Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 6ನೇ ಆಗಸ್ಟ್ 2021

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಭಾರತದಲ್ಲಿ ಜಾತಿಯಾಧಾರಿತ ಜನಗಣತಿಯ ಅವಶ್ಯಕತೆ ಇದೆಯೇ?

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಪರಿಶಿಷ್ಟ ಪಂಗಡಗಳ ಪಟ್ಟಿಗೆ ತಿದ್ದುಪಡಿ ತರಲು ಮಸೂದೆ.

2. ಮೇಕೆದಾಟು ಸಮಸ್ಯೆ.

3. ರೆಟ್ರೋ ಟ್ಯಾಕ್ಸ್ ಸಂಗ್ರಹವನ್ನು ಕೈಬಿಡಲು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ ಕೇಂದ್ರ ಸರ್ಕಾರ.

4. 2026 ರವರೆಗೆ ಮುಂದುವರಿಯಲಿರುವ ‘ಸಮಗ್ರ ಶಿಕ್ಷಣ ಯೋಜನೆ 2.0’.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಅಗಲೆಗಾ ದ್ವೀಪ.

2. ಡಿಯಾಗೋ ಗಾರ್ಸಿಯಾ.

3. EOS-03.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಮಾಜದ ಪ್ರಮುಖ ಲಕ್ಷಣಗಳು ಮತ್ತು ಭಾರತದ ವೈವಿಧ್ಯತೆ.

ಭಾರತದಲ್ಲಿ ಜಾತಿಯಾಧಾರಿತ ಜನಗಣತಿಯ ಅವಶ್ಯಕತೆ ಇದೆಯೇ?


(Do we need a caste-based census for India?)

ಸಂದರ್ಭ:

ಬಿಹಾರ ಮುಖ್ಯಮಂತ್ರಿಯವರ ಪ್ರಕಾರ, ಕೇಂದ್ರ ಸರ್ಕಾರವು ‘ಜಾತಿ ಆಧಾರಿತ ಜನಗಣತಿ’ ನಡೆಸಲು ನಿರಾಕರಿಸುವುದನ್ನು ಮರುಪರಿಶೀಲಿಸಬೇಕು, ಏಕೆಂದರೆ ಅಂತಹ ಅಂಕಿಅಂಶಗಳು, ಅವರ ಸರ್ಕಾರವು ಇತರ ಹಿಂದುಳಿದ ವರ್ಗಗಳ’ (OBC) ಸಮುದಾಯಗಳ ನಡುವೆ ನಿಜವಾಗಿ ಸರ್ಕಾರಿ ಸೌಲಭ್ಯಗಳು ಅಗತ್ಯವಿರುವವರಿಗಾಗಿ ಹೆಚ್ಚು ಕೇಂದ್ರೀಕೃತ ನೀತಿಗಳನ್ನು ರೂಪಿಸುವಲ್ಲಿ ಸಹಾಯಕವಾಗಬಹುದು, ಎಂದು ಅವರು ಭಾವಿಸುತ್ತಾರೆ.

ಆದಾಗ್ಯೂ, ಒಂದು ನೀತಿಯ ವಿಷಯವಾಗಿ, ಭಾರತ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಇತರ ಸಮುದಾಯಗಳ ಜಾತಿವಾರು ಜನಗಣತಿಯನ್ನು ನಡೆಸದಿರಲು ನಿರ್ಧರಿಸಿದೆ.

 

ಜಾತಿ-ಸಂಬಂಧಿತ’ ವಿವರಗಳನ್ನು ಸಂಗ್ರಹಿಸುವ ವಿಧಾನ:

 1. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ’ ವಿವರಗಳನ್ನು ಗಣತಿದಾರರು ಜನಗಣತಿಯ ಭಾಗವಾಗಿ ಸಂಗ್ರಹಿಸುತ್ತಾರೆ, ಆದರೆ ಇದರ ಅಡಿಯಲ್ಲಿ, ಇತರ ಜಾತಿಗಳ ವಿವರಗಳನ್ನು ಅವರು ಸಂಗ್ರಹಿಸುವುದಿಲ್ಲ.
 2.  ಜನಗಣತಿಯ ಮೂಲ ವಿಧಾನದ ಪ್ರಕಾರ, ಎಲ್ಲಾ ನಾಗರಿಕರು ಗಣತಿದಾರರಿಗೆ ಸ್ವಯಂ ಘೋಷಿತ’ ಮಾಹಿತಿಯನ್ನು ಒದಗಿಸುತ್ತಾರೆ.

ಇಲ್ಲಿಯವರೆಗೆ, ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಕಂಡುಹಿಡಿಯಲು ವಿವಿಧ ರಾಜ್ಯಗಳಲ್ಲಿನ ಹಿಂದುಳಿದ ವರ್ಗಗಳ ಆಯೋಗಗಳು’ ತಮ್ಮದೇ ಆದ ಲೆಕ್ಕಾಚಾರಗಳನ್ನು ಮಾಡುತ್ತಿದ್ದವು.

 

ಜನಗಣತಿಯಲ್ಲಿ ಯಾವ ರೀತಿಯ ಜಾತಿ ದತ್ತಾಂಶವನ್ನು ಪ್ರಕಟಿಸಲಾಗಿದೆ?

ಸ್ವತಂತ್ರ ಭಾರತದಲ್ಲಿ, 1951 ಮತ್ತು 2011 ರ ನಡುವೆ ನಡೆಸಿದ ಪ್ರತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಡೇಟಾವನ್ನು ಮಾತ್ರ ಪ್ರಕಟಿಸಲಾಗಿದೆ. ಇತರೆ ಜಾತಿಗಳ ವಿವರಗಳನ್ನು ಗಣತಿಯಲ್ಲಿ ಪ್ರಕಟಿಸಲಾಗಿಲ್ಲ.

ಆದಾಗ್ಯೂ, ಇದಕ್ಕೂ ಮೊದಲು, 1931 ರವರೆಗೂ ನಡೆಸಲಾದ ಪ್ರತಿ ಜನಗಣತಿಯಲ್ಲಿ ಜಾತಿ ಡೇಟಾವನ್ನು ಪ್ರಕಟಿಸಲಾಗಿದೆ.

 

ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (SECC) 2011 ಕುರಿತು:

2011 ರಲ್ಲಿ ನಡೆಸಿದ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯು (Socio-Economic and Caste Census- SECC) ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಒಂದು ಪ್ರಮುಖ ಕಾರ್ಯಕ್ರಮವಾಗಿತ್ತು.

ಇದು ಎರಡು ಘಟಕಗಳನ್ನು ಹೊಂದಿತ್ತು: ಮೊದಲನೆಯದಾಗಿ, ಗ್ರಾಮೀಣ ಮತ್ತು ನಗರ ಮನೆಗಳ ಸಮೀಕ್ಷೆ ಮತ್ತು ಪೂರ್ವನಿರ್ಧರಿತ ನಿಯತಾಂಕಗಳ ಆಧಾರದ ಮೇಲೆ ಈ ಮನೆಗಳ ಶ್ರೇಯಾಂಕ, ಮತ್ತು ಎರಡನೆಯದಾಗಿ, ‘ಜಾತಿ ಗಣತಿ’.

ಆದಾಗ್ಯೂ, ಗ್ರಾಮೀಣ ಮತ್ತು ನಗರ ಮನೆಗಳಲ್ಲಿನ ಜನರ ಆರ್ಥಿಕ ಸ್ಥಿತಿಯ ವಿವರಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಜಾತಿ ಡೇಟಾವನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ.

 

ಸಾರ್ವತ್ರಿಕ ಜನಗಣತಿ ಮತ್ತು ಸಾಮಾಜಿಕ ಆರ್ಥಿಕ ಜಾತಿ ಗಣತಿ  (SECC) ನಡುವಿನ ವ್ಯತ್ಯಾಸ:

 1. ಜನಗಣತಿಯು ಭಾರತದ ಜನಸಂಖ್ಯೆಯ ಚಿತ್ರಣವನ್ನು ಒದಗಿಸುತ್ತದೆ, ಆದರೆ ‘ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ’ (SECC)ಯು ರಾಜ್ಯ-ಅನುದಾನಿತ ಫಲಾನುಭವಿಗಳನ್ನು ಗುರುತಿಸುವ ಸಾಧನವಾಗಿದೆ.
 2. ಜನಗಣತಿ’ಯು’ 1948 ರ ಜನಗಣತಿ ಕಾಯ್ದೆ ‘ಅಡಿಯಲ್ಲಿ ಬರುತ್ತದೆ ಮತ್ತು ಅದರ ಎಲ್ಲಾ ಡೇಟಾವನ್ನು ಗೌಪ್ಯವೆಂದು ಪರಿಗಣಿಸಲಾಗುತ್ತದೆ, ಆದರೆ SECC ಅಡಿಯಲ್ಲಿ ಒದಗಿಸಲಾದ ಎಲ್ಲಾ ವೈಯಕ್ತಿಕ ಮಾಹಿತಿಯು ಸರ್ಕಾರಿ ಇಲಾಖೆಗಳಿಂದ ಕುಟುಂಬಗಳಿಗೆ ಪ್ರಯೋಜನಗಳನ್ನು ಒದಗಿಸಲು ಮತ್ತು/ಅಥವಾ ನಿರ್ಬಂಧಿಸಲು ಮುಖವಾಗಿರುತ್ತದೆ.

ಜಾತಿ ಗಣತಿಯ ಪ್ರಯೋಜನಗಳು:

ಎಲ್ಲರಿಗೂ ಸಮಾನವಾದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಜಾತಿಯ ನಿಖರವಾದ ಜನಸಂಖ್ಯೆಯು ಮೀಸಲಾತಿ ನೀತಿಯನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ.

ಸಂಬಂಧಿತ ಕಾಳಜಿಗಳು:

 1. ಜಾತಿ ಗಣತಿಯು ಕೆಲವು ಸಮುದಾಯಗಳಲ್ಲಿ ಅಸಮಾಧಾನವನ್ನು ಸೃಷ್ಟಿಸುವ ಸಾಧ್ಯತೆಯಿದೆ ಮತ್ತು ಕೆಲವು ಸಮುದಾಯಗಳು ತಮಗಾಗಿ ಹೆಚ್ಚಿನ ಅಥವಾ ಪ್ರತ್ಯೇಕ ಕೋಟಾವನ್ನು ಕೋರುವ ಸಾಧ್ಯತೆ ಇರುತ್ತದೆ.
 2. ವ್ಯಕ್ತಿಗಳನ್ನು ನಿರ್ದಿಷ್ಟವಾಗಿ ಒಂದು ಜಾತಿಗೆ ಸೇರಿದವರು ಎಂದು ಹಣೆಪಟ್ಟಿ ಕಟ್ಟುವುದರಿಂದ, ಜಾತಿ ವ್ಯವಸ್ಥೆಯನ್ನು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬಲ್ಲದು ಎಂದು ನಂಬಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಪರಿಶಿಷ್ಟ ಪಂಗಡಗಳ ಪಟ್ಟಿಗೆ ತಿದ್ದುಪಡಿ ತರಲು ಮಸೂದೆ:


(Bill to amend Scheduled Tribes list)

 ಸಂದರ್ಭ:

 ಇತ್ತೀಚೆಗೆ, ‘ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ, 2021’  (Constitution (Scheduled Tribes) Order (Amendment) Bill, 2021) ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ಈ ಮಸೂದೆಯ ಮೂಲಕ, ‘ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ, 1950’ (Constitution (Scheduled Tribes) Order, 1950) ಅನ್ನು ತಿದ್ದುಪಡಿ ಮಾಡಲಾಗಿದೆ.

 

ಮಸೂದೆಯ ಪ್ರಮುಖ ಅಂಶಗಳು:

ಮಸೂದೆಯಲ್ಲಿ, ಅರುಣಾಚಲ ಪ್ರದೇಶದಲ್ಲಿ ಗುರುತಿಸಲಾಗಿರುವ ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ಅಬೋರ್’ ಬುಡಕಟ್ಟನ್ನು ತೆಗೆದುಹಾಕಲು ಅವಕಾಶ ನೀಡಲಾಗಿದೆ.

ಇದರ ಅಡಿಯಲ್ಲಿ, ಗುರುತಿಸಲಾದ ಪಟ್ಟಿಯಲ್ಲಿ, ಕೆಲವು ಬುಡಕಟ್ಟುಗಳನ್ನು ಇತರ ಬುಡಕಟ್ಟುಗಳ ಸ್ಥಾನದಲ್ಲಿ ಸೇರಿಸಲಾಗುವುದು.

‘ತೈ ಖಾಮ್ತಿ’, ಮಿಶ್ಮಿ-ಕಮಾನ್ (ಮಿಜು ಮಿಶ್ಮಿ), ಇಡು (ಮಿಶ್ಮಿ) ಮತ್ತು ಟ್ಯಾರನ್ (ದಿಗಾರು ಮಿಶ್ಮಿ) ಬುಡಕಟ್ಟುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. (Tai Khamti, Mishmi-Kaman (Miju Mishmi), Idu (Mishmi) and Taraon (Digaru Mishmi).

 

ಅಧಿಸೂಚಿತ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಮಾರ್ಪಡಿಸುವ ಅಧಿಕಾರ ಇರುವುದು ಯಾರಿಗೆ?

ಭಾರತೀಯ ಸಂವಿಧಾನವು, ರಾಷ್ಟ್ರಪತಿಗೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡಗಳನ್ನು (Scheduled Tribes) ಗೊತ್ತುಪಡಿಸಲು / ನಿರ್ದಿಷ್ಟ ಪಡಿಸಲು ಅಧಿಕಾರ ನೀಡಿದೆ. ಇದರ ಜೊತೆಗೆ, ಸಂವಿಧಾನವು ಸಂಸತ್ತಿಗೆ ‘ಅಧಿಸೂಚಿತ ಎಸ್ಟಿ’ (Notified STs) ಗಳ ಪಟ್ಟಿಯನ್ನು ಮಾರ್ಪಡಿಸಲು ಅನುಮತಿ ನೀಡುತ್ತದೆ.

 

ಪರಿಶಿಷ್ಟ ಪಂಗಡ’ದ ವ್ಯಾಖ್ಯಾನ:

ಸಂವಿಧಾನದಲ್ಲಿ, ‘ಪರಿಶಿಷ್ಟ ಪಂಗಡ’ಗಳನ್ನು ಗುರುತಿಸುವ ಮಾನದಂಡಗಳನ್ನು ವ್ಯಾಖ್ಯಾನಿಸಲಾಗಿಲ್ಲ.

ಆದಾಗ್ಯೂ, ಸಂವಿಧಾನದ ಪರಿಚ್ಛೇದ 366 (25) ರಲ್ಲಿ, ಪರಿಶಿಷ್ಟ ಪಂಗಡಗಳನ್ನು ವಿವರಿಸುವ ವಿಧಾನವನ್ನು / ಪ್ರಕ್ರಿಯೆಯನ್ನು ಮಾತ್ರ ಒದಗಿಸಲಾಗಿದೆ. ಅದರ ಪ್ರಕಾರ, ಪರಿಶಿಷ್ಟ ಪಂಗಡಗಳು ಎಂದರೆ ಅಂತಹ ಬುಡಕಟ್ಟುಗಳು ಅಥವಾ ಬುಡಕಟ್ಟು ಸಮುದಾಯಗಳು ಅಥವಾ ಅಂತಹ ಬುಡಕಟ್ಟುಗಳು ಅಥವಾ ಬುಡಕಟ್ಟು ಸಮುದಾಯಗಳ ಭಾಗಗಳು ಅಥವಾ ಗುಂಪುಗಳು ಈ ಸಂವಿಧಾನದ ಉದ್ದೇಶಗಳಿಗಾಗಿ ಪರಿಚ್ಛೇದ 342ರ ಅಡಿಯಲ್ಲಿ ಪರಿಶಿಷ್ಟ ಪಂಗಡಗಳು ಎಂದು ಪರಿಗಣಿಸಲಾಗುತ್ತದೆ.

ವಿಧಿ 342 (1): ರಾಷ್ಟ್ರಪತಿಗಳು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ, ಮತ್ತು ಆ ಪ್ರದೇಶವು ಒಂದು ರಾಜ್ಯವಾಗಿದ್ದಲ್ಲಿ, ಆ ರಾಜ್ಯದ ರಾಜ್ಯಪಾಲರೊಂದಿಗೆ ಸಮಾಲೋಚಿಸಿದ ನಂತರ, ಸಾರ್ವಜನಿಕ ಅಧಿಸೂಚನೆಯ ಮೂಲಕ, ಬುಡಕಟ್ಟು ಜಾತಿಗಳು ಅಥವಾ ಬುಡಕಟ್ಟು ಸಮುದಾಯಗಳು ಅಥವಾ ಬುಡಕಟ್ಟು ಸಮುದಾಯಗಳ ಭಾಗಗಳು ಅಥವಾ ಗುಂಪುಗಳನ್ನು ನಿರ್ದಿಷ್ಟ ಪಡಿಸಬಹುದು, ಈ ಸಂವಿಧಾನದ ಉದ್ದೇಶಗಳಿಗಾಗಿ, ಆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಪಟ್ಟಂತೆ ಬುಡಕಟ್ಟು ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳೆಂದು ಪರಿಗಣಿಸಲಾಗುತ್ತದೆ.

 

ಪರಿಶಿಷ್ಟ ಪಂಗಡಗಳಿಗೆ’ ಸಾಂವಿಧಾನಿಕ ರಕ್ಷಣೆಗಳು:

ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸುರಕ್ಷತೆಗಳು:

 1. ವಿಧಿ 15 (4):– ಇತರ ಹಿಂದುಳಿದ ವರ್ಗಗಳ (ಪರಿಶಿಷ್ಟ ಪಂಗಡಗಳನ್ನು ಒಳಗೊಂಡಂತೆ) ಪ್ರಗತಿಗಾಗಿ ವಿಶೇಷ ನಿಬಂಧನೆಗಳು;
 2. ವಿಧಿ 29:- ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ (ಪರಿಶಿಷ್ಟ ಪಂಗಡಗಳು ಸೇರಿದಂತೆ);
 3. ವಿಧಿ 46:- ರಾಜ್ಯವು ವಿಶೇಷ ಕಾಳಜಿಯಿಂದ ದುರ್ಬಲ ವರ್ಗದ ಜನರು ಮತ್ತು ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಉತ್ತೇಜಿಸುತ್ತದೆ ಮತ್ತು ಅವರನ್ನು ಎಲ್ಲಾ ರೀತಿಯ ಸಾಮಾಜಿಕ ಅನ್ಯಾಯ ಮತ್ತು ಶೋಷಣೆಯಿಂದ ರಕ್ಷಿಸಬೇಕು ಎಂದು ತಿಳಿಸುತ್ತದೆ.
 4. ವಿಧಿ 350:– ಒಂದು ವಿಭಿನ್ನ ಭಾಷೆ, ಲಿಪಿ ಅಥವಾ ಸಂಸ್ಕೃತಿಯ ಸಂರಕ್ಷಣೆಯ ಹಕ್ಕು.
 5. ವಿಧಿ 350:- ಮಾತೃಭಾಷೆಯಲ್ಲಿ ಸೂಚನೆ.

 

ಸಾಮಾಜಿಕ ಸಂರಕ್ಷಣೆಗಳು:

 1. ಪರಿಚ್ಛೇದ 23: – ಮಾನವ ಕಳ್ಳಸಾಗಣೆ ಮತ್ತು ಭಿಕ್ಷಾಟನೆ ಮತ್ತು ಇತರ ರೀತಿಯ ಯಾವುದೇ ಬಲವಂತದ ದುಡಿಮೆಯ ನಿಷೇಧ;
 2. ಕಲಂ 24: – ಬಾಲ ಕಾರ್ಮಿಕ ಪದ್ಧತಿ ನಿಷೇಧ.

 

ಆರ್ಥಿಕ ಸಂರಕ್ಷಣೆಗಳು:

 1. ವಿಧಿ 244:- ನಿಬಂಧನೆಗಳು (1) ಐದನೇ ಅನುಸೂಚಿಯ ನಿಬಂಧನೆಗಳು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಪರಿಶಿಷ್ಟ ಪ್ರದೇಶಗಳು ಮತ್ತು ಪರಿಶಿಷ್ಟ ಪಂಗಡಗಳ ಆಡಳಿತ ಮತ್ತು ನಿಯಂತ್ರಣಕ್ಕೆ ಅನ್ವಯಿಸುತ್ತದೆ. ನಿಬಂಧನೆ (2) ಆರನೇ ಅನುಸೂಚಿಯ ನಿಬಂಧನೆಗಳು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಅನ್ವಯಿಸುತ್ತದೆ.
 2.  ಪರಿಚ್ಛೇದ 275:-ಸಂವಿಧಾನದ ಐದನೇ ಮತ್ತು ಆರನೆಯ ಅನುಸುಚಿಯ ಅಡಿಯಲ್ಲಿ ಬರುವ ನಿರ್ದಿಷ್ಟ ಪಡಿಸಲಾದ ರಾಜ್ಯಗಳಿಗೆ (STs & SAs) ಸಹಾಯಧನ.

 

ರಾಜಕೀಯ ಸುರಕ್ಷತೆಗಳು:

ವಿಧಿ 164 (1):– ಬಿಹಾರ, ಮಧ್ಯಪ್ರದೇಶ ಮತ್ತು ಒರಿಸ್ಸಾದಲ್ಲಿ ಬುಡಕಟ್ಟು ವ್ಯವಹಾರಗಳ ಮಂತ್ರಿಗಳನ್ನು ಹೊಂದಲು ಅವಕಾಶ;

ವಿಧಿ 330:- ಲೋಕಸಭೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಸೀಟುಗಳ ಮೀಸಲಾತಿ;

ಅನುಚ್ಛೇದ 337 – ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಪಂಗಡದವರಿಗೆ ಸೀಟುಗಳ ಮೀಸಲಾತಿ;

ವಿಧಿ 334:– ಮೀಸಲಾತಿಗಾಗಿ 10 ವರ್ಷಗಳ ಅವಧಿ (ಅವಧಿ ವಿಸ್ತರಿಸಲು ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ);

ಅನುಚ್ಛೇದ 243:– ಪಂಚಾಯತಿಗಳಲ್ಲಿ ಸೀಟುಗಳ ಮೀಸಲಾತಿ.

ವಿಧಿ 371:– ಈಶಾನ್ಯ ರಾಜ್ಯಗಳು ಮತ್ತು ಸಿಕ್ಕಿಂಗೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳು.

 

ಸೇವಾ ಸುರಕ್ಷತೆಗಳು:

ಪರಿಶಿಷ್ಟ ಪಂಗಡದವರಿಗೆ ಸೇವಾ ಸಂಬಂಧಿತ ರಕ್ಷಣೆಗಳು ಅನುಚ್ಛೇದ 16 (4), 16 (4 ಎ), 164 (ಬಿ), ಅನುಚ್ಛೇದ 335, ಮತ್ತು ಕಲಂ 320 (40) ಅಡಿಯಲ್ಲಿ ಇವೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಮೇಕೆದಾಟು ಸಮಸ್ಯೆ:


(Mekedatu issue)

 ಸಂದರ್ಭ:

ಮೇಕೆದಾಟು ಎಂಬಲ್ಲಿ ಕಾವೇರಿ ನದಿಗೆ ಜಲಾಶಯ ನಿರ್ಮಿಸುವ ಕರ್ನಾಟಕದ ಕ್ರಮವನ್ನು ತಮಿಳುನಾಡು ವಿರೋಧಿಸುತ್ತಿದೆ. ಕರ್ನಾಟಕ ಸರ್ಕಾರವು, ಮೇಕೆದಾಟು ಯೋಜನೆಯಿಂದ ಹಿಂದೆ ಸರಿಯುವ ಮಾತೆ ಇಲ್ಲ ಮತ್ತು ಯೋಜನೆಯನ್ನು ಕೈಗೊಳ್ಳುವುದರಲ್ಲಿ ಯಾವುದೇ “ರಾಜಿ” ಇಲ್ಲ ಮತ್ತು ಈ ಯೋಜನೆಯನ್ನು ರಾಜ್ಯವು ಕೈಗೆತ್ತಿಕೊಳ್ಳುತ್ತದೆ ಎಂದು ಸಮರ್ಥಿಸಿಕೊಂಡಿದೆ.

 

ವಿವಾದಕ್ಕೆ ಪರಿಹಾರ:

ಮೇಕೆದಾಟು ಯೋಜನೆ ಆರಂಭಿಸಲು ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿ (ಡಿಪಿಆರ್‌)ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ  (CWMA) ಅನುಮತಿಯ ಅಗತ್ಯವಿದೆ. ಅಲ್ಲದೆ, ಯೋಜನೆಗೆ ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳ ಸಮ್ಮತಿಯೂ ಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 

 1. ಕರ್ನಾಟಕ ಸಲ್ಲಿಸಿರುವ ‘ಸಮಗ್ರ ಯೋಜನಾ ವರದಿಯನ್ನು (Detail Project Report – DPR) ಅನುಮೋದನೆಗಾಗಿ ಹಲವು ಬಾರಿ CWMA ಮುಂದೆ ಇಡಲಾಗಿದೆ, ಆದರೆ ವಿವಾದಕ್ಕೆ ಸಂಬಂಧಿಸಿದ ರಾಜ್ಯಗಳಾದ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಒಮ್ಮತದ ಕೊರತೆಯಿಂದಾಗಿ ಈ ವಿಷಯದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.

‘ಅನುಮತಿ ಕೋರಿ ಅರ್ಜಿ ಸಲ್ಲಿಸಿದ 6 ತಿಂಗಳೊಳಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡದಿದ್ದರೆ, ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಭಾವಿಸಬಹುದಲ್ಲವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರವು, ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಭಾವಿಸುವುದು ಸಹಜ. ಆದರೆ, ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿದ್ದ ಐತೀರ್ಪನ್ನು ಪ್ರಶ್ನಿಸಿ ಕಣಿವೆ  ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ನೀಡಿರುವ ಅಂತಿಮ ತೀರ್ಪಿನ ಅನ್ವಯ, ಯಾವುದೇ ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ.  

ಈ ಯೋಜನೆಯನ್ನು ಅಂತಾರಾಜ್ಯ ನದಿಗೆ ಅಡ್ಡಲಾಗಿ ಪ್ರಸ್ತಾಪಿಸಲಾಗಿರುವುದರಿಂದ, ಅಂತಾರಾಜ್ಯ ಜಲ ವಿವಾದ ಕಾಯಿದೆಯ ಪ್ರಕಾರ, ಕಣಿವೆಯ ಕೆಳಹಂತದ ರಾಜ್ಯಗಳಾದ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳ ಸಮ್ಮತಿ ಪಡೆಯುವುದು ಅಗತ್ಯ ಎಂದು ಕರ್ನಾಟಕವು ಡಿಪಿಆರ್ ಸಲ್ಲಿಸಿದಾಗಲೇ ತಿಳಿಸಲಾಗಿದೆ ಎಂದೂ ಸರ್ಕಾರವು ಲೋಕಸಭೆಗೆ ತಿಳಿಸಿದೆ.

 

ಮೇಕೆದಾಟು ಯೋಜನೆ ಕುರಿತು:

 1. ಮೇಕೆದಾಟು ಒಂದು ಬಹುಪಯೋಗಿ (ಕುಡಿಯುವ ನೀರು ಮತ್ತು ಜಲ ವಿದ್ಯುತ್) ಯೋಜನೆಯಾಗಿದೆ.
 2. ಯೋಜನೆಯ ಅಡಿಯಲ್ಲಿ, ಕರ್ನಾಟಕದ ರಾಮನಗರ ಜಿಲ್ಲೆಯ ಕನಕಪುರದ ಬಳಿ ‘ಸಮತೋಲನ ಜಲಾಶಯ’ (Balancing Reservoir) ನಿರ್ಮಿಸಲು ಉದ್ದೇಶಿಸಲಾಗಿದೆ.
 3. ಈ ಯೋಜನೆಯ ಉದ್ದೇಶ ಬೆಂಗಳೂರು ನಗರ ಮತ್ತು ಅದರ ಪಕ್ಕದ ಪ್ರದೇಶಗಳಿಗೆ ಕುಡಿಯುವ ನೀರನ್ನು (4.75 ಟಿಎಂಸಿ) ಸಂಗ್ರಹಿಸುವುದು ಮತ್ತು ಪೂರೈಸುವುದಾಗಿದೆ. ಈ ಯೋಜನೆಯ ಮೂಲಕ ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕೂಡ ಪ್ರಸ್ತಾಪಿಸಲಾಗಿದೆ.
 4. ಯೋಜನೆಯ ಅಂದಾಜು ವೆಚ್ಚ 9,000 ಕೋಟಿ ರೂ.ಗಳು.

 

ತಮಿಳುನಾಡು, ಈ ಯೋಜನೆಯನ್ನು ವಿರೋಧಿಸಲು ಕಾರಣಗಳು:

‘ಸುಪ್ರೀಂ ಕೋರ್ಟ್’ ಮತ್ತು ‘ಕಾವೇರಿ ನದಿ ನೀರು ವಿವಾದ ಪ್ರಾಧಿಕಾರ’ (CWDT) ‘’ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ನೀರು ಸಂಗ್ರಹಣೆ ಮತ್ತು ವಿತರಣೆಗೆ ಶೇಖರಣಾ ಸೌಲಭ್ಯಗಳು ಸಾಕಷ್ಟಿವೆ, ಹಾಗಾಗಿ ಕರ್ನಾಟಕದ ಈ ಪ್ರಸ್ತಾವನೆ ಸಮರ್ಥನೀಯವಲ್ಲ ಅದರಿಂದ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗುವುದು ಎಂದು ತಮಿಳುನಾಡು ಹೇಳುತ್ತದೆ.

ತಮಿಳುನಾಡಿನ ಪ್ರಕಾರ- ಉದ್ದೇಶಿತ ಜಲಾಶಯದ ನಿರ್ಮಾಣವು ಕೇವಲ ಕುಡಿಯುವ ನೀರಿಗಾಗಿ ಮಾತ್ರ ವಾಗಿರದೆ, ನಿರಾವರಿ ಕ್ಷೇತ್ರದ ಪ್ರಮಾಣವನ್ನು ಹೆಚ್ಚಿಸಲು ಸಹ ನಿರ್ಮಿಸಲಾಗುತ್ತದೆ,ಇದು ‘ಕಾವೇರಿ ಜಲ ವಿವಾದ ತೀರ್ಪಿನ’ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದು ಅದರ ವಾದವಾಗಿದೆ.

 

ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳು:

 ಕಾವೇರಿ ಜಲವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ‘ಕಾವೇರಿ ಜಲವಿವಾದ ನ್ಯಾಯಮಂಡಳಿ’ (CWDT) ಅನ್ನು 1990 ರಲ್ಲಿ ಸ್ಥಾಪಿಸಲಾಗಿತ್ತು ಮತ್ತು ಅದು 2007ರಲ್ಲಿ ತನ್ನ ಅಂತಿಮ ಐತೀರ್ಪು ಪ್ರಕಟಿಸಿ ಶೇ.30ರ ಅವಲಂಬನಾ ಸೂತ್ರದಡಿ ಕಾವೇರಿ ನದಿ ನೀರಿನ ಒಟ್ಟು ಪ್ರಮಾಣವನ್ನು 740 ಟಿಎಂಸಿ ಎಂದು ಲೆಕ್ಕ ಹಾಕಿತ್ತು. ಬಳಿಕ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳ ರಾಜ್ಯಕ್ಕೆ 30 ಟಿಎಂಸಿ, ಪಾಂಡಿಚೇರಿಗೆ 7 ಟಿಎಂಸಿ ಹಾಗೂ ಉಳಿದಂತೆ 17 ಟಿಎಂಸಿ ನೀರನ್ನು ಪರಿಸರ ಬಳಕೆ, ಆವಿಯಾಗುವಿಕೆ ಮುಂದಾದವುಗಳಿಗೆ ಹಂಚಿಕೆ ಮಾಡಿತ್ತು.

ಆದಾಗ್ಯೂ, ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳು ಈ ನದಿ ನೀರು ಹಂಚಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವು ಮತ್ತು ನೀರು ಹಂಚಿಕೆಗಾಗಿ ಎರಡೂ ರಾಜ್ಯಗಳಲ್ಲಿ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದವು. ಇದರ ನಂತರ ಈ ವಿಷಯವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್  ತನ್ನ 2018 ರ ತೀರ್ಪಿನಲ್ಲಿ, ತಮಿಳುನಾಡಿನ ಈ ಹಿಂದಿನ ಪಾಲನ್ನು ವಿಭಜಿಸಿ, 14.75 ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಕರ್ನಾಟಕಕ್ಕೆ ಹಂಚಿಕೆ ಮಾಡಿತು.

ಹೀಗಾಗಿ, ಹೊಸದಾಗಿ ಮಾಡಲಾದ ಹಂಚಿಕೆಯ ಪ್ರಕಾರ, ತಮಿಳುನಾಡಿಗೆ 404.25 ಟಿಎಂಸಿ ಅಡಿ ನೀರು ಸಿಕ್ಕಿತು ಮತ್ತು ಕರ್ನಾಟಕಕ್ಕೆ 284.75 ಟಿಎಂಸಿ ಅಡಿ ನೀರನ್ನು ನೀಡಲಾಗಿದೆ. ಕೇರಳ ಮತ್ತು ಪುದುಚೇರಿಯ ಪಾಲು ಬದಲಾಗದೆ ಉಳಿದಿದೆ.

 

 

ದಯವಿಟ್ಟು ಗಮನಿಸಿ:

ಕಾವೇರಿ ನದಿ ನೀರಿನ ವಿವಾದದ ಕುರಿತ ಮಾಹಿತಿ:

 1.  ಕಾವೇರಿ ಜಲವಿವಾದವು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ನಿರಂತರವಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ವಿವಾದ ಸ್ವರೂಪ ತಾಳಿರುವುದು ವಿಷಾದದ ಸಂಗತಿ.
 2. ರಾಷ್ಟ್ರದ ಬಹುತೇಕ ನದಿಗಳು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಹರಿದು ಸಮುದ್ರ ಸೇರುತ್ತಿವೆ. ತಮ್ಮ ವ್ಯಾಪ್ತಿಯಲ್ಲಿ ಹರಿಯುವ ನದಿ ನೀರಿನ ಸಂರಕ್ಷಣೆ ಮತ್ತು ಉಪಯೋಗವನ್ನು ಆಯಾ ರಾಜ್ಯಗಳು ಮಾಡುತ್ತಿರುತ್ತವೆ. ಆದರೆ, ಇದುವರೆಗೂ ಕೇಂದ್ರ ಸರ್ಕಾರವು ಸ್ಪಷ್ಟವಾದ `ರಾಷ್ಟ್ರೀಯ ಜಲ ನೀತಿ’ಯನ್ನು ರೂಪಿಸದೆ ಇರುವುದರಿಂದ ಅಂತರ ರಾಜ್ಯ ನದಿ ನೀರು ಹಂಚಿಕೆಯ ವಿವಾದಗಳು ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ರಾಜ್ಯಗಳ ನಡುವೆ ವಿವಾದಗಳನ್ನು ಸೃಷ್ಟಿಸುತ್ತಿವೆ. ಈ ಕಾರಣದಿಂದಲೇ ಭಾರತ ಸರ್ಕಾರವು 1956ರಲ್ಲಿ ಅಂತರ ರಾಜ್ಯ ಜಲವಿವಾದ ಅಧಿನಿಯಮವನ್ನು ರೂಪಿಸಿ ಜಾರಿಗೊಳಿಸಿದೆ. ಆದರೂ ಕೃಷ್ಣಾ, ಕಾವೇರಿ ಮುಂತಾದ ನದಿಗಳ ಜಲವಿವಾದ ನ್ಯಾಯಮಂಡಳಿಗಳ ಸ್ಥಾಪನೆಗೆ ಕಾರಣವಾಗಿದೆ.
 3. ಕರ್ನಾಟಕದಲ್ಲಿ ಅರವತ್ತರ ದಶಕದಲ್ಲಿ ಕೈಗೊಂಡ ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳ ನಿರ್ಮಾಣದ ಬಗ್ಗೆ ಅಸಮಾಧಾನಗೊಂಡಿದ್ದ ತಮಿಳುನಾಡು ಸರ್ಕಾರವು 1971ರ ಆಗಸ್ಟ್‌ನಲ್ಲಿ ಸುಪ್ರೀಂ ಕೊರ್ಟ್‌ನಲ್ಲಿ ದಾವೆಹೂಡಿ ಈ ಜಲವಿವಾದವನ್ನು ನ್ಯಾಯಮಂಡಳಿಗೆ ವಹಿಸಬೇಕೆಂದು ಕೋರಿತ್ತು. ಆದರೆ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ದೃಷ್ಟಿಯಿಂದ ಅಂದಿನ ಪ್ರಧಾನ ಮಂತ್ರಿಗಳು ನೀಡಿದ ಭರವಸೆಯನ್ವಯ 1972ರಲ್ಲಿ ತಮಿಳುನಾಡು ಸರ್ಕಾರವು ದಾವೆಯನ್ನು ಹಿಂಪಡೆಯಿತು.
 4. ಈ ಮಧ್ಯೆ ತಮಿಳುನಾಡಿನ ಕಾವೇರಿ `ನೀರ್ಪಾಸಾನ ವಿಳಯ ಪೊಂಗಲ್’ ಎಂಬ ಸಂಸ್ಥೆಯು 1983ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿ ಈ ವಿವಾದವನ್ನು ಬಗೆಹರಿಸಲು ಟ್ರಿಬ್ಯೂನಲ್ ರಚನೆ ಮಾಡುವಂತೆ ಕೋರಿತು. ಅಂತಿಮವಾಗಿ ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ 1990ರ ಜೂನ್‌ನಲ್ಲಿ ಭಾರತ ಸರ್ಕಾರವು ಕಾವೇರಿ ನದಿ ಜಲವಿವಾದ ನ್ಯಾಯಮಂಡಳಿಯನ್ನು ಸ್ಥಾಪಿಸಿ ಪ್ರಕಟಣೆ ಹೊರಡಿಸಿತು.
 5. ಈ ನ್ಯಾಯಮಂಡಳಿಗೆ ಮುಂಬೈ ಹೈಕೋರ್ಟ್‌ನ ಮುಖ್ಯನ್ಯಾಯಾಧೀಶರಾಗಿದ್ದ ನ್ಯಾಯಾಮೂರ್ತಿ ಚಿತ್ತತೋಷ್ ಮುಖರ್ಜಿಯವರನ್ನು ಅಧ್ಯಕ್ಷರನ್ನಾಗಿ, ಅಲಹಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ  ಎಸ್.ಡಿ ಅಗರ್‌ವಾಲ ಹಾಗೂ ಪಟ್ನಾ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ  ಎನ್. ಎಸ್ ರಾವ್‌ರವರನ್ನು ಸದಸ್ಯರಾಗಿ ನೇಮಿಸಲಾಯಿತು.
 6. ಈ ನ್ಯಾಯಮಂಡಳಿ ಮುಂದೆ ಕರ್ನಾಟಕ 465 ಟಿ.ಎಂ.ಸಿ, ಕೇರಳ 99.8 ಟಿ.ಎಂ.ಸಿ, ತಮಿಳುನಾಡು 573.5 ಟಿ.ಎಂ.ಸಿ ಮತ್ತು ಪಾಂಡಿಚೇರಿ 9.35 ಟಿ.ಎಂ.ಸಿಯಂತೆ ಒಟ್ಟು 1,150 ಟಿ.ಎಂ.ಸಿ ನೀರಿನ ಬೇಡಿಕೆಯನ್ನು ಮಂಡಿಸಿದ್ದು ವಾಸ್ತವವಾಗಿ ನೀರಿನ ಲಭ್ಯತೆಯ ಪ್ರಮಾಣ ಸುಮಾರು 740 ರಿಂದ 800 ಟಿ.ಎಂ.ಸಿ ಎಂದು ಅಂದಾಜು ಮಾಡಲಾಗಿದೆ. ತಮಿಳುನಾಡಿನ ಕೋರಿಕೆ ಮೇರೆಗೆ ನ್ಯಾಯಮಂಡಳಿ ದಿನಾಂಕ: 25/06/1991 ರಂದು ಮಧ್ಯಂತರ ಆದೇಶ ಹೊರಡಿಸಿ ಕರ್ನಾಟಕವು ತಮಿಳುನಾಡಿಗೆ ಪ್ರತಿವರ್ಷದ ಜೂನ್‌ನಿಂದ ಮೇ ತಿಂಗಳವರೆಗೆ ಒಟ್ಟು 205 ಟಿ.ಎಂ.ಸಿ ನೀರನ್ನು ಬಿಡುವಂತೆ ಆದೇಶಿಸಿತು ಹಾಗೂ ಕರ್ನಾಟಕ ರಾಜ್ಯವು ಕಾವೇರಿ ಜಲಾನಯನ ಪ್ರದೇಶದಲ್ಲಿ 11.2 ಲಕ್ಷ ಎಕರೆ ನೀರಾವರಿ ಪ್ರದೇಶಕ್ಕೆ ಮೇಲ್ಪಟ್ಟು ವಿಸ್ತರಿಸದಂತೆ ನಿರ್ದೇಶಿಸಿತು. ಈ ಮಧ್ಯಂತರ ಆದೇಶವು ನ್ಯಾಯಮಂಡಳಿ ಅಂತಿಮ ತೀರ್ಪು ಬರುವವರೆಗೆ ಜಾರಿಯಲ್ಲಿರುವಂತೆಯೂ ಸಹ ಆದೇಶಿಸಿತು.
 7. ಕಾವೇರಿ ಜಲ ವಿವಾದ ನ್ಯಾಯಮಂಡಳಿಯು ಅತ್ಯುನ್ನತ ನ್ಯಾಯಾಲಯದ ಸ್ಥಾನಮಾನವನ್ನು ಹೊಂದಿದ್ದು ಇದರ ಆದೇಶವೇ ಅಂತಿಮವೆಂದು ಅಂತರ ರಾಜ್ಯ ಜಲವಿವಾದದ ಅಧಿನಿಯಮದಲ್ಲಿ ತಿಳಿಸಲಾಗಿದೆ. ಆದ್ದರಿಂದ, ಈ ನ್ಯಾಯಮಂಡಳಿ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶವಿರುವುದಿಲ್ಲ.
 8. ಕಾವೇರಿ ನ್ಯಾಯಮಂಡಳಿ ಮಧ್ಯಂತರ ಆದೇಶದಿಂದ ಕರ್ನಾಟಕ ರಾಜ್ಯಕ್ಕೆ ಅಪಾರವಾದ ನಷ್ಟ ಹಾಗೂ ಜಲಕ್ಷಾಮ ಉಂಟಾಗುವುದು ನಿಶ್ಚಿತವಾದ್ದರಿಂದ ಸಹಜವಾಗಿ ರಾಜ್ಯದ ರೈತರು ಮತ್ತು ಸಾರ್ವಜನಿಕರು ಈ ಮಧ್ಯಂತರ ತೀರ್ಪಿನ ವಿರುದ್ದ ಉಗ್ರ ಪ್ರತಿಭಟನೆ ಮಾಡಿದ್ದರಿಂದ ಈ ಹೋರಾಟವು ಗಂಭೀರ ಸ್ವರೂಪವನ್ನು ತಾಳಿತು. ಈ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಕರ್ಫ್ಯೂ ವಿಧಿಸಲಾಗಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಎಸ್ ಬಂಗಾರಪ್ಪನವರು ರಾಜ್ಯದ ಹಿತರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸಿದರು. ಆ ನಂತರ ಸುಪ್ರೀಂ ಕೋರ್ಟಿನ ಅಭಿಪ್ರಾಯದಂತೆ ಈ ಸುಗ್ರೀವಾಜ್ಞೆ ಅಸಿಂಧು ಎಂದು ಕೈಬಿಡಲಾಯಿತು.
 9. ಈ ಮಧ್ಯಂತರ ಆದೇಶವನ್ನು ಜಾರಿಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವು ದಿನಾಂಕ: 11/08/1998 ರಂದು ಅಧಿಕೃತ ಪ್ರಕಟಣೆ ಹೊರಡಿಸಿ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾವೇರಿ ನದಿ ಪ್ರಾಧಿಕಾರ ರಚಿಸಿ ಈ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸದಸ್ಯರನ್ನಾಗಿ ಮಾಡಿದೆ. ಈ ಪ್ರಾಧಿಕಾರವು ಕೈಗೊಂಡ ತೀರ್ಮಾನವನ್ನು ಜಾರಿಗೊಳಿಸಲು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾವೇರಿ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ.
 10. ವಿಪರ್ಯಾಸವೆಂದರೆ ದಿನಾಂಕ: 05/02/2007 ರಂದು ಕಾವೇರಿ ಜಲವಿವಾದ ನ್ಯಾಯಮಂಡಳಿ ತನ್ನ ಅಂತಿಮ ಆದೇಶವನ್ನು ನೀಡಿದ್ದರೂ ಸಹ ಭಾರತ ಸರ್ಕಾರವು ನ್ಯಾಯಾಧೀಕರಣದ ಅಂತಿಮ ಆದೇಶವನ್ನು ಅಧಿಕೃತವಾಗಿ ಪ್ರಕಟಿಸದೆ ಇರುವುದರಿಂದ ಮಧ್ಯಂತರ ಆದೇಶವು ಈಗಲೂ ಜಾರಿಯಲ್ಲಿದೆ. ಆದರೆ, ನ್ಯಾಯಮಂಡಳಿ ಅಂತಿಮ ಆದೇಶದ ಪ್ರಕಟಣೆ ಹೊರಡಿಸಿದಲ್ಲಿ ಅದನ್ನು ಜಾರಿಗೊಳಿಸಲು ಪ್ರತ್ಯೇಕ ನಿಯಂತ್ರಣ ಮಂಡಳಿ ಮತ್ತು ವ್ಯವಸ್ಥೆ ರೂಪಿಸಲಾಗುತ್ತದೆ. ಆಗ ಜಲಾಶಯಗಳ ಹೊರಹರಿವಿನ ನಿಯಂತ್ರಣ ಮತ್ತು ಹತೋಟಿ ನಮ್ಮ ರಾಜ್ಯ ಸರ್ಕಾರದ ಕೈತಪ್ಪಿ ಹೋಗುವುದು ನಿಶ್ಚಿತ.
 11. ಕಾವೇರಿ ನ್ಯಾಯಮಂಡಳಿ ದಿನಾಂಕ: 05/02/2007 ರಂದು ಅಂತಿಮ ಆದೇಶವನ್ನು ಹೊರಡಿಸಿ ಕರ್ನಾಟಕ ರಾಜ್ಯವು ತಮಿಳುನಾಡಿಗೆ ಕ್ರಮವಾಗಿ ಜೂನ್‌ನಿಂದ ಮುಂದಿನ ಏಪ್ರಿಲ್ ವರೆಗೆ 192 ಟಿ.ಎಂ.ಸಿ ನೀರನ್ನು ಈ ರಾಜ್ಯಗಳ ಗಡಿಭಾಗದಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾಗುವಂತೆ ಪ್ರತಿ ಮಾಹೆಯಲ್ಲಿ ವಾರದಲ್ಲಿ ಸರಾಸರಿಯಂತೆ ನಿಗದಿಪಡಿಸಿದ ಪ್ರಮಾಣದಲ್ಲಿ ನೀರು ಬಿಡುವಂತೆ ಆದೇಶ ನೀಡಿದೆ. ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನ ಅನುಸಾರ ಕಾವೇರಿ ಜಲಾನಯನ ನದಿ ಪ್ರದೇಶದಲ್ಲಿ ಒದಗುವ ನೀರಿನ ಶೇ 50ರ ಪ್ರಮಾಣದಂತೆ ಲಭ್ಯವಾಗುವ ನೀರು 740 ಟಿ.ಎಂ.ಸಿ ಗಳೆಂದು ಅಂದಾಜು ಮಾಡಿದ್ದು, ಇದರಲ್ಲಿ ತಮಿಳುನಾಡು ರಾಜ್ಯಕ್ಕೆ 419 ಟಿ.ಎಂ.ಸಿ, ಕರ್ನಾಟಕ ರಾಜ್ಯಕ್ಕೆ 270 ಟಿ.ಎಂ.ಸಿ, ಕೇರಳ ರಾಜ್ಯಕ್ಕೆ 30 ಟಿ.ಎಂ.ಸಿ, ಪಾಂಡಿಚೇರಿಗೆ 7 ಟಿ.ಎಂ.ಸಿ, ಪರಿಸರ ಸಂರಕ್ಷಣೆಗೆ 10 ಟಿ.ಎಂ.ಸಿ (ಸಮುದ್ರಕ್ಕೆ ಅನಿವಾರ್ಯವಾಗಿ ಸೇರುವ 4 ಟಿ.ಎಂ.ಸಿ ನೀರನ್ನು ಹೊರತುಪಡಿಸಿ) ನೀರನ್ನು ಹಂಚಿಕೆ ಮಾಡಿ ನ್ಯಾಯಮಂಡಳಿ ತೀರ್ಪು ನೀಡಿದೆ.
 12. ಈ ಅಂತಿಮ ತೀರ್ಪು ಕರ್ನಾಟಕಕ್ಕೆ ಸ್ವಲ್ಪ ಅನುಕೂಲವು ಮತ್ತು ಬಹುಪಾಲು ಅನಾನುಕೂಲವೂ ಆಗಿದೆ. ಅನುಕೂಲವೆಂದರೆ, ನ್ಯಾಯಮಂಡಳಿ ಮಧ್ಯಂತರ ತೀರ್ಪಿನಲ್ಲಿ ಪ್ರತಿ ವರ್ಷ 205 ಟಿ.ಎಂ.ಸಿ ಬಿಡಬೇಕೆಂದು ಆದೇಶಿಸಿರುವುದನ್ನು ಮಾರ್ಪಡಿಸಿ ಅಂತಿಮ ತೀರ್ಪಿನಲ್ಲಿ 192 ಟಿ.ಎಂ.ಸಿ.ಗೆ ಇಳಿಸಿದೆ. ಹಾಗೂ ಮಧ್ಯಂತರ ತೀರ್ಪಿನಲ್ಲಿ ಮಿತಿಗೊಳಿಸಿದ್ದ 11.2 ಲಕ್ಷ ನೀರಾವರಿ ಪ್ರದೇಶವನ್ನು 18.85 ಲಕ್ಷ ಎಕರೆಗಳಿಗೆ ವಿಸ್ತರಿಸಬಹುದಾಗಿದೆ. ಆದರೆ, ಕರ್ನಾಟಕವು ಕೈಗೊಂಡಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಈಗ ಹಂಚಿಕೆಯಾಗಿರುವ ನೀರಿನ ಪ್ರಮಾಣ ಸಾಕಾಗುವುದಿಲ್ಲ.
 13. ನ್ಯಾಯಮಂಡಳಿಯಲ್ಲಿ ಕರ್ನಾಟಕದ ಬೇಡಿಕೆ ನೀರಾವರಿಗಾಗಿ 27.28 ಲಕ್ಷ ಎಕರೆಗೆ 408 ಟಿ.ಎಂಸಿ ನೀರು ಅಗತ್ಯವಿರುತ್ತದೆ. ಕುಡಿಯುವ ನೀರಿಗಾಗಿ ಕಾವೇರಿ ಜಲಾನಯನದ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಒಟ್ಟು 50ಕ್ಕೂ ಹೆಚ್ಚು ಟಿ.ಎಂ.ಸಿ ನೀರು ಅಗತ್ಯವಿದೆ. ಬೆಂಗಳೂರು ಮಹಾನಗರದ ಅವಶ್ಯಕತೆ ಸುಮಾರು 30 ಟಿ.ಎಂ.ಸಿ.ಗಳಾಗಿರುತ್ತದೆ. ಕಾವೇರಿ ನ್ಯಾಯಮಂಡಳಿ ಇದರ 1/3 ಭಾಗದಷ್ಟನ್ನು ಮಾತ್ರ ಪರಿಗಣಿಸಿದೆ. ಕಾನೂನಿನ ವಿಮರ್ಶಕರು ಮತ್ತು ತಜ್ಞರು ಹೇಳಿರುವಂತೆ ಕರ್ನಾಟಕಕ್ಕೆ ಇನ್ನು ಹೆಚ್ಚಿಗೆ ಕನಿಷ್ಠ 30-40 ಟಿ.ಎಂ.ಸಿ ನೀರು ಹಂಚಿಕೆಯಾಗಬೇಕಿತ್ತು. ಆದರೆ ತಮಿಳುನಾಡಿನ ಮುಖಜ ಭೂಮಿ ಪ್ರದೇಶದಲ್ಲಿ ಒದಗುವ ಸುಮಾರು 88 ಟಿ.ಎಂ.ಸಿ ಮತ್ತು ತಮಿಳುನಾಡಿನಲ್ಲಿ ಲಭ್ಯವಿರುವ ಅಂತರ್ಜಲದ ಸರಿಸಮಾನವಾಗಿ ಸುಮಾರು 30 ಟಿ.ಎಂ.ಸಿಗೂ ಹೆಚ್ಚು ಇರುವ ನೀರಿನ ಪ್ರಮಾಣವನ್ನು ನ್ಯಾಯಮಂಡಳಿ ಪರಿಗಣಿಸಿರುವುದಿಲ್ಲ. ಇದರಿಂದ ತಮಿಳುನಾಡಿಗೆ ಅನುಕೂಲವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಆದುದರಿಂದ, ಕರ್ನಾಟಕ ಸರ್ಕಾರವು ನ್ಯಾಯಮಂಡಳಿ ಅಂತಿಮ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುತ್ತದೆ.
 14. ಸಾಮಾನ್ಯ ವರ್ಷಗಳಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿ ತಮಿಳುನಾಡಿಗೆ ಸುಮಾರು 200 ಟಿ.ಎಂ.ಸಿ ಗಿಂತಲೂ ಹೆಚ್ಚು ನೀರು ಹರಿದಿದೆ. ಆದರೆ ಸಾಕಷ್ಟು ಮಳೆ ಇಲ್ಲದೆ ಜಲಾಶಯಗಳು ಭರ್ತಿಯಾಗದೆ ನಮ್ಮ ರೈತರೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಹೆಚ್ಚು ನೀರು ಬಿಡಲು ಸಾಧ್ಯವಾಗುವುದಿಲ್ಲ. ಆದುದರಿಂದ, ಕಾವೇರಿ ನದಿ ಪ್ರಾಧಿಕಾರವು ಒಂದು ಸಂಕಷ್ಟ ಸೂತ್ರವನ್ನು ರೂಪಿಸಿ ಇಂತಹ ಕಷ್ಟದ ಸಂದರ್ಭದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಹಂಚಿಕೆ ಪ್ರಮಾಣ ನಿಗದಿಮಾಡುವುದು ಅತ್ಯವಶ್ಯಕ.

 

ಸುಪ್ರೀಂ ಅಂತಿಮ ತೀರ್ಪು:

 1. ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇಂದು ಪ್ರಕಟಿಸಿರುವ ಅಂತಿಮ ತೀರ್ಪಿನಿಂದ ಕರ್ನಾಟಕ ಒಂದು ಮಟ್ಟಿಗೆ ನಿರಾಳಗೊಂಡಿದೆ.
 2. ತಮಿಳುನಾಡಿಗೆ ಹರಿಸುವ ನೀರಿನಲ್ಲಿ 14.5 ಟಿಎಂಸಿ ಕಡಿತಗೊಳಿಸಿ ಆದೇಶ ನೀಡಿರುವ ಕೋರ್ಟ್‌, ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆಗೆ ಅವಕಾಶ ಕಲ್ಪಿಸಿರುವುದು ಖುಷಿಯ ವಿಚಾರ.
 3. ಬೆಂಗಳೂರಿಗೆ ಹೆಚ್ಚುವರಿಯಾಗಿ 4.75ಟಿಎಂಸಿ ನೀರು ಕುಡಿಯುವುದಕ್ಕೆ ಬಳಸಬಹುದು ಎಂದು ಪೀಠವು ಹೇಳಿದೆ. ಇದೇ ವೇಳೆ ನದಿಗಳು ರಾಷ್ಟ್ರೀಯ ಸಂಪತ್ತು, ಯಾವುದೇ ಒಂದು ರಾಜ್ಯದ ಹಕ್ಕು ಅಲ್ಲ ಎಂದು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ.
 4. ನದಿಗಳು ರಾಷ್ಟ್ರೀಯ ಸಂಪತ್ತು, ಯಾವುದೇ ಒಂದು ರಾಜ್ಯದ ಹಕ್ಕು ಅಲ್ಲ ಎಂದ ನ್ಯಾಯಮೂರ್ತಿ.
 5. ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆಗೆ ಅವಕಾಶ ನೀಡಿದ ಸುಪ್ರೀಂಕೋರ್ಟ್‌.
 6. ಬೆಂಗಳೂರಿಗೆ ಹೆಚ್ಚುವರಿಯಾಗಿ 4.75ಟಿಎಂಸಿ ನೀರು ಕುಡಿಯುವುದಕ್ಕೆ ಬಳಸಬಹುದು.
 7. ತಮಿಳುನಾಡಿಗೆ 192 ಟಿಎಂಸಿ ಬದಲಾಗಿ 177 ಟಿಎಂಸಿ ನೀರನ್ನು ಕರ್ನಾಟಕ ಬಿಡಬೇಕು.
 8. ತಮಿಳುನಾಡಿಗೆ 14.5 ಟಿಎಂಸಿ ನೀರು ಕಡಿತಗೊಳಿಸಿದ ಸರ್ವೋಚ್ಚ ನ್ಯಾಯಾಲಯ.
 9. ಕರ್ನಾಟಕ ನೀರಾವರಿ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ ನ್ಯಾಯಾಲಯ.
 10. ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರದ ಕೆಲಸ ಎಂದ ಕೋರ್ಟ್‌, ಕರ್ನಾಟಕ ಮೇಲ್ಮನವಿಯನ್ನು ಭಾಗಶ: ಒಪ್ಪಿದೆ.
 11. ಮುಂದಿನ 15 ವರ್ಷಗಳವರೆಗೆ ಟ್ರಿಬ್ಯುನಲ್‌ ತೀರ್ಪು ಅನ್ವಯಿಸುತ್ತದೆ ಎಂದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ.
 12. 1892, 1924ರ ಎರಡೂ ಒಪ್ಪಂದಗಳನ್ನು ಸಿಂಧು ಎಂದು ಪರಿಗಣನೆ.
 13. ಈಗ ನೀಡಿರುವ ತೀರ್ಪನ್ನು ಹದಿನೈದು ವರ್ಷದ ಬಳಿಕ ಮರು ಪರಿಶೀಲನೆ ನಡೆಸಬಹುದು.
 14. ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ.
 15. ನದಿ ನೀರು ಹಂಚುವಾಗ ತಮಿಳುನಾಡಿನ 20 ಟಿಎಂಸಿ ಅಂತರ್ಜಲ ನೀರನ್ನು ಪರಿಗಣಿಸಬೇಕು.
 16. ಎರಡು ರಾಜ್ಯಗಳು ಸಮಾನ ಹಂಚಿಕೆ ತತ್ವ ಪಾಲಿಸಬೇಕು ಎಂದು ಕೋರ್ಟ್‌ ನಿರ್ದೇಶನ.
 17. 50 ವರ್ಷಗಳ ಬಳಿಕ ಒಪ್ಪಂದಗಳು ರದ್ದಾಗುತ್ತವೆ, ನ್ಯಾಯಾಧೀಕರಣ ಅನುಸರಿಸಿರುವ ಕ್ರಮ ಸರಿಯಾಗಿದೆ ಎಂದ ನ್ಯಾಯಪೀಠ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ರೆಟ್ರೋ ಟ್ಯಾಕ್ಸ್ (ಪೂರ್ವಾನ್ವಯ ತೆರಿಗೆ) ಸಂಗ್ರಹವನ್ನು ಕೈಬಿಡಲು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ ಕೇಂದ್ರ ಸರ್ಕಾರ:


(Centre moves bill in House to stop retrospective tax)

 ಸಂದರ್ಭ:

ಇತ್ತೀಚೆಗೆ, ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2021  (Taxation Laws (Amendment) Bill, 2021) ಅನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದೆ.

 

ಮಸೂದೆಯ ಉದ್ದೇಶ:

 ಆದಾಯ ತೆರಿಗೆ ಕಾಯ್ದೆ, 1961 ಮತ್ತು ಹಣಕಾಸು ಕಾಯ್ದೆ, 2012 ಕ್ಕೆ ತಿದ್ದುಪಡಿ ಮಾಡಲು.

 1. ಆದಾಯ ತೆರಿಗೆ ಇಲಾಖೆಯು ‘ರೆಟ್ರೋಸ್ಪೆಕ್ಟಿವ್ ಟ್ಯಾಕ್ಸ್’ (ಪೂರ್ವಾನ್ವಯ ತೆರಿಗೆ) (Retrospective Tax) ಬೇಡಿಕೆಗಳನ್ನು ಹೆಚ್ಚಿಸದಂತೆ ತಡೆಯುವುದು.
 2. ಪೂರ್ವಾನ್ವಯ ತೆರಿಗೆ ವ್ಯವಸ್ಥೆಯ ಸಮಸ್ಯೆ ಕೊನೆಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಸೂದೆಯೊಂದನ್ನು ಲೋಕಸಭೆಯಲ್ಲಿ ಗುರುವಾರ ಮಂಡಿಸಿದೆ. ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ, ವೊಡಾಫೋನ್‌ ಹಾಗೂ ಕೇನ್‌ ಎನರ್ಜಿಯಂತಹ ಕಂಪನಿಗಳ ಮುಂದಿರಿಸಿದ್ದ ಪೂರ್ವಾನ್ವಯ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿದೆ.

 

ಪರಿಣಾಮಗಳು:

 1.  ಈಗ, ಈ ಹಿಂದಿನ ಪೂರ್ವಾನ್ವಯ ತೆರಿಗೆ ತಿದ್ದುಪಡಿಯ ಆಧಾರದ ಮೇಲೆ, ಮೇ 28, 2012 ಕ್ಕಿಂತ ಮೊದಲು ನಡೆದ ಭಾರತೀಯ ಆಸ್ತಿಯ ಯಾವುದೇ ಪರೋಕ್ಷ ವರ್ಗಾವಣೆಗೆ ಯಾವುದೇ ತೆರಿಗೆ ಬೇಡಿಕೆಯನ್ನು ಹೆಚ್ಚಿಸಲಾಗುವುದಿಲ್ಲ. ‘ಹಣಕಾಸು ಕಾಯ್ದೆ 2012’ಗೆ ರಾಷ್ಟ್ರಪತಿಗಳ ಒಪ್ಪಿಗೆಯನ್ನು 28 ಮೇ 2012 ರಂದು ಸ್ವೀಕರಿಸಲಾಯಿತು.
 2. ಮೇ 28, 2012 ಕ್ಕಿಂತ ಮೊದಲು ನಡೆದ ಭಾರತೀಯ ಆಸ್ತಿಯ ಪರೋಕ್ಷ ವರ್ಗಾವಣೆಗಾಗಿ ‘ತೆರಿಗೆಗಳ ಬೇಡಿಕೆ’ ಯನ್ನು ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪೂರೈಸಿದ ಮೇಲೆ ರದ್ದುಗೊಳಿಸಲಾಗುತ್ತದೆ.
 3. ಮಸೂದೆಯಲ್ಲಿ, ಈ ಪ್ರಕರಣಗಳಲ್ಲಿ ಪಾವತಿಸಿದ ಮೊತ್ತವನ್ನು ಯಾವುದೇ ಬಡ್ಡಿ ಇಲ್ಲದೆ ಮರುಪಾವತಿಸಲು ಪ್ರಸ್ತಾಪಿಸಲಾಗಿದೆ.

 

ಅರ್ಹತೆ:

ಈ ಕಾನೂನಿನ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು, ಸಂಬಂಧಪಟ್ಟ ತೆರಿಗೆದಾರರು ಸರ್ಕಾರದ ವಿರುದ್ಧ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಅದಕ್ಕಾಗಿ ಯಾವುದೇ ಭವಿಷ್ಯದ ಹಾನಿ ಅಥವಾ ಇದುವರೆಗೆ ಮಾಡಲಾದ  ವೆಚ್ಚಗಳಿಗಾಗಿ ಯಾವುದೇ ಬೇಡಿಕೆಗಳನ್ನು ಮುಂದಿಡುವುದಿಲ್ಲ ಎಂದು ಭರವಸೆ ನೀಡಬೇಕಾಗುತ್ತದೆ.

 

ಏನಿದು ಪ್ರಕರಣ ಮತ್ತು ಪೂರ್ವಾನ್ವಯ ತೆರಿಗೆಯನ್ನು ಯಾವಾಗ ಪರಿಚಯಿಸಲಾಯಿತು? ಅದರ ಪರಿಣಾಮಗಳೇನು?

 1.  ಆದಾಯ ತೆರಿಗೆ ಇಲಾಖೆಯ ₹ 11,000 ಕೋಟಿ ತೆರಿಗೆ-ಬಾಕಿ ಬೇಡಿಕೆಯ ವಿರುದ್ಧ ವೊಡಾಫೋನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ಗೆದ್ದ ನಂತರ ‘ಹಣಕಾಸು ಕಾಯ್ದೆ 2012’ರ ಮೂಲಕ ‘ಪೂರ್ವಾನ್ವಯ ತೆರಿಗೆ ಕಾಯ್ದೆ’ (Retrospective Tax Law) ಯನ್ನು ಜಾರಿಗೊಳಿಸಲಾಯಿತು.
 2. 2012 ರಲ್ಲಿ ಸುಪ್ರೀಂ ಕೋರ್ಟ್, ಭಾರತೀಯ ಸ್ವತ್ತುಗಳ ಪರೋಕ್ಷ ವರ್ಗಾವಣೆಯಿಂದ ಬರುವ ಲಾಭಗಳು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ತೆರಿಗೆಗೆ ಒಳಪಡುವುದಿಲ್ಲ ಎಂದು ತೀರ್ಪು ನೀಡಿದ ನಂತರ, ಈ ಕಾನೂನನ್ನು ಜಾರಿಗೆ ತರುವುದು ಅಗತ್ಯವಾಯಿತು.
 3. 2014 ರ ಜನವರಿಯಲ್ಲಿ ಕೈರ್ನ್ ಇಂಡಿಯಾ ಲಿಮಿಟೆಡ್‌ನಿಂದ ಕೈರ್ನ್ ಎನರ್ಜಿಯು ನಿರ್ಗಮಿಸುವಾಗ, ಅದಕ್ಕೆ ‘’ಪೂರ್ವಾನ್ವಯ ತೆರಿಗೆ ಕಾಯ್ದೆ’ ಯ ನಿಬಂಧನೆಗಳನ್ನು ಅನ್ವಯಿಸಲಾಯಿತು. ಆದಾಯ ತೆರಿಗೆ ಇಲಾಖೆಯು ₹ 10,570 ಕೋಟಿಗಳ ಆರಂಭಿಕ ಬೇಡಿಕೆಯನ್ನು ಮಾಡಿತ್ತು.

 

ಈ ನಡೆಯ ಮಹತ್ವ:

 1.  ಸರ್ಕಾರದ ಈ ನಿರ್ಧಾರವು ವೊಡಾಫೋನ್ Plc ನಂತಹ ವಿದೇಶಿ ಸಂಸ್ಥೆಗಳೊಂದಿಗೆ ದೀರ್ಘಕಾಲದಿಂದ ಬಾಕಿ ಇರುವ ವಿವಾದಗಳನ್ನು ಕೊನೆಗೊಳಿಸಲು ಪ್ರಯತ್ನಿಸುತ್ತದೆ.
 2. ಈ ತೀರ್ಪು ಹೂಡಿಕೆದಾರ ಸ್ನೇಹಿಯಾಗಿದೆ, ಮತ್ತು ಅಹಿತಕರ ಮೊಕದ್ದಮೆ ಮತ್ತು ಮಧ್ಯಸ್ಥಿಕೆ ವಿಷಯಗಳನ್ನು ಕೊನೆಗೊಳಿಸುತ್ತದೆ ವಿಶೇಷವಾಗಿ ಕೈರ್ನ್ ಎನರ್ಜಿ ಸಂಸ್ಥೆಯೊಂದಿಗೆ ಕೊನೆಗೊಳಿಸುತ್ತದೆ.
 3. ಭಾರತೀಯ ಸರ್ಕಾರದ ವಿರುದ್ಧ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ಪ್ರಕರಣವನ್ನು ಗೆದ್ದ ನಂತರ ಕೈರ್ನ್ ಎನರ್ಜಿಯು ಭಾರತದ ಸಾಗರೋತ್ತರ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದನ್ನು ಗಮನಿಸಬಹುದು.

 

ಪೂರ್ವಾನ್ವಯ ತೆರಿಗೆ ಎಂದರೇನು?

 1. ಪೂರ್ವಾನ್ವಯ ತೆರಿಗೆ / ‘ರೆಟ್ರೋಸ್ಪೆಕ್ಟಿವ್ ಟ್ಯಾಕ್ಸೇಶನ್’ ಅಡಿಯಲ್ಲಿ, ಒಂದು ದೇಶವು ಕಾನೂನಿನ ಅಂಗೀಕಾರದ ದಿನಾಂಕದ ಮೊದಲು, ಕೆಲವು ಉತ್ಪನ್ನಗಳು, ಸರಕುಗಳು ಅಥವಾ ಸೇವೆಗಳು ಮತ್ತು ಡೀಲ್‌ಗಳ ಮೇಲೆ, ಕಂಪನಿಗಳ ಮೇಲೆ ಪೂರ್ವಾನ್ವಯ ತೆರಿಗೆ ಮತ್ತು ಪೂರ್ವಾನ್ವಯ ಶುಲ್ಕಗಳನ್ನು ವಿಧಿಸಲು ಅನುಮತಿಸುತ್ತದೆ.
 2. ವಿವಿಧ ದೇಶಗಳು ತಮ್ಮ ತೆರಿಗೆ ನೀತಿಗಳಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಲು ಈ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದವು, ಈ ಹಿಂದೆ ‘ಕಂಪನಿಗಳು’ ಇಂತಹ ಲೋಪದೋಷಗಳ ಲಾಭವನ್ನು ಪಡೆಯಲು ಅವಕಾಶವನ್ನು ಹೊಂದಿದ್ದವು.
 3. ‘ರೆಟ್ರೋಸ್ಪೆಕ್ಟಿವ್ ಟ್ಯಾಕ್ಸೇಶನ್’ ದೇಶದ ತೆರಿಗೆ ನಿಯಮಗಳನ್ನು ತಿಳಿದೋ ತಿಳಿಯದೆಯೋ ವಿಭಿನ್ನವಾಗಿ ಅರ್ಥೈಸಿದ ಕಂಪನಿಗಳಿಗೆ ಹಾನಿ / ನೋವು ಉಂಟು ಮಾಡುತ್ತದೆ.

 

ಹೆಚ್ಚಿನ ಮಾಹಿತಿ:

 1. ಮಸೂದೆಯು ಕಾಯ್ದೆಯಾದರೆ, ಕಂಪನಿಗಳಿಂದ ಈ ಹಿಂದೆ ಸಂಗ್ರಹಿಸಿದ್ದ ಹಣವನ್ನು ಹಿಂದಿರುಗಿಸಲಾಗುವುದು ಎಂದೂ ಕೇಂದ್ರ ಸರ್ಕಾರವು ಹೇಳಿದೆ. ‘ತೆರಿಗೆ ಕಾನೂನು (ತಿದ್ದುಪಡಿ) ಮಸೂದೆ – 2021’ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದರು. ದೇಶದ ಆಸ್ತಿಗಳ ಪರೋಕ್ಷ ವರ್ಗಾವಣೆಗೆ 2012ರ ಕಾನೂನನ್ನು ಬಳಸಿಕೊಂಡು ತೆರಿಗೆ ವಿಧಿಸಿದ್ದನ್ನು ಹಿಂದಕ್ಕೆ ಪಡೆಯಲು ಈ ಮಸೂದೆ ಅನುವು ಮಾಡಿಕೊಡಲಿದೆ.
 2. ಬ್ರಿಟಿಷ್ ಕಂಪನಿಗಳಾದ ಕೇನ್ ಎನರ್ಜಿ ಮತ್ತು ವೊಡಾಫೋನ್‌ ಸಮೂಹದ ಜೊತೆಗೆ ಬಹುಕಾಲದಿಂದ ಇರುವ ತೆರಿಗೆ ಸಂಬಂಧಿ ವ್ಯಾಜ್ಯಗಳ ಮೇಲೆ ಈ ಮಸೂದೆಯು ನೇರ ಪರಿಣಾಮ ಉಂಟುಮಾಡಲಿದೆ. ಪೂರ್ವಾನ್ವಯ ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಕೇನ್ ಎನರ್ಜಿ ಹಾಗೂ ವೊಡಾಫೋನ್ ಜೊತೆಗಿನ ಎರಡು ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಸೋಲು ಕಂಡಿದೆ.
 3. ವೊಡಾಫೋನ್ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಪಾವತಿ ಮಾಡಬೇಕಿರುವುದು ಏನೂ ಇಲ್ಲ. ಆದರೆ, ಕೇನ್ ಎನರ್ಜಿ ಕಂಪನಿಗೆ ಕೇಂದ್ರವು ₹8,900 ಕೋಟಿ (1.2 ಬಿಲಿಯನ್ ಡಾಲರ್) ಮೊತ್ತವನ್ನು ಪಾವತಿಸಬೇಕಾಗುತ್ತದೆ.
 4. ವಿದೇಶಿ ಕಂಪನಿಗಳು ಭಾರತದಲ್ಲಿ ಹೊಂದಿರುವ ಆಸ್ತಿಯ ಪರೋಕ್ಷ ವರ್ಗಾವಣೆ, ಅದಕ್ಕೆ ಸಂಬಂಧಿಸಿದ ತೆರಿಗೆ ವಿಚಾರವು ಬಹುಕಾಲದಿಂದ ವ್ಯಾಜ್ಯದಲ್ಲಿ ಇದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇಂತಹ ಆಸ್ತಿಯ ವರ್ಗಾವಣೆಗೆ ತೆರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ 2012ರಲ್ಲಿ ತೀರ್ಪು ನೀಡಿತ್ತು. ಆದರೆ, 2012ರ ಹಣಕಾಸು ಕಾಯ್ದೆಯ ಮೂಲಕ ಆದಾಯ ತೆರಿಗೆ ಕಾಯ್ದೆ – 1961ರ ಕೆಲವು ಅಂಶಗಳಿಗೆ ತಿದ್ದುಪಡಿ ತಂದ ಕೇಂದ್ರವು, ವಿದೇಶಿ ಕಂಪನಿಗಳ ಷೇರುಗಳು ಗಮನಾರ್ಹ ಮೌಲ್ಯ ಪಡೆದುಕೊಂಡಿದ್ದು ಭಾರತದಲ್ಲಿನ ಆಸ್ತಿಯ ಕಾರಣದಿಂದಾಗಿದ್ದರೆ, ಅಂತಹ ಷೇರುಗಳ ಮಾರಾಟದಿಂದ ಬರುವ ಲಾಭವು ತೆರಿಗೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿತು. ಈ ತಿದ್ದುಪಡಿಯು ಪೂರ್ವಾನ್ವಯ ಆಗುತ್ತದೆ ಎಂದೂ ಹೇಳಿತು.
 5. ‘2012ರ ಹಣಕಾಸು ಕಾಯ್ದೆಯ ಮೂಲಕ ತರಲಾದ ತಿದ್ದುಪಡಿಗಳ ವಿಚಾರವಾಗಿ ಟೀಕೆಗಳು ಬಂದಿವೆ. ತಿದ್ದುಪಡಿಗಳು ಪೂರ್ವಾನ್ವಯ ಆಗುವಂತೆ ಮಾಡಿದ್ದು ಟೀಕೆಗಳಿಗೆ ಪ್ರಮುಖ ಕಾರಣ. ಇಂತಹ ತಿದ್ದುಪಡಿಗಳು ಹೂಡಿಕೆದಾರರ ನೆಚ್ಚಿನ ತಾಣ ಭಾರತ ಎಂಬ ಹೆಸರಿಗೆ ಕುಂದು ತರುತ್ತವೆ ಎಂಬ ವಾದ ಇದೆ’ ಎಂದು ಮಸೂದೆಯಲ್ಲಿ ಹೇಳಲಾಗಿದೆ.
 6. ಈ ಸಂದರ್ಭದಲ್ಲಿ ದೇಶವು ತ್ವರಿತಗತಿಯಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಬೇಕಿದೆ. ಅರ್ಥ ವ್ಯವಸ್ಥೆಯ ವೇಗದ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ವಿದೇಶಿ ಹೂಡಿಕೆಯ ಪಾತ್ರ ಮಹತ್ವದ್ದು ಎಂದೂ ಮಸೂದೆಯಲ್ಲಿ ವಿವರಣೆ ನೀಡಲಾಗಿದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

2026 ರವರೆಗೆ ಮುಂದುವರಿಯಲಿರುವ ‘ಸಮಗ್ರ ಶಿಕ್ಷಣ ಯೋಜನೆ 2.0’:


(‘Samagra Shiksha Scheme 2.0’ to continue till 2026)

ಸಂದರ್ಭ:

ಮಾರ್ಚ್ 31, 2026 ರವರೆಗೆ ಅಂದರೆ, ಮುಂದಿನ ಐದು ವರ್ಷಗಳವರೆಗೆ ಶಾಲಾ ಶಿಕ್ಷಣಕ್ಕಾಗಿ ‘ಸಮಗ್ರ ಶಿಕ್ಷಣ ಯೋಜನೆ’ ಯನ್ನು ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ -2020 ರ ಶಿಫಾರಸುಗಳ ಆಧಾರದ ಮೇಲೆ ಹೊಸ ಘಟಕಗಳು ಮತ್ತು ಉಪಕ್ರಮಗಳನ್ನು ಅಳವಡಿಸುವ ಮೂಲಕ ಈಗ ಯೋಜನೆಯನ್ನು ಪರಿಷ್ಕರಿಸಲಾಗಿದೆ.

 

ಸಮಗ್ರ ಶಿಕ್ಷಣ ಅಭಿಯಾನ(SSA)2.0ದ ಘಟಕಗಳು:

 1. ಯೋಜನೆಯ ನೇರ ವ್ಯಾಪ್ತಿಯನ್ನು ಹೆಚ್ಚಿಸಲು, ಎಲ್ಲಾ ಮಕ್ಕಳ ಕೇಂದ್ರಿತ ಮಧ್ಯಸ್ಥಿಕೆಗಳನ್ನು ವಿದ್ಯಾರ್ಥಿಗಳಿಗೆ ‘ನೇರ ಲಾಭ ವರ್ಗಾವಣೆ (direct benefit transfer – DBT)’ ಮೂಲಕ ‘ಮಾಹಿತಿ ತಂತ್ರಜ್ಞಾನ’ (IT) ಆಧಾರಿತ ವೇದಿಕೆಯಲ್ಲಿ ನಿಗದಿತ ಅವಧಿಯಲ್ಲಿ ಒದಗಿಸಲಾಗುವುದು.
 2. ಈ ‘ನೇರ ಲಾಭ ವರ್ಗಾವಣೆ’ಯು ಪಠ್ಯಪುಸ್ತಕಗಳು, ಸಮವಸ್ತ್ರ ಮತ್ತು ಸಾರಿಗೆ ಭತ್ಯೆಯಂತಹ ‘ಶಿಕ್ಷಣದ ಹಕ್ಕು’(RTE) ಅಡಿಯಲ್ಲಿ ಒದಗಿಸಲಾದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
 3. ಭಾರತೀಯ ಭಾಷೆಗಳ ಪ್ರಚಾರದ ಕುರಿತು NEP ಯ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, ಭಾಷಾ ಶಿಕ್ಷಕರ ನೇಮಕಾತಿಯ ಹೊಸ ಅಂಶವನ್ನು ಯೋಜನೆಗೆ ಸೇರಿಸಲಾಗಿದೆ – ಇದರಲ್ಲಿ ಶಿಕ್ಷಕರ ತರಬೇತಿಯ ವೆಚ್ಚ ಮತ್ತು ಶಿಕ್ಷಕರಿಗೆ ಸಂಬಳ ಬೆಂಬಲದ ಜೊತೆಗೆ ದ್ವಿಭಾಷಾ ಪುಸ್ತಕಗಳು ಮತ್ತು ಬೋಧನಾ ಸಾಮಗ್ರಿಗಳನ್ನು ಸೇರಿಸಲಾಗಿದೆ.
 4. ನಿಪುನ್ ಭಾರತ್, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ರಾಷ್ಟ್ರೀಯ ಮಿಷನ್, ಇದರ ಅಡಿಯಲ್ಲಿ, ಕಲಿಕಾ ಸಾಮಗ್ರಿಗಳಿಗಾಗಿ ಪ್ರತಿ ಮಗುವಿಗೆ ಪ್ರತಿ ವರ್ಷ 500 ರೂ. ಕೈಪಿಡಿಗಳು ಮತ್ತು ಸಂಪನ್ಮೂಲಗಳಿಗಾಗಿ ಪ್ರತಿ ಶಿಕ್ಷಕರಿಗೆ 150 ರೂ. ಮತ್ತು ಪ್ರತಿ ಜಿಲ್ಲೆಗೆ 10-20 ಲಕ್ಷ ರೂ.ಗಳನ್ನು ಮೌಲ್ಯಮಾಪನಕ್ಕೆ ಮೀಸಲಿಡಲಾಗಿದೆ.
 5. ಡಿಜಿಟಲ್ ಉಪಕ್ರಮದ ಭಾಗವಾಗಿ, ‘ಮಾಹಿತಿ ಸಂವಹನ ಮತ್ತು ತರಬೇತಿ’ (ಐಸಿಟಿ) ಪ್ರಯೋಗಾಲಯ, ಡಿಜಿಟಲ್ ಬೋರ್ಡ್, ಸ್ಮಾರ್ಟ್ ತರಗತಿ ಕೊಠಡಿಗಳು, ವರ್ಚುವಲ್ ತರಗತಿ ಕೊಠಡಿಗಳು ಮತ್ತು ಡಿಟಿಎಚ್ ಚಾನೆಲ್‌ಗಳ ಪ್ರಸಾರದ ಬೆಂಬಲದೊಂದಿಗೆ ಸ್ಮಾರ್ಟ್ ಕ್ಲಾಸ್‌ರೂಮ್ ಒದಗಿಸಲು ಅವಕಾಶವಿದೆ.
 6. ಇದರಲ್ಲಿ, 16 ರಿಂದ 19 ವರ್ಷದೊಳಗಿನ ಶಾಲೆ ಬಿಟ್ಟ ಅಥವಾ ಶಾಲೆಯಿಂದ ಹೊರಗುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಮಕ್ಕಳಿಗೆ ಅವರು ತಮ್ಮ ಪ್ರೌಢ ಶಿಕ್ಷಣ / ಉನ್ನತ ಮಾಧ್ಯಮಿಕ ಶಿಕ್ಷಣವನ್ನು ‘ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ’ ದ ಮೂಲಕ ಪೂರೈಸಲು ಅನುಕೂಲವಾಗುವಂತೆ ಪ್ರತಿ ವರ್ಗಕ್ಕೆ 2000 ರೂ.ಗಳ ಧನಸಹಾಯವನ್ನು ಒದಗಿಸುವ ನಿಬಂಧನೆಯನ್ನು ಅಳವಡಿಸಲಾಗಿದೆ.
 7. ಒಂದು ಶಾಲೆಯ ಕನಿಷ್ಠ 2 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ ಭಾಗವಹಿಸಿ ಅದರಲ್ಲಿ ಅವರು ಪದಕ ಗೆದ್ದರೆ, ಆ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗೆ ರೂ. 25,000 ವರೆಗೆ ಹೆಚ್ಚುವರಿ ಕ್ರೀಡಾ ಪ್ರೋತ್ಸಾಹಧನವನ್ನು ನೀಡಲು ಇದು ಅವಕಾಶವನ್ನು ಒದಗಿಸುತ್ತದೆ.

 

ಸಮಗ್ರ ಶಿಕ್ಷಣ ಅಭಿಯಾನ: (Samagra Shiksha)

 1. ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಅಂತರ್ಗತ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಪೂರ್ವ ಶಿಕ್ಷಣದಿಂದ 12 ನೇ ತರಗತಿಯವರೆಗಿನ ಎಲ್ಲಾ ಅಂಶಗಳನ್ನು ಒಳಗೊಂಡ ಸಂಯೋಜಿತ ಯೋಜನೆಯೇ ಸಮಗ್ರ ಶಿಕ್ಷಣ ಯೋಜನೆಯಾಗಿದೆ.
 2. ಸಮಗ್ರ ಶಿಕ್ಷಣವು ಸರ್ವ ಶಿಕ್ಷಾ ಅಭಿಯಾನ (SSA), ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನ (RMSA) ಮತ್ತು ಶಿಕ್ಷಕರ ಶಿಕ್ಷಣ (TE) ಎಂಬ ಮೂರು ಯೋಜನೆಗಳನ್ನು ಸಂಯೋಜಿಸುತ್ತದೆ.
 3. ಈ ಯೋಜನೆಯು ಪೂರ್ವ-ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮಾಧ್ಯಮಿಕದಿಂದ ಉನ್ನತ ಮಾಧ್ಯಮಿಕ ಮಟ್ಟದ ವರೆಗೆ ‘ಶಾಲೆಯನ್ನು ನಿರಂತರತೆಯಾಗಿ’ ಕಲ್ಪಿಸುತ್ತದೆ.
 4. ಇದು ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಮಕ್ಕಳಿಗೆ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಸಾರ್ವತ್ರಿಕ ಪ್ರವೇಶವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
 5. ಇಂಗ್ಲಿಷ್ ಭಾಷೆಯ ಅಕ್ಷರವಾದ ಎರಡು T(two Ts)‘ಶಿಕ್ಷಕರು’ ಮತ್ತು ‘ತಂತ್ರಜ್ಞಾನ’ ಗಳನ್ನು ಸಂಯೋಜಿಸುವ ಮೂಲಕ ಎಲ್ಲಾ ಹಂತಗಳಲ್ಲಿ ಗುಣಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಗಮನವಾಗಿದೆ.
 6. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆ, 2009 ರ ಅನುಷ್ಠಾನಕ್ಕೆ ರಾಜ್ಯಗಳಿಗೆ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
 7. ಈ ಯೋಜನೆಯನ್ನು ‘ಕೇಂದ್ರ ಪ್ರಾಯೋಜಿತ ಯೋಜನೆ’ ಎಂದು ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ, ಕೇಂದ್ರ ಮತ್ತು ಹೆಚ್ಚಿನ ರಾಜ್ಯಗಳ ನಡುವೆ 60:40 ಅನುಪಾತದಲ್ಲಿ ಧನಸಹಾಯವನ್ನು ನೀಡಲಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಗಲೆಗಾ ದ್ವೀಪ:

(Agalega island)

 1.  ಇದು ಮಾರಿಷಸ್ ನಲ್ಲಿರುವ ಒಂದು ದ್ವೀಪವಾಗಿದೆ.
 2. ಇದು ದ್ವೀಪಸಮೂಹದ ‘ಮುಖ್ಯ ದ್ವೀಪ’ದಿಂದ ಸುಮಾರು 1,000 ಕಿಮೀ ಉತ್ತರಕ್ಕೆ ದೂರದಲ್ಲಿದೆ.
 3. ಇತ್ತೀಚೆಗೆ, ‘ಅಗ್ಲೆಗಾ ದ್ವೀಪ’ ಸುದ್ದಿಯಲ್ಲಿದೆ ಏಕೆಂದರೆ, ಕೆಲವು ವರದಿಗಳ ಪ್ರಕಾರ, ಮಾರಿಷಸ್ ನಿಂದ ಭಾರತಕ್ಕೆ ಈ ದ್ವೀಪದಲ್ಲಿ ಸೇನಾ ನೆಲೆಯನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ.
 4. ಆದಾಗ್ಯೂ, ಮಾರಿಷಸ್ ಭಾರತದೊಂದಿಗೆ ಅಂತಹ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

 

 

ಡಿಯಾಗೋ ಗಾರ್ಸಿಯಾ:

(Diego Garcia)

 1. ಇದು ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶದ ದ್ವೀಪವಾಗಿದ್ದು ಯುನೈಟೆಡ್ ಕಿಂಗ್‌ಡಮ್‌ನ ಸಾಗರೋತ್ತರ ಪ್ರದೇಶವಾಗಿದೆ.
 2. ಚಾಗೋಸ್ ದ್ವೀಪಸಮೂಹದ 60 ಸಣ್ಣ ದ್ವೀಪಗಳಲ್ಲಿ ಇದು ದೊಡ್ಡದಾಗಿದೆ.
 3. ದ್ವೀಪವನ್ನು ಕಂಡುಹಿಡಿದ ಮೊದಲ ಯುರೋಪಿಯನ್ನರು ಪೋರ್ಚುಗೀಸರು, ಮತ್ತು ನಂತರ 1790 ರ ದಶಕದಲ್ಲಿ ಈ ದ್ವೀಪದಲ್ಲಿ ಫ್ರೆಂಚರು ನೆಲೆಸಿದರು ಮತ್ತು ನೆಪೋಲಿಯನ್ ಯುದ್ಧಗಳ ನಂತರ ಇದನ್ನು ಬ್ರಿಟಿಷ್ ಆಳ್ವಿಕೆಗೆ ವರ್ಗಾಯಿಸಲಾಯಿತು.
 4. 1965 ರಲ್ಲಿ, ಬ್ರಿಟನ್ ಚಾಗೋಸ್ ದ್ವೀಪಗಳನ್ನು ಮಾರಿಷಸ್ ನಿಂದ ಬೇರ್ಪಡಿಸಿತು ಮತ್ತು ಡಿಯಾಗೋ ಗಾರ್ಸಿಯಾದಲ್ಲಿ ಅಮೆರಿಕದೊಂದಿಗೆ ಜಂಟಿ ಸೇನಾ ನೆಲೆಯನ್ನು ಸ್ಥಾಪಿಸಿತು.
 5. ಈ ದ್ವೀಪಸಮೂಹವು ಲಂಡನ್‌ನ ಆಸ್ತಿಯಾಗಿದೆ ಎಂದು ಬ್ರಿಟನ್ ಸಮರ್ಥಿಸುತ್ತದೆ ಮತ್ತು ಇತ್ತೀಚೆಗೆ, ಡಿಯಾಗೋ ಗಾರ್ಸಿಯಾವನ್ನು 2036 ರವರೆಗೆ ಬಳಸಲು ಅಮೆರಿಕದೊಂದಿಗೆ ಗುತ್ತಿಗೆ ಒಪ್ಪಂದವನ್ನು ಬ್ರಿಟನ್ ನವೀಕರಿಸಿದೆ.

 

EOS-03 ಉಪಗ್ರಹ:

 1. EOS-03 ಒಂದು ಭೂ ಪರಿವೀಕ್ಷಣೆ ಉಪಗ್ರಹ (Earth Observation Satellite – EOS) ವಾಗಿದೆ.
 2. EOS-03 ಉಪಗ್ರಹವನ್ನು GSLV ಯ 14 ನೇ ಹಾರಾಟದ (GSLV-F10) ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
 3. ಈ ಉಪಗ್ರಹವನ್ನು ಭೂಸ್ಥಿರ ಕಕ್ಷೆಯಲ್ಲಿ ಇರಿಸಲಾಗುವುದು.
 4. EOS-03 ಅತ್ಯಾಧುನಿಕ ದೇಶೀಯವಾಗಿ ಅಭಿವೃದ್ಧಿಪಡಿಸಿದ ಉಪಗ್ರಹವಾಗಿದ್ದು, ಪ್ರವಾಹ ಮತ್ತು ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದೆ.
 5. ಇದು ಸಂಪೂರ್ಣ ದೇಶವನ್ನು ಪ್ರತಿದಿನ ನಾಲ್ಕರಿಂದ ಐದು ಬಾರಿ ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.

 


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos