ಪರಿವಿಡಿ :
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಆರನೇ ಅನುಸೂಚಿಯಲ್ಲಿನ ಪ್ರದೇಶಗಳು.
2. ಪೌರತ್ವ (ತಿದ್ದುಪಡಿ) ಕಾಯ್ದೆ, 2019 (CAA).
3. GST ಪರಿಹಾರ.
4. ಅಪರೂಪದ ಕಾಯಿಲೆಗಳ ಕುರಿತ ಆರೋಗ್ಯ ನೀತಿ.
5. ಸಿಂಧೂ ಜಲ ಆಯೋಗದ ಸಭೆ.
6. ಅಮೇರಿಕಾದ ಶಾಂತಿ ಯೋಜನೆ.
7. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಹುತಾತ್ಮರ ದಿವಸ.
ಸಾಮಾನ್ಯ ಅಧ್ಯಯನ ಪತ್ರಿಕೆ – 2
ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಆರನೇ ಅನುಸೂಚಿಯಲ್ಲಿನ ಪ್ರದೇಶಗಳು:
(Sixth Schedule areas)
ಸಂದರ್ಭ:
ಇತ್ತೀಚೆಗೆ ಕೇಂದ್ರ ಗೃಹ ಮಂತ್ರಾಲಯವು (MHA), ‘ಪ್ರಸ್ತುತ ಆರನೇ ಅನುಸೂಚಿಯಲ್ಲಿ ಸೇರ್ಪಡೆಗೊಂಡಿರುವ ಅಸ್ಸಾಂ ರಾಜ್ಯದ ಪ್ರದೇಶಗಳಲ್ಲಿ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೆ ತರುವ ಯಾವುದೇ ಪ್ರಸ್ತಾಪವಿಲ್ಲ’,
ಎಂದು ಲೋಕಸಭೆಗೆ ಮಾಹಿತಿ ನೀಡಿದೆ.
ಈ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು – ಸಂವಿಧಾನ (125 ನೇ ತಿದ್ದುಪಡಿ) ಮಸೂದೆ, 2019:
- 2019 ಫೆಬ್ರವರಿ 6 ರಂದು ರಾಜ್ಯಸಭೆಯಲ್ಲಿ ಸಂವಿಧಾನ (125 ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ಮಸೂದೆಯು ಚುನಾಯಿತ ಗ್ರಾಮ ಪುರಸಭೆಗಳ (ಗ್ರಾಮ ಪಂಚಾಯಿತಿ) ರಚನೆಗೆ ಅವಕಾಶ ಕಲ್ಪಿಸುತ್ತದೆ.
- ಇನ್ನೂ ಸಕ್ರಿಯವಾಗಿರುವ ಈ ಮಸೂದೆಯು, ರಾಜ್ಯ ಚುನಾವಣಾ ಆಯೋಗವು ಸ್ವಾಯತ್ತ ಮಂಡಳಿಗಳಿಗೆ, ಗ್ರಾಮ ಮತ್ತು ಪುರಸಭೆಗಳಿಗೆ ಚುನಾವಣೆ ನಡೆಸುತ್ತದೆ ಎಂದು ಪ್ರಸ್ತಾಪಿಸುತ್ತದೆ.
ಆರನೇ ಅನುಸೂಚಿಯ ಕುರಿತು:
- ಸಂವಿಧಾನದ ಆರನೇ ಅನುಸೂಚಿಯು ಬುಡಕಟ್ಟು ಜನಸಂಖ್ಯೆಗೆ ರಕ್ಷಣೆ ನೀಡುತ್ತದೆ ಮತ್ತು ‘ಸ್ವಾಯತ್ತ ಅಭಿವೃದ್ಧಿ ಮಂಡಳಿಗಳನ್ನು’ ರಚಿಸುವ ಮೂಲಕ ಈ ಸಮುದಾಯಗಳಿಗೆ ಸ್ವಾಯತ್ತತೆಯನ್ನು ನೀಡುತ್ತದೆ. ಈ ಸ್ವಾಯತ್ತ ಮಂಡಳಿಗಳಿಗೆ ಭೂಮಿ, ಸಾರ್ವಜನಿಕ ಆರೋಗ್ಯ, ಕೃಷಿ ಮತ್ತು ಇತರ ವಿಷಯಗಳ ಬಗ್ಗೆ ಕಾನೂನುಗಳನ್ನು ರೂಪಿಸುವ ಮತ್ತು ಜಾರಿಗೊಳಿಸುವ ಹಕ್ಕಿದೆ.
- ಪ್ರಸ್ತುತ, ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿ 10 ಸ್ವಾಯತ್ತ ಮಂಡಳಿಗಳು ಅಸ್ತಿತ್ವದಲ್ಲಿವೆ.
- ಈ ವಿಶೇಷ ನಿಬಂಧನೆಯನ್ನು ಸಂವಿಧಾನದ 244 (2) ಮತ್ತು 275 (1) ವಿಧಿಯ ಅಡಿಯಲ್ಲಿ ನೀಡಲಾಗಿದೆ.
ಪ್ರಮುಖ ನಿಬಂಧನೆಗಳು:
- ‘ಸ್ವಾಯತ್ತ ಜಿಲ್ಲೆಗಳನ್ನು’ ಸಂಘಟಿಸಲು ಮತ್ತು ಮರುಸಂಘಟಿಸಲು ರಾಜ್ಯಪಾಲರಿಗೆ ಅಧಿಕಾರವಿದೆ.
- ಸ್ವಾಯತ್ತ ಜಿಲ್ಲೆಯಲ್ಲಿ ವಿಭಿನ್ನ ಬುಡಕಟ್ಟು ಜನಾಂಗದವರು ಇದ್ದರೆ, ರಾಜ್ಯಪಾಲರು ಆ ಜಿಲ್ಲೆಯನ್ನು ಹಲವಾರು ಸ್ವಾಯತ್ತ ಪ್ರದೇಶಗಳಾಗಿ ವಿಂಗಡಿಸಬಹುದು.
- ಸಂಯೋಜನೆ: ಪ್ರತಿ ಸ್ವಾಯತ್ತ ಜಿಲ್ಲೆಯಲ್ಲಿ 30 ಸದಸ್ಯರನ್ನು ಒಳಗೊಂಡಿರುವ ಜಿಲ್ಲಾ ಪರಿಷತ್ ಇರುತ್ತದೆ, ಅವರಲ್ಲಿ ನಾಲ್ವರು ರಾಜ್ಯಪಾಲರಿಂದ ನಾಮನಿರ್ದೇಶನಗೊಳ್ಳುತ್ತಾರೆ ಮತ್ತು ಉಳಿದ 26 ಜನರನ್ನು ವಯಸ್ಕರ ಮತದಾನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
- ಅಧಿಕಾರಾವಧಿ: ಚುನಾಯಿತ ಸದಸ್ಯರು ಐದು ವರ್ಷಗಳ ಅವಧಿಗೆ (ಕೌನ್ಸಿಲ್ ಪೂರ್ಣಾವಧಿಗೂ ಮೊದಲೇ ವಿಸರ್ಜನೆಯಾಗದಿದ್ದರೆ) ಮತ್ತು ರಾಜ್ಯಪಾಲರ ಇಚ್ಛೆ ಇರುವವರೆಗೂ ನಾಮನಿರ್ದೇಶಿತ ಸದಸ್ಯರು ಅಧಿಕಾರದಲ್ಲಿರುತ್ತಾರೆ.
- ಪ್ರತಿಯೊಂದು ಸ್ವಾಯತ್ತ ಪ್ರದೇಶಕ್ಕೂ ಪ್ರತ್ಯೇಕ ಪ್ರಾದೇಶಿಕ ಮಂಡಳಿ ಇರುತ್ತದೆ.
- ಮಂಡಳಿಗಳ ಅಧಿಕಾರಗಳು: ಜಿಲ್ಲಾ ಮತ್ತು ಪ್ರಾದೇಶಿಕ ಮಂಡಳಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ನಿರ್ವಹಿಸುತ್ತವೆ. ಅವುಗಳು ಭೂಮಿ, ಅರಣ್ಯ, ಕಾಲುವೆ ನೀರು, ಸ್ಥಳಾಂತರ ಬೇಸಾಯ, ಗ್ರಾಮ ಆಡಳಿತ, ಆಸ್ತಿಯ ಆನುವಂಶಿಕತೆ, ಮದುವೆ ಮತ್ತು ವಿಚ್ಛೇದನ, ಸಾಮಾಜಿಕ ಪದ್ಧತಿಗಳು ಮುಂತಾದ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಶಾಸನ ರಚಿಸಬಹುದು, ಆದರೆ ಅಂತಹ ಎಲ್ಲಾ ಕಾನೂನುಗಳಿಗೆ ರಾಜ್ಯಪಾಲರ ಒಪ್ಪಿಗೆಯ ಅಗತ್ಯವಿರುತ್ತದೆ.
- ಗ್ರಾಮ ಮಂಡಳಿಗಳು:ಜಿಲ್ಲಾ ಮತ್ತು ಪ್ರಾದೇಶಿಕ ಮಂಡಳಿಗಳು ತಮ್ಮ ವ್ಯಾಪ್ತಿಯಲ್ಲಿ ಬುಡಕಟ್ಟು ಜನಾಂಗದವರ ನಡುವಿನ ಮೊಕದ್ದಮೆಗಳು ಮತ್ತು ಪ್ರಕರಣಗಳನ್ನು ಆಲಿಸಲು ಗ್ರಾಮ ಪರಿಷತ್ತುಗಳು ಅಥವಾ ನ್ಯಾಯಾಲಯಗಳನ್ನು ರಚಿಸಬಹುದು. ಈ ನ್ಯಾಯಾಲಯಗಳು ಅವರ ಮನವಿಯನ್ನು ಆಲಿಸುತ್ತವೆ. ಈ ಮೊಕದ್ದಮೆಗಳು ಮತ್ತು ಪ್ರಕರಣಗಳ ಕುರಿತ ಹೈಕೋರ್ಟ್ ನ ಅಧಿಕಾರ ವ್ಯಾಪ್ತಿಯನ್ನು ರಾಜ್ಯಪಾಲರು ನಿರ್ದಿಷ್ಟಪಡಿಸುತ್ತಾರೆ.
ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಪೌರತ್ವ (ತಿದ್ದುಪಡಿ) ಕಾಯ್ದೆ, 2019 (CAA):
(Citizenship (Amendment) Act, 2019 (CAA)
ಸಂದರ್ಭ:
ಪೌರತ್ವ ಕಾಯ್ದೆಯಡಿ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಲೋಕಸಭೆಯಿಂದ ಏಪ್ರಿಲ್ 9 ರವರೆಗೆ ಮತ್ತು ರಾಜ್ಯಸಭೆಯಿಂದ ಜುಲೈ 9 ರವರೆಗೆ ಸಮಯ ನೀಡಲಾಗಿದೆ.
- ಪೌರತ್ವ (ತಿದ್ದುಪಡಿ) ಕಾಯ್ದೆ, 2019 (CAA) ಅನ್ನು ಡಿಸೆಂಬರ್ 12, 2019 ರಂದು ಅಧಿಸೂಚಿಸಲಾಯಿತು ಮತ್ತು 2020 ರ ಜನವರಿ 10 ರಿಂದ ಜಾರಿಗೆ ಬಂದಿತು.
(ಸೂಚನೆ: ಯಾವುದೇ ಹೊಸ ಅಥವಾ ತಿದ್ದುಪಡಿ ಮಾಡಿದ ಕಾನೂನನ್ನು ಅನುಷ್ಠಾನಗೊಳಿಸಲು, ‘ನಿಯಮಗಳನ್ನು’ ಮಾಡುವುದು ಕಡ್ಡಾಯವಾಗಿದೆ, ಮತ್ತು ಇವುಗಳನ್ನು ಸಾಮಾನ್ಯವಾಗಿ ಕಾನೂನು ಜಾರಿಗೆ ಬಂದ ಆರು ತಿಂಗಳೊಳಗೆ ರೂಪಿಸಲಾಗುತ್ತದೆ.)
ಹಿನ್ನೆಲೆ:
- 2019 ರ ಪೌರತ್ವ (ತಿದ್ದುಪಡಿ) ಕಾಯ್ದೆಯು ಪೌರತ್ವ ಕಾಯ್ದೆ, 1955 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ.
- ಪೌರತ್ವ ಕಾಯ್ದೆ, 1955 ಪೌರತ್ವವನ್ನು ಪಡೆಯಲು ಇರುವ ವಿವಿಧ ವಿಧಾನಗಳನ್ನು ಸೂಚಿಸುತ್ತದೆ.
- ಇದರ ಅಡಿಯಲ್ಲಿ ಭಾರತದಲ್ಲಿ ಜನನ, ಆನುವಂಶಿಕತೆ, ನೋಂದಣಿ, ನೈಸರ್ಗಿಕಿಕರಣ ಮತ್ತು ಭೂಪ್ರದೇಶವೊಂದನ್ನು ಭಾರತಕ್ಕೆ ಸೇರ್ಪಡೆ ಗೊಳಿಸುವುದರ ಆಧಾರದ ಮೇಲೆ ಪೌರತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು:
- ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಾದ – ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶವನ್ನು CAA ಹೊಂದಿದೆ.
- ಈ ಸಮುದಾಯಗಳಲ್ಲಿ 2014 ರ ಡಿಸೆಂಬರ್ 31 ರವರೆಗೆ ಆಯಾ ದೇಶಗಳಲ್ಲಿ ಧಾರ್ಮಿಕ ಆಧಾರದ ಮೇಲೆ ಕಿರುಕುಳ ಅನುಭವಿಸಿದ ವ್ಯಕ್ತಿಗಳನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ ಆದರೆ ಅವರಿಗೆ ಭಾರತೀಯ ಪೌರತ್ವ ನೀಡಲಾಗುವುದು.
- ಕಾಯಿದೆಯ ಮತ್ತೊಂದು ನಿಬಂಧನೆಯ ಪ್ರಕಾರ, ಕೇಂದ್ರ ಸರ್ಕಾರವು ಸಾಗರೋತ್ತರ ನಾಗರಿಕರ (OCI) ನೋಂದಣಿಯನ್ನು ಕೆಲವು ಆಧಾರಸಹಿತ ಕಾರಣಗಳಿಂದ ರದ್ದುಗೊಳಿಸಬಹುದು.
ವಿನಾಯಿತಿಗಳು:
- ತ್ರಿಪುರ, ಮಿಜೋರಾಂ, ಅಸ್ಸಾಂ ಮತ್ತು ಮೇಘಾಲಯದ ಬುಡಕಟ್ಟು ಪ್ರದೇಶಗಳು ಸಂವಿಧಾನದ ಆರನೇ ಅನುಸೂಚಿಯಲ್ಲಿ ಸೇರ್ಪಡೆ ಗೊಂಡಿರುವ ಕಾರಣದಿಂದಾಗಿ ಈ ಕಾಯ್ದೆ ಅವುಗಳಿಗೆ ಅನ್ವಯಿಸುವುದಿಲ್ಲ.
- ಇದಲ್ಲದೆ, ಬಂಗಾಳ ಪೂರ್ವ ಗಡಿನಾಡು ನಿಯಮಗಳು, 1873 ರ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ‘ಇನ್ನರ್ ಮಿತಿ’ (inner limit) ಅಡಿಯಲ್ಲಿರುವ ಪ್ರದೇಶಗಳು ಸಹ ಈ ಕಾಯಿದೆಯ ವ್ಯಾಪ್ತಿಗೆ ಹೊರತಾಗಿವೆ.
ಈ ಕಾನೂನಿಗೆ ಸಂಬಂಧಿಸಿದ ಸಮಸ್ಯೆಗಳು:
- ಈ ಕಾನೂನು ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸುತ್ತದೆ. ಇದರ ಅಡಿಯಲ್ಲಿ ಅಕ್ರಮ ವಲಸಿಗರನ್ನು ಧರ್ಮದ ಆಧಾರದ ಮೇಲೆ ವರ್ಗೀಕರಿಸಲಾಗಿದೆ.
- ಶಾಸನವನ್ನು ಸ್ಥಳೀಯ ಸಮುದಾಯಗಳಿಗೆ ಜನಸಂಖ್ಯಾ ಬೆದರಿಕೆ ಎಂದು ಪರಿಗಣಿಸಲಾಗಿದೆ.
- ಇದರಲ್ಲಿ, ಅಕ್ರಮ ವಲಸಿಗರನ್ನು ಧರ್ಮದ ಆಧಾರದ ಮೇಲೆ ಪೌರತ್ವ ಪಡೆಯಲು ಅರ್ಹರು ಎಂದು ಪರಿಗಣಿಸಲಾಗಿದೆ.ಆದರೆ, ಇದು ಸಮಾನತೆಯ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ.
- ಇದು,ಒಂದು ಪ್ರದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಪೌರತ್ವವನ್ನು ಸ್ವಾಭಾವಿಕಗೊಳಿಸಲು ಪ್ರಯತ್ನಿಸುತ್ತದೆ.
- ಇದರ ಅಡಿಯಲ್ಲಿ, ಯಾವುದೇ ಕಾನೂನಿನ ಉಲ್ಲಂಘನೆಗಾಗಿ ‘OCI’ ನೋಂದಣಿಯನ್ನು ರದ್ದುಗೊಳಿಸಲು ಅನುಮತಿ ನೀಡಲಾಗಿದೆ. ಇದು ಸಣ್ಣ ಅಪರಾಧಗಳು ಸೇರಿದಂತೆ ವ್ಯಾಪಕವಾದ ಉಲ್ಲಂಘನೆಗಳನ್ನು ಒಳಗೊಂಡಿರುವ ವಿಶಾಲವಾದ ನೆಲೆಯಾಗಿದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
GST ಪರಿಹಾರ:
(GST compensation)
ಸಂದರ್ಭ:
ಈ ಹಣಕಾಸು ವರ್ಷದಲ್ಲಿ ಮಾಡಿದ ಪರಿಹಾರ ಸೆಸ್ ಸಂಗ್ರಹದಿಂದ ಕೇಂದ್ರ ಸರ್ಕಾರವು ಈ ವರ್ಷ ರಾಜ್ಯಗಳಿಗೆ ಜಿಎಸ್ಟಿ ಪರಿಹಾರವಾಗಿ 30,000 ಕೋಟಿ ರೂ. ಗಳನ್ನು ಬಿಡುಗಡೆ ಮಾಡುತ್ತದೆ.
- 2020-21ನೇ ಸಾಲಿಗೆ, ರಾಜ್ಯಗಳಿಗೆ ನೀಡಬೇಕಿರುವ ಬಾಕಿ ಪರಿಹಾರ ಮೊತ್ತವು ಸುಮಾರು ₹. 77,000 ಕೋಟಿಗಿಂತ ಹೆಚ್ಚಿನದಾಗಿದೆ ಎಂದು ನಿರೀಕ್ಷಿಸಲಾಗಿದೆ.
GST ನಷ್ಟಕ್ಕೆ ಕೇಂದ್ರವು ರಾಜ್ಯಗಳಿಗೆ ಏಕೆ ಪಾವತಿಸಬೇಕು?
ಸರಕು ಮತ್ತು ಸೇವಾ ತೆರಿಗೆ ( GST ) ಪರಿಹಾರ ಕಾಯ್ದೆ, 2017 , GST ಜಾರಿಯಾದ ನಂತರದ ಮೊದಲ ಐದು ವರ್ಷಗಳವರೆಗೆ, ಅಂದರೆ 2022 ರ ವರೆಗೆ, ವಿಲಾಸಿ ಮತ್ತು ಐಷಾರಾಮಿ ಸರಕುಗಳು(Sin and Luxury Goods), ಅಂದರೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳು, ಪ್ಯಾನ್ ಮಸಾಲಾ, ಕೆಫೀನ್ ಮಾಡಿದ ಪಾನೀಯಗಳು, ಕಲ್ಲಿದ್ದಲು ಮತ್ತು ಕೆಲವು ಐಷಾರಾಮಿ ಪ್ರಯಾಣಿಕ ವಾಹನಗಳು ಇತ್ಯಾದಿಗಳ ಮೇಲೆ ವಿಧಿಸುವ ‘ಸೆಸ್’ ಅನ್ನು ಬಳಸಿಕೊಂಡು ಯಾವುದೇ ರೀತಿಯ ಆದಾಯ ನಷ್ಟವನ್ನು ಸರಿದೂಗಿಸಲಾಗುವುದು ಎಂದು ರಾಜ್ಯಗಳಿಗೆ ಭರವಸೆ ನೀಡಿತು.
- ಆದಾಗ್ಯೂ, ಆರ್ಥಿಕ ಕುಸಿತದಿಂದಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಎಸ್ಟಿ ಮತ್ತು ಸೆಸ್ ಸಂಗ್ರಹಗಳು ಕುಸಿದಿವೆ, ಇದರ ಪರಿಣಾಮವಾಗಿ ಕಳೆದ ವರ್ಷ ಪಾವತಿಸಿದ ಪರಿಹಾರ ಮತ್ತು ಸಂಗ್ರಹಿಸಿದ ಸೆಸ್ ನಡುವೆ 40% ವ್ಯತ್ಯಾಸವಿದೆ.
- COVID-19 ನಿಂದಾಗಿ ಆರ್ಥಿಕತೆಗೆ ಆಗಿರುವ ನಷ್ಟದಿಂದಾಗಿ ರಾಜ್ಯಗಳು ಈ ವರ್ಷ ಮೂರು ಲಕ್ಷ ಕೋಟಿ ರೂ ಗಳ ಜಿಎಸ್‌ಟಿ ಆದಾಯದ ಅಂತರವನ್ನು ಎದುರಿಸಬೇಕಾಗುತ್ತದೆ. ಇದನ್ನು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು “ದೇವರ ಕಾರ್ಯ” (act of God)ಎಂದು ಬಣ್ಣಿಸಿದ್ದಾರೆ.
ಪರಿಹಾರ ಸೆಸ್ ಎಂದರೇನು?
ಪರಿಹಾರ ಸೆಸ್‌ನ ವಿಧಾನಗಳನ್ನು ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ತಿದ್ದುಪಡಿ ಮಸೂದೆ, 2017 ರ ಪ್ರಕಾರ ನಿರ್ದಿಷ್ಟಪಡಿಸಲಾಗಿದೆ.
ಎಲ್ಲಾ ತೆರಿಗೆಗಳನ್ನು ಜಿಎಸ್‌ಟಿಗೆ ಸೇರಿಸಿದಾಗಿನಿಂದ, ಪ್ರತಿ ರಾಜ್ಯದ ಜಿಎಸ್‌ಟಿ ಆದಾಯವು 2015-16ರ ಆರ್ಥಿಕ ವರ್ಷದಲ್ಲಿ ಸಂಗ್ರಹಿಸಿದ ಮೊತ್ತದಿಂದ ಪ್ರತಿವರ್ಷ 14% ದರದಲ್ಲಿ ಹೆಚ್ಚಾಗುತ್ತದೆ ಎಂದು ಕಾಯಿದೆಯು ಭಾವಿಸುತ್ತದೆ.
- ಯಾವುದೇ ವರ್ಷದಲ್ಲಿ ಈ ಮೊತ್ತಕ್ಕಿಂತ ಕಡಿಮೆ ತೆರಿಗೆ ಸಂಗ್ರಹದಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ಪರಿಹಾರ ಧನ ನೀಡುವ ಮೂಲಕ ಸರಿದೂಗಿಸಲಾಗುತ್ತದೆ. ಈ ಮೊತ್ತವನ್ನು ಪ್ರತಿ ಎರಡು ತಿಂಗಳಿಗೊಮ್ಮೆ ತಾತ್ಕಾಲಿಕ ಖಾತೆಗಳ ಆಧಾರದ ಮೇಲೆ ರಾಜ್ಯಗಳಿಗೆ ಪಾವತಿಸಲಾಗುವುದು ಮತ್ತು ಪ್ರತಿವರ್ಷ ರಾಜ್ಯದ ಖಾತೆಗಳನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರವರು ಲೆಕ್ಕಪರಿಶೋಧನೆ ಮಾಡಿದ ನಂತರ ಹೊಂದಾಣಿಕೆ ಮಾಡಲಾಗುತ್ತದೆ.
- ಈ ಯೋಜನೆ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ, ಅಂದರೆ ಜೂನ್ 2022 ರವರೆಗೆ.
ಪರಿಹಾರ ಸೆಸ್ ನಿಧಿ:
ಆದಾಯ ನಷ್ಟಕ್ಕೆ ರಾಜ್ಯಗಳಿಗೆ ಪರಿಹಾರ ಒದಗಿಸಲು ಪರಿಹಾರ ಸೆಸ್ ನಿಧಿಯನ್ನು ಸ್ಥಾಪಿಸಲಾಗಿದೆ.ಕೆಲವು ವಸ್ತುಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸಲಾಗುವುದು ಮತ್ತು ಈ ಸೆಸ್ ಅನ್ನು ರಾಜ್ಯಗಳಿಗೆ ಪರಿಹಾರ ಪಾವತಿಸಲು ಬಳಸಲಾಗುತ್ತದೆ.
- ಈ ವಸ್ತುಗಳಲ್ಲಿ ಪಾನ್ ಮಸಾಲಾ, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳು, ನ್ಯೂಮ್ಯಾಟಿಕ್ ನೀರು, ಕೆಫೀನ್ ಮಾಡಿದ ಪಾನೀಯಗಳು, ಕಲ್ಲಿದ್ದಲು ಮತ್ತು ಕೆಲವು ಪ್ರಯಾಣಿಕರ ಮೋಟಾರು ವಾಹನಗಳು ಸೇರಿವೆ.
- GST ಕಾಯ್ದೆ ಪ್ರಕಾರ ಸಂಗ್ರಹಣಾ ಸೆಸ್ ಮತ್ತು GST ಕೌನ್ಸಿಲ್ ಶಿಫಾರಸು ಮಾಡಬಹುದಾದ ಇತರ ಮೊತ್ತವನ್ನು ಪರಿಹಾರ ಸೆಸ್ ನಿಧಿಯಲ್ಲಿ ಜಮಾ ಮಾಡಲಾಗುತ್ತದೆ.
ವಿಷಯಗಳು:ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.
ಅಪರೂಪದ ಕಾಯಿಲೆಗಳ ಕುರಿತ ಆರೋಗ್ಯ ನೀತಿ:
(Health policy on rare diseases)
ಸಂದರ್ಭ:
ಇತ್ತೀಚೆಗೆ, ದೆಹಲಿ ಹೈಕೋರ್ಟ್ ಮಾರ್ಚ್ 31 ರೊಳಗೆ ‘ಅಪರೂಪದ ಕಾಯಿಲೆಗಳ’ಕುರಿತ ರಾಷ್ಟ್ರೀಯ ಆರೋಗ್ಯ ನೀತಿ ಅಂತಿಮಗೊಳಿಸಲು ಮತ್ತು ಅಧಿಸೂಚಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ.
‘ಅಪರೂಪದ ಕಾಯಿಲೆಗಳು’ ಎಂದರೇನು?
ಅಪರೂಪದ ಕಾಯಿಲೆಗಳನ್ನು ಅನಾಥ ಕಾಯಿಲೆ (orphan disease) ಎಂದೂ ಕರೆಯುತ್ತಾರೆ. ಇವು ಜನಸಂಖ್ಯೆಯ ಒಂದು ಸಣ್ಣ ಶೇಕಡಾವಾರು ಜನರ ಮೇಲೆ ಪರಿಣಾಮ ಬೀರುವ ರೋಗಗಳಾಗಿವೆ, ಅಂದರೆ ಅವು ಸಾಮಾನ್ಯವಾಗಿ ಕಡಿಮೆ ಸಂಖ್ಯೆಯ ಜನರಲ್ಲಿ ಕಂಡುಬರುತ್ತವೆ.
- ಅಪರೂಪದ ಕಾಯಿಲೆಗಳಲ್ಲಿ ಹೆಚ್ಚಿನವು ಆನುವಂಶಿಕ. ಒಬ್ಬ ವ್ಯಕ್ತಿಯಲ್ಲಿ, ರೋಗಲಕ್ಷಣಗಳು ತಕ್ಷಣವೇ ಗೋಚರಿಸದಿದ್ದರೂ ಸಹ ಈ ರೋಗಗಳು ಕೆಲವೊಮ್ಮೆ ಜೀವನದುದ್ದಕ್ಕೂ ಕಂಡುಬರುತ್ತವೆ.
ಭಾರತದಲ್ಲಿ ದಾಖಲಾದ ಸಾಮಾನ್ಯ ಅಪರೂಪದ ಕಾಯಿಲೆಗಳು:
ಹಿಮೋಫಿಲಿಯಾ, ಥಲಸ್ಸೆಮಿಯಾ, ಕುಡಗೋಲು-ಕೋಶ ರಕ್ತಹೀನತೆ ಮತ್ತು ಮಕ್ಕಳಲ್ಲಿ ಪ್ರಾಥಮಿಕ ರೋಗನಿರೋಧಕ ಸಾಮರ್ಥ್ಯದ ಕೊರತೆ, ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳು, ಲೈಸೋಸೋಮಲ್ ಶೇಖರಣಾ ಕಾಯಿಲೆಗಳಾದ ಪೊಂಪೈ ಕಾಯಿಲೆ, ಹಿರ್ಷ್‌ಸ್ಪ್ರಂಗ್ ಕಾಯಿಲೆ, ಗೌಚರ್ಸ್ ಕಾಯಿಲೆ, ಸಿಸ್ಟಿಕ್ ಫೈಬ್ರೋಸಿಸ್, ಹೆಮಾಂಜಿಯೋಮಾಸ್ ಮತ್ತು ಕೆಲವು ರೀತಿಯ ಸ್ನಾಯುವಿನ ರೋಗಶಾಸ್ತ್ರ, ಭಾರತದಲ್ಲಿ, ಸಾಮಾನ್ಯವಾಗಿ: ಸಾಮಾನ್ಯ ಅಪರೂಪದ ಕಾಯಿಲೆಗಳ ಉದಾಹರಣೆಗಳು ಕಂಡುಬರುತ್ತವೆ.
(Haemophilia, Thalassemia, sickle-cell anaemia and primary immuno deficiency in children, auto-immune diseases, Lysosomal storage disorders such as Pompe disease, Hirschsprung disease, Gaucher’s disease, Cystic Fibrosis, Hemangiomas and certain forms of muscular dystrophies.)
ಸಂಬಂಧಿತ ಕಳವಳಗಳು ಮತ್ತು ಸವಾಲುಗಳು:
- ಈ ರೋಗಗಳ ಸಾಂಕ್ರಾಮಿಕ ರೋಗಶಾಸ್ತ್ರೀಯ ದತ್ತಾಂಶವನ್ನು ಸಂಗ್ರಹಿಸುವುದು ಒಂದು ಸವಾಲಾಗಿದೆ, ಇದು ಆರೋಗ್ಯ ರಕ್ಷಣಾ ವ್ಯವಸ್ಥೆಗಳಿಗೆ ಗಮನಾರ್ಹ ಸವಾಲನ್ನು ಸಹ ಒಡ್ಡುತ್ತದೆ. ಇದು ರೋಗದ ಹರಡುವಿಕೆಯನ್ನು ನಿರ್ಧರಿಸಲು, ಚಿಕಿತ್ಸೆಯ ವೆಚ್ಚವನ್ನು ಅಂದಾಜು ಮಾಡಲು ಮತ್ತು ಇತರ ತೊಂದರೆಗಳನ್ನು ತಡೆಯಲು, ಹಾಗೆಯೇ ಸಮಯೋಚಿತ ಮತ್ತು ಸರಿಯಾದ ರೋಗನಿರ್ಣಯಕ್ಕೆ ಕಾರಣವಾಗುತ್ತದೆ.
- ಅಪರೂಪದ ಕಾಯಿಲೆಗಳ ಅನೇಕ ಪ್ರಕರಣಗಳು ಗಂಭೀರ, ದೀರ್ಘಕಾಲದ ಮತ್ತು ಮಾರಣಾಂತಿಕ ವಾಗಬಹುದು. ಕೆಲವು ಸಂದರ್ಭಗಳಲ್ಲಿ ಈ ಕಾಯಿಲೆಗಳಿಂದ ಪ್ರಭಾವಿತವಾದ, ಹೆಚ್ಚಾಗಿ ಪೀಡಿತವಾದ ಮಕ್ಕಳು ಸಹ ಕೆಲವು ರೀತಿಯ ಅಂಗವೈಕಲ್ಯಕ್ಕೆ ಒಳಗಾಗಬಹುದು.
- 2017 ರ ವರದಿಯ ಪ್ರಕಾರ, ಅಪರೂಪದ ಕಾಯಿಲೆಗಳು ವರದಿಯಾದ ಹೊಸ ಪ್ರಕರಣಗಳಲ್ಲಿ 50 ಪ್ರತಿಶತಕ್ಕಿಂತಲೂ ಹೆಚ್ಚು ಮಕ್ಕಳೇ ಇದ್ದಾರೆ, ಮತ್ತು ಈ ಕಾಯಿಲೆಗಳು, ಒಂದು ವರ್ಷದೊಳಗಿನ ರೋಗಿಗಳಲ್ಲಿ 35 ಪ್ರತಿಶತ, ಒಂದರಿಂದ ಐದು ವರ್ಷ ವಯಸ್ಸಿನ ರೋಗಿಗಳಲ್ಲಿ 10 ಪ್ರತಿಶತ. ಮತ್ತು ಐದ ರಿಂದ ಹದಿನೈದು ವರ್ಷದೊಳಗಿನ ರೋಗಿಗಳಲ್ಲಿ 12 ಪ್ರತಿಶತದಷ್ಟು, ಸಾವುಗಳಿಗೆ ಕಾರಣವಾಗಿವೆ.
ಈ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನಗಳು:
- 450 ‘ಅಪರೂಪದ ಕಾಯಿಲೆ’ಗಳ ಚಿಕಿತ್ಸೆಗಾಗಿ ರಾಷ್ಟ್ರೀಯ ನೀತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದೆ.
- ಅಪರೂಪದ ಕಾಯಿಲೆಗಳ ನೋಂದಾವಣೆಯನ್ನು ಪ್ರಾರಂಭಿಸುವುದು ಈ ನೀತಿಯ ಉದ್ದೇಶವಾಗಿದೆ, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಿದ್ಧಪಡಿಸುತ್ತದೆ.
ಈ ನೀತಿಯಡಿಯಲ್ಲಿ, ಅಪರೂಪದ ರೋಗಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ:
- ಒಂದು ಬಾರಿ ಚಿಕಿತ್ಸೆಯ ಅಗತ್ಯವಿರುವ ರೋಗಗಳು,
- ದೀರ್ಘಾವಧಿಯ ಆದರೆ ಅಗ್ಗದ ಚಿಕಿತ್ಸೆಯ ಅಗತ್ಯವಿರುವ ರೋಗಗಳು ಮತ್ತು
- ದುಬಾರಿ ಮತ್ತು ದೀರ್ಘಕಾಲೀನ ಚಿಕಿತ್ಸೆಯ ಅಗತ್ಯವಿರುವ ರೋಗಗಳು.
ಹಣಕಾಸಿನ ನೆರವು: ನೀತಿಯ ಪ್ರಕಾರ, ರಾಷ್ಟ್ರೀಯ ಆರೋಗ್ಯ ನಿಧಿ ಯೋಜನೆಯಡಿ, ಒಂದು ಬಾರಿಯ ಚಿಕಿತ್ಸೆಯ ಅಗತ್ಯವಿರುವ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ 15 ಲಕ್ಷ ರೂ ನೆರವು ನೀಡಲಾಗುವುದು. ಈ ಸೌಲಭ್ಯವು ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ರಾಜ್ಯದ ಹಸ್ತಕ್ಷೇಪಕ್ಕೆ ಸಮರ್ಥನೆ:
- ಪ್ರತಿಯೊಬ್ಬ ನಾಗರಿಕನಿಗೂ ಕೈಗೆಟುಕುವ, ಪ್ರವೇಶಿಸಬಹುದಾದ ಮತ್ತು ವಿಶ್ವಾಸಾರ್ಹ ಆರೋಗ್ಯ ಸೇವೆಗಳನ್ನು ಒದಗಿಸುವುದು ರಾಜ್ಯದ ಜವಾಬ್ದಾರಿಯಾಗಿದೆ.
- ಆರೋಗ್ಯ ಸೇವೆಗಳ ಪ್ರಾಮುಖ್ಯತೆಯನ್ನು ಸಂವಿಧಾನದ 21, 38 ಮತ್ತು 47 ನೇ ವಿಧಿಗಳಲ್ಲಿ ಉಲ್ಲೇಖಿಸಲಾಗಿದೆ ಆದ್ದರಿಂದ, ರಾಜ್ಯಗಳು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.
- ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಔಷಧಗಳನ್ನು ಅಭಿವೃದ್ಧಿಪಡಿಸಲು ಔಷಧೀಯ ಕಂಪನಿಗಳನ್ನು ಪ್ರೋತ್ಸಾಹಿಸಲಾಗಿದ್ದರೂ, ಔಷಧೀಯ ಕಂಪನಿಗಳು ತಮ್ಮ ಆರ್ಥಿಕ ಆಸಕ್ತಿಯನ್ನು ನೋಡುತ್ತವಾದ್ದರಿಂದ ಮತ್ತು ಅನಾಥ ಔಷಧಿಗಳ ಬೇಡಿಕೆ ಕಡಿಮೆಯಾದ ಕಾರಣ, ಅವರ ಆಯ್ಕೆಯ ಪ್ರಕಾರ ಔಷಧಿಗಳ ಬೆಲೆಯನ್ನು ಅವರು ಏರಿಕೆ ಮಾಡುತ್ತಾರೆ. ಆದ್ದರಿಂದ, ಈ ಔಷಧಿಗಳ ಅತಿಯಾದ ಬೆಲೆಯನ್ನು ನಿರ್ಬಂಧಿಸಲು ಸರ್ಕಾರವು ನಿಯಂತ್ರಣ ಕ್ರಮಗಳನ್ನು ರೂಪಿಸಬೇಕು.
ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು.
ಸಿಂಧೂ ಜಲ ಆಯೋಗದ ಸಭೆ:
(Indus water panel holds meeting)
ಸಂದರ್ಭ:
‘ಶಾಶ್ವತ ಸಿಂಧೂ ಆಯೋಗ’ದ (Permanent Indus Commission) 116 ನೇ ಸಭೆಯನ್ನು ಭಾರತೀಯ ಮತ್ತು ಪಾಕಿಸ್ತಾನದ ನಿಯೋಗಗಳು ಎರಡೂವರೆ ವರ್ಷಗಳ ಅಂತರದ ನಂತರ ಪ್ರಾರಂಭಿಸಿವೆ.
ಎರಡು ನೆರೆಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸಾಮಾನ್ಯೀಕರಿಸುವ ಪ್ರಕ್ರಿಯೆಯ ಭಾಗವಾಗಿ ಈ ಸಭೆಯನ್ನು ನೋಡಲಾಗುತ್ತಿದೆ.
ಸಿಂಧೂ ನದಿ ನೀರು ಒಪ್ಪಂದದ ಕುರಿತು:
- ಇದು ನೀರಿನ ಹಂಚಿಕೆ ಒಪ್ಪಂದವಾಗಿದ್ದು, 1960 ರಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ವಿಶ್ವಬ್ಯಾಂಕ್ ಮಧ್ಯಸ್ತಿಕೆಯಲ್ಲಿ ಸಹಿ ಹಾಕಿದರು.
- ಸಿಂಧೂ ಜಲ ಒಪ್ಪಂದದ (Indus Water Treaty- IWT) ಪ್ರಕಾರ, ಮೂರು ಪೂರ್ವದ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನೀರಿನ ಮೇಲೆ ಭಾರತಕ್ಕೆ ಸಂಪೂರ್ಣ ನಿಯಂತ್ರಣ ನೀಡಲಾಯಿತು.
- ಪಾಕಿಸ್ತಾನವು ಪಶ್ಚಿಮ ನದಿಗಳನ್ನು ನಿಯಂತ್ರಿಸುತ್ತದೆ – ಸಿಂಧೂ, ಚೆನಾಬ್ ಝೆಲಮ್.
- ಒಪ್ಪಂದದ ಪ್ರಕಾರ, ಪಾಕಿಸ್ತಾನ ಮತ್ತು ಭಾರತದ ಜಲ ಆಯುಕ್ತರು ವರ್ಷಕ್ಕೆ ಎರಡು ಬಾರಿ ಭೇಟಿಯಾಗಿ ಯೋಜನೆಯ ಸ್ಥಳಗಳ ತಾಂತ್ರಿಕ ಅಂಶಗಳು ಮತ್ತು ನದಿಯಲ್ಲಿ ನಡೆಯುತ್ತಿರುವ ಪ್ರಮುಖ ಕಾರ್ಯಗಳ ಬಗ್ಗೆ ಪರಸ್ಪರ ತಿಳಿಸಬೇಕಾಗುತ್ತದೆ.
- ಒಪ್ಪಂದದ ಅಡಿಯಲ್ಲಿ, ಎರಡೂ ಕಡೆಯವರು ನೀರಿನ ಹರಿವು ಮತ್ತು ನೀರಿನ ಬಳಕೆಯ ಪ್ರಮಾಣವನ್ನು ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ.
ಶಾಶ್ವತ ಸಿಂಧೂ ಆಯೋಗ:
- ಸಿಂಧೂ ಜಲ ಒಪ್ಪಂದ, 1960 ರ ಗುರಿಗಳನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳನ್ನು ಒಳಗೊಂಡ ದ್ವಿಪಕ್ಷೀಯ ಆಯೋಗವಾದ ಶಾಶ್ವತ ಸಿಂಧೂ ಆಯೋಗ (Permanent Indus Commission) ವನ್ನು ರಚಿಸಲಾಯಿತು.
- ‘ಸಿಂಧೂ ಜಲ ಒಪ್ಪಂದ’ದ ಪ್ರಕಾರ, ಈ ಆಯೋಗದ ಸಭೆಯು ನಿಯಮಿತವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ವರ್ಷಕ್ಕೊಮ್ಮೆಯಾದರೂ ನಡೆಯಬೇಕು.
ಆಯೋಗದ ಕಾರ್ಯಗಳು:
- ನದಿಗಳ ನೀರಿನ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಅಧ್ಯಯನ ಮಾಡುವುದು ಮತ್ತು ಎರಡೂ ಸರ್ಕಾರಗಳಿಗೆ ವರದಿ ಮಾಡುವುದು.
- ನೀರಿನ ಹಂಚಿಕೆಯ ಬಗ್ಗೆ ಉಂಟಾಗುವ ವಿವಾದಗಳನ್ನು ಪರಿಹರಿಸುವುದು.
- ಯೋಜನೆಯ ತಾಣಗಳು ಮತ್ತು ನದಿಯ ಪ್ರಮುಖ ಭಾಗಗಳಲ್ಲಿ ಕೆಲಸ ಮಾಡಲು ತಾಂತ್ರಿಕ ತಪಾಸಣೆ ವ್ಯವಸ್ಥೆ ಮಾಡುವುದು.
- ಯೋಜನೆಯ ತಾಣಗಳಿಗೆ ಮತ್ತು ನದಿಯ ಪ್ರಮುಖ ಕಾರ್ಯಚಟುವಟಿಕೆಯ ಕೇಂದ್ರಗಳಿಗೆ ಮುಖ್ಯಸ್ಥರು ಭೇಟಿ ನೀಡಿ ತಾಂತ್ರಿಕ ತಪಾಸಣೆ ಕೈಗೊಳ್ಳಲು ವ್ಯವಸ್ಥೆ ಮಾಡುವುದು.
- ಪ್ರತಿ ಐದು ವರ್ಷಗಳಿಗೊಮ್ಮೆ, ನದಿಗಳನ್ನು ಪರಿಶೀಲಿಸಲು ಸಾಮಾನ್ಯ ಪ್ರವಾಸ ಕೈಗೊಳ್ಳುವುದು.
- ಒಪ್ಪಂದದ ನಿಬಂಧನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಅಮೇರಿಕಾದ ಶಾಂತಿ ಯೋಜನೆ:
(U.S. peace plan)
ಸಂದರ್ಭ:
‘ಅಮೆರಿಕದ ಶಾಂತಿ ಪ್ರಸ್ತಾಪ’ಕ್ಕೆ ಪ್ರತಿಕ್ರಿಯೆಯಾಗಿ ಅಫಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಶಾಂತಿ ಯೋಜನೆಯನ್ನು ಸಿದ್ಧಪಡಿಸಿದ್ದಾರೆ, ಇದರ ಅಡಿಯಲ್ಲಿ ಮುಂದಿನ ಆರು ತಿಂಗಳಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಸ್ತಾಪವನ್ನು ಅವರು ಮಾಡಿದ್ದಾರೆ. ಈ ಮೂಲಕ ಕೆಲವು ದಿನಗಳ ಹಿಂದೆ ಅಮೆರಿಕ ಮಂಡಿಸಿದ ಶಾಂತಿ ಪ್ರಸ್ತಾವನೆಯನ್ನು ಅಧ್ಯಕ್ಷ ಅಶ್ರಫ್ ಘನಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
- ಮುಂದಿನ ತಿಂಗಳು ಟರ್ಕಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಪ್ರಸ್ತಾಪವನ್ನು ಬಹಿರಂಗಪಡಿಸಲಿದ್ದಾರೆ. ಇದು ‘ಅಮೇರಿಕನ್ ಪ್ರಸ್ತಾವನೆಯನ್ನು’ ತಿರಸ್ಕರಿಸುವ ಸಂಕೇತವಾಗಿದೆ, ಇದರಲ್ಲಿ ಘಣಿಯವರ ಚುನಾಯಿತ ಸರ್ಕಾರವನ್ನು ಮಧ್ಯಂತರ ಆಡಳಿತದಿಂದ ಬದಲಾಯಿಸುವ ಅಮೆರಿಕಾದ ಯೋಜನೆಯನ್ನು ಸ್ವೀಕರಿಸಲು ನಿರಾಕರಿಸಿದ ಸಂಕೇತವನ್ನು ಪ್ರತಿಧ್ವನಿಸುತ್ತದೆ.
ಅಮೆರಿಕ – ತಾಲಿಬಾನ್ ಶಾಂತಿ ಒಪ್ಪಂದ:
- 2020 ರ ಫೆಬ್ರವರಿ 29 ರಂದು ಅಮೆರಿಕಾ ಸರ್ಕಾರ ಮತ್ತು ತಾಲಿಬಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿತು.
- ಈ ಒಪ್ಪಂದವು, ಅಮೆರಿಕ ಮತ್ತು ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆಯ (North Atlantic Treaty Organization- NATO) ಸೈನಿಕರು ಅಫ್ಘಾನಿಸ್ತಾನವನ್ನು ತೊರೆಯುವಂತೆ ಹೇಳುತ್ತದೆ.
ಭಾರತಕ್ಕೆ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಯಾಗುವುದರ ಮಹತ್ವ:
ಅಫ್ಘಾನಿಸ್ತಾನದಲ್ಲಿ ,ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಮತ್ತು ಬಾಹ್ಯಶಕ್ತಿ ಪ್ರಾಯೋಜಿತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು ಭಾರತವು ಹೊಸ ಪ್ರಯತ್ನಗಳಿಗೆ ಕರೆ ನೀಡಿದೆ.
- ಆರ್ಥಿಕವಾಗಿ, ಅಫ್ಘಾನಿಸ್ತಾನವು ತೈಲ ಮತ್ತು ಖನಿಜ ಸಮೃದ್ಧ ಮಧ್ಯ ಏಷ್ಯಾದ ಗಣರಾಜ್ಯಗಳನ್ನು ಸಂಪರ್ಕಿಸಲು ಭಾರತಕ್ಕೆ ಒಂದು ಹೆಬ್ಬಾಗಿಲಾಗಿದೆ.
- ಅಫ್ಘಾನಿಸ್ತಾನವು, ಕಳೆದ ಐದು ವರ್ಷಗಳಲ್ಲಿ ಭಾರತೀಯ ವಿದೇಶಿ ನೆರವು (Indian foreign aid) ಪಡೆದ ಎರಡನೇ ಅತಿದೊಡ್ಡ ದೇಶವಾಗಿದೆ.
ಒಪ್ಪಂದದ ಕೆಲವು ಪ್ರಮುಖ ಅಂಶಗಳು:
- ಒಪ್ಪಂದಕ್ಕೆ ಸಹಿ ಹಾಕಿದ 14 ತಿಂಗಳೊಳಗೆ ಅಫಘಾನಿಸ್ತಾನದಿಂದ, ನ್ಯಾಟೋ ಅಥವಾ ಸಮ್ಮಿಶ್ರ ಪಡೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದರೊಂದಿಗೆ ಅಮೇರಿಕಾ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದು.
ತಾಲಿಬಾನ್ ನೀಡಿದ ಪ್ರಮುಖ ಭಯೋತ್ಪಾದನಾ-ವಿರೋಧಿ ಭರವಸೆ ಹೀಗಿದೆ:
- ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಅದರ ಮಿತ್ರರಾಷ್ಟ್ರಗಳ ಭದ್ರತೆಗೆ ಬೆದರಿಕೆಯಾಗಿ ಅಫ್ಘಾನಿಸ್ತಾನದ ನೆಲವನ್ನು ಬಳಸಲು ತಾಲಿಬಾನ್ ತನ್ನ ಯಾವುದೇ ಸದಸ್ಯರು, ಅಲ್-ಖೈದಾ ಸೇರಿದಂತೆ ಇತರ ವ್ಯಕ್ತಿಗಳು ಅಥವಾ ಗುಂಪುಗಳಿಗೆ ಅನುಮತಿಸುವುದಿಲ್ಲ ಎಂದು ತಾಲಿಬಾನ್ ಸಂಘಟನೆ ಹೇಳಿದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ:
(UN Human Rights Council)
ಸಂದರ್ಭ:
ಇತ್ತೀಚೆಗೆ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಶ್ರೀಲಂಕಾದ ಮಾನವ ಹಕ್ಕುಗಳ ದಾಖಲೆಯ ನಿರ್ಣಾಯಕ ಮತದಾನದಿಂದ ಭಾರತ ದೂರ ಉಳಿಯಿತು.
ಆದಾಗ್ಯೂ, 47 ಸದಸ್ಯರ ಮಾನವ ಹಕ್ಕುಗಳ ಪರಿಷತ್ತಿನಲ್ಲಿ 22 ಸದಸ್ಯ ರಾಷ್ಟ್ರಗಳು ‘ಶ್ರೀಲಂಕಾದಲ್ಲಿ ಸಾಮರಸ್ಯ, ಉತ್ತರದಾಯಿತ್ವ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸುವುದು’ ಎಂಬ ಶೀರ್ಷಿಕೆಯ ‘ನಿರ್ಣಯ’ದ ಪರವಾಗಿ ಮತ ಚಲಾಯಿಸಿದ ನಂತರ ಇದನ್ನು ಅಂಗೀಕರಿಸಲಾಯಿತು.
‘ನಿರ್ಣಯದ’ ಬಗ್ಗೆ:
- 2009 ರಲ್ಲಿ ತಮಿಳು ಹುಲಿ ಬಂಡುಕೋರರ (Tamil Tiger Rebels) ಸೋಲಿನೊಂದಿಗೆ ಕೊನೆಗೊಂಡ ಶ್ರೀಲಂಕಾದ ಅಂತರ್ಯುದ್ಧಕ್ಕೆ ಸಂಬಂಧಿಸಿದ ‘ಅಪರಾಧಗಳ’ ಪುರಾವೆಗಳನ್ನು ಸಂಗ್ರಹಿಸಿ ಸಂರಕ್ಷಿಸಲು UN ಮಾನವ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್ ಗೆ (Michelle Bachelet) ಈ ನಿರ್ಣಯವು ಆದೇಶಿಸುತ್ತದೆ.
- ರಾಜಪಕ್ಸೆ ಆಡಳಿತದ ಅವಧಿಯಲ್ಲಿ ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಮಾನವ ಹಕ್ಕುಗಳ ರಕ್ಷಕರು ಮತ್ತು ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಿರ್ಣಯವು ವಾದಿಸಿದೆ.
ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಕುರಿತು :
‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ’ (UNHRC) ಅನ್ನು 2006 ರಲ್ಲಿ ಮರುಸಂಘಟಿಸಲಾಯಿತು, ಅದರ ನಿಕಟಪೂರ್ವ ಸಂಘಟನೆಯಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ‘ವಿಶ್ವಾಸಾರ್ಹತೆಯ ಕೊರತೆಯನ್ನು’ ನಿವಾರಿಸಲು ಇದು ಸಹಾಯ ಮಾಡುತ್ತದೆ.
ಪ್ರಧಾನ ಕಛೇರಿ : ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ.
ಸಂಯೋಜನೆ:
- ಪ್ರಸ್ತುತ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) 47 ಸದಸ್ಯರನ್ನು ಹೊಂದಿದೆ, ಮತ್ತು ಇಡೀ ವಿಶ್ವದ ಭೌಗೋಳಿಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಆಧಾರದ ಮೇಲೆ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ.
- ಪ್ರತಿ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
- ಒಂದು ದೇಶಕ್ಕೆ ಒಂದು ಸ್ಥಾನವನ್ನು ಗರಿಷ್ಠ ಎರಡು ಬಾರಿ ಸತತವಾಗಿ ಹೊಂದಲು ಅವಕಾಶವಿದೆ. ಅಂದರೆ 2 ಕ್ಕಿಂತ ಹೆಚ್ಚು ಬಾರಿ ಸತತವಾಗಿ ಆಯ್ಕೆಯಾಗಲು ಅವಕಾಶವಿಲ್ಲ.
ಕಾರ್ಯಗಳು :
- ಮಂಡಳಿಯು, ವಿಶ್ವಸಂಸ್ಥೆಯ ಎಲ್ಲಾ 193 ಸದಸ್ಯ ರಾಷ್ಟ್ರಗಳ ‘ಸಾರ್ವತ್ರಿಕ ಆವರ್ತಕ ವಿಮರ್ಶೆ’ (Universal Periodic Review- UPR) ಮೂಲಕ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಡ್ಡಾಯವಲ್ಲದ ನಿರ್ಣಯಗಳನ್ನು ರವಾನಿಸುತ್ತದೆ.
- ಇದು ನಿರ್ದಿಷ್ಟ ದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ತಜ್ಞರ ಮೂಲಕ ತನಿಖೆಯ ಪ್ರಗತಿಯನ್ನು ನೋಡಿಕೊಳ್ಳುತ್ತದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದೆ ಇರುವ ಸವಾಲುಗಳು ಮತ್ತು ಸುಧಾರಣೆಗಳ ಅವಶ್ಯಕತೆ:
- ‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಚೀನಾ ಮತ್ತು ರಷ್ಯಾಗಳ ಮಾನವ ಹಕ್ಕುಗಳ ದಾಖಲೆಗಳು ಮಂಡಳಿಯ ಉದ್ದೇಶ ಮತ್ತು ಧ್ಯೇಯಕ್ಕೆ ಹೊಂದಿಕೆಯಾಗುವುದಿಲ್ಲ, ಇದರಿಂದಾಗಿ ವಿಮರ್ಶಕರು ಪರಿಷತ್ತಿನ ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ.
- UNHRC ಯಲ್ಲಿ ಅನೇಕ ಪಾಶ್ಚಿಮಾತ್ಯ ದೇಶಗಳು ಭಾಗವಹಿಸುತ್ತಿದ್ದರೂ, ಅವರು ಮಾನವ ಹಕ್ಕುಗಳ ತಿಳುವಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ.
- UNHRC ಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ಅದರ ಆದೇಶಗಳನ್ನು ಪಾಲಿಸದಿರುವುದು ಗಂಭೀರ ವಿಷಯವಾಗಿದೆ.
- ಅಮೆರಿಕದಂತಹ ಪ್ರಬಲ ರಾಷ್ಟ್ರಗಳ ಭಾಗವಹಿಸುವಿಕೆ ಯ ಕೊರತೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಹುತಾತ್ಮರ ದಿವಸ.
(SHAHEEDI DIWAS)
- ಮಾರ್ಚ್ 23, 1931 ರಂದು, ಬ್ರಿಟಿಷ್ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಶಿವರಾಮ್ ರಾಜ್ ಗುರು ಮತ್ತು ಸುಖದೇವ್ ಥಾಪರ್ ಅವರ ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಗಲ್ಲಿಗೇರಿಸಿತು.
- ಈ ದಿನವನ್ನು ಭಾರತದಲ್ಲಿ ಹುತಾತ್ಮರ ದಿನ ಅಥವಾ ಶಹಿದಿ ದಿವಸ್ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ‘ಸರ್ವೋದಯ ದಿವಸ’ ಎಂದೂ ಕರೆಯಲಾಗುತ್ತದೆ.