Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 30ನೇ ಜೂನ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂಸದೀಯ ಸವಲತ್ತುಗಳು.

2. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ (ONORC).

3. ಕೇಂದ್ರ ಸರ್ಕಾರವು ಮೊಡೆರ್ನಾ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಅನುಮತಿ ನೀಡಿದೆ.

4. ಒಪೆಕ್ ಸಂಘಟನೆ ಮತ್ತು ಹೆಚ್ಚುತ್ತಿರುವ ತೈಲ ಬೆಲೆಗಳು.

5. ಶ್ರೀಲಂಕಾವು,ಭಾರತದೊಂದಿಗೆ $ 1 ಬಿಲಿಯನ್ ಕರೆನ್ಸಿ ವಿನಿಮಯ ಒಪ್ಪಂದವನ್ನು ಮಾಡಿಕೊಂಡಿದೆ.

6. ಯುರೋಪಿಯನ್ ಒಕ್ಕೂಟದ ಹೊಸ ‘ಲಸಿಕೆ ಪಾಸ್‌ಪೋರ್ಟ್’ ಕಾರ್ಯಕ್ರಮ ಯಾವುದು, ಮತ್ತು ಅದು ಕೋವಿಶೀಲ್ಡ್ ಅನ್ನು ಏಕೆ ಒಳಗೊಂಡಿಲ್ಲ?

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಹಿಮನದಿ ಸರೋವರಗಳ ಅಟ್ಲಾಸ್.

2. ಕಡಖನಾಥ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಸಂಸದೀಯ ಸವಲತ್ತುಗಳು:


(Parliamentary Privileges)

ಸಂದರ್ಭ:

ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಮಿತಿ ಸಭೆಯ ನಡಾವಳಿಗಳ ಬಗ್ಗೆ “ಸುಳ್ಳು ಮತ್ತು  ಹಾನಿಕಾರಕ” ವರದಿ ಮಾಡಿದ್ದಕ್ಕಾಗಿ ‘ಟೈಮ್ಸ್ ನೌ’ ಸುದ್ದಿ ಚಾನೆಲ್ ವಿರುದ್ಧ ‘ಪ್ರಿವಿಲೇಜ್ ಮೋಷನ್’ ಮಂಡಿಸಿದ್ದಾರೆ.

 

‘ಸಂಸದೀಯ ಸವಲತ್ತುಗಳು’ ಯಾವುವು?

ಸಂಸದೀಯ ಸವಲತ್ತುಗಳು (Parliamentary Privileges), ಮೂಲತಃ ಸದನದ ಸದಸ್ಯರು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಅನುಭವಿಸುವ ಹಕ್ಕುಗಳು ಮತ್ತು ವಿನಾಯಿತಿಗಳನ್ನು ಉಲ್ಲೇಖಿಸುತ್ತವೆ. ಈ ಹಕ್ಕುಗಳ ಅಡಿಯಲ್ಲಿ, ಸದನದ ಸದಸ್ಯರ ವಿರುದ್ಧ ಅಥವಾ ಅವರ ಶಾಸಕಾಂಗ ಕಟ್ಟುಪಾಡುಗಳನ್ನು ಪೂರೈಸುವ ಸಂದರ್ಭದಲ್ಲಿ ನೀಡಲಾದ ಹೇಳಿಕೆಗಳ ವಿರುದ್ಧ ಯಾವುದೇ ನಾಗರಿಕ ಅಥವಾ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಅಂದರೆ ಅವರಿಗೆ ನಾಗರಿಕ ಅಥವಾ ಅಪರಾಧ ಹೊಣೆಗಾರಿಕೆಯ ವಿರುದ್ಧ ರಕ್ಷಣೆ ನೀಡಲಾಗುತ್ತದೆ, ಇದರಿಂದಾಗಿ ಅವರು “ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು”.

 

ಸಂಸದೀಯ ಸವಲತ್ತುಗಳಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು:

 1. ಸಂವಿಧಾನದ 105 ನೇ ಪರಿಚ್ಛೇದದ ಅಡಿಯಲ್ಲಿ, ಭಾರತೀಯ ಸಂಸತ್ತು, ಅದರ ಸದಸ್ಯರು ಮತ್ತು ಸಮಿತಿಗಳ ಸವಲತ್ತುಗಳನ್ನು ಉಲ್ಲೇಖಿಸಲಾಗಿದೆ. ಸಂವಿಧಾನದ 105 ನೇ ವಿಧಿಯು ಎರಡು ಸವಲತ್ತುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಅವುಗಳೆಂದರೆ: ಸಂಸತ್ತಿನಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅದರ ನಡಾವಳಿಗಳನ್ನು ಪ್ರಕಟಿಸುವ ಹಕ್ಕು.
 2. 1908 ರ ಸಿವಿಲ್ ಪ್ರೊಸೀಜರ್ ಸಂಹಿತೆಯಲ್ಲಿ, ಸಂವಿಧಾನದಲ್ಲಿ ನಿರ್ದಿಷ್ಟಪಡಿಸಿದ ಸವಲತ್ತುಗಳ ಹೊರತಾಗಿ, ಸದನಗಳ ಸಭೆ ಅಥವಾ ಅದರ ಸಮಿತಿಯ ಸಭೆಯ ಸಮಯದಲ್ಲಿ ಅದು ಪ್ರಾರಂಭವಾಗುವ ನಲವತ್ತು ದಿನಗಳ ಮೊದಲು ಮತ್ತು ಮುಕ್ತಾಯಗೊಂಡ ನಲವತ್ತು ದಿನಗಳ ನಂತರ ನಾಗರಿಕ ಕಾರ್ಯವಿಧಾನದಡಿಯಲ್ಲಿ ಸದಸ್ಯರನ್ನು ಬಂಧಿಸುವುದರಿಂದ ಮತ್ತು ಸುಪರ್ದಿಗೆ ಪಡೆಯುವುದರಿಂದ ಸ್ವಾತಂತ್ರ್ಯಮತ್ತು ಅವಕಾಶವನ್ನು ಕಲ್ಪಿಸಲಾಗಿದೆ.
 3. ಅದೇ ರೀತಿ ಸಂವಿಧಾನದ 194 ನೇ ವಿಧಿಯು ರಾಜ್ಯ ಶಾಸಕಾಂಗಗಳು, ಅದರ ಸದಸ್ಯರು ಮತ್ತು ಸಮಿತಿಗಳು ಪಡೆದ ಅಧಿಕಾರಗಳು, ಸವಲತ್ತುಗಳು ಮತ್ತು ವಿನಾಯಿತಿಗಳನ್ನು ಕುರಿತು ಹೇಳುತ್ತದೆ.

ಸವಲತ್ತು ಉಲ್ಲಂಘನೆ ಎಂದರೇನು?

ಸವಲತ್ತು ಉಲ್ಲಂಘನೆಯ ನಿರ್ಣಯ ಮತ್ತು ಅದು ಆಕರ್ಷಿಸುವ ದಂಡದ ಬಗ್ಗೆ ಸ್ಪಷ್ಟ, ಅಧಿಸೂಚಿತ ನಿಯಮಗಳಿಲ್ಲ.

 1. ಸಾಮಾನ್ಯವಾಗಿ, ಸಂಸತ್ತಿನ ಸದನದ ಕಾರ್ಯ ಕಲಾಪಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಅಡ್ಡಿಯುಂಟುಮಾಡುವ ಅಥವಾ ತಡೆಯೊಡ್ಡುವ ಅಥವಾ ಸಂಸತ್ತಿನ ಸದಸ್ಯ ಅಥವಾ ಅಧಿಕಾರಿಯು ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುವ ಯಾವುದೇ ಕಾರ್ಯವನ್ನು ಸವಲತ್ತು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
 2. ಸದನ, ಅದರ ಸಮಿತಿಗಳು ಅಥವಾ ಸದಸ್ಯರ ಭಾಷಣಗಳು, ಸ್ಪೀಕರ್‌ನ ಕರ್ತವ್ಯಗಳನ್ನು ಪಾಲಿಸುವಲ್ಲಿ ಅವರ ನಿಷ್ಪಕ್ಷಪಾತವಾದ ಪಾತ್ರವನ್ನು ಪ್ರಶ್ನಿಸುವುದು, ಸದನದಲ್ಲಿ ಸದಸ್ಯರ ನಡವಳಿಕೆಯನ್ನು ಖಂಡಿಸುವುದು, ಸದನದ ನಡಾವಳಿಗಳ ಕುರಿತು ಸುಳ್ಳು ಪ್ರಕಟಣೆ ನೀಡಿ, ಮಾನ ಹಾನಿ ಉಂಟುಮಾಡುವುದು ಇತ್ಯಾದಿಗಳು.
 3. ಯಾವುದೇ ಸದನದ ಯಾವುದೇ ಸದಸ್ಯರಿಂದ ಸವಲತ್ತು ಉಲ್ಲಂಘನೆ ಮಾಡಿದ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಚಲನೆಯ (ಹಕ್ಕುಚ್ಯುತಿ) ರೂಪದಲ್ಲಿ ನೋಟಿಸ್ ಸಲ್ಲಿಸಬಹುದು.

 

ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರ ಪಾತ್ರ:

ಸವಲತ್ತು ಉಲ್ಲಂಘನೆಯ ಚಲನೆಯನ್ನು ಪರಿಶೀಲಿಸಲು, ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಮೊದಲ ಹಂತ.

ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಅವರು, ಸವಲತ್ತುಗಳ ಚಲನೆಯನ್ನು ಸ್ವತಃ ನಿರ್ಧರಿಸಬಹುದು ಅಥವಾ ಅದನ್ನು ಸಂಸತ್ತಿನ ಸವಲತ್ತುಗಳ ಸಮಿತಿಗೆ ಉಲ್ಲೇಖಿಸಬಹುದು.

 1. ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಸಂಬಂಧಿತ ನಿಯಮಗಳ ಅಡಿಯಲ್ಲಿ ಚಲನೆಯನ್ನು ಒಪ್ಪಿದರೆ, ಸಂಬಂಧಪಟ್ಟ ಸದಸ್ಯರಿಗೆ ಚಲನೆಯನ್ನು ಉಲ್ಲೇಖಿಸಿ ಸಂಕ್ಷಿಪ್ತ ಹೇಳಿಕೆ ನೀಡಲು ಅವಕಾಶ ನೀಡಲಾಗುತ್ತದೆ.

 

ಅನ್ವಯಿಸುವಿಕೆ:

 1. ಸಂವಿಧಾನವು, ಸಂಸತ್ತಿನ ಸದನ ಅಥವಾ ಅದರ ಯಾವುದೇ ಸಮಿತಿಯ ವಿಚಾರಣೆಯಲ್ಲಿ ಮಾತನಾಡಲು ಮತ್ತು ಭಾಗವಹಿಸಲು ಅರ್ಹರಾಗಿರುವ ಎಲ್ಲ ವ್ಯಕ್ತಿಗಳಿಗೆ ಸಂಸತ್ತಿನ ಸವಲತ್ತುಗಳನ್ನು ನೀಡಿದೆ. ಈ ಸದಸ್ಯರಲ್ಲಿ ಭಾರತದ ಅಟಾರ್ನಿ ಜನರಲ್ ಮತ್ತು ಕೇಂದ್ರ ಸಚಿವರು ಸೇರಿದ್ದಾರೆ.
 2. ಆದಾಗ್ಯೂ,ರಾಷ್ಟ್ರಪತಿಗಳು, ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದರೂ, ಸಂಸತ್ತಿನ ಸವಲತ್ತುಗಳನ್ನು ಅನುಭವಿಸುವುದಿಲ್ಲ. ಸಂವಿಧಾನದ 361 ನೇ ವಿಧಿಯು ರಾಷ್ಟ್ರಪತಿಗಳಿಗೆ ಸವಲತ್ತುಗಳನ್ನು ಒದಗಿಸುತ್ತದೆ.

 

ಶಾಸಕಾಂಗದ ಸವಲತ್ತು ಉಲ್ಲಂಘನೆಯಾಗಿದೆ ಎಂದು ಹೇಳಲಾದ ವಿಷಯಗಳಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು:

 1. ಸದನದಲ್ಲಿ ಸ್ಪೀಕರ್ ಅಥವಾ ಅಧ್ಯಕ್ಷರು ಸವಲತ್ತು ಸಮಿತಿಯನ್ನು ರಚಿಸುತ್ತಾರೆ, ಇದು ಕೆಳಮನೆಯಲ್ಲಿ 15 ಸದಸ್ಯರನ್ನು ಮತ್ತು ಮೇಲ್ಮನೆಯಲ್ಲಿ 11 ಸದಸ್ಯರನ್ನು ಒಳಗೊಂಡಿದೆ.
 2. ಸದನದಲ್ಲಿನ ಪಕ್ಷಗಳ ಸಂಖ್ಯೆಯನ್ನು ಆಧರಿಸಿ ಸಮಿತಿಯ ಸದಸ್ಯರನ್ನು ನಾಮಕರಣ ಮಾಡಲಾಗುತ್ತದೆ.
 3. ನಿರ್ಣಯದ ಕುರಿತ ಮೊದಲ ನಿರ್ಧಾರವನ್ನು ಸ್ಪೀಕರ್ ಅಥವಾ ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ.
 4. ಮೇಲ್ನೋಟಕ್ಕೆ, ಸವಲತ್ತು ಉಲ್ಲಂಘನೆ ಅಥವಾ ತಿರಸ್ಕಾರದ ಸಂದರ್ಭದಲ್ಲಿ, ಸ್ಪೀಕರ್ ಅಥವಾ ಅಧ್ಯಕ್ಷರು ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಈ ವಿಷಯವನ್ನು ಸವಲತ್ತುಗಳ ಸಮಿತಿಗೆ ಉಲ್ಲೇಖಿಸುತ್ತಾರೆ.
 5. ಸಮಿತಿಯು,ಆರೋಪಿತ ವ್ಯಕ್ತಿಯು ನೀಡಿದ ಹೇಳಿಕೆಗಳಿಂದ ರಾಜ್ಯ ಶಾಸಕಾಂಗ ಮತ್ತು ಅದರ ಸದಸ್ಯರ ಅಪಮಾನವಾಗಿದೆಯೇ ಮತ್ತು ಸಾರ್ವಜನಿಕರ ಮುಂದೆ ಅವರ ವ್ಯಕ್ತಿತ್ವವು ಕೆಟ್ಟದಾಗಿ ನಿರೂಪಣೆ ಗೊಂಡಿದೆಯೇ ಎಂದು ಪರಿಶೀಲಿಸುತ್ತದೆ.
 6. ಸಮಿತಿಯು ಅರೆ-ನ್ಯಾಯಾಂಗ ಅಧಿಕಾರವನ್ನು ಹೊಂದಿದೆ ಮತ್ತು ಸಂಬಂಧಪಟ್ಟ ಎಲ್ಲರಿಂದ ಸ್ಪಷ್ಟೀಕರಣವನ್ನು ಪಡೆಯುತ್ತದೆ ಮತ್ತು ವಿಚಾರಣೆಯನ್ನು ನಡೆಸಿದ ನಂತರ, ಅದರ ಸಂಶೋಧನೆಗಳ ಆಧಾರದ ಮೇಲೆ ರಾಜ್ಯ ಶಾಸಕಾಂಗದ ಪರಿಗಣನೆಗೆ ಶಿಫಾರಸುಗಳನ್ನು ಮಾಡುತ್ತದೆ.

 

ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ (ONORC):


(One Nation One Ration Card)

ಸಂದರ್ಭ:

ಇತ್ತೀಚೆಗೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ (One Nation One Ration Card) ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

 ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ (ONORC) ಎಂದರೇನು?

ONORC ಯೋಜನೆಯ ಉದ್ದೇಶವು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013’ (National Food Security Act, 2013) ರ ಅಡಿಯಲ್ಲಿ ದೇಶದ ಯಾವುದೇ ನ್ಯಾಯ ಬೆಲೆ ಅಂಗಡಿಯಿಂದ ಸಬ್ಸಿಡಿ ದರದಲ್ಲಿ ಪಡಿತರ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ.

 1. ಈ ಯೋಜನೆಯನ್ನು 2019 ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಯಿತು.
 2. ಇಲ್ಲಿಯವರೆಗೆ, 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ONORC ಯೋಜನೆಗೆ ಸೇರ್ಪಡೆಗೊಂಡಿದ್ದು, ಸುಮಾರು 69 ಕೋಟಿ NFSA ಫಲಾನುಭವಿಗಳನ್ನು ಒಳಗೊಂಡಿದೆ. ನಾಲ್ಕು ರಾಜ್ಯಗಳು – ಅಸ್ಸಾಂ, ಛತ್ತೀಸಗಡ , ದೆಹಲಿ ಮತ್ತು ಪಶ್ಚಿಮ ಬಂಗಾಳ ಗಳು ಈ ಯೋಜನೆಗೆ ಇನ್ನೂ ಸೇರ್ಪಡೆಯಾಗಿಲ್ಲ.

ಅನುಷ್ಠಾನ:

ಹಳೆಯ ಸಾರ್ವಜನಿಕ ವಿತರಣಾ ವ್ಯವಸ್ಥೆ’ (PDS) ಯಲ್ಲಿ ಸುಧಾರಣೆಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ.

ವಾಸ್ತವವಾಗಿ, ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ರಾಜ್ಯಗಳು ಹೆಚ್ಚುವರಿ ಸಾಲವನ್ನು ತೆಗೆದುಕೊಳ್ಳುವ ಪೂರ್ವಭಾವಿ ಷರತ್ತು ಎಂದು ಕೇಂದ್ರ ಸರ್ಕಾರ  ONORC ಯೋಜನೆಯ ಅನುಷ್ಠಾನವನ್ನು ಸೂಚಿಸಿತ್ತು.

 1. ONORC ಸುಧಾರಣೆಗಳನ್ನು ಜಾರಿಗೆ ತಂದ 17 ರಾಜ್ಯಗಳಿಗೆ 2020-21ರಲ್ಲಿ 37,600 ಕೋಟಿ ರೂ. ಗಳ ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಲಾಯಿತು.

 

ONORC ಹೇಗೆ ಕಾರ್ಯನಿರ್ವಹಿಸುತ್ತದೆ?

 1. ತಂತ್ರಜ್ಞಾನವನ್ನು ಆಧರಿಸಿದ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ (ONORC) ವ್ಯವಸ್ಥೆಯು ಫಲಾನುಭವಿಗಳ ಪಡಿತರ ಚೀಟಿ, ಆಧಾರ್ ಸಂಖ್ಯೆ ಮತ್ತು ಎಲೆಕ್ಟ್ರಾನಿಕ್ ಪಾಯಿಂಟ್ಸ್ ಆಫ್ ಸೇಲ್ (electronic Points of Sale- ePoS) ವಿವರಗಳನ್ನು ಒಳಗೊಂಡಿದೆ.
 2. ಈ ವ್ಯವಸ್ಥೆಯಲ್ಲಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ಸ್ ಆಫ್ ಸೇಲ್ ಸಾಧನಗಳಲ್ಲಿ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಫಲಾನುಭವಿಯನ್ನು ಗುರುತಿಸಲಾಗುತ್ತದೆ.
 3. ಈ ವ್ಯವಸ್ಥೆಯು ಎರಡು ಪೋರ್ಟಲ್‌ಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ, ಅವುಗಳೆಂದರೆ ‘ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (Integrated Management of Public Distribution System: IM-PDS) ಮತ್ತು ‘ಅನ್ನವಿತರನ್’ (Annavitran). ಇವು ಎಲ್ಲಾ ಸಂಬಂಧಿತ ಡೇಟಾವನ್ನು ಈ ಪೋರ್ಟಲ್‌ಗಳಲ್ಲಿ ದಾಖಲು ಮಾಡುತ್ತವೆ.

 

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013:

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) 2013 ಭಾರತ ಸರ್ಕಾರದ ಅಸ್ತಿತ್ವದಲ್ಲಿರುವ ಆಹಾರ ಭದ್ರತಾ ಕಾರ್ಯಕ್ರಮಗಳಿಗೆ ಕಾನೂನು ಪ್ರಾಧಿಕಾರವಾಗಿ ಮಾರ್ಪಟ್ಟಿದೆ.

 1. ಇದರಲ್ಲಿ,‘ಮಧ್ಯಾಹ್ನ ಬಿಸಿಯೂಟ ಯೋಜನೆ’, ‘ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಯೋಜನೆ’ (ICDS) ಮತ್ತು ‘ಸಾರ್ವಜನಿಕ ವಿತರಣಾ ವ್ಯವಸ್ಥೆ’ ಮುಂತಾದ ಕಾರ್ಯಕ್ರಮಗಳು ಸೇರಿವೆ.
 2.  ಕಾಯಿದೆಯಲ್ಲಿ ಹೆರಿಗೆ ಅಥವಾ ಮಾತೃತ್ವ ಹಕ್ಕುಗಳನ್ನು ಗುರುತಿಸಲಾಗಿದೆ.

 

ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕೇಂದ್ರ ಸರ್ಕಾರವು ಮೊಡೆರ್ನಾ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಅನುಮತಿ ನೀಡಿದೆ:


(Govt. Gives nod for Cipla to import Moderna’s vaccine)

ಸಂದರ್ಭ:

ಮುಂಬೈ ಮೂಲದ ಪ್ರಮುಖ ಫಾರ್ಮ ಕಂಪನಿಯಾದ ಸಿಪ್ಲಾ ಕಂಪನಿಗೆ ಮೊಡೆರ್ನಾ ಲಸಿಕೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಭಾರತದ ಔಷಧ ನಿಯಂತ್ರಕರು (Drugs Controller General of India -DCGI)ಒಪ್ಪಿಗೆ ಕೊಟ್ಟಿದ್ದಾರೆ.

ಕೋವಿಡ್‌-19 ವಿರುದ್ಧದ ಲಸಿಕೆ ‘ಮೊಡೆರ್ನಾ’ದ ತುರ್ತು ಬಳಕೆಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ.

 1. ಭಾರತದಲ್ಲಿಯೇ ತಯಾರಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ ಜತೆಗೆ ರಷ್ಯಾದ ಸ್ಪುಟ್ನಿಕ್‌–ವಿ ಈಗ ಲಭ್ಯ ಇವೆ. ಮೊಡೆರ್ನಾ ಈ ಸಾಲಿಗೆ ಸೇರ್ಪಡೆಯಾದ ನಾಲ್ಕನೆಯ ಲಸಿಕೆಯಾಗಿದೆ.

ಮೊಡೆರ್ನಾ ಲಸಿಕೆಯ ಕುರಿತು:

ಈ ಲಸಿಕೆಯನ್ನು ‘ಎಮ್ಆರ್ಎನ್ಎ -1273’ (mRNA-1273) ಹೆಸರಿನಲ್ಲಿ ‘ಮಾಡರ್ನಾ ಟಿಎಕ್ಸ್, ಇಂಕ್’ (Moderna TX, Inc) ತಯಾರಿಸುತ್ತಿದೆ ಮತ್ತು ಇದು ಎರಡು-ಡೋಸ್ ಲಸಿಕೆಯಾಗಿದ್ದು, ಇದನ್ನು 28 ದಿನಗಳ ಮಧ್ಯಂತರದಲ್ಲಿ ನೀಡಲಾಗುತ್ತದೆ.

 

mRNA ಲಸಿಕೆ ಎಂದೂ ಕರೆಯಲ್ಪಡುವ ಮೆಸೆಂಜರ್ RNA ಲಸಿಕೆಯು ಲಸಿಕೆಗಳಿಗೆ ಹೊಸ ತಂತ್ರಜ್ಞಾನ ವೇದಿಕೆಯಾಗಿದೆ.

 1. mRNA ಲಸಿಕೆ ಮಾನವ ಜೀವಕೋಶಗಳಿಗೆ ‘ಪ್ರೋಟೀನ್’ ಅಥವಾ ‘ವೈರಸ್ ಪ್ರೋಟೀನ್‌ನ ಸೂಕ್ಷ್ಮ ತುಣುಕು’ ಅನ್ನು ಸ್ವಯಂ-ಉತ್ಪಾದಿಸಲು ಕಲಿಸುತ್ತದೆ, ಅದು ಮಾನವ ದೇಹದೊಳಗೆ ರೋಗನಿರೋಧಕ ಪ್ರತಿಕ್ರಿಯೆಯನ್ನು ವೇಗವರ್ಧಿಸುತ್ತದೆ.
 2. mRNA ಲಸಿಕೆಗಳ ಪ್ರಯೋಜನವೆಂದರೆ, ಎಲ್ಲಾ ಲಸಿಕೆಗಳಂತೆ, ಈ ಲಸಿಕೆ ಪಡೆಯುವ ಜನರು COVID-19 ಮತ್ತು ಅದರ ಗಂಭೀರ ಪರಿಣಾಮಗಳಿಂದ ಅನಾರೋಗ್ಯಕ್ಕೆ ಒಳಗಾಗದಂತೆ ರಕ್ಷಣೆಯನ್ನು ಪಡೆಯುತ್ತಾರೆ.

 

ಔಷಧಿಗೆ ಅನುಮೋದನೆ ಪಡೆಯುವ ನಿಯಮಿತ ವಿಧಾನ:

ಲಸಿಕೆಗಳು, ಔಷಧಗಳು ಮತ್ತು ರೋಗನಿರ್ಣಯ ಪರೀಕ್ಷೆಗಳು (Diagnostic Tests) ಮತ್ತು ವೈದ್ಯಕೀಯ ಸಾಧನಗಳನ್ನು ರೋಗಿಗಳ ಮೇಲೆ ಪ್ರಯೋಗಿಸುವ ಮೊದಲು ನಿಯಂತ್ರಕ ಪ್ರಾಧಿಕಾರದ ಅನುಮೋದನೆಯನ್ನು ಪಡೆಯಬೇಕು.

 1. ಇದಕ್ಕಾಗಿ ಭಾರತದಲ್ಲಿನ ನಿಯಂತ್ರಕ ಪ್ರಾಧಿಕಾರವೆಂದರೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (Central Drugs Standard Control Organization- CDSCO).
 2. ಪ್ರಯೋಗಗಳಿಂದ ಪಡೆದ ದತ್ತಾಂಶದ ಆಧಾರದ ಮೇಲೆ ಲಸಿಕೆಗಳು ಮತ್ತು ಔಷಧಗಳನ್ನು ಅವುಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಿದ ನಂತರ ಅನುಮೋದಿಸಲಾಗುತ್ತದೆ.

 

ತುರ್ತು ಬಳಕೆ ಅಧಿಕಾರ’ (EUA) ವನ್ನು ಯಾವಾಗ ನೀಡಬಹುದು?

ಯುಎಸ್ ಅಥವಾ ಯುಕೆನಲ್ಲಿನ ನಿಯಂತ್ರಕ ಪ್ರಕ್ರಿಯೆಗಳಂತೆ ಭಾರತದಲ್ಲಿ ‘ತುರ್ತು ಬಳಕೆ ಅಧಿಕಾರ (EUA) ಕ್ಕೆ ಯಾವುದೇ ಅವಕಾಶವಿಲ್ಲ, ಮತ್ತು ಅದನ್ನು ಸಾಧಿಸಲು ಯಾವುದೇ ಸ್ಪಷ್ಟ ಮತ್ತು ಸ್ಥಿರವಾದ ಪ್ರಕ್ರಿಯೆಯಿಲ್ಲ.

 1. ಆದಾಗ್ಯೂ, 2019 ರ ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು’ (New Drugs and Clinical Trials Rules) ಇದರಲ್ಲಿ, ಔಷಧೀಯ ಕಂಪನಿಗಳಿಗೆ ಭಾರತದಲ್ಲಿ ಹೊಸ  ಔಷಧಗಳು ಅಥವಾ ಲಸಿಕೆಗಳ ‘ಕ್ಲಿನಿಕಲ್ ಟ್ರಯಲ್ಸ್’ ಅಥವಾ ಪ್ರಾಯೋಗಿಕ ಪರೀಕ್ಷೆಗಳಿಗೆ ಅನುಮೋದನೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
 2. ಘೋಷಿತ ಆರೋಗ್ಯ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಭಾರತದ ಸಂದರ್ಭದಲ್ಲಿ, ಲಸಿಕಾ ನಿಯಂತ್ರಕರಾದ, ಭಾರತದ ಔಷಧ ಮಹಾ ನಿಯಂತ್ರಕರು (DCGI), ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿರದ ಔಷಧ ಅಥವಾ ಲಸಿಕೆಯನ್ನು ಬಳಕೆಗೆ ಬಿಡುಗಡೆ ಮಾಡಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಬಹುದು.
 3. ಔಷಧಿ ಅಥವಾ ಲಸಿಕೆಗಳು ರೋಗಿಗಳಿಗೆ ಪ್ರಯೋಜನಕಾರಿಯಾಗಬಹುದೆಂದು ಪುರಾವೆಗಳಿದ್ದರೆ, ಆಗ ಔಷಧ ನಿಯಂತ್ರಕರು ‘ತುರ್ತು ಬಳಕೆಯ ದೃಢೀಕರಣವನ್ನು’ನೀಡುವ ಅಧಿಕಾರದಡಿಯಲ್ಲಿ, ಸಂಬಂಧಿತ ವೈದ್ಯಕೀಯ ಉತ್ಪನ್ನವನ್ನು ವ್ಯಾಪಕ ಬಳಕೆಗೆ ಲಭ್ಯವಾಗುವಂತೆ ಅನುಮತಿಸಬಹುದು.

 

ತುರ್ತು ಬಳಕೆಯ ದೃಢಕರಣವನ್ನು ಮಾತ್ರ ಪಡೆದಿರುವ ಉತ್ಪನ್ನವನ್ನು ಬಳಸುವುದರಲ್ಲಿ ಅಪಾಯವಿದೆಯೇ?

ಯುಎಸ್ FDA ದ  ಪ್ರಕಾರ, ಉತ್ಪನ್ನಕ್ಕೆ ತುರ್ತು ಬಳಕೆ ಅಧಿಕಾರ (EUA) ಮಾತ್ರ ನೀಡಲಾಗಿದೆ ಮತ್ತು ಪೂರ್ಣ ಪ್ರಮಾಣದ ಅನುಮೋದನೆ ನೀಡಲಾಗಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಬೇಕಾಗುತ್ತದೆ.

 1. ಕೋವಿಡ್ -19 ಲಸಿಕೆಯ ವಿಚಾರದಲ್ಲಿ, ಉದಾಹರಣೆಗೆ, ಜನರಿಗೆ ಲಸಿಕೆಯ ಸಂಭಾವ್ಯ ಪ್ರಯೋಜನಗಳು ಮತ್ತು ಅಪಾಯಗಳ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ ಮತ್ತು “ಅಂತಹ ಪ್ರಯೋಜನಗಳು ಅಥವಾ ಅಪಾಯಗಳು ಎಷ್ಟರ ಮಟ್ಟಿಗೆ ತಿಳಿದಿಲ್ಲ”,ಎಂಬುದನ್ನು ತಿಳಿಸುವ ಮೂಲಕ ಲಸಿಕೆ ನಿರಾಕರಿಸುವ ಅವರ ಹಕ್ಕನ್ನು ಗೌರವಿಸಬೇಕಾಗುತ್ತದೆ.

 

ದಯವಿಟ್ಟು ಗಮನಿಸಿ:

ಕೋವ್ಯಾಕ್ಸ್‌ ಕಾರ್ಯಕ್ರಮದ ಭಾಗವಾಗಿ, ಮೊಡೆರ್ನಾ ಲಸಿಕೆಯ ನಿರ್ದಿಷ್ಟ ಸಂಖ್ಯೆಯ ಡೋಸ್‌ಗಳನ್ನು ಭಾರತಕ್ಕೆ ನೀಡಲು ಅಮೆರಿಕ ಸರ್ಕಾರ ನಿರ್ಧರಿಸಿದೆ.

ಅಮೆರಿಕ, ಬ್ರಿಟನ್‌, ಐರೋಪ್ಯ ಒಕ್ಕೂಟ ಅಥವಾ ಜಪಾನ್‌ ಈ ಯಾವುದಾದರೂ ಒಂದು ದೇಶದ ಅನುಮೋದನೆ ಪಡೆದಿರುವ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗೆ ಪರಿಗಣಿಸಬಹುದು ಎಂದು ಸರ್ಕಾರವು ನಿಯಮವನ್ನು ಇತ್ತೀಚೆಗೆ ಸಡಿಲಿಸಿದೆ.

(ಮೈನಸ್‌) 25 ಡಿಗ್ರಿಯಿಂದ – (ಮೈನಸ್‌) 15 ಡಿಗ್ರಿ ಸೆಲ್ಸಿಯಸ್‌ ತಾಪದಲ್ಲಿ ಮೊಡೆರ್ನಾ ಲಸಿಕೆಯನ್ನು ಇರಿಸಬೇಕಾಗುತ್ತದೆ. ಈ ರೀತಿ ಇದನ್ನು ಏಳು ತಿಂಗಳವರೆಗೆ ಇರಿಸಬಹುದು. 30 ದಿನಗಳ ಒಳಗಿನ ಬಳಕೆಗಾದರೆ, ತೆರೆದಿಲ್ಲದ ಸೀಸೆಯನ್ನು 2–8 ಡಿಗ್ರಿ ಸೆಲ್ಸಿಯಸ್‌ ತಾಪದಲ್ಲಿ ಇರಿಸಬಹುದು.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಒಪೆಕ್ ಸಂಘಟನೆ ಮತ್ತು ಹೆಚ್ಚುತ್ತಿರುವ ತೈಲ ಬೆಲೆಗಳು.:


(OPEC and rising oil prices)

 ಸಂದರ್ಭ:

ಹೆಚ್ಚುತ್ತಿರುವ ತೈಲ ಬೆಲೆಗಳನ್ನು ಕಡಿಮೆ ಮಾಡಲು ಭಾರತವು ತೈಲ ರಫ್ತು ಮಾಡುವ ದೇಶಗಳ ಮನವೊಲಿಸುವ ಕೆಲಸ ಮಾಡುತ್ತಿದೆ, ತೈಲದ ಹೆಚ್ಚಿನ ಬೆಲೆಗಳಿಂದಾಗಿ ಇರಾನ್‌ನಂತಹ ಪರ್ಯಾಯ ಆಮದು ಮೂಲಗಳತ್ತ ಯೋಚಿಸಬೇಕಾಗುತ್ತದೆ ಎಂದೂ ಕೂಡ  ಭಾರತ ಎಚ್ಚರಿಸಿದೆ.

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಸ್ಥೆ ಮತ್ತು ಅದರ ಮಿತ್ರರಾಷ್ಟ್ರಗಳು (ಒಪೆಕ್ +) ಜುಲೈ 1 ರಂದು ಜಾಗತಿಕ ಬೇಡಿಕೆಯ ಏರಿಕೆಯ ದೃಷ್ಟಿಯಿಂದ ಪೂರೈಕೆ ಕಡಿತವನ್ನು ಸರಾಗಗೊಳಿಸುವ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

 

ಪ್ರಸ್ತುತ ಭಾರತದ ಮುಂದೆ ಇರುವ ಸವಾಲುಗಳು:

 1. ಅನೇಕ ರಾಜ್ಯಗಳಲ್ಲಿ ಪೆಟ್ರೋಲ್‌ನ ಚಿಲ್ಲರೆ ಬೆಲೆ ಲೀಟರ್‌ಗೆ ₹ 100 ದಾಟಿದೆ ಮತ್ತು ಅದರ ಪ್ರಸ್ತುತ ಬೆಲೆ ಸಾಕಷ್ಟು ಸವಾಲಿನದ್ದಾಗಿದೆ.
 2. ಇತ್ತೀಚಿನ ದಿನಗಳಲ್ಲಿ, ಅಂತರರಾಷ್ಟ್ರೀಯ ತೈಲ ಬೆಲೆಗಳು ಬ್ಯಾರೆಲ್‌ಗೆ US $ 75 ಮೀರಿದೆ, ಏಕೆಂದರೆ ಬಳಕೆ ಚೇತರಿಸಿಕೊಳ್ಳುತ್ತದೆ ಮತ್ತು ಪೂರೈಕೆಯು ಬೇಡಿಕೆಗಿಂತ ಕಡಿಮೆಯಾಗಿದೆ.ಇದು ಏಪ್ರಿಲ್ 2019 ರ ನಂತರದ ಗರಿಷ್ಠ ಬೆಲೆಯಾಗಿದೆ.
 3. ಹೆಚ್ಚಿನ ತೈಲ ಬೆಲೆಗಳು ಹಣದುಬ್ಬರ-ಒತ್ತಡವನ್ನು ಹೆಚ್ಚಿಸುತ್ತಿವೆ.
 4. ಕಡಿಮೆ ತೈಲ ಬೆಲೆಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಕಳೆದ ವರ್ಷ ಭಾರತವು ನಿರ್ಮಿಸಿದ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳು ಖಾಲಿಯಾಗುತ್ತಿವೆ.
 5. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆಯ ಮಟ್ಟವನ್ನು ತಲುಪಲು ಮುಖ್ಯ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದು.
 6. ಕಳೆದ ಏಳು ವರ್ಷಗಳಲ್ಲಿ ಭಾರತದ ತೈಲ ಬೇಡಿಕೆಯು 25% ರಷ್ಟು ಹೆಚ್ಚಾಗಿದೆ, ಇದು ಇತರ ಪ್ರಮುಖ ಖರೀದಿದಾರ ರಾಷ್ಟ್ರಗಳಿಗಿಂತ ಹೆಚ್ಚಾಗಿದೆ.

  

ಒಪೆಕ್ ನ ಪ್ರಭಾವ:

 1. ಸೌದಿ ಅರೇಬಿಯಾದಂತಹ ಒಪೆಕ್ ರಾಷ್ಟ್ರಗಳು ಸಾಂಪ್ರದಾಯಿಕವಾಗಿ ಭಾರತದ ಪ್ರಮುಖ ತೈಲ ಮೂಲವಾಗಿದೆ. ಆದರೆ ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ದೇಶವಾದ ಭಾರತದ ಸರಬರಾಜನ್ನು ಸಡಿಲಗೊಳಿಸುವ ಬೇಡಿಕೆಯನ್ನು ಒಪೆಕ್ ಮತ್ತು ಅದರ ಮಿತ್ರರಾಷ್ಟ್ರಗಳಿಂದ (ಒಪೆಕ್ +) ನಿರ್ಲಕ್ಷಿಸಲಾಗಿದೆ.
 2. ಈ ಕಾರಣದಿಂದಾಗಿ, ಭಾರತವು ಕಚ್ಚಾ ತೈಲ ಆಮದನ್ನು ವೈವಿಧ್ಯಗೊಳಿಸಲು ಹೊಸ ಮೂಲಗಳನ್ನು ಬಳಸುವುದು ಅನಿವಾರ್ಯವಾಗಿದೆ.
 3. ಇದರ ಫಲವಾಗಿ, ಭಾರತದ ತೈಲ ಆಮದಿನಲ್ಲಿ ಒಪೆಕ್ ಪಾಲು ಹಿಂದಿನ ತಿಂಗಳಲ್ಲಿ ಇದ್ದ ಶೇ 74 ರಿಂದ ಮೇ ತಿಂಗಳಲ್ಲಿ ಶೇ .60 ಕ್ಕೆ ಇಳಿದಿದೆ.

 

ಭಾರತದ ತೈಲ ಆಮದು:

 1. ಕಚ್ಚಾ ತೈಲದ ಉಪಭೋಗದಲ್ಲಿ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಗ್ರಾಹಕ ದೇಶವಾಗಿದೆ.
 2. ಇರಾಕ್ ನಂತರ ಸೌದಿ ಅರೇಬಿಯಾ ಭಾರತಕ್ಕೆ ಎರಡನೇ ಅತಿದೊಡ್ಡ ತೈಲ ಪೂರೈಕೆದಾರ ದೇಶವಾಗಿದೆ.

 

 

ಆಯಕಟ್ಟಿನ ಖನಿಜ ತೈಲ ನಿಕ್ಷೇಪಗಳ ಮೀಸಲು ಕುರಿತು ಭಾರತದ ಯೋಜನೆ:

ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ISPRL) ಪೂರ್ವ ಕರಾವಳಿಯ ವಿಶಾಖಪಟ್ಟಣಂ (1.33 MMT) ಮತ್ತು ಪಶ್ಚಿಮ ಕರಾವಳಿಯ ಮಂಗಳೂರು (1.5 MMT) ಮತ್ತು ಪಾದೂರು (2.5 MMT) ಗಳ ಬೃಹತ್ ಭೂಗತ ಶಿಲಾ ಸಂಗ್ರಹಾರಗಳಲ್ಲಿ ಮೂರು ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ನಿರ್ಮಸಿದೆ.

 1. ISPRL ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ತೈಲ ಕೈಗಾರಿಕಾ ಅಭಿವೃದ್ಧಿ ಮಂಡಳಿಯ (Oil Industry Development Board– OIDB) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.
 2. ಇತ್ತೀಚೆಗೆ ಅಂಗೀಕರಿಸಲ್ಪಟ್ಟ ಈ ಹೊಸ ಪೆಟ್ರೋಲಿಯಂ ನಿಕ್ಷೇಪಗಳು ಸುಮಾರು 12 ದಿನಗಳವರೆಗೆ ಹೆಚ್ಚುವರಿ ಪೂರೈಕೆಯನ್ನು ಒದಗಿಸಲು ಸಮರ್ಥವಾಗಿವೆ.
 3. ಸಾರ್ವಜನಿಕ-ಖಾಸಗಿ ಸಹಭಾಗಿತ್ವ’ದ ಮೂಲಕ ಯೋಜನೆಯ ಎರಡನೇ ಹಂತದಲ್ಲಿ ಚಂಡಿಕೋಲ್ (ಒಡಿಶಾ) ಮತ್ತು ಉಡುಪಿ (ಕರ್ನಾಟಕ) ದಲ್ಲಿ ಇದೇ ರೀತಿಯ ಎರಡು ಭೂಗತ ಮೀಸಲುಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
 4. ಹೀಗಾಗಿ, ISPR, ತೈಲವನ್ನು 22 ದಿನಗಳವರೆಗೆ (10 + 12) ಪೂರೈಸಬಲ್ಲದು.

 

ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ಶ್ರೀಲಂಕಾವು,ಭಾರತದೊಂದಿಗೆ $ 1 ಬಿಲಿಯನ್ ಕರೆನ್ಸಿ ವಿನಿಮಯ ಒಪ್ಪಂದವನ್ನು ಮಾಡಿಕೊಂಡಿದೆ:


(Lanka ‘banking on’ $1 bn India swap deal)

 ಸಂದರ್ಭ:

ಸಾಲ ಮರುಪಾವತಿ ಕಟ್ಟುಪಾಡುಗಳನ್ನು ಪೂರೈಸಲು ಮತ್ತು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಶ್ರೀಲಂಕಾವು ಈ ವರ್ಷ ಭಾರತದೊಂದಿಗೆ $ 1 ಬಿಲಿಯನ್ ಕರೆನ್ಸಿ ವಿನಿಮಯ  (Currency Swap)  ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ.

 1. ಕೆಲವು ತಿಂಗಳುಗಳ ಹಿಂದೆ, ಸಾರ್ಕ್ ಸೌಲಭ್ಯದ ಮೂಲಕ ಶ್ರೀಲಂಕಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ $ 400 ಮಿಲಿಯನ್ ಕರೆನ್ಸಿ ವಿನಿಮಯ ಒಪ್ಪಂದವನ್ನು ಮಾಡಿಕೊಂಡಿತ್ತು.

 

ಹಿನ್ನೆಲೆ:

ಶ್ರೀಲಂಕಾ ತನ್ನ ಸಾಲ ಸೇವಾ ಬಾಧ್ಯತೆಗಳ ಜೊತೆಗೆ ‘ವಿದೇಶಿ ವಿನಿಮಯ ಬಿಕ್ಕಟ್ಟನ್ನು’ ಎದುರಿಸುತ್ತಿದೆ.

 

ಕರೆನ್ಸಿ ವಿನಿಮಯ ಒಪ್ಪಂದ ಎಂದರೇನು?

 1. ಕರೆನ್ಸಿ ವಿನಿಮಯ ಒಪ್ಪಂದ (Currency Swap Arrangement) ಎಂದರೆ ಎರಡು ಸ್ನೇಹಪರ ಸಂಬಂಧ ಹೊಂದಿರುವ ರಾಷ್ಟ್ರಗಳು ತಮ್ಮದೇ ಆದ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಮಾಡಲು ಮಾಡಿಕೊಳ್ಳುವ ವ್ಯವಸ್ಥೆಯಾಗಿದೆ.
 2. ಈ ಪದ್ಧತಿಯ ಪ್ರಕಾರ, ಎರಡೂ ದೇಶಗಳು ಯುಎಸ್ ಡಾಲರ್‌ನಂತಹ ಮೂರನೇ ದೇಶದ ಕರೆನ್ಸಿಯಲ್ಲಿ ವ್ಯಾಪಾರ-ವಹಿವಾಟು ನಡೆಸದೆ ಪೂರ್ವನಿರ್ಧರಿತ ವಿನಿಮಯ ದರದಲ್ಲಿ ಆಮದು ಮತ್ತು ರಫ್ತು ವ್ಯಾಪಾರವನ್ನು ನಡೆಸಿ ಪಾವತಿಸುತ್ತವೆ.
 3. ಅಂತಹ ವ್ಯವಸ್ಥೆಗಳಲ್ಲಿ ಯಾವುದೇ ಮೂರನೇ ದೇಶದ ಕರೆನ್ಸಿಯು ಒಳಗೊಂಡಿರುವುದಿಲ್ಲ, ಇದರಿಂದಾಗಿ ವಿನಿಮಯ ಭಿನ್ನತೆಗಳ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯನ್ನು ನಿವಾರಿಸುತ್ತದೆ.

 

ಸಾರ್ಕ್ ದೇಶಗಳಿಗೆ ಕರೆನ್ಸಿ ಸ್ವಾಪ್ ವ್ಯವಸ್ಥೆ ಕುರಿತು RBI ನ ಫ್ರೇಮ್‌ವರ್ಕ್:

 1. ಕರೆನ್ಸಿ ಸ್ವಾಪ್ (SAARC currency swap facility) ಸೌಲಭ್ಯವು 15 ನವೆಂಬರ್ 2012 ರಂದು ಸಾರ್ಕ್ ಜಾರಿಗೆ ಬಂದಿತು.
 2. 2019-22ರ ಚೌಕಟ್ಟಿನಡಿಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟಾರೆ 2 ಬಿಲಿಯನ್ US ಡಾಲರ್ ಕಾರ್ಪಸ್ ಒಳಗೆ ಕರೆನ್ಸಿ ಸ್ವಾಪ್ ವ್ಯವಸ್ಥೆಯನ್ನು ಒದಗಿಸಬಹುದು.
 3. ಇದರ ಅಡಿಯಲ್ಲಿ, ಕರೆನ್ಸಿ ಸ್ವಾಪ್ ಹಿಂಪಡೆಯುವಿಕೆಯನ್ನು ಯುಎಸ್ ಡಾಲರ್, ಯುರೋ ಅಥವಾ ಭಾರತೀಯ ರೂಪಾಯಿಗಳಲ್ಲಿ ಮಾಡಬಹುದು. ಈ ಚೌಕಟ್ಟು ಭಾರತೀಯ ರೂಪಾಯಿಗಳಲ್ಲಿ ಸ್ವಾಪ್ ಹಿಂಪಡೆಯಲು (swap draw) ಕೆಲವು ರಿಯಾಯಿತಿಗಳನ್ನು ನೀಡುತ್ತದೆ.
 4. ಎಲ್ಲಾ ದ್ವಿಪಕ್ಷೀಯ ಕರೆನ್ಸಿ ಸ್ವಾಪ್ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಎಲ್ಲಾ ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಕರೆನ್ಸಿ ಸ್ವಾಪ್ (ಕರೆನ್ಸಿ ವಿನಿಮಯ ಸೌಲಭ್ಯ) ಸೌಲಭ್ಯ ಲಭ್ಯವಿರುತ್ತದೆ.

 

ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ಯುರೋಪಿಯನ್ ಒಕ್ಕೂಟದ ಹೊಸ ‘ಲಸಿಕೆ ಪಾಸ್‌ಪೋರ್ಟ್’ ಕಾರ್ಯಕ್ರಮ ಯಾವುದು, ಮತ್ತು ಅದು ಕೋವಿಶೀಲ್ಡ್ ಅನ್ನು ಏಕೆ ಒಳಗೊಂಡಿಲ್ಲ?


(What is EU’s new ‘vaccine passport’ programme, and why has Covishield not been included?)

 ಸಂದರ್ಭ:

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ‘ಕೋವಿಶೀಲ್ಡ್’ ಲಸಿಕೆಯನ್ನು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (EMA) ತನ್ನ “ಲಸಿಕೆ ಪಾಸ್‌ಪೋರ್ಟ್” ಕಾರ್ಯಕ್ರಮದಲ್ಲಿ ಸೇರಿಸಿಲ್ಲ. ಈ ‘ಲಸಿಕೆ ಪಾಸ್ಪೋರ್ಟ್’ ಜನರು ಯುರೋಪಿಗೆ ಮುಕ್ತವಾಗಿ ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುವು ಮಾಡಿಕೊಡುತ್ತದೆ.

 ಈ ಉದ್ದೇಶಕ್ಕಾಗಿ EMA ಅನುಮೋದಿಸಿದ ಲಸಿಕೆಗಳು:

ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯ (EMA) ಪಟ್ಟಿಯಲ್ಲಿ ಕೇವಲ ನಾಲ್ಕು ಲಸಿಕೆಗಳನ್ನು ಸೇರಿಸಲಾಗಿದೆ:

 1. ವ್ಯಾಕ್ಸ್‌ಜೆವೇರಿಯಾ (ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ),
 2. ಕೋಮಿರ್ನಾಟಿ (ಫಿಜರ್-ಬಯೋಟೆಕ್),
 3. ಸ್ಪೈಕ್ವಾಕ್ಸ್ (ಮಾಡರ್ನಾ) ಮತ್ತು
 4. ಜಾನ್ಸ್ಸೆನ್ (ಜಾನ್ಸನ್ ಮತ್ತು ಜಾನ್ಸನ್).

 

(Vaxzevria (Oxford-AstraZeneca), Comirnaty (Pfizer-BioNTech), Spikevax (Moderna) and Janssen (Johnson & Johnson)

ಯುರೋಪಿಯನ್ ಒಕ್ಕೂಟದಾದ್ಯಂತ  ಪ್ರಯಾಣ ನಿರ್ಬಂಧಗಳನ್ನು ಸರಾಗಗೊಳಿಸುವ ‘ಗ್ರೀನ್ ಪಾಸ್’ ಎಂದರೇನು?

ಗ್ರೀನ್ ಪಾಸ್’ (Green Pass) ಎಂದು ಜನಪ್ರಿಯವಾಗಿರುವ ಯುರೋಪಿಯನ್ ಒಕ್ಕೂಟದ ‘ಡಿಜಿಟಲ್ ಕೋವಿಡ್ ಸರ್ಟಿಫಿಕೇಟ್’ ಅನ್ನು ಸಾರ್ವಜನಿಕರ ಪ್ರಯಾಣದ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ಮತ್ತು ಸಾಂಕ್ರಾಮಿಕ ರೋಗದಿಂದಾಗಿ  ದೇಶವನ್ನು ಪ್ರವೇಶಿಸುವುದರ ಮೇಲೆ ಹಾಕಲಾದ ಅಡೆತಡೆಗಳನ್ನು ತೆಗೆದುಹಾಕಲು ವಿನ್ಯಾಸಗೊಳಿಸಲಾಗಿದೆ.

 

 1. ಈ ‘ಗ್ರೀನ್ ಪಾಸ್’ ಒಬ್ಬ ವ್ಯಕ್ತಿಗೆ COVID-19 ವಿರುದ್ಧದ ಲಸಿಕೆ ಹಾಕಲಾಗಿದೆ ಅಥವಾ ನಕಾರಾತ್ಮಕ ಪರೀಕ್ಷಾ ಫಲಿತಾಂಶವನ್ನು ಪಡೆದಿದ್ದಾನೆ ಅಥವಾ ವೈರಲ್ ಸೋಂಕಿನಿಂದ ಚೇತರಿಸಿಕೊಂಡಿದ್ದಾನೆ ಎಂಬುದಕ್ಕೆ ಡಿಜಿಟಲ್ ಪುರಾವೆಯಾಗಿದೆ. ಈ ಡಾಕ್ಯುಮೆಂಟ್ ಯುರೋಪಿಯನ್ ಒಕ್ಕೂಟದ ಎಲ್ಲಾ ದೇಶಗಳಲ್ಲಿ ಮಾನ್ಯವಾಗಿದೆ.
 2. ‘ಗ್ರೀನ್ ಪಾಸ್’ ನ ಉದ್ದೇಶವು ಪ್ರಯಾಣದ ನಿರ್ಬಂಧಗಳನ್ನು ತೆಗೆದುಹಾಕುವ ಮೂಲಕ ಜನರಿಗೆ ತೊಂದರೆಯಿಲ್ಲದ ಪ್ರವಾಸದ ಅನುಭವವನ್ನು ನೀಡುವುದಾಗಿದೆ, ಆದರೆ ಇದು ಎಲ್ಲರಿಗೂ ಕಡ್ಡಾಯವಲ್ಲ.

 

ಕೋವಿಶೀಲ್ಡ್ ಅನ್ನು ಈ ಪಟ್ಟಿಯಲ್ಲಿ ಏಕೆ ಸೇರಿಸಲಾಗಿಲ್ಲ?

 ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಅನುಮೋದನೆಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ.

ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ವ್ಯಾಕ್ಸ್‌ಜೆವ್ರಿಯಾ (Vaxzevria) ವನ್ನು EMA-ಅನುಮೋದಿತ ಲಸಿಕೆಗಳಲ್ಲಿ ಸೇರಿಸಲಾಗಿದ್ದರೂ, ಅಸ್ಟ್ರಾಜೆನೆಕಾ ಸ್ವತಃ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಅನ್ನು ಇಎಂಎ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಲಸಿಕೆಗಳನ್ನು ಪಟ್ಟಿ ಮಾಡುವಾಗ ಸ್ಥಳೀಯ ಉತ್ಪಾದನಾ ಸೌಲಭ್ಯಗಳನ್ನು EMA ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದು ಇದಕ್ಕೆ ಕಾರಣ. ಲಸಿಕೆ ಒಂದೇ ಆಗಿದ್ದರೂ, ಒಂದೇ ಉತ್ಪನ್ನದ ವಿಭಿನ್ನ ತಯಾರಕರು EMAಯ ಅನುಮೋದನೆಗಾಗಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವ ಅಗತ್ಯವಿದೆ.

 

ಲಸಿಕೆ ಪಾಸ್‌ಪೋರ್ಟ್’ ಕುರಿತು ಭಾರತದ ನಿಲುವು:

 “ಗ್ರೀನ್ ಪಾಸ್” ಕಡ್ಡಾಯವಲ್ಲ ಎಂದು ಯುರೋಪಿಯನ್ ಒಕ್ಕೂಟವು ಸ್ಪಷ್ಟಪಡಿಸಿದ್ದರೂ, ಈ ವಿಷಯವು ಮತ್ತೊಮ್ಮೆ ‘ಗೌಪ್ಯತೆ ಮತ್ತು ನೈತಿಕತೆ’ತ ಕುರಿತು ಚರ್ಚೆಗೆ ನಾಂದಿ ಹಾಡಿದೆ.

 1. ‘ಲಸಿಕೆ ಪಾಸ್‌ಪೋರ್ಟ್’ ಅನ್ನು ಹೆಚ್ಚಾಗಿ ‘ಸಾಮಾನ್ಯತೆ’ ಸ್ಥಿತಿಗೆ ಮರಳುತ್ತದೆ ಎಂದು ಕರೆಯಲಾಗುತ್ತದೆ, ಆದರೆ ಇದು ಒಳನುಸುಳುವಿಕೆ, ಗೌಪ್ಯತೆ ಮತ್ತು ಮುಕ್ತ ಚಲನೆಯ ಹಕ್ಕಿನ ಮೇಲಿನ ನಿರ್ಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
 2. ಇತ್ತೀಚೆಗೆ ನಡೆದ G7 ದೇಶಗಳ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ರವರು ಈ ಹಂತದಲ್ಲಿ ಭಾರತವು ‘ಲಸಿಕೆ ಪಾಸ್‌ಪೋರ್ಟ್‌ಗೆ ತೀವ್ರ ವಿರೋಧ’ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.

 

ದೊಡ್ಡ ಕಾಳಜಿಯ ವಿಷಯ:

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಲಸಿಕೆ ವ್ಯಾಪ್ತಿ ಇನ್ನೂ ಕಡಿಮೆ ಇದೆ, ಮತ್ತು ಇಂತಹ ಉಪಕ್ರಮಗಳು ಹೆಚ್ಚು ತಾರತಮ್ಯವನ್ನು ಸಾಬೀತುಪಡಿಸುತ್ತವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಹಿಮನದಿ ಸರೋವರಗಳ ಅಟ್ಲಾಸ್:

(Atlas of glacial lakes)

 1. ಇತ್ತೀಚೆಗೆ, ಗಂಗಾ ನದಿ ಜಲಾನಯನ ಪ್ರದೇಶದ ಭಾಗವಾಗಿರುವ ಹಿಮನದಿ ಸರೋವರಗಳ ನವೀಕರಿಸಿದ ಅಟ್ಲಾಸ್ (Glacial Lakes Atlas) ಅನ್ನು ಜಲ ಶಕ್ತಿ ಸಚಿವಾಲಯ ಬಿಡುಗಡೆ ಮಾಡಿದೆ.
 2. ಈ ಅಟ್ಲಾಸ್ ನಲ್ಲಿ, ಗಂಗಾ ಜಲಾನಯನ ಪ್ರದೇಶದ ಸುಮಾರು 4,707 ಹಿಮನದಿ ಸರೋವರಗಳನ್ನು ನಕ್ಷೆ ಮಾಡಲಾಗಿದೆ.
 3. ಈ ಅಧ್ಯಯನದಲ್ಲಿ, ರಿಸೋರ್ಸಟ್ -2 (Resourcesat-2) ಲೀನಿಯರ್ ಇಮೇಜಿಂಗ್ ಸೆಲ್ಫ್ ಸ್ಕ್ಯಾನಿಂಗ್ ಸೆನ್ಸರ್- IV (LISS-IV) ಉಪಗ್ರಹ ದತ್ತಾಂಶವನ್ನು ಬಳಸಿ, 25 ಹೆಕ್ಟೇರ್‌ಗಿಂತ ಹೆಚ್ಚು ನೀರಿನ ಪ್ರಸರಣ ಪ್ರದೇಶವನ್ನು ಹೊಂದಿರುವ ಹಿಮನದಿ ಸರೋವರಗಳನ್ನು ಮ್ಯಾಪ್ ಮಾಡಲಾಗಿದೆ.
 4. ಈ ಅಟ್ಲಾಸ್ ಇಸ್ರೋದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC) ನ ಭುವನ್ ಪೋರ್ಟಲ್ ನಲ್ಲಿ ಲಭ್ಯವಿದೆ.

ಕಡಖನಾಥ:

(Kadaknath)

 1. ಕಡಖನಾಥ ಅಥವಾ ಕಾಳಿ ಮಾಸಿ, ಪಶ್ಚಿಮ ಮಧ್ಯಪ್ರದೇಶದ ಝಬುವಾ ಮತ್ತು ಧಾರ್ ಜಿಲ್ಲೆಗಳ ಸ್ಥಳೀಯವಾದ ಕೋಳಿ ತಳಿಯಾಗಿದೆ.
 2. ಕಡಖನಾಥ ಕೋಳಿ ತಳಿಗೆ 2017 ರಲ್ಲಿ ಜಿಐ ಟ್ಯಾಗ್ ನೀಡಲಾಯಿತು.
 3. ಇದು ಗಾಢ ಕಪ್ಪು ಮಾಂಸಕ್ಕಾಗಿ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಮಾಂಸದ ಗುಣಮಟ್ಟ, ವಿನ್ಯಾಸ, ರುಚಿ ಮತ್ತು ಅತ್ಯುತ್ತಮ ಔಷಧೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ.
 4. ಇದರ ಮಾಂಸದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮತ್ತು ಪ್ರೋಟೀನ್ ಅಧಿಕವಾಗಿರುತ್ತದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos