ಪರಿವಿಡಿ :
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಪೂಜಾ/ಪ್ರಾರ್ಥನಾ ಸ್ಥಳಗಳ ಕಾಯ್ದೆ, 1991.
2. ಜಮ್ಮುವಿನಲ್ಲಿ ರೋಹಿಂಗ್ಯಾ ವಲಸಿಗರ ಬಿಡುಗಡೆ ಮಾಡುವುದನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್.
3. ಗಡಿ ಮಾತುಕತೆಗಳನ್ನು ನಿಗದಿಪಡಿಸಲು ಮುಂದಾದ ಭೂತಾನ್, ಚೀನಾ.
4. ವಿಶ್ವಸಂಸ್ಥೆಯಲ್ಲಿ ಪರಸ್ಪರರ ‘ಪ್ರಮುಖ ಹಿತಾಸಕ್ತಿಗಳನ್ನು’ ಬೆಂಬಲಿಸಲು ಅಣಿಯಾದ ಚೀನಾ ಮತ್ತು ಪಾಕಿಸ್ತಾನ.
5. ಸ್ವತಂತ್ರ ಸಂಚಾರ ಕಾರ್ಯಾಚರಣೆ (FONOP)
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಕೆನ್-ಬೆಟ್ವಾ ನದಿಜೋಡಣೆ ಯೋಜನೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ನ್ಯಾನೊ ಸ್ನಿಫರ್ ( ಮೈಕ್ರೋಸೆನ್ಸರ್ ಆಧಾರಿತ ಸ್ಫೋಟಕದ ಜಾಡು ಪತ್ತೆಮಾಡುವ ಸಾಧನ)
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಪೂಜಾ/ಪ್ರಾರ್ಥನಾ ಸ್ಥಳಗಳ ಕಾಯ್ದೆ,1991:
(Places of Worship Act, 1991)
ಸಂದರ್ಭ:
ತಜ್ಞರ ಪ್ರಕಾರ, ಕಾಶಿ ಮತ್ತು ಮಥುರಾದಂತಹ ಧಾರ್ಮಿಕ ಸ್ಥಳಗಳನ್ನು ಪರೀಕ್ಷಿಸುವುದನ್ನು ಪೂಜಾ/ಪ್ರಾರ್ಥನಾ ಸ್ಥಳಗಳ ಕಾಯ್ದೆ (Places of Worship Act, 1991) ಅಡಿಯಲ್ಲಿ ನಿಷೇಧಿಸಲಾಗಿದೆ.
ಏನಿದು ಸಮಸ್ಯೆ?
ಇತ್ತೀಚೆಗೆ, ಸ್ಥಳೀಯ ವಾರಣಾಸಿ ನ್ಯಾಯಾಲಯವು ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಪಿ ಮಸೀದಿ ಆವರಣದಲ್ಲಿ ಶೋಧ ಕಾರ್ಯ ಕೈಗೊಳ್ಳುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ASI) ನಿರ್ದೇಶನ ನೀಡಿದ ನಂತರ ಈ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.
- ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಸಮರ್ಥಿಸಿದ ಕಾನೂನಿಗೆ ವಿರುದ್ಧವಾಗಿ, ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಿಗೆ ಅಂತಹ ನಿರ್ದೇಶನವನ್ನು ನೀಡುವ ಅಧಿಕಾರವಿದೆಯೇ ಎಂಬ ಪ್ರಶ್ನೆಯನ್ನೂ ತಜ್ಞರು ಎತ್ತಿದ್ದಾರೆ.
ಪೂಜಾ/ಪ್ರಾರ್ಥನಾ ಸ್ಥಳಗಳ ಕಾಯ್ದೆ,1991 ರ ಕುರಿತು:
- ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಆಗಸ್ಟ್ 15, 1947 ರಂದು ಇದ್ದಂತೆಯೇ ಇರುತ್ತದೆ ಎಂದು ಈ ಕಾಯಿದೆಯು ಘೋಷಿಸುತ್ತದೆ.
- ಯಾವುದೇ ವ್ಯಕ್ತಿಯು ಯಾವುದೇ ಧಾರ್ಮಿಕ ಪಂಥದ ಪೂಜಾ ಸ್ಥಳವನ್ನು ಬೇರೆ ಪಂಥ ಅಥವಾ ವರ್ಗಕ್ಕೆ ಬದಲಾಯಿಸಬಾರದು ಎಂದು ಅದು ಹೇಳುತ್ತದೆ.
- ಈ ಶಾಸನದ ಪ್ರಕಾರ, ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿರುವ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಪರಿವರ್ತಿಸುವ ಬಗ್ಗೆ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಇತರ ಪ್ರಾಧಿಕಾರದ ಮುಂದೆ ಬಾಕಿ ಇರುವ ಯಾವುದೇ ಮೊಕದ್ದಮೆ, ಮೇಲ್ಮನವಿ ಅಥವಾ ಇತರ ಕ್ರಮಗಳು ಈ ಕಾನೂನು ಜಾರಿಗೆ ಬಂದ ಕೂಡಲೇ ಬರ್ಖಾಸ್ತು ಗೊಳ್ಳುತ್ತವೆ. ನಂತರ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.
ಈ ಕಾಯಿದೆಯ ಉದ್ದೇಶಗಳು:
- 1947 ರ ಆಗಸ್ಟ್ 15 ರಂದು ಅಸ್ತಿತ್ವದಲ್ಲಿ ಇದ್ದಂತೆ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಸ್ಥಗಿತಗೊಳಿಸುವುದು ಈ ಕಾಯಿದೆಯ ಉದ್ದೇಶವಾಗಿತ್ತು.
- ಅಂದಿನ ದಿನಾಂಕದಲ್ಲಿ ಅಸ್ತಿತ್ವದಲ್ಲಿದ್ದಂತೆ, ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಕಾಪಾಡಿಕೊಳ್ಳಲು ಹಾಗೂ ನಿರ್ವಹಿಸಲು ಈ ಕಾಯಿದೆಯು ಅವಕಾಶ ನೀಡುತ್ತದೆ.
- ಯಾವುದೇ ಗುಂಪಿನ ಪೂಜಾ ಸ್ಥಳದ ಹಿಂದಿನ ಸ್ಥಿತಿಯ ಬಗ್ಗೆ ಯಾವುದೇ ಪೂರ್ವ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಆ ರಚನೆ ಅಥವಾ ಭೂಮಿಯಲ್ಲಿ ಹೊಸ ಹಕ್ಕುಗಳನ್ನು ನೀಡುವುದನ್ನು ನಿಲ್ಲಿಸುವುದು ಇದರ ಉದ್ದೇಶವಾಗಿತ್ತು.
- ಈ ಕಾನೂನು ದೀರ್ಘಕಾಲೀನ ಕೋಮು ಸೌಹಾರ್ದತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ವಿನಾಯಿತಿಗಳು:
ಈ ನಿಬಂಧನೆಗಳು ಈ ಕೆಳಗಿನ ಸಂದರ್ಭಗಳಲ್ಲಿ ಅನ್ವಯಿಸುವುದಿಲ್ಲ:
- ಪುರಾತನ ಮತ್ತು ಐತಿಹಾಸಿಕ ಸ್ಮಾರಕ ಅಥವಾ ಯಾವುದೇ ಪುರಾತತ್ತ್ವ ಶಾಸ್ತ್ರ ಸ್ಥಳಗಳು ಅಥವಾ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ, 1958 ರ ಅಡಿಯಲ್ಲಿ ಬರುವ ಯಾವುದೇ ಪೂಜಾ ಸ್ಥಳಗಳು.
- ಈ ಕಾಯ್ದೆಯ ಪ್ರಾರಂಭದ ಮೊದಲು, ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಇತರ ಪ್ರಾಧಿಕಾರದಿಂದ ಯಾವುದೇ ವಿಷಯ, ಮೇಲ್ಮನವಿ ಅಥವಾ ಇತರ ಕ್ರಮಗಳನ್ನು ಅಂತಿಮಗೊಳಿಸಿ, ತೀರ್ಮಾನಿಸಿ ಅಥವಾ ಒಪ್ಪಿಗೆಯ ಮೂಲಕ ವಿಲೇವಾರಿ ಮಾಡಲಾದ ಯಾವುದೇ ಸ್ಥಳದ ಪರಿವರ್ತನೆ.
- ಉತ್ತರ ಪ್ರದೇಶದ ರಾಜ್ಯದ ಅಯೋಧ್ಯೆಯಲ್ಲಿರುವ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಪ್ರಾರ್ಥನಾ ಸ್ಥಳ ಅಥವಾ ಪೂಜಾ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ಮೊಕದ್ದಮೆ, ಮೇಲ್ಮನವಿ ಅಥವಾ ಇತರ ಕ್ರಮಗಳಿಗೆ ಈ ಕಾಯಿದೆ ಅನ್ವಯಿಸುವುದಿಲ್ಲ. ಈ ಕಾಯಿದೆಯ ನಿಬಂಧನೆಗಳು ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇಲೆ ಪರಿಣಾಮ ಬೀರುತ್ತವೆ.
ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು.
ಜಮ್ಮುವಿನಲ್ಲಿ ರೋಹಿಂಗ್ಯಾ ವಲಸಿಗರ ಬಿಡುಗಡೆ ಮಾಡುವುದನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್:
(SC turns down release of Rohingya in Jammu)
ಸಂದರ್ಭ:
ಜಮ್ಮುವಿನಲ್ಲಿ ಬಂಧನದಲ್ಲಿ ಇರಿಸಿರುವ ರೋಹಿಂಗ್ಯಾ ಅಕ್ರಮ ವಲಸಿಗರನ್ನು ಕಾನೂನನ್ನು ಪಾಲಿಸದೆ ಮ್ಯಾನ್ಮಾರ್‌ಗೆ ಗಡಿಪಾರು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರೋಹಿಂಗ್ಯಾ ವಲಸಿಗರನ್ನು ದೇಶದಿಂದ ಗಡಿಪಾರು ಮಾಡುವಲ್ಲಿ ಕಾನೂನನ್ನು ಸೂಕ್ಷ್ಮವಾಗಿ ಅನುಸರಿಸಲಾಗುವುದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿದೆ.
ಏನಿದು ಪ್ರಕರಣ?
ಕೆಲವು ಸಮಯದ ಹಿಂದೆ, ರೋಹಿಂಗ್ಯಾ ನಿರಾಶ್ರಿತರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇದರಲ್ಲಿ ಬಂಧನಕ್ಕೊಳಗಾದ ರೋಹಿಂಗ್ಯಾ ನಿರಾಶ್ರಿತರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅನೌಪಚಾರಿಕ ಶಿಬಿರಗಳಲ್ಲಿ ನೆಲೆಸಿರುವ ರೋಹಿಂಗ್ಯಾಗಳಿಗೆ ‘ನಿರಾಶ್ರಿತರ ಗುರುತಿನ ಚೀಟಿಯನ್ನು ತ್ವರಿತವಾಗಿ ವಿತರಿಸುವಂತೆ ಕೇಂದ್ರಾಡಳಿತ ಪ್ರದೇಶದ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಲಾಗಿದೆ.
ನ್ಯಾಯಾಲಯದ ನಿಲುವೇನು?
ಆದಾಗ್ಯೂ, ಸಂವಿಧಾನದಲ್ಲಿ ಒದಗಿಸಲಾಗಿರುವ ‘ಸಮಾನತೆಯ ಹಕ್ಕು’ (14ನೇ ವಿಧಿ ) ಮತ್ತು ‘ಜೀವಿಸುವ ಹಕ್ಕು’ (21 ನೇ ವಿಧಿ ), ಭಾರತದ ನಾಗರಿಕರು ಮತ್ತು ವಿದೇಶಿಯರು ಇಬ್ಬರಿಗೂ ಲಭ್ಯವಿದ್ದರೂ ಸಹ ‘ಗಡಿಪಾರು ಮಾಡಬಾರದು ಎಂಬ ಹಕ್ಕು’ ಪೌರತ್ವಕ್ಕೆ ಪೂರಕವಾಗಿದೆ.
- ‘ಗಡೀಪಾರು ಮಾಡದಿರುವ ಹಕ್ಕು’ ಎಂಬುದು ಸಂವಿಧಾನದ 19 (1) (ಇ) ವಿಧಿಯ ಅಡಿಯಲ್ಲಿ ಒದಗಿಸಿರುವಂತೆ ‘ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಅಥವಾ ನೆಲೆಸುವ ಹಕ್ಕಿಗೆ’ ಒಂದು ‘ಪೂರಕ’ ಅಥವಾ ‘ಹೊಂದಾಣಿಕೆಯಾಗಿದೆ’.
- ಸಂವಿಧಾನದ 19 (1) (ಇ) ವಿಧಿಯು, ಭಾರತದ ಪ್ರತಿಯೊಬ್ಬ ನಾಗರಿಕನಿಗೆ ದೇಶದ ಯಾವುದೇ ಭಾಗದಲ್ಲಿ ಮುಕ್ತವಾಗಿ ಪ್ರಯಾಣಿಸಲು, ವಾಸಿಸಲು ಮತ್ತು ನೆಲೆಸಲು ಹಕ್ಕನ್ನು ನೀಡುತ್ತದೆ.
ಭಾರತದಲ್ಲಿನ ನಿರಾಶ್ರಿತರನ್ನು ನಿಯಂತ್ರಿಸಲು ಇರುವ ಕಾನೂನುಗಳು ಮತ್ತು ನಿಯಮಗಳು:
- ಭಾರತದಲ್ಲಿ, ವಿಶೇಷವಾಗಿ ನಿರಾಶ್ರಿತರಿಗೆ ಸಂಬಂಧಿಸಿದ ಯಾವುದೇ ಕಾನೂನು / ಶಾಸನ ಜಾರಿಗೆ ಬಂದಿಲ್ಲ. ಆದ್ದರಿಂದ, ರೋಹಿಂಗ್ಯಾ ನಿರಾಶ್ರಿತರನ್ನು ಹೆಚ್ಚಾಗಿ ವಿದೇಶಿಯರ ಕಾಯ್ದೆ(Foreigners Act) , 1946 ಮತ್ತು ವಿದೇಶಿಯರ ಆದೇಶ (Foreigners Order), 1948 ರ ಅಡಿಯಲ್ಲಿ ಸರ್ಕಾರವು ಗಡೀಪಾರು ಮಾಡಿದ ಅಕ್ರಮ ವಲಸಿಗರ ವಿಭಾಗದಲ್ಲಿ ಸೇರಿಸಿಕೊಳ್ಳುತ್ತದೆ.
- ಆದಾಗ್ಯೂ, ನಿರಾಶ್ರಿತರು ಕಾನೂನು ಬದ್ಧವಾಗಿ, ವಲಸಿಗರ ವಿಶೇಷ ವರ್ಗವಾಗಿದ್ದು, ಅವರನ್ನು ‘ಅಕ್ರಮ ವಲಸಿಗರು’ ವಿಭಾಗದಲ್ಲಿ ಸೇರಿಸಲಾಗುವುದಿಲ್ಲ.
ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು.
ಗಡಿ ಮಾತುಕತೆಗಳನ್ನು ನಿಗದಿಪಡಿಸಲು ಮುಂದಾದ ಭೂತಾನ್, ಚೀನಾ:
(Bhutan, China to schedule boundary discussions)
ಸಂದರ್ಭ:
ಗಡಿ ವಿವಾದ ಪರಿಹಾರ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಭೂತಾನ್ ಮತ್ತು ಚೀನಾ ಎರಡೂ ದೇಶಗಳು “ಶೀಘ್ರದಲ್ಲೇ” ಗಡಿ ಮಾತುಕತೆ ನಡೆಸಲು ಮತ್ತು ಮಾರ್ಗಸೂಚಿಯನ್ನು ಚರ್ಚಿಸಲು ಒಪ್ಪಿಕೊಂಡಿವೆ.
ಮುಂಬರುವ ಗಡಿ ವಿವಾದ ಕುರಿತ ಸಂವಾದವು ಉಭಯ ದೇಶಗಳ ನಡುವಿನ 25 ನೇ ಸುತ್ತಿನ ಗಡಿ ಮಾತುಕತೆ ಪ್ರಕ್ರಿಯೆಯಾಗಿದೆ. 2017 ರಲ್ಲಿ ಡೋಕ್ಲಾಮ್ ವಿವಾದದ ನಂತರ ಮತ್ತು ಮತ್ತು 2020 ರ ಜೂನ್‌ನಲ್ಲಿ ಭಾರತದ ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಭೂತಾನ್‌ನ ಪೂರ್ವ ಗಡಿಯ ಮೇಲೆ ಚೀನಾ ಹಕ್ಕು ಪ್ರತಿಪಾದಿಸಿದ ನಂತರ ಇದು ಮೊದಲ ಮಾತುಕತೆಯಾಗಿದೆ.
ವಿವಾದಿತ ಪ್ರದೇಶಗಳು:
ಇಲ್ಲಿಯವರೆಗೆ, ಈ ಮಾತುಕತೆಗಳು ಎರಡು ವಿವಾದಿತ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದೆ: ಭೂತಾನ್‌ನ ಉತ್ತರಕ್ಕೆ ಇರುವ ‘ಪಸಮ್ಲುಂಗ್ ಕಣಿವೆ’ (Pasamlung Valley) ಮತ್ತು ‘ಜಕರ್‌ಲುಂಗ್ ಕಣಿವೆ’(Jakarlung Valley) ಮತ್ತು ಭೂತಾನ್‌ನ ಪಶ್ಚಿಮಕ್ಕೆ ‘ಡೋಕ್ಲಾಮ್’ ಭಾರತದೊಂದಿಗೆ ತ್ರಿಕೋನ ಜಂಕ್ಷನ್ ವರೆಗೆ.
ಆದಾಗ್ಯೂ, 2020 ರ ಜೂನ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಸಭೆಯಲ್ಲಿ, ಭೂತಾನ್‌ನ ಪೂರ್ವ ಪ್ರದೇಶದಲ್ಲಿ ನೆಲೆಗೊಂಡಿರುವ ವಿವಾದಿತ ‘ಸಾಕ್ಟೆಂಗ್ ವನ್ಯಜೀವಿ ಅಭಯಾರಣ್ಯ’ಕ್ಕೆ (Sakteng Wildlife sanctuary) ಸಂಬಂಧಿಸಿದಂತೆ ಚೀನಾ, ಇದು ವಿವಾದಿತ ಪ್ರದೇಶವಾದ್ದರಿಂದ ಇದಕ್ಕೆ ಅನುದಾನ ನೀಡುವುದಕ್ಕೆ ತನ್ನ ಆಕ್ಷೇಪವಿದೆ ಎಂದು ಹೇಳಿತು.
ಭಾರತಕ್ಕೆ ಕಳವಳ:
- ಚೀನಾದ ಹೊಸ ಪ್ರಾದೇಶಿಕ ಹಕ್ಕುಗಳ ಪ್ರತಿಪಾದನೆಯು ಭಾರತದ ಸಣ್ಣ ನೆರೆಹೊರೆಯ ದೇಶಗಳ ಮೇಲೆ ಒತ್ತಡ ಹೇರುವ ಮತ್ತು ಭಾರತದೊಂದಿಗೆ ಯಾವುದೇ ನಿಕಟ ಸಂಬಂಧ ಹೊಂದಿದ್ದಕ್ಕಾಗಿ ಈ ದೇಶಗಳಿಗೆ ಶಿಕ್ಷೆ ವಿಧಿಸುವ ಚೀನಾದ ಕಾರ್ಯತಂತ್ರದ ಒಂದು ಭಾಗವಾಗಿದೆ.
- 2017 ರಲ್ಲಿ, ‘ಡೋಕ್ಲಾಮ್ ಪ್ರಸ್ಥಭೂಮಿ’ ತನ್ನದೆಂದು ಹೇಳಿಕೊಳ್ಳುವ ಭೂತಾನ್ ನ ಗಡಿಯೊಳಗೆ, ಚೀನಾ ನುಸುಳಿದ್ದು, ಭಾರತೀಯ ಮತ್ತು ಚೀನಾದ ಸೈನಿಕ ಪಡೆಗಳ ನಡುವೆ’ ಮುಖಾಮುಖಿಗೆ ಅಥವಾ ಭಿನ್ನಾಭಿಪ್ರಾಯದಿಂದ ಕುಡಿದ ವಿವಾದಕ್ಕೆ ‘ಕಾರಣವಾಯಿತು.
ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು.
ವಿಶ್ವಸಂಸ್ಥೆಯಲ್ಲಿ ಪರಸ್ಪರರ ‘ಪ್ರಮುಖ ಹಿತಾಸಕ್ತಿಗಳನ್ನು’ ಬೆಂಬಲಿಸಲು ಅಣಿಯಾದ ಚೀನಾ ಮತ್ತು ಪಾಕಿಸ್ತಾನ:
(China, Pakistan to back each other’s ‘core interests’ at UN)
ಸಂದರ್ಭ:
ವಿಶ್ವಸಂಸ್ಥೆಗೆ ಸಂಬಂಧಿಸಿದ ವ್ಯವಹಾರಗಳ ಬಗ್ಗೆ ದ್ವಿಪಕ್ಷೀಯ ಸಮಾಲೋಚನಾ ಸಭೆ ನಡೆಸಿದ ನಂತರ ಚೀನಾ ಮತ್ತು ಪಾಕಿಸ್ತಾನಗಳು ವಿಶ್ವಸಂಸ್ಥೆಯಲ್ಲಿ ಪರಸ್ಪರರ “ಮೂಲಭೂತ ಮತ್ತು ಪ್ರಧಾನ ಹಿತಾಸಕ್ತಿಗಳನ್ನು” ಬೆಂಬಲಿಸಲು ವಾಗ್ದಾನ ಮಾಡಿಕೊಂಡಿವೆ.
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯದಲ್ಲಿ ಚೀನಾ ಪಾಕಿಸ್ತಾನವನ್ನು ಬೆಂಬಲಿಸಿದರೆ ಮತ್ತು ಹಾಂಗ್ ಕಾಂಗ್ ಮತ್ತು ಕ್ಸಿನ್‌ಜಿಯಾಂಗ್ ವಿಷಯಗಳ ಕುರಿತು ಇಸ್ಲಾಮಾಬಾದ್ ಬೀಜಿಂಗ್ ಅನ್ನು ಬೆಂಬಲಿಸಲಿದೆ.
ಭಾರತದ ಕಳವಳಗಳು:
ಚೀನಾ ಮತ್ತು ಪಾಕಿಸ್ತಾನ ಅಧಿಕೃತವಾಗಿ ತಮ್ಮ ಸಂಬಂಧಗಳನ್ನು ‘ಸರ್ವ ಋತು ಪಾಲುದಾರರು’( “all-weather partners”) ಮತ್ತು ಎರಡೂ ದೇಶಗಳನ್ನು “ಉಕ್ಕಿನ ಸಹೋದರರು” (‘iron brothers’) ಎಂದು ಕರೆದುಕೊಳ್ಳುತ್ತವೆ. ಇತ್ತೀಚಿನ ತಿಂಗಳುಗಳಲ್ಲಿ, ಉಭಯ ದೇಶಗಳು ತಾವು ಸೂಕ್ಷ್ಮವೆಂದು ಪರಿಗಣಿಸುವ ವಿಷಯಗಳ ಬಗ್ಗೆ ಪರಸ್ಪರರನ್ನು ಬೆಂಬಲಿಸುವ ಒಪ್ಪಂದಕ್ಕೆ ಅಡಿ ಇಟ್ಟಿವೆ.
- ವಿಶೇಷವಾಗಿ, ಅಮೇರಿಕಾ ಸಂಯುಕ್ತ ಸಂಸ್ಥಾನದ ನೇತೃತ್ವದ, “ಆಯ್ದ ಬಹುಪಕ್ಷೀಯತೆ” (Selective Multilateralism) ಎಂದು ಚೀನಾದಿಂದ ತೀವ್ರ ಟೀಕೆಗೆ ಗುರಿಯಾಗಿರುವ ಯು.ಎಸ್., ಆಸ್ಟ್ರೇಲಿಯಾ ಮತ್ತು ಜಪಾನ್ ಮತ್ತು ಭಾರತವನ್ನು ಒಳಗೊಂಡ ‘ಕ್ವಾಡ್’ ಅಥವಾ ಚತುರ್ಭುಜ ಚೌಕಟ್ಟು ಕೂಡ ಎಂದೂ ಕರೆಯಲ್ಪಡುವ ‘ನಿಯಮ-ಆಧಾರಿತ ವ್ಯವಸ್ಥೆ’ ಯನ್ನು ಗುರಿಯಾಗಿಸಿಕೊಂಡು ಉಭಯ ದೇಶಗಳ ನಡುವಿನ ಸಂಬಂಧದಲ್ಲಿನ ಈ ಬೆಳವಣಿಗೆ ಕಂಡುಬಂದಿದೆ.
- 2019 ಮತ್ತು 2020 ರಲ್ಲಿ ಚೀನಾ ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ’ ಕನಿಷ್ಠ ಮೂರು ಸಂದರ್ಭಗಳಲ್ಲಿ ಕಾಶ್ಮೀರ ವಿಷಯವನ್ನು ಎತ್ತಿತು, ಇದರಲ್ಲಿ ಚೀನಾ, ಭಾರತವು, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ನೇ ವಿಧಿಯನ್ನು ರದ್ದುಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಪುನರ್ರಚನೆ ಮಾಡಿದ್ದು ಮತ್ತು ಅದರ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಸಂದರ್ಭದ ಹಿನ್ನೆಲೆಯಲ್ಲಿ ಚರ್ಚಿಸಲು ಕರೆ ನೀಡಿತು.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.
ಸ್ವತಂತ್ರ ಸಂಚಾರ ಕಾರ್ಯಾಚರಣೆ (FONOP):
(Freedom of Navigation Operation)
ಸಂದರ್ಭ:
ಇತ್ತೀಚೆಗೆ, ಅಮೆರಿಕಾದ ನೌಕಾಪಡೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಈ ವಾರದ ಆರಂಭದಲ್ಲಿ ಭಾರತದ ಲಕ್ಷದ್ವೀಪ ಬಳಿಯ, ‘ವಿಶೇಷ ಆರ್ಥಿಕ ವಲಯ- (Exclusive Economic Zone- EEZ) ದಲ್ಲಿ ಉದ್ದೇಶಪೂರ್ವಕವಾಗಿ ನವದೆಹಲಿಯ ಅನುಮತಿಯನ್ನು ಪಡೆಯದೆ ಸ್ವತಂತ್ರ ಸಂಚಾರ ಕಾರ್ಯಾಚರಣೆಯನ್ನು (FONOP) ಕೈಗೊಳ್ಳಲಾಗಿತ್ತು ಎಂದು ತಿಳಿಸಿದೆ.
ಆದಾಗ್ಯೂ, ಭಾರತವು ಅಮೇರಿಕಾದ ಈ ನಿರ್ಧಾರವನ್ನು ಪ್ರತಿಭಟಿಸಿದೆ, ಭಾರತದ ದೇಶೀಯ ಕಡಲ ಕಾನೂನು ಅಂತರರಾಷ್ಟ್ರೀಯ ಕಡಲ ಕಾನೂನಿಗೆ ಪರ್ಯಾಯವಲ್ಲ (the United Nations Convention on the Law of the Sea (UNCLOS) ಎಂಬ ಅಮೇರಿಕಾದ ಹೇಳಿಕೆಯನ್ನು ಭಾರತವು ತಿರಸ್ಕರಿಸಿದೆ.
ಹಿನ್ನೆಲೆ:
ಭಾರತದ ಕಡಲ ಕಾನೂನಿನ ಪ್ರಕಾರ, ಯಾವುದೇ ದೇಶವು ತನ್ನ ‘ವಿಶೇಷ ಆರ್ಥಿಕ ವಲಯ’ದಲ್ಲಿ (EEZ) ಮಿಲಿಟರಿ ಕವಾಯತು ನಡೆಸುವ ಮೊದಲು ತನ್ನ ಅಂದರೆ ಭಾರತದ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.
- ಒಂದು ದೇಶವು ತನ್ನ ಕರಾವಳಿಯಿಂದ 12 ನಾಟಿಕಲ್ ಮೈಲುಗಳಷ್ಟು ದೂರದ ಪ್ರಾದೇಶಿಕ ನೀರಿನ ಮೇಲೆ ‘ಸಂಪೂರ್ಣ ಸಾರ್ವಭೌಮತ್ವವನ್ನು’ ಹೊಂದಿದ್ದರೂ, ಬೇಸ್‌ಲೈನ್‌ನಿಂದ 200 ನಾಟಿಕಲ್ ಮೈಲುಗಳವರೆಗೆ ವಿಸ್ತರಿಸಿರುವ ‘ವಿಶೇಷ ಆರ್ಥಿಕ ವಲಯ’ ದಲ್ಲಿ ಸಮುದ್ರ ಸಂಪನ್ಮೂಲಗಳ ಪರಿಶೋಧನೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಮಾತ್ರ ವಿಶೇಷ ಹಕ್ಕುಗಳನ್ನು ಹೊಂದಿರುತ್ತದೆ.
ಏನಿದು ಸಮಸ್ಯೆ?
- ಭಾರತದ ಪೂರ್ವ ಅನುಮತಿ ಪಡೆಯುವುದು ಅಂತರರಾಷ್ಟ್ರೀಯ ಕಾನೂನುಗಳು ಮತ್ತು ‘ಸ್ವತಂತ್ರ ಸಂಚಾರ ಕಾರ್ಯಾಚರಣೆ’ (FONOP) ಗೆ ಹೊಂದಿಕೆಯಾಗುವುದಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಹೇಳುತ್ತದೆ.
- ಭಾರತ, ಚೀನಾ ಮತ್ತು ಇತರ ಹಲವು ದೇಶಗಳಿಗಿಂತ ಭಿನ್ನವಾಗಿ, ವಿಶ್ವಸಂಸ್ಥೆಯ ಕಡಲ ಕಾನೂನು ಒಪ್ಪಂದವನ್ನು (UNCLOS) ಯುಎಸ್ ಅಂಗೀಕರಿಸಿಲ್ಲ. ಚೀನಾದ ಆಕ್ರಮಣಕಾರಿ ಪ್ರಾದೇಶಿಕ ಹಕ್ಕುಗಳನ್ನು ಪ್ರಶ್ನಿಸಲು ವಿವಾದಿತ ದಕ್ಷಿಣ ಚೀನಾ ಸಮುದ್ರ ಮತ್ತು ಹಿಂದೂ ಮಹಾಸಾಗರ ಪ್ರದೇಶ ಸೇರಿದಂತೆ ಇತರ ಪ್ರದೇಶಗಳಲ್ಲಿ ಯುಎಸ್ ನಿಯಮಿತವಾಗಿ ‘ಸ್ವತಂತ್ರ ಸಂಚಾರ ಕಾರ್ಯಾಚರಣೆ’ (FONOP) ಯನ್ನು ನಡೆಸುತ್ತದೆ. ಅಂತರಾಷ್ಟ್ರೀಯ ಕಾನೂನು ಅವಕಾಶ ನೀಡುವ ಸ್ಥಳಗಳಲ್ಲಿಯೇ ಅಮೇರಿಕಾ ಕಾರ್ಯಾಚರಣೆ ಕೈಗೊಳ್ಳುತ್ತದೆ ಎಂದು ತಿಳಿಸಿದೆ.
ಈಗಿನ ಕಾಳಜಿಯ ವಿಷಯವೇನು?
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ವಿರುದ್ಧ ‘ವಿಶ್ವಾಸಾರ್ಹ ತಡೆಯನ್ನು’ ಸೃಷ್ಟಿಸಲು ‘ಕ್ವಾಡ್’ ಮತ್ತು ಇತರ ಕಾರ್ಯವಿಧಾನಗಳ ಮೂಲಕ ಅಮೆರಿಕವು ಭಾರತದ ನಿಕಟ ಸಹಕಾರವನ್ನು ಪಡೆಯಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಭಾರತದ ‘ವಿಶೇಷ ಆರ್ಥಿಕ ವಲಯದಲ್ಲಿ’ ಅಮೇರಿಕಾ ನಡೆಸಿದ “ಸ್ವತಂತ್ರ ಸಂಚಾರ ಕಾರ್ಯಾಚರಣೆ” (FONOP) ಯ ಆಕ್ರಮಣಕಾರಿ ಸಾರ್ವಜನಿಕ ಘೋಷಣೆಯು ಭಾರತದ ಭದ್ರತಾ ವ್ಯವಸ್ಥೆಗೆ ಒಡ್ಡಿದ ಸವಾಲಾಗಿದೆ.
“ಸ್ವತಂತ್ರ ಸಂಚಾರ ಕಾರ್ಯಾಚರಣೆ” (FONOP) ಎಂದರೇನು?
‘ಸ್ವತಂತ್ರ ಸಂಚಾರ ಕಾರ್ಯಾಚರಣೆ’ (FONOP) ಎಂದರೆ ಯುಎಸ್ ನೌಕಾಪಡೆಯು ಕರಾವಳಿ ದೇಶಗಳು ತಮ್ಮ ವಿಶೇಷ ನಿರ್ದಿಷ್ಟ ಪ್ರದೇಶಗಳು ಎಂದು ಹೇಳಿಕೊಳ್ಳುವ ನೀರಿನಲ್ಲಿ ಸಾಗುವುದನ್ನು ಒಳಗೊಂಡಿರುತ್ತದೆ.
- ಅಮೇರಿಕಾದ ರಕ್ಷಣಾ ಇಲಾಖೆಯ (DoD) ಪ್ರಕಾರ, ‘ಸ್ವತಂತ್ರ ಸಂಚಾರ ಕಾರ್ಯಾಚರಣೆ’, ಅಂದರೆ, ಫ್ರೀಡಮ್ ಆಫ್ ನ್ಯಾವಿಗೇಶನ್ ಆಪರೇಷನ್ (FON) ಕಾರ್ಯಕ್ರಮವು 40 ವರ್ಷಗಳಿಂದ ಅಸ್ತಿತ್ವದಲ್ಲಿದೆ, ಮತ್ತು ‘ಅದರ ನ್ಯಾವಿಗೇಷನಲ್ ಮತ್ತು ಏರ್ ಪ್ಯಾಸೇಜ್ ಹಕ್ಕುಗಳನ್ನು ಪಡೆಯಲು ನಿರಂತರವಾಗಿ ಪುನರುಚ್ಚರಿಸುತ್ತಲೆ ಇದೆ, ಮತ್ತು ವಿಶ್ವಾದ್ಯಂತ ಇದನ್ನು ಪ್ರತಿಪಾದಿಸುತ್ತಿದೆ.
- ಇಂತಹ ಪ್ರತಿಪಾದನೆಗಳು ಯುನೈಟೆಡ್ ಸ್ಟೇಟ್ಸ್ ಇತರ ದೇಶಗಳ ಅತಿಯಾದ ಕಡಲ ಹಕ್ಕುಗಳನ್ನು ಸರ್ವತಾ ಸ್ವೀಕರಿಸುವುದಿಲ್ಲ ಆದ್ದರಿಂದ, ಈ ದೇಶಗಳು ಪ್ರತಿಪಾದಿಸಿದ ಹಕ್ಕುಗಳನ್ನು ಅಂತರರಾಷ್ಟ್ರೀಯ ಕಾನೂನಿನಲ್ಲಿ ಅಂಗೀಕರಿಸಿದಂತೆ ತಡೆಯುತ್ತದೆ ಎಂದು ಸೂಚಿಸುತ್ತದೆ.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ:
(Ken-Betwa Project)
ಸಂದರ್ಭ:
ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು(Ken-Betwa river linking project) ಜಾರಿಗೊಳಿಸದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದಾರೆ.
ಏಕೆಂದರೆ, ಈ ‘ರಿವರ್ ಲಿಂಕ್ ಯೋಜನೆಯು’ ಪನ್ನಾ ಹುಲಿ ಮೀಸಲು ಪ್ರದೇಶವನ್ನು (Panna Tiger Reserve) ಗಮನಾರ್ಹವಾಗಿ ಹಾನಿಗೊಳಿಸುತ್ತದೆ. ಈ ಯೋಜನೆಯಿಂದ ಹುಲಿ ಸಂರಕ್ಷಿತ ಪ್ರದೇಶದ ಸುಮಾರು 40 ಪ್ರತಿಶತದಷ್ಟು ಪ್ರದೇಶವು ಸರಿಪಡಿಸಲಾಗದಷ್ಟು ನಾಶವಾಗಲಿದೆ ಎಂದು ರಾಜ್ಯ ಸರ್ಕಾರ ಬಹಿರಂಗವಾಗಿ ಅಂದಾಜಿಸಿದೆ.
ಹಿನ್ನೆಲೆ:
‘ವಿಶ್ವ ಜಲ ದಿನಾಚರಣೆ’ ದಿನದಂದು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದೊಂದಿಗೆ ಭಾರತದ ಮೊದಲ ಪ್ರಮುಖ ನದಿ-ಸಂಪರ್ಕ ಯೋಜನೆಯ ಕೆಲಸವನ್ನು ಪ್ರಾರಂಭಿಸಲು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದರು. ಇದರ ಅಡಿಯಲ್ಲಿ, ಕೆನ್ ಮತ್ತು ಬೆಟ್ವಾ ನದಿಗಳು ಪರಸ್ಪರ ಜೋಡಣೆ ಗೊಳ್ಳಲಿವೆ.
- ನದಿ ನೀರು ಹಂಚಿಕೆ ವಿಷಯದಲ್ಲಿ ಉಭಯ ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ, ಯೋಜನೆಯ ರೂಪರೇಷೆಯನ್ನು ರಚಿಸಿದ ಸುಮಾರು 18 ವರ್ಷಗಳ ನಂತರ ಈ ಒಪ್ಪಂದಕ್ಕೆ (MoA) ಸಹಿ ಹಾಕಲಾಯಿತು.
ಕೆನ್-ಬೆಟ್ವಾ ಯೋಜನೆಯ ಕುರಿತು:
ಎರಡು ಭಾಗಗಳ ಯೋಜನೆಯಾಗಿ ‘ಕಲ್ಪಿಸಲಾಗಿರುವ’ ಕೆನ್-ಬೆಟ್ವಾ ಯೋಜನೆಯು ‘ದೇಶದ ಮೊದಲ ಅಂತರ್ ನದಿ ಸಂಪರ್ಕ ಯೋಜನೆಯಾಗಿದೆ.
- ಮಧ್ಯಪ್ರದೇಶದ ಕೆನ್ ನದಿಯಿಂದ ಹೆಚ್ಚುವರಿ ನೀರನ್ನು ಉತ್ತರ ಪ್ರದೇಶದ ಬೆಟ್ವಾ ನದಿಗೆ ವರ್ಗಾಯಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಎರಡು ರಾಜ್ಯಗಳ ಮಧ್ಯೆ ಹರಡಿರುವ ಬುಂದೇಲ್‌ಖಂಡ್ ಪ್ರದೇಶದ ಬರ ಪೀಡಿತ ಜಿಲ್ಲೆಗಳಾದ ಝಾನ್ಸಿ, ಬಂಡಾ, ಲಲಿತ್‌ಪುರ ಮತ್ತು ಮಹೋಬಾ ಜಿಲ್ಲೆಗಳು ಉತ್ತರ ಪ್ರದೇಶ ಮತ್ತು ಟಿಕಮ್‌ಗಡ್, ಪನ್ನಾ ಮತ್ತು ಛತ್ತರ್‌ಪುರ- ಮಧ್ಯಪ್ರದೇಶ ಈ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಬಹುದು.
ಪ್ರಮುಖ ಅಂಶಗಳು:
- ಕೆನ್ ಮತ್ತು ಬೆಟ್ವಾ ನದಿಗಳು ಮಧ್ಯಪ್ರದೇಶದಲ್ಲಿ ಉಗಮವಾಗುತ್ತದೆ ಮತ್ತು ಇವು ಯಮುನಾ ನದಿಯ ಉಪನದಿಗಳಾಗಿವೆ.
- ಕೇನ್ ನದಿ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ಯಮುನಾ ನದಿಯನ್ನು ಮತ್ತು ಹಮೀರ್‌ಪುರ ಜಿಲ್ಲೆಯಲ್ಲಿ ಬೆಟ್ವಾ ನದಿಯನ್ನು ಸೇರುತ್ತದೆ.
- ಬೆಟ್ವಾ ನದಿಗೆ ರಾಜ್‌ಘಾಟ್, ಪರಿಚಾ ಮತ್ತು ಮಾತತಿಲಾ ಎಂಬ ಅಣೆಕಟ್ಟುಗಳನ್ನು ಕಟ್ಟಲಾಗಿದೆ.
- ಕೇನ್ ನದಿ ಪನ್ನಾ ಹುಲಿ ಮೀಸಲು ಪ್ರದೇಶದ ಮೂಲಕ ಹಾದುಹೋಗುತ್ತದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ನ್ಯಾನೊ ಸ್ನಿಫರ್ ( ಮೈಕ್ರೋಸೆನ್ಸರ್ ಆಧಾರಿತ ಸ್ಫೋಟಕದ ಜಾಡು ಪತ್ತೆಮಾಡುವ ಸಾಧನ) :
(NanoSniffer)
- ಇದು ಮೈಕ್ರೋಸೆನ್ಸರ್ ಆಧಾರಿತ ಸ್ಫೋಟಕದ ಜಾಡು ಪತ್ತೆಮಾಡುವ ಸಾಧನ (Microsensor based explosive trace detector- ETD) ಆಗಿದೆ.
- ಐಐಟಿ ಬಾಂಬೆ ಇನ್ಕ್ಯುಬೇಟೆಡ್ ಸ್ಟಾರ್ಟ್ಅಪ್ ನ್ಯಾನೋಸ್ನಿಫ್ ಟೆಕ್ನಾಲಜೀಸ್ (IIT Bombay Incubated Startup Nanosniff Technologies) ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಮೈಕ್ರೋಸೆನ್ಸರ್ ಆಧಾರಿತ ಸ್ಫೋಟಕದ ಜಾಡು ಪತ್ತೆಮಾಡುವ ಸಾಧನ (ETD) ವಾಗಿದೆ.
- ‘ನ್ಯಾನೊಸ್ನಿಫರ್’ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯ ವಿಷಯದಲ್ಲಿ 100% ‘ಮೇಡ್ ಇನ್ ಇಂಡಿಯಾ ಉತ್ಪನ್ನ’ ಆಗಿದೆ. ‘ನ್ಯಾನೊಸ್ನಿಫರ್’ ನ ಪ್ರಮುಖ ತಂತ್ರಜ್ಞಾನವು ಯುಎಸ್ ಮತ್ತು ಯುರೋಪಿನಲ್ಲಿ ಪೇಟೆಂಟ್ ಪಡೆದಿದೆ.
- ಈ ಸಾಧನವು 10 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಸ್ಫೋಟಕಗಳನ್ನು ಪತ್ತೆ ಮಾಡುತ್ತದೆ ಮತ್ತು ಇದು ಸ್ಫೋಟಕಗಳನ್ನು ವಿವಿಧ ವರ್ಗಗಳಾಗಿ ಗುರುತಿಸುತ್ತದೆ ಮತ್ತು ವರ್ಗೀಕರಿಸುತ್ತದೆ.