Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 21ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಬಿಳಿ ಶಿಲೀಂಧ್ರ.

2. ಕಳಪೆ ಆರೋಗ್ಯ ಮೂಲಸೌಕರ್ಯಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ವಿಶ್ವ ಜೇನುನೊಣ ದಿನ.

2. ಮೈಲಾಬ್ ಕೋವಿಸೆಲ್ಫ್ ಎಂದರೇನು?

3. ಹಿಮನದಿಗಳ ಮರಳುವಿಕೆಯಿಂದಾಗಿ ಒಡೆದ ವಿಶ್ವದ ಅತಿದೊಡ್ಡ ಮಂಜುಗಡ್ಡೆ, ಐಸ್ಬರ್ಗ್ A -76.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕಾರ್ಪ್ಸ್ ಫ್ಲವರ್.

2. ನ್ಯೂ ಬಿಗ್ 5 ಪ್ರೊಜೆಕ್ಟ್.

3. ಟಿಬೆಟ್ ಹೆದ್ದಾರಿಯನ್ನು ಪೂರ್ಣಗೊಳಿಸಿದ ಚೀನಾ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಬಿಳಿ ಶಿಲೀಂಧ್ರ:


(White fungus)

 

ಸಂದರ್ಭ:

ಇತ್ತೀಚೆಗೆ, ಬಿಹಾರದ ಪಾಟ್ನಾದಲ್ಲಿ ಕನಿಷ್ಠ ನಾಲ್ಕು ಬಿಳಿ ಶಿಲೀಂಧ್ರ (White fungus), ಅಂದರೆ ‘ಕ್ಯಾಂಡಿಡಿಯಾಸಿಸ್’ (Candidiasis) ಪ್ರಕರಣಗಳು ಪತ್ತೆಯಾಗಿವೆ.

 

ಬಿಳಿ ಶಿಲೀಂಧ್ರ’ ಎಂದರೇನು ಮತ್ತು ಅದರ ಲಕ್ಷಣಗಳು ಯಾವುವು?

 1. ವ್ಯಕ್ತಿಗಳಲ್ಲಿನ ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಅಥವಾ ರೋಗಕಾರಕ ವಸ್ತುಗಳನ್ನು ಒಳಗೊಂಡಿರುವ ದ್ರವ ಅಥವಾ ನೀರಿನಂತಹ ಪದಾರ್ಥಗಳ ಸಂಪರ್ಕಕ್ಕೆ ವ್ಯಕ್ತಿಗಳು ಒಡ್ಡಿಕೊಳ್ಳುವುದರಿಂದ ಈ ಸೋಂಕು ಹರಡಬಹುದು.
 2. ‘ಬಿಳಿ ಶಿಲೀಂಧ್ರ’ ಹೊಂದಿರುವ ರೋಗಿಗಳಲ್ಲಿ ಕೋವಿಡ್ ತರಹದ ಲಕ್ಷಣಗಳು ಕಂಡುಬರುತ್ತವೆ ಆದರೆ ಅವರ ಪರೀಕ್ಷೆಯ ಫಲಿತಾಂಶವು ನಕಾರಾತ್ಮಕವಾಗಿರುತ್ತದೆ; ಈ ಸೋಂಕನ್ನು ಸಿಟಿ-ಸ್ಕ್ಯಾನ್ ಅಥವಾ ಎಕ್ಸರೆ ಮೂಲಕ ಗುರುತಿಸಬಹುದು.
 3. ಈ ರೋಗದ ನಿಖರ ಕಾರಣ ಇನ್ನು ತಿಳಿದಿಲ್ಲ.

 

ಪರಿಣಾಮಗಳು:

‘ಬಿಳಿ ಶಿಲೀಂಧ್ರ’ವು, ಮಾನವರ ಶ್ವಾಸಕೋಶದ ಜೊತೆಗೆ ಉಗುರುಗಳು, ಚರ್ಮ, ಹೊಟ್ಟೆ, ಮೂತ್ರಪಿಂಡಗಳು, ಮೆದುಳು, ಗುಪ್ತಾಂಗಗಳು ಮತ್ತು ಬಾಯಿಯಂತಹ ದೇಹದ ಇತರ ಭಾಗಗಳಿಗೆ ಸೋಂಕು ಉಂಟುಮಾಡುತ್ತದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಕಳಪೆ ಆರೋಗ್ಯ ಮೂಲಸೌಕರ್ಯಗಳು:


(The fault line of poor health infrastructure)

ಸಂದರ್ಭ:

ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ದೇಶದ ಆರೋಗ್ಯ ಮೂಲಸೌಕರ್ಯದ ಅತ್ಯಂತ ಕಳಪೆ ಸ್ಥಿತಿಯನ್ನು ಬಹಿರಂಗಪಡಿಸಿದೆ.

 

ಭಾರತದ ಆರೋಗ್ಯ ಮೂಲಸೌಕರ್ಯದ ಪ್ರಸ್ತುತ ಸ್ಥಿತಿ – ವಿಶ್ವ ಬ್ಯಾಂಕ್ ಅಂಕಿಅಂಶಗಳು:

 1. 2017 ರಲ್ಲಿ ಭಾರತದಲ್ಲಿ 100,000 ಜನಸಂಖ್ಯೆಗೆ 85.7 ವೈದ್ಯರಿದ್ದರು. ಆದರೆ, ಅದೇ ವರ್ಷದಲ್ಲಿ, ಅಷ್ಟೇ ಜನಸಂಖ್ಯೆಗೆ ವೈದ್ಯರ ಸಂಖ್ಯೆ ಪಾಕಿಸ್ತಾನದಲ್ಲಿ 98, ಶ್ರೀಲಂಕಾದಲ್ಲಿ 100 ಮತ್ತು ಜಪಾನ್‌ನಲ್ಲಿ 241 ಆಗಿತ್ತು.
 2. ಭಾರತವು ಒಂದು ಲಕ್ಷ ಜನಸಂಖ್ಯೆಗೆ 53 ಹಾಸಿಗೆಗಳನ್ನು ಹೊಂದಿದ್ದು, ಪಾಕಿಸ್ತಾನದಲ್ಲಿ 63, ಬಾಂಗ್ಲಾದೇಶದಲ್ಲಿ 79.5, ಶ್ರೀಲಂಕಾದಲ್ಲಿ 415 ಮತ್ತು ಜಪಾನ್‌ನಲ್ಲಿ 1,298 ಹಾಸಿಗೆಗಳಿವೆ.
 3. ಭಾರತದಲ್ಲಿ, ಒಂದು ಲಕ್ಷ ಜನಸಂಖ್ಯೆಗೆ ಶುಶ್ರೂಷಕಿಯರು ಮತ್ತು ದಾದಿಯರ ಸಂಖ್ಯೆ 172.7 ಆಗಿದ್ದು, ಶ್ರೀಲಂಕಾದಲ್ಲಿ 220, ಬಾಂಗ್ಲಾದೇಶದಲ್ಲಿ 40, ಪಾಕಿಸ್ತಾನದಲ್ಲಿ 70 ಮತ್ತು ಜಪಾನ್‌ನಲ್ಲಿ 1,220 ರಷ್ಟಿದೆ.
 4. ವಿಶ್ವದ ಎಲ್ಲಾ ದೇಶಗಳಿಗೆ ಹೋಲಿಸಿದರೆ, ಆರೋಗ್ಯ ವೆಚ್ಚಕ್ಕಾಗಿ ಭಾರತವು ಅತಿ ಹೆಚ್ಚು ‘ಔಟ್ ಆಫ್ ಪಾಕೆಟ್’ (out-of-pocket- OOP) ವೆಚ್ಚವನ್ನು (ಅಂದರೆ ರೋಗಿಗಳು ತಮ್ಮ ಖರ್ಚುವೆಚ್ಚಗಳನ್ನು ತಾವೇ ಹೊಂದಿಸಿಕೊಳ್ಳುವುದು) ಹೊಂದಿದೆ. ಭಾರತದಲ್ಲಿ ಒಟ್ಟು ಆರೋಗ್ಯ ವೆಚ್ಚದ 62% ನಷ್ಟನ್ನು ‘ಸ್ವಂತ ಜೇಬಿನಿಂದ ಮಾಡಲಾಗುತ್ತದೆ’.

 

ಇದಕ್ಕೆ ವಾದಗಳು ಮತ್ತು ಕಾರಣಗಳು:

 1. ಕಡಿಮೆ ಸಾರ್ವಜನಿಕ ಆರೋಗ್ಯ ಖರ್ಚು – 2013-14ನೇ ಸಾಲಿನಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 1% ಮತ್ತು 2017-18ನೇ ಸಾಲಿನಲ್ಲಿ ಜಿಡಿಪಿಯ ಕೇವಲ 1.28% ಮಾತ್ರ (ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆರೋಗ್ಯ ಸೇವೆಗಳಿಗೆ ಮಾಡಿದ ಖರ್ಚು ಸೇರಿದಂತೆ) .
 2. ತಾಂತ್ರಿಕ ಪರಿಣತಿಯನ್ನು ಹೊಂದಿರುವ ಎಲ್ಲಾ ಪ್ರಮುಖ ಸಂಸ್ಥೆಗಳು ಕೇಂದ್ರ ನಿಯಂತ್ರಣದಲ್ಲಿರುವುದರಿಂದ ಸಾರ್ವಜನಿಕ ಆರೋಗ್ಯ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಮುಖ ಪಾತ್ರವಿದೆ. ‘ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ (ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ) ಅಥವಾ ‘ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್’ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ನಂತಹ ತಜ್ಞ ಸಂಸ್ಥೆಗಳು ರಾಜ್ಯಗಳಲ್ಲಿ ಇಲ್ಲ.
 3. ‘ತಲಾ ಆರೋಗ್ಯ ವೆಚ್ಚ’ದಲ್ಲಿನ ಸಾಕಷ್ಟು ವ್ಯತ್ಯಾಸದಿಂದಾಗಿ, ನಾವೆಲ್ ಕೊರೊನಾವೈರಸ್ ಸಾಂಕ್ರಾಮಿಕವನ್ನು ಎದುರಿಸಲು ಹಣಕಾಸಿನ ವಿಚಾರವಾಗಿ ರಾಜ್ಯಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ.

 

ತಲಾ ಆರೋಗ್ಯ ವೆಚ್ಚದಲ್ಲಿ ಅಂತರ-ರಾಜ್ಯ ವ್ಯತ್ಯಾಸ (2010-11 ರಿಂದ 2019-20ರ ನಡುವೆ):

 1. ಎಲ್ಲಾ ವರ್ಷಗಳಲ್ಲಿ ತಲಾ ಆರೋಗ್ಯ ವೆಚ್ಚದಲ್ಲಿ, ಕೇರಳ ಮತ್ತು ದೆಹಲಿ ಅಗ್ರ ಸ್ಥಾನಕ್ಕೆ ಹತ್ತಿರದಲ್ಲಿವೆ.
 2. ಎಲ್ಲಾ ವರ್ಷಗಳಲ್ಲಿ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಸತತವಾಗಿ ಶ್ರೇಯಾಂಕದಲ್ಲಿ ಕೆಳಭಾಗದಲ್ಲಿವೆ.
 3. ಈ ವಿಷಯದಲ್ಲಿ ಒಡಿಶಾ ಗಮನಾರ್ಹ ಪ್ರಗತಿ ಸಾಧಿಸಿದೆ. 2010 ರಲ್ಲಿ, ಅದರ ತಲಾ ಆರೋಗ್ಯ ವೆಚ್ಚವು ಉತ್ತರ ಪ್ರದೇಶವನ್ನು ಹೋಲುತ್ತಿತ್ತು, ಆದರೆ ಈಗ ಒಡಿಶಾದ ತಲಾ ಆರೋಗ್ಯ ವೆಚ್ಚವು ಉತ್ತರ ಪ್ರದೇಶಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

 

ಈಗ ಮಾಡಬೇಕಿರುವುದೇನು ಮತ್ತು ಈ ಸಾಂಕ್ರಾಮಿಕ ವನ್ನು ನಿರ್ವಹಿಸುವುದು ಹೇಗೆ?

 1. ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೇಂದ್ರ ಮಟ್ಟದಲ್ಲಿ ಸಂಘಟಿತ ರಾಷ್ಟ್ರೀಯ ಯೋಜನೆಯನ್ನು ರೂಪಿಸಬೇಕು.
 2. ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಲಸಿಕೆಗಳನ್ನು ಖರೀದಿಸುವುದು ಸೇರಿದಂತೆ ಇತರ ಜವಾಬ್ದಾರಿಗಳನ್ನು ಕೇಂದ್ರ ಸರ್ಕಾರ ನಿರ್ವಹಿಸಬೇಕು.
 3. ಲಸಿಕೆಗಳು ಭಾರತಕ್ಕೆ ಬಂದ ನಂತರ, ಅವುಗಳನ್ನು ಅಗತ್ಯ ಆಧಾರಿತ ಮತ್ತು ಪಾರದರ್ಶಕ ರೀತಿಯಲ್ಲಿ ರಾಜ್ಯಗಳಲ್ಲಿ ಸಮನಾಗಿ ವಿತರಿಸಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ವಿಶ್ವ ಜೇನುನೊಣ ದಿನ:


(World Bee Day)

 1. ಮೇ 20 ಅನ್ನು ಪ್ರತಿವರ್ಷ ವಿಶ್ವ ಜೇನುನೊಣ ದಿನವಾಗಿ ಆಚರಿಸಲಾಗುತ್ತದೆ.
 2. 1734 ರಲ್ಲಿ ಈ ದಿನದಂದು, ‘ಜೇನುಸಾಕಣೆಯ’ ಪ್ರವರ್ತಕ ಆಂಟನ್ ಜಾನಿಯಾ (Anton Janša) ಜನಿಸಿದರು.
 3. ವಿಶ್ವಸಂಸ್ಥೆಯು 2017 ರಲ್ಲಿ ಮೇ 20 ಅನ್ನು ವಿಶ್ವ ಜೇನುನೊಣ ದಿನವೆಂದು ಘೋಷಿಸಿತು. ಈ ಪ್ರಸ್ತಾಪವನ್ನು ಸ್ಲೊವೇನಿಯಾ (Slovenia) ಮಂಡಿಸಿತು.
 4. ವಿಶ್ವ ಬೀ ದಿನ 2021 ರ ವಿಷಯವೆಂದರೆ “ಬಿ ಎಂಗೇಜ್ಡ್: ಬಿಲ್ಡ್ ಬ್ಯಾಕ್ ಬೆಟರ್ ಫಾರ್ ಬೀಸ್” (Bee engaged: Build Back Better for Bees).

 

ಸರ್ಕಾರದ ಪ್ರಯತ್ನಗಳು:

 1. ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯ ಭಾಗವಾಗಿ ಸರ್ಕಾರ ಜೇನುಸಾಕಣೆಯನ್ನು ಉತ್ತೇಜಿಸುತ್ತಿದೆ.
 2. ‘ಸ್ವಾವಲಂಬನೆ ಅಭಿಯಾನ’ ಅಥವಾ ಆತ್ಮ ನಿರ್ಭರ ಅಭಿಯಾನದ ಅಡಿಯಲ್ಲಿ ಜೇನುಸಾಕಣೆಗಾಗಿ ಸರ್ಕಾರ 500 ಕೋಟಿ ರೂ. ನಿಗದಿಪಡಿಸಿದೆ.
 3. ರಾಷ್ಟ್ರೀಯ ಜೇನುಸಾಕಣೆ ಮತ್ತು ಹನಿ ಮಿಷನ್-‘ (National Beekeeping and Honey Mission- NBHM) ಯೋಜನೆಯ ಭಾಗವಾಗಿ, ನಾಲ್ಕು ಮಾಡ್ಯೂಲ್‌ಗಳನ್ನು ‘ರಾಷ್ಟ್ರೀಯ ಜೇನುನೊಣ ಮಂಡಳಿ’ ಅಭಿವೃದ್ಧಿಪಡಿಸಿದೆ ಮತ್ತು 30 ಲಕ್ಷ ರೈತರಿಗೆ ಜೇನುಸಾಕಣೆ ತರಬೇತಿ ನೀಡಲಾಗಿದೆ. ಅವರಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತಿದೆ.
 4. ಸಿಹಿ ಕ್ರಾಂತಿಯ’ ಭಾಗವಾಗಿ ‘ಹನಿ ಮಿಷನ್’ ಅನ್ನು ಸರ್ಕಾರ ಪ್ರಾರಂಭಿಸಿದೆ.
 5. ವಿಶ್ವದ ಅಗ್ರ ಐದು ಜೇನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವಿದೆ.
 6. 2005-06ರ ವರ್ಷಕ್ಕೆ ಹೋಲಿಸಿದರೆ ಜೇನು ಉತ್ಪಾದನೆಯು 242% ಹೆಚ್ಚಾಗಿದೆ ಮತ್ತು ಅದರ ರಫ್ತು 265% ಹೆಚ್ಚಾಗಿದೆ.

 

ಜೇನುಸಾಕಣೆಯ ಮಹತ್ವ:

 1. ಆಹಾರ ಮತ್ತು ಕೃಷಿ ಸಂಸ್ಥೆ’ಯ ಅಂಕಿಅಂಶಗಳ ಪ್ರಕಾರ, 2017-18ರಲ್ಲಿ, ಜೇನು ಉತ್ಪಾದನೆಯ ವಿಷಯದಲ್ಲಿ (64.9 ಸಾವಿರ ಟನ್) ಭಾರತವು ವಿಶ್ವದ ಎಂಟನೇ ಸ್ಥಾನದಲ್ಲಿದ್ದರೆ, 551 ಸಾವಿರ ಟನ್ ಜೇನು ಉತ್ಪಾದನಾ ಮಟ್ಟವನ್ನು ಹೊಂದಿರುವ ಚೀನಾ ಮೊದಲ ಸ್ಥಾನದಲ್ಲಿದೆ.
 2. ಇದಲ್ಲದೆ, ಜೇನುಸಾಕಣೆಯು ರೈತರ ಆದಾಯವನ್ನು ದ್ವಿಗುಣಗೊಳಿಸುವ 2022 ರ ಗುರಿಯನ್ನು ಸಾಧಿಸಲು ಗಮನಾರ್ಹವಾಗಿ ಕೊಡುಗೆ ನೀಡಬಹುದು.

  

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು

ಮೈಲಾಬ್ ಕೋವಿಸೆಲ್ಫ್ ಎಂದರೇನು?


(What is Mylab Coviself?)

 

ಸಂದರ್ಭ:

ಕೋವಿಡ್ -19 ಸೋಂಕು ಪತ್ತೆಗಾಗಿ ರಾಪಿಡ್ ಆಂಟಿಜನ್ ಪರೀಕ್ಷೆಯನ್ನು(RAT) ಮನೆಯಲ್ಲಿ ಕೈಗೊಳ್ಳುವುದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ಅನುಮೋದನೆ ನೀಡಿದ ಭಾರತದ ಮೊದಲ ಕೋವಿಡ್ -19 ಸ್ವಯಂ ಪರೀಕ್ಷಾ ಕಿಟ್ ಇದಾಗಿದೆ.

 

 1. ಇದರರ್ಥ ಯಾವುದೇ ವ್ಯಕ್ತಿಯು ತಮ್ಮ ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಅದನ್ನು SARS-CoV-2 ನ ಪತ್ತೆಗಾಗಿ ಈ ಮಾದರಿಗಳನ್ನು ಪರೀಕ್ಷಿಸಬಹುದು.
 2. ಈ ರೀತಿಯ ಸ್ವಯಂ-ಪರೀಕ್ಷಾ ಕಿಟ್ ನ ಬಳಕೆಯನ್ನು ಅಮೇರಿಕಾ ಕಳೆದ ವರ್ಷದ ನವೆಂಬರ್ ನಲ್ಲಿ ಮೊದಲು ಅನುಮೋದಿಸಿತು. ಇದೇ ರೀತಿಯ ಕಿಟ್‌ಗಳನ್ನು ಯುರೋಪ್ ಮತ್ತು ದಕ್ಷಿಣ ಕೊರಿಯಾದಲ್ಲಿ ಅನುಮೋದಿಸಲಾಗಿದೆ.

 

ಕೋವಿಸೆಲ್ಫ್ ಕುರಿತು:

 1. ಕೋವಿಸೆಲ್ಫ್ ಅನ್ನು ಪುಣೆ ಮೂಲದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ (MyLab Discovery Solutions) ಎಂಬ ಆಣ್ವಿಕ ಕಂಪನಿಯು  (molecular company) ಅಭಿವೃದ್ಧಿಪಡಿಸಿದೆ.
 2. ಇದು ‘ರಾಪಿಡ್ ಆಂಟಿಜೆನ್ ಟೆಸ್ಟ್’ (ಕ್ಷಿಪ್ರ ಪ್ರತಿಜನಕ ಪರೀಕ್ಷೆ) ಅನ್ನು ಬಳಸುತ್ತದೆ, ಇದರಲ್ಲಿ ವೈರಸ್ ಅನ್ನು ಪತ್ತೆಹಚ್ಚಲು ಮೂಗಿನಿಂದ ತೆಗೆದ ದ್ರವದ ಮಾದರಿಯನ್ನು ಪರೀಕ್ಷಿಸಲಾಗುತ್ತದೆ ಮತ್ತು ಇದು 15 ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀಡುತ್ತದೆ.
 3. ಈ ಪರೀಕ್ಷೆಯು ಕೇವಲ ಎರಡು ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.
 4. ಆದರೆ, ಮನಬಂದಂತೆ ರಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಕೈಗೊಳ್ಳಬಾರದು. ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳು ಮತ್ತು ಕೋವಿಡ್ 19 ರೋಗಿಗಳ ಜೊತೆ ನಿಕಟ ಸಂಪರ್ಕದಲ್ಲಿ ಇದ್ದವರು ಮಾತ್ರ ಈ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂದು ಐಸಿಎಂಆರ್ ಹೇಳಿದೆ.

 

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಬಳಸಲು ಸುಲಭವಾದ ಈ ಪರೀಕ್ಷೆಯ ಕಿಟ್ ಮೈಲ್ಯಾಬ್‌ನ ಕೃತಕ ಬುದ್ಧಿಮತ್ತೆ-ಚಾಲಿತ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಸಂಯೋಜನೆಗೊಂಡಿರುತ್ತದೆ. ಆ ಮೂಲಕ ಬಳಕೆದಾರರು ಪರೀಕ್ಷಾ ಫಲಿತಾಂಶವನ್ನು ‘ಪಾಸಿಟಿವ್’ ಅಥವಾ ನೆಗೆಟಿವ್ ಎಂದು ಸ್ವೀಕರಿಸಿದಾಗ, ಅದನ್ನು ನೇರವಾಗಿ ICMR ಗೆ ಕಳುಹಿಸಬಹುದು, ಅಲ್ಲಿಂದ ಮುಂದಿನ ಕ್ರಮಕ್ಕಾಗಿ ನಿರ್ದೇಶನಗಳನ್ನು ಸ್ವೀಕರಿಸಬಹುದು. ಇಲ್ಲಿ ರೋಗಿಗಳ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಹಾಗೂ ಎಲ್ಲ ವಿವರಗಳು ಸುರಕ್ಷಿತವಾಗಿರುತ್ತದೆ ಎಂದು ICMR ತಿಳಿಸಿದೆ.

 

ಅದರ ಪರವಾದ ವಾದಗಳು:

 1. ಸೋಂಕನ್ನು ಪರೀಕ್ಷಿಸಿಕೊಳ್ಳಲು ಮನೆಗೆ ತಂತ್ರಜ್ಞನನ್ನು ಕರೆಯದೆ ಆಸ್ಪತ್ರೆ ಅಥವಾ ‘ಪ್ರಯೋಗಾಲಯ’ಕ್ಕೆ ಹೋಗುವ ಬದಲು, ಒಬ್ಬ ವ್ಯಕ್ತಿಯು ಮನೆಯಲ್ಲಿಯೇ ಸ್ವಂತವಾಗಿ ಪರೀಕ್ಷೆಯನ್ನು ಮಾಡಿಕೊಳ್ಳುವುದರಿಂದ ಆತನಿಂದ ಇತರರಿಗೆ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ.
 2. ಈ ಸಂದರ್ಭದಲ್ಲಿ, ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸುವುದು ತುಂಬಾ ಸರಳ ಮತ್ತು ತ್ವರಿತವಾಗಿದೆ, ಮತ್ತು ಇದು ಒಟ್ಟಾರೆ ಪರೀಕ್ಷೆಯ ವೆಚ್ಚ ಮತ್ತು ಲ್ಯಾಬ್‌ನಲ್ಲಿ ಅಪಾಯಿಂಟ್ಮೆಂಟ್ ಕಾಯ್ದಿರಿಸುವ ತೊಂದರೆಯನ್ನು ಕಡಿಮೆ ಮಾಡುತ್ತದೆ.
 3. ಸ್ವಯಂ ಪರೀಕ್ಷೆಯು, ಪ್ರಸ್ತುತ 24 ಗಂಟೆಗಳ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿರುವ ಪ್ರಯೋಗಾಲಯಗಳ ಸಿಬ್ಬಂದಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.

  

ವಿರುದ್ಧ ವಾದಗಳು:

 1.  ಅಂತಹ ಪರೀಕ್ಷಾ ಫಲಿತಾಂಶಗಳ ವಿಶ್ವಾಸಾರ್ಹತೆಯು ಒಂದು ಪ್ರಮುಖ ಕಾಳಜಿಯಾಗಿ ಉಳಿದಿದೆ. ಇದರಲ್ಲಿ, ಮಾದರಿಯನ್ನು ಸರಿಯಾಗಿ ಸಂಗ್ರಹಿಸದಿರುವುದು ಅಥವಾ ಸ್ವ್ಯಾಬ್ ಸ್ಟಿಕ್ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು.
 2. ಇದಲ್ಲದೆ, ಕ್ಷಿಪ್ರ ಪ್ರತಿಜನಕ ಪರೀಕ್ಷೆಗಳು ‘ಸುಳ್ಳು ನಕಾರಾತ್ಮಕ ಫಲಿತಾಂಶಗಳನ್ನು’ (False Negatives) ನೀಡುವ ಸಾಧ್ಯತೆ ಹೆಚ್ಚು. ಕೋವಿಡ್ ಸೋಂಕಿತ ವ್ಯಕ್ತಿಯು ಲಕ್ಷಣರಹಿತನಾಗಿದ್ದರೆ (Asymptomatic) ಮತ್ತು ಪರೀಕ್ಷಾ ಫಲಿತಾಂಶಗಳು ‘ನಕಾರಾತ್ಮಕ’ ಎಂದು ತೋರಿಸಿದರೆ, ಅದು ಅವರಿಗೆ ಸುರಕ್ಷತೆಯ ತಪ್ಪು ಸಂದೇಶವನ್ನು ನೀಡುತ್ತದೆ.
 3. ಮೊಬೈಲ್ ಅಪ್ಲಿಕೇಶನ್‌ನ ತಾಂತ್ರಿಕ ನ್ಯೂನತೆಗಳು ಪರೀಕ್ಷೆ ಮತ್ತು ವರದಿ ಮಾಡುವ ಸಂಪೂರ್ಣ ಪ್ರಕ್ರಿಯೆಗೆ ಅಡ್ಡಿಯಾಗಬಹುದು.

 

ಸ್ವಯಂ-ಪರೀಕ್ಷಾ ಕಿಟ್‌ನ ಬಳಕೆಯು ಕೋವಿಡ್ -19 ನಿರ್ವಹಣೆಯಲ್ಲಿ ಕ್ರಾಂತಿಯುಂಟು ಮಾಡುವ ನಿರೀಕ್ಷೆಯಿದೆ:

 1. ಅನೇಕ ರಾಜ್ಯಗಳು ಪ್ರಸ್ತುತ ಕೋವಿಡ್ ಸೋಂಕಿನ ಎರಡನೇ ಎರಡನೆ ಅಲೆಯನ್ನು ಎದುರಿಸುತ್ತಿವೆ, ರೋಗನಿರ್ಣಯದ ಪ್ರಯೋಗಾಲಯಗಳ ಮೇಲೆ ಒತ್ತಡ ಹೇರುತ್ತವೆ. ಕೋವಿಡ್ -19 ಪರೀಕ್ಷೆಯ ಅತ್ಯುತ್ತಮ ಮಾನದಂಡವೆಂದು ಪರಿಗಣಿಸಲಾದ RT-PCR ಪರೀಕ್ಷೆಯು ಫಲಿತಾಂಶಗಳನ್ನು ನೀಡಲು 3-4 ದಿನಗಳನ್ನು ತೆಗೆದುಕೊಳ್ಳುತ್ತದೆ, ಇದರ ಪರಿಣಾಮವಾಗಿ ಆಸ್ಪತ್ರೆಗೆ ದಾಖಲಾಗುವುದು ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸುವುದು ವಿಳಂಬವಾಗುತ್ತದೆ.
 2. ‘ಸ್ವಯಂ-ಪರೀಕ್ಷೆ’ ಕಿಟ್ ಭಾರತದಲ್ಲಿ ಕೋವಿಡ್ -19 ನಿರ್ವಹಣೆಯಲ್ಲಿ ಗಮನಾರ್ಹವಾದ ಬದಲಾವಣೆಯನ್ನು ತರಬಲ್ಲದು ಎಂದು ನಿರೀಕ್ಷಿಸಲಾಗಿದೆ. ಈ ಕಿಟ್‌ಗಳು ಪ್ರಯೋಗಾಲಯಗಳ ಮುಂದೆ ಉದ್ದವಾದ ಸರತಿ ಸಾಲುಗಳನ್ನು ಕಡಿಮೆ ಮಾಡಬಹುದು, ಪರೀಕ್ಷಾ ವೆಚ್ಚವನ್ನು ಕಡಿಮೆ ಮಾಡಬಹುದು, ಮನೆಗಳಿಂದ ಮಾದರಿಗಳನ್ನು ಸಂಗ್ರಹಿಸಲು ಬಳಸುವ ಮಾನವಶಕ್ತಿಯ ಮೇಲಿನ ಹೊರೆ ಕಡಿಮೆ ಮಾಡುತ್ತದೆ.
 3. ಹೆಚ್ಚುವರಿಯಾಗಿ, ‘ಸ್ವಯಂ-ಪರೀಕ್ಷೆ’ ಕಿಟ್‌ಗಳ ಮೂಲಕ 15 ನಿಮಿಷಗಳಲ್ಲಿ ತ್ವರಿತ ಫಲಿತಾಂಶಗಳನ್ನು ಪಡೆಯಬಹುದು, ಇದು ಸೋಂಕಿತ ವ್ಯಕ್ತಿಯನ್ನು ತಕ್ಷಣವೇ ಪ್ರತ್ಯೇಕವಾಗಿ ಇರಿಸುವ ಮೂಲಕ ಚಿಕಿತ್ಸೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
 4. ಈ ಟೆಸ್ಟ್ ಕಿಟ್‌ಗೆ 250 ರೂ., ಆರ್‌ಟಿ-ಪಿಸಿಆರ್ ಪರೀಕ್ಷೆಗೆ 400 ರಿಂದ 1,500 ರೂ. ಗಳ ವರಗೆ ವೆಚ್ಚ ತಗಲುತ್ತದೆ. ವಿವಿಧ ರಾಜ್ಯಗಳಲ್ಲಿ, ಪ್ರಯೋಗಾಲಯದಲ್ಲಿ ಮಾಡುವ ಕ್ಷಿಪ್ರ ಆಂಟಿಜೆನ್ ಪರೀಕ್ಷೆ (rapid antigen test-RAT) ಯ ವೆಚ್ಚವು 300-900 ರೂ. ಗಳ ವರೆಗೆ ಇದೆ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು:

ಹಿಮನದಿಗಳ ಮರಳುವಿಕೆಯಿಂದಾಗಿ ಒಡೆದ ವಿಶ್ವದ ಅತಿದೊಡ್ಡ ಮಂಜುಗಡ್ಡೆ, ಐಸ್ಬರ್ಗ್ A -76:


(Iceberg A-76- World’s largest iceberg breaks off in Antarctica as glaciers retreat)

ಸಂದರ್ಭ:

ಅಂಟಾರ್ಕ್ಟಿಕಾದ ರೊನ್ನೆ ಐಸ್ ಶೆಲ್ಫ್‌ (Ronne Ice Shelf) ನ ಪಶ್ಚಿಮ ಭಾಗದಿಂದ ಒಡೆಯುವ ಮೂಲಕ ಐಸ್‌ಬರ್ಗ್  A -76 ವೆಡ್ಡಲ್ ಸಮುದ್ರ (Weddell Sea) ದಲ್ಲಿ ತೆಲುತ್ತಿದೆ.

 1. ಉಪಗ್ರಹಗಳು ಮತ್ತು ವಿಮಾನಗಳ ಮೂಲಕ ಮಾಡಿದ ಅಳತೆಗಳ ಪ್ರಕಾರ, ಇದು ವಿಶ್ವದ ಅತಿದೊಡ್ಡ ಮಂಜುಗಡ್ಡೆಯಾಗಿದೆ.
 2. ಇದು ಅಂದಾಜು 170 ಕಿಲೋಮೀಟರ್ (105 ಮೈಲಿ) ಉದ್ದ ಮತ್ತು 25 ಕಿಲೋಮೀಟರ್ (15 ಮೈಲಿ) ಅಗಲವನ್ನು ಹೊಂದಿದೆ.

 

ಸಂಬಂಧಿತ ಕಾಳಜಿಗಳು:

ಅಂಟಾರ್ಕ್ಟಿಕಾದಲ್ಲಿನ ಐಸ್ ಶೀಟ್ ಅಥವಾ ಹಿಮ ಪದರವು  ಭೂಮಿಯ ಇತರ ಭಾಗಗಳಿಗಿಂತ ವೇಗವಾಗಿ ಬೆಚ್ಚಗಾಗುತ್ತಿದೆ, ಇದರಿಂದಾಗಿ ಹಿಮ ಮತ್ತು ಹಿಮ ಬಂಡೆಗಳು ಕರಗುತ್ತಿವೆ ಮತ್ತು ವಿಶೇಷವಾಗಿ ವೆಡ್ಡೆಲ್ ಸಮುದ್ರದ ಸುತ್ತಲೂ ಹಿಮನದಿಗಳ ಹಿಮ್ಮೆಟ್ಟುವಿಕೆ ಅಥವಾ ಮರಳುವಿಕೆ (Retreat) ಉಂಟಾಗುತ್ತಿದೆ.

ಹಿಮನದಿಗಳು ಹಿಮ್ಮೆಟ್ಟು ವಾಗ, ಅಂದರೆ ಮರಳುವಾಗ, ಮಂಜುಗಡ್ಡೆಯ ಭಾಗಗಳು ಒಡೆಯುತ್ತವೆ ಅಥವಾ ಭೂಮಿಯ ಪ್ರದೇಶಕ್ಕೆ ಡಿಕ್ಕಿ ಹೊಡೆಯುವುದರ ಮೂಲಕ ಚೂರುಚೂರಾಗುವ ವರೆಗೂ ಹತ್ತಿರದ ಸಾಗರದಲ್ಲಿ ತೇಲುತ್ತವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕಾರ್ಪ್ಸ್ ಫ್ಲವರ್:

(Corpse flower)

ವೈಜ್ಞಾನಿಕ ಹೆಸರು: ಅಮಾರ್ಫೊಫಾಲಸ್ ಟೈಟಾನಮ್ (Amorphophallus titanum).

 1. ಈ ಅಪರೂಪದ ಸಸ್ಯವು ಪ್ರತಿ ಏಳ ರಿಂದ ಹತ್ತು ವರ್ಷಗಳಿಗೊಮ್ಮೆ ಮಾತ್ರ ಅರಳುತ್ತದೆ.
 2. ಈ ಹೂವನ್ನು ವಿಶ್ವದ ಅತಿದೊಡ್ಡ ಹೂವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
 3. ಈ ಸಸ್ಯವು ಇಂಡೋನೇಷ್ಯಾದ ಸ್ಥಳೀಯ ಪ್ರಭೇದವಾಗಿದ್ದರು, ಅದರ ಸಸಿಗಳನ್ನು ವಿಶ್ವಾದ್ಯಂತ ಹಲವಾರು ವರ್ಷಗಳಿಂದ ಪ್ರಾಣಿಸಂಗ್ರಹಾಲಯಗಳು, ಸಸ್ಯಶಾಸ್ತ್ರೀಯ ಉದ್ಯಾನಗಳು ಮತ್ತು ಹಸಿರುಮನೆಗಳಲ್ಲಿ ಬೆಳೆಸಲಾಗುತ್ತಿದೆ.
 4. ‘ಕಾರ್ಪ್ಸ್ ಪುಷ್ಪವು’ / ಮೃತ ಪುಷ್ಪವು ಸರಾಸರಿಯಾಗಿ ಸುಮಾರು ಮೂರರಿಂದ ನಾಲ್ಕು ದಶಕಗಳ ಜೀವಿತಾವಧಿಯನ್ನು ಹೊಂದಿದೆ.
 5. ಕಾರ್ಪ್ಸ್ ಪುಷ್ಪವು, ಕೊಳೆಯುತ್ತಿರುವ ಮಾಂಸ ಅಥವಾ ಕೊಳೆಯುತ್ತಿರುವ ಮೃತದೇಹಗಳಂತಹ ತೀವ್ರವಾದ ದುರ್ವಾಸನೆಗೆ ಹೆಸರುವಾಸಿಯಾಗಿದೆ.
 6. ಇದನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್(International Union for Conservation of Nature-IUCN) 2018 ರಲ್ಲಿ ‘ಅಳಿವಿನಂಚಿನಲ್ಲಿರುವ’ ಸಸ್ಯವೆಂದು ಪಟ್ಟಿಮಾಡಿದೆ.

ನ್ಯೂ ಬಿಗ್ 5 ಪ್ರೊಜೆಕ್ಟ್:

(New Big 5 project)

 1. ಇದು ವಿಶ್ವದ 250 ಕ್ಕೂ ಹೆಚ್ಚು ವನ್ಯಜೀವಿ ಛಾಯಾಗ್ರಾಹಕರ, ಸಂರಕ್ಷಣಾವಾದಿಗಳು ಮತ್ತು ವನ್ಯಜೀವಿ ದತ್ತಿ ಸಂಸ್ಥೆಗಳು ಪ್ರಾರಂಭಿಸಿದ ಅಂತರರಾಷ್ಟ್ರೀಯ ಉಪಕ್ರಮವಾಗಿದೆ.
 2. ಇದನ್ನು ಬ್ರಿಟಿಷ್ ಛಾಯಾಗ್ರಾಹಕ ಗ್ರೇಮ್ ಗ್ರೀನ್ (Graeme Green) ಸ್ಥಾಪಿಸಿದ್ದಾರೆ.
 3. ಪ್ರಪಂಚದ ವನ್ಯಜೀವಿಗಳು ಎದುರಿಸುತ್ತಿರುವ ಅಪಾಯಗಳಾದ ಅವುಗಳ ಆವಾಸಸ್ಥಾನಗಳ ನಾಶ, ಮಾನವ-ವನ್ಯಜೀವಿ ಸಂಘರ್ಷ, ಬೇಟೆಯಾಡುವುದು, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ.
 4. 2020 ರ ಏಪ್ರಿಲ್‌ನಲ್ಲಿ ಪ್ರಾರಂಭಿಸಲಾದ ಈ ಯೋಜನೆಯಲ್ಲಿ ವನ್ಯಜೀವಿ ಪ್ರಿಯರಿಂದ 50,000 ಕ್ಕೂ ಹೆಚ್ಚು ಮತಗಳನ್ನು ಪಡೆದ ಪ್ರಾಣಿಗಳನ್ನು ಪಟ್ಟಿ ಮಾಡಲಾಗುವುದು.

ಸುದ್ದಿಯಲ್ಲಿರಲು ಕಾರಣ?

ಈ ಯೋಜನೆಯಡಿಯಲ್ಲಿ, ಐದು ಪ್ರಾಣಿಗಳು ಅಂದರೆ, ಆನೆಗಳು, ಹಿಮಕರಡಿಗಳು, ಗೊರಿಲ್ಲಾಗಳು, ಹುಲಿಗಳು ಮತ್ತು ಸಿಂಹಗಳನ್ನು ಗುಂಡು ಹಾರಿಸಿ ಕೊಲ್ಲುವುದಕ್ಕಿಂತ ಹೆಚ್ಚಾಗಿ ಅವುಗಳ ಉಳಿವಿಗಾಗಿ ಒಂದು ಚೌಕಟ್ಟನ್ನು ರೂಪಿಸಲು ತೀರ್ಮಾನಿಸಲಾಗಿದೆ.

 1. ಈ ಎಲ್ಲಾ ಐದು ದೊಡ್ಡ ಪ್ರಾಣಿಗಳು (Big 5 animals) ಕೀಸ್ಟೋನ್ ಪ್ರಭೇದಗಳಾಗಿವೆ, ಅವುಗಳ ಆವಾಸಸ್ಥಾನಗಳು, ಜೀವವೈವಿಧ್ಯ ಪರಿಸರ ವ್ಯವಸ್ಥೆಗಳು ಮತ್ತು ಮಾನವರು ಸೇರಿದಂತೆ ಇತರ ಜಾತಿಗಳ ಉಳಿವಿಗಾಗಿ ಪ್ರಕೃತಿಯ ಸಮತೋಲನಕ್ಕೆ ಇವುಗಳ ಉಳಿವು ಅವಶ್ಯಕವಾಗಿದೆ.

ಟಿಬೆಟ್ ಹೆದ್ದಾರಿಯನ್ನು ಪೂರ್ಣಗೊಳಿಸಿದ ಚೀನಾ:

 1. ಈ ಹೆದ್ದಾರಿಯು ಭಾರತದ ಅರುಣಾಚಲ ಪ್ರದೇಶದ ವಿವಾದಿತ ಗಡಿಯಲ್ಲಿರುವ ಚೀನಾ ದೂರದ ಪ್ರದೇಶಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
 2. ಇದು ಯಾರ್ಲುಂಗ್ ಜಾಂಗ್ಬೊ ನದಿಯ ಬೃಹತ್ ಕಣಿವೆಯ ಗ್ರ್ಯಾಂಡ್ ಕ್ಯಾನ್ಯನ್ ಮೂಲಕ ಹಾದುಹೋಗುತ್ತದೆ. ಬ್ರಹ್ಮಪುತ್ರವನ್ನು ಟಿಬೆಟ್‌ನಲ್ಲಿ ಯಾರ್ಲುಂಗ್ ಜಾಂಗ್ಬೊ (Yarlung Zangbo) ಎಂದು ಕರೆಯಲಾಗುತ್ತದೆ.
 3. 2014 ರಲ್ಲಿ ಈ ಹೆದ್ದಾರಿ ನಿರ್ಮಾಣ ಯೋಜನೆಯನ್ನು ಆರಂಭಿಸಲಾಗಿತ್ತು 6009 ಮೀಟರ್ ಆಳವಾದ ಯಾರ್ಲುಂಗ್ ಜಾಂಗ್ಬೊ ವಿಶ್ವದಲ್ಲೇ ಆಳವಾದ ಕಣಿವೆಯಾಗಿದೆ.
 4. ಇದು ಅರುಣಾಚಲದ ಗಡಿಯಲ್ಲಿರುವ ‘ಮೆಡೋಗ್ ಕೌಂಟಿ’(Medog county) ಗೆ “ಎರಡನೇ ಪ್ರಮುಖ ಮಾರ್ಗ”ವಾಗಿದೆ ಮತ್ತು ನಯಿಂಗ್ ಚಿ (Nyingchi) ಯ ಪ್ಯಾಡ್ ಟೌನ್‌ಶಿಪ್ ಅನ್ನು’ ಮಡೋಗ್ ಕೌಂಟಿ’ಯ ಬೈಬಂಗ್‌ (Baibung) ಗೆ ಸಂಪರ್ಕಿಸುತ್ತದೆ.
 5. ಈ ಹೆದ್ದಾರಿಯು, ನಯಿಂಗ್ ಚಿ ಸಿಟಿ ಮತ್ತು ಮೀಡೋಗ್ ನಡುವಿನ ಅಂತರವನ್ನು 346 ಕಿ.ಮೀ.ನಿಂದ 180 ಕಿ.ಮೀ.ಗೆ ಇಳಿಸುತ್ತದೆ ಮತ್ತು ಸಂಚಾರದ ಅವಧಿಯು ಎಂಟು ಗಂಟೆಗಳಷ್ಟು ಕಡಿಮೆಯಾಗಲಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos