Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 16ನೇ ಏಪ್ರಿಲ್ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 1:  

1. UNFPA ಯ ಜನಸಂಖ್ಯಾ ವರದಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ನ್ಯಾಯಾಧೀಶರ ನೇಮಕಾತಿಗಳನ್ನು ತ್ವರಿತ ಗೊಳಿಸಲು ಮುಂದಾದ ಕೇಂದ್ರ.

2. ಸಾಗರೋತ್ತರ ಭಾರತೀಯ ನಾಗರಿಕರು (OCI).

3. ರಾಷ್ಟ್ರೀಯ ಸ್ಟಾರ್ಟಪ್ ಸಲಹಾ ಮಂಡಳಿ.

4. ಲಸಿಕೆ ರಾಷ್ಟ್ರೀಯತೆ ಎಂದರೇನು?

5. 156 ದೇಶಗಳಿಗೆ ಇ-ವೀಸಾ ಸೌಲಭ್ಯವನ್ನು ಮರುಸ್ಥಾಪಿಸಿದ ಭಾರತ.

6. ಕುಲಭೂಷಣ್ ಜಾಧವ್ ಪ್ರಕರಣ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ವಿಶ್ವಸಂಸ್ಥೆಯ ಆಹಾರ ವ್ಯವಸ್ಥೆ ಶೃಂಗಸಭೆ 2021.

2. ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (NIXI).

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ನಿಯಮಗಳನ್ನು ಪರಿಶೀಲಿಸಲು ಪ್ರಾಧಿಕಾರವನ್ನು ಸ್ಥಾಪಿಸಿದ RBI.

2. ಸೈಬರ್‌ಸ್ಪೇಸ್‌ನಲ್ಲಿ ನಂಬಿಕೆ ಮತ್ತು ಭದ್ರತೆಗೆ ಕರೆ ನೀಡಿದ ಪ್ಯಾರಿಸ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು.

UNFPA ಯ ಜನಸಂಖ್ಯಾ ವರದಿ:


(UNFPA’s population report)

 ಸಂದರ್ಭ:

ಇತ್ತೀಚೆಗೆ, ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು (United Nations Population Fund / UNFPA) ತನ್ನ ಪ್ರಮುಖ ವಿಶ್ವ ಜನಸಂಖ್ಯಾ ಸ್ಥಿತಿ ವರದಿ’ (State of World Population Report) – 2021 ಅನ್ನು ಮೈ ಬಾಡಿ ಈಸ್ ಮೈ ಓನ್’ / ‘ನನ್ನ ದೇಹ ನನ್ನದು ಮಾತ್ರ’  (My Body is My Own) ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿತು.

 • ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಯಾವುದೇ ವರದಿಯು ದೈಹಿಕ ಸ್ವಾಯತ್ತತೆಯ ಮೇಲೆ ಕೇಂದ್ರೀಕರಿಸಿದೆ.

 ದೈಹಿಕ ಸ್ವಾಯತ್ತತೆ ಎಂದರೇನು?

 ಹಿಂಸಾಚಾರದ ಭಯವಿಲ್ಲದೆ ಅಥವಾ ಬೇರೆಯವರು ನಿಮ್ಮ ಪರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಸ್ಪದ ವಿಲ್ಲದೆ, ನಿಮ್ಮ ಸ್ವಂತ ದೇಹ ಅಥವಾ ದೇಹದ ಬಗ್ಗೆ ಆಯ್ಕೆಗಳನ್ನು ಮಾಡುವ ಶಕ್ತಿ ಮತ್ತು ಸಂಸ್ಥೆ ಎಂದು ವರದಿಯು ‘ದೈಹಿಕ ಸ್ವಾಯತ್ತತೆ’ ಯನ್ನು ವ್ಯಾಖ್ಯಾನಿಸುತ್ತದೆ.

ವರದಿಯ ಪ್ರಮುಖ ಅಂಶಗಳು:

 • 57 ಅಭಿವೃದ್ಧಿ ಶೀಲ ದೇಶಗಳ ಅರ್ಧದಷ್ಟು ಮಹಿಳೆಯರಿಗೆ ತಮ್ಮ ದೇಹಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ. ಗರ್ಭನಿರೋಧಕವನ್ನು ಹೇಗೆ ಬಳಸುವುದು, ಆರೋಗ್ಯ ರಕ್ಷಣೆ ಪಡೆಯುವುದು ಮತ್ತು ಅವರ ಲೈಂಗಿಕತೆಯನ್ನು ಸಹ ಈ ಮಹಿಳೆಯರು ಸ್ವತಃ ನಿರ್ಧರಿಸಲು ಸಾಧ್ಯವಿಲ್ಲ.
 • ಅಂಕಿಅಂಶಗಳು ಲಭ್ಯವಿರುವ ದೇಶಗಳಲ್ಲಿ, ಕೇವಲ 55% ಮಹಿಳೆಯರಿಗೆ ಮಾತ್ರ ಆರೋಗ್ಯ ರಕ್ಷಣೆ, ಗರ್ಭನಿರೋಧಕವನ್ನು ಬಳಸಲು ಮತ್ತು ಲೈಂಗಿಕತೆಗೆ ಹೌದು ಅಥವಾ ಇಲ್ಲ ಎಂದು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ.
 • ಗರ್ಭನಿರೋಧಕಕ್ಕೆ ಪೂರ್ಣ ಮತ್ತು ಸಮಾನ ಪ್ರವೇಶವನ್ನು ಕಾನೂನುಬದ್ಧವಾಗಿ 75% ದೇಶಗಳಲ್ಲಿ ಮಾತ್ರ ಖಾತ್ರಿಪಡಿಸಲಾಗಿದೆ.
 • ಪ್ರಪಂಚದಾದ್ಯಂತದ ಹೆಚ್ಚಿನ ಮಹಿಳೆಯರಿಗೆ ‘ದೈಹಿಕ ಸ್ವಾಯತ್ತತೆಯ ಮೂಲಭೂತ ಹಕ್ಕುನ್ನು’ ನಿರಾಕರಿಸಲಾಗಿದೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅವರ ಪರಿಸ್ಥಿತಿಗಳು ಇನ್ನಷ್ಟು ಹದಗೆಟ್ಟಿವೆ.

ವರದಿಯಲ್ಲಿ ಭಾರತಕ್ಕೆ ಸಂಬಂಧಿಸಿದ ಸಂಗತಿಗಳು:

 • ವರದಿಯ ಪ್ರಕಾರ, ಭಾರತದ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ’ (National Family Health Survey) –4 (2015-2016) ಪ್ರಕಾರ, ಪ್ರಸ್ತುತ ಕೇವಲ 12% ವಿವಾಹಿತ ಮಹಿಳೆಯರು (15-49 ವರ್ಷ ವಯಸ್ಸಿನವರು) ತಮ್ಮ ಆರೋಗ್ಯ ರಕ್ಷಣೆಯ ಕುರಿತು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
 • ಮುಖ್ಯವಾಗಿ ಮಹಿಳೆಯರ ಆರೋಗ್ಯ ರಕ್ಷಣೆಯ ಬಗ್ಗೆ ,ಕಾಲು ಭಾಗದಷ್ಟು ಮಹಿಳೆಯರ ಸಂಗಾತಿಗಳೇ (23%) ನಿರ್ಧಾರ ತೆಗೆದುಕೊಳ್ಳುತ್ತಾರೆ.
 • ಮಹಿಳೆಯರಿಗೆ ಗರ್ಭನಿರೋಧಕಗಳ ಬಳಕೆಯ ಬಗ್ಗೆ ಸಿಗುವ ಮಾಹಿತಿಯೂ ಸೀಮಿತವಾಗಿದೆ.
 • ಗರ್ಭನಿರೋಧಕಗಳನ್ನು ಬಳಸುವ ಮಹಿಳೆಯರಲ್ಲಿ ಕೇವಲ 47% ಜನರಿಗೆ ಈ ವಿಧಾನದ ಅಡ್ಡಪರಿಣಾಮಗಳ ಬಗ್ಗೆ ತಿಳಿಸಲಾಯಿತು, ಮತ್ತು ಕೇವಲ 54% ಮಹಿಳೆಯರಿಗೆ ಮಾತ್ರ ಇತರ ಗರ್ಭನಿರೋಧಕ ವಿಧಾನಗಳ ಕುರಿತು ಮಾಹಿತಿ ನೀಡಲಾಗಿದೆ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) ಕುರಿತು:

UNFPA ಯು ‘ವಿಶ್ವಸಂಸ್ಥೆಯ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಂಸ್ಥೆ’ (United Nations sexual and reproductive health agency) ಯಾಗಿದೆ.

 • ಈ ಸಂಸ್ಥೆಯನ್ನು 1969 ರಲ್ಲಿ ರಚಿಸಲಾಯಿತು, ಅದೇ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಪೋಷಕರಿಗೆ ತಮ್ಮ ಮಕ್ಕಳ ಸಂಖ್ಯೆ ಮತ್ತು ಅವರ ನಡುವಿನ ವಯಸ್ಸಿನ ಅಂತರವನ್ನು ಸ್ವತಂತ್ರವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ಧರಿಸುವ ಪ್ರತ್ಯೇಕ ಹಕ್ಕಿದೆ’ ಎಂದು ಘೋಷಿಸಲಾಯಿತು.
 • ಪ್ರತಿ ಗರ್ಭಧಾರಣೆಯನ್ನು ಉಳಿಸಿಕೊಳ್ಳುವ, ಪ್ರತಿ ಹೆರಿಗೆ ಸುರಕ್ಷಿತವಾಗಿರುವಂತೆ ಮತ್ತು ಪ್ರತಿಯೊಬ್ಬ ಯುವಕನ ಸಾಮರ್ಥ್ಯವನ್ನು ಪೂರೈಸುವಂತಹ ಜಗತ್ತನ್ನು ಸೃಷ್ಟಿಸುವುದು UNFPAಯ ಗುರಿಯಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ನ್ಯಾಯಾಧೀಶರ ನೇಮಕಾತಿಗಳನ್ನು ತ್ವರಿತ ಗೊಳಿಸಲು ಮುಂದಾದ ಕೇಂದ್ರ:


(Centre to push judges’ appointments)

 ಸಂದರ್ಭ:

ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಆರು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿರುವ ಸುಪ್ರೀಂಕೋರ್ಟ್ ಕೊಲಿಜಿಯಂ ನ ಶಿಫಾರಸುಗಳ ಕುರಿತು ಮೂರು ತಿಂಗಳಲ್ಲಿ ತೀರ್ಮಾನಿಸುವಂತೆ ಕೇಂದ್ರ ಸರ್ಕಾರದ ಮುಂದೆ ಸುಪ್ರೀಂಕೋರ್ಟ್ ಪ್ರಸ್ತಾಪ ಮಂಡಿಸಿದೆ.

ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಭಾರತದ ಸಂವಿಧಾನವು ಯಾವುದೇ ನಿಗದಿತ ಗಡುವನ್ನು ಸೂಚಿಸುತ್ತದೆಯೇ?

ಹಾಗೇನು ಇಲ್ಲ. ನೇಮಕಾತಿ ಪ್ರಕ್ರಿಯೆಯ ಮೂಲಕ ಕಾರ್ಯವಿಧಾನದ ಜ್ಞಾಪಕ ಪತ್ರವು (Memorandum of Procedure- MoP) ಸರ್ಕಾರ ಮತ್ತು ನ್ಯಾಯಾಂಗಕ್ಕೆ ಮಾರ್ಗದರ್ಶನ ನೀಡುತ್ತದೆ. ಈ ಕಾರ್ಯವಿಧಾನವು ಯಾವುದೇ ಗಡುವನ್ನು ವಿಧಿಸುವುದಿಲ್ಲ ಆದರೆ ಪ್ರಕ್ರಿಯೆಯನ್ನು ಸಮಂಜಸವಾದ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಮಾತ್ರ ಹೇಳುತ್ತದೆ.

ಕೊಲಿಜಿಯಂ ವ್ಯವಸ್ಥೆ (Collegium System) :

ಕೊಲಿಜಿಯಂ ವ್ಯವಸ್ಥೆಯು, ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಿಸಿದ ವ್ಯವಸ್ಥೆಯಾಗಿದ್ದು ಇದು ವರಿಷ್ಠ ನ್ಯಾಯಾಲಯದ ತೀರ್ಪುಗಳ ಮೂಲಕ ವಿಕಸನಗೊಂಡಿದೆಯೆ ಹೊರತು ಸಾಂವಿಧಾನಿಕ ನಿಬಂಧನೆಯಿಂದಾಗಲಿ ಅಥವಾ ಸಂಸತ್ತು ರೂಪಿಸಿದ ಕಾಯ್ದೆಯಿಂದಾಗಲಿ  ಅಭಿವೃದ್ಧಿಗೊಂಡಿಲ್ಲ.

 • ಸುಪ್ರೀಂಕೋರ್ಟ್ ಕೊಲಿಜಿಯಂ: ಇದು ಭಾರತದ ಸರ್ವೋಚ್ಛ ನ್ಯಾಯಾಲಯ ಮುಖ್ಯ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ಹಾಗೂ ಇತರ 4 ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.
 • ಹೈಕೋರ್ಟ್ ಕೊಲಿಜಿಯಂ: ಇದರ ನೇತೃತ್ವವನ್ನು ಸಂಬಂಧಿಸಿದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ವಹಿಸಿರುತ್ತಾರೆ ಮತ್ತು ಇದು ಆ ಉಚ್ಚ ನ್ಯಾಯಾಲಯದ ಇತರ ನಾಲ್ವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.

ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು:

 • ಸಂವಿಧಾನದ ವಿಧಿ 124(2) ಪ್ರಕಾರ, ಭಾರತದ ರಾಷ್ಟ್ರಪತಿಗಳು, ಅಗತ್ಯವೆಂದು ಭಾವಿಸಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ ಇತರೆ ನ್ಯಾಯಾಧೀಶರು ಮತ್ತು ರಾಜ್ಯ ಹೈಕೋರ್ಟ್ ಗಳ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿದ ನಂತರ ತಮ್ಮ ಸಹಿ ಹಾಗೂ ಮುದ್ರೆ ಹೊಂದಿದ ಆದೇಶದ ಮೂಲಕ ಸುಪ್ರೀಂಕೋರ್ಟ್ ನ ನ್ಯಾಯಾಧೀಶರನ್ನು, ನೇಮಕ ಮಾಡುತ್ತಾರೆ.
 •  ಭಾರತದ ಸಂವಿಧಾನದ 217 ವಿಧಿಯ ಪ್ರಕಾರ ಭಾರತದ ರಾಷ್ಟ್ರಪತಿಗಳು ಹೈಕೋರ್ಟ್ ಗಳ ನ್ಯಾಯಾಧೀಶರನ್ನು ವರಿಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ, ಸಂಬಂಧಿಸಿದ ರಾಜ್ಯದ ರಾಜ್ಯಪಾಲರೊಂದಿಗೆ ಸಮಾಲೋಚಿಸಿದ ನಂತರ ನೇಮಕ ಮಾಡುತ್ತಾರೆ. ಒಂದು ವೇಳೆ ಹೈಕೋರ್ಟ್ ಗಳ ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ ಹೈಕೋರ್ಟ್ ನ ಇತರೆ ನ್ಯಾಯಾಧೀಶರನ್ನು ನೇಮಕ ಮಾಡುವ ಸಂದರ್ಭದಲ್ಲಿ ಸಂಬಂಧಿಸಿದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಯವರೊಂದಿಗೆ ಕೂಡ ಸಮಾಲೋಚಿಸಿ ನೇಮಕ ಮಾಡುತ್ತಾರೆ.

 

 

ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಸಾಗರೋತ್ತರ ಭಾರತೀಯ ನಾಗರಿಕರು (OCI):


(Overseas Citizens of India)

ಸಂದರ್ಭ:

ಸಾಗರೋತ್ತರ ಭಾರತೀಯ ನಾಗರಿಕರಿಗೆ (Overseas Citizens of India- OCI), ಪ್ರತಿ ಬಾರಿ ಹೊಸ ಪಾಸ್ಪೋರ್ಟ್ ನೀಡಿದಾಗ ಹೊಸ OCI ಕಾರ್ಡ ಗಾಗಿ ನೊಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಹಿನ್ನೆಲೆ:

ಪ್ರಸ್ತುತ, ಯಾವುದೇ ಸಾಗರೋತ್ತರ ಭಾರತೀಯ ನಾಗರಿಕರಿಗೆ (OCI) 20 ವರ್ಷ ವಯಸ್ಸಿನವರೆಗೆ ಹೊಸ ಪಾಸ್‌ಪೋರ್ಟ್ ನೀಡುವಾಗ ಹೊಸ OCI ಕಾರ್ಡನ್ನು ಪುನಃ  ನೀಡಲಾಗುತ್ತಿತ್ತು,ಮತ್ತು 50 ವರ್ಷ ಪೂರ್ಣಗೊಂಡ   ನಂತರ ಅರ್ಜಿದಾರರ ಮುಖದಲ್ಲಿನ ಜೈವಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ಬಾರಿ ಒಸಿಐ ಕಾರ್ಡ್ ಅನ್ನು ಮತ್ತೆ ನೀಡಬೇಕಾಗಿದೆ.

ಇತ್ತೀಚಿನ ಬದಲಾವಣೆಗಳ ಪ್ರಕಾರ:

 • ಒಬ್ಬ ವ್ಯಕ್ತಿಯು 20 ವರ್ಷ ತುಂಬುವ ಮೊದಲು OCI ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಂಡಿದ್ದರೆ, ಅವನು/ಅವಳು 20 ವರ್ಷವನ್ನು ಪೂರೈಸಿದ ನಂತರ, ಹೊಸ ಪಾಸ್ಪೋರ್ಟ್ ನೀಡುವಾಗ ಒಮ್ಮೆ ಮಾತ್ರ ಒಸಿಐ ಕಾರ್ಡ್ ಅನ್ನು ಮರು ನೀಡಲಾಗುತ್ತದೆ / ಮರುಹಂಚಿಕೆ ಮಾಡಲಾಗುತ್ತದೆ. ಇದರೊಂದಿಗೆ ಅವನು/ಅವಳು ವಯಸ್ಕ ರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರ ಮುಖದ ರೂಪರೇಖೆಯನ್ನು / ಲಕ್ಷಣಗಳನ್ನು ದಾಖಲಿಸಲಾಗುತ್ತದೆ.
 • ಒಬ್ಬ ವ್ಯಕ್ತಿಯು 20 ವರ್ಷದ ನಂತರ OCI ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಂಡರೆ, OCI ಕಾರ್ಡ್ ಅನ್ನು ಮರುಹಂಚಿಕೆ ಮಾಡುವ ( there will be no requirement of reissue of the OCI card) ಅಗತ್ಯವಿಲ್ಲ.

ಸಾಗರೋತ್ತರ ಭಾರತೀಯ ನಾಗರಿಕರು (OCI) ಎಂದರೆ ಯಾರು?

 • ಭಾರತ ಸರ್ಕಾರವು 2005 ರಲ್ಲಿ, ಪೌರತ್ವ ಕಾಯ್ದೆ 1955 ಕ್ಕೆ ತಿದ್ದುಪಡಿ ಮಾಡುವ ಮೂಲಕ ‘ಸಾಗರೋತ್ತರ ಭಾರತೀಯ ನಾಗರಿಕತ್ವ ಯೋಜನೆ’ ಯನ್ನು ಪ್ರಾರಂಭಿಸಿತು.
 • 2015 ರ ಜನವರಿ 09 ರಂದು ಭಾರತ ಸರ್ಕಾರವು ಭಾರತೀಯ ಮೂಲದ ಜನರು (PIO) ಕಾರ್ಡ್ ನ ಬಳಕೆಯನ್ನು ಸಾಗರೋತ್ತರ ಭಾರತೀಯ ನಾಗರಿಕರು (OCI) ಕಾರ್ಡ್ ನೊಂದಿಗೆ ವಿಲೀನಗೊಳಿಸುವ ಮೂಲಕ ಸ್ಥಗಿತಗೊಳಿಸಿತು.

ಅರ್ಹತೆ: ಇದಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ವರ್ಗದ ವಿದೇಶಿ ಪ್ರಜೆಗಳಿಗೆ ಭಾರತ ಸರ್ಕಾರ ಅವಕಾಶ ನೀಡಿದೆ.

eligible

ವಿನಾಯಿತಿಗಳು:

OCIಗೆ ಅರ್ಜಿ ಸಲ್ಲಿಸುವ ಯಾರಾದರೂ  ವಿದೇಶದಲ್ಲಿ ಮಾನ್ಯವಾದ ಪಾಸ್‌ಪೋರ್ಟನ್ನು ಹೊಂದಿರಬೇಕು.

 • ಬೇರೆ ಯಾವುದೇ ದೇಶದ ಪೌರತ್ವ ಹೊಂದಿರದ ವ್ಯಕ್ತಿಗಳು OCI ಸ್ಥಾನಮಾನ ಪಡೆಯಲು ಅರ್ಹರಲ್ಲ.
 • ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪೌರತ್ವ ಹೊಂದಿರುವ ಪೋಷಕರ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

OCI ಕಾರ್ಡ ಹೊಂದಿದವರಿಗೆ ದೊರೆಯುವ ಪ್ರಯೋಜನಗಳು:

 • ಭಾರತಕ್ಕೆ ಹಲವು ಬಾರಿ ಭೇಟಿ ನೀಡಲು ಜೀವಮಾನದ ವೀಸಾ. (ಭಾರತದಲ್ಲಿ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲು ವಿಶೇಷ ಅನುಮತಿಯ ಅಗತ್ಯವಿದೆ).
 • ಅನಿರ್ದಿಷ್ಟಾಧಿವರೆಗೆ ಭಾರತದಲ್ಲಿ ವಾಸ್ತವ್ಯ ಹೂಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (FRRO) ಅಥವಾ ವಿದೇಶಿಯರ ನೋಂದಣಿ ಅಧಿಕಾರಿ (FRO) ಯಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.
 • ಕೃಷಿ ಮತ್ತು ತೋಟದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು/ ಖರೀದಿಸುವುದನ್ನು ಹೊರತುಪಡಿಸಿ, OCI ಸ್ಥಾನಮಾನ ಹೊಂದಿರುವವರು ಆರ್ಥಿಕ, ಹಣಕಾಸು ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ NRI ಗಳೊಂದಿಗೆ ಸಮಾನ ಸೌಲಭ್ಯಗಳನ್ನು ಹೊಂದಿದ್ದಾರೆ.
 • ಭಾರತೀಯ ಮಕ್ಕಳನ್ನು ಅಂತರ್-ದೇಶಿಯ ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅನಿವಾಸಿ ಭಾರತೀಯರಂತೆಯೇ (NRI) ಸೌಲಭ್ಯವನ್ನು ಹೊಂದಿದ್ದಾರೆ.
 • ರಾಷ್ಟ್ರೀಯ ಸ್ಮಾರಕಗಳಿಗೆ ಪ್ರವೇಶ ಶುಲ್ಕ, ವೈದ್ಯರು, ದಂತವೈದ್ಯರು, ದಾದಿಯರು, ವಕೀಲರು, ವಾಸ್ತುಶಿಲ್ಪಿಗಳು, ಚಾರ್ಟರ್ಡ್ ಅಕೌಂಟೆಂಟ್ಸ್ ಮತ್ತು ಔಷಧಿಕಾರರಂತಹ ವೃತ್ತಿಗಳ ಅಭ್ಯಾಸಕ್ಕೆ / ವೃತ್ತಿಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ NRI ಗಳಂತೆ ಸಮಾನ ಅವಕಾಶ ಮತ್ತು ಸೌಲಭ್ಯವನ್ನು ಹೊಂದಿರುವರು.
 • ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆಗಳಲ್ಲಿ ಭಾಗವಹಿಸಲು ಅನಿವಾಸಿ ಭಾರತೀಯರಿಗೆ (NRI) ಸಮಾನರಾಗಿರುವರು.
 • ಭಾರತದ ದೇಶೀಯ ವಲಯಗಳಲ್ಲಿನ ವಿಮಾನಯಾನ ದಟ್ಟಣೆಯ ವಿಷಯಗಳಲ್ಲಿ ಪಾವತಿಸಬೇಕಾದ ಟಿಕೆಟ್ ಶುಲ್ಕಕ್ಕೆ ಸಂಬಂಧಿಸಿದಂತೆ ಭಾರತೀಯ ನಾಗರಿಕರೊಂದಿಗೆ (Indian citizens) ಸಮಾನವಾಗಿ ಪರಿಗಣಿಸಲಾಗುತ್ತದೆ.
 • ಭಾರತದ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಿಗೆ ಪ್ರವೇಶಿಸುವ ಸಂದರ್ಭದಲ್ಲಿ ಇವರಿಗೆ ಕೂಡ ಭಾರತೀಯರಿಗೆ ನಿಗಧಿಪಡಿಸಿದ ಶುಲ್ಕವನ್ನೇ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
 • ಸೇವೆಗಳನ್ನು ಪಡೆಯಲು ಗುರುತು ಪತ್ರವಾಗಿ OCI ಕಿರುಪುಸ್ತಕವನ್ನು ಬಳಸಬಹುದು. ಸ್ಥಳೀಯ ವಿಳಾಸವನ್ನು ವಸತಿ ಪುರಾವೆಯಾಗಿ ಅಫಿಡವಿಟ್ ನೊಂದಿಗೆ ಲಗತ್ತಿಸಬಹುದು.

OCI ಕಾರ್ಡ ಹೊಂದಿದವರಿಗೆ ಇರುವ ಕೆಲವು ನಿರ್ಬಂಧಗಳು:

 • ಅವರಿಗೆ ಮತದಾನದ ಹಕ್ಕಿಲ್ಲ.
 • ಯಾವುದೇ ಸಾರ್ವಜನಿಕ ಸೇವೆ / ಸರ್ಕಾರಿ ಉದ್ಯೋಗ ಪಡೆಯುವ ಹಕ್ಕಿಲ್ಲ.
 • ಪ್ರಧಾನ ಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ವರಿಷ್ಠ ನ್ಯಾಯಾಲಯದ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ, ಸಂಸತ್ತಿನ ಸದಸ್ಯ ಅಥವಾ ರಾಜ್ಯ ವಿಧಾನಮಂಡಲದ ಕಚೇರಿಗಳನ್ನು ಅಲಂಕರಿಸಲು ಸಾಧ್ಯವಿಲ್ಲ.
 • ಕೃಷಿ ಆಸ್ತಿಯನ್ನು ಹೊಂದಲು ಸಾಧ್ಯವಿಲ್ಲ.

 

ವಿಷಯಗಳು: ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.

ರಾಷ್ಟ್ರೀಯ ಸ್ಟಾರ್ಟಪ್ ಸಲಹಾ ಮಂಡಳಿ:


(National Startup Advisory Council)

 ಸಂದರ್ಭ:

ಇತ್ತೀಚೆಗೆ, ‘ರಾಷ್ಟ್ರೀಯ ಸ್ಟಾರ್ಟಪ್ ಸಲಹಾ ಮಂಡಳಿಯ’ (National Startup Advisory Council-NSAC) ಯ ಮೊದಲ ಸಭೆ ನಡೆಯಿತು.

NSAC ಎಂದರೇನು?

 • ‘ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ’ (Department for Promotion of Industry and Internal Trade- DPIIT)ಯು ‘ರಾಷ್ಟ್ರೀಯ ಸ್ಟಾರ್ಟಪ್ ಸಲಹಾ ಮಂಡಳಿಯನ್ನು’ ರಚಿಸಿದೆ.
 • ದೇಶದಲ್ಲಿ ನಾವೀನ್ಯತೆ ಮತ್ತು ಆರಂಭಿಕ ಉದ್ಯಮಗಳನ್ನು ಪೋಷಿಸುವ ಮೂಲಕ, ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಬಲವಾದ ವಾತಾವರಣವನ್ನು ನಿರ್ಮಿಸಲು ಕೈಗೊಳ್ಳಬೇಕಾದ ಅಗತ್ಯವಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು ಇದರ ಕಾರ್ಯವಾಗಿದೆ.

NSAC ಯ ಕಾರ್ಯಗಳು:

 • ನಾಗರಿಕರು ಮತ್ತು ವಿದ್ಯಾರ್ಥಿಗಳಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ಉತ್ತೇಜಿಸಲು ಕ್ರಮಗಳನ್ನು ಸೂಚಿಸುವುದು.
 • ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ದೇಶದಾದ್ಯಂತ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ಹೊಸತನವನ್ನು ಉತ್ತೇಜಿಸುವುದು.
 • ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಸೃಜನಶೀಲ ಮತ್ತು ನವೀನ ಆಲೋಚನೆಗಳಿಗೆ ಬೆಂಬಲ ನೀಡುವುದು ಮತ್ತು ಅವುಗಳನ್ನು ಅಮೂಲ್ಯ ಉತ್ಪನ್ನಗಳಾಗಿ ಪರಿವರ್ತಿಸುವುದು.

NSAC ಯ ರಚನೆ:

 • ‘ರಾಷ್ಟ್ರೀಯ ಸ್ಟಾರ್ಟಪ್ ಸಲಹಾ ಮಂಡಳಿ’ಯ ಅಧ್ಯಕ್ಷತೆಯನ್ನು ‘ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು’ ವಹಿಸುತ್ತಾರೆ.
 • ‘ಮಂಡಳಿಯು’ ಕೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡ ಸರ್ಕಾರೇತರ ಸದಸ್ಯರನ್ನೂ ಒಳಗೊಂಡಿರುತ್ತದೆ.
 • ಈ ಪರಿಷತ್ತಿನಲ್ಲಿ, ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳ ಸದಸ್ಯರು ಎಕ್ಸ್-ಆಫಿಸಿಯೊ ಸದಸ್ಯರಾಗಿ ಸೇರಿಕೊಳ್ಳುತ್ತಾರೆ, ಮತ್ತು ಈ ಸದಸ್ಯರು ಭಾರತ ಸರ್ಕಾರದಲ್ಲಿ ಜಂಟಿ ಕಾರ್ಯದರ್ಶಿ ಅಥವಾ ಅದಕ್ಕಿಂತ ಹೆಚ್ಚಿನ ಹುದ್ದೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಲಸಿಕೆ ರಾಷ್ಟ್ರೀಯತೆ ಎಂದರೇನು?


(What is Vaccine Nationalism?)

 ಸಂದರ್ಭ:

ಇತ್ತೀಚೆಗೆ, ಅಖಿಲ ಭಾರತ ಪೀಪಲ್ಸ್ ಸೈನ್ಸ್ ನೆಟ್ವರ್ಕ್ (AIPSN) ಲಸಿಕೆ ರಾಷ್ಟ್ರೀಯತೆ’ ಎಂಬ ಕಲ್ಪನೆಯು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲ್ಪಟ್ಟಿದೆ, ಮತ್ತು ಅದನ್ನು ತ್ಯಜಿಸಬೇಕು ಎಂದು ಹೇಳಿದೆ.

ಏನಿದು ಸಮಸ್ಯೆ?

ಕೇಂದ್ರ ಸರ್ಕಾರವು ದೇಶದಿಂದ ಕೋವಿಡ್ ಲಸಿಕೆಯನ್ನು ರಫ್ತು ಮಾಡಲು ಕೆಲವು ನಿರ್ಬಂಧಗಳನ್ನು ವಿಧಿಸಿದೆ, ಆ ಮೂಲಕ ಸ್ನೇಹಶೀಲ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಉಚಿತ ಲಸಿಕೆಗಳನ್ನು ನೀಡುವ ಮತ್ತು ಕಡಿಮೆ ಆದಾಯದ ದೇಶಗಳಿಗೆ ಲಸಿಕೆ ಸರಬರಾಜು ಮಾಡುವ ಅಂತರರಾಷ್ಟ್ರೀಯ ಕೋವಾಕ್ಸ್ ಕಾರ್ಯಕ್ರಮಕ್ಕೆ ನೀಡಿದ ಮಹತ್ವದ ಕೊಡುಗೆಯಿಂದ ಗಳಿಸಿದ ‘ಸದ್ಭಾವನೆಯನ್ನು’ ಕಳೆದುಕೊಳ್ಳುವ ಸಾಧ್ಯತೆಯಿದೆ.

ಲಸಿಕೆ ರಾಷ್ಟ್ರೀಯತೆ ಎಂದರೇನು?

 • ಲಸಿಕೆ ರಾಷ್ಟ್ರೀಯತೆಯ ಎಂದರೆ, ಒಂದು ದೇಶವು ತನ್ನ ಸ್ವಂತ ನಾಗರಿಕರಿಗೆ ಅಥವಾ ನಿವಾಸಿಗಳಿಗೆ ಇತರ ದೇಶಗಳಿಗೆ ಲಭ್ಯವಾಗುವ ಮೊದಲು ನಿಗದಿತ ಲಸಿಕೆ ಪ್ರಮಾಣವನ್ನು ಪಡೆಯುವುದಾಗಿದೆ.
 • ಇದಕ್ಕಾಗಿ, ಸರ್ಕಾರ ಮತ್ತು ಲಸಿಕೆ ತಯಾರಕರ ನಡುವೆ ಪೂರ್ವ-ಖರೀದಿ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ.

ಹಿಂದೆ ಇದರ ಬಳಕೆ ಹೇಗಿತ್ತು?

 • ಲಸಿಕೆ ರಾಷ್ಟ್ರೀಯತೆ ಹೊಸ ಪರಿಕಲ್ಪನೆಯಲ್ಲ. 2009 ರಲ್ಲಿ ಪ್ರಸಿದ್ಧ H1N1 ಜ್ವರ ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ, H1N1 ಲಸಿಕೆ ಉತ್ಪಾದಿಸುವ ಕಂಪನಿಗಳೊಂದಿಗೆ ವಿಶ್ವದ ಶ್ರೀಮಂತ ರಾಷ್ಟ್ರಗಳು ಪೂರ್ವ-ಖರೀದಿ ಒಪ್ಪಂದಗಳಿಗೆ ಸಹಿ ಹಾಕಿದವು.
 • ಆ ಸಮಯದಲ್ಲಿ, ಅತ್ಯುತ್ತಮ ಪರಿಸ್ಥಿತಿಗಳಲ್ಲಿ,  ಜಾಗತಿಕವಾಗಿ ಉತ್ಪಾದಿಸಬಹುದಾದ ಗರಿಷ್ಠ ಸಂಖ್ಯೆಯ ಲಸಿಕೆ ಪ್ರಮಾಣಗಳು ಎರಡು ಶತಕೋಟಿ ಎಂದು ಅಂದಾಜಿಸಲಾಗಿದೆ.
 • ಯುನೈಟೆಡ್ ಸ್ಟೇಟ್ಸ್ ಮಾತ್ರ ಮಾತುಕತೆಯ ಮೂಲಕ 600,000 ಡೋಸ್ಗಳನ್ನು ಖರೀದಿಸುವ ಹಕ್ಕನ್ನು ಪಡೆದುಕೊಂಡಿದೆ. ಈ ಲಸಿಕೆಗಾಗಿ ಪೂರ್ವ-ಖರೀದಿ ಒಪ್ಪಂದ ಮಾಡಿಕೊಂಡ ಎಲ್ಲ ದೇಶಗಳು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಾಗಿವೆ.

ಸಂಬಂಧಿತ ಕಾಳಜಿಗಳು ಯಾವುವೂ?

 • ಲಸಿಕೆ ರಾಷ್ಟ್ರೀಯತೆ ಒಂದು ರೋಗದ ವಿರುದ್ಧ ಲಸಿಕೆ ಪಡೆಯಲು ಬಯಸುವ ಎಲ್ಲಾ ದೇಶಗಳ ಸಮಾನ ಪ್ರವೇಶಕ್ಕೆ ಹಾನಿಕಾರಕವಾಗಿದೆ.
 • ಕಡಿಮೆ ಸಂಪನ್ಮೂಲಗಳು ಮತ್ತು ಕಡಿಮೆ ಚೌಕಾಶಿ ಮಾಡುವ ಶಕ್ತಿ ಹೊಂದಿರುವ ದೇಶಗಳಿಗೆ ಇದು ಹೆಚ್ಚು ಹಾನಿ ಮಾಡುತ್ತದೆ.
 • ಇದು ವಿಶ್ವದ ದಕ್ಷಿಣ ಭಾಗದ ಜನಸಂಖ್ಯೆಯನ್ನು ಪ್ರಮುಖ ಸಾರ್ವಜನಿಕ ಆರೋಗ್ಯ ಸರಕು ಗಳಿಗಾಗಿ ಸಮಯೋಚಿತ ಪ್ರವೇಶದಿಂದ ವಂಚಿತ ಗೊಳಿಸುತ್ತದೆ.
 • ಲಸಿಕೆ ರಾಷ್ಟ್ರೀಯತೆ, ಅದರ ಪರಾಕಾಷ್ಠೆಯಲ್ಲಿ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹೆಚ್ಚಿನ ಅಪಾಯದ ಜನಸಂಖ್ಯೆಗೆ ವಿರುದ್ಧವಾಗಿ ಶ್ರೀಮಂತ ರಾಷ್ಟ್ರಗಳಲ್ಲಿನ ಸಾಮಾನ್ಯ-ಅಪಾಯದ ಜನಸಂಖ್ಯೆಗೆ ಲಸಿಕೆಗಳನ್ನು ನೀಡಲಾಗುತ್ತಿದೆ.

ಮುಂದಿನ ದಾರಿ?

 • ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಲಸಿಕೆಗಳ ಏಕರೂಪದ ವಿತರಣೆಗೆ ಒಂದು ಚೌಕಟ್ಟನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ. ಇದಕ್ಕಾಗಿ, ಈ ಸಂಸ್ಥೆಗಳು ಯಾವುದೇ ಸಾಂಕ್ರಾಮಿಕ ರೋಗ ಉಲ್ಬಣಿಸುವ ಮೊದಲು ಜಾಗತಿಕ ಮಟ್ಟದಲ್ಲಿ ಮಾತುಕತೆಗಳನ್ನು ಸಂಘಟಿಸಬೇಕು.
 • ಭೌಗೋಳಿಕತೆ ಮತ್ತು ಭೌಗೋಳಿಕ ರಾಜಕೀಯವನ್ನು ಲೆಕ್ಕಿಸದೆ , ಲಸಿಕೆಯ ಕೈಗೆಟುಕುವಿಕೆ ಮತ್ತು ಜಾಗತಿಕ ಜನಸಂಖ್ಯೆಗೆ ಲಸಿಕೆಯ ಸಮಾನ ಪ್ರವೇಶ ಅವಕಾಶ ಎರಡನ್ನೂ ಒಳಗೊಳ್ಳುತ್ತದೆ.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

156 ದೇಶಗಳಿಗೆ ಇ-ವೀಸಾ ಸೌಲಭ್ಯವನ್ನು ಮರುಸ್ಥಾಪಿಸಿದ ಭಾರತ:


(India restores e-visa for 156 countries)

ಸಂದರ್ಭ:

ವೈದ್ಯಕೀಯ ಆರೈಕೆ ಸೇರಿದಂತೆ ವೈದ್ಯಕೀಯ ಕಾರಣಗಳು, ವ್ಯವಹಾರ ಮತ್ತು ಸಮ್ಮೇಳನಗಳಿಗೆ ಹಾಜರಾಗುವ ಉದ್ದೇಶದಿಂದ ಭಾರತಕ್ಕೆ ಭೇಟಿನೀಡಲು 156 ದೇಶಗಳಿಂದ ಬರುವ ವಿದೇಶಿಯರಿಗಾಗಿ ಇತ್ತೀಚೆಗೆ ಎಲೆಕ್ಟ್ರಾನಿಕ್ ವೀಸಾ / ವಿದ್ಯುನ್ಮಾನ ವೀಸಾ (e-visa) ಸೌಲಭ್ಯವನ್ನು ಕೇಂದ್ರ ಗೃಹ ಸಚಿವಾಲಯ ಪುನಃಸ್ಥಾಪಿಸಿದೆ.

ಹಿನ್ನೆಲೆ:

2020 ರಲ್ಲಿ ನಿರ್ಬಂಧಗಳನ್ನು ಹೇರುವ ಮೊದಲು, 171 ದೇಶಗಳ ನಾಗರಿಕರಿಗೆ ಇ-ವೀಸಾ ಸೌಲಭ್ಯ ಲಭ್ಯವಿತ್ತು.

ಎಲೆಕ್ಟ್ರಾನಿಕ್ ವೀಸಾ ಎಂದರೇನು?

 • ಪ್ರವಾಸೋದ್ಯಮ, ವ್ಯವಹಾರ, ಸಮ್ಮೇಳನಗಳು,  ಔಷಧ ವಲಯ ಮತ್ತು ವೈದ್ಯಕೀಯ ಆರೈಕೆ ಎಂಬ ಐದು ವಿಭಾಗಗಳಲ್ಲಿ ಇ-ವೀಸಾಗಳನ್ನು ನೀಡಲಾಗುತ್ತದೆ.
 • ಈ ವ್ಯವಸ್ಥೆಯಲ್ಲಿ, ವಿದೇಶಿ ನಾಗರಿಕರು ಪ್ರವಾಸಕ್ಕೆ ತೆರಳುವ ನಾಲ್ಕು ದಿನಗಳ ಮೊದಲು ಇ-ವೀಸಾಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
 • ಅರ್ಜಿದಾರರು ನೀಡಿದ ವಿವರಗಳ ಪರಿಶೀಲನೆಯ ನಂತರ, ‘ಎಲೆಕ್ಟ್ರಾನಿಕ್ ಟ್ರಾವೆಲ್ ಅಥರೈಜೇಶನ’ (electronic travel authorization- ETA) ಅನ್ನು ಉತ್ಪಾದಿಸಲಾಗುತ್ತದೆ, ಇದನ್ನು ದೇಶಕ್ಕೆ ಬಂದ ನಂತರ ಚೆಕ್ ಪೋಸ್ಟ್‌ನಲ್ಲಿ ಪ್ರಸ್ತುತಪಡಿಸಬೇಕು.
 • ಗೊತ್ತುಪಡಿಸಿದ 28 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಭಾರತದ ಐದು ಪ್ರಮುಖ ಬಂದರುಗಳಲ್ಲಿ, ಇ-ವೀಸಾ ಮೂಲಕ ಪ್ರವೇಶಿಸಲು ಅನುಮತಿ ನೀಡಲಾಗಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ಕುಲಭೂಷಣ್ ಜಾಧವ್ ಪ್ರಕರಣ:


(Kulbhushan Jadhav case)

 ಸಂದರ್ಭ:

ಅಂತರಾಷ್ಟ್ರೀಯ ನ್ಯಾಯಾಲಯದ (ICJ) ತೀರ್ಪನ್ನು ಜಾರಿ ಮಾಡುವ ಕುರಿತು ‘ಕುಲಭೂಷಣ್ ಜಾಧವ್’ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ವ್ಯಾಪ್ತಿಯ ಬಗ್ಗೆ ಭಾರತದ ‘ತಪ್ಪುಗ್ರಹಿಕೆಯನ್ನು’ ತೆರವುಗೊಳಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಪಾಕಿಸ್ತಾನದ ವಿದೇಶಾಂಗ ಇಲಾಖೆಯನ್ನು ಕೇಳಿದೆ.

ಏನಿದು ಪ್ರಕರಣ?

 • ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಏಪ್ರಿಲ್ 2017 ರಲ್ಲಿ 50 ವರ್ಷದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾದ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು.
 • ಜಾಧವ್‌ಗೆ ಸಲಹೆ ನೀಡುವುದನ್ನು ನಿರಾಕರಿಸಿದ್ದಕ್ಕಾಗಿ ಮತ್ತು ‘ಮರಣದಂಡನೆ’ ಶಿಕ್ಷೆಯನ್ನು ಪ್ರಶ್ನಿಸಲು ಪಾಕಿಸ್ತಾನದ ವಿರುದ್ಧ ಭಾರತ ‘ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್’ (ICJ) ಗೆ ಮನವಿ ಮಾಡಿತು.
 • ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ಮತ್ತು ಮರುಪರಿಶೀಲಿಸಲು ಪಾಕಿಸ್ತಾನವು ಕ್ರಮ ಕೈಗೊಳ್ಳಬೇಕು ಮತ್ತು ಜಾಧವ್ ಅವರಿಗೆ ವಿಳಂಬವಿಲ್ಲದೆ ಭಾರತದ ವಕೀಲರ ಸೇವೆ ಪಡೆಯಲು ಅವಕಾಶ ನೀಡಬೇಕು ಎಂದು ಜುಲೈ 2019 ರಲ್ಲಿ ‘ಅಂತರಾಷ್ಟ್ರೀಯ ನ್ಯಾಯಾಲಯವು’ ತೀರ್ಪು ನೀಡಿತು.
 • ಮಿಲಿಟರಿ ನ್ಯಾಯಾಲಯವು ನಿವೃತ್ತ ಅಧಿಕಾರಿಗೆ ನೀಡಿದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸೂಕ್ತ ವೇದಿಕೆಯನ್ನು (ಸಾಕ್ಷ್ಯವನ್ನು) ಒದಗಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು ತನ್ನ 2019 ರ ತೀರ್ಪಿನಲ್ಲಿ ಪಾಕಿಸ್ತಾನವನ್ನು ಕೇಳಿದೆ.

ಅಂತರರಾಷ್ಟ್ರೀಯ ನ್ಯಾಯಾಲಯ ಮಾಡಿದ ಪ್ರಮುಖ ಅವಲೋಕನಗಳು:

 •  ಪಾಕಿಸ್ತಾನ ಸೇನೆಯು ಜಾಧವ್ ಅವರನ್ನು ಬಂಧನಕ್ಕೊಳಪಡಿಸಿದ ತಕ್ಷಣವೇ ಆತನ ಬಂಧನದ ಬಗ್ಗೆ ಭಾರತಕ್ಕೆ ತಿಳಿಸದ ಕಾರಣ ಇಸ್ಲಾಮಾಬಾದ್ 1963 ರ ‘ವಿಯನ್ನ ಸಮಾವೇಶದ ದೂತವಾಸ ಸಂಬಂಧಗಳ’ (Article 36 of Vienna Convention of Consular Relations, 1963) 36 ನೇ ವಿಧಿಯನ್ನು ಉಲ್ಲಂಘಿಸಿದೆ.
 • ಜಾಧವ್ ಅವರೊಂದಿಗೆ ಸಂವಹನ ನಡೆಸಲು ಮತ್ತು ಬಂಧನದ ಸಮಯದಲ್ಲಿ ಅವರನ್ನು ಭೇಟಿ ಮಾಡಲು ಮತ್ತು ಅವರಿಗೆ ಕಾನೂನು ಪ್ರಾತಿನಿಧ್ಯಕ್ಕೆ ವ್ಯವಸ್ಥೆ ಮಾಡುವ ಭಾರತದ ಹಕ್ಕನ್ನು ನಿರಾಕರಿಸಲಾಗಿದೆ.

ಅಂತರಾಷ್ಟ್ರೀಯ ನ್ಯಾಯಾಲಯದ (ICJ) ಕುರಿತು:

 • ಅಂತರಾಷ್ಟ್ರೀಯ ನ್ಯಾಯಾಲಯವನ್ನು- ICJ 1945 ರಲ್ಲಿ ವಿಶ್ವಸಂಸ್ಥೆಯ ಚಾರ್ಟರ್ ಮೂಲಕ ಸ್ಥಾಪಿಸಲಾಯಿತು  ಮತ್ತು ಇದು ಏಪ್ರಿಲ್ 1946 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
 • ಇದು ವಿಶ್ವಸಂಸ್ಥೆಯ ಪ್ರಮುಖ ನ್ಯಾಯಾಂಗ ಸಂಸ್ಥೆಯಾಗಿದೆ ಮತ್ತು ಇದು ಹೇಗ್ (ನೆದರ್ಲ್ಯಾಂಡ್ಸ್) ನ ಶಾಂತಿ ಅರಮನೆಯಲ್ಲಿ ( the Peace Palace in The Hague (Netherlands) ನೆಲೆಗೊಂಡಿದೆ.
 • ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳ ಪ್ರಧಾನ ಕಛೇರಿ ನ್ಯೂಯಾರ್ಕ್ ನಲ್ಲಿದ್ದರೆ, ನ್ಯೂಯಾರ್ಕ್(USA) ನಲ್ಲಿಲ್ಲದ ಏಕೈಕ ಸಂಸ್ಥೆ ಇದು.
 • ಇದು ರಾಷ್ಟ್ರಗಳ ನಡುವಿನ ಕಾನೂನು ವಿವಾದಗಳನ್ನು ಬಗೆಹರಿಸುತ್ತದೆ ಮತ್ತು ಅಧಿಕೃತ ಯುಎನ್ ಅಂಗಗಳು ಮತ್ತು ವಿಶೇಷ ಏಜೆನ್ಸಿಗಳು ಅದರ ಮುಂದೆ ಪ್ರಸ್ತಾಪಿಸಿದ ಕಾನೂನು ಪ್ರಶ್ನೆಗಳ ಬಗ್ಗೆ ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಸಲಹಾತ್ಮಕ ಅಭಿಪ್ರಾಯಗಳನ್ನು ನೀಡುತ್ತದೆ.

ರಚನೆ:

 • ಅಂತರರಾಷ್ಟ್ರೀಯ ನ್ಯಾಯಾಲಯವು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯಿಂದ ಒಂಬತ್ತು ವರ್ಷಗಳ ಅವಧಿಗೆ ಆಯ್ಕೆಯಾದ 15 ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ. ಈ ಎರಡು ಅಂಗಗಳು ಒಂದೇ ಸಮಯದಲ್ಲಿ ಆದರೆ ಪ್ರತ್ಯೇಕವಾಗಿ ಮತ ಚಲಾಯಿಸುತ್ತವೆ.
 • ನ್ಯಾಯಾಧೀಶರಾಗಿ ಆಯ್ಕೆಯಾಗಲು, ಅಭ್ಯರ್ಥಿಯು ಎರಡೂ ಸಂಸ್ಥೆಗಳಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿರಬೇಕು.
 • ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ನ್ಯಾಯಾಲಯದ ಒಟ್ಟು ಸದಸ್ಯರ ಮೂರನೇ ಒಂದು ಭಾಗದಷ್ಟು ನ್ಯಾಯಾಧೀಶರು ಪ್ರತಿ ಮೂರು ವರ್ಷಗಳಿಗೊಮ್ಮೆ ಚುನಾಯಿಸಲ್ಪಡುತ್ತಾರೆ ಮತ್ತು ಈ ಸದಸ್ಯರು ಮತ್ತೆ ನ್ಯಾಯಾಧೀಶರಾಗಿ ಚುನಾಯಿತ ರಾಗಲು ಅರ್ಹರಾಗಿರುತ್ತಾರೆ.
 • ‘ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ’ ಆಡಳಿತ ವ್ಯವಹಾರಗಳಲ್ಲಿ ನೆರವು ನೀಡಲು ಅದಕ್ಕೆ ಶಾಶ್ವತ ಆಡಳಿತ ಸಚಿವಾಲಯವಿದೆ (Registry). ಇಂಗ್ಲಿಷ್ ಮತ್ತು ಫ್ರೆಂಚ್ ಇದರ ಅಧಿಕೃತ ಭಾಷೆಗಳಾಗಿವೆ.

ಅಂತರರಾಷ್ಟ್ರೀಯ ನ್ಯಾಯಾಲಯದ 15 ನ್ಯಾಯಾಧೀಶರನ್ನು ಈ ಕೆಳಗಿನ ವಲಯಗಳಿಂದ ಆಯ್ಕೆ ಮಾಡಲಾಗುತ್ತದೆ:

 • ಆಫ್ರಿಕಾದಿಂದ ಮೂವರು.
 • ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಿಂದ ಇಬ್ಬರು.
 • ಏಷ್ಯಾದಿಂದ ಮೂವರು.
 • ಪಶ್ಚಿಮ ಯುರೋಪ್ ಮತ್ತು ಇತರ ರಾಜ್ಯಗಳಿಂದ ಐದು ಜನ.
 • ಪೂರ್ವ ಯುರೋಪಿನಿಂದ ಇಬ್ಬರು.

ನ್ಯಾಯಾಧೀಶರ ಸ್ವಾತಂತ್ರ್ಯ:

ಅಂತರರಾಷ್ಟ್ರೀಯ ಸಂಸ್ಥೆಗಳ ಇತರ ಅಂಗಗಳಂತೆ, ಅಂತರರಾಷ್ಟ್ರೀಯ ನ್ಯಾಯಾಲಯವು ಸರ್ಕಾರದ ಪ್ರತಿನಿಧಿಗಳನ್ನು ಹೊಂದಿಲ್ಲ. ನ್ಯಾಯಾಲಯದ ಸದಸ್ಯರು ಸ್ವತಂತ್ರ ನ್ಯಾಯಾಧೀಶರು, ತಮ್ಮ ಕರ್ತವ್ಯದ ಪ್ರಮಾಣವಚನ ಸ್ವೀಕರಿಸುವ ಮೊದಲು ಅವರ ಮೊದಲ ಕಾರ್ಯವೆಂದರೆ ಅವರು ತಮ್ಮ ಅಧಿಕಾರವನ್ನು ನಿಷ್ಪಕ್ಷಪಾತವಾಗಿ ಮತ್ತು ಶುದ್ಧ ಆತ್ಮಸಾಕ್ಷಿಯೊಂದಿಗೆ ಚಲಾಯಿಸುತ್ತೇವೆ ಎಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸುವುದು.

ನ್ಯಾಯವ್ಯಾಪ್ತಿ ಮತ್ತು ಕಾರ್ಯಗಳು:

 • ‘ಅಂತರರಾಷ್ಟ್ರೀಯ ನ್ಯಾಯಾಲಯವು’ ಉಭಯ ನ್ಯಾಯವ್ಯಾಪ್ತಿಯೊಂದಿಗೆ ‘ವಿಶ್ವ ನ್ಯಾಯಾಲಯ’ವಾಗಿ ಕಾರ್ಯನಿರ್ವಹಿಸುತ್ತದೆ, ಅಂದರೆ ದೇಶಗಳ ನಡುವಿನ ಕಾನೂನು ವಿವಾದಗಳ ಇತ್ಯರ್ಥ (ವಿವಾದಾತ್ಮಕ ಪ್ರಕರಣಗಳು ) ವಿಶ್ವಸಂಸ್ಥೆಯ ವಿವಿಧ ಅಂಗಗಳು ಮತ್ತು ವಿಶೇಷ ಏಜೆನ್ಸಿಗಳು ಕಾನೂನು ಪ್ರಶ್ನೆಗಳ ಕುರಿತು ಮಾಡುವ ವಿನಂತಿಗಳಿಗೆ ಸಲಹಾತ್ಮಕ ಅಭಿಪ್ರಾಯಗಳನ್ನು ನೀಡುವುದು (ಸಲಹಾ ಪ್ರಕ್ರಿಯೆಗಳು).   
 • ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ‘ಅಂತರಾಷ್ಟ್ರೀಯ ನ್ಯಾಯಾಲಯದ’ ಕಾಯ್ದೆಯ ಪಕ್ಷಗಳಾಗಿ ಮಾರ್ಪಟ್ಟಿರುವ ದೇಶಗಳು ಅಥವಾ ವಿಶೇಷ ಷರತ್ತುಗಳ ಅಡಿಯಲ್ಲಿ ‘ನ್ಯಾಯಾಲಯ’ದ ಅಧಿಕಾರ ವ್ಯಾಪ್ತಿಯನ್ನು ಒಪ್ಪಿಕೊಂಡಿರುವ ದೇಶಗಳು ಮಾತ್ರ’ ವಿವಾದಾತ್ಮಕ ಪ್ರಕರಣಗಳ (Contentious Cases) ವಿಲೇವಾರಿಗಾಗಿ ‘ಅಂತರರಾಷ್ಟ್ರೀಯ ನ್ಯಾಯಾಲಯದ’ ಪಕ್ಷಗಳಾಗಿವೆ ಅಥವಾ ಸದಸ್ಯ ದೇಶಗಳಾಗಿವೆ.
 •  ಅಂತರಾಷ್ಟ್ರೀಯ ನ್ಯಾಯಾಲಯ’ತೀರ್ಮಾನವು / ನಿರ್ಧಾರವು ಪಕ್ಷಗಳ / ದೇಶಗಳ ಮೇಲೆ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದಂತೆ  ಅಂತಿಮವಾಗಿದೆ ಮತ್ತು ಬಂಧನ ಕಾರಿಯಾಗಿದೆ, (ಹೆಚ್ಚೆಂದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸತ್ಯದ ಆವಿಷ್ಕಾರದ ಮೇಲೆ ಅದರ ತೀರ್ಪನ್ನು ಮರು ವ್ಯಾಖ್ಯಾನಿಸಬಹುದು).

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ನೆರವು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ವಿಶ್ವಸಂಸ್ಥೆಯ ಆಹಾರ ವ್ಯವಸ್ಥೆ ಶೃಂಗಸಭೆ 2021:


(UN Food Systems Summit 2021)

 ಸಂದರ್ಭ:

ಇತ್ತೀಚೆಗೆ, ಭಾರತದಲ್ಲಿ ವಿಶ್ವಸಂಸ್ಥೆಯ ಆಹಾರ ವ್ಯವಸ್ಥೆ ಶೃಂಗಸಭೆ -2021’ ಕುರಿತು ರಾಷ್ಟ್ರೀಯ ಸಂವಾದ ನಡೆಯಿತು.

ಆಹಾರ ವ್ಯವಸ್ಥೆ ಶೃಂಗಸಭೆ’ ಎಂದರೇನು?

 • ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ 2021 ರ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಆಹಾರ ವ್ಯವಸ್ಥೆಯ ಮೊದಲ ಶೃಂಗಸಭೆಯನ್ನು ನಡೆಸುವಂತೆ ಕರೆ ನೀಡಿದ್ದಾರೆ.
 • ಸುಸ್ಥಿರ ಅಭಿವೃದ್ಧಿ’ಗಾಗಿ 2030 ರ ಅಜೆಂಡಾ ಅಥವಾ ಕಾರ್ಯಸೂಚಿಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ಸಲುವಾಗಿ ವಿಶ್ವದ ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಕಾರ್ಯತಂತ್ರವನ್ನು ರೂಪಿಸುವುದು ಇದರ ಉದ್ದೇಶವಾಗಿದೆ.
 • ಸುಸ್ಥಿರ ಅಭಿವೃದ್ಧಿ ಗುರಿ (SDGs) ಗಳ ಪ್ರಗತಿಯನ್ನು ವೇಗಗೊಳಿಸಲು ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಜಾಗತಿಕವಾಗಿ ಆಹಾರ ವ್ಯವಸ್ಥೆಯನ್ನು ರೂಪಿಸುವ ವಿಧಾನಗಳ ಬಗ್ಗೆ ಈ ಶೃಂಗಸಭೆಯು ಗಮನ ಹರಿಸಲಿದೆ.

ಆಹಾರ ವ್ಯವಸ್ಥೆಗಳು’ ಏಕೆ?

ಆಹಾರ ವ್ಯವಸ್ಥೆಗಳು’ ಎಂಬ ಪದವು ಆಹಾರದ ಉತ್ಪಾದನೆ, ಸಂಸ್ಕರಣೆ, ಸಾಗಣೆ ಮತ್ತು ಬಳಕೆಯಲ್ಲಿ ಒಳಗೊಂಡಿರುವ ಚಟುವಟಿಕೆಗಳ ಸಮೂಹವನ್ನು ಸೂಚಿಸುತ್ತದೆ.

 • ಆಹಾರ ವ್ಯವಸ್ಥೆಗಳು ಮಾನವರ ಜೀವನದ ಪ್ರತಿಯೊಂದು ಅಂಶವನ್ನು ತಲುಪುತ್ತವೆ.
 • ನಮ್ಮ ಆಹಾರ ವ್ಯವಸ್ಥೆಗಳ ಆರೋಗ್ಯವು, ನಮ್ಮ ದೇಹದ ಆರೋಗ್ಯದ ಮೇಲೆ ಮತ್ತು ನಮ್ಮ ಪರಿಸರ, ಆರ್ಥಿಕತೆ ಮತ್ತು ಸಂಸ್ಕೃತಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
 • ಇವುಗಳು ಸುಗಮವಾಗಿ ಕಾರ್ಯನಿರ್ವಹಿಸಿದಾಗ, ಆಹಾರ ವ್ಯವಸ್ಥೆಗಳು ನಮ್ಮನ್ನು ಒಂದು ಕುಟುಂಬಗಳು, ಸಮುದಾಯಗಳು ಮತ್ತು ರಾಷ್ಟ್ರವಾಗಿ ಒಗ್ಗೂಡಿಸುವ ಶಕ್ತಿಯನ್ನು ಹೊಂದುತ್ತವೆ.

ಇದರ ಅವಶ್ಯಕತೆ:

ಉತ್ಪಾದನೆ, ವಿತರಣೆ ಮತ್ತು ಬಳಕೆಯನ್ನು ಒಳಗೊಂಡಂತೆ  ಇಡೀ ಕೃಷಿ-ಆಹಾರ ಪದ್ಧತಿಗಳ ಅಡಿಯಲ್ಲಿ ಕೃಷಿ ಪದ್ಧತಿಗಳು ಅಥವಾ ನಿರ್ದಿಷ್ಟ ಬೆಳೆ ಉತ್ಪಾದನೆಯಿಂದ ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾಗುವ ಬಿಕ್ಕಟ್ಟಿನಿಂದಾಗಿ ಮಾನವೀಯತೆಯು ಆಹಾರ ಮತ್ತು ಸಂಬಂಧಿತ ವ್ಯವಸ್ಥೆಗಳಲ್ಲಿ ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದು ಅವುಗಳನ್ನು ಮರು-ರೂಪಿಸುವ ಅಗತ್ಯವನ್ನು ನಮ್ಮ ಕಾರ್ಯಗಳು ಮತ್ತು ಕಾರ್ಯತಂತ್ರಗಳು ಮತ್ತಷ್ಟು ಹೆಚ್ಚಿಸಿವೆ.

 

ವಿಷಯಗಳು: ಸೈಬರ್ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು.

ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ ಭಾರತದ ರಾಷ್ಟ್ರೀಯ ಅಂತರ್ಜಾಲ ವಿನಿಮಯ


(NIXI) :

 ಸಂದರ್ಭ:

ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ’ (National Internet Exchange of India- NIXI) ದೇಶದಲ್ಲಿ ಐಪಿವಿ 6 ಜಾಗೃತಿ ಮತ್ತು ಅಳವಡಿಕೆಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ (MeitY) ಪೋಷಕ ಪಾತ್ರವನ್ನು ವಹಿಸುವುದಾಗಿ ಘೋಷಿಸಿದೆ.

ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ  ಕುರಿತು:

ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ ವು (NIXI) ಭಾರತದ ನಾಗರಿಕರಿಗೆ ಇಂಟರ್ನೆಟ್ ತಂತ್ರಜ್ಞಾನವನ್ನು ಒದಗಿಸಲು 2003 ರಿಂದ ಕೆಲಸ ಮಾಡುತ್ತಿರುವ ಲಾಭೇತರ ಸಂಸ್ಥೆಯಾಗಿದೆ.

NIXI ಯ ಕಾರ್ಯಗಳು:

 • ಇಂಟರ್ನೆಟ್ ಎಕ್ಸ ಚೇಂಜ್ ಗಳು, ಅದರ ಮೂಲಕ ಇಂಟರ್ನೆಟ್ ಡೇಟಾವನ್ನು ವಿವಿಧ ISP ಮತ್ತು ಡೇಟಾ ಕೇಂದ್ರಗಳ ನಡುವೆ ವಿನಿಮಯ ಮಾಡಿಕೊಳ್ಳಲಾಗುತ್ತದೆ.
 • .IN (ಡಾಟ್ ಇನ್) ರಿಜಿಸ್ಟ್ರಿ,  ಮ್ಯಾನೇಜಿಂಗ್ ಮತ್ತು ಆಪರೇಷನ್ ಆಫ್ ಡಾಟ್ ಇನ್ ಕಂಟ್ರಿ ಕೋಡ್ ಡೊಮೇನ್ ಮತ್ತು  ಭಾರತ್ ಐಡಿಎನ್ (IDN) ಡೊಮೇನ್ ಫಾರ್ ಇಂಡಿಯಾ.
 • ಐಆರ್ಐಎನ್ಎನ್ (IRNN), ನಿರ್ವಹಣೆ ಮತ್ತು ಕಾರ್ಯಾಚರಣೆಯ ಇಂಟರ್ನೆಟ್ ಪ್ರೊಟೊಕಾಲ್ (IPv4/IPv6).

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ನಿಯಮಗಳನ್ನು ಪರಿಶೀಲಿಸಲು ಪ್ರಾಧಿಕಾರವನ್ನು ಸ್ಥಾಪಿಸಿದ RBI:

(RBI sets up authority to review regulations)

 •  ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್(RBI) ನಿಯಂತ್ರಣ ಪರಿಶೀಲನಾ ಪ್ರಾಧಿಕಾರ 2.0 ಅನ್ನು ರಚಿಸಿದೆ.
 • ಈ ಪ್ರಾಧಿಕಾರವು ನಿಯಂತ್ರಕ ನಿಯಮಗಳನ್ನು ಆಂತರಿಕವಾಗಿ ಪರಿಶೀಲಿಸುತ್ತದೆ ಮತ್ತು ಅವುಗಳ ಸರಳೀಕರಣ ಮತ್ತು ಅನುಷ್ಠಾನಕ್ಕೆ ಅನುಕೂಲವಾಗುವಂತೆ, ರಿಸರ್ವ್ ಬ್ಯಾಂಕ್ ತಾನು ಸ್ಥಾಪಿಸಿ ನಿಯಂತ್ರಿಸುವ ಘಟಕಗಳು ಮತ್ತು ಇತರ ಮಧ್ಯಸ್ಥಗಾರರಿಂದ ಸಲಹೆಗಳನ್ನು ಪಡೆಯುತ್ತದೆ.
 • ನಿಯಂತ್ರಣ ಪರಿಶೀಲನಾ ಪ್ರಾಧಿಕಾರವಾಗಿ RBI ನ ಡೆಪ್ಯುಟಿ ಗವರ್ನರ್ ಆದ ಎಂ.ರಾಜೇಶ್ವರ ರಾವ್ ಅವರನ್ನು ನೇಮಿಸಲಾಗಿದೆ. ಈ ಪರಿಶೀಲನ ಪ್ರಾಧಿಕಾರವು ಮೇ 1 ರಿಂದ ಒಂದು ವರ್ಷದ ಅವಧಿಗೆ ಮಾನ್ಯತೆಯನ್ನು ಹೊಂದಿರುತ್ತದೆ.
 • ನಿಯಮಗಳು, ಸುತ್ತೋಲೆಗಳು, ವರದಿ ಮಾಡುವ ವ್ಯವಸ್ಥೆಗಳನ್ನು ಪರಿಶೀಲಿಸಲು ಇದೇ ರೀತಿಯ ಪ್ರಾಧಿಕಾರವನ್ನು RBI 1999 ರಲ್ಲಿ ಸ್ಥಾಪಿಸಿತ್ತು.

 ಸೈಬರ್‌ಸ್ಪೇಸ್‌ನಲ್ಲಿ ನಂಬಿಕೆ ಮತ್ತು ಭದ್ರತೆಗಾಗಿ ಕರೆ ನೀಡಿದ ಪ್ಯಾರಿಸ್:

(Paris Call for Trust and Security in Cyberspace)

 ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್ ‘ಪ್ಯಾರಿಸ್ ಕಾಲ್ ಫಾರ್ ಕಾನ್ಫಿಡೆನ್ಸ್ ಅಂಡ್ ಸೆಕ್ಯುರಿಟಿ ಇನ್ ಸೈಬರ್‌ಸ್ಪೇಸ್‌’  ಎಂಬ ಘೋಷಣೆಗೆ ಸಹಿ ಹಾಕುವಂತೆ ಭಾರತ ಮತ್ತು ಅಮೆರಿಕವನ್ನು ಒತ್ತಾಯಿಸಿದ್ದಾರೆ. ಜಗತ್ತು ಎದುರಿಸುತ್ತಿರುವ ಹೊಸ ಸೈಬರ್ ಭದ್ರತಾ ಬೆದರಿಕೆಗಳನ್ನು ಎದುರಿಸಲು ಈವರೆಗೆ 75 ದೇಶಗಳು ಈ ‘ಘೋಷಣೆಗೆ’ ಸೇರಿಕೊಂಡಿವೆ.

 • ‘ಪ್ಯಾರಿಸ್ ಕಾಲ್ ಫಾರ್ ಕಾನ್ಫಿಡೆನ್ಸ್ ಅಂಡ್ ಸೆಕ್ಯುರಿಟಿ ಇನ್ ಸೈಬರ್‌ಸ್ಪೇಸ್’ ಯಾವುದೇ ಬಂಧನ ವಿರದ (ನಾನ್‌ಬೈಂಡಿಂಗ್) ಘೋಷಣೆಯಾಗಿದೆ.
 • ಇದರ ಅಡಿಯಲ್ಲಿ, ಸೈಬರ್‌ಸ್ಪೇಸ್ ನಲ್ಲಿ ಸುರಕ್ಷತೆಯನ್ನು ಉತ್ತೇಜಿಸಲು, ತಪ್ಪು ಮಾಹಿತಿಯೊಂದಿಗೆ ವ್ಯವಹರಿಸಲು ಮತ್ತು ನಾಗರಿಕರು ಮತ್ತು ಮೂಲಸೌಕರ್ಯಗಳಿಗೆ ಅಪಾಯವನ್ನುಂಟುಮಾಡುವ ಹೊಸ ಬೆದರಿಕೆಗಳನ್ನು ಪರಿಹರಿಸಲು ದೇಶಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಅದು ಕರೆ ನೀಡಲಾಗಿದೆ.
 • ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು 2018 ರಲ್ಲಿ ಯುನೆಸ್ಕೋ ಮತ್ತು ಪ್ಯಾರಿಸ್ ಶಾಂತಿ ವೇದಿಕೆಯಲ್ಲಿ ನಡೆದ ಇಂಟರ್ನೆಟ್ ಆಡಳಿತ ವೇದಿಕೆಯ ಸಂದರ್ಭದಲ್ಲಿ ‘ಪ್ಯಾರಿಸ್ ಕಾಲ್’ ಘೋಷಣೆಯನ್ನು ಮಂಡಿಸಿದರು.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos