Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 22 ಮಾರ್ಚ್ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 1:  

1. ತೋಮರ್ ಅರಸ ಇಮ್ಮಡಿ ಅನಂಗ್‌ಪಾಲ್ .

 

ಸಾಮಾನ್ಯ ಅಧ್ಯಯನ ಪತ್ರಿಕೆ 2: 

1. ಬಂಧನದಲ್ಲಿದ್ದಾಗ ವಕೀಲರ ಸೇವೆ ಪಡೆಯುವ ಹಕ್ಕು.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಅಂತರರಾಷ್ಟ್ರೀಯ ಅರಣ್ಯ ದಿನ.

2. ಹಿಮಾಚಲ ಪ್ರದೇಶದ ನೀರಿನ ಬಿಕ್ಕಟ್ಟು.

3. ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ಕುರಿತು ನ್ಯಾಯಾಲಯವು ಮಧ್ಯ ಪ್ರವೇಶಿಸಬೇಕೆಂದು ಕೋರಿದ ಕೇಂದ್ರ.

4. ಕೆನ್-ಬೆಟ್ವಾ ಅಂತರ್ ನದಿಜೋಡಣೆ ಆಣೆಕಟ್ಟು ಯೋಜನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಜಾಪಿ (Jaapi).

2. ಕ್ಸೋರೈ (Xorai).

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ತೋಮರ್ ಅರಸ ಇಮ್ಮಡಿ ಅನಂಗ್‌ಪಾಲ್ :


(Tomar king Anangpal II)

ಸಂದರ್ಭ:

ಸರ್ಕಾರವು ಇತ್ತೀಚೆಗೆ, 11 ನೇ ಶತಮಾನದ ತೋಮರ್ ದೊರೆ ಅನಂಗ್‌ಪಾಲ್ II ರವರ ಪರಂಪರೆಯನ್ನು ಜನಪ್ರಿಯಗೊಳಿಸಲು ಒಂದು ಸಮಿತಿಯನ್ನು ರಚಿಸಿದೆ.

ಅನಂಗ್‌ಪಾಲ್ II ಯಾರು?

 • ಅನಂಗ್‌ಪಾಲ್ II, 8 ಮತ್ತು 12 ನೇ ಶತಮಾನಗಳ ನಡುವೆ ಇಂದಿನ ದೆಹಲಿ ಮತ್ತು ಹರಿಯಾಣದ ಕೆಲವು ಭಾಗಗಳನ್ನು ಆಳುತ್ತಿದ್ದ ತೋಮರ್ ರಾಜವಂಶಕ್ಕೆ ಸೇರಿದ ಪ್ರಖ್ಯಾತ ಆಡಳಿತಗಾರ.
 • ಅನಂಗ್‌ಪಾಲ್ ತೋಮರ್ II ರ ನಂತರ ಅವರ ಮೊಮ್ಮಗ ಪೃಥ್ವಿರಾಜ್ ಚೌಹಾನ್, ಅಧಿಕಾರಕ್ಕೆ ಬಂದನು ಮುಂದೆ ಘುರಿದ್ ಪಡೆಗಳಿಂದ ತಾರೈನ್ ಕದನದಲ್ಲಿ (ಇಂದಿನ ಹರಿಯಾಣ) ಪರಾಜಿತನಾದನು, ಈ ವಿದ್ಯಮಾನವು 1192 ರಲ್ಲಿ ದೆಹಲಿ ಸುಲ್ತಾನ ರಾಜಮನೆತನದ ಆಳ್ವಿಕೆಗೆ ನಾಂದಿಯಾಯಿತು.
 • ತೋಮರ್ ರಾಜವಂಶವು 8 ನೇ ಶತಮಾನದಲ್ಲಿ ಅನಂಗ್‌ಪಾಲ್ ತೋಮರ್ II ರ ಆಳ್ವಿಕೆಯಲ್ಲಿ ತಮ್ಮ ರಾಜಧಾನಿಯನ್ನು ಧಿಲ್ಲಿಕಾಪುರಿ (ದೆಹಲಿ) ಗೆ ಸ್ಥಳಾಂತರಿಸಿತು.
 • ಅವರು ದೆಹಲಿಗೆ ಅದರ ಪ್ರಸ್ತುತ ಹೆಸರನ್ನು ನೀಡಿ ಅದನ್ನು ಜನರಿಂದ ಪುನರ್ವಸತಿ ಗೊಳಿಸಿದರು.
 • ಅವರು ಲಾಲ್ ಕೋಟ್ ಕೋಟೆ ಮತ್ತು ಅನಂಗ್ಟಾಲ್ ಬಾವೋಲಿಗಳನ್ನು ನಿರ್ಮಿಸಿದರು.

anangpal_II


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಬಂಧನದಲ್ಲಿದ್ದಾಗ ವಕೀಲರ ಸೇವೆ ಪಡೆಯುವ ಹಕ್ಕು:


(Right to counsel in custody)

ಸಂದರ್ಭ:

ಇತ್ತೀಚೆಗೆ ಬಂಧಿತ ಮುಂಬೈ ಪೊಲೀಸ್ ಅಧಿಕಾರಿಯಾದ ಸಚಿನ್ ವಾಜೆ ವಿಚಾರಣೆಯ ಸಮಯದಲ್ಲಿ ತನ್ನ ವಕೀಲರ ಉಪಸ್ಥಿತಿಯನ್ನು ಕೋರಿದ್ದಾರೆ, ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆಯು,(National Investigation Agency- NIA) ಈ ಒತ್ತಾಯದ ಬೇಡಿಕೆಯು ತನಿಖೆಗೆ ಅಡ್ಡಿಯಾಗುತ್ತದೆ ಎಂದು ವಾದಿಸಿದೆ.

ವಿಚಾರಣೆ ಸಮಯದಲ್ಲಿ ವಕೀಲರ ನೆರವು ಪಡೆಯುವುದು ಆರೋಪಿಯ ಹಕ್ಕೆ?

ಭಾರತದಲ್ಲಿ, ಅಂತಹ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಗೆ ಲಭ್ಯವಿರುವ ಅವಕಾಶಗಳನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ.

 • ಪರಿಚ್ಛೇದ 20 (3) ಪ್ರಕಾರ: ಯಾವುದೇ ಅಪರಾಧದ ಆರೋಪ ಹೊತ್ತ ಯಾವುದೇ ಆರೋಪಿಗೆ ತನ್ನ ವಿರುದ್ಧ ತಾನೇ ಸಾಕ್ಷಿಯಾಗುವಂತೆ ಒತ್ತಾಯಿಸುವಂತಿಲ್ಲ.
 • ಪರಿಚ್ಛೇದ 22 ರ ಪ್ರಕಾರ, ಬಂಧಿಸಲ್ಪಟ್ಟ ಯಾವುದೇ ವ್ಯಕ್ತಿಗೆ ತನ್ನ ಇಚ್ಛೆಯ ವಕೀಲರೊಂದಿಗೆ ಸಮಾಲೋಚಿಸುವ ಹಕ್ಕನ್ನು ನಿರಾಕರಿಸಲು ಬರುವುದಿಲ್ಲ. ಈ ವಿಧಿಯಡಿಯಲ್ಲಿ ಆರೋಪಿಗಳಿಗೆ ವಕೀಲರೊಂದಿಗೆ ಸಮಾಲೋಚಿಸುವ ಹಕ್ಕನ್ನು” ನೀಡುವ ನಿಬಂಧನೆಗಳನ್ನು ಸಹ ಒಳಗೊಂಡಿದೆ.
 • ಅಪರಾಧ ದಂಡ ಸಂಹಿತೆ (CrPC) ಯ ಸೆಕ್ಷನ್ 41 ಡಿ ಪ್ರಕಾರ, ಯಾವುದೇ ಬಂಧಿತ ವ್ಯಕ್ತಿಗೆ ವಿಚಾರಣೆಯ ಸಮಯದಲ್ಲಿ ತನ್ನ ಆಯ್ಕೆಯ ವಕೀಲರನ್ನು ಭೇಟಿಯಾಗಲು ಸಂಪೂರ್ಣ ಹಕ್ಕಿದೆ, ಆದರೆ ವಿಚಾರಣೆಯ ಎಲ್ಲಾ ಸಮಯದಲ್ಲೂ ಈ ಹಕ್ಕನ್ನು ಪಡೆಯಲಾಗುವುದಿಲ್ಲ.

ವರಿಷ್ಠ ನ್ಯಾಯಾಲಯದ ತೀರ್ಪುಗಳು:

1997 ರ ಡಿಕೆ ಬಸು ಪ್ರಕರಣದಲ್ಲಿ:

 • ಬಂಧನ ಅಥವಾ ಕಸ್ಟಡಿಗೆ ಸಂಬಂಧಿಸಿದ ವಿಷಯಗಳಲ್ಲಿ ತನಿಖಾ ಸಂಸ್ಥೆಗಳು ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ನ್ಯಾಯಾಲಯ ಪರಿಗಣಿಸಿದೆ.
 • ಈ ತೀರ್ಪಿನಲ್ಲಿ, ಬಂಧನಕ್ಕೊಳಗಾದ ವ್ಯಕ್ತಿಯನ್ನು ವಿಚಾರಣೆಯ ಸಮಯದಲ್ಲಿ ತನ್ನ ವಕೀಲರನ್ನು ಭೇಟಿಯಾಗಲು ಅನುಮತಿಸಬಹುದು ಎಂದು ನ್ಯಾಯಾಲಯ ಹೇಳಿದೆ, ಆದರೆ ಇಡೀ ವಿಚಾರಣೆಯ ಉದ್ದಕ್ಕೂ ಅದನ್ನು ಸಾರ್ವಕಾಲಿಕವಾಗಿ ಅನುಮತಿಸಲಾಗುವುದಿಲ್ಲ.
 • ಸುಪ್ರೀಂ ಕೋರ್ಟ್ ಆರೋಪಿಗಳ ಸುರಕ್ಷತೆಗಳನ್ನು ಒತ್ತಿಹೇಳಿತು, ಆದರೆ ‘ಅಪರಾಧಗಳನ್ನು ಬಹಿರಂಗಪಡಿಸುವಲ್ಲಿನ ತೊಂದರೆಗಳು, ವಿಶೇಷವಾಗಿ “ಕಠಿಣ ಅಪರಾಧಿಗಳ”(hardcore criminals) ಪ್ರಕರಣಗಳ ಬಗ್ಗೆಯೂ ಮಾತನಾಡಿದೆ. ನ್ಯಾಯಾಲಯವು ತೀರ್ಪು ನೀಡುವಾಗ, ವಕೀಲರನ್ನು ವಿಚಾರಣೆಯ ಉದ್ದಕ್ಕೂ ಅಂದರೆ ವಿಚಾರಣೆಯ ಎಲ್ಲಾ ಸಮಯದಲ್ಲೂ ಹಾಜರಾಗಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.

ಹಿರಿಯ ಗುಪ್ತಚರ ಅಧಿಕಾರಿ VS ಜುಗಲ್ ಕಿಶೋರ್ ಶರ್ಮಾ (2011) ಪ್ರಕರಣದಲ್ಲಿ:

ಸುಪ್ರೀಂ ಕೋರ್ಟ್ ಆರೋಪಿಗಳ ವಕೀಲರಿಗೆ ‘ದೂರದಿಂದ ಅಥವಾ ಗಾಜಿನ ಇನ್ನೊಂದು ಬದಿಯಿಂದ ವಿಚಾರಣೆಯನ್ನು  ವೀಕ್ಷಿಸಲು’ ಅವಕಾಶ ಮಾಡಿಕೊಟ್ಟಿತು, ಆದರೆ ವಕೀಲರು ಶ್ರವ್ಯ ವ್ಯಾಪ್ತಿಯಿಂದ ಹೊರಗುಳಿಯುತ್ತಾರೆ ಮತ್ತು ವಿಚಾರಣೆಯ ಸಮಯದಲ್ಲಿ ಪ್ರತಿವಾದಿಗೆ ಸಲಹೆ ನೀಡಲು  ಮುಕ್ತವಾಗಿರುವುದಿಲ್ಲ ಎಂದು ನಿರ್ದೇಶನ ನೀಡಿತು.

ಆದಾಗ್ಯೂ, ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ, ಖಾಸಗಿಯಾಗಿ, ನಿಗದಿತ ಸಮಯದವರೆಗೆ, ವಿಚಾರಣೆಯು ಪ್ರಗತಿಯಲ್ಲಿರದ ಸಮಯದಲ್ಲಿ, ಆರೋಪಿಗೆ ತನ್ನ ವಕೀಲರ ಭೇಟಿಗೆ ಅವಕಾಶ ನೀಡಬಹುದೇ ಎಂದು ತೀರ್ಮಾನಿಸುವುದು ಪೊಲೀಸರ ವಶಕ್ಕೆ ನೀಡಿದ ನ್ಯಾಯಾಲಯದ ವಿವೇಚನೆಗೆ ಬಿಡಲಾಗುತ್ತದೆ ಎಂದು ಹೇಳಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಅಂತರರಾಷ್ಟ್ರೀಯ ಅರಣ್ಯ ದಿನ:


(International Day of Forests)

 ಸಂದರ್ಭ:

ಪ್ರಪಂಚದಾದ್ಯಂತ ‘ಹಸಿರು ಹೊದಿಕೆ’ಯನ್ನು ಸ್ಮರಿಸುತ್ತಾ ಮತ್ತು ಅದರ ಮಹತ್ವವನ್ನು ಪುನರುಚ್ಚರಿಸುವ ಮೂಲಕ ವಿಶ್ವಸಂಸ್ಥೆಯು ಪ್ರತಿವರ್ಷ ಮಾರ್ಚ್ 21 ರಂದು ಅಂತರರಾಷ್ಟ್ರೀಯ ಅರಣ್ಯ ದಿನವನ್ನು (International Day of Forests) ಆಚರಿಸಲಾಗುತ್ತದೆ.

ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆ 2021 ವಿಷಯ  (Theme) : ‘ಅರಣ್ಯಗಳ ಪುನಃಸ್ಥಾಪನೆ ಮತ್ತು ಯೋಗಕ್ಷೇಮದ ಹಾದಿ’ (Forest restoration: a path to recovery and well-being).

ಈ ಥೀಮ್ ನ ಮಹತ್ವ:

ಈ ವರ್ಷದ ಥೀಮ್ ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯತೆಯ ಬಿಕ್ಕಟ್ಟನ್ನು ಪರಿಹರಿಸಲು ಕಾಡುಗಳ ಮರು ಅರಣ್ಯೀಕರಣ ಮತ್ತು ಸುಸ್ಥಿರ ನಿರ್ವಹಣೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಒತ್ತಿಹೇಳುತ್ತದೆ.ಇದು ಸುಸ್ಥಿರ ಅಭಿವೃದ್ಧಿಗೆ ಸರಕು ಮತ್ತು ಸೇವೆಗಳನ್ನು ಉತ್ಪಾದಿಸಲು, ಉದ್ಯೋಗ ಗಳನ್ನು ಸೃಷ್ಟಿಸುವ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

 • ವಿಶ್ವದಾದ್ಯಂತದ ಪರಿಸರ ವ್ಯವಸ್ಥೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಕರೆ ನೀಡುವ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಕುರಿತ ವಿಶ್ವಸಂಸ್ಥೆಯ ದಶಕದ ಗುರಿಯ (2021-2030)(the UN Decade on Ecosystem Restoration (2021-2030) ಜೊತೆಗೆ ಹೊಂದಾಣಿಕೆ ಮಾಡುವುದು ಅಂತರರಾಷ್ಟ್ರೀಯ ಅರಣ್ಯ ದಿನದ ವಿಷಯವಾಗಿದೆ.

ಪ್ರಮುಖ ಅಂಶಗಳು:

 • 2012 ರ ಮಾರ್ಚ್ 21 ಅನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅರಣ್ಯ ದಿನ (IDF) ಎಂದು ಘೋಷಿಸಿತು.
 • ಈ ದಿನವನ್ನು ವಿಶ್ವಸಂಸ್ಥೆಯ ಅರಣ್ಯ ವೇದಿಕೆ (United Nations Forum on Forests- UNFF) ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ವಿವಿಧ ದೇಶಗಳ ಸರ್ಕಾರಗಳ ಹಾಗೂ ಕಾಡುಗಳಿಗೆ ಸಂಬಂಧಿಸಿದ ಸಹಕಾರ ಸಂಸ್ಥೆಗಳ ಸಹಭಾಗಿತ್ವ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಹಿಮಾಚಲ ಪ್ರದೇಶದ ನೀರಿನ ಬಿಕ್ಕಟ್ಟು:


(Himachal Pradesh’s water crisis)

 ಸಂದರ್ಭ:

ಹಿಮಾಚಲ ಪ್ರದೇಶದಲ್ಲಿ, ಈ ವರ್ಷದ ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರವಾಗಿರುತ್ತದೆ. ಈ ಸಮಯದಲ್ಲಿ, ಅನೇಕ ನೀರಿನ ಯೋಜನೆಗಳು ಮುಚ್ಚುವಿಕೆಯ ಅಂಚಿನಲ್ಲಿರಬಹುದು. ಕುಡಿಯುವ ನೀರಿನ ಕೊರತೆಯಿಂದಾಗಿ ರಾಜ್ಯವು ಅತ್ಯಂತ ಕಠಿಣ ಸಮಯವನ್ನು ಎದುರಿಸಬೇಕಾಗಬಹುದು.

ದೀರ್ಘಕಾಲಿಕ ನೀರಿನ ಮೂಲಗಳನ್ನು ಹೊಂದಿರುವ ರಾಜ್ಯವು ನೀರಿನ ಬಿಕ್ಕಟ್ಟನ್ನು ಎದುರಿಸಲು ಕಾರಣ ಗಳೇನು?

 • ಈ ಚಳಿಗಾಲದ ಅವಧಿಯಲ್ಲಿ ಆದ ಕಡಿಮೆ ಹಿಮಪಾತ ಮತ್ತು ಕಡಿಮೆ ಮಳೆ.
 • ಇದು ಅಂತರ್ಜಲ ಮತ್ತು ಪಾದ ಬೆಟ್ಟಗಳಲ್ಲಿರುವ ಬುಗ್ಗೆಗಳು, ಬಾವಿಗಳು, ಬಾವರಿಗಳು, ಸರೋವರಗಳು, ಕಲ್ಯಾಣಿಗಳ, ತೊರೆಗಳು ಮತ್ತು ನದಿಗಳಂತಹ ಇತರ ನೀರಿನ ಮೂಲಗಳ ಮೇಲೆ ಪರಿಣಾಮ ಬೀರಿದೆ.
 • ರಾಜ್ಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ನೀರಿನ ಬೇಡಿಕೆ ಹೆಚ್ಚುತ್ತಿದೆ, ಜನರು ಈಗ ಸಾಂಪ್ರದಾಯಿಕ ನೀರಿನ ಮೂಲಗಳಾದ ಬುಗ್ಗೆಗಳು ಮತ್ತು ಬಾವರಿಗಳ ಬದಲು ಕೊಳವೆ ನೀರು ಸರಬರಾಜು ಯೋಜನೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಪರಿಣಾಮ:

ನೀರಿನ ಕೊರತೆಯಿಂದಾಗಿ ಬೆಳೆ ನಷ್ಟ ಮತ್ತು ಮೇವಿನ ಕೊರತೆ ಉಂಟಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಉದ್ದೇಶಿತ ಪರಿಹಾರಗಳು ಯಾವುವು?

 • ನೀರಿನ ಮಟ್ಟದಲ್ಲಿನ ಕುಸಿತದ ದೃಷ್ಟಿಯಿಂದ, ಕೈ-ಪಂಪ್‌ಗಳು ಮತ್ತು ಬೋರ್‌ವೆಲ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ.
 • ರಾಜ್ಯಾದ್ಯಂತ ನೀರು ಕೊಯ್ಲು ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು.
 • ಭವಿಷ್ಯದಲ್ಲಿ, ಎತ್ತರದ ಪ್ರದೇಶಗಳಲ್ಲಿ “ಹಿಮ ಕೊಯ್ಲು” ಆಯ್ಕೆಯನ್ನು ಅನ್ವೇಷಿಸಲು ಜಲಶಕ್ತಿ ಸಚಿವಾಲಯವು ಪ್ರಯತ್ನಿಸುತ್ತದೆ.

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಅಕ್ರಮ ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ಕುರಿತು  ನ್ಯಾಯಾಲಯವು ಮಧ್ಯ ಪ್ರವೇಶಿಸಬೇಕೆಂದು ಕೋರಿದ ಕೇಂದ್ರ:


(Why the Centre moved court over WhatsApp’s new privacy policy?)

 ಸಂದರ್ಭ:

ವಾಟ್ಸ್‌ಆ್ಯಪ್‌ ಹೊಸ ಗೋಪ್ಯತಾ ನೀತಿ ಮತ್ತು ಸೇವಾ ನಿಯಮಗಳನ್ನು ಮೇ 15ರಿಂದ ಜಾರಿಗೆ ತರಲು ನಿರ್ಧರಿಸಿದ್ದು, ಇದಕ್ಕೆ ತಡೆ ನೀಡಬೇಕೆಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು  ದೆಹಲಿ ಹೈಕೋರ್ಟ್‌ ಅನ್ನು ಕೋರಿದೆ.

ಹೈಕೋರ್ಟ್, ವಾಟ್ಸಾಪ್ ಹೊಸ ನೀತಿಗೆ  ತಡೆನೀಡಬೇಕೆಂದು ಐಟಿ ಸಚಿವಾಲಯ ಏಕೆ ಬಯಸಿದೆ?

 ಸುಪ್ರೀಂ ಕೋರ್ಟ್ ತೀರ್ಪುಗಳು ಕೇಂದ್ರದ ಮೇಲೆ “ದತ್ತಾಂಶ ಸಂರಕ್ಷಣೆ ಮತ್ತು ಗೌಪ್ಯತೆ ಕುರಿತ ಆಡಳಿತ” ವನ್ನು ಹೊರತರುವ ಜವಾಬ್ದಾರಿಯನ್ನು ವಹಿಸಿವೆ, ಅದು  “ಸುರಕ್ಷತೆ ಮತ್ತು ದತ್ತಾಂಶ ಸಂರಕ್ಷಣೆಯ ಸೂಕ್ತ ಮಾನದಂಡಗಳೊಂದಿಗೆ ಹೊಂದಿಕೆಯಾಗದ ಗೌಪ್ಯತೆ ನೀತಿಗಳನ್ನು” ನೀಡಲು ವಾಟ್ಸಾಪ್ ನಂತಹ “ಘಟಕಗಳ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ”. ಆದ್ದರಿಂದ, ಸೇವೆಗಳನ್ನು ಜಾರಿಗೊಳಿಸುವುದರಿಂದ ವಾಟ್ಸಾಪ್ ಅನ್ನು ತಡೆಯಬೇಕು ಎಂದು IT ಸಚಿವಾಲಯವು ದೆಹಲಿ ಹೈಕೋರ್ಟ್ ಅನ್ನು ಕೋರಿದೆ.

ಐಟಿ ಸಚಿವಾಲಯವು ವಾಟ್ಸಾಪ್ನ ಹೊಸ ಗೌಪ್ಯತೆ ನೀತಿಯನ್ನು ಜಾರಿಗೊಳಿಸಿದರೆ, ಉಲ್ಲಂಘನೆಯಾಗುವ ಪ್ರಸ್ತುತ ಐಟಿಯ ಪ್ರಮುಖ ನಿಯಮಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದೆ:

 • ಯಾವ ರೀತಿಯ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ ಎಂಬುದನ್ನು ವಿವರಿಸಲು ವಾಟ್ಸಾಪ್ ವಿಫಲವಾಗಿದೆ.
 • ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಮಾಹಿತಿಯನ್ನು ಪರಿಶೀಲಿಸಲು ಅಥವಾ ತಿದ್ದುಪಡಿ ಮಾಡಲು ಬಳಕೆದಾರರಿಗೆ ಆಯ್ಕೆಯನ್ನು ಒದಗಿಸಲು ವಾಟ್ಸಾಪ್ ವಿಫಲವಾಗಿದೆ.
 • ಈ ನೀತಿಯಲ್ಲಿ, ಡೇಟಾ ಹಂಚಿಕೆಗೆ ನೀಡಿದ ಒಪ್ಪಿಗೆಯನ್ನು ಹಿಂಪಡೆಯುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸುವಲ್ಲಿ ಈ ನೀತಿಯು ವಿಫಲವಾಗಿದೆ.
 • ಈ ನೀತಿಯಲ್ಲಿ, ಮೂರನೇ ವ್ಯಕ್ತಿಯಿಂದ ಮಾಹಿತಿಯು ಬಹಿರಂಗವಾಗದೇ ಇರುವ ಕುರಿತು ಯಾವುದೇ ಖಾತರಿಯಿಲ್ಲ.

ಈ ನೀತಿಯ ಪ್ರಮುಖ ಅಂಶಗಳು:

 • ತೃತೀಯ ವ್ಯಕ್ತಿಯ ಸೇವೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು: ಬಳಕೆದಾರರು ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ ವಾಟ್ಸಾಪ್ ಸೇವೆಗಳೊಂದಿಗೆ ಸಂಯೋಜಿಸಲ್ಪಟ್ಟ ಇತರ ಫೇಸ್‌ಬುಕ್ ಕಂಪನಿ ಉತ್ಪನ್ನಗಳನ್ನು ಅವಲಂಬಿಸಿದಾಗ, ಬಳಕೆದಾರರ ಕುರಿತ ಅಥವಾ ನೀವು ಇತರರೊಂದಿಗೆ ಯಾವ ವಿಷಯವನ್ನು ಹಂಚಿಕೊಳ್ಳುತ್ತೀರಿ ಎಂಬ ಮಾಹಿತಿಯನ್ನು ಮೂರನೇ ವ್ಯಕ್ತಿಯ ಸೇವೆಗಳು ಪಡೆಯಬಹುದು.
 • ಹಾರ್ಡ್‌ವೇರ್ ಮಾಹಿತಿ: ಬಳಕೆದಾರರ ಸಾಧನಗಳ ಬ್ಯಾಟರಿ ಮಟ್ಟಗಳು, ಸಿಗ್ನಲ್ ಸಾಮರ್ಥ್ಯ, ಅಪ್ಲಿಕೇಶನ್ ಆವೃತ್ತಿ, ಬ್ರೌಸರ್ ಮಾಹಿತಿ, ಮೊಬೈಲ್ ನೆಟ್‌ವರ್ಕ್, ಸಂಪರ್ಕ ಮಾಹಿತಿ (ಫೋನ್ ಸಂಖ್ಯೆ, ಮೊಬೈಲ್ ಆಪರೇಟರ್ ಅಥವಾ ISP ಸೇರಿದಂತೆ) ಇತ್ಯಾದಿಗಳನ್ನು ವಾಟ್ಸಾಪ್ ಸಂಗ್ರಹಿಸುತ್ತದೆ.
 • ಖಾತೆಯನ್ನು ಅಳಿಸಲಾಗುತ್ತದೆ: ಅಪ್ಲಿಕೇಶನ್‌ನಲ್ಲಿ ನೀಡಿರುವ ಕಾರ್ಯವಿಧಾನವನ್ನು ಬಳಸದೆ ಬಳಕೆದಾರರು ತಮ್ಮ ಸಾಧನದಿಂದ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆಗೆದುಹಾಕಿದರೆ, ಆ ಬಳಕೆದಾರರ ಮಾಹಿತಿಯನ್ನು ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಗ್ರಹಿಸಲಾಗುತ್ತದೆ.
 • ಡೇಟಾ ಸಂಗ್ರಹಣೆ: ಇದು ಫೇಸ್‌ಬುಕ್‌ನ ಜಾಗತಿಕ ಮೂಲಸೌಕರ್ಯ ಮತ್ತು ದತ್ತಾಂಶ ಕೇಂದ್ರಗಳನ್ನು ಬಳಸುತ್ತದೆ ಎಂದು ವಾಟ್ಸಾಪ್ ಹೇಳಿದೆ. ಕೆಲವು ಸಂದರ್ಭಗಳಲ್ಲಿ, ಬಳಕೆದಾರರ ಡೇಟಾವನ್ನು ಯುನೈಟೆಡ್ ಸ್ಟೇಟ್ಸ್ ಅಥವಾ ಫೇಸ್‌ಬುಕ್ ಅಂಗಸಂಸ್ಥೆಗಳನ್ನು ಹೊಂದಿರುವ ಸ್ಥಳಗಳಿಗೆ ವರ್ಗಾಯಿಸಬಹುದು ಎಂದು ಸಹ ಹೇಳಲಾಗಿದೆ.
 • ಸ್ಥಳ: ಬಳಕೆದಾರರು ತಮ್ಮ ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ಬಳಸದಿದ್ದರೂ ಸಹ, ವಾಟ್ಸಾಪ್ ಅವರ ಸಾಮಾನ್ಯ ಸ್ಥಳವನ್ನು (ನಗರ, ದೇಶ) ಅಂದಾಜು ಮಾಡಲು IP ವಿಳಾಸ ಮತ್ತು ಫೋನ್ ನಂಬರ್ ನ ಪ್ರದೇಶ ಕೋಡ್‌ನಂತಹ (Telephone Code) ಇತರ ಮಾಹಿತಿಯನ್ನು ಸಂಗ್ರಹಿಸುತ್ತದೆ.
 • ಪಾವತಿ ಸೇವೆ: ಯಾವುದೇ ಬಳಕೆದಾರರು ತಮ್ಮ ಪಾವತಿ ಸೇವೆಗಳನ್ನು ಬಳಸಿದರೆ ಅವರು ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿಯನ್ನು ಒಳಗೊಂಡಂತೆ ನಿಮ್ಮ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತಾರೆ ಎಂದು ವಾಟ್ಸಾಪ್ ಹೇಳುತ್ತದೆ.

ಸಂಬಂಧಿತ ಕಾಳಜಿಗಳು ಮತ್ತು ಸಮಸ್ಯೆಗಳು:

 • ವಾಟ್ಸಾಪ್ನ ಹೊಸ ನೀತಿಯು 2019 ರ ಡೇಟಾ ಸಂರಕ್ಷಣಾ ಮಸೂದೆಗೆ ಆಧಾರವನ್ನು ಒದಗಿಸುವ ‘ಶ್ರೀಕೃಷ್ಣ ಸಮಿತಿ’ ವರದಿಯ ಶಿಫಾರಸುಗಳನ್ನು ಕಡೆಗಣಿಸುತ್ತದೆ.
 • ಡೇಟಾ ಸ್ಥಳೀಕರಣದ ತತ್ವವು ವೈಯಕ್ತಿಕ ಡೇಟಾದ ಹೊರಗಿನ ವರ್ಗಾವಣೆಯನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ, ಇದು ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಯೊಂದಿಗೆ ವಿರೋಧಾಭಾಸಕ್ಕೆ ಕಾರಣವಾಗಬಹುದು.
 • ಹೊಸ ಗೌಪ್ಯತೆ ನೀತಿ ಜಾರಿಗೆ ಬಂದಾಗ, ವಾಟ್ಸಾಪ್ ಬಳಕೆದಾರರ ಮೆಟಾಡೇಟಾವನ್ನು ಹಂಚಿಕೊಳ್ಳಬಹುದು, ಅಂದರೆ, ಸಂಭಾಷಣೆಯ ಮೂಲ ಸಂದೇಶಗಳನ್ನು ಹೊರತುಪಡಿಸಿ ಎಲ್ಲವನ್ನೂ ಹಂಚಿಕೊಳ್ಳಬಹುದು.
 • ಬಳಕೆದಾರರು ವಾಟ್ಸಾಪ್ ನ ನವೀಕರಿಸಿದ ಗೌಪ್ಯತೆ ನೀತಿಯನ್ನು ಒಪ್ಪದಿದ್ದರೆ, ಈ ಹೊಸ ನೀತಿ ಜಾರಿಗೆ ಬಂದ ನಂತರ ಅವರು ವಾಟ್ಸಾಪ್ ಅನ್ನು ಬಿಡಬೇಕಾಗುತ್ತದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಕೆನ್-ಬೆಟ್ವಾ  ನದಿಜೋಡಣೆ ಆಣೆಕಟ್ಟು ಯೋಜನೆ:


(Ken-Betwa Interlinking Project)

 ಸಂದರ್ಭ:

ಇತ್ತೀಚೆಗೆ, ಕೆನ್-ಬೆಟ್ವಾ ಅಂತರ್ ನದಿಜೋಡಣೆ ಆಣೆಕಟ್ಟು ಯೋಜನೆ’ (Ken Betwa Link Project-KBLP) ಜಾರಿಗೆ ತರಲು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕೆನ್-ಬೆಟ್ವಾ ಯೋಜನೆಯ ಕುರಿತು:

ಎರಡು ಭಾಗಗಳ ಯೋಜನೆಯಾಗಿ ‘ಕಲ್ಪಿಸಲಾಗಿರುವ’ ಕೆನ್-ಬೆಟ್ವಾ ಯೋಜನೆಯು ‘ದೇಶದ ಮೊದಲ ಅಂತರ್ ನದಿ ಸಂಪರ್ಕ ಯೋಜನೆಯಾಗಿದೆ.

ಇದನ್ನು ಅಂತರರಾಜ್ಯ ನದಿ ವರ್ಗಾವಣೆ ಕಾರ್ಯಾಚರಣೆಯ ಮಾದರಿ ಯೋಜನೆಯೆಂದು ಪರಿಗಣಿಸಲಾಗಿದೆ.

 • ಮಧ್ಯಪ್ರದೇಶದ ಕೆನ್ ನದಿಯಿಂದ ಹೆಚ್ಚುವರಿ ನೀರನ್ನು ಉತ್ತರ ಪ್ರದೇಶದ ಬೆಟ್ವಾ ನದಿಗೆ ವರ್ಗಾಯಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಎರಡು ರಾಜ್ಯಗಳ ಮಧ್ಯೆ ಹರಡಿರುವ ಬುಂದೇಲ್‌ಖಂಡ್ ಪ್ರದೇಶದ ಬರ ಪೀಡಿತ ಜಿಲ್ಲೆಗಳಾದ ಝಾನ್ಸಿ, ಬಂಡಾ, ಲಲಿತ್‌ಪುರ ಮತ್ತು ಮಹೋಬಾ ಜಿಲ್ಲೆಗಳು ಉತ್ತರ ಪ್ರದೇಶ ಮತ್ತು ಟಿಕಮ್‌ಗಡ್, ಪನ್ನಾ ಮತ್ತು ಛತ್ತರ್‌ಪುರ- ಮಧ್ಯಪ್ರದೇಶ ಈ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಬಹುದು.

ಪ್ರಮುಖ ಅಂಶಗಳು:

 • ಕೆನ್ ಮತ್ತು ಬೆಟ್ವಾ ನದಿಗಳು ಮಧ್ಯಪ್ರದೇಶದಲ್ಲಿ ಉಗಮವಾಗುತ್ತದೆ ಮತ್ತು ಇವು ಯಮುನಾ ನದಿಯ ಉಪನದಿಗಳಾಗಿವೆ.
 • ಕೇನ್ ನದಿ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ಯಮುನಾ ನದಿಯನ್ನು ಮತ್ತು ಹಮೀರ್‌ಪುರ ಜಿಲ್ಲೆಯಲ್ಲಿ ಬೆಟ್ವಾ ನದಿಯನ್ನು ಸೇರುತ್ತದೆ.
 • ಬೆಟ್ವಾ ನದಿಗೆ ರಾಜ್‌ಘಾಟ್, ಪರಿಚಾ ಮತ್ತು ಮಾತತಿಲಾ ಎಂಬ ಅಣೆಕಟ್ಟುಗಳನ್ನು ಕಟ್ಟಲಾಗಿದೆ.
 • ಕೇನ್ ನದಿ ಪನ್ನಾ ಹುಲಿ ಮೀಸಲು ಪ್ರದೇಶದ ಮೂಲಕ ಹಾದುಹೋಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಜಾಪಿ (Jaapi):

ಇದು ಬಿದಿರಿನಿಂದ ಮಾಡಿದ ಮತ್ತು ಒಣಗಿದ ಟೋಕೌ ಎಲೆಗಳಿಂದ ಆವೃತವಾದ ಶಂಕುವಿನಾಕಾರದ ಟೋಪಿ ಆಗಿದೆ (ಟೋಕೌ: ಮೇಲಿನ ಅಸ್ಸಾಂನ ಮಳೆಕಾಡುಗಳಲ್ಲಿ ಕಂಡುಬರುವ ತಾಳೆ ಮರ). ಆಗಾಗ್ಗೆ, ಅತಿಥಿಗಳನ್ನು ಗೌರವಿಸಲು ಅಧಿಕೃತ ಕಾರ್ಯಕ್ರಮಗಳಲ್ಲಿ ಇದನ್ನು  ಬಳಸಲಾಗುತ್ತದೆ. ಅಲ್ಲದೆ, ಅಸ್ಸಾಂನ ಗ್ರಾಮೀಣ ಪ್ರದೇಶಗಳಲ್ಲಿ, ರೈತರು ಹೊಲಗಳಲ್ಲಿ ಕೆಲಸ ಮಾಡುವಾಗ ಕಠಿಣ ಹವಾಮಾನ, ಸೂರ್ಯನ ಪ್ರಖರತೆ ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ‘ಜಾಪಿ’ ಟೋಪಿಗಳನ್ನು ಧರಿಸುತ್ತಾರೆ.

ಕ್ಸೋರೈ (Xorai):

 ಬೆಲ್-ಮೆಟಲ್‌ನಿಂದ ಮಾಡಿದ ಕ್ಸೋರೈ (Xorai) ಮುಖ್ಯವಾಗಿ ‘ಸ್ಟ್ಯಾಂಡ್’ / ಟ್ರೇ ಹೊಂದಿರುವ ತಟ್ಟೆಯಾಗಿದೆ, ಸಾಮಾನ್ಯವಾಗಿ ಅದರ ಮೇಲೆ ಸಣ್ಣ ಛತ್ರಿ ಇರುತ್ತದೆ. ಇದು ಅಸ್ಸಾಂನ ಪ್ರತಿಯೊಂದು ಕುಟುಂಬದಲ್ಲಿಯೂ ಕಂಡುಬರುತ್ತದೆ. ಇದನ್ನು ಮುಖ್ಯವಾಗಿ ಪ್ರಾರ್ಥನೆಯ ಸಮಯದಲ್ಲಿ ಅರ್ಪಣೆಗಳ ತಟ್ಟೆಯಾಗಿ ಅಥವಾ ಅತಿಥಿಗಳಿಗೆ ತಮಲೆ-ಪಾನ್ (ಎಲೆ- ಅಡಿಕೆ) ಬಡಿಸಲು ಬಳಸಲಾಗುತ್ತದೆ. ಯಾರನ್ನಾದರೂ ಸನ್ಮಾನಿಸುವಾಗ ಜಾಪಿ ಮತ್ತು ಗಮೋಸಾ ಜೊತೆಗೆ ಕ್ಸೋರೈ ಅನ್ನು ನೀಡಲಾಗುತ್ತದೆ. ಅಸ್ಸಾಂನ ಬೆಲ್ ಮೆಟಲ್ ವಲಯವಾದ ಬಜಾಲಿ ಜಿಲ್ಲೆಯ ಸಾರ್ಥೆಬರಿಯಲ್ಲಿ ಕ್ಸೋರೈ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos