Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 12ನೇ ಜೂನ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆ.

2. ಜಾಧವ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲು ಮಸೂದೆ ಪಾಸು ಮಾಡಿದ ಪಾಕಿಸ್ತಾನ.

3. ವಾಹನ ಗುಜರಿ ನೀತಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಶುಕ್ರ ಗ್ರಹದ ಅಧ್ಯಯನಕ್ಕಾಗಿ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಎನ್ವಿಜನ್ ಮಿಷನ್.

2. ‘ಪಾರಂಪರಿಕ ಮರಗಳ’ ರಕ್ಷಣೆಗಾಗಿ ಮಹಾರಾಷ್ಟ್ರ ಸರ್ಕಾರದ ಪ್ರಸ್ತಾವಿತ ತಿದ್ದುಪಡಿ.

3. ಅಭೂತಪೂರ್ವ ಫಲಿತಾಂಶಗಳನ್ನು ನೀಡುತ್ತಿರುವ CHIME (ದೂರದರ್ಶಕ) ಟೆಲಿಸ್ಕೋಪ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಚೀನಾ-ಶ್ರೀಲಂಕಾ ಸ್ನೇಹ ಆಸ್ಪತ್ರೆ ಕಾರ್ಯಾರಂಭ.

2. ಉಮ್ಲಿಂಗ್ ಲಾ.

3. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG).

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ನೆರವು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆ:


(‘One Nation One Ration Card’ scheme)

ಸಂದರ್ಭ:

ಫಲಾನುಭವಿಗಳಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ, ದೇಶದ ಯಾವುದೇ ಭಾಗದಲ್ಲಿ ಇದ್ದರೂ ಸಬ್ಸಿಡಿ ಆಹಾರ ಪದಾರ್ಥಗಳನ್ನು ಪಡೆಯಲು ಅನುಕೂಲವಾಗುವಂತೆ ಒನ್ ನೇಷನ್ ಒನ್ ರೇಷನ್ ಕಾರ್ಡ್ ಅಥವಾ ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆಯನ್ನು “ತಕ್ಷಣ” ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ. ನೀವು ನೀಡುವ ಯಾವ ಕಾರಣವನ್ನು ನಾವು ಪರಿಗಣಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಇದೇ ವೇಳೆ ದೇಶದಲ್ಲಿ 2.8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಯೇ ಇಲ್ಲ ಅಂತಹವರಿಗಾಗಿ ಯಾವ ಯೋಜನೆಯನ್ನು ಸಿದ್ಧಪಡಿಸಿದ್ದೀರಿ ಎಂದು ಕೇಂದ್ರ ಸರ್ಕಾರವನ್ನು ಸಹ ಪ್ರಶ್ನಿಸಿದೆ.

ಪಶ್ಚಿಮ ಬಂಗಾಳದ ಹೊರತಾಗಿ, ಅಸ್ಸಾಂ, ಛತ್ತೀಸಗಡ  ಮತ್ತು ದೆಹಲಿ ಗಳು ಕೂಡ ಈ ಯೋಜನೆಯನ್ನು ಕಾರ್ಯಗತಗೊಳಿಸದ ಇತರ ರಾಜ್ಯಗಳಾಗಿವೆ.

 

ಹಿನ್ನೆಲೆ:

“ವಲಸೆ ಕಾರ್ಮಿಕರ ಸಮಸ್ಯೆಗಳು ಮತ್ತು ದುಃಖಗಳಿಗೆ” ಸಂಬಂಧಿಸಿದ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ (Suo motu) ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ಯೋಜನೆಯ ಅನುಷ್ಠಾನದಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೀಗೆ ಹೇಳಿದೆ.

 

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಕುರಿತು:

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಡಿ, ಫಲಾನುಭವಿಗಳು ವಿಶೇಷವಾಗಿ ವಲಸಿಗರು ತಮ್ಮ ಆಯ್ಕೆಯ ಯಾವುದೇ ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಅಂಗಡಿಯಿಂದ ದೇಶದ ಯಾವುದೇ ಭಾಗದಲ್ಲಿ ಇದ್ದರೂ ಸಹ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಲಾಭಗಳು: ಈ ಯೋಜನೆಯ ಅನುಷ್ಠಾನದ ನಂತರ, ಯಾವುದೇ ಬಡವರು ಆಹಾರ ಭದ್ರತಾ ಯೋಜನೆಯಡಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ  ಹೋಗುವುದರಿಂದಾಗಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯುವುದರಿಂದ ವಂಚಿತರಾಗುವುದಿಲ್ಲ. ಮುಖ್ಯವಾಗಿ ವಿವಿಧ ರಾಜ್ಯಗಳಿಂದ ಲಾಭ ಪಡೆಯಲು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವ ವ್ಯಕ್ತಿಗಳನ್ನು ನಿಷೇಧಿಸುವುದು ಇದರ ಉದ್ದೇಶವಾಗಿದೆ.

 

ಮಹತ್ವ: ಈ ಯೋಜನೆಯು ಫಲಾನುಭವಿಗಳಿಗೆ ಯಾವುದೇ ಒಂದು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಂಗಡಿಯೊಂದಿಗೆ ಸಂಬಂಧ ಹೊಂದುವುದರಿಂದ, ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ಅಂಗಡಿ ಮಾಲೀಕರ ಮೇಲಿನ ಅವಲಂಬನೆಯೂ ಕಡಿಮೆ ಮಾಡುತ್ತದೆ. ಈ ಯೋಜನೆಯ ಅನುಷ್ಠಾನವು ಪಿಡಿಎಸ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆಯೂ ಪರಿಶೀಲಿಸುತ್ತದೆ ಮತ್ತು ಅವುಗಳನ್ನು ಮೊಟಕುಗೊಳಿಸುತ್ತದೆ.

 

‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯ ಪ್ರಮಾಣಿತ ಸ್ವರೂಪ:

ವಿವಿಧ ರಾಜ್ಯಗಳು ಬಳಸುವ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಪಡಿತರ ಚೀಟಿಗಳಿಗಾಗಿ ಪ್ರಮಾಣಿತ ಸ್ವರೂಪವನ್ನು ಸಿದ್ಧಪಡಿಸಲಾಗಿದೆ.

 1. ರಾಷ್ಟ್ರೀಯ ಸಂಭವನೀಯತೆ ಅಥವಾ ಚಲನಶೀಲತೆ ಯನ್ನು (portability) ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳಿಗೆ ದ್ವಿಭಾಷಾ ರೂಪದಲ್ಲಿ ಪಡಿತರ ಚೀಟಿ ನೀಡುವಂತೆ ಕೋರಲಾಗಿದೆ. ಸ್ಥಳೀಯ ಭಾಷೆಯ ಜೊತೆಗೆ, ಹಿಂದಿ ಅಥವಾ ಇಂಗ್ಲಿಷ್ ಅನ್ನು ಇನ್ನೊಂದು ಭಾಷೆಯಾಗಿ ಸೇರಿಸಬಹುದು.
 2. 10-ಅಂಕಿಯ ಪಡಿತರ ಚೀಟಿ ಸಂಖ್ಯೆಯನ್ನು ನೀಡುವಂತೆ ರಾಜ್ಯಗಳನ್ನು ಕೇಳಲಾಗಿದೆ, ಮೊದಲ ಎರಡು ಅಂಕೆಗಳು ಸಂಬಂಧಿಸಿದ ರಾಜ್ಯ ಸಂಕೇತ ಮತ್ತು ಮುಂದಿನ ಎರಡು ಅಂಕೆಗಳು ಫಲಾನುಭವಿಯ ಪಡಿತರ ಚೀಟಿ ಸಂಖ್ಯೆ.
 3. ಇದಲ್ಲದೆ, ಪಡಿತರ ಚೀಟಿಯಲ್ಲಿ ಕುಟುಂಬದ ಪ್ರತಿ ಸದಸ್ಯರ ವಿಶಿಷ್ಟ ಸದಸ್ಯ ID (Unique member ID) ಯನ್ನು ರಚಿಸಲು ಎರಡು ಅಂಕೆಗಳ ಗುಂಪನ್ನು ಪಡಿತರ ಚೀಟಿ ಸಂಖ್ಯೆ ಯೊಂದಿಗೆ ಸೇರಿಸಲಾಗುತ್ತದೆ.
 4. ಈ ಯೋಜನೆ ಅಳವಡಿಕೆ ಮಾಡಿಕೊಳ್ಳುವ ರಾಜ್ಯಗಳಿಗೆ ಕೇಂದ್ರ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಇಲಾಖೆಯಿಂದ ಹೆಚ್ಚುವರಿಯಾಗಿ 37,600 ಕೋಟಿ ರೂ. ಪಡೆದುಕೊಳ್ಳಬಹುದು.
 5. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಈ ಯೋಜನೆ ಜಾರಿಯಾಗುತ್ತಿದೆ. ನಾಗರಿಕ ಆಹಾರ ಪೂರೈಕೆ ವಾರದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗಿದೆ.
 6. ಕಾರ್ಮಿಕರು, ದಿನಗೂಲಿ ನೌಕರರು, ನಗರ ಭಾಗದ ಬಡ ಜನರು, ಬೀದಿ ಬದಿ ವ್ಯಾಪಾರಿಗಳು, ಅರೆಕಾಲಿಕ ನೌಕರರು, ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ನೆರವಾಗಲಿದೆ.
 7. ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆ ಜಾರಿಗೊಳ್ಳುವುದರಿಂದ 30 ರಾಜ್ಯಗಳಲ್ಲಿ 67 ಕೋಟಿ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಿಗಲಿದೆ. ಮಾರ್ಚ್ 2021ರೊಳಗೆ ಶೇ 100ರಷ್ಟು ಫಲಾನುಭವಿಗಳನ್ನು ಸೇರ್ಪಡೆಗೊಳಿಸುವುದು ಸರ್ಕಾರ ಗುರಿ.
 8. ಇದೆಲ್ಲದರ ಜತೆಗೆ ಯೋಜನೆ ಅಳವಡಿಕೆ ಮಾಡಿಕೊಳ್ಳುವ ರಾಜ್ಯಗಳು ತಮ್ಮ ಜಿಎಸ್‌ಡಿಪಿ (ರಾಜ್ಯಗಳ ಒಟ್ಟು ಆಂತರಿಕ ಉತ್ಪನ್ನ)  ಯಲ್ಲಿ ಶೇ. 2ರಷ್ಟನ್ನು  ಈ ಯೋಜನೆಗಾಗಿ ಪಡೆದುಕೊಳ್ಳಲು ಸಾಧ್ಯವಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ಜಾಧವ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲು ಮಸೂದೆ ಪಾಸು ಮಾಡಿದ ಪಾಕಿಸ್ತಾನ:


(Pak. Passes Bill to let Jadhav appeal)

ಸಂದರ್ಭ:

ಮರಣದಂಡನೆಗೆ ಗುರಿಯಾಗಿರುವ ಖೈದಿ ಕುಲಭೂಷಣ್ ಜಾಧವ್(ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ) ಅವರಿಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಒದಗಿಸಲು ಅಂತರರಾಷ್ಟ್ರೀಯ ನ್ಯಾಯಾಲಯ (ಮರುಪರಿಶೀಲನೆ ಮತ್ತು ಮರು-ಪರಿಗಣನೆ) ಮಸೂದೆ, 2020(ICJ (Review and Re-consideration) Bill, 2020) ಅನ್ನು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ (ಸಂಸತ್) ಅಂಗೀಕರಿಸಿದೆ.

ಈ ಮಸೂದೆಯ ಉದ್ದೇಶವೆಂದರೆ ಅಂತರರಾಷ್ಟ್ರೀಯ ನ್ಯಾಯಾಲಯದ (ICJ) ತೀರ್ಪಿಗೆ ಅನುಗುಣವಾಗಿ ಜಾಧವ್ ಅವರಿಗೆ ಭಾರತದ ‘ಕಾನ್ಸುಲರ್ ಕಚೇರಿಯ ಸಂಪರ್ಕ’ ಹೊಂದಲು ಮತ್ತು ನೆರವು ಪಡೆಯಲು ಅವಕಾಶ ನೀಡುವುದು.

 

ಏನಿದು ಪ್ರಕರಣ?

 1. ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ, ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಏಪ್ರಿಲ್ 2017 ರಲ್ಲಿ 51 ವರ್ಷದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾದ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು.
 2. ಜಾಧವ್‌ಗೆ ಸಲಹೆ ನೀಡುವುದನ್ನು ನಿರಾಕರಿಸಿದ್ದಕ್ಕಾಗಿ ಮತ್ತು ‘ಮರಣದಂಡನೆ’ ಶಿಕ್ಷೆಯನ್ನು ಪ್ರಶ್ನಿಸಲು ಪಾಕಿಸ್ತಾನದ ವಿರುದ್ಧ ಭಾರತ ‘ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್’ (ICJ) ಗೆ ಮನವಿ ಮಾಡಿತು.
 3. ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ಮತ್ತು ಮರುಪರಿಶೀಲಿಸಲು ಪಾಕಿಸ್ತಾನವು ಕ್ರಮ ಕೈಗೊಳ್ಳಬೇಕು ಮತ್ತು ಜಾಧವ್ ಅವರಿಗೆ ವಿಳಂಬವಿಲ್ಲದೆ ಭಾರತದ ವಕೀಲರ ಸೇವೆ ಪಡೆಯಲು ಅವಕಾಶ ನೀಡಬೇಕು ಎಂದು ಜುಲೈ 2019 ರಲ್ಲಿ ‘ಅಂತರಾಷ್ಟ್ರೀಯ ನ್ಯಾಯಾಲಯವು’ ತೀರ್ಪು ನೀಡಿತು.
 4. ಮಿಲಿಟರಿ ನ್ಯಾಯಾಲಯವು ನಿವೃತ್ತ ಅಧಿಕಾರಿಗೆ ನೀಡಿದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸೂಕ್ತ ವೇದಿಕೆಯನ್ನು (ಸಾಕ್ಷ್ಯವನ್ನು) ಒದಗಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು ತನ್ನ 2019 ರ ತೀರ್ಪಿನಲ್ಲಿ ಪಾಕಿಸ್ತಾನವನ್ನು ಕೇಳಿದೆ.

 

ಅಂತರರಾಷ್ಟ್ರೀಯ ನ್ಯಾಯಾಲಯ ಮಾಡಿದ ಪ್ರಮುಖ ಅವಲೋಕನಗಳು:

 1. ಪಾಕಿಸ್ತಾನ ಸೇನೆಯು ಜಾಧವ್ ಅವರನ್ನು ಬಂಧನಕ್ಕೊಳಪಡಿಸಿದ ತಕ್ಷಣವೇ ಆತನ ಬಂಧನದ ಬಗ್ಗೆ ಭಾರತಕ್ಕೆ ತಿಳಿಸದ ಕಾರಣ ಇಸ್ಲಾಮಾಬಾದ್ 1963 ರ ‘ವಿಯನ್ನ ಸಮಾವೇಶದ ದೂತವಾಸ ಸಂಬಂಧಗಳ’ (Article 36 of Vienna Convention of Consular Relations, 1963) 36 ನೇ ವಿಧಿಯನ್ನು ಉಲ್ಲಂಘಿಸಿದೆ.
 2.  ಜಾಧವ್ ಅವರೊಂದಿಗೆ ಸಂವಹನ ನಡೆಸಲು ಮತ್ತು ಬಂಧನದ ಸಮಯದಲ್ಲಿ ಅವರನ್ನು ಭೇಟಿ ಮಾಡಲು ಮತ್ತು ಅವರಿಗೆ ಕಾನೂನು ಪ್ರಾತಿನಿಧ್ಯಕ್ಕೆ ವ್ಯವಸ್ಥೆ ಮಾಡುವ ಭಾರತದ ಹಕ್ಕನ್ನು ನಿರಾಕರಿಸಲಾಗಿದೆ.

 

ಅಂತರಾಷ್ಟ್ರೀಯ ನ್ಯಾಯಾಲಯದ (ICJ) ಕುರಿತು:

 1. ಅಂತರಾಷ್ಟ್ರೀಯ ನ್ಯಾಯಾಲಯವನ್ನು- ICJ 1945 ರಲ್ಲಿ ವಿಶ್ವಸಂಸ್ಥೆಯ ಚಾರ್ಟರ್ ಮೂಲಕ ಸ್ಥಾಪಿಸಲಾಯಿತು ಮತ್ತು ಇದು ಏಪ್ರಿಲ್ 1946 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
 2.  ಇದು ವಿಶ್ವಸಂಸ್ಥೆಯ ಪ್ರಮುಖ ನ್ಯಾಯಾಂಗ ಸಂಸ್ಥೆಯಾಗಿದೆ ಮತ್ತು ಇದು ಹೇಗ್ (ನೆದರ್ಲ್ಯಾಂಡ್ಸ್) ನ ಶಾಂತಿ ಅರಮನೆಯಲ್ಲಿ ( the Peace Palace in The Hague (Netherlands) ನೆಲೆಗೊಂಡಿದೆ.
 3. ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳ ಪ್ರಧಾನ ಕಛೇರಿ ನ್ಯೂಯಾರ್ಕ್ ನಲ್ಲಿದ್ದರೆ, ನ್ಯೂಯಾರ್ಕ್(USA) ನಲ್ಲಿಲ್ಲದ ಏಕೈಕ ಸಂಸ್ಥೆ ಇದು.
 4.  ಇದು ರಾಷ್ಟ್ರಗಳ ನಡುವಿನ ಕಾನೂನು ವಿವಾದಗಳನ್ನು ಬಗೆಹರಿಸುತ್ತದೆ ಮತ್ತು ಅಧಿಕೃತ ಯುಎನ್ ಅಂಗಗಳು ಮತ್ತು ವಿಶೇಷ ಏಜೆನ್ಸಿಗಳು ಅದರ ಮುಂದೆ ಪ್ರಸ್ತಾಪಿಸಿದ ಕಾನೂನು ಪ್ರಶ್ನೆಗಳ ಬಗ್ಗೆ ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಸಲಹಾತ್ಮಕ ಅಭಿಪ್ರಾಯಗಳನ್ನು ನೀಡುತ್ತದೆ.

 

ರಚನೆ:

 1. ಅಂತರರಾಷ್ಟ್ರೀಯ ನ್ಯಾಯಾಲಯವು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯಿಂದ ಒಂಬತ್ತು ವರ್ಷಗಳ ಅವಧಿಗೆ ಆಯ್ಕೆಯಾದ 15 ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ. ಈ ಎರಡು ಅಂಗಗಳು ಒಂದೇ ಸಮಯದಲ್ಲಿ ಆದರೆ ಪ್ರತ್ಯೇಕವಾಗಿ ಮತ ಚಲಾಯಿಸುತ್ತವೆ.
 2. ನ್ಯಾಯಾಧೀಶರಾಗಿ ಆಯ್ಕೆಯಾಗಲು, ಅಭ್ಯರ್ಥಿಯು ಎರಡೂ ಸಂಸ್ಥೆಗಳಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿರಬೇಕು.
 3. ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ನ್ಯಾಯಾಲಯದ ಒಟ್ಟು ಸದಸ್ಯರ ಮೂರನೇ ಒಂದು ಭಾಗದಷ್ಟು ನ್ಯಾಯಾಧೀಶರು ಪ್ರತಿ ಮೂರು ವರ್ಷಗಳಿಗೊಮ್ಮೆ ಚುನಾಯಿಸಲ್ಪಡುತ್ತಾರೆ ಮತ್ತು ಈ ಸದಸ್ಯರು ಮತ್ತೆ ನ್ಯಾಯಾಧೀಶರಾಗಿ ಚುನಾಯಿತ ರಾಗಲು ಅರ್ಹರಾಗಿರುತ್ತಾರೆ.
 4. ‘ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ’ ಆಡಳಿತ ವ್ಯವಹಾರಗಳಲ್ಲಿ ನೆರವು ನೀಡಲು ಅದಕ್ಕೆ ಶಾಶ್ವತ ಆಡಳಿತ ಸಚಿವಾಲಯವಿದೆ (Registry). ಇಂಗ್ಲಿಷ್ ಮತ್ತು ಫ್ರೆಂಚ್ ಇದರ ಅಧಿಕೃತ ಭಾಷೆಗಳಾಗಿವೆ.

 

ಅಂತರರಾಷ್ಟ್ರೀಯ ನ್ಯಾಯಾಲಯದ 15 ನ್ಯಾಯಾಧೀಶರನ್ನು ಈ ಕೆಳಗಿನ ವಲಯಗಳಿಂದ ಆಯ್ಕೆ ಮಾಡಲಾಗುಇಬ್ಬರು

 1. ಆಫ್ರಿಕಾದಿಂದ ಮೂವರು.
 2. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಿಂದ ಇಬ್ಬರು.
 3. ಏಷ್ಯಾದಿಂದ ಮೂವರು.
 4. ಪಶ್ಚಿಮ ಯುರೋಪ್ ಮತ್ತು ಇತರ ರಾಜ್ಯಗಳಿಂದ ಐದು ಜನ.
 5. ಪೂರ್ವ ಯುರೋಪಿನಿಂದ ಇಬ್ಬರು.

 

ನ್ಯಾಯಾಧೀಶರ ಸ್ವಾತಂತ್ರ್ಯ:

ಅಂತರರಾಷ್ಟ್ರೀಯ ಸಂಸ್ಥೆಗಳ ಇತರ ಅಂಗಗಳಂತೆ, ಅಂತರರಾಷ್ಟ್ರೀಯ ನ್ಯಾಯಾಲಯವು ಸರ್ಕಾರದ ಪ್ರತಿನಿಧಿಗಳನ್ನು ಹೊಂದಿಲ್ಲ. ನ್ಯಾಯಾಲಯದ ಸದಸ್ಯರು ಸ್ವತಂತ್ರ ನ್ಯಾಯಾಧೀಶರು, ತಮ್ಮ ಕರ್ತವ್ಯದ ಪ್ರಮಾಣವಚನ ಸ್ವೀಕರಿಸುವ ಮೊದಲು ಅವರ ಮೊದಲ ಕಾರ್ಯವೆಂದರೆ ಅವರು ತಮ್ಮ ಅಧಿಕಾರವನ್ನು ನಿಷ್ಪಕ್ಷಪಾತವಾಗಿ ಮತ್ತು ಶುದ್ಧ ಆತ್ಮಸಾಕ್ಷಿಯೊಂದಿಗೆ ಚಲಾಯಿಸುತ್ತೇವೆ ಎಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸುವುದು.

 

ನ್ಯಾಯವ್ಯಾಪ್ತಿ ಮತ್ತು ಕಾರ್ಯಗಳು:

 1. ‘ಅಂತರರಾಷ್ಟ್ರೀಯ ನ್ಯಾಯಾಲಯವು’ ಉಭಯ ನ್ಯಾಯವ್ಯಾಪ್ತಿಯೊಂದಿಗೆ ‘ವಿಶ್ವ ನ್ಯಾಯಾಲಯ’ವಾಗಿ ಕಾರ್ಯನಿರ್ವಹಿಸುತ್ತದೆ, ಅಂದರೆ ದೇಶಗಳ ನಡುವಿನ ಕಾನೂನು ವಿವಾದಗಳ ಇತ್ಯರ್ಥ (ವಿವಾದಾತ್ಮಕ ಪ್ರಕರಣಗಳು ) ವಿಶ್ವಸಂಸ್ಥೆಯ ವಿವಿಧ ಅಂಗಗಳು ಮತ್ತು ವಿಶೇಷ ಏಜೆನ್ಸಿಗಳು ಕಾನೂನು ಪ್ರಶ್ನೆಗಳ ಕುರಿತು ಮಾಡುವ ವಿನಂತಿಗಳಿಗೆ ಸಲಹಾತ್ಮಕ ಅಭಿಪ್ರಾಯಗಳನ್ನು ನೀಡುವುದು (ಸಲಹಾ ಪ್ರಕ್ರಿಯೆಗಳು).
 2. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ‘ಅಂತರಾಷ್ಟ್ರೀಯ ನ್ಯಾಯಾಲಯದ’ ಕಾಯ್ದೆಯ ಪಕ್ಷಗಳಾಗಿ ಮಾರ್ಪಟ್ಟಿರುವ ದೇಶಗಳು ಅಥವಾ ವಿಶೇಷ ಷರತ್ತುಗಳ ಅಡಿಯಲ್ಲಿ ‘ನ್ಯಾಯಾಲಯ’ದ ಅಧಿಕಾರ ವ್ಯಾಪ್ತಿಯನ್ನು ಒಪ್ಪಿಕೊಂಡಿರುವ ದೇಶಗಳು ಮಾತ್ರ’ ವಿವಾದಾತ್ಮಕ ಪ್ರಕರಣಗಳ (Contentious Cases) ವಿಲೇವಾರಿಗಾಗಿ ‘ಅಂತರರಾಷ್ಟ್ರೀಯ ನ್ಯಾಯಾಲಯದ’ ಪಕ್ಷಗಳಾಗಿವೆ ಅಥವಾ ಸದಸ್ಯ ದೇಶಗಳಾಗಿವೆ.
 3. ‘ಅಂತರಾಷ್ಟ್ರೀಯ ನ್ಯಾಯಾಲಯ’ದ ತೀರ್ಮಾನವು / ನಿರ್ಧಾರವು ಪಕ್ಷಗಳ / ದೇಶಗಳ ಮೇಲೆ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದಂತೆ ಅಂತಿಮವಾಗಿದೆ ಮತ್ತು ಬಂಧನ ಕಾರಿಯಾಗಿದೆ, (ಹೆಚ್ಚೆಂದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸತ್ಯದ ಆವಿಷ್ಕಾರದ ಮೇಲೆ ಅದರ ತೀರ್ಪನ್ನು ಮರು ವ್ಯಾಖ್ಯಾನಿಸಬಹುದು).

 

ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ವಾಹನ ಗುಜರಿ ನೀತಿ:


(Vehicle scrappage policy)

 ಸಂದರ್ಭ:

ವಾಹನ (ಸ್ಕ್ರ್ಯಾಪೇಜ್ ನೀತಿ) ಗುಜರಿ ನೀತಿಯ (Vehicle Scrappage Policy) ಅನುಷ್ಠಾನವನ್ನು ತ್ವರಿತಗೊಳಿಸಲು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ.

 

ವಾಹನಗಳ ಸ್ಕ್ರ್ಯಾಪೇಜ್ ನೀತಿ ಕುರಿತು:

 1. ಈ ನೀತಿಯ ಪ್ರಕಾರ, ಹಳೆಯ ವಾಹನಗಳನ್ನು ಮರು ನೋಂದಣಿ ಮಾಡುವ ಮೊದಲು ಅವುಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಸರ್ಕಾರಿ ವಾಹನಗಳು ಮತ್ತು 20 ವರ್ಷಕ್ಕಿಂತ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ.
 2. ಈ ನೀತಿಯ ಪ್ರಕಾರ ಹಳೆಯ ವಾಹನಗಳ ಬಳಕೆಯನ್ನು ನಿರುತ್ಸಾಹ ಗೊಳಿಸುವ ನಿಟ್ಟಿನಲ್ಲಿ, 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಾಹನಗಳ ಮರು-ನೋಂದಣಿಗೆ ಅವುಗಳ ಆರಂಭಿಕ ನೋಂದಣಿ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಲಾಗುವುದು.
 3. ನೀತಿಯಡಿಯಲ್ಲಿ, ಹಳೆಯ ಮತ್ತು ಅದಕ್ಷ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಲು ಹಳೆಯ ವಾಹನಗಳ ಮಾಲೀಕರನ್ನು ಉತ್ತೇಜಿಸಲು ಅವರಿಗೆ ಪ್ರೋತ್ಸಾಹಧನ ನೀಡುವ ಸಲುವಾಗಿ ವೈಯಕ್ತಿಕ ಖಾಸಗಿ ವಾಹನಗಳಿಗೆ 25% ಮತ್ತು ವಾಣಿಜ್ಯ ವಾಹನಗಳಿಗೆ 15% ವರೆಗೆ ರಸ್ತೆ-ತೆರಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಗಳನ್ನು ಕೇಳಬಹುದು.

  

ಹೊಸ ನೀತಿಯೊಂದಿಗಿನ ಸಮಸ್ಯೆಗಳು: 

 1.  ಟ್ರಕ್‌ಗಳಿಗೆ ಸೀಮಿತ ಪ್ರೋತ್ಸಾಹ ಮತ್ತು ಕಳಪೆ ವೆಚ್ಚದ ಅರ್ಥಶಾಸ್ತ್ರ / ಟ್ರಕ್‌ಗಳಿಗೆ ಕಡಿಮೆ ಮೊತ್ತದ ಬೆಲೆ ನೀಡುವ ವ್ಯವಹಾರವಾಗಿ ನೋಡಲಾಗುತ್ತಿದೆ.
 2. ಪತ್ತೆಹಚ್ಚಬಹುದಾದ ಇತರ ವರ್ಗದ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.
 3. 15 ವರ್ಷ ಹಳೆಯದಾದ ಆರಂಭಿಕ ದರ್ಜೆಯ ಸಣ್ಣ ಕಾರನ್ನು ಸ್ಕ್ರ್ಯಾಪ್ ಮಾಡುವುದರಿಂದ ಸಿಗುವ ಲಾಭ ಸುಮಾರು 70,000 ರೂ., ಆದರೆ ಅದನ್ನು ಮರುಮಾರಾಟ ಮಾಡುವುದರಿಂದ ಸಿಗುವ ಹಣ ಸುಮಾರು 95,000 ರೂ. ಆಗಿರುವುದರಿಂದ ಇದು ಸ್ಕ್ರ್ಯಾಪಿಂಗ್ ಅನ್ನು ಆಕರ್ಷಕವಲ್ಲದಂತೆ ಮಾಡುತ್ತದೆ.

 

ಈ ಸಮಯದ ಅವಶ್ಯಕತೆ:

ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು, ಸ್ಕ್ರ್ಯಾಪಿಂಗ್ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು, ನಾವು ಜೀವಿತಾವಧಿ ಮುಗಿದಿರುವ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಲು ಸಮಗ್ರ ಯೋಜನೆಯನ್ನು ರೂಪಿಸಬೇಕಾಗಿದೆ, ಅಂದರೆ ‘ಎಂಡ್ ಆಫ್ ಲೈಫ್ ವೆಹಿಕಲ್ಸ್’ (ELV). ಸರಕು ಸಾಗಣೆದಾರರಿಗೆ ಸಮರ್ಪಕ ಮತ್ತು ಉತ್ಸಾಹಭರಿತ ಆರ್ಥಿಕ ನೆರವು ನೀಡುವ ಅವಶ್ಯಕತೆಯಿದೆ. ಆದಾಗ್ಯೂ, ಹಳೆಯ ವಾಹನಗಳ ಸಮೂಹವನ್ನು ರಸ್ತೆಯಿಂದ ತೆಗೆದುಹಾಕುವವರೆಗೆ, ಬಿಎಸ್-6 (BS-VI)  ವಾಹನಗಳನ್ನು ಕಾರ್ಯಗತಗೊಳಿಸುವುದರಿಂದ ಆಗುವ ಪ್ರಯೋಜನಗಳನ್ನು ಸಂಪೂರ್ಣವಾಗಿ ಪಡೆಯಲಾಗುವುದಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಶುಕ್ರ ಗ್ರಹದ ಅಧ್ಯಯನಕ್ಕಾಗಿ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಎನ್ವಿಜನ್ ಮಿಷನ್:


(European Space Agency’s EnVision mission to Venus)

 ಸಂದರ್ಭ:

ಇತ್ತೀಚೆಗೆ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (European Space Agency- ESA) ತನ್ನ ಮುಂದಿನ ‘ಆರ್ಬಿಟರ್’(Orbiter) ಆಗಿ ‘ಎನ್ವಿಜನ್’(EnVision) ಅನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದೆ. ಅದು 2030 ರ ದಶಕದಲ್ಲಿ ಶುಕ್ರ ಗ್ರಹವನ್ನು ತಲುಪಲಿದೆ.

 

ಏನಿದು ಎನ್ವಿಜನ್ ಮಿಷನ್ ?

 1.  ಎನ್ವಿಜನ್ ಯೋಜನೆಯು ನಾಸಾದ ಭಾಗವಹಿಸುವಿಕೆಯೊಂದಿಗೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಯ ನೇತೃತ್ವದ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ.
 2. ಈ ಕಾರ್ಯಾಚರಣೆಯನ್ನು ‘ಅರಿಯೇನ್ 6’ ರಾಕೆಟ್ ಮೂಲಕ ಕೈಗೊಳ್ಳಲಾಗುವುದು.ಈ ಬಾಹ್ಯಾಕಾಶ ನೌಕೆ ಶುಕ್ರವನ್ನು ತಲುಪಲು ಸುಮಾರು 15 ತಿಂಗಳುಗಳು ಮತ್ತು ಶುಕ್ರನ ಕಕ್ಷೆಯಲ್ಲಿ ಸ್ಥಾಪಿತಗೊಂಡು ಶುಕ್ರನನ್ನು ಸುತ್ತಲೂ ಇನ್ನೂ 16 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.
 3. ಉದ್ದೇಶ: ಶುಕ್ರ ಗ್ರಹದ ವಾತಾವರಣ ಮತ್ತು ಮೇಲ್ಮೈಯನ್ನು ಅಧ್ಯಯನ ಮಾಡಲು, ಅದರ ವಾತಾವರಣದಲ್ಲಿ ಕಂಡುಬರುವ ಜಾಡಿನ ಅನಿಲಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಗ್ರಹದ ಮೇಲ್ಮೈ ಸಂಯೋಜನೆಯನ್ನು ವಿಶ್ಲೇಷಿಸಲು.
 4. ನಾಸಾ ಒದಗಿಸಿದ ರೇಡಾರ್ ಗ್ರಹದ ಮೇಲ್ಮೈಯನ್ನು ಚಿತ್ರೀಕರಿಸಲು ಮತ್ತು ಗ್ರಹದ ಮೇಲ್ಮೈಯನ್ನು ನಕ್ಷೆ ಮಾಡಲು ಸಹಾಯ ಮಾಡುತ್ತದೆ.

 

ಶುಕ್ರ ಗ್ರಹಕ್ಕೆ ಕೈಗೊಳ್ಳಲಾದ ಇತರ ಐತಿಹಾಸಿಕ ಕಾರ್ಯಾಚರಣೆಗಳು:

 1. ಇತ್ತೀಚಿಗೆ,ನಾಸಾ ಶುಕ್ರ ಗ್ರಹಕ್ಕೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ- ಡಾವಿನ್ಸಿ ಪ್ಲಸ್ (Davinci+) ಮತ್ತು ವೆರಿಟಾಸ್ (Veritas).
 2.  ಈ ಮೊದಲು ESA ನೇತೃತ್ವದಲ್ಲಿ ವೀನಸ್ ಎಕ್ಸ್‌ಪ್ರೆಸ್’ (Venus Express) (2005-2014) ಎಂಬ ಮಿಷನ್ ಕಳುಹಿಸಲಾಗಿತ್ತು. ವಾತಾವರಣದ (ವಾಯುಮಂಡಲದ ವಿಜ್ಞಾನದ) ಸಂಶೋಧನೆ ನಡೆಸುವುದು ಮತ್ತು ಗ್ರಹದ ಮೇಲ್ಮೈಯಲ್ಲಿ ಜ್ವಾಲಾಮುಖಿ ಹಾಟ್‌ಸ್ಪಾಟ್‌ಗಳನ್ನು ಕಂಡುಹಿಡಿಯುವುದು ಇದರ ಉದ್ದೇಶವಾಗಿತ್ತು.
 3. ಶುಕ್ರಕ್ಕೆ ಕಳುಹಿಸಿದ ಮೊದಲ ಬಾಹ್ಯಾಕಾಶ ನೌಕೆ ಸೋವಿಯತ್ ಒಕ್ಕೂಟವು ಅಭಿವೃದ್ಧಿಪಡಿಸಿದ ವೆನೆರಾ ಸರಣಿಯಾಗಿದ್ದು (Venera series), ನಂತರ ನಾಸಾದ ಮೆಗೆಲ್ಲನ್ (Magellan) ಮಿಷನ್ (1990–1994) ಅನ್ನು ಶುಕ್ರವನ್ನು ಅಧ್ಯಯನ ಮಾಡಲು ಕಳುಹಿಸಲಾಯಿತು.
 4. ಪ್ರಸ್ತುತ, ಜಪಾನ್‌ನ ಅಕಾಟ್ಸುಕಿ (Akatsuki mission) ಮಿಷನ್ ಶುಕ್ರ ಗ್ರಹವನ್ನು ಅದರ ಕಕ್ಷೆಯಿಂದ ಅಧ್ಯಯನ ಮಾಡುತ್ತಿದೆ.

 

ಶುಕ್ರ ಗ್ರಹವನ್ನು ಅಧ್ಯಯನ ಮಾಡಲು ವಿಜ್ಞಾನಿಗಳ ಆಸಕ್ತಿಯ ಕಾರಣ:

ಶುಕ್ರ ಗ್ರಹದ ಅಧ್ಯಯನ ಅಗತ್ಯ:

 1. ಗಾತ್ರ, ದ್ರವ್ಯರಾಶಿ, ಸಾಂದ್ರತೆ, ವಿನ್ಯಾಸ ಮತ್ತು ಗುರುತ್ವಾಕರ್ಷಣೆಯ ಸಾಮ್ಯತೆಯಿಂದಾಗಿ ಶುಕ್ರವನ್ನು ಭೂಮಿಯ ‘ಅವಳಿ ಸಹೋದರಿ’ ಎಂದು ವಿವರಿಸಲಾಗುತ್ತದೆ.
 2. ಎರಡೂ ಗ್ರಹಗಳು 4.5 ಶತಕೋಟಿ ವರ್ಷಗಳ ಹಿಂದೆ ದಟ್ಟವಾದ ಅನಿಲ ಮೋಡದಿಂದ ಒಂದೇ ಸಮಯದಲ್ಲಿ ರೂಪುಗೊಂಡಿವೆ ಎಂದು ನಂಬಲಾಗಿದೆ, ಇದು ಇದೇ ರೀತಿಯ ಮೂಲವನ್ನು ಸೂಚಿಸುತ್ತದೆ.
 3. ಶುಕ್ರವು ಭೂಮಿಗೆ ಹೋಲಿಸಿದರೆ ಸೂರ್ಯನಿಗೆ ಸುಮಾರು 30 ಪ್ರತಿಶತದಷ್ಟು ಹತ್ತಿರದಲ್ಲಿದೆ, ಇದರ ಪರಿಣಾಮವಾಗಿ ಈ ಗ್ರಹದಲ್ಲಿ ಸೌರ ವಿಕಿರಣದ ತೀವ್ರತೆಯು ಹೆಚ್ಚು.

ವಿಶಾಲವಾಗಿ ಹೇಳುವುದಾದರೆ, ಭೂಮಿ ಮತ್ತು ಶುಕ್ರವು ಗಾತ್ರ ಮತ್ತು ಸಂಯೋಜನೆಯಲ್ಲಿ ಬಹುತೇಕ ಒಂದೇ ಆಗಿವೆ, ಆದರೂ ಎರಡು ಗ್ರಹಗಳು ಪರಸ್ಪರ ಭಿನ್ನವಾಗಿ ವಿಕಸನಗೊಂಡಿವೆ. ಶುಕ್ರನ ಸುತ್ತಲೂ ದಟ್ಟವಾದ ಮೋಡದ ಹೊದಿಕೆ ಕಂಡುಬರುತ್ತದೆ, ಇದರಿಂದಾಗಿ ಉಷ್ಣತೆಯು ವಾತಾವರಣದಿಂದ ಹೊರಹೋಗುವುದಿಲ್ಲ, ಇದರ ಪರಿಣಾಮವಾಗಿ ಇದು ಸೌರವ್ಯೂಹದ ಅತ್ಯಂತ ಉಷ್ಣ ಗ್ರಹವಾಗಿ ಮಾರ್ಪಟ್ಟಿದೆ.

 

ಈ ಕಾರ್ಯಾಚರಣೆಗಳಲ್ಲಿ, ವಿಜ್ಞಾನಿಗಳು ಈ ಕೆಳಗಿನ ಪ್ರಶ್ನೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ:

 1. ಈಗಿನ ಸ್ಥಿತಿಯನ್ನು ತಲುಪಲು ಶುಕ್ರನು ಯಾವ ಪರಿಸ್ಥಿತಿಗಳನ್ನು ಎದುರಿಸಬೇಕಾಗಿತ್ತು ಮತ್ತು ಭೂಮಿಯು ಸಹ ಇದೇ ರೀತಿಯ ವಿನಾಶಕಾರಿ ಹಸಿರುಮನೆ ಪರಿಣಾಮಕ್ಕೆ ಒಳಗಾಗುತ್ತದೆ ಎಂದು ಮುನ್ಸೂಚನೆ ನೀಡುತ್ತದೆಯೇ?
 2. ಶುಕ್ರ ಇನ್ನೂ ಭೌಗೋಳಿಕವಾಗಿ ಸಕ್ರಿಯವಾಗಿದೆಯೇ?
 3. ಶುಕ್ರ ಗ್ರಹದಲ್ಲಿ ಎಂದಾದರೂ ಸಾಗರವು ಉಪಸ್ಥಿತಿಯನ್ನು ಹೊಂದಿತ್ತೆ ಮತ್ತು ಜೀವಿಗಳ ಜೀವನ ನಿರ್ವಹಣೆಗೆ ಸಾಕ್ಷಿಯಾಗಿತ್ತೆ?
 4. ನಾವು ಭೂಮಿಯಂತಹ ಇತರ ಹೊರಗಿನ ಗ್ರಹಗಳನ್ನು ಅನ್ವೇಷಣೆ ಮಾಡುವಾಗ ಸಾಮಾನ್ಯವಾಗಿ ಭೂಮಿಯ ಗ್ರಹಗಳ ವಿಕಾಸದ ಬಗ್ಗೆ ಯಾವ ಪಾಠಗಳನ್ನು ಕಲಿಯಬಹುದು?

 

ಶುಕ್ರ ಗ್ರಹದ ಕುರಿತು:

 1. ಇಳೆಯ ವಾಸಿಗಳಿಗೆ, ಶುಕ್ರವು ಚಂದ್ರನ ನಂತರ ಆಕಾಶದಲ್ಲಿ ಎರಡನೇ ಪ್ರಕಾಶಮಾನವಾದ ವಸ್ತುವಾಗಿದೆ.
 2. ಅದರ ಸುತ್ತಲೂ ದಟ್ಟವಾದ ಮೋಡದ ಹೊದಿಕೆಯಿಂದ ಇದು ಪ್ರಕಾಶಮಾನವಾಗಿ ಕಾಣುತ್ತದೆ, ಈ ಮೋಡಗಳಿಂದ ಬೆಳಕು ಪ್ರತಿಫಲಿಸುತ್ತದೆ ಮತ್ತು ಚದುರಿಹೋಗುತ್ತದೆ.
 3. ಇದು ಸೂರ್ಯನಿಗೆ ಹತ್ತಿರವಿರುವ ಎರಡನೇ ಗ್ರಹವಾಗಿದೆ.
 4. ಅದರ ಒಂದೇ ಗಾತ್ರದ ಕಾರಣ, ಇದನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯಲಾಗುತ್ತದೆ.

 

ಶುಕ್ರನು ಭೂಮಿಯಿಂದ ಹೇಗೆ ಭಿನ್ನವಾಗಿದೆ?

 1.  ಶುಕ್ರವು ತುಂಬಾ ದಟ್ಟವಾದ ವಾತಾವರಣವನ್ನು ಹೊಂದಿದೆ, ಅದು ಶಾಖವು ಹೊರಗೆ ಹರಿದುಹೋಗಲು ಅನುಮತಿಸುವುದಿಲ್ಲ, ಅದಕ್ಕಾಗಿಯೇ, ಸೂರ್ಯನಿಗೆ ಹತ್ತಿರವಿರುವ ‘ಬುಧ’ ಗ್ರಹದ ನಂತರ ಬಂದರೂ, ಇದು ಸೌರಮಂಡಲದ ಅತ್ಯಂತ ಬಿಸಿಯಾದ ಗ್ರಹವಾಗಿದೆ.
 2. ಅನಿಯಂತ್ರಿತ ಹಸಿರುಮನೆ ಪರಿಣಾಮವನ್ನು ಒಳಗೊಂಡಂತೆ, ಅದರ ಮೇಲ್ಮೈ ತಾಪಮಾನವು 880°F (471 ° C) ತಲುಪುತ್ತದೆ, ಇದು ಸೀಸವನ್ನು ಕರಗಿಸಲು ಬೇಕಾದ ಗರಿಷ್ಠ ತಾಪಮಾನವನ್ನು ಹೊಂದಿದೆ.
 3. ಶುಕ್ರನು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಮುಂದಕ್ಕೆ ಚಲಿಸುತ್ತಾನೆ, ಆದರೆ ಅದರ ಅಕ್ಷದ ಮೇಲೆ ನಿಧಾನವಾಗಿ ಹಿಂದಕ್ಕೆ ತಿರುಗುತ್ತಾನೆ. ಇದರರ್ಥ ಶುಕ್ರನ ಮೇಲೆ ಸೂರ್ಯನು ಪಶ್ಚಿಮಕ್ಕೆ ಉದಯಿಸಿ ಪೂರ್ವದಲ್ಲಿ ಅಸ್ತಮಿಸುತ್ತಾನೆ.
 4. ಶುಕ್ರನಿಗೆ ಯಾವುದೇ ಚಂದ್ರನೂ ಇಲ್ಲ ಮತ್ತು ಅದರ ಸುತ್ತಲೂ ಉಂಗುರವು ಇಲ್ಲ.
 5. ಈ ಗ್ರಹದ ಮತ್ತೊಂದು ವಿಶಿಷ್ಟತೆಯೆಂದರೆ ಅದರ ಹಗಲು-ರಾತ್ರಿ ಚಕ್ರ, ಅಂದರೆ ‘ಒಂದು ಕ್ರಾಂತಿಯಲ್ಲಿ ತೆಗೆದುಕೊಂಡ ಸಮಯಕ್ಕೆ ವಿರುದ್ಧವಾಗಿ ಸತತ ಎರಡು ಸೂರ್ಯೋದಯಗಳ ನಡುವಿನ ಸಮಯ’. ಶುಕ್ರ ಗ್ರಹದ ಮೇಲೆ ಹಗಲು-ರಾತ್ರಿ ಚಕ್ರವನ್ನು ಪೂರ್ಣಗೊಳಿಸಲು ಭೂಮಿಯ 117 ದಿನಗಳನ್ನು ತೆಗೆದುಕೊಳ್ಳುತ್ತದೆ, ಏಕೆಂದರೆ ಅದು ಸೂರ್ಯನ ಸುತ್ತ ತನ್ನ ಕಕ್ಷೆಯ ಹಾದಿಯ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ.
 6. ಶುಕ್ರ ಗ್ರಹದ ತನ್ನ ಸುತ್ತ ತಿರುಗುವಿಕೆಯು (ಅಕ್ಷಭ್ರಮಣ) ಭೂಮಿಯ 243.0226 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಇದರರ್ಥ ಶುಕ್ರ ಗ್ರಹದಲ್ಲಿ ಒಂದು ದಿನ ಗ್ರಹದ ಒಂದು ವರ್ಷಕ್ಕಿಂತ ಅಧಿಕವಾಗಿರುತ್ತದೆ. ಶುಕ್ರ ಗ್ರಹವು ಭೂಮಿಯ 225 ದಿನಗಳಲ್ಲಿ ಸೂರ್ಯನ ಸುತ್ತ ಸಂಪೂರ್ಣ ಪ್ರದಕ್ಷಿಣೆಯನ್ನು(ಪರಿಭ್ರಮಣ) ಪೂರ್ಣಗೊಳಿಸುತ್ತದೆ.
 7. ಶುಕ್ರ ಗ್ರಹದ ಕೋರ್ ನ ವ್ಯಾಸವು 4,360 ಮೈಲಿ (7,000 ಕಿಮೀ) ಆಗಿದೆ ಇದನ್ನು ಭೂಮಿಯ ಕೋರ್ ಗೆ ಹೋಲಿಸಬಹುದಾಗಿದೆ.
 8. ಅಧ್ಯಯನದಲ್ಲಿ ಮಾಡಿದ ಲೆಕ್ಕಾಚಾರಗಳ ಪ್ರಕಾರ, ಶುಕ್ರ ಗ್ರಹದ ಅಕ್ಷೀಯ ಇಳಿಜಾರು ಅಥವಾ ಓರೆಯಾಗಿರುವ ಪ್ರಮಾಣ ಸುಮಾರು64 ಡಿಗ್ರಿ. ಭೂಮಿಯ ಅಕ್ಷೀಯ ಓರೆಯು ಭೂ ಪಥ ಲಂಬಕ್ಕೆ ಸುಮಾರು 23.5 ಡಿಗ್ರಿ ಮತ್ತು ಭೂ ಪಥಕ್ಕೆ 5 ಡಿಗ್ರಿ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಪಾರಂಪರಿಕ ಮರಗಳ’ ರಕ್ಷಣೆಗಾಗಿ ಮಹಾರಾಷ್ಟ್ರ ಸರ್ಕಾರದ ಪ್ರಸ್ತಾವಿತ ತಿದ್ದುಪಡಿ:


(Maharashtra govt’s proposed amendment for protection of ‘heritage trees’)

 

ಸಂದರ್ಭ:

ಪರಿಸರ ಸಂರಕ್ಷಣೆಗೆ ಒತ್ತು ನೀಡುವ ವಿನೂತನ ಕ್ರಮವಾಗಿ 50 ವರ್ಷ ಹಳೆಯದಾದ ಮರಗಳಿಗೆ ಪಾರಂಪರಿಕ (Heritage Trees)  ಸ್ಥಾನಮಾನ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಪಾರಂಪರಿಕ ಮರಗಳು ಕಲ್ಪನೆಯನ್ನು ಸಾಕಾರಗೊಳಿಸಲು 1975ರ ಮಹಾರಾಷ್ಟ್ರ (ನಗರ ಪ್ರದೇಶ) ಮರಗಳ ಉಳಿವು ಮತ್ತು ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲು (Maharashtra (Urban Areas) Protection and Preservation of Trees Act of 1975) ಸರ್ಕಾರ ಉದ್ದೇಶಿಸಿದೆ.

 

ಪಾರಂಪರಿಕ ಮರಗಳು ಎಂದರೇನು?

 ಅಂದಾಜು 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮರವನ್ನು ಪಾರಂಪರಿಕ ಮರ ಅಥವಾ ‘ಹೆರಿಟೇಜ್ ಟ್ರೀ’ ಎಂದು ವ್ಯಾಖ್ಯಾನಿಸಲಾಗುತ್ತದೆ. ಇವುಗಳು ಹಲವಾರು ನಿರ್ದಿಷ್ಟ ಪ್ರಭೇದಗಳ ಮರಗಳನ್ನು ಒಳಗೊಂಡಿರಬಹುದು, ಅದನ್ನು ಕಾಲಕಾಲಕ್ಕೆ ಸೂಚಿಸಲಾಗುತ್ತದೆ.

 

ಹೆರಿಟೇಜ್ ಟ್ರೀ’ ಪರಿಕಲ್ಪನೆಯನ್ನು ಪರಿಚಯಿಸಲು ಕಾರಣ:

 1. ಪಾರಂಪರಿಕ ವೃಕ್ಷಕ್ಕೆ ವಿಶೇಷ ರಕ್ಷಣೆ ನೀಡಲಾಗುವುದು.
 2. ಪರಿಹಾರ ತೋಟ (Compensatory plantation) – ಒಂದು ‘ಪಾರಂಪರಿಕ ಮರ’ವನ್ನು ಕತ್ತರಿಸಿದಾಗ, ಕತ್ತರಿಸಿದ ಮರದ ವಯಸ್ಸಿನ ಸಂಖ್ಯೆಗೆ ಸಮಾನವಾದ ಹೊಸ ಮರಗಳನ್ನು ನೆಡಬೇಕಾಗುತ್ತದೆ.
 3. ಸರಿದೂಗಿಸುವ ಮರಗಳ ತೋಟ ಸಂಘಟನೆ ಅಥವಾ ಪರಿಹಾರದ ಮರಗಳನ್ನು ನೆಡುವ ಸಂಸ್ಥೆಯು ಈ ಹೊಸ ಮರಗಳ ರಕ್ಷಣೆಯನ್ನು ಏಳು ವರ್ಷಗಳವರೆಗೆ ಖಚಿತಪಡಿಸಿಕೊಳ್ಳಬೇಕು ಮತ್ತು ಮರಗಳನ್ನು ಜಿಯೋ-ಟ್ಯಾಗ್ (Geo-tag) ಮಾಡಬೇಕು.
 4. ಸರಿದೂಗಿಸುವ ತೋಟ ಸಾಧ್ಯವಾಗದಿದ್ದರೆ, ಮರಗಳನ್ನು ಕಡಿಯುವವರು ಮರಗಳ ಆರ್ಥಿಕ ಮೌಲ್ಯಕ್ಕೆ ಸಮಾನವಾದ ಪರಿಹಾರವನ್ನು ಪಾವತಿಸಬೇಕಾಗುತ್ತದೆ.

 

ಮರ ಪ್ರಾಧಿಕಾರ:

 1. ಪ್ರಸ್ತಾವಿತ ತಿದ್ದುಪಡಿಗಳ ಪ್ರಕಾರ, ಸ್ಥಳೀಯ ಪುರಸಭೆಗಳು ಮತ್ತು ಮಂಡಳಿಗಳಲ್ಲಿ ‘ಮರ ಪ್ರಾಧಿಕಾರ’ (Tree Authority) ವನ್ನು ರಚಿಸಲಾಗುವುದು, ಇದು ಮರಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
 2. ಈ ಪ್ರಾಧಿಕಾರವು ಪಾರಂಪರಿಕ ಮರಗಳ ಎಣಿಕೆಯೊಂದಿಗೆ, ಪ್ರತಿ ಐದು ವರ್ಷಗಳಿಗೊಮ್ಮೆ ಎಲ್ಲಾ ಮರಗಳ ಜನಗಣತಿಯನ್ನು ಖಚಿತಪಡಿಸುತ್ತದೆ.
 3. “ನಗರ ಪ್ರದೇಶಗಳಲ್ಲಿ ಮರದ ಹೊದಿಕೆಯನ್ನು ಹೆಚ್ಚಿಸುವುದು ಮತ್ತು ಅಸ್ತಿತ್ವದಲ್ಲಿರುವ ಮರಗಳನ್ನು ರಕ್ಷಿಸುವುದು” ಎಂಬ ಕಾರ್ಯವನ್ನು ಮರ ಪ್ರಾಧಿಕಾರಕ್ಕೆ ವಹಿಸಲಾಗಿದೆ.
 4. 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 200 ಕ್ಕೂ ಹೆಚ್ಚು ಮರಗಳನ್ನು ಕತ್ತರಿಸುವ ಪ್ರಸ್ತಾಪಗಳನ್ನು ರಾಜ್ಯ ವೃಕ್ಷ ಪ್ರಾಧಿಕಾರಕ್ಕೆ ಉಲ್ಲೇಖಿಸಲಾಗುವುದು.

 

ದಯವಿಟ್ಟು ಗಮನಿಸಿ:

ಪಶ್ಚಿಮ ಬಂಗಾಳದಲ್ಲಿ ಐದು ರೈಲ್ವೆ ಸೇತುವೆಗಳ ನಿರ್ಮಾಣಕ್ಕಾಗಿ ಕತ್ತರಿಸುತ್ತಿರುವ 300 ಪಾರಂಪರಿಕ ಮರಗಳ ಒಟ್ಟು ಮೌಲ್ಯ ಈ ಅಭಿವೃದ್ಧಿ ಯೋಜನೆಗಳ ಮೌಲ್ಯಕ್ಕಿಂತ ಅಧಿಕವಾಗಿದ್ದು, ಅವುಗಳನ್ನು ತೆರವುಗೊಳಿಸಬಾರದು ಎಂದು ತಜ್ಞರ ಸಮಿತಿಯೊಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

ಪಾರಂಪರಿಕ ಮರಗಳು ಬೃಹದಾಕಾರದಲ್ಲಿರುತ್ತವೆ. ಈ ಮರಗಳು ಪರಿಪಕ್ವವಾಗಲು ದಶಕಗಳೋ, ಶತಮಾನಗಳೋ ಬೇಕಾಗುತ್ತದೆ. ಇವು ನಾಗರಿಕ ಸಮಾಜ ಮತ್ತು ಪರಿಸರಕ್ಕೆ ನೀಡುವ ಸೇವೆ ಬಹು ದೊಡ್ಡದು ಎಂದು ವರಿಷ್ಠ ನ್ಯಾಯಾಲಯದ ಎದುರು ವಿವರಿಸಿದರು.

ಈ ಮರಗಳು ನೀಡುವ ಆಮ್ಲಜನಕ, ಮಣ್ಣಿಗೆ ನೀಡುವ ಸೂಕ್ಷ್ಮ ಪೋಷಕಾಂಶಗಳು, ಕಾಂಪೋಸ್ಟ್‌ ಮತ್ತು ಜೈವಿಕ ಗೊಬ್ಬರ ಮತ್ತಿತರ ವಸ್ತುಗಳ ಮೌಲ್ಯ ಲಕ್ಷ ಕೋಟಿಗಳಿಗೂ ಹೆಚ್ಚು ಎಂದು ಅಂದಾಜಿಸಬಹುದು. ಇಂಥ ಅಪರೂಪದ ಮರಗಳನ್ನು ಕತ್ತರಿಸುವುದರಿಂದ, ಪರಿಸರಕ್ಕೆ ತುಂಬಾ ನಷ್ಟವಾಗುತ್ತದೆ ಎಂದು ಸಮಿತಿ ತಿಳಿಸಿದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಅಭೂತಪೂರ್ವ ಫಲಿತಾಂಶಗಳನ್ನು ನೀಡುತ್ತಿರುವ CHIME (ದೂರದರ್ಶಕ) ಟೆಲಿಸ್ಕೋಪ್:


(CHIME telescope yields unprecedented results)

 ಸಂದರ್ಭ:

ಇತ್ತೀಚೆಗೆ, ಕೆನಡಿಯನ್ ಹೈಡ್ರೋಜನ್ ಇಂಟೆನ್ಸಿಟಿ ಮ್ಯಾಪಿಂಗ್ ಎಕ್ಸ್‌ಪೆರಿಮೆಂಟ್ (Canadian Hydrogen Intensity Mapping Experiment- CHIM) ಸಹಯೋಗದೊಂದಿಗೆ, ವಿಜ್ಞಾನಿಗಳು ದೂರದರ್ಶಕದ ಮೊದಲ FRB ಕ್ಯಾಟಲಾಗ್‌ನಲ್ಲಿ ಅತಿವೇಗದ ರೇಡಿಯೋ ಸ್ಫೋಟಗಳ’ (Fast Radio Bursts – FRBs) ದೊಡ್ಡ ಸಂಗ್ರಹವನ್ನು ಒಟ್ಟುಗೂಡಿಸಿದ್ದಾರೆ.

 

ಇದು ಏಕೆ ಮಹತ್ವದಾಗಿದೆ?

 ರೇಡಿಯೊ ಖಗೋಳವಿಜ್ಞಾನ ಕ್ಷೇತ್ರದಲ್ಲಿ, ‘ಅತಿವೇಗದ ರೇಡಿಯೋ ಸ್ಫೋಟ’ (ಎಫ್‌ಆರ್‌ಬಿ) ಗಳನ್ನು ನೋಡುವುದು ಅಪರೂಪದ ಘಟನೆ ಎಂದು ಪರಿಗಣಿಸಲಾಗಿದೆ. ಆದರೆ, ರೇಡಿಯೊ ಖಗೋಳಶಾಸ್ತ್ರಜ್ಞರು CHIME ಯೋಜನೆಗೆ ಮೊದಲು, 2007 ರಲ್ಲಿ ‘ಕ್ಷಿಪ್ರ ರೇಡಿಯೊ ಸ್ಫೋಟಗಳನ್ನು’ ಗಮನಿಸಿದರು, ಅದರ ನಂತರ,ವಿಜ್ಞಾನಿಗಳು ಕೇವಲ 140 ‘ಕ್ಷಿಪ್ರ ರೇಡಿಯೊ ಸ್ಫೋಟ’ (FRB) ಗಳನ್ನು ತಮ್ಮ ದೂರದರ್ಶಕಗಳಲ್ಲಿ ಗಮನಿಸಿದ್ದಾರೆ.

 

ಅತಿವೇಗದ ರೇಡಿಯೋ ಸ್ಫೋಟಗಳು ಎಂದರೇನು?

(What are FRBs?)

 1.  ಎಫ್‌ಆರ್‌ಬಿಗಳು ವಿದ್ಯುತ್ಕಾಂತೀಯ ವರ್ಣಪಟಲದ ರೇಡಿಯೊ ಬ್ಯಾಂಡ್‌ನಲ್ಲಿ ಕಾಣಿಸಿಕೊಳ್ಳುವ ಬೆಳಕಿನ ಪ್ರಕಾಶಮಾನವಾದ ಹೊಳಪಿನವಾಗಿವೆ,ಇವು ಕೆಲವು ಮಿಲಿಸೆಕೆಂಡುಗಳಿಗೆ ಮಾತ್ರ ಬೆಳಗುತ್ತವೆ, ನಂತರ ಒಂದು ಜಾಡನ್ನೂ ಬಿಡದೆ ಕಣ್ಮರೆಯಾಗುತ್ತದೆ.
 2. ಈ ಸಂಕ್ಷಿಪ್ತ ಮತ್ತು ನಿಗೂಢ ಬೆಳಕಿನ ಹೊಳಪನ್ನು ಬ್ರಹ್ಮಾಂಡದ ವಿವಿಧ ಮತ್ತು ದೂರದ ಭಾಗಗಳಲ್ಲಿ, ಹಾಗೆಯೇ ನಮ್ಮದೇ ನಕ್ಷತ್ರಪುಂಜದಲ್ಲಿ ಕಾಣಬಹುದು.
 3. ಅವುಗಳ ಮೂಲ ಇನ್ನೂ ತಿಳಿದಿಲ್ಲ ಮತ್ತು ಅವುಗಳ ನೋಟವು ಹೆಚ್ಚು ಅನಿರೀಕ್ಷಿತವಾಗಿದೆ.

 

CHIME ಯೋಜನೆಯ ಕುರಿತು:

 1.  ಇದು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ದೈತ್ಯ ಸ್ಥಿರ ರೇಡಿಯೊ ದೂರದರ್ಶಕವಾಗಿದೆ.
 2. ಈ ದೂರದರ್ಶಕವು ಭೂಮಿಯ ತಿರುಗುವಿಕೆಯ ಸಮಯದಲ್ಲಿ ಆಕಾಶದ ಅರ್ಧಭಾಗದಿಂದ ಪ್ರತಿದಿನ ರೇಡಿಯೋ ಸಂಕೇತಗಳನ್ನು ಪಡೆಯುತ್ತದೆ.
 3. ಈ ದೂರದರ್ಶಕದ ಯಾವುದೇ ಭಾಗವು ಚಲಿಸುತ್ತಿಲ್ಲ ಮತ್ತು ಅದು ಭೂಮಿಯು ತನ್ನ ಸುತ್ತ ಸುತ್ತುತ್ತಿರುವಾಗ ಆಕಾಶದ ಅರ್ಧದಷ್ಟು ಭಾಗವನ್ನು ಪ್ರತಿದಿನ ಗಮನಿಸುತ್ತದೆ.
 4. CHIME ಯೋಜನೆಯಲ್ಲಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ, ಮೆಕ್‌ಗಿಲ್ ವಿಶ್ವವಿದ್ಯಾಲಯ, ಟೊರೊಂಟೊ ವಿಶ್ವವಿದ್ಯಾಲಯ ಮತ್ತು ಕೆನಡಿಯನ್ ರಾಷ್ಟ್ರೀಯ ಸಂಶೋಧನಾ ಮಂಡಳಿಯ ಡೊಮಿನಿಯನ್ ರೇಡಿಯೋ ಖಗೋಳ ಭೌತಿಕ ವೀಕ್ಷಣಾಲಯವು ಪಾಲುದಾರಿಕೆ ಹೊಂದಿದೆ.

 


 ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಚೀನಾ-ಶ್ರೀಲಂಕಾ ಸ್ನೇಹ ಆಸ್ಪತ್ರೆ ಕಾರ್ಯಾರಂಭ:

 1.  ಇತ್ತೀಚೆಗೆ, ‘ಚೀನಾ-ಶ್ರೀಲಂಕಾ ಸ್ನೇಹ ಆಸ್ಪತ್ರೆ’ ಯನ್ನು ಶ್ರೀಲಂಕಾದ ಉತ್ತರ ಮಧ್ಯ ಪ್ರಾಂತ್ಯದಲ್ಲಿರುವ ಪೊಲೊನಾರೂವಾದಲ್ಲಿ ಉದ್ಘಾಟಿಸಲಾಯಿತು.
 2. ಇದನ್ನು ಚೀನಾ ನೀಡಿದ 60 ಮಿಲಿಯನ್ ಡಾಲರ್ ಅನುದಾನದೊಂದಿಗೆ ನಿರ್ಮಿಸಲಾಗಿದೆ.

 

ಉಮ್ಲಿಂಗ್ ಲಾ:

(Umling La)

 1. ಸಮುದ್ರ ಮಟ್ಟಕ್ಕಿಂತ 5.793 ಮೀಟರ್ (19,005 ಅಡಿ) ಎತ್ತರದಲ್ಲಿ, ಉಮ್ಲಿಂಗ್ ಲಾ (Umling La) ವಿಶ್ವದ ಅತಿ ಹೆಚ್ಚು ಎತ್ತರದ ವಾಹನ ಸಂಚರಣೆಯ ರಸ್ತೆಗಳಲ್ಲಿ ಒಂದಾಗಿದೆ.
 2. ಇದು ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿದೆ.
 3. ಉಮ್ಲಿಂಗ್ ಲಾ ಪಾಸ್ ಮೂಲಕ ಹಾದುಹೋಗುವ 54 ಕಿ.ಮೀ ಉದ್ದದ ಈ ರಸ್ತೆಯು ಚಿಸುಮ್ಲೆ (Chisumle) ಮತ್ತು ಡೆಮ್ಚೋಕ್ (Demchok) ಗ್ರಾಮಗಳನ್ನು ಸಂಪರ್ಕಿಸುತ್ತದೆ.
 4. ಪ್ರಾಜೆಕ್ಟ್ ಹಿಮಾಂಕ್ ಅಡಿಯಲ್ಲಿ ಈ ರಸ್ತೆಯನ್ನು BRO ನಿರ್ಮಿಸಿದೆ ಮತ್ತು ಇದನ್ನು ನಿರ್ಮಿಸಲು ಆರು ವರ್ಷಗಳ ಸಮಯವನ್ನು ತೆಗೆದುಕೊಂಡಿದೆ.

 

 

 

ರಾಷ್ಟ್ರೀಯ ಭದ್ರತಾ ಪಡೆ (NSG):

 1.  NSG ಯು, ಭಯೋತ್ಪಾದನಾ ನಿಗ್ರಹ ಘಟಕವಾಗಿದೆ, ಇದನ್ನು ಔಪಚಾರಿಕವಾಗಿ 1986 ರಲ್ಲಿ ಸಂಸತ್ತಿನ ಕಾಯಿದೆ- ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಾಯ್ದೆ, 1986’ ರ ಮೂಲಕ ರಚಿಸಲಾಯಿತು.
 2. ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಕಾರ್ಯ-ಆಧಾರಿತ (task-oriented) ಪಡೆಯಾಗಿದೆ.
 3. ಇದನ್ನು ಫೆಡರಲ್ ಆಕಸ್ಮಿಕ ಶಕ್ತಿ’ ಎಂದು ಪರಿಗಣಿಸಲಾಗುತ್ತದೆ ಮತ್ತು ಭಾರತದಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಎದುರಿಸುವ ನಿರ್ದಿಷ್ಟ ಕಾರ್ಯವನ್ನು ವಹಿಸಲಾಗಿದೆ.
 4. NSG ಸಿಬ್ಬಂದಿಯನ್ನು ಅವರ ಕಪ್ಪು ಸಮವಸ್ತ್ರ ಮತ್ತು ಸಮವಸ್ತ್ರದ ಮೇಲಿನ ಕಪ್ಪು ಬೆಕ್ಕಿನ ಚಿಹ್ನೆಯಿಂದಾಗಿ ಅವರನ್ನು ಬ್ಲ್ಯಾಕ್ ಕ್ಯಾಟ್ಸ್’ ಎಂದೂ ಕರೆಯುತ್ತಾರೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos