Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 4ನೇ ಆಗಸ್ಟ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಜ್ಯಪಾಲರ ಕ್ಷಮಾದಾನ ಅಧಿಕಾರವು CrPC ಯ ಸೆಕ್ಷನ್ 433A ಅನ್ನು ಅತಿಕ್ರಮಿಸುತ್ತದೆ: ವರಿಷ್ಠ ನ್ಯಾಯಾಲಯ.

2. ಅಗತ್ಯ ರಕ್ಷಣಾ ಸೇವೆಗಳ ಮಸೂದೆ, 2021.

3. ನ್ಯಾಯಮಂಡಳಿ ಸುಧಾರಣೆಗಳ ಮಸೂದೆ, 2021.

4. ದಿವಾಳಿತನ ಮತ್ತು ದಿವಾಳಿತನ ಕೋಡ್ (ತಿದ್ದುಪಡಿ) ಮಸೂದೆ, 2021.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಡೀಪ್ ಓಷನ್ ಮಿಷನ್.

2. ಹವಾಮಾನ ಬದಲಾವಣೆಯನ್ನು ನಿಭಾಯಿಸಲು ‘ನಿವ್ವಳ ಶೂನ್ಯ’(ನೆಟ್ ಝೀರೋ) ಇಂಗಾಲದ ಗುರಿಗಳು ಏಕೆ ಸಾಕಾಗುವುದಿಲ್ಲ?

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಮಿನರ್ವರ್ಯ ಪೆಂಟಲಿ.

2. ತಾಲಿಸ್ಮನ್ ಸಾಬರ್ ಸಮರಾಭ್ಯಾಸ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು : ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ರಾಜ್ಯಪಾಲರ ಕ್ಷಮಾದಾನ ಅಧಿಕಾರವು CrPC ಸೆಕ್ಷನ್ 433A ಅನ್ನು ಅತಿಕ್ರಮಿಸುತ್ತದೆ: ವರಿಷ್ಠ ನ್ಯಾಯಾಲಯ:


(Governor’s pardon power overrides 433A: SC)

 ಸಂದರ್ಭ:

ಇತ್ತೀಚೆಗೆ, ಸುಪ್ರೀಂ ಕೋರ್ಟ್, ಒಂದು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗ, ಸಂವಿಧಾನದ 161 ನೇ ವಿಧಿಯ ಪ್ರಕಾರ, ರಾಜ್ಯಪಾಲರು ಹೊಂದಿರುವ ಕ್ಷಮಾದಾನದ ಅಧಿಕಾರ ಅಥವಾ ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರವುಕ್ರಿಮಿನಲ್ ಪ್ರೊಸೀಜರ್ ಕೋಡ್’ / ಅಪರಾಧ ದಂಡ ಪ್ರಕ್ರಿಯೆ ಸಂಹಿತೆಯ (Criminal Procedure Code – CrPC) ಸೆಕ್ಷನ್ 433-A ಅಡಿಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಅತಿಕ್ರಮಿಸಬಹುದು ಎಂದು ಹೇಳಿದೆ.

 

ಏನಿದು ಸಮಸ್ಯೆ?

ಮೇಲಿನ ವೀಕ್ಷಣೆಯನ್ನು, ಹರ್ಯಾಣ ಸರ್ಕಾರವು ಜಾರಿಗೆ ತಂದಿರುವ ‘ಉಪಶಮನ ನೀತಿ’ (Remission Policies) ಗಳ ಕಾರ್ಯಸಾಧ್ಯತೆಯನ್ನು ಪರಿಗಣಿಸುವಾಗ ಸುಪ್ರೀಂ ಕೋರ್ಟ್ ಮಾಡಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯನ್ನು ಕನಿಷ್ಠ 14 ವರ್ಷಗಳ ಜೈಲುವಾಸವನ್ನು ಪೂರ್ಣಗೊಳಿಸುವ ಮುನ್ನ ಆತ/ಆಕೆಯನ್ನು ಅಕಾಲಿಕವಾಗಿ ಅಥವಾ ಅವಧಿಪೂರ್ವ ಬಿಡುಗಡೆ ಮಾಡಲು ರಾಜ್ಯವು ಒಂದು ನೀತಿಯನ್ನು ರೂಪಿಸಬಹುದೇ ಅಥವಾ ರಾಜ್ಯ ಸರ್ಕಾರವು ‘ಕ್ರಿಮಿನಲ್ ಪ್ರೊಸೀಜರ್ ಕೋಡ್’ (CrPC) ಅನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವೇ? ಎಂದು ನ್ಯಾಯಾಲಯವು ಪರಿಗಣಿಸುತ್ತಿದೆ. ಅಪರಾಧ ದಂಡ ಪ್ರಕ್ರಿಯೆ ಸಂಹಿತೆಯ (Criminal Procedure Code – CrPC) ಸೆಕ್ಷನ್ 433-A  ಯು ಅಪರಾಧಿಯು ಕನಿಷ್ಠ 14 ವರ್ಷಗಳ ಸೆರೆವಾಸವನ್ನು ಪೂರ್ಣಗೊಳಿಸುವ ಮೊದಲು ಆತ/ಆಕೆಯ ಶಿಕ್ಷೆಯನ್ನು ಕ್ಷಮಿಸಲಾಗುವುದಿಲ್ಲ / ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ನಿರ್ದಿಷ್ಟವಾಗಿ ಸ್ಪಷ್ಟಪಡಿಸುತ್ತದೆ.

 

ಏನಿದು ಹರಿಯಾಣದ ಕ್ಷಮಾಧಾನದ ನೀತಿ?

ಹರಿಯಾಣ ಸರ್ಕಾರ ಜಾರಿಗೊಳಿಸಿದ ನೀತಿಯ ಪ್ರಕಾರ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮತ್ತು ಅವರ ವಯಸ್ಸು 75 ವರ್ಷಕ್ಕಿಂತ ಹೆಚ್ಚಾಗಿದ್ದಾರೆ (ಪುರುಷ ಅಪರಾಧಿಗಳ ಸಂದರ್ಭದಲ್ಲಿ) ಮತ್ತು 8 ವರ್ಷಗಳ ನಿಜವಾದ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರೆ, ಅಂತಹ ಅಪರಾಧಿಗಳು ಶಿಕ್ಷೆಯಲ್ಲಿ ಪರಿಹಾರದ ಪ್ರಯೋಜನವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಲಾಗಿದೆ.

 

ವರಿಷ್ಠ ನ್ಯಾಯಾಲಯವು ಮಾಡಿದ ಅವಲೋಕನಗಳು:

 1. ಯಾವುದೇ ಒಬ್ಬ ಖೈದಿಯು 14 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ನಿಜವಾದ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸದಿದ್ದರೂ ಸಹ ರಾಜ್ಯಪಾಲರು ಯಾವುದೇ ಅಪರಾಧಿಯನ್ನು ಕ್ಷಮಿಸುವ, ಶಿಕ್ಷೆಯಿಂದ ವಿನಾಯಿತಿ ನೀಡುವ, ಬಿಡುಗಡೆ ಮಾಡುವ ಅಥವಾ ಶಿಕ್ಷೆಯನ್ನು  ಅಮಾನತುಗೊಳಿಸುವ, ಅಥವಾ ರದ್ದುಗೊಳಿಸುವ ಅಥವಾ ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರ ಹೊಂದಿದ್ದಾರೆ. (Even if the prisoner has not undergone 14 years or more of actual imprisonment, the Governor has a power to grant pardons, reprieves, respites and remissions of punishment or to suspend, remit or commute the sentence of any person.)
 2. ಆದಾಗ್ಯೂ, ರಾಜ್ಯಪಾಲರಿಗೆ ನೀಡಲಾದ ಕ್ಷಮಾದಾನ ಅಧಿಕಾರವನ್ನು ರಾಜ್ಯ ಸರ್ಕಾರದ ನೆರವು ಮತ್ತು ಸಲಹೆಯ ಮೇರೆಗೆ ಬಳಸಬೇಕು. ಈ ಹಿನ್ನೆಲೆಯಲ್ಲಿ, ಸೂಕ್ತ ಸರ್ಕಾರದ ಸಲಹೆಯು ರಾಜ್ಯದ ಮುಖ್ಯಸ್ಥರ ಮೇಲೆ, ಅಂದರೆ ರಾಜ್ಯಪಾಲರ ಮೇಲೆ ಬದ್ಧವಾಗಿರುತ್ತದೆ.
 3. ಹೀಗಾಗಿ, ಸರ್ಕಾರದ ನಿರ್ಧಾರವನ್ನು ಅವಲಂಬಿಸಿ, ಶಿಕ್ಷೆಯನ್ನು ಕಡಿಮೆ ಮಾಡುವ ಮತ್ತು ಬಿಡುಗಡೆಯ ಕ್ರಮವನ್ನು ತೆಗೆದುಕೊಳ್ಳಬಹುದು ಮತ್ತು ಇದಕ್ಕಾಗಿ ರಾಜ್ಯಪಾಲರ ಅನುಮೋದನೆಯಿಲ್ಲದೆ ಆದೇಶವನ್ನು ಹೊರಡಿಸಬಹುದು. ಆದಾಗ್ಯೂ, ಸಂವಿಧಾನದ ಅನುಚ್ಛೇದ 161 ರ ಅಡಿಯಲ್ಲಿ ಅಂತಹ ಯಾವುದೇ ಬಿಡುಗಡೆ ಮಾಡಿದರೆ, ವ್ಯವಹಾರದ ನಿಯಮಗಳ ಅಡಿಯಲ್ಲಿ ಮತ್ತು ಸಾಂವಿಧಾನಿಕ ಸೌಜನ್ಯದ ವಿಷಯವಾಗಿ, ರಾಜ್ಯಪಾಲರ ಒಪ್ಪಿಗೆಯನ್ನು ಪಡೆಯಬಹುದು.

 

ರಾಜ್ಯಪಾಲರ ಕ್ಷಮಾದಾನದ ಅಧಿಕಾರಗಳು:

ಸಂವಿಧಾನದ 161 ನೇ ವಿಧಿಯು, ರಾಜ್ಯಪಾಲರ ಸಮಾಧಾನದ ಅಧಿಕಾರ ಬಗ್ಗೆ ತಿಳಿಸುತ್ತದೆ.

ಇದರ ಅಡಿಯಲ್ಲಿ, ರಾಜ್ಯದ ಕಾರ್ಯನಿರ್ವಾಹಕ ಅಧಿಕಾರಕ್ಕೆ ಒಳಪಟ್ಟಿರುವ ವಿಷಯಗಳಿಗೆ ಸಂಬಂಧಿಸಿದಂತೆ, ಒಂದು ರಾಜ್ಯದ ರಾಜ್ಯಪಾಲರಿಗೆ,ಯಾವುದೇ ಕಾನೂನುಬಾಹಿರ ಕೃತ್ಯದ ಅಪರಾಧಕ್ಕೆ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಯ ಶಿಕ್ಷೆಯನ್ನು ಕ್ಷಮಿಸುವ, ಹಿಂಪಡೆಯುವ, ಶಿಕ್ಷೆಯನ್ನು ಅಮಾನತ್ತಿನಲ್ಲಿಡುವ, ಅಥವಾ ಶಿಕ್ಷೆಯ ಸ್ವರೂಪವನ್ನು ಪರಿವರ್ತನೆ ಮಾಡುವ ಅಥವಾ ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರವನ್ನು ನೀಡಲಾಗಿದೆ.

 

ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕ್ಷಮಾದಾನ ಅಧಿಕಾರಗಳ ನಡುವಿನ ವ್ಯತ್ಯಾಸ:

ಸಂವಿಧಾನದ ವಿಧಿ 72ರ ಅಡಿಯಲ್ಲಿ ರಾಷ್ಟ್ರಪತಿಗಳ ಕ್ಷಮಾದಾನದ ಅಧಿಕಾರಗಳ ವ್ಯಾಪ್ತಿಯು, ಸಂವಿಧಾನದ 161ನೇ ವಿಧಿಯ ಅಡಿಯಲ್ಲಿ ನೀಡಲಾದ ರಾಜ್ಯಪಾಲರ ಕ್ಷಮಾದಾನದ ಅಧಿಕಾರಗಳಿಗಿಂತ ಹೆಚ್ಚು ವಿಶಾಲವಾಗಿದೆ ಮತ್ತು ಅದು ಈ ಕೆಳಗಿನ ಎರಡು ರೀತಿಯಲ್ಲಿ ಭಿನ್ನವಾಗಿದೆ:

 1. ಕೋರ್ಟ್ ಮಾರ್ಷಲ್: ಸೇನಾ ನ್ಯಾಯಾಲಯವು ನೀಡುವ ಶಿಕ್ಷೆ ಅಥವಾ ಶಿಕ್ಷೆಗಳಿಗೆ (ಕೋರ್ಟ್ ಮಾರ್ಷಲ್) ಸಂಬಂಧಿಸಿದ ವಿಷಯಗಳಿಗೆ ಕ್ಷಮಾದಾನ ನೀಡುವ ರಾಷ್ಟ್ರಪತಿಗಳ ಅಧಿಕಾರಗಳು ವಿಸ್ತರಿಸಿದರೆ, 161 ನೇ ವಿಧಿಯ ಅನ್ವಯ ರಾಜ್ಯಪಾಲರಿಗೆ ಅಂತಹ ಯಾವುದೇ ವಿಶೇಷ ಅಧಿಕಾರವಿಲ್ಲ.
 2. ಮರಣದಂಡನೆ: ಮರಣದಂಡನೆಗೆ ಸಂಬಂಧಿಸಿದ ಪ್ರಕರಣಗಳ ಎಲ್ಲಾ ಸಂದರ್ಭಗಳಲ್ಲಿ ರಾಷ್ಟ್ರಪತಿಗಳು ಕ್ಷಮೆಯನ್ನು ನೀಡಬಹುದು, ಆದರೆ ರಾಜ್ಯಪಾಲರ ಕ್ಷಮಿಸುವ ಅಧಿಕಾರವು ಮರಣದಂಡನೆಗೆ ಸಂಬಂಧಿಸಿದ ವಿಷಯಗಳಿಗೆ ವಿಸ್ತರಿಸುವುದಿಲ್ಲ.

 

ಕ್ಷಮಾದಾನದ ಅಧಿಕಾರಗಳ ಬಳಕೆ:

 1. ಕೇಂದ್ರ ಮಂತ್ರಿಮಂಡಳದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಕ್ಷಮಾದಾನದ ಅಧಿಕಾರವನ್ನು ಚಲಾಯಿಸುತ್ತಾರೆ.
 2. ಸಂವಿಧಾನದಲ್ಲಿ, ರಾಷ್ಟ್ರಪತಿ ಅಥವಾ ರಾಜ್ಯಪಾಲರ ‘ಕರುಣೆ ನ್ಯಾಯವ್ಯಾಪ್ತಿಗೆ’ ಸಂಬಂಧಿಸಿದ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸಲು ಯಾವುದೇ ನಿಬಂಧನೆಯನ್ನು ಒದಗಿಸಿಲ್ಲ.
 3. ಆದರೆ, ಎಪುರು ಸುಧಾಕರ್ ಪ್ರಕರಣದಲ್ಲಿ, ಯಾವುದೇ ಅನಿಯಂತ್ರಿತತೆಯನ್ನು ತಡೆಯುವ ಉದ್ದೇಶದಿಂದ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕ್ಷಮಾದಾನದ ಅಧಿಕಾರವನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ಗೆ ಅವಕಾಶ ನೀಡಲಾಗಿದೆ.

 

ಕ್ಷಮಾದಾನ ಅಧಿಕಾರಗಳ ಮಹತ್ವ:

 1. ನ್ಯಾಯಾಂಗದ ದೋಷಗಳನ್ನು ಸರಿಪಡಿಸುವಲ್ಲಿ ಕಾರ್ಯನಿರ್ವಾಹಕನ ಕ್ಷಮಿಸುವ ಅಧಿಕಾರವು ಬಹಳ ಮಹತ್ವದ್ದಾಗಿದೆ.ಇದು ಪ್ರತಿವಾದಿಯ ತಪ್ಪನ್ನು ಅಥವಾ ಮುಗ್ಧತೆಯನ್ನು ಯೋಚಿಸದೆ ಅಪರಾಧ ನಿರ್ಣಯದ ಪರಿಣಾಮವನ್ನು ತೆಗೆದುಹಾಕುತ್ತದೆ.
 2. ಕ್ಷಮಾದಾನದ ಅಧಿಕಾರವು ನ್ಯಾಯಾಲಯದ ತಪ್ಪು ಗ್ರಹಿಕಯ ಕಾರಣದಿಂದಾಗಿ ಮುಗ್ಧ ಜನರನ್ನು ಶಿಕ್ಷೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
 3. ಕ್ಷಮಾದಾನದ ಅಧಿಕಾರದ ಉದ್ದೇಶವೆಂದರೆ ನ್ಯಾಯಾಂಗದ ದೋಷಗಳನ್ನು ಸರಿಪಡಿಸುವುದು, ಏಕೆಂದರೆ ಮಾನವ ವ್ಯವಸ್ಥೆಯ ಯಾವುದೇ ನ್ಯಾಯಾಂಗ ಆಡಳಿತವು ನ್ಯೂನ್ಯತೆಗಳಿಂದ ಮುಕ್ತವಾಗಿರಲು ಸಾಧ್ಯವಿಲ್ಲ.

 

ಅಪರಾಧ ದಂಡ ಪ್ರಕ್ರಿಯೆ ಸಂಹಿತೆಯ (Criminal Procedure Code – CrPC) ಸೆಕ್ಷನ್ 433-A :

ಸೆಕ್ಷನ್ 433-A ಯು, ಕೆಲವು ಪ್ರಕರಣಗಳಲ್ಲಿ ಶಿಕ್ಷೆಯಿಂದ ಕ್ಷಮಾದಾನ ನೀಡುವ ಅಥವಾ ಬಿಡುಗಡೆ ಮಾಡುವ ಅಧಿಕಾರ ವ್ಯಾಪ್ತಿಯ ಮೇಲಿನ ನಿರ್ಬಂಧದ ಬಗ್ಗೆ ವ್ಯವಹರಿಸುತ್ತದೆ.

ಅದರ ಪ್ರಕಾರ, ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 432 ರಲ್ಲಿ ಏನಿದ್ದರೂ, ಯಾವುದೇ ವ್ಯಕ್ತಿಯು ಮರಣದಂಡನೆ ಶಿಕ್ಷೆ ಸೇರಿದಂತೆ ಕಾನೂನಿನಿಂದ ಒದಗಿಸಲಾದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರೆ, ಅಥವಾ ಸೆಕ್ಷನ್ 433 ರ ಅಡಿಯಲ್ಲಿ ಯಾವುದೇ ವ್ಯಕ್ತಿಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಿದರೆ, ಅಂತಹ ವ್ಯಕ್ತಿಯನ್ನು, ಆತ/ಆಕೆಯು ಕನಿಷ್ಠ ಹದಿನಾಲ್ಕು ವರ್ಷಗಳ ಸೆರೆವಾಸವನ್ನು ಪೂರ್ಣಗೊಳಿಸುವ ಮೊದಲು ಕಾರಾಗ್ರಹದಿಂದ ಬಿಡುಗಡೆ ಮಾಡಲಾಗುವುದಿಲ್ಲ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಅಗತ್ಯ ರಕ್ಷಣಾ ಸೇವೆಗಳ ಮಸೂದೆ:


(Essential Defence Services Bill)

ಸಂದರ್ಭ:

ಇತ್ತೀಚೆಗೆ, ‘ಅಗತ್ಯ ರಕ್ಷಣಾ ಸೇವೆಗಳ ಮಸೂದೆ, 2021’ (Essential Defence Services Bill, 2021)  ಅನ್ನು   ಲೋಕಸಭೆಯು ಅಂಗೀಕರಿಸಿದೆ.

 1. ಸರ್ಕಾರಿ ಸ್ವಾಮ್ಯದ ಆರ್ಡನೆನ್ಸ್ ಕಾರ್ಖಾನೆಗಳ ಅಂದರೆ ಯುದ್ಧ ಸಾಮಗ್ರಿ ತಯಾರಿಸುವ ಕಾರ್ಖಾನೆಗಳ (Ordnance Factories) ನೌಕರರ ಮುಷ್ಕರವನ್ನು ತಡೆಯುವುದು ಇದರ ಉದ್ದೇಶವಾಗಿದೆ.

 

ಮಸೂದೆಯ ಪ್ರಮುಖ ಅಂಶಗಳು:

 1. ವಿಧೇಯಕವು “ಕಡ್ಡಾಯ ರಕ್ಷಣಾ ಸೇವೆಗಳ” ಮುಂದುವರಿಕೆಗೆ ಅವಕಾಶಗಳನ್ನು ನೀಡುತ್ತದೆ.
 2. ಮಸೂದೆಯು ಅಗತ್ಯವಾದ ರಕ್ಷಣಾ ಸೇವೆಗಳನ್ನು ಹೀಗೆ ವ್ಯಾಖ್ಯಾನಿಸುತ್ತದೆ: ಯಾವುದೇ ಸಂಸ್ಥೆ ಅಥವಾ ರಕ್ಷಣಾ ಉದ್ದೇಶಗಳಿಗಾಗಿ ಅಗತ್ಯವಾದ ಸರಕು ಅಥವಾ ಉಪಕರಣಗಳನ್ನು ತಯಾರಿಸುವ ಸಂಸ್ಥೆ, ಅಥವಾ ಸಶಸ್ತ್ರ ಪಡೆಗಳು ಅಥವಾ ಅವರೊಂದಿಗೆ ಸಂಪರ್ಕ ಹೊಂದಿದ ಯಾವುದೇ ಸಂಸ್ಥೆ ಅಥವಾ ರಕ್ಷಣಾ ಸಂಬಂಧಿತ ಸಂಸ್ಥೆಯನ್ನು ಸೇರಿಸಲಾಗಿದೆ.
 3. ಮಸೂದೆಯು, “ಅಗತ್ಯ ರಕ್ಷಣಾ ಸೇವೆಗಳ ಮುಂದುವರಿಕೆಗಾಗಿ, ರಾಷ್ಟ್ರದ ಸುರಕ್ಷತೆ ಮತ್ತು ವ್ಯಾಪಕ ನೆಲೆಯಲ್ಲಿ ಸಾರ್ವಜನಿಕರ ಜೀವನ ಮತ್ತು ಆಸ್ತಿಯನ್ನು ಕಾಪಾಡುವ ಸಲುವಾಗಿ ಮತ್ತು ಸಂಪರ್ಕಿತ ಅಥವಾ ಪ್ರಾಸಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಇದು ನಿಬಂಧನೆಗಳನ್ನು ಮಾಡುತ್ತದೆ.
 4. ಮಸೂದೆಯಲ್ಲಿ, ಅದರಲ್ಲಿ ಉಲ್ಲೇಖಿಸಲಾದ ಸೇವೆಗಳನ್ನು ‘ಅಗತ್ಯ ರಕ್ಷಣಾ ಸೇವೆಗಳು’ ಎಂದು ಘೋಷಿಸಲು ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.
 5. ಅದರಲ್ಲಿ, “ಯಾವುದೇ ಕೈಗಾರಿಕಾ ಸ್ಥಾಪನೆ ಅಥವಾ ಅಗತ್ಯ ರಕ್ಷಣಾ ಸೇವೆಗಳಲ್ಲಿ ತೊಡಗಿರುವ ಘಟಕ” ದಲ್ಲಿ ಸ್ಟ್ರೈಕ್ / ಮುಷ್ಕರ ಮತ್ತು ಲಾಕೌಟ್ (ಬೀಗಮುದ್ರೆ) ಗಳನ್ನು ನಿಷೇಧಿಸಲಾಗಿದೆ.
 6. ಮಸೂದೆಯ ಮೂಲಕ, ‘ಕೈಗಾರಿಕಾ ವಿವಾದಗಳ ಕಾಯ್ದೆ, 1947’ ಅನ್ನು ಸಾರ್ವಜನಿಕ ಉಪಯುಕ್ತತೆ ಸೇವೆಗಳಲ್ಲಿ ಅಗತ್ಯ ರಕ್ಷಣಾ ಸೇವೆಗಳನ್ನು ಸೇರಿಸಲು ತಿದ್ದುಪಡಿ ಮಾಡಲಾಗಿದೆ.
 7. ಇದರ ಜೊತೆಯಲ್ಲಿ, ಮಸೂದೆಯು ಅದರ ಉಲ್ಲಂಘನೆಗಾಗಿ ‘ಮುಷ್ಕರ’ ಮತ್ತು ಶಿಕ್ಷೆಯನ್ನು ಸಹ ವ್ಯಾಖ್ಯಾನಿಸುತ್ತದೆ.

 

ಈ ಮಸೂದೆಯ ಅಗತ್ಯತೆ:

ಇತ್ತೀಚಿನವರೆಗೂ, ಆರ್ಡ್‌ನೆನ್ಸ್ ಫ್ಯಾಕ್ಟರಿ ಬೋರ್ಡ್ (Ordnance Factory Board), ನೇರವಾಗಿ ರಕ್ಷಣಾ ಉತ್ಪಾದನಾ ಇಲಾಖೆಯ ಅಡಿಯಲ್ಲಿ ಒಂದು ಸರ್ಕಾರದ ಅಂಗವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಜೂನ್ 2021 ರಲ್ಲಿ, ಕೇಂದ್ರ ಸರ್ಕಾರವು ಇದನ್ನು ‘ಕಾರ್ಪೊರೇಟಿಕರಣ’ / ಸಾಂಸ್ಥಿಕರಣ ಗೊಳಿಸುವುದಾಗಿ ಘೋಷಣೆ ಮಾಡಿತು.

 1. ಯೋಜನೆಯ ಪ್ರಕಾರ, ಸಶಸ್ತ್ರ ಪಡೆಗಳಿಗೆ ಮದ್ದುಗುಂಡು ಮತ್ತು ಇತರ ಉಪಕರಣಗಳನ್ನು ಪೂರೈಸುವ 41 ಕಾರ್ಖಾನೆಗಳು ಸರ್ಕಾರಿ ಸ್ವಾಮ್ಯದ ಏಳು ಕಾರ್ಪೊರೇಟ್ ಘಟಕಗಳ ಭಾಗವಾಗಲಿವೆ.
 2. ಸರ್ಕಾರದ ಪ್ರಕಾರ, ಈ ಕಾರ್ಖಾನೆಗಳ ದಕ್ಷತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಸರಕಾರ ಹೇಳಿಕೊಂಡಿದೆ.
 3. ಆದಾಗ್ಯೂ, ಸರ್ಕಾರದ ಈ ನಿರ್ಧಾರದ ವಿರುದ್ಧ, ಉದ್ಯೋಗ ನಷ್ಟದ ಭಯದಿಂದ, ಅನೇಕ ಒಕ್ಕೂಟಗಳು ಅನಿರ್ದಿಷ್ಟ ಮುಷ್ಕರವನ್ನು ಆರಂಭಿಸುವುದಾಗಿ ಘೋಷಿಸಿದವು.
 4. ಇದನ್ನು ತಡೆಯಲು, ‘ಅಗತ್ಯ ರಕ್ಷಣಾ ಸೇವೆಗಳ ಸುಗ್ರೀವಾಜ್ಞೆ’(Essential Defence Services Ordinance) ಯನ್ನು ಸರ್ಕಾರವು ಜೂನ್ 30 ರಂದು ಘೋಷಿಸಿತು, ಈಗ ಈ ಮಸೂದೆಯು ಆ ಸುಗ್ರೀವಾಜ್ಞೆಯನ್ನು ಬದಲಿಸುತ್ತದೆ.

 

ಈ ಮಸೂದೆಯು ಯಾರ ಮೇಲೆ ಪರಿಣಾಮ ಬೀರುತ್ತದೆ?

ಈ ಮಸೂದೆ ದೇಶಾದ್ಯಂತ 41 ಆರ್ಡನೆನ್ಸ್ ಕಾರ್ಖಾನೆಗಳ ಸುಮಾರು 70,000 ಉದ್ಯೋಗಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ಇದು ತಮ್ಮ ಸೇವಾ ನಿಯಮಗಳು ಮತ್ತು ನಿವೃತ್ತಿಯ ಮೇಲೆ ಪರಿಣಾಮ ಬೀರಬಹುದು ಎಂಬ ಭಯದಿಂದ ಈ ಸಿಬ್ಬಂದಿ ಆರ್ಡ್‌ನೆನ್ಸ್ ಫ್ಯಾಕ್ಟರಿ ಬೋರ್ಡ್ (OFB) ಅನ್ನು ‘ಕಾರ್ಪೊರೇಟಿಕರಣ’ / ಸಾಂಸ್ಥಿಕರಣ ಗೊಳಿಸುವ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

 

ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್’ ಮತ್ತು ಅದರ ಉತ್ಪಾದನೆಯ ಮಹತ್ವ:

ಆರ್ಡನೆನ್ಸ್ ಕಾರ್ಖಾನೆಗಳು ರಕ್ಷಣಾ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಸ್ಥಳೀಯ ಉತ್ಪಾದನೆಗೆ ಒಂದು ಸಂಯೋಜಿತ ನೆಲೆಯಾಗಿದ್ದು, ಸಶಸ್ತ್ರ ಪಡೆಗಳನ್ನು ದೇಶೀಯವಾಗಿ ತಯಾರಿಸಿದ ಅತ್ಯಾಧುನಿಕ ಯುದ್ಧಭೂಮಿ ಉಪಕರಣಗಳೊಂದಿಗೆ ಸಜ್ಜುಗೊಳಿಸುವುದು ಅವರ ಪ್ರಾಥಮಿಕ ಉದ್ದೇಶವಾಗಿದೆ.

 1. ಆದ್ದರಿಂದ, ರಾಷ್ಟ್ರವನ್ನು ರಕ್ಷಿಸಲು ಮತ್ತು ಹೆಚ್ಚಿನ ಜನರ ಜೀವನ ಮತ್ತು ಆಸ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳಿಗೆ ಅಗತ್ಯವಾದ ರಕ್ಷಣಾ ಸೇವೆಗಳ ಮುಂದುವರಿಕೆಗಾಗಿ ಈ ಕಾನೂನು ರೂಪಿಸುವುದು ಅವಶ್ಯಕವಾಗಿದೆ.

 

ವಿಷಯಗಳು: ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.

ನ್ಯಾಯಮಂಡಳಿ ಸುಧಾರಣೆಗಳ (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಮಸೂದೆ, 2021:


(Tribunals Reforms (Rationalisation and Conditions of Service) Bill, 2021)

 ಸಂದರ್ಭ:

ಇತ್ತೀಚೆಗೆ, ನ್ಯಾಯಮಂಡಳಿ ಸುಧಾರಣೆಗಳು (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಮಸೂದೆ, 2021 (Tribunals Reforms (Rationalisation and Conditions of Service) Bill, 2021) ಲೋಕಸಭೆಯಲ್ಲಿ ಧ್ವನಿಮತದಿಂದ  ಅಂಗೀಕರಿಸಲ್ಪಟ್ಟಿದೆ. ಈ ಮಸೂದೆಯು ನ್ಯಾಯಾಂಗ ಸುಧಾರಣೆಗಳನ್ನು (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಸುಗ್ರೀವಾಜ್ಞೆಯನ್ನು ಏಪ್ರಿಲ್ 2021 ರಲ್ಲಿ ಪರಿಚಯಿಸಲಾಯಿತು.

ಹಿನ್ನೆಲೆ:

ಮದ್ರಾಸ್ ಬಾರ್ ಅಸೋಸಿಯೇಷನ್ ಪ್ರಕರಣ’ದಲ್ಲಿ ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳನ್ನು ಆಧರಿಸಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ಪ್ರಮುಖ ಬದಲಾವಣೆಗಳು:

 1. ಮಸೂದೆಯು, ಅಸ್ತಿತ್ವದಲ್ಲಿರುವ ಕೆಲವು ಮೇಲ್ಮನವಿ ನ್ಯಾಯಿಕ ಸಂಸ್ಥೆಗಳನ್ನು ವಿಸರ್ಜಿಸಲಾಗುವುದು, ಮತ್ತು ಅವುಗಳ ಕಾರ್ಯಗಳನ್ನು ಅಸ್ತಿತ್ವದಲ್ಲಿರುವ ಇತರ ನ್ಯಾಯಾಂಗ ಸಂಸ್ಥೆಗಳಿಗೆ ವರ್ಗಾಯಿಸಲು ಪ್ರಯತ್ನಿಸಲಾಗುತ್ತದೆ.
 2. ಈ ಮೂಲಕ, ನ್ಯಾಯಮಂಡಳಿಯ ಸದಸ್ಯರ ಅರ್ಹತೆ, ನೇಮಕಾತಿ, ಅಧಿಕಾರಾವಧಿ, ಸಂಬಳ ಮತ್ತು ಭತ್ಯೆಗಳು, ರಾಜೀನಾಮೆ, ಉಚ್ಚಾಟನೆ ಮತ್ತು ಇತರ ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.
 3. ಇದರ ಅಡಿಯಲ್ಲಿ, ಶೋಧ ಮತ್ತು ಆಯ್ಕೆ ಸಮಿತಿಯ(Search-cum-selection committee) ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ.
 4. ಅದರ ನಿಬಂಧನೆಗಳ ಪ್ರಕಾರ, ಸಮಿತಿಯ ಅಧ್ಯಕ್ಷತೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನಾಮನಿರ್ದೇಶನ ಮಾಡಿದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ವಹಿಸಲಿದ್ದಾರೆ.
 5. ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗಳಿಗೆ (State Tribunals), ಪ್ರತ್ಯೇಕ ‘ಶೋಧನಾ ಸಮಿತಿ’ ಇರುತ್ತದೆ.
 6. ಕೇಂದ್ರ ಸರ್ಕಾರವು ಶೋಧ ಮತ್ತು ಆಯ್ಕೆ ಸಮಿತಿಗಳ’ ಸಲಹೆಗಳ ಮೇಲೆ ‘ಆದ್ಯತೆಯ’ ನಿರ್ಧಾರವನ್ನು ಮೂರು ತಿಂಗಳಲ್ಲಿ ತೆಗೆದುಕೊಳ್ಳಬೇಕು.

 

ಅಧಿಕಾರಾವಧಿ:

ನ್ಯಾಯಮಂಡಳಿಯ ಅಧ್ಯಕ್ಷರು 4 ವರ್ಷಗಳ ಅವಧಿಗೆ ಅಥವಾ ಅವರು 70 ವರ್ಷ ತುಂಬುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ. ನ್ಯಾಯಮಂಡಳಿಯ ಇತರ ಸದಸ್ಯರು 4 ವರ್ಷ ಅಥವಾ 67 ವರ್ಷ ಪೂರ್ಣಗೊಳ್ಳುವವರೆಗೆ ಇಲ್ಲಿಯೂ ಕೂಡ ಯಾವುದು ಮೊದಲೋ ಅಲ್ಲಿಯವರೆಗೆ ಇವರು ತಮ್ಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾರೆ.

 

ಈ ಮಸೂದೆಯು ಈ ಕೆಳಕಂಡ ನ್ಯಾಯಾಧಿಕರಣಗಳ ನಿರ್ಮೂಲನೆ ಮಾಡುತ್ತದೆ.

ಮಸೂದೆಯ ಅಡಿಯಲ್ಲಿ, ಐದು ನ್ಯಾಯಪೀಠಗಳು – ‘ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಾಧೀಕರಣ’(Film Certification Appellate Tribunal), ‘ವಿಮಾನ ನಿಲ್ದಾಣಗಳ ಮೇಲ್ಮನವಿ ನ್ಯಾಯಮಂಡಳಿ’(Airports Appellate Tribunal), ‘ ‘ಸುಧಾರಿತ ತೀರ್ಪುಗಳ ಪ್ರಾಧಿಕಾರ’(Authority for Advanced Rulings), ‘ಬೌದ್ಧಿಕ ಆಸ್ತಿ ಮೇಲ್ಮನವಿ ನ್ಯಾಯಮಂಡಳಿ’(Intellectual Property Appellate Board) ಮತ್ತು ‘ಸಸ್ಯ ವೈವಿಧ್ಯಗಳ ರಕ್ಷಣೆ ಮೇಲ್ಮನವಿ ನ್ಯಾಯಮಂಡಳಿ’(Plant Varieties Protection Appellate Tribunal) ಗಳನ್ನು ರದ್ದುಗೊಳಿಸಲಾಗುವುದು ಮತ್ತು ಅವುಗಳ ಕಾರ್ಯಗಳನ್ನು ಈಗಿರುವ ನ್ಯಾಯಾಂಗ ಸಂಸ್ಥೆಗಳಿಗೆ ವರ್ಗಾಯಿಸಲಾಗುವುದು.

 

ಮಸೂದೆಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು:

ಮದ್ರಾಸ್ ಬಾರ್ ಅಸೋಸಿಯೇಷನ್ VS ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್  ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗೆ ಕನಿಷ್ಠ 50 ವರ್ಷಗಳು ಮತ್ತು ನಾಲ್ಕು ವರ್ಷಗಳ ಅಧಿಕಾರ ಅವಧಿಯನ್ನು ಸೂಚಿಸುವ ನಿಬಂಧನೆಗಳನ್ನು ರದ್ದುಗೊಳಿಸಿತು.

ನ್ಯಾಯಾಲಯದ ಪ್ರಕಾರ- ಇಂತಹ ಷರತ್ತುಗಳು ಅಧಿಕಾರಗಳ ಬೇರ್ಪಡಿಕೆ ತತ್ವಗಳು, ನ್ಯಾಯಾಂಗದ ಸ್ವಾತಂತ್ರ್ಯ, ಕಾನೂನಿನ ನಿಯಮ ಮತ್ತು ಭಾರತದ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗಿದೆ.

 

ಸಮಸ್ಯೆಗಳು:

ಮಸೂದೆಯು ಈ ಕೆಳಗಿನ ನಿಬಂಧನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಲು ಪ್ರಯತ್ನಿಸುತ್ತದೆ:

 1. ಮಸೂದೆಯಲ್ಲಿ, 50 ವರ್ಷಗಳ ಕನಿಷ್ಠ ವಯಸ್ಸಿನ ಅವಶ್ಯಕತೆಯನ್ನು ಇನ್ನು ಇಡಲಾಗಿದೆ.
 2. ನ್ಯಾಯಾಧೀಕರಣದ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿಯು ನಾಲ್ಕು ವರ್ಷಗಳದ್ದಾಗಿರುತ್ತದೆ.
 3. ಪ್ರತಿ ಹುದ್ದೆಗೆ ನೇಮಕಾತಿ ಮಾಡಲು ‘ಶೋಧ ಮತ್ತು ಆಯ್ಕೆ ಸಮಿತಿಯಿಂದ’ ಎರಡು ಹೆಸರುಗಳನ್ನು ಶಿಫಾರಸು ಮಾಡಲಾಗುವುದು ಮತ್ತು ಸರ್ಕಾರವು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವ ಅಗತ್ಯತೆಯಿದೆ.

 

ನ್ಯಾಯಮಂಡಳಿ/ನ್ಯಾಯಾಧಿಕರಣಗಳು ಎಂದರೇನು?

ನ್ಯಾಯಾಧಿಕರಣವು ಅರೆ-ನ್ಯಾಯಾಂಗ ಸಂಸ್ಥೆಯಾಗಿದ್ದು, ಆಡಳಿತಾತ್ಮಕ ಅಥವಾ ತೆರಿಗೆ-ಸಂಬಂಧಿತ ವಿವಾದ ಗಳಂತಹ ಸಮಸ್ಯೆಗಳನ್ನು ಪರಿಹರಿಸಲು ಇವನ್ನು ಸ್ಥಾಪಿಸಲಾಗಿದೆ. ಇದು ವಿವಾದಗಳನ್ನು ನಿರ್ಣಯಿಸುವುದು, ವಾದಿ – ಪ್ರತಿವಾದಿ ಪಕ್ಷಗಳ ನಡುವೆ ಹಕ್ಕುಗಳನ್ನು ನಿರ್ಧರಿಸುವುದು, ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದು, ಅಸ್ತಿತ್ವದಲ್ಲಿರುವ ಆಡಳಿತಾತ್ಮಕ ನಿರ್ಧಾರವನ್ನು ಪರಿಶೀಲಿಸುವುದು ಮುಂತಾದ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತದೆ.

 

ಸಾಂವಿಧಾನಿಕ ನಿಬಂಧನೆಗಳು:

ಇವುಗಳು ಮೂಲತಃ ಸಂವಿಧಾನದ ಭಾಗವಾಗಿರಲಿಲ್ಲ.

ಸ್ವರ್ಣ ಸಿಂಗ್ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಸಂವಿಧಾನದ 42 ನೇ ತಿದ್ದುಪಡಿ ಕಾಯ್ದೆಯು ಈ ನಿಬಂಧನೆಗಳನ್ನು ಪರಿಚಯಿಸಿತು.

ಈ ತಿದ್ದುಪಡಿಯು ಸಂವಿಧಾನಕ್ಕೆ ಭಾಗ XIV-A ಅನ್ನು ಸೇರಿಸಿತು, ಈ ಭಾಗವು ‘ನ್ಯಾಯಮಂಡಳಿಗಳೊಂದಿಗೆ’ ವ್ಯವಹರಿಸುತ್ತದೆ ಮತ್ತು ಸಂವಿಧಾನದ ಎರಡು ವಿಧಿಗಳನ್ನು ಒಳಗೊಂಡಿದೆ:

 1. ಸಂವಿಧಾನದ 323 A ವಿಧಿಯು ಆಡಳಿತಾತ್ಮಕ ನ್ಯಾಯಮಂಡಳಿಗಳೊಂದಿಗೆ ವ್ಯವಹರಿಸುತ್ತದೆ. ಇವು, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ.
 2. ಸಂವಿಧಾನದ 323 B ವಿಧಿಯು ತೆರಿಗೆ, ಕೈಗಾರಿಕಾ ಮತ್ತು ಕಾರ್ಮಿಕ, ವಿದೇಶಿ ವಿನಿಮಯ, ಆಮದು ಮತ್ತು ರಫ್ತು, ಭೂ ಸುಧಾರಣೆಗಳು, ಆಹಾರ, ನಗರ ಆಸ್ತಿಯ ಮೇಲಿನ ಮಿತಿ ನಿಗದಿಪಡಿಸುವುದು, ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಚುನಾವಣೆ, ಬಾಡಿಗೆ ಮತ್ತು ಬಾಡಿಗೆ ಹಕ್ಕುಗಳಂತಹ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯ ವ್ಯವಹರಿಸುತ್ತದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ, 2021:


(Insolvency and Bankruptcy Code (Amendment) Bill, 2021)

 

ಸಂದರ್ಭ:

ಇತ್ತೀಚೆಗೆ, ರಾಜ್ಯಸಭೆಯು, ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ, 2021 (The Insolvency and Bankruptcy Code (Amendment) Bill, 2021 ಅನ್ನು ಅಂಗೀಕರಿಸಿದೆ.

ಮಸೂದೆಯು ‘ಪ್ರಿ-ಪ್ಯಾಕ್ಸ್’ (Pre-Packs) ಅನ್ನು ‘ಸೂಕ್ಷ್ಮ ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆ (MSMEs) ಗಳಿಗೆ ದಿವಾಳಿತನದ ಪರಿಹಾರದ ಕಾರ್ಯವಿಧಾನವಾಗಿ ಪ್ರಸ್ತಾಪಿಸುತ್ತದೆ.

ಮಾರ್ಚ್ 2021 ರಲ್ಲಿ ‘ದಿವಾಳಿತನ ಕಾನೂನು ಸಮಿತಿ (Insolvency Law Committee- ILC) ಯ ಉಪ ಸಮಿತಿಯಿಂದ ‘ದಿವಾಳಿತನ ಮತ್ತು ದಿವಾಳಿತನ ಸಂಹಿತೆ(Insolvency and Bankruptcy Code- IBC), 2016 ರ ಮೂಲ ರಚನೆಯೊಳಗೆ ‘ಪ್ರಿ-ಪ್ಯಾಕ್’ ಚೌಕಟ್ಟನ್ನು ಶಿಫಾರಸು ಮಾಡಲಾಗಿದೆ.

 

ದಯವಿಟ್ಟು ಗಮನಿಸಿ: ನಾವು ಕಳೆದ ವಾರವಷ್ಟೇ ಈ ‘ಲೇಖನವನ್ನು’ ವಿವರವಾಗಿ ತಿಳಿಸಿದ್ದೇವೆ, ಕೆಲವು ದಿನಗಳ ಹಿಂದೆ ಈ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಅದಕ್ಕಾಗಿ ಈ ಕೆಳಕಂಡ ಲಿಂಕ್ ಅನ್ನು ಸಂಪರ್ಕಿಸಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಡೀಪ್ ಓಷನ್ ಮಿಷನ್:


(Deep Ocean Mission)

 ಸಂದರ್ಭ:

ಇತ್ತೀಚೆಗೆ, ರಾಜ್ಯಸಭೆಯಲ್ಲಿ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಆಳ ಸಾಗರ ಮಿಷನ್ (Deep Ocean Mission-DOM) ಅನುಷ್ಠಾನಕ್ಕಾಗಿ ಐದು ವರ್ಷಗಳವರೆಗೆ 4077 ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ, ಮತ್ತು 2021 ನೇ ವರ್ಷದಲ್ಲಿ, ಈ ಕಾರ್ಯಾಚರಣೆಯ ಎಲ್ಲಾ ಘಟಕಗಳು ತಮ್ಮ ಕೆಲಸವನ್ನು ಪ್ರಾರಂಭಿಸುತ್ತವೆ.

 

ಈ ಮಿಷನ್ ಕುರಿತು:

‘ಡೀಪ್ ಓಷನ್ ಮಿಷನ್’  (Deep Ocean Mission) ಅಡಿಯಲ್ಲಿ, 35 ವರ್ಷಗಳ ಹಿಂದೆ ಇಸ್ರೋ ಪ್ರಾರಂಭಿಸಿದ ಬಾಹ್ಯಾಕಾಶ ಪರಿಶೋಧನೆಗೆ ಹೋಲುವಂತಹ ಆಳವಾದ ಸಾಗರವನ್ನು ಅನ್ವೇಷಿಸಲು ಪ್ರಸ್ತಾಪಿಸಲಾಗಿದೆ.

ಆಳವಾದ ಸಮುದ್ರ ಗಣಿಗಾರಿಕೆ, ಸಾಗರ ಹವಾಮಾನ ಬದಲಾವಣೆ ಸಲಹಾ ಸೇವೆಗಳು, ನೀರೊಳಗಿನ ವಾಹನಗಳು ಮತ್ತು ನೀರೊಳಗಿನ ರೊಬೊಟಿಕ್ಸ್‌ಗೆ ಸಂಬಂಧಿಸಿದ ತಂತ್ರಜ್ಞಾನಗಳ ಮೇಲೆ ಈ ಮಿಷನ್ ಗಮನ ಹರಿಸಲಿದೆ.

5 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಈ ಅಭಿಯಾನದ ಅನುಷ್ಠಾನಕ್ಕೆ ಅಂದಾಜು 4,077 ಕೋಟಿ ರೂ. ವೆಚ್ಚವಾಗಲಿದೆ.

ಈ ಮಹತ್ವಾಕಾಂಕ್ಷೆಯ ಬಹು-ಸಾಂಸ್ಥಿಕ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಲು ಭೂ ವಿಜ್ಞಾನ ಸಚಿವಾಲಯವು (MoES) ನೋಡಲ್ ಸಚಿವಾಲಯವಾಗಿರುತ್ತದೆ.

 

ಕಾರ್ಯಾಚರಣೆಯ ಪ್ರಮುಖ ಅಂಶಗಳು:

ಈ ಆಳ ಸಮುದ್ರದ ಅನ್ವೇಷಣೆ ಅಭಿಯಾನವು ಈ ಕೆಳಗಿನ ಆರು ಪ್ರಮುಖ ಅಂಶಗಳನ್ನು ಒಳಗೊಂಡಿದೆ:

 1. ಆಳ ಸಮುದ್ರ ಗಣಿಗಾರಿಕೆ ಮತ್ತು ಮಾನವಸಹಿತ ಜಲಾಂತರ್ಗಾಮಿ ತಂತ್ರಜ್ಞಾನಗಳ ಅಭಿವೃದ್ಧಿ: ಮೂರು ಜನರನ್ನು ಸಮುದ್ರದಲ್ಲಿ 6,000 ಮೀಟರ್ ಆಳಕ್ಕೆ ಕೊಂಡೊಯ್ಯಲು ವೈಜ್ಞಾನಿಕ ಸಂವೇದಕಗಳು ಮತ್ತು ಉಪಕರಣಗಳನ್ನು ಹೊಂದಿರುವ ಮಾನವಸಹಿತ ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಲಾಗುವುದು. ಮಧ್ಯ ಹಿಂದೂ ಮಹಾಸಾಗರದ ಈ ಆಳದಲ್ಲಿ ಪಾಲಿಮೆಟಾಲಿಕ್ ಗಂಟುಗಳನ್ನು ಗಣಿಗಾರಿಕೆ ಮಾಡಲು ಸಮಗ್ರ ಗಣಿಗಾರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
 2. ಸಾಗರ ಹವಾಮಾನ ಬದಲಾವಣೆ ಸಲಹಾ ಸೇವೆಗಳ ಅಭಿವೃದ್ಧಿ.
 3. ಆಳ ಸಮುದ್ರದ ಜೀವವೈವಿಧ್ಯತೆಯ ಪರಿಶೋಧನೆ ಮತ್ತು ಸಂರಕ್ಷಣೆಗಾಗಿ ತಾಂತ್ರಿಕ ಆವಿಷ್ಕಾರಗಳು: ಸೂಕ್ಷ್ಮ ಜೀವಿಗಳು ಸೇರಿದಂತೆ ಆಳ ಸಮುದ್ರದ ಸಸ್ಯ ಮತ್ತು ಪ್ರಾಣಿಗಳ ಜೈವಿಕ ನಿರೀಕ್ಷೆ ಮತ್ತು ಆಳ ಸಮುದ್ರದ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಕುರಿತ ಅಧ್ಯಯನಗಳು.
 4. ಆಳ ಸಮುದ್ರ ಸಮೀಕ್ಷೆ ಮತ್ತು ಪರಿಶೋಧನೆ: ಹಿಂದೂ ಮಹಾಸಾಗರದ ಮಧ್ಯ-ಸಾಗರದ ರೇಖೆಗಳ ಉದ್ದಕ್ಕೂ ಭೂಮಿಯ ಹೊರಪದರ ದಿಂದ ರೂಪಗೊಂಡ ಅಮೂಲ್ಯ ಲೋಹಗಳು ಮೂಲವಾಗಿರುವ ಜಲವಿದ್ಯುತ್ ಸಲ್ಫೈಡ್ ಖನಿಜಗಳ ಸಂಭಾವ್ಯ ತಾಣಗಳನ್ನು ಕಂಡುಹಿಡಿಯುವುದು ಮತ್ತು ಗುರುತಿಸುವುದು ಈ ಘಟಕದ ಪ್ರಾಥಮಿಕ ಉದ್ದೇಶವಾಗಿದೆ.
 5. ಸಾಗರದಿಂದ ಶಕ್ತಿ ಮತ್ತು ಸಿಹಿನೀರು: ಕಡಲಾಚೆಯ ಸಾಗರ ಉಷ್ಣ ಶಕ್ತಿ ಪರಿವರ್ತನೆ (OTEC) ಡಸಲೀಕರಣ ಘಟಕಗಳಿಗೆ ವಿವರವಾದ ಎಂಜಿನಿಯರಿಂಗ್ ವಿನ್ಯಾಸವನ್ನು ಅಧ್ಯಯನ ಮಾಡಲು ಮತ್ತು ತಯಾರಿಸಲು ವಿವರವಾದ ಸಿದ್ಧತೆ.
 6. ಸಾಗರ ಜೀವಶಾಸ್ತ್ರಕ್ಕಾಗಿ ಸುಧಾರಿತ ಸಾಗರ ಕೇಂದ್ರಗಳು: ಸಾಗರ ಜೀವಶಾಸ್ತ್ರ ಮತ್ತು ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಮಾನವ ಸಾಮರ್ಥ್ಯ ಮತ್ತು ಉದ್ಯಮವನ್ನು ಅಭಿವೃದ್ಧಿಪಡಿಸುವುದು ಈ ಘಟಕದ ಉದ್ದೇಶವಾಗಿದೆ. ಈ ಘಟಕವು ಆನ್-ಸೈಟ್ ಬಿಸಿನೆಸ್ ಇನ್ಕ್ಯುಬೇಟರ್ ಸೌಲಭ್ಯಗಳ ಮೂಲಕ ಸಂಶೋಧನೆಯನ್ನು ಕೈಗಾರಿಕಾ ಅಪ್ಲಿಕೇಶನ್ ಮತ್ತು ಉತ್ಪನ್ನ ಅಭಿವೃದ್ಧಿಯಾಗಿ ಪರಿವರ್ತಿಸುತ್ತದೆ.

 

ಪ್ರಾಮುಖ್ಯತೆ:

ಈ ಮಿಷನ್ ಭಾರತದ ವಿಶಾಲವಾದ ವಿಶೇಷ ಆರ್ಥಿಕ ವಲಯ ಮತ್ತು ಖಂಡಾವರಣ ಪ್ರದೇಶದಲ್ಲಿ ಪರಿಶೋಧನೆ ಪ್ರಯತ್ನಗಳನ್ನು ಹೆಚ್ಚಿಸಲು ಉತ್ತೇಜನ ನೀಡುತ್ತದೆ.

ಈ ಯೋಜನೆಯು ಮಧ್ಯ ಹಿಂದೂ ಮಹಾಸಾಗರ ಜಲಾನಯನ ಪ್ರದೇಶದಲ್ಲಿ(Central Indian Ocean Basin- CIOB) ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಭಾರತಕ್ಕೆ ಅನುವು ಮಾಡಿಕೊಳ್ಳುತ್ತದೆ.

 

ಸಂಭಾವ್ಯತೆ:

ಮಧ್ಯ ಹಿಂದೂ ಮಹಾಸಾಗರ ಜಲಾನಯನ ಪ್ರದೇಶದಲ್ಲಿ (CIOB) ಪಾಲಿಮೆಟಾಲಿಕ್ ಗಂಟುಗಳ (Polymetallic nodules- PMN) ಪರಿಶೋಧನೆಗಾಗಿ ಭಾರತಕ್ಕೆ ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಸೀ ಬೆಡ್ ಪ್ರಾಧಿಕಾರವು  (UN International Sea Bed Authority for exploration) 75,000 ಚದರ ಕಿಲೋಮೀಟರ್ ಹಂಚಿಕೆ ಮಾಡಿದೆ.

 1. ಮಧ್ಯ ಹಿಂದೂ ಮಹಾಸಾಗರದ ಜಲಾನಯನ ಪ್ರದೇಶದಲ್ಲಿ ಕಬ್ಬಿಣ, ಮ್ಯಾಂಗನೀಸ್, ನಿಕಲ್ ಮತ್ತು ಕೋಬಾಲ್ಟ್‌ನಂತಹ ಲೋಹಗಳ ನಿಕ್ಷೇಪವಿದೆ.
 2. ಈ ಬೃಹತ್ ಮೀಸಲು ಪ್ರದೇಶದಲ್ಲಿನ ಕೇವಲ 10% ಭಾಗವನ್ನು ಮಾತ್ರ ಬಳಸಿಕೊಳ್ಳುವ ಮೂಲಕ, ಭಾರತವು ಮುಂದಿನ 100 ವರ್ಷಗಳವರೆಗೆ ತನ್ನ ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

 

PMN ಎಂದರೇನು?

 1. ಪಾಲಿ-ಮೆಟಾಲಿಕ್ ಗಂಟುಗಳು (nodules) (ಇದನ್ನು ಮ್ಯಾಂಗನೀಸ್ ಗಂಟುಗಳು ಎಂದೂ ಕರೆಯುತ್ತಾರೆ) ಆಲೂಗೆಡ್ಡೆ ಆಕಾರದ ಮತ್ತು ಹೆಚ್ಚಾಗಿ ರಂಧ್ರಯುಕ್ತವಾಗಿರುತ್ತದೆ. ವಿಶ್ವ ಸಾಗರಗಳಲ್ಲಿನ ಆಳ ಸಮುದ್ರದ ತಳಗಳಲ್ಲಿ ಅವು ಹೇರಳವಾಗಿ ಕಂಡುಬರುತ್ತವೆ.
 2. ಸಂಯೋಜನೆ: ಮ್ಯಾಂಗನೀಸ್ ಮತ್ತು ಕಬ್ಬಿಣದ ಜೊತೆಗೆ, ಪಾಲಿ-ಮೆಟಾಲಿಕ್ ಗಂಟುಗಳಲ್ಲಿ ನಿಕಲ್, ತಾಮ್ರ, ಕೋಬಾಲ್ಟ್, ಸೀಸ, ಮಾಲಿಬ್ಡಿನಮ್, ಕ್ಯಾಡ್ಮಿಯಮ್, ವೆನಾಡಿಯಮ್, ಟೈಟಾನಿಯಂ ಇರುತ್ತವೆ, ಇವುಗಳಲ್ಲಿ ನಿಕಲ್, ಕೋಬಾಲ್ಟ್ ಮತ್ತು ತಾಮ್ರವನ್ನು ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ ಎಂದು ಪರಿಗಣಿಸಲಾಗುತ್ತದೆ.

 

ವಿಷಯಗಳು:ಸಂರಕ್ಷಣೆ ಮತ್ತು ಮಾಲಿನ್ಯ ಸಂಬಂಧಿತ ಸಮಸ್ಯೆಗಳು.

ಹವಾಮಾನ ಬದಲಾವಣೆಯನ್ನು ನಿಭಾಯಿಸಲು ‘ನಿವ್ವಳ ಶೂನ್ಯ’(ನೆಟ್ ಝೀರೋ) ಇಂಗಾಲದ ಗುರಿಗಳು ಏಕೆ ಸಾಕಾಗುವುದಿಲ್ಲ?


(Why ‘net zero’ carbon targets may not be enough to tackle climate change? )

ಸಂದರ್ಭ:

ಸ್ವತಂತ್ರ ದತ್ತಿ ಸಂಸ್ಥೆಯಾದ ಆಕ್ಸ್‌ಫ್ಯಾಮ್ (Oxfam) ಯು, ಅನೇಕ ದೇಶಗಳು ಘೋಷಿಸಿರುವ ನಿವ್ವಳ-ಶೂನ್ಯ (Net-Zero) ಇಂಗಾಲದ ಗುರಿಗಳು ಇಂಗಾಲದ ಹೊರಸೂಸುವಿಕೆಯ ಕಡಿತಕ್ಕೆ ಆದ್ಯತೆ ನೀಡುವ ಬದಲು ಅಪಾಯಕಾರಿ ವ್ಯಾಕುಲತೆ’ (Dangerous Distraction) ಎಂದು ಸಾಬೀತಾಗಬಹುದು ಎಂದು ಹೇಳಿದೆ.

ಇದಕ್ಕೆ ಕಾರಣ:

ಸ್ವಲ್ಪ ಸಮಯದ ಹಿಂದೆ ಆಕ್ಸ್‌ಫ್ಯಾಮ್ ಬಿಡುಗಡೆ ಮಾಡಿದ ವರದಿಯು ‘ನೆಟ್ ಅನ್ನು ಬಿಗಿಗೊಳಿಸುವುದು’ ಶೀರ್ಷಿಕೆಯಲ್ಲಿ ಹವಾಮಾನ ಬದಲಾವಣೆಯ ಸವಾಲನ್ನು ಹೆಚ್ಚು ಮರಗಳನ್ನು ನೆಡುವ ಮೂಲಕ ಮಾತ್ರ ನಿಭಾಯಿಸಬಹುದಾದರೆ, 2050 ರ ವೇಳೆಗೆ, ಪ್ರಪಂಚದ ಹೆಚ್ಚುವರಿ   ಕಾರ್ಬನ್ ಹೊರಸೂಸುವಿಕೆಯನ್ನು ತೆಗೆದುಹಾಕಲು ಸುಮಾರು 1.6 ಶತಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಹೊಸ ಕಾಡುಗಳನ್ನು ಬೆಳೆಸಬೇಕಾಗುತ್ತದೆ.

ಇದರ ಜೊತೆಗೆ, ಇಂತಹ ‘ಭೂಮಿ-ಹಸಿದ’ ನಿವ್ವಳ ಶೂನ್ಯ ‘ಯೋಜನೆಗಳು ಜಾಗತಿಕ ಆಹಾರ ಬೆಲೆಗಳನ್ನು ಶೇಕಡಾ 80 ರಷ್ಟು ಹೆಚ್ಚಿಸಬಹುದು ಮತ್ತು ಶ್ರೀಮಂತ ದೇಶಗಳು ಮತ್ತು ಕಾರ್ಪೊರೇಟ್‌ಗಳಿಗೆ “ಎಂದಿನಂತೆ ಕೊಳಕು ವ್ಯಾಪಾರ” ವನ್ನು ಮುಂದುವರಿಸುವ ಅವಕಾಶವನ್ನು ನೀಡುತ್ತವೆ.

ಹವಾಮಾನ ಬದಲಾವಣೆಯನ್ನು ಎದುರಿಸಲು ಆಯ್ಕೆಗಳು:

ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯಿಂದ ಬದಲಾಯಿಸಲಾಗದ ಹಾನಿಯನ್ನು ತಡೆಗಟ್ಟಲು, ಇಡೀ ಪ್ರಪಂಚವು ಒಟ್ಟಾರೆಯಾಗಿ ಒಂದು ಟ್ರ್ಯಾಕ್ ನಲ್ಲಿರಬೇಕು. ಮತ್ತು 2010 ರಿಂದ 2030 ರ ವೇಳೆಗೆ ಹೊರಸೂಸುವಿಕೆ ಮಟ್ಟವನ್ನು 45 ಪ್ರತಿಶತದಷ್ಟು ಕಡಿತಗೊಳಿಸುವ ಗುರಿಯನ್ನು ಹೊಂದಬೇಕು, ಇದರಲ್ಲಿ ಅತಿ ಹೆಚ್ಚು ಹೊರಸೂಸುವಿಕೆಯನ್ನು ಹೊಂದಿರುವ ದೇಶಗಳು ಹೆಚ್ಚಿನ ಕೊಡುಗೆಯನ್ನು ನೀಡಬೇಕಾಗುತ್ತದೆ.

ನೆಟ್ ಜೀರೋ ಗುರಿಗೆ ಬದ್ಧವಾಗಿರುವ ಇತರ ದೇಶಗಳು:

ನ್ಯೂಜಿಲ್ಯಾಂಡ್ ಸರ್ಕಾರವು 2019 ರಲ್ಲಿ ‘ಜೀರೋ ಕಾರ್ಬನ್ ಆಕ್ಟ್’ ಅನ್ನು ಅಂಗೀಕರಿಸಿತು ಮತ್ತು ಇದರ ಅಡಿಯಲ್ಲಿ ದೇಶವು 2050 ರ ವೇಳೆಗೆ ‘ಶೂನ್ಯ ಕಾರ್ಬನ್ ಎಮಿಷನ್’ ಗುರಿಯನ್ನು ಸಾಧಿಸಲು ಬದ್ಧವಾಗಿದೆ.

ಯುಕೆ ಸಂಸತ್ತಿನಿಂದ ಈ ನಿಟ್ಟಿನಲ್ಲಿ ಕಾನೂನನ್ನು ಅಂಗೀಕರಿಸಲಾಗಿದೆ, ಅದರ ಅಡಿಯಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಹಸಿರುಮನೆ ಅನಿಲಗಳ ನಿವ್ವಳ ಹೊರಸೂಸುವಿಕೆಯನ್ನು 100 ಪ್ರತಿಶತದಷ್ಟು ಕಡಿಮೆ ಮಾಡುವ ಜವಾಬ್ದಾರಿಯನ್ನು ಸರ್ಕಾರಕ್ಕೆ ವಹಿಸಲಾಗಿದೆ.

ಯುಎಸ್ ಅಧ್ಯಕ್ಷ ಜೋ ಬಿಡೆನ್ 2030 ರ ವೇಳೆಗೆ ದೇಶದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2005 ರ ಮಟ್ಟಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.

ಹವಾಮಾನ ಬದಲಾವಣೆಯ ಬಗ್ಗೆ ಇಷ್ಟವಿಲ್ಲದ ಮಿತ್ರರನ್ನು ಒಟ್ಟುಗೂಡಿಸಲು ಮತ್ತು 2050 ರ ವೇಳೆಗೆ ದೇಶದಲ್ಲಿ ‘ನಿವ್ವಳ-ಶೂನ್ಯ’ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ತಲುಪಲು ವರ್ಲ್ಡ್ ವಾರ್ ಝೀರೋ’ ಅನ್ನು 2019 ರಲ್ಲಿ ಪ್ರಾರಂಭಿಸಲಾಯಿತು.

ಯುರೋಪಿಯನ್ ಒಕ್ಕೂಟದ ‘ಫಿಟ್ ಫಾರ್ 55’ ಯೋಜನೆ: ಇದರ ಅಡಿಯಲ್ಲಿ, ಯುರೋಪಿಯನ್ ಆಯೋಗವು ತನ್ನ 27 ಸದಸ್ಯ ರಾಷ್ಟ್ರಗಳನ್ನು 2030 ರ ವೇಳೆಗೆ 1990 ರ ಹೊರಸೂಸುವಿಕೆ ಮಟ್ಟಕ್ಕಿಂತ 55 ಪ್ರತಿಶತದಷ್ಟು ಹೊರಸೂಸುವಿಕೆಯನ್ನು ಕಡಿತಗೊಳಿಸುವಂತೆ ಕೇಳಿದೆ.

ಚೀನಾ 2060 ರ ವೇಳೆಗೆ ‘ನೆಟ್-ಝೀರೋ’ ಸಾಧಿಸುವ ಗುರಿಯನ್ನು ಘೋಷಿಸಿದೆ ಮತ್ತು 2030 ರ ಮಟ್ಟಕ್ಕೆ ತನ್ನ ಹೊರಸೂಸುವಿಕೆಯನ್ನು ಸೀಮಿತಗೊಳಿಸುವ ಬಗ್ಗೆ ಮಾತನಾಡಿದೆ.

ಭಾರತ ಮತ್ತು ‘ನೆಟ್-ಝೀರೋ’ ಗುರಿ:

 1. ಅಮೇರಿಕಾ ಮತ್ತು ಚೀನಾ ನಂತರ, ಭಾರತವು ಹಸಿರುಮನೆ ಅನಿಲಗಳನ್ನು ಹೊರಸೂಸುವ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ ಮತ್ತು ‘ನಿವ್ವಳ-ಶೂನ್ಯ’ ಗುರಿಯ ಹೊರಗೆ ಉಳಿದಿರುವ ಏಕೈಕ ಪ್ರಮುಖ ದೇಶವಾಗಿದೆ.
 2. ಭಾರತದ ವಾದವೇನೆಂದರೆ,ಪ್ಯಾರಿಸ್ ಒಪ್ಪಂದ’ ಚೌಕಟ್ಟಿನ ಹೊರಗೆ ನಿವ್ವಳ-ಶೂನ್ಯ ಗುರಿಗಳ ಮೇಲೆ ಸಮಾನಾಂತರ ಚರ್ಚೆಯನ್ನು ಆರಂಭಿಸುವ ಬದಲು, ಎಲ್ಲ ದೇಶಗಳು ತಾವು ಈಗಾಗಲೇ ಭರವಸೆ ನೀಡಿದ ಗುರಿಗಳನ್ನು ಪೂರೈಸುವತ್ತ ಗಮನ ಹರಿಸಬೇಕು ಎಂಬುದಾಗಿದೆ.
 3. ಭಾರತ ಮಾತ್ರ ಈ ಗುರಿಯನ್ನು ವಿರೋಧಿಸುತ್ತದೆ ಏಕೆಂದರೆ ಅದು ಭಾರತದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.

 

ಭಾರತದ ಮುಂದಿರುವ ವಿಶಿಷ್ಟ ಕಾಳಜಿಗಳು:

 1. ಮುಂದಿನ ಎರಡು ಮೂರು ದಶಕಗಳಲ್ಲಿ, ಭಾರತದ ಇಂಗಾಲ ಹೊರಸೂಸುವಿಕೆಯು ವಿಶ್ವದಲ್ಲಿ ಅತ್ಯಂತ ವೇಗದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ, ಏಕೆಂದರೆ ಭಾರತದಲ್ಲಿ, ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಲು ಹೆಚ್ಚಿನ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ.
 2. ಹೆಚ್ಚಿದ ಹೊರಸೂಸುವಿಕೆಯನ್ನು ಯಾವುದೇ ಅರಣ್ಯೀಕರಣ ಅಥವಾ ಮರು ಅರಣ್ಯೀಕರಣವು ಸರಿದೂಗಿಸುವುದಿಲ್ಲ.
 3. ಪ್ರಸ್ತುತ, ಹೆಚ್ಚಿನ ಇಂಗಾಲ-ಹೊರತೆಗೆಯುವ ತಂತ್ರಜ್ಞಾನಗಳು (carbon removal technologies) ವಿಶ್ವಾಸಾರ್ಹವಾಗಿಲ್ಲ ಅಥವಾ ತುಂಬಾ ದುಬಾರಿಯಾಗಿವೆ.

 

ನಿವ್ವಳ ಶೂನ್ಯ / ನೆಟ್ ಜೀರೋ ಎಂದರೇನು?

 1. ಇಂಗಾಲ-ತಟಸ್ಥತೆ(Carbon neutrality) ಎಂದೂ ಕರೆಯಲ್ಪಡುವ ನೆಟ್- ಜೀರೋ, ಒಂದು ದೇಶವು ತನ್ನ ಒಟ್ಟು ಹೊರಸೂಸುವಿಕೆಯನ್ನು ಶೂನ್ಯಕ್ಕೆ ತಗ್ಗಿಸುತ್ತದೆ ಎಂದಲ್ಲ. ಬದಲಾಗಿ, ‘ನಿವ್ವಳ-ಶೂನ್ಯ’ ಎನ್ನುವುದು ದೇಶದ ಹೊರಸೂಸುವಿಕೆಯನ್ನು ‘ವಾತಾವರಣದಿಂದ ಹಸಿರುಮನೆ ಅನಿಲಗಳ ಹೀರಿಕೊಳ್ಳುವಿಕೆ ಮತ್ತು ತಟಸ್ಥಗೊಳಿಸುವಿಕೆಯಿಂದ’ ಸರಿದೂಗಿಸುವ (compensated) ಸನ್ನಿವೇಶವಾಗಿದೆ.
 2.  ಹೊರಸೂಸುವಿಕೆಯ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಕಾಡುಗಳಂತಹ ಹೆಚ್ಚಿನ ಸಂಖ್ಯೆಯ ಇಂಗಾಲದ ಸಿಂಕ್‌ಗಳನ್ನು ನಿರ್ಮಿಸಬಹುದು, ಆದರೆ ವಾತಾವರಣದಿಂದ ತೆಗೆದುಹಾಕುವ ಹಸಿರುಮನೆ ಅನಿಲಗಳಿಗೆ ಇಂಗಾಲದ ಸೆರೆಹಿಡಿಯುವಿಕೆ (Carbon Capture) ಮತ್ತು ಸಂಗ್ರಹಣೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಬೇಕಾಗುತ್ತವೆ.

 

ನಿವ್ವಳ-ಶೂನ್ಯದ ಅವಶ್ಯಕತೆ:

ಕಳೆದ ಎರಡು ವರ್ಷಗಳಿಂದ, 2050 ರ ವೇಳೆಗೆ ‘ನೆಟ್- ಜೀರೋ’ ಗುರಿಯನ್ನು ಸಾಧಿಸಲು ಈ ಅಭಿಯಾನಕ್ಕೆ ಸಹಿ ಮಾಡುವಂತೆ ಪ್ರತಿ ದೇಶವನ್ನು ಮನವೊಲಿಸುವ ಸಾಕಷ್ಟು ಸಕ್ರಿಯ ಅಭಿಯಾನ ನಡೆಯುತ್ತಿದೆ.

2050 ರ ಹೊತ್ತಿಗೆ, ‘ಪ್ಯಾರಿಸ್ ಒಪ್ಪಂದ’ದ ಅಡಿಯಲ್ಲಿ ನಿರ್ಧರಿಸಲ್ಪಟ್ಟ ಜಾಗತಿಕ’ ಇಂಗಾಲದ ತಟಸ್ಥತೆ ಅಥವಾ ಕಾರ್ಬನ್-ನ್ಯೂಟ್ರಾಲಿಟಿ ಯನ್ನು ‘, ಕೈಗಾರಿಕೆ ಪೂರ್ವದ ಅವಧಿಗೆ ಹೋಲಿಸಿದರೆ ಜಾಗತಿಕ ತಾಪಮಾನ ಏರಿಕೆಯನ್ನು 2°C ಒಳಗಡೆಗೆ ಸೀಮಿತಗೊಳಿಸುವ ಗುರಿಯನ್ನು ಸಾಧಿಸುವ ಏಕ ಮಾತ್ರ ಮಾರ್ಗವಾಗಿದೆ ಎಂದು ವಾದಿಸಲಾಗುತ್ತಿದೆ.

 1. ‘ನಿವ್ವಳ-ಶೂನ್ಯ’ ಸೂತ್ರೀಕರಣವು ಯಾವುದೇ ದೇಶದ ಮೇಲೆ ಯಾವುದೇ ಹೊರಸೂಸುವಿಕೆ-ಕಡಿತದ ಗುರಿಗಳನ್ನು ನಿಯೋಜಿಸುವುದಿಲ್ಲ.

 

ನೆಟ್ ಜೀರೋ ಮತ್ತು ಪ್ಯಾರಿಸ್ ಒಪ್ಪಂದ:

 1. ಹವಾಮಾನ ಬದಲಾವಣೆಯನ್ನು ಎದುರಿಸಲು ರಚನೆಯಾಗಿರುವ ಹೊಸ ಜಾಗತಿಕ ಉಪ ಕ್ರಮವಾದ 2015 ರ ಪ್ಯಾರಿಸ್ ಒಪ್ಪಂದದಲ್ಲಿ, ‘ನಿವ್ವಳ-ಶೂನ್ಯ’ ಗುರಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
 2. ಪ್ಯಾರಿಸ್ ಒಪ್ಪಂದದ ಪ್ರಕಾರ, ಸಹಿ ಮಾಡುವ ಪ್ರತಿಯೊಂದು ಜವಾಬ್ದಾರಿಯುತ ದೇಶವು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯಂತ ಸೂಕ್ತವಾದ ಹವಾಮಾನ ಕ್ರಮವನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.
 3. ಇದರ ಅಡಿಯಲ್ಲಿ, ಎಲ್ಲಾ ದೇಶಗಳು ತಮಗಾಗಿ ಐದು ಅಥವಾ ಹತ್ತು ವರ್ಷಗಳ ಹವಾಮಾನ ಗುರಿಗಳನ್ನು ನಿಗದಿಪಡಿಸಬೇಕು ಮತ್ತು ಅವುಗಳ ಸಾಧನೆಯನ್ನು ಪ್ರದರ್ಶಿಸಬೇಕಾಗುತ್ತದೆ.
 4. ಇತರ ಅವಶ್ಯಕತೆಗಳ ಅಡಿಯಲ್ಲಿ, ಪ್ರತಿ ಗಡುವಿನ ನಂತರದ ಹೊಸ ಅವಧಿಗೆ ನಿಗದಿಪಡಿಸಿದ ಗುರಿಗಳು ಪೂರ್ವ-ಅವಧಿಯ ಗುರಿಗಳಿಗಿಂತ ಹೆಚ್ಚು ಮಹತ್ವಾಕಾಂಕ್ಷೆಯದಾಗಿರಬೇಕು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಮಿನರ್ವರ್ಯ ಪೆಂಟಲಿ:

(Minervarya Pentali)

 1.  ಇತ್ತೀಚೆಗೆ ಪಶ್ಚಿಮ ಘಟ್ಟಗಳಲ್ಲಿ ಹೊಸ ಜಾತಿಯ ಕಪ್ಪೆ ಪತ್ತೆಯಾಗಿದೆ ಮತ್ತು ಈ ಪ್ರಭೇದವು ದಕ್ಷಿಣ ಪಶ್ಚಿಮ ಘಟ್ಟಗಳಿಗೆ (ಕೇರಳ ಮತ್ತು ತಮಿಳುನಾಡು) ಸ್ಥಳೀಯವಾಗಿದೆ.
 2. ಈ ಜಾತಿಯು ಇದುವರೆಗೆ ತಿಳಿದಿರುವ ಮಿನರ್ವೇರಿಯಾ (ಪ್ರಜಾತಿಯ) ಕಪ್ಪೆಗಳಲ್ಲಿ ಅತ್ಯಂತ ಚಿಕ್ಕದಾಗಿದೆ.
 3. ಹೊಸ ಕಪ್ಪೆ ಪ್ರಭೇದವು ‘ಡಿಕ್ರೊಗ್ಲೋಸಿಡೇ’ (Dicroglossidae) ಕುಟುಂಬಕ್ಕೆ ಸೇರಿದೆ.
 4. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಿಸ್ಟಮ್ಯಾಟಿಕ್ಸ್ ಲ್ಯಾಬ್ ಸ್ಥಾಪನೆಗೆ ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಫೈಟೊ-ಜೆನೆಟಿಸ್ಟ್ ಪ್ರೊ. ‘ದೀಪಕ್ ಪೆಂಟಲ್’ ಅವರು ನೀಡಿದ ಬೆಂಬಲ ಹಾಗೂ ಪ್ರೋತ್ಸಾಹವನ್ನು ಗೌರವಿಸಲು ಈ ಪ್ರಜಾತಿಗೆ ಅವರ ಹೆಸರನ್ನು ಇಡಲಾಗಿದೆ.

 

ತಾಲಿಸ್ಮನ್ ಸಾಬರ್  ಸಮರಾಭ್ಯಾಸ:

(Exercise Talisman Sabre)

 1. 2023 ರಲ್ಲಿ ನಡೆಯಲಿರುವ ತನ್ನ ಅತಿದೊಡ್ಡ ಸಮರಾಭ್ಯಾಸ ವಾದ ‘ತಾಲಿಸ್ಮನ್ ಸಾಬರ್’ ದಲ್ಲಿ ಭಾರತವನ್ನು ಸೇರಲು ಆಸ್ಟ್ರೇಲಿಯಾ ಉತ್ಸುಕವಾಗಿದೆ. ಶೀಘ್ರದಲ್ಲೇ, ಈ ನಿಟ್ಟಿನಲ್ಲಿ ಭಾರತಕ್ಕೆ ಔಪಚಾರಿಕ ಆಹ್ವಾನವನ್ನು ನೀಡಲಾಗುವುದು.
 2. ಇತ್ತೀಚೆಗೆ ಮುಕ್ತಾಯಗೊಂಡ ತಾಲಿಸ್ಮನ್ ಸೇಬರ್ 2021 ಆಸ್ಟ್ರೇಲಿಯಾದ ರಕ್ಷಣಾ ಪಡೆ (ADF) ಮತ್ತು ಯುಎಸ್ ಸೇನೆಯ ನಡುವಿನ ಅತಿದೊಡ್ಡ ದ್ವಿಪಕ್ಷೀಯ ಜಂಟಿ ತರಬೇತಿ ಸಮರಾಭ್ಯಾಸವಾಗಿದೆ.
 3. ಭೂಮಿ, ವಾಯು ಮತ್ತು ಸಮುದ್ರದಲ್ಲಿ ಏಳು ದೇಶಗಳಿಂದ ಸುಮಾರು 17,000 ಮಿಲಿಟರಿ ಸಿಬ್ಬಂದಿ ಭಾಗವಹಿಸಿದ್ದರು.
 4. ಈ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದ ಇತರ ದೇಶಗಳು ಕೆನಡಾ, ಜಪಾನ್, ನ್ಯೂಜಿಲ್ಯಾಂಡ್, ದಕ್ಷಿಣ ಕೊರಿಯಾ ಮತ್ತು ಯುಕೆ.