಯಿತಿ ನೀಡುವಂತೆ ಕರ್ನಾಟಕ ಕೋರಿದೆ. ಈ ಆದೇಶದಲ್ಲಿ, ನ್ಯಾಯಾಲಯವು ಕೃಷ್ಣ ಜಲ ವಿವಾದಗಳ ನ್ಯಾಯಮಂಡಳಿ II’ ( Krishna Water Disputes Tribunal II (KWDT) ಯು ಡಿಸೆಂಬರ್ 2010 ರಲ್ಲಿ, ಕರ್ನಾಟಕ, ಹಿಂದಿನ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕೃಷ್ಣಾ ನದಿಯಿಂದ ನೀರು ಹಂಚಿಕೆ ಮಾಡುವ ಕುರಿತು ಹೊರಡಿಸಿದ ಅಂತಿಮ ಆದೇಶವನ್ನು ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸದಂತೆ ನಿರ್ಬಂಧಿಸಿದೆ.

 1. KWDT ನವೆಂಬರ್ 29, 2013 ರಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ಹಿಂದಿನ ಆಂಧ್ರಪ್ರದೇಶ ರಾಜ್ಯಕ್ಕೆ ಈಗಾಗಲೇ ಹಂಚಿಕೆ ಮಾಡಿದ 2130 ಟಿಎಂಸಿ ಅಡಿ ನೀರಿನ ಹಂಚಿಕೆಯನ್ನು ಸಂರಕ್ಷಿಸುವುದರೊಂದಿಗೆ ತನ್ನ ಅಂತಿಮ ಆದೇಶ ಮತ್ತು ಹೆಚ್ಚುವರಿ ನೀರನ್ನು ಹಂಚಿಕೆ ಮಾಡುವ ಕುರಿತ ತನ್ನ ವರದಿಯನ್ನು ಪರಿಷ್ಕರಿಸಿತು.

ಏನಿದು ಪ್ರಕರಣ?

ನ್ಯಾಯಾಧಿಕರಣದ ಆದೇಶವನ್ನು ಪ್ರಕಟಿಸುವುದು ಅದರ ಅನುಷ್ಠಾನಕ್ಕೆ ಅಗತ್ಯವಾದ ಪೂರ್ವ ಷರತ್ತಾಗಿದೆ. ಆದರೆ, ಆಂಧ್ರಪ್ರದೇಶ ವಿಭಜನೆಯ ನಂತರ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಕೆಡಬ್ಲ್ಯುಡಿಟಿ ಮಾಡಿದ ನೀರು ಹಂಚಿಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ಈಗ ಮಾಡಬೇಕಿರುವುದೇನು?

ಕರ್ನಾಟಕವು 2011 ರ ಸುಪ್ರಿಂ ಕೋರ್ಟ್‌ನ ಆದೇಶದ ಕಾರಣ, ‘ಅಂತರ-ರಾಜ್ಯ ಜಲ ವಿವಾದಗಳ ಕಾಯ್ದೆ 1956’ ಸೆಕ್ಷನ್ 6 ರ ಅಡಿಯಲ್ಲಿ ಅಧಿಕೃತ ಗೆಜೆಟ್‌ನಲ್ಲಿ ‘ಕೃಷ್ಣ ಜಲ ವಿವಾದಗಳ ನ್ಯಾಯಮಂಡಳಿ II’ ಅಂತಿಮ ಆದೇಶದ ಪ್ರಕಟಣೆಯನ್ನು ತಡೆಹಿದಿದಿರುವ ಕಾರಣ, ರಾಜ್ಯ ಅಣೆಕಟ್ಟುಗಳು ಮತ್ತು ರಾಜ್ಯದ ಉತ್ತರ ಭಾಗದ ಒಣ ಪ್ರದೇಶಗಳಿಗೆ ನೀರು ಒದಗಿಸುವ ಸಾವಿರಾರು ಕೋಟಿ ರೂಪಾಯಿಗಳ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ.

 1. ಆಂಧ್ರಪ್ರದೇಶ ಮತ್ತು ತೆಲಂಗಾಣ ಎತ್ತಿರುವ ವಿವಾದ ತಮ್ಮ ನಡುವೆಯೇ ಇದ್ದು, ಕರ್ನಾಟಕಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಕರ್ನಾಟಕ ವಾದವಾಗಿದೆ.

ಕರ್ನಾಟಕದ ಮುಂದಿರುವ ಸವಾಲುಗಳು:

 1. KWDT ಯ ನಿರ್ಧಾರವನ್ನು 2050 ರ ವರೆಗೆ ಮಾತ್ರ ಜಾರಿಗೊಳಿಸಬಹುದಾಗಿದೆ, ನಂತರ ಈ ನಿರ್ಧಾರವನ್ನು ಪರಿಶೀಲಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿದೆ. 2010 ರಿಂದ ವ್ಯಾಜ್ಯದಲ್ಲಿ ಹತ್ತು ವರ್ಷಗಳ ಅವಧಿ ಈಗಾಗಲೇ ಕಳೆದು ಹೋಗಿದೆ. ಕರ್ನಾಟಕ ತನ್ನ ವಿವಿಧ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 10 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಯೋಜನೆಗಳ ವೆಚ್ಚ 2014-15ರಲ್ಲಿ 60,000 ಕೋಟಿ ರೂ. ಗಳಷ್ಟಿತ್ತು.
 2. ಈ ಅವಧಿಯಲ್ಲಿ ಈ ಯೋಜನೆಗಳ ವೆಚ್ಚವು ವಾರ್ಷಿಕವಾಗಿ 10% ರಿಂದ 15% ರಷ್ಟು ಹೆಚ್ಚಾಗುತ್ತದೆ. ನೀರಾವರಿ ಯೋಜನೆಗಳು 10 ವರ್ಷಗಳಲ್ಲಿ ಪೂರ್ಣಗೊಂಡರೂ, ಕೇಂದ್ರ ಜಲ ಆಯೋಗದ ಅನುಮೋದನೆ ಪಡೆಯಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ.

ಸಂಬಂಧಿತ ವಿವಾದಗಳು:

ಕೃಷ್ಣಾ ನದಿ ನೀರಿನ ವಿವಾದವು ಹಿಂದಿನ ರಾಜಮನೆತನದ ಹೈದರಾಬಾದ್ ಮತ್ತು ಮೈಸೂರು ರಾಜ್ಯಗಳ ನಡುವೆ ಪ್ರಾರಂಭವಾಯಿತು ಮತ್ತು ನಂತರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ನಡುವೆ ಮುಂದುವರಿಯುತ್ತಿದೆ.

ಕೃಷ್ಣಾ ಜಲ ವಿವಾದಗಳ ನ್ಯಾಯಾಧಿಕರಣ (Krishna Water Disputes Tribunal- KWDT) ವನ್ನು 1969 ರಲ್ಲಿ ಅಂತರ-ರಾಜ್ಯ ನದಿ ನೀರಿನ ವಿವಾದಗಳ ಕಾಯಿದೆ, 1956 ರ ಅಡಿಯಲ್ಲಿ ಸ್ಥಾಪಿಸಲಾಯಿತು, ಅದರ ಮೂಲಕ ಅದರ ವರದಿಯನ್ನು 1973 ರಲ್ಲಿ ಸಲ್ಲಿಸಲಾಯಿತು.

1976 ರಲ್ಲಿ ಪ್ರಕಟವಾದ ಕೃಷ್ಣಾ ನದಿ ನೀರಿನ ವಿವಾದಗಳ ನ್ಯಾಯಮಂಡಳಿಯ ವರದಿಯು 2060 TMC (ಸಾವಿರ ಮಿಲಿಯನ್ ಘನ ಅಡಿ) ಕೃಷ್ಣಾ ನದಿ ನೀರನ್ನು 75 ಪ್ರತಿಶತ ಅವಲಂಬನೆಯ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಿದೆ:

 1. ಮಹಾರಾಷ್ಟ್ರಕ್ಕೆ 560 ಟಿ.ಎಂ.ಸಿ
 2. ಕರ್ನಾಟಕಕ್ಕೆ 700 ಟಿ.ಎಂ.ಸಿ
 3. ಆಂಧ್ರಪ್ರದೇಶಕ್ಕೆ 800 ಟಿ.ಎಂ.ಸಿ

ಪರಿಷ್ಕೃತ ಆದೇಶ:

 1. ರಾಜ್ಯಗಳಲ್ಲಿ ಅಸಮಾಧಾನ ವ್ಯಕ್ತವಾದ ನಂತರ 2004ರಲ್ಲಿ ಎರಡನೇ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ (KWDT) ರಚನೆಯಾಯಿತು.
 2. ಎರಡನೇ KWDT ತನ್ನ ಅಂತಿಮ ವರದಿಯನ್ನು 2010 ರಲ್ಲಿ ಸಲ್ಲಿಸಿತು. ಈ ವರದಿಯಲ್ಲಿ ಕೃಷ್ಣಾ ನದಿಯ ಹೆಚ್ಚುವರಿ ನೀರನ್ನು ಮಹಾರಾಷ್ಟ್ರಕ್ಕೆ 81 ಟಿಎಂಸಿ, ಕರ್ನಾಟಕಕ್ಕೆ 177 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 190 ಟಿಎಂಸಿ ಶೇ.65 ಅವಲಂಬನೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ.

2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ ಆಂಧ್ರಪ್ರದೇಶ ಕೆಡಬ್ಲ್ಯುಡಿಟಿಯಲ್ಲಿ ತೆಲಂಗಾಣವನ್ನು ಪ್ರತ್ಯೇಕ ಪಕ್ಷವಾಗಿ ಸೇರಿಸಿಕೊಳ್ಳಬೇಕು ಮತ್ತು ಕೃಷ್ಣಾ ನದಿ ನೀರನ್ನು ಮೂರು ರಾಜ್ಯಗಳಿಗೆ ಬದಲಾಗಿ ನಾಲ್ಕು ರಾಜ್ಯಗಳಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸುತ್ತಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

LEO ಉಪಗ್ರಹಗಳ ಮೂಲಕ ಇಂಟರ್ನೆಟ್:


(Internet through LEO satellites)

 ಸಂದರ್ಭ:

ಕಳೆದ ವರ್ಷ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ವಿಫಲವಾದ ನಂತರ  ಭೂ-ನೀಚ ಕಕ್ಷೆಯಿಂದ ತನ್ನ ಬ್ರಾಡ್‌ಬ್ಯಾಂಡ್ ಉಪಗ್ರಹಗಳಲ್ಲಿ ಒಂದನ್ನು ತೆಗೆದುಹಾಕುವ ಆಯ್ಕೆಗಳನ್ನು OneWeb ಪರಿಗಣಿಸುತ್ತಿದೆ.

 1. ಇಲ್ಲಿಯವರೆಗೆ, OneWeb 11 ಉಡಾವಣೆಗಳ ಮೂಲಕ 1,200 ಕಿಮೀ ದೂರದಲ್ಲಿ 358 ಉಪಗ್ರಹಗಳನ್ನು ನಿಯೋಜಿಸಿದೆ.

ಹಿನ್ನೆಲೆ:

‘ಯುರೋಪಿಯನ್ ಸ್ಪೇಸ್ ಏಜೆನ್ಸಿ’ (ESA) ನ ‘ಸನ್‌ರೈಸ್ ಪ್ರೋಗ್ರಾಂ’ ಅಡಿಯಲ್ಲಿ  ‘OneWeb’ ಈ ವರ್ಷದ ಆರಂಭದಲ್ಲಿ, ಕಸವನ್ನು/ ಶಿಲಾಖಂಡರಾಶಿಗಳನ್ನು ತೆಗೆದುಹಾಕುವ ‘ಆಸ್ಟ್ರೋಸ್ಕೇಲ್’ (Astroscale) ಎಂಬ ಸ್ಟಾರ್ಟಪ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

OneWeb ನ ಲಿಯೋ ಇಂಟರ್ನೆಟ್ ಪ್ರೋಗ್ರಾಂ ಕುರಿತು:

OneWeb ಭೂಮಿ ನೀಚ ಕಕ್ಷೆ (Low Earth Orbit – LEO) ಯಲ್ಲಿರುವ ಸಂವಹನ ಉಪಗ್ರಹಗಳನ್ನು ನಿರ್ವಹಿಸುವ ಖಾಸಗಿ ಕಂಪನಿಯಾಗಿದೆ.

 1. ಯುನೈಟೆಡ್ ಕಿಂಗ್‌ಡಮ್, ಅಲಾಸ್ಕಾ, ಉತ್ತರ ಯುರೋಪ್, ಗ್ರೀನ್‌ಲ್ಯಾಂಡ್, ಆರ್ಕ್ಟಿಕ್ ಮಹಾಸಾಗರ ಮತ್ತು ಕೆನಡಾದಾದ್ಯಂತ ಭೂ ನೀಚ ಕಕ್ಷೆಯ ಉಪಗ್ರಹಗಳ ಮೂಲಕ ಇಂಟರ್ನೆಟ್ ಸಂಪರ್ಕದ ಆಯ್ಕೆಯನ್ನು ಒದಗಿಸುವ ಉದ್ದೇಶವನ್ನು ಒನ್‌ವೆಬ್ ಹೊಂದಿದೆ.
 2. ಈ ವರ್ಷದ ಅಂತ್ಯದ ಮೊದಲು ಇಂಟರ್ನೆಟ್ ಸೇವೆಯನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಯನ್ನು ಕಂಪನಿ ವ್ಯಕ್ತಪಡಿಸಿದೆ.
 3. ಒನ್‌ವೆಬ್ ಈ ಕಾರ್ಯಕ್ರಮಕ್ಕೆ ‘ಫೈವ್ ಟು 50’ (Five to 50) ಸೇವೆ ಎಂದು ಹೆಸರಿಸಿದ್ದು, ಇದರ ಅಡಿಯಲ್ಲಿ 50 ಡಿಗ್ರಿ ಅಕ್ಷಾಂಶದ ಉತ್ತರದಲ್ಲಿರುವ ಎಲ್ಲಾ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಸೇವೆಗಳನ್ನು ಒದಗಿಸಲಾಗುವುದು.

LEO ಉಪಗ್ರಹ ಆಧಾರಿತ ಅಂತರ್ಜಾಲದ ಪ್ರಯೋಜನಗಳು:

 1. LEO ಉಪಗ್ರಹಗಳು ಭೂಮಿಯಿಂದ ಸುಮಾರು 36,000 ಕಿ.ಮೀ ದೂರದಲ್ಲಿರುವ ಜಿಯೋಸ್ಟೇಷನರಿ ಕಕ್ಷೆಯ ಉಪಗ್ರಹಗಳಿಗೆ ಹೋಲಿಸಿದರೆ ಸುಮಾರು 500 ಕಿ.ಮೀ ನಿಂದ 2000 ಕಿ.ಮೀ ದೂರದಲ್ಲಿ ಸ್ಥಾಪಿಸಲಾಗಿರುತ್ತದೆ.
 2. LEO ಉಪಗ್ರಹಗಳು ಭೂಮಿಯನ್ನು ಹತ್ತಿರದಿಂದ ಸುತ್ತುತ್ತವೆ, ಆದ್ದರಿಂದ ಅವು ಸಾಂಪ್ರದಾಯಿಕ ಸ್ಥಿರ-ಉಪಗ್ರಹ ವ್ಯವಸ್ಥೆಗಳಿಗಿಂತ ಬಲವಾದ ಸಂಕೇತಗಳನ್ನು ಮತ್ತು ಅತ್ಯಂತ ವೇಗವನ್ನು ಒದಗಿಸಲು ಸಮರ್ಥವಾಗಿವೆ.
 3. ಫೈಬರ್-ಆಪ್ಟಿಕ್ ಕೇಬಲಿಂಗ್ ವ್ಯವಸ್ಥೆಗಳಿಗಿಂತ ಸಿಗ್ನಲ್‌ಗಳು ಬಾಹ್ಯಾಕಾಶದಲ್ಲಿ ವೇಗವಾಗಿ ಚಲಿಸುವ ಕಾರಣ, ಅವುಗಳು ಅಸ್ತಿತ್ವದಲ್ಲಿರುವ ಭೂ-ಆಧಾರಿತ ನೆಟ್‌ವರ್ಕ್‌ಗಳನ್ನು ಹಿಂದಿಕ್ಕಲು ಸಾಧ್ಯವಾಗದಿದ್ದರೂ ಸಹ, ಅವುಗಳೊಂದಿಗೆ ಸ್ಪರ್ಧಿಸಲು ಸಾಮರ್ಥ್ಯವನ್ನು ಹೊಂದಿದೆ.

ಸವಾಲುಗಳು:

ಎಲ್‌ಇಒ ಉಪಗ್ರಹಗಳು ಗಂಟೆಗೆ 27,000 ಕಿ.ಮೀ ವೇಗದಲ್ಲಿ ಚಲಿಸುತ್ತವೆ ಮತ್ತು 90-120 ನಿಮಿಷಗಳಲ್ಲಿ ಭೂಮಿಯ ಸಂಪೂರ್ಣ ಸರ್ಕ್ಯೂಟ್ ಅನ್ನು ಪೂರ್ಣಗೊಳಿಸುತ್ತವೆ. ಇದರ ಪರಿಣಾಮವಾಗಿ, ಉಪಗ್ರಹವು ಭೂಮಿಯ ಮೇಲೆ ಸ್ಥಾಪಿಸಲಾದ ಟ್ರಾನ್ಸ್‌ಮಿಟರ್‌ನೊಂದಿಗೆ ಬಹಳ ಕಡಿಮೆ ಸಮಯದವರೆಗೆ ಸಂವಹನ ನಡೆಸಬಲ್ಲದು, ಆದ್ದರಿಂದ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಸಂಖ್ಯೆಯ  ಭೂ ನೀಚ ಕಕ್ಷೆಯ ಉಪಗ್ರಹಗಳ ಅಗತ್ಯವಿರುತ್ತದೆ ಮತ್ತು ದೊಡ್ಡ ಮೊತ್ತದ ಬಂಡವಾಳ ಹೂಡಿಕೆಯ ಅಗತ್ಯವಿರುತ್ತದೆ.

ಭೂ ನೀಚ ಕಕ್ಷೆಯ ಉಪಗ್ರಹಗಳ ಕುರಿತ ಟೀಕೆಗಳು:

 1. ಈ ಯೋಜನೆಗಳನ್ನು ಹೆಚ್ಚಾಗಿ ಖಾಸಗಿ ಕಂಪನಿಗಳು ನಡೆಸುತ್ತಿರುವುದರಿಂದ, ಅಧಿಕಾರದ ಸಮತೋಲನವು ದೇಶಗಳಿಂದ ಕಂಪನಿಗಳಿಗೆ ಬದಲಾಗಿದೆ. ಈ ಖಾಸಗಿ ಯೋಜನೆಗಳಲ್ಲಿ ಅನೇಕ ರಾಷ್ಟ್ರಗಳ ಭಾಗವಹಿಸುವಿಕೆಯ ದೃಷ್ಟಿಯಿಂದ, ಈ ಕಂಪನಿಗಳನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಉದ್ಭವಿಸುತ್ತಿವೆ.
 2. ಸಂಕೀರ್ಣ ನಿಯಂತ್ರಕ ಚೌಕಟ್ಟು: ಈ ಕಂಪನಿಗಳು ವಿವಿಧ ದೇಶಗಳ ಮಧ್ಯಸ್ಥಗಾರರನ್ನು ಒಳಗೊಂಡಿವೆ. ಆದ್ದರಿಂದ ಪ್ರತಿ ದೇಶದಲ್ಲಿ ಈ ಸೇವೆಗಳನ್ನು ನಿರ್ವಹಿಸಲು ಅಗತ್ಯವಾದ ಪರವಾನಗಿ ಪಡೆಯುವುದು ಸವಾಲಾಗಿ ಪರಿಣಮಿಸುತ್ತದೆ.
 3. ನೈಸರ್ಗಿಕ ಉಪಗ್ರಹಗಳನ್ನು ಕೆಲವೊಮ್ಮೆ ರಾತ್ರಿ ಆಕಾಶದಲ್ಲಿ ನೋಡಬಹುದಾದರೂ, ಈ ಕೃತಕ ಉಪಗ್ರಹಗಳು ಖಗೋಳಶಾಸ್ತ್ರಜ್ಞರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ, ಹೇಗೆಂದರೆ ಈ ಕೃತಕ ಉಪಗ್ರಹಗಳು ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಬಿಂಬಿಸುವುದುರಿಂದ ಖಗೋಳಶಾಸ್ತ್ರಜ್ಞರ ಅಧ್ಯಯನದ ಚಿತ್ರಗಳ ಮೇಲೆ ಗೆರೆಗಳನ್ನು ಉಂಟುಮಾಡುತ್ತವೆ.
 4. ಕಡಿಮೆ ಕಕ್ಷೆಯಲ್ಲಿ ಪರಿಭ್ರಮಿಸುವ ಉಪಗ್ರಹಗಳು ತಮ್ಮ ಮೇಲೆ ಪರಿಭ್ರಮಿಸುವ ಉಪಗ್ರಹಗಳ ಆವರ್ತನಗಳನ್ನು ಅಡ್ಡಿಪಡಿಸುತ್ತದೆ.
 5. ಆಡುಮಾತಿನಲ್ಲಿ ‘ಸ್ಪೇಸ್ ಜಂಕ್’(ಬಾಹ್ಯಾಕಾಶದ ಕಸ) ಎಂದು ಕರೆಯಲ್ಪಡುವ ವಸ್ತುಗಳು ಬಾಹ್ಯಾಕಾಶ ನೌಕೆಗೆ ಹಾನಿಯನ್ನು ಉಂಟುಮಾಡುವ ಅಥವಾ ಇತರ ಉಪಗ್ರಹಗಳೊಂದಿಗೆ ಘರ್ಷಿಸುವ ಸಾಮರ್ಥ್ಯವನ್ನು ಹೊಂದಿವೆ.

ಸಂಭವನೀಯತೆ:

ಫೈಬರ್ ಮತ್ತು ಸ್ಪೆಕ್ಟ್ರಮ್ ಸೇವೆಗಳು ಪ್ರವೇಶಿಸಲಾಗದ ಸ್ಥಳಗಳಲ್ಲಿ, LEO ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಇದರ ಗುರಿ(target) ಮಾರುಕಟ್ಟೆ ಗ್ರಾಮೀಣ ಜನಸಂಖ್ಯೆ ಮತ್ತು ನಗರ ಪ್ರದೇಶಗಳಿಂದ ದೂರದಲ್ಲಿರುವ ಮಿಲಿಟರಿ ಘಟಕಗಳಾಗಿವೆ.

ಇದೇ ರೀತಿಯ ಇತರ ಯೋಜನೆಗಳು:

 1. ಒನ್‌ವೆಬ್‌ನ ಮುಖ್ಯ ಪ್ರತಿಸ್ಪರ್ಧಿ ಎಲಾನ್ ಮಸ್ಕ್‌ ರವರ ಸ್ಪೇಸ್‌ಎಕ್ಸ್ ಕಂಪನಿಯ ನೇತೃತ್ವದ ಸ್ಟಾರ್‌ಲಿಂಕ್. ಸ್ಟಾರ್‌ಲಿಂಕ್ ಪ್ರಸ್ತುತ 1,385 ಉಪಗ್ರಹಗಳನ್ನು ಭೂ ನೀಚ ಕಕ್ಷೆಯಲ್ಲಿ(LEO) ಇರಿಸಿದೆ.
 2. ಸ್ಟಾರ್‌ಲಿಂಕ್ ಈಗಾಗಲೇ ಉತ್ತರ ಅಮೆರಿಕಾದಲ್ಲಿ ಬೀಟಾ ಪರೀಕ್ಷೆಯನ್ನು ಪ್ರಾರಂಭಿಸಿದೆ ಮತ್ತು ಭಾರತದಂತಹ ದೇಶಗಳಲ್ಲಿಯೂ ಸಹ ಪೂರ್ವ-ಆದೇಶಗಳನ್ನು(PRE-ORDERS) ಪ್ರಾರಂಭಿಸಿದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

ನಾಸಾದ ಪರ್ಸೇವೆರನ್ಸ್ ರೋವರ್:


(NASA Perseverance Rover)

ಸಂದರ್ಭ:

ನಾಸಾದ ಪರ್ಸವೆರೆನ್ಸ್ ಮಾರ್ಸ್ ರೋವರ್ ಮೂಲಕ ಕಳುಹಿಸಲಾಗಿರುವ INGENUITY (‘ಜಾಣ್ಮೆ’) ಮಾರ್ಸ್ ಹೆಲಿಕಾಪ್ಟರ್ ನ 13ನೇ ಹಾರಾಟದ ವೀಡಿಯೋ ವನ್ನು ತಯಾರಿಸಲಾಗಿದೆ.

ಪರ್ಸೇವೆರನ್ಸ್ ರೋವರ್ ಕುರಿತು:

 1. ಪರ್ಸೇವೆರನ್ಸ್ ರೋವರ್ ಅನ್ನು ಜುಲೈ 2020 ರಲ್ಲಿ ಉಡಾವಣೆ ಮಾಡಲಾಯಿತು.
 2. ಇದು ಬಹುಶಃ ಮಂಗಳನ ಮೇಲ್ಮೈಯಲ್ಲಿ ಜೆಜೆರೊ ಕುಳಿಗಳ (Jezero Crater) ಮೇಲೆ ಇಳಿಯುತ್ತದೆ.
 3. ಪ್ರಾಚೀನ ಜೀವಿಗಳ ಜೀವನದ ಖಗೋಳ ಸಾಕ್ಷ್ಯಗಳನ್ನು ಹುಡುಕುವುದು ಮತ್ತು ಭೂಮಿಗೆ ಮರಳಿ ತರಲು ಬಂಡೆಗಳು ಮತ್ತು ರೆಗ್ಲೋಲಿತ್‌ಗಳ (Reglolith) ಮಾದರಿಗಳನ್ನು ಸಂಗ್ರಹಿಸುವುದು ಪರ್ಸೇವೆರನ್ಸ್ ರೋವರ್ ನ ಮುಖ್ಯ ಕಾರ್ಯವಾಗಿದೆ.
 4. ಇದು ಪ್ಲುಟೋನಿಯಂನ ವಿಕಿರಣಶೀಲ ಕೊಳೆಯುವಿಕೆಯಿಂದ ಉತ್ಪತ್ತಿಯಾಗುವ ಶಾಖದಿಂದ ಉತ್ಪತ್ತಿಯಾಗುವ ವಿದ್ಯುತ್ ಶಕ್ತಿಯನ್ನು ಇಂಧನವಾಗಿ ಬಳಸುತ್ತದೆ.
 5. ನಾಸಾದ ಪರ್ಸೇವೆರನ್ಸ್, ಮಂಗಳನ ಮೇಲ್ಮೈಯಲ್ಲಿ ಸ್ಥಿರವಾಗಿರಲು ಆಕಾರ ಮೆಮೊರಿ ಮಿಶ್ರಲೋಹಗಳನ್ನು (shape memory alloys) ಬಳಸಲಾಗುತ್ತದೆ.
 6. ಸುಸಜ್ಜಿತ ಡ್ರಿಲ್, ಕ್ಯಾಮೆರಾ ಮತ್ತು ಲೇಸರ್ ಹೊಂದಿದ ರೋವರ್ ಅನ್ನು ಮಂಗಳ ಗ್ರಹವನ್ನು ಅನ್ವೇಷಿಸಲು ಸಿದ್ಧಪಡಿಸಲಾಗಿದೆ.

ಈ ಯೋಜನೆಯ ಮಹತ್ವ:

 1. ಪರ್ಸೇವೆರನ್ಸ್ ರೋವರ್ MOXIE ಅಥವಾ ಮಾರ್ಸ್ ಆಕ್ಸಿಜನ್ ISRU ಪ್ರಯೋಗ ಎಂಬ ವಿಶೇಷ ಸಾಧನವನ್ನು ಹೊಂದಿದೆ, ಇದು ಮಂಗಳ ಗ್ರಹದಲ್ಲಿ ಇಂಗಾಲ-ಡೈಆಕ್ಸೈಡ್-ಸಮೃದ್ಧ ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಬಳಸಿ ಮೊದಲ ಬಾರಿಗೆ ಆಣ್ವಿಕ ಆಮ್ಲಜನಕವನ್ನು ರಚಿಸುತ್ತದೆ. (ISRU- In Situ Resource Utilization, ಅಂದರೆ , ನೌಕೆಯಲ್ಲಿರುವ ಗಗನಯಾತ್ರಿಗಳ ಹಾಗೂ ಬಾಹ್ಯಾಕಾಶ ನೌಕೆಯ ಅವಶ್ಯಕತೆಗಳನ್ನು ಪೂರೈಸಲು ಸ್ಥಳೀಯ ಸಂಪನ್ಮೂಲಗಳ ಬಳಕೆ ಅಂದರೆ ಬಾಹ್ಯಾಕಾಶ ನೌಕೆಯ ಒಳಗಿನ ಸಂಪನ್ಮೂಲಗಳನ್ನು ಬಳಕೆ ಮಾಡುವುದು).
 2. ಈ ಕಾರ್ಯಾಚರಣೆಯಲ್ಲಿ INGENUITY (‘ಜಾಣ್ಮೆ’) ಎಂಬ ಹೆಲಿಕಾಪ್ಟರ್ ಅನ್ನು ಸಹ ಕಳುಹಿಸಲಾಗಿದೆ, ಇದು ಮಂಗಳ ಗ್ರಹದಲ್ಲಿ ಹಾರಾಟ ನಡೆಸುವ ಮೊದಲ ಹೆಲಿಕಾಪ್ಟರ್ ಆಗಲಿದೆ. ನಾಸಾ ಮತ್ತೊಂದು ಗ್ರಹ ಅಥವಾ ಉಪಗ್ರಹದಲ್ಲಿ ಹೆಲಿಕಾಪ್ಟರ್ ಅನ್ನು ಹಾರಾಟ ನಡೆಸುತ್ತಿರುವುದು ಇದೇ ಮೊದಲು.
 3. ಭೂಮಿಯ ಮೇಲಿನ ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ವಿಶ್ಲೇಷಿಸಲು ಮಂಗಳದಿಂದ ರಾಕ್ ಮಾದರಿಗಳನ್ನು ತರುವ ಮೊದಲ ಯೋಜಿತ ಪ್ರಯತ್ನವಾಗಿದೆ. ಇದರ ಉದ್ದೇಶ ಮಂಗಳನಲ್ಲಿರುವ ಪ್ರಾಚೀನ ಸೂಕ್ಷ್ಮಾಣುಜೀವಿಯ ಖಗೋಳ ಪುರಾವೆಗಳನ್ನು ಹುಡುಕುವುದು ಮತ್ತು ವರ್ತಮಾನ ಅಥವಾ ಹಿಂದಿನ ಜೀವನದ ಕುರುಹುಗಳನ್ನು ಹುಡುಕುವುದು.

ಮಿಷನ್‌ನ ಕೆಲವು ಪ್ರಮುಖ ಉದ್ದೇಶಗಳು:

 1. ಪ್ರಾಚೀನ ಜೀವಿಗಳ ಜೀವನದ ಖಗೋಳ ಸಾಕ್ಷ್ಯಗಳನ್ನು ಹುಡುಕುವುದು.
 2. ಭೂಮಿಗೆ ಮರಳಿ ತರಲು ಬಂಡೆಗಳು ಮತ್ತು ರೆಗ್ಲೋಲಿತ್‌ಗಳ (Reglolith) ಮಾದರಿಗಳನ್ನು ಸಂಗ್ರಹಿಸುವುದು.
 3. ಮಂಗಳನ ಮೇಲೆ ಪ್ರಾಯೋಗಿಕ ಹೆಲಿಕಾಪ್ಟರ್ ಇಳಿಸಲು.
 4. ಮಂಗಳನ ಹವಾಮಾನ ಮತ್ತು ಭೂವಿಜ್ಞಾನವನ್ನು ಅಧ್ಯಯನ ಮಾಡಲು.
 5. ಭವಿಷ್ಯದ ಮಂಗಳಯಾನಗಳಿಗಾಗಿ ತಂತ್ರಜ್ಞಾನವನ್ನು ಪ್ರದರ್ಶಿಸುವುದು.

ಮಂಗಳನ ಬಗ್ಗೆ ಇತ್ತೀಚಿನ ಆಸಕ್ತಿಯ ಕಾರಣಗಳು:

 1. ಮಂಗಳ ಭೂಮಿಗೆ ಅತ್ಯಂತ ಸಮೀಪದಲ್ಲಿದೆ (ಸುಮಾರು 200 ಮಿಲಿಯನ್ ಕಿಮೀ ದೂರ).
 2. ಇದು ಮನುಷ್ಯನು ಭೇಟಿ ನೀಡಲು ಅಥವಾ ದೀರ್ಘಕಾಲ ಉಳಿಯಲು ಬಯಸುವ ಗ್ರಹವಾಗಿದೆ.
 3. ಈ ಹಿಂದೆ ಮಂಗಳನ ಮೇಲೆ ಹರಿಯುವ ನೀರು ಮತ್ತು ವಾತಾವರಣದ ಪುರಾವೆಗಳು ಕಂಡುಬಂದಿವೆ; ಮತ್ತು ಬಹುಶಃ ಈ ಗ್ರಹದಲ್ಲಿ ಒಮ್ಮೆ ಜೀವನಕ್ಕೆ ಸೂಕ್ತವಾದ ಪರಿಸ್ಥಿತಿಗಳು ಕೂಡ ಇದ್ದವು.
 4. ಈ ಗ್ರಹವು ವಾಣಿಜ್ಯ ಪ್ರಯಾಣಕ್ಕೂ ಸೂಕ್ತವಾಗಬಹುದು.

 

ವಿಷಯಗಳು: ಗಡಿ ಪ್ರದೇಶಗಳಲ್ಲಿ ಭದ್ರತಾ ಸವಾಲುಗಳು ಮತ್ತು ಅವುಗಳ ನಿರ್ವಹಣೆ – ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯ ನಡುವಿನ ಸಂಬಂಧ.

ಅಫಘಾನಿಸ್ತಾನದಲ್ಲಿ ಮಾದಕ ವಸ್ತು ಕಳ್ಳಸಾಗಣೆ:


(Drug trafficking in Afghanistan)

ಸಂದರ್ಭ:

ತಾಲಿಬಾನ್‌ಗೆ ಮಾದಕ ವಸ್ತು /  ಡ್ರಗ್ಸ್ ಪ್ರಮುಖ ಆದಾಯದ ಮೂಲವಾಗಿ ಉಳಿದಿದೆ. ಅಫ್ಘಾನಿಸ್ತಾನದ ಆರ್ಥಿಕತೆಯ ಕುಸಿತದೊಂದಿಗೆ, ತಾಲಿಬಾನ್ಗಳು ತಮ್ಮ ಹೋರಾಟಗಾರರ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ಮಾದಕ ವಸ್ತುಗಳ ಮಾರಾಟದಿಂದ ಗಳಿಸಿದ ಹಣದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ (United Nations Office on Drugs and Crime – UNODC) ಪ್ರಕಾರ:

 1. ಹಿಂದಿನ ವರ್ಷಕ್ಕೆ ಹೋಲಿಸಿದರೆ 2020 ರಲ್ಲಿ ಅಫಘಾನಿಸ್ತಾನದಲ್ಲಿ ಅಫೀಮು ಗಸಗಸೆಯನ್ನು ಅಕ್ರಮವಾಗಿ ಬೆಳೆಯಲು ಬಳಸುವ ಕಪ್ಪು ಭೂಮಿಯಲ್ಲಿ 37% ಹೆಚ್ಚಳವಾಗಿದೆ.
 2. ಕಳೆದ ವರ್ಷ, ಅಫಘಾನಿಸ್ತಾನವು ಜಾಗತಿಕ ಅಫೀಮು ಉತ್ಪಾದನೆಯಲ್ಲಿ 85% ರಷ್ಟು ಪಾಲು ಹೊಂದಿತ್ತು.
 3. ಅಫಘಾನ್ ವಿಶೇಷ ಘಟಕಗಳ ಸುಧಾರಿತ ಸಾಮರ್ಥ್ಯಗಳ ಹೊರತಾಗಿಯೂ, ವರ್ಷಗಳಲ್ಲಿ ಮಾದಕ ದ್ರವ್ಯಗಳ ವಶಪಡಿಸಿಕೊಳ್ಳುವಿಕೆ ಮತ್ತು ಬಂಧನಗಳು ಅಫೀಮು-ಗಸಗಸೆ ಕೃಷಿಯ ಮೇಲೆ ಕನಿಷ್ಠ ಪರಿಣಾಮ ಬೀರಿವೆ.
 4. ಅಫ್ಘಾನಿಸ್ತಾನವು ಮೆಥಾಂಫೆಟಮೈನ್ ಉತ್ಪಾದನೆಯ ಪ್ರಮುಖ ಮೂಲವಾಗುತ್ತಿದೆ.

ವಿಶ್ವ ಔಷಧ ವರದಿ 2021:

(World Drug Report)

 1. ಕಳೆದ ವರ್ಷ, ಜಾಗತಿಕವಾಗಿ ಸುಮಾರು 275 ದಶಲಕ್ಷ ಜನರು ಔಷಧಗಳನ್ನು ಬಳಸಿದ್ದರು, ಮತ್ತು 36 ದಶಲಕ್ಷಕ್ಕೂ ಹೆಚ್ಚು ಜನರು ಮಾದಕವಸ್ತು ಬಳಕೆಯ ಕಾಯಿಲೆಯಿಂದ ಬಳಲುತ್ತಿದ್ದರು.
 2. ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ದೇಶಗಳು ‘ಗಾಂಜಾ’ ಬಳಕೆಯಲ್ಲಿನ ಏರಿಕೆಯನ್ನು ವರದಿ ಮಾಡಿವೆ.
 3. ಇದೇ ಅವಧಿಯಲ್ಲಿ ವೈದ್ಯಕೀಯೇತರ ಉದ್ದೇಶಗಳಿಗಾಗಿ ಔಷಧಿಗಳ ಬಳಕೆಯಲ್ಲಿನ ಹೆಚ್ಚಳ ಕಂಡುಬಂದಿದೆ.
 4. ಇತ್ತೀಚಿನ ಜಾಗತಿಕ ಅಂದಾಜಿನ ಪ್ರಕಾರ, 15 ರಿಂದ 64 ವರ್ಷದ ನಡುವಿನ ಜನಸಂಖ್ಯೆಯ ಶೇಕಡಾ 5.5 ರಷ್ಟು ಜನರು ಕಳೆದ ವರ್ಷದಲ್ಲಿ ಒಮ್ಮೆಯಾದರೂ ಔಷಧಗಳನ್ನು ಬಳಸಿದ್ದಾರೆ.
 5. ಜಾಗತಿಕವಾಗಿ 11 ದಶಲಕ್ಷಕ್ಕೂ ಹೆಚ್ಚು ಜನರು ಔಷಧಗಳನ್ನು ಚುಚ್ಚುಮದ್ದು ಕೊಟ್ಟುಕೊಳ್ಳುವ ಮೂಲಕ ಪಡೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿದೆ – ಅವರಲ್ಲಿ ಅರ್ಧದಷ್ಟು ಜನರು ಹೆಪಟೈಟಿಸ್ ಸಿ (Hepatitis C) ಯಿಂದ ಬಳಲುತ್ತಿದ್ದಾರೆ.
 6. ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಕಾಯಿಲೆಗಳಿಗೆ ಒಪಿಯಾಡ್ ವಸ್ತುಗಳು ಹೆಚ್ಚು ಕಾರಣವಾಗಿವೆ.

ಮಾದಕವಸ್ತು ಕಳ್ಳಸಾಗಣೆ ಸಮಸ್ಯೆಯನ್ನು ನಿಭಾಯಿಸಲು ಭಾರತ ಸರ್ಕಾರದ ನೀತಿಗಳು ಮತ್ತು ಉಪಕ್ರಮಗಳು:

 1. ವಿವಿಧ ಮೂಲಗಳಿಂದ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ‘ನಶಾ ಮುಕ್ತ ಭಾರತ್ ಅಭಿಯಾನ್’ ಅಥವಾ ‘ಡ್ರಗ್ಸ್-ಫ್ರೀ ಇಂಡಿಯಾ ಕ್ಯಾಂಪೇನ್’ ಅನ್ನು ಆಗಸ್ಟ್ 15, 2020 ರಂದು ದೇಶದ 272 ಜಿಲ್ಲೆಗಳಲ್ಲಿ ಆರಂಭ ಮಾಡಲಾಗಿದೆ.
 2. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2018-2025ರ ಅವಧಿಗೆ ಔಷಧ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (National Action Plan for Drug Demand Reduction- NAPDDR)ಯ ಅನುಷ್ಠಾನವನ್ನು ಪ್ರಾರಂಭಿಸಿದೆ.
 3. 2016 ರ ನವೆಂಬರ್‌ನಲ್ಲಿ ಸರ್ಕಾರವು, ನಾರ್ಕೊ-ಸಮನ್ವಯ ಕೇಂದ್ರವನ್ನು (NCORD) ರಚಿಸಿದೆ.
 4. ಮಾದಕ ದ್ರವ್ಯಗಳ ಕಳ್ಳಸಾಗಣೆ, ವ್ಯಸನಿಗಳ ಪುನರ್ವಸತಿ, ಮತ್ತು ಮಾದಕ ದ್ರವ್ಯ ಸೇವನೆಯ ವಿರುದ್ಧ ಸಾರ್ವಜನಿಕರಿಗೆ ಶಿಕ್ಷಣ ನೀಡುವುದಕ್ಕಾಗಿ ಸರ್ಕಾರವು ಮಾಡಿದ ಖರ್ಚನ್ನು ಪೂರೈಸಲು “ಮಾದಕ ವಸ್ತುಗಳ ದುರುಪಯೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ನಿಧಿ” (National Fund for Control of Drug Abuse) ಎಂಬ ನಿಧಿಯನ್ನು ರಚಿಸಲಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಫ್ಘಾನಿಸ್ತಾನದ ಹಜಾರಾಗಳು:

 1. ಹಜಾರಾಗಳು, ಪರ್ಷಿಯನ್ ಮಾತನಾಡುವ ಜನಾಂಗೀಯ ಗುಂಪಾಗಿದ್ದು, ಮುಖ್ಯವಾಗಿ ಮಧ್ಯ ಅಫ್ಘಾನಿಸ್ತಾನದ ಹಜರಾಜತ್ (Hazarajat) ಪರ್ವತ ಪ್ರದೇಶದಲ್ಲಿ ಕಂಡುಬರುತ್ತಾರೆ.
 2. ಅವರು ಮಂಗೋಲ್ ಸಾಮ್ರಾಜ್ಯದ ಸ್ಥಾಪಕರಾದ ಗೆಂಘಿಸ್ ಖಾನ್ (Genghis Khan)ಮತ್ತು ಅವರ ಸೈನ್ಯದ ವಂಶಸ್ಥರು ಎಂದು ನಂಬಲಾಗಿದೆ, ಅದು 13 ನೇ ಶತಮಾನದಲ್ಲಿ ಇಡೀ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು.
 3. ಅವರ ವಿಭಿನ್ನ ಏಷಿಯಾಟಿಕ್ ಲಕ್ಷಣಗಳು ಮತ್ತು ಹಜರಗಿ (Hazaragi) ಎಂಬ ಪರ್ಷಿಯನ್ ಉಪಭಾಷೆಯ ಬಳಕೆಯು ಅವರನ್ನು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕಿಸುತ್ತದೆ.
 4. ಹಜಾರಾ ಜನಾಂಗೀಯ ಗುಂಪನ್ನು ಅಫ್ಘಾನಿಸ್ತಾನದ ಅತ್ಯಂತ ತುಳಿತಕ್ಕೊಳಗಾದ ಗುಂಪುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಸುದ್ದಿಯಲ್ಲಿರಲು ಕಾರಣ?

ಇತ್ತೀಚಿಗೆ ಅಪಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಈ ಹಜಾರಾಗಳ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸುತ್ತಿದ್ದಾರೆ.

 

ತಿವಾ ಬುಡಕಟ್ಟು ಮತ್ತು ವಂಚುವಾ ಹಬ್ಬ:

(Tiwa tribe and Wanchuwa festival)

 1. ವಾಂಚುವ ಹಬ್ಬವನ್ನು (Wanchuwa festival) ತಿವಾ ಬುಡಕಟ್ಟು (Tiwa tribe) ಜನರು ಉತ್ತಮ ಸುಗ್ಗಿಯ ಫಸಲನ್ನು ಗುರುತಿಸಲು ಆಚರಿಸುತ್ತಾರೆ.
 2. ಈ ಹಬ್ಬದಂದು, ಸಮುದಾಯದ ಜನರು ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸುತ್ತಾರೆ ಮತ್ತು ನೃತ್ಯ, ಹಾಡುಗಳು ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತದೆ.
 3. ತಿವಾ ಬುಡಕಟ್ಟಿನ ಜನರು ಸಮೃದ್ಧವಾದ ಸುಗ್ಗಿಯನ್ನು ಪ್ರಕೃತಿಯ ಮಹಾ ಶಕ್ತಿಯ ಅನುಗ್ರಹದೊಂದಿಗಿನ ಸಂಯೋಜನೆ ಎಂದು ಪರಿಗಣಿಸುತ್ತಾರೆ. ಈ ಜನರು ಹಂದಿಗಳ ತಲೆಬುರುಡೆ ಮತ್ತು ಮೂಳೆಗಳನ್ನು ದೇವರು ಮತ್ತು ದೇವತೆಗಳಾಗಿ ಸ್ಥಾಪಿಸುತ್ತಾರೆ ಮತ್ತು ಅವುಗಳನ್ನು ಹಲವು ತಲೆಮಾರುಗಳಿಂದ ರಕ್ಷಿಸುತ್ತಾರೆ.
 4. ತಿವಾ ಬುಡಕಟ್ಟು ಜನಾಂಗವನ್ನು ‘ಲಾಲುಂಗ್’ ಎಂದೂ ಕರೆಯುತ್ತಾರೆ ಮತ್ತು ಇದು ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಾಸಿಸುವ ಸ್ಥಳೀಯ ಸಮುದಾಯವಾಗಿದೆ. ಅದರ ಜನಸಂಖ್ಯೆಯ ಕೆಲವು ಭಾಗವು ಅರುಣಾಚಲ ಪ್ರದೇಶ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.

current affairs

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos