Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 10ನೇ ಜೂನ್ 2021

 

ಪರಿವಿಡಿ:

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಚುನಾವಣಾ ಆಯುಕ್ತರು.

2. ಕೇರಳದ ಸ್ಮಾರ್ಟ್ ಕಿಚನ್ ಯೋಜನೆ.

3. ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು 2022.

4. ಲಸಿಕೆ ರಾಷ್ಟ್ರೀಯತೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಭತ್ತ, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಒಳಗೊಂಡಂತೆ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ.

2. ಎಲ್ ಸಾಲ್ವಡಾರನಲ್ಲಿ ಬಿಟ್ ಕಾಯಿನ್ ಗೆ ಕಾನೂನು ಮಾನ್ಯತೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಅಡ್ಡು ಅಟಾಲ್.

2. ಅರ್ಗೋಸ್ಟೆಮ್ಮಾ ಕ್ವಾರಂಟೇನಾ.

3. ನಾಗೋರ್ನೊ-ಕಾರಾಬಖ್ ಪ್ರದೇಶ.

4. ಇಂಡೋ-ಥಾಯ್ ಕಾರ್ಪಟ್.

5. ದೆಹಿಂಗ್ ಪಟ್ಕೈ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಚುನಾವಣಾ ಆಯುಕ್ತರು:


(Election Commissioner)

 ಸಂದರ್ಭ:

ಇತ್ತೀಚೆಗೆ ಉತ್ತರಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್ ಚಂದ್ರ ಪಾಂಡೆ ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ’ (Election Commissioner) ನೇಮಕ ಮಾಡಲಾಗಿದೆ.

 1. ಪಾಂಡೆ ಅವರ ನೇಮಕದೊಂದಿಗೆ ಮೂವರು ಸದಸ್ಯ ಬಲದ ಆಯೋಗ ವನ್ನು ಪೂರ್ಣ ಪ್ರಮಾಣದಲ್ಲಿ ಪುನಃಸ್ಥಾಪಿಸಿದಂತಾಗಿದೆ.

 

ಭಾರತದ ಚುನಾವಣಾ ಆಯೋಗದ ಬಗ್ಗೆ:

ಭಾರತದ ಚುನಾವಣಾ ಆಯೋಗವು– (Election commission of India- ECI) ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಕಾರ್ಯವಿಧಾನಗಳನ್ನು ನಡೆಸುವ ಜವಾಬ್ದಾರಿಯುತ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ.

 1. ಈ ಸಂಸ್ಥೆಯು ಲೋಕಸಭೆ, ರಾಜ್ಯಸಭೆ, ಭಾರತದ ರಾಜ್ಯ ಶಾಸಕಾಂಗಗಳು, ದೇಶದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಚುನಾವಣೆ ನಡೆಸುತ್ತದೆ.
 2. ಭಾರತ ಸಂವಿಧಾನದ 324 ನೇ ವಿಧಿ ಅನ್ವಯ ಸಂಸತ್ತು, ರಾಜ್ಯ ವಿಧಾನಮಂಡಲ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳ ಚುನಾವಣೆಗೆ ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣ ಮತ್ತು ಚುನಾವಣಾ ಪಟ್ಟಿಗಳನ್ನು ತಯಾರಿಸಲು ಚುನಾವಣಾ ಆಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ.
 3. ಸಂವಿಧಾನದ ಪ್ರಕಾರ, ಚುನಾವಣಾ ಆಯೋಗ ವನ್ನು 25 ಜನವರಿ 1950 ರಂದು ಸ್ಥಾಪಿಸಲಾಯಿತು. ಅದಕ್ಕಾಗಿಯೇ ಜನವರಿ 25 ಅನ್ನು ರಾಷ್ಟ್ರೀಯ ಮತದಾರರ ದಿನವಾಗಿ ಆಚರಿಸಲಾಗುತ್ತದೆ.

 

ಭಾರತದ ಚುನಾವಣಾ ಆಯೋಗದ ಸಂಯೋಜನೆ:

ಚುನಾವಣಾ ಆಯೋಗದ ಸಂಯೋಜನೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಈ ಕೆಳಗಿನ ನಿಬಂಧನೆಗಳನ್ನು ಮಾಡಲಾಗಿದೆ:

 1. ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರಿಂದ ಕೂಡಿದೆ.
 2. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.
 3. ಇನ್ನೊಬ್ಬರನ್ನು ಚುನಾವಣಾ ಆಯ್ತು ರನ್ನಾಗಿ ನೇಮಿಸಿದ ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.
 4. ಚುನಾವಣಾ ಆಯೋಗಕ್ಕೆ ಸಹಾಯ ಮಾಡಲು ಅಧ್ಯಕ್ಷರು ಅಗತ್ಯವೆಂದು ಪರಿಗಣಿಸಿದರೆ, ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಪ್ರಾದೇಶಿಕ ಆಯುಕ್ತರನ್ನು ನೇಮಿಸಬಹುದು.
 5. ಚುನಾವಣಾ ಆಯುಕ್ತರು ಮತ್ತು ಪ್ರಾದೇಶಿಕ ಆಯುಕ್ತರ ಸೇವಾ ಪರಿಸ್ಥಿತಿಗಳು ಮತ್ತು ಅಧಿಕಾರ ಅವಧಿಯನ್ನು ರಾಷ್ಟ್ರಪತಿಗಳು ನಿರ್ಧರಿಸುತ್ತಾರೆ.

 

ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಇತರ ಚುನಾವಣಾ ಆಯುಕ್ತರು (EC):

ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ಆಯೋಗದ ಅಧ್ಯಕ್ಷರಾಗಿದ್ದರೂ, ಅವರ ಅಧಿಕಾರವು ಇತರ ಚುನಾವಣಾ ಆಯುಕ್ತರ ಅಧಿಕಾರಕ್ಕೆ ಸಮಾನವಾಗಿರುತ್ತದೆ. ಆಯೋಗದ ಮುಂದೆ ಬರುವ ಎಲ್ಲಾ ವಿಷಯಗಳನ್ನು ಸದಸ್ಯರಲ್ಲಿನ ಬಹುಮತದ ಮೂಲಕ ನಿರ್ಧರಿಸಲಾಗುತ್ತದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರು ಸಮಾನ ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಾರೆ.

 

ಅಧಿಕಾರಾವಧಿ:

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಅಧಿಕಾರಾವಧಿ ಆರು ವರ್ಷ ಅಥವಾ 65 ವರ್ಷಗಳು, ಯಾವುದು ಮೊದಲನದೋ ಅದರಂತೆ ಅಧಿಕಾರದಿಂದ ನಿವೃತ್ತರಾಗುತ್ತಾರೆ.ಅವರು ಅಧ್ಯಕ್ಷರನ್ನು ಉದ್ದೇಶಿಸಿ ರಾಜೀನಾಮೆ ಪತ್ರವನ್ನು ಬರೆಯುವ ಮೂಲಕ ಯಾವುದೇ ಸಮಯದಲ್ಲಿ ರಾಜೀನಾಮೆಯನ್ನು ಸಲ್ಲಿಸಬಹುದು.

 

ರಾಜೀನಾಮೆ:

 1. ಅವರು ಯಾವುದೇ ಸಮಯದಲ್ಲಿ ರಾಜೀನಾಮೆ ನೀಡಬಹುದು ಅಥವಾ ಅವಧಿ ಮುಗಿಯುವ ಮೊದಲೇ ಅವರನ್ನು ತೆಗೆದುಹಾಕಬಹುದು.
 2. ಮುಖ್ಯ ಚುನಾವಣಾ ಆಯುಕ್ತರನ್ನು ಅವರ ಹುದ್ದೆಯಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ವಜಾ ಮಾಡುವ ರೀತಿಯಲ್ಲಿ ಮತ್ತು ಅದೇ ವಿಧಾನದ ಮೂಲಕ ತೆಗೆದುಹಾಕಬಹುದು.

 

ಮಿತಿಗಳು:

 1. ಸಂವಿಧಾನದಲ್ಲಿ, ಚುನಾವಣಾ ಆಯೋಗದ ಸದಸ್ಯರಿಗೆ ಯಾವುದೇ ಅರ್ಹತೆಗಳನ್ನು (ಕಾನೂನು, ಶೈಕ್ಷಣಿಕ, ಆಡಳಿತಾತ್ಮಕ ಅಥವಾ ನ್ಯಾಯಾಂಗ) ಸೂಚಿಸಲಾಗಿಲ್ಲ.
 2. ಸಂವಿಧಾನವು, ನಿವೃತ್ತ ಚುನಾವಣಾ ಆಯುಕ್ತರನ್ನು ಯಾವುದೇ ಕಚೇರಿಗೆ ಮರು ನೇಮಕ ಮಾಡುವ ಸರ್ಕಾರದ ನಿರ್ಧಾರವನ್ನು ಪ್ರತಿಬಂಧಿಸುವುದಿಲ್ಲ.  

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ಕೇರಳದ ಸ್ಮಾರ್ಟ್ ಕಿಚನ್ ಯೋಜನೆ:


(Kerala’s Smart Kitchen project)

ಸಂದರ್ಭ:

ಕೇರಳ ಸರ್ಕಾರ ‘ಸ್ಮಾರ್ಟ್ ಕಿಚನ್ ಯೋಜನೆ’ ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಡಿಗೆಮನೆಗಳನ್ನು ಆಧುನೀಕರಿಸುವುದು ಮತ್ತು ಗೃಹಿಣಿಯರು ಮನೆಕೆಲಸದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

 

ಯೋಜನೆಯ ಕುರಿತು:

 1. ಈ ಯೋಜನೆಯನ್ನು ಸರ್ಕಾರಿ ಚಿಟ್ ಫಂಡ್ ಮತ್ತು ಸಾಲ ನೀಡುವ ಸಂಸ್ಥೆಯಾದ ಕೇರಳ ರಾಜ್ಯ ಹಣಕಾಸು ಉದ್ಯಮಗಳು’ (Kerala State Financial Enterprises -KSFE) ಜಾರಿಗೆ ತರಲಿದೆ.
 2. ಈ ಯೋಜನೆಯಡಿ, KSFEಎಲ್ಲಾ ವರ್ಗದ ಮಹಿಳೆಯರಿಗೆ ಮನೆ ಗ್ಯಾಜೆಟ್‌ಗಳು ಅಥವಾ ಉಪಕರಣಗಳನ್ನು ಖರೀದಿಸಲು ಸುಲಭ ಸಾಲ (Soft Loans) ಸೌಲಭ್ಯವನ್ನು ಒದಗಿಸುತ್ತದೆ.
 3. ಈ ಸಾಲ / ವೆಚ್ಚದ ಮೇಲಿನ ಬಡ್ಡಿಯನ್ನು ಫಲಾನುಭವಿ, ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ನಡುವೆ ಸಮಾನವಾಗಿ ಹಂಚಲಾಗುತ್ತದೆ.

 

ಈ ಯೋಜನೆಯ ಅಗತ್ಯತೆ/ಮಹತ್ವ:

ಲಿಂಗ ಸಂವೇದಿ ಬಜೆಟ್(Gender budgeting): ಕಾರ್ಮಿಕಬಲದಲ್ಲಿ ಮಹಿಳೆಯರ ಉತ್ತಮ ಭಾಗವಹಿಸುವಿಕೆಗಾಗಿ, ಇವರ ಮೇಲೆ ಬೀಳುವ ಮನೆಕೆಲಸಗಳ ಹೊರೆಯನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಸರ್ಕಾರ ನಂಬುತ್ತದೆ.

ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು: ಅಡುಗೆಮನೆಯಲ್ಲಿ ಯಾಂತ್ರೀಕರಣವನ್ನು (ಅಂದರೆ ಯಾಂತ್ರಿಕೃತ ಉಪಕರಣಗಳನ್ನು ನೀಡುವ ಮೂಲಕ) ಹೆಚ್ಚಿಸುವ ಮೂಲಕ, ಕಾರ್ಮಿಕರ ವರ್ಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಬಹುದು.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು 2022:


(QS World University Rankings 2022)

 

ಸಂದರ್ಭ:

ಪ್ರಮುಖ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಕರಾದ ಕ್ಯೂಎಸ್ (Quacquarelli Symonds), ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಶ್ರೇಯಾಂಕಗಳ 18 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಇದು,ಅಂತರಾಷ್ಟ್ರೀಯ ಶ್ರೇಯಾಂಕ ತಜ್ಞರ ಗುಂಪಿನಿಂದ  (International Ranking Expert Group IREG) ಅನುಮೋದನೆ ಪಡೆದ ಏಕೈಕ(only international ranking) ಅಂತರರಾಷ್ಟ್ರೀಯ ಶ್ರೇಯಾಂಕವಾಗಿದೆ.

 

ವಿಶ್ವದ ಟಾಪ್ 3 ವಿಶ್ವವಿದ್ಯಾಲಯಗಳು:

 1. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Massachusetts Institute of Technology) ಸತತ 10ನೇ ವರ್ಷವೂ ವಿಶ್ವದ ನಂಬರ್ ಒನ್ ವಿಶ್ವವಿದ್ಯಾಲಯವಾಗಿ ಮುಂದುವರೆಯುವ ಮೂಲಕ ದಾಖಲೆ ನಿರ್ಮಿಸಿದೆ.
 2. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು 2006 ರ ನಂತರ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
 3. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳು ಮೂರನೇ ಸ್ಥಾನವನ್ನು ಹಂಚಿಕೊಂಡಿವೆ.

 

ಭಾರತೀಯ ಸಂಸ್ಥೆಗಳ ಕಾರ್ಯಕ್ಷಮತೆ:

 1. ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆ ಮತ್ತು IIT ದೆಹಲಿ ಅಗ್ರ-200 ಶ್ರೇಯಾಂಕಗಳಲ್ಲಿ ಸ್ಥಾನ ಪಡೆದ ಭಾರತದ ಮೂರು ವಿಶ್ವವಿದ್ಯಾಲಯಗಳಾಗಿವೆ.
 2.  ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು QS ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿದ್ದು, 561-570 ಬ್ಯಾಂಡ್‌ನಲ್ಲಿ ಸ್ಥಾನ ಪಡೆದಿದೆ.
 3. ಭಾರತದ 35 ವಿಶ್ವವಿದ್ಯಾಲಯಗಳಲ್ಲಿ ಹದಿನೇಳು ವಿಶ್ವವಿದ್ಯಾಲಯಗಳು CPF ಅಂಕಗಳಲ್ಲಿ ಹೆಚ್ಚಳವನ್ನು ಸಾಧಿಸಿದರೆ, 12 ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆ ಈ ಸೂಚಕದಲ್ಲಿ ಕುಸಿದಿದೆ.
 4. ಸವಾಲುಗಳು: ಆದಾಗ್ಯೂ, ಭಾರತೀಯ ವಿಶ್ವವಿದ್ಯಾಲಯಗಳು ಕ್ಯೂಎಸ್‌ನ ‘ಸಾಂಸ್ಥಿಕ ಕಲಿಕಾ ಸಾಮರ್ಥ್ಯ’ ಮಾನದಂಡಗಳೊಂದಿಗೆ ಹೋರಾಡುತ್ತಿವೆ. ಭಾರತದ 35 ವಿಶ್ವವಿದ್ಯಾಲಯಗಳಲ್ಲಿ ಇಪ್ಪತ್ತಮೂರು ‘ಬೋಧಕವರ್ಗ / ವಿದ್ಯಾರ್ಥಿ ಅನುಪಾತ ಸೂಚಕ’ದಲ್ಲಿ ಕುಸಿತವನ್ನು ತೋರಿಸಿದೆ ಮತ್ತು ಈ ಸೂಚಕದಲ್ಲಿ ಕೇವಲ ಆರು ವಿಶ್ವವಿದ್ಯಾಲಯಗಳು ಮಾತ್ರ ಸುಧಾರಣೆ ಸಾಧಿಸಿವೆ.
 5. ಬೋಧಕವರ್ಗ / ವಿದ್ಯಾರ್ಥಿ ಅನುಪಾತ’ ವಿಭಾಗದಲ್ಲಿ ಯಾವುದೇ ಭಾರತೀಯ ವಿಶ್ವವಿದ್ಯಾಲಯವು ‘ಟಾಪ್ 250’ ರಲ್ಲಿ ಸ್ಥಾನ ಪಡೆದಿಲ್ಲ.

 

ವಿಶ್ವವಿದ್ಯಾಲಯಗಳಿಗೆ ಶ್ರೇಯಾಂಕಗಳನ್ನು ಹೇಗೆ ನೀಡಲಾಗುತ್ತದೆ?

ಸಂಸ್ಥೆಗಳ ಶ್ರೇಯಾಂಕಗಳನ್ನು ಈ ಕೆಳಗಿನ ಆರು ಸೂಚಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ:

 1. ಶೈಕ್ಷಣಿಕ ಖ್ಯಾತಿ (Academic reputation).
 2. ಉದ್ಯೋಗದಾತ ಖ್ಯಾತಿ (employer reputation).
 3. ಪ್ರತಿ ಬೋಧಕವರ್ಗದ ಉಲ್ಲೇಖಗಳು (citations per faculty).
 4. ಬೋಧಕವರ್ಗ-ವಿದ್ಯಾರ್ಥಿ ಅನುಪಾತ (faculty/student ratio).
 5. ಅಂತರರಾಷ್ಟ್ರೀಯ ಅಧ್ಯಾಪಕರ ಅನುಪಾತ (international faculty ratio).
 6. ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪ್ರಮಾಣ (international student ratio).

 

ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ ಎಂದರೇನು?

 1. ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು ಬ್ರಿಟಿಷ್ ಸಂಸ್ಥೆಯಾದ ‘ಕ್ವಾಕ್ವೆರೆಲ್ಲಿ ಸೈಮಂಡ್ಸ್’ (Quacquarelli Symonds- QS) ನ ವಾರ್ಷಿಕ ಪ್ರಕಟಣೆಯಾಗಿದೆ. ಕ್ವಾಕರೆಲ್ಲಿ ಸೈಮಂಡ್ಸ್ (QS) ವಿಶ್ವದ ಉನ್ನತ ಶಿಕ್ಷಣ ಸಂಸ್ಥೆಗಳ ವಿಶ್ಲೇಷಣೆಯಲ್ಲಿ ಪರಿಣತಿ ಪಡೆದ ಸಂಸ್ಥೆಯಾಗಿದೆ.
 2. 2010 ಕ್ಕಿಂತ ಮೊದಲು, ಇದನ್ನು ಟೈಮ್ಸ್ ಉನ್ನತ ಶಿಕ್ಷಣ – ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು (Times Higher Education – QS world University rankings) ಎಂದು ಕರೆಯಲಾಗುತ್ತಿತ್ತು. 2010 ರಲ್ಲಿ ಅದರ ಹೆಸರನ್ನು ಬದಲಾಯಿಸಲಾಯಿತು.
 3. ಅಂತರರಾಷ್ಟ್ರೀಯ ಶ್ರೇಯಾಂಕ ತಜ್ಞರ ಗುಂಪು (International Ranking Expert Group -IREG) ಅನುಮೋದಿಸಿರುವ ಏಕೈಕ ಅಂತರರಾಷ್ಟ್ರೀಯ ಶ್ರೇಯಾಂಕ ಇದು.

 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಲಸಿಕೆ ರಾಷ್ಟ್ರೀಯತೆ:


(Vaccine Nationalism)

ಸಂದರ್ಭ:

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಚುನಾಯಿತ ಅಧ್ಯಕ್ಷ ಮತ್ತು ಮಾಲ್ಡೀವಿಯನ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರು ಲಸಿಕೆ ರಾಷ್ಟ್ರೀಯತೆಯ ವಿರುದ್ಧ ಎಚ್ಚರಿಕೆ ನೀಡಿದ್ದು, ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವ ವಿವಿಧ ದೇಶಗಳ ಪ್ರಯತ್ನಗಳನ್ನು ಇದು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ. ಇಂತಹ ನಡವಳಿಕೆಯನ್ನು “ಯಾವುದೇ ಬೆಲೆ ತೆತ್ತಾದರೂ” ತಪ್ಪಿಸಬೇಕು ಎಂದು ಹೇಳಿದ್ದಾರೆ.

 1. ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಪ್ರಪಂಚದ ಇತರ ದೇಶಗಳ ನಡುವಣ ‘ಲಸಿಕಾಕರಣ ವ್ಯಾಪ್ತಿ’ (vaccination coverage) ಗಳಲ್ಲಿನ ಅಸಮಾನತೆಯನ್ನು “ಸ್ವೀಕಾರಾರ್ಹವಲ್ಲ” ಎಂದು ಅವರು ಬಣ್ಣಿಸಿದರು.

 

ಲಸಿಕೆ ರಾಷ್ಟ್ರೀಯತೆ ಎಂದರೇನು?

 1. ಲಸಿಕೆ ರಾಷ್ಟ್ರೀಯತೆಯ ಎಂದರೆ, ಒಂದು ದೇಶವು ತನ್ನ ಸ್ವಂತ ನಾಗರಿಕರಿಗೆ ಅಥವಾ ನಿವಾಸಿಗಳಿಗೆ ಇತರ ದೇಶಗಳಿಗೆ ಲಭ್ಯವಾಗುವ ಮೊದಲು ನಿಗದಿತ ಲಸಿಕೆ ಪ್ರಮಾಣವನ್ನು ಪಡೆಯುವುದಾಗಿದೆ.
 2. ಇದಕ್ಕಾಗಿ, ಸರ್ಕಾರ ಮತ್ತು ಲಸಿಕೆ ತಯಾರಕರ ನಡುವೆ ಪೂರ್ವ-ಖರೀದಿ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ.

 

ಹಿಂದೆ ಇದರ ಬಳಕೆ ಹೇಗಿತ್ತು?

ಲಸಿಕೆ ರಾಷ್ಟ್ರೀಯತೆ ಹೊಸ ಪರಿಕಲ್ಪನೆಯಲ್ಲ. 2009 ರಲ್ಲಿ ಪ್ರಸಿದ್ಧ H1N1 ಜ್ವರ ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ, H1N1 ಲಸಿಕೆ ಉತ್ಪಾದಿಸುವ ಕಂಪನಿಗಳೊಂದಿಗೆ ವಿಶ್ವದ ಶ್ರೀಮಂತ ರಾಷ್ಟ್ರಗಳು ಪೂರ್ವ-ಖರೀದಿ ಒಪ್ಪಂದಗಳಿಗೆ ಸಹಿ ಹಾಕಿದವು.

 1. ಆ ಸಮಯದಲ್ಲಿ, ಅತ್ಯುತ್ತಮ ಪರಿಸ್ಥಿತಿಗಳಲ್ಲಿ, ಜಾಗತಿಕವಾಗಿ ಉತ್ಪಾದಿಸಬಹುದಾದ ಗರಿಷ್ಠ ಸಂಖ್ಯೆಯ ಲಸಿಕೆ ಪ್ರಮಾಣಗಳು ಎರಡು ಶತಕೋಟಿ ಎಂದು ಅಂದಾಜಿಸಲಾಗಿದೆ.
 2. ಅಮೇರಿಕ ಸಂಯುಕ್ತ ಸಂಸ್ಥಾನ ಮಾತ್ರ ಮಾತುಕತೆಯ ಮೂಲಕ 600,000 ಡೋಸ್ಗಳನ್ನು ಖರೀದಿಸುವ ಹಕ್ಕನ್ನು ಪಡೆದುಕೊಂಡಿದೆ. ಈ ಲಸಿಕೆಗಾಗಿ ಪೂರ್ವ-ಖರೀದಿ ಒಪ್ಪಂದ ಮಾಡಿಕೊಂಡ ಎಲ್ಲ ದೇಶಗಳು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಾಗಿವೆ.

 

ಇದೊಂದು ಉತ್ತಮ ನಡೆಯಲ್ಲ ಏಕೆ? ಮತ್ತು ಸಂಬಂಧಿತ ಕಾಳಜಿಗಳು ಯಾವುವೂ?

 1. ಲಸಿಕೆ ರಾಷ್ಟ್ರೀಯತೆ ಒಂದು ರೋಗದ ವಿರುದ್ಧ ಲಸಿಕೆ ಪಡೆಯಲು ಬಯಸುವ ಎಲ್ಲಾ ದೇಶಗಳ ಸಮಾನ ಪ್ರವೇಶಕ್ಕೆ ಹಾನಿಕಾರಕವಾಗಿದೆ.
 2. ಕಡಿಮೆ ಸಂಪನ್ಮೂಲಗಳು ಮತ್ತು ಕಡಿಮೆ ಚೌಕಾಶಿ ಮಾಡುವ ಶಕ್ತಿ ಹೊಂದಿರುವ ದೇಶಗಳಿಗೆ ಇದು ಹೆಚ್ಚು ಹಾನಿ ಮಾಡುತ್ತದೆ.
 3. ಇದು ವಿಶ್ವದ ದಕ್ಷಿಣ ಭಾಗದ ಜನಸಂಖ್ಯೆಯನ್ನು ಪ್ರಮುಖ ಸಾರ್ವಜನಿಕ ಆರೋಗ್ಯ ಸರಕು ಗಳಿಗಾಗಿ ಸಮಯೋಚಿತ ಪ್ರವೇಶದಿಂದ ವಂಚಿತ ಗೊಳಿಸುತ್ತದೆ.
 4. ಲಸಿಕೆ ರಾಷ್ಟ್ರೀಯತೆ, ಅದರ ಪರಾಕಾಷ್ಠೆಯಲ್ಲಿ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹೆಚ್ಚಿನ ಅಪಾಯದ ಜನಸಂಖ್ಯೆಗೆ ವಿರುದ್ಧವಾಗಿ ಶ್ರೀಮಂತ ರಾಷ್ಟ್ರಗಳಲ್ಲಿನ ಸಾಮಾನ್ಯ-ಅಪಾಯದ ಜನಸಂಖ್ಯೆಗೆ ಲಸಿಕೆಗಳನ್ನು ನೀಡಲಾಗುತ್ತಿದೆ.

 

ಮುಂದೆ ಮಾಡಬೇಕಿರುವುದು ಏನು?

ಭೌಗೋಳಿಕತೆ ಮತ್ತು ಭೌಗೋಳಿಕ ರಾಜಕೀಯ (geopolitics)ವನ್ನು ಲೆಕ್ಕಿಸದೆ, ಲಸಿಕೆಯ ಕೈಗೆಟುಕುವಿಕೆ ಮತ್ತು ಜಾಗತಿಕ ಜನಸಂಖ್ಯೆಗೆ ಲಸಿಕೆಯ ಸಮಾನ ಪ್ರವೇಶ ಅವಕಾಶ ಎರಡನ್ನೂ ಒಳಗೊಳ್ಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಲಸಿಕೆಗಳ ಏಕರೂಪದ ವಿತರಣೆಗೆ ಒಂದು ಚೌಕಟ್ಟನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ. ಇದಕ್ಕಾಗಿ, ಈ ಸಂಸ್ಥೆಗಳು ಯಾವುದೇ ಸಾಂಕ್ರಾಮಿಕ ರೋಗ ಉಲ್ಬಣಿಸುವ ಮೊದಲು ಜಾಗತಿಕ ಮಟ್ಟದಲ್ಲಿ ಮಾತುಕತೆಗಳನ್ನು ಸಂಘಟಿಸಬೇಕು.

 

ಪರಿಹಾರ:

ಲಸಿಕೆ ರಾಜತಾಂತ್ರಿಕತೆ: ಲಸಿಕೆ ರಾಜತಾಂತ್ರಿಕತೆಯು ಜಾಗತಿಕ ಆರೋಗ್ಯ ರಾಜತಾಂತ್ರಿಕತೆಯ ಶಾಖೆಯಾಗಿದ್ದು, ಇದರಲ್ಲಿ ಒಂದು ರಾಷ್ಟ್ರವು ಇತರ ದೇಶಗಳೊಂದಿಗಿನ ಸಂಬಂಧವನ್ನು ಬಲಪಡಿಸಲು ಲಸಿಕೆಗಳ ಅಭಿವೃದ್ಧಿ ಅಥವಾ ವಿತರಣೆಯನ್ನು ಬಳಸುತ್ತದೆ.

 

ಭಾರತದ ಲಸಿಕೆ ರಾಜತಾಂತ್ರಿಕತೆ:

(India’s vaccine diplomacy)

 1. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಭಾರತವು ಈಗಾಗಲೇ ಹಲವಾರು ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್, ರೆಮ್ಡೆಸಿವಿರ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆಗಳ ಜೊತೆಗೆ ರೋಗನಿರ್ಣಯದ ಕಿಟ್‌ಗಳು, ವೆಂಟಿಲೇಟರ್‌ಗಳು, ಮುಖಗವಸುಗಳು, ಕೈಗವಸುಗಳು ಮತ್ತು ಇತರ ವೈದ್ಯಕೀಯ ಸರಬರಾಜುಗಳನ್ನು ಪೂರೈಸಿದೆ.
 2. ನೆರೆಯ ರಾಷ್ಟ್ರಗಳಿಗೆ ಭಾರತವು ಸಾಮರ್ಥ್ಯ ವೃದ್ಧಿ ಮತ್ತು ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿದೆ.
 3. ಈ ನೀತಿಯು, ಭಾರತದ ನೆರೆಹೊರೆ ಮೊದಲು (India’s neighborhood first initiative) ಎಂಬ ಉಪಕ್ರಮಕ್ಕೆ ಅನುಗುಣವಾಗಿದೆ.

 

ಆದಾಗ್ಯೂ, ಈ ವರ್ಷದ ಏಪ್ರಿಲ್‌ನಲ್ಲಿ, ಕೇಂದ್ರವು ಈ ವಸ್ತುಗಳ ರಫ್ತಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿತ್ತು, ಈ ಕಾರಣದಿಂದಾಗಿ, ಅಭಿವೃದ್ಧಿ ಹೊಂದುತ್ತಿರುವ ಸ್ನೇಹಪರ ದೇಶಗಳಿಗೆ ಲಸಿಕೆಗಳನ್ನು ಉಚಿತವಾಗಿ ಒದಗಿಸುವುದು ಮತ್ತು ಅಂತರರಾಷ್ಟ್ರೀಯ COVAX ಕಾರ್ಯಕ್ರಮದಡಿ ಕಡಿಮೆ ಆದಾಯದ ದೇಶಗಳಿಗೆ ನೀಡಿದ ಗಣನೀಯ ಕೊಡುಗೆಗಳಿಂದಾಗಿ ಮತ್ತು ಲಸಿಕೆಗಳನ್ನು ಪೂರೈಸುವ ಮೂಲಕ ಗಳಿಸಿದ ಸದ್ಭಾವನೆಗೆ ಹಾನಿಯಾಗಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ಭತ್ತ, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಒಳಗೊಂಡಂತೆ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ:


(Centre announces hike in MSP for paddy, pulses, oilseeds)

 

ಸಂದರ್ಭ:

ಸಾಮಾನ್ಯ ತಳಿಯ ಭತ್ತ, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಒರಟು ಸಿರಿ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ’ (Minimum Support Price- MSP) ಹೆಚ್ಚಳವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

 1. ಇತ್ತೀಚೆಗೆ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (Cabinet Committee on Economic Affairs- CCEA) ಈ ನಿರ್ಧಾರವನ್ನು ತೆಗೆದುಕೊಂಡಿದೆ.

 

ಕನಿಷ್ಠ ಬೆಂಬಲ ಬೆಲೆ’ (MSP) ಎಂದರೇನು?

‘ಕನಿಷ್ಠ ಬೆಂಬಲ ಬೆಲೆ’ (Minimum Support Prices -MSPs) ಎನ್ನುವುದು ಸರ್ಕಾರವು ರೈತರಿಂದ ಬೆಳೆಗಳನ್ನು ಖರೀದಿಸುವಾಗ ನೀಡುವ ಯಾವುದೇ ಬೆಳೆಯ ‘ಕನಿಷ್ಠ ದರವಾಗಿದೆ’,ಮತ್ತು ಇದನ್ನು ರೈತರ ಉತ್ಪಾದನಾ ವೆಚ್ಚದ ಕನಿಷ್ಠ ಒಂದೂವರೆ ಪಟ್ಟು ಬೆಲೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

2018-2019ರ ಕೇಂದ್ರ ಬಜೆಟ್​ನಲ್ಲಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗುವುದು ಎಂದು ಹೇಳಿದ್ದರು.

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (Commission for Agricultural Costs and Prices– CACP) ಶಿಫಾರಸಿನ ಮೇರೆಗೆ ‘ಕನಿಷ್ಠ ಬೆಂಬಲ ಬೆಲೆ’ (MSP) ಅನ್ನು ವರ್ಷದಲ್ಲಿ ಎರಡು ಬಾರಿ ನಿಗದಿಪಡಿಸಲಾಗುತ್ತದೆ.

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (CACP) ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಇದು ಖಾರೀಫ್ ಮತ್ತು ರಬಿ   ಋತುಗಳಿಗೆ ಬೆಲೆಗಳನ್ನು ಶಿಫಾರಸು ಮಾಡಲು ಪ್ರತ್ಯೇಕ ವರದಿಗಳನ್ನು ಸಿದ್ಧಪಡಿಸುತ್ತದೆ.

 

ಕನಿಷ್ಠ ಬೆಂಬಲ ಬೆಲೆಯನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ:

ನಿರ್ದಿಷ್ಟ ಬೆಳೆಗಳನ್ನು ಬೆಳೆಯುವ ರೈತರಿಗೆ (ಹೆಚ್ಚಿನ ಇಳುವರಿ ಇರುವಾಗ) ಯೋಗ್ಯ ಬೆಲೆ ಸಿಗುವುದನ್ನು ಖಾತರಿಪಡಿಸಲು ಕೆಲ ಬೆಳೆಗಳ ಖರೀದಿಯ ನಂತರ ಸರ್ಕಾರಿ ಸಂಸ್ಥೆಗಳಿಂದ ಬೆಲೆ ಘೋಷಿಸಲಾಗುತ್ತದೆ. ಇದೇ ಕನಿಷ್ಠ ಬೆಲೆಯೇ ಕನಿಷ್ಠ ಬೆಂಬಲ ಬೆಲೆ (Minimum Support Price -MSP). ಬೆಲೆ ಕುಸಿತಕ್ಕೆ ಕಡಿವಾಣ ಹಾಕಿ, ಸರ್ಕಾರವೇ ನೇರವಾಗಿ ರೈತರ ನೆರವಿಗೆಂದು ಮಾರುಕಟ್ಟೆಗೆ ಧಾವಿಸುವ ಪ್ರಕ್ರಿಯೆ ಇದು. ಪಡಿತರ ವಿತರಣೆ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಆಹಾರ ಧಾನ್ಯಗಳನ್ನು ಸರ್ಕಾರಗಳು ಇದೇ ಪ್ರಕ್ರಿಯೆಯಲ್ಲಿ ಸಂಗ್ರಹಿಸುತ್ತವೆ.

 

ಉತ್ಪಾದನಾ ವೆಚ್ಚ ಲೆಕ್ಕ ಹಾಕುವುದು ಹೇಗೆ?

MSPಯನ್ನು ಶಿಫಾರಸು ಮಾಡುವಾಗ, ಉತ್ಪಾದನಾ ವೆಚ್ಚವನ್ನು ಲೆಕ್ಕ ಹಾಕಲು CACP ಮೂರು ಸೂತ್ರಗಳನ್ನು ಬಳಸುತ್ತದೆ.

ಅವು A2, A2+FL ಮತ್ತು C2.

 1. A2- ಅಂದರೆ ನಿಜವಾಗಿ ಪಾವತಿಸಿದ ವೆಚ್ಚ. ‘A2’ ವೆಚ್ಚವು ರೈತ ನೇರವಾಗಿ ನಗದು ರೂಪದಲ್ಲಿ ಮತ್ತು ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು, ಕಾರ್ಮಿಕ ವೇತನ, ಇಂಧನ, ನೀರಾವರಿ ಇತ್ಯಾದಿಗಳ ಮೇಲೆ ಮಾಡಿದ ಎಲ್ಲಾ ಪಾವತಿಗಳನ್ನು ಒಳಗೊಂಡಿದೆ.
 2. A2+FL ಅಂದರೆ ನಿಜವಾಗಿ ಪಾವತಿಸಿದ ವೆಚ್ಚ ಮತ್ತು ಪಾವತಿ ಮಾಡದ ಕುಟುಂಬ ಕಾರ್ಮಿಕರ ಮೌಲ್ಯವನ್ನು ಸೂಚಿಸುತ್ತದೆ.
 3. C2- ಉತ್ಪಾದನೆಯ ಸಮಗ್ರ ವೆಚ್ಚವನ್ನು ಸೂಚಿಸುತ್ತದೆ. ಇದರಲ್ಲಿ A2+FL ಜೊತೆಗೆ ಬಾಡಿಗೆ, ಒಡೆತನದ ಭೂಮಿ ಮತ್ತು ಬಂಡವಾಳದ ಮೇಲಿನ ಬಡ್ಡಿ ಇರುತ್ತದೆ.
 4. ಏತನ್ಮಧ್ಯೆ, ಪ್ರೊಫೆಸರ್ ಎಂ.ಎಸ್.ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತರ ಆಯೋಗವು ಶಿಫಾರಸು ಮಾಡಿರುವ ಸಿ2 ಸೂತ್ರ ಬಳಸಿ ಕನಿಷ್ಠ ಬೆಂಬಲ ಬೆಲೆ ಲೆಕ್ಕ ಹಾಕುವುದಾದರೆ ಉತ್ಪಾದನಾ ವೆಚ್ಚಕ್ಕಿಂತ 50% ಲಾಭವನ್ನು ಖಾತರಿಪಡಿಸುತ್ತದೆ. ಆದರೆ ಕೇಂದ್ರ ಸರ್ಕಾರವು ಎ 2+ ಎಫ್ಎಲ್ ಸೂತ್ರವನ್ನು ಪರಿಗಣಿಸುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.
 5. ರಾಜ್ಯ ಏಜೆನ್ಸಿಗಳು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ ನಂತರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧೀನದಲ್ಲಿರುವ ಭಾರತದ ಆಹಾರ ನಿಗಮ ಮತ್ತು ಇತರ ರಾಜ್ಯ ಏಜೆನ್ಸಿಗಳು ಶಿಫಾರಸು ಮಾಡಿದ ಕನಿಷ್ಠ ಬೆಂಬಲ ಬೆಲೆಯ ಬೆಳೆಗಳ ಸಂಗ್ರಹವನ್ನು ಕೈಗೊಳ್ಳುತ್ತವೆ.
 6. ಎಷ್ಟು ಧಾನ್ಯಗಳನ್ನು ಸಂಗ್ರಹಿಸಬೇಕು ಎಂಬುದು ಹೆಚ್ಚಾಗಿ ರಾಜ್ಯಮಟ್ಟದ ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಆದ್ದರಿಂದ ರಾಜ್ಯದಿಂದ ರಾಜ್ಯಕ್ಕೆ ಇದು ಭಿನ್ನವಾಗಿರುತ್ತದೆ.

 

MSP ಮಿತಿಗಳು:

 1. ‘ಕನಿಷ್ಠ ಬೆಂಬಲ ಬೆಲೆ’ (MSP) ಯ ಪ್ರಮುಖ ಸಮಸ್ಯೆ ಎಂದರೆ ಗೋಧಿ ಮತ್ತು ಭತ್ತವನ್ನು ಹೊರತುಪಡಿಸಿ ಉಳಿದ ಎಲ್ಲಾ ಬೆಳೆಗಳನ್ನು ಸಂಗ್ರಹಿಸಲು ಸರ್ಕಾರಿ ಯಂತ್ರೋಪಕರಣಗಳ ಕೊರತೆ. ‘ಸಾರ್ವಜನಿಕ ವಿತರಣಾ ವ್ಯವಸ್ಥೆ’ (ಪಿಡಿಎಸ್) ಅಡಿಯಲ್ಲಿ ಭಾರತದ ಆಹಾರ ನಿಗಮ (ಎಫ್‌ಸಿಐ) ಯಿಂದ ಗೋಧಿ ಮತ್ತು ಅಕ್ಕಿಯನ್ನು ನಿಯಮಿತವಾಗಿ ಸಂಗ್ರಹಿಸಲಾಗುತ್ತದೆ.
 2. ಧಾನ್ಯವನ್ನು ಅಂತಿಮವಾಗಿ ರಾಜ್ಯ ಸರ್ಕಾರಗಳು ಸಂಗ್ರಹಿಸುತ್ತವೆ ಮತ್ತು ಯಾವ ರಾಜ್ಯಗಳಲ್ಲಿ ಆಹಾರ ಧಾನ್ಯಗಳ ಸಂಗ್ರಹವನ್ನು ಸಂಪೂರ್ಣವಾಗಿ ಸರ್ಕಾರವು ಮಾಡುತ್ತದೆಯೋ, ಆ ರಾಜ್ಯಗಳ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಆದರೆ ಕಡಿಮೆ ಖರೀದಿ ಹೊಂದಿರುವ ರಾಜ್ಯಗಳ ರೈತರು ಹೆಚ್ಚಾಗಿ ನಷ್ಟದಲ್ಲಿರುತ್ತಾರೆ.
 3. MSP ಆಧಾರಿತ ಖರೀದಿ ವ್ಯವಸ್ಥೆಯು ಮಧ್ಯವರ್ತಿಗಳು, ಕಮಿಷನ್ ಏಜೆಂಟರು ಮತ್ತು APMC ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ ಮತ್ತು ಸಣ್ಣ ರೈತರಿಗೆ ಅವುಗಳನ್ನು ಪ್ರವೇಶಿಸಲು ಕಷ್ಟವಾಗುತ್ತದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಎಲ್ ಸಾಲ್ವಡಾರನಲ್ಲಿ ಬಿಟ್ ಕಾಯಿನ್ ಗೆ ಕಾನೂನು ಮಾನ್ಯತೆ:


(Legalisation of Bitcoin in El Salvador)

ಸಂದರ್ಭ:

ಮಧ್ಯ ಅಮೆರಿಕದ ಸಣ್ಣ ಕರಾವಳಿ ದೇಶವಾದ ಎಲ್ ಸಾಲ್ವಡಾರ್  (El Salvador)  ಬಿಟ್‌ಕಾಯಿನ್ (Bitcoin) ಅನ್ನು ಕಾನೂನುಬದ್ಧಗೊಳಿಸಿದ ವಿಶ್ವದ ಮೊದಲ ದೇಶವಾಗಿದೆ.

 

 

ಈ ನಡೆಯ ಹಿಂದಿನ ತರ್ಕವೇನು?

 1. ಎಲ್ ಸಾಲ್ವಡಾರ್ (El Salvador) ವಿವಿಧ ದೇಶಗಳಲ್ಲಿ ಕೆಲಸ ಮಾಡುವ ತನ್ನ ದೇಶವಾಸಿಗಳು ರವಾನಿಸುವ (Remittances) ಹಣದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ, ಮತ್ತು ಈ ಮೊತ್ತವು ದೇಶದ ಒಟ್ಟು ಜಿಡಿಪಿಯ 20% ಕ್ಕಿಂತ ಹೆಚ್ಚು ಆಗುತ್ತದೆ. ಆದಾಗ್ಯೂ, ಈ ಮೊತ್ತದ ಹೆಚ್ಚಿನ ಭಾಗವು ಮಧ್ಯವರ್ತಿಗಳಿಗೆ ಹೋಗುತ್ತದೆ.
 2. ಬಿಟ್‌ಕಾಯಿನ್ ಮೂಲಕ, ಒಂದು ದಶಲಕ್ಷಕ್ಕೂ ಹೆಚ್ಚು ಕಡಿಮೆ ಆದಾಯದ ಕುಟುಂಬಗಳು ಪಡೆಯುವ ಮೊತ್ತವು ಪ್ರತಿವರ್ಷ ಶತಕೋಟಿ ಡಾಲರ್‌ಗಳಿಗೆ ಸಮನಾಗಿ ಹೆಚ್ಚಾಗುತ್ತದೆ.
 3. ಇದಲ್ಲದೆ, ಎಲ್ ಸಾಲ್ವಡಾರ್ನಲ್ಲಿ 70% ಜನಸಂಖ್ಯೆಯು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಮತ್ತು ಅನೌಪಚಾರಿಕ ಆರ್ಥಿಕತೆಯನ್ನು ಅವಲಂಬಿಸಿರುವುದರಿಂದ, ಬಿಟ್ ಕಾಯಿನ್ ದೇಶದಲ್ಲಿ ಆರ್ಥಿಕ ಸೇರ್ಪಡೆ ಹೆಚ್ಚಿಸಲು ಸಹಾಯ ಮಾಡುತ್ತದೆ.

 

ದಯವಿಟ್ಟು ಗಮನಿಸಿ:

ಎಲ್ ಸಾಲ್ವಡಾರ್ನ ಬಲಪಂಥೀಯ ಸರ್ಕಾರವು ಯುಎಸ್ ಡಾಲರ್ ಅನ್ನು ದೇಶದ ಅಧಿಕೃತ ಕರೆನ್ಸಿಯನ್ನಾಗಿ ಮಾಡಿದ ನಂತರ ಎಲ್ ಸಾಲ್ವಡಾರ್ 2001 ರಿಂದ ತನ್ನದೇ ಆದ ವಿತ್ತೀಯ ನೀತಿಯನ್ನು ಹೊಂದಿಲ್ಲ. ಪ್ರಸ್ತುತ, ಎಲ್ ಸಾಲ್ವಡಾರ್ ಲ್ಯಾಟಿನ್ ಅಮೆರಿಕದ ಈಕ್ವೆಡಾರ್ ಮತ್ತು ಪನಾಮ ಗಳೊಂದಿಗೆ ‘ಡಾಲರ್-ಆರ್ಥಿಕತೆ’ ಹೊಂದಿರುವ ಮೂರು ದೇಶಗಳಲ್ಲಿ ಒಂದಾಗಿದೆ.

 

ಈ ನಡೆಯ ಟೀಕೆಗಳು:

‘ಕೇಂದ್ರೀಯ ನಿಯಂತ್ರಣ ಪ್ರಾಧಿಕಾರದ’ ಅನುಪಸ್ಥಿತಿಯಲ್ಲಿ, ಬಿಟ್‌ಕಾಯಿನ್ ಅನ್ನು ಕಾನೂನುಬದ್ಧವೆಂದು ಘೋಷಿಸುವ ನಿರ್ಣಯವು ವಂಚನೆ ಮತ್ತು ಅಕ್ರಮ ಹಣದ ವರ್ಗಾವಣೆ, ಹೆಚ್ಚಿನ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆಯಲ್ಲಿ ತೀವ್ರ ಚಂಚಲತೆ ಉಂಟಾಗುವ ಸಾಧ್ಯತೆ ಇರುತ್ತದೆ.

 

ವರ್ಚುವಲ್ ಕರೆನ್ಸಿಗಳನ್ನು ಜಾಗತಿಕವಾಗಿ ಅಳವಡಿಸಿಕೊಳ್ಳಲು ಯಾವುದೇ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ?

ವಿಶ್ವದ ಅನೇಕ ಭಾಗಗಳು ಆರ್ಥಿಕ ಅನಿಶ್ಚಿತತೆಗಳಿಂದ ಬಳಲುತ್ತಿದ್ದು, ಕ್ರಿಪ್ಟೋಕರೆನ್ಸಿಗಳ ಬಳಕೆ ಈ ಭಾಗಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಕ್ಯೂಬಾ, ವೆನೆಜುವೆಲಾ ಮತ್ತು ಮೆಕ್ಸಿಕೊದಂತಹ ಅನೇಕ ದೇಶಗಳಲ್ಲಿ, ಅನೇಕರು ವಿಕೇಂದ್ರೀಕೃತ ಮತ್ತು ಅನಿಯಂತ್ರಿತ ವರ್ಚುವಲ್ ಟೋಕನ್ ಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

 

ಭಾರತದಲ್ಲಿ ಈ ರೀತಿಯ ಕಾನೂನುಬದ್ಧಗೊಳಿಸುವಿಕೆ ಏಕೆ ಪರಿಣಾಮಕಾರಿಯಾಗುವುದಿಲ್ಲ?

 1. ಎಲ್ ಸಾಲ್ವಡಾರ್ ತನ್ನದೇ ಆದ ವಿತ್ತೀಯ ನೀತಿಯನ್ನು ಹೊಂದಿಲ್ಲ ಮತ್ತು ರಕ್ಷಿಸಲು ‘ಸ್ಥಳೀಯ ಕರೆನ್ಸಿ’ ಅನ್ನು ಸಹ ಹೊಂದಿಲ್ಲ. ಇದು ಅಮೇರಿಕಾದ ಫೆಡರಲ್ ರಿಸರ್ವ್ ನ ವಿತ್ತೀಯ ನೀತಿಯನ್ನು ಅನುಸರಿಸುತ್ತದೆ. ಆದ್ದರಿಂದ, ಫೆಡರಲ್ ರಿಸರ್ವ್ ನ ನೀತಿಗಳಲ್ಲಿನ ಯಾವುದೇ ಬದಲಾವಣೆ ಖಂಡಿತವಾಗಿಯೂ ದೇಶದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಎಲ್ ಸಾಲ್ವಡಾರ್ ಈ ರೀತಿಯ ಪರ್ಯಾಯ ಆಯ್ಕೆಗಳನ್ನು ನೋಡುತ್ತಿದೆ.
 2. ಆದರೆ, ಇದು ಭಾರತದ ವಿಷಯದಲ್ಲಿ ಹಾಗಿಲ್ಲ. ಭಾರತವು ತನ್ನದೇ ಆದ ಕರೆನ್ಸಿ ಮತ್ತು ಕೇಂದ್ರ ಬ್ಯಾಂಕ್ ಅನ್ನು ಹೊಂದಿದೆ. ಆದ್ದರಿಂದ ಏಕಕಾಲದಲ್ಲಿ ಬಿಟ್‌ಕಾಯಿನ್ ಮತ್ತು ರೂಪಾಯಿಯ ಕಾರ್ಯಾಚರಣೆ ಕಷ್ಟಕರ.

 

ಕ್ರಿಪ್ಟೋಕರೆನ್ಸಿಗಳಿಗೆ ಭಾರತದ ಪ್ರತಿಕ್ರಿಯೆ:

ಭಾರತದಲ್ಲಿ, ‘ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021’ (Cryptocurrency and Regulation of Official Digital Currency Bill, 2021) ಅನ್ನು ಸರ್ಕಾರ ಸಿದ್ಧಪಡಿಸಿದೆ.

 1. ಇದರ ಅಡಿಯಲ್ಲಿ, ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಮತ್ತು ಭಾರತೀಯ ರಿಸರ್ವ್ ಬ್ಯಾಂಕಿಗೆ (RBI) ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ, ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಮತ್ತು ‘ಅಧಿಕೃತ ಡಿಜಿಟಲ್ ಕರೆನ್ಸಿ’ ವಿತರಣೆಗೆ ನಿಯಂತ್ರಕ ಚೌಕಟ್ಟನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ.
 2. ಈ ವರ್ಷದ ಆರಂಭದಲ್ಲಿ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಬೇಕಿದ್ದ ಈ ಮಸೂದೆಯನ್ನು ಸರ್ಕಾರ ಮಧ್ಯಸ್ಥಗಾರರೊಂದಿಗೆ ಚರ್ಚಿಸುವುದನ್ನು ಮುಂದುವರಿಸಿದ್ದರಿಂದ ಅದನ್ನು ತಡೆಹಿಡಿಯಲಾಯಿತು.

 

ತೀರ್ಮಾನ:

ಎಲ್ ಸಾಲ್ವಡಾರ್ ಪ್ರಕರಣದಿಂದ ಭಾರತಕ್ಕೆ ಸಮಗ್ರ ತೀರ್ಮಾನ – ಈ ಉದಯೋನ್ಮುಖ ವಲಯದಲ್ಲಿ ತೊಡಗಿರುವ ನಾವೀನ್ಯಕಾರರು ಮತ್ತು ಉದ್ಯಮಿಗಳನ್ನು ಆಕರ್ಷಿಸಲು ದೇಶಗಳು ಎಂತಹ ನಿರ್ಧಾರವನ್ನಾದರೂ ತೆಗೆದುಕೊಳ್ಳಲು ಸಿದ್ಧವಾಗಿವೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಈ ಹಣವನ್ನು ಗಣಿಗಾರಿಕೆ ಮಾಡಲು ಭಾರತಕ್ಕೆ ಹೆಚ್ಚಿನ ಸಾಮರ್ಥ್ಯವಿದೆ ಮತ್ತು ಅದನ್ನು ಯಾವುದೇ ನಿರ್ದಿಷ್ಟ ನೀತಿಯ ಅಡಿಯಲ್ಲಿ ತರಲಾಗಿಲ್ಲ.

ಆದಾಗ್ಯೂ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ವಿತ್ತೀಯ ಮತ್ತು ಹಣಕಾಸು ನಿಯಮಗಳ ಕುರಿತು ಚರ್ಚೆಗಳು ಮುಂದುವರೆದಿವೆ, ಅದೇನೇ ಇದ್ದರೂ, ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಆವಿಷ್ಕಾರಗಳ ಬಗ್ಗೆ ಕೆಲಸ ಮಾಡುವ ಭಾರತದ ಅಭಿವರ್ಧಕರಿಗೆ ಪ್ರೋತ್ಸಾಹದ ಮೇಲೆ ಗಮನ ನೀಡುವುದು ಬಹಳ ಮುಖ್ಯ.

  

 

ಏನಿದು ಬಿಟ್ ಕಾಯಿನ್?: ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಗೆ (ಡಾಲರ್, ಪೌಂಡ್ , ರೂಪಾಯಿ) ಪರ್ಯಾ­ಯವಾಗಿ ಡಿಜಿಟಲ್ ರೂಪದಲ್ಲಿ ಇರುವ ಮತ್ತು ಇಂಟರ್‌ನೆಟ್‌ನಲ್ಲಿ ಮಾತ್ರ ವಹಿವಾಟು ನಡೆಸಬಹುದಾದ ಕರೆನ್ಸಿ­ಯಾಗಿದೆ.

ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021:

ಈ ಕಾನೂನಿನ ಉದ್ದೇಶಗಳು:

 1. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನೀಡುವ ಅಧಿಕೃತ ಡಿಜಿಟಲ್ ಕರೆನ್ಸಿಗೆ ಅನುಕೂಲಕರ ಚೌಕಟ್ಟನ್ನು ರಚಿಸುವುದು.
 2. “ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು” ಸಹಾಯಕವಾಗುತ್ತದೆ.
 3. ಈ ಮಸೂದೆಯು ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿ ಗಳನ್ನು ನಿಷೇಧಿಸಲು ಪ್ರಯತ್ನಿಸುತ್ತದೆ, ಆದಾಗ್ಯೂ, ಮಸೂದೆಯಲ್ಲಿ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಯನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಅನುಮತಿಸಲಾಗಿದೆ.

 


 ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಡ್ಡು ಅಟಾಲ್:

(Addu Atoll)

 ಮಾಲ್ಡೀವ್ಸ್ ನಲ್ಲಿದೆ.

ಹಿಂದೂ ಮಹಾಸಾಗರದಲ್ಲಿ ಅದರ ಕಾರ್ಯತಂತ್ರದ ಸ್ಥಳದ ಜೊತೆಗೆ, ದ್ವೀಪಸಮೂಹದ ಎರಡನೇ ಅತಿದೊಡ್ಡ ನಗರವಾಗಿದೆ ಈ ಅಡ್ಡು, ಮತ್ತು 30,000 ಜನಸಂಖ್ಯೆಯನ್ನು ಹೊಂದಿದೆ.

ಸುದ್ದಿಯಲ್ಲಿರಲು ಕಾರಣ ?

ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಇತ್ತೀಚೆಗೆ ಮಾಲ್ಡೀವ್ಸ್ ತನ್ನ ದಕ್ಷಿಣ ಆಡ್ಡು ಅಟಾಲ್‌ನಲ್ಲಿ ಭಾರತೀಯ ದೂತಾವಾಸವನ್ನು ತೆರೆಯುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

 

 

ಅರ್ಗೋಸ್ಟೆಮ್ಮಾ ಕ್ವಾರಂಟೇನಾ:

(Argostemma quarantena)

 1.  ಇದು ಕಾಫಿ ಕುಟುಂಬಕ್ಕೆ ಸೇರಿದ ಹೊಸ ಸಸ್ಯ ಪ್ರಭೇದವಾಗಿದೆ.
 2. ಇತ್ತೀಚೆಗೆ, ಇದು ಕೇರಳದ ವಾಗಮೊನ್ ಬೆಟ್ಟಗಳಲ್ಲಿ (Wagamon Hills) ಕಂಡುಬಂದಿದೆ.
 3. ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾವನ್ನಪ್ಪಿದ ಲಕ್ಷಾಂತರ ಜನರ ನೆನಪಿಗಾಗಿ ಇದನ್ನು ‘ಅರ್ಗೋಸ್ಟೆಮ್ಮಾ ಕ್ವಾರಂಟೇನಾ’ ಎಂದು ಹೆಸರಿಸಲಾಗಿದೆ.

ನಾಗೋರ್ನೊ-ಕಾರಾಬಖ್ ಪ್ರದೇಶ:

(Nagorno-Karabakh region)

 1.  ನಾಗೋರ್ನೊ-ಕರಬಖ್ ಪ್ರದೇಶವನ್ನು ಆರ್ಟ್ಸಖ್ (Artsakh) ಎಂದೂ ಕರೆಯುತ್ತಾರೆ. ಇದು ಕರಾಬಖ್ ಪರ್ವತ ಶ್ರೇಣಿಯಲ್ಲಿರುವ ದಕ್ಷಿಣ ಕಾಕಸಸ್ ನ ಭೂ ಪ್ರದೇಶವಾಗಿದೆ.
 2. ಇದನ್ನು ಅಜೆರ್ಬೈಜಾನ್‌ನ ಭಾಗವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ, ಆದರೆ ಅದರ ಜನಸಂಖ್ಯೆಯು ಬಹುಪಾಲು ಅರ್ಮೇನಿಯನ್ ಆಗಿದೆ.
 3. 1980 ರ ದಶಕದಲ್ಲಿ ಸೋವಿಯತ್ ಒಕ್ಕೂಟದ ಗಣರಾಜ್ಯಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಸಮಯದಲ್ಲಿ, ನಾಗೋರ್ನೊ-ಕಾರಾಬಖ್ ಪ್ರದೇಶದ ಜನರು ಅರ್ಮೇನಿಯಾವನ್ನು ಸೇರಲು ಮತ ಚಲಾಯಿಸಿದರು, ನಂತರ ಪ್ರಾರಂಭವಾದ ಯುದ್ಧವು 1994 ರಲ್ಲಿ ಕದನ ವಿರಾಮದೊಂದಿಗೆ ಕೊನೆಗೊಂಡಿತು.
 4. ಅಂದಿನಿಂದ, ನಾಗೋರ್ನೊ-ಕಾರಾಬಖ್ ಪ್ರದೇಶವು, ಅಜರ್ಬೈಜಾನ್ ನ ಭಾಗವಾಗಿ ಉಳಿದಿದೆ ಆದರೆ ಅರ್ಮೇನಿಯನ್ ಸರ್ಕಾರಿ ಬೆಂಬಲಿತ ಪ್ರತ್ಯೇಕವಾದಿ ಜನಾಂಗೀಯ ಅರ್ಮೇನಿಯನ್ನರು ಇದನ್ನು ನಿಯಂತ್ರಿಸುತ್ತಿದ್ದಾರೆ.

  

ಸಂದರ್ಭ:

 ಕಳೆದ ವರ್ಷ ಅರ್ಮೇನಿಯಾವು ಮತ್ತೆ ಆಕ್ರಮಿಸಿಕೊಂಡಿರುವ ವಿವಾದಿತ ನಾಗೋರ್ನೊ-ಕಾರಾಬಖ್ ಪ್ರದೇಶದಲ್ಲಿ ಸಂಕ್ಷಿಪ್ತ ಯುದ್ಧ ನಡೆದಿತ್ತು.

 1. ಟರ್ಕಿಯ ಫೈಟರ್ ಡ್ರೋನ್‌ಗಳು ಮತ್ತು ಅಂಕಾರಾದಿಂದ ಪಡೆದ ಇತರ ಶಸ್ತ್ರಾಸ್ತ್ರಗಳ ಸಹಾಯದಿಂದ ಅಜೆರ್ಬೈಜಾನ್, ಪ್ರತ್ಯೇಕತಾವಾದಿ ಜನಾಂಗೀಯ ಅರ್ಮೇನಿಯಾ ಹಿಡಿತದಲ್ಲಿದ್ದ ತನ್ನ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ.
 2. ಈ ಸಂಘರ್ಷವು 6,000 ಜನರನ್ನು ಬಲಿ ಪಡೆಯಿತು ಮತ್ತು ನವೆಂಬರ್ ನಲ್ಲಿ ರಷ್ಯಾದ ಮಧ್ಯಸ್ಥಿಕೆಯಿಂದಾಗಿ ಕದನ ವಿರಾಮದಲ್ಲಿ ಅಂತ್ಯಗೊಂಡಿತು. ಈ ಹೋರಾಟದ ಪರಿಣಾಮವಾಗಿ, 1990 ರ ದಶಕದಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರದ ಯುದ್ಧದಲ್ಲಿ ಅರ್ಮೇನಿಯನ್ನರು ವಶಪಡಿಸಿಕೊಂಡ ಪ್ರದೇಶಗಳಿಂದ ಅವರನ್ನು ಹೊರಹಾಕಲಾಯಿತು.

 

 

ಇಂಡೋ-ಥಾಯ್ ಕಾರ್ಪಟ್:

(Indo-Thai CORPAT)

 ಭಾರತೀಯ ನೌಕಾಪಡೆ ಮತ್ತು ರಾಯಲ್ ಥಾಯ್ ನೌಕಾಪಡೆಯ ನಡುವೆ ‘ಭಾರತ-ಥೈಲ್ಯಾಂಡ್ ಸಂಯೋಜಿತ ಪೆಟ್ರೋಲ್’ನ ಅಂದರೆ ಇಂಡೋ-ಥಾಯ್ ಕಾರ್ಪಟ್ ನ 31 ನೇ ಆವೃತ್ತಿಯನ್ನು (India-Thailand Coordinated Patrol : Indo-Thai CORPAT) ಆಯೋಜಿಸಲಾಗುತ್ತಿದೆ.

 

ದೆಹಿಂಗ್ ಪಟ್ಕೈ:

(Dihing Patkai)

 1.  ದೆಹಿಂಗ್ ಪಟ್ಕೈ ಅಸ್ಸಾಂನ 7 ನೇ ರಾಷ್ಟ್ರೀಯ ಉದ್ಯಾನವಾಗಿದೆ.
 2. ಇದು,ಅಸ್ಸಾಂನ ದಿಬ್ರುಗಡ ಮತ್ತು ಟಿನ್ಸುಕಿಯಾ ಜಿಲ್ಲೆಗಳಲ್ಲಿದೆ.
 3. ಅಸ್ಸಾಂ ಈಗ, ಮಧ್ಯಪ್ರದೇಶದಲ್ಲಿ 12 ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಒಂಬತ್ತು ರಾಷ್ಟ್ರೀಯ ಉದ್ಯಾನವನಗಳ ನಂತರ, 3ನೇ ಅತಿ ಹೆಚ್ಚಿನ ಸಂಖ್ಯೆಯ ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿರುವ ರಾಜ್ಯವಾಗಿದೆ.
 4. ಇದರಲ್ಲಿ ಹುಲಿ ಮತ್ತು ಕ್ಲೌಡೆಡ್ ಚಿರತೆ ಸೇರಿದಂತೆ 47 ಜಾತಿಯ ಸರೀಸೃಪಗಳು ಮತ್ತು ಸಸ್ತನಿಗಳಿವೆ.
 5. ಅಸ್ಸಾಂನ ರಾಷ್ಟ್ರೀಯ ಉದ್ಯಾನಗಳು: ಕಾಜಿರಂಗಾ, ಮಾನಸ್, ನಮೆರಿ, ಒರಾಂಗ್, ಡಿಬ್ರು-ಸೈಖೋವಾ, ರೈಮೋನಾ ರಾಷ್ಟ್ರೀಯ ಉದ್ಯಾನ ಮತ್ತು ದೆಹಿಂಗ್ ಪಾಟ್ಕೈ. ಕಾಜಿರಂಗ ಮತ್ತು ಮನಸ್ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಸ್ಥಾನಮಾನವನ್ನು ಹೊಂದಿದ್ದು, ನಮೆರಿ ಮತ್ತು ಒರಾಂಗ್ ರಾಷ್ಟ್ರೀಯ ಉದ್ಯಾನವನಗಳ ಜೊತೆಗೆ ಹುಲಿ ಸಂರಕ್ಷಿತ ಪ್ರದೇಶಗಳು ಕೂಡಾ ಆಗಿವೆ.
 6. ರೈಮೋನಾ ರಾಷ್ಟ್ರೀಯ ಉದ್ಯಾನವನದ ಪಶ್ಚಿಮದಲ್ಲಿ, ಪಶ್ಚಿಮ ಬಂಗಾಳದ ಬುಕ್ಸಾ ಟೈಗರ್ ರಿಸರ್ವ್‌ ಇದೆ ಮತ್ತು ತನ್ನ ಉತ್ತರಕ್ಕೆ ಭೂತಾನ್‌ನ ಫಿಪ್ಸು ವನ್ಯಜೀವಿ ಅಭಯಾರಣ್ಯ ಹೊಂದಿದೆ ಮತ್ತು ಪೂರ್ವದಲ್ಲಿ ಮಾನಸ್ ರಾಷ್ಟ್ರೀಯ ಉದ್ಯಾನವನದೊಂದಿಗೆ ಸಂಪರ್ಕ ಹೊಂದಿದೆ.
 7. ಈ ಪ್ರದೇಶದಲ್ಲಿ ವಾಸಿಸುವ ಜನಾಂಗೀಯ ಗುಂಪುಗಳಲ್ಲಿ ಸ್ಥಳೀಯ ಅಸ್ಸಾಮೀಸ್ ಸಮುದಾಯಗಳು ಸೇರಿವೆ, ವಿಶೇಷವಾಗಿ ತೈ ಫಕೆ, ಖಮಿಯಾಂಗ್, ಖಾಂಪ್ಟಿ, ಸಿಂಗ್ಫೊ, ನೋಕ್ಟೆ, ಅಹೋಮ್, ಕೈಬರ್ಟಾ, ಮೊರನ್ ಮತ್ತು ಮೊಟೊಕ್, ಬರ್ಮೀಸ್ ಮತ್ತು ಸ್ಥಳೀಯರಲ್ಲದ ನೇಪಾಳಿ ಜನರು.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos