Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 23 ಮಾರ್ಚ್ 2021

 

ಪರಿವಿಡಿ : 

ಸಾಮಾನ್ಯ ಅಧ್ಯಯನ ಪತ್ರಿಕೆ 1:   

1. ಮಹಿಳೆಯರ ಬಗೆಗಿನ ಸ್ಟೀರಿಯೊಟೈಪ್ಸ್ / ಪೂರ್ವಗ್ರಹ ಪೀಡಿತ ಮನೋಭಾವದ ವಿರುದ್ಧದ ಸುಧಾರಣೆಯ ಕುರಿತು ವರಿಷ್ಠ ನ್ಯಾಯಾಲಯದಲ್ಲಿ ಚರ್ಚೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಮತದಾರರು ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (VVPAT).

2. ಪೂಜಾ / ಪ್ರಾರ್ಥನಾ ಸ್ಥಳಗಳ ಕಾಯ್ದೆ.

3. ಯೆಮನ್‌ನ ಹೌತಿ ಬಂಡುಕೋರರ ಮುಂದೆ ಕದನ ವಿರಾಮ ಯೋಜನೆಯನ್ನು ಪ್ರಸ್ತುತಪಡಿಸಿದ ರಿಯಾದ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಯುನಿವರ್ಸಲ್ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳ ಅರ್ಜಿಗಳನ್ನು ಮೌಲ್ಯಮಾಪನ ಮಾಡಲು ಸಮಿತಿ.

2. ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ಪರಿಹಾರ (RODTEP) ಯೋಜನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ದೆಹಲಿಯಲ್ಲಿ ಮಧ್ಯಪಾನ ಮಾಡುವ ವಯಸ್ಸನ್ನು 21 ಕ್ಕೆ ಇಳಿಸಲಾಗಿದೆ.

2. ಸರ್ಕಾರಿ ಒಪ್ಪಂದಗಳಲ್ಲಿ ಕೆಲಸ ಮಾಡುವವರು ಕೌಶಲ್ಯ ಪ್ರಮಾಣಪತ್ರ ಹೊಂದುವುದು ಕಡ್ಡಾಯ.

3. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಂಡುಬಂದ ಬ್ಯಾಕ್ಟೀರಿಯಾಗೆ ಭಾರತೀಯ ವಿಜ್ಞಾನಿಯ ಹೆಸರಿಡಲಾಗಿದೆ.

4. ಗಾಂಧಿ ಶಾಂತಿ ಪ್ರಶಸ್ತಿ.

5. ಇಂಫಾರ್ಮೇಷನ್ ಸೊಸೈಟಿ ಫೋರಂ 2021 ರ ಕುರಿತು ವಿಶ್ವ ಶೃಂಗಸಭೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು:

ಮಹಿಳೆಯರ ಬಗೆಗಿನ ಸ್ಟೀರಿಯೊಟೈಪ್ಸ್  / ಪೂರ್ವಗ್ರಹ ಪೀಡಿತ ಮನೋಭಾವದ ವಿರುದ್ಧದ ಸುಧಾರಣೆಯ ಕುರಿತು ವರಿಷ್ಠ ನ್ಯಾಯಾಲಯದಲ್ಲಿ ಚರ್ಚೆ:


(Corrective voice from top court against stereotyping women)

ಸಂದರ್ಭ:

ಸುಪ್ರೀಂ ಕೋರ್ಟ್‌ನ ತನ್ನ ಇತ್ತೀಚಿನ ತೀರ್ಪಿನಲ್ಲಿ:

 • ನ್ಯಾಯಾಧೀಶರು ಲಿಂಗ ತಾರತಮ್ಯವನ್ನು ಸೂಚಿಸುವ ರೂಢಿಗತ ಟೀಕೆಗಳನ್ನು ಮಾಡದಂತೆ ನಿಷೇಧಿಸಲಾಗಿದೆ.
 • ಲೈಂಗಿಕ ಅಪರಾಧಿ ಮತ್ತು ಸಂತ್ರಸ್ತೆಯ ನಡುವೆ ರಾಜಿ ಮಾಡಿಕೊಳ್ಳಲು ಅಥವಾ ಮದುವೆಯಾಗುವಂತೆ ಆದೇಶ ನೀಡುವ ಪ್ರಯತ್ನಗಳನ್ನು ನ್ಯಾಯಾಲಯಗಳು ಮಾಡದಂತೆ ತಡೆಯಲಾಗಿದೆ.
 • ಮಧ್ಯಪ್ರದೇಶದ ಹೈಕೋರ್ಟ್ ಹೊರಡಿಸಿದ ಆದೇಶದ ವಿರುದ್ಧದ ಮೇಲ್ಮನವಿಯನ್ನು ಆಧರಿಸಿ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿದೆ. ಕಿರುಕುಳದ ಆರೋಪ ಹೊತ್ತಿರುವ ವ್ಯಕ್ತಿಗೆ ಸಂತ್ರಸ್ತೆಯು ರಾಖಿಯನ್ನು ಕಟ್ಟುವಂತೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶಿಸಿತ್ತು.

ಇದರ ಅವಶ್ಯಕತೆ:

ಮಾರ್ಚ್ 1 ರಂದು ನಡೆದ ವರ್ಚುವಲ್ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಯವರು , ಅತ್ಯಾಚಾರ ಆರೋಪಿಯ ಪರ ವಕೀಲರನ್ನು ನಿಮ್ಮ ಆಪಾದಿತ ಕಕ್ಷಿದಾರನು ಸಂತ್ರಸ್ತ ಮಹಿಳೆಯನ್ನು ಮದುವೆಯಾಗುತ್ತಾನೆಯೇ? ಎಂದು ಕೇಳಿದ ನಂತರ ಬಂದಂತಹ ಸರ್ವತೋಮುಖ ಟೀಕೆಗಳ ನಂತರದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಬಂದಿದೆ.

ಈ ಕ್ರಮಗಳ ಅವಶ್ಯಕತೆ:

 • ಈ ರೀತಿ ಸುಪ್ರೀಂ ಕೋರ್ಟ್ ಮಾಡಿದ ಲಿಂಗ ರೂಢಿಗತ ಕಾಮೆಂಟ್‌ಗಳಿಂದಾಗಿ ಲೈಂಗಿಕ ಅಪರಾಧಗಳ ಗಂಭೀರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಲಿಪಶು / ಸಂತ್ರಸ್ತರನ್ನು ಮತ್ತು ಅವರ ನೋವನ್ನು ಅತ್ಯಲ್ಪವಾಗಿಸುತ್ತದೆ ಅಥವಾ ಅವರ ನೋವಿಗೆ ಬೆಲೆ ಇಲ್ಲದಂತಾಗುತ್ತದೆ.
 • ನ್ಯಾಯಾಲಯದಲ್ಲಿ ಅಂತಹ ಆದೇಶ ಅಥವಾ ಅಭಿವ್ಯಕ್ತಿಯ ಒಂದು ಉದಾಹರಣೆಯೂ ಸಹ ದೇಶದ ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ, ಮತ್ತು ಎಲ್ಲರಿಗೂ, ವಿಶೇಷವಾಗಿ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರಿಗೆ (ಗಂಭೀರ ಅಪರಾಧಗಳಿಂದ ಹಿಡಿದು ಸಣ್ಣ ಅಪರಾಧಗಳವರೆಗೆ). ನ್ಯಾಯಯುತ ನ್ಯಾಯದ ಖಾತರಿಯನ್ನು ದುರ್ಬಲಗೊಳಿಸುತ್ತದೆ.

ಲಿಂಗ ರೂಢಿಗತ ದೃಷ್ಟಿಕೋನವನ್ನು ದಂಡಿಸಿದ ಗಮನಾರ್ಹ ತೀರ್ಪುಗಳು:

 • ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಕುರಿತು ವಿಶಾಖಾ ಮಾರ್ಗಸೂಚಿಗಳನ್ನು ರೂಪಿಸುವುದು.
 • ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಐತಿಹಾಸಿಕ ತೀರ್ಪು ಸಶಸ್ತ್ರ ಪಡೆಗಳ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗಕ್ಕೆ ಪ್ರವೇಶ ಪಡೆಯಲು ಸಮಾನ ಅವಕಾಶವನ್ನು ನೀಡುತ್ತದೆ. ಇದರಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್, ಅವರು ‘ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ದುರ್ಬಲರಾಗಿದ್ದಾರೆ’ ಎಂಬ ಸಂಸ್ಥೆಯ ಹೇಳಿಕೆಯನ್ನು ನಿರಾಕರಿಸಿದರು.
 • ಅನುಜ್ ಗರ್ಗ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ‘ರೊಮ್ಯಾಂಟಿಕ್ ಪಿತೃತ್ವ’ ಎಂಬ ಕಲ್ಪನೆಯನ್ನು ಖಂಡಿಸಿತು, ಇದರಲ್ಲಿ ಪ್ರಾಯೋಗಿಕವಾಗಿ ಮಹಿಳೆಯರನ್ನು ಸ್ಥಾನಮಾನದ ಪೀಠದ ಮೇಲೆ ಅಲ್ಲ ಬದಲಿಗೆ ಪಂಜರದಲ್ಲಿರಿಸಲಾಗುತ್ತದೆ ಎಂದು ತೀರ್ಪು ನೀಡಿತ್ತು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಗೆ ಸಂಬಂಧಿಸಿದ ಪ್ರಮುಖ ಅಂಶಗಳು.

ಮತದಾರರು ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (VVPAT):


(Voter Verifiable Paper Audit Trail -VVPAT)

 ಸಂದರ್ಭ:

ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಎಲ್ಲಾ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳೊಂದಿಗೆ (EVM) ಮತದಾರರು ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ ಅನ್ನು (Voter Verifiable Paper Audit Trail -VVPAT) ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಏನಿದು VVPAT?

 • ಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (VVPAT) ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (EVM) ಬಳಸುವ ಮತದಾರರಿಗೆ ಪ್ರತಿಕ್ರಿಯೆ ನೀಡುವ ಒಂದು ವಿಧಾನವಾಗಿದೆ.
 • VVPATಸ್ವತಂತ್ರ ಪರಿಶೀಲನಾ ವ್ಯವಸ್ಥೆಯನ್ನು ಮತದಾರರಿಗೆ ಒದಗಿಸುತ್ತದೆ, ಅದರಂತೆ ಇದನ್ನು ಮತದಾರರು ತಮ್ಮ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೆ ಎಂದು ಪರಿಶೀಲಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ, ಸಂಗ್ರಹಿಸಿದ ಎಲೆಕ್ಟ್ರಾನಿಕ್ ಫಲಿತಾಂಶಗಳ ಲೆಕ್ಕಪರಿಶೋಧನೆಗೆ ಇದು ಒಂದು ಮಾರ್ಗವನ್ನು ಸಹ ಒದಗಿಸುತ್ತದೆ.
 • ಇದರಲ್ಲಿ, ಯಾವ ಅಭ್ಯರ್ಥಿಗೆ ಮತ ಚಲಾಯಿಸಲಾಗಿದೆ ಮತ್ತು ಪಕ್ಷ ಅಥವಾ ಅಭ್ಯರ್ಥಿಯ ಚುನಾವಣಾ ಚಿಹ್ನೆಯನ್ನು ದಾಖಲಿಸಲಾಗುತ್ತದೆ.

vvpat

VVPAT ಗಳ ಮಹತ್ವ ಮತ್ತು ಅವಶ್ಯಕತೆ:

 • ಎಲೆಕ್ಟ್ರಾನಿಕ್ ಮತದಾನ ಯಂತ್ರದ ಅಸಮರ್ಪಕ ಕಾರ್ಯಗಳು ಅಥವಾ ಚುನಾವಣಾ ವಂಚನೆಯನ್ನು ಕಂಡುಹಿಡಿಯಲು ವಿವಿಪಿಎಟಿ ಸಹಾಯ ಮಾಡುತ್ತದೆ.
 • ಸಂಗ್ರಹಿಸಿದ ಎಲೆಕ್ಟ್ರಾನಿಕ್ ಫಲಿತಾಂಶಗಳ ಲೆಕ್ಕಪರಿಶೋಧನೆಗೆ ಇದು ಒಂದು ಮಾರ್ಗವನ್ನು ಒದಗಿಸುತ್ತದೆ. ಮತಗಳನ್ನು ಬದಲಾಯಿಸಲು ಅಥವಾ ನಾಶಮಾಡಲು ಇದು ಹೆಚ್ಚುವರಿ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
 • VVPAT ವ್ಯವಸ್ಥೆಯೊಂದಿಗಿನ EVM ಗಳು ಮತದಾನ ವ್ಯವಸ್ಥೆಯ ನಿಖರತೆಯನ್ನು ಸಂಪೂರ್ಣ ಪಾರದರ್ಶಕತೆಯಿಂದ ಖಚಿತಪಡಿಸುತ್ತವೆ ಮತ್ತು ಮತದಾರರ ವಿಶ್ವಾಸವನ್ನು ಪುನಃಸ್ಥಾಪಿಸುತ್ತವೆ.
 • EVMಗಳು ಮತ್ತು VVPATಗಳು ಚುನಾವಣಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ ಏಕೆಂದರೆ EVMಗಳಲ್ಲಿ ಮತಗಳನ್ನು ಎಣಿಸುವುದು ಕಾಗದದ ಮತಪತ್ರಗಳನ್ನು ಎಣಿಸುವುದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

 

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಪೂಜಾ / ಪ್ರಾರ್ಥನಾ ಸ್ಥಳಗಳ ಕಾಯ್ದೆ:


(Places of Worship Act)

ಸಂದರ್ಭ:

‘ಪೂಜಾ / ಪ್ರಾರ್ಥನಾ ಸ್ಥಳ’ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಲಖನೌದ 350 ವರ್ಷದ ಟೀಲಿವಾಲಿ ಮಸೀದಿಯ’ ಸಹ-ಮುತಾವಲ್ಲಿ ಯಾದ ವಾಸಿಫ್ ಹಸನ್ ನ್ಯಾಯಾಲಯವನ್ನುಕೋರಿದ್ದಾರೆ.

ಅರ್ಜಿದಾರರು ಈ ಅರ್ಜಿಯ ಕುಚೇಷ್ಟೆಯ ಅರ್ಜಿಯಾಗಿದೆ ಎಂದು ಹೇಳುವ ಮೂಲಕ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿದ್ದಾರೆ, ಮತ್ತು ಇದು ಮುಸ್ಲಿಂ ಸಮುದಾಯವನ್ನು ಭಾರತದ ಇತರ ಧಾರ್ಮಿಕ ಸಮುದಾಯಗಳಿಂದ ಪ್ರತ್ಯೇಕ ವರ್ಗವಾಗಿ ಹೊರಗಿಡುವ ಗುರಿಯನ್ನು ಹೊಂದಿದೆ ಹಾಗೂ ಭಾರತದ ಜೀವಾಳವಾದ ಜಾತ್ಯತೀತತೆ ಮತ್ತು ಧಾರ್ಮಿಕ ಸಹಿಷ್ಣುತೆ ಮನೋಭಾವಕ್ಕೆ ಹಾನಿಯನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಏನಿದು ಸಮಸ್ಯೆ?

 • 1991 ರಲ್ಲಿ ಜಾರಿಗೆ ಬಂದ ಪೂಜಾ ಸ್ಥಳ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸ್ಪಂದಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೋರಿದೆ. ಈ ಕಾಯಿದೆಯಲ್ಲಿ, ಆಗಸ್ಟ್ 15, 1947 ರಂತೆ ಧಾರ್ಮಿಕ ಸ್ಥಳಗಳನ್ನು ಸ್ಥಗಿತಗೊಳಿಸಲು / ಮುಚ್ಚಲು ಅವಕಾಶ ಕಲ್ಪಿಸಲಾಗಿದೆ.
 • ಪೂಜಾ ಸ್ಥಳ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಇದರಲ್ಲಿ ಶಾಸನವನ್ನು “ಅನಿಯಂತ್ರಿತ, ಅತಾರ್ಕಿಕ ಮತ್ತು ಪುನರಾವಲೋಕನ” (“arbitrary, irrational and retrospective”)ಎಂದು ವಿವರಿಸಲಾಗಿದೆ.

ಈ ಕಾಯಿದೆಯ ಉದ್ದೇಶಗಳು ಯಾವವು?

 • 1947 ರ ಆಗಸ್ಟ್ 15 ರಂದು ಅಸ್ತಿತ್ವದಲ್ಲಿ ಇದ್ದಂತೆ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಸ್ಥಗಿತಗೊಳಿಸುವುದು ಈ ಕಾಯಿದೆಯ ಉದ್ದೇಶವಾಗಿತ್ತು.
 • ಅಂದಿನ ದಿನಾಂಕದಲ್ಲಿ ಅಸ್ತಿತ್ವದಲ್ಲಿದ್ದಂತೆ, ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಕಾಪಾಡಿಕೊಳ್ಳಲು ಹಾಗೂ ನಿರ್ವಹಿಸಲು ಈ ಕಾಯಿದೆಯು ಅವಕಾಶ ನೀಡುತ್ತದೆ.
 • ಯಾವುದೇ ಗುಂಪಿನ ಪೂಜಾ ಸ್ಥಳದ ಹಿಂದಿನ ಸ್ಥಿತಿಯ ಬಗ್ಗೆ ಯಾವುದೇ ಪೂರ್ವ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಆ ರಚನೆ ಅಥವಾ ಭೂಮಿಯಲ್ಲಿ ಹೊಸ ಹಕ್ಕುಗಳನ್ನು ನೀಡುವುದನ್ನು ನಿಲ್ಲಿಸುವುದು ಇದರ ಉದ್ದೇಶವಾಗಿತ್ತು.
 • ಈ ಕಾನೂನು ದೀರ್ಘಕಾಲೀನ ಕೋಮು ಸೌಹಾರ್ದತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಪ್ರಮುಖ ಲಕ್ಷಣಗಳು:

 •  ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಆಗಸ್ಟ್ 15, 1947 ರಂದು ಇದ್ದಂತೆಯೇ ಇರುತ್ತದೆ ಎಂದು ಈ ಕಾಯಿದೆಯು ಘೋಷಿಸುತ್ತದೆ.
 • ಯಾವುದೇ ವ್ಯಕ್ತಿಯು ಯಾವುದೇ ಧಾರ್ಮಿಕ ಪಂಥದ ಪೂಜಾ ಸ್ಥಳವನ್ನು ಬೇರೆ ಪಂಥ ಅಥವಾ ವರ್ಗಕ್ಕೆ ಬದಲಾಯಿಸಬಾರದು ಎಂದು ಅದು ಹೇಳುತ್ತದೆ.
 • ಈ ಶಾಸನದ ಪ್ರಕಾರ, ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿರುವ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಪರಿವರ್ತಿಸುವ ಬಗ್ಗೆ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಇತರ ಪ್ರಾಧಿಕಾರದ ಮುಂದೆ ಬಾಕಿ ಇರುವ ಯಾವುದೇ ಮೊಕದ್ದಮೆ, ಮೇಲ್ಮನವಿ ಅಥವಾ ಇತರ ಕ್ರಮಗಳು ಈ ಕಾನೂನು ಜಾರಿಗೆ ಬಂದ ಕೂಡಲೇ ಬರ್ಖಾಸ್ತು ಗೊಳ್ಳುತ್ತವೆ. ನಂತರ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

ವಿನಾಯಿತಿಗಳು:

ಈ ನಿಬಂಧನೆಗಳು ಈ ಕೆಳಗಿನ ಸಂದರ್ಭಗಳಲ್ಲಿ ಅನ್ವಯಿಸುವುದಿಲ್ಲ:

 • ಪುರಾತನ ಮತ್ತು ಐತಿಹಾಸಿಕ ಸ್ಮಾರಕ ಅಥವಾ ಯಾವುದೇ ಪುರಾತತ್ತ್ವ ಶಾಸ್ತ್ರ ಸ್ಥಳಗಳು ಅಥವಾ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ, 1958 ರ ಅಡಿಯಲ್ಲಿ ಬರುವ ಯಾವುದೇ ಪೂಜಾ ಸ್ಥಳಗಳು.
 • ಈ ಕಾಯ್ದೆಯ ಪ್ರಾರಂಭದ ಮೊದಲು, ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಇತರ ಪ್ರಾಧಿಕಾರದಿಂದ ಯಾವುದೇ ವಿಷಯ, ಮೇಲ್ಮನವಿ ಅಥವಾ ಇತರ ಕ್ರಮಗಳನ್ನು ಅಂತಿಮಗೊಳಿಸಿ, ತೀರ್ಮಾನಿಸಿ ಅಥವಾ ಒಪ್ಪಿಗೆಯ ಮೂಲಕ ವಿಲೇವಾರಿ ಮಾಡಲಾದ ಯಾವುದೇ ಸ್ಥಳದ ಪರಿವರ್ತನೆ.
 • ಉತ್ತರ ಪ್ರದೇಶದ ರಾಜ್ಯದ ಅಯೋಧ್ಯೆಯಲ್ಲಿರುವ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸ್ಥಳ ಅಥವಾ ಪೂಜಾ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ಮೊಕದ್ದಮೆ, ಮೇಲ್ಮನವಿ ಅಥವಾ ಇತರ ಕ್ರಮಗಳಿಗೆ ಈ ಕಾಯಿದೆ ಅನ್ವಯಿಸುವುದಿಲ್ಲ. ಈ ಕಾಯಿದೆಯ ನಿಬಂಧನೆಗಳು ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇಲೆ ಪರಿಣಾಮ ಬೀರುತ್ತವೆ.

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಯೆಮನ್‌ನ ಹೌತಿ ಬಂಡುಕೋರರ ಮುಂದೆ ಕದನ ವಿರಾಮ ಯೋಜನೆಯನ್ನು ಪ್ರಸ್ತುತಪಡಿಸಿದ ರಿಯಾದ್:


(Riyadh presents ceasefire plan to Yemen’s Houthis)

ಸಂದರ್ಭ:

ಯೆಮನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಸೌದಿ ಅರೇಬಿಯಾ ಹೊಸ ಶಾಂತಿ ಉಪಕ್ರಮವನ್ನು ಮಂಡಿಸಿದೆ.

ಶಾಂತಿ ಉಪಕ್ರಮವು ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿದೆ:

 • ವಿಶ್ವಸಂಸ್ಥೆಯ ಕಣ್ಗಾವಲು ಅಡಿಯಲ್ಲಿ ದೇಶಾದ್ಯಂತ ಕದನ ವಿರಾಮ ಜಾರಿಗೊಳಿಸುವುದು ಮತ್ತು ವಾಯು ಮತ್ತು ಸಮುದ್ರ ಮಾರ್ಗಗಳನ್ನು ಪುನಃ ತೆರೆಯುವುದು.
 • ಸನಾ ವಿಮಾನ ನಿಲ್ದಾಣವನ್ನು ಪುನಃ ಕಾರ್ಯಾಚರಣೆಗೆ ತೆರೆಯುವುದು ಮತ್ತು ಹೋಡಿಡಾ (Hodeidah) ಬಂದರಿನ ಮೂಲಕ ಇಂಧನ ಮತ್ತು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದು. ಈ ಎರಡೂ ಸ್ಥಳಗಳನ್ನು ಪ್ರಸ್ತುತ ರಿಯಾದ್‌ನ ಶತ್ರುಗಳು, ಅಂದರೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಿಯಂತ್ರಿಸುತ್ತಿದ್ದಾರೆ.
 • ಸೌದಿ ಬೆಂಬಲಿತ ಸರ್ಕಾರ ಮತ್ತು ಹೌತಿ (Houthis) ಬಂಡುಕೋರರ ನಡುವೆ ರಾಜಕೀಯ ಮಾತುಕತೆಗಳನ್ನು ಪುನರಾರಂಭಿಸುವುದು.

ಯಮನ್ ನಲ್ಲಿನ ಯುದ್ಧದ ಹಿನ್ನೆಲೆ:

 • ಯೆಮನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬೇರುಗಳನ್ನು 2011 ರ ಅರಬ್ ವಸಂತ ಅಥವಾ ಅರಬ್ ದಂಗೆಯಲ್ಲಿ ಕಂಡುಹಿಡಿಯಬಹುದು. ಈ ಸಮಯದಲ್ಲಿ ನಡೆದ ಒಂದು ದಂಗೆಯು ದೀರ್ಘಕಾಲದವರೆಗೆ ದೇಶವನ್ನು ಆಳುತ್ತಿದ್ದ ಸರ್ವಾಧಿಕಾರಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರಿಗೆ ತಮ್ಮ ಉಪಾಧ್ಯಕ್ಷ ಅಬ್ಡೆರಾಬು ಮನ್ಸೂರ್ ಹಾಡಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಒತ್ತಾಯಿಸಿತು.
 • ಈ ರಾಜಕೀಯ ಬದಲಾವಣೆಯು ಮಧ್ಯಪ್ರಾಚ್ಯದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಯೆಮನ್‌ಗೆ ಸ್ಥಿರತೆಯನ್ನು ತಂದು ಕೊಡಬೇಕಾಗಿತ್ತು, ಆದರೆ ಅಧ್ಯಕ್ಷ ಹಾಡಿಗೆ ಭಯೋತ್ಪಾದಕ ದಾಳಿ, ಭ್ರಷ್ಟಾಚಾರ, ಆಹಾರ ಅಭದ್ರತೆ, ಮತ್ತು ಮಾಜಿ ಅಧ್ಯಕ್ಷ ಸಲೇಹ್‌ಗೆ ಅನೇಕ ಮಿಲಿಟರಿ ಅಧಿಕಾರಿಗಳ ನಿಷ್ಠೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುವಲ್ಲಿಯೆ ಹೆಣಗಾಡಬೇಕಾಯಿತು.
 • ಹೌತಿ ಶಿಯಾ ಮುಸ್ಲಿಂ ಬಂಡಾಯ ಆಂದೋಲನವು ಹೊಸ ಅಧ್ಯಕ್ಷರ ದೌರ್ಬಲ್ಯದ ಲಾಭವನ್ನು ಪಡೆದುಕೊಂಡು, ಉತ್ತರ ಸಾಡಾ (Saada province) ಪ್ರಾಂತ್ಯ ಮತ್ತು ಅದರ ನೆರೆಯ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ ನಂತರ 2014 ರಲ್ಲಿ ಯೆಮನ್‌ನಲ್ಲಿ ಪ್ರಸ್ತುತ ಸಂಘರ್ಷವು ಪ್ರಾರಂಭವಾಯಿತು,
 • ಹೌತಿ ಎಂಬುದು ಜೈದಿ ಶಿಯಾ ಮುಸ್ಲಿಮರ ಗುಂಪಾಗಿದ್ದು, ಇವರು ಈ ಪ್ರದೇಶದಲ್ಲಿ ಸುಮಾರು 1,000 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದರು.

ಯೆಮನ್‌ನಲ್ಲಿ ಸೌದಿ ಅರೇಬಿಯಾ ಹಸ್ತಕ್ಷೇಪಕ್ಕೆ ಕಾರಣವೇನು?

ಯೆಮೆನ್ ರಾಜಧಾನಿ ‘ಸನಾ’ವನ್ನು ಶಿಯಾ ಹೌತಿ ಬಂಡುಕೋರರು ವಶಪಡಿಸಿಕೊಂಡ ನಂತರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಅಧ್ಯಕ್ಷ ಹಾಡಿ ಸರ್ಕಾರವನ್ನು ದೇಶದ ದಕ್ಷಿಣ ಭಾಗಕ್ಕೆ ಸೀಮಿತಗೊಳಿಸಿದ ನಂತರ ಸೌದಿ ಅರೇಬಿಯಾ ಯೆಮನ್‌ನಲ್ಲಿ ಮಧ್ಯಪ್ರವೇಶಿಸಿದೆ.

ಯೆಮನ್‌ನಲ್ಲಿ ‘ಮಾನವೀಯ ಪರಿಸ್ಥಿತಿ’ ಎಷ್ಟು ಕೆಟ್ಟದಾಗಿದೆ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2015 ರಲ್ಲಿ ಸೌದಿ ಹಸ್ತಕ್ಷೇಪದ ನಂತರ ಯೆಮನ್‌ನಲ್ಲಿ ಕನಿಷ್ಠ 10,000 ಜನರು ಸಾವನ್ನಪ್ಪಿದ್ದಾರೆ. ಸಮ್ಮಿಶ್ರ ಪಡೆಗಳ ವಾಯುದಾಳಿಯು ದೇಶದ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ದಿಗ್ಬಂಧನವು ಆಹಾರ ಮತ್ತು  ಔಷಧಿಗಳ ಪೂರೈಕೆಯನ್ನು ಕಡಿಮೆಗೊಳಿಸಿದೆ ಇದು ಯೆಮನ್‌ ಅನ್ನು ಮಾನವೀಯ ದುರಂತಕ್ಕೆ ತಳ್ಳಿದೆ. ಯಾವುದೇ ಸಹಾಯವು ಶೀಘ್ರದಲ್ಲೇ ಅವರನ್ನು ತಲುಪದಿದ್ದರೆ, ಸುಮಾರು 12 ಮಿಲಿಯನ್ ಜನರು ಹಸಿವಿನಿಂದ ಬಳಲುವ ಅಪಾಯಕ್ಕೊಳಗಾಗ ಬಲ್ಲವರಾಗಿದ್ದಾರೆ. ದೇಶವು ಭಾರಿ ಕಾಲರ ರೋಗವನ್ನು ಸಹ ಎದುರಿಸಿದೆ ತಡೆಗಟ್ಟಬಹುದಾದ ರೋಗಗಳಿಂದಲೂ ಸಹ ಯಮನ್ ನಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಒಂದು ಮಗು ಸಾಯುತ್ತಿದೆ ಎಂದು ಯುನಿಸೆಫ್ ಹೇಳಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಅಂತರ್ಗತ ಬೆಳವಣಿಗೆ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳು.

ಯುನಿವರ್ಸಲ್ ಬ್ಯಾಂಕುಗಳು, ಮತ್ತು ಸಣ್ಣ ಹಣಕಾಸು ಬ್ಯಾಂಕುಗಳ ಅರ್ಜಿಗಳನ್ನು ಮೌಲ್ಯಮಾಪನ ಮಾಡಲು ಸಮಿತಿ:


(Panel to evaluate applications for Universal Banks, Small Finance Banks)

ಸಂದರ್ಭ:

ಸಾರ್ವತ್ರಿಕ/ ಯುನಿವರ್ಸಲ್ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಸಲ್ಲಿಸಿದ ಅರ್ಜಿಗಳನ್ನು ಮೌಲ್ಯಮಾಪನ ಮಾಡಲು ಶ್ಯಾಮಲ ಗೋಪಿನಾಥ್ ರವರ ಅಧ್ಯಕ್ಷತೆಯಲ್ಲಿ ಬಾಹ್ಯ ಸಲಹಾ ಸ್ಥಾಯಿ ಸಮಿತಿಯನ್ನು(Standing External Advisory Committee) ರಚಿಸುವುದಾಗಿ ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿದೆ.

ಈ ಸಮಿತಿಯ ರಚನೆಯು ಬ್ಯಾಂಕ್ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ನಿರಂತರತೆಯ ಆಧಾರದ ಮೇಲೆ ಬ್ಯಾಂಕಿಂಗ್ ಪರವಾನಗಿಗಳನ್ನು ನೀಡುವ ಕೇಂದ್ರೀಯ ಬ್ಯಾಂಕಿನ ಪೂರ್ವ ಘೋಷಿತ ಯೋಜನೆಯ ಭಾಗವಾಗಿದೆ, ಇದನ್ನು ಸಾಮಾನ್ಯವಾಗಿ ‘ಆನ್-ಟ್ಯಾಪ್’  (On-Tap) ಪರವಾನಗಿ ಎಂದು ಕರೆಯಲಾಗುತ್ತದೆ.

ಆನ್ ಟ್ಯಾಪ್’ ಪರವಾನಗಿ ಎಂದರೇನು?

ಆನ್-ಟ್ಯಾಪ್ ಪರವಾನಗಿ (On-Tap licensing) ಎಂದರೆ ಬ್ಯಾಂಕಿಂಗ್ ಪರವಾನಗಿ ನೀಡುವ ಆರ್‌ಬಿಐನ ಏಕಗವಾಕ್ಷಿ ವೇದಿಕೆಯಾಗಿದ್ದು ಇದು ವರ್ಷದುದ್ದಕ್ಕೂ ತೆರೆದಿರುತ್ತದೆ.

ಏನಿದು ಯುನಿವರ್ಸಲ್ ಬ್ಯಾಂಕಿಂಗ್?

 ಯುನಿವರ್ಸಲ್ ಬ್ಯಾಂಕಿಂಗ್ ಎನ್ನುವುದು ಬ್ಯಾಂಕಿಂಗ್ ವ್ಯವಸ್ಥೆಯಾಗಿದ್ದು, ಹೂಡಿಕೆ ಬ್ಯಾಂಕಿಂಗ್, ವಾಣಿಜ್ಯ ಬ್ಯಾಂಕಿಂಗ್, ಅಭಿವೃದ್ಧಿ ಬ್ಯಾಂಕಿಂಗ್, ವಿಮೆ ಮತ್ತು ವ್ಯಾಪಾರಿ ಬ್ಯಾಂಕಿಂಗ್, ಮ್ಯೂಚುವಲ್ ಫಂಡ್, ಅಪವರ್ತನ, ವಸತಿ ಹಣಕಾಸು, ವಿಮೆ ಮುಂತಾದ ಇತರ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

RBI ಯುನಿವರ್ಸಲ್ ಬ್ಯಾಂಕಿಂಗ್ ಪರವಾನಿಗೆ ಕುರಿತ ಮಾರ್ಗಸೂಚಿಗಳು:

 • ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಹಿರಿಯ ಮಟ್ಟದಲ್ಲಿ ಕೆಲಸ ಮಾಡಿದ 10 ವರ್ಷಗಳ ಅನುಭವ ಹೊಂದಿರುವ ಭಾರತದ ನಿವಾಸಿ / ವೃತ್ತಿಪರ ವ್ಯಕ್ತಿಯಾಗಿರಬೇಕು.
 • ಬ್ಯಾಂಕಿನ ಆರಂಭಿಕ ಕನಿಷ್ಠ ಪಾವತಿಸಿದ ಮತದಾನ ಇಕ್ವಿಟಿ ಬಂಡವಾಳ ‘ಐದು ಬಿಲಿಯನ್’ ಆಗಿರಬೇಕು. ಅದರ ನಂತರ, ಬ್ಯಾಂಕ್ ಎಲ್ಲಾ ಸಮಯದಲ್ಲೂ ಕನಿಷ್ಠ ಐದು ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುತ್ತದೆ.
 • ವೈಯಕ್ತಿಕ ಪ್ರವರ್ತಕರು ಅಥವಾ ಏಕೈಕ ಪ್ರವರ್ತಕರು / ಕನ್ವರ್ಟಿಬಲ್ ಪ್ರವರ್ತಕರು ಅಥವಾ ಘಟಕಗಳು, ಇತರ ಯಾವುದೇ ಗುಂಪಿನ ಭಾಗವಾಗಿಲ್ಲ, ಅವರು ಆಪರೇಟಿವ್ ಫೈನಾನ್ಶಿಯಲ್ ಹೋಲ್ಡಿಂಗ್ ಕಂಪನಿಯ (NOFHC) ಸ್ಥಿತಿಯನ್ನು ಪೂರೈಸುವ ಅಗತ್ಯವಿಲ್ಲ.
 • NOFHC ಯ ಒಟ್ಟು ಪಾವತಿಸಿದ ಈಕ್ವಿಟಿ ಬಂಡವಾಳದ ಕನಿಷ್ಠ 51 ಪ್ರತಿಶತವು ಪ್ರವರ್ತಕ / ಪ್ರವರ್ತಕ ಗುಂಪಿನ ಒಡೆತನದಲ್ಲಿದೆ. ಪ್ರವರ್ತಕ / ಪ್ರವರ್ತಕ ಗುಂಪನ್ನು ಹೊರತುಪಡಿಸಿ ಬೇರೆ ಯಾವುದೇ ಷೇರುದಾರರು NOFHC ಯಲ್ಲಿ ಗಮನಾರ್ಹ ಪ್ರಭಾವ ಮತ್ತು ನಿಯಂತ್ರಣವನ್ನು ಹೊಂದಿರತಕ್ಕದ್ದಲ್ಲ.
 • ಬ್ಯಾಂಕ್ ವ್ಯವಹಾರವನ್ನು ಪ್ರಾರಂಭಿಸಿದ ಆರು ವರ್ಷಗಳಲ್ಲಿ ಬ್ಯಾಂಕ್ ತನ್ನ ಷೇರುಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡುತ್ತದೆ.
 • ಬ್ಯಾಂಕ್ ತನ್ನ ಪ್ರವರ್ತಕರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರುವುದನ್ನು ನಿಷೇಧಿಸಲಾಗುವುದು, ಅಂದರೆ, ಶೇಕಡಾ 10 ಕ್ಕಿಂತ ಹೆಚ್ಚು ಷೇರುದಾರರು ಅಥವಾ ಬ್ಯಾಂಕಿನಲ್ಲಿ ಪಾವತಿಸಿದ ಇಕ್ವಿಟಿ ಹೊಂದಿರುವ ಪ್ರಮುಖ ಷೇರುದಾರರು ಅಥವಾ ಬ್ಯಾಂಕಿನ ಪ್ರವರ್ತಕರ ಸಂಬಂಧಿಕರು ಗಮನಾರ್ಹ ಪ್ರಭಾವ ಅಥವಾ ನಿಯಂತ್ರಣವನ್ನು ಹೊಂದಿರುವ ಘಟಕ ಗಳಿಗೆ ಯಾವುದೇ ಮಾನ್ಯತೆ ನೀಡದಂತೆ ತಡೆಯಲಾಗಿದೆ.
 • ಬ್ಯಾಂಕ್ ತನ್ನ ಒಟ್ಟು ಶಾಖೆಗಳಲ್ಲಿ ಕನಿಷ್ಠ 25 ಪ್ರತಿಶತ ಶಾಖೆಗಳನ್ನು ಬ್ಯಾಂಕಿಲ್ಲದ ಗ್ರಾಮೀಣ ಕೇಂದ್ರಗಳಲ್ಲಿ ತೆರೆಯಬೇಕು.
 • ಆದ್ಯತೆಯ ವಲಯದ ಸಾಲ ಗುರಿಗಳು ಮತ್ತು ಉಪ-ಗುರಿಗಳನ್ನು ಅಸ್ತಿತ್ವದಲ್ಲಿರುವ ದೇಶೀಯ ನಿಗದಿತ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಈ ಬ್ಯಾಂಕ್ ಸಹ ಅನುಸರಿಸಬೇಕು.
 • ಸ್ವತಂತ್ರ ನಿರ್ದೇಶಕರ ಸಂಖ್ಯೆ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಅಧಿಕವಾಗಿ ಇರಬೇಕು.
 • ರಿಸರ್ವ್ ಬ್ಯಾಂಕ್ ನೀಡಿದ ತಾತ್ವಿಕ ಅನುಮೋದನೆಯ ಸಿಂಧುತ್ವವು ಅನುಮೋದನೆ ನೀಡಿದ ದಿನಾಂಕದಿಂದ 18 ತಿಂಗಳುಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಅದರ ನಂತರ ಅದರ ಸಿಂಧುತ್ವವು ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ.

 

ವಿಷಯಗಳು: ಆರ್ಥಿಕತೆಯ ಮೇಲೆ ಉದಾರೀಕರಣದ ಪರಿಣಾಮ, ಕೈಗಾರಿಕಾ ನೀತಿಯಲ್ಲಿನ ಬದಲಾವಣೆಗಳು ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವ.

ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ಪರಿಹಾರ (RODTEP) ಯೋಜನೆ:


(Remission of Duties and Taxes on Export Products (RODTEP) scheme)

ಸಂದರ್ಭ:

ರಫ್ತು ಉತ್ಪನ್ನಗಳ ಮೇಲಿನ ಸುಂಕಗಳು ಮತ್ತು ತೆರಿಗೆಗಳ ವಿನಾಯಿತಿ’/ ಪರಿಹಾರ (Remission of Duties and Taxes on Export Products (RODTEP) scheme) ಯೋಜನೆಯಡಿ ರಫ್ತುದಾರರಿಗೆ ಪಾವತಿಸಬೇಕಾದ ಲಾಭದ ದರಗಳ ಕುರಿತು ಅಧಿಸೂಚನೆ ಬಿಡುಗಡೆಯಾಗಲು, ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕಾರಣ ಈ ಯೋಜನೆಯ ಅಸ್ತಿತ್ವಕ್ಕೆ ಬರುವಲ್ಲಿನ ‘ಆರಂಭಿಕ ತೊಂದರೆಗಳು’.

ಸಮಸ್ಯೆಗಳು ಯಾವುವು?

 • ತಡವಾಗಿ ಸೂಚಿಸಿದರೆ, ತಾಂತ್ರಿಕ ಸಮಿತಿಯು ಶಿಫಾರಸು ಮಾಡಿದ ದರಗಳಿಗಿಂತ ಲಾಭದ ದರಗಳು ಕಡಿಮೆಯಾಗಬಹುದು ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
 • ತೆರಿಗೆಗಳ ಅಸಮರ್ಪಕ ಪರಿಹಾರವು ರಫ್ತು ಉತ್ಪನ್ನಗಳಲ್ಲಿ ಉಳಿದಿರುವ ಸಾಕಾರ ತೆರಿಗೆಗಳನ್ನು ಸೇರಿಸುತ್ತದೆ ಮತ್ತು ಇದು ಭಾರತೀಯ ಕೈಗಾರಿಕೆಗಳು ವಿಶ್ವ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
 • ಸಾಂಕ್ರಾಮಿಕ ರೋಗದ ನಂತರ ಅಮೇರಿಕಾ ಮತ್ತು ಯುರೋಪಿಯನ್ ಒಕ್ಕೂಟದಂತಹ ಹಲವಾರು ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತೀಯ ರಫ್ತುದಾರರು ಈಗಾಗಲೇ ಬೇಡಿಕೆಯ ಅಸ್ಥಿರತೆಯೊಂದಿಗೆ ಹೋರಾಡುತ್ತಿದ್ದಾರೆ.

ಯೋಜನೆಯ ಕುರಿತು:

 • ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳಿಗೆ ಅನುಸಾರವಾಗಿರದ ‘ಮರ್ಚಂಡೈಸ್ ಎಕ್ಸ್‌ಪೋರ್ಟ್ಸ್ ಫ್ರಮ್ ಇಂಡಿಯಾ ಸ್ಕೀಮ್’ (Merchandise Exports from India Scheme-MEIS) ಗೆ ಬದಲಿಯಾಗಿ ಈ ಯೋಜನೆಯನ್ನು 2020 ರಲ್ಲಿ ಘೋಷಿಸಲಾಯಿತು.
 • ಯೋಜನೆಯಡಿಯಲ್ಲಿ, ರಫ್ತುದಾರರಿಗೆ ರಫ್ತು ಉತ್ಪನ್ನಗಳ’ ಮೇಲಿನ ‘ಲಗತ್ತಿಸಲಾದ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸುಂಕಗಳು ಅಥವಾ ತೆರಿಗೆಗಳನ್ನು’ ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ರಫ್ತುದಾರರಿಗೆ ಈ ತೆರಿಗೆಗಳನ್ನು ಮರುಪಾವತಿ ಮಾಡುತ್ತಿರಲಿಲ್ಲ ಆದ್ದರಿಂದ ಭಾರತದ ರಫ್ತುಗಳನ್ನು ಪ್ರತಿಕೂಲ ಪರಿಸ್ಥಿತಿಯಲ್ಲಿರಿಸಿದೆ.

ಮಹತ್ವ:

 • ಈ ಯೋಜನೆಯ ಮೂಲಕ, ಭಾರತೀಯ ರಫ್ತುದಾರರು ರಫ್ತಿಗೆ ಅಗತ್ಯವಾದ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಇದರ ಅಡಿಯಲ್ಲಿ, ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಅವಲಂಬಿಸುವ ಬದಲು, ರಫ್ತುದಾರರಿಗೆ ದೇಶದೊಳಗೆ ಕೈಗೆಟಕುವ ದರದಲ್ಲಿ ಪರೀಕ್ಷೆ ಮತ್ತು ಪ್ರಮಾಣೀಕರಣ ಲಭ್ಯವಾಗಲಿದೆ.
 • ಇದರ ಅಡಿಯಲ್ಲಿ, ರಫ್ತುದಾರರಿಗೆ ತೆರಿಗೆ ಮೌಲ್ಯಮಾಪನ ಪ್ರಕ್ರಿಯೆಯು ಸಂಪೂರ್ಣ ಸ್ವಯಂಚಾಲಿತವಾಗಿರುತ್ತದೆ. ಸ್ವಯಂಚಾಲಿತ ಮರುಪಾವತಿ ಮಾರ್ಗದ ಮೂಲಕ ವ್ಯಾಪಾರಗಳು GST ಮರುಪಾವತಿಗೆ ತಮ್ಮ ಪ್ರವೇಶವನ್ನು ಪಡೆಯುತ್ತವೆ.
 • ಇದು ದೇಶದ ಆರ್ಥಿಕತೆ ಮತ್ತು ಉದ್ಯಮಗಳಿಗೆ ಕಾರ್ಯ ಬಂಡವಾಳವನ್ನು ಹೆಚ್ಚಿಸುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ದೆಹಲಿಯಲ್ಲಿ ಮಧ್ಯಪಾನ ಮಾಡುವ ವಯಸ್ಸನ್ನು 21 ಕ್ಕೆ ಇಳಿಸಲಾಗಿದೆ:

 • ಹೊಸ ಅಬಕಾರಿ ನೀತಿಯಡಿ, ನಗರದಲ್ಲಿ ಮಧ್ಯಪಾನ ಮಾಡುವ ಕನಿಷ್ಠ ವಯಸ್ಸನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.
 • ಅಲ್ಲದೆ, ದೆಹಲಿಯಲ್ಲಿ ಯಾವುದೇ ಸರ್ಕಾರಿ ಮದ್ಯದಂಗಡಿಗಳು ಇರುವುದಿಲ್ಲ ಮತ್ತು ‘ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ’.

ಸರ್ಕಾರಿ ಒಪ್ಪಂದಗಳಲ್ಲಿ ಕೆಲಸ ಮಾಡುವವರು ಕೌಶಲ್ಯ ಪ್ರಮಾಣಪತ್ರ ಹೊಂದುವುದು ಕಡ್ಡಾಯ:

 • ಸರ್ಕಾರಿ ಒಪ್ಪಂದಗಳ ಅಡಿಯಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರು ಕೌಶಲ್ಯಗಳ ಅಧಿಕೃತ ಪ್ರಮಾಣಪತ್ರವನ್ನು ಹೊಂದಿರುವುದನ್ನು ಸರ್ಕಾರ ಕಡ್ಡಾಯಗೊಳಿಸಲು ನಿರ್ಧರಿಸಿದೆ.
 • ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಎಲ್ಲಾ ಸರ್ಕಾರಿ ಇಲಾಖೆಗಳು ತಮ್ಮ ಮೇಲ್ವಿಚಾರಣೆಯಲ್ಲಿ ನೀಡಲಾಗುವ ಎಲ್ಲಾ ಒಪ್ಪಂದಗಳಿಗೆ ಈ ಅಗತ್ಯವನ್ನು ಕಡ್ಡಾಯಗೊಳಿಸುವಂತೆ ಸೂಚಿಸಿದೆ.

ಇದರ ಅವಶ್ಯಕತೆ:

2018-19ರ ಆವರ್ತಕ ಕಾರ್ಮಿಕ ಬಲದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕೇವಲ 2.4% ರಷ್ಟು ಉದ್ಯೋಗಿಗಳು ಮಾತ್ರ ಔಪಚಾರಿಕವಾಗಿ ತರಬೇತಿ ಪಡೆದಿದ್ದಾರೆ.

 • ಸರ್ಕಾರಿ ಗುತ್ತಿಗೆದಾರರು ಸಾಮಾನ್ಯವಾಗಿ ಕಡಿಮೆ ವೇತನದ ಅನೌಪಚಾರಿಕ ಕಾರ್ಮಿಕರಿಗೆ ಆದ್ಯತೆ ನೀಡುವುದು ಇದಕ್ಕೆ ಕಾರಣವಾಗಿದೆ. ಇದರಲ್ಲಿ ಸರ್ಕಾರವು ತನ್ನ ಯೋಜನೆಗಳಿಗೆ ನುರಿತ ಮಾನವಶಕ್ತಿಯನ್ನು ಬಳಸದಂತೆ ಒತ್ತಾಯಿಸದೆ ಉದ್ಯೋಗಗಳಲ್ಲಿ ಕೌಶಲ್ಯಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ, ಇದು ದ್ವಂದ್ವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಂಡುಬಂದ ಬ್ಯಾಕ್ಟೀರಿಯಾಗೆ ಭಾರತೀಯ ವಿಜ್ಞಾನಿಯ ಹೆಸರಿಡಲಾಗಿದೆ:

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ನಾಲ್ಕು ಜಾತಿಯ ಬ್ಯಾಕ್ಟೀರಿಯಾಗಳನ್ನು ಕಂಡುಹಿಡಿಯಲಾಗಿದೆ, ಅವುಗಳಲ್ಲಿ ಒಂದನ್ನು ಮೆಥೈಲೋಬ್ಯಾಕ್ಟೀರಿಯಂ ಅಜಮಾಲಿ (Methylobacterium ajmalii) ಎಂದು, ಭಾರತೀಯ ಜೀವವೈವಿಧ್ಯ ವಿಜ್ಞಾನಿ ಸೈಯದ್ ಅಜ್ಮಲ್ ಖಾನ್ ಅವರ ಹೆಸರಿಡಲಾಗಿದೆ.

 • ಬ್ಯಾಕ್ಟೀರಿಯಾದ ಎಲ್ಲಾ ನಾಲ್ಕು ತಳಿಗಳು ಮೀಥೈಲೋಬ್ಯಾಕ್ಟೀರಿಯಾ ಕುಟುಂಬಕ್ಕೆ ಸೇರಿವೆ.
 • ಅದರ ತಳಿಗಳಲ್ಲಿ ಒಂದನ್ನು ಮೆಥೈಲೋರುಬ್ರಮ್ ರೊಡೇಶಿಯಾನಮ್ ಬ್ಯಾಕ್ಟೀರಿಯಾ (Methylorubrum rhodesianum bacteria) ಎಂದು ಗುರುತಿಸಲಾಗಿದೆ, ಮತ್ತು ಇತರ ಮೂರು ತಳಿಗಳನ್ನು ಇಲ್ಲಿಯವರೆಗೆ ಕಂಡುಹಿಡಿಯಲಾಗಿರಲಿಲ್ಲ.
 • ಈ ಬ್ಯಾಕ್ಟೀರಿಯಾಗಳು ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

ಗಾಂಧಿ ಶಾಂತಿ ಪ್ರಶಸ್ತಿ:

 • ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮುಜಿಬುರ್ ರಹಮಾನ್ ಮತ್ತು ಒಮಾನ್‌ನ ಮಾಜಿ ಸುಲ್ತಾನ್, ದಿವಂಗತ ಕಬೂಸ್ ಬಿನ್ ಸೈದ್ ಅಲ್ ಸೈದ್ ಅವರಿಗೆ ಕ್ರಮವಾಗಿ 2020 ಮತ್ತು 2019 ರ ಗಾಂಧಿ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
 •  ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ, ಲೋಕಸಭೆಯ ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕ, ಲೋಕಸಭೆಯ ಸ್ಪೀಕರ್ ಮತ್ತು ಸುಲಭ್ ಇಂಟರ್ನ್ಯಾಷನಲ್ ಸಂಸ್ಥಾಪಕರನ್ನು ಒಳಗೊಂಡ ತೀರ್ಪುಗಾರ ಮಂಡಳಿಯಿಂದ ಅವರನ್ನು ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಗಾಂಧಿ ಶಾಂತಿ ಪ್ರಶಸ್ತಿಯ ಕುರಿತು:

 • ಮಹಾತ್ಮ ಗಾಂಧಿಯವರ 125 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿನ ಸವಿನೆನಪಿಗಾಗಿ ಗಾಂಧಿ ಶಾಂತಿ ಪ್ರಶಸ್ತಿಯನ್ನು 1995 ರಲ್ಲಿ ಭಾರತ ಸರ್ಕಾರ ಸ್ಥಾಪಿಸಿತು.
 • ಅಹಿಂಸೆ ಮತ್ತು ಇತರ ಗಾಂಧಿವಾದಿ ಮಾರ್ಗಗಳ ಮೂಲಕ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ವ್ಯಕ್ತಿಗಳು ನೀಡಿದ ಕೊಡುಗೆಗಳಿಗಾಗಿ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ.
 • ಈ ಪ್ರಶಸ್ತಿಯು 1 ಕೋಟಿ ರೂ. ನಗದು ಬಹುಮಾನ, ಫಲಕ ಮತ್ತು ಸ್ಮರಣಿಕೆ ಮತ್ತು ಅತ್ಯುತ್ತಮ ಸಾಂಪ್ರದಾಯಿಕ ಕರಕುಶಲ / ಕೈಮಗ್ಗದಿಂದ ತಯಾರಿಸಿದ ಉಡುಗೊರೆಯನ್ನು ಒಳಗೊಂಡಿದೆ.
 • ಈ ಪ್ರಶಸ್ತಿಯು ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಮೀರಿದ ಎಲ್ಲ ವ್ಯಕ್ತಿಗಳಿಗೆ ಮುಕ್ತವಾಗಿದೆ.

ಇಂಫಾರ್ಮೇಷನ್ ಸೊಸೈಟಿ ಫೋರಂ 2021 ರ ಕುರಿತ ವಿಶ್ವ ಶೃಂಗಸಭೆ:

 •  WSIS ಫೋರಂ 2021 ರ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು (ICT) ಸಮುದಾಯದ ಅಭಿವೃದ್ಧಿಗಾಗಿನ ವಿಶ್ವದ ಅತಿದೊಡ್ಡ ವಾರ್ಷಿಕ ಕಾರ್ಯಕ್ರಮವಾಗಿದೆ.
 • ಇದನ್ನು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU), ಯುನೆಸ್ಕೋ, UNDP ಮತ್ತು UNCTAD ಒಟ್ಟಾಗಿ ಆಯೋಜಿಸಿವೆ.
 • ಈ ವೇದಿಕೆಯು ಬಹು-ಪಾಲುದಾರರ ಅನುಷ್ಠಾನ ಚಟುವಟಿಕೆಗಳ ಸಮನ್ವಯ, ಮಾಹಿತಿ ವಿನಿಮಯ, ಜ್ಞಾನದ ಸೃಷ್ಟಿ, ಉತ್ತಮ ಅಭ್ಯಾಸಗಳ ಹಂಚಿಕೆಗಾಗಿ ಸಮರ್ಥ ಕಾರ್ಯವಿಧಾನವೆಂದು ಸಾಬೀತಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos