Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 27ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಒರಗಿರುವ ಬುದ್ಧ.

2. ಯಾಸ್ ಚಂಡಮಾರುತದಿಂದಾಗಿ, ಬಂಗಾಳಕೊಲ್ಲಿಯಲ್ಲಿ,ಸಾಮಾನ್ಯಕ್ಕಿಂತ ಬೆಚ್ಚಗಿನ ಋತುಮಾನ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. CBI ನ ಸಮಿತಿಯಲ್ಲಿ ‘ಕಾನೂನು ಹೇಳಿಕೆ’ ನೀಡಿದ ಭಾರತದ ಮುಖ್ಯ ನ್ಯಾಯಮೂರ್ತಿಗಳು.

2. ಇಸ್ರೇಲ್ ನ ಮಾನವ ಹಕ್ಕುಗಳ ದಾಖಲೆಯ ಹೆಚ್ಚಿನ ಪರಿಶೀಲನೆಗಾಗಿ ಬೇಡಿಕೆ.

3. ಚೀನಾವನ್ನು ಗುರಿಯಾಗಿಸಿಕೊಂಡ ಕ್ವಾಡ್: ಕಾನ್ಸುಲ್ ಜನರಲ್.

4. ಇಂಟರ್ ಪೋಲ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಜೀವರಾಶಿ (ಬಯೋಮಾಸ್) ಬಳಕೆಯ ರಾಷ್ಟ್ರೀಯ ಮಿಷನ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಶ್ರೀಲಂಕಾದೊಂದಿಗೆ ಕರೆನ್ಸಿ ವಿನಿಮಯ ಒಪ್ಪಂದ ಮಾಡಿಕೊಂಡ ಢಾಕಾ.

2. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT).

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಒರಗಿರುವ ಬುದ್ಧ:


(The Reclining Buddha)

ಸಂದರ್ಭ:

ಬುದ್ಧ ಜಯಂತಿ (ಮೇ 26) ರಂದು, ಬೋಧಗಯದಲ್ಲಿರುವ ಬುದ್ಧ ಅಂತರಾಷ್ಟ್ರೀಯ ಕಲ್ಯಾಣ ಮಿಷನ್ ದೇವಸ್ಥಾನದಲ್ಲಿ ಭಾರತದ ಅತಿದೊಡ್ಡ ಒರಗಿರುವ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಬೇಕಾಗಿತ್ತು. ಆದರೆ, ಕೋವಿಡ್ -19 ನಿರ್ಬಂಧದಿಂದಾಗಿ ಸಮಾರಂಭವನ್ನು ಮುಂದೂಡಲಾಗಿದೆ.

 

ಒರಗಿರುವ ಬುದ್ಧನ ಪ್ರತಿಮೆ ಏನನ್ನು ಪ್ರತಿನಿಧಿಸುತ್ತದೆ?

ಒರಗಿರುವ ಬುದ್ಧನ ವಿಗ್ರಹ ಅಥವಾ ಚಿತ್ರವು ಬುದ್ಧನ ಅನಾರೋಗ್ಯದ ಕೊನೆಯ ಸಮಯ ಮತ್ತು ಪರಿನಿರ್ವಾಣಕ್ಕೆ ಪ್ರವೇಶಿಸಲಿರುವ ಹಂತವನ್ನು ತೋರಿಸುತ್ತದೆ.

 1. ಪರಿನಿರ್ವಾಣವು ಮರಣಾನಂತರದ ಮಹಾನ್ ಮೋಕ್ಷದ ಹಂತವಾಗಿದ್ದು ಅದು ಪ್ರಬುದ್ಧ ಆತ್ಮಗಳಿಗೆ ಮಾತ್ರ ದೊರೆಯುವಂತಹುದಾಗಿದೆ.
 2. ಬುದ್ಧನ ಮರಣವು, ಆತನ 80ನೇ ವಯಸ್ಸಿನಲ್ಲಿ, ಪೂರ್ವ ಉತ್ತರ ಪ್ರದೇಶದ ಕುಶಿನಗರದಲ್ಲಿ, ಬಿಹಾರದ ರಾಜ್ಯದ ಗಡಿಗೆ ಹತ್ತಿರದಲ್ಲಿ,ಧ್ಯಾನಸ್ಥ ಸ್ಥಿತಿಯಲ್ಲಿ, ಸಂಭವಿಸಿತು.

 

ಪ್ರತಿಮಾಶಾಸ್ತ್ರೀಯ ಶೈಲಿ:

ಒರಗಿರುವ ಬುದ್ಧನನ್ನು ಮೊದಲು ಗಾಂಧಾರ ಕಲೆಯಲ್ಲಿ ಚಿತ್ರಿಸಲಾಗಿದೆ, ಇದು ಕ್ರಿ.ಪೂ 50 ಮತ್ತು ಕ್ರಿ.ಶ 75 ರ ನಡುವಿನ ಅವಧಿಯಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ ಮತ್ತು ಕುಶಾನರ ಕಾಲದಲ್ಲಿ ಕ್ರಿ.ಶ. ಒಂದರಿಂದ ಐದನೇ ಶತಮಾನದವರೆಗಿನ ಅವಧಿಯಲ್ಲಿ ಈ ಕಲೆಯು ಉತ್ತುಂಗಕ್ಕೇರಿತು.

 1. ಒರಗಿರುವ ಬುದ್ಧನ ಪ್ರತಿಮೆಗಳು ಮತ್ತು ಚಿತ್ರಗಳು ಅವನ ಬಲಭಾಗದಲ್ಲಿ ಮಲಗಿರುವುದನ್ನು ತೋರಿಸುತ್ತದ, ಬುದ್ಧನ ತಲೆಯು ದಿಂಬು ಅಥವಾ ಬಲ ಮೊಣಕೈನ ಮೇಲೆ ನಿಂತಿದೆ.
 2. ಎಲ್ಲಾ ಜೀವಿಗಳು ಪ್ರಬುದ್ಧವಾಗಿವೆ ಮತ್ತು ಸಾವು ಮತ್ತು ಪುನರ್ಜನ್ಮದ ಚಕ್ರದಿಂದ ಬಿಡುಗಡೆಯಾಗುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ತೋರಿಸುವುದು ಈ ಒರಗಿರುವ ಭಂಗಿಯ ಅರ್ಥವಾಗಿದೆ.
 3. ದಯವಿಟ್ಟು ಗಮನಿಸಿ:ಬುದ್ಧನು ವಿಗ್ರಹಾರಾಧನೆಯ ವಿರೋಧಿಯಾಗಿದ್ದನು.

 

ಭಾರತದ ಹೊರಗೆ ಪ್ರತಿಷ್ಠಾಪಿಸಲಾದ ಒರಗಿರುವ ಬುದ್ಧನ ಪ್ರತಿಮೆಗಳು:

ಒರಗಿರುವ ಬುದ್ಧನ ಭಂಗಿಗಳು ಥೈಲ್ಯಾಂಡ್ ಮತ್ತು ಆಗ್ನೇಯ ಏಷ್ಯಾದ ಇತರ ಭಾಗಗಳಲ್ಲಿ ಹೆಚ್ಚು ಪ್ರಚಲಿತದಲ್ಲಿವೆ.

 1. 1992 ರಲ್ಲಿ ಮ್ಯಾನ್ಮಾರ್‌ನ ಮಾವ್ಲಾಮೈನ್‌ (Mawlamyine) ನಲ್ಲಿ ನಿರ್ಮಿಸಲಾದ 600 ಅಡಿ ಉದ್ದದ ವಿನ್‌ಸೀನ್ ತಾವ್ಯಾ ಬುದ್ಧ (Winsein Tawya Buddha) ಪ್ರತಿಮೆಯು ವಿಶ್ವದ ಅತಿದೊಡ್ಡ ಒರಗಿರುವ ಬುದ್ಧನ ಮೂರ್ತಿಯಾಗಿದೆ.
 2. ಕ್ರಿ.ಶ 2 ನೇ ಶತಮಾನದಲ್ಲಿ, ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ (Khyber Pakhtunkhwa province) ಪ್ರಾಂತ್ಯದಲ್ಲಿ ನಿರ್ಮಿಸಲಾದ ಭಮಲಾ ಬುದ್ಧ ಪರಿನಿರ್ವಾಣ (Bhamala Buddha Parinirvana) ಮೂರ್ತಿಯನ್ನು ವಿಶ್ವದ ಅತ್ಯಂತ ಹಳೆಯ ಒರಗಿರುವ ಭಂಗಿಯ ಪ್ರತಿಮೆ ಎಂದು ಪರಿಗಣಿಸಲಾಗಿದೆ.

 

ಭಾರತದಲ್ಲಿ ಮಲಗಿರುವ ಅಥವಾ ಒರಗಿರುವ ಬುದ್ಧ:

 1. ಅಜಂತಾದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ 26 ನೇ ಗುಹೆಯಲ್ಲಿ, ಕ್ರಿ.ಶ 5 ನೇ ಶತಮಾನದಲ್ಲಿ ಕೆತ್ತಲಾಗಿದೆ ಎಂದು ನಂಬಲಾದ ಒರಗಿರುವ ಬುದ್ಧನ 24 ಅಡಿ ಉದ್ದ ಮತ್ತು ಒಂಬತ್ತು ಅಡಿ ಎತ್ತರದ ಶಿಲ್ಪವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
 2. ಬುದ್ಧನು ನಿಜವಾಗಿಯೂ ಪರಿನಿರ್ವಾಣವನ್ನು ಪಡೆದ ಕುಶಿನಗರದಲ್ಲಿ, ಪರಿನಿರ್ವಾಣ ಸ್ತೂಪದೊಳಗೆ 6 ಮೀಟರ್ ಉದ್ದದ ಒರಗಿರುವ ಬುದ್ಧನ ಕೆಂಪು ಮರಳುಗಲ್ಲಿನ ಏಕಶಿಲೆಯ ಪ್ರತಿಮೆಯು ವಿರಾಜಮಾನವಾಗಿದೆ.

 

ಭಾರತದಲ್ಲಿ ಬುದ್ಧನ ಇತರ ಭಂಗಿಗಳ ಚಿತ್ರಣಗಳು:

 1. ಮಹಾಬೋಧಿ ದೇವಸ್ಥಾನದಲ್ಲಿ, ಬುದ್ಧನು ಭೂಮಿ-ಸ್ಪರ್ಶ ಮುದ್ರೆಯಲ್ಲಿ ಕುಳಿತಿದ್ದಾನೆ, ಈ ಭಂಗಿಯಲ್ಲಿ ಅವನ ಕೈ ನೆಲದ ಕಡೆಗೆ ತೋರಿಸುತ್ತಿದೆ. ಈ ಭಂಗಿಯು ಭೂಮಿಯನ್ನು ಅವನ ಜ್ಞಾನೋದಯಕ್ಕೆ ಸಾಕ್ಷಿಯಾಗಿದೆ ಎಂದು ಸಂಕೇತಿಸುತ್ತದೆ.
 2. ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಸಾರನಾಥದಲ್ಲಿ, ಸ್ಥಾಪಿಸಲಾದ ಕಲ್ಲಿನ ಪ್ರತಿಮೆಯು ಧರ್ಮ-ಚಕ್ರ ಮುದ್ರಾ ಎಂಬ ಹಸ್ತ ಸೂಚಕವನ್ನು ಹೊಂದಿದೆ, ಇದು ಉಪದೇಶವನ್ನು ಸಂಕೇತಿಸುತ್ತದೆ. ಬೋಧಿ ವೃಕ್ಷದ ಚಿತ್ರಣದೊಂದಿಗೆ ಇದು ಭಾರತದ ಅತ್ಯಂತ ಜನಪ್ರಿಯ ಚಿತ್ರಣವಾಗಿದೆ.
 3. ವಾಕಿಂಗ್ (Walking Buddha) ಅಥವಾ ನಡೆಯುತ್ತಿರುವ ಬುದ್ಧನ ಮೂರ್ತಿಯು, ಬುದ್ಧನು ಜ್ಞಾನೋದಯದ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿರುವ ಅಥವಾ ಧರ್ಮೋಪದೇಶವನ್ನು ನೀಡಿದ ನಂತರ ಹಿಂದಿರುಗುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಇದು ಎಲ್ಲಾ ಬುದ್ಧ ಭಂಗಿಗಳಲ್ಲಿ ಅತ್ಯಂತ ಸಾಮಾನ್ಯವಾಗಿದೆ ಮತ್ತು ಇದು ಹೆಚ್ಚಾಗಿ ಥೈಲ್ಯಾಂಡ್‌ನಲ್ಲಿ ಕಂಡುಬರುತ್ತದೆ.

buddhist_place

 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಯಾಸ್ ಚಂಡಮಾರುತದಿಂದಾಗಿ, ಬಂಗಾಳಕೊಲ್ಲಿಯಲ್ಲಿ,ಸಾಮಾನ್ಯಕ್ಕಿಂತ ಬೆಚ್ಚಗಿನ ಋತುಮಾನ:


(Bay of Bengal, fomenting Yaas, hotter than normal for season)

 

ಸಂದರ್ಭ:

‘ಯಾಸ್’ ಚಂಡಮಾರುತ ರೂಪುಗೊಂಡ ಬಂಗಾಳಕೊಲ್ಲಿಯಲ್ಲಿ ಪ್ರತಿವರ್ಷದ ಈ ಸಮಯದಲ್ಲಿ  ಇರುತ್ತಿದ್ದ ಸಾಮಾನ್ಯ ತಾಪಮಾನಕ್ಕಿಂತ ಕನಿಷ್ಠ ಎರಡು ಡಿಗ್ರಿಗಳಷ್ಟು ಹೆಚ್ಚಾಗಿದೆ ಎಂದು ಹವಾಮಾನ ವಿಜ್ಞಾನಿಗಳು ಹೇಳುತ್ತಾರೆ.

 

ಹಿನ್ನೆಲೆ:

ಸಾಮಾನ್ಯವಾಗಿ, ಬಂಗಾಳಕೊಲ್ಲಿಯಲ್ಲಿನ ಚಂಡಮಾರುತಗಳು ಸಾಕಷ್ಟು ಉಗ್ರ ವಾಗಿರುತ್ತದೆ ಮತ್ತು ಭಾರಿ ವಿನಾಶಕ್ಕೆ ವಿನಾಶಕ್ಕೆ ಕಾರಣವಾಗುತ್ತವೆ. ಈ ವರ್ಷ, ಉತ್ತರ ಬಂಗಾಳಕೊಲ್ಲಿಯು 32 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಅಸಾಧಾರಣವಾಗಿ ಬೆಚ್ಚಗಿರುತ್ತದೆ.

 

ಬಂಗಾಳಕೊಲ್ಲಿಯಲ್ಲಿ ಇತ್ತೀಚಿನ ಚಂಡಮಾರುತಗಳು:

 1. ಕಳೆದ ವರ್ಷ ಮಾರ್ಚ್‌ನಲ್ಲಿ ಬಂದೆರಗಿದ ಅಮ್ಫಾನ್ (Amphan) ಸೂಪರ್ ಚಂಡಮಾರುತವು ಪಶ್ಚಿಮ ಬಂಗಾಳವನ್ನು ಧ್ವಂಸಗೊಳಿಸಿತು.ಇದು ಒಡಿಶಾದ ಪ್ಯಾರಡಿಪ್ ಅನ್ನು ಅಪ್ಪಳಿಸಿದ 1999 ರ ಸೂಪರ್ ಚಂಡಮಾರುತದ ನಂತರ ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಿದ ಪ್ರಬಲವಾದ ಚಂಡಮಾರುತವಾಗಿದೆ.
 2. ಅಮ್ಫಾನ್ ಸೂಪರ್ ಚಂಡಮಾರುತವು ಅಪ್ಪಳಿಸುವುದಕ್ಕಿಂತ ಮೊದಲು, 2019 ರಲ್ಲಿ ಒಡಿಶಾಗೆ ಅಪ್ಪಳಿಸಿದ ಫನಿ (Fani) ಚಂಡಮಾರುತವು ವಾರಗಳಕಾಲ ಒಡಿಶಾದಲ್ಲಿ ಅಪಾರ ಹಾನಿಯನ್ನುಂಟುಮಾಡಿತು.

 

ಸಂಬಂಧಿತ ಕಾಳಜಿ ಏನು?

 1. ಕಳೆದ ನಾಲ್ಕು ವರ್ಷಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ 12 ಚಂಡಮಾರುತಗಳು ರೂಪುಗೊಂಡಿವೆ. ಒಂದು ವರ್ಷದಲ್ಲಿ ಭಾರತೀಯ ಕಡಲ ತೀರವು ಸಾಕ್ಷಿಯಾದ ಐದು ಚಂಡಮಾರುತಗಳಲ್ಲಿ, ನಾಲ್ಕು ಬಂಗಾಳಕೊಲ್ಲಿಯಲ್ಲಿ ರೂಪು ಗೊಂಡರೆ ಮತ್ತು ಅರೇಬಿಯನ್ ಸಮುದ್ರದಲ್ಲಿ ಕೇವಲ ಒಂದು ಚಂಡಮಾರುತವು ಹುಟ್ಟುತ್ತದೆ.
 2. ಇತ್ತೀಚಿನ ವರ್ಷಗಳಲ್ಲಿ ಉತ್ತರ ಹಿಂದೂ ಮಹಾಸಾಗರದಲ್ಲಿ ಚಂಡಮಾರುತಗಳ ರಚನೆಯ ಆವರ್ತನದಲ್ಲಿ ಹೆಚ್ಚಳ ಕಂಡುಬಂದಿದೆ.

 

ಚಂಡಮಾರುತದ ಬಿರುಗಾಳಿಗಳ ರಚನೆಗೆ ಬಂಗಾಳಕೊಲ್ಲಿಯೇ ಏಕೆ ಸೂಕ್ತ ಸ್ಥಳವಾಗಿದೆ?

 1. ಸಮುದ್ರದ ಬೆಚ್ಚಗಿನ ನೀರಿನಿಂದ ಸೃಷ್ಟಿಯಾದ ವಿಶಾಲವಾದ ಕಡಿಮೆ ಒತ್ತಡ ಪ್ರದೇಶ.
 2. ಬಂಗಾಳಕೊಲ್ಲಿಯು ತೊಟ್ಟಿಯ ಆಕಾರದಲ್ಲಿದೆ, ಅದು ಬಿರುಗಾಳಿಗಳಿಗೆ ಹೆಚ್ಚಿನ ಬಲವನ್ನು ಪಡೆಯಲು ಅನುಕೂಲತೆಯನ್ನು ನೀಡುತ್ತದೆ.
 3. ಸಮುದ್ರದ ಮೇಲ್ಮೈನಲ್ಲಿನ ಹೆಚ್ಚಿನ ತಾಪಮಾನದಿಂದಾಗಿ ಕೊಲ್ಲಿಯಲ್ಲಿ ಬಿರುಗಾಳಿಗಳು ಉತ್ಪತ್ತಿಯಾಗಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಹಾಗೂ ಬಿರುಗಾಳಿಗಳ ತೀವ್ರತೆಯನ್ನು ಹೆಚ್ಚಿಸುತ್ತದೆ.
 4. ಬಂಗಾಳಕೊಲ್ಲಿಯು ನಿಧಾನಗತಿಯ ಗಾಳಿ ಮತ್ತು ಅದರ ಸುತ್ತಲೂ ಬೆಚ್ಚಗಿನ ಗಾಳಿಯ ಅಲೆಯಿಂದ ಹೆಚ್ಚಿನ ಮಳೆಯನ್ನು ಪಡೆಯುತ್ತದೆ, ಈ ಕಾರಣದಿಂದಾಗಿ ತಾಪಮಾನವು ವರ್ಷಪೂರ್ತಿ ಅಧಿಕವಾಗಿರುತ್ತದೆ.
 5. ಬ್ರಹ್ಮಪುತ್ರ, ಗಂಗಾದಂತಹ ವರ್ಷಪೂರ್ತಿ ತುಂಬಿಹರಿಯುವ ನದಿಗಳಿಂದ ಶುದ್ಧ ಬೆಚ್ಚಗಿನ ನೀರಿನ ನಿರಂತರ ಒಳಹರಿವಿನಿಂದಾಗಿ ಬಂಗಾಳಕೊಲ್ಲಿಯ ಕೆಳಗಿನ ತಂಪಾದ ನೀರಿನೊಂದಿಗೆ ಬೆರೆಸುವುದು ಮತ್ತಷ್ಟು ಅಸಾಧ್ಯವಾಗಿಸುತ್ತದೆ.
 6. ಪೆಸಿಫಿಕ್ ಮಹಾಸಾಗರ ಮತ್ತು ಬಂಗಾಳಕೊಲ್ಲಿಯ ನಡುವೆ ಭೂಪ್ರದೇಶದ ಕೊರತೆಯು ಚಂಡಮಾರುತದ ಗಾಳಿಯು ಕರಾವಳಿ ಪ್ರದೇಶಗಳಿಗೆ ನೇರವಾಗಿ ಯಾವುದೇ ಅಡೆತಡೆಯಿಲ್ಲದೆ ಚಲಿಸುವ ಪ್ರವೃತ್ತಿಯನ್ನು ಉಂಟುಮಾಡುತ್ತದೆ ಇದರಿಂದ ಭಾರಿ ಮಳೆಯಾಗುತ್ತದೆ.
 7. ಮಾನ್ಸೂನ್ ನಂತರದ ಹಂತದಲ್ಲಿ ವಾಯುವ್ಯ ಭಾರತದಿಂದ ಕೊಲ್ಲಿಯ ಕಡೆಗೆ ಗಾಳಿಯ ಚಲನೆಯು ಇಲ್ಲದಿರುವುದು ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳ ಸಾಧ್ಯತೆಗಳಿಗೆ ಮತ್ತೊಂದು ಕಾರಣವಾಗಿದೆ.

 

ಅರೇಬಿಯನ್ ಸಮುದ್ರಕ್ಕೆ ಇರುವ ಭೌಗೋಳಿಕ ಪ್ರಯೋಜನಗಳು ಯಾವುವು?

 1. ಬಲವಾಗಿ ಬೀಸುವ ಗಾಳಿಯು ಶಾಖವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸಹಾಯ ಮಾಡುವುದರಿಂದ ಅರೇಬಿಯನ್ ಸಮುದ್ರ ಸಾಕಷ್ಟು ಶಾಂತವಾಗಿ ಉಳಿದಿದೆ.
 2. ಅರಬಿಯನ್ ಸಮುದ್ರದಲ್ಲಿ ಶುದ್ಧ ನೀರಿನ ನಿರಂತರ ಒಳಹರಿವಿನ ಕೊರತೆಯು ಬೆಚ್ಚಗಿನ ನೀರನ್ನು ಕೆಳಗಿರುವ ತಂಪಾದ ನೀರಿನೊಂದಿಗೆ ಬೆರೆಸಲು ಸಹಾಯ ಮಾಡುತ್ತದೆ, ಇದರ ಪರಿಣಾಮವಾಗಿ ಮೇಲ್ಮೈ ತಾಪಮಾನವು ಕಡಿಮೆಯಾಗುತ್ತದೆ.
 3. ಪೆಸಿಫಿಕ್ ಮಹಾಸಾಗರದಿಂದ ಬೀಸುವ ಗಾಳಿಯು ಮೊದಲು ಪಶ್ಚಿಮ ಘಟ್ಟಗಳನ್ನು ಮತ್ತು ಹಿಮಾಲಯವನ್ನು ಅಪ್ಪಳಿಸುವುದರಿಂದ ಅವುಗಳು ಗಾಳಿಯ ತೀವ್ರತೆಯನ್ನು ಕಡಿಮೆಗೊಳಿಸುತ್ತವೆ ಮತ್ತು ಕೆಲವೊಮ್ಮೆ ಈ ಗಾಳಿಯು ಅರೇಬಿಯನ್ ಸಮುದ್ರವನ್ನು ತಲುಪದ ಕಾರಣ ಅರೇಬಿಯನ್ ಸಮುದ್ರವು ಅದರ ಭೌಗೋಳಿಕ ಸ್ಥಳದ ಪ್ರಯೋಜನವನ್ನು ಪಡೆಯುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

CBI ನ ಸಮಿತಿಯಲ್ಲಿ ‘ಕಾನೂನು ಹೇಳಿಕೆ’ ನೀಡಿದ ಭಾರತದ ಮುಖ್ಯ ನ್ಯಾಯಮೂರ್ತಿಗಳು:


(CJI made ‘statement of law’ at CBI panel)

 

ಸಂದರ್ಭ:

ಇತ್ತೀಚಿಗೆ, ಕೇಂದ್ರ ಸರ್ಕಾರವು 1985 ರ ಬ್ಯಾಚ್‌ನ ಮಹಾರಾಷ್ಟ್ರ ಕೇಡರ್ IPS ಅಧಿಕಾರಿಯಾದ, ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(CISF) ಮಹಾನಿರ್ದೇಶಕರಾಗಿ ಸೇವೆಸಲ್ಲಿಸುತ್ತಿರುವ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಎರಡು ವರ್ಷಗಳ ಅವಧಿಗೆ ಕೇಂದ್ರೀಯ ತನಿಖಾ ದಳದ (CBI) ನಿರ್ದೇಶಕರಾಗಿ ನೇಮಕ ಮಾಡಿದೆ.

 

 1. ಸರ್ಕಾರ ಅವರನ್ನು, ಪ್ರಧಾನ ಮಂತ್ರಿ ನೇತೃತ್ವದ ಕ್ಯಾಬಿನೆಟ್ (Appointments Committee of the Cabinet (ACC) ನೇಮಕಾತಿ ಸಮಿತಿಯು ಮಾಡಿದ ಕಿರುಪಟ್ಟಿ (Short list)ಯಿಂದ ಆಯ್ಕೆ ಮಾಡಿದೆ.
 2. ಈ ನೇಮಕಾತಿ ಸಮಿತಿಯು ಪ್ರಧಾನ ಮಂತ್ರಿಯವರನ್ನು ಹೊರತುಪಡಿಸಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕನನ್ನು ಒಳಗೊಂಡಿರುತ್ತದೆ.

 

ಭಾರತದ ಮುಖ್ಯ ನ್ಯಾಯಮೂರ್ತಿಗಳು ನೀಡಿದ ಕಾನೂನು ಹೇಳಿಕೆ ಯಾವುದು?

ಪ್ರಧಾನಮಂತ್ರಿ ನೇತೃತ್ವದ ಈ ಸಮಿತಿಯಲ್ಲಿ, ಸದಸ್ಯರಾಗಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ರವರು ನಿವೃತ್ತರಾಗಲು ಆರು ತಿಂಗಳಿಗಿಂತ ಕಡಿಮೆ ಸಮಯ ಹೊಂದಿರುವ ಅಧಿಕಾರಿಗಳನ್ನು ಸಿಬಿಐ ನಿರ್ದೇಶಕರಾಗಿ ನೇಮಕ ಮಾಡದಂತೆ ಅಭಿಪ್ರಾಯಪಟ್ಟರು. ಇದನ್ನು ಸರಳ “ಕಾನೂನಿನ ಸ್ಪಷ್ಟ ಹೇಳಿಕೆ” (statement of law) ಎಂದು ಕರೆಯಲಾಗುತ್ತದೆ.

 

 1. ಏಕೆಂದರೆ, ಮುಖ್ಯ ನ್ಯಾಯಮೂರ್ತಿಗಳ ಪ್ರಕಾರ, ಸಮಿತಿಯಿಂದ ಅಧಿಕಾರಿಗಳನ್ನು ಆಯ್ಕೆ ಮಾಡುವುದು “ಭವಿಷ್ಯದಲ್ಲಿ ಕಾನೂನಿನ ಪರಿಶೀಲನೆಯನ್ನು” ತಡೆದುಕೊಳ್ಳಲು ಸಾಧ್ಯವಾಗುತ್ತದೆ ಅಥವಾ ಕಾನೂನು ತನಿಖೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.

 

ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಅಭಿಪ್ರಾಯಗಳು ಮತ್ತು ತೀರ್ಪುಗಳು:

 1.  ಪ್ರಕಾಶ್ ಸಿಂಗ್ ಪ್ರಕರಣ: ಡಿಜಿಪಿಗಳ ನೇಮಕಕ್ಕೆ ಸಂಬಂಧಿಸಿದ ಪ್ರಕಾಶ್ ಸಿಂಗ್ ಪ್ರಕರಣದಲ್ಲಿ 2019 ರ ಮಾರ್ಚ್ 13 ರ ಆದೇಶದಲ್ಲಿ ಆರು ತಿಂಗಳ ಕನಿಷ್ಠ ಉಳಿದ ಅವಧಿಯ ನಿಯಮ (six-month minimum residual tenure) ವನ್ನು ಸುಪ್ರೀಂ ಕೋರ್ಟ್ ಪರಿಚಯಿಸಿತು. ನಂತರ ಈ ನಿಯಮವನ್ನು ಸಿಬಿಐ ನಿರ್ದೇಶಕರ ನೇಮಕಕ್ಕೂ ವಿಸ್ತರಿಸಲಾಯಿತು.
 2. ಯೂನಿಯನ್ ಆಫ್ ಇಂಡಿಯಾ VS ಸಿ. ದಿನಕರ್, 2004: ಸಾಮಾನ್ಯವಾಗಿ, “ಸಿಬಿಐ ನಿರ್ದೇಶಕರ ನಿವೃತ್ತಿಯ ದಿನಾಂಕದಂದು ಸೇವೆಯಲ್ಲಿರುವ ಹಿರಿಯ ನಾಲ್ಕು ಬ್ಯಾಚ್‌ಗಳ ಐಪಿಎಸ್ ಅಧಿಕಾರಿಗಳು, ಅವರ ಎಂಪಾನಲ್ಮೆಂಟ್ ಅನ್ನು ಲೆಕ್ಕಿಸದೆ, ಅಂದರೆ ಸಿಬಿಐ ನಿರ್ದೇಶಕ ಹುದ್ದೆಗೆ ಮಾಡಲಾಗುವ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರು ಇರಲಿ ಅಥವಾ ಇಲ್ಲದಿರಲಿ ಅಂತಹ ಹಿರಿಯ ಐಪಿಎಸ್ ಅಧಿಕಾರಿಗಳು ಸಿಬಿಐ ನಿರ್ದೇಶಕರ ಹುದ್ದೆಯ ನೇಮಕಾತಿಗೆ ಪರಿಗಣಿಸಲು ಅರ್ಹರಾಗಿರುತ್ತಾರೆ”.
 3. 1998 ರ ವಿನೀತ್ ನಾರಾಯಣ್ ಪ್ರಕರಣದ ತೀರ್ಪು: ನಿರ್ದೇಶಕರು ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ ಹುದ್ದೆಯಲ್ಲಿ ಮುಂದುವರೆಯಬೇಕು. ಉನ್ನತ ಮಟ್ಟದ ಸಮಿತಿಯ ಪೂರ್ವಾನುಮತಿ ಇಲ್ಲದೆ ಅವನು / ಅವಳನ್ನು ವರ್ಗಾಯಿಸಲಾಗುವುದಿಲ್ಲ.

 

ಸಿಜೆಐ ಅವರ ಈ ನಿಲುವಿನ ಪರಿಣಾಮಗಳು:

ಭಾರತದ ಮುಖ್ಯ ನ್ಯಾಯಮೂರ್ತಿಗಳ ಅಭಿಪ್ರಾಯವು 2019 ರ ಆದೇಶವನ್ನು ಅವಲಂಬಿಸಿದೆ – ಪ್ರಧಾನಿ ಸೇರಿದಂತೆ ಇತರ ಇಬ್ಬರು ಸದಸ್ಯರು ಇದನ್ನು ಅನುಸರಿಸಿದ್ದಾರೆ – ಇದರರ್ಥ ಜೈಸ್ವಾಲ್ ಅವರ ಆಯ್ಕೆಗೆ ಮುಂಚಿತವಾಗಿ ಈ ಸರ್ಕಾರವು ಅನುಭವಿಸಿದ ವಿವೇಚನಾಧಿಕಾರದ ಪ್ರಮಾಣವನ್ನು ಈಗ ಸೀಮಿತಗೊಳಿಸಲಾಗಿದೆ, ಆದರೆ ಸಾಂವಿಧಾನಿಕ ಪ್ರಾಮುಖ್ಯತೆಯನ್ನು ಹೊಂದಿರುವ ಸೂಕ್ಷ್ಮ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರು ನಿಷ್ಪಾಪ ಚಾರಿತ್ರ್ಯ, ಸಮಗ್ರತೆ ಮತ್ತು ವೃತ್ತಿಪರತೆಯನ್ನು  ಪರಿಗಣಿಸುವುದು ನೈತಿಕವಾಗಿ ಉತ್ತಮವಾದುದು.

 

ಆದರೆ, ಇದು ಏಕೆ ಬೇಕು?

ಕೆಲವೇ ದಿನಗಳ ಸೇವೆಯ ಅವಧಿಯನ್ನು ಹೊಂದಿರುವ ಅಧಿಕಾರಿಗಳು ಅಸುರಕ್ಷಿತ ಮನಸ್ಥಿತಿಯನ್ನು ಹೊಂದಿರುವ ಸಾಧ್ಯತೆಯನ್ನು ಸುಪ್ರೀಂ ಕೋರ್ಟ್ ಸೂಚಿಸಿದೆ.

ಸಿಬಿಐ ನಿರ್ದೇಶಕ ಮತ್ತು ಅವರ ನೇಮಕಾತಿ ಬಗ್ಗೆ:

 1. 1946 ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಯ ಸೆಕ್ಷನ್ 4 ಪ್ರಕಾರ ಸಿಬಿಐ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ.
 2. ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ (2013), ಮೂವರು ಸದಸ್ಯರ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಸಿಬಿಐ ನಿರ್ದೇಶಕರನ್ನು ನೇಮಿಸಬೇಕು ಎಂದು ಸೂಚಿಸುತ್ತದೆ. ಈ ಸಮಿತಿಯಲ್ಲಿ ಪ್ರಧಾನ ಮಂತ್ರಿಗಳು ಅಧ್ಯಕ್ಷತೆಯನ್ನು ವಹಿಸಿದರೆ, ಸದಸ್ಯರಾಗಿ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಗಳನ್ನೊಳಗೊಂಡಿರುತ್ತದೆ ಅಥವಾ CJI ನಾಮನಿರ್ದೇಶನ ಮಾಡಿದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಸದಸ್ಯರಾಗಿ ಇರುತ್ತಾರೆ.
 3. ಇದಲ್ಲದೆ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಕಾಯ್ದೆ, 2014 ಸಿ.ಬಿ.ಐ ನಿರ್ದೇಶಕರ ನೇಮಕಕ್ಕೆ ಸಂಬಂಧಿಸಿದ ಸಮಿತಿಯ ಸಂಯೋಜನೆಯಲ್ಲಿ ಬದಲಾವಣೆ ತಂದಿದೆ. ಲೋಕಸಭೆಯಲ್ಲಿ ಮಾನ್ಯತೆ ಪಡೆದ ಅಧಿಕೃತ ಪ್ರತಿಪಕ್ಷದ ನಾಯಕರಿಲ್ಲದಿದ್ದಲ್ಲಿ, ಲೋಕಸಭೆಯಲ್ಲಿನ ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕ ಆ ಸಮಿತಿಯ ಸದಸ್ಯನಾಗಿರುತ್ತಾನೆ ಎಂದು ಅದು ಹೇಳುತ್ತದೆ.

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಇಸ್ರೇಲ್ ಮಾನವ ಹಕ್ಕುಗಳ ದಾಖಲೆಯ ಹೆಚ್ಚಿನ ಪರಿಶೀಲನೆಗಾಗಿ ಬೇಡಿಕೆ:


(More scrutiny of Israel rights record sought)

ಸಂದರ್ಭ:

ಇಸ್ಲಾಮಿಕ್ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳು  (Organization of Islamic Cooperation) ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ  (UN Human Rights Council) ಇಸ್ರೇಲ್, ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವರದಿ ಮಾಡಲು ಶಾಶ್ವತ ಆಯೋಗವನ್ನು ಸ್ಥಾಪಿಸಲು ಕರೆ ನೀಡುತ್ತಿವೆ.

 1. ಈ ಬೇಡಿಕೆಯು ಅಂಗೀಕಾರವಾದರೆ, ಇದು ವಿಶ್ವಸಂಸ್ಥೆಯ ಉನ್ನತ ಮಾನವ ಹಕ್ಕುಗಳ ಸಂಸ್ಥೆಯಿಂದ ಅಧಿಕೃತವಾದ ಅಭೂತಪೂರ್ವ ಮಟ್ಟದ ಪರಿಶೀಲನೆಯು ನಡೆಯಲಿದೆ.

 

ಇಸ್ರೇಲ್- ಪ್ಯಾಲೆಸ್ಟೈನ್ ಸಂಘರ್ಷ, ಇತ್ತೀಚಿನ ಸಮಸ್ಯೆಗಳ ವಿವರಗಳಿಗಾಗಿ, ದಯವಿಟ್ಟು ನೋಡಿ:

https://www.insightsonindia.com/2021/05/12/whats-happening-in-jerusalem/

https://www.insightsonindia.com/2021/05/19/israel-palestine-conflict/

 

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಕುರಿತು:

‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ’ (UN Human Rights Council- UNHRC) ಅನ್ನು 2006 ರಲ್ಲಿ ಮರುಸಂಘಟಿಸಲಾಯಿತು, ಅದರ ನಿಕಟಪೂರ್ವ ಸಂಘಟನೆಯಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ (UN Commission on Human Rights)ದ ‘ವಿಶ್ವಾಸಾರ್ಹತೆಯ ಕೊರತೆಯನ್ನು’ ನಿವಾರಿಸಲು UNHRCಯು ಸಹಾಯ ಮಾಡುತ್ತದೆ.

ಮಾನವ ಹಕ್ಕುಗಳ ಹೈ ಕಮಿಷನರ್ (Office of the High Commissioner for Human Rights -OHCHR) ಕಚೇರಿಯು ಮಾನವ ಹಕ್ಕುಗಳ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಧಾನ ಕಛೇರಿ : ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ.

 

ಸಂಯೋಜನೆ:

 1. ಪ್ರಸ್ತುತ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) 47 ಸದಸ್ಯರನ್ನು ಹೊಂದಿದೆ, ಮತ್ತು ಇಡೀ ವಿಶ್ವದ ಭೌಗೋಳಿಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಆಧಾರದ ಮೇಲೆ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ.
 2. ಪ್ರತಿ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
 3. ಒಂದು ದೇಶಕ್ಕೆ ಒಂದು ಸ್ಥಾನವನ್ನು ಗರಿಷ್ಠ ಎರಡು ಬಾರಿ ಸತತವಾಗಿ ಹೊಂದಲು ಅವಕಾಶವಿದೆ. ಅಂದರೆ 2 ಕ್ಕಿಂತ ಹೆಚ್ಚು ಬಾರಿ ಸತತವಾಗಿ ಆಯ್ಕೆಯಾಗಲು ಅವಕಾಶವಿಲ್ಲ.

 

UNHRC ಯ ಸದಸ್ಯತ್ವವು ಸಮಾನ ಭೌಗೋಳಿಕ ವಿತರಣೆಯನ್ನು ಆಧರಿಸಿದೆ. ಸ್ಥಾನಗಳ ವಿತರಣೆಯು ಈ ಕೆಳಗಿನಂತೆ ಇದೆ:

 1. ಆಫ್ರಿಕನ್ ದೇಶಗಳು: 13 ಸ್ಥಾನಗಳು.
 2. ಏಷ್ಯಾ-ಪೆಸಿಫಿಕ್ ದೇಶಗಳು: 13 ಸ್ಥಾನಗಳು.
 3. ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ದೇಶಗಳು: 8 ಸ್ಥಾನಗಳು.
 4. ಪಶ್ಚಿಮ ಯುರೋಪಿಯನ್ ಮತ್ತು ಇತರ ದೇಶಗಳು: 7 ಸ್ಥಾನಗಳು.
 5. ಪೂರ್ವ ಯುರೋಪಿಯನ್ ದೇಶಗಳು: 6 ಸ್ಥಾನಗಳು.

 

ಕಾರ್ಯಗಳು:

 1. ಮಂಡಳಿಯು, ವಿಶ್ವಸಂಸ್ಥೆಯ ಎಲ್ಲಾ 193 ಸದಸ್ಯ ರಾಷ್ಟ್ರಗಳ ‘ಸಾರ್ವತ್ರಿಕ ಆವರ್ತಕ ವಿಮರ್ಶೆ’ (Universal Periodic Review- UPR) ಮೂಲಕ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಡ್ಡಾಯವಲ್ಲದ ನಿರ್ಣಯಗಳನ್ನು ಹೊರಡಿಸುತ್ತದೆ.
 2. ಇದು ನಿರ್ದಿಷ್ಟ ದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ತಜ್ಞರ ಮೂಲಕ ತನಿಖೆಯ ಪ್ರಗತಿಯನ್ನು ನೋಡಿಕೊಳ್ಳುತ್ತದೆ.

 

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದೆ ಇರುವ ಸವಾಲುಗಳು ಮತ್ತು ಸುಧಾರಣೆಗಳ ಅವಶ್ಯಕತೆ:

 1. ‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಚೀನಾ ಮತ್ತು ರಷ್ಯಾಗಳ ಮಾನವ ಹಕ್ಕುಗಳ ದಾಖಲೆಗಳು ಮಂಡಳಿಯ ಉದ್ದೇಶ ಮತ್ತು ಧ್ಯೇಯಕ್ಕೆ ಹೊಂದಿಕೆಯಾಗುವುದಿಲ್ಲ, ಇದರಿಂದಾಗಿ ವಿಮರ್ಶಕರು ಪರಿಷತ್ತಿನ ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ.
 2. UNHRC ಯಲ್ಲಿ ಅನೇಕ ಪಾಶ್ಚಿಮಾತ್ಯ ದೇಶಗಳು ಭಾಗವಹಿಸುತ್ತಿದ್ದರೂ, ಅವರು ಮಾನವ ಹಕ್ಕುಗಳ ತಿಳುವಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ.
 3.  UNHRC ಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ಅದರ ಆದೇಶಗಳನ್ನು ಪಾಲಿಸದಿರುವುದು ಗಂಭೀರ ವಿಷಯವಾಗಿದೆ.
 4.  ಅಮೆರಿಕದಂತಹ ಪ್ರಬಲ ರಾಷ್ಟ್ರಗಳ ಭಾಗವಹಿಸುವಿಕೆ ಯ ಕೊರತೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಚೀನಾವನ್ನು ಗುರಿಯಾಗಿಸಿಕೊಂಡ ಕ್ವಾಡ್: ಕಾನ್ಸುಲ್ ಜನರಲ್:


(Quad targeting China: Consul General)

ಸಂದರ್ಭ:

ಇತ್ತೀಚಿಗೆ,ಮುಂಬೈನಲ್ಲಿನ  ಚೀನಾದ ಕಾನ್ಸುಲ್ ಜನರಲ್ (Consul General)  ಕ್ವಾಡ್(Quad) ಅನ್ನು “ನಿಯಂತ್ರಿಸುವ ಒಂದು ಪ್ರಯತ್ನ” ಎಂದು ಬಣ್ಣಿಸಿದ್ದಾರೆ. ಏಕೆಂದರೆ, ಕಾನ್ಸುಲ್ ಜನರಲ್ ರವರ ಪ್ರಕಾರ, ಕ್ವಾಡ್ ತನ್ನನ್ನು ಒಂದು ಪ್ರಜಾಪ್ರಭುತ್ವ  ಒಕ್ಕೂಟ ಎಂದು ಸಮರ್ಥಿಸಿಕೊಳ್ಳುತ್ತದೆ, ಮತ್ತು ಕೆಲವು ನಿರ್ದಿಷ್ಟ ದೇಶಗಳನ್ನು ನಿಯಂತ್ರಿಸುವ ಪ್ರಯತ್ನವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದರು.

 

ಭಾರತಕ್ಕೆ ಪರಿಣಾಮಗಳು:

ಭಾರತಕ್ಕೆ ಸಂಬಂಧಿಸಿದಂತೆ ಚೀನಾದ ಕಠಿಣ ನಿಲುವು 2020 ರ ಹೊತ್ತಿಗೆ ಸ್ವಲ್ಪ  ತೀಕ್ಷ್ಣಗೊಂಡಿದೆ. ಕ್ವಾಡ್‌ನ ಉಲ್ಲೇಖವು, ಚೀನಾ ತನ್ನ ಪ್ರಭಾವದ ವಲಯವೆಂದು ಪರಿಗಣಿಸುವ ಇಂಡೋ-ಪೆಸಿಫಿಕ್ ಮತ್ತು ಇತರ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ಮೊಟಕುಗೊಳಿಸಲು ಉದ್ದೇಶಿಸಿರುವ ಒಂದು ಗುಂಪಿನೊಂದಿಗೆ (Quad) ಬೀಜಿಂಗ್ ನ ಆಳವಾದ ವಿರೋಧ ಅಥವಾ ಅಸಮಾಧಾನವನ್ನು ಸೂಚಿಸುತ್ತದೆ.

 

‘ಕ್ವಾಡ್ ಗ್ರೂಪ್’ ಎಂದರೇನು?

 1. ಇದು ಜಪಾನ್, ಭಾರತ, ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಚತುಷ್ಕೋನ ಅಥವಾ ಚತುರ್ಭುಜ (quadrilateral) ಭದ್ರತಾ ಸಂಘಟನೆಯಾಗಿದೆ.
 2. ಈ ಗುಂಪಿನ ಎಲ್ಲಾ ಸದಸ್ಯ ರಾಷ್ಟ್ರಗಳು ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಅಡೆತಡೆಯಿಲ್ಲದ ಕಡಲ ವ್ಯಾಪಾರ ಮತ್ತು ಭದ್ರತೆಗೆ ಸಂಬಂಧಿಸಿದ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತವೆ.
 3. ಕ್ವಾಡ್ ಯಾವುದೇ ದೇಶದ ವಿರುದ್ಧ ಮಿಲಿಟರಿ ಸ್ಪರ್ಧೆ ಮಾಡುವುದಿಲ್ಲ ಎಂಬುದು ಸಾಮಾನ್ಯ ತಿಳುವಳಿಕೆಯಾಗಿದೆ. ಅದೇನೇ ಇದ್ದರೂ, ಇದನ್ನು ಉದಯೋನ್ಮುಖ “ಏಷ್ಯನ್ ನ್ಯಾಟೋ” ಅಥವಾ “ಮಿನಿ  ನ್ಯಾಟೋ” ಎಂದು ವಿವರಿಸಲಾಗಿದೆ ಮತ್ತು ಇದನ್ನು  ಇಂಡೋ- ಪೆಸಿಫಿಕ್ ಪ್ರದೇಶದಲ್ಲಿನ ಚೀನಾದ ಮಿಲಿಟರಿ ಮತ್ತು ಆರ್ಥಿಕ ಒತ್ತಡಕ್ಕೆ ಸಮರ್ಥ ಪ್ರತ್ಯುತ್ತರ ವೆಂದು ಪರಿಗಣಿಸಲಾಗುತ್ತದೆ.

 

ಕ್ವಾಡ್ ಗುಂಪಿನ ಮೂಲ:

 1. ಕ್ವಾಡ್ ಸಮೂಹದ ಮೂಲವನ್ನು 2004 ರ ಸುನಾಮಿಯ ನಂತರ ನಾಲ್ಕು ದೇಶಗಳು ಪರಿಹಾರ ಕಾರ್ಯಾಚರಣೆಗಾಗಿ ಸಂಘಟಿಸಿದ ಪ್ರಯತ್ನಗಳಿಂದ ಕಂಡುಹಿಡಿಯಬಹುದು.
 2. ತರುವಾಯ, 2007 ರ ಆಸಿಯಾನ್ ಶೃಂಗಸಭೆಯಲ್ಲಿ ನಾಲ್ಕು ದೇಶಗಳು ಮೊದಲ ಬಾರಿಗೆ ಭೇಟಿಯಾದವು.
 3. ಜಪಾನ್, ಭಾರತ, ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾ,ಈ ನಾಲ್ಕು ದೇಶಗಳ ನಡುವೆ ಕಡಲ ಸಹಕಾರವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು.

 

ಈ ಸಂಸ್ಥೆಯ ಪ್ರಾಮುಖ್ಯತೆ:

 1. ಕ್ವಾಡ್, ಸಮಾನ ಮನಸ್ಸಿನ ದೇಶಗಳಿಗೆ ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಆಸಕ್ತಿಯ ಯೋಜನೆಗಳಲ್ಲಿ ಸಹಕರಿಸಲು ಒಂದು ಅವಕಾಶವಾಗಿದೆ.
 2. ಅದರ ಸದಸ್ಯ ರಾಷ್ಟ್ರಗಳು ಮುಕ್ತ ಮತ್ತು ಉಚಿತ ಇಂಡೋ-ಪೆಸಿಫಿಕ್ ವಿಧಾನವನ್ನು ಹಂಚಿಕೊಳ್ಳುತ್ತವೆ.ಇಲ್ಲಿ ಪ್ರತಿಯೊಂದು ದೇಶವೂ ಆರ್ಥಿಕ ಅಭಿವೃದ್ಧಿ ಯೋಜನೆಗಳಲ್ಲಿ ಹಾಗೂ ಕಡಲ ಡೊಮೇನ್ ಜಾಗೃತಿ ಮತ್ತು ಕಡಲ ಸುರಕ್ಷತೆಯನ್ನು ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದೆ.
 3. ಇದು ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್ ನಡುವಿನ ಸಂವಾದದ ಹಲವಾರು ವೇದಿಕೆಗಳಲ್ಲಿ ಒಂದಾಗಿದೆ ಮತ್ತು ಇದನ್ನು ಯಾವುದೇ ನಿರ್ದಿಷ್ಟ ಸನ್ನಿವೇಶದಲ್ಲಿ ನೋಡಬಾರದು.

 

ಇತ್ತೀಚಿನ ಬೆಳವಣಿಗೆಗಳು:

 1.  ಇಂಡೋ-ಪೆಸಿಫಿಕ್ ಮತ್ತು ಅದರಾಚೆ ಭದ್ರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ಇವುಗಳಿಗೆ ಎದುರಾಗುವ ಬೆದರಿಕೆಗಳನ್ನು ಎದುರಿಸಲು ಅಂತರರಾಷ್ಟ್ರೀಯ ಕಾನೂನಿನಲ್ಲಿ ಅಂತರ್ಗತವಾಗಿರುವ ಉಚಿತ, ಮುಕ್ತ ನಿಯಮ-ಆಧಾರಿತ ವ್ಯವಸ್ಥೆಯನ್ನು ಉತ್ತೇಜಿಸಲು QUAD ವಾಗ್ದಾನ ಮಾಡಿದೆ.
 2. ಕ್ವಾಡ್ ಲಸಿಕೆ ಸಹಭಾಗಿತ್ವ: ಸಾಂಕ್ರಾಮಿಕ ರೋಗವನ್ನು ಎದುರಿಸಲು ಲಸಿಕೆಗಳಿಗೆ “ಸಮಾನ” ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.
 3. 2020 ರಲ್ಲಿ, ಜಪಾನ್, ಭಾರತ, ಆಸ್ಟ್ರೇಲಿಯಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಎಂಬ ನಾಲ್ಕು ಕ್ವಾಡ್ ದೇಶಗಳು ಮಲಬಾರ್ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದವು. ಮಲಬಾರ್ ಸಮರಾಭ್ಯಾಸವು ಭಾರತ, ಜಪಾನ್ ಮತ್ತು ಯುಎಸ್ಎ ನೌಕಾಪಡೆಗಳ ನಡುವಿನ ವಾರ್ಷಿಕ ತ್ರಿಪಕ್ಷೀಯ ನೌಕಾ ಸಮರಾಭ್ಯಾಸವಾಗಿದ್ದು, ಇದನ್ನು ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಪರ್ಯಾಯವಾಗಿ ನಡೆಸಲಾಗುತ್ತದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಇಂಟರ್ ಪೋಲ್:


(Interpol)

ಸಂದರ್ಭ:

ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿಯಾದ ಮೆಹುಲ್ ಚೋಕ್ಸಿ ಅವರ ವಿರುದ್ಧ ಇಂಟರ್ಪೋಲ್ ಹಳದಿ ನೋಟಿಸ್ ಜಾರಿಗೊಳಿಸಿದ ನಂತರ ನೆರೆಯ ಡೊಮಿನಿಕಾದಲ್ಲಿ ಸೆರೆಹಿಡಿಯಲಾಯಿತು. ಇತ್ತೀಚೆಗೆ, ಆತ ಆಂಟಿಗುವಾ ಮತ್ತು ಬಾರ್ಬುಡಾದಿಂದ ಪಲಾಯನಗೈದ ಪರಾರಿಯಾಗಿದ್ದ.

 

ಮೆಹುಲ್ ಚೋಕ್ಸಿ, 2018 ರಲ್ಲಿ ಪೌರತ್ವ ಪಡೆದ ನಂತರ  ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ, ₹ 13,500 ಕೋಟಿ ಸಾಲ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನು ಭಾರತಕ್ಕೆ ಬೇಕಾಗಿದ್ದಾನೆ.

(ಟಿಪ್ಪಣಿ: ಈ ಲೇಖನದಿಂದ ಇಂಟರ್ಪೋಲ್ ಮತ್ತು ಅದರ ಮೂಲಕ ಹೊರಡಿಸಲಾದ ವಿವಿಧ ಪ್ರಕಟಣೆಗಳ ಬಗ್ಗೆ ನಾವು ಕಲಿಯಬೇಕಾಗಿದೆ; ಹೆಚ್ಚೇನೂ ಇಲ್ಲ) .

 

ಇಂಟರ್ಪೋಲ್ ಎಂದರೇನು?

 1. ಇಂಟರ್ ಪೋಲ್ ಒಂದು ಅಂತರರಾಷ್ಟ್ರೀಯ ಅಪರಾಧಗಳ ಪೋಲಿಸ್ ಸಂಸ್ಥೆ ಯಾಗಿದೆ, (International Criminal Police Organisation, or Interpol) ಅಥವಾ ಇದೊಂದು 194 ಸದಸ್ಯರ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.
 2. ಇದರ ಕೇಂದ್ರ ಕಚೇರಿಯು ಫ್ರಾನ್ಸ್ ನ ಲಿಯಾನ್ (Lyon) ನಲ್ಲಿದೆ.
 3. ಇದನ್ನು,1923 ರಲ್ಲಿ ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಆಯೋಗವಾಗಿ ಸ್ಥಾಪಿಸಲಾಯಿತು ಮತ್ತು 1956 ರಲ್ಲಿ ಇಂಟರ್ಪೋಲ್ ಎಂದು ಕರೆಯಲು ಪ್ರಾರಂಭಿಸಲಾಯಿತು.
 4. ಭಾರತವು 1949 ರಲ್ಲಿ ಈ ಸಂಸ್ಥೆಗೆ ಸೇರಿತು ಮತ್ತು ಇದರ ಹಳೆಯ ಸದಸ್ಯರಲ್ಲಿ ಒಂದಾಗಿದೆ.

 

ಇಂಟರ್ಪೋಲ್ ಘೋಷಿಸಿದ ಜಾಗತಿಕ ಪೊಲೀಸ್ ಗುರಿಗಳು ಈ ಕೆಳಗಿನಂತಿವೆ:

 1. ಭಯೋತ್ಪಾದನೆಯನ್ನು ಎದುರಿಸುವುದು, ವಿಶ್ವಾದ್ಯಂತ ಗಡಿಗಳ ಸಮಗ್ರತೆಯನ್ನು ಉತ್ತೇಜಿಸುವುದು, ದುರ್ಬಲ ಸಮುದಾಯಗಳ ರಕ್ಷಣೆ, ಜನರು ಮತ್ತು ವ್ಯವಹಾರಗಳಿಗೆ ಸುರಕ್ಷಿತ ಸೈಬರ್‌ಪೇಸ್ ಒದಗಿಸುವುದು, ಅಕ್ರಮ ಮಾರುಕಟ್ಟೆಗಳನ್ನು ನಿಗ್ರಹಿಸುವುದು, ಪರಿಸರ ಸುರಕ್ಷತೆಯನ್ನು ಬೆಂಬಲಿಸುವುದು ಮತ್ತು ಜಾಗತಿಕ ಸಮಗ್ರತೆ / ಏಕತೆಯನ್ನು ಉತ್ತೇಜಿಸುವುದು.

 

ಇಂಟರ್ಪೋಲ್ ಸಾಮಾನ್ಯ ಸಭೆ ಎಂದರೇನು?

 1. ಇದು ಇಂಟರ್ಪೋಲ್ ನ ಸರ್ವೋಚ್ಚ ಆಡಳಿತ ಮಂಡಳಿಯಾಗಿದೆ ಮತ್ತು ಅದರ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡಿದೆ.
 2. ಇದು ತನ್ನ ಕಾರ್ಯಚಟುವಟಿಕೆಗಳ ಮತ್ತು ನೀತಿಯ ಮೇಲೆ ಮತ ಚಲಾಯಿಸಲು ಸುಮಾರು ನಾಲ್ಕು ದಿನಗಳ ವರೆಗೆ ನಡೆಯುವ ಅಧಿವೇಶನದಲ್ಲಿ ವಾರ್ಷಿಕವಾಗಿ ಭೇಟಿಯಾಗುತ್ತದೆ.
 3. ಇಂಟರ್ ಪೋಲ್ ನ ಸಾಮಾನ್ಯ ಸಭೆಯು ಪ್ರತಿಯೊಂದು ದೇಶದಿಂದ ಒಬ್ಬರು ಅಥವಾ ಹೆಚ್ಚಿನ ಪ್ರತಿನಿಧಿಗಳಿಂದ ಪ್ರತಿನಿಧಿಸಲ್ಪಡುತ್ತದೆ, ಮತ್ತು ಈ ಪ್ರತಿನಿಧಿಗಳು ಸಾಮಾನ್ಯವಾಗಿ ಅವರವರ ದೇಶಗಳ ಕಾನೂನು ಜಾರಿ ಸಂಸ್ಥೆಗಳ ಮುಖ್ಯಸ್ಥರಾಗಿರುತ್ತಾರೆ.
 4. ಸಾಮಾನ್ಯ ಸಭೆಯು ತನ್ನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಕಾರ್ಯಕಾರಿ ಸಮಿತಿಯು, “ಅಧಿವೇಶನಗಳ ನಡುವೆ ಇಂಟರ್ ಪೋಲ್ ಗೆ ಮಾರ್ಗದರ್ಶನ ಮತ್ತು ನಿರ್ದೇಶನವನ್ನು ಒದಗಿಸುತ್ತದೆ.”

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಜೀವರಾಶಿ ಬಳಕೆಯ ರಾಷ್ಟ್ರೀಯ ಮಿಷನ್:


(National Mission on use of Biomass in coal based thermal power plants)

 ಸಂದರ್ಭ:

ಹೊಲಗಳಲ್ಲಿ ಕೃಷಿ ತ್ಯಾಜ್ಯದ ಅಂದರೆ ಒಣಹುಲ್ಲಿನ ಸುಡುವಿಕೆಯಿಂದ ಉಂಟಾಗುವ ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಮತ್ತು ಉಷ್ಣ ವಿದ್ಯುತ್ ಉತ್ಪಾದನೆಯ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು, ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಜೀವರಾಶಿ ಬಳಕೆಯ ಕುರಿತು ರಾಷ್ಟ್ರೀಯ ಮಿಷನ್ (National Mission on use of Biomass in coal based thermal power plants) ಸ್ಥಾಪಿಸಲು ವಿದ್ಯುತ್ ಸಚಿವಾಲಯ ನಿರ್ಧರಿಸಿದೆ.

 

ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಜೀವರಾಶಿ ಬಳಕೆಯ ಕುರಿತ ರಾಷ್ಟ್ರೀಯ ಮಿಷನ್ ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ:

 1.  ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೆಚ್ಚಿನ ಪ್ರಮಾಣದ ಇಂಗಾಲದ ತಟಸ್ಥ ವಿದ್ಯುತ್ ಉತ್ಪಾದನೆಯ ಪಾಲನ್ನು ಪಡೆಯಲು ಸಹ-ಗುಂಡಿನ ಮಟ್ಟವನ್ನು (co-firing) ಪ್ರಸ್ತುತ 5% ರಿಂದ ಉನ್ನತ ಮಟ್ಟಕ್ಕೆ ಏರಿಸುವುದು.
 2. ಜೀವರಾಶಿ ಉಂಡೆ / ರಚನೆಗಳಲ್ಲಿ ಹೆಚ್ಚಿನ ಪ್ರಮಾಣದ ಸಿಲಿಕಾ, ಕ್ಷಾರೀಯ ಅಂಶಗಳನ್ನು ನಿರ್ವಹಿಸಲು ಬಾಯ್ಲರ್ ವಿನ್ಯಾಸದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (R&D) ಚಟುವಟಿಕೆಯನ್ನು ಕೈಗೊಳ್ಳುವುದು.
 3. ವಿದ್ಯುತ್ ಸ್ಥಾವರಗಳವರೆಗೆ ಅದರ ಸಾಗಣೆಗೆ ಅನುಕೂಲವಾಗುವಂತೆ ಜೈವಿಕ ದ್ರವ್ಯರಾಶಿ ಉಂಡೆಗಳು ಮತ್ತು ಕೃಷಿ ಅವಶೇಷಗಳ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳನ್ನು ನಿವಾರಿಸುವುದು.
 4. ಜೀವರಾಶಿ ಸಹ-ಗುಂಡಿನ ನಿಯಂತ್ರಣ ಸಮಸ್ಯೆಗಳನ್ನು ಪರಿಗಣಿಸುವುದು.

 

ಅನುಷ್ಠಾನ:

 1. ಈ ಯೋಜನೆಯು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (MoPNG), ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಒಳಗೊಂಡ ವಿದ್ಯುತ್ ಸಚಿವಾಲಯದ ಕಾರ್ಯದರ್ಶಿಯ ನೇತೃತ್ವದ ಸ್ಟೀರಿಂಗ್ ಸಮಿತಿಯನ್ನು ಹೊಂದಿರುತ್ತದೆ.
 2. CEA ಸದಸ್ಯ(ಉಷ್ಣ) ಕಾರ್ಯಕಾರಿ ಸಮಿತಿಯ ಅಧ್ಯಕ್ಷತೆಯನ್ನು ವಹಿಸುತ್ತಾರೆ. NTPC ಪ್ರಸ್ತಾವಿತ ರಾಷ್ಟ್ರೀಯ ಮಿಷನ್‌ನಲ್ಲಿ ಲಾಜಿಸ್ಟಿಕ್ ಮತ್ತು ಮೂಲಸೌಕರ್ಯ ಬೆಂಬಲವನ್ನು ನೀಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

 

ಜೀವರಾಶಿ / ಬಯೋಮಾಸ್ ಕೋ-ಫೈರಿಂಗ್ ಎಂದರೇನು?

ಬಯೋಮಾಸ್ ಕೋ-ಫೈರಿಂಗ್ (Biomass Cofiring) ಬಾಯ್ಲರ್ನೊಳಗಿನ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನಂತಹ ಇತರ ಇಂಧನಗಳೊಂದಿಗೆ ಸಮಪ್ರಮಾಣದ ಪದಾರ್ಥಗಳ ಮಿಶ್ರಣ ಮತ್ತು ದಹನವನ್ನು ಸೂಚಿಸುತ್ತದೆ, ಇದು ವೆಚ್ಚಗಳು ಮತ್ತು ಮೂಲಸೌಕರ್ಯ ಹೂಡಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸದೆ ಶಕ್ತಿ ಉತ್ಪಾದನೆ ಮತ್ತು ಕಡಿಮೆ ಹೊರಸೂಸುವಿಕೆಗಾಗಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುತ್ತದೆ.

 

ಕೋ-ಫೈರಿಂಗ್‌ ನ ಪ್ರಯೋಜನಗಳು:

 1. ಜೀವರಾಶಿ ಕೋಫೈರಿಂಗ್ ಶಕ್ತಿಯ ಉತ್ಪಾದನೆಗೆ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವ ಮತ್ತು ಇದು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿತ ಗೊಳಿಸುವ ಒಂದು ಭರವಸೆಯ ತಂತ್ರಜ್ಞಾನವಾಗಿದೆ.
 2. ಕಲ್ಲಿದ್ದಲು ಮತ್ತು ಜೀವರಾಶಿ ಕೋಫೈರಿಂಗ್ ಅನುಷ್ಠಾನ ಗೊಳಿಸಲು ಸುಲಭವಾದುದು ಮತ್ತು ವಾತಾವರಣಕ್ಕೆ CO2 ಮತ್ತು ಇತರ ಮಾಲಿನ್ಯಕಾರಕ (SOx, NOx) ಹೊರಸೂಸುವಿಕೆಯನ್ನು ಪರಿಣಾಮಕಾರಿಯಾಗಿ ಕಡಿತ ಗೊಳಿಸಲು ಕಾರಣವಾಗಿದೆ.
 3. ಹೊಸ ಇಂಧನ ಮಿಶ್ರಣಕ್ಕಾಗಿ ದಹನ ಉತ್ಪಾದನೆಯನ್ನು ಸರಿಹೊಂದಿಸಿದ ನಂತರ ಕಲ್ಲಿದ್ದಲಿನೊಂದಿಗೆ ಜೀವರಾಶಿ / ಬಯೋಮಾಸ್ ಅನ್ನು ಕೋಫೈರಿಂಗ್ ಮಾಡುವಾಗ ಬಾಯ್ಲರ್ ನ ಒಟ್ಟು ದಕ್ಷತೆಯಲ್ಲಿ ಯಾವುದೇ ಕಡಿತ ಅಥವಾ ನಷ್ಟ ಉಂಟಾಗುವುದಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 4


 

ವಿಷಯಗಳು: ಸಾರ್ವಜನಿಕ ಆಡಳಿತದಲ್ಲಿ ಸಾರ್ವಜನಿಕ/ನಾಗರಿಕ ಸೇವಾ ಮೌಲ್ಯಗಳು ಮತ್ತು ನೈತಿಕತೆ: ಸ್ಥಿತಿ ಮತ್ತು ತೊಂದರೆಗಳು; ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೈತಿಕ ಕಾಳಜಿ ಮತ್ತು ಸಂದಿಗ್ಧತೆಗಳು. ಮಾಹಿತಿ ಹಂಚಿಕೆ ಮತ್ತು ಸರ್ಕಾರದಲ್ಲಿ ಪಾರದರ್ಶಕತೆ.

ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ IMA:


(IMA demands action against Ramdev)

ಸಂದರ್ಭ:

ಭಾರತೀಯ ವೈದ್ಯಕೀಯ ಸಂಘವು, (Indian Medical Association (IMA) COVID-19 ಲಸಿಕೆ ಕುರಿತು ತಪ್ಪು ಮಾಹಿತಿ ನೀಡುವ ಅಭಿಯಾನವನ್ನು ನಿಲ್ಲಿಸಲು ಸಹಾಯ ಮಾಡುವಂತೆ ಮತ್ತು ಅಲೋಪತಿ ಮತ್ತು ಅಲೋಪತಿ ವೈದ್ಯರ ಬಗ್ಗೆ ಮಾಡಿರುವ ವಿವಾದಾತ್ಮಕ ಆರೋಪಕ್ಕೆ ಸಂಬಂಧಿಸಿದಂತೆ ಬಾಬಾ ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.

 

ಸಮಸ್ಯೆ ಏನು?

ಇತ್ತೀಚಿನ ವೀಡಿಯೊವೊಂದರಲ್ಲಿ ಬಾಬಾ ರಾಮ್‌ದೇವ್ ಅವರು ಕೋವಿಡ್ ನ ಎರಡೂ ಪ್ರಮಾಣದ ಲಸಿಕೆಗಳನ್ನು ಅಂದರೆ, ಕೋವಿಡ್ ಲಸಿಕೆಯ ಸಂಪೂರ್ಣ ಡೋಸ್ ಗಳನ್ನು ತೆಗೆದುಕೊಂಡರೂ ಸಹ 10,000 ವೈದ್ಯರು ಮತ್ತು ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ನಮ್ಮ ಜನಸಾಮಾನ್ಯರನ್ನು ತಲುಪಲು ಮಾಡಲಾಗುತ್ತಿರುವ ವ್ಯಾಕ್ಸಿನೇಷನ್ ಪ್ರಯತ್ನಗಳನ್ನು ತಡೆಯುವ ಉದ್ದೇಶಪೂರ್ವಕ ಕ್ರಮವಾಗಿ  ನೋಡಲಾಗುತ್ತಿದೆ.

 

ಸಮಯದ ಅವಶ್ಯಕತೆ:

ಪ್ರತಿಯೊಂದು ವೈದ್ಯಕೀಯ ಪದ್ಧತಿಯು ನಮ್ಮ ಸಾರ್ವಜನಿಕರಿಗೆ ತನ್ನದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿರುವುದರಿಂದ ನಾವು ಎಲ್ಲಾ ವೈದ್ಯಕೀಯ ವ್ಯವಸ್ಥೆಗಳನ್ನು, ವಿಶೇಷವಾಗಿ ನಮ್ಮ ಭಾರತೀಯ ಆಯುರ್ವೇದ  ಔಷಧ ಪದ್ಧತಿಯನ್ನು ಅಂಗೀಕರಿಸಬೇಕು ಮತ್ತು ಅಭಿನಂದಿಸಬೇಕು. ಆದಾಗ್ಯೂ, ವ್ಯಾಕ್ಸಿನೇಷನ್ ಕುರಿತ ಅಪಪ್ರಚಾರ ಮತ್ತು ಜನರಲ್ಲಿ ಭಯವನ್ನು ಉತ್ಪತ್ತಿ ಮಾಡಲು ಯಾರಿಗೂ ಅವಕಾಶ ನೀಡಬಾರದು.

 

ವ್ಯಾಕ್ಸಿನೇಷನ್ / ಲಸಿಕಾಕರಣ ಎಂದರೇನು?

ವ್ಯಾಕ್ಸಿನೇಷನ್ ಎನ್ನುವುದು, ನಿಜವಾದ ವೈರಸ್‌ನಿಂದ ಭವಿಷ್ಯದ ಸೋಂಕಿನ ಸಂದರ್ಭದಲ್ಲಿ ಪ್ರತಿಕಾಯಗಳನ್ನು (antibodies) ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಜೀವಕೋಶಗಳನ್ನು ಅಂದರೆ ವಿಶೇಷ ರೋಗನಿರೋಧಕ ವ್ಯವಸ್ಥೆಯ ಜೀವಕೋಶಗಳನ್ನು ಪ್ರಚೋದಿಸಲು ಮತ್ತು ಸಕ್ರಿಯಗೊಳಿಸಲು ಬಳಸುವ ಒಂದು ವಿಧಾನವಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಶ್ರೀಲಂಕಾದೊಂದಿಗೆ ಕರೆನ್ಸಿ ವಿನಿಮಯ ಒಪ್ಪಂದ ಮಾಡಿಕೊಂಡ ಢಾಕಾ:

ಶ್ರೀಲಂಕಾಕ್ಕೆ ಬಾಂಗ್ಲಾದೇಶವು $ 200 ಮಿಲಿಯನ್ ಕರೆನ್ಸಿ ಸ್ವಾಪ್ (currency swap) ಸೌಲಭ್ಯವನ್ನು ಅನುಮೋದಿಸಿದೆ, ಹೀಗಾಗಿ ಬಾಂಗ್ಲಾದೇಶವು, ಈ ವರ್ಷ ಈ “ದ್ವೀಪ ರಾಷ್ಟ್ರ”ಕ್ಕೆ ನಿರ್ಣಾಯಕವಾದ ಆರ್ಥಿಕ ನೆರವು ನೀಡಿದ ದಕ್ಷಿಣ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ಹಿನ್ನೆಲೆ:

ಶ್ರೀಲಂಕಾದ ಪ್ರಮುಖ ವಿದೇಶಿ ವಿನಿಮಯ-ಗಳಿಸುವ ಕ್ಷೇತ್ರಗಳಾದ ಪ್ರವಾಸೋದ್ಯಮ, ಜವಳಿ ಉದ್ಯಮ ಮತ್ತು ಚಹಾ ರಫ್ತು – ಈ ಸಾಂಕ್ರಾಮಿಕ ರೋಗದಿಂದಾಗಿ ತೀವ್ರವಾಗಿ ಹಾನಿಗೊಳಗಾಗಿದೆ. ಈ ಕಾರಣದಿಂದಾಗಿ ದ್ವೀಪ ರಾಷ್ಟ್ರವು, ಸವಾಲಿನ ಸಾಲ ಮರುಪಾವತಿ ವೇಳಾಪಟ್ಟಿಯನ್ನು ನೀಡಿದ ಹಿನ್ನೆಲೆಯಲ್ಲಿ, ದೇಶವು ತನ್ನ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ಕರೆನ್ಸಿ ವಿನಿಮಯ ಒಪ್ಪಂದ ಎಂದರೇನು?

 1. ಕರೆನ್ಸಿ ವಿನಿಮಯ ಒಪ್ಪಂದ (Currency Swap Arrangement) ಎಂದರೆ ಎರಡು ಸ್ನೇಹಪರ ಸಂಬಂಧ ಹೊಂದಿರುವ ರಾಷ್ಟ್ರಗಳು ತಮ್ಮದೇ ಆದ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಮಾಡಲು ಮಾಡಿಕೊಳ್ಳುವ ವ್ಯವಸ್ಥೆಯಾಗಿದೆ.
 2. ಈ ಪದ್ಧತಿಯ ಪ್ರಕಾರ, ಎರಡೂ ದೇಶಗಳು ಯುಎಸ್ ಡಾಲರ್‌ನಂತಹ ಮೂರನೇ ದೇಶದ ಕರೆನ್ಸಿಯಲ್ಲಿ ವ್ಯಾಪಾರ-ವಹಿವಾಟು ನಡೆಸದೆ ಪೂರ್ವನಿರ್ಧರಿತ ವಿನಿಮಯ ದರದಲ್ಲಿ ಆಮದು ಮತ್ತು ರಫ್ತು ವ್ಯಾಪಾರವನ್ನು ನಡೆಸಿ ಪಾವತಿಸುತ್ತವೆ.
 3. ಅಂತಹ ವ್ಯವಸ್ಥೆಗಳಲ್ಲಿ ಯಾವುದೇ ಮೂರನೇ ದೇಶದ ಕರೆನ್ಸಿಯು ಒಳಗೊಂಡಿರುವುದಿಲ್ಲ, ಇದರಿಂದಾಗಿ ವಿನಿಮಯ ಭಿನ್ನತೆಗಳ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯನ್ನು ನಿವಾರಿಸುತ್ತದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT):

 

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (National Company Law Tribunal) ಭಾರತದಲ್ಲಿನ, ಕಂಪನಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಣಯಿಸುವ ಅರೆ-ನ್ಯಾಯಾಂಗ ಸಂಸ್ಥೆಯಾಗಿದೆ.

ಕಂಪೆನಿ ಕಾಯ್ದೆ 2013 ರ ನಿಬಂಧನೆಗಳ ಪ್ರಕಾರ ಇದನ್ನು ಜೂನ್ 1, 2016 ರಂದು ರಚಿಸಲಾಯಿತು.

ಇದರ ರಚನೆ: ಭಾರತದಲ್ಲಿನ ಕಂಪನಿಗಳ ದಿವಾಳಿತನ ಮತ್ತು ಅವುಗಳ ಸಮಾಪ್ತಿಗೆ (insolvency and winding up of companies )ಸಂಬಂಧಿಸಿದಂತೆ  ನ್ಯಾಯಮೂರ್ತಿ ಎರಾಡಿ ಸಮಿತಿಯ(Justice Eradi Committee) ಶಿಫಾರಸುಗಳ ಆಧಾರದ ಮೇಲೆ ಇದನ್ನು ಸ್ಥಾಪಿಸಲಾಗಿದೆ.

ಮೇಲ್ಮನವಿ: NCLT ತೆಗೆದುಕೊಳ್ಳುವ ನಿರ್ಧಾರಗಳ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣಕ್ಕೆ (NCLAT) ಮೇಲ್ಮನವಿ ಸಲ್ಲಿಸಬಹುದು. NCLAT ಯ ತೀರ್ಪಿನ ವಿರುದ್ಧ ಕಾನೂನಿನ ಅಂಶದ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು.

ಸುದ್ದಿಯಲ್ಲಿರಲು ಕಾರಣ?

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ದೇವಾಸ್ ಮಲ್ಟಿಮೀಡಿಯಾ ಪ್ರೈ. ಲಿಮಿಟೆಡ್ ನ ಸಾಲಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos