Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 18ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ವಿಧಾನ ಪರಿಷತ್ ರಚನೆಗೆ ಮುಂದಾದ ಪಶ್ಚಿಮ ಬಂಗಾಳ ಸರ್ಕಾರ.

2. ಕೊಲಿಜಿಯಂ ವ್ಯವಸ್ಥೆಯ ಮೂಲಕ ಭಾರತೀಯ ಚುನಾವಣಾ ಆಯೋಗದ ಸದಸ್ಯರನ್ನು ನೇಮಕ ಮಾಡಿ.

3. ಒಂದು ಜಿಲ್ಲೆಯನ್ನು ಏಕೆ ಮತ್ತು ಹೇಗೆ ರಚಿಸಲಾಗುತ್ತದೆ?

4. ರಾಜತಾಂತ್ರಿಕ ವಿನಾಯಿತಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಗಳು ಏಕೆ ಕೇಂದ್ರೀಕೃತವಾಗಿವೆ ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

2. ಕೋವಿಡ್ -19 ಚಿಕಿತ್ಸೆಗಾಗಿ, DRDO ಅಭಿವೃದ್ಧಿಪಡಿಸಿದ ಬಾಯಿ ಮೂಲಕ ಸ್ವೀಕರಿಸುವ ಹೊಸ ಔಷಧವಾದ 2-ಡಿಜಿ ಯು ಹೇಗೆ ಕಾರ್ಯನಿರ್ವಹಿಸುತ್ತದೆ?

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸುಲವೇಸಿ.

2. ಎಲ್ಡರ್ ಲೈನ್.

3. ಸಂವೇದನಾ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ವಿಧಾನ ಪರಿಷತ್ ರಚನೆಗೆ ಮುಂದಾದ ಪಶ್ಚಿಮ ಬಂಗಾಳ ಸರ್ಕಾರ:


(West Bengal government to set up a Legislative Council)

 ಸಂದರ್ಭ:

ಇತ್ತೀಚೆಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಪಶ್ಚಿಮ ಬಂಗಾಳ ಸರ್ಕಾರವು ‘ವಿಧಾನ ಪರಿಷತ್’ (Legislative Council) ಅನ್ನು ರಚಿಸಲಿದೆ.

ಮುಂದಿನ ಕ್ರಮ?

‘ವಿಧಾನ ಪರಿಷತ್ತನ್ನು’ ಸ್ಥಾಪಿಸಲು, ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಬೇಕಾಗುತ್ತದೆ ಮತ್ತು ನಂತರ ರಾಜ್ಯಪಾಲರ ಅನುಮೋದನೆ ಪಡೆಯುವುದು ಅಗತ್ಯವಾಗಿದೆ.

ಇದಕ್ಕೂ ಮುನ್ನ, ಪಶ್ಚಿಮ ಬಂಗಾಳದಲ್ಲಿ ‘ಮೇಲ್ಮನೆ’ ಅಂದರೆ ‘ವಿಧಾನ ಪರಿಷತ್ತು’ 1952 ರಲ್ಲಿ ಸ್ಥಾಪನೆಯಾಯಿತು ಮತ್ತು 1969 ರವರೆಗೆ ಅಸ್ತಿತ್ವದಲ್ಲಿತ್ತು ಎಂದು ಮಾಹಿತಿಯಿದೆ.

 

ವಿಧಾನಪರಿಷತ್ತುಗಳು’ ಮತ್ತು ಅವುಗಳ ಪ್ರಾಮುಖ್ಯತೆ:

 1. ಭಾರತವು ಸಂಸದೀಯ ವ್ಯವಸ್ಥೆ (ದ್ವಿಸದನ ಪದ್ಧತಿ) ಯನ್ನು ಹೊಂದಿದೆ, ಅಂದರೆ ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎಂಬ ಎರಪ್ರಾಮುಖ್ಯತೆ,
 2. ರಾಜ್ಯ ಮಟ್ಟದಲ್ಲಿ ಲೋಕಸಭೆಗೆ ಸಮಾನವಾದ ವಿಧಾನಸಭೆ (Legislative Assembly) ಇದೆ; ಮತ್ತು ರಾಜ್ಯಸಭೆಗೆ ಸಮಾನವಾದ ‘ವಿಧಾನಪರಿಷತ್’ (Legislative Council) ಇದೆ.

 

ವಿಧಾನಪರಿಷತ್ ರಚನಾ ಪ್ರಕ್ರಿಯೆ:

ಸಂವಿಧಾನದ 169 ನೇ ವಿಧಿ ಅನ್ವಯ, ಸಂಬಂಧಿಸಿದ ರಾಜ್ಯ ವಿಧಾನಸಭೆಯು ರಾಜ್ಯದಲ್ಲಿ ವಿಧಾನ ಪರಿಷತ್ತನ್ನು ರಚಿಸಲು ಅಥವಾ ರದ್ದುಗೊಳಿಸಲು ವಿಶೇಷ ಬಹುಮತದೊಂದಿಗೆ ಈ ನಿರ್ಣಯವನ್ನು ಅಂಗೀಕರಿಸಿದರೆ, ಸಂಸತ್ತು ಕಾನೂನಿನ ಮೂಲಕ ರಾಜ್ಯದಲ್ಲಿ ವಿಧಾನ ಪರಿಷತ್ತನ್ನು ರಚಿಸಬಹುದು ಅಥವಾ ರದ್ದುಗೊಳಿಸಬಹುದು.

 

ಸದನದಲ್ಲಿ ಸದಸ್ಯರ ಸಂಖ್ಯೆ:

ಭಾರತದ ಸಂವಿಧಾನದ 171 ನೇ ವಿಧಿ (1) ರ ಪ್ರಕಾರ, ವಿಧಾನ ಪರಿಷತ್ತನ್ನು ಹೊಂದಿರುವ ರಾಜ್ಯದ ವಿಧಾನಪರಿಷತ್ ನ ಒಟ್ಟು ಸದಸ್ಯರ ಸಂಖ್ಯೆಯು ಆ ರಾಜ್ಯದ ವಿಧಾನಸಭೆಯ ಒಟ್ಟು ಸದಸ್ಯರ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿರಬಾರದು, ಮತ್ತು ಯಾವುದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ ನಲವತ್ತಕ್ಕಿಂತ ಕಡಿಮೆಯಿರಬಾರದು.

 

ವಿಧಾನ ಪರಿಷತ್ತಿನ ಸದಸ್ಯರ ಚುನಾವಣೆ:

 1. 1/3 ಸದಸ್ಯರನ್ನು ವಿಧಾನಸಭೆಯ ಚುನಾಯಿತ ಸದಸ್ಯರು ಆಯ್ಕೆ ಮಾಡುತ್ತಾರೆ.
 2. 1/3 ಸದಸ್ಯರನ್ನು ರಾಜ್ಯದ ಪುರಸಭೆಗಳು, ಜಿಲ್ಲಾ ಮಂಡಳಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಮಾಡಲಾಗುತ್ತದೆ.
 3. 1/12 ಸದಸ್ಯರು, ಶಿಕ್ಷಕರಿಂದ ಮಾಡಲ್ಪಟ್ಟ ಚುನಾವಣಾ ಕಾಲೇಜಿನಿಂದ ಅಥವಾ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ.
 4. 1/12 ಸದಸ್ಯ, ನೋಂದಾಯಿತ ಪದವೀಧರರನ್ನು ಒಳಗೊಂಡ ಚುನಾವಣಾ ಕಾಲೇಜಿನಿಂದ ಅಥವಾ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ.
 5. ಉಳಿದ 1/6 ಸದಸ್ಯರನ್ನು ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರಿ ಆಂದೋಲನ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಗುರುತಿಸಲಾಗಿರುವ ಪ್ರಖ್ಯಾತ ವ್ಯಕ್ತಿಗಳನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.

 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಕೊಲಿಜಿಯಂ ವ್ಯವಸ್ಥೆಯ ಮೂಲಕ ಭಾರತೀಯ ಚುನಾವಣಾ ಆಯೋಗದ ಸದಸ್ಯರನ್ನು ನೇಮಕ ಮಾಡಿ:


(Appoint ECI members via collegium)

ಸಂದರ್ಭ:

‘ಭಾರತದ ಚುನಾವಣಾ ಆಯೋಗ’ (Election Commission of India- ECI)ದ ಸದಸ್ಯರನ್ನು ನೇಮಕ ಮಾಡಲು ಸ್ವತಂತ್ರ ಕೊಲಿಜಿಯಂ ರಚಿಸುವಂತೆ ಒತ್ತಾಯಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

 1. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಎಂಬ ಸರ್ಕಾರೇತರ ಸಂಸ್ಥೆ ಯು ಈ ಅರ್ಜಿಯನ್ನು ಸಲ್ಲಿಸಿದೆ.

 

ಸ್ವತಂತ್ರ ಕೊಲ್ಜಿಯಂನ ಅವಶ್ಯಕತೆ:

ಚುನಾವಣಾ ಆಯೋಗದ ಸದಸ್ಯರನ್ನು ನೇಮಕ ಮಾಡುವ ಪ್ರಸ್ತುತ ಕಾರ್ಯವಿಧಾನವು ಸಂಪೂರ್ಣವಾಗಿ ಕಾರ್ಯಾಂಗದಿಂದ ಮಾಡಲ್ಪಟ್ಟಿದೆ, ಇದು ಸಂವಿಧಾನದ 324 (2) ನೇ ವಿಧಿಗೆ ಹೊಂದಿಕೆಯಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

 1. ಚುನಾವಣಾ ಆಯೋಗದ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಾಹಕರು ತಮ್ಮ ಇಷ್ಟದ ಆಯುಕ್ತರನ್ನು ಆಯ್ಕೆ ಮಾಡಿ ನೇಮಿಸುವ (Pick and Choose) ವಿಧಾನವು ಮುಖ್ಯವಾಗಿ ಯಾವ ಸ್ವತಂತ್ರ ಉದ್ದೇಶಕ್ಕಾಗಿ ಆಯೋಗದ ರಚನೆಯಾಗಿದೆಯೋ ಅದರ ರಚನೆಯ ಅಡಿಪಾಯವನ್ನು ಉಲ್ಲಂಘಿಸುತ್ತದೆ. ಮತ್ತು, ಆ ಮೂಲಕ, ಚುನಾವಣಾ ಆಯೋಗವನ್ನು ಕಾರ್ಯಂಗದ ಇನ್ನೊಂದು ಶಾಖೆಯನ್ನಾಗಿ ಮಾಡುತ್ತದೆ.

 

ಈ ಸಮಯದ ಅವಶ್ಯಕತೆ:

ಪ್ರಜಾಪ್ರಭುತ್ವವು ನಮ್ಮ ಸಂವಿಧಾನದ ಮೂಲ ರಚನೆಯ ಒಂದು ಅಂಶವಾಗಿದೆ, ಮತ್ತು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ದೇಶದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ರಾಜಕೀಯ ಮತ್ತು /ಅಥವಾ ಕಾರ್ಯನಿರ್ವಾಹಕ / ಕಾರ್ಯಾಂಗದ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು.

 

ಈ ಸಂದರ್ಭದಲ್ಲಿ ವಿವಿಧ ತಜ್ಞರ ಸಮಿತಿಗಳು ಮಾಡಿದ ಶಿಫಾರಸುಗಳು:

 1. 255 ನೇ ಕಾನೂನು ಆಯೋಗದ ವರದಿಯು, ಎಲ್ಲಾ ಚುನಾವಣಾ ಆಯುಕ್ತರನ್ನು ಪ್ರಧಾನಮಂತ್ರಿ, ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಮೂವರು ಸದಸ್ಯರ ಕೊಲಿಜಿಯಂ ಅಥವಾ ಆಯ್ಕೆ ಸಮಿತಿಯೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿಗಳು ನೇಮಕ ಮಾಡಬೇಕು ಎಂದು ಶಿಫಾರಸು ಮಾಡಿದೆ.
 2. ಎರಡನೇ ಆಡಳಿತ ಸುಧಾರಣಾ ಆಯೋಗವು 2007 ರ ಜನವರಿಯಲ್ಲಿ ಸಲ್ಲಿಸಿದ ನಾಲ್ಕನೇ ವರದಿಯಲ್ಲಿ ತಟಸ್ಥ ಮತ್ತು ಸ್ವತಂತ್ರ ಕೊಲಿಜಿಯಂ ರಚನೆಗೆ ಶಿಫಾರಸು ಮಾಡಿದೆ. ಪ್ರಧಾನಿ ನೇತೃತ್ವದ ಈ ಕೊಲಿಜಿಯಂನಲ್ಲಿ, ಲೋಕಸಭಾ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷದ ನಾಯಕ, ಕಾನೂನು ಸಚಿವರು ಮತ್ತು ರಾಜ್ಯಸಭೆಯ ಉಪಾಧ್ಯಕ್ಷರು ಇತರ ಸದಸ್ಯರಾಗಿ ಇರಬೇಕು.
 3. ಡಾ. ದಿನೇಶ್ ಗೋಸ್ವಾಮಿ ಸಮಿತಿ, 1990 ರ ಮೇನಲ್ಲಿ ಸಲ್ಲಿಸಿದ ವರದಿಯಲ್ಲಿ, ಚುನಾವಣಾ ಆಯೋಗಕ್ಕೆ ಆಯುಕ್ತರ ನೇಮಕಾತಿಗಾಗಿ ತಟಸ್ಥ ಅಧಿಕಾರಿಗಳಾದ ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಪ್ರತಿಪಕ್ಷದ ನಾಯಕರೊಂದಿಗೆ ಪರಿಣಾಮಕಾರಿ ಸಮಾಲೋಚನೆ ನಡೆಸಲು ಶಿಫಾರಸು ಮಾಡಿದೆ.
 4. ನ್ಯಾಯಮೂರ್ತಿ ತಾರ್ಕುಂಡೆ ಸಮಿತಿ ತನ್ನ 1975 ರ ವರದಿಯಲ್ಲಿ ಚುನಾವಣಾ ಆಯೋಗದ ಸದಸ್ಯರನ್ನು ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯೊಂದಿಗೆ ಸಮಾಲೋಚಿಸಿ ಅವರ ಸಲಹೆ ಮೇರೆಗೆ ನೇಮಕ ಮಾಡಬೇಕೆಂದು ಶಿಫಾರಸು ಮಾಡಿದ್ದಾರೆ.

 

ಪ್ರಸ್ತುತದ ನೇಮಕಾತಿ ವ್ಯವಸ್ಥೆ:

ನೇಮಕಾತಿಗೆ ಸಂಬಂಧಿಸಿದಂತೆ ಸಾಂವಿಧಾನಿಕ VS ಕಾರ್ಯನಿರ್ವಾಹಕ ಅಧಿಕಾರಗಳು:

ಮುಖ್ಯ ಚುನಾವಣಾ ಆಯುಕ್ತರು’ (CEC) ಮತ್ತು ಇತರ ಚುನಾವಣಾ ಆಯುಕ್ತರ (EC) ನೇಮಕಕ್ಕೆ ಸಂವಿಧಾನವು ಯಾವುದೇ ನಿಗದಿತ ಕಾರ್ಯವಿಧಾನವನ್ನು ಸೂಚಿಸುವುದಿಲ್ಲ.

 1. ಪ್ರಸ್ತುತ, ಮುಖ್ಯ ಚುನಾವಣಾ ಆಯುಕ್ತರು’ ಮತ್ತು ಇತರ ಚುನಾವಣಾ ಆಯುಕ್ತರ ನೇಮಕವನ್ನು ರಾಷ್ಟ್ರಪತಿಗಳು ಪ್ರಧಾನಮಂತ್ರಿ ಮಾಡಿದ ಶಿಫಾರಸುಗಳ ಆಧಾರದ ಮೇಲೆ ಮಾಡುತ್ತಾರೆ. ಆದ್ದರಿಂದ, ‘ಮುಖ್ಯ ಚುನಾವಣಾ ಆಯುಕ್ತರು’ ಮತ್ತು ಇತರ ಚುನಾವಣಾ ಆಯುಕ್ತರ ನೇಮಕವು ರಾಷ್ಟ್ರಪತಿಗಳ ಕಾರ್ಯನಿರ್ವಾಹಕ ಅಧಿಕಾರವಾಗಿದೆ.
 2.  ಆದಾಗ್ಯೂ, 324 (5) ನೇ ವಿಧಿ ಪ್ರಕಾರ, ಚುನಾವಣಾ ಆಯುಕ್ತರ ಸೇವಾ ನಿಯಮಗಳು ಮತ್ತು ಷರತ್ತುಗಳನ್ನು ನಿಯಂತ್ರಿಸುವ ಅಧಿಕಾರ ಸಂಸತ್ತಿಗೆ ಇದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಒಂದು ಜಿಲ್ಲೆಯನ್ನು ಏಕೆ ಮತ್ತು ಹೇಗೆ ರಚಿಸಲಾಗುತ್ತದೆ?


(Why and how of creating a district?)

ಸಂದರ್ಭ:

ಇತ್ತೀಚೆಗೆ, ಪಂಜಾಬ್ ರಾಜ್ಯದ 23 ನೇ ಜಿಲ್ಲೆಯಾಗಿ ಮಲೆರ್ ಕೊಟ್ಲಾವನ್ನು ರಚಿಸಲಾಗಿದೆ.

ಹೊಸ ಜಿಲ್ಲೆಗಳನ್ನು ಹೇಗೆ ರಚಿಸಲಾಗುತ್ತದೆ?

 1. ಹೊಸ ಜಿಲ್ಲೆಗಳನ್ನು ರಚಿಸಲು ಅಥವಾ ಅಸ್ತಿತ್ವದಲ್ಲಿರುವ ಜಿಲ್ಲೆಗಳ ಗಡಿಗಳನ್ನು ಬದಲಾಯಿಸುವ ಅಥವಾ ಅವುಗಳನ್ನು ರದ್ದುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ.
 2. ಈ ಪ್ರಕ್ರಿಯೆಯನ್ನು ಕಾರ್ಯನಿರ್ವಾಹಕ / ಕಾರ್ಯಾಂಗೀಯ ಆದೇಶದ ಮೂಲಕ ಅಥವಾ ರಾಜ್ಯ ವಿಧಾನಸಭೆಯಲ್ಲಿ ಕಾನೂನು ಅಂಗೀಕರಿಸುವ ಮೂಲಕ ಕಾರ್ಯಗತಗೊಳಿಸಬಹುದು.
 3. ಅನೇಕ ರಾಜ್ಯಗಳಲ್ಲಿ ಹೊಸ ಜಿಲ್ಲೆಗಳನ್ನು ರಚಿಸುವ ಸಲುವಾಗಿ, ಕಾರ್ಯನಿರ್ವಾಹಕ ಆದೇಶಕ್ಕೆ ಆದ್ಯತೆ ನೀಡಲಾಗುತ್ತದೆ ಮತ್ತು ಇದಕ್ಕಾಗಿ ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆಯನ್ನು ಮಾತ್ರ ಹೊರಡಿಸಲಾಗುತ್ತದೆ.

 

ಅದು ಹೇಗೆ ಸಹಕಾರಿಯಾಗಿದೆ?

ಉತ್ತಮಆಡಳಿತ ಮತ್ತು ರಾಜ್ಯದ ಆಡಳಿತಾತ್ಮಕದ ದೃಷ್ಟಿಯಿಂದ ಸಣ್ಣ ಜಿಲ್ಲೆಗಳ ರಚನೆಯು ಉತ್ತಮವಾಗಿದೆ ಎಂದು ರಾಜ್ಯಗಳು ವಾದಿಸುತ್ತವೆ. ಉದಾಹರಣೆಗೆ, 2016 ರಲ್ಲಿ, ಅಸ್ಸಾಂ ಸರ್ಕಾರವು  ಮಜುಲಿ ಉಪವಿಭಾಗವನ್ನು “ಆಡಳಿತಾತ್ಮಕ ಅನುಕೂಲ” ಕ್ಕಾಗಿ ಅಧಿಸೂಚನೆ ಹೊರಡಿಸುವ ಮೂಲಕ ‘ಮಜುಲಿ ಜಿಲ್ಲೆ’ ಯನ್ನಾಗಿ ಮೇಲ್ದರ್ಜೆಗೇರಿಸಿತು.

ಇಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಪಾತ್ರವಿದೆಯೇ?

ಜಿಲ್ಲೆಗಳನ್ನು ಬದಲಾಯಿಸುವಲ್ಲಿ ಅಥವಾ ಹೊಸ ಜಿಲ್ಲೆಗಳನ್ನು ರಚಿಸುವಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ. ಈ ನಿಟ್ಟಿನಲ್ಲಿ ರಾಜ್ಯಗಳು ನಿರ್ಧಾರ ತೆಗೆದುಕೊಳ್ಳಲು ಮುಕ್ತವಾಗಿವೆ.

ಆದಾಗ್ಯೂ, ಒಂದು ರಾಜ್ಯವು ಜಿಲ್ಲೆಯ ಅಥವಾ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲು ಬಯಸಿದಾಗ,ಆಗ ಗೃಹ ಸಚಿವಾಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

 1. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೋರಿಕೆಯನ್ನು ಭೂ ವಿಜ್ಞಾನ, ಗುಪ್ತಚರ ಬ್ಯೂರೋ, ಅಂಚೆ ಇಲಾಖೆ, ಭಾರತದ ಭೌಗೋಳಿಕ ಸಮೀಕ್ಷೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ರೈಲ್ವೆ ಸಚಿವಾಲಯ ಇತ್ಯಾದಿ ಇಲಾಖೆಗಳು ಮತ್ತು ಏಜೆನ್ಸಿಗಳಿಗೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ. ಈ ಇಲಾಖೆಗಳು ಮತ್ತು ಏಜೆನ್ಸಿಗಳ ಉತ್ತರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ನಿರಪೇಕ್ಷಣಾ ಪ್ರಮಾಣಪತ್ರವನ್ನು ನೀಡಲಾಗುವುದು.

 

ಪ್ರಸ್ತುತ ಪ್ರವೃತ್ತಿ:

 1. 2011 ರ ಜನಗಣತಿಯ ಪ್ರಕಾರ ದೇಶದಲ್ಲಿ ಒಟ್ಟು 593 ಜಿಲ್ಲೆಗಳಿವೆ.
 2. 2001-2011ರ ನಡುವೆ 46 ಜಿಲ್ಲೆಗಳನ್ನು ರಾಜ್ಯಗಳು ರಚಿಸಿವೆ ಎಂದು ಜನಗಣತಿ ಫಲಿತಾಂಶಗಳು ತೋರಿಸಿವೆ.
 3. 2021 ರ ಜನಗಣತಿಯನ್ನು ಇನ್ನೂ ಮಾಡಬೇಕಾಗಿರುವಾದರೂ, ಭಾರತ ಸರ್ಕಾರ ನಡೆಸುತ್ತಿರುವ ‘ನೋ ಇಂಡಿಯಾ’ (Know India) ಎಂಬ ವೆಬ್‌ಸೈಟ್ ಪ್ರಕಾರ, ಪ್ರಸ್ತುತ ದೇಶದಲ್ಲಿ 718 ಜಿಲ್ಲೆಗಳಿವೆ.
 4. ಜಿಲ್ಲೆಗಳ ಸಂಖ್ಯೆ ಹೆಚ್ಚಾಗಲು ಒಂದು ಕಾರಣವೆಂದರೆ 2014 ರಲ್ಲಿ ಹಿಂದಿನ ಆಂಧ್ರಪ್ರದೇಶವನ್ನು ವಿಭಜಿಸಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಾಗಿ ರಚಿಸಿರುವುದು. ಪ್ರಸ್ತುತ ತೆಲಂಗಾಣದಲ್ಲಿ 33 ಜಿಲ್ಲೆಗಳಿದ್ದರೆ, ಆಂಧ್ರಪ್ರದೇಶ 13 ಜಿಲ್ಲೆಗಳನ್ನು ಹೊಂದಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ರಾಜತಾಂತ್ರಿಕ ವಿನಾಯಿತಿ:


(Diplomatic immunity)

ಸಂದರ್ಭ:

ಕಳೆದ ತಿಂಗಳು, ದಕ್ಷಿಣ ಕೊರಿಯಾದಲ್ಲಿನ ಬೆಲ್ಜಿಯಂ ರಾಯಭಾರಿಯ ಪತ್ನಿಯು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಒಂದು ಅಂಗಡಿಯಲ್ಲಿ ಇಬ್ಬರು ಉದ್ಯೋಗಿಗಳನ್ನು ಹೊಡೆದಿದ್ದರು. ಈಗ,ಆ ರಾಯಭಾರಿಯ ಪತ್ನಿಯು ಕ್ರಿಮಿನಲ್ ಆರೋಪಗಳಿಂದ ತಪ್ಪಿಸಿಕೊಳ್ಳಲು ತಾನು ಪಡೆದ ರಾಜತಾಂತ್ರಿಕ ವಿನಾಯಿತಿ’ (Diplomatic immunity) ಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.

 1. ಈ ಘಟನೆಯು ದಕ್ಷಿಣ ಕೊರಿಯಾದಲ್ಲಿ ಕ್ರೋಧವನ್ನು ಹುಟ್ಟುಹಾಕಿದೆ ಮತ್ತು ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಎಷ್ಟು ಪ್ರಮಾಣದ ಭದ್ರತೆಯನ್ನು ಒದಗಿಸಲಾಗಿದೆ ಎಂಬ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.

 

ರಾಜತಾಂತ್ರಿಕ ವಿನಾಯಿತಿ’ ಎಂದರೇನು?

‘ರಾಜತಾಂತ್ರಿಕ ವಿನಾಯಿತಿ’ ಎಂಬುದು ರಾಜತಾಂತ್ರಿಕರಿಗೆ ಅವರ ನಿಯೋಜನೆಗೊಂಡ ದೇಶದಲ್ಲಿ ಕೆಲವು ಕಾನೂನುಗಳು ಮತ್ತು ತೆರಿಗೆಗಳಿಂದ ನೀಡಲಾಗುವ ವಿನಾಯಿತಿ ಮತ್ತು ಸವಲತ್ತುಗಳಾಗಿವೆ.

ರಾಜತಾಂತ್ರಿಕರು, ಆತಿಥೇಯ ದೇಶದಲ್ಲಿ ಯಾವುದೇ ಭಯ, ಬೆದರಿಕೆ ಅಥವಾ ಒತ್ತಡವಿಲ್ಲದೆ ಕಾರ್ಯನಿರ್ವಹಿಸುವಂತಾಗಲು ಈ ಸಂಪ್ರದಾಯವು ರೂಪುಗೊಂಡಿತು.

 

ಎರಡು ಒಪ್ಪಂದಗಳ ಅಥವಾ ಸಮಾವೇಶಗಳ ಆಧಾರದ ಮೇಲೆ ‘ರಾಜತಾಂತ್ರಿಕ ವಿನಾಯಿತಿ’ ನೀಡಲಾಗುತ್ತದೆ:

 1. ಜನಪ್ರಿಯವಾಗಿ ವಿಯನ್ನಾ ಸಮಾವೇಶ ಎಂದು ಕರೆಯಲ್ಪಡುವ 1961 ರ ರಾಜತಾಂತ್ರಿಕ ಸಂಬಂಧಗಳ ಸಮಾವೇಶ (Convention on Diplomatic Relations).
 2. ರಾಯಭಾರ ಸಂಬಂಧಗಳ ಸಮಾವೇಶ (Convention on Consular Relations), 1963.

ಈ ಸಮಾವೇಶಗಳ ಒಪ್ಪಂದಗಳನ್ನು 187 ದೇಶಗಳು ಅಂಗೀಕರಿಸಿವೆ (Ratified), ಅಂದರೆ ಈ ಒಪ್ಪಂದವನ್ನು, ಈ ಸಮಾವೇಶಕ್ಕೆ ಸಹಿ ಹಾಕಿದ ಪ್ರತಿಯೊಂದು ದೇಶದ ಕಾನೂನು ಚೌಕಟ್ಟಿನೊಳಗಿನ ಕಾನೂನು ಎಂದು ಪರಿಗಣಿಸಲ್ಪಟ್ಟಿದೆ ಮತ್ತು ಅದನ್ನು ಉಲ್ಲಂಘಿಸಲಾಗುವುದಿಲ್ಲ.

 

ಈ ವಿನಾಯಿತಿ ಅಥವಾ ಪ್ರತಿರಕ್ಷೆಯ ಮಿತಿ ಎಷ್ಟಿದೆ?

1961 ರ ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಸಮಾವೇಶ ದ (Vienna Convention on Diplomatic Relations) ಪ್ರಕಾರ, ರಾಯಭಾರ ಕಚೇರಿಯಲ್ಲಿ ಪೋಸ್ಟ್ ಮಾಡಲಾದ ರಾಜತಾಂತ್ರಿಕರಿಗೆ ನೀಡಲಾದ ವಿನಾಯಿತಿಯು ಉಲ್ಲಂಘಿಸಲಾಗದ’ (inviolable) ಆಗಿದೆ.

 1. ಅದರಂತೆ, ರಾಜತಾಂತ್ರಿಕರನ್ನು ವಶಕ್ಕೆ ಪಡೆಯಲು ಅಥವಾ ಬಂಧನದಲ್ಲಿಡಲು ಸಾಧ್ಯವಿಲ್ಲ ಮತ್ತು ರಾಯಭಾರ ಕಚೇರಿಯಂತೆಯೆ ಅವರ ಮನೆಯು ಸಹ ‘ಉಲ್ಲಂಘಿಸಲಾಗದ’ ಮತ್ತು ರಕ್ಷಣೆಯನ್ನು ಪಡೆಯುವ ರಾಜತಾಂತ್ರಿಕ ವಿನಾಯಿತಿಯನ್ನು ಪಡೆದಿದೆ .

 

ವಿನಾಯಿತಿಗಳು:

ರಾಜತಾಂತ್ರಿಕರ ತಾಯ್ನಾಡಿಗೆ ಅವರಿಗೆ ನೀಡಲಾದ ‘ವಿನಾಯಿತಿ’ ಯನ್ನು ತೆಗೆದುಹಾಕುವ ಅಧಿಕಾರವಿದೆ, ಆದರೆ ರಾಜತಾಂತ್ರಿಕರು ‘ಗಂಭೀರ ಅಪರಾಧ’ವನ್ನು, ಅವರ ರಾಜತಾಂತ್ರಿಕ ಪಾತ್ರಕ್ಕೆ ಸಂಬಂಧವಿಲ್ಲದ ಅಥವಾ ಅಂತಹ ಯಾವುದೇ ಅಪರಾಧವನ್ನು ಮಾಡಿದ್ದರೆ ಮಾತ್ರ ಅದು ಸಂಭವಿಸುತ್ತದೆ. ಪರ್ಯಾಯವಾಗಿ, ರಾಜತಾಂತ್ರಿಕರ ತಾಯ್ನಾಡು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಬಹುದು.

 

ಸಂಬಂಧಿತ ಕಾಳಜಿಗಳು:

‘ರಾಜತಾಂತ್ರಿಕ ವಿನಾಯಿತಿ’ ರಾಜತಾಂತ್ರಿಕರನ್ನು ಯಾವುದೇ ಹಾನಿಯಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದ್ದರೂ, ಅದು ತಮ್ಮ ದೇಶಗಳನ್ನು ಕೆಟ್ಟ ಹೆಸರು ಮತ್ತು ದ್ವಿಪಕ್ಷೀಯ ಸಂಬಂಧಗಳ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವುದಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಗಳು ಏಕೆ ಕೇಂದ್ರೀಕೃತವಾಗಿವೆ ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

(Why are monoclonal antibody therapies in focus & how they work?)

 

ಸಂದರ್ಭ:

ಪ್ರಸ್ತುತ, ಭಾರತವು ಇಟೊಲಿ ಜುಮಾಬ್ (Itolizumab) ಮತ್ತು ಟೊಸಿಲಿ  ಜುಮಾಬ್ (Tocilizumab) ಎಂಬ ಎರಡು ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ’ಗಳ (Monoclonal Antibody Therapies) ಕೊರತೆಯನ್ನು ಎದುರಿಸುತ್ತಿದೆ.

 

 1. ಈ ಲೇಖನದಲ್ಲಿ, ಪ್ರತಿಕಾಯಗಳು ಮತ್ತು ಮೊನೊಕ್ಲೋನಲ್ ಪ್ರತಿಕಾಯಗಳ ಬಗ್ಗೆ ನಾವು ಅರ್ಥಮಾಡಿಕೊಳ್ಳುತ್ತೇವೆ.

 

ಮೊನೊಕ್ಲೋನಲ್ ಪ್ರತಿಕಾಯಗಳು (Monoclonal antibodies- mAbs) ಎಂದರೇನು?

ಇವು ದೇಹದ ‘ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆಗೆ’ ಸಹಾಯ ಮಾಡುವ ಉದ್ದೇಶದಿಂದ ಕೃತಕವಾಗಿ ಉತ್ಪತ್ತಿಮಾಡಿದ ಪ್ರತಿಕಾಯಗಳಾಗಿವೆ.

ಮೊನೊಕ್ಲೋನಲ್ ಪ್ರತಿಕಾಯಗಳು ನಿರ್ದಿಷ್ಟ ಪ್ರತಿಜನಕವನ್ನು ಗುರಿಯಾಗಿಸುತ್ತವೆ. ಈ ವಿಶೇಷ ಪ್ರತಿಜನಕವು ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುವ ಸೂಕ್ಷ್ಮಾಣುಜೀವಿಗಳ ‘ಪ್ರೋಟೀನ್’ ಆಗಿದೆ.

ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಹೇಗೆ ಉತ್ಪತ್ತಿ ಮಾಡಲಾಗುತ್ತದೆ?

ಪ್ರಯೋಗಾಲಯದಲ್ಲಿ, ಬಿಳಿ ರಕ್ತ ಕಣಗಳನ್ನು ನಿರ್ದಿಷ್ಟ ಪ್ರತಿಜನಕಕ್ಕೆ ಒಡ್ಡುವ ಮೂಲಕ ಮೊನೊಕ್ಲೋನಲ್ ಪ್ರತಿಕಾಯಗಳನ್ನು ಉತ್ಪಾದಿಸಬಹುದು.

ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಲು, ಒಂದೇ ಬಿಳಿರಕ್ತಕಣ ವನ್ನು ಅಬೀಜ ಸಂತಾನೋತ್ಪತ್ತಿ ಮಾಡಲಾಗುತ್ತದೆ. ಪ್ರತಿಕಾಯದ ಒಂದೇ ರೀತಿಯ ಪ್ರತಿಗಳನ್ನು ಉತ್ಪಾದಿಸಲು ಒಂದೇ ಬಿಳಿ ರಕ್ತ ಕಣ ಮಾದರಿಯನ್ನು (Clone) ಬಳಸಲಾಗುತ್ತದೆ.

 1. ಕೋವಿಡ್ -19 ರ ಸಂದರ್ಭದಲ್ಲಿ, ವಿಜ್ಞಾನಿಗಳು ಸಾಮಾನ್ಯವಾಗಿ ‘ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಉತ್ಪಾದಿಸಲು SARS-CoV-2 ವೈರಸ್‌ನ ಸ್ಪೈಕ್ ಪ್ರೋಟೀನ್‌ ಅನ್ನು ಬಳಸುತ್ತಾರೆ. ಈ ‘ಸ್ಪೈಕ್ ಪ್ರೋಟೀನ್’ ವೈರಸ್ ಅನ್ನು ಆತಿಥೇಯ ಕೋಶಕ್ಕೆ ಪ್ರವೇಶಿಸಲು ಸಹಾಯ ಮಾಡುತ್ತದೆ.

 

ಮೊನೊಕ್ಲೋನಲ್ ಪ್ರತಿಕಾಯಗಳ’ ಅವಶ್ಯಕತೆ:

 1.  ಆರೋಗ್ಯಕರ ದೇಹದಲ್ಲಿ, ಅದರ ‘ಪ್ರತಿರಕ್ಷಣಾ ವ್ಯವಸ್ಥೆ’ (Immune System) ಪ್ರತಿಕಾಯಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
 2. ಈ ಪ್ರತಿಕಾಯಗಳು ನಮ್ಮ ರಕ್ತದಲ್ಲಿನ ವೈ-ಆಕಾರದ (Y-shape) ಸೂಕ್ಷ್ಮ ಪ್ರೋಟೀನ್‌ಗಳಾಗಿವೆ, ಈ ಸೂಕ್ಷ್ಮ ಪ್ರೋಟೀನ್ಗಳು ಶತ್ರು ಸೂಕ್ಷ್ಮಜೀವಿಗಳನ್ನು ಗುರುತಿಸುತ್ತವೆ ಮತ್ತು ಬಂಧಿಸುತ್ತವೆ ಮತ್ತು ಈ ರೋಗಕಾರಕ ಸೂಕ್ಷ್ಮಜೀವಿಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಂಕೇತಿಸುತ್ತವೆ.
 3. ಆದಾಗ್ಯೂ, ಈ ಪ್ರತಿಕಾಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗದ ರೋಗನಿರೋಧಕ ವ್ಯವಸ್ಥೆ ಹೊಂದಿರುವ ಜನರಿಗೆ ಸಹಾಯ ಮಾಡಲು ವಿಜ್ಞಾನಿಗಳು ‘ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಕಂಡುಹಿಡಿದಿದ್ದಾರೆ.

ಇತಿಹಾಸ:

ನೊಬೆಲ್ ಪ್ರಶಸ್ತಿ ಪುರಸ್ಕೃತ ಜರ್ಮನ್ ರೋಗನಿರೋಧಕ ತಜ್ಞ (Immunologist) ಪಾಲ್ ಎಲ್ರಿಚ್ ( Paul Ehrlich)ಜೋಬರ್ ಕುಗೆಲ್’ (Zauberkugel) ಅಂದರೆ ‘ಮ್ಯಾಜಿಕ್ ಬುಲೆಟ್’ ಎಂಬ ಕಲ್ಪನೆಯನ್ನು 1900 ರ ದಶಕದಲ್ಲಿ ಒಂದು ರೋಗದ ಚಿಕಿತ್ಸೆಗಾಗಿ ಪ್ರತಿಕಾಯಗಳನ್ನು ನೀಡುವ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು. ಜೋಬರ್ ಕುಗೆಲ್ ಒಂದು ಆಯ್ದ ರೋಗಕಾರಕ ಸೂಕ್ಷ್ಮಾಣುಜೀವಿಯನ್ನು ಗುರಿಯಾಗಿಸುವ ಒಂದು ಸಂಯೋಜಕವಾಗಿದೆ.

 1. ಅಂದಿನಿಂದ, ವಿಶ್ವದ ಮೊದಲ ಮೊನೊಕ್ಲೋನಲ್ ಪ್ರತಿಕಾಯವಾದ ‘ಮುರೊಮೊನಾಬ್-ಸಿಡಿ 3’ (Muromonab-CD3) ಅನ್ನು ಮಾನವರ ಮೇಲೆ ಕ್ಲಿನಿಕಲ್ ಬಳಕೆಗಾಗಿ ಅನುಮೋದಿಸುವವರೆಗೆ ಎಂಟು ದಶಕಗಳನ್ನು ಸಂಶೋಧನೆಗಾಗಿ ತೆಗೆದುಕೊಂಡಿತು.
 2. ಮುರೊಮೊನಾಬ್-ಸಿಡಿ 3 ಒಂದು ರೋಗನಿರೋಧಕ ಔಷಧಿಯಾಗಿದ್ದು (Immunosuppressant) ‘ಅಂಗಾಂಗ ಕಸಿ’ ರೋಗಿಗಳಲ್ಲಿ ತೀವ್ರವಾದ ನಿರಾಕರಣೆಯನ್ನು (Acute Rejection) ಕಡಿಮೆ ಮಾಡಲು ಇದನ್ನು ನೀಡಲಾಗುತ್ತದೆ.

 

ಅನ್ವಯಗಳು:

ಮೊನೊಕ್ಲೋನಲ್ ಪ್ರತಿಕಾಯಗಳು ಈಗ ತುಲನಾತ್ಮಕವಾಗಿ ಸಾಮಾನ್ಯವಾಗಿದೆ. ಎಬೋಲಾ, ಎಚ್‌ಐವಿ, ಚರ್ಮ ರೋಗಗಳು (psoriasis) ಇತ್ಯಾದಿಗಳ ಚಿಕಿತ್ಸೆಯಲ್ಲಿ ಅವುಗಳನ್ನು ಬಳಸಲಾಗುತ್ತದೆ.

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಕೋವಿಡ್ -19 ಚಿಕಿತ್ಸೆಗಾಗಿ, DRDO ಅಭಿವೃದ್ಧಿಪಡಿಸಿದ ಬಾಯಿ ಮೂಲಕ ಸ್ವೀಕರಿಸುವ ಹೊಸ ಔಷಧವಾದ 2-ಡಿಜಿ ಯು ಹೇಗೆ ಕಾರ್ಯನಿರ್ವಹಿಸುತ್ತದೆ?


(How does 2-DG, DRDO’s new oral drug for Covid-19, work?)

ಸಂದರ್ಭ:

ಇತ್ತೀಚೆಗೆ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಂಟಿ-ಕೋವಿಡ್ -19  ಔಷಧದ ಮೊದಲ ಬ್ಯಾಚ್, ‘2-ಡಿಯೋಕ್ಸಿ-ಡಿ-ಗ್ಲೂಕೋಸ್’ (2-deoxy-D-glucose), ಅಥವಾ ‘2-ಡಿಜಿ’ (2-DG) ಬಿಡುಗಡೆ ಮಾಡಲಾಗಿದೆ.

 

ಹಿನ್ನೆಲೆ:

ಮೇ 1 ರಂದು, 2-ಡಿಜಿ  ಔಷಧಿಯನ್ನು ತುರ್ತು ಮತ್ತು ಮಧ್ಯಮದಿಂದ ತೀವ್ರವಾದ ಕೋವಿಡ್ 19 ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯಕ ಚಿಕಿತ್ಸೆಯಾಗಿ ಬಳಸಲು ಭಾರತದ ಔಷಧ ನಿಯಂತ್ರಣ ನಿರ್ದೇಶನಾಲಯವು (Drug Controller General of India– DCGI) ಅನುಮತಿ ನೀಡಿತ್ತು.

 

2-DG ಔಷಧೀಯ ಕುರಿತು:

 2-DG, ಔಷಧಿಯನ್ನು ಹೈದರಾಬಾದ್ ನ ಡಾಕ್ಟರ್ ರೆಡ್ಡಿಸ್ ಲ್ಯಾಬೋರೇಟರೀಸ್ (DRL) ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಮುಖ ಪ್ರಯೋಗಾಲಯವಾದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS)  ಅಭಿವೃದ್ಧಿಪಡಿಸಿದೆ.

 

ಇದರ ಕಾರ್ಯ ನಿರ್ವಹಣೆ ಹೇಗಿದೆ?

 1.  ಈ ಔಷಧಿಯು ವೈರಸ್-ಸೋಂಕಿತ ಕೋಶಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ತಡೆಯುವ ಮೂಲಕ ವೈರಸ್ ಬೆಳವಣಿಗೆಯಾಗದಂತೆ ತಡೆಯುತ್ತದೆ.
 2. ವೈರಲ್ ಸೋಂಕಿತ ಕೋಶಗಳಲ್ಲಿ ಇದರ ಆಯ್ದ ಸಂಗ್ರಹವು ಈ ಔಷಧಿಯನ್ನು ಅನನ್ಯಗೊಳಿಸುತ್ತದೆ.

 

ಪ್ರಯೋಜನಗಳು:

 1.  2-ಡಿಜಿ ಔಷಧಿ ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳಿಗೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೊರಗಿನಿಂದ ಆಮ್ಲಜನಕದ ವಿತರಣೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
 2. 2-ಡಿಜಿ ಔಷಧಿಯು ಒಂದು ಸಾಮಾನ್ಯ ಅಣು ಮತ್ತು ಗ್ಲೂಕೋಸ್ ನ ಸಾದೃಶ್ಯವಾಗಿರುವುದರಿಂದ ಇದನ್ನು ದೊಡ್ಡಪ್ರಮಾಣದಲ್ಲಿ ಉತ್ಪಾದಿಸಬಹುದು ಹಾಗೂ ಸುಲಭವಾಗಿ ದೊರೆಯುವಂತೆ ಮಾಡಬಹುದು.
 3. ಔಷಧವು ಕುಡಿಯುವ ರೂಪದಲ್ಲಿದ್ದು ORS ದ್ರಾವಣದಂತೆ ಸುಲಭವಾಗಿ ಬಳಸಬಹುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸುಲವೇಸಿ: (Sulawesi):

ಸಂಶೋಧಕರು ನೀಡಿದ ಮಾಹಿತಿಯ ಪ್ರಕಾರ, ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿರುವ ದಕ್ಷಿಣ ಸುಲವೇಸಿಯ ಗುಹೆ ತಾಣಗಳಲ್ಲಿರುವ  45,000–20,000 ವರ್ಷಗಳ ಹಿಂದಿನ ಪ್ಲೈಸ್ಟೊಸೀನ್-ಯುಗದ (Pleistocene-era) ಶಿಲಾ ವರ್ಣಚಿತ್ರಗಳು, ಹವಾಮಾನ ವೈಪರೀತ್ಯದಿಂದಾಗಿ ಅಪಾಯಕಾರಿ ದರದಲ್ಲಿ ನಾಶವಾಗುತ್ತಿವೆ.

 1. ಈ ಪ್ರದೇಶದ ಕಲಾಕೃತಿಗಳು ವಿಶ್ವದ ಅತ್ಯಂತ ಹಳೆಯವುಗಳಾಗಿವೆ (ಸುಮಾರು 40,000 ವರ್ಷಗಳ ಹಿಂದೆ), ಕೈಯಿಂದ ಚಿತ್ರಿಸಿದ ವರ್ಣಚಿತ್ರಗಳು ಎಂದು ನಂಬಲಾಗಿದೆ, ಗುಹೆಯ ಗೋಡೆಗಳ ಮೇಲೆ ಕೈಯನ್ನು ಒತ್ತುವ ಮೂಲಕ, ಅವುಗಳ ಮೇಲೆ ಒದ್ದೆಯಾದ ಕೆಂಪು-ಮಲ್ಬೆರಿ ಬಣ್ಣವನ್ನು ಸಿಂಪಡಿಸುವ ಮೂಲಕ ರಚಿಸಲಾಗಿದೆ.
 2. ಅದರ ಸಮೀಪವಿರುವ ಗುಹೆಯ ಗೋಡೆಯ ಮೇಲೆ ಒಂದು ಪ್ರಾಣಿಯ ವಿಶ್ವದ ಅತ್ಯಂತ ಹಳೆಯ ಚಿತ್ರಣವಿದೆ. ಈ ಗುಹೆ-ಮ್ಯೂರಲ್ ವರ್ಣಚಿತ್ರವು ಸುಮಾರು 45,500 ವರ್ಷಗಳ ಹಿಂದಿನದು ಎಂದು ನಂಬಲಾಗಿದೆ, ಮತ್ತು ಇದು ಹಂದಿಯ ಚಿತ್ರವಾಗಿದೆ.
 3. ಸುಲಾವೆಸಿಯ ಗುಹೆ ಕಲೆಯು ಯುರೋಪಿನ ಇತಿಹಾಸಪೂರ್ವ ಗುಹೆ ಕಲೆಗಿಂತ ಹಳೆಯದು.

 

ಕಾರಣಗಳು:

ಹ್ಯಾಲೊಕ್ಲ್ಯಾಸ್ಟಿ (Haloclasty) ಎಂಬ ಪ್ರಕ್ರಿಯೆಯಿಂದಾಗಿ ಬಣ್ಣಗಳಿಂದ ತಯಾರಿಸಿದ ಕಲಾಕೃತಿಗಳು ಕೊಳೆಯಲು ಪ್ರಾರಂಭಿಸಿವೆ. ಈ ಪ್ರಕ್ರಿಯೆಯು ಆರ್ದ್ರ ಮತ್ತು ಶುಷ್ಕ ಹವಾಮಾನ ಆವರ್ತನಗಳಿಂದಾಗಿ ತಾಪಮಾನ ಮತ್ತು ತೇವಾಂಶದಲ್ಲಿನ ಪುನರಾವರ್ತಿತ ಬದಲಾವಣೆಗಳಿಂದ ರೂಪುಗೊಂಡ ಉಪ್ಪು-ಹರಳುಗಳ ಬೆಳವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ.

ಎಲ್ಡರ್ ಲೈನ್:

(ELDERLINE)

 1. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವೃದ್ಧರ ಸಮಸ್ಯೆಗಳನ್ನು ಪರಿಹರಿಸಲು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಎಲ್ಡರ್ ಲೈನ್ ​​ಯೋಜನೆಯಡಿ ಐದು ಪ್ರಮುಖ ರಾಜ್ಯಗಳಲ್ಲಿ ರಾಜ್ಯವಾರು ಕಾಲ್ ಸೆಂಟರ್ ಗಳನ್ನು ಪ್ರಾರಂಭಿಸಿದೆ.
 2. 2021 ರ ಮೇ ಅಂತ್ಯದ ವೇಳೆಗೆ ಎಲ್ಡರ್ ಲೈನ್ (ELDERLINE) ಎಂಬ ಟೋಲ್-ಫ್ರೀ ಸಹಾಯವಾಣಿ ಸೇವೆಯನ್ನು ಎಲ್ಲಾ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ.
 3. ಈ ಸೌಲಭ್ಯವನ್ನು ಈಗಾಗಲೇ 5 ರಾಜ್ಯಗಳು, ಕರ್ನಾಟಕ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಮತ್ತು ತಮಿಳುನಾಡುಗಳಲ್ಲಿ ಜಾರಿಗೊಳಿಸಲಾಗಿದೆ. ತೆಲಂಗಾಣದಲ್ಲಿ,ಈ ಸೌಲಭ್ಯವು ಈಗಾಗಲೇ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ.
 4. ಈ ಕಾಲ್ ಸೆಂಟರ್ ಗಳನ್ನು ಟೋಲ್ ಫ್ರೀ ಸಂಖ್ಯೆ 14567 ಮೂಲಕ ಸಂಪರ್ಕಿಸಬಹುದು.

 ಸಂವೇದನಾ:

(SAMVEDNA)

 1.  ಸಂವೇದನಾ ಟೆಲಿ-ಕೌನ್ಸೆಲಿಂಗ್ ಸೇವೆಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳ ಒತ್ತಡ, ಆತಂಕ, ಭಯ ಮತ್ತು ಇತರ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಮಾನಸಿಕ ಬೆಂಬಲವನ್ನು ಒದಗಿಸುತ್ತದೆ.
 2. ಈ ಸೇವೆಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ(NCPCR) ಒದಗಿಸುತ್ತಿದೆ.
 3. ಈ ಸೇವೆಯನ್ನು ಸೆಪ್ಟೆಂಬರ್ 2020 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.
 4. SAMVEDNA ಎನ್ನುವುದು ‘ಭಾವನಾತ್ಮಕ ಅಭಿವೃದ್ಧಿ ಮತ್ತು ಅಗತ್ಯ ಸ್ವೀಕಾರದ ಮೂಲಕ ಮಾನಸಿಕ ಆರೋಗ್ಯದ ದುರ್ಬಲತೆಯ ಮೇಲೆ ಸಂವೇದನಾಶೀಲ ಕ್ರಿಯೆ’ (Sensitizing Action on Mental Health Vulnerability through Emotional Development and Necessary Acceptance) ಎಂಬುದರ ಸಂಕ್ಷಿಪ್ತ ರೂಪವಾಗಿದೆ.