Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 22ನೇ ಮೇ 2021

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಕ್ರೀಡಾಪಟುಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ.

2. ಕಾರ್ಪೊರೇಟ್ ಸಾಲಕ್ಕೆ ವೈಯಕ್ತಿಕ ಖಾತರಿದಾರರು ಹೊಣೆಗಾರರಾಗುತ್ತಾರೆ: ಸುಪ್ರೀಂಕೋರ್ಟ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. 99,122 ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಲಿರುವ RBI.

2. DRDO ನ ಕೋವಿಡ್ -19 ಪ್ರತಿಕಾಯ ಪತ್ತೆ ಕಿಟ್.

3. ಗೌಪ್ಯತೆ ನೀತಿ ಕುರಿತು ಸರ್ಕಾರ VS ವಾಟ್ಸಾಪ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ನ್ಯೂಯಾರ್ಕ್‌ನ ‘ವ್ಯಾಕ್ಸ್ ಮತ್ತು ಸ್ಕ್ರ್ಯಾಚ್’ ಕಾರ್ಯಕ್ರಮ.

2. ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನ 2021.

3. ಕಲಾಕ್ಷೇತ್ರ.

4. ಬಾವೊ-ಧಾನ್.

5. ಸುಂದರ್‌ಲಾಲ್ ಬಹುಗುಣ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕ್ರೀಡಾಪಟುಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ:


(Pandit Deendayal Upadhyay National Welfare Fund for Sportspersons)

ಸಂದರ್ಭ:

2011 ರಲ್ಲಿ ಅರ್ಜುನ ಪ್ರಶಸ್ತಿ ವಿಜೇತರಾದ ಕರ್ನಾಟಕದ    ವಿ ತೇಜಸ್ವಿನಿ ಬಾಯಿ ಯವರಿಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ (MYAS) 2 ಲಕ್ಷ ರೂ. ಗಳ ನೆರವು ಘೋಷಿಸಿದೆ.

ತೇಜಸ್ವಿನಿ ಯವರು, 2010 ಮತ್ತು 2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಭಾರತ ಮಹಿಳಾ ಕಬಡ್ಡಿ ತಂಡದ ಸದಸ್ಯರಾಗಿದ್ದರು.

ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಸಹಾಯ ಮಾಡಲು ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ’ (PDUNWFS) ಯಿಂದ ಈ ಆರ್ಥಿಕ ಸಹಾಯವನ್ನು ಭಾರತ ಒಲಂಪಿಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕ್ರೀಡಾ ಸಚಿವಾಲಯವು ಅನುಮೋದಿಸಿದೆ.

 

PDUNWFS ಕುರಿತು:

 1. ಕ್ರೀಡೆಯಲ್ಲಿ ದೇಶಕ್ಕೆ ಪ್ರಶಸ್ತಿ ಜಯಿಸಿ ತಂದ ಮತ್ತು ಪ್ರಸ್ತುತ ಶೋಚನೀಯ ಸ್ಥಿತಿಯಲ್ಲಿ ವಾಸಿಸುತ್ತಿರುವ ಮಾಜಿ ಅತ್ಯುತ್ತಮ ಕ್ರೀಡಾಪಟುಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ನಿಧಿಯನ್ನು ಮಾರ್ಚ್ 1982 ರಲ್ಲಿ ಸ್ಥಾಪಿಸಲಾಯಿತು.
 2. ಹಿಂದಿನ ಅತ್ಯುತ್ತಮ ಕ್ರೀಡಾಪಟುಗಳಿಗೆ ಒಟ್ಟು ಮೊತ್ತದ ಎಕ್ಸ್- ಗ್ರೇಶಿಯಾ ಬೆಂಬಲವನ್ನು ಒದಗಿಸಲು ಈ ಯೋಜನೆಯನ್ನು ಮೇ 2016 ರಲ್ಲಿ ಪರಿಷ್ಕರಿಸಲಾಯಿತು.
 3. ಈ ತಿದ್ದುಪಡಿಯಲ್ಲಿ ಪಿಂಚಣಿ ನಿಬಂಧನೆಯನ್ನು ರದ್ದುಪಡಿಸಲಾಗಿದೆ, ಏಕೆಂದರೆ ಈಗಾಗಲೇ ಅತ್ಯುತ್ತಮ ಕ್ರೀಡಾಪಟುಗಳಿಗೆ ಪಿಂಚಣಿ ಯೋಜನೆ ಇದೆ.

 

ಈ ಕೆಳಗಿನ ಉದ್ದೇಶಗಳಿಗಾಗಿ ಈ ನಿಧಿಯನ್ನು ಬಳಸಿಕೊಳ್ಳುವುದು:

 1. ಬಡತನದಲ್ಲಿ ವಾಸಿಸುತ್ತಿರುವ ಅತ್ಯುತ್ತಮ ಕ್ರೀಡಾಪಟುಗಳಿಗೆ ಸೂಕ್ತ ಸಹಾಯವನ್ನು ಒದಗಿಸುವುದು.
 2. ಕ್ರೀಡಾಕೂಟಗಳ ತಯಾರಿಗಾಗಿ ಅಭ್ಯಾಸ ಮಾಡುತ್ತಿರುವ ಮತ್ತು ಕ್ರೀಡಾಕೂಟದ ಸ್ಪರ್ಧಾ ಸಮಯದಲ್ಲಿ ಗಾಯಗಳಿಗೆ ತುತ್ತಾದ ಅತ್ಯುತ್ತಮ ಕ್ರೀಡಾಪಟುಗಳಿಗೆ ಗಾಯದ ಸ್ವರೂಪವನ್ನು ಅವಲಂಬಿಸಿ ಸೂಕ್ತ ಸಹಾಯವನ್ನು ಒದಗಿಸುವುದು.
 3. ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶಕ್ಕೆ ಪ್ರಶಸ್ತಿ ಜಯಿಸಿ ತಂದು ದೇಶದ ಕ್ರೀಡಾ ಕ್ಷೇತ್ರವನ್ನು ಮಹೋನ್ನತ ಗೊಳಿಸಿದ ಅತ್ಯುತ್ತಮ ಕ್ರೀಡಾಪಟುಗಳಿಗೆ ಕಠಿಣ ತರಬೇತಿಯ ಪರಿಣಾಮವಾಗಿ ಅಥವಾ ಬೇರೆ ಯಾವುದೇ ಕಾರಣಗಳಿಂದಾಗಿ ಅಂಗವೈಕಲ್ಯ ಉಂಟಾದರೆ ಅಂತಹ ಕ್ರೀಡಾಪಟುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯ ಬೆಂಬಲ ಮತ್ತು ಸಹಾಯವನ್ನು ಒದಗಿಸುವುದು.
 4. ಶೋಚನೀಯ ಸ್ಥಿತಿಯಲ್ಲಿ ವಾಸಿಸುವ ಆಟಗಾರರು ಮತ್ತು ಅವರ ಅವಲಂಬಿತರ ಸಮಸ್ಯೆಗಳನ್ನು ಕಡಿಮೆ ಮಾಡಲು ಆಟಗಾರರ ಕಲ್ಯಾಣಕ್ಕಾಗಿನ ನಿಧಿಯ ಹಣವನ್ನು ಬಳಸುವುದು.
 5. ಒಬ್ಬ ಆಟಗಾರನಿಗೆ ಪ್ರತ್ಯೇಕವಾಗಿ ಅಥವಾ ಗುಂಪಾಗಿ ‘ಸಕ್ರಿಯ ಆಟಗಾರ ನಿಧಿಗಳ’ ಹಂಚಿಕೆ ಮತ್ತು ಬಳಕೆ.
 6. ಮೇಲಿನ ಎಲ್ಲಾ ಉದ್ದೇಶಗಳಿಗೆ ಪ್ರಾಸಂಗಿಕವಾಗಿ ಇತರ ಎಲ್ಲ ಕಾರ್ಯಗಳನ್ನು ಮಾಡುವುದು.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕಾರ್ಪೊರೇಟ್ ಸಾಲಕ್ಕೆ ವೈಯಕ್ತಿಕ ಖಾತರಿದಾರರು ಹೊಣೆಗಾರರಾಗುತ್ತಾರೆ: ಸುಪ್ರೀಂಕೋರ್ಟ್:


(SC: personal guarantors liable for corporate debt)

 

ಸಂದರ್ಭ:

2019 ರ ನವೆಂಬರ್‌ನಲ್ಲಿ ಹೊರಡಿಸಿದ ಸರ್ಕಾರದ ಅಧಿಸೂಚನೆಯು ಸಾಲದಾತರಿಗೆ, ಸಾಮಾನ್ಯವಾಗಿ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳಿಗೆ ಖಾಸಗಿ ಖಾತರಿದಾರರ ವಿರುದ್ಧ ‘ದಿವಾಳಿತನ ಮತ್ತು ದಿವಾಳಿತನ ಸಂಹಿತೆ’ (Indian Bankruptcy and Insolvency Code- IBC) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಅನುಮತಿ ನೀಡಿತ್ತು.

 

 1. ಇತ್ತೀಚೆಗೆ, ಈ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
 2. ವೈಯಕ್ತಿಕ ಖಾತರಿದಾರರು ಮತ್ತು ಅವರ ಕಾರ್ಪೊರೇಟ್ ಸಾಲಗಾರರ ನಡುವೆ ‘ಆಂತರಿಕ ಸಂಬಂಧ’ ಇದೆ ಎಂದು ನ್ಯಾಯಾಲಯ ಹೇಳಿದೆ.

 

ಪರಿಣಾಮಗಳು:

ಸುಪ್ರೀಂ ಕೋರ್ಟ್‌ನ ಈ ತೀರ್ಪು ಸಾಲದಾತರು ಸಾಮಾನ್ಯವಾಗಿ ದೊಡ್ಡ ವ್ಯಾಪಾರ ಸಂಸ್ಥೆಗಳ ಪ್ರವರ್ತಕರಾಗಿರುವ ವೈಯಕ್ತಿಕ ಖಾತರಿಗಾರರ’ ವಿರುದ್ಧ ದಿವಾಳಿತನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಸಾಲದಾತರಿಗೆ ವೈಯಕ್ತಿಕ ಖಾತರಿಗಾರರು ಗ್ಯಾರಂಟಿ ನೀಡಿದ ಒತ್ತಡದ ಸ್ವತ್ತುಗಳ ಮೇಲೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ದಿವಾಳಿತನ ಮತ್ತು ದಿವಾಳಿತನ ಸಂಹಿತೆ (IBC) ಕುರಿತು:

 1. ವಿಫಲವಾದ ವ್ಯವಹಾರಗಳಿಗೆ ಸಂಬಂಧಿಸಿದ ರೆಸಲ್ಯೂಷನ್ ಕ್ರಮಗಳನ್ನು ತೀವ್ರಗೊಳಿಸುವ ಮತ್ತು ಆರ್ಥಿಕ ಸುಧಾರಣೆಗಳನ್ನು ಉತ್ತೇಜಿಸುವ ಉದ್ದೇಶದಿಂದ 2016 ರಲ್ಲಿ IBC ಜಾರಿಗೆ ಬಂದಿತು.
 2. ದಿವಾಳಿತನ-ಇತ್ಯರ್ಥಕ್ಕಾಗಿ ಅಸ್ತಿತ್ವದಲ್ಲಿರುವ ಎಲ್ಲಾ ವರ್ಗದ ಸಾಲದಾತರು ಮತ್ತು ಸಾಲಗಾರರಿಗೆ ಸಾಮಾನ್ಯ ವೇದಿಕೆಯನ್ನು ರೂಪಿಸಲು ಪ್ರಸ್ತುತ ಶಾಸಕಾಂಗ ಚೌಕಟ್ಟಿನ ನಿಬಂಧನೆಗಳನ್ನು ಕೋಡ್ ಕ್ರೋಡೀಕರಿಸುತ್ತದೆ.

ಅಥವಾ

ದಿವಾಳಿತನ-ಇತ್ಯರ್ಥಕ್ಕಾಗಿ ಅಸ್ತಿತ್ವದಲ್ಲಿರುವ ಶಾಸಕಾಂಗ ಚೌಕಟ್ಟಿನ ನಿಬಂಧನೆಗಳನ್ನು ಕ್ರೋಡೀಕರಿಸಲು ಎಲ್ಲಾ ವರ್ಗದ ಸಾಲದಾತರು ಮತ್ತು ಸಾಲಗಾರರಿಗೆ ಕೋಡ್ ಒಂದು ವೇದಿಕೆಯನ್ನು ಒದಗಿಸುತ್ತದೆ.

 

ದಿವಾಳಿತನ ಪ್ರಕ್ರಿಯೆಯ ಪರಿಹಾರಕ್ಕಾಗಿ ಕೋಡ್ ಅಡಿಯಲ್ಲಿ ಸ್ಥಾಪಿಸಲಾದ ಸಂಸ್ಥೆಗಳು:

ದಿವಾಳಿತನ ವೃತ್ತಿಪರರು’(Insolvency Professionals): ಪರವಾನಗಿ ಪಡೆದ ದಿವಾಳಿತನ ವೃತ್ತಿಪರರ ವಿಶೇಷ ಕೇಡರ್ ರಚಿಸಲು ಉದ್ದೇಶಿಸಲಾಗಿದೆ. ಈ ವೃತ್ತಿಪರರು ರೆಸಲ್ಯೂಷನ್ ಪ್ರಕ್ರಿಯೆಯನ್ನು ನಿರ್ವಹಿಸುತ್ತಾರೆ, ಸಾಲಗಾರನ ಸ್ವತ್ತುಗಳನ್ನು ನಿರ್ವಹಿಸುತ್ತಾರೆ ಮತ್ತು ಸಾಲಗಾರರಿಗೆ ಮಾಹಿತಿ ಒದಗಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ.

ದಿವಾಳಿತನ ವೃತ್ತಿಪರ ಏಜೆನ್ಸಿಗಳು(Insolvency Professional Agencies): ದಿವಾಳಿತನ ವೃತ್ತಿಪರರನ್ನು ದಿವಾಳಿತನ ವೃತ್ತಿಪರ ಏಜೆನ್ಸಿಗಳೊಂದಿಗೆ ನೋಂದಾಯಿಸಲಾಗುತ್ತದೆ.ದಿವಾಳಿತನ ವೃತ್ತಿಪರರನ್ನು ಪ್ರಮಾಣೀಕರಿಸಲು ಮತ್ತು ಅವರ ಕಾರ್ಯಕ್ಷಮತೆಗಾಗಿ ನೀತಿ ಸಂಹಿತೆಗಳನ್ನು ಕಾರ್ಯಗತಗೊಳಿಸಲು ಏಜೆನ್ಸಿಗಳು ಪರೀಕ್ಷೆಗಳನ್ನು ನಡೆಸುತ್ತವೆ.

ಮಾಹಿತಿ ಉಪಯುಕ್ತತೆಗಳು(Information Utilities): ಸಾಲದಾತರು ತಮ್ಮ ಸಾಲದ ಹಣಕಾಸಿನ ವಿವರಗಳನ್ನು ಅಂದರೆ ಸಾಲ ಪಡೆದವರು ಮರಳಿ ನೀಡಬೇಕಾದ ಹಣಕಾಸಿನ ಕುರಿತು ಮಾಹಿತಿಯನ್ನು ವರದಿ ಮಾಡುತ್ತಾರೆ. ಅಂತಹ ಮಾಹಿತಿಯು ಸಾಲಗಳು, ಹೊಣೆಗಾರಿಕೆಗಳು ಮತ್ತು ಡೀಫಾಲ್ಟ್‌ಗಳ ದಾಖಲೆಗಳನ್ನು ಒಳಗೊಂಡಿರುತ್ತದೆ.

ಅಧಿಕಾರಿಗಳನ್ನು ನಿರ್ಣಯಿಸುವುದು (Adjudicating authorities): ಕಂಪನಿಗಳಿಗೆ ತೀರ್ಪು ನೀಡುವ ಪ್ರಕ್ರಿಯೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ತೀರ್ಮಾನಿಸುತ್ತದೆ; ಮತ್ತು ವ್ಯಕ್ತಿಗಳಿಗೆ ಸಾಲ ಮರುಪಡೆಯುವಿಕೆ ನಿರ್ಧಾರವನ್ನು ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ (DRT) ತೆಗೆದುಕೊಳ್ಳುತ್ತದೆ. ಅಂತೆಯೇ ಪ್ರಾಧಿಕಾರದ ಕರ್ತವ್ಯಗಳು ಇಂತಿವೆ; ದಿವಾಳಿತನ ವೃತ್ತಿಪರರ ನೇಮಕ ಪ್ರಕ್ರಿಯೆಯನ್ನು ಆರಂಭಿಸುವುದು ಮತ್ತು ನೇಮಿಸುವುದು ಹಾಗೂ ಸಾಲದಾತರ ಅಂತಿಮ ನಿರ್ಧಾರವನ್ನು ಅನುಮೋದಿಸುವುದು.

ದಿವಾಳಿತನ ಮತ್ತು ದಿವಾಳಿತನ ಮಂಡಳಿ(Insolvency and Bankruptcy Board): ಈ ಮಂಡಳಿಯು ದಿವಾಳಿತನ ವೃತ್ತಿಪರರು, ದಿವಾಳಿತನ ವೃತ್ತಿಪರ ಏಜೆನ್ಸಿಗಳು ಮತ್ತು ಸಂಹಿತೆಯ ಅಡಿಯಲ್ಲಿ ಸ್ಥಾಪಿಸಲಾದ ಮಾಹಿತಿ ಸೌಲಭ್ಯಗಳನ್ನು ನಿಯಂತ್ರಿಸುತ್ತದೆ. ಮಂಡಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು, ಕಾರ್ಪೊರೇಟ್ ವ್ಯವಹಾರ ಮತ್ತು ಕಾನೂನು ಸಚಿವಾಲಯದ ಪ್ರತಿನಿಧಿಗಳು ಇರುತ್ತಾರೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಅಂತರ್ಗತ ಬೆಳವಣಿಗೆ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳು.

99,122 ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಲಿರುವ RBI:


(RBI to transfer Rs 99,122 crore surplus to government)

ಸಂದರ್ಭ:

ಮಾರ್ಚ್ 31 ಕ್ಕೆ ಕೊನೆಗೊಂಡ ಒಂಬತ್ತು ತಿಂಗಳ ಲೆಕ್ಕಪತ್ರ ಅವಧಿಗೆ ಸಂಬಂಧಿಸಿದಂತೆ ಲಾಭಾಂಶದ ರೂಪದಲ್ಲಿ 99,122 ಕೋಟಿ ರೂಪಾಯಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸರ್ಕಾರಕ್ಕೆ ವರ್ಗಾಯಿಸಲಿದೆ.

ಆಕಸ್ಮಿಕ ಮೀಸಲು ನಿಧಿ (the contingency risk buffer) ಅನ್ನು ವರ್ಷಕ್ಕೆ 5.5 ಪ್ರತಿಶತದಷ್ಟು ನಿರ್ವಹಿಸಲು ಕೇಂದ್ರ ಬ್ಯಾಂಕ್ ನಿರ್ಧರಿಸಿದೆ.

ಈ ನಡೆಯ ಮಹತ್ವ:

ದೇಶವು ಪ್ರಸ್ತುತ ಕೊರೊನೊ ವೈರಸ್ ನ ಎರಡನೆಯ ಅಲೆಯ ಅಡಿಯಲ್ಲಿ ತತ್ತರಿಸುತ್ತಿದೆ, ಇದು ಪ್ರತಿದಿನ ದಾಖಲೆಯ ಮಟ್ಟದಲ್ಲಿ ಸೋಂಕುಗಳು ಮತ್ತು ಸಾವುಗಳ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವರ್ಗಾವಣೆ ಮಾಡುವುದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಸಹಾಯವಾಗುತ್ತದೆ. ವೈರಸ್ ಸೋಂಕಿನ ಸರಪಳಿಯನ್ನು ಮುರಿಯಲು ವಿಧಿಸಲಾದ ನಿರ್ಬಂಧಗಳು ದೇಶದ ಆರ್ಥಿಕ ಚೇತರಿಕೆಗೆ ಪ್ರಶ್ನಾರ್ಥಕ ಚಿಹ್ನೆಯನ್ನು ನೀಡಿವೆ. ಆದಕಾರಣ ಕೇಂದ್ರಕ್ಕೆ ಲಾಭಾಂಶದ ರೂಪದಲ್ಲಿ ಇಷ್ಟು ಮೊತ್ತವನ್ನು ನೀಡುವುದರಿಂದ ಕೊರೋನ ನಿಯಂತ್ರಿಸಲು ಕೇಂದ್ರದ ಕ್ರಮಗಳಿಗೆ ಒಂದಿಷ್ಟು ನೆರವಾಗಲಿದೆ.

 

ಈ ನಿಟ್ಟಿನಲ್ಲಿ ನಿಬಂಧನೆಗಳು:

1934 ರಲ್ಲಿ ಸ್ಥಾಪನೆಯಾದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ 1934’ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಕೇಂದ್ರ ಬ್ಯಾಂಕ್ ತನ್ನ ಚಟುವಟಿಕೆಗಳಿಂದ ಗಳಿಸಿದ ಲಾಭವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಬೇಕೆಂದು ಈ ಕಾಯ್ದೆಯು ಆದೇಶಿಸುತ್ತದೆ.

 1. ತನ್ನದೇ ಹಣಕಾಸಿನ ವ್ಯವಸ್ಥಾಪಕನಾಗಿ, ಆರ್‌ಬಿಐ ತನ್ನ ಹೆಚ್ಚುವರಿ ಅಥವಾ ಲಾಭಾಂಶದ ರೂಪದಲ್ಲಿ ಬಂದ ಸ್ವಲ್ಪ ಮೊತ್ತವನ್ನು ಪ್ರತಿ ವರ್ಷ ಸರ್ಕಾರಕ್ಕೆ ಆರ್ಥಿಕ ಸಹಾಯಾರ್ಥವಾಗಿ ಪಾವತಿಸುತ್ತದೆ.
 2. ಮೀಸಲು ನಿಧಿಯ ಸಮರ್ಪಕತೆ ಮತ್ತು ಹೆಚ್ಚುವರಿ ವಿತರಣಾ ನೀತಿಯನ್ನು ಪರಿಶೀಲಿಸಲು 2013 ರಲ್ಲಿ ವೈ.ಎಚ್. ​​ಮಾಲೆಗಮ್ (Y H Malegam) ಅವರ ಅಧ್ಯಕ್ಷತೆಯಲ್ಲಿ ನಡೆದ RBI ಮಂಡಳಿಯ ತಾಂತ್ರಿಕ ಸಮಿತಿ ಸಭೆಯು ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಲು ಶಿಫಾರಸು ಮಾಡಿತ್ತು.
 3. ಬಿಮಲ್ ಜಲನ್ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಮೀಸಲು ನಿಧಿಯಾಗಿ ಶೇಕಡ5 ರಷ್ಟು ಮೊತ್ತವನ್ನು ಇರಿಸಿಕೊಳ್ಳಲು RBI ನಿರ್ಧರಿಸಿದೆ. ಈ ಸಮಿತಿಯು ಮೀಸಲು ನಿಧಿಯ ಪ್ರಮಾಣವು ಶೇಕಡ 6.5 ರಿಂದ 5.5 ನಡುವೆ ಇರಬೇಕೆಂದು ಶಿಫಾರಸು ಮಾಡಿತ್ತು.

 

RBI ಗಳಿಕೆ:

 1. ಅದರ ವಿದೇಶಿ ಕರೆನ್ಸಿ ಸ್ವತ್ತುಗಳ ಮೇಲೆ ಗಳಿಸಿದ ಲಾಭ. ಈ ಪ್ರಯೋಜನಗಳು ಇತರ ಕೇಂದ್ರ ಬ್ಯಾಂಕುಗಳ ಬಾಂಡ್‌ಗಳು ಮತ್ತು ಖಜಾನೆ ಬಿಲ್‌ಗಳ ಅಥವಾ ಉನ್ನತ ಮಟ್ಟದ ಪ್ರಮಾಣೀಕೃತ ಸೆಕ್ಯುರಿಟಿಗಳ ರೂಪದಲ್ಲಿರಬಹುದು ಮತ್ತು ಇತರ ಕೇಂದ್ರ ಬ್ಯಾಂಕುಗಳೊಂದಿಗೆ ಠೇವಣಿ ರೂಪದಲ್ಲಿರಬಹುದು.
 2. ಸ್ಥಳೀಯ ರೂಪಾಯಿ ಮೌಲ್ಯದ ಸರ್ಕಾರಿ ಬಾಂಡ್‌ಗಳು ಅಥವಾ ಸೆಕ್ಯುರಿಟಿಗಳ ಠೇವಣಿಗಳ ಮೇಲಿನ ಬಡ್ಡಿ, ಮತ್ತು ರಾತ್ರಿಯಂತಹ ಅಲ್ಪಾವಧಿಯ ಅವಧಿಗೆ ಬ್ಯಾಂಕುಗಳಿಗೆ ನೀಡಲಾಗುವ ಸಾಲಗಳ ಮೇಲಿನ ಬಡ್ಡಿ.
 3. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಸಾಲಗಳನ್ನು ನಿರ್ವಹಿಸಲು ಪಡೆಯುವ ನಿರ್ವಹಣಾ ಕಮಿಷನ್.

 

RBI ವೆಚ್ಚ:

ಕರೆನ್ಸಿ ನೋಟುಗಳ ಮುದ್ರಣ ಮತ್ತು ಅದರ ಸಿಬ್ಬಂದಿ ವೆಚ್ಚ.

ಇದಲ್ಲದೆ, ರಿಸರ್ವ್ ಬ್ಯಾಂಕ್ ದೇಶಾದ್ಯಂತ ಸರ್ಕಾರದ ಪರವಾಗಿ ವಹಿವಾಟು ನಡೆಸಲು ಬ್ಯಾಂಕುಗಳಿಗೆ ಮತ್ತು ಈ ಕೆಲವು ಸಾಲಗಳಿಗೆ ಬ್ಯಾಂಕುಗಳು ಸೇರಿದಂತೆ ಪ್ರಾಥಮಿಕ ವಿತರಕರಿಗೆ ಅಂಡರ್ ರೈಟ್ (underwriting) ಮಾಡಲು ಕಮಿಷನ್ ಪಾವತಿಸುತ್ತದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

DRDO ನ ಕೋವಿಡ್ -19 ಪ್ರತಿಕಾಯ ಪತ್ತೆ ಕಿಟ್:


(DRDO’s Covid-19 antibody detection kit)

ಸಂದರ್ಭ:

ಡಿಪ್ಕೋವನ್’(Dipcovan) ಎಂಬ ಕೋವಿಡ್ -19 ಪ್ರತಿಕಾಯ ಪತ್ತೆ ಕಿಟ್(antibody detection kit) ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಅಂಡ್ ಅಲೈಡ್ ಸೈನ್ಸಸ್ (DIPAS) ಪ್ರಯೋಗಾಲಯವು ಅಭಿವೃದ್ಧಿಪಡಿಸಿದೆ.

 

ಡಿಪ್ಕೋವನ್’ ಬಗ್ಗೆ:

 1. ‘ಡಿಪ್ಕೋವನ್’ ಕಿಟ್ SARS-CoV-2 ವೈರಸ್ ಸ್ಪೈಕ್‌ಗಳನ್ನು ಹಾಗೂ ನ್ಯೂಕ್ಲಿಯೊಕ್ಯಾಪ್ಸಿಡ್ (S&N) ಪ್ರೋಟೀನ್‌ಗಳನ್ನು 97 ಪ್ರತಿಶತ ಹೆಚ್ಚಿನ ಸಂವೇದನೆ ಮತ್ತು 99 ಪ್ರತಿಶತ ನಿರ್ದಿಷ್ಟತೆಯೊಂದಿಗೆ ಪತ್ತೆ ಮಾಡುತ್ತದೆ.
 2. ಈ ಕಿಟ್‌ನ ಶೆಲ್ಫ್ ಜೀವಿತಾವಧಿ 18 ತಿಂಗಳುಗಳು.
 3. ನವದೆಹಲಿಯ ವ್ಯಾನ್ಗಾರ್ಡ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.
 4. ಪ್ರತಿಕಾಯ ಪತ್ತೆ ಕಿಟ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ICMR) ಏಪ್ರಿಲ್ 2021 ರಲ್ಲಿ ಅನುಮೋದಿಸಿತ್ತು.

 

ಪ್ರತಿಕಾಯಗಳು:

 1. ಪ್ರತಿಕಾಯಗಳನ್ನು ಇಮ್ಯುನೊಗ್ಲಾಬ್ಯುಲಿನ್ (Immunoglobulin) ಎಂದೂ ಕರೆಯುತ್ತಾರೆ. ಇದು ಪ್ರತಿಜನಕ (antigens) ಎಂಬ ಬಾಹ್ಯ ವಸ್ತುವಿನ ಉಪಸ್ಥಿತಿಗೆ ಪ್ರತಿಕ್ರಿಯೆಯಾಗಿ ಪ್ರತಿರಕ್ಷಣಾ ವ್ಯವಸ್ಥೆಯಿಂದ ಉತ್ಪತ್ತಿಯಾಗುವ ರಕ್ಷಣಾತ್ಮಕ ಪ್ರೋಟೀನ್ ಆಗಿದೆ.
 2. ದೇಹದಿಂದ ಪ್ರತಿಜನಕಗಳನ್ನು ಹೊರಹಾಕಲು, ಪ್ರತಿಕಾಯಗಳು(Antibodies) ಅವುಗಳನ್ನು ಗುರುತಿಸಿ ಅವುಗಳ ಮೇಲೆ ದಾಳಿ ಮಾಡುತ್ತವೆ.

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ವಿಷಯಗಳು: ಗೌಪ್ಯತೆ ನೀತಿ ಕುರಿತು ಸರ್ಕಾರ VS ವಾಟ್ಸಾಪ್:


(Govt vs WhatsApp on privacy policy)

 

ಸಂದರ್ಭ:

ನವೀಕರಿಸಿದ ಗೌಪ್ಯತೆ ನೀತಿ’ (Updated Privacy Policy) ಕುರಿತು ಈ ವರ್ಷದ ಜನವರಿಯಿಂದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ (IT Ministry) ಮತ್ತು ವಾಟ್ಸಾಪ್ ನಡುವೆ ಸಂವಹನ ನಡೆಯುತ್ತಿದೆ.

ಇತ್ತೀಚೆಗೆ, ಸಚಿವಾಲಯವು ವಾಟ್ಸಾಪ್ ಗೆ ತನ್ನ ಇತ್ತೀಚಿನ ಗೌಪ್ಯತೆ ನೀತಿ ನವೀಕರಣಗಳನ್ನು ಹಿಂತೆಗೆದುಕೊಳ್ಳುವಂತೆ  ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಈ ಬಾರಿ ಮೇ 25 ರೊಳಗೆ ಯಾವುದೇ ತೃಪ್ತಿದಾಯಕ ಪ್ರತಿಕ್ರಿಯೆ ಬರದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಚಿವಾಲಯ ಎಚ್ಚರಿಕೆ ನೀಡಿದೆ.

 

ಈ ನೀತಿಯ ಪ್ರಮುಖ ಅಂಶಗಳು:

 1. ತೃತೀಯ ವ್ಯಕ್ತಿಯ ಸೇವೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು: ಬಳಕೆದಾರರು ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ ವಾಟ್ಸಾಪ್ ಸೇವೆಗಳೊಂದಿಗೆ ಸಂಯೋಜಿಸಲ್ಪಟ್ಟ ಇತರ ಫೇಸ್‌ಬುಕ್ ಕಂಪನಿ ಉತ್ಪನ್ನಗಳನ್ನು ಅವಲಂಬಿಸಿದಾಗ, ಬಳಕೆದಾರರ ಕುರಿತ ಅಥವಾ ನೀವು ಇತರರೊಂದಿಗೆ ಯಾವ ವಿಷಯವನ್ನು ಹಂಚಿಕೊಳ್ಳುತ್ತೀರಿ ಎಂಬ ಮಾಹಿತಿಯನ್ನು ಮೂರನೇ ವ್ಯಕ್ತಿಯ ಸೇವೆಗಳು ಪಡೆಯಬಹುದು.
 2. ಹಾರ್ಡ್‌ವೇರ್ ಮಾಹಿತಿ: ಬಳಕೆದಾರರ ಸಾಧನಗಳ ಬ್ಯಾಟರಿ ಮಟ್ಟಗಳು, ಸಿಗ್ನಲ್ ಸಾಮರ್ಥ್ಯ, ಅಪ್ಲಿಕೇಶನ್ ಆವೃತ್ತಿ, ಬ್ರೌಸರ್ ಮಾಹಿತಿ, ಮೊಬೈಲ್ ನೆಟ್‌ವರ್ಕ್, ಸಂಪರ್ಕ ಮಾಹಿತಿ (ಫೋನ್ ಸಂಖ್ಯೆ, ಮೊಬೈಲ್ ಆಪರೇಟರ್ ಅಥವಾ ISP ಸೇರಿದಂತೆ) ಇತ್ಯಾದಿಗಳನ್ನು ವಾಟ್ಸಾಪ್ ಸಂಗ್ರಹಿಸುತ್ತದೆ.
 3. ಖಾತೆಯನ್ನು ಅಳಿಸಲಾಗುತ್ತದೆ: ಅಪ್ಲಿಕೇಶನ್‌ನಲ್ಲಿ ನೀಡಿರುವ ಕಾರ್ಯವಿಧಾನವನ್ನು ಬಳಸದೆ ಬಳಕೆದಾರರು ತಮ್ಮ ಸಾಧನದಿಂದ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆಗೆದುಹಾಕಿದರೆ, ಆ ಬಳಕೆದಾರರ ಮಾಹಿತಿಯನ್ನು ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಗ್ರಹಿಸಲಾಗುತ್ತದೆ.
 4. ಡೇಟಾ ಸಂಗ್ರಹಣೆ: ಇದು ಫೇಸ್‌ಬುಕ್‌ನ ಜಾಗತಿಕ ಮೂಲಸೌಕರ್ಯ ಮತ್ತು ದತ್ತಾಂಶ ಕೇಂದ್ರಗಳನ್ನು ಬಳಸುತ್ತದೆ ಎಂದು ವಾಟ್ಸಾಪ್ ಹೇಳಿದೆ. ಕೆಲವು ಸಂದರ್ಭಗಳಲ್ಲಿ, ಬಳಕೆದಾರರ ಡೇಟಾವನ್ನು ಯುನೈಟೆಡ್ ಸ್ಟೇಟ್ಸ್ ಅಥವಾ ಫೇಸ್‌ಬುಕ್ ಅಂಗಸಂಸ್ಥೆಗಳನ್ನು ಹೊಂದಿರುವ ಸ್ಥಳಗಳಿಗೆ ವರ್ಗಾಯಿಸಬಹುದು ಎಂದು ಸಹ ಹೇಳಲಾಗಿದೆ.
 5. ಸ್ಥಳ: ಬಳಕೆದಾರರು ತಮ್ಮ ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ಬಳಸದಿದ್ದರೂ ಸಹ, ವಾಟ್ಸಾಪ್ ಅವರ ಸಾಮಾನ್ಯ ಸ್ಥಳವನ್ನು (ನಗರ, ದೇಶ) ಅಂದಾಜು ಮಾಡಲು IP ವಿಳಾಸ ಮತ್ತು ಫೋನ್ ನಂಬರ್ ನ ಪ್ರದೇಶ ಕೋಡ್‌ನಂತಹ (Telephone Code) ಇತರ ಮಾಹಿತಿಯನ್ನು ಸಂಗ್ರಹಿಸುತ್ತದೆ.
 6. ಪಾವತಿ ಸೇವೆ: ಯಾವುದೇ ಬಳಕೆದಾರರು ತಮ್ಮ ಪಾವತಿ ಸೇವೆಗಳನ್ನು ಬಳಸಿದರೆ ಅವರು ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿಯನ್ನು ಒಳಗೊಂಡಂತೆ ನಿಮ್ಮ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತಾರೆ ಎಂದು ವಾಟ್ಸಾಪ್ ಹೇಳುತ್ತದೆ.

 

ಸಂಬಂಧಿತ ಕಾಳಜಿಗಳು ಮತ್ತು ಸಮಸ್ಯೆಗಳು / ಟೀಕೆಗಳು:

 ವಾಟ್ಸಾಪ್ ನ ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳು ಮತ್ತು ಅದನ್ನು ಕಾರ್ಯಗತಗೊಳಿಸುವ ವಿಧಾನವು ಭಾರತೀಯ ಬಳಕೆದಾರರಿಗೆ ಮಾಹಿತಿ ಗೌಪ್ಯತೆ, ದತ್ತಾಂಶ ಸುರಕ್ಷತೆ ಮತ್ತು  ಬಳಕೆದಾರರ ಆಯ್ಕೆಯ ಪವಿತ್ರ ಮೌಲ್ಯಗಳನ್ನು ಹಾಳು ಮಾಡುತ್ತದೆ ಎಂದು ಸಚಿವಾಲಯ ಪುನರುಚ್ಚರಿಸಿದೆ.

 1. ವಾಟ್ಸಾಪ್ನ ಹೊಸ ನೀತಿಯು 2019 ರ ಡೇಟಾ ಸಂರಕ್ಷಣಾ ಮಸೂದೆಗೆ ಆಧಾರವನ್ನು ಒದಗಿಸುವ ‘ಶ್ರೀಕೃಷ್ಣ ಸಮಿತಿ’ ವರದಿಯ ಶಿಫಾರಸುಗಳನ್ನು ಕಡೆಗಣಿಸುತ್ತದೆ.
 2. ಡೇಟಾ ಸ್ಥಳೀಕರಣದ ತತ್ವವು ವೈಯಕ್ತಿಕ ಡೇಟಾದ ಹೊರಗಿನ ವರ್ಗಾವಣೆಯನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ, ಇದು ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಯೊಂದಿಗೆ ವಿರೋಧಾಭಾಸಕ್ಕೆ ಕಾರಣವಾಗಬಹುದು.
 3. ಹೊಸ ಗೌಪ್ಯತೆ ನೀತಿ ಜಾರಿಗೆ ಬಂದಾಗ, ವಾಟ್ಸಾಪ್ ಬಳಕೆದಾರರ ಮೆಟಾಡೇಟಾವನ್ನು ಹಂಚಿಕೊಳ್ಳಬಹುದು, ಅಂದರೆ, ಸಂಭಾಷಣೆಯ ಮೂಲ ಸಂದೇಶಗಳನ್ನು ಹೊರತುಪಡಿಸಿ ಎಲ್ಲವನ್ನೂ ಹಂಚಿಕೊಳ್ಳಬಹುದು.
 4. ಬಳಕೆದಾರರು ವಾಟ್ಸಾಪ್ ನ ನವೀಕರಿಸಿದ ಗೌಪ್ಯತೆ ನೀತಿಯನ್ನು ಒಪ್ಪದಿದ್ದರೆ, ಈ ಹೊಸ ನೀತಿ ಜಾರಿಗೆ ಬಂದ ನಂತರ ಅವರು ವಾಟ್ಸಾಪ್ ಅನ್ನು ಬಿಡಬೇಕಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ನ್ಯೂಯಾರ್ಕ್‌ನ ‘ವ್ಯಾಕ್ಸ್ ಮತ್ತು ಸ್ಕ್ರ್ಯಾಚ್’ ಕಾರ್ಯಕ್ರಮ:

 1.  ಇದು ಹೊಸ ವ್ಯಾಕ್ಸಿನೇಷನ್ ಕಾರ್ಯಕ್ರಮವಾಗಿದ್ದು, ಇದರ ಅಡಿಯಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ರಾಜ್ಯವು ನಿರ್ವಹಿಸುವ ಹತ್ತು ತಾಣಗಳಲ್ಲಿ ಯಾವುದಾದರೂ ಒಂದು ತಾಣವನ್ನು ಲಸಿಕೆ ಪಡೆಯಲು ಆಯ್ಕೆ ಮಾಡಿದರೆ ಅವರಿಗೆ ಉಚಿತ ಲಾಟರಿ ಟಿಕೆಟ್ ನೀಡಲಾಗುತ್ತದೆ.
 2. ‘ವ್ಯಾಕ್ಸ್ ಮತ್ತು ಸ್ಕ್ರ್ಯಾಚ್’ ಕಾರ್ಯಕ್ರಮದಡಿ, ರಾಜ್ಯಾದ್ಯಂತ ಚಿಲ್ಲರೆ ವ್ಯಾಪಾರಿಗಳು $ 20 ಕ್ಕೆ ಮಾರಾಟ ಮಾಡುವ ಲಾಟರಿ ಟಿಕೆಟ್‌ಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ನೀಡಲಾಗುತ್ತದೆ.

ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನ 2021:

 1. ಪ್ರತಿ ವರ್ಷ ಮೇ 22 ಅನ್ನು ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನವಾಗಿ (International Day for Biological Diversity) ಆಚರಿಸಲಾಗುತ್ತದೆ.
 2. ಅಂತರರಾಷ್ಟ್ರೀಯ ಜೀವವೈವಿಧ್ಯ ದಿನ 2021 ರ ವಿಷಯ: ‘ನಾವು ಪರಿಹಾರದ ಭಾಗ’(We’re part of the solution).

ಹಿನ್ನೆಲೆ:

‘ಅಂತರರಾಷ್ಟ್ರೀಯ ಜೀವವೈವಿಧ್ಯ ದಿನ’ ಆಚರಿಸುವ ನಿರ್ಣಯವನ್ನು 1992 ರಲ್ಲಿ ಅಂಗೀಕರಿಸಲಾಯಿತು. 1993 ರಲ್ಲಿ ಪ್ರಾರಂಭವಾದ ಈ ದಿನದ ಆಚರಣೆಯು ಪ್ರತಿವರ್ಷ ಡಿಸೆಂಬರ್ 29 ರಂದು 2000 ರವರೆಗೆ, ಆಚರಿಸಲಾಗುತ್ತಿತ್ತು. ಜೈವಿಕ ವೈವಿಧ್ಯತೆಯ ಸಮಾವೇಶವು ಜಾರಿಗೆ ಬಂದ ದಿನವನ್ನು ಆಚರಿಸಲು ಇದನ್ನು ಡಿಸೆಂಬರ್ 29 ರಂದು ಗುರುತಿಸಲಾಯಿತು.

ನಂತರ, ರಿಯೊ ಭೂ ಶೃಂಗಸಭೆಯಲ್ಲಿ ಸಮಾವೇಶವನ್ನು ಮೇ 22 ರಂದು ಅಂಗೀಕರಿಸಿದ ನೆನಪಿಗಾಗಿ ‘ಅಂತರರಾಷ್ಟ್ರೀಯ ಜೀವವೈವಿಧ್ಯ ದಿನ’ ವನ್ನು ಪ್ರತಿವರ್ಷ ಮೇ 22ಕ್ಕೆ ಆಚರಿಸಲು ನಿರ್ಧರಿಸಲಾಯಿತು.

 ಕಲಾಕ್ಷೇತ್ರ ಪ್ರತಿಷ್ಠಾನ:

 1. ಕಲಾಕ್ಷೇತ್ರವು ಹೆಸರೇ ಸೂಚಿಸುವಂತೆ ಕಲಾತ್ಮಕ ಉದ್ಯಮಗಳಿಗೆ ಕೇಂದ್ರವಾಗಿದೆ.
 2. ಇದು ಕಲೆ ಮತ್ತು ಸಾಂಸ್ಕೃತಿಕ ಅಕಾಡೆಮಿಯಾಗಿದ್ದು, ಭಾರತೀಯ ಕಲೆ ಮತ್ತು ಕರಕುಶಲ ಕಲೆಗಳಲ್ಲಿ ಸಾಂಪ್ರದಾಯಿಕ ಮೌಲ್ಯಗಳ ಸಂರಕ್ಷಣೆಗೆ ಮೀಸಲಾಗಿರುತ್ತದೆ, ವಿಶೇಷವಾಗಿ ಭರತನಾಟ್ಯ ನೃತ್ಯ ಮತ್ತು ಗಾಂಧರ್ವೇದ ಸಂಗೀತ ಕ್ಷೇತ್ರದಲ್ಲಿ.
 3. ಇದನ್ನು ರುಕ್ಮಿನಿ ದೇವಿ ಅರುಂಡಲೆ ಎಂಬ ಉದ್ಯಮಶೀಲ ದೂರದೃಷ್ಟಿಯ ಮಹಿಳೆ 1936 ರಲ್ಲಿ ಸ್ಥಾಪಿಸಿದರು.
 4. ಭಾರತೀಯ ಸಂಪ್ರದಾಯಗಳ ಸಾರವು ಕಲಾತ್ಮಕ ಶಿಕ್ಷಣದ ಮೂಲಕ ಅಭಿವ್ಯಕ್ತಿಯಾಗುವಂತಹ ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಅವರ ಕನಸಿಗೆ ಈ ಸಂಸ್ಥೆಯು ಸಾಕ್ಷಿಯಾಗಿದೆ.
 5. ಚೆನ್ನೈನಲ್ಲಿರುವ ಕಲಾಕ್ಷೇತ್ರ ಪ್ರತಿಷ್ಠಾನವು ಇಂದು ಲಲಿತಕಲೆಗಳ ಅಧ್ಯಯನ ಮತ್ತು ಕಾರ್ಯಕ್ಷಮತೆಗೆ ಪ್ರಮುಖ ಕೇಂದ್ರವಾಗಿದೆ.
 6. 1994 ರಲ್ಲಿ, ಕಲಾಕ್ಷೇತ್ರ ಪ್ರತಿಷ್ಠಾನವನ್ನು ಭಾರತದ ಸಂಸತ್ತಿನ ಕಾಯಿದೆಯಿಂದ “ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ” ಎಂದು ಗುರುತಿಸಲಾಯಿತು.

 ಬಾವೊ-ಧಾನ್ (Bao-dhaan):

 1. ಇತ್ತೀಚೆಗೆ, ಅಸ್ಸಾಂನಲ್ಲಿ ಉತ್ಪಾದನೆಯಾಗುವ ‘ಬಾವೊ-ಧನ್’ ನ ಮೊದಲ ಬ್ಯಾಚ್ ಅನ್ನು ಅಮೆರಿಕಕ್ಕೆ ಕಳುಹಿಸಲಾಯಿತು.
 2. ಕಬ್ಬಿಣಾಂಶ ಭರಿತ ‘ಕೆಂಪು ಅಕ್ಕಿ’ ಯನ್ನು ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಲ್ಲಿ ಬೆಳೆಯಲಾಗುತ್ತದೆ.
 3. ಈ ವೈವಿಧ್ಯಮಯ ‘ಕೆಂಪು ಅಕ್ಕಿ’ಯನ್ನು ‘ಬಾವೊ-ಧನ್’ ಎಂದು ಕರೆಯಲಾಗುತ್ತದೆ, ಇದು ಅಸ್ಸಾಮೀಸ್ ಆಹಾರದ ಅವಿಭಾಜ್ಯ ಅಂಗವಾಗಿದೆ.

ಸುಂದರ್‌ಲಾಲ್ ಬಹುಗುಣ:

 1. ಇತ್ತೀಚೆಗೆ, ಪ್ರಸಿದ್ಧ ಪರಿಸರವಾದಿ ಮತ್ತು ಗಾಂಧಿವಾದಿ ಸುಂದರ್‌ಲಾಲ್ ಬಹುಗುಣ ನಿಧನರಾದರು.
 2. ಹಿಮಾಲಯನ್ ಕಾಡುಗಳನ್ನು ಉಳಿಸಲು 1970 ರ ದಶಕದಲ್ಲಿ ಪ್ರಾರಂಭಿಸಲಾದ ‘ಚಿಪ್ಕೊ ಚಳವಳಿಯ’ ಪ್ರವರ್ತಕರಲ್ಲಿ ಅವರು ಒಬ್ಬರು.
 3. ಶ್ರೀ ಬಹುಗುಣ ರವರು 1980 ರ ದಶಕದಲ್ಲಿ ಹಿಮಾಲಯದಲ್ಲಿ ದೊಡ್ಡ ಅಣೆಕಟ್ಟುಗಳ ನಿರ್ಮಾಣದ ವಿರುದ್ಧ ಅಭಿಯಾನ ನಡೆಸಿದರು.
 4. ಅವರು ತೆಹ್ರಿ ಅಣೆಕಟ್ಟು ನಿರ್ಮಾಣವನ್ನು ತೀವ್ರವಾಗಿ ವಿರೋಧಿಸಿದರು ಮತ್ತು ಅದರ ವಿರುದ್ಧ ಎರಡು ಬಾರಿ ದೀರ್ಘಕಾಲದ ಉಪವಾಸ ಸತ್ಯಾಗ್ರಹ ಮಾಡಿದರು, ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.
 5. ಅಂದಿನ ಉತ್ತರಪ್ರದೇಶದ ಭಾಗವಾಗಿದ್ದ ತೆಹ್ರಿ ಗರ್ವಾಲ್‌ನಲ್ಲಿ ನಿಷೇಧವನ್ನು ಜಾರಿಗೆ ತರಲು ಮಹಿಳಾ ಗುಂಪುಗಳು ಅಥವಾ ಮಹಿಲಾ ಮಂಡಲ್‌ಗಳ ಆಂದೋಲನವನ್ನು ಅವರು ಮುನ್ನಡೆಸಿದ್ದರು.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos