[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 7ನೇ ಜುಲೈ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಜ್ಯದಲ್ಲಿ ವಿಧಾನಪರಿಷತ್ ಸ್ಥಾಪಿಸಲು ನಿರ್ಣಯ ಅಂಗೀಕರಿಸಿದ ಪಶ್ಚಿಮ ಬಂಗಾಳ.

2. ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆ.

3. ಕರಡು ಛಾಯಾಗ್ರಹಣ (ತಿದ್ದುಪಡಿ) ಮಸೂದೆ 2021.

4. ಸಲಿಂಗ ವಿವಾಹದ ಕುರಿತು ಹೈಕೋರ್ಟ್‌ನಲ್ಲಿ ಹೊಸ ಅರ್ಜಿಯ ಸಲ್ಲಿಕೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನದಿ ತೀರದಲ್ಲಿರುವ ನಗರಗಳು ಮತ್ತು ನದಿ ಸಂರಕ್ಷಣಾ ಯೋಜನೆಗಳ ಸಂಯೋಜನೆ.

2. ಅರಣ್ಯ ಹಕ್ಕುಗಳ ಅನುಷ್ಠಾನದ ಪರಿಶೀಲನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಮಲೇಷ್ಯಾದಲ್ಲಿ ಬಿಳಿ ಧ್ವಜ ಅಭಿಯಾನ.

2. ಗ್ರ್ಯಾಂಡ್ ಇಥಿಯೋಪಿಯನ್ ನವೋದಯ ಅಣೆಕಟ್ಟು.

3. ರಿವೆಂಜ್ ಟೂರಿಸಂ ಎಂದರೇನು?

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ರಾಜ್ಯದಲ್ಲಿ ವಿಧಾನಪರಿಷತ್ ಸ್ಥಾಪಿಸಲು ನಿರ್ಣಯ ಅಂಗೀಕರಿಸಿದ ಪಶ್ಚಿಮ ಬಂಗಾಳ:


(Bengal passes resolution to set up Council)

 ಸಂದರ್ಭ:

ಇತ್ತೀಚೆಗೆ, ಪಶ್ಚಿಮ ಬಂಗಾಳ ವಿಧಾನಸಭೆಯು ಮೂರನೇ ಎರಡು ಭಾಗದಷ್ಟು ಬಹುಮತದೊಂದಿಗೆ ರಾಜ್ಯದಲ್ಲಿ ‘ವಿಧಾನ ಪರಿಷತ್’ ಅನ್ನು ಸ್ಥಾಪಿಸಲು ನಿರ್ಣಯವನ್ನು ಅಂಗೀಕರಿಸಿದೆ.

  1. ಇದಕ್ಕೂ ಮುನ್ನ, ಪಶ್ಚಿಮ ಬಂಗಾಳದಲ್ಲಿ ‘ಮೇಲ್ಮನೆ’ ಅಂದರೆ ‘ವಿಧಾನ ಪರಿಷತ್ತು’ 1952 ರಲ್ಲಿ ಸ್ಥಾಪನೆಯಾಯಿತು ಮತ್ತು 1969 ರವರೆಗೆ ಅಸ್ತಿತ್ವದಲ್ಲಿತ್ತು ಎಂದು ಮಾಹಿತಿಯಿದೆ.

 

‘ವಿಧಾನಪರಿಷತ್ತುಗಳು’ ಮತ್ತು ಅವುಗಳ ಪ್ರಾಮುಖ್ಯತೆ:

ಭಾರತವು ಸಂಸದೀಯ ವ್ಯವಸ್ಥೆ (ದ್ವಿಸದನ ಪದ್ಧತಿ) ಯನ್ನು ಹೊಂದಿದೆ, ಅಂದರೆ ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎಂಬ ಎರಪ್ರಾಮುಖ್ಯತೆ,

ರಾಜ್ಯ ಮಟ್ಟದಲ್ಲಿ ಲೋಕಸಭೆಗೆ ಸಮಾನವಾದ ವಿಧಾನಸಭೆ (Legislative Assembly) ಇದೆ; ಮತ್ತು ರಾಜ್ಯಸಭೆಗೆ ಸಮಾನವಾದ ‘ವಿಧಾನಪರಿಷತ್’ (Legislative Council) ಇದೆ.

 

ವಿಧಾನಪರಿಷತ್ ರಚನಾ ಪ್ರಕ್ರಿಯೆ:

ಸಂವಿಧಾನದ 169 ನೇ ವಿಧಿ ಅನ್ವಯ, ಸಂಬಂಧಿಸಿದ ರಾಜ್ಯ ವಿಧಾನಸಭೆಯು ರಾಜ್ಯದಲ್ಲಿ ವಿಧಾನ ಪರಿಷತ್ತನ್ನು ರಚಿಸಲು ಅಥವಾ ರದ್ದುಗೊಳಿಸಲು ವಿಶೇಷ ಬಹುಮತದೊಂದಿಗೆ ಈ ನಿರ್ಣಯವನ್ನು ಅಂಗೀಕರಿಸಿದರೆ, ಸಂಸತ್ತು ಕಾನೂನಿನ ಮೂಲಕ ರಾಜ್ಯದಲ್ಲಿ ವಿಧಾನ ಪರಿಷತ್ತನ್ನು ರಚಿಸಬಹುದು ಅಥವಾ ರದ್ದುಗೊಳಿಸಬಹುದು.

 

ಸದನದಲ್ಲಿ ಸದಸ್ಯರ ಸಂಖ್ಯೆ:

ಭಾರತದ ಸಂವಿಧಾನದ 171 ನೇ ವಿಧಿ (1) ರ ಪ್ರಕಾರ, ವಿಧಾನ ಪರಿಷತ್ತನ್ನು ಹೊಂದಿರುವ ರಾಜ್ಯದ ವಿಧಾನಪರಿಷತ್ ನ ಒಟ್ಟು ಸದಸ್ಯರ ಸಂಖ್ಯೆಯು ಆ ರಾಜ್ಯದ ವಿಧಾನಸಭೆಯ ಒಟ್ಟು ಸದಸ್ಯರ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿರಬಾರದು, ಮತ್ತು ಯಾವುದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 40 ಕ್ಕಿಂತ ಕಡಿಮೆಯಿರಬಾರದು.

 

ವಿಧಾನ ಪರಿಷತ್ತಿನ ಸದಸ್ಯರ ಚುನಾವಣೆ:

  1. 1/3 ಸದಸ್ಯರನ್ನು ವಿಧಾನಸಭೆಯ ಚುನಾಯಿತ ಸದಸ್ಯರು ಆಯ್ಕೆ ಮಾಡುತ್ತಾರೆ.
  2. 1/3 ಸದಸ್ಯರನ್ನು ರಾಜ್ಯದ ಪುರಸಭೆಗಳು, ಜಿಲ್ಲಾ ಮಂಡಳಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಮಾಡಲಾಗುತ್ತದೆ.
  3. 1/12 ಸದಸ್ಯರು, ಶಿಕ್ಷಕರಿಂದ ಮಾಡಲ್ಪಟ್ಟ ಚುನಾವಣಾ ಕಾಲೇಜಿನಿಂದ ಅಥವಾ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ.
  4. 1/12 ಸದಸ್ಯ, ನೋಂದಾಯಿತ ಪದವೀಧರರನ್ನು ಒಳಗೊಂಡ ಚುನಾವಣಾ ಕಾಲೇಜಿನಿಂದ ಅಥವಾ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ.
  5. ಉಳಿದ 1/6 ಸದಸ್ಯರನ್ನು ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರಿ ಆಂದೋಲನ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಗುರುತಿಸಲಾಗಿರುವ ಪ್ರಖ್ಯಾತ ವ್ಯಕ್ತಿಗಳನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆ:


(Recusal of Judges)

ಸಂದರ್ಭ:

ನಂದಿಗ್ರಾಮ್ ಚುನಾವಣಾ ಅರ್ಜಿಯನ್ನು ಆಲಿಸುತ್ತಿರುವ ನ್ಯಾಯಮೂರ್ತಿ ಕೌಶಿಕ್ ಚಂದಾ ಅವರು ಭಾರತೀಯ ಜನತಾ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ ಆದಕಾರಣ ಅವರನ್ನು ಪ್ರಕರಣದ ವಿಚಾರಣೆಯಿಂದ ಹಿಂಪಡೆಯಬೇಕು ಅಥವಾ ಕೈಬಿಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ₹ 5ಲಕ್ಷಗಳ ದಂಡ ವಿಧಿಸಿದೆ.

  1. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ದಂಡವಾಗಿ ಪಾವತಿಸಿದ ಮೊತ್ತವನ್ನು ಕೋವಿಡ್ -19 ಪೀಡಿತ ವಕೀಲರ ಕುಟುಂಬಗಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
  2. ಆದಾಗ್ಯೂ, ನ್ಯಾಯಾಧೀಶರು ತಮ್ಮ ವೈಯಕ್ತಿಕ ವಿವೇಚನೆಯಿಂದ ಪ್ರಕರಣದಿಂದ ದೂರವುಳಿಯಲು ನಿರ್ಧರಿಸಿದರು ಮತ್ತು ನಂದಿಗ್ರಾಮ ಚುನಾವಣಾ ಪ್ರಕರಣವನ್ನು ತಮ್ಮ ಪೀಠದಿಂದ ಬಿಡುಗಡೆ ಮಾಡಿದರು.

 

‘ನ್ಯಾಯಾಂಗ ಅನರ್ಹತೆ’ ಅಥವಾ ‘ವಿಚಾರಣೆಯ ನಿರಾಕರಣೆ’ ಎಂದರೇನು?

(What is Judicial Disqualification or Recusal?)

 ಹಿತಾಸಕ್ತಿಯ ಸಂಘರ್ಷದಿಂದಾಗಿ ವಿಚಾರಣೆಯ ಪೀಠ ಅಲಂಕರಿಸುವ ನ್ಯಾಯಾಂಗ ಅಧಿಕಾರಿ ಅಥವಾ ಆಡಳಿತಾಧಿಕಾರಿಯು ಯಾವುದೇ ನ್ಯಾಯಾಂಗ ವಿಚಾರಣೆಯಲ್ಲಿ ಅಥವಾ ಅಧಿಕೃತ ಕ್ರಿಯೆಯಲ್ಲಿ ಭಾಗವಹಿಸುವಿಕೆಯಿಂದ ದೂರವಿರುವುದನ್ನು ಅಥವಾ ಹಿಂದೆ ಸರಿಯುವುದನ್ನು ನ್ಯಾಯಾಂಗ ಅನರ್ಹತೆ (Judicial disqualification), ‘ವಿಚಾರಣೆಯ ನಿರಾಕರಣೆ’ ಅಥವಾ ‘ಮರುಪಡೆಯುವಿಕೆ’ (Recusal) ಎಂದು ಕರೆಯಲಾಗುತ್ತದೆ.

ಯಾವುದೇ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುವುದಕ್ಕೆ ಇಂಗ್ಲಿಷ್‌ನಲ್ಲಿ ‘Recuse’ (ರೆಕ್ಯೂಸ್) ಎಂದು ಕರೆಯುತ್ತಾರೆ. ‘ಪ್ರಕರಣದ ಬಗ್ಗೆ ಪರ– ವಿರುದ್ಧದ ನಿಲುವು ಹೊಂದಿದ್ದರೆ ಅವುಗಳ ವಿಚಾರಣೆ ನಿರಾಕರಿಸಬೇಕು’ ಎಂಬುದು ಇದರರ್ಥ.

 

‘ವಿಚಾರಣೆಯ ನಿರಾಕರಣೆ’ಗೆ ಸಾಮಾನ್ಯ ಆಧಾರಗಳು:

  1. ನ್ಯಾಯಾಧೀಶರು ಒಂದು ಪಕ್ಷದ ಬಗ್ಗೆ ಉತ್ತಮ ನಂಬಿಕೆ, ಅಥವಾ ಇತರ ಪಕ್ಷದ ಬಗ್ಗೆ ಪ್ರತಿಕೂಲ ಧೋರಣೆ ಹೊಂದಿದ್ದರೆ ಅಥವಾ ನ್ಯಾಯಾಧೀಶರು ಯಾರೋ ಒಬ್ಬರ ಬಗ್ಗೆ ಸಮಂಜಸವಾಗಿ ಪಕ್ಷಪಾತ ಹೊಂದಿರಬಹುದು ಎಂದು ನಿಷ್ಪಕ್ಷಪಾತ ಅಥವಾ ವಸ್ತುನಿಷ್ಠ ವೀಕ್ಷಕನು ಭಾವಿಸಿದರೆ.
  2. ನ್ಯಾಯಾಧೀಶರು ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿದ್ದರೆ ಅಥವಾ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರೆ.
  3. ನ್ಯಾಯಾಧೀಶರ ಹಿನ್ನೆಲೆ ಅಥವಾ ಅನುಭವ, ಉದಾಹರಣೆಗೆ ನ್ಯಾಯಾಧೀಶರಾಗುವುದಕ್ಕಿಂತ ಮುಂಚೆ ವಕೀಲರಾಗಿ ಮಾಡಿದ ಕೆಲಸ.
  4. ವಾದಿ ಮತ್ತು ಪ್ರತಿವಾದಿಗಳ ಕುರಿತು ಹೊಂದಿರುವ ವೈಯಕ್ತಿಕ ತಿಳುವಳಿಕೆ ಅಥವಾ ಪ್ರಕರಣದ ಸಂಗತಿಗಳ ಕುರಿತ ಜ್ಞಾನ.
  5. ವಕೀಲರು ಅಥವಾ ವಕೀಲರಲ್ಲದವರೊಂದಿಗೆ ಏಕಪಕ್ಷೀಯ/ಖಾಸಗಿ ಸಂವಾದ.
  6. ನ್ಯಾಯಾಧೀಶರ ತೀರ್ಪುಗಳು, ಪ್ರತಿಕ್ರಿಯೆಗಳು ಅಥವಾ ನಡವಳಿಕೆ.

 

ಈ ನಿಟ್ಟಿನಲ್ಲಿ ಯಾವುದೇ ಕಾನೂನುಗಳಿವೆಯೇ?

ನ್ಯಾಯಾಧೀಶರು ‘ವಿಚಾರಣೆಯನ್ನು ನಿರಾಕರಿಸಲು’ ಅಥವಾ ವಿಚಾರಣೆಯಿಂದ ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.

  1. ಆದಾಗ್ಯೂ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ,ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು, ನ್ಯಾಯದಾನ ಮಾಡಲು, ಭಯ ಅಥವಾ ಅನುಗ್ರಹವಿಲ್ಲದೆ, ವಾತ್ಸಲ್ಯ ಅಥವಾ ಬಾಂಧವ್ಯಕ್ಕೆ ಒಳಗಾಗದೆ ಅಥವಾ ತಿರಸ್ಕಾರವಿಲ್ಲದೆ ಅಥವಾ ಯಾವುದೇ ದುರುದ್ದೇಶವಿಲ್ಲದೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸುವ ವಚನವನ್ನು ನೀಡುತ್ತಾರೆ.

 

ಈ ಕುರಿತು ಸುಪ್ರೀಂ ಕೋರ್ಟ್ ಹೇಳಿರುವುದೇನು ?

  1. ರಂಜಿತ್ ಠಾಕೂರ್ VS ಯೂನಿಯನ್ ಆಫ್ ಇಂಡಿಯಾ (1987) ಪ್ರಕರಣದಲ್ಲಿ, ಪಕ್ಷದ ಮನಸ್ಸಿನಲ್ಲಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಪಕ್ಷಪಾತದ ಸಾಧ್ಯತೆಯ ಬಗ್ಗೆ ತನಿಖೆ ಸಮರ್ಥನೀಯ ಮತ್ತು ಸಮಂಜಸವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಾಧೀಶರು ತಮ್ಮ ಮುಂದೆ ನಿಂತಿರುವ ಪಕ್ಷದ ಮನಸ್ಸಿನಲ್ಲಿ ನಡೆಯುತ್ತಿರುವ ಆಲೋಚನೆಗಳನ್ನು ಗಮನಿಸಬೇಕು ಮತ್ತು ಅವರು ಪಕ್ಷಪಾತ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕು.
  2. ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ VS ಯೂನಿಯನ್ ಆಫ್ ಇಂಡಿಯಾ (2015) ಪ್ರಕರಣದ ತೀರ್ಪು ನೀಡುವಾಗ ನ್ಯಾಯಾಧೀಶರು “ಆರ್ಥಿಕ ಹಿತಾಸಕ್ತಿಯನ್ನು ಹೊಂದಿರುವುದು ಕಂಡು ಬಂದರೆ ಅದು ಪಕ್ಷಪಾತದ ಕುರಿತ ‘ನಿಜವಾದ ಅಪಾಯ’ ಅಥವಾ ಆಗ ‘ಸಮಂಜಸವಾದ ಅನುಮಾನ’ ಇದೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕರಡು ಛಾಯಾಗ್ರಹಣ (ತಿದ್ದುಪಡಿ) ಮಸೂದೆ 2021:


(The draft Cinematograph (Amendment) Bill 2021)

ಸಂದರ್ಭ:

ಇತ್ತೀಚೆಗೆ, ‘ಮಾಹಿತಿ ಮತ್ತು ತಂತ್ರಜ್ಞಾನ’ದ ಸಂಸದೀಯ ಸ್ಥಾಯಿ ಸಮಿತಿಯು  (Parliamentary Standing Committee), ಉದ್ದೇಶಿತ, ಛಾಯಾಗ್ರಹಣ (ತಿದ್ದುಪಡಿ) ಮಸೂದೆ 2021 ರ (Cinematograph (Amendment) Bill 2021) ಕರಡಿನಲ್ಲಿ ಪರಿಚಯಿಸಲಾದ “ಸೂಪರ್ ಸೆನ್ಸಾರ್ಶಿಪ್” ನಿಬಂಧನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮಾಹಿತಿ ನೀಡಿದೆ.  

 

ಸಂಬಂಧಿಸಿದ ಕಾಳಜಿಗಳು:

ಮರು-ಪ್ರಮಾಣೀಕರಣಕ್ಕಾಗಿ ಆದೇಶಿಸುವ ಕೇಂದ್ರದ ಅಧಿಕಾರವು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನಡೆಸುತ್ತಿರುವ ಅಸ್ತಿತ್ವದಲ್ಲಿರುವ ಪ್ರಕ್ರಿಯೆಯ ಅಡಿಯಲ್ಲಿ ವಿವರಿಸಿರುವ ಸರ್ಕಾರದ ನೇರ ಸೆನ್ಸಾರ್‌ಶಿಪ್‌ಗೆ (Government Censorship) ಹೆಚ್ಚುವರಿ ಪದರವನ್ನು ಸೇರಿಸಬಹುದು.

ಸರ್ಕಾರದ ಪ್ರಕಾರ, ಚಲನಚಿತ್ರದ ವಿಷಯವು ರಾಷ್ಟ್ರದ ಸುರಕ್ಷತೆ ಮತ್ತು ಸಮಗ್ರತೆಗೆ ಪರಿಣಾಮ ಬೀರುತ್ತಿರುವುದು ಕಂಡುಬಂದಾಗ ಮಾತ್ರ ಈ ಷರತ್ತನ್ನು ವಿಧಿಸಲಾಗುವುದು.

ಪ್ರಸ್ತುತ ಸಮಸ್ಯೆಗಳು:

  1. ಅಂತಹ ಪರಿಸ್ಥಿತಿಯನ್ನು ಎದುರಿಸಲು ದಂಡದ ನಿಬಂಧನೆಗಳು ಈಗಾಗಲೇ ಅಸ್ತಿತ್ವದಲ್ಲಿದ್ದಾಗ, ಈ ನಿಬಂಧನೆಯನ್ನು ಮಸೂದೆಯಲ್ಲಿ ಸೇರಿಸುವುದು ಅಗತ್ಯವೆಂದು ಸಚಿವಾಲಯ ಏಕೆ ಪರಿಗಣಿಸಿತು.
  2. ತೀರ್ಪು ನೀಡುವ ಅಧಿಕಾರವನ್ನು ಅಧಿಕಾರಶಾಹಿಗೆ ಏಕೆ ವಹಿಸಬೇಕು?
  3. ಇದಲ್ಲದೆ, 2000 ನೇ ಇಸವಿಯಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶವು ‘ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್’(ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ನಿಂದ ಈಗಾಗಲೇ ಪ್ರಮಾಣೀಕರಿಸಲ್ಪಟ್ಟ ಚಲನಚಿತ್ರಗಳ ಮೇಲೆ ಸರ್ಕಾರವು ಪರಿಷ್ಕರಣೆ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಒಮ್ಮೆ ‘ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್’ ಒಂದು ಚಲನಚಿತ್ರವನ್ನು ಪ್ರಮಾಣೀಕರಿಸಿದ ನಂತರ ಸರ್ಕಾರವು ಈ ವಿಷಯದಲ್ಲಿ ಶಕ್ತಿಹೀನವಾಗುತ್ತದೆ. ಆದರೆ, ಮಸೂದೆಯಲ್ಲಿನ ಪ್ರಸ್ತಾವಿತ ನಿಬಂಧನೆಗಳು ಸುಪ್ರೀಂ ಕೋರ್ಟ್‌ನ ಈ ಅಭಿಪ್ರಾಯಕ್ಕೆ ವಿರುದ್ಧವಾಗಿವೆ.

 

ಕರಡು ಮಸೂದೆಯಲ್ಲಿನ ಪ್ರಮುಖ ನಿಬಂಧನೆಗಳು:

  1. ವಯಸ್ಸು ಆಧಾರಿತ ಪ್ರಮಾಣೀಕರಣ (Age-based certification): ವಯಸ್ಸು ಆಧಾರಿತ ವರ್ಗೀಕರಣ ಮತ್ತು ಶ್ರೇಣೀಕರಣಕ್ಕೆ ಅವಕಾಶ ಕಲ್ಪಿಸಲು ಮಸೂದೆಯು ಪ್ರಸ್ತಾಪಿಸಿದೆ. ಇದರ ಅಡಿಯಲ್ಲಿ, ಚಲನಚಿತ್ರಗಳಿಗಾಗಿ ಅಸ್ತಿತ್ವದಲ್ಲಿರುವ ವರ್ಗಗಳನ್ನು (U, U/A ಮತ್ತು A) ಮತ್ತಷ್ಟು ವಯಸ್ಸಿನ ಆಧಾರಿತ ಗುಂಪುಗಳಾಗಿ (U/A 7+, U/A 13+ ಮತ್ತು U/A 16+) ಮರು ವಿಭಜಿಸಲು ಪ್ರಸ್ತಾಪಿಸಲಾಗಿದೆ.
  2. ಪ್ರಮಾಣೀಕರಣದ ಪರಿಷ್ಕರಣೆ (Revision of certification): ಈ ನಿಬಂಧನೆಯಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ‘ಪರಿಷ್ಕರಣೆ ಅಧಿಕಾರಗಳನ್ನು’ ನೀಡಲಾಗಿದೆ ಮತ್ತು ಕೇಂದ್ರ ಸರ್ಕಾರಕ್ಕೆ ‘ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ-(Central Board of Film Certification- CBFC) ಈಗಾಗಲೇ ಪರಿಷ್ಕರಿಸಿ ಅನುಮೋದಿಸಿದ ಚಲನಚಿತ್ರಗಳನ್ನು ‘ಮರುಪರಿಶೀಲಿಸಲು’ ಅಧಿಕಾರ ನೀಡಲಾಗಿದೆ.
  3. ಶಾಶ್ವತ ಪ್ರಮಾಣಪತ್ರ: ಇದರ ಅಡಿಯಲ್ಲಿ, ಚಲನಚಿತ್ರಗಳನ್ನು ಶಾಶ್ವತವಾಗಿ ಪ್ರಮಾಣೀಕರಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಸಿಬಿಎಫ್‌ಸಿ ನೀಡುವ ಪ್ರಮಾಣಪತ್ರಗಳು 10 ವರ್ಷಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ.
  4. ಪೈರಸಿಯ ವಿರುದ್ಧ ಅವಕಾಶ (Provision against piracy): ಪ್ರಸ್ತುತ, ಚಲನಚಿತ್ರ ಪೈರಸಿಯನ್ನು ತಡೆಯಲು ಯಾವುದೇ ನಿಬಂಧನೆಗಳಿಲ್ಲ. ಪೈರಸಿಯ ಸಮಸ್ಯೆಯನ್ನು ಪರಿಶೀಲಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ, ಅದನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

 

ಸಂಬಂಧಿಸಿದ ಇತರ ಕಾಳಜಿಗಳು:

ಆಗಾಗ್ಗೆ, ಚಲನಚಿತ್ರದ ಪ್ರಮಾಣೀಕರಣ ಪ್ರಕ್ರಿಯೆಯ ನಂತರ ಮತ್ತು ಅದರ ಬಿಡುಗಡೆಗೆ ಸ್ವಲ್ಪ ಮೊದಲು ವಿವಿಧ ಗುಂಪುಗಳು ಅಥವಾ ವ್ಯಕ್ತಿಗಳು ಆಕ್ಷೇಪಣೆಗಳನ್ನು ಎತ್ತುತ್ತಾರೆ. ಪ್ರಸ್ತಾವಿತ ಹೊಸ ನಿಯಮಗಳ ಅನುಷ್ಠಾನದೊಂದಿಗೆ, CBFC ಯು ಈಗಾಗಲೇ ಪ್ರಮಾಣೀಕರಿಸಿದ್ದರೂ ಸಹ, ಯಾದೃಚ್ಛಿಕ ಆಕ್ಷೇಪಣೆಗಳ ಆಧಾರದ ಮೇಲೆ ಚಲನಚಿತ್ರಗಳನ್ನು ಮರು-ಪ್ರಮಾಣೀಕರಣಕ್ಕಾಗಿ ದೀರ್ಘಕಾಲ ತಡೆಹಿಡಿಯಬಹುದು.

 

ಈ ಕುರಿತು ಸರ್ಕಾರದ ನಿಲುವೇನು?

ಛಾಯಾಗ್ರಹಣ ಕಾಯ್ದೆಯನ್ನು ಜಾರಿಗೆ ತರುವ ಅಧಿಕಾರ ಹೊಂದಿರುವ ಅಧಿಕೃತ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಚಲನಚಿತ್ರಗಳಲ್ಲಿ ನಿಷೇಧಿತ ಅಂಶಗಳು ಇಲ್ಲದಿರುವುದನ್ನು ಕಂಡುಕೊಂಡಿದ್ದರು ಸಹ, ಸಂವಿಧಾನದ 19 ನೇ ವಿಧಿಯ ಅಡಿಯಲ್ಲಿ ಉಲ್ಲೇಖಿಸಿರುವ ‘ಸಮಂಜಸವಾದ ನಿರ್ಬಂಧಗಳನ್ನು’ ಸರ್ಕಾರವು ಉಲ್ಲೇಖಿಸುತ್ತದೆ, ಅದಕ್ಕೆ ದೂರುಗಳನ್ನು ಸ್ವೀಕರಿಸುವ ಚಲನಚಿತ್ರಗಳಿಗೆ ಸೂಪರ್ ಸೆನ್ಸಾರ್‌ ಆಗಿ ಕಾರ್ಯನಿರ್ವಹಿಸಲು ತನ್ನ ಅಧಿಕಾರವನ್ನು ಬಳಸಿಕೊಳ್ಳುವುದನ್ನು ಸಮರ್ಥಿಸುತ್ತದೆ.

 

ದಯವಿಟ್ಟು ಗಮನಿಸಿ:

ಸೆನ್ಸಾರ್‌ ಕತ್ತರಿ ಮೇಲೆ ಕೇಂದ್ರದ ಅಧಿಕಾರ:

ಸಿನಿಮಾಟೊಗ್ರಫಿ ಕಾಯ್ದೆ 1952ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ರೂಪಿಸಿರುವ ಕರಡು ಮಸೂದೆಯಲ್ಲಿ, ಸೆನ್ಸಾರ್‌ ಮಂಡಳಿ ಹಾಗೂ ಸಿನಿಮಾ ರಂಗದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುವ ನಿಯಮಗಳಿವೆ ಎನ್ನುವ ವಾದ ಬಲವಾಗಿ ಕೇಳಿ ಬರುತ್ತಿದೆ. ಮಸೂದೆಯಲ್ಲಿ ಹೊಸದಾಗಿ ಸೇರಿಸಲಾಗಿರುವ ಅಂಶಗಳು ಯಾವುವು? ಅವುಗಳಿಂದ ಆಗುವ ದೂರಗಾಮಿ ಪರಿಣಾಮಗಳೇನು? ಈ ಚರ್ಚೆಯೊಳಗೆ ಒಂದು ಇಣುಕು ನೋಟ.

  1. ಸೆನ್ಸಾರ್‌ ಮಂಡಳಿ ಪ್ರಮಾಣಿಕರಿಸಿದ ಚಲನಚಿತ್ರವನ್ನು (ಏನಾದರೂ ಆಕ್ಷೇಪಗಳು ಬಂದಲ್ಲಿ) ಮರುಪರಿಶೀಲಿಸುವಂತೆ ಆದೇಶಿಸುವ ಅಧಿಕಾರವನ್ನು ಕೇಂದ್ರ ಸರ್ಕಾರವೇ ನೇರವಾಗಿ ಹೊಂದುವ ಹೊಸ ನಿಯಮದ ಕರಡು ಇತ್ತೀಚೆಗೆ ಬಿಡುಗಡೆ ಆಗಿದೆ. ಜುಲೈ 2ರ ಒಳಗೆ ಈ ಸಂಬಂಧಿಸಿ ಚಿತ್ರೋದ್ಯಮ ಹಾಗೂ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿದೆ. ಸಿದ್ಧಪಡಿಸಲಾದ ಕರಡಿನ ಬಗ್ಗೆ ಚಿತ್ರೋದ್ಯಮದಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿವೆ. ಬಹುಪಾಲು ಸಿನಿಮಂದಿ ಈ ಆದೇಶದ ಸಮಂಜಸತೆಯನ್ನೇ ಪ್ರಶ್ನಿಸಿ ಕೇಂದ್ರ ಸರ್ಕಾರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಲು ಸಿದ್ಧತೆ ನಡೆಸಿದ್ದಾರೆ.

ಇಷ್ಟಕ್ಕೂ ಕರಡಿನಲ್ಲಿ ಏನಿದೆ?

  1. ಸದ್ಯಕ್ಕಿರುವ ನಿಯಮ ಪ್ರಕಾರ (ಸಿನಿಮಾಟೋಗ್ರಫಿ ಕಾಯ್ದೆ 1952 ಸೆಕ್ಷನ್ 5ಬಿ(1)) ಚಿತ್ರವೊಂದು ಒಮ್ಮೆ ಸೆನ್ಸಾರ್‌ ಮಂಡಳಿಯಿಂದ ಪ್ರಮಾಣಿತಗೊಂಡರೆ ಅದನ್ನು ಬದಲಾಯಿಸಲು ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ. ಸುಪ್ರೀಂ ಕೋರ್ಟ್‌ ಕೂಡಾ ಇದನ್ನೇ ಸಮರ್ಥಿಸಿದೆ. ಹಾಗಾಗಿ ನಿರ್ದಿಷ್ಟವಾದ ಸಿನಿಮಾದ ವಿರುದ್ಧ ದೂರು ಬಂದರೂ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ತನಗೆ ಯಾವುದೇ ನೇರ ಅಧಿಕಾರ ಇಲ್ಲ ಎಂಬುದು ಕೇಂದ್ರ ಸರ್ಕಾರದ ಅಳಲು.
  2. 5ಬಿ(1) ಹೇಳುವುದು ಹೀಗೆ: ಚಲನಚಿತ್ರ ಅಥವಾ ಅದರ ಯಾವುದೇ ಭಾಗವು ಸಂವಿಧಾನದ ಪರಿಚ್ಛೇದ 19 ಪ್ರಕಾರ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಿದ್ದಲ್ಲಿ, ವಿದೇಶದೊಡನೆ ಸ್ನೇಹ– ಸಂಬಂಧ ಕದಡುವಂತಿದ್ದರೆ, ಕಾನೂನು ಸುವ್ಯವಸ್ಥೆ, ಸಭ್ಯತೆ, ನೈತಿಕತೆಗೆ ಭಂಗ ತರುವಂತದ್ದಾಗಿದ್ದರೆ ನ್ಯಾಯಾಲಯವನ್ನು ನಿಂದಿಸುವಂತಿದ್ದರೆ ಅಥವಾ ಯಾವುದೇ ಅಪರಾಧ ಕೃತ್ಯವನ್ನು ಪ್ರಚೋದಿಸುವಂತಿದ್ದರೆ ಅಂಥ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರಮಾಣೀಕರಿಸಲಾಗುವುದಿಲ್ಲ ಎನ್ನುತ್ತದೆ. ಸದ್ಯದ ಸೆನ್ಸಾರ್‌ ಮಂಡಳಿಯು ಪಾಲಿಸುವುದು ಇದೇ ನಿಯಮವನ್ನು.
  3. ಈಗ ಉದ್ದೇಶಿತ ತಿದ್ದುಪಡಿ ಮಸೂದೆಯ ಕರಡಿನಲ್ಲಿ ಮೇಲಿರುವ ನಿಯಮಕ್ಕೆ ಒಂದಿಷ್ಟು ಹೊಸ ಅಂಶಗಳನ್ನು ಸೇರಿಸಲಾಗಿದೆ.
  4. ಇದೇ ಕಾಯ್ದೆಯ ಸೆಕ್ಷನ್‌ 6ರ ಉಪ ಸೆಕ್ಷನ್ –1 ರಲ್ಲಿ ಹೊಸ ಸಾಲುಗಳನ್ನು ಸೇರಿಸಲಾಗಿದೆ. ಅದೇನೆಂದರೆ, ‘ಪ್ರದರ್ಶನಕ್ಕಾಗಿ ಪ್ರಮಾಣಿತಗೊಂಡ ಚಿತ್ರದ ವಿರುದ್ಧ ಯಾವುದಾದರೂ ದೂರು ಬಂದರೆ (5ಬಿ(1) ನಿಯಮದ ಉಲ್ಲಂಘಿಸಿದ್ದು ಸಂಬಂಧಿಸಿ) ಕೇಂದ್ರ ಸರ್ಕಾರವು ಈ ಚಿತ್ರವನ್ನು ಮರುಪರಿಶೀಲಿಸುವಂತೆ ಕೋರಿ ಸೆನ್ಸಾರ್‌ ಮಂಡಳಿ ಅಧ್ಯಕ್ಷರಿಗೆ ನಿರ್ದೇಶನ ನೀಡಬಹುದು.
  5. ಚಿತ್ರ ಬಿಡುಗಡೆ ಆದ ನಂತರ ಅದರ ವಸ್ತುವಿನ ಮೇಲೆ ಹಿತಾಸಕ್ತಿ ಗುಂಪುಗಳು ಪರ–ವಿರೋಧ ಅಭಿಪ್ರಾಯ ವ್ಯಕ್ತಪಡಿಸುವುದು, ಕೆಲವು ಭಾಗಗಳನ್ನು ಕತ್ತರಿಸಲು ಆಗ್ರಹಿಸುವುದು, ಕೆಲವೊಮ್ಮೆ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವುದು ನಡೆದೇ ಇದೆ. ಇದನ್ನೆಲ್ಲಾ ಗಮನಿಸಿ ‘ಸೂಪರ್‌ ಸೆನ್ಸಾರ್‌’ ವ್ಯವಸ್ಥೆಯೊಂದನ್ನು ತರಲು ಮುಂದಾಗಿದೆ. ಈ ನಿಯಮ ಪ್ರಕಾರ ಚಿತ್ರವೊಂದರ ಮೇಲೆ ಯಾವುದೇ ದೂರು ಅಥವಾ ಆಕ್ಷೇಪವನ್ನು ಬಂದಲ್ಲಿ ಆ ಚಿತ್ರದ ಬಿಡುಗಡೆ ತಡೆಯುವ ಪ್ರದರ್ಶನವನ್ನು ಕೇಂದ್ರ ಸರ್ಕಾರವೇ ಪರಿಣಾಮಕಾರಿಯಾಗಿ ನಿಷೇಧಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
  6. ಈ ನಿಯಮ ಪ್ರಕಾರ ಕೇಂದ್ರ ಸರ್ಕಾರವು ತನಗೆ ಬೇಕಾದಂತೆ ಚಿತ್ರದ ವಸ್ತು/ ಸನ್ನಿವೇಶವನ್ನು ಕತ್ತರಿಸುವ ಅಧಿಕಾರವನ್ನು ಹೊಂದಿರಲಿದೆ. ಇದು ಮುಂದೆ ಈ ಕ್ಷೇತ್ರದ ವೃತ್ತಿಪರರಿಗಿಂತ ರಾಜಕೀಯ ವ್ಯವಸ್ಥೆಯ ಪ್ರವೇಶಕ್ಕೆ ಬಾಗಿಲು ತೆರೆದಂತಾಗಲಿದೆ ಎಂಬುದು ಸಿನಿರಂಗದವರ ಅಳಲು. ನಿರ್ದೇಶಕನ ಪರಿಕಲ್ಪನೆಯನ್ನು ಅಭಿವ್ಯಕ್ತಿಯನ್ನು ಪೂರ್ಣ ನಿರೂಪಿಸಲು ಹೊಸ ಕಾಯ್ದೆ ಅಡ್ಡಿ ಆಗಬಹುದು ಎಂಬುದು ಈ ಕ್ಷೇತ್ರದವರ ಅಳಲು.
  7. ಹಾಗೆಂದು ಒಳ್ಳೆಯ ಅಂಶಗಳು ಇಲ್ಲವೆಂದೇನಲ್ಲ. ಪೈರಸಿ ವಿರುದ್ಧ ತೀವ್ರ ಸಮರ ಸಾರಿದೆ. ಚಿತ್ರದ ನಕಲು ಮಾಡಿದ ಆರೋಪ ಸಾಬೀತಾದರೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಒಂದು ಸಿನಿಮಾದ ಪ್ರಮಾಣೀಕರಣದ ಅವಧಿ 10 ವರ್ಷಗಳವರೆಗೆ ಎಂದು ನಿಗದಿ ಮಾಡಲಾಗಿದೆ. ಮರುಬಿಡುಗಡೆ ಮಾಡಬೇಕಾದರೆ ಮತ್ತೆ ಸೆನ್ಸಾರ್‌ ಮಾಡಬೇಕು. ಚಿತ್ರವು ಎಲ್ಲ ‘ಅಗ್ನಿ ಪರೀಕ್ಷೆ’ಗಳನ್ನು ದಾಟಿ ಬರುವುದರಿಂದ ಮುಂದೆ ಪ್ರದರ್ಶನದ ವೇಳೆ ಯಾವುದೇ ಅಡ್ಡಿ ವ್ಯಕ್ತವಾಗದು ಎಂಬ ಅಭಿಪ್ರಾಯವೂ ಕೇಳಿಬಂದಿದೆ.
  8. ಪ್ರಮಾಣ ಪತ್ರದ ವರ್ಗೀಕರಣ: ಸದ್ಯ ಯು, ಎ ಅಥವಾ ಯು/ಎ (ಅನಿರ್ಬಂಧಿತ– ವಯಸ್ಕರು ಮಾತ್ರ ನೋಡಬಹುದಾದ) ಎಂಬ ವರ್ಗೀಕೃತ ಪ್ರಮಾಣ ಪತ್ರ ಸಿಗುತ್ತಿತ್ತು. ಮುಂದೆ ವೀಕ್ಷಕರ ವಯೋಮಾನಕ್ಕನುಗುಣವಾಗಿ, ಯು / ಎ, 7+, ಯು / ಎ 13+ ಮತ್ತು ಯು / ಎ 16+ ವರ್ಗೀಕರಿಸಿ ಪ್ರಮಾಣಪತ್ರ ನೀಡಲಾಗುವುದು ಎಂದು ಕಾಯ್ದೆ ಹೇಳಿದೆ.
  9. ಪೈರಸಿಗೆ ಶಿಕ್ಷೆ 1952ರ ಕಾಯ್ದೆಯಲ್ಲಿ ಇರಲಿಲ್ಲ. ಈಗಿನ ಕರಡಿನಲ್ಲಿ ಇದೆ. 10 ವರ್ಷಕ್ಕೊಮ್ಮೆ ಚಿತ್ರದ ಮರು ಪ್ರಮಾಣೀಕರಣ ಅನ್ನುವುದನ್ನು ತರುವುದರಿಂದ ನಿರ್ಮಾಪಕರಿಗೆ ಮತ್ತೊಂದಿಷ್ಟು ರಾಯಧನ ಸಿಗುತ್ತದೆ. ನಿರ್ಮಾಪಕ ಬದುಕುತ್ತಾನೆ. ವಿಡಿಯೊ ಮಾಫಿಯಾವನ್ನು ತಡೆಗಟ್ಟಬಹುದು. ಈ ದೃಷ್ಟಿಯಲ್ಲಿ ಈ ಕಾಯ್ದೆ ಒಳ್ಳೆಯದೇ.
  10. ಇನ್ನು ಸಿನಿಮಾ ಪ್ರಮಾಣೀಕರಣ ವರ್ಗೀಕರವನ್ನು (ಯು/ಎ/ 16+… ಇತ್ಯಾದಿ) ಇದನ್ನು ಸದ್ಯದ ಡಿಜಿಟಲ್‌ ವೀಕ್ಷಣಾ ವ್ಯವಸ್ಥೆಯಲ್ಲಿ ಹೇಗೆ ನಿಯಂತ್ರಿಸುತ್ತೀರಿ? ಗ್ಯಾಜೆಟ್‌ಗಳಲ್ಲಿ ನೋಡುವವರ ವಯಸ್ಸನ್ನು ಹೇಗೆ ಗುರುತಿಸಿ ನಿಯಂತ್ರಿಸುತ್ತೀರಿ?
  11. ಒಂದು ಕಥಾ ವಸ್ತುವಲ್ಲಿ ಇರುವ ಸತ್ಯಾಂಶವನ್ನು ಸ್ವೀಕರಿಸಲು ಸರ್ಕಾರಕ್ಕೆ ಭಯ ಏಕೆ? ಅಭಿವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಿಸುವ ಯಾವ ಪ್ರಯತ್ನಗಳೂ ಪ್ರಪಂಚದಲ್ಲಿ ಯಶಸ್ವಿ ಆಗಿಲ್ಲ.

 

ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ಯತ್ನ; ಕಲೆಗೆ ಮಾರಕ, ಸರ್ವಾಧಿಕಾರಕ್ಕೆ ಪೂರಕ:

ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಪ್ರಸ್ತಾವವು ಸಿನಿಮಾ ಮಾಧ್ಯಮ ವನ್ನು ನಿಯಂತ್ರಿಸುವ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಮೊಟಕುಗೊಳಿಸುವ ಪ್ರಯತ್ನದಂತಿದೆ. ಉದ್ದೇಶಿತ ತಿದ್ದುಪಡಿಯಿಂದಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಾಮುಖ್ಯ ಕಳೆದುಕೊಂಡು, ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ರಾಜಕಾರಣ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳಿವೆ. ಚಲನಚಿತ್ರವೊಂದು ಸಾರ್ವಜನಿಕ ಪ್ರದರ್ಶನ ಕಾಣಲು ಅಗತ್ಯವಾದ ಪ್ರಮಾಣಪತ್ರವನ್ನು ಪ್ರಸ್ತುತ ಸಿಬಿಎಫ್‌ಸಿ ನೀಡುತ್ತಿದೆ. ಮಂಡಳಿಯ ನಿರ್ಧಾರ ಒಪ್ಪಿಗೆಯಾಗದಿದ್ದಲ್ಲಿ ಮರುಪರಿಶೀಲನಾ ಸಮಿತಿಗೆ, ಅಂತಿಮವಾಗಿ ನ್ಯಾಯಾಲಯದ ಮೊರೆಹೋಗಲು ನಿರ್ಮಾಪಕರಿಗೆ ಅವಕಾಶವಿದೆ.

 

  1. ಈ ವ್ಯವಸ್ಥೆಯನ್ನು ಬದಲಿಸುವ ಉದ್ದೇಶವನ್ನು ಸಿನಿಮಾಟೊಗ್ರಫಿ ಕಾಯ್ದೆಯ ತಿದ್ದುಪಡಿ ಪ್ರಸ್ತಾವ ಒಳಗೊಂಡಿದೆ. ಪ್ರಮಾಣಪತ್ರ ಪಡೆದ ಸಿನಿಮಾದ ವಿರುದ್ಧ ಆಕ್ಷೇಪಗಳು ವ್ಯಕ್ತವಾದಲ್ಲಿ ಸರ್ಕಾರವೇ ಮಧ್ಯಪ್ರವೇಶಿಸಿ, ಸಿಬಿಎಫ್‌ಸಿಗೆ ತನ್ನ ನಿರ್ಧಾರವನ್ನು ಮರುಪರಿಶೀಲಿಸು ವಂತೆ ಆದೇಶಿಸಲು ಅವಕಾಶ ದೊರೆಯಲಿದೆ. ಸಿನಿಮಾ ತೆರೆಕಾಣುವಲ್ಲಿ ಸಿಬಿಎಫ್‌ಸಿ ಪ್ರಮಾಣಪತ್ರದ್ದು ಅಂತಿಮಪಾತ್ರವೇ ಹೊರತು, ಸರ್ಕಾರದ್ದಲ್ಲ ಎನ್ನುವುದನ್ನು ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿವೆ. ಸಿಬಿಎಫ್‌ಸಿ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ 1991ರಲ್ಲಿ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.
  2. ಆ ಆದೇಶವನ್ನು ಅಪ್ರಸ್ತುತಗೊಳಿಸಿ, ‘ಸೂಪರ್‌ ಸೆನ್ಸಾರ್‌’ ಆಗಲು ಸರ್ಕಾರ ಹೊರಟಿದೆ. ತಜ್ಞರ ಸಮಿತಿ ಗಳ ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾಗಿ ನೇರವಾಗಿ ಆಡಳಿತಯಂತ್ರವೇ ಮೂಗು ತೂರಿಸುವ ಕ್ರಮ ಸಿನಿಮಾ ಮಾಧ್ಯಮದ ಹಿತಾಸಕ್ತಿಗೆ ಒಳ್ಳೆಯದಲ್ಲ, ಸಂವಿಧಾನದ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಹೊತ್ತಿರುವ ಸರ್ಕಾರದ ವರ್ಚಸ್ಸಿಗೂ ತಕ್ಕುದಾದುದಲ್ಲ. ಉದ್ದೇಶಿತ ತಿದ್ದುಪಡಿಗಳು ಅನುಷ್ಠಾನಕ್ಕೆ ಬಂದಲ್ಲಿ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಹಲ್ಲು ಕಿತ್ತ ಹಾವಿನಂತಾಗಲಿದೆ. ಸರ್ಕಾರದ ಆದೇಶಗಳನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಮನೋಭಾವವನ್ನು ಮಸೂದೆಯ ಕರಡಿ ನಲ್ಲಿರುವ ಅಂಶಗಳು ಸ್ಪಷ್ಟವಾಗಿ ಪ್ರತಿಫಲಿಸುತ್ತಿವೆ.
  3. ಇತ್ತೀಚಿನ ವರ್ಷಗಳಲ್ಲಿ, ಸರ್ಕಾರ ಹಾಗೂ ಸರ್ಕಾರದ ಬೆಂಬಲಿಗರು ಸಿನಿಮಾಗಳನ್ನು ಹತ್ತಿಕ್ಕಲು ಆಡಳಿತಯಂತ್ರ ಬಳಸಿಕೊಂಡಿರುವ ಉದಾಹರಣೆ ಗಳಿವೆ.
    1. ‘ಸರ್ಕಾರ್‌’ ತಮಿಳು ಸಿನಿಮಾ.
    2. ಹಿಂದಿಯ ‘ಪದ್ಮಾವತ್‌’ ಸಿನಿಮಾ.
    3. ‘ಉಡ್ತಾ ಪಂಜಾಬ್‌’ ಇತ್ಯಾದಿಗಳು.

 

  1. ಇಂಥ ಪ್ರತಿಭಟನೆಗಳ ಸಂದರ್ಭದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಕಾನೂನುಬದ್ಧಗೊಳಿಸಲು ಕಾರಣವಾಗುವ ಅಂಶಗಳು ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪಡಿ ಮಸೂದೆಯ ಕರಡುವಿನಲ್ಲಿವೆ. ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಉಂಟಾಗುವ ಸಂಗತಿಗಳನ್ನು ಹೊಂದಿರುವ ಚಲನಚಿತ್ರಗಳನ್ನು ಅಥವಾ ಯಾವುದೇ ಕಲಾಕೃತಿಯನ್ನು ನಿರ್ಬಂಧಿಸುವ ಅವಕಾಶ ಈಗಾಗಲೇ ಕಾನೂನಿನಲ್ಲಿದೆ. ಆ ನಿಯಮಗಳನ್ನು ಸರ್ಕಾರ ಇನ್ನಷ್ಟು ಬಲಪಡಿಸಬಹುದು. ಆದರೆ, ಮನೋವಿಕಾಸ ಮತ್ತು ಮನರಂಜನೆಯ ಉದ್ದೇಶವನ್ನು ಹೊಂದಿರುವ ಸಿನಿಮಾದಂಥ ಸೃಜನಶೀಲ ಮಾಧ್ಯಮವನ್ನು ಕಣ್ಗಾವಲಿಗೆ ಒಳಪಡಿಸುವ ಕ್ರಮ ಅನಗತ್ಯವಾದುದು.
  2. ಹತ್ತು ವರ್ಷಗಳಿಗೊಮ್ಮೆ ಸಿನಿಮಾ ಪ್ರಮಾಣೀಕರಣವನ್ನು ನವೀಕರಿಸಬೇಕು ಎನ್ನುವ ಪ್ರಸ್ತಾಪವೂ ಗೊಂದಲಗಳಿಗೆ ಎಡೆಮಾಡಿಕೊಡುವಂತಿದೆ. ಬದಲಾದ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಕಳೆದ ದಶಕಗಳಲ್ಲಿ ತೆರೆಕಂಡಿರುವ ಸಿನಿಮಾಗಳನ್ನು ಒರೆಗೆ ಹಚ್ಚುವ ಕ್ರಮ ಹೊಸ ವಿವಾದಗಳಿಗೆ ಆಸ್ಪದ ಕಲ್ಪಿಸುವಂತಹದ್ದು, ಭಾರತೀಯ ಚಲನಚಿತ್ರ ಪರಂಪರೆಯನ್ನೇ ಬುಡಮೇಲು ಮಾಡುವಂತಹದ್ದು.
  3. ಭಾರತದಂತಹ ಸ್ವತಂತ್ರ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ದೇಶದಲ್ಲಿ ಸಿನಿಮಾಗಳನ್ನು ಸೆನ್ಸಾರ್‌ಗೆ ಒಳಪಡಿಸುವ ವ್ಯವಸ್ಥೆಯೇ ಸರಿಯಲ್ಲ ಎನ್ನುವ ವಾದಗಳಿವೆ. ಕಿರುತೆರೆಗಿಲ್ಲದ ಸೆನ್ಸಾರ್‌ ವ್ಯವಸ್ಥೆಯು ಸಿನಿಮಾಕ್ಕಿರುವುದು ವಿಚಿತ್ರವಾಗಿದೆ. ಡಿಜಿಟಲ್‌ ಜಗತ್ತಿನಲ್ಲಿ ಎಲ್ಲ ಬಗೆಯ ದೃಶ್ಯಸರಕು ತುಂಬಿ ತುಳುಕು ತ್ತಿರುವಾಗ ಸಿನಿಮಾಕ್ಕೆ ಅಂಕುಶಗಳನ್ನು ಹೆಚ್ಚಿಸುತ್ತಿರುವುದು ಅರ್ಥಹೀನ ಹಾಗೂ ಸೃಜನಶೀಲ ಕಲಾಪ್ರಕಾರವನ್ನು ಸರ್ಕಾರದ ಹಿಡಿತದಲ್ಲಿರಿಸಿಕೊಳ್ಳುವ ಹುನ್ನಾರ. ವ್ಯಾಪಾರಿ ಸಿನಿಮಾಗಳಿಗೆ ಪರ್ಯಾಯವಾಗಿ, ಸಾಮಾಜಿಕ ಬಿಕ್ಕಟ್ಟುಗಳಿಗೆ ಸೃಜನಶೀಲ ಸ್ಪಂದನದ ರೂಪದಲ್ಲಿ ಸಿನಿಮಾಗಳನ್ನು ನಿರ್ಮಿಸುವ ನಿರ್ದೇಶಕ– ನಿರ್ಮಾಪಕರು ಇತ್ತೀಚಿನ ವರ್ಷಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
  4. ಭಿನ್ನ ಧ್ವನಿಯ ಪರ್ಯಾಯ ಸಿನಿಮಾಗಳನ್ನು ರಾಷ್ಟ್ರಪ್ರಶಸ್ತಿಗಳಿಂದ ಹೊರಗಿಟ್ಟು, ಮನರಂಜನೆಯನ್ನೇ ಪ್ರಮುಖ ಉದ್ದೇಶವಾಗಿಸಿಕೊಂಡ ವ್ಯಾಪಾರಿ ಚಿತ್ರಗಳು ಹಾಗೂ ಸರ್ಕಾರದ ನೀತಿ ಗಳಿಗೆ ಪೂರಕವಾದ ಒಲವನ್ನು ಹೊಂದಿರುವ ಸಿನಿಮಾ ನಿರ್ಮಾತೃಗಳಿಗೆ ಪ್ರಶಸ್ತಿ, ಪುರಸ್ಕಾರ ನೀಡುವ ಬದಲಾವಣೆ ಶುರುವಾಗಿದೆ. ಈ ಮೂಲಕ, ಪರ್ಯಾಯ ಸಿನಿಮಾಗಳ ನಿರ್ಮಾತೃಗಳನ್ನು ನಿರುತ್ಸಾಹ ಗೊಳಿಸಲಾಗುತ್ತಿದೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕಾರಣದ ಹಸ್ತಕ್ಷೇಪದಿಂದಾಗಿ, ಸಿನಿಮಾ ಮಾಧ್ಯಮದ ಸೌಂದರ್ಯಪ್ರಜ್ಞೆ ಹಾಗೂ ಸಾಧ್ಯತೆಗಳನ್ನು ಗುರುತಿಸಿ ಗೌರವಿಸುವ ರಾಷ್ಟ್ರಪ್ರಶಸ್ತಿಗಳ ಮೂಲ ಉದ್ದೇಶವೇ ಮೂಲೆಗುಂಪಾಗಿದೆ. ಪ್ರಸ್ತುತ ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವು ಭಿನ್ನ ಸಿನಿಮಾಗಳ ತಯಾರಕರಿಗೆ ಮೂಗುದಾರ ತೊಡಿಸುವ ಮತ್ತೊಂದು ಪ್ರಯತ್ನವಾಗಿದ್ದು, ತನ್ನ ಮೂಗಿನ ನೇರಕ್ಕೆ ಸಿನಿಮಾ ತಯಾರಿಸುವವರಿಗೆ ಮಾತ್ರ ಅವಕಾಶ ಎನ್ನುವುದನ್ನು ಸರ್ಕಾರ ಪರೋಕ್ಷವಾಗಿ ಹೇಳಲು ಹೊರಟಂತಿದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಸಲಿಂಗ ವಿವಾಹದ ಕುರಿತು ಹೈಕೋರ್ಟ್‌ನಲ್ಲಿ ಹೊಸ ಅರ್ಜಿಯ ಸಲ್ಲಿಕೆ:


(Fresh plea filed in HC on same-sex marriage)

 ಸಂದರ್ಭ:

ವಿದೇಶಿ ವಿವಾಹ ಕಾಯ್ದೆ ಮತ್ತು ವಿಶೇಷ ವಿವಾಹ ಕಾಯ್ದೆಯಡಿ ಎಲ್ಲಾ ಸಲಿಂಗ, ವಿಲಕ್ಷಣ ಅಥವಾ ಭಿನ್ನಲಿಂಗೀಯರ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಹೊಸ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

 

ಏನಿದು ಪ್ರಕರಣ?

ವಿವಾಹಿತ ಸಲಿಂಗಕಾಮಿ ದಂಪತಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಒಬ್ಬರು ‘ಸಾಗರೋತ್ತರ ಭಾರತೀಯ ನಾಗರಿಕ’ (OCI) ಕಾರ್ಡ್ ಹೊಂದಿರುವವರು ಮತ್ತು ಅವರ ಪಾಲುದಾರ ಯು.ಎಸ್.ಎ  ಪ್ರಜೆ.

ದಂಪತಿಗಳು ಒಸಿಐ ಸ್ಥಾನಮಾನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ, ಆದರೆ ‘ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ’ ಸ್ಥಾನಮಾನಕ್ಕಾಗಿ ಅವರ ಅರ್ಜಿ ಮತ್ತು ಮದುವೆ ಪ್ರಮಾಣೀಕರಣದ ಕೋರಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂಬ ಆತಂಕವಿದೆ.

OCI ಸ್ಥಾನಮಾನ ಪಡೆಯಲು ಮದುವೆ ಪ್ರಮಾಣೀಕರಣವು ಅಗತ್ಯವಾದ ಸ್ಥಿತಿಯಾಗಿದೆ.

 

ಅರ್ಜಿಯಲ್ಲಿ ಮಾಡಲಾದ ಬೇಡಿಕೆಗಳು?

  1. ಪೌರತ್ವ ಕಾಯ್ದೆ, 1955, ಭಿನ್ನಲಿಂಗೀಯ, ಸಲಿಂಗ ಅಥವಾ ಸಲಿಂಗಕಾಮಿ ಸಂಗಾತಿಗಳ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ. ಆದ್ದರಿಂದ ‘ಸಾಗರೋತ್ತರ ಭಾರತೀಯ ನಾಗರಿಕ’ (ಒಸಿಐ) ನನ್ನು ಮದುವೆಯಾದ ವ್ಯಕ್ತಿ, ಅವರ ವಿವಾಹ ನೋಂದಾಯಿಸಲ್ಪಟ್ಟಿದೆ ಮತ್ತು ಮದುವೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಮುಂದುವರೆದಿದೆ, ಒಸಿಐ ಕಾರ್ಡ್ ಪಡೆಯಲು ‘ಸಂಗಾತಿಯಾಗಿ’ ಅರ್ಜಿ ಸಲ್ಲಿಸಲು ಅರ್ಹರೆಂದು ಘೋಷಿಸಬೇಕು.
  2. ಅರ್ಜಿಯು ನ್ಯೂಯಾರ್ಕ್ ನಲ್ಲಿನ ಭಾರತದ ಕಾನ್ಸುಲೇಟ್ ಜನರಲ್ ಗೆ ನಿಷೇಧದ ಸ್ವರೂಪದಲ್ಲಿ ನಿರ್ದೇಶನ ನೀಡುವಂತೆ ಪ್ರಾರ್ಥಿಸಿದೆ, ಇದರಲ್ಲಿ, ಒಸಿಐ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ಸಾಗರೋತ್ತರ ಭಾರತೀಯ ನಾಗರಿಕನ ಸಂಗಾತಿಯನ್ನು ಸಲಿಂಗ ಮದುವೆ ಅಥವಾ ಭಿನ್ನಲಿಂಗೀಯರಲ್ಲದ ವಿವಾಹದ ಆಧಾರದ ಮೇಲೆ ಅನರ್ಹ ಎಂದು ಘೋಷಿಸುವುದಂತೆ ರಾಯಭಾರ ಕಚೇರಿಯನ್ನು ತಡೆಯುತ್ತದೆ.
  3. ‘ವಿದೇಶಿ ವಿವಾಹ ಕಾಯ್ದೆ’ ವಿಷಯದ ಕುರಿತು ಅರ್ಜಿಯಲ್ಲಿ ನಿರ್ದೇಶನ ಕೋರಿದೆ ಇದರಲ್ಲಿ 1969 ರ ವಿದೇಶಿ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹವನ್ನು ಗುರುತಿಸಲಾಗುವುದಿಲ್ಲ.ಅದಕ್ಕಾಗಿ ಇದನ್ನು ಭಾರತದ ಸಂವಿಧಾನದ ವಿಧಿ 14 ಮತ್ತು ವಿಧಿ 21 ರ ಉಲ್ಲಂಘನೆ ಮಾಡುತ್ತದೆ ಎಂದು ಘೋಷಿಸಬೇಕು.
  4. 1954 ರ ವಿಶೇಷ ವಿವಾಹ ಕಾಯ್ದೆಗೆ ಸಂಬಂಧಿಸಿದಂತೆ ಇದೇ ರೀತಿಯ ಪ್ರಾರ್ಥನೆ ಮಾಡಲಾಗಿದೆ, ಅದು “ಈ ಕೃತ್ಯದಲ್ಲಿ ಸಲಿಂಗ ವಿವಾಹವನ್ನು ಒಳಗೊಂಡಿಲ್ಲ, ಏಕೆಂದರೆ ಇದು ಭಾರತದ ಸಂವಿಧಾನದ 14, 15, 19 ಮತ್ತು 21 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ” ಎಂದು ಹೇಳುತ್ತದೆ.

 

ಭಾರತದಲ್ಲಿ ಪ್ರಸ್ತುತ ಸನ್ನಿವೇಶ:

  1. ಭಾರತದಲ್ಲಿ, ಪ್ರಸ್ತುತ, ಇಬ್ಬರು ಸಲಿಂಗ ವ್ಯಕ್ತಿಗಳ ನಡುವಿನ ವಿವಾಹದ ಅಂಗೀಕಾರವನ್ನು ಯಾವುದೇ ಕ್ರೋಡೀಕರಿಸದ ವೈಯಕ್ತಿಕ ಕಾನೂನುಗಳಲ್ಲಿ ಅಥವಾ ಯಾವುದೇ ಕ್ರೋಡೀಕರಿಸಿದ ಶಾಸನಬದ್ಧ ಕಾನೂನುಗಳಲ್ಲಿ ಗುರುತಿಸಲಾಗಿಲ್ಲ ಅಥವಾ ಸ್ವೀಕರಿಸಲಾಗುವುದಿಲ್ಲ.
  2. ನವತೇಜ್ ಸಿಂಗ್ ಜೌಹರ್ VS ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿದೆ ಎಂಬ ಜನಪ್ರಿಯ ಕಲ್ಪನೆಗೆ ವಿರುದ್ಧವಾಗಿ ಕೇಂದ್ರವು ಹೇಳಿಕೆ ನೀಡಿದೆ, ಆ ಪ್ರಕರಣದಲ್ಲಿ ನ್ಯಾಯಾಲಯವು ಒಂದು ನಿರ್ದಿಷ್ಟ ಮಾನವ ನಡವಳಿಕೆಯ ಸೀಮಿತ ಅರ್ಥದಲ್ಲಿ ಮಾತ್ರ ಸಲಿಂಗಕಾಮವನ್ನು ಅಪರಾಧವಲ್ಲವೆಂದು ಘೋಷಿಸಿತ್ತು, ಇದು ಐಪಿಸಿಯ ಸೆಕ್ಷನ್ 377 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

ಪುಟ್ಟಸ್ವಾಮಿ ತೀರ್ಪು (ಗೌಪ್ಯತೆ ವಿಷಯ) ಮತ್ತು ‘ನವತೇಜ್ ಜೋಹರ್’ ಪ್ರಕರಣದಲ್ಲಿ (ಐಪಿಸಿಯ ಸೆಕ್ಷನ್ 377 ಅನ್ನು ಅನುರ್ಜಿತಗೊಳಿಸಲಾಗಿದೆ) ಅವಲೋಕನಗಳು ಸಲಿಂಗ ವಿವಾಹವನ್ನು ಗುರುತಿಸುವ ಮೂಲಭೂತ ಹಕ್ಕನ್ನು ನೀಡುವುದಿಲ್ಲ.

 

1954 ರ ‘ವಿಶೇಷ ವಿವಾಹ ಕಾಯ್ದೆ’ ಎಂದರೇನು?

ವಿಶೇಷ ವಿವಾಹ ಕಾಯ್ದೆ (Special Marriage Act – SMA) ಯಾವುದೇ ಧಾರ್ಮಿಕ ಪದ್ಧತಿಗಳು ಅಥವಾ ಸಂಪ್ರದಾಯಗಳಿಲ್ಲದೆ ಮದುವೆಗಳನ್ನು ನಡೆಸಲು ಅನುಮತಿಸುವ ಕಾನೂನು.

  1. ವಿವಿಧ ಜಾತಿ ಅಥವಾ ಧರ್ಮ ಅಥವಾ ರಾಜ್ಯಗಳಿಗೆ ಸೇರಿದ ಜನರು ‘ವಿಶೇಷ ಮದುವೆ ಕಾಯ್ದೆ’ (ಎಸ್‌ಎಂಎ) ಅಡಿಯಲ್ಲಿ ಮದುವೆಯಾಗುತ್ತಾರೆ, ಮತ್ತು ಈ ಮದುವೆಯನ್ನು ನೋಂದಣಿ ಮೂಲಕ ಮಾಡಲಾಗುತ್ತದೆ.
  2. ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಬದಿಗಿಟ್ಟು ನೋಂದಣಿ ಮಾತ್ರ ಅಗತ್ಯವಿರುವ ಅಂತರ್-ಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸುವುದು ಮತ್ತು ಮದುವೆಯನ್ನು ಜಾತ್ಯತೀತ ಸಂಸ್ಥೆಯಾಗಿ ಸ್ಥಾಪಿಸುವುದು ಆಗಿದೆ.

 

‘ವಿಶೇಷ ಮದುವೆ ಕಾಯ್ದೆ’ ಅಡಿಯಲ್ಲಿ ಕಾರ್ಯವಿಧಾನ:

ವಿಶೇಷ ವಿವಾಹ ಕಾಯ್ದೆ (ಎಸ್‌ಎಂಎ) ಅಡಿಯಲ್ಲಿ, ವಿವಾಹವನ್ನು ನೋಂದಾಯಿಸಲು ವಿವರವಾದ ಕಾರ್ಯವಿಧಾನವನ್ನು ಸೂಚಿಸಲಾಗಿದೆ.

  1. ಮದುವೆಗೆ ಅಪೇಕ್ಷಿಸುವ ಪಕ್ಷಗಳಲ್ಲಿ ಒಬ್ಬರು ಜಿಲ್ಲೆಯ ಮದುವೆ ಅಧಿಕಾರಿಗೆ ನೋಟಿಸ್ ನೀಡುವ ಅವಶ್ಯಕತೆಯಿದೆ, ಮತ್ತು ಇದಕ್ಕಾಗಿ, ಮದುವೆಗೆ ಅರ್ಜಿ ಸಲ್ಲಿಸುವ ಪಕ್ಷವು ನೋಟಿಸ್ ನೀಡಿದ ದಿನಾಂಕಕ್ಕಿಂತ ಮುಂಚಿತವಾಗಿ ಮೂವತ್ತು ದಿನಗಳಿಗಿಂತ ಹೆಚ್ಚು ಕಾಲ ಜಿಲ್ಲೆಯಲ್ಲಿ ವಾಸವಿರಬೇಕು / ನೆಲೆಸಿರಬೇಕು.
  2. ಮದುವೆಗಾಗಿ ನೀಡಲಾದ ಮಾಹಿತಿಯನ್ನು ಮದುವೆ ಅಧಿಕಾರಿಯಿಂದ ಮದುವೆ ಮಾಹಿತಿ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುತ್ತದೆ ಮತ್ತು ಅಂತಹ ಪ್ರತಿಯೊಂದು ಸೂಚನೆಯ ಪ್ರತಿಯನ್ನು ಅವರ ಕಚೇರಿಯಲ್ಲಿ ಎದ್ದುಕಾಣುವ ಸ್ಪಷ್ಟವಾದ ಸ್ಥಳದಲ್ಲಿ ವಿವಾಹದ ಮಾಹಿತಿಯನ್ನು ಮದುವೆ ಅಧಿಕಾರಿಯು ಪ್ರಕಟಿಸುತ್ತಾನೆ.
  3. ಮದುವೆ ಅಧಿಕಾರಿ ಪ್ರಕಟಿಸಿದ, ಮದುವೆಯ ಮಾಹಿತಿಯಲ್ಲಿ ಪಕ್ಷಗಳ ಹೆಸರುಗಳು, ಹುಟ್ಟಿದ ದಿನಾಂಕ, ವಯಸ್ಸು, ಉದ್ಯೋಗ, ಪೋಷಕರ ಹೆಸರುಗಳು ಮತ್ತು ವಿವರಗಳು, ವಿಳಾಸ, ಪಿನ್ ಕೋಡ್, ಗುರುತಿನ ಮಾಹಿತಿ, ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
  4. ಅದರ ನಂತರ, ಕಾಯಿದೆಯಡಿ ಒದಗಿಸಲಾದ ವಿವಿಧ ಆಧಾರದ ಮೇಲೆ ಯಾರಾದರೂ ಮದುವೆಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಬಹುದು. 30 ದಿನಗಳ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದಿದ್ದರೆ, ಮದುವೆಯನ್ನು ತೀರ್ಮಾನಿಸಬಹುದು. ಒಬ್ಬ ವ್ಯಕ್ತಿಯು ಮದುವೆಗೆ ಆಕ್ಷೇಪಣೆ ಸಲ್ಲಿಸಿದರೆ, ಮದುವೆ ಅಧಿಕಾರಿ ಅದನ್ನು ಪರಿಶೀಲಿಸುತ್ತಾನೆ ಮತ್ತು ನಂತರ ಅವನು ಮದುವೆಗೆ ಸಂಬಂಧಿಸಿದಂತೆ ವಿವಾಹವನ್ನು ನೆರವೇರಿಸಬೇಕೋ ಅಥವಾ ಬೇಡವೋ ಎಂದು ನಿರ್ಧಾರ ತೆಗೆದುಕೊಳ್ಳುತ್ತಾನೆ.

 

ಟೀಕೆಗಳು:

  1. ಕುಟುಂಬ ದಬ್ಬಾಳಿಕೆಯ ತಂತ್ರಕ್ಕೆ ಗುರಿಯಾಗಬಹುದು.
  2. ಗೌಪ್ಯತೆ ಉಲ್ಲಂಘನೆ.
  3. ಧಾರ್ಮಿಕ ಮತಾಂತರಕ್ಕೆ ಕಾರಣವಾಗಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ನದಿ ತೀರದಲ್ಲಿರುವ ನಗರಗಳು ಮತ್ತು ನದಿ ಸಂರಕ್ಷಣಾ ಯೋಜನೆಗಳ ಸಂಯೋಜನೆ.


(Cities on river banks to incorporate river conservation plans)

 ಸಂದರ್ಭ:

ಇತ್ತೀಚೆಗೆ, ಗಂಗಾ ನದಿ ಸಂರಕ್ಷಣೆ ಕುರಿತು ನೀತಿ ದಾಖಲೆಯನ್ನು ಗಂಗಾ ನದಿ ಸ್ವಚ್ಛತೆದಾಗಿನ ರಾಷ್ಟ್ರೀಯ ಅಭಿಯಾನವು (National Mission for Clean Ganga- NMCG) ಬಿಡುಗಡೆ ಮಾಡಿದೆ.

 

ನೀತಿಯ ಪ್ರಮುಖ ಅಂಶಗಳು:

  1. ಗಂಗಾ ನದಿಯ ದಡದಲ್ಲಿರುವ ನಗರಗಳು ತಮ್ಮ ಮುಖ್ಯ ಯೋಜನೆಗಳನ್ನು ಅಥವಾ ಮಾಸ್ಟರ್ ಪ್ಲಾನ್ ಗಳನ್ನು ಸಿದ್ಧಪಡಿಸುವಾಗ ‘ನದಿ ಸಂರಕ್ಷಣಾ ಯೋಜನೆ’ಗಳನ್ನು ಸಂಯೋಜಿಸಬೇಕು.
  2. ಈ ‘ನದಿ-ಸೂಕ್ಷ್ಮ’ ಯೋಜನೆಗಳು ಪ್ರಾಯೋಗಿಕವಾಗಿರಬೇಕು ಮತ್ತು ಅವುಗಳನ್ನು ಸಿದ್ಧಪಡಿಸುವಾಗ ಅತಿಕ್ರಮಣ ಮತ್ತು ಭೂ ಮಾಲೀಕತ್ವದ ಪ್ರಶ್ನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
  3. ಪುನರ್ವಸತಿ ಕಾರ್ಯತಂತ್ರದ ಹೊರತಾಗಿ, ಅತಿಕ್ರಮಣ ಸಂಸ್ಥೆಗಳಿಗೆ ಪರ್ಯಾಯ ಜೀವನೋಪಾಯ ಆಯ್ಕೆಗಳಿಗೆ ಒತ್ತು ನೀಡಿ ವ್ಯವಸ್ಥಿತ ಪುನರ್ವಸತಿ ಯೋಜನೆಯನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ.
  4. ಮಾಸ್ಟರ್ ಪ್ಲ್ಯಾನ್ ‘ನಿರ್ದಿಷ್ಟ ತಂತ್ರಜ್ಞಾನಗಳನ್ನು’ ಕಡ್ಡಾಯಗೊಳಿಸಬಾರದು, ಆದರೆ ನದಿ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು (ಪೂರೈಕೆದಾರರನ್ನು ಹೆಸರಿಸದೆ) ಬಳಸಲು ಅನುಕೂಲವಾಗುವಂತೆ ‘ಸೂಕ್ತ ವಾತಾವರಣ’ವನ್ನು ರಚಿಸಬಹುದು.

 

ಅನ್ವಯಿಸುವಿಕೆ:

ಪ್ರಸ್ತುತ ಗಂಗಾ ನದಿಯ ಮುಖ್ಯ ಹೊಳೆಯಲ್ಲಿರುವ ನಗರಗಳಿಗೆ ಈ ಶಿಫಾರಸುಗಳನ್ನು ನೀಡಲಾಗಿದೆ. ಈ ನಗರಗಳಲ್ಲಿ 5 ರಾಜ್ಯಗಳ 97 ನಗರಗಳು ಸೇರಿವೆ – ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ.

ರಾಷ್ಟ್ರೀಯ ಸ್ವಚ್ಚ ಗಂಗಾ ಅಭಿಯಾನದ (NMCG)ಬಗ್ಗೆ:

NMCGಯನ್ನು, 2011 ರ ಆಗಸ್ಟ್ 12 ರಂದು ಸೊಸೈಟಿ ಗಳ ನೋಂದಣಿ ಕಾಯ್ದೆ 1860 ರ ಅಡಿಯಲ್ಲಿ ಸೊಸೈಟಿಯಾಗಿ ನೋಂದಾಯಿಸಲಾಗಿದೆ.

ಇದು ಪರಿಸರ (ಸಂರಕ್ಷಣೆ) ಕಾಯ್ದೆ (EPA), 1986 ರ ನಿಬಂಧನೆಗಳ ಅಡಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರದ (NGRBA) ಅನುಷ್ಠಾನಗೊಳಿಸುವ ಅಂಗವಾಗಿ ಕಾರ್ಯನಿರ್ವಹಿಸಿತು.

 

ದಯವಿಟ್ಟು ಗಮನಿಸಿ: ‘ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ’ (NGRBA) ವನ್ನು, ‘ರಾಷ್ಟ್ರೀಯ ಗಂಗಾ ಕೌನ್ಸಿಲ್’ (National Ganga Council – NGC) ಎಂದೂ ಕರೆಯಲ್ಪಡುವ ‘ಗಂಗಾ ನದಿಯ ಪುನರ್ಯೌವನಗೊಳಿಸುವಿಕೆ, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಷ್ಟ್ರೀಯ ಮಂಡಳಿ’ (National Council for Rejuvenation, Protection and Management of River Ganga) ಯ ರಚನೆ ಮಾಡಿದ ನಂತರ, 2016 ರ ಅಕ್ಟೋಬರ್ 7 ರಂದು ‘ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ’ (NGRBA) ವನ್ನು ವಿಸರ್ಜಿಸಲಾಯಿತು.

ಅಥವಾ

‘ರಾಷ್ಟ್ರೀಯ ಗಂಗಾ ಕೌನ್ಸಿಲ್’ ಎಂದೂ ಕರೆಯಲ್ಪಡುವ ‘ಗಂಗಾ ನದಿಯ ಪುನರ್ಯೌವನಗೊಳಿಸುವಿಕೆ, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಷ್ಟ್ರೀಯ ಮಂಡಳಿ’ ರಚನೆಯಾದ ನಂತರ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರವನ್ನು ಅಕ್ಟೋಬರ್ 7, 2016 ರಂದು ವಿಸರ್ಜಿಸಲಾಯಿತು.

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ಅರಣ್ಯ ಹಕ್ಕುಗಳ ಅನುಷ್ಠಾನದ ಪರಿಶೀಲನೆ:


(Review implementation of forest rights)

 ಸಂದರ್ಭ:

ಪರಿಸರ ಸಚಿವಾಲಯ (ಎಂಒಇಎಫ್‌ಸಿಸಿ) ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ (ಎಂಟಿಎ)ಗಳು ಜಂಟಿಯಾಗಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿವೆ. ಈ ಸುತ್ತೋಲೆಯಲ್ಲಿ, ಅರಣ್ಯ ಹಕ್ಕುಗಳ ಕಾಯ್ದೆ, 2006 ರ ಅನುಷ್ಠಾನದ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.

ಸುತ್ತೋಲೆಗಳಲ್ಲಿ, ಕಾಯಿದೆಯ ಅನುಷ್ಠಾನವನ್ನು ಪರಿಶೀಲಿಸಲು ಮತ್ತು ಪ್ರಕ್ರಿಯೆಯನ್ನು ಸರಾಗಗೊಳಿಸುವ ಅಗತ್ಯವಿರುವ ಯಾವುದೇ ಸ್ಪಷ್ಟೀಕರಣಗಳ ಕುರಿತು ಭಾರತ ಸರ್ಕಾರಕ್ಕೆ ತಿಳಿಸಲು ರಾಜ್ಯಗಳಿಗೆ ತಿಳಿಸಲಾಗಿದೆ.

 

ಕಳವಳಗಳು:

  1. ಈ ಕಾಯ್ದೆ ಜಾರಿಗೆ ಬಂದ ನಂತರ, ಅರಣ್ಯವಾಸಿಗಳ ಹಕ್ಕುಗಳನ್ನು ಗುರುತಿಸುವ ಪ್ರಕ್ರಿಯೆಯು ಸಾಕಷ್ಟು ಸಮಯದ ನಂತರವೂ ಪೂರ್ಣಗೊಂಡಿಲ್ಲ.
  2. ಕಾಯಿದೆಯ ಸೆಕ್ಷನ್ 5 ರ ಅನುಷ್ಠಾನವೂ ಕಳವಳಕಾರಿ ಸಂಗತಿಯಾಗಿದೆ. ಸೆಕ್ಷನ್ 5, ವನ್ಯಜೀವಿಗಳು, ಕಾಡುಗಳು ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸುವಂತಹ ಮಾನ್ಯತೆ ಪಡೆದ ಅರಣ್ಯವಾಸಿಗಳ ಕರ್ತವ್ಯಗಳು; ಜಲಾನಯನ ಪ್ರದೇಶಗಳು, ಜಲಮೂಲಗಳು ಮತ್ತು ಇತರ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಸಮರ್ಪಕ ರಕ್ಷಣೆ ನೀಡುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ.
  3. ಕಾಯಿದೆಯ ಸೆಕ್ಷನ್ 3 (1) (i) ಅಡಿಯಲ್ಲಿ, ಯಾವುದೇ ಸಮುದಾಯ ಅರಣ್ಯ ಸಂಪನ್ಮೂಲವನ್ನು ಸಂರಕ್ಷಿಸುವ, ಪುನರುತ್ಪಾದಿಸುವ, ಸಂರಕ್ಷಿಸುವ ಅಥವಾ ನಿರ್ವಹಿಸುವ ಹಕ್ಕುಗಳ ಬಗ್ಗೆ ನಿಬಂಧನೆಗಳನ್ನು ಮಾಡಲಾಗಿದೆ, ಆದರೆ ಈ ನಿಬಂಧನೆಗಳ ಅನುಷ್ಠಾನವು ಸಾಕಷ್ಟು ಸಡಿಲವಾಗಿದೆ.

 

ಅರಣ್ಯ ಹಕ್ಕುಗಳ ಕಾಯ್ದೆಯ ಕುರಿತು:

2006 ರಲ್ಲಿ ಅಂಗೀಕರಿಸಲ್ಪಟ್ಟ ಈ ಕಾಯಿದೆಯು ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಗಳಿಗೆ ಕಾನೂನು ಮಾನ್ಯತೆಯನ್ನು ನೀಡುತ್ತದೆ.

ಕಾಯಿದೆಯಡಿ ನೀಡಲಾದ ಹಕ್ಕುಗಳು:

ಮಾಲೀಕತ್ವದ ಹಕ್ಕುಗಳು – ಡಿಸೆಂಬರ್ 13, 2005 ರವರೆಗೆ ಅರಣ್ಯವಾಸಿಗಳು ಅಥವಾ ಬುಡಕಟ್ಟು ಜನರು ಕೃಷಿ ಮಾಡುತ್ತಿರುವ ಭೂಮಿಯು 4 ಹೆಕ್ಟೇರ್ ಮೀರಬಾರದು; ಆ ದಿನಾಂಕದವರೆಗೆ ಕೃಷಿಯನ್ನು ಮಾಡುತ್ತಿರುವ ಸಂಬಂಧಪಟ್ಟ ಕುಟುಂಬಕ್ಕೆ ಭೂ ಮಾಲೀಕತ್ವದ ಹಕ್ಕುಗಳನ್ನು ನೀಡಲಾಗುವುದು. ಅಂದರೆ, ಬೇರೆ ಯಾವುದೇ ಹೊಸ ಭೂಮಿಯನ್ನು ಒದಗಿಸಲಾಗುವುದಿಲ್ಲ.

ಬಳಕೆ ಹಕ್ಕುಗಳು – ಅರಣ್ಯವಾಸಿಗಳು ಅಥವಾ ಬುಡಕಟ್ಟು ಜನಾಂಗದವರಿಗೆ, ಕಿರು ಅರಣ್ಯ ಉತ್ಪನ್ನಗಳು (ಮಾಲೀಕತ್ವ ಸೇರಿದಂತೆ), ದನಗಳನ್ನು ಮೇಯಿಸಲು ಹುಲ್ಲುಗಾವಲು ಪ್ರದೇಶ ಮತ್ತು ಗ್ರಾಮೀಣ ಮಾರ್ಗಗಳ ಬಗ್ಗೆ ಹಕ್ಕುಗಳು ಲಭ್ಯವಿರುತ್ತವೆ.

ಪರಿಹಾರ ಮತ್ತು ಅಭಿವೃದ್ಧಿ ಹಕ್ಕುಗಳು – ಅರಣ್ಯ ನಿವಾಸಿಗಳು ಅಥವಾ ಬುಡಕಟ್ಟು ಜನಾಂಗದವರ ಅಕ್ರಮ ಸ್ಥಳಾಂತರಿಸುವಿಕೆ ಅಥವಾ ಬಲವಂತದ ಸ್ಥಳಾಂತರದ ಸಂದರ್ಭದಲ್ಲಿ ಪುನರ್ವಸತಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಮತ್ತು ಅರಣ್ಯ ಸಂರಕ್ಷಣೆಯ ನಿರ್ಬಂಧಗಳಿಗೆ ಒಳಪಟ್ಟು ಮೂಲಭೂತ ಸೌಲಭ್ಯಗಳ ಹಕ್ಕನ್ನು ಹೊಂದಿರುತ್ತಾರೆ.

ಅರಣ್ಯ ನಿರ್ವಹಣಾ ಹಕ್ಕುಗಳು – ಕಾಡುಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವ ಹಕ್ಕುಗಳಿವೆ.

 

ಅರ್ಹತಾ ಮಾನದಂಡಗಳು:

ಅರಣ್ಯ ಹಕ್ಕುಗಳ ಕಾಯ್ದೆ (FRA) ಯ ಸೆಕ್ಷನ್ 2 (ಸಿ) ಪ್ರಕಾರ, ಅರಣ್ಯ ವಾಸದ ಪರಿಶಿಷ್ಟ ಪಂಗಡ (Forest Dwelling Scheduled Tribe – FDST) ವಾಗಿ ಅರ್ಹತೆ ಪಡೆಯಲು ಮತ್ತು FRA ಅಡಿಯಲ್ಲಿ ಹಕ್ಕುಗಳನ್ನು ಗುರುತಿಸಲು ಅರ್ಹರಾಗಲು, ಅರ್ಜಿದಾರನು ಈ ಕೆಳಗಿನ ಮೂರು ಷರತ್ತುಗಳನ್ನು  ಪೂರ್ಣಗೊಳಿಸಬೇಕಾದುದು ಅಗತ್ಯವಾಗಿದೆ.

 

ವೈಯಕ್ತಿಕ ಅಥವಾ ಸಮುದಾಯ;

  1. ಹಕ್ಕು ಪಡೆಯುವ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ಸದಸ್ಯರಾಗಿರಬೇಕು;
  2. 13-12-2005ರ ಮೊದಲು ಮೂಲತಃ ಅರಣ್ಯ ಅಥವಾ ಅರಣ್ಯ ಭೂಮಿಯ ನಿವಾಸಿಯಾಗಿರಬೇಕು;
  3. ಅವರು ನಿಜವಾಗಿಯೂ ಜೀವನೋಪಾಯಕ್ಕಾಗಿ ಅರಣ್ಯ ಅಥವಾ ಅರಣ್ಯ ಭೂಮಿಯನ್ನು ಅವಲಂಬಿಸಿರಬೇಕು.

ಮತ್ತು, ಇತರ ಸಾಂಪ್ರದಾಯಿಕ ಅರಣ್ಯವಾಸಿ (Other Traditional Forest Dweller -OTFD) ಯಾಗಿ ಅರ್ಹತೆ ಪಡೆಯಲು ಮತ್ತು ಎಫ್‌ಆರ್‌ಎ ಅಡಿಯಲ್ಲಿ ಹಕ್ಕುಗಳನ್ನು ಗುರುತಿಸಲು ಅರ್ಹರಾಗಲು, ಈ ಕೆಳಗಿನ ಎರಡು ಷರತ್ತುಗಳನ್ನು ಪೂರೈಸಬೇಕು:

ವೈಯಕ್ತಿಕ ಅಥವಾ ಸಮುದಾಯ;

  1. ಡಿಸೆಂಬರ್ 13, 2005 ರ ಮೊದಲು ಕನಿಷ್ಠ ಮೂರು ತಲೆಮಾರುಗಳವರೆಗೆ (75 ವರ್ಷಗಳು) ಅರಣ್ಯ ಅಥವಾ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವವರಾಗಿರಬೇಕು.
  2. ಜೀವನೋಪಾಯಕ್ಕಾಗಿ ನಿಜವಾಗಿಯೂ ಅರಣ್ಯ ಅಥವಾ ಅರಣ್ಯ ಭೂಮಿಯನ್ನು ಅವಲಂಬಿಸಿರಬೇಕು.

 

ಹಕ್ಕುಗಳಿಗೆ ಮಾನ್ಯತೆ ನೀಡುವ ವಿಧಾನ:

  1. ಗ್ರಾಮ ಸಭೆಯಿಂದ ನಿರ್ಣಯವನ್ನು ಅಂಗೀಕರಿಸಲಾಗುವುದು,ಇದರಲ್ಲಿ,ಯಾವ ಸಂಪನ್ಮೂಲಗಳ ಮೇಲೆ ಯಾರ ಹಕ್ಕುಗಳನ್ನು ಗುರುತಿಸಬೇಕು ಎಂಬುದರ ಕುರಿತು ಶಿಫಾರಸುಗಳನ್ನು ಮಾಡಲಾಗುತ್ತದೆ.
  2. ಅದರ ನಂತರ, ಪ್ರಸ್ತಾವನೆಯನ್ನು ಉಪವಿಭಾಗ (ಅಥವಾ ತಾಲ್ಲೂಕು) ಮಟ್ಟದಲ್ಲಿ ಮತ್ತು ನಂತರ ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಅನುಮೋದಿಸಲಾಗುತ್ತದೆ.

ಈ ಸ್ಕ್ರೀನಿಂಗ್ ಸಮಿತಿಗಳು ಅರಣ್ಯ, ಕಂದಾಯ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳ ಮೂವರು ಸರ್ಕಾರಿ ಅಧಿಕಾರಿಗಳು ಮತ್ತು ಆ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಯ ಚುನಾಯಿತ ಮೂವರು ಸದಸ್ಯರನ್ನು ಒಳಗೊಂಡಿವೆ. ಈ ಸಮಿತಿಗಳು ಅರಣ್ಯ ಹಕ್ಕುಗಳ ಮಾನ್ಯತೆಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಸಹ ಕೇಳುತ್ತವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಮಲೇಷ್ಯಾದಲ್ಲಿ ಬಿಳಿ ಧ್ವಜ ಅಭಿಯಾನ:

(The white flag campaign in Malaysia)

  1.  ಮಲೇಷ್ಯಾದಲ್ಲಿ, ಕೆಲವು ಕಡಿಮೆ-ಆದಾಯದ ಕುಟುಂಬಗಳು “ಬಿಳಿ ಧ್ವಜ ಅಭಿಯಾನ” ಅಥವಾ # benderaputi (white flag) ಆಂದೋಲನದ ಭಾಗವಾಗಿ ತಮ್ಮ ಮನೆಗಳ ಮೇಲೆ ಬಿಳಿ ಧ್ವಜಗಳನ್ನು ಬೀಸಲು ಪ್ರಾರಂಭಿಸಿವೆ.
  2. ಕೋವಿಡ್ -19 ರ ಕಾರಣದಿಂದಾಗಿ ಲಾಕ್ ಡೌನ್ ಮಾಡುವ ಸಮಯದಲ್ಲಿ ಎದುರಿಸಿದ ತಮ್ಮ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅರಿವು ಮೂಡಿಸಲು ಈ ಜನರು ಈ ಅಭಿಯಾನವನ್ನು ನಡೆಸುತ್ತಿದ್ದಾರೆ.
  3. ಕಳೆದ ವಾರ ಪ್ರಾರಂಭಿಸಲಾದ ಆಂದೋಲನದ ಭಾಗವಾಗಿ, ಆಹಾರದ ಕೊರತೆಯಿರುವ ಅಥವಾ ಬೇರೆ ಯಾವುದೇ ರೀತಿಯ ಸಹಾಯದ ಅಗತ್ಯವಿರುವ ಕುಟುಂಬಗಳು, ಇದನ್ನು ಸಂಕೇತಿಸಲು, ಬಿಳಿ ಧ್ವಜವನ್ನು ಹಾರಿಸಲು ಅಥವಾ ಬಿಳಿ ಬಟ್ಟೆಯ ತುಂಡನ್ನು ತಮ್ಮ ಮನೆಗಳ ಹೊರಗೆ ಇರಿಸಲು ಪ್ರೋತ್ಸಾಹಿಸಲಾಗುತ್ತದೆ.
  4. ಬಿಳಿ ಧ್ವಜವನ್ನು ಗುರುತಿಸುವ ಮೂಲಕ, ಅವರ ನೆರೆಹೊರೆಯವರು ಮತ್ತು ಒಳ್ಳೆಯ ವ್ಯಕ್ತಿಗಳು ಸಹಾಯಕ್ಕಾಗಿ ಅವರನ್ನು ತಲುಪಬಹುದು ಎಂಬ ಕಲ್ಪನೆ ಹೊಂದಲಾಗಿದೆ.

 

ಗ್ರ್ಯಾಂಡ್ ಇಥಿಯೋಪಿಯನ್ ನವೋದಯ ಅಣೆಕಟ್ಟು:

(Grand Ethiopian Renaissance Dam)

  1.  ಸ್ಥಳ: ಬೆನಿಶಾಂಗುಲ್-ಗುಮುಜ್ ಪ್ರದೇಶ (Benishangul-Gumuz), ಇಥಿಯೋಪಿಯಾ.
  2. ಈ ಮೊದಲು ಇದನ್ನು ‘ಮಿಲೇನಿಯಮ್ ಡ್ಯಾಮ್’ ಎಂದು ಕರೆಯಲಾಗುತ್ತಿತ್ತು. ಇಥಿಯೋಪಿಯಾದ ಬೆನಿಶಾಂಗುಲ್-ಗುಮುಜ್ ಪ್ರದೇಶದ ಬ್ಲೂ ನೈಲ್ ನದಿಯಲ್ಲಿ ಅಣೆಕಟ್ಟು ನಿರ್ಮಾಣ ಹಂತದಲ್ಲಿದೆ ಮತ್ತು ಇದು ಸುಡಾನ್‌ನಿಂದ ಪೂರ್ವಕ್ಕೆ 40 ಕಿ.ಮೀ ದೂರದಲ್ಲಿದೆ.
  3. ಇದು ಪೂರ್ಣಗೊಂಡ ನಂತರ, ಇದು ಆಫ್ರಿಕಾದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಲಿದೆ.

ರಿವೆಂಜ್ ಟೂರಿಸಂ ಎಂದರೇನು?

(Revenge Tourism) 

 ರಿವೆಂಜ್ ಟೂರಿಸಂ ಭಾರತೀಯರನ್ನು ಬಾಧಿಸುತ್ತಿದೆ.

  1.  ‘ರಿವೆಂಜ್ ಟೂರಿಸಂ’(ಪ್ರತೀಕಾರ ಪ್ರಯಾಣ) ಎಂಬ ಪದವನ್ನು 1980 ರ ದಶಕದಿಂದ ಚೀನಾದ ‘ಸೇಡು ಖರ್ಚು’(Revenge Spending) ಎಂಬ ಪರಿಕಲ್ಪನೆಯಿಂದ ಪಡೆಯಲಾಗಿದೆ. ಚೀನಾದಲ್ಲಿ ಆಗ ಇದ್ದಂತಹ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಜನರಲ್ಲಿ ‘ಖರ್ಚು’ ಮಾಡುವ ಸ್ಫೋಟಕ ಪ್ರವೃತ್ತಿ ಕಂಡುಬಂದಿತ್ತು, ಇದಕ್ಕೆ ‘ಸೇಡು ಖರ್ಚು’ ಎಂದು ಹೆಸರಿಸಲಾಯಿತು.
  2. ಪ್ರಸ್ತುತ, ಹಲವಾರು ತಿಂಗಳ ಲಾಕ್‌ಡೌನ್ ನಂತರ ಪ್ರಯಾಣದ ವ್ಯಗ್ರ ಬೇಡಿಕೆಯನ್ನು (angsty bottled-up demand) ವ್ಯಕ್ತಪಡಿಸಲು ಇದನ್ನು ಬಳಸಲಾಗುತ್ತದೆ.
  3. ಪ್ರತೀಕಾರದ ಪ್ರಯಾಣ ಅಥವಾ ಸೇಡು ಪ್ರವಾಸೋದ್ಯಮವು ಲಾಕ್‌ಡೌನ್‌ನ ಏಕತಾನತೆಯ ಜೀವನದಿಂದ ಮುಕ್ತವಾಗುವ ಬಯಕೆಯಿಂದ ಹುಟ್ಟಿದೆ. ಇದು ‘ಲಾಕ್‌ಡೌನ್-ಆಯಾಸ’ (lockdown-fatigue) ಎಂಬ ಮತ್ತೊಂದು ವಿದ್ಯಮಾನದ ಉತ್ಪನ್ನವಾಗಿದೆ ಎಂದು ಹೇಳಲಾಗುತ್ತದೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos