[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 24ನೇ ಏಪ್ರಿಲ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:   

1. ದೆಹಲಿಯಲ್ಲಿ ಹೆಚ್ಚುತ್ತಿರುವ ಯುನೈಟೆಡ್ ಕಿಂಗ್ಡಮ್ ಕೊರೋನಾ ರೂಪಾಂತರಿಯ ಹರಡುವಿಕೆ.

2. ಹೇಗ್ ಮೂಲದ,ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧಕ್ಕಾಗಿ ಇರುವ ಸಂಸ್ಥೆ (OPCW) ಗೆ ‘ಬಾಹ್ಯ ಲೆಕ್ಕಪರಿಶೋಧಕ’.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸ್ವಾಮಿತ್ವ ಯೋಜನೆ.

2. ವೇಯ್ಸ್ ಮತ್ತು ಮೀನ್ಸ್ ಕ್ರೆಡಿಟ್.

3. ಕ್ರ್ಯೂ -2 ಮಿಷನ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಗಡಿ ರಸ್ತೆ ಸಂಘಟನೆ (BRO).

2. ಹವಾಮಾನ 2021 ರ ನಾಯಕರ ಶೃಂಗಸಭೆ.

3. ರಾಷ್ಟ್ರೀಯ ಪಂಚಾಯತಿ ರಾಜ್ ದಿನ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

 ದೆಹಲಿಯಲ್ಲಿ ಹೆಚ್ಚುತ್ತಿರುವ ಯುನೈಟೆಡ್ ಕಿಂಗ್ಡಮ್ ಕೊರೋನಾ ರೂಪಾಂತರಿಯ ಹರಡುವಿಕೆ:


(Rising prevalence of U.K. strain in Delhi)

 ಸಂದರ್ಭ:

ದೆಹಲಿಯ ಕೋವಿಡ್ -19 ಪ್ರಕರಣಗಳಿಂದ ತೆಗೆದ ಅನುಕ್ರಮವಾದ ಜೀನೋಮ್ ಮಾದರಿಗಳಲ್ಲಿ U.K ದ ರೂಪಾಂತರಿ ವೈರಸ್ (U.K. variant- B.1.1.7) ಪ್ರಮಾಣವು ಮಾರ್ಚ್ ಎರಡನೇ ವಾರದಲ್ಲಿದ್ದ 28% ರಿಂದ ಮಾರ್ಚ್ ಕೊನೆಯ ವಾರಕ್ಕೆ ಹೋಲಿಸಿದರೆ 50% ಕ್ಕೆ ಏರಿದೆ.

 

ಏನಿದು ಸಮಸ್ಯೆ?

 ಈ ಯು.ಕೆ ರೂಪಾಂತರಿಯು N501Y ಎಂಬ  ರೂಪಾಂತರವನ್ನು ಹೊಂದಿದೆ, ಇದು ವೈರಸ್ ಹರಡುವಿಕೆಯನ್ನು ವೇಗಗೊಳಿಸುತ್ತದೆ ಎಂದು ವರದಿಯಾಗಿದೆ. ಇದು ಆರಂಭದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ರೋಗದ ತೀವ್ರತೆ ಮತ್ತು ಮರಣ ಪ್ರಮಾಣದ ಹೆಚ್ಚಳಕ್ಕೆ  ಕೂಡ ಕಾರಣವಾಗಬಹುದು.

 

ಹಿನ್ನೆಲೆ:

 ಪಂಜಾಬ್, ಛತ್ತಿಸ್ಗಢ ಮತ್ತು ಗುಜರಾತ್ ರಾಜ್ಯಗಳೊಂದಿಗೆ    ದೆಹಲಿಯು ಕೂಡ  ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಅವರ ಸಂಪರ್ಕಿತರಲ್ಲಿ ಕಂಡುಬಂದ, ಯುಕೆ ಮಾದರಿಯ ವೈರಸ್-ಸೋಂಕಿನ ಪ್ರಕರಣಗಳಿಗಿಂತ   ಹೆಚ್ಚಿನ ಪ್ರಕರಣಗಳನ್ನು ಕಂಡಿದ್ದು  ಸಾಕಷ್ಟು ವ್ಯಾಪಕವಾಗಿ ದೆಹಲಿಯ ಸಮುದಾಯದಲ್ಲಿ ಯುಕೆ ಮಾದರಿಯ ವೈರಸ್ ಕಂಡುಬಂದಿದೆ.

 

ವೈರಸ್ ಗಳು ಏಕೆ ರೂಪಾಂತರಗೊಳ್ಳುತ್ತವೆ?

  •  ರೂಪಾಂತರವು ಕೇವಲ ವ್ಯತ್ಯಾಸವನ್ನು ಸೂಚಿಸುತ್ತದೆ: ಜೀನೋಮ್ ನಲ್ಲಿ ಅಕ್ಷರ ಬದಲಾವಣೆ/ ಜೀನೋಮ್‌ನ ರಚನೆಯಲ್ಲಿ ಬದಲಾವಣೆ.
  • ವೈರಸ್ನಲ್ಲಿನ ರೂಪಾಂತರವು ಅದರ ನೈಸರ್ಗಿಕ ವಿಕಾಸದ ಭಾಗವಾಗಿದೆ.
  • ಲಕ್ಷಾಂತರ ಜನರು ಸೋಂಕಿಗೆ ಒಳಗಾದ ನಂತರ, ವೈರಸ್ ಮೇಲೆ ಒತ್ತಡ ಹೆಚ್ಚಾಗುತ್ತದೆ.
  • SARS-CoV-2 ರ ಸಂದರ್ಭದಲ್ಲಿ: ಇದು ರಿಬೊನ್ಯೂಕ್ಲಿಯಿಕ್ ಆಮ್ಲ (RNA) ವೈರಸ್, ಮತ್ತು ಅದರಲ್ಲಿನ ರೂಪಾಂತರವು ಅದರ ಅಣುಗಳ ಕ್ರಮದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ.
  • RNA ವೈರಸ್‌ನಲ್ಲಿನ ರೂಪಾಂತರವು ಸಾಮಾನ್ಯವಾಗಿ ವೈರಸ್‌ ತನ್ನ ಪ್ರತಿಕೃತಿಗಳನ್ನು ಮಾಡುವಾಗ ತಪ್ಪು ಮಾಡಿದ ಸಂದರ್ಭದಲ್ಲಿ ಸಂಭವಿಸುತ್ತದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ಹೇಗ್ ಮೂಲದ,ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧಕ್ಕಾಗಿ ಇರುವ ಸಂಸ್ಥೆ (OPCW) ಗೆ ‘ಬಾಹ್ಯ ಲೆಕ್ಕಪರಿಶೋಧಕ’:


(External auditor for Hague-based OPCW)

 ಸಂದರ್ಭ:

ಮೂರು ವರ್ಷಗಳ ಅವಧಿಗೆ ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧದ ಸಂಸ್ಥೆ’ (External auditor for Hague-based OPCW) ಯ ಬಾಹ್ಯ ಲೆಕ್ಕ ಪರಿಶೋಧಕರಾಗಿ ಭಾರತದ ಲೆಕ್ಕ ಮಹಾ ಪರಿಶೋಧಕರನ್ನು (Comptroller and Auditor General -CAG) ಆಯ್ಕೆ ಮಾಡಲಾಗಿದೆ. ಅವರ ಅಧಿಕಾರಾವಧಿ 2021 ರಿಂದ ಪ್ರಾರಂಭವಾಗಲಿದೆ.

  • ಇತ್ತೀಚೆಗೆ, ನಡೆದ OPCW ಸಮ್ಮೇಳನದಲ್ಲಿ ಚುನಾವಣಾ ಪ್ರಕ್ರಿಯೆಯ ಮೂಲಕ ಈ ನೇಮಕಾತಿ ಮಾಡಲಾಗಿದೆ.
  • OPCW ಸಮ್ಮೇಳನದಲ್ಲಿ, ಏಷ್ಯಾ ಸಮೂಹದ ಪ್ರತಿನಿಧಿಯಾಗಿ ಭಾರತವನ್ನು OPCW ನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಇನ್ನೂ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.

 

ಕಾರ್ಯಕಾರಿ ಮಂಡಳಿಯ ಕುರಿತು:

ಇದು ‘ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧದ ಸಂಸ್ಥೆ’ (OPCW) ನ ಆಡಳಿತ ಮಂಡಳಿ (governing body) ಯಾಗಿದೆ.

  • ಈ ‘ಕಾರ್ಯಕಾರಿ ಮಂಡಳಿಯು’ 41 OPCW ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ, ಅವುಗಳನ್ನು ಸದಸ್ಯ ರಾಷ್ಟ್ರಗಳ ಸಮ್ಮೇಳನದಲ್ಲಿ ಮಾತುಕತೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಪ್ರಕ್ರಿಯೆಯು ಪುನರಾವರ್ತನೆಗೊಳ್ಳುತ್ತದೆ.
  • ಈ ಮಂಡಳಿಯು, ತಾಂತ್ರಿಕ ಸಚಿವಾಲಯದ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತದೆ ಮತ್ತು ಸಮಾವೇಶದ ಪರಿಣಾಮಕಾರಿ ಅನುಷ್ಠಾನ ಮತ್ತು ಅನುಸರಣೆಯನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದೆ.
  • ಕಾರ್ಯನಿರ್ವಾಹಕ ಮಂಡಳಿಗೆ ಅನುಕ್ರಮದ ಆಧಾರದ ಮೇಲೆ ಆಯ್ಕೆಯಾಗುವ ಮೂಲಕ ಸೇವೆ ಸಲ್ಲಿಸುವ ಹಕ್ಕು ಪ್ರತಿ ಸದಸ್ಯ ರಾಷ್ಟ್ರಕ್ಕೂ ಇದೆ.

 

OPCW ಕುರಿತು:

  • ಇದು,‘ಪರಮಾಣು ಪ್ರಸರಣ ನಿಷೇಧ ಒಪ್ಪಂದ’ (Non-Proliferation Treaty- NPT) ದ ನಿಯಮಗಳನ್ನು ಜಾರಿಗೆ ತರಲು ಮತ್ತು ಕಾರ್ಯಗತಗೊಳಿಸಲು 1997ರ ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದ’ ಅಡಿಯಲ್ಲಿ (Chemical Weapons Convention- CWC) ಸ್ಥಾಪಿಸಿದ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.
  • ‘ಪರಮಾಣು ಪ್ರಸರಣ ನಿಷೇಧ ಒಪ್ಪಂದ’ ದ(NPT) ಅಡಿಯಲ್ಲಿ, ಒಪ್ಪಂದಕ್ಕೆ ಸಹಿ ಹಾಕುವ ದೇಶಗಳಿಗೆ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ, ಸಂಗ್ರಹಣೆ ಅಥವಾ ವರ್ಗಾವಣೆಯನ್ನು ನಿಷೇಧಿಸಲಾಗಿದೆ.
  • ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ‘ಒಪ್ಪಂದ’ದ ಅನುಸರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ ಎಂದು ಪರಿಶೀಲಿಸಲು ಮತ್ತು ತಪಾಸಣೆ ನಡೆಸಲು OPCW ಗೆ ಅಧಿಕಾರವಿದೆ.
  • OPCW ಮತ್ತು ವಿಶ್ವಸಂಸ್ಥೆಯ ನಡುವಿನ 2001 ರ ಸಂಬಂಧಗಳ ಒಪ್ಪಂದದಡಿಯಲ್ಲಿ, OPCW ತನ್ನ ಮೇಲ್ವಿಚಾರಣೆ/ತಪಾಸಣೆ ಮತ್ತು ಇತರ ಕ್ರಮಗಳ ಬಗ್ಗೆ ವಿಶ್ವಸಂಸ್ಥೆಗೆ ವರದಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಮೂಲಕ ಮಾಡುತ್ತದೆ.
  • ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಿರ್ಮೂಲನೆ ಮಾಡುವ ವ್ಯಾಪಕ ಪ್ರಯತ್ನಗಳಿಗಾಗಿ ಈ ಸಂಸ್ಥೆಗೆ 2013 ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.

 

ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಿಂದ ಈ ಕೆಳಗಿನ ಕೃತ್ಯಗಳನ್ನು ನಿಷೇಧಿಸಲಾಗಿದೆ:

  • ರಾಸಾಯನಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ, ಸ್ವಾಧೀನ, ಸಂಗ್ರಹಣೆ ಅಥವಾ ಉಳಿಸಿಕೊಳ್ಳುವುದು.
  • ರಾಸಾಯನಿಕ ಶಸ್ತ್ರಾಸ್ತ್ರಗಳ ನೇರ ಅಥವಾ ಪರೋಕ್ಷ ವರ್ಗಾವಣೆ.
  • ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬಳಕೆಗೆ ಮಿಲಿಟರಿ ಸಿದ್ಧತೆ.
  • CWC-ನಿಷೇಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇತರ ರಾಜ್ಯಗಳಿಗೆ ಸಹಾಯ ಮಾಡಲು, ಪ್ರೋತ್ಸಾಹಿಸಲು ಅಥವಾ ಪ್ರೇರೇಪಿಸಲು.
  • ‘ಗಲಭೆ ನಿಯಂತ್ರಣ ಏಜೆಂಟ್‌ಗಳನ್ನು’ ಯುದ್ಧದ ವಿಧಾನವಾಗಿ ಬಳಸುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ದೇಶದ ವಿವಿಧ ಭಾಗಗಳಲ್ಲಿ ಪ್ರಮುಖ ಬೆಳೆ ಬೆಳೆ ವಿಧಾನಗಳು, ವಿವಿಧ ರೀತಿಯ ನೀರಾವರಿ ಮತ್ತು ನೀರಾವರಿ ವ್ಯವಸ್ಥೆಗಳ ಸಂಗ್ರಹಣೆ, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರುಕಟ್ಟೆ ಮತ್ತು ಸಮಸ್ಯೆಗಳು ಮತ್ತು ಸಂಬಂಧಿತ ಅಡೆತಡೆಗಳು; ರೈತರ ನೆರವಿನಲ್ಲಿ ಇ-ತಂತ್ರಜ್ಞಾನ.

ಸ್ವಾಮಿತ್ವ ಯೋಜನೆ:


(SWAMITVA SCHEME)

ಸಂದರ್ಭ:

ಈ ಮೊದಲು ಕೇವಲ 9 ರಾಜ್ಯಗಳಿಗೆ ಮಾತ್ರ ಪ್ರಾರಂಭಿಸಲಾಗಿದ್ದ ಈ ಸ್ವಾಮಿತ್ವ ಯೋಜನೆಯನ್ನು ಈಗ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲಾಗಿದೆ.

 

‘ಸ್ವಾಮಿತ್ವ ಯೋಜನೆ’ ಯ ಅವಲೋಕನ ಮತ್ತು ಪ್ರಮುಖ ಲಕ್ಷಣಗಳು:

ಈ ಯೋಜನೆಯನ್ನು ಪಂಚಾಯತಿ ರಾಜ್ ದಿನ ಅಂದರೆ (ಏಪ್ರಿಲ್ 24, 2020) ರಂದು ಪ್ರಾರಂಭಿಸಲಾಯಿತು.

  • ಯೋಜನೆಯಡಿ, ಡ್ರೋನ್‌ಗಳಂತಹ ಸುಧಾರಿತ ತಂತ್ರಜ್ಞಾನಗಳ ಬಳಕೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ವಸತಿ ಜಮೀನುಗಳ ಭೂ ಮಾಲೀಕತ್ವವನ್ನು ನಕ್ಷೆ ಮಾಡಲಾಗುತ್ತದೆ.
  • ಈ ಯೋಜನೆಯು ಭಾರತದಲ್ಲಿ ‘ಆಸ್ತಿ ದಾಖಲೆ ನಿರ್ವಹಣೆ’ಯಲ್ಲಿ ಕ್ರಾಂತಿಯನ್ನುಂಟು ಮಾಡುವ ಗುರಿಯನ್ನು ಹೊಂದಿದೆ.
  • ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪಂಚಾಯತಿ ರಾಜ್ ಸಚಿವಾಲಯ’ ವು ನಿರ್ವಹಿಸುತ್ತಿದೆ.
  • ಯೋಜನೆಯಡಿ, ಹಳ್ಳಿಗಳಲ್ಲಿನ ವಸತಿ ಭೂಮಿಯ ವಿವಾದಾಸ್ಪದವಲ್ಲದ ದಾಖಲೆಗಳನ್ನು ರಚಿಸಲು ಡ್ರೋನ್‌ಗಳನ್ನು ಬಳಸಿ ಭೂಮಿಯನ್ನು ಅಳೆಯಲಾಗುತ್ತದೆ.
  • ರಾಜ್ಯಗಳಿಂದ ಡ್ರೋನ್-ಮ್ಯಾಪಿಂಗ್ ಮೂಲಕ ನಿಖರವಾದ ಅಳತೆಗಳನ್ನು ಬಳಸಿಕೊಂಡು ಗ್ರಾಮದ ಪ್ರತಿಯೊಂದು ಆಸ್ತಿಗೆ ಆಸ್ತಿ ಕಾರ್ಡ್‌ಗಳನ್ನು ತಯಾರಿಸಲಾಗುತ್ತದೆ. ಈ ಕಾರ್ಡ್‌ಗಳನ್ನು ಆಸ್ತಿ ಮಾಲೀಕರಿಗೆ ಹಸ್ತಾಂತರಿಸಲಾಗುವುದು ಮತ್ತು ಅದನ್ನು ಭೂ ಕಂದಾಯ ದಾಖಲೆಗಳ ಇಲಾಖೆಯು ಗುರುತಿಸುತ್ತದೆ.

 

ಯೋಜನೆಯ ಲಾಭಗಳು:

  • ಈ ಯೋಜನೆಯಡಿ ಪಡೆದ ಅಧಿಕೃತ ಪ್ರಮಾಣಪತ್ರದ ಮೂಲಕ, ಆಸ್ತಿ ಮಾಲೀಕರು ತಮ್ಮ ಆಸ್ತಿಯ ಮೇಲೆ ಬ್ಯಾಂಕ್ ಸಾಲ ಮತ್ತು ಇತರ ಆಸ್ತಿ ಸಂಬಂಧಿತ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.
  • ಗ್ರಾಮದ ಆಸ್ತಿಗಳಿಗೆ ಸಂಬಂಧಿಸಿದ ಈ ದಾಖಲೆಗಳನ್ನು ಪಂಚಾಯತ್ ಮಟ್ಟದಲ್ಲಿಯೂ ನಿರ್ವಹಿಸಲಾಗುವುದು, ಆ ಮೂಲಕ ಆಸ್ತಿ ಮಾಲೀಕರಿಂದ ತೆರಿಗೆಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ ಸ್ಥಳೀಯ ತೆರಿಗೆಗಳಿಂದ ಪಡೆದ ಹಣವನ್ನು ಗ್ರಾಮೀಣ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ನಿರ್ಮಿಸಲು ಬಳಸಲಾಗುತ್ತದೆ.
  • ಭೂ ಮಾಲೀಕತ್ವ ವಿವಾದಗಳಿಂದ ಭೂಮಿ ಮತ್ತು ವಸತಿ ಆಸ್ತಿಗಳನ್ನು ಮುಕ್ತಗೊಳಿಸುವುದರಿಂದ ಮತ್ತು ಅಧಿಕೃತ ದಾಖಲೆಯನ್ನು ಸಿದ್ಧಪಡಿಸಿದ ಪರಿಣಾಮವಾಗಿ, ಆಸ್ತಿಗಳ ಮಾರುಕಟ್ಟೆ ಮೌಲ್ಯವು ಹೆಚ್ಚಾಗುವ ಸಾಧ್ಯತೆಯಿದೆ.
  • ತೆರಿಗೆ ಸಂಗ್ರಹಣೆ, ಹೊಸ ಕಟ್ಟಡ ಮತ್ತು ಮೂಲಸೌಕರ್ಯ ನಿರ್ಮಾಣ ಯೋಜನೆಗಳು, ಪರವಾನಗಿಗಳನ್ನು ನೀಡುವುದು ಮತ್ತು ಆಸ್ತಿಯನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ಪ್ರಯತ್ನಗಳನ್ನು ತಡೆಯಲು ನಿಖರವಾದ ಆಸ್ತಿ ದಾಖಲೆಗಳನ್ನು ಬಳಸಬಹುದು.

 

ಯೋಜನೆಯ ಅಗತ್ಯ ಮತ್ತು ಪ್ರಾಮುಖ್ಯತೆ:

 ಗ್ರಾಮೀಣ ಪ್ರದೇಶಗಳಲ್ಲಿ, ಅನೇಕ ಗ್ರಾಮಸ್ಥರು ತಮ್ಮ ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸುವ ಅಧಿಕೃತ ದಾಖಲೆಗಳನ್ನು ಹೊಂದಿಲ್ಲ, ಇದನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಯ ಅಗತ್ಯವನ್ನು ಮನಗಾಣಲಾಯಿತು. ಹೆಚ್ಚಿನ ರಾಜ್ಯಗಳಲ್ಲಿ, ಹಳ್ಳಿಗಳಲ್ಲಿನ ಆಸ್ತಿಗಳ ಪರಿಶೀಲನೆ / ದೃಢೀಕರಣದ ಉದ್ದೇಶಕ್ಕಾಗಿ ಜನಸಂಖ್ಯೆಯ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಅಳೆಯಲಾಗಿಲ್ಲ. ಈ ಹೊಸ ಯೋಜನೆಯು ಆಸ್ತಿಯ ಕುರಿತ ಭಿನ್ನಾಭಿಪ್ರಾಯಗಳಿಂದಾಗಿ ಉಂಟಾಗುವ ಸಾಮಾಜಿಕ ಸಂಘರ್ಷಗಳನ್ನು ಕಡಿಮೆ ಮಾಡಲು ಸಮರ್ಥವಾಗಿದೆ, ಇದು ಸಬಲೀಕರಣ ಮತ್ತು ಅರ್ಹತೆಯ ಸಾಧನವಾಗಿದೆ.

 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೂಢೀಕರಣ , ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

ವೇಯ್ಸ್ ಮತ್ತು ಮೀನ್ಸ್ ಕ್ರೆಡಿಟ್:


(Ways and Means credit)

 ಸಂದರ್ಭ:

ಮಧ್ಯಂತರ ‘ವೇಯ್ಸ್ ಅಂಡ್ ಮೀನ್ಸ್ ಅಡ್ವಾನ್ಸಸ್’ (Ways and Means Advances- WMA) ಯೋಜನೆಯನ್ನು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಅಸ್ತಿತ್ವದಲ್ಲಿರುವ  ₹. 51,560 ಕೋಟಿಯ ಮಿತಿಯೊಂದಿಗೆ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸಿದೆ. ಅಂದರೆ, ಕೋವಿಡ್ -19 ರ ಹರಡುವಿಕೆಯನ್ನು ಗಮನಿಸಿದರೆ, ‘ವೇಯ್ಸ್ ಅಂಡ್ ಮೀನ್ಸ್ ಅಡ್ವಾನ್ಸ್’ ಯೋಜನೆಯಡಿ ನಿಗದಿಪಡಿಸಿದ ಈ ಮಿತಿ ಸೆಪ್ಟೆಂಬರ್ 30 ರ ವರೆಗೆ ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಉಳಿಯುತ್ತದೆ.

 

ಈ ನಡೆಯ ಪ್ರಾಮುಖ್ಯತೆ:

  •  ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿರುವ ಕರೋನವೈರಸ್ ನ ಹರಡುವಿಕೆಯ ವಿರುದ್ಧ ಸರ್ಕಾರವು ಹೋರಾಡುತ್ತಿರುವ ಸಮಯದಲ್ಲಿ  ಸರ್ಕಾರದ ಖರ್ಚು ಹೆಚ್ಚಳವಾಗುವ ನಿರೀಕ್ಷೆ ಹೊಂದಿದ್ದ ಸಂದರ್ಭದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ವೇಯ್ಸ್ ಮತ್ತು ಮೀನ್ಸ್ ಮುಂಗಡ ಯೋಜನೆಯಡಿ ನಿಗದಿಪಡಿಸಿದ ಮಿತಿಯನ್ನು ಹೆಚ್ಚಿಸಲು  ನಿರ್ಧರಿಸಿದೆ. ಈ ನಿಧಿಗಳ ಲಭ್ಯತೆಯೊಂದಿಗೆ, ಸರ್ಕಾರಕ್ಕೆ ದೀರ್ಘಾವಧಿಯ ಮಾರುಕಟ್ಟೆ ಸಾಲಗಳಿಂದ ದೂರವಿರಲು ಮತ್ತು ಅಲ್ಪಾವಧಿಯ ಖರ್ಚು ವೆಚ್ಚಗಳನ್ನು ಕೈಗೊಳ್ಳಲು ಸ್ವಲ್ಪ ಅವಕಾಶವಿರುತ್ತದೆ.

 

ವೇಯ್ಸ್ ಅಂಡ್ ಮೀನ್ಸ್ ಅಡ್ವಾನ್ಸಸ್- WMA’ ಎಂದರೇನು?

  •  ವೇಸ್ ಅಂಡ್ ಮೀನ್ಸ್ ಅಡ್ವಾನ್ಸಸ್ (WMA) ಗಳು ಸರ್ಕಾರದ ಆದಾಯ ಮತ್ತು ವೆಚ್ಚಗಳ ನಡುವಿನ ತಾತ್ಕಾಲಿಕ ಅಸಮತೋಲನವನ್ನು ನಿವಾರಿಸಲು ಮತ್ತು ಸರ್ಕಾರವನ್ನು ಶಕ್ತಗೊಳಿಸಲು RBI ಒದಗಿಸಿದ ತಾತ್ಕಾಲಿಕ ಸಾಲ ಸೌಲಭ್ಯಗಳಾಗಿವೆ.
  • ಈ ಮೊತ್ತವನ್ನು ಎರವಲು ಪಡೆದ ಮೇಲೆ ಸರ್ಕಾರ ಕೇಂದ್ರ ಬ್ಯಾಂಕ್‌ಗೆ ಬಡ್ಡಿ ನೀಡುತ್ತದೆ.
  • ಈ ಸಾಲಗಳಿಗೆ ವಿಧಿಸಲಾಗುವ ಬಡ್ಡಿದರವು ರೆಪೊ ದರಕ್ಕೆ ಸಮನಾಗಿರುತ್ತದೆ, ಆದರೆ ಅವು ಮೂರು ತಿಂಗಳ ಅವಧಿಯನ್ನು ಹೊಂದಿರುತ್ತವೆ.
  • ‘ವೇಯ್ಸ್ ಅಂಡ್ ಮೀನ್ಸ್ ಅಡ್ವಾನ್ಸ್’ ನ ಮಿತಿಗಳನ್ನು RBI ಮತ್ತು ಭಾರತ ಸರ್ಕಾರ ಪರಸ್ಪರ ನಿರ್ಧರಿಸುತ್ತವೆ.
  • ರಾಜ್ಯಗಳಿಗೆ 21 ದಿನಗಳ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಅನುಮತಿಸಲಾಗಿದೆ (WMA ಮಿತಿಯನ್ನು ಮೀರಿ ಸಾಲ ಪಡೆಯುವುದು).

 

ಹಿನ್ನೆಲೆ:

ಕೇಂದ್ರ ಸರ್ಕಾರದ ಕೊರತೆಯನ್ನು ಪೂರೈಸಲು ನಾಲ್ಕು ದಶಕಗಳ ಹಳೆಯ (ತಾತ್ಕಾಲಿಕ) ಖಜಾನೆ ಮಸೂದೆಗಳ ಹಳೆಯ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರ   ‘ವೇಯ್ಸ್ ಅಂಡ್ ಮೀನ್ಸ್ ಅಡ್ವಾನ್ಸ್’ (WMA) ಯೋಜನೆಯನ್ನು 1997ರ ಏಪ್ರಿಲ್ 1 ರಂದು ಪ್ರಾರಂಭಿಸಲಾಯಿತು.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಕ್ರ್ಯೂ -2 ಮಿಷನ್:


(Crew-2 mission)

ಸಂದರ್ಭ:

ಇತ್ತೀಚೆಗೆ, ನಾಲ್ಕು ಗಗನಯಾತ್ರಿಗಳನ್ನು ಫ್ಲೋರಿಡಾದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS)ನಾಸಾ ಮತ್ತು ಸ್ಪೇಸ್ಎಕ್ಸ್ ಸಹಯೋಗದಲ್ಲಿ ‘ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂ’ (Commercial Crew Programme- CCP) ಅಡಿಯಲ್ಲಿ ಉಡಾವಣಾ ವಾಹಕದ ಮೂಲಕ ಕಳುಹಿಸಲಾಗಿದೆ.

 

  • ಈ ಕಾರ್ಯಾಚರಣೆಗೆ ಕ್ರೂ -2’ ಯೋಜನೆ (Crew-2 mission) ಎಂದು ಹೆಸರಿಸಲಾಗಿದೆ ಮತ್ತು ಇದು ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್’ (SpaceX Crew Dragon) ನ ‘ಸಿಬ್ಬಂದಿ’ ಸಾಗಿಸುವ ಎರಡನೇ ಬಾಹ್ಯಾಕಾಶ ವಿಮಾನ (crew rotation) ಆಗಿದೆ. ಈ ವಿಮಾನವು ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಾಲುದಾರರನ್ನು ಒಳಗೊಂಡಿದೆ.

 

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ದಲ್ಲಿ ಕ್ರ್ಯೂ -2 ಮಾಡುವ ಕೆಲಸವೇನು?

 ಈ ಮಿಷನ್‌ನ ಸದಸ್ಯರು ಮೈಕ್ರೊಗ್ರಾವಿಟಿ / ಸೂಕ್ಷ್ಮ ಗುರುತ್ವ ಅಧ್ಯಯನಗಳನ್ನು ನಡೆಸುತ್ತಾರೆ. ಆಹಾರ ಸುಧಾರಣೆಗಳನ್ನೂ ಅನ್ವೇಷಿಸುತ್ತಾರೆ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವೈಖರಿ ಮತ್ತು ಕರುಳಿನ ಸೂಕ್ಷ್ಮಜೀವಿಯ ಮೇಲಿನ ಪರಿಣಾಮವನ್ನು ಅಧ್ಯಯನ ಮಾಡಲು ‘ಫುಡ್ ಫಿಸಿಯಾಲಜಿ’ ಕುರಿತು ಸಂಶೋಧನೆ ಕೈಗೊಳ್ಳಲಿದ್ದಾರೆ. ಜೊತೆಗೆ, ಈ ಸುಧಾರಣೆಗಳು ಬಾಹ್ಯಾಕಾಶ ಸಿಬ್ಬಂದಿಗಳಿಗೆ ಭವಿಷ್ಯದ ಬಾಹ್ಯಾಕಾಶ ಹಾರಾಟಕ್ಕೆ ಹೊಂದಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡುತ್ತಾರೆ. ಒಟ್ಟಿನಲ್ಲಿ ಇದು ಸಿಬ್ಬಂದಿಯನ್ನು ಹೆಚ್ಚು ಬಾಹ್ಯಾಕಾಶ ಸ್ನೇಹಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ.

ಈ ಸಮಯದಲ್ಲಿ, ಅವ ರ ಗಮನವು ಮುಖ್ಯವಾಗಿ ಬಾಹ್ಯಾಕಾಶ ಅಧ್ಯಯನದಲ್ಲಿ ಟಿಶ್ಯೂ ಚಿಪ್ಸ್ (Tissue Chips) ಸರಣಿಯ ಮುಂದುವರಿಕೆಯ ಮೇಲೆ ಇರುತ್ತದೆ. ಈ ಟಿಶ್ಯೂ ಚಿಪ್ಸ್’ ಮಾನವನ ಅಂಗಗಳ ಸಣ್ಣ ಪ್ರತಿಕೃತಿಗಳು ಅಥವಾ ಮಾದರಿಗಳಾಗಿವೆ, ಅವು ವಿಭಿನ್ನ ರೀತಿಯ ಕೋಶಗಳನ್ನು ಒಳಗೊಂಡಿರುತ್ತವೆ, ಅವು ಮಾನವ ದೇಹದಂತೆ ವರ್ತಿಸುತ್ತವೆ. ನಾಸಾ ಪ್ರಕಾರ, ಈ ಚಿಪ್ಸ್ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧಗಳು ಮತ್ತು ಲಸಿಕೆಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

 

ಏನಿದು ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂ ?

  • ‘ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂ’ (Commercial Crew Programme- CCP) ನ ಮುಖ್ಯ ಉದ್ದೇಶವೆಂದರೆ ವೆಚ್ಚದ ದೃಷ್ಟಿಯಿಂದ ಬಾಹ್ಯಾಕಾಶಕ್ಕೆ ಪ್ರವೇಶವನ್ನು ಸುಲಭಗೊಳಿಸುವುದು, ಇದರಿಂದಾಗಿ ಸರಕು ಮತ್ತು ಸಿಬ್ಬಂದಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುಲಭವಾಗಿ ಸಾಗಿಸಬಹುದು ಮತ್ತು ಅಲ್ಲಿಂದ ಭೂಮಿಗೂ ಕೂಡ ಸುಲಭವಾಗಿ ಮರಳಬಹುದು. ಇದರೊಂದಿಗೆ, ಹೆಚ್ಚಿನ ಪ್ರಮಾಣದ ವ್ಯಾಪಕವಾದ ವೈಜ್ಞಾನಿಕ ಸಂಶೋಧನೆಗೆ ಅನುವು ಮಾಡಿಕೊಡುವುದು.
  •  ಈ ಕಾರ್ಯಕ್ರಮದ ಮೂಲಕ, ‘ಬೋಯಿಂಗ್’ ಮತ್ತು ‘ಸ್ಪೇಸ್‌ಎಕ್ಸ್’ ನಂತಹ ವಾಣಿಜ್ಯ ಪಾಲುದಾರರೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ನಾಸಾ ಬಾಹ್ಯಾಕಾಶ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಯೋಜಿಸಿದೆ, ಮತ್ತು ನಾಸಾ ಈ ಕಂಪನಿಗಳಿಗೆ ‘ವಾಣಿಜ್ಯ ಕಕ್ಷೀಯ ಸಾರಿಗೆ ಸೇವೆಗಳನ್ನು’ (Commercial Orbital Transportation Services- COTS) ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಪ್ರೋತ್ಸಾಹವನ್ನು ನೀಡುತ್ತದೆ.

 

ಹಿನ್ನೆಲೆ:

ಯುಎಸ್ ನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಿಬ್ಬಂದಿಯನ್ನು ಸಾಗಿಸಲು ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು 2014ರ ಸಪ್ಟಂಬರ್ ನಲ್ಲಿ NASA ‘ಬೋಯಿಂಗ್’ ಮತ್ತು ‘ಸ್ಪೇಸ್ಎಕ್ಸ್’ ಸಂಸ್ಥೆಗಳನ್ನು ಆಯ್ಕೆ ಮಾಡಿತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಗಡಿ ರಸ್ತೆ ಸಂಘಟನೆ (BRO).

(Border Road Organisation- BRO)

  • 2015 ರಿಂದ ರಕ್ಷಣಾ ಸಚಿವಾಲಯದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡಿ ರಸ್ತೆಗಳ ಸಂಘಟನೆಯು (ಬಿಆರ್‌ಒ) ದೇಶದ ಗಡಿ ಪ್ರದೇಶಗಳಲ್ಲಿ ಕಷ್ಟಕರ ಮತ್ತು ಪ್ರವೇಶಿಸಲಾಗದ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸಲು ರಸ್ತೆ ನಿರ್ಮಾಣ ಕಾರ್ಯಗಳಲ್ಲಿ ತೊಡಗಿದೆ.
  • ಇದರಲ್ಲಿ, ‘ಆರ್ಮಿ ಕಾರ್ಪ್ಸ್’, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ಗಳು, ಆರ್ಮಿ-ಸರ್ವಿಸ್ ಕಾರ್ಪ್ಸ್, ಮಿಲಿಟರಿ ಪೋಲಿಸ್ ಮತ್ತು ಸೇನಾ ಸಿಬ್ಬಂದಿ ಮತ್ತು ಭಾರತೀಯ ಸೇನೆಯ ಅಧಿಕಾರಿಗಳನ್ನು ಹೆಚ್ಚುವರಿ ರೆಜಿಮೆಂಟಲ್ ಕೆಲಸಕ್ಕಾಗಿ ಸೇರಿಸಿಕೊಳ್ಳಲಾಗಿದೆ.

ಹವಾಮಾನ ಕುರಿತು ವಿಶ್ವನಾಯಕರ ಶೃಂಗಸಭೆ 2021:

(Leaders’ Summit on Climate 2021)

  •  ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ‘ಭೂ ದಿನ’ (ಏಪ್ರಿಲ್ 22) ರ ಸಂದರ್ಭದಲ್ಲಿ ‘ಹವಾಮಾನ ಕುರಿತು ನಾಯಕರ ಶೃಂಗಸಭೆ’ ಎಂಬ ಶೀರ್ಷಿಕೆಯ ವಿಶ್ವ ನಾಯಕರ ವರ್ಚುವಲ್ ಸಭೆಯನ್ನು ಆಯೋಜಿಸಿದ್ದರು.
  • ಈ ಎರಡು ದಿನಗಳ ಸಮ್ಮೇಳನವನ್ನುಈ ವರ್ಷದ ಕೊನೆಯಲ್ಲಿ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ COP26 ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ (ಸಿಒಪಿ 26) ಪೂರ್ವಭಾವಿ ಸಮ್ಮೇಳನವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
  • “ಹವಾಮಾನ ಬಿಕ್ಕಟ್ಟನ್ನು ಎದುರಿಸಲು ಪ್ರಮುಖ ಆರ್ಥಿಕತೆಗಳ ಪ್ರಯತ್ನಗಳನ್ನು ಪ್ರೇರೇಪಿಸುವುದು” ಮತ್ತು “ಬಲವಾದ ಹವಾಮಾನ ಕ್ರಿಯೆಯ ತುರ್ತುಸ್ಥಿತಿ ಮತ್ತು ಆರ್ಥಿಕ ಪ್ರಯೋಜನಗಳನ್ನು ಒತ್ತಿಹೇಳುವುದು”ಈ ಶೃಂಗಸಭೆಯ ಉದ್ದೇಶವಾಗಿದೆ.

 

ಶೃಂಗಸಭೆಯ ಉದ್ದೇಶಗಳು:

  • ಸಾರ್ವಜನಿಕ ಮತ್ತು ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವಾಗ ಈ ದಶಕದಲ್ಲಿ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವಿಶ್ವದ ಪ್ರಮುಖ ಆರ್ಥಿಕತೆಗಳನ್ನು ವಿಶ್ವಾಸಕ್ಕೆ ಪಡೆಯುವುದು.
  • ಹವಾಮಾನ ಕ್ರಿಯೆಯು ಹೇಗೆ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳನ್ನು ಹೊಂದಿರುತ್ತದೆ ಎಂಬುದನ್ನು ಪ್ರದರ್ಶಿಸುವುದು. ಹೊಸ ಉದ್ಯಮಗಳು ಮತ್ತು ಕೈಗಾರಿಕೆಗಳನ್ನು ನಿರ್ಮಿಸುವುದು.
  • ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಲಭ್ಯವಿರುವ ತಂತ್ರಜ್ಞಾನವನ್ನು ಬಳಸುವುದು, ಆದರೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು. 2050 ರ ಹೊತ್ತಿಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಸಾಧಿಸಲು ಪ್ರಕೃತಿ ಆಧಾರಿತ ಪರಿಹಾರಗಳ ಬಳಕೆ ಮಾಡುವುದು.
  • ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸುವುದು.

 

ಅಮೇರಿಕಾದ ಘೋಷಣೆಗಳು:

  •  2005 ರ ಮಟ್ಟಕ್ಕೆ ಹೋಲಿಸಿದರೆ ಅಮೆರಿಕಾವು 2030 ರ ವೇಳೆಗೆ ತನ್ನ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 50% -52% ರಷ್ಟು ಕಡಿತಗೊಳಿಸುತ್ತದೆ ಎಂದು ಘೋಷಿಸಲಾಯಿತು.
  • ಅಮೆರಿಕಾ ವು, 2024 ರ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತನ್ನ ವಾರ್ಷಿಕ ಹಣಕಾಸು ಬದ್ಧತೆಯನ್ನು ದ್ವಿಗುಣಗೊಳಿಸುತ್ತದೆ ಮತ್ತು 2024 ರ ವೇಳೆಗೆ ಅದರ ಹೊಂದಾಣಿಕೆಯ ಹಣಕಾಸನ್ನು ಮೂರು ಪಟ್ಟು ಹೆಚ್ಚಿಸುತ್ತದೆ ಎಂದು ಘೋಷಣೆ ಮಾಡಿತು.

 

ರಾಷ್ಟ್ರೀಯ ಪಂಚಾಯತಿ ರಾಜ್ ದಿನ:

  •  ಭಾರತದಲ್ಲಿ ಪಂಚಾಯತಿ ರಾಜ್ ವ್ಯವಸ್ಥೆಯನ್ನು ಔಪಚಾರಿಕವಾಗಿ ಜಾರಿಗೊಳಿಸುವ ಸಂವಿಧಾನ (73 ನೇ ತಿದ್ದುಪಡಿ) ಕಾಯ್ದೆಯನ್ನು 1993 ರ ಏಪ್ರಿಲ್ 24 ರಂದು ಜಾರಿಗೆ ತರಲಾಯಿತು.
  • ಈ ಕಾರಣಕ್ಕಾಗಿ, ಈ ದಿನವನ್ನು ದೇಶದಲ್ಲಿ ರಾಷ್ಟ್ರೀಯ ಪಂಚಾಯತಿ ರಾಜ್ ದಿನವೆಂದು ಆಚರಿಸಲಾಗುತ್ತದೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos