Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 2ನೇ ಏಪ್ರಿಲ್ 2021

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಹರಿಯಾಣವು ತನ್ನ ವಿಧಾನಸಭೆಯಲ್ಲಿ ವ್ಯವಹಾರ ನಡಾವಳಿಗಳ ನಿಯಮಗಳನ್ನು ಏಕೆ ತಿದ್ದುಪಡಿ ಮಾಡಿದೆ?

2. ಪೊಲೀಸ್ ಸುಧಾರಣೆಗಳ ಕುರಿತು 2006 ರ ಸುಪ್ರೀಂ ಕೋರ್ಟ್ ತೀರ್ಪು.

3. ಬಿಮ್ಸ್ ಟೆಕ್. (BIMSTEC).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬೈಕಲ್-GVD (ಗಿಗಾಟನ್ ವಾಲ್ಯೂಮ್ ಡಿಟೆಕ್ಟರ್).

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕ್ಯುಲೆಕ್ಸ್ ಅಥವಾ ಸಾಮಾನ್ಯ ಮನೆ ಸೊಳ್ಳೆಗಳು ಯಾವುವು?

2. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಕಡಿತವಿಲ್ಲ.

3. ಶಾಂತಿರ್ ಒಗ್ರೋಶೆನಾ ಸಮರಾಭ್ಯಾಸ 2021

4. ಮುಂಬೈನಲ್ಲಿ ಮೂರನೇ ಜಂಟಿ ಲಾಜಿಸ್ಟಿಕ್ಸ್ ನೋಡ್ (ಜೆಎಲ್ಎನ್).

5. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಹರಿಯಾಣವು ತನ್ನ ವಿಧಾನಸಭೆಯಲ್ಲಿ ವ್ಯವಹಾರ ನಡಾವಳಿಗಳ ನಿಯಮಗಳನ್ನು ಏಕೆ ತಿದ್ದುಪಡಿ ಮಾಡಿದೆ?


(Why Haryana amended rules for conduct of business in Assembly?)

 ಸಂದರ್ಭ:

ಇತ್ತೀಚೆಗೆ, ಹರಿಯಾಣ ಸರ್ಕಾರವು ರಾಜ್ಯದ ‘ವಿಧಾನಸಭೆಯ ವ್ಯವಹಾರ ನಿಯಮಗಳ ಕಾರ್ಯವಿಧಾನ ಮತ್ತು ನಡವಳಿಕೆ’ (Rules of Procedure and Conduct of Business in the Legislative Assembly) ಅಡಿಯಲ್ಲಿ ಹಲವಾರು ನಿಬಂಧನೆಗಳನ್ನು ತಿದ್ದುಪಡಿ ಮಾಡಿದೆ.

 • ಅಲ್ಲದೆ, ಇವುಗಳಿಗೆ ಅನೇಕ ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ.

 ಪರಿಷ್ಕೃತ ನಿಬಂಧನೆಗಳ ಅಡಿಯಲ್ಲಿನ ಹೊಸ ನಿಯಮಗಳು ಮತ್ತು ಅವುಗಳ ಅವಶ್ಯಕತೆಗಳು:

 • ಸದನವು ಪ್ರತಿಬಾರಿ ಸಮಾವೇಶಗೊಂಡಾಗ (during every sitting of the house), ಕನಿಷ್ಟ ಇಬ್ಬರು ಮಂತ್ರಿಗಳು ಕಡ್ಡಾಯವಾಗಿ ಉಪಸ್ಥಿತರಿರಬೇಕು, ಈ ಮೊದಲು, ಕೆಲವು ಗಮನಸೆಳೆಯುವ ಸೂಚನೆಯ ಅಥವಾ ನಿರ್ಣಯದ ಸಮಯದಲ್ಲಿ (Calling Attention Motions) ಅಥವಾ ಸದನದ ಇತರ ವ್ಯವಹಾರಗಳ ಕುರಿತು ಚರ್ಚೆಯ ಸಮಯದಲ್ಲಿ,ಅದನ್ನು ಕಾಲಕಾಲಕ್ಕೆ ಅನುಸರಿಸಲಾಗಿಲ್ಲ.
 • ವಿಧಾನಸಭೆಯ ಸದಸ್ಯರು ‘ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಸದನದಲ್ಲಿ ದಾಖಲೆಗಳನ್ನು ಹರಿದು ಹಾಕುವಂತಿಲ್ಲ’. ಏಕೆಂದರೆ ಈ ಹಿಂದೆ ಸದನದ ಸದಸ್ಯರು, ಪ್ರತಿಭಟನೆಯ ಸಂಕೇತವಾಗಿ ಸದನದ ಬಾವಿಗಿಳಿದು ದಾಖಲೆಗಳ ಪ್ರತಿಗಳನ್ನು ಹರಿದು ಹಾಕಿದ ಉದಾಹರಣೆಗಳಿವೆ.
 • ಯಾವುದೇ ಪೂರಕ ಪ್ರಶ್ನೆಯು ವಿಧಾನಸಭೆಯ ಸ್ಪೀಕರ್ ಅವರ ದೃಷ್ಟಿಯಲ್ಲಿ ಅಸಮಂಜಸ ಎಂದು ಕಂಡುಬಂದರೆ ಅದನ್ನು ನಿಯಮಬಾಹಿರ ‘ಎಂದು ಘೋಷಿಸಲಾಗುವುದು, ಅವುಗಳು ಇಂತಿವೆ…
 • ಯಾವುದೇ ಪ್ರಶ್ನೆಯು ಮುಖ್ಯ ಪ್ರಶ್ನೆ ಅಥವಾ ಅದರ ಉತ್ತರಕ್ಕೆ ಸಂಬಂಧಿಸಿಲ್ಲವಾದರೆ;
 • ಒಂದು ಪ್ರಶ್ನೆಯು ಮಾಹಿತಿಯನ್ನು ಹುಡುಕುವ ಬದಲು ಮಾಹಿತಿಯನ್ನು ಒದಗಿಸುತ್ತಿದ್ದರೆ;
 • ಅಭಿಪ್ರಾಯವನ್ನು ದೃಢೀಕರಿಸಲು ಅಥವಾ ನಿರಾಕರಿಸಲು ಬಯಸುವ ಪ್ರಶ್ನೆಯಾಗಿದ್ದರೆ; ಮತ್ತು

(iv) ಯಾವುದೇ ಪ್ರಶ್ನೆಯು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಮವನ್ನು ಉಲ್ಲಂಘಿಸುತ್ತಿದೆ, ಎಂದು ಕಂಡುಬಂದರೆ.

 • ವಿಧಾನಸಭೆಯ ಸ್ಪೀಕರ್ ಯಾವುದೇ ಪ್ರಶ್ನೆಗೆ ಎರಡಕ್ಕಿಂತ ಹೆಚ್ಚಿನ ಪೂರಕ ಪ್ರಶ್ನೆಗಳನ್ನು ಕೇಳಲು ಅನುಮತಿಸುವುದಿಲ್ಲ.

ವಿರೋಧ ಪಕ್ಷದ ನಾಯಕನ ಹೊಸ ವ್ಯಾಖ್ಯಾನ:

 • ಪ್ರತಿಪಕ್ಷದ ನಾಯಕ ಎಂದರೆ ಸರ್ಕಾರವನ್ನು ರಚಿಸಿದ ಪಕ್ಷ ಅಥವಾ ಪಕ್ಷಗಳ ಒಕ್ಕೂಟವನ್ನು ಹೊರತುಪಡಿಸಿ ಇರುವ ಅತಿ ದೊಡ್ಡ ಶಾಸಕಾಂಗ ಪಕ್ಷದ ನಾಯಕ ಹಾಗೂ ಕನಿಷ್ಟಪಕ್ಷ ಆ ಸದನದ ಕೋರಂ ಗೆ ಸಮನಾದ ಸಂಖ್ಯಾಬಲವನ್ನು ಹೊಂದಿದ ಪಕ್ಷದ ನಾಯಕ ಹಾಗೂ ವಿಧಾನಸಭೆಯ ಸ್ಪೀಕರ್ ರವರು ಗುರುತಿಸಿದಂತೆ, ಪ್ರತಿಪಕ್ಷ ನಾಯಕ.
 • ಸರ್ಕಾರ ರಚಿಸಿದ ಪಕ್ಷ ಅಥವಾ ಪಕ್ಷಗಳನ್ನು ಹೊರತುಪಡಿಸಿ ಉಳಿದಂತೆ ಒಂದಕ್ಕಿಂತ ಹೆಚ್ಚು ಪಕ್ಷಗಳು ವಿಧಾನಸಭೆಯಲ್ಲಿ ಸಮಾನವಾದ ಸಂಖ್ಯಾಬಲವನ್ನು ಹೊಂದಿದ್ದ ಸಂದರ್ಭದಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಮತ ಗಳಿಕೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ಪಕ್ಷವನ್ನು ವಿರೋಧಪಕ್ಷವೆಂದು ಮತ್ತು ಅದರ ಶಾಸಕಾಂಗ ನಾಯಕನನ್ನು ವಿರೋಧಪಕ್ಷದ ನಾಯಕನೆಂದು ಗುರುತಿಸಲಾಗುವುದು.
 • ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷಗಳು ಒಂದೇ ರೀತಿಯ ಮತ ಗಳಿಕೆಯನ್ನು ಸಂಪಾದಿಸಿದ ಸಂದರ್ಭದಲ್ಲಿ, ‘ವಿರೋಧ ಪಕ್ಷದ ನಾಯಕನ’ ಹುದ್ದೆಯನ್ನು ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ನಿಯೋಜಿಸಲಾಗುವುದು ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಯಾರು ಯಾವಾಗ ಕುಳಿತುಕೊಳ್ಳಬೇಕು ಎಂಬುದನ್ನು ‘ಡ್ರಾ’ ಮೂಲಕ ನಿರ್ಧರಿಸಲಾಗುತ್ತದೆ.

 

ವಿಷಯಗಳು: ಪ್ರಜಾಪ್ರಭುತ್ವದಲ್ಲಿ ನಾಗರಿಕ ಸೇವೆಗಳ ಪಾತ್ರ.

ಪೊಲೀಸ್ ಸುಧಾರಣೆಗಳ ಕುರಿತು 2006 ರ ಸುಪ್ರೀಂ ಕೋರ್ಟ್ ತೀರ್ಪು:


(The 2006 Supreme Court ruling on police reforms)

 ಸಂದರ್ಭ:

ಪ್ರಕಾಶ್ ಸಿಂಗ್ VS ಯೂನಿಯನ್ ಆಫ್ ಇಂಡಿಯಾ (2006) ಪ್ರಕರಣದಲ್ಲಿ, ಪೊಲೀಸ್ ಸುಧಾರಣೆಗಳಿಗೆ ಸಂಬಂಧಿಸಿದ ಐತಿಹಾಸಿಕ ತೀರ್ಪನ್ನು ಕಾಲಕಾಲಕ್ಕೆ, ಅಂತಹ ಪರಿಸ್ಥಿತಿ ಬಂದಾಗಲೆಲ್ಲಾ ಸಮಸ್ಯೆಯನ್ನು ಪರಿಹರಿಸುವ ಮಂತ್ರವಾಗಿ ಮಾತ್ರ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಏನಿದು ಪ್ರಕರಣ?

ಮಹಾರಾಷ್ಟ್ರದ ಹಲವಾರು ಐಪಿಎಸ್ ಅಧಿಕಾರಿಗಳ ಲಾಬಿ ಆರೋಪಗಳು ಮತ್ತು ಸರ್ಕಾರದ ಸಮ್ಮತಿಯೊಂದಿಗೆ ಸ್ಥಳ ನಿಯುಕ್ತಿಯ ನೇಮಕಾತಿಗಳನ್ನು ನಿರ್ಧರಿಸುವ ಅಧಿಕಾರದ ದಲ್ಲಾಳಿಗಳಿಗೆ ಸಂಬಂಧಿಸಿದ ಇತ್ತೀಚಿನ ಪ್ರಕರಣಗಳು ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ ಎಂದು ಬಹಿರಂಗಪಡಿಸುತ್ತವೆ.

ಪೊಲೀಸ್ ಸುಧಾರಣೆಗಳ ಕುರಿತು ಸುಪ್ರೀಂ ಕೋರ್ಟಿನ ಪ್ರಕಾಶ್ ಸಿಂಗ್  ತೀರ್ಪು’ ಎಂದರೇನು?

 •  ಉತ್ತರ ಪ್ರದೇಶ ಪೊಲೀಸ್ ಮತ್ತು ಅಸ್ಸಾಂ ಪೊಲೀಸ್ ನ ಪೊಲೀಸ್ ಮಹಾ ನಿರ್ದೇಶಕರಾಗಿ (DGP) ಸೇವೆ ಸಲ್ಲಿಸಿದ ನಂತರ, ಇತರ ಹಲವು ಹುದ್ದೆಗಳನ್ನು ನಿರ್ವಹಿಸಿದ, ಪ್ರಕಾಶ್ ಸಿಂಗ್ ಅವರು ನಿವೃತ್ತಿಯ ನಂತರ 1996 ರಲ್ಲಿ ಪೊಲೀಸ್ ಸುಧಾರಣೆಗಳನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದರು.
 • ಸೆಪ್ಟೆಂಬರ್ 2006 ರಲ್ಲಿ, ಸುಪ್ರೀಂ ಕೋರ್ಟ್ ಈ ಅರ್ಜಿಯ ಬಗ್ಗೆ ಒಂದು ಮಹತ್ವದ ತೀರ್ಪು ನೀಡಿತು, ಪೊಲೀಸ್ ಸುಧಾರಣೆಗಳನ್ನು ಜಾರಿಗೆ ತರಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.

 ವರಿಷ್ಠ ನ್ಯಾಯಾಲಯವು ಸೂಚಿಸಿದ ಕ್ರಮಗಳು ಯಾವುವು?

 • ಕೆಲವು ತಿಂಗಳುಗಳಲ್ಲಿ ನಿವೃತ್ತರಾಗುವ ಅಧಿಕಾರಿಗಳನ್ನು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ನೇಮಕ ಮಾಡುವಂತಹ ಪರಿಸ್ಥಿತಿಯನ್ನು ತಪ್ಪಿಸಲು DGP ಯ ಅಧಿಕಾರಾವಧಿಯ ನಿರ್ದಿಷ್ಟ ಕಾಲಾವಧಿ ಮತ್ತು ಆಯ್ಕೆ ಪ್ರಕ್ರಿಯೆಯನ್ನು ನಿಗದಿಪಡಿಸಬೇಕು.
 • ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಖಚಿತಪಡಿಸಿಕೊಳ್ಳಲು, ‘ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್’ಗೆ ಕನಿಷ್ಠ ಅವಧಿಯ ಅಧಿಕಾರವಧಿಯನ್ನು ನಿಗದಿಪಡಿಸಬೇಕು, ಇದರಿಂದಾಗಿ ಅವರನ್ನು ಸೇವಾವಧಿಯ ಮಧ್ಯದಲ್ಲಿಯೆ ವರ್ಗಾಯಿಸಲು ರಾಜಕಾರಣಿಗಳಿಗೆ ಸಾಧ್ಯವಾಗುವುದಿಲ್ಲ.
 • ಅಧಿಕಾರಿಗಳ ಸ್ಥಳನಿಯುಕ್ತಿ ಮತ್ತು ವರ್ಗಾವಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಪೊಲೀಸ್ ಸ್ಥಾಪನಾ ಮಂಡಳಿ’ (Police Establishment Boards- PEB) ತೆಗೆದುಕೊಳ್ಳಬೇಕು, ರಾಜಕೀಯ ನಾಯಕರ ಕೈಯಿಂದ ಸ್ಥಳನಿಯುಕ್ತಿ ಮತ್ತು ವರ್ಗಾವಣೆ ಅಧಿಕಾರವನ್ನು ತೆಗೆದುಹಾಕಬೇಕು.
 • ಪೊಲೀಸ್ ಕ್ರಮದಿಂದ ಬಳಲುತ್ತಿರುವ ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸಲು ರಾಜ್ಯ ಪೊಲೀಸ್ ದೂರು ಪ್ರಾಧಿಕಾರ’ ವನ್ನು(State Police Complaints Authority- SPCA) ಸ್ಥಾಪಿಸಬೇಕು.
 • ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಿ ಉತ್ತಮವಾದ ಪೊಲೀಸ್ ಸೇವೆಯನ್ನು ಒದಗಿಸಲು , ತನಿಖೆ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಕೆಲಸಗಳನ್ನು ಬೇರ್ಪಡಿಸಬೇಕು.
 • ನಾಗರಿಕ ಸಮಾಜದ ಸದಸ್ಯರನ್ನು ಒಳಗೊಂಡ ರಾಜ್ಯ ಭದ್ರತಾ ಆಯೋಗಗಳನ್ನು (State Security Commissions- SSC) ರಚಿಸಬೇಕು.
 • ರಾಷ್ಟ್ರೀಯ ಭದ್ರತಾ ಆಯೋಗ’ವನ್ನು(National Security Commission) ಸ್ಥಾಪಿಸಬೇಕು.

ನ್ಯಾಯಾಲಯದ ಈ ನಿರ್ದೇಶನ ಗಳಿಗೆ ರಾಜ್ಯಗಳು ಹೇಗೆ ಪ್ರತಿಕ್ರಿಯಿಸಿದವು?

 • 2006 ರ ತೀರ್ಪಿನ ನಂತರ, ಯಾವುದೇ ಒಂದು ರಾಜ್ಯವು ಸಹ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸಿಲ್ಲ.
 • ಈ ಮಧ್ಯೆ 18 ರಾಜ್ಯಗಳು ತಮ್ಮ ಪೊಲೀಸ್ ಕಾಯ್ದೆಗಳನ್ನು ಅಂಗೀಕರಿಸಿವೆ ಅಥವಾ ತಿದ್ದುಪಡಿ ಮಾಡಿಲ್ಲ, ಆದರೆ ಈ ಯಾವುದೇ ಪೊಲೀಸ್ ಕಾಯ್ದೆಗಳು ಶಾಸಕಾಂಗ ಮಾದರಿಗೆ ಸಂಪೂರ್ಣವಾಗಿ ಅನುಗುಣವಾಗಿಲ್ಲ.

 

ವಿಷಯಗಳು: ಭಾರತವನ್ನು ಒಳಗೊಂಡ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಒಪ್ಪಂದಗಳು ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ಬಿಮ್ಸ್ ಟೆಕ್:


(BIMSTEC)

 ಸಂದರ್ಭ:

ಇತ್ತೀಚೆಗೆ, ಶ್ರೀಲಂಕಾದ ಅಧ್ಯಕ್ಷತೆಯಲ್ಲಿ 17 ನೇ ಬಿಮ್ಸ್ ಟೆಕ್  (ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉಪಕ್ರಮ -BIMSTEC ) ಮಂತ್ರಿಗಳ ಸಭೆ ಜರುಗಿತು.

 • ಈ ಸಭೆಯಲ್ಲಿ ಮ್ಯಾನ್ಮಾರ್ ಸೇರಿದಂತೆ ಎಲ್ಲಾ ಏಳು ಸದಸ್ಯ ರಾಷ್ಟ್ರಗಳು ಭಾಗವಹಿಸಿದ್ದವು. ಪ್ರಸ್ತುತ ಮ್ಯಾನ್ಮಾರ್ ಸೇನಾ ವಿರೋಧಿ ಪ್ರತಿಭಟನಾಕಾರರ ವಿರುದ್ಧ ದೊಡ್ಡಮಟ್ಟದ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಏನಿದು ಬಿಮ್ಸ್ ಟೆಕ್?

ಬಿಮ್ಸ್ ಟೆಕ್ ಎಂದರೆ, ‘ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉಪಕ್ರಮ’ (Bay of Bengal Initiative for Multi-Sectoral Technical and Economic Cooperation- BIMSTEC).

 • ಬಿಮ್ಸ್ ಟೆಕ್ ದಕ್ಷಿಣ ಏಷ್ಯಾದ 5 ಮತ್ತು ಆಗ್ನೇಯ ಏಷ್ಯಾದ 2 ಒಟ್ಟು 7 ದೇಶಗಳ ಅಂತರರಾಷ್ಟ್ರೀಯ ಸಂಘಟನೆಯಾಗಿದೆ. 1997 ರಲ್ಲಿ, ಬಂಗಾಳಕೊಲ್ಲಿಯನ್ನು ಸಂಯೋಜಿಸುವ ಪ್ರಯತ್ನದ ಭಾಗವಾಗಿ ಈ ಗುಂಪನ್ನು ರಚಿಸಲಾಯಿತು.
 • ಮೂಲತಃ ಈ ಗುಂಪಿನಲ್ಲಿ ಬಾಂಗ್ಲಾದೇಶ, ಭಾರತ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸೇರಿದ್ದವು, ನಂತರ ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್ ಸಹ ಅದರ ಸದಸ್ಯರಾದವು.
 • ಬಿಮ್ಸ್ ಟೆಕ್, ಈಗ ದಕ್ಷಿಣ ಏಷ್ಯಾದ ಐದು ದೇಶಗಳನ್ನು ಮತ್ತು ಆಸಿಯಾನ್ ನ ಎರಡು ದೇಶಗಳನ್ನು ಒಳಗೊಂಡಿದೆಯಲ್ಲದೆ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ನಡುವಿನ ಸೇತುವೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ.
 • ಈ ಗುಂಪು ಮಾಲ್ಡೀವ್ಸ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳನ್ನು ಹೊರತುಪಡಿಸಿ ದಕ್ಷಿಣ ಏಷ್ಯಾದ ಎಲ್ಲಾ ಪ್ರಮುಖ ದೇಶಗಳನ್ನು ಒಳಗೊಂಡಿದೆ.

ವಲಯವು ಏಕೆ ಅಷ್ಟೊಂದು ಪ್ರಮುಖವಾಗಿದೆ?

 • ಬಿಮ್ಸ್ ಟೆಕ್ ನ ಏಳು ದೇಶಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶ್ವದ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟು (22%) ಜನರು ವಾಸಿಸುತ್ತಿದ್ದಾರೆ ಮತ್ತು ಈ 7 ದೇಶಗಳ ಒಟ್ಟು ಜಿಡಿಪಿಯು $ 7 ಟ್ರಿಲಿಯನ್ ಆಗುತ್ತದೆ.
 • ಬಂಗಾಳಕೊಲ್ಲಿಯು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ, ಅದನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಶೋಧಿಸಲಾಗಿಲ್ಲ. ಪ್ರಪಂಚದಲ್ಲಿ ವ್ಯಾಪಾರವಾಗುವ ಒಟ್ಟು ವಸ್ತುಗಳ ನಾಲ್ಕನೇ ಒಂದು ಭಾಗವು ಪ್ರತಿವರ್ಷ ಬಂಗಾಳಕೊಲ್ಲಿಯ ಮೂಲಕ ಹಾದುಹೋಗುತ್ತದೆ.

ಭಾರತಕ್ಕೆ ಬಿಮ್‌ಸ್ಟೆಕ್‌ನ ಪ್ರಾಮುಖ್ಯತೆ:  

ಈ ಪ್ರದೇಶದ ಅತಿದೊಡ್ಡ ಆರ್ಥಿಕತೆಯಾಗಿ, ಈ ವಲಯವು ಭಾರತಕ್ಕೆ ಬಹಳ ಮುಖ್ಯವಾಗಿದೆ.

 • ಬಿಮ್ಸ್ಟೆಕ್, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಜನರನ್ನು ಮಾತ್ರ ಸಂಪರ್ಕಿಸುವುದಲ್ಲದೆ, ಗ್ರೇಟ್ ಹಿಮಾಲಯ ಮತ್ತು ಬಂಗಾಳಕೊಲ್ಲಿಯ ಪರಿಸರ ವಲಯವನ್ನು ಪರಸ್ಪರ ಸಂಪರ್ಕಿಸುತ್ತದೆ.
 • ಭಾರತಕ್ಕೆ, ಇದು ‘ನೆರೆಹೊರೆ ಮೊದಲು’ ಮತ್ತು ‘ಪೂರ್ವದತ್ತ ನಡೆ’ (act east) ಯ ಪ್ರಮುಖ ವಿದೇಶಾಂಗ ನೀತಿಯ ಆದ್ಯತೆಗಳನ್ನು ಅನುಷ್ಠಾನಗೊಳಿಸುವ ಸ್ವಾಭಾವಿಕ ವೇದಿಕೆಯಾಗಿದೆ.
 • ನವದೆಹಲಿಗೆ, ಬಿಮ್ಸ್ಟೆಕ್ ನೊಂದಿಗಿನ ಸಂಬಂಧಕ್ಕೆ ಒಂದು ಪ್ರಮುಖ ಕಾರಣವೆಂದರೆ ಈ ಪ್ರದೇಶದ ವಿಶಾಲ ಸಾಮರ್ಥ್ಯ, ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಪ್ರಮುಖ ಸಂಪರ್ಕ ಮಾರ್ಗಗಳನ್ನು ತೆರೆಯುತ್ತದೆ.
 • ಬಂಗಾಳಕೊಲ್ಲಿಯ ಪಕ್ಕದಲ್ಲಿರುವ ನಾಲ್ಕು ಕರಾವಳಿ ರಾಜ್ಯಗಳ (ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ) ಸುಮಾರು 300 ಮಿಲಿಯನ್ ಜನರು, ಅಥವಾ ಭಾರತದ ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟು ಜನರು ವಾಸಿಸುತ್ತಿದ್ದಾರೆ.
 • ಕಾರ್ಯತಂತ್ರದ ದೃಷ್ಟಿಕೋನದಿಂದ, ಮಲಕ್ಕಾ ಜಲಸಂಧಿಗೆ ಒಂದು ಕೊಳವೆಯಂತೆ ಇರುವ ಬಂಗಾಳಕೊಲ್ಲಿಯು ಹಿಂದೂ ಮಹಾಸಾಗರಕ್ಕೆ ತನ್ನ ಪ್ರವೇಶವನ್ನು ಕಾಪಾಡಿಕೊಳ್ಳಲು ಆಕ್ರಮಣಕಾರಿ ಮನೋಭಾವದ ಚೀನಾಕ್ಕೆ ಒಂದು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ.
 • ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿ ನೌಕೆಗಳು ಮತ್ತು ಹಡಗುಗಳ ಚಲನೆಯನ್ನು ಹೆಚ್ಚಿಸುವುದು ಸೇರಿದಂತೆ ಚೀನಾ ಬಂಗಾಳಕೊಲ್ಲಿಯಲ್ಲಿ ಪ್ರಾಬಲ್ಯ ಸಾಧಿಸುತ್ತಿರುವುದರಿಂದ, ಬಿಮ್‌ಸ್ಟೆಕ್ ದೇಶಗಳೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸುವುದು ಭಾರತದ ಹಿತಾಸಕ್ತಿ ದೃಷ್ಟಿಯಿಂದ ಪ್ರಮುಖವಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು : ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು;ತಂತ್ರಜ್ಞಾನದ ದೇಸೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

 ಬೈಕಲ್-GVD (ಗಿಗಾಟನ್ ವಾಲ್ಯೂಮ್ ಡಿಟೆಕ್ಟರ್).


(Baikal-GVD (Gigaton Volume Detector)

ಸಂದರ್ಭ:

ಇತ್ತೀಚೆಗೆ, ಸೈಬೀರಿಯಾದ ವಿಶ್ವದ ಆಳವಾದ ಸರೋವರವಾದ ಬೈಕಾಲ್ ಸರೋವರದ ನೀರಿನಲ್ಲಿ ರಷ್ಯಾದ ವಿಜ್ಞಾನಿಗಳು ‘ಬೈಕಲ್-GVD (Gigaton Volume Detector) ಎಂಬ ಹೆಸರಿನ ವಿಶ್ವದ ಅತಿದೊಡ್ಡ ಮುಳುಗಿರುವ ನ್ಯೂಟ್ರಿನೊ ದೂರದರ್ಶಕವನ್ನು ಸ್ಥಾಪಿಸಿದ್ದಾರೆ.

ಬೈಕಲ್-GVD ಕುರಿತು:

 • ಇದು ವಿಶ್ವದ ಅತಿದೊಡ್ಡ ಮೂರು ನ್ಯೂಟ್ರಿನೊ ಡಿಟೆಕ್ಟರ್‌ಗಳಲ್ಲಿ ಒಂದಾಗಿದೆ. ಇತರ ಎರಡು ನ್ಯೂಟ್ರಿನೊ ಡಿಟೆಕ್ಟರ್‌ಗಳು ದಕ್ಷಿಣ ಧ್ರುವದಲ್ಲಿರುವ ಐಸ್‌ಕ್ಯೂಬ್ (IceCube) ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿನ ಆಂಟಾರೆಸ್(ANTARES).
 • ‘ನ್ಯೂಟ್ರಿನೋಸ್’ (Neutrinos) ಎಂಬ ಅಸ್ಪಷ್ಟ ಮೂಲಭೂತ ಅಣುಗಳ ಬಗ್ಗೆ ವಿವರವಾಗಿ ಅಧ್ಯಯನ ಮಾಡುವುದು ಮತ್ತು ಅವುಗಳ ಸಂಭವನೀಯ ಮೂಲಗಳನ್ನು ಕಂಡುಹಿಡಿಯುವುದು ಇದರ ಉದ್ದೇಶವಾಗಿದೆ.

ನ್ಯೂಟ್ರಿನೊಗಳು ಎಂದರೇನು?

1930 ರಲ್ಲಿ ಸ್ವಿಸ್ ವಿಜ್ಞಾನಿ ವೋಲ್ಫ್ಗ್ಯಾಂಗ್ ಪೌಲಿ (Wolfgang Pauli)  ಅವರು ಪ್ರಸ್ತಾಪಿಸಿದ ನ್ಯೂಟ್ರಿನೊಗಳು, ಫೋಟಾನ್’ ಅಣುಗಳ ನಂತರ ಬ್ರಹ್ಮಾಂಡದಲ್ಲಿ ಹೇರಳವಾಗಿರುವ ಎರಡನೇ ಅಣುಗಳಾಗಿವೆ, ಅದು ಬೆಳಕನ್ನು ರೂಪಿಸುವ ಕಣವಾಗಿದೆ. ವಾಸ್ತವವಾಗಿ, ನ್ಯೂಟ್ರಿನೊಗಳು ಎಷ್ಟು ಹೇರಳವಾಗಿವೆ ಎಂದರೆ, ವಿಶ್ವದಲ್ಲಿ, ಪ್ರತಿ ಸೆಕೆಂಡಿಗೆ ನೂರಾರು ಟ್ರಿಲಿಯನ್ ನ್ಯೂಟ್ರಿನೊಗಳು ನಮ್ಮೆಲ್ಲರ ಮೂಲಕ ಹಾದುಹೋಗುತ್ತವೆ, ಮತ್ತು ನಾವು ಅವುಗಳನ್ನು ಎಂದಿಗೂ ಗಮನಿಸಲು ಸಾಧ್ಯವಾಗುವುದಿಲ್ಲ.

ಇವುಗಳನ್ನು ಅಧ್ಯಯನ ಮಾಡುವ ಅಗತ್ಯತೆ:

ಕೆಲವು ನ್ಯೂಟ್ರಿನ್‌ಗಳು ಬಿಗ್ ಬ್ಯಾಂಗ್ ಸಮಯದಲ್ಲಿ ಹುಟ್ಟಿಕೊಂಡಿವೆ ಮತ್ತು ಸೂರ್ಯನ ಸೂಪರ್ನೋವಾ ಸ್ಫೋಟಗಳು ಅಥವಾ ಪರಮಾಣು ಪ್ರತಿಕ್ರಿಯೆಗಳ ಪರಿಣಾಮವಾಗಿ ಇತರ ನ್ಯೂಟ್ರಿನೊಗಳು ರೂಪುಗೊಳ್ಳುತ್ತಲೇ ಇರುವುದರಿಂದ, ಅವುಗಳನ್ನು ಅಧ್ಯಯನ ಮಾಡುವುದರಿಂದ ವಿಜ್ಞಾನಿಗಳಿಗೆ ಬ್ರಹ್ಮಾಂಡದ ಮೂಲವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕ್ಯುಲೆಕ್ಸ್ ಅಥವಾ ಸಾಮಾನ್ಯ ಮನೆ ಸೊಳ್ಳೆಗಳು ಯಾವುವು?

 •  ಕ್ಯುಲೆಕ್ಸ್ ಸೊಳ್ಳೆಗಳು (Culex mosquitoes) ಕೆಲವು ಗಂಭೀರ ಕಾಯಿಲೆಗಳ ವಾಹಕಗಳಾಗಿವೆ.
 • ಅವುಗಳು 1 ರಿಂದ 5 ಕಿ.ಮೀ ದೂರದ ವರೆಗೆ ಹಾರಬಲ್ಲವು.
 • ಅವುಗಳು ಕಲುಷಿತ ಮತ್ತು ನಿಶ್ಚಲ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ಸುದ್ದಿಯಲ್ಲಿರಲು ಕಾರಣ:

ದೆಹಲಿಯ ಅನೇಕ ನಿವಾಸಿ ಕಲ್ಯಾಣ ಸಂಘಗಳು ತಮ್ಮ ಸುತ್ತಮುತ್ತಲಿನ ಸೊಳ್ಳೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ದೂರಿದ್ದಾರೆ, ಇದರಿಂದಾಗಿ ಪುರಸಭೆ/ನಗರ ಪೌರಾಡಳಿತ ನಿಗಮಗಳು ಉನ್ನತ ಮಟ್ಟದ ಸಭೆಗಳನ್ನು ನಡೆಸಲು ಮತ್ತು ಸೊಳ್ಳೆಗಳ ಬೆಳವಣಿಗೆಯನ್ನು ತಡೆಯಲು ಅಭಿಯಾನಗಳನ್ನು ಕೈಗೊಳ್ಳಲು ಕಾರಣವಾಗಿದೆ.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಕಡಿತವಿಲ್ಲ:

 •  ಈ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯದ ಮೇಲಿನ ಬಡ್ಡಿದರಗಳಲ್ಲಿ ಗಮನಾರ್ಹವಾದ ಕಡಿತ ಮಾಡಿ ಅಧಿಸೂಚನೆಯನ್ನು ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಇದನ್ನು ಸರ್ಕಾರ ಹಿಂತೆಗೆದುಕೊಂಡಿತು ಮತ್ತು ಬಡ್ಡಿದರಗಳಲ್ಲಿನ ತೀವ್ರ ಕಡಿತವನ್ನು ಹಿಂಪಡೆಯಿತು.

ಬಡ್ಡಿದರಗಳನ್ನು ಹೇಗೆ ನಿರ್ಧರಿಸಲಾಗುತ್ತದೆ?

 • ಸೈದ್ಧಾಂತಿಕವಾಗಿ, 2016 ರ ವರ್ಷದಿಂದ, ಬಡ್ಡಿದರಗಳನ್ನು ಹಿರಿಯ ನಾಗರಿಕರ ಯೋಜನೆಗಳ ಮೇಲೆ ಕೆಲವು ವಿಸ್ತರಣೆಗೆ ಅನುಗುಣವಾಗಿ ಸರ್ಕಾರಿ ಭದ್ರತೆಗಳ ಅವಧಿ ಮುಕ್ತಾಯದ ಆಧಾರದ ಮೇಲೆ ಮರುಹೊಂದಿಸಲಾಗುತ್ತದೆ, ಆದಾಗ್ಯೂ, ಪ್ರಾಯೋಗಿಕವಾಗಿ, ಹಲವಾರು ಇತರ ಅಂಶಗಳನ್ನು ಪರಿಗಣಿಸಿ ಬಡ್ಡಿದರಗಳನ್ನು ಬದಲಾಯಿಸಲಾಗುತ್ತದೆ.
 • ಸಣ್ಣ ಉಳಿತಾಯ ಯೋಜನೆಗಳ ಬುಟ್ಟಿಯಲ್ಲಿ ಉಳಿತಾಯ ಠೇವಣಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಸಾರ್ವಜನಿಕ ಭವಿಷ್ಯ ನಿಧಿ (PPF), ಕಿಸಾನ್ ವಿಕಾಸ್ ಪತ್ರ (KVP) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ 12 ಸಣ್ಣ ಉಳಿತಾಯ ಯೋಜನೆಗಳಿವೆ.

ಶಾಂತಿರ್ ಒಗ್ರೋಶೆನಾ ಸಮರಾಭ್ಯಾಸ 2021:

(Exercise SHANTIR OGROSHENA 2021)

 •  ಇದು ಬಾಂಗ್ಲಾದೇಶದಲ್ಲಿ ನಡೆಯುವ ಬಹುರಾಷ್ಟ್ರೀಯ ಮಿಲಿಟರಿ ಸಮರಾಭ್ಯಾಸವಾಗಿದೆ.
 • ಈ ವರ್ಷ ಭಾರತೀಯ ಸೇನೆಯೂ ಈ ಮಿಲಿಟರಿ ಸಮರಾಭ್ಯಾಸದಲ್ಲಿ ಭಾಗವಹಿಸಲಿದೆ.
 • ಬಾಂಗ್ಲಾದೇಶದ ‘ರಾಷ್ಟ್ರ ಪಿತ’ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಬಾಂಗ್ಲಾದೇಶದಲ್ಲಿ ಈ ಸಮರಾಭ್ಯಾಸ ನಡೆಯಲಿದೆ ಮತ್ತು ಇದೇ ವೇಳೆ ಬಾಂಗ್ಲಾದೇಶವು ಸ್ವಾತಂತ್ರ್ಯದ 50 ವರ್ಷಗಳ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದೆ.
 • ಈ ಸಮರಾಭ್ಯಾಸದ ಸಮಯದಲ್ಲಿ ಯುಎಸ್, ಯುಕೆ, ಟರ್ಕಿ, ಸೌದಿ ಅರೇಬಿಯಾ, ಕುವೈತ್ ಮತ್ತು ಸಿಂಗಾಪುರದ ಮಿಲಿಟರಿ ವೀಕ್ಷಕರು ಸಹ ಹಾಜರಾಗಲಿದ್ದಾರೆ.

ಮುಂಬೈನಲ್ಲಿ ಮೂರನೇ ಜಂಟಿ ಲಾಜಿಸ್ಟಿಕ್ಸ್ ನೋಡ್ (ಜೆಎಲ್ಎನ್):

(Third joint logistics node (JLN) in Mumbai)

 • ಕಂಬೈನ್ಡ್ ಲಾಜಿಸ್ಟಿಕ್ಸ್ ನೋಡ್ (JLN), ಸಶಸ್ತ್ರ ಪಡೆಗಳು ತಮ್ಮ ಸಣ್ಣ ಶಸ್ತ್ರಾಸ್ತ್ರ ಮದ್ದುಗುಂಡುಗಳು, ಪಡಿತರ, ಇಂಧನಗಳು, ಸಾಮಾನ್ಯ ಮಳಿಗೆಗಳು, ನಾಗರಿಕ ವಲಯದಿಂದ ಬಾಡಿಗೆಗೆ ಪಡೆದ ಸಾರಿಗೆ ವಾಹನಗಳು, ವಾಯುಯಾನ, ಉಡುಪುಗಳು ಮತ್ತು ಬಿಡಿಭಾಗಗಳು ಮತ್ತು ಎಂಜಿನಿಯರಿಂಗ್ ಬೆಂಬಲಕ್ಕಾಗಿ ತಮ್ಮ ಕಾರ್ಯಾಚರಣೆಯ ಪ್ರಯತ್ನಗಳನ್ನು ಸಂಘಟಿಸುವ ಪ್ರಯತ್ನದಲ್ಲಿ ಸಮಗ್ರ ಲಾಜಿಸ್ಟಿಕ್ ಕವರ್ ಒದಗಿಸುತ್ತದೆ.
 • ಮುಂಬೈ, ಗುವಾಹಟಿ ಮತ್ತು ಪೋರ್ಟ್ ಬ್ಲೇರ್‌ನಲ್ಲಿ ಜಂಟಿ ಲಾಜಿಸ್ಟಿಕ್ ನೋಡ್ಸ್ (JLN) ಸ್ಥಾಪಿಸುವ ಸರ್ಕಾರದ ಅನುಮೋದನೆ ಪತ್ರಕ್ಕೆ ಅಕ್ಟೋಬರ್ 12, 2020 ರಂದು ಸಹಿ ಹಾಕಲಾಯಿತು. ಗುವಾಹಟಿ ಮತ್ತು ಟ್ರೈ- ಸರ್ವೀಸಸ್, ಅಂಡಮಾನ್-ನಿಕೋಬಾರ್ ಕಮಾಂಡ್, ಪೋರ್ಟ್ ಬ್ಲೇರ್‌ನ ಸಂಯೋಜಿತ ಲಾಜಿಸ್ಟಿಕ್ ನೋಡ್‌ಗಳು ಈ ವರ್ಷದ ಜನವರಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು.

 ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ:

(Dadasaheb Phalke Award)

 2019 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಯ್ಕೆ ಮಾಡಲಾಗಿದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕುರಿತು:

 • ಈ ಪ್ರಶಸ್ತಿಯು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾಗಿದೆ.
 • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಲನಚಿತ್ರೋತ್ಸವಗಳ ನಿರ್ದೇಶನಾಲಯದ ವತಿಯಿಂದ (ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸಿದ ಸಂಸ್ಥೆ) ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
 • ಪ್ರಶಸ್ತಿಯು ಸ್ವರ್ಣ ಕಮಲ್, 10 ಲಕ್ಷ ರೂ. ನಗದು ಮತ್ತು ಶಾಲು ಒಳಗೊಂಡಿದೆ.
 • ‘ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ’ ನೀಡಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
 • ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1969 ರಲ್ಲಿ ನೀಡಲಾಯಿತು.ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಪ್ರಥಮ ಮಹಿಳೆ ’ ನಟಿ ದೇವಿಕಾ ರಾಣಿ ಯವರಿಗೆ ನೀಡಲಾಯಿತು.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos