Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 9ನೇ ಜೂನ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂಸತ್ತಿನ ಮುಂಗಾರು ಅಧಿವೇಶನ ಜುಲೈನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.

2. ಸ್ವಾಯತ್ತ ಮಂಡಳಿ ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿರುವ ರೆಂಗ್ಮಾ ನಾಗಾಗಳು.

3. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಅವರನ್ನು ಎರಡನೇ ಅವಧಿಗೆ ಮುಂದುವರೆಸಲು ಅನುಮೋದಿಸಿದ UN ಭದ್ರತಾ ಮಂಡಳಿ.

4. ಬ್ರಿಕ್ಸ್ ಅಸಾಧಾರಣವಾದವನ್ನು ವಿರೋಧಿಸುತ್ತದೆ: ಚೀನಾ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಆಪರೇಷನ್ ಪಂಗಿಯಾ

2. ಸುದ್ದಿಯಲ್ಲಿರುವ GI ಪ್ರಮಾಣೀಕೃತ ಮಾವಿನಹಣ್ಣು.

3. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಅನ್ನು ಇಂಗಾಲ ತಟಸ್ಥಗೊಳಿಸಲು CESL ಮತ್ತು ಲಡಾಖ್ ಆಡಳಿತದ ನಡುವೆ ಒಪ್ಪಂದ.

4. ಸುರಕ್ಷಿತ್ ಹಮ್ ಸುರಕ್ಷಿತ್ ತುಮ್ ಅಭಿಯಾನ.

5. YUVA: ಯುವ ಲೇಖಕರಿಗೆ ಮಾರ್ಗದರ್ಶನ ನೀಡಲು ಪ್ರಧಾನ ಮಂತ್ರಿಗಳ ಯೋಜನೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಸಂಸತ್ತಿನ ಮುಂಗಾರು ಅಧಿವೇಶನ ಜುಲೈನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ:


(Monsoon session of Parliament likely to begin in July)

ಸಂದರ್ಭ:

ಸಂಸತ್ತಿನ ಮುಂಗಾರು (ಮಾನ್ಸೂನ್) ಅಧಿವೇಶನವು ಜುಲೈನಲ್ಲಿ ನಿಗದಿತ ಸಮಯಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಹಿಂದಿನ ಅಧಿವೇಶನದ ಅವಧಿಯನ್ನು ಮಾರ್ಚ್ 25 ರಂದು  ಮೊಟಕುಗೊಳಿಸಲಾಯಿತು ಮತ್ತು ಸಂಸತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ (sine die) ಮುಂದೂಡಲಾಯಿತು, ಸಾಂವಿಧಾನಿಕ ಮಾನದಂಡಗಳ ಪ್ರಕಾರ ಮುಂದಿನ ಸಂಸತ್ ಅಧಿವೇಶನವನ್ನು ಆರು ತಿಂಗಳ ಅವಧಿಯೊಳಗೆ ನಡೆಸಬೇಕು ಎಂಬ ನಿಬಂಧನೆ ಇದೆ. ಈ ಅವಧಿ ಸೆಪ್ಟೆಂಬರ್ 14 ಕ್ಕೆ ಕೊನೆಗೊಳ್ಳುತ್ತದೆ.

 ಹಿನ್ನೆಲೆ:

ಕಳೆದ ವರ್ಷ ಮಾರ್ಚ್‌ನಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಸಂಸತ್ತಿನ ಮೂರು ಅಧಿವೇಶನಗಳ ಅವಧಿಯನ್ನು ಮೊಟಕುಗೊಳಿಸಲಾಗಿದೆ. ಈ ಅಧಿವೇಶನಗಳಲ್ಲಿ ಮೊದಲನೆಯದು 2020 ರ ಬಜೆಟ್ ಅಧಿವೇಶನ. ಕಳೆದ ವರ್ಷದ ಚಳಿಗಾಲದ ಅಧಿವೇಶನವನ್ನು ಸಹ ಮೊಟಕುಗೊಳಿಸಲಾಯಿತು, ಮತ್ತು ಸಾಮಾನ್ಯವಾಗಿ ಜುಲೈನಲ್ಲಿ ಪ್ರಾರಂಭವಾಗುವ ಮಾನ್ಸೂನ್ ಅಧಿವೇಶನವು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾಯಿತು.

ಸಂವಿಧಾನದ ನಿಬಂಧನೆ ಏನು?

 1. ಭಾರತೀಯ ಸಂವಿಧಾನದ 85 ನೇ ವಿಧಿ ಪ್ರಕಾರ, ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು.
 2. ದಯವಿಟ್ಟು ಗಮನಿಸಿ:ಸಂಸತ್ತಿನ ಅಧಿವೇಶನಗಳನ್ನು ಯಾವಾಗ ಮತ್ತು ಎಷ್ಟು ದಿನಗಳವರೆಗೆ ನಡೆಸಬೇಕು ಎಂದು ಸಂವಿಧಾನವು ನಿರ್ದಿಷ್ಟಪಡಿಸಿಲ್ಲ. ಅಥವಾ

ಸಂವಿಧಾನವು, ಸಂಸತ್ತು ಯಾವಾಗ ಅಥವಾ ಎಷ್ಟು ದಿನಗಳವರೆಗೆ ಸಭೆ ಸೇರಬೇಕು ಎಂಬುದರ ಕುರಿತು ಸ್ಪಷ್ಟನೆ ನೀಡಿಲ್ಲ.

ವಿಧಿ 85 ರ ಪ್ರಕಾರ, ರಾಷ್ಟ್ರಪತಿಗಳು ಕಾಲಕಾಲಕ್ಕೆ, ಪ್ರತಿ ಸಂಸತ್ತಿನ ಅಧಿವೇಶನವನ್ನು ಕರೆಯಬಹುದು. ಹೀಗಾಗಿ, ಸರ್ಕಾರದ ಶಿಫಾರಸಿನ ಮೇರೆಗೆ ಸಂಸತ್ತಿನ ಅಧಿವೇಶನವನ್ನು ಕರೆಯಬಹುದು ಮತ್ತು ಅಧಿವೇಶನದ ದಿನಾಂಕ ಮತ್ತು ಅವಧಿಯನ್ನು ಸರ್ಕಾರವೇ ನಿರ್ಧರಿಸುತ್ತದೆ.

ಮುಖ್ಯವಾಗಿ, ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಸಂಸತ್ ಅಧಿವೇಶನವನ್ನು ಕರೆಯುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಈ ಸಮಿತಿಯ ನಿರ್ಧಾರವನ್ನು ರಾಷ್ಟ್ರಪತಿಗಳು ಔಪಚಾರಿಕವಾಗಿ ಮಂಡಿಸುತ್ತಾರೆ. ಹೀಗೆ ರಾಷ್ಟ್ರಪತಿಗಳ ಹೆಸರಿನಲ್ಲಿ  ಸಂಸತ್ ಸದಸ್ಯರು ಅಧಿವೇಶನದಲ್ಲಿ ಭಾಗಿಯಾಗುತ್ತಾರೆ. ಒಟ್ಟಿನಲ್ಲಿ ಸಂಸತ್ತಿನ ಅಧಿವೇಶನವನ್ನು ಕರೆಯುವ ಅಧಿಕಾರವು ಮೂಲತಃ ಸರ್ಕಾರದಲ್ಲಿ ಅಂತರ್ಗತವಾಗಿದೆ.

 

ಸಂಸತ್ತಿನ ಅಧಿವೇಶನವು ಏಕೆ ಇಷ್ಟೊಂದು ಪ್ರಮುಖವಾಗಿದೆ?

 1. ಕಾನೂನು/ಕಾಯ್ದೆಯ ರಚನೆಯು ಸಂಸತ್ತು ಯಾವಾಗ ಸಭೆ ಸೇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
 2. ಅಲ್ಲದೆ, ಸರ್ಕಾರದ ಕಾರ್ಯವೈಖರಿಗಳ ಕೂಲಂಕಷ ಪರಿಶೀಲನೆ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವುದು ಉಭಯ ಸದನಗಳು ಅಧಿವೇಶನದಲ್ಲಿದ್ದಾಗ ಮಾತ್ರ ಸಾಧ್ಯಗುತ್ತದೆ.
 3. ಸಂಸತ್ತಿನ ಕಾರ್ಯ ಚಟುವಟಿಕೆಗಳಲ್ಲಿ ಉತ್ತಮವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸುವುದು ಉತ್ತಮ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣವಾಗಿದೆ. ಅಂದರೆ,  ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವಕ್ಕೆ ಸಂಸತ್ತಿನ ಕಾರ್ಯಚಟುವಟಿಕೆಯ ಅಗತ್ಯವಿದೆ.

  

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಸ್ವಾಯತ್ತ ಮಂಡಳಿ ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿರುವ ರೆಂಗ್ಮಾ ನಾಗಾಗಳು:


(Rengma Nagas demand autonomous council)

ಸಂದರ್ಭ:

ಕಾರ್ಬಿ-ಆಂಗ್ಲಾಂಗ್ ಸ್ವಾಯತ್ತ ಮಂಡಳಿಯನ್ನು (Karbi Anglong Autonomous Council- KAAC)  ‘ಪ್ರಾದೇಶಿಕ ಮಂಡಳಿ’ (Territorial Council)  ಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿದ್ದು, ಈ ಮಧ್ಯೆ ಅಸ್ಸಾಂನ ರೆಂಗ್ಮಾ ನಾಗಾಗಳು (Rengma Nagas) ಸ್ವಾಯತ್ತ ಜಿಲ್ಲಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಗೆ ಪತ್ರ ಬರೆದಿದ್ದಾರೆ.

 

ಏನಿದು ಸಮಸ್ಯೆ? ಅವರ ಬೇಡಿಕೆಗಳು ಯಾವುವು?

ಕಾರ್ಬಿ-ಆಂಗ್ಲಾಂಗ್ ಪ್ರದೇಶದಲ್ಲಿ ನೆಲೆಗೊಂಡಿರುವ ಉಗ್ರಗಾಮಿ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದದ ಕುರಿತು ಅಸ್ಸಾಂ ಸರ್ಕಾರ ಮಾತುಕತೆ ನಡೆಸುತ್ತಿದೆ, ಈ ಮಧ್ಯೆ, NSCN-IM ಎಂಬ ನಾಗಾ ಸಂಘಟನೆಯು ರೆಂಗ್ಮಾ ನಾಗಾ ಜನರನ್ನು ಬಲಿಪಶುಗಳನ್ನಾಗಿ ಮಾಡುವ ಯಾವುದೇ ಒಪ್ಪಂದವು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

 1. ಈ ಸಮಸ್ಯೆಯ ಕೇಂದ್ರ ಬಿಂದು ಕಾರ್ಬಿ ಆಂಗ್ಲಾಂಗ್ ಪ್ರದೇಶವಾಗಿದೆ, ಇದನ್ನು ಈ ಹಿಂದೆ ರೆಂಗ್ಮಾ ಹಿಲ್ಸ್’ (Rengma Hills) ಎಂದು ಕರೆಯಲಾಗುತ್ತಿತ್ತು. ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಹೊರಗಿನವರ ಆಕ್ರಮಣಕಾರಿ ಒಳಹರಿವಿನಿಂದಾಗಿ ರೆಂಗ್ಮಾ ಬೆಟ್ಟಗಳು ಬಲಿಪಶುಗಳಾಗಿ ನಿಂತಿವೆ.
 2. 1963 ರಲ್ಲಿ, ನಾಗಾಲ್ಯಾಂಡ್ ರಾಜ್ಯವನ್ನು ರಚಿಸುವ ಸಮಯದಲ್ಲಿ, ರೆಂಗ್ಮಾ ಬೆಟ್ಟಗಳನ್ನು ಅಸ್ಸಾಂ ಮತ್ತು ನಾಗಾಲ್ಯಾಂಡ್ ನಡುವೆ ವಿಭಜಿಸಲಾಯಿತು.

 

ಸ್ವಾಯತ್ತ ಜಿಲ್ಲಾ ಮಂಡಳಿ ಎಂದರೇನು?

(What are Autonomous District Council?)

 1.  ಸಂವಿಧಾನದ ಆರನೇ ಅನುಸೂಚಿಯ ಪ್ರಕಾರ, ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ಎಂಬ ನಾಲ್ಕು ರಾಜ್ಯಗಳ ಬುಡಕಟ್ಟು ಪ್ರದೇಶಗಳು ತಾಂತ್ರಿಕವಾಗಿ ಅನುಸೂಚಿತ (ಪರಿಶಿಷ್ಟ) ಪ್ರದೇಶಗಳಿಗಿಂತ (Scheduled Areas) ಭಿನ್ನವಾಗಿವೆ.
 2.  ಈ ಪ್ರದೇಶಗಳು ರಾಜ್ಯದ ಕಾರ್ಯನಿರ್ವಾಹಕ ಪ್ರಾಧಿಕಾರದ ವ್ಯಾಪ್ತಿಗೆ ಬಂದರೂ, ಕೆಲವು ಶಾಸಕಾಂಗ ಮತ್ತು ನ್ಯಾಯಾಂಗ ಅಧಿಕಾರಗಳನ್ನು ಚಲಾಯಿಸಲು ಜಿಲ್ಲಾ ಮಂಡಳಿಗಳು ಮತ್ತು ಪ್ರಾದೇಶಿಕ ಮಂಡಳಿಗಳ ರಚನೆಗೆ ಅವಕಾಶ ಕಲ್ಪಿಸಲಾಗಿದೆ.
 3.  ಇದರ ಅಡಿಯಲ್ಲಿ, ಪ್ರತಿ ಜಿಲ್ಲೆಯು ಸ್ವಾಯತ್ತ ಜಿಲ್ಲೆಯಾಗಿದ್ದು, ರಾಜ್ಯಪಾಲರು ಅಧಿಸೂಚನೆಯ ಮೂಲಕ ಈ ಬುಡಕಟ್ಟು ಪ್ರದೇಶಗಳ ಗಡಿಗಳನ್ನು ಮಾರ್ಪಡಿಸಬಹುದು / ವಿಭಜಿಸಬಹುದು.

 

ಸಾರ್ವಜನಿಕ ಅಧಿಸೂಚನೆಯ ಮೂಲಕ ರಾಜ್ಯಪಾಲರು:

 1. ಯಾವುದೇ ಕ್ಷೇತ್ರವನ್ನು ಸೇರಿಸಿಕೊಳ್ಳಬಹುದು.
 2. ಯಾವುದೇ ಪ್ರದೇಶವನ್ನು ಹೊರಗೆ ಇಡಬಹುದು.
 3. ಹೊಸ ಸ್ವಾಯತ್ತ ಜಿಲ್ಲೆಯನ್ನು ರಚಿಸಬಹುದು.
 4. ಯಾವುದೇ ಸ್ವಾಯತ್ತ ಜಿಲ್ಲೆಯ ವಿಸ್ತೀರ್ಣವನ್ನು ಹೆಚ್ಚಿಸಬಹುದು.
 5. ಯಾವುದೇ ಸ್ವಾಯತ್ತ ಜಿಲ್ಲೆಯ ಪ್ರದೇಶವನ್ನು ಕಡಿಮೆ ಮಾಡಬಹುದು.
 6. ಸ್ವಾಯತ್ತ ಜಿಲ್ಲೆಯ ಹೆಸರನ್ನು ಬದಲಾಯಿಸ ಬಹುದು.
 7. ಸ್ವಾಯತ್ತ ಜಿಲ್ಲೆಯ ಗಡಿಗಳನ್ನು ವ್ಯಾಖ್ಯಾನಿಸ ಬಹುದು.

 

ಜಿಲ್ಲಾ ಮಂಡಳಿಗಳು ಮತ್ತು ಪ್ರಾದೇಶಿಕ ಮಂಡಳಿಗಳ ಸಂವಿಧಾನ:

 1. ಪ್ರತಿ ಸ್ವಾಯತ್ತ ಜಿಲ್ಲೆಯು ಜಿಲ್ಲಾ ಮಂಡಳಿಯನ್ನು ಹೊಂದಿರುತ್ತದೆ, ಇದರಲ್ಲಿ ಮೂವತ್ತಕ್ಕಿಂತ ಹೆಚ್ಚು ಸದಸ್ಯರಿರುವಂತಿಲ್ಲ ಮತ್ತು ಗರಿಷ್ಠ ನಾಲ್ಕು ಸದಸ್ಯರನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡುತ್ತಾರೆ ಮತ್ತು ಉಳಿದ ಸದಸ್ಯರನ್ನು ವಯಸ್ಕರ ಮತದಾನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
 2. ರಚಿಸಲಾದ ಪ್ರತಿಯೊಂದು ಸ್ವಾಯತ್ತ ಪ್ರದೇಶವು ಪ್ರತ್ಯೇಕ ವಲಯ ಅಥವಾ ಪ್ರಾದೇಶಿಕ ಮಂಡಳಿಯನ್ನು ಹೊಂದಿರುತ್ತದೆ.
 3. ಪ್ರತಿ ಜಿಲ್ಲಾ ಮಂಡಳಿ (ಪರಿಷತ್) ಮತ್ತು ಪ್ರತಿ ಪ್ರಾದೇಶಿಕ ಮಂಡಳಿಯು ಅನುಕ್ರಮವಾಗಿ ಜಿಲ್ಲಾ ಪರಿಷತ್ (ಜಿಲ್ಲೆಯ ಹೆಸರು) ಮತ್ತು ಪ್ರಾದೇಶಿಕ ಮಂಡಳಿ (ಪ್ರದೇಶದ ಹೆಸರು) ಎಂದು ಕರೆಯಲ್ಪಡುವ ನಿಗಮಿತ ನಿಕಾಯ (body corporate) ವನ್ನು ಒಳಗೊಂಡಿರುತ್ತದೆ, ಇವುಗಳು ಶಾಶ್ವತ ಉತ್ತರಾಧಿಕಾರ (perpetual succession) ವ್ಯವಸ್ಥೆ ಮತ್ತು ಸಾಮೂಹಿಕ ಮುದ್ರೆಯನ್ನು (shall have perpetual succession and a common seal and shall by the said name sue and be sued) ಹೊಂದಿರುತ್ತವೆ,ಮತ್ತು ಅವು ಮೇಲೆ ತಿಳಿಸಿದ ಹೆಸರುಗಳಿಂದ ಮಾತ್ರ ಕ್ರಮ ತೆಗೆದುಕೊಳ್ಳುತ್ತವೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

 

ಆರನೇ ಅನುಸೂಚಿಯ ಕುರಿತು:

 1. ಸಂವಿಧಾನದ ಆರನೇ ಅನುಸೂಚಿಯು ಬುಡಕಟ್ಟು ಜನಸಂಖ್ಯೆಗೆ ರಕ್ಷಣೆ ನೀಡುತ್ತದೆ ಮತ್ತು ‘ಸ್ವಾಯತ್ತ ಅಭಿವೃದ್ಧಿ ಮಂಡಳಿಗಳನ್ನು’ ರಚಿಸುವ ಮೂಲಕ ಈ ಸಮುದಾಯಗಳಿಗೆ ಸ್ವಾಯತ್ತತೆಯನ್ನು ನೀಡುತ್ತದೆ. ಈ ಸ್ವಾಯತ್ತ ಮಂಡಳಿಗಳಿಗೆ ಭೂಮಿ, ಸಾರ್ವಜನಿಕ ಆರೋಗ್ಯ, ಕೃಷಿ ಮತ್ತು ಇತರ ವಿಷಯಗಳ ಬಗ್ಗೆ ಕಾನೂನುಗಳನ್ನು ರೂಪಿಸುವ ಮತ್ತು ಜಾರಿಗೊಳಿಸುವ ಹಕ್ಕಿದೆ.
 2. ಪ್ರಸ್ತುತ, ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿ 10 ಸ್ವಾಯತ್ತ ಮಂಡಳಿಗಳು ಅಸ್ತಿತ್ವದಲ್ಲಿವೆ.
 3. ಈ ವಿಶೇಷ ನಿಬಂಧನೆಯನ್ನು ಸಂವಿಧಾನದ 244 (2) ಮತ್ತು 275 (1) ವಿಧಿಯ ಅಡಿಯಲ್ಲಿ ನೀಡಲಾಗಿದೆ.

  

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಅವರನ್ನು ಎರಡನೇ ಅವಧಿಗೆ ಮುಂದುವರೆಸಲು ಅನುಮೋದಿಸಿದ UN ಭದ್ರತಾ ಮಂಡಳಿ:

(The UN Security Council endorses Secretary General Guterres for a second term)

ಸಂದರ್ಭ:

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯು, ಪ್ರಸ್ತುತ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಂಟೋನಿಯೊ ಗುಟೆರೆಸ್ ಅವರ ಹೆಸರನ್ನು ಐದು ವರ್ಷಗಳ ಎರಡನೇ ಅವಧಿಗೆ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪುನರ್ ನೇಮಕ ಮಾಡಲು ಅನುಮೋದನೆ ನೀಡಿದೆ. ಅವರ ಹೊಸ ಅಧಿಕಾರ ಅವಧಿಯು 1 ಜನವರಿ 2022 ರಿಂದ 31 ಡಿಸೆಂಬರ್ 2026 ರವರೆಗೆ ಇರುತ್ತದೆ.

 

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಕುರಿತು:

(UN Secretary General)

ವಿಶ್ವಸಂಸ್ಥೆಯ ಚಾರ್ಟರ್ ‘ಸೆಕ್ರೆಟರಿ ಜನರಲ್’ ಅಥವಾ ಮಹಾ ಪ್ರಧಾನ ಕಾರ್ಯದರ್ಶಿ ಯನ್ನು ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ’ ಎಂದು ವಿವರಿಸುತ್ತದೆ. ‘ ಮಹಾ ಪ್ರಧಾನ ಕಾರ್ಯದರ್ಶಿ’ ಯವರು ವಿಶ್ವಸಂಸ್ಥೆಯ ಮುಖ್ಯ  ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಭದ್ರತಾ ಮಂಡಳಿ, ಸಾಮಾನ್ಯ ಸಭೆ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಮತ್ತು ವಿಶ್ವಸಂಸ್ಥೆಯ ಇತರ ಅಂಗಗಳಿಂದ ನಿಯೋಜಿಸಲಾದ ಇತರ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.

ವಿಶ್ವಸಂಸ್ಥೆಯ ಚಾರ್ಟರ್, ಸೆಕ್ರೆಟರಿ ಜನರಲ್ ಗೆ ಅವರ ಅಭಿಪ್ರಾಯದಲ್ಲಿ, ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯ ನಿರ್ವಹಣೆಗೆ ಅಪಾಯ ಎದುರಾಗಿದೆ ಎಂಬಂತಹ ಗಂಭೀರ ವಿಷಯಗಳ ಕುರಿತು  ಭದ್ರತಾ ಮಂಡಳಿಯ ಗಮನಕ್ಕೆ ತರಲು ಅಧಿಕಾರ ನೀಡುತ್ತದೆ.

 

ನೇಮಕಾತಿ:

‘ಸೆಕ್ರೆಟರಿ ಜನರಲ್’ ಹುದ್ದೆಗೆ ನೇಮಕಾತಿಗಾಗಿ ಅಭ್ಯರ್ಥಿಯನ್ನು 193 ಸದಸ್ಯರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಭದ್ರತಾ ಮಂಡಳಿ ಶಿಫಾರಸು ಮಾಡುತ್ತದೆ. ಸೆಕ್ರೆಟರಿ ಜನರಲ್ ಆಯ್ಕೆಯಲ್ಲಿ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದ್ದರೂ, ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರು ಹೆಚ್ಚು ಪ್ರಭಾವ ಬೀರುತ್ತಾರೆ. ಈ ಸದಸ್ಯರಲ್ಲಿ ಯಾರಾದರೂ ತಮ್ಮ ವೀಟೋ ಅಧಿಕಾರವನ್ನು ಚಲಾಯಿಸುವ ಮೂಲಕ ಸೆಕ್ರೆಟರಿ ಜನರಲ್’ ಹುದ್ದೆಗೆ ನಾಮನಿರ್ದೇಶಿತ ಅಭ್ಯರ್ಥಿಯ ಉಮೇದುವಾರಿಕೆಯನ್ನು ಕೊನೆಗೊಳಿಸಬಹುದು ಅಥವಾ ತೆಗೆದುಹಾಕಬಹುದು.  

 

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಕಚೇರಿಯ ಸಮಸ್ಯೆಗಳು ಮತ್ತು ಸವಾಲುಗಳು:

 1. ಪ್ರಧಾನ ಕಾರ್ಯದರ್ಶಿಯ ಕಾರ್ಯಗಳು ಮತ್ತು ಅಧಿಕಾರಗಳನ್ನು ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ.
 2. ಪ್ರಧಾನ ಕಾರ್ಯದರ್ಶಿ ಸಂಪೂರ್ಣವಾಗಿ ಅರ್ಹತೆ ಮತ್ತು ಪಾರದರ್ಶಕತೆಯ ಆಧಾರದ ಮೇಲೆ ಆಯ್ಕೆಯಾಗುವುದಿಲ್ಲ.
 3. ಭದ್ರತಾ ಮಂಡಳಿಯ ಶಾಶ್ವತ ಸದಸ್ಯರು ವಿಟೋ ಅಧಿಕಾರ ಮತ್ತು ಅಭ್ಯರ್ಥಿಯ ಆಯ್ಕೆಯಲ್ಲಿನ ಅವರ ರಹಸ್ಯ ಒಪ್ಪಂದಗಳಿಂದಾಗಿ ಮಹಾ ಪ್ರಧಾನ ಕಾರ್ಯದರ್ಶಿಯ ಆಯ್ಕೆಯಲ್ಲಿ ಪಾರದರ್ಶಕತೆ ಇರುವುದಿಲ್ಲ ಮತ್ತು ಸ್ವಜನಪಕ್ಷಪಾತ ಅವಕಾಶವಿದೆ ಎಂದು ವಿಮರ್ಶಕರು ಆರೋಪಿಸುತ್ತಾರೆ.
 4. ಸೆಕ್ರೆಟರಿ ಜನರಲ್ ರವರು, ವಿಶ್ವಸಂಸ್ಥೆಗೆ ದೊಡ್ಡ ಮೊತ್ತದ ನಿಧಿಯನ್ನು ನೀಡುವ ರಾಷ್ಟ್ರಗಳು ಮತ್ತು ಪ್ರಬಲ ಸದಸ್ಯ ರಾಷ್ಟ್ರಗಳ ಹಿತಾಸಕ್ತಿಗಳ ನಡುವೆ ಸಮತೋಲನವನ್ನು ಕಾಪಾಡಲು ಹೆಣಗಾಡುತ್ತಾರೆ.

 

ಪ್ರಧಾನ ಕಾರ್ಯದರ್ಶಿ ಕಚೇರಿಯ ಮಹತ್ವ:

 1. ಶಾಂತಿಪಾಲನೆ: ಯುಎನ್ ಸೆಕ್ರೆಟರಿ ಜನರಲ್ ಕಚೇರಿ ಶಾಂತಿಪಾಲನಾ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತದೆ ಮತ್ತು ಸಂಬಂಧಿತ ಇಲಾಖೆಯ ಉಸ್ತುವಾರಿ ಅಧೀನ ಕಾರ್ಯದರ್ಶಿಯನ್ನು ನೇಮಿಸುತ್ತದೆ.
 2. ಮಧ್ಯಸ್ಥಿಕೆ: ಜವಾಬ್ದಾರಿಯುತ ಪ್ರಮುಖ ಕಚೇರಿಯಾಗಿ, ಸೆಕ್ರೆಟರಿ ಜನರಲ್ ಸಂಘರ್ಷಗಳನ್ನು ತಡೆಗಟ್ಟಲು ಮತ್ತು ಮಿತಿಗೊಳಿಸಲು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ವರ್ತಿಸುತ್ತಾರೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಬ್ರಿಕ್ಸ್ ಅಸಾಧಾರಣವಾದವನ್ನು ವಿರೋಧಿಸುತ್ತದೆ: ಚೀನಾ


(BRICS opposes exceptionalism: China)

ಸಂದರ್ಭ:  

ಇತ್ತೀಚೆಗೆ, ಬ್ರಿಕ್ಸ್ ದೇಶಗಳ ವಿದೇಶಾಂಗ ಮಂತ್ರಿಗಳ ಸಭೆ (ಜಾಲ ಗೋಷ್ಠಿ) ವರ್ಚುವಲ್ ಸ್ವರೂಪದಲ್ಲಿ ನಡೆಯಿತು.

ಸಭೆಯ ಕೊನೆಯಲ್ಲಿ ‘ಬ್ರಿಕ್ಸ್ ದೇಶಗಳ ವಿದೇಶಾಂಗ ವ್ಯವಹಾರಗಳ/ಅಂತರರಾಷ್ಟ್ರೀಯ ಸಂಬಂಧಗಳ ಸಚಿವರ’ (Meeting of the BRICS Ministers of Foreign Affairs/International Relations) ಮತ್ತು ಬಹುಪಕ್ಷೀಯ ವ್ಯವಸ್ಥೆಯ ಸಬಲೀಕರಣ ಮತ್ತು ಸುಧಾರಣೆಯ ಕುರಿತಾದ ಬ್ರಿಕ್ಸ್ ದೇಶಗಳ ಜಂಟಿ ಹೇಳಿಕೆ’ (BRICS Joint Statement on Strengthening and Reforming the Multilateral System) ಕುರಿತು ಎರಡು ಹೇಳಿಕೆಗಳನ್ನು ಬಿಡುಗಡೆ ಮಾಡಲಾಯಿತು.

 

ಬ್ರಿಕ್ಸ್ ಮತ್ತು ಅದರ ಉದ್ದೇಶಿತ ಉದ್ದೇಶಗಳ ಕುರಿತು ಚೀನಾದ ಹೇಳಿಕೆ:

 1. ಬ್ರಿಕ್ಸ್ ದೇಶಗಳು ಮುಕ್ತತೆ, ಅಂತರ್ಗತತೆ ಮತ್ತು ಎಲ್ಲರನ್ನು ಒಳಗೊಂಡ ವಿನ್ವಿನ್ ಸಹಕಾರ ತತ್ವವನ್ನು ಅನುಸರಿಸುತ್ತವೆ ಮತ್ತು “ಬಣ-ರಾಜಕೀಯ ಮತ್ತು ಸೈದ್ಧಾಂತಿಕ ಸಂಘರ್ಷ” ವನ್ನು ತಿರಸ್ಕರಿಸುತ್ತವೆ.
 2. ಬ್ರಿಕ್ಸ್ ದೇಶಗಳು, ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಾಗಿ, ವಾಸ್ತವವಾಗಿ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಬಹುಪಕ್ಷೀಯತೆ ಮತ್ತು ಬಹುಪಕ್ಷೀಯ ಸಹಕಾರದ ಮನೋಭಾವದಲ್ಲಿ ಭಿನ್ನವಾಗಿ ನಿಲ್ಲುತ್ತವೆ.
 3. ಯುನೈಟೆಡ್ ನೇಷನ್ಸ್ ಚಾರ್ಟರ್ನ ಉದ್ದೇಶಗಳು ಮತ್ತು ತತ್ವಗಳಿಗೆ ಬದ್ಧರಾಗಿರಬೇಕು ಮತ್ತು ಅಸಾಧಾರಣವಾದ (Exceptionalism) ಮತ್ತು ಡಬಲ್ ಮಾನದಂಡಗಳನ್ನು ಅಥವಾ ಇಬ್ಬಗೆಯ ನೀತಿಯನ್ನು ವಿರೋಧಿಸುವ ಅಗತ್ಯವನ್ನು ಬ್ರಿಕ್ಸ್ ದೇಶಗಳು ಒತ್ತಿಹೇಳುತ್ತವೆ.

 

ಈ ಹೇಳಿಕೆಗಳ ಹಿಂದಿನ ತರ್ಕವೇನು?

 1. ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಡುವೆ ಕ್ವಾಡ್ ಗ್ರೂಪಿಂಗ್’ ರಚಿಸುವುದನ್ನು ಚೀನಾ ವಿರೋಧಿಸುತ್ತಿರುವುದನ್ನು ಚೀನಾದ ಈ ಹೇಳಿಕೆಗಳು ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ.
 2. ಈ ಕ್ವಾಡ್ ಗುಂಪು ಮೂರನೇ ವ್ಯಕ್ತಿಗಳ ಹಿತಾಸಕ್ತಿಗಳನ್ನು ಗುರಿಯಾಗಿಸುತ್ತದೆ ಅಥವಾ ಹಾನಿ ಮಾಡುತ್ತದೆ ಎಂದು ಅದು ನಂಬುತ್ತದೆ.

 

ಬ್ರಿಕ್ಸ್ ಸಂಘಟನೆಯ ಕುರಿತು:

 1. ವಿಶ್ವದ ಐದು ಪ್ರಮುಖ ಉದಯೋನ್ಮುಖ ಆರ್ಥಿಕತೆಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳ ಗುಂಪಿನ ಸಂಕ್ಷಿಪ್ತ ರೂಪ ಬ್ರಿಕ್ಸ್ ಆಗಿದೆ.
 2. ಬ್ರಿಕ್’ ಎಂಬ ಪದವನ್ನು 2001 ರಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಒನೀಲ್ (Jim O’Neill)ಅವರು ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ಆರ್ಥಿಕತೆಗಳನ್ನು ವಿವರಿಸಲು ಈ BRIC ಎಂಬ ಪದವನ್ನು ಬಳಸಿದರು.
 3. 2006 ರಲ್ಲಿ ನಡೆದ ಬ್ರಿಕ್ ದೇಶಗಳ ವಿದೇಶಾಂಗ ಮಂತ್ರಿಗಳ ಮೊದಲ ಸಭೆಯಲ್ಲಿ ಈ ‘ಗುಂಪನ್ನು’  ಔಪಚಾರಿಕವಾಗಿ ಸ್ಥಾಪಿಸಲಾಯಿತು.
 4. 2010 ರ ಡಿಸೆಂಬರ್ ನಲ್ಲಿ, ದಕ್ಷಿಣ ಆಫ್ರಿಕಾವನ್ನು ಬ್ರಿಕ್‌ಗೆ ಸೇರಲು ಆಹ್ವಾನಿಸಲಾಯಿತು ಮತ್ತು ಅಂದಿನಿಂದ ಈ ಗುಂಪನ್ನು ಬ್ರಿಕ್ಸ್ (BRICS)ಎಂದು ಕರೆಯಲಾಗುತ್ತದೆ.
 5. ಬ್ರಿಕ್ಸ್ (ಫೋರಂ) ವೇದಿಕೆಯ ಅಧ್ಯಕ್ಷತೆಯನ್ನು B-R-I-C-S ಅಕ್ಷರಗಳ ಕ್ರಮದಲ್ಲಿ ಸದಸ್ಯ ರಾಷ್ಟ್ರಗಳು  ವಾರ್ಷಿಕವಾಗಿ ಅನುಕ್ರಮವಾಗಿ ವಹಿಸುತ್ತವೆ.

 


 ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಆಪರೇಷನ್ ಪಂಗಿಯಾ XIV:

(Operation Pangea XIV)

 1.  ನಕಲಿ ಮತ್ತು ಅಕ್ರಮ ಔಷಧಿಗಳು ಮತ್ತು ವೈದ್ಯಕೀಯ ಉತ್ಪನ್ನಗಳ ಮಾರಾಟವನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಪಂಗಿಯಾ XIV ಅಡಿಯಲ್ಲಿ ದಾಖಲೆಯ ಸಂಖ್ಯೆಯ ನಕಲಿ ಆನ್‌ಲೈನ್ ಔಷಧಾಲಯಗಳನ್ನು ಮುಚ್ಚಲಾಗಿದೆ.
 2. ಇಂಟರ್ಪೋಲ್(INTERPOL) ಸಂಯೋಜಿಸಿದ ಈ ಕಾರ್ಯಾಚರಣೆಯಲ್ಲಿ 92 ದೇಶಗಳ ಪೊಲೀಸ್, ಕಸ್ಟಮ್ಸ್ ಮತ್ತು ಆರೋಗ್ಯ ನಿಯಂತ್ರಣ ಅಧಿಕಾರಿಗಳು ಭಾಗವಹಿಸಿದ್ದರು.
 3. ಇದರ ಪರಿಣಾಮವಾಗಿ ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್ ಮಾರುಕಟ್ಟೆಗಳು ಸೇರಿದಂತೆ 113,020 ವೆಬ್ ಲಿಂಕ್‌ಗಳನ್ನು ಮುಚ್ಚಲಾಗಿದೆ ಅಥವಾ ತೆಗೆದುಹಾಕಲಾಗಿದೆ, ಇದು 2008 ರಲ್ಲಿ ನಡೆಸಿದ ಮೊದಲ ಆಪರೇಷನ್ ಪ್ಯಾಂಗಿಯಾದ ನಂತರದಲ್ಲಿ ಕೈಗೊಳ್ಳಲಾದ ಅತಿ ದೊಡ್ಡ ಕಾರ್ಯಾಚರಣೆಯಾಗಿತ್ತು.

 

ಸುದ್ದಿಯಲ್ಲಿರುವ GI ಪ್ರಮಾಣೀಕೃತ ಮಾವಿನಹಣ್ಣು:

(GI certified mangoes in News)

 GI ಪ್ರಮಾಣೀಕೃತ ಮೂರು ಮಾವಿನ ಪ್ರಭೇದಗಳು ಸೇರಿದಂತೆ ಹದಿನಾರು ಬಗೆಯ ಮಾವಿನಹಣ್ಣನ್ನು ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಬಹ್ರೇನ್‌ಗೆ ರಫ್ತು ಮಾಡಲಾಗಿದೆ.

 1. ಇವುಗಳಲ್ಲಿ ಪಶ್ಚಿಮ ಬಂಗಾಳದ ಭೌಗೋಳಿಕ ಸೂಚಕ (GI) ಪ್ರಮಾಣೀಕೃತ ಖಿರ್ಸಪತಿ ಮತ್ತು ಲಕ್ಷ್ಮನ್‌ಭೋಗ್ (Khirsapati & Lakshmanbhog), ಬಿಹಾರದ ಜರ್ದಾಲು (Zardalu) ತಳಿಯ ಮಾವಿನ ಹಣ್ಣುಗಳು ಸೇರಿವೆ.

 

ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಅನ್ನು ಇಂಗಾಲ ತಟಸ್ಥಗೊಳಿಸಲು CESL ಮತ್ತು ಲಡಾಖ್ ಆಡಳಿತದ ನಡುವೆ ಒಪ್ಪಂದ:

(CESL and Ladakh sign an MoU to make the Union Territory carbon neutral)

 ಲಡಾಖ್ ಅನ್ನು ಇಂಗಾಲ ತಟಸ್ಥ, ಸ್ವಚ್ಛ ಮತ್ತು ಹಸಿರು ಕೇಂದ್ರಾಡಳಿತ ಪ್ರದೇಶವನ್ನಾಗಿ ನಿರ್ಮಾಣ ಮಾಡಲು ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (Convergence Energy Services Limited –CESL) ಲಡಾಖ್ ಕೇಂದ್ರಾಡಳಿತ ಪ್ರದೇಶದ (Union Territory UT) ಆಡಳಿತದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

 1. CESL ಯು, ವಿದ್ಯುತ್ ಸಚಿವಾಲಯದ ಅಧೀನದಲ್ಲಿರುವ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (Energy Efficiency Services Limited -EESL) ನ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾಗಿದೆ.

 

ಸುರಕ್ಷಿತ್ ಹಮ್ ಸುರಕ್ಷಿತ್ ತುಮ್ ಅಭಿಯಾನ:

(Surakshit Hum Surakshit Tum Abhiyaan)

ನೀತಿ ಆಯೋಗ ಮತ್ತು ಪಿರಾಮಲ್ ಪ್ರತಿಷ್ಠಾನ ಗಳು (Foundation) 112 ಮಹತ್ವಾಕಾಂಕ್ಷೆಯ (112 Aspirational Districts) ಜಿಲ್ಲೆಗಳಲ್ಲಿ ಸುರಕ್ಷಿತ್ ಹಮ್ ಸುರಕ್ಷಿತ್ ತುಮ್ ಅಭಿಯಾನ ವನ್ನು ಪ್ರಾರಂಭಿಸಿವೆ.

 1. ಈ ಅಭಿಯಾನದ ಮೂಲಕ 20 ಲಕ್ಷ ನಾಗರಿಕರಿಗೆ ಕೋವಿಡ್ ಹೋಮ್-ಕೇರ್ ನೆರವನ್ನು ಒದಗಿಸಲಾಗುವುದು.
 2. ಸುರಕ್ಷಿತ್ ಹಮ್ ಸುರಕ್ಷಿತ್ ತುಮ್ ಅಭಿಯಾನವು,ಮಹತ್ವಾಕಾಂಕ್ಷೆಯ ಜಿಲ್ಲೆಗಳ ಸಹಯೋಗ ಎಂಬ ವಿಶೇಷ ಉಪಕ್ರಮದ ಭಾಗವಾಗಿದೆ.
 3.  ಇದರಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಪ್ರಮುಖ ಕೇಂದ್ರ ಪ್ರದೇಶಗಳಲ್ಲಿನ ಉದಯೋನ್ಮುಖ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯ ಮುಖಂಡರು, ನಾಗರಿಕ ಸಂಘಗಳು ಮತ್ತು ಸ್ವಯಂಸೇವಕರು ಜಿಲ್ಲಾಡಳಿತಗಳೊಂದಿಗೆ ಕೆಲಸ ಮಾಡುತ್ತಾರೆ.

 

YUVA: ಯುವ ಲೇಖಕರಿಗೆ ಮಾರ್ಗದರ್ಶನ ನೀಡಲು ಪ್ರಧಾನ ಮಂತ್ರಿಗಳ ಯೋಜನೆ:

(YUVA: Prime Minister’s Scheme For Mentoring Young Authors)

 1. ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಲು ಶಿಕ್ಷಣ ಸಚಿವಾಲಯವು ‘ಯುವ’ (Young, Upcoming and Versatile Authors- YUVA) ಯೋಜನೆಯನ್ನು ಪ್ರಾರಂಭಿಸಿದೆ.
 2. ಯುವ (ಯುವ, ಮುಂಬರುವ ಮತ್ತು ಬಹುಮುಖ ಲೇಖಕರು- YUVA) ಯೋಜನೆ ಯುವ ಬರಹಗಾರರಿಗೆ ಅವರ ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸಲು ಮಾರ್ಗದರ್ಶನ ನೀಡುವ ರಾಷ್ಟ್ರೀಯ ಯೋಜನೆಯಾಗಿದೆ.
 3. ಈ ಯೋಜನೆಯಡಿಯಲ್ಲಿ, ಯುವಕರು ತಮ್ಮನ್ನು ತಾವು ವ್ಯಕ್ತಪಡಿಸಲು ಮತ್ತು ಯಾವುದೇ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರಸ್ತುತಪಡಿಸಲು ಸಿದ್ಧವಿರುವ ಮತ್ತು ಉದಯೋನ್ಮುಖ ಬರಹಗಾರರ ಗುಂಪನ್ನು (30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ರಚಿಸಲಾಗುವುದು.
 4. ಇದರೊಂದಿಗೆ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯವನ್ನು ವಿಶ್ವ ಮಟ್ಟದಲ್ಲಿ ಪ್ರಸ್ತುತಪಡಿಸಲು ಈ ಯೋಜನೆ ಸಹಾಯ ಮಾಡುತ್ತದೆ.
 5. YUVA ಉಪಕ್ರಮವು, ಭಾರತ @ 75 ಯೋಜನೆ (ಸ್ವಾತಂತ್ರ್ಯದ ಅಮೃತ್ ಮಹೋತ್ಸವ್-Azadi Ka Amrit Mahotsav) ಯ ಒಂದು ಭಾಗವಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos