Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 1ನೇ ಜೂನ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲನೆಗೆ ಒಳಪಡಿಸುವುದಾಗಿ ಹೇಳಿದ ಸರ್ವೋಚ್ಚ ನ್ಯಾಯಾಲಯ.

2. ‘ವಿಶ್ವ ನಿರ್ಲಕ್ಷಿತ ಉಷ್ಣವಲಯದ ರೋಗಗಳ ದಿನ’: ಜನವರಿ 30.

3. ರಕ್ಷಣಾ ಕ್ಷೇತ್ರದ ನಕಾರಾತ್ಮಕ ಆಮದು ಪಟ್ಟಿ ಎಂದರೇನು?

4. ಭಾಷಾನ್ ಚಾರ್‌ ದ್ವೀಪದಲ್ಲಿ ಪ್ರತಿಭಟನೆ ನಡೆಸುತ್ತಿರುವ, ಸಾವಿರಾರು ರೋಹಿಂಗ್ಯಾಗಳು.

5. ಮೂರು ಮಕ್ಕಳನ್ನು ಹೊಂದಲು ದಂಪತಿಗೆ ಅವಕಾಶ ನೀಡಿದ ಚೀನಾ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. 5G-ತಂತ್ರಜ್ಞಾನ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಲಿಟೋರಿಯಾ ಮಿರಾ.

2. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT).

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲನೆಗೆ ಒಳಪಡಿಸುವ ಸಮಯ ಬಂದಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯ:


(It’s time to define limits of sedition, says SC)

 ಸಂದರ್ಭ:

ಇತ್ತೀಚೆಗೆ,ಸುಪ್ರೀಂ ಕೋರ್ಟ್,ದೇಶದ್ರೋಹದ ಕಾನೂನಿನ  ಮಿತಿಗಳನ್ನು ವ್ಯಾಖ್ಯಾನಿಸುವ ಸಮಯ ಬಂದಿದೆ” ಎಂದು ಹೇಳಿದೆ.

 1. ಎರಡು ಸುದ್ದಿ ವಾಹಿನಿಗಳು ಸಲ್ಲಿಸಿದ ರಿಟ್ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.ಸುದ್ದಿ ವಾಹಿನಿಗಳು ತಮ್ಮ ವಿರುದ್ಧ ದಾಖಲಿಸಿದ FIR ಮತ್ತು ತಿರಸ್ಕಾರ ಪ್ರಕರಣಗಳನ್ನು ರದ್ದುಪಡಿಸುವಂತೆ ಆದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದವು.

  

ಏನಿದು ಪ್ರಕರಣ?

ಎರಡು ತೆಲುಗು ಸುದ್ದಿ ವಾಹಿನಿಗಳಾದ ಟಿವಿ 5 ಮತ್ತು ABN ಆಂಧ್ರ ಜ್ಯೋತಿ ಇಬ್ಬರು ರಾಜಕೀಯ ನಾಯಕರ ಆಕ್ಷೇಪಾರ್ಹ’ ಭಾಷಣಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ಸರ್ಕಾರವು ಅವುಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದೆ.

 

ಅರ್ಜಿದಾರರ ವಾದ:

 1. ಸರ್ಕಾರದ ಕ್ರಮವು ಏಪ್ರಿಲ್ 30 ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಹೇಳುತ್ತಾರೆ. ಈ ಆದೇಶದಲ್ಲಿ, COVID-19 ಸಮಸ್ಯೆಗಳ ಬಗ್ಗೆ ನಾಗರಿಕರು ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಬಂಧನ ಮತ್ತು ಕಾನೂನು ಕ್ರಮ ಜರುಗಿಸದಂತೆ ನ್ಯಾಯಾಲಯವು ನಿರ್ಬಂಧಿಸಿತ್ತು.
 2.  ದೇಶದ್ರೋಹ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸುವುದರಿಂದ ರಾಜ್ಯದ ಉಳಿದ ಸುದ್ದಿವಾಹಿನಿಗಳು ಸರ್ಕಾರವನ್ನು ಟೀಕಿಸುವ ಯಾವುದೇ ಸುದ್ದಿ ಪ್ರಸಾರ ಮಾಡಲು ಹಿಂದೇಟು ಹಾಕುತ್ತವೆ ಎಂಬ ಉದ್ದೇಶದಿಂದ ಸರ್ಕಾರವು ಈ ಕ್ರಮ ಕೈಗೊಂಡಿದೆ.
 3. ರಾಜ್ಯ ಸರ್ಕಾರವು ಸ್ಪಷ್ಟತೆ ಇಲ್ಲದೆ ಎಫ್ ಐ ಆರ್ ದಾಖಲಿಸುವ ಮೂಲಕ ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದು, ಟೀಕಾಕಾರರನ್ನು ಮತ್ತು ಮಾಧ್ಯಮಗಳನ್ನು ಮೌನ ಗೊಳಿಸಲು ಬಯಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

 

ಮುಂದಿನ ನಡೆ?

ದೇಶದ್ರೋಹದ ಕಠೋರ ದಂಡನಾತ್ಮಕ ಅಪರಾಧ ಸೇರಿದಂತೆ ವಿವಿಧ ಅಪರಾಧಗಳ ಆರೋಪ ಹೊತ್ತಿರುವ ಚಾನೆಲ್‌ಗಳ ಅರ್ಜಿಗಳನ್ನು ಪುರಸ್ಕರಿಸಿರುವ  ನ್ಯಾಯಾಲಯವು ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

 

ದೇಶದ್ರೋಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಾಡಿದ ಸಾಮಾನ್ಯ ಅವಲೋಕನಗಳು:

 1. ದೇಶದ್ರೋಹದ ಮಿತಿಗಳನ್ನು ನಾವು ವ್ಯಾಖ್ಯಾನಿಸುವ ಸಮಯ ಬಂದಿದೆ.
 2. ವಿಶೇಷವಾಗಿ ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯ ವಿಷಯದಲ್ಲಿ 124ಎ ಸೆಕ್ಷನ್ (ದೇಶದ್ರೋಹ) ಮತ್ತು 153ನೇ ಸೆಕ್ಷನ್‌ಗಳ (ವರ್ಗಗಳ ನಡುವೆ ದ್ವೇಷ ಹುಟ್ಟುಹಾಕುವುದು) ವ್ಯಾಖ್ಯಾನ ಅಗತ್ಯವಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದು ನ್ಯಾಯಪೀಠವು ತಿಳಿಸಿದೆ.

 

ಹಿನ್ನೆಲೆ:

ದೇಶದ್ರೋಹ ಕಾನೂನನ್ನು,ವಿಮರ್ಶಕರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಕೆದಾರರು, ಸರ್ಕಾರದ ಕೋವಿಡ್ -19 ನಿರ್ವಹಣೆಯ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ನೋವುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ  ಅಥವಾ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ, ವೈದ್ಯಕೀಯ ಸೇವೆಗಳು, ಉಪಕರಣಗಳು, ಔಷಧಿಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಪಡೆಯಲು ಸಹಾಯವನ್ನು ಕೋರಿದ ಕಾರ್ಯಕರ್ತರು ಮತ್ತು ನಾಗರಿಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೇಶದ್ರೋಹ ಕಾನೂನನ್ನು ಬಳಸಲಾಗಿದೆ.

 

ದೇಶದ್ರೋಹ’(sedition) ಎಂದರೇನು?

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 124 ಎ ಪ್ರಕಾರ, “ಯಾವುದೇ ವ್ಯಕ್ತಿಯು, ಪದಗಳಿಂದ, ಲಿಖಿತ ಅಥವಾ ಮಾತಿನ ಮೂಲಕ, ಅಥವಾ ಚಿಹ್ನೆಗಳ ಮೂಲಕ, ಅಥವಾ ದೃಶ್ಯ ಪ್ರದರ್ಶನದ ಮೂಲಕ ಅಥವಾ ಯಾವುದೇ ರೀತಿಯಲ್ಲಿ, ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ವಿರುದ್ಧ, ದ್ವೇಷ ಅಥವಾ ತಿರಸ್ಕಾರವನ್ನು ಪ್ರಚೋದಿಸಿದರೆ ಅಥವಾ ತಿರಸ್ಕಾರವನ್ನು ಪ್ರಚೋದಿಸುವ ಪ್ರಯತ್ನವನ್ನು ತೋರಿಸಿದರೆ,ದಂಡದೊಂದಿಗೆ ಜೀವಾವಧಿ ಶಿಕ್ಷೆ ಅಥವಾ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಯ ಜೈಲು ಶಿಕ್ಷೆ, ಇದಕ್ಕೆ ದಂಡವನ್ನು ಸೇರಿಸಬಹುದು ಅಥವಾ ದಂಡದಿಂದ ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ”.

 

ಸರಿಯಾದ ವ್ಯಾಖ್ಯಾನ ಅಗತ್ಯವಿದೆ:

 1. ದೇಶದ್ರೋಹ ಕಾನೂನು ಬಹಳ ಹಿಂದಿನಿಂದಲೂ ವಿವಾದದಲ್ಲಿದೆ. ತಮ್ಮ ನೀತಿಗಳನ್ನು ಬಹಿರಂಗವಾಗಿ ವಿಮರ್ಶೆ ಮಾಡಿದವರ ಮೇಲೆ ಭಾರತೀಯ ದಂಡ ಸಂಹಿತೆಯ (IPC) ‘ಸೆಕ್ಷನ್ 124-ಎ’ ಕಾನೂನನ್ನು ಬಳಸಿದ್ದಕ್ಕಾಗಿ ಆಗಾಗ್ಗೆ ಸರ್ಕಾರಗಳನ್ನು ಟೀಕಿಸಲಾಗಿದೆ.
 2. ಆದ್ದರಿಂದ, ಈ ವಿಭಾಗವನ್ನು ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧವೆಂದು ಪರಿಗಣಿಸಲಾಗುತ್ತದೆ ಮತ್ತು ಒಂದು ರೀತಿಯಲ್ಲಿ ಸಂವಿಧಾನದ 19 ನೇ ಪರಿಚ್ಚೇಧದ ಅಡಿಯಲ್ಲಿ ಒದಗಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿಧಿಸಬೇಕಾದ ಸಮಂಜಸವಾದ ನಿರ್ಬಂಧಗಳ ನಿಬಂಧನೆಗಳ ಅಡಿಯಲ್ಲಿ ಬರುತ್ತದೆ.

 ಈ ಕಾನೂನನ್ನು ವಸಾಹತುಶಾಹಿ ಬ್ರಿಟಿಷ್ ಆಡಳಿತಗಾರರು 1860 ರ ದಶಕದಲ್ಲಿ ಜಾರಿಗೆ ತಂದರು, ಅಂದಿನಿಂದ ಈ ಕಾನೂನು ಚರ್ಚೆಯ ವಿಷಯವಾಗಿದೆ. ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ಅನೇಕ ಉನ್ನತ ನಾಯಕರ ವಿರುದ್ಧ ದೇಶದ್ರೋಹದ ಕಾನೂನಿನಡಿಯಲ್ಲಿ ಬಂಧಿಸಲಾಗಿತ್ತು.

 

 1. ಮಹಾತ್ಮ ಗಾಂಧಿ ಈ ಕಾನೂನನ್ನು “ನಾಗರಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಲು ವಿನ್ಯಾಸಗೊಳಿಸಲಾದ ಭಾರತೀಯ ದಂಡ ಸಂಹಿತೆಯ ರಾಜಕೀಯ ವಿಭಾಗಗಳ ರಾಜಕುಮಾರ” ಎಂದು ಬಣ್ಣಿಸಿದರು.
 2. ಕಾನೂನನ್ನು “ಹೆಚ್ಚು ಆಕ್ಷೇಪಾರ್ಹ ಮತ್ತು ಖಂಡನೀಯ” ಎಂದು ವಿವರಿಸಿದ ನೆಹರೂ, “ನಮ್ಮಿಂದ ಅಂಗೀಕರಿಸಲ್ಪಟ್ಟ ಯಾವುದೇ ಕಾನೂನುಗಳ ನಿಬಂಧನೆಗಳಲ್ಲಿ ಇದಕ್ಕೆ ಯಾವುದೇ ಸ್ಥಾನವನ್ನು ನೀಡಬಾರದು” ಮತ್ತು “ನಾವು ಅದನ್ನು ಬೇಗನೆ ತೊಡೆದುಹಾಕುತ್ತೇವೆ” ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಸಂಬಂಧಿತ ಸುಪ್ರೀಂ ಕೋರ್ಟ್‌ನ ತೀರ್ಪುಗಳು:

 1. ಕೇದಾರ್ ನಾಥ್ ಸಿಂಗ್ VS ಬಿಹಾರ ರಾಜ್ಯ ಪ್ರಕರಣ (1962): ಐಪಿಸಿಯ ಸೆಕ್ಷನ್ 124 ಎ ಅಡಿಯಲ್ಲಿ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಕೇದಾರ್ ನಾಥ್ ಸಿಂಗ್ VS ಬಿಹಾರ ರಾಜ್ಯ ಪ್ರಕರಣದಲ್ಲಿ (1962) ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು.
 2. ಸರ್ಕಾರದ ಟೀಕಾಕಾರರು ಸರ್ಕಾರದ ಕ್ರಮಗಳನ್ನು ಇಷ್ಟಪಡದೇ ಅದರ ಕುರಿತು ಎಷ್ಟೇ ಕಠಿಣವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ, ಹಿಂಸಾತ್ಮಕ ಕೃತ್ಯಗಳಿಂದ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಗೆ ಕಾರಣವಾಗದಿದ್ದಲ್ಲಿ ಅದು ಶಿಕ್ಷಾರ್ಹವಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
 3. ಬಲ್ವಂತ್ ಸಿಂಗ್ vs ಪಂಜಾಬ್ ರಾಜ್ಯ (1995) ಪ್ರಕರಣ:

ಈ ಪ್ರಕರಣದಲ್ಲಿ, ‘ಖಲಿಸ್ತಾನ್ ಜಿಂದಾಬಾದ್’ ನಂತಹ ಕೇವಲ ಘೋಷಣೆಗಳನ್ನು ಕೂಗುವುದು ದೇಶದ್ರೋಹಕ್ಕೆ ಸಮವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. ಸ್ಪಷ್ಟವಾಗಿ, ದೇಶದ್ರೋಹ ಕಾನೂನನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದೂ ಸಹ ನ್ಯಾಯಪೀಠವು ಅಭಿಪ್ರಾಯಪಟ್ಟಿತ್ತು.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

‘ವಿಶ್ವ ನಿರ್ಲಕ್ಷಿತ ಉಷ್ಣವಲಯದ ರೋಗಗಳ ದಿನ’:  ಜನವರಿ 30:


(January 30 is now ‘World Neglected Tropical Diseases Day’)

 

ಸಂದರ್ಭ:

ವಿಶ್ವ ಆರೋಗ್ಯ ಅಸೆಂಬ್ಲಿಯ (World Health Assembly) 74 ನೇ ಅಧಿವೇಶನದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್‌ ಜನವರಿ 30 ಅನ್ನು ‘ವಿಶ್ವ ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ (World Neglected Tropical Diseases- NTD) ದಿನ’ ಎಂದು ಘೋಷಿಸಲು ಮಂಡಿಸಿದ ಪ್ರಸ್ತಾಪವನ್ನು ವಿಶ್ವ ಆರೋಗ್ಯ ಅಸೆಂಬ್ಲಿಯ ಎಲ್ಲ ಪ್ರತಿನಿಧಿಗಳು ಸರ್ವಾನುಮತದಿಂದ ಅಂಗೀಕರಿಸಿದರು.

 

ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳು’ ಯಾವುವು?

 1.  ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳು (NTD) ಆಫ್ರಿಕಾ, ಏಷ್ಯಾ ಮತ್ತು ಅಮೆರಿಕದ ಅಭಿವೃದ್ಧಿಶೀಲ ವಲಯಗಳಲ್ಲಿ,ಅಂಚಿನಲ್ಲಿರುವ ಸಮುದಾಯಗಳಲ್ಲಿ ಕಂಡುಬರುವ ಸಾಮಾನ್ಯ ಸೋಂಕುಗಳಾಗಿವೆ.
 2. ವೈರಸ್, ಬ್ಯಾಕ್ಟೀರಿಯಾ, ಪ್ರೊಟೊಜೋವಾ ಮತ್ತು ಪರಾವಲಂಬಿ ಹುಳುಗಳಂತಹ ವಿವಿಧ ರೋಗಕಾರಕಗಳಿಂದ ಈ ರೋಗಗಳು ಉಂಟಾಗುತ್ತವೆ.
 3. ಸಾಮಾನ್ಯವಾಗಿ ಈ (NTD) ಕಾಯಿಲೆಗಳ ಸಂಶೋಧನೆ ಮತ್ತು ಚಿಕಿತ್ಸೆಗೆ, ಕ್ಷಯ, ಎಚ್‌ಐವಿ-ಏಡ್ಸ್ ಮತ್ತು ಮಲೇರಿಯಾ ಮುಂತಾದ ಕಾಯಿಲೆಗಳಿಗೆ ಮಾಡಲಾಗುವ ಖರ್ಚಿಗಿಂತ ಕಡಿಮೆ ಖರ್ಚು ಮಾಡಲಾಗುತ್ತದೆ.
 4. ‘ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ’ (World Neglected Tropical Diseases- NTD) ಕೆಲವು ಉದಾಹರಣೆಗಳೆಂದರೆ ಹಾವು ಕಡಿತ, ತುರಿಕೆ, ಯಾವ್ಸ್(Yaws), ಟ್ರಾಕೋಮಾ(trachoma), ಕಾಲಾ-ಅಜಾರ್ (Leishmaniasis), ಚಾಗಸ್(Chagas) ಇತ್ಯಾದಿಗಳು.

 

2021-2030 ಅವಧಿಯಲ್ಲಿ ‘ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳನ್ನು’ ನಿರ್ಮೂಲನೆ ಮಾಡಲು ಮೂರು ಕಾರ್ಯತಂತ್ರದ ಬದಲಾವಣೆಗಳಿಗೆ ಕರೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ಹೊಸ ನೀಲ ನಕ್ಷೆ:

 1. ಪ್ರಕ್ರಿಯೆಯನ್ನು ಅಳೆಯುವ ಬದಲು, ಪರಿಣಾಮವನ್ನು ಅಳೆಯಲಾಗುತ್ತದೆ.
 2. ರೋಗ-ನಿಶ್ಚಿತ ಯೋಜನೆ ಮತ್ತು ಪ್ರೋಗ್ರಾಮಿಂಗ್‌ನ ಸ್ಥಳದಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರಿ ಕಾರ್ಯಗಳನ್ನು ಪ್ರಾರಂಭಿಸಲಾಗುವುದು.
 3. ಬಾಹ್ಯವಾಗಿ ಚಾಲಿತ ಕಾರ್ಯಸೂಚಿಯ ಬದಲು, ದೇಶದ ಒಡೆತನದ ಮತ್ತು ದೇಶ-ಅನುದಾನಿತ (ದೇಶವೇ ಹಣಕಾಸು ನೆರವು ನೀಡುವ) ಕಾರ್ಯಕ್ರಮಗಳನ್ನು ಪರಿಚಯಿಸುವುದು.

 

ವಿಶ್ವ ನಿರ್ಲಕ್ಷಿತ ಉಷ್ಣವಲಯದ ರೋಗ ದಿನ’ ಕ್ಕೆ ‘30 ನೇ ಜನವರಿ’ ಯನ್ನು ಆಯ್ಕೆ ಮಾಡಲು ಕಾರಣ:

ಈ ದಿನದಂದು, ಅಂದರೆ, ಜನವರಿ 30, 2012 ರಂದು, ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ ಕುರಿತು ಲಂಡನ್ ಘೋಷಣೆ’ ಯನ್ನು ಅಂಗೀಕರಿಸಲಾಯಿತು.

 1. ಅನೌಪಚಾರಿಕವಾಗಿ, 2020 ರಲ್ಲಿ ಮೊದಲ ‘ವಿಶ್ವ ನಿರ್ಲಕ್ಷಿತ ಉಷ್ಣವಲಯದ ರೋಗಗಳ ದಿನ’ ವನ್ನು ಆಚರಿಸಲಾಯಿತು.

 

ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳಿಗೆ’ ವಿಶೇಷ ಗಮನ ಹರಿಸುವ ಅವಶ್ಯಕತೆ ಏಕಿದೆ?

ಜಾಗತಿಕವಾಗಿ ಒಂದು ಶತಕೋಟಿಗೂ ಹೆಚ್ಚು ಜನರು ‘ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳಿಂದ’ (NTD)  ಪ್ರಭಾವಿತರಾಗಿದ್ದಾರೆ. ಈ ರೋಗಗಳು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡಬಹುದಾದವಾದರೂ, ಬಡತನ ಮತ್ತು ಪರಿಸರ ವ್ಯವಸ್ಥೆಗಳೊಂದಿಗಿನ ಅವುಗಳ ಸಂಕೀರ್ಣ ಸಂಬಂಧದ ಕಾರಣದಿಂದಾಗಿ ಅವು ವಿನಾಶಕಾರಿ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಉಂಟುಮಾಡುವುದನ್ನು ಮುಂದುವರೆಸಿವೆ.

 

ಈ ರೋಗಗಳ ಹರಡುವಿಕೆ:

 1. ಕಲುಷಿತ ನೀರು, ಆವಾಸಸ್ಥಾನಗಳ ಕರುಣಾಜನಕ ಸ್ಥಿತಿ ಮತ್ತು ನೈರ್ಮಲ್ಯದ ಕೊರತೆ ಈ ರೋಗಗಳ ಹರಡುವಿಕೆಗೆ ಮುಖ್ಯ ಕಾರಣಗಳಾಗಿವೆ.
 2. ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳಿಗೆ ಮಕ್ಕಳೇ ಹೆಚ್ಚಾಗಿ ಅಪಾಯಕ್ಕೆ ಒಳಗಾಗುತ್ತಾರೆ, ಮತ್ತು ಈ ರೋಗಗಳು ಪ್ರತಿವರ್ಷ ಲಕ್ಷಾಂತರ ಜನರ ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುತ್ತವೆ, ಇದರ ಪರಿಣಾಮವಾಗಿ ವ್ಯಕ್ತಿಯ ಜೀವನದುದ್ದಕ್ಕೂ ಆಗಾಗ್ಗೆ ದೈಹಿಕ ನೋವು ಮತ್ತು ಸಾಮಾಜಿಕ ಕಳಂಕ ಉಂಟಾಗುತ್ತದೆ.

 

ಭಾರತದಲ್ಲಿ ನಿರ್ಲಕ್ಷಿತ ರೋಗಗಳ ಸಂಶೋಧನೆಗೆ ನೀತಿಗಳು:

 1. ರಾಷ್ಟ್ರೀಯ ಆರೋಗ್ಯ ನೀತಿ (2017): ಇದು, ಆರೋಗ್ಯ ಅಗತ್ಯಗಳನ್ನು ಪೂರೈಸಲು ನಾವೀನ್ಯತೆಯನ್ನು ಉತ್ತೇಜಿಸುವ ಮಹತ್ಪಾಕಾಂಕ್ಷೆಯನ್ನು ಹೊಂದಿಸುತ್ತದೆ ಮತ್ತು ಹೆಚ್ಚು ಅಗತ್ಯವಿರುವ ಜನರಿಗೆ ಕೈಗೆಟುಕುವ ಹೊಸ  ಔಷಧಿಗಳ ದೊರೆಯುವಿಕೆಯನ್ನು ಖಾತರಿ ಗೊಳಿಸುತ್ತದೆ, ಆದರೆ ಇದು ನಿರ್ಲಕ್ಷಿತ ಕಾಯಿಲೆಗಳನ್ನು ನಿರ್ದಿಷ್ಟವಾಗಿ ನಿಭಾಯಿಸುವುದಿಲ್ಲ.
 2. ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿನ ರಾಷ್ಟ್ರೀಯ ನೀತಿ (2018): ಇದರಲ್ಲಿ ಸಾಂಕ್ರಾಮಿಕ ಉಷ್ಣವಲಯದ ಕಾಯಿಲೆಗಳನ್ನು ಸೇರಿಸಲಾಗಿದೆ ಮತ್ತು ಅಪರೂಪದ ಕಾಯಿಲೆಗಳ ಚಿಕಿತ್ಸೆಯ ಕುರಿತು ಸಂಶೋಧನೆ ನಡೆಸುವ ಅಗತ್ಯವನ್ನು ಒತ್ತಿಹೇಳುತ್ತದೆ.ಆದಾಗ್ಯೂ, ಈ ನೀತಿಯಡಿಯಲ್ಲಿ, ಸಂಶೋಧನೆಗಳ ಧನಸಹಾಯಕ್ಕಾಗಿ ರೋಗಗಳು ಮತ್ತು ಪ್ರದೇಶಗಳ ಆದ್ಯತೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ರಕ್ಷಣಾ ಕ್ಷೇತ್ರದ ನಕಾರಾತ್ಮಕ ಆಮದು ಪಟ್ಟಿ ಎಂದರೇನು?(What is the negative imports list for defence?)

 

ಸಂದರ್ಭ:

ರಕ್ಷಣಾ ಸಚಿವಾಲಯವು ಎರಡನೇ ಋಣಾತ್ಮಕ ಆಮದು ಪಟ್ಟಿ(negative import list)ಯನ್ನು ಅಧಿಸೂಚಿಸಿದೆ – ಈಗ ಅದನ್ನು ‘ಸಕಾರಾತ್ಮಕ ದೇಶೀಕರಣ ಪಟ್ಟಿ’(positive indigenisation list)ಎಂದು ಮರುನಾಮಕರಣ ಮಾಡಲಾಗಿದೆ – ಇದರಡಿಯಲ್ಲಿ 108 ರಕ್ಷಣಾ ಸಾಮಾಗ್ರಿಗಳನ್ನು ಈಗ ಸ್ಥಳೀಯ ಮೂಲಗಳಿಂದ ಮಾತ್ರ ಖರೀದಿಸಬಹುದು. ಹೊಸ ಪಟ್ಟಿಯು ಪಟ್ಟಿಯಲ್ಲಿರುವ ಸಾಮಗ್ರಿಗಳ ಒಟ್ಟು ಸಂಖ್ಯೆಯನ್ನು 209 ಕ್ಕೆ ಹೆಚ್ಚಿಸಿದೆ.

 

 1. ಈ ಹೊಸ ಪಟ್ಟಿಯು ಸಂಕೀರ್ಣ ವ್ಯವಸ್ಥೆಗಳು, ಸಂವೇದಕಗಳು, ಸಿಮ್ಯುಲೇಟರ್, ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳಾದ ಹೆಲಿಕಾಪ್ಟರ್‌ಗಳು, ಮುಂದಿನ ಪೀಳಿಗೆಯ ಕಾರ್ವೆಟ್ಗಳು(corvettes), ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಅಂಡ್ ಕಂಟ್ರೋಲ್ (Air Borne Early Warning and Control) ವ್ಯವಸ್ಥೆಗಳು, ಮತ್ತು ಟ್ಯಾಂಕ್ ಎಂಜಿನ್ ಗಳನ್ನು ಒಳಗೊಂಡಿದೆ.

 

ಈ ನಡೆಯ ಮಹತ್ವ ಮತ್ತು ಪರಿಣಾಮಗಳು:

 1. ಸ್ಥಳೀಯ ರಕ್ಷಣಾ ಉದ್ದಿಮೆಗಳ ಸಾಮರ್ಥ್ಯವನ್ನು ಗುರುತಿಸುತ್ತದೆ.
 2. ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮರ್ಥ್ಯಗಳಲ್ಲಿ ಹೊಸ ಹೂಡಿಕೆಯನ್ನು ಆಕರ್ಷಿಸುವ ಮೂಲಕ ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಚೋದನೆಯನ್ನು ನೀಡುವುದು.
 3. ‘ಸ್ಟಾರ್ಟ್ ಅಪ್‌’ಗಳಿಗೆ ಹಾಗೂ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (MSME) ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.

 

ಏನಿದು ಋಣಾತ್ಮಕ ಆಮದು ಪಟ್ಟಿ ನೀತಿ?

 1. ಈ ನೀತಿಯನ್ನು ಆಗಸ್ಟ್ 2020 ರಲ್ಲಿ ಪ್ರಾರಂಭಿಸಲಾಯಿತು. ‘ನಕಾರಾತ್ಮಕ ಆಮದು ಪಟ್ಟಿ’ ಎಂದರೆ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡ ಸರಕುಗಳನ್ನು ಸಶಸ್ತ್ರ ಪಡೆಗಳು ಅಂದರೆ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯು ದೇಶೀಯ ಉತ್ಪಾದಕರಿಂದ ಮಾತ್ರ ಖರೀದಿಸಬೇಕಾಗುತ್ತದೆ.
 2. ಈ ದೇಶೀಯ ರಕ್ಷಣಾ ಸಾಮಗ್ರಿ ತಯಾರಕರು, ಖಾಸಗಿ ವಲಯ ಅಥವಾ ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳು (Defence Public Sector Undertakings- DPSUs) ಆಗಿರಬಹುದು.

 

ಈ ನೀತಿಯ ಅಗತ್ಯತೆ ಮತ್ತು ಪರಿಣಾಮಗಳು:

ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, ಭಾರತವು 2014 ಮತ್ತು 2019 ರ ನಡುವೆ ಯುಎಸ್ $ 16.75 ಬಿಲಿಯನ್ ಮೊತ್ತದ ರಕ್ಷಣಾ ಸಂಬಂಧಿತ ವಸ್ತುಗಳನ್ನು ಆಮದು ಮಾಡಿಕೊಂಡಿದೆ ಮತ್ತು ಈ ಅವಧಿಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಕ್ಷಣಾ ಸಾಮಗ್ರಿಗಳ ಆಮದುದಾರನಾಗಿದೆ.

 1. ರಕ್ಷಣಾ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯ ರಕ್ಷಣಾ ಉತ್ಪಾದನಾ ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಬಯಸಿದೆ.
 2. ಋಣಾತ್ಮಕ ಆಮದು ಪಟ್ಟಿಯಲ್ಲಿ ಸೇರಿಸಲಾದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯನ್ನು ನಿರಾಕರಿಸುವ ಮೂಲಕ ದೇಶೀಯ ರಕ್ಷಣಾ ಉದ್ಯಮಕ್ಕೆ ಭಾರತೀಯ ಸಶಸ್ತ್ರ ಪಡೆಗಳ ಅಗತ್ಯತೆಗಳನ್ನು ತಯಾರಿಸಲು, ಪೂರೈಸಲು ಮತ್ತು ಬೆಳೆಯಲು ಅವಕಾಶ ನೀಡಲಾಗಿದೆ.

 

ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು.

ಭಾಷಾನ್ ಚಾರ್‌ ದ್ವೀಪದಲ್ಲಿ ಪ್ರತಿಭಟನೆ ನಡೆಸುತ್ತಿರುವ, ಸಾವಿರಾರು ರೋಹಿಂಗ್ಯಾಗಳು:


(Thousands of Rohingya protest at Bhashan Char)

ಸಂದರ್ಭ:

ಇತ್ತೀಚೆಗೆ, ಬಾಂಗ್ಲಾದೇಶದ ಕರಾವಳಿಯಲ್ಲಿರುವ ಚಂಡಮಾರುತ ಪೀಡಿತ ‘ಭಾಷನ್ ಚಾರ್’ ದ್ವೀಪದಲ್ಲಿ ಹಲವಾರು ಸಾವಿರ ರೋಹಿಂಗ್ಯಾಗಳು ಅಲ್ಲಿನ ಜೀವನ ಪರಿಸ್ಥಿತಿಗಳ ವಿರುದ್ಧ ಅಶಿಸ್ತಿನ ಪ್ರತಿಭಟನೆಗಳನ್ನು ನಡೆಸಿದರು.

 

ಏನಿದು ಪ್ರಕರಣ?

ಕಳೆದ ಡಿಸೆಂಬರ್‌ನಿಂದ, 18,000 ನಿರಾಶ್ರಿತರನ್ನು ಬಾಂಗ್ಲಾದೇಶವು, ತನ್ನ ಮುಖ್ಯ ಭೂಭಾಗದಿಂದ ಬಂಗಾಳಕೊಲ್ಲಿಯಲ್ಲಿರುವ ಹೂಳು-ನಿರ್ಮಿತ ಮತ್ತು ತಗ್ಗು ಪ್ರದೇಶವಾದ ಭಾಷಾನ್ ಚಾರ್‌ ದ್ವೀಪಕ್ಕೆ ವರ್ಗಾಯಿಸಿದ್ದು, ಅಲ್ಲಿ ಅವರು ಹದಗೆಟ್ಟ ಮತ್ತು ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ.

 

ಚಿಂತೆಯ ವಿಷಯವೇನು?

ಭಾಸನ್ ಚಾರ್ (Floating Island-ತೇಲುವ ದ್ವೀಪ), ಇದನ್ನು ‘ಚಾರ್ ಪಿಯಾ’(Char Piya) ಅಥವಾ ‘ತೆಂಗರ್ ಚಾರ್ ದ್ವೀಪ’(Thengar Char Island) ಎಂದೂ ಕರೆಯುತ್ತಾರೆ, ಇದು ಬಾಂಗ್ಲಾದೇಶದ ಹಟಿಯಾದಲ್ಲಿದೆ.

 1. ಈ ದ್ವೀಪವು ಬಂಗಾಳಕೊಲ್ಲಿಯಲ್ಲಿ ಕೇವಲ 20 ವರ್ಷಗಳ ಹಿಂದೆ ಹೂಳು ತುಂಬುವಿಕೆಯಿಂದಾಗಿ ರೂಪುಗೊಂಡಿದೆ ಮತ್ತು ಈ ದ್ವೀಪವು ಕಠಿಣ ಹವಾಮಾನ ಬದಲಾವಣೆ ಪರಿಸ್ಥಿತಿಗಳಿಗೆ ತುತ್ತಾಗುವ ಹಾಗೂ ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಇದು ಬಾಂಗ್ಲಾದೇಶದ ಮುಖ್ಯ ಭೂಮಿಯಿಂದ ದೂರವಿರುವುದು, ಈ ವಿಚಾರವನ್ನು ಬಾಂಗ್ಲಾದೇಶವು  2015 ರಲ್ಲಿ ಮೊದಲ ಬಾರಿಗೆ  ಪ್ರಸ್ತಾಪಿಸಿದಾಗಿನಿಂದಲೂ ತುಂಬ ಕಾಳಜಿಯ ವಿಷಯವಾಗಿದೆ.

 

ರೋಹಿಂಗ್ಯಾಗಳು ಎಂದರೆ ಯಾರು?

 1. ಅವರು, ಹೆಚ್ಚಾಗಿ ಮುಸ್ಲಿಮರೇ ಇರುವ ಒಂದು ಜನಾಂಗೀಯ ಗುಂಪಾಗಿದ್ದು, ಅವರಿಗೆ ಮ್ಯಾನ್ಮಾರ್‌ ನ ಪೂರ್ಣ ಪೌರತ್ವ ನೀಡಲಾಗಿಲ್ಲ.
 2. ಅವರನ್ನು,“ನಿವಾಸಿ ವಿದೇಶಿಯರು ಅಥವಾ ಸಹ ನಾಗರಿಕರು” ಎಂದು ವರ್ಗೀಕರಿಸಲಾಗಿದೆ.
 3. ರೋಹಿಂಗ್ಯಾಗಳು, ಚೀನಾ-ಟಿಬೆಟಿಯನ್ ದೇಶದವರಿಗಿಂತ ಭಾರತ ಮತ್ತು ಬಾಂಗ್ಲಾದೇಶದ ಇಂಡೋ-ಆರ್ಯನ್ ಜನಾಂಗದವರಿಗೆ ಹೆಚ್ಚು ಹತ್ತಿರವಾಗಿದ್ದು ತಮ್ಮದು ಎಂದು ಹೇಳಿಕೊಳ್ಳಲು ಯಾವುದೇ ದೇಶವನ್ನು ಹೊಂದಿರದ (stateless) ಇವರು ಮ್ಯಾನ್ಮಾರ್‌ ನ ರಾಖೈನ್ ಪ್ರಾಂತದಲ್ಲಿ ವಾಸಿಸುತ್ತಾರೆ.
 4. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾದ ಆಂಟೋನಿಯೊ ಗುಟೆರೆಸ್ ರವರು ರೊಹಿಂಗ್ಯಾಗಳನ್ನೂ “ವಿಶ್ವದಲ್ಲಿ ಅತ್ಯಂತ ತಾರತಮ್ಯಕ್ಕೊಳಗಾದ ಜನಾಂಗ” ಎಂದು ಬಣ್ಣಿಸಿದ್ದಾರೆ.
 5. ಅವರು ತಮ್ಮದೇ ಆದ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದಾರೆ ಮತ್ತು ಅರಬ್ ವ್ಯಾಪಾರಿಗಳು ಮತ್ತು ಇತರ ಜನಾಂಗಗಳ ವಂಶಜರು ಎಂದು ಹೇಳಲಾಗುತ್ತದೆ, ಅವರು ಈ ಪ್ರದೇಶದಲ್ಲಿ ಅನೇಕ ತಲೆಮಾರುಗಳಿಂದ ವಾಸಿಸುತ್ತಿದ್ದಾರೆ.
 6. 2017 ರ ಆರಂಭದಲ್ಲಿ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಜನರ ಸಂಖ್ಯೆ ಸುಮಾರು ಒಂದು ಮಿಲಿಯನ್ ಆಗಿತ್ತು.
 7. ಆಗಸ್ಟ್ 2017 ರಿಂದ, ಸುಮಾರು 625,000 ನಿರಾಶ್ರಿತರು ರಾಖೈನ್ ಪ್ರಾಂತ್ಯದಿಂದ ಓಡಿಹೋಗಿ ಬಾಂಗ್ಲಾದೇಶ ಗಡಿಯಲ್ಲಿ ನೆಲೆಸಿದ್ದಾರೆ.

 

ಅಂತರರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ರೋಹಿಂಗ್ಯಾಗಳಿಗೆ ಲಭ್ಯವಿರುವ ರಕ್ಷಣೆ:

 1. 1951 ರ ನಿರಾಶ್ರಿತರ ಸಮಾವೇಶ ಮತ್ತು ಅದರ 1967 ಶಿಷ್ಟಾಚಾರ(The 1951 Refugee Convention and its 1967 Protocol): ಇದರ ಅಡಿಯಲ್ಲಿ, ‘ನಿರಾಶ್ರಿತರು’ ಎಂಬ ಪದವನ್ನು ವ್ಯಾಖ್ಯಾನಿಸಲಾಗಿದೆ, ಮತ್ತು ‘ನಿರಾಶ್ರಿತರ’ ಹಕ್ಕುಗಳು ಮತ್ತು ಆಶ್ರಯ ನೀಡುವ ದೇಶಗಳ ಕಾನೂನುಬದ್ಧ ಜವಾಬ್ದಾರಿಯನ್ನು ನಿರ್ಧರಿಸಲಾಗಿದೆ.

 

 • ಈ ಸಮಾವೇಶದ ಮೂಲ ತತ್ವವು ನಿರಾಶ್ರಿತರನ್ನು ತಮ್ಮ ಮೂಲ ದೇಶಕ್ಕೆ ಮರಳಿ ಕಳುಹಿಸದಿರುವುದಕ್ಕೆ’ (non-refoulement) ಸಂಬಂಧಿಸಿದೆ, ಅದರ ಪ್ರಕಾರ, ತಮ್ಮ ಮೂಲ ದೇಶದಲ್ಲಿನ ಕಿರುಕುಳದಿಂದ(ಜೀವನ ಮತ್ತು ಸ್ವಾತಂತ್ರ್ಯಕ್ಕೆ ಬೆದರಿಕೆ ಇರುವ)ಪಾರಾಗಲು, ಅವರು ಬೇರೆ ದೇಶದಲ್ಲಿ ಆಶ್ರಯ ಪಡೆದಿರುತ್ತಾರೆ ಆದ್ದರಿಂದ ಅವರನ್ನು ತಮ್ಮ ಮೂಲ ದೇಶಕ್ಕೆ ಮರಳಲು ಒತ್ತಾಯಿಸಬಾರದು.
 • ಆದರೆ, ಬಾಂಗ್ಲಾದೇಶ ಈ ಒಪ್ಪಂದ(ಸಮಾವೇಶ)ಕ್ಕೆ ಸಹಿ ಹಾಕಿಲ್ಲ ಎಂಬುದು ಆತಂಕದ ವಿಷಯವಾಗಿದೆ.
 1. ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಕಾನೂನು (International Covenant on Civil and Political Rights – ICCPR):

 ನಿರಾಶ್ರಿತರು ಆಶ್ರಯ ಪಡೆದ ದೇಶದಲ್ಲಿ ವಿದೇಶಿಯರಾಗಿದ್ದರೂ, 1966ರ ‘ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ನಿಯಮಗಳ’(ICCPR),ಆರ್ಟಿಕಲ್ 2 ರ ಪ್ರಕಾರ, ಆ ದೇಶದ ನಾಗರಿಕರಂತೆಯೇ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಅನುಭವಿಸಲು ಅವರು ಅರ್ಹರಾಗಿದ್ದಾರೆ.‘ಕಾನೂನಿನ ಮುಂದೆ ಸಮಾನತೆ’, ಕಾನೂನಿನ ಸಮಾನ ರಕ್ಷಣೆ’ ಮತ್ತು ‘ತಾರತಮ್ಯರಹಿತ ಹಕ್ಕು’ ಇಂತಹ ಮೂಲಭೂತ ಹಕ್ಕುಗಳನ್ನು ಸಹ ಅವರು ಹೊಂದಿರುತ್ತಾರೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಮೂರು ಮಕ್ಕಳನ್ನು ಹೊಂದಲು ದಂಪತಿಗೆ ಅವಕಾಶ ನೀಡಿದ ಚೀನಾ:


(China to allow couples to have third child)

 

ಸಂದರ್ಭ:

ಇತ್ತೀಚೆಗೆ ಬಿಡುಗಡೆಯಾದ ಚೀನಾದ ಜನಗಣತಿಯ ಮಾಹಿತಿಯು ದೇಶದ ಜನಸಂಖ್ಯಾ ಬೆಳವಣಿಗೆಯ ದರವು 1950 ರ ದಶಕದಿಂದ ನಿಧಾನವಾಗಿದೆ ಮತ್ತು ಕ್ಷೀಣಿಸುತ್ತಿದೆ ಎಂದು ತೋರಿಸಿದೆ.

 1. ಅಂದಿನಿಂದ, ಪ್ರತಿ ವಿವಾಹಿತ ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಚೀನಾ ಅವಕಾಶ ನೀಡುವುದಾಗಿ ಘೋಷಿಸಿದೆ.
 2.  ದಯವಿಟ್ಟು ಗಮನಿಸಿ, ಐದು ವರ್ಷಗಳ ಹಿಂದೆ 2016 ರಲ್ಲಿ, ಚೀನಾ ತನ್ನ ವಿವಾದಾತ್ಮಕ ಒಂದು-ಮಗು ನೀತಿ’ (One-Child Policy) ಯನ್ನು ಮೊದಲ ಬಾರಿಗೆ ಬದಲಾಯಿಸಿತು ಮತ್ತು ಇಬ್ಬರು ಮಕ್ಕಳನ್ನು ಹೊಂದಲು ಅನುಮತಿಸಿತು.   

 

ಮೊದಲನೆಯದಾಗಿ, ಚೀನಾದಲ್ಲಿ ಒಂದು ಮಗುವಿನ ನೀತಿಯನ್ನು ಏಕೆ ಜಾರಿಗೊಳಿಸಲಾಯಿತು?

 1. ಚೀನಾ, ಒಂದು ಮಗು ನೀತಿ’ ಯನ್ನು 1980 ರಲ್ಲಿ ಪರಿಚಯಿಸಿತು, ಆ ಸಮಯದಲ್ಲಿ ಚೀನಾದ ಜನಸಂಖ್ಯೆಯು ಒಂದು ಶತಕೋಟಿ ಸಮೀಪಿಸುತ್ತಿತ್ತು ಮತ್ತು ದೇಶದ ಹೆಚ್ಚುತ್ತಿರುವ ಜನಸಂಖ್ಯೆಯು ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಕಮ್ಯುನಿಸ್ಟ್ ಪಕ್ಷವು ಕಳವಳ ವ್ಯಕ್ತಪಡಿಸಿತು.
 2. ಈ ನೀತಿಯನ್ನು ಜಾರಿಗೆ ತರಲು ಹಲವಾರು ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು, ಇದರಲ್ಲಿ ಒಂದು ಮಗುವನ್ನು ಹೊಂದುವ ಕುಟುಂಬಗಳಿಗೆ ಆರ್ಥಿಕ ಪ್ರೋತ್ಸಾಹ ನೀಡುವುದು, ಗರ್ಭನಿರೋಧಕಗಳನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ನೀತಿ ಉಲ್ಲಂಘಿಸುವವರ ವಿರುದ್ಧ ನಿರ್ಬಂಧಗಳನ್ನು ವಿಧಿಸುವುದು ಇತ್ಯಾದಿ.

 

ಈ ನೀತಿಗೆ ಸಂಬಂಧಿಸಿದ ಟೀಕೆಗಳು:

ಈ ನೀತಿಯನ್ನು ಚೀನಾದ ಅಧಿಕಾರಿಗಳು ದೀರ್ಘಕಾಲದವರೆಗೆ ಯಶಸ್ವಿಯಾಗಿಸಿದ್ದಾರೆ ಮತ್ತು ಈ ನೀತಿಯು ಸುಮಾರು 400 ಮಿಲಿಯನ್ ಜನರು ಜನಿಸುವುದನ್ನು ತಡೆದಿದ್ದು ಆ ಮೂಲಕ ದೇಶವನ್ನು  ತೀವ್ರವಾದ ಆಹಾರ ಮತ್ತು ನೀರಿನ ಕೊರತೆಯಂತಹ ಸಮಸ್ಯೆಗಳಿಂದ ಪಾರಾಗಲು ಸಹಾಯ ಮಾಡಿದೆ ಎಂದು ಹೇಳಲಾಗಿದೆ.

ಆದಾಗ್ಯೂ, ಮಗುವನ್ನು ಹೊಂದುವ ಮಿತಿಯು ದೇಶದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ, ಉದಾಹರಣೆಗೆ:

 1. ಇದಕ್ಕಾಗಿ ಬಲವಂತದ ಗರ್ಭಪಾತ ಮತ್ತು ಕ್ರಿಮಿನಾಶಕಗಳಂತಹ ಕ್ರೂರ ತಂತ್ರಗಳನ್ನು ರಾಜ್ಯವು ಬಳಸಿಕೊಂಡಿತು.
 2. ಈ ನೀತಿಯು ಬಡ ಚೀನೀಯರಿಗೆ ಸಾಕಷ್ಟು ಅನ್ಯಾಯಕರವಾಗಿತ್ತು, ಏಕೆಂದರೆ ಶ್ರೀಮಂತರು ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಆರ್ಥಿಕ ನಿರ್ಬಂಧಗಳನ್ನು ಪಾವತಿಸಬಹುದಾಗಿತ್ತು ಆದರೆ ಬಡವರಿಗೆ, ಶಿಕ್ಷೆಯಾಗಿತ್ತು.
 3. ಈ ನೀತಿಯ ಅನುಷ್ಠಾನದ ಸಮಯದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ.
 4. ಇದು ಸಾಮಾಜಿಕ ನಿಯಂತ್ರಣದ ಸಾಧನವಾಗಿ ಸಂತಾನೋತ್ಪತ್ತಿ ಮಿತಿಗಳನ್ನು ಜಾರಿಗೊಳಿಸಲು ದಾರಿಮಾಡಿಕೊಟ್ಟಿತು.
 5. ಇದು ಪುರುಷರ ಪರವಾಗಿ ಲಿಂಗ ಅನುಪಾತದ ಮೇಲೆ ಪರಿಣಾಮ ಬೀರಿತು.(ಅಂದರೆ ಪುರುಷರ ಸಂಖ್ಯೆಯಲ್ಲಿ ಹೆಚ್ಚಳ).
 6. ಇದು ಹೆಣ್ಣು ಭ್ರೂಣಗಳ ಗರ್ಭಪಾತದ ಹೆಚ್ಚಳಕ್ಕೆ ಕಾರಣವಾಯಿತು ಮತ್ತು ಅದೇ ರೀತಿ ಅನಾಥಾಶ್ರಮಗಳಲ್ಲಿ ಇರಿಸಲ್ಪಟ್ಟ ಹುಡುಗಿಯರ ಸಂಖ್ಯೆಯೂ ಹೆಚ್ಚಾಯಿತು.
 7. ಈ ಕಾರಣದಿಂದಾಗಿ, ಚೀನಾದಲ್ಲಿ ವೃದ್ಧರ ಸಂಖ್ಯೆ ಇತರ ದೇಶಗಳಿಗಿಂತ ವೇಗವಾಗಿ ಹೆಚ್ಚಾಗಿದೆ, ಇದು ದೇಶದ ಅಭಿವೃದ್ಧಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿತು.

 

ಈ ನೀತಿಯನ್ನು ಏಕೆ ನಿಲ್ಲಿಸಲಾಯಿತು?

ವೇಗವಾಗಿ ಹೆಚ್ಚುತ್ತಿರುವ ವಯಸ್ಸಾದ ಜನಸಂಖ್ಯೆಯಿಂದಾಗಿ ಆರ್ಥಿಕ ಅಭಿವೃದ್ಧಿಗೆ ಹಾನಿಯಾಗಬಹುದೆಂಬ ಭಯದಿಂದ ಆಡಳಿತಾರೂಢ  ಕಮ್ಯುನಿಸ್ಟ್ ಪಕ್ಷವು ಪ್ರತಿ ವಿವಾಹಿತ ದಂಪತಿಗಳಿಗೆ ಇಬ್ಬರು ಮಕ್ಕಳನ್ನು ಹೊಂದಲು ಅನುವು ಮಾಡಿಕೊಡುವ ಉದ್ದೇಶದಿಂದ ‘ಒಂದು-ಮಗು ನೀತಿ’ ಯನ್ನು ಸ್ಥಗಿತಗೊಳಿಸಿತು.

ಮುಂದಿನ ಸುಧಾರಣೆಗಳ ಅಗತ್ಯವೇನು?

‘ಒಂದು ಮಗು ನೀತಿ’ಗೆ ವಿನಾಯಿತಿ ನೀಡಿದ್ದರಿಂದಾಗಿ ದೇಶದ ಯುವಜನರ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆಯನ್ನು ತಂದಿದ್ದರೂ,’ ಸನ್ನಿಹಿತವಾದ ಜನಸಂಖ್ಯಾ ಬಿಕ್ಕಟ್ಟನ್ನು ‘ತಪ್ಪಿಸಲು ಈ ನೀತಿ ಬದಲಾವಣೆಯು ಸಾಕಷ್ಟಿಲ್ಲ(ಅಪರಿಪೂರ್ಣ)ವೆಂದು ಪರಿಗಣಿಸಲಾಗಿದೆ.

 

ಮುಂದೆ ಸವಾಲುಗಳು:

ಸಂತಾನೋತ್ಪತ್ತಿ ಹಕ್ಕುಗಳ ಮೇಲಿನ ಮಿತಿಗಳ ಸಡಿಲಗೊಳಿಸುವಿಕೆಯೊಂದೇ ಸನ್ನಿಹಿತವಾದ ಅನಗತ್ಯ ಜನಸಂಖ್ಯಾ ಬದಲಾವಣೆಯನ್ನು ತಪ್ಪಿಸಲು ಹೆಚ್ಚು ಸಹಾಯ ಮಾಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಪ್ರಸ್ತುತ ಕಡಿಮೆ ಮಕ್ಕಳು ಜನಿಸಲು ಈ ಕೆಳಗಿನವುಗಳು ಮುಖ್ಯ ಕಾರಣಗಳಾಗಿವೆ:

 1. ಹೆಚ್ಚುತ್ತಿರುವ ಜೀವನ ವೆಚ್ಚ, ಶಿಕ್ಷಣ ಮತ್ತು ವಯಸ್ಸಾದ ಪೋಷಕರ ನಿರ್ವಹಣೆ.
 2. ದೇಶದಲ್ಲಿ ಇರುವ ಸುದೀರ್ಘ ಸಮಯದವರೆಗೆ ಕೆಲಸ ಮಾಡುವ ಸಂಸ್ಕೃತಿ.
 3. ಅನೇಕ ದಂಪತಿಗಳು ಒಂದು ಮಗು ಸಾಕು ಎಂಬ ಭಾವನೆ ಹೊಂದಿದ್ದಾರೆ, ಮತ್ತು ಕೆಲವರು ಮಕ್ಕಳನ್ನು ಹೊಂದಲು ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು:ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

5G-ತಂತ್ರಜ್ಞಾನ:


ಸಂದರ್ಭ:

ಇತ್ತೀಚೆಗೆ, ಬಾಲಿವುಡ್ ನಟಿ ಜುಹಿ ಚಾವ್ಲಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಒಂದು ಮೇಲ್ಮನವಿ ಸಲ್ಲಿಸಿದ್ದಾರೆ, ಇದರಲ್ಲಿ, 5 G ತಂತ್ರಜ್ಞಾನವನ್ನು ದೇಶದಲ್ಲಿ ಪರಿಚಯಿಸುವ ಮೊದಲು, 5 G ತಂತ್ರಜ್ಞಾನವನ್ನು ಸೆಲ್ಯುಲಾರ್ ದೂರಸಂಪರ್ಕದಿಂದ ಬಳಸಿಕೊಂಡು, ಈ ತಂತ್ರಜ್ಞಾನದ ಬಳಕೆಯಿಂದ ಹೊರಸೂಸಲ್ಪಟ್ಟ ರೇಡಿಯೊ-ಫ್ರೀಕ್ವೆನ್ಸಿ ವಿಕಿರಣಗಳು ಆರೋಗ್ಯ, ಜೀವನ, ವಯಸ್ಕರ ಅಥವಾ ಮಕ್ಕಳ ಅಂಗಾಂಗಗಳ ಮೇಲೆ, ಸಸ್ಯ ಮತ್ತು ಪ್ರಾಣಿಗಳ ಭಾಗಗಳ ಮೇಲೆ ಬೀರುವ ಯಾವುದೇ ದುಷ್ಪರಿಣಾಮಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಬೇಕೆಂದು ಕೋರಲಾಗಿದೆ.

5 ಜಿ ತಂತ್ರಜ್ಞಾನವು ಮಾನವಕುಲ, ಪುರುಷ, ಮಹಿಳೆ, ವಯಸ್ಕ, ಮಗು, ಶಿಶು, ಪ್ರಾಣಿಗಳು ಮತ್ತು ಪ್ರತಿಯೊಂದು ರೀತಿಯ ಜೀವಿಗಳು, ಸಸ್ಯ ಮತ್ತು ಪ್ರಾಣಿಗಳಿಗೆ ಸುರಕ್ಷಿತವಾಗಿದೆ ಎಂದು ಪ್ರಮಾಣೀಕರಿಸುವಂತೆ, ಸಲ್ಲಿಸಿರುವ ಅರ್ಜಿಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ವಿನಂತಿಸಲಾಗಿದೆ.

5 G ಎಂದರೇನು?

 1. 5G ಎಂಬುದು ಐದನೇ ತಲೆಮಾರಿನ ಸೆಲ್ಯುಲಾರ್ ತಂತ್ರಜ್ಞಾನ. ವೇಗ ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನವನ್ನು ಈ ತಂತ್ರಜ್ಞಾನ ಒದಗಿಸುತ್ತದೆ. 5ಜಿ ಗರಿಷ್ಠ ನೆಟ್‌ವರ್ಕ್ ಡೇಟಾ ವೇಗವು ಸೆಕೆಂಡಿಗೆ 2ರಿಂದ 20 ಗಿಗಾಬೈಟ್ (GBPS) ಇರಲಿದೆ ಎಂದು ಹೇಳಲಾಗುತ್ತಿದೆ.
 2. 5G ತಂತ್ರಜ್ಞಾನವು ಮುಂದಿನ ಪೀಳಿಗೆಯ ಮೊಬೈಲ್ ಬ್ರಾಡ್‌ಬ್ಯಾಂಡ್ ಆಗಿದೆ. ಈ ತಂತ್ರಜ್ಞಾನವು ಅಂತಿಮವಾಗಿ 4G LTE ಸಂಪರ್ಕಗಳನ್ನು ಬದಲಾಯಿಸುತ್ತದೆ ಅಥವಾ ಗಮನಾರ್ಹವಾಗಿ ಹೆಚ್ಚಿಸುತ್ತದೆ.
 3. 5G ಸೂಪರ್ ಫಾಸ್ಟ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡುತ್ತದೆ.
 4. 5G ಮಲ್ಟಿ-ಜಿಬಿಪಿಎಸ್ ಗರಿಷ್ಠ ದರಗಳು, ಅಲ್ಟ್ರಾ- ಲೋ ಲೇಟೆನ್ಸಿ, ಬೃಹತ್ ಸಾಮರ್ಥ್ಯ ಮತ್ತು ಹೆಚ್ಚು ಏಕರೂಪದ ಬಳಕೆದಾರ ಅನುಭವವನ್ನು ನೀಡುತ್ತದೆ.

  

5G ತಂತ್ರಜ್ಞಾನದ ವೈಶಿಷ್ಟಗಳು ಮತ್ತು ಪ್ರಯೋಜನಗಳು:

 1. ಈ ತಂತ್ರಜ್ಞಾನವು ಮಿಲಿಮೀಟರ್ ವೇವ್ ಸ್ಪೆಕ್ಟ್ರಮ್’ (30-300 GHz) ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದರ ಮೂಲಕ ಹೆಚ್ಚಿನ ಪ್ರಮಾಣದ ಡೇಟಾವನ್ನು ಅತಿ ಹೆಚ್ಚಿನ ವೇಗದಲ್ಲಿ ಕಳುಹಿಸಬಹುದು.
 2. 5 ಜಿ ತಂತ್ರಜ್ಞಾನವು ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಆವರ್ತನ ವರ್ಣಪಟಲ( frequency spectrum) ಎಂಬ ಮೂರು ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.ಕಾರ್ಯನಿರ್ವಹಿಸುತ್ತದೆ

ಕಡಿಮೆ ಬ್ಯಾಂಡ್ ತರಂಗಾಂತರವು ಇಂಟರ್ನೆಟ್ ಮತ್ತು ಡೇಟಾ ವಿನಿಮಯದ ವ್ಯಾಪ್ತಿ ಮತ್ತು ವೇಗದ ದೃಷ್ಟಿಯಿಂದ ಉತ್ತಮ ಎನಿಸಿದೆ. ಇದರ ಗರಿಷ್ಠ ವೇಗವನ್ನು 100 ಎಂಬಿಪಿಎಸ್‌ಗೆ ಸೀಮಿತಗೊಳಿಸಲಾಗಿದೆ. ಅತಿಹೆಚ್ಚು ಇಂಟರ್ನೆಟ್ ವೇಗ ಅಗತ್ಯವಿಲ್ಲದ ಮೊಬೈಲ್ ಬಳಕೆದಾರರಿಗೆ ಇದನ್ನು ನೀಡಬಹುದು. ಉದ್ಯಮದ ವಿಶೇಷ ಅಗತ್ಯಗಳಿಗೆ ಇದು ಸೂಕ್ತವಲ್ಲ.

ಮಧ್ಯಮ ಬ್ಯಾಂಡ್ ತರಂಗಾಂತರವು ಕಡಿಮೆ ಬ್ಯಾಂಡ್‌ಗೆ ಹೋಲಿಸಿದರೆ ಅಧಿಕ ವೇಗವನ್ನು ಹೊಂದಿದೆ. ಆದರೆ ವ್ಯಾಪ್ತಿ ಮತ್ತು ಸಂಕೇತಗಳ ನುಗ್ಗುವಿಕೆಯ (ಪೆನಿಟ್ರೇಷನ್) ವಿಷಯದಲ್ಲಿ ಮಿತಿಗಳಿವೆ. ಈ ಬ್ಯಾಂಡ್ ಅನ್ನು ಕೈಗಾರಿಕೆಗಳಲ್ಲಿ ಬಳಸಬಹುದು. ನಿರ್ದಿಷ್ಟ ಉದ್ಯಮದ ಅಗತ್ಯಗಳಿಗೆ ತಕ್ಕಂತೆ ರೂಪಿಸಬಹುದು.

ಅಧಿಕ ಬ್ಯಾಂಡ್ ತರಂಗಾಂತರವು ಹೆಚ್ಚಿನ ವೇಗಕ್ಕೆ ಹೆಸರಾಗಿದೆ. ಆದರೆ ಅತ್ಯಂತ ಸೀಮಿತ ವ್ಯಾಪ್ತಿ ಮತ್ತು ಸಂಕೇತ ನುಗ್ಗುವ ಹೆಚ್ಚು ಸಾಮರ್ಥ್ಯ ಹೊಂದಿದೆ. ಈ ವಿಭಾಗದಲ್ಲಿ ಇಂಟರ್ನೆಟ್ ವೇಗವು 20 ಜಿಬಿಪಿಎಸ್ ಎಂದು ಪರೀಕ್ಷಿಸಲಾಗಿದೆ.  4ಜಿಯಲ್ಲಿ ಗರಿಷ್ಠ ಇಂಟರ್ನೆಟ್ ಡೇಟಾ ವೇಗ 1 ಜಿಬಿಪಿಎಸ್‌ ಮಾತ್ರ.

 1. ಮಲ್ಟಿ-GBPS ವರ್ಗಾವಣೆ ದರಗಳು ಮತ್ತು ಅಲ್ಟ್ರಾ-ಲೋ ಲೇಟೆನ್ಸಿ(ultra-low latency) 5 ಜಿ ತಂತ್ರಜ್ಞಾನ, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮತ್ತು ಕೃತಕ ಬುದ್ಧಿಮತ್ತೆಯ ಶಕ್ತಿಯನ್ನು ಬಳಸಿಕೊಳ್ಳುವ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ.
 1. 5 ಜಿ ನೆಟ್‌ವರ್ಕ್‌ಗಳ ಹೆಚ್ಚಿದ ಸಾಮರ್ಥ್ಯವು ಕ್ರೀಡಾಕೂಟಗಳು ಮತ್ತು ಸುದ್ದಿ ಪ್ರಸಾರದ ಸಮಯದಲ್ಲಿ ಸಂಭವಿಸುವಂತಹ ಲೋಡ್ ಸ್ಪೈಕ್‌ಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ.

 

ತಂತ್ರಜ್ಞಾನದ ಮಹತ್ವ:

ಭಾರತದ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ (National Digital Communications Policy) 2018   5 ಜಿ ಯ ಮಹತ್ವವನ್ನು ಎತ್ತಿ ತೋರಿಸುತ್ತದೆ, 5 ಜಿ, ಕ್ಲೌಡ್, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮತ್ತು ಡೇಟಾ ಅನಾಲಿಟಿಕ್ಸ್ ಸೇರಿದಂತೆ ಹೆಚ್ಚುತ್ತಿರುವ ಸ್ಟಾರ್ಟ್ ಅಪ್ ಸಮುದಾಯವು ಅವಕಾಶಗಳ ಹೊಸ ದಿಗಂತವನ್ನು ತೆರೆಯುತ್ತದೆ ಮತ್ತು ಡಿಜಿಟಲ್ ಬಳಕೆಯನ್ನು ತೀವ್ರಗೊಳಿಸುವ ಮತ್ತು ಗಾಢವಾಗಿಸುವ ಭರವಸೆ ನೀಡುತ್ತದೆ.

 

5G ಯಿಂದ ಆರೋಗ್ಯದ ಅಪಾಯಗಳು:

ಇಲ್ಲಿಯವರೆಗೆ, ಮತ್ತು ಸಾಕಷ್ಟು ಸಂಶೋಧನೆಗಳನ್ನು ಮಾಡಿದ ನಂತರ, ವೈರ್‌ಲೆಸ್ ತಂತ್ರಜ್ಞಾನಗಳಿಗೆ ಒಡ್ಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.

 1. ಅಂಗಾಂಶ ತಾಪನ(Tissue heating)ವು, ರೇಡಿಯೊಫ್ರೀಕ್ವೆನ್ಸಿ ಕ್ಷೇತ್ರಗಳು ಮತ್ತು ಮಾನವ ದೇಹದ ನಡುವಿನ ಪರಸ್ಪರ ಕ್ರಿಯೆಯ ಮುಖ್ಯ ಕಾರ್ಯವಿಧಾನವಾಗಿದೆ. ಪ್ರಸ್ತುತ ತಂತ್ರಜ್ಞಾನಗಳ ರೇಡಿಯೊಫ್ರೀಕ್ವೆನ್ಸಿ ಮಟ್ಟಕ್ಕೆ ಒಡ್ಡಿಕೊಳ್ಳುವುದರಿಂದ ಮಾನವ ದೇಹದ ಉಷ್ಣಾಂಶದಲ್ಲಿ ನಗಣ್ಯ ಹೆಚ್ಚಳಕ್ಕೆ ಕಾರಣವಾಗುತ್ತವೆ.
 2. ರೇಡಿಯೊ ಆವರ್ತನ ಹೆಚ್ಚಾದಂತೆ, ದೇಹದ ಅಂಗಾಂಶಗಳಿಗೆ ಅದರ ನುಗ್ಗುವಿಕೆ ಕಡಿಮೆಯಾಗುತ್ತದೆ ಮತ್ತು ಶಕ್ತಿಯ ಹೀರಿಕೊಳ್ಳುವಿಕೆಯು ದೇಹದ ಮೇಲ್ಮೈಗೆ (ಚರ್ಮ ಮತ್ತು ಕಣ್ಣುಗಳು) ಸೀಮಿತವಾಗಿರುತ್ತದೆ.
 3. ರೇಡಿಯೊಫ್ರೀಕ್ವೆನ್ಸಿ ಮಟ್ಟಗಳಿಗೆ ಒಟ್ಟಾರೆ ಒಡ್ಡಿಕೊಳ್ಳುವುದು ಅಂತರರಾಷ್ಟ್ರೀಯ ಮಾರ್ಗಸೂಚಿಗಳಿಗಿಂತ ಕಡಿಮೆಯಿದ್ದರೆ, ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

 

ಅಂತರರಾಷ್ಟ್ರೀಯ ಮಾನ್ಯತೆ ಮಾರ್ಗಸೂಚಿಗಳು’ ಯಾವುವು?

ವಿದ್ಯುತ್ಕಾಂತೀಯ ಕ್ಷೇತ್ರಗಳಿಗೆ ಮಾನ್ಯತೆ ಮಾರ್ಗಸೂಚಿಗಳನ್ನು ಎರಡು ಅಂತರರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸುತ್ತವೆ. ಪ್ರಸ್ತುತ ಅನೇಕ ದೇಶಗಳು ಅವುಗಳು ಸೂಚಿಸಿದ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ:

 1. ಅಯಾನೀಕರಿಸದ ವಿಕಿರಣ ಸಂರಕ್ಷಣೆಯ ಅಂತರರಾಷ್ಟ್ರೀಯ ಆಯೋಗ(International Commission on Non-Ionizing Radiation Protection)
 2. ವಿದ್ಯುತ್ಕಾಂತೀಯ ಸುರಕ್ಷತೆಯ ಅಂತರರಾಷ್ಟ್ರೀಯ ಸಮಿತಿಯ ಮೂಲಕ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ಗಳ ಸಂಸ್ಥೆ.(Institute of Electrical and Electronics Engineers)
 3. ಈ ಮಾರ್ಗಸೂಚಿಗಳು ತಂತ್ರಜ್ಞಾನ-ನಿರ್ದಿಷ್ಟವಾಗಿಲ್ಲ. ಅವು 300 GHz ವರೆಗಿನ ರೇಡಿಯೊಫ್ರೀಕ್ವೆನ್ಸಿಯನ್ನು ಒಳಗೊಂಡಿರುತ್ತವೆ, ಇದು 5G ತಂತ್ರಜ್ಞಾನಕ್ಕೆ ಸಂಬಂಧಿಸಿದ ಆವರ್ತನಗಳನ್ನು ಸಹ ಒಳಗೊಂಡಿದೆ.

 

ಅಂತರರಾಷ್ಟ್ರೀಯ ಪ್ರಯತ್ನಗಳು – ಅಂತರರಾಷ್ಟ್ರೀಯ ವಿದ್ಯುತ್ಕಾಂತೀಯ ಕ್ಷೇತ್ರಗಳು (EMF) ಯೋಜನೆ:

ಅಂತರರಾಷ್ಟ್ರೀಯ ವಿದ್ಯುತ್ಕಾಂತೀಯ ಕ್ಷೇತ್ರಗಳು  (Electromagnetic Fields- EMF) ಯೋಜನೆಯನ್ನು WHO 1996 ರಲ್ಲಿ ಆರಂಭಿಸಿತು. ಈ ಯೋಜನೆಯು       0-300 GHz ಆವರ್ತನ ವ್ಯಾಪ್ತಿಯಲ್ಲಿ ವಿದ್ಯುತ್ ಮತ್ತು ಕಾಂತೀಯ ಕ್ಷೇತ್ರಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಆರೋಗ್ಯದ ಪರಿಣಾಮಗಳನ್ನು ತನಿಖೆ ಮಾಡುತ್ತದೆ ಮತ್ತು EMF ವಿಕಿರಣ ಸಂರಕ್ಷಣೆ ಕುರಿತು ರಾಷ್ಟ್ರೀಯ ಅಧಿಕಾರಿಗಳಿಗೆ ಸಲಹೆ ನೀಡುತ್ತದೆ.

 

5G ತಂತ್ರಜ್ಞಾನದ ಓಟದಲ್ಲಿ ಭಾರತದ ಸ್ಥಾನ?

 1. ಮೂರು ಖಾಸಗಿ ದೂರವಾಣಿ ಕಂಪೆನಿಗಳಾದ, ರಿಲಯನ್ಸ್ ಜಿಯೋ ಇನ್ಫೋಕಾಮ್, ಭಾರ್ತಿ ಏರ್ಟೆಲ್ ಮತ್ತು ವಿ (Vi) ಗಳು ಸ್ಪೆಕ್ಟ್ರಮ್ ಹಂಚಿಕೆ ಮತ್ತು 5 ಜಿ ಫ್ರೀಕ್ವೆನ್ಸಿ ಬ್ಯಾಂಡ್‌ಗಳ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸುವಂತೆ ದೂರಸಂಪರ್ಕ ಇಲಾಖೆಯನ್ನು ಒತ್ತಾಯಿಸುತ್ತಿವೆ.ಇದರಿಂದ ಅವುಗಳು ತಮ್ಮ ಸೇವೆಗಳನ್ನು ಅದಕ್ಕೆ ತಕ್ಕಂತೆ ಯೋಜಿಸಲು ಸಾಧ್ಯವಾಗುತ್ತದೆ.
 2. ಆದಾಗ್ಯೂ, ಒಂದು ಪ್ರಮುಖ ಅಡಚಣೆಯೆಂದರೆ, ಮೂರು ಕಂಪೆನಿಗಳಲ್ಲಿ ಕನಿಷ್ಠ ಎರಡು ಕಂಪೆನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಸಾಕಷ್ಟು ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ.
 3. ಮತ್ತೊಂದೆಡೆ, ರಿಲಯನ್ಸ್ ಜಿಯೋ ದೇಶಕ್ಕಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5 ಜಿ ನೆಟ್‌ವರ್ಕ್ ಅನ್ನು ಈ ವರ್ಷದ ದ್ವಿತೀಯಾರ್ಧದಲ್ಲಿ ಪ್ರಾರಂಭಿಸಲು ಯೋಜನೆ ರೂಪಿಸಿದೆ.

 

5 ಜಿ ತಂತ್ರಜ್ಞಾನ ದಲ್ಲಿ ಜಾಗತಿಕ ಪ್ರಗತಿ ಏನು?

ಸರ್ಕಾರಗಳಿಗಿಂತ ಹೆಚ್ಚಾಗಿ, ಜಾಗತಿಕ ಟೆಲಿಕಾಂ ಕಂಪನಿಗಳು 5 ಜಿ ನೆಟ್‌ವರ್ಕ್‌ಗಳನ್ನು ರೂಪಿಸಲು ಪ್ರಾರಂಭಿಸಿವೆ ಮತ್ತು ಅವುಗಳನ್ನು ಪ್ರಾಯೋಗಿಕ ಆಧಾರದ ಮೇಲೆ ತಮ್ಮ ಗ್ರಾಹಕರಿಗೆ ನೀಡಲು ಪ್ರಾರಂಭಿಸಿವೆ. ಅಮೇರಿಕಾ ದ೦ತಹ ದೇಶಗಳಲ್ಲಿ, AT&T, T-Mobile, and Verizon ನಂತಹ ಕಂಪನಿಗಳು ತಮ್ಮ ಬಳಕೆದಾರರಿಗಾಗಿ ವಾಣಿಜ್ಯ 5 ಜಿ ಸೇವೆಯನ್ನು ಒದಗಿಸುವಲ್ಲಿ ಮಂಚೂಣಿಯಲ್ಲಿವೆ.

 

ತರಂಗಾಂತರ ಕೊರತೆ ಸರಿದೂಗಿಸುವ ಸಮಸ್ಯೆ

 1. 5ಜಿ ಮೊಬೈಲ್‌ ಸೇವೆಗೆ ಭಾರತ ಸಿದ್ಧವಾಗುತ್ತಿದ್ದರೂ ಖಾಸಗಿ ಸಂಸ್ಥೆಗಳಿಗೆ ನೀಡಲು ಬೇಕಾದಷ್ಟು ತರಂಗಾಂತರ ಇದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಲಭ್ಯವಿರುವ 300 ಮೆಗಾಹರ್ಟ್ಸ್‌ ತರಂಗಾಂತರದಲ್ಲಿ 25 ಮೆಗಾಹರ್ಟ್ಸ್‌ ತರಂಗಾಂತರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ನೀಡಬೇಕು. ಉಪಗ್ರಹಗಳ ಬಳಕೆಗಾಗಿ ಇದು ಅಗತ್ಯ. 100 ಮೆಗಾಹರ್ಟ್ಸ್‌ನಷ್ಟು ತರಂಗಾಂತರವನ್ನು ರಕ್ಷಣಾ ಕ್ಷೇತ್ರಕ್ಕೆ ನೀಡಬೇಕಾಗಿದೆ.
 2. ಆದ್ದರಿಂದ, ಹರಾಜಿಗೆ ಲಭ್ಯವಾಗುವುದು 175 ಮೆಗಾಹರ್ಟ್ಸ್‌ ಮಾತ್ರ. ಪ್ರಸಕ್ತ ದೇಶದಲ್ಲಿ ಮೊಬೈಲ್ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಗಳಲ್ಲಿ ಇದನ್ನು ಹಂಚಿಕೆ ಮಾಡಬಾಕಾಗಿದೆ.

 

ದುಬಾರಿ ದರ?

 1. ಪ್ರತಿ ಗಿಗಾಹರ್ಟ್ಸ್‌ ತರಂಗಾಂತರಕ್ಕೆ ₹492 ಕೋಟಿ ನಿಗದಿ ಮಾಡಬಹುದು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂಬುದನ್ನು ಭಾರತದ ದೂರಸಂಪರ್ಕ ಸೇವಾದಾತರ ಸಂಘಟನೆಯು (ಸಿಒಎಐ) ಟ್ರಾಯ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ.
 2. ಭಾರತ ಮತ್ತು ಇತರ ದೇಶಗಳಲ್ಲಿನ ತರಂಗಾಂತರ ದರವನ್ನು ಈ ವರದಿಯಲ್ಲಿ ಹೋಲಿಕೆ ಮಾಡಲಾಗಿದೆ. ಭಾರತದ ದರವು ಆಸ್ಟ್ರಿಯಾದ ದರಕ್ಕೆ ಹೋಲಿಸಿದರೆ 74 ಪಟ್ಟು, ಸ್ಪೇನ್‌ನಲ್ಲಿನ ದರಕ್ಕೆ ಹೋಲಿಸಿದರೆ 35 ಪಟ್ಟು ಮತ್ತು ಆಸ್ಟ್ರೇಲಿಯಾದಲ್ಲಿನ ದರಕ್ಕೆ ಹೋಲಿಸಿದರೆ 14 ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಇದೇ ದರವನ್ನು ದೂರಸಂಪರ್ಕ ಸೇವಾ ಕಂಪನಿಗಳು ಪಾವತಿಸಬೇಕು ಎಂದಾದರೆ ಬಳಕೆದಾರರಿಂದ ದುಬಾರಿ ಶುಲ್ಕವನ್ನು ವಸೂಲಿ ಮಾಡಬೇಕಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಲಿಟೋರಿಯಾ ಮಿರಾ:

(Litoria mira)

 ಇವು ನ್ಯೂ ಗಿನಿಯಾದ ಮಳೆಕಾಡುಗಳಲ್ಲಿ ಇತ್ತೀಚೆಗೆ ಪತ್ತೆಯಾದ ಹೊಸ ಚಾಕೊಲೇಟ್ ಬಣ್ಣದ’ ಕಪ್ಪೆ ಪ್ರಭೇದಗಳಾಗಿವೆ.

ಈ ಕಪ್ಪೆಗಳ ಹೆಸರಿಸುವಿಕೆಯು ಲ್ಯಾಟಿನ್ ವಿಶೇಷಣವಾದ ಮಿರುಮ್  (Mirum) ನಿಂದ ಸ್ಫೂರ್ತಿ ಪಡೆದಿದೆ, ಇದರರ್ಥ ಆಶ್ಚರ್ಯ ಅಥವಾ ವಿಚಿತ್ರ. ಆಸ್ಟ್ರೇಲಿಯಾದ ಲಿಟ್ಟೋರಿಯಾ ಕುಲದ “ಮರದ ಕಪ್ಪೆ” ಯ ವರ್ಗೀಕರಿಸಲಾಗದ ಸದಸ್ಯರನ್ನು ಕಂಡು ವಿಜ್ಞಾನಿಗಳು ಆಶ್ಚರ್ಯಗೊಂಡ ನಂತರ ಇದನ್ನು ಹೆಸರಿಸಲಾಗಿದೆ.

ಲಿಟೋರಿಯಾ ಮೀರಾ’ ಲಿಟ್ಟೋರಿಯಾ ವರ್ಗದ ಇತರ ಕಪ್ಪೆಗಳಿಗಿಂತ ಭಿನ್ನವಾಗಿದೆ. ಇದು ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡ ಗಾತ್ರವನ್ನು ಹೊಂದಿದೆ, ವೆಬ್‌ಬೆಡ್ ಕೈಗಳು, ತುಲನಾತ್ಮಕವಾಗಿ ಸಣ್ಣ ಮತ್ತು ಬಲವಾದ ಕೈಕಾಲುಗಳು ಮತ್ತು ಕಣ್ಣುಗಳ ಸುತ್ತಲಿನ ಚರ್ಮದ ಮೇಲೆ ಸಣ್ಣ ನೇರಳೆ ಕಲೆಗಳನ್ನು ಹೊಂದಿವೆ.

ದಯವಿಟ್ಟು ಗಮನಿಸಿ: ನ್ಯೂ ಗಿನಿಯಾ ದ್ವೀಪವು ಆಸ್ಟ್ರೇಲಿಯಾದ  ಹಾರ್ನ್ ಆಫ್ ಕ್ವೀನ್ಸ್‌ಲ್ಯಾಂಡ್ ನಿಂದ  ಟೊರೆಸ್ ಜಲಸಂಧಿಯ ಮೂಲಕ ಬೇರ್ಪಟ್ಟಿದೆ.

 

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT):

ಜೆ ಬಿ ಮೊಹಪಾತ್ರ ಅವರನ್ನು ಕೇಂದ್ರ ಸರ್ಕಾರವು ಕೇಂದ್ರ ನೇರ ತೆರಿಗೆ ಮಂಡಳಿ (CBDT)ಯ ಮಧ್ಯಂತರ ಮುಖ್ಯಸ್ಥರನ್ನಾಗಿ ಮೂರು ತಿಂಗಳ ಕಾಲ ನೇಮಕ ಮಾಡಿದೆ.

CBDT ಬಗ್ಗೆ:

 1. ಇದು 1963 ರ ಕೇಂದ್ರೀಯ ಕಂದಾಯ ಮಂಡಳಿ ಕಾಯ್ದೆ’ಯ ಪ್ರಕಾರ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ.
 2. ಇದು ಭಾರತದ ಅಧಿಕೃತ ಹಣಕಾಸು ಕ್ರಿಯಾ ಕಾರ್ಯಪಡೆ’(financial action task force) ಘಟಕವಾಗಿದೆ.
 3. ಇದನ್ನು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಂದಾಯ ಇಲಾಖೆ ನಿರ್ವಹಿಸುತ್ತದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos