ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಸಾಮಾಜಿಕ ಷೇರು ವಿನಿಮಯ ಕೇಂದ್ರಗಳು (SSEs).
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಗಂಟು ಚರ್ಮ ರೋಗ.(LSD)
2. ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯ ಲ್ಯಾಂಡಿಂಗ್.
3. ಯುರೇನಿಯಂ ಮತ್ತು ಅದರ ಉಪಯೋಗಗಳ ಬಗ್ಗೆ.
4. ಮಾನವನಿಂದ ಉಂಟಾಗುವ ಮೀಥೇನ್ ಹೊರಸೂಸುವಿಕೆಯ ಬಗ್ಗೆ ವಿಶ್ವಸಂಸ್ಥೆಯ ವರದಿ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಕಬಾಸುರ ಕುಡಿನೀರ್.
2. ಇ-ಸಂಜೀವನಿ OPD.
3. ಪುಲಾಯರ್ ಸಮುದಾಯ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
ಸಾಮಾಜಿಕ ಷೇರು ವಿನಿಮಯ ಕೇಂದ್ರಗಳು (SSEs):
(Social stock exchanges (SSEs)
ಸಂದರ್ಭ:
ಇತ್ತೀಚೆಗೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಯಾದ ಸೆಬಿಯ ತಾಂತ್ರಿಕ ಗುಂಪು (Technical Group- TG) ‘ಸಾಮಾಜಿಕ ಷೇರು ವಿನಿಮಯ ಕೇಂದ್ರಗಳ’ (Social stock exchanges- SSE) ಕುರಿತು ತನ್ನ ವರದಿಯನ್ನು ಸಲ್ಲಿಸಿದೆ.
- ಈ ತಜ್ಞರ ಸಮಿತಿಯ ಅಧ್ಯಕ್ಷತೆಯನ್ನು ನಬಾರ್ಡ್‌ನ ಮಾಜಿ ಅಧ್ಯಕ್ಷ ಹರ್ಷ್ ಭನ್ವಾಲಾ ವಹಿಸಿದ್ದರು.
ಸಮಿತಿಯ ಪ್ರಮುಖ ಶಿಫಾರಸುಗಳು:
- ಅರ್ಹತೆ:
ಲಾಭ ಸಹಿತ (for-profit: FP) ಮತ್ತು ಲಾಭರಹಿತ ಸಂಸ್ಥೆಗಳಿಗೆ (not-for-profit organisations- NPO) ಸಾಮಾಜಿಕ ಉದ್ದೇಶಗಳು ಮತ್ತು ಸಾಮಾಜಿಕ ಪ್ರಭಾವ ಎರಡೂ ಅವರ ಪ್ರಮುಖ ಗುರಿಯಾಗಿದೆ ಎಂದು ಸಾಬೀತುಪಡಿಸಿದರೆ ‘ಸಾಮಾಜಿಕ ಷೇರು ವಿನಿಮಯ ಕೇಂದ್ರಗಳಲ್ಲಿ’ (Social stock exchanges- SSE) ಸಾಧ್ಯತೆಗಳನ್ನು ಅನ್ವೇಷಿಸಲು ಅವಕಾಶ ನೀಡಬೇಕು.
‘ಸಾಮಾಜಿಕ ಷೇರು ವಿನಿಮಯ ’ (SSE) ಕಾರ್ಯವಿಧಾನವನ್ನು ಬಳಸಿಕೊಂಡು ಹಣವನ್ನು ಸಂಗ್ರಹಿಸಲು ಮುಂದಾಗುವ ರಾಜಕೀಯ ಮತ್ತು ಧಾರ್ಮಿಕ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಫೌಂಡೇಶನ್ ಗಳನ್ನು ಅನರ್ಹಗೊಳಿಸಬೇಕು.
- ನಿಧಿಸಂಗ್ರಹಕ್ಕಾಗಿ ಲಭ್ಯವಿರುವ ವಿಧಾನಗಳು:
ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ (NPO), ಇಕ್ವಿಟಿ, ಜೀರೋ ಕೂಪನ್ ಜೀರೋ ಪ್ರಧಾನ ಬಾಂಡ್‌ಗಳು (ZCZP), ಅಭಿವೃದ್ಧಿ ಪರಿಣಾಮದ ಬಾಂಡ್‌ಗಳು, ಸಾಮಾಜಿಕ ಪ್ರಭಾವದ ಬಾಂಡ್‌ಗಳು (Social Impact Bond) (ಪ್ರಸ್ತುತ 100 ಪ್ರತಿಶತ ಅನುದಾನದೊಂದಿಗೆ ಸಾಮಾಜಿಕ ಪ್ರಭಾವ ನಿಧಿ (SVP) ಆಗಿ ಚಾಲ್ತಿಯಲ್ಲಿದೆ) ಮತ್ತು ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆದಾರರಿಂದ ದೇಣಿಗೆಗಳನ್ನು (Fundraising) ಸಂಗ್ರಹಿಸಲು ಅನುಮತಿಸಲಾಗಿದೆ.
ಲಾಭಕ್ಕಾಗಿನ (for-profit: FP) ಉದ್ಯಮಗಳಿಗೆ ಈಕ್ವಿಟಿ, ಸಾಲ, ಅಭಿವೃದ್ಧಿ ಪರಿಣಾಮ ಬಾಂಡ್‌ಗಳು ಮತ್ತು ಸಾಮಾಜಿಕ ಉದ್ಯಮ ನಿಧಿಗಳ (Fundraising) ಮೂಲಕ ಹಣವನ್ನು ಸಂಗ್ರಹಿಸಲು ಅನುಮತಿಸಬಹುದು.
- ನಿಧಿಯ ಗಾತ್ರ: ಅಂತಹ ನಿಧಿಯ ಕನಿಷ್ಠ ಮೊತ್ತವನ್ನು 20 ಕೋಟಿಯಿಂದ 5 ಕೋಟಿಗೆ ಇಳಿಸಬೇಕು ಮತ್ತು ಅವರ ಕನಿಷ್ಠ ಸದಸ್ಯತ್ವ ಮೊತ್ತವನ್ನು 1 ಕೋಟಿಯಿಂದ 2 ಲಕ್ಷ ರೂಪಾಯಿಗೆ ಇಳಿಸಬೇಕು.
- ‘ಸಾಮಾಜಿಕ ಸ್ಟಾಕ್ ಎಕ್ಸ್ಚೇಂಜ್’ಗಾಗಿ ಸಾಮರ್ಥ್ಯ ವೃದ್ಧಿ ನಿಧಿ:
ಇದು 100 ಕೋಟಿ ರೂ. ಮೊತ್ತದ ನಿಧಿಯನ್ನು ನಬಾರ್ಡ್ ಅಡಿಯಲ್ಲಿ ಇಡಬೇಕು. ವಿನಿಮಯ ಕೇಂದ್ರಗಳು ಮತ್ತು SIDBI ನಂತಹ ಇತರ ಅಭಿವೃದ್ಧಿ ಏಜೆನ್ಸಿಗಳಿಗೆ ಈ ನಿಧಿಗೆ ಕೊಡುಗೆ ನೀಡುವಂತೆ ಕೇಳಬೇಕು.
- ‘ಸಾಮಾಜಿಕ ಸ್ಟಾಕ್ ಎಕ್ಸ್ಚೇಂಜ್’ನಲ್ಲಿ ಭಾಗವಹಿಸಬಹುದಾದ ಸುಸ್ಥಿರ ಅಭಿವೃದ್ಧಿ ಗುರಿಗಳ ಅಡಿಯಲ್ಲಿ ನೀತಿ ಆಯೋಗ ಗುರುತಿಸಿದ ಸಮಗ್ರ ಚಟುವಟಿಕೆಗಳ ಪಟ್ಟಿ:
ಈ ಚಟುವಟಿಕೆಗಳಲ್ಲಿ, ಹಸಿವು ನಿರ್ಮೂಲನೆ (Eradicating Hunger); ಬಡತನ, ಅಪೌಷ್ಟಿಕತೆ ಮತ್ತು ಅಸಮಾನತೆ; LGBTQIA + ಸಮುದಾಯಗಳು ಮತ್ತು ಮಹಿಳಾ ಸಬಲೀಕರಣದ ಮೂಲಕ ಲಿಂಗ ಸಮಾನತೆಯನ್ನು ಉತ್ತೇಜಿಸುವುದು; ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ತರಬೇತಿ; ಮತ್ತು ಕೈಗೆಟುಕುವ ವಸತಿ ಸೇರಿದಂತೆ ಕೊಳೆಗೇರಿ ಪ್ರದೇಶದ ಅಭಿವೃದ್ಧಿ.
ಸಾಮಾಜಿಕ ಷೇರು ವಿನಿಮಯ (SSE)ಎಂದರೇನು?
- ಸಾಮಾಜಿಕ ಷೇರು ವಿನಿಮಯ ಭಾರತದಲ್ಲಿ ಹೊಸ ಪರಿಕಲ್ಪನೆಯಾಗಿದೆ. ಈ ಷೇರು ವಿನಿಮಯ ಕೇಂದ್ರದಲ್ಲಿ ಸಾಮಾಜಿಕ ಉದ್ಯಮಗಳು ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಪಟ್ಟಿ ಮಾಡಲಾಗುವುದು. ಇದರ ಅಡಿಯಲ್ಲಿ, ಸಾಮಾಜಿಕ ಸಂಸ್ಥೆಗಳು ಈಕ್ವಿಟಿ ಮತ್ತು ಬಾಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಂತಹ ಘಟಕಗಳನ್ನು ನೀಡುವ ಮೂಲಕ ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
ಅಂದರೆ ಖಾಸಗಿ ಮತ್ತು ಲಾಭೋದ್ದೇಶವಿಲ್ಲದ ವಲಯದ ಪೂರೈಕೆದಾರರಿಗೆ ಹೆಚ್ಚಿನ ಬಂಡವಾಳವನ್ನು ಒದಗಿಸುವ ಮೂಲಕ ಅವರಿಗೆ ಸೇವೆ ಸಲ್ಲಿಸುವುದು ಇದರ ಉದ್ದೇಶವಾಗಿದೆ.
- ಪ್ರಸ್ತಾವನೆಯ ಪ್ರಕಾರ, ಅಸ್ತಿತ್ವದಲ್ಲಿರುವ ಷೇರು ವಿನಿಮಯ ಕೇಂದ್ರಗಳಾದ BSE ಮತ್ತು/ಅಥವಾ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ‘ಸಾಮಾಜಿಕ ಷೇರು ವಿನಿಮಯ ಕೇಂದ್ರಗಳನ್ನು’ ಇರಿಸಬಹುದು.
ಮಹತ್ವ:
- ಇದರೊಂದಿಗೆ, ಸಾಮಾಜಿಕ ಕಲ್ಯಾಣ ಉದ್ಯಮಗಳು ಮತ್ತು ಲಾಭೋದ್ದೇಶವಿಲ್ಲದವರಿಗೆ ಪಾರದರ್ಶಕ ಎಲೆಕ್ಟ್ರಾನಿಕ್ ವೇದಿಕೆಯಲ್ಲಿ ಸಾಮಾಜಿಕ ಬಂಡವಾಳ ಎಂದು ಕರೆಯಲ್ಪಡುವ ನಿಧಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ, ಇದು ಕೊರೊನೊವೈರಸ್ ಸಾಂಕ್ರಾಮಿಕದಿಂದ ಧ್ವಂಸಗೊಂಡ ಜೀವನೋಪಾಯಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ.
- ಸಮಿತಿಯ ಈ ಶಿಫಾರಸುಗಳು ಪ್ಯಾಕೇಜ್‌ನಂತೆ ಕಾರ್ಯಗತಗೊಂಡರೆ,ಒಂದು ರೋಮಾಂಚಕ ಮತ್ತು ಬೆಂಬಲಿತ ಪರಿಸರ ವ್ಯವಸ್ಥೆಗೆ ಕಾರಣವಾಗಬಹುದು, ಲಾಭೋದ್ದೇಶವಿಲ್ಲದ ವಲಯವು ಸಾಮಾಜಿಕ ಪ್ರಭಾವವನ್ನು ಸೃಷ್ಟಿಸಲು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಲು ಅನುವು ಮಾಡಿಕೊಡುತ್ತದೆ.
ಸಾಮಾಜಿಕ ಬಂಡವಾಳದ ಅವಶ್ಯಕತೆ:
- ಭಾರತವು ತನ್ನ ಆರ್ಥಿಕತೆಯ ಆಧಾರವಾಗಿರುವ ಉದ್ಯೋಗದ ಸಾಧನಗಳನ್ನು ಸರಿಪಡಿಸಲು ಮತ್ತು ಪುನರ್ನಿರ್ಮಿಸಲು, ಗಮನಾರ್ಹ ಪ್ರಮಾಣದ ಸಹಿಷ್ಣು ಬಂಡವಾಳ ಹೊಂದುವ (Patient Capital) ಅಗತ್ಯವಿದೆ. ಆರ್ಥಿಕ ಲಾಭಕ್ಕೆ ಆದ್ಯತೆ ನೀಡುವ ಸಾಂಪ್ರದಾಯಿಕ ಬಂಡವಾಳ (Conventional capital), ಅಂತಹ ಹೊರೆಯನ್ನು ಸಂಪೂರ್ಣವಾಗಿ ಸ್ವತಃ ತಾನೇ ಹೊರಲು ಸಾಧ್ಯವಾಗುವುದಿಲ್ಲ.
- ಮತ್ತೊಂದೆಡೆ, ಸಾಮಾಜಿಕ ಬಂಡವಾಳ (Social capital) ಈ ಪಾತ್ರಕ್ಕೆ ಹೆಚ್ಚು ಸೂಕ್ತವಾಗಿದೆ. ಇದು ಸಹಿಷ್ಣು ಮಾತ್ರವಲ್ಲ, ಕೋವಿಡ್ -19 ರ ಕಾರಣದಿಂದಾಗಿ ಕುಸಿತದ ಅಂಚಿನಲ್ಲಿರುವ ಸಾಮಾಜಿಕ ರಚನೆಗಳನ್ನು ಬೆಂಬಲಿಸುವ ಮತ್ತು ಬಲಪಡಿಸುವ ಗುರಿಯನ್ನು ಹೊಂದಿದೆ.
ಸಾಮಾಜಿಕ ಉದ್ಯಮ ಎಂದರೇನು?
- ಸಾಮಾಜಿಕ ಉದ್ಯಮಗಳು (social enterprise) ಆದಾಯ ಗಳಿಸುವ ವ್ಯವಹಾರಗಳಾಗಿವೆ. ಆರೋಗ್ಯ ಅಥವಾ ಶುದ್ಧ ಇಂಧನದಂತಹ ಸಾಮಾಜಿಕ ಉದ್ದೇಶವನ್ನು ಸಾಧಿಸುವುದು ಇದರ ಮುಖ್ಯ ಪ್ರಾಥಮಿಕ ಉದ್ದೇಶ/ ಗುರಿಯಾಗಿದೆ.
- ಸಾಮಾಜಿಕ ಉದ್ಯಮವು ಹೆಚ್ಚು ಲಾಭದಾಯಕವಾಗಲು ಸಾಧ್ಯವಿಲ್ಲ ಎಂಬುದು ಇದರ ಅರ್ಥವಲ್ಲ. ವಾಸ್ತವವಾಗಿ, ಹೆಚ್ಚಿನ ಸಾಮಾಜಿಕ ಉದ್ಯಮಗಳು ಸಾಂಪ್ರದಾಯಿಕ ವ್ಯವಹಾರಗಳಂತೆ ಕಾಣುತ್ತವೆ ಮತ್ತು ಕಾರ್ಯನಿರ್ವಹಿಸುತ್ತವೆ. ಒಂದೇ ವ್ಯತ್ಯಾಸವೆಂದರೆ, ಈ ಘಟಕಗಳಿಂದ ಉತ್ಪತ್ತಿಯಾಗುವ ಲಾಭವು ಮಧ್ಯಸ್ಥಗಾರರಿಗೆ ಪಾವತಿಸಲು ಅಗತ್ಯವಾಗಿ ಬಳಸಲಾಗುವುದಿಲ್ಲ, ಬದಲಿಗೆ ಅವರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮರುಹೂಡಿಕೆ ಮಾಡಲಾಗುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.
ಗಂಟು ಚರ್ಮ ರೋಗ (LSD):
(Lumpy Skin Disease)
ಏನಿದು?
- ಗಂಟು ಚರ್ಮ ರೋಗ ಅಥವಾ ‘ಲಂಪಿ ಸ್ಕಿನ್ ಡಿಸೀಸ್’ (Lumpy Skin Disease- LSD) ಒಂದು ವೈರಲ್(ವೈರಸ್) ಕಾಯಿಲೆಯಾಗಿದ್ದು, ಇದು ದನಕರುಗಳು ಮತ್ತು ಎಮ್ಮೆಗಳಲ್ಲಿ ದೀರ್ಘಕಾಲದ ಕಾಯಿಲೆಗೆ ಕಾರಣವಾಗುತ್ತದೆ.
- ‘ಲಂಪಿ ಸ್ಕಿನ್ ಡಿಸೀಸ್ ವೈರಸ್’ (Lumpy skin disease virus- LSDV) ಸೋಂಕಿನಿಂದ ಈ ಗಂಟು ಚರ್ಮ ರೋಗವು ಹರಡುತ್ತದೆ.
ಲಕ್ಷಣಗಳು:
- ಇದು ಪ್ರಾಣಿಗಳ ದೇಹದಾದ್ಯಂತ, ವಿಶೇಷವಾಗಿ ತಲೆ, ಕುತ್ತಿಗೆ, ಕೈಕಾಲುಗಳು, ಕೆಚ್ಚಲು (ಹೆಣ್ಣು ದನಗಳ ಸಸ್ತನಿ ಗ್ರಂಥಿ) ಮತ್ತು ಜನನಾಂಗಗಳ ಸುತ್ತಲೂ ಎರಡರಿಂದ ಐದು ಸೆಂಟಿಮೀಟರ್ ವ್ಯಾಸದ ಗಂಟುಗಳಾಗಿ ಕಂಡುಬರುತ್ತದೆ. ಈ ಗಂಟು ನಂತರ ಕ್ರಮೇಣ ದೊಡ್ಡ ಮತ್ತು ಆಳವಾದ ಗಾಯದ ರೂಪವನ್ನು ಪಡೆಯುತ್ತದೆ.
ಹರಡುವಿಕೆ:
- ಈ ರೋಗವು ಸೊಳ್ಳೆಗಳು, ನೊಣಗಳು ಮತ್ತು ಪರಾವಲಂಬಿ ಜೀವಿ ಉಣ್ಣೆಗಳ ಮೂಲಕ ಮತ್ತು ಪ್ರಾಣಿಗಳ ಲಾಲಾರಸ ಮತ್ತು ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ.
ಬಾಧಿತ ದೇಶಗಳು:
- ಗಂಟು ಚರ್ಮರೋಗ (LSD) ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ಹರಡುವ ಸ್ಥಳೀಯ ರೋಗವಾಗಿದೆ. ಈ ಸ್ಥಳಗಳಲ್ಲಿ, ಈ ರೋಗದ ಲಕ್ಷಣಗಳನ್ನು ಮೊದಲ ಬಾರಿಗೆ 1929 ರಲ್ಲಿ ಕಂಡುಹಿಡಿಯಲಾಯಿತು.
- ಆಗ್ನೇಯ ಏಷ್ಯಾ ಪ್ರದೇಶದಲ್ಲಿ, 2019 ರ ಜುಲೈನಲ್ಲಿ ಬಾಂಗ್ಲಾದೇಶದಲ್ಲಿ ಈ ಕಾಯಿಲೆಯ ಮೊದಲ ಪ್ರಕರಣ ಕಂಡುಬಂದಿತು.
- ಭಾರತದಲ್ಲಿ, ಒಡಿಶಾದ ಮಯೂರ್ಭಂಜ್ ನಲ್ಲಿ 2019 ರ ಅಗಸ್ಟ್ ನಲ್ಲಿ ಈ ಕಾಯಿಲೆಯ ಮೊದಲ ಪ್ರಕರಣ ವರದಿಯಾಗಿದೆ.
ಚಿಕಿತ್ಸೆ:
- ಈವರೆಗೆ, ಈ ವೈರಸ್‌ಗೆ ಯಾವುದೇ ಚಿಕಿತ್ಸೆ ಕಂಡು ಹಿಡಿಯಲಾಗಿಲ್ಲ, ಆದ್ದರಿಂದ ವ್ಯಾಕ್ಸಿನೇಷನ್ ಮೂಲಕ ಅದನ್ನು ತಡೆಗಟ್ಟುವುದು ನಿಯಂತ್ರಣದ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.
ಸಂದರ್ಭ:
- ಬಿಹಾರ ಸರ್ಕಾರವು ರೋಗ ಹರಡುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ ಮತ್ತು ಅದರ ಹರಡುವಿಕೆಯ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಲಹೆಯನ್ನು ನೀಡಿದೆ.
ಸಂಬಂಧಿತ ಕಳವಳಗಳು:
- ಭಾರತದಲ್ಲಿ ದನಗಳ ಸಂಖ್ಯೆ 303 ಮಿಲಿಯನ್, ಇದು ವಿಶ್ವದಲ್ಲೇ ಅತಿ ಹೆಚ್ಚು. ಕೇವಲ 16 ತಿಂಗಳಲ್ಲಿ ಈ ರೋಗವು ದೇಶದ 15 ರಾಜ್ಯಗಳಿಗೆ ಹರಡಿತು.
- ಇದು ದೇಶದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ, ಏಕೆಂದರೆ ಇಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಹೆಚ್ಚಿನ ರೈತರು ಭೂರಹಿತರು ಅಥವಾ ಅಲ್ಪ ಪ್ರಮಾದ ಭೂಮಿಯ ಒಡೆಯರಾಗಿದ್ದಾರೆ ಮತ್ತು ಅವರಿಗೆ ದೊರೆಯುವ ಅಗ್ಗದ ಪ್ರೋಟೀನ್ ಮೂಲಗಳಲ್ಲಿ ಹಾಲು ಒಂದಾಗಿದೆ.
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯ ಲ್ಯಾಂಡಿಂಗ್:
(SpaceX’s Starship landing)
ಸಂದರ್ಭ:
ಇತ್ತೀಚೆಗೆ, ಎಲೋನ್ ಮಸ್ಕ್ ಅವರ ಕಂಪನಿಯಾದ ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿದ ಸರಣಿ ಸಂಖ್ಯೆ 15 (SN 15) ಎಂಬ ಅತ್ಯಾಧುನಿಕ ಸ್ಟಾರ್‌ಶಿಪ್ ರಾಕೆಟ್ ನ ಮೂಲ ಮಾದರಿಯು ಅಥವಾ ಸ್ಟಾರ್ ಶಿಪ್ ರಾಕೆಟ್ ನ ಪ್ರತಿರೂಪವು (ಮೂಲಮಾದರಿ=Prototype) ಯಶಸ್ವಿಯಾಗಿ ಉಡಾವಣೆಗೊಂಡು ಪುನಃ ಭೂಮಿಗೆ ಇಳಿಯಲು ಸಾಧ್ಯವಾಗಿದೆ. ಇದು ಬಾಹ್ಯಾಕಾಶ ಪರಿಶೋಧನೆಗಾಗಿ ನಾಸಾಕ್ಕೆ ಹೊಸ ಯುಗದ ಪ್ರಾರಂಭವನ್ನು ತಿಳಿಸಿದೆ.
ಹಿನ್ನೆಲೆ:
ಈ ಯಶಸ್ವಿ ಲ್ಯಾಂಡಿಂಗ್ ನಾಸಾ ಮತ್ತು ಸ್ಪೇಸ್‌ಎಕ್ಸ್‌ಗೆ ಸಮಾಧಾನವನ್ನು ತಂದಿದೆ, ಏಕೆಂದರೆ ಆಕಾಶನೌಕೆಯ ನಾಲ್ಕು ಮೂಲಮಾದರಿಗಳು ಈ ಮೊದಲು ಉಡಾವಣೆಗೊಂಡು ಭೂಸ್ಪರ್ಶ ಮಾಡುವಲ್ಲಿ ವಿಫಲವಾಗಿದ್ದವು. ಟೆಕ್ಸಾಸ್‌ನ ಆಗ್ನೇಯ ಅಂಚಿನಲ್ಲಿರುವ ಬ್ರೌನ್‌ಸವಿಲ್ಲೆ ಬಳಿ ಲ್ಯಾಂಡ್ ಆದ ನಂತರ ಕ್ಷಣಾರ್ಧದಲ್ಲಿ ಅಥವಾ ಆ(ಟಚ್ ಡೌನ್) ಸಮಯದಲ್ಲಿ ಈ ಮೂಲ ಮಾದರಿ ಬಾಹ್ಯಾಕಾಶ ನೌಕೆಗಳು ನಾಶವಾಗುತ್ತಿದ್ದವು.
‘ಸ್ಟಾರ್‌ಶಿಪ್’ನ ಕುರಿತು:
- ಸ್ಟಾರ್‌ಶಿಪ್ (Starship) ಎಂಬುದು ಪೂರ್ಣ ಗಾತ್ರದ, ಬುಲೆಟ್ ಆಕಾರದ, ಸ್ಪೇನ್‌ಎಕ್ಸ್ ತಯಾರಿಸಿದ ಸ್ಟೇನ್‌ಲೆಸ್ ಸ್ಟೀಲ್ ರಾಕೆಟ್ ಶಿಪ್ ಆಗಿದೆ.
- ಈ ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ಪ್ರಯಾಣದಲ್ಲಿ ಕ್ರಾಂತಿಕಾರಿ ಬದಲಾವಣೆ ಉಂಟುಮಾಡುತ್ತದೆ (game-changer) ಎಂದು ಹೇಳಲಾಗುತ್ತದೆ. ಇದು ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ (Reusable) ಸಾರಿಗೆ ವ್ಯವಸ್ಥೆಯಾಗಿದ್ದು, ಸಿಬ್ಬಂದಿ ಮತ್ತು ಸರಕುಗಳನ್ನು ಭೂಮಿಯ ಕಕ್ಷೆ, ಚಂದ್ರ ಮತ್ತು ಮಂಗಳಕ್ಕೆ ಕಳುಹಿಸಲು ಮತ್ತು ಮರಳಿ ಕರೆತರಲು ಸಮರ್ಥವಾಗಿದೆ.
- ಸ್ಟಾರ್‌ಶಿಪ್ ಅನ್ನು ಸ್ಪೇಸ್‌ಎಕ್ಸ್ “ವಿಶ್ವದ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹನ” ಎಂದು ವಿವರಿಸಿದೆ ಕಾರಣ ಇದು 100 ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಭಾರವನ್ನು ಭೂಮಿಯ ಕಕ್ಷೆಗೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಇತ್ತೀಚಿನ ಅಭಿವೃದ್ಧಿಯ ಮಹತ್ವ:
ಅಂತರಗ್ರಹ ಪ್ರಯಾಣ (Interplanetary Travel) ವನ್ನು ಸುಲಭಗೊಳಿಸುವಿಕೆಯಲ್ಲಿ ರಾಕೆಟ್ ನ ಮರುಬಳಕೆ ಮಾಡುವಿಕೆಯು ಬಹಳ ಮುಖ್ಯ ಎಂಬುದನ್ನು ಸ್ಪೇಸ್ ಎಕ್ಸ್ ನಂಬುತ್ತದೆ. ಕಾರಣ ಉಡಾವಣೆಯ ಹೆಚ್ಚಿನ ವೆಚ್ಚವನ್ನು ರಾಕೆಟ್‌ಗಳನ್ನು ನಿರ್ಮಿಸಲು ಬಳಸಲಾಗುತ್ತದೆಯಾದ್ದರಿಂದ, ಅವು ಭೂಮಿಯ ವಾತಾವರಣಕ್ಕೆ ಮರಳಿ ಪ್ರವೇಶಿಸುವಾಗ ಅಂತಿಮವಾಗಿ ಉರಿಯುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.
ಸಂಭಾವ್ಯ ಅನ್ವಯಿಕೆಗಳು:
- ಸ್ಟಾರ್ ಶಿಪ್ ಬಾಹ್ಯಾಕಾಶ ನೌಕೆಯು, ಫಾಲ್ಕನ್ ಉಡಾವಣಾ ವಾಹನಗಳಿಗಿಂತ ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚಿನ ದೂರದಲ್ಲಿ ಉಪಗ್ರಹಗಳನ್ನು ತಲುಪಿಸ ಬಲ್ಲದು, ಮತ್ತು ಸರಕು ಮತ್ತು ಸಿಬ್ಬಂದಿ ಎರಡನ್ನೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಸಾಗಿಸಲು ಮತ್ತು ಮರಳಿ ಕರೆತರಲು ಸಮರ್ಥವಾಗಿರುವಂತದ್ದು.
- ಒಮ್ಮೆ ಅಭಿವೃದ್ಧಿಪಡಿಸಿದ ನಂತರ, ಮಾನವನ ಬಾಹ್ಯಾಕಾಶ ಹಾರಾಟಗಳ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ದೊಡ್ಡ ಪ್ರಮಾಣದ ಸರಕುಗಳನ್ನು ಚಂದ್ರನಲ್ಲಿಗೆ ಸಾಗಿಸಲು ಸ್ಟಾರ್ ಶಿಪ್ ರಾಕೆಟ್ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
- ಬಾಹ್ಯಾಕಾಶ ನೌಕೆಯನ್ನು ಚಂದ್ರನ ಆಚೆಗೂ ಇತರ ಅಂತರಗ್ರಹ ಕಾರ್ಯಾಚರಣೆಗಳಿಗೆ ಸಹ, ಸಿಬ್ಬಂದಿ ಮತ್ತು ಸರಕುಗಳನ್ನು ಸಾಗಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ನಾಸಾದ ಆರ್ಟೆಮಿಸ್ ಮಿಷನ್:
- ಕಳೆದ ತಿಂಗಳು, ಸ್ಪೇಸ್‌ಎಕ್ಸ್ ಅನ್ನು ನಾಸಾ ತನ್ನ ಆರ್ಟೆಮಿಸ್ ಕಾರ್ಯಕ್ರಮಕ್ಕಾಗಿ ಲ್ಯಾಂಡರ್ ನಿರ್ಮಿಸಲು ಆಯ್ಕೆ ಮಾಡಿತು. ಈ ಕಾರ್ಯಾಚರಣೆಯ ಮೂಲಕ, ಈ ದಶಕದಲ್ಲಿ ಮನುಷ್ಯನನ್ನು ಚಂದ್ರನಲ್ಲಿಗೆ ಕಳುಹಿಸಲು ಯೋಜನೆ ರೂಪಿಸಲಾಗಿದೆ.
- ಸ್ಟಾರ್ ಶಿಪ್ ಆಧಾರಿತ ಈ ಬಾಹ್ಯಾಕಾಶ ನೌಕೆಯು, ಚಂದ್ರನ ಮೇಲೆ ಇಳಿಯುವ 2ನೆಯ ಪುರುಷ ಮತ್ತು ಮೊದಲ ಮಹಿಳೆಯನ್ನು ಹೊತ್ತೊಯ್ಯಲಿದೆ.
- ‘ಆರ್ಟೆಮಿಸ್ ಪ್ರೋಗ್ರಾಂ’ (Artemis programme) ನೊಂದಿಗೆ ನಾಸಾದ ಗುರಿಯು ಭವಿಷ್ಯದಲ್ಲಿ ಮಂಗಳಗ್ರಹವನ್ನು ಅನ್ವೇಷಿಸಲು ಅಗತ್ಯವಾದ ಹೊಸ ತಂತ್ರಜ್ಞಾನಗಳು, ಸಾಮರ್ಥ್ಯಗಳು ಮತ್ತು ವ್ಯವಹಾರ ವಿಧಾನಗಳನ್ನು ಪ್ರದರ್ಶಿಸುವುದಾಗಿದೆ.
ವಿಷಯಗಳು: ವಿಪತ್ತು ನಿರ್ವಹಣೆ.
ಯುರೇನಿಯಂ ಮತ್ತು ಅದರ ಉಪಯೋಗಗಳ ಬಗ್ಗೆ:
(About uranium and its uses)
ಸಂದರ್ಭ:
ಇತ್ತೀಚೆಗೆ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (Anti-Terrorism Squad- ATS) ಸುಮಾರು 21 ಕೋಟಿ ರೂ.ಗಳ ಮೌಲ್ಯದ 7 ಕೆಜಿ ನೈಸರ್ಗಿಕ ಯುರೇನಿಯಂ ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ.
- ಪರವಾನಗಿ ಇಲ್ಲದೆ ಯುರೇನಿಯಂ ಹೊಂದಿದ್ದ ಆರೋಪದ ಮೇಲೆ ಈ ಇಬ್ಬರನ್ನು ಪರಮಾಣು ಶಕ್ತಿ ಕಾಯ್ದೆ 1962 ರ ಅಡಿಯಲ್ಲಿ ಬಂಧಿಸಲಾಗಿದೆ.
ನಿಖರವಾಗಿ ಯುರೇನಿಯಂ ಎಂದರೇನು ಮತ್ತು ಅದರ ಉಪಯೋಗಗಳು ಯಾವುವು?
ಯುರೇನಿಯಂ ನ ದೊರೆಯುವಿಕೆ: ಇದು ಸ್ವಾಭಾವಿಕವಾಗಿ ಮಣ್ಣು, ಬಂಡೆಗಳು ಮತ್ತು ನೀರಿನಲ್ಲಿ ಕಡಿಮೆ ಸಾಂದ್ರತೆಯಲ್ಲಿ ಕಂಡುಬರುತ್ತದೆ ಮತ್ತು ವಾಣಿಜ್ಯಿಕವಾಗಿ, ಯುರೇನಿಯಂ ಅಂಶವನ್ನು ಹೊಂದಿರುವ ಖನಿಜಗಳಿಂದ ಇದನ್ನು ಹೊರತೆಗೆಯಲಾಗುತ್ತದೆ.
ಅನ್ವಯಗಳು:
- ಬೆಳ್ಳಿಯಂತಹ ಬೂದು ಲೋಹವನ್ನು ಹೋಲುವ ಯುರೇನಿಯಂ ಅನ್ನು ಅದರ ಪರಮಾಣು ಗುಣಲಕ್ಷಣಗಳಿಂದಾಗಿ ಮುಖ್ಯವಾಗಿ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಬಳಸಲಾಗುತ್ತದೆ.
- ಖಾಲಿಯಾದ ಯುರೇನಿಯಂ(Depleted uranium) ಅನ್ನು ವಿಕಿರಣಶೀಲ ವಸ್ತುಗಳ ಸಾಗಣೆಯ ಸಮಯದಲ್ಲಿ ಮತ್ತು ‘ವಿಕಿರಣ ಚಿಕಿತ್ಸೆ’(Radiation Therapy) ಯಲ್ಲಿ ಬಳಸುವ ವೈದ್ಯಕೀಯ ವಿಧಾನಗಳಲ್ಲಿ ಅವಘಡಗಳನ್ನು ತಪ್ಪಿಸಲು ಗುರಾಣಿಯಂತೆ ಬಳಸಲಾಗುತ್ತದೆ.
- ಇದು ಸ್ವತಃ ವಿಕಿರಣಶೀಲ ಅಂಶವನ್ನು ಹೊಂದಿದ್ದರೂ, ಯುರೇನಿಯಂನ ಹೆಚ್ಚಿನ ಸಾಂದ್ರತೆಯು ವಿಕಿರಣವನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ.
- ಇದರ ಹೆಚ್ಚಿನ ಸಾಂದ್ರತೆಯು ವಿಮಾನ ಮತ್ತು ಕೈಗಾರಿಕಾ ಯಂತ್ರೋಪಕರಣಗಳಲ್ಲಿ ತೂಕ ನಿರೋಧಕವಾಗಿ (Counterweights) ಬಳಸಲು ಉಪಯುಕ್ತವಾಗಿದೆ.
ಭಾರತದಲ್ಲಿ ಯುರೇನಿಯಂ ಗಣಿಗಾರಿಕೆ:
- ಭಾರತದಲ್ಲಿ, ಧಾರವಾಡದ ಬಂಡೆಗಳಲ್ಲಿ ಯುರೇನಿಯಂ ನಿಕ್ಷೇಪಗಳು ಕಂಡುಬರುತ್ತವೆ.
- ಇದು ಸಿಂಘ್ಬುಂ ತಾಮ್ರದ ನಿಕ್ಷೇಪಗಳು ಇರುವ ಪ್ರದೇಶ (Singbhum Copper belt) ಜಾರ್ಖಂಡ್; ರಾಜಸ್ಥಾನದ,ಉದಯಪುರ, ಅಲ್ವಾರ್ ಮತ್ತು ಜುಂಜುನು ಜಿಲ್ಲೆಗಳು, ಛತ್ತೀಸಗಡ ದ ದುರ್ಗ್ ಜಿಲ್ಲೆ, ಮಹಾರಾಷ್ಟ್ರದ ಭಂಡಾರ ಜಿಲ್ಲೆ ಮತ್ತು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಯುರೇನಿಯಂ ಕಂಡುಬರುತ್ತದೆ.
- ಇತ್ತೀಚೆಗೆ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಶೇಷಾಚಲಂ ಕಾಡುಗಳ ಮತ್ತು ಶ್ರೀಶೈಲಂ ಮಧ್ಯದಲ್ಲಿ (ಆಂಧ್ರಪ್ರದೇಶದ ದಕ್ಷಿಣ ತುದಿಯಿಂದ ತೆಲಂಗಾಣದ ದಕ್ಷಿಣ ಅಂಚಿನವರೆಗೆ) ಹೆಚ್ಚಿನ ಪ್ರಮಾಣದ ಯುರೇನಿಯಂ ನಿಕ್ಷೇಪಗಳು ಪತ್ತೆಯಾಗಿವೆ.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
ಮಾನವನಿಂದ ಉಂಟಾಗುವ ಮೀಥೇನ್ ಹೊರಸೂಸುವಿಕೆಯ ಬಗ್ಗೆ ವಿಶ್ವಸಂಸ್ಥೆಯ ವರದಿ:
(UN Report on human-caused methane emissions)
ಸಂದರ್ಭ:
ಇತ್ತೀಚೆಗೆ, ‘ಗ್ಲೋಬಲ್ ಮೀಥೇನ್ ಅಸೆಸ್ಮೆಂಟ್: ಮೀಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಪ್ರಯೋಜನಗಳು ಮತ್ತು ವೆಚ್ಚಗಳು ’ (Global Methane Assessment: Benefits and Costs of Mitigating Methane Emission) ಎಂಬ ಶೀರ್ಷಿಕೆಯ ವರದಿಯನ್ನು ಹವಾಮಾನ ಮತ್ತು ಶುದ್ಧ ವಾಯು ಒಕ್ಕೂಟ (Climate and Clean Air Coalition) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (United Nations Environment Programme- UNEP) ಬಿಡುಗಡೆ ಮಾಡಿದೆ.
ಪ್ರಮುಖ ಆವಿಷ್ಕಾರಗಳು:
ಮುಖ್ಯ ಕಾಳಜಿಗಳು:
- 1980 ರ ದಶಕದಲ್ಲಿ ರೆಕಾರ್ಡ್ ಕೀಪಿಂಗ್ (ದಾಖಲೆಯನ್ನು ಕಾಪಿಡುವ) ಪ್ರಕ್ರಿಯೆಯ ಸಂಪ್ರದಾಯವು ಪ್ರಾರಂಭವಾದಾಗಿನಿಂದ, ಮಾನವನಿಂದ ಉಂಟಾದ ಮೀಥೇನ್ ಹೊರಸೂಸುವಿಕೆಯು ಇತರ ಯಾವುದೇ ಅವಧಿಗಳಿಗಿಂತ ವೇಗವಾಗಿ ಹೆಚ್ಚುತ್ತಿದೆ.
- ಆದಾಗ್ಯೂ, ಕರೋನವೈರಸ್ ವೈರಸ್ (COVID-19) ಸಾಂಕ್ರಾಮಿಕ ಸಮಯದಲ್ಲಿ ಕಾರ್ಬನ್ ಡೈಆಕ್ಸೈಡ್ ಮಟ್ಟ ಕಡಿಮೆಯಾಗಿದೆ. ಅದೇನೇ ಇದ್ದರೂ, ವಾತಾವರಣದಲ್ಲಿನ ಮೀಥೇನ್ ಕಳೆದ ವರ್ಷ ದಾಖಲೆಯ ಮಟ್ಟವನ್ನು ತಲುಪಿತ್ತು.
- ಮೀಥೇನ್ ಅತ್ಯಂತ ಶಕ್ತಿಶಾಲಿ ಹಸಿರುಮನೆ ಅನಿಲವಾಗಿರುವುದರಿಂದ ಇದು ಒಂದು ಕಳವಳವಾಗಿದೆ. ಕೈಗಾರಿಕಾ ಪೂರ್ವದಿಂದಲೂ ವಾತಾವರಣದಲ್ಲಿನ ಶೇಕಡಾ 30 ರಷ್ಟು ತಾಪಮಾನದ ಏರಿಕೆಗೆ ಮೀಥೇನ್ ಕಾರಣವಾಗಿದೆ.
ಮಾನವನಿಂದಾಗಿ ಉತ್ಪತ್ತಿಯಾದ ಮೀಥೇನ್ ಹೊರಸೂಸುವಿಕೆಯ ಮೂಲಗಳು:
- ಮಾನವನಿಂದಾಗಿ ಉತ್ಪತ್ತಿಯಾದ ಮೀಥೇನ್‌ನ ಹೆಚ್ಚಿನ ಹೊರಸೂಸುವಿಕೆ ಮೂರು ವಲಯಗಳಿಂದ ಬಂದಿದೆ: ಪಳೆಯುಳಿಕೆ ಇಂಧನಗಳು, ತ್ಯಾಜ್ಯ ಮತ್ತು ಕೃಷಿ.
- ಪಳೆಯುಳಿಕೆ ಇಂಧನ ಕ್ಷೇತ್ರದಲ್ಲಿ, ತೈಲ ಮತ್ತು ಅನಿಲ ಹೊರತೆಗೆಯುವಿಕೆ, ಸಂಸ್ಕರಣೆ ಮತ್ತು ವಿತರಣೆಯಿಂದಾಗಿ ಮೀಥೇನ್ ಹೊರಸೂಸುವಿಕೆಯು ಶೇಕಡಾ 23 ರಷ್ಟಿದೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ 12 ಪ್ರತಿಶತ ಮೀಥೇನ್ ಹೊರಸೂಸುವಿಕೆ ಇದೆ.
- ತ್ಯಾಜ್ಯ ಪ್ರದೇಶದಲ್ಲಿ, ಶೇಕಡಾ 20 ರಷ್ಟು ಮೀಥೇನ್ ಹೊರಸೂಸುವಿಕೆಯು ತ್ಯಾಜ್ಯಸಾಮಾಗ್ರಿಗಳಿಂದ ಭೂ ಭರ್ತಿ ಮಾಡುವುದು ಮತ್ತು ತ್ಯಾಜ್ಯ ನೀರಿನಿಂದ ಉಂಟಾಗುತ್ತದೆ.
ಕೃಷಿ ಕ್ಷೇತ್ರದಲ್ಲಿ, ಜಾನುವಾರುಗಳ ಗೊಬ್ಬರ ಮತ್ತು ಹೊರಸೂಸುವಿಕೆ ಮತ್ತು ಕರುಳಿನ ಹುದುಗುವಿಕೆಯಿಂದಾಗಿ ಸುಮಾರು 32 ಪ್ರತಿಶತದಷ್ಟು ಮತ್ತು ಭತ್ತದ ಕೃಷಿಯಿಂದ 8 ಪ್ರತಿಶತದಷ್ಟು ಮೀಥೇನ್ ಹೊರಸೂಸುತ್ತದೆ.
ವಿವಿಧ ದೇಶಗಳು ಮತ್ತು ಪ್ರದೇಶಗಳ ನಡುವೆ ಹೊರಸೂಸುವಿಕೆ ಕಡಿತ ಸಾಮರ್ಥ್ಯದಲ್ಲಿನ ವ್ಯತ್ಯಾಸಗಳು:
- ಕೃಷಿ, ಪಳೆಯುಳಿಕೆ ಇಂಧನ ಕಾರ್ಯಾಚರಣೆ ಮತ್ತು ತ್ಯಾಜ್ಯ ನಿರ್ವಹಣೆಯಿಂದ ಮೀಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಯುರೋಪ್ ಹೊಂದಿತ್ತು.
- ತ್ಯಾಜ್ಯ ಕ್ಷೇತ್ರದಲ್ಲಿ ಮೀಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಭಾರತ ಹೊಂದಿತ್ತು.
- ಕಲ್ಲಿದ್ದಲು ಉತ್ಪಾದನೆ ಮತ್ತು ಜಾನುವಾರುಗಳಿಂದ ಮೀಥೇನ್ ಹೊರಸೂಸುವಿಕೆಯನ್ನು ತಗ್ಗಿಸುವಲ್ಲಿ ಚೀನಾ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ, ಈ ವಿಷಯದಲ್ಲಿ ಆಫ್ರಿಕಾ ಜಾನುವಾರು ಮತ್ತು ತೈಲ ಮತ್ತು ಅನಿಲದಿಂದ ಮೀಥೇನ್ ಹೊರಸೂಸುವಿಕೆಯನ್ನು ತಗ್ಗಿಸುವಲ್ಲಿ ಉತ್ತಮ ಸಾಮರ್ಥ್ಯ ಹೊಂದಿದೆ.
- ಪಳೆಯುಳಿಕೆ ಇಂಧನ ಉದ್ಯಮವು ಕಡಿಮೆ-ವೆಚ್ಚದ ಮೀಥೇನ್ ಕಡಿತಕ್ಕೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
ಸಲಹೆಗಳು:
- ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಪ್ಪಿಸಲು ಮಾನವ-ರಚಿತ ಮೀಥೇನ್ ಹೊರಸೂಸುವಿಕೆಯನ್ನು ಶೇಕಡಾ 45 ರಷ್ಟು ಕಡಿತಗೊಳಿಸಬೇಕು.
- ಇಂತಹ ಕಡಿತವು 2045 ರ ಹೊತ್ತಿಗೆ ಜಾಗತಿಕ ತಾಪಮಾನವನ್ನು 0.3 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗುವುದನ್ನು ತಡೆಯಬಹುದು.
- ಇದು ವಾರ್ಷಿಕವಾಗಿ 260,000 ಅಕಾಲಿಕ ಮರಣಗಳು, 775,000 ಆಸ್ತಮಾ ಸಂಬಂಧಿತ ಆಸ್ಪತ್ರೆ ಭೇಟಿಗಳು ಮತ್ತು 25 ದಶಲಕ್ಷ ಟನ್ ಬೆಳೆ ನಷ್ಟವನ್ನು ತಡೆಯಬಲ್ಲದು.
ಮೂರು ನಡವಳಿಕೆಯ ಬದಲಾವಣೆಗಳು – ಆಹಾರ ತ್ಯಾಜ್ಯ ಮತ್ತು ಆಹಾರ ನಷ್ಟವನ್ನು ಕಡಿಮೆ ಮಾಡುವುದು, ಜಾನುವಾರುಗಳ ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು (ಸಸ್ಯಾಹಾರಿ ಅಥವಾ ಕಡಿಮೆ ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ಹೊಂದಿರುವ) – ಮುಂದಿನ ಕೆಲವು ದಶಕಗಳಲ್ಲಿ ವರ್ಷಕ್ಕೆ 65–80 ದಶಲಕ್ಷ ಟನ್ ಮೀಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಕಬಾಸುರ ಕುಡಿನೀರ್:
(Kabasura Kudineer)
- ಕಬಾಸುರಾ ಕುಡಿನಿರ್ ಸಾಮಾನ್ಯ ಉಸಿರಾಟದ ಪ್ರಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಿದ್ಧ ಸಂಪ್ರದಾಯದ ವೈದ್ಯ ಪದ್ಧತಿಯ ವೈದ್ಯರು ಬಳಸುವ ಸಾಂಪ್ರದಾಯಿಕ ಸೂತ್ರವಾಗಿದೆ.
- ಇದು ಗಿಡಮೂಲಿಕೆಗಳ ಮಿಶ್ರಣವಾಗಿದ್ದು, ಶುಂಠಿ, ಪಿಪ್ಪಾಲಿ, ಲವಂಗ, ಸಿರುಕನೋರಿಯ ಬೇರು, ಮೂಲಂಗಿ ಬೇರು, ಕಡುಕ್ಕೈ, ಅಜ್ವೈನ್ ಮತ್ತು ಇತರ ಅನೇಕ ಗಿಡಮೂಲಿಕೆಗಳ ಒಣ ಪದಾರ್ಥಗಳನ್ನು ಹೊಂದಿರುತ್ತದೆ.
- ಈ ಎಲ್ಲಾ ವಸ್ತುಗಳನ್ನು ಪುಡಿಮಾಡಿ ನೀರಿನೊಂದಿಗೆ ಬೆರೆಸಿ, ನಂತರ ಅದರ ಆರಂಭಿಕ ಪ್ರಮಾಣವನ್ನು ನಾಲ್ಕನೇ ಒಂದು ಭಾಗ ಉಳಿದಿರುವವರೆಗೆ ಕುದಿಸಿ ಕಷಾಯ ತಯಾರಿಸಲಾಗುತ್ತದೆ.
ಸಂದರ್ಭ:
ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯನ್ನು ತೀವ್ರವಾಗಿ ಎದುರಿಸಲು ಆಯುಷ್ ಸಚಿವಾಲಯವು ತನ್ನ ಪಾಲಿ ಗಿಡಮೂಲಿಕೆಗಳ ಆಯುರ್ವೇದ ಔಷಧಿಗಳಾದ ಆಯುಷ್ -64 ಮತ್ತು ಕಬಾಸುರಾ ಕುಡಿನಿರ್ ಅನ್ನು ಕೋವಿಡ್ ಸೋಂಕಿತ ರೋಗಿಗಳಿಗೆ ವಿತರಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ಇ-ಸಂಜೀವನಿ ಒಪಿಡಿ:
(e-Sanjeevani OPD)
- ಇ-ಸಂಜೀವನಿ ಒಪಿಡಿ (e-Sanjeevani OPD) ಭಾರತ ಸರ್ಕಾರದ ಮೊಹಾಲಿಯ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ಆಶ್ರಯದಲ್ಲಿ ಅಭಿವೃದ್ಧಿಪಡಿಸಿದ ಭಾರತ ಸರ್ಕಾರದ ಪ್ರಮುಖ ಟೆಲಿಮೆಡಿಸಿನ್ ವೇದಿಕೆಯಾಗಿದೆ.
- ಇದು ಭಾರತೀಯ ನಾಗರಿಕರಿಗೆ ಉಚಿತ ಸಮಾಲೋಚನೆ ಒದಗಿಸುತ್ತದೆ.
ಪುಲಾಯರ್ ಸಮುದಾಯ:
(Pulayar Community)
- ಪುಲಾಯರ್, ಪುಲಯ, ಅಥವಾ ಹೊಲೆಯ ಅಥವಾ ಚೆರಮಾರ್ ಕೇರಳ, ಕರ್ನಾಟಕ ಮತ್ತು ಐತಿಹಾಸಿಕ ತಮಿಳುನಾಡು ಅಥವಾ ತಮಿಳುಕಂನಲ್ಲಿ ಕಂಡುಬರುವ ಪ್ರಮುಖ ಸಾಮಾಜಿಕ ಗುಂಪುಗಳಲ್ಲಿ ಒಂದಾಗಿದೆ.
- ಪುಲಯ ಸಮುದಾಯವು ಅದರ ಸಂಗೀತ, ಕರಕುಶಲತೆ ಮತ್ತು ಕೆಲವು ನೃತ್ಯಗಳಿಗೆ ಹೆಸರುವಾಸಿಯಾಗಿದೆ, ಇದರಲ್ಲಿ ಕೋಲಂ-ತುಲ್ಲಾಳ (Kōlam-thullal (a mask dance which is part of their exorcism rituals) and Mudi-āttam or hair-dance)(ಅವರ ಭೂತಾರಾಧನೆಯ ಭಾಗವಾಗಿರುವ ಮುಖವಾಡ ನೃತ್ಯ) ಮತ್ತು ಮುಡಿ-ಅಟ್ಟಮ್ ಅಥವಾ ಕೂದಲು-ನೃತ್ಯ.
- ಮಹಾತ್ಮ ಅಯ್ಯಂಕಳಿ (1863-1941) ಅವರನ್ನು ಪುಲಯ ರಾಜ ಎಂದು ಕರೆಯಲಾಗುತ್ತದೆ.
ಸಂದರ್ಭ:
ಸ್ಥಳೀಯ ದೇವತೆ ವೀರಪಟ್ಟಣ ರ (Vairapattan) ವಾರ್ಷಿಕ ಉತ್ಸವವನ್ನು ಆಚರಿಸಲು ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ವ್ಯಾಪ್ತಿಯೊಳಗಿನ ಪುಲಯರ್ ಸಮುದಾಯದ ಎರಡು ಬುಡಕಟ್ಟು ಪಂಗಡಗಳು (ಕಟ್ಟುಪಟ್ಟಿ ಮತ್ತು ಕುಜಿಪಟ್ಟಿ) ಸಿದ್ಧತೆಗಳನ್ನು ನಡೆಸುತ್ತಿವೆ.













