Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 13 ಮಾರ್ಚ್ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 1:   

1. ಉಪ್ಪಿನ ಸತ್ಯಾಗ್ರಹದ ಸ್ಮರಣಾರ್ಥ ಪಾದಯಾತ್ರೆ.

2. ಜಿಲ್ಲಾ ವೈದ್ಯಕೀಯ ಮಂಡಳಿಗಳನ್ನು ರಚಿಸಲು ಮನವಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಜ್ಯ ಚುನಾವಣಾ ಆಯುಕ್ತರು.

2. ಅಜಾಗರೂಕತೆಗಾಗಿ ಐವರು ಅಧಿಕಾರಿಗಳಿಗೆ ದಂಡವಿಧಿಸಿದ ರಾಜಸ್ಥಾನ ಮಾಹಿತಿ ಆಯೋಗ.

3. ಪೂಜಾ / ಪ್ರಾರ್ಥನಾ ಸ್ಥಳಗಳ ಕಾಯ್ದೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಇಂಧನ ಮಳಿಗೆಗಳಲ್ಲಿ ಬೆಂಜಿನ್ ಹೊರಸೂಸುವಿಕೆಯನ್ನು ತಗ್ಗಿಸಲು ತಿಳಿಸಿದ, ಸಮಿತಿ

2. ಮ್ಯಾನ್ಮಾರ್ ನಿಂದ ವಲಸೆ ಬರುವವರನ್ನು ತಡೆಯಲು ಸೂಚಿಸಿದ ಕೇಂದ್ರ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಸ್ವಾತಂತ್ರ್ಯ ಹೋರಾಟ –  ಅದರ ವಿವಿಧ ಹಂತಗಳು ಮತ್ತು ದೇಶದ ವಿವಿಧ ಭಾಗಗಳಿಂದ ಪ್ರಮುಖ ಕೊಡುಗೆದಾರರು ಮತ್ತು ಅವರ ಕೊಡುಗೆಗಳು.

ಉಪ್ಪಿನ ಸತ್ಯಾಗ್ರಹದ ಸ್ಮರಣಾರ್ಥ ಪಾದಯಾತ್ರೆ:


(Padyatra to commemorate salt march)

ಸಂದರ್ಭ:

ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಸರ್ಕಾರದ ಉಪಕ್ರಮವಾದ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅನ್ನು ಪ್ರಾರಂಭಿಸುವ ಸಂದರ್ಭದಲ್ಲಿ, ದಂಡಿ ಸತ್ಯಾಗ್ರಹ ಎಂದು ಕರೆಯಲ್ಪಡುವ ಗಾಂಧಿ ನೇತೃತ್ವದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಂಡಿ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

 • ಅಹಮದಾಬಾದ್‌ನ ಸಾಬರಮತಿ ಆಶ್ರಮದಿಂದ 386 ಕಿ.ಮೀ ದೂರದಲ್ಲಿರುವ ನವಸಾರಿ ಜಿಲ್ಲೆಯ ದಂಡಿ ಎಂಬ ಸ್ಥಳಕ್ಕೆ ಪಾದಯಾತ್ರೆ ಪ್ರಾರಂಭವಾಗಲಿದ್ದು, 25 ದಿನಗಳಲ್ಲಿ ಪೂರ್ಣಗೊಳ್ಳಲಿದೆ.
 • ಭಾರತದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ತೆರಿಗೆ ವಿರುದ್ಧದ ಐತಿಹಾಸಿಕ ಚಳುವಳಿಯ 91 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ.

75 ನೇ ವಾರ್ಷಿಕೋತ್ಸವದ ಆಚರಣೆಗಳ ಕುರಿತು’:

ಸ್ವಾತಂತ್ರ್ಯದ ’75 ನೇ ವಾರ್ಷಿಕೋತ್ಸವ ‘ಕಾರ್ಯಕ್ರಮವು ಆಗಸ್ಟ್ 15, 2023 ರವರೆಗೆ ಐದು ಥೀಮ್‌ / ವಿಷಯಗಳ ಅಡಿಯಲ್ಲಿ ಮುಂದುವರಿಯುತ್ತದೆ ಮತ್ತು ಕನಸುಗಳು ಮತ್ತು ಕರ್ತವ್ಯಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು  ಮಾರ್ಗದರ್ಶಕ ಶಕ್ತಿಯಾಗಿ ಮುಂದುವರಿಯುತ್ತದೆ.

ಈ ಐದು ವಿಷಯ/ಥೀಮ್ ಗಳು ಹೀಗಿವೆ:

 • ಸ್ವಾತಂತ್ರ್ಯ ಹೋರಾಟ. (Freedom Struggle)
 • 75ರ ಸಂದರ್ಭದಲ್ಲಿ ಆಲೋಚನೆಗಳು. (Ideas at 75)
 • 75ರ ಸಾಧನೆಗಳು. (Achievements at 75)
 • 75ರಲ್ಲಿ ಕ್ರಿಯೆಗಳು. (Actions at 75)
 • 75ರಲ್ಲಿ ಪರಿಹಾರ. (Resolves at 75).

ಉಪ್ಪಿನ ಸತ್ಯಾಗ್ರಹದ ಕುರಿತು:

ಮಾರ್ಚ್ 12, 1930 ರಂದು, ಮಹಾತ್ಮ ಗಾಂಧಿ, ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋಧಿಸಿ, ಗುಜರಾತ್‌ನ ಅಹಮದಾಬಾದ್‌ನ ಸಾಬರಮತಿ ಆಶ್ರಮದಿಂದ ರಾಜ್ಯದ ಕರಾವಳಿ ತೀರದ ಐತಿಹಾಸಿಕ ದಾಂಡಿ ಮಾರ್ಚ್ / ದಂಡಿ ಉಪ್ಪಿನ ಸತ್ಯಾಗ್ರಹ ವನ್ನು ಪ್ರಾರಂಭಿಸಿದರು.

 • ಉಪ್ಪಿನ ಸತ್ಯಾಗ್ರಹವು 12 ಮಾರ್ಚ್ 1930 ರಿಂದ ಆರಂಭಗೊಂಡು 06 ಏಪ್ರಿಲ್ 1930 ರ ವರೆಗೆ ಮುಂದುವರೆಯಿತು.
 • ಈ 24 ದಿನಗಳ ಪಾದಯಾತ್ರೆಯು ಸಂಪೂರ್ಣವಾಗಿ ಅಹಿಂಸಾತ್ಮಕ ಸ್ವರೂಪದ್ದಾಗಿತ್ತು ಮತ್ತು ಐತಿಹಾಸಿಕವಾಗಿ ಮಹತ್ವದ್ದಾಗಿತ್ತು, ಏಕೆಂದರೆ ಇದು ವ್ಯಾಪಕವಾದ ನಾಗರಿಕ ಅಸಹಕಾರ ಚಳವಳಿಯ ಆರಂಭಕ್ಕೆ ಕಾರಣವಾಯಿತು.
 • ದಂಡಿಯ ಸಮುದ್ರತೀರವನ್ನು ತಲುಪಿದ ನಂತರ ಮಹಾತ್ಮ ಗಾಂಧಿ ಅಕ್ರಮವಾಗಿ ಉಪ್ಪು ತಯಾರಿಸುವ ಮೂಲಕ ಉಪ್ಪಿನ ಕಾನೂನು ಮುರಿದರು.

ನಾಗರಿಕ ಅಸಹಕಾರ ಚಳವಳಿಯನ್ನು ಪ್ರಾರಂಭಿಸಲು ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ಏಕೆ ಆಯ್ಕೆ ಮಾಡಿಕೊಂಡರು?

 • ಪ್ರತಿ ಭಾರತೀಯ ಮನೆಯಲ್ಲೂ ಉಪ್ಪು ಅನಿವಾರ್ಯವಾಗಿತ್ತು, ಆದರೂ ಅದನ್ನು ಹೆಚ್ಚಿನ ಬೆಲೆಗೆ ಅಂಗಡಿಗಳಿಂದ ಖರೀದಿಸಲು ಜನರನ್ನು ಒತ್ತಾಯಿಸಲಾಯಿತು, ಅಲ್ಲದೆ ಜನರು ದೇಶೀಯ ಬಳಕೆಗಾಗಿ ಅಥವಾ ಗೃಹ ಬಳಕೆಗಾಗಿ ಸಹ ಉಪ್ಪನ್ನು ತಯಾರಿಸುವುದನ್ನು ನಿಷೇಧಿಸಲಾಗಿತ್ತು.
 • ಉಪ್ಪಿನ ಮೇಲೆ ರಾಜ್ಯದ ಏಕಸ್ವಾಮ್ಯದೊಂದಿಗೆ, ಸಾರ್ವಜನಿಕರಲ್ಲಿ ತೀವ್ರ ಕೋಪವಿತ್ತು, ಇದರ ಉದ್ದೇಶದಿಂದ, ಗಾಂಧೀಜಿ ಬ್ರಿಟಿಷ್ ಆಡಳಿತದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನಾಂದೋಲನವನ್ನು ರೂಪಿಸಲು ಯೋಚಿಸಿದರು.
 • ಉಪ್ಪನ್ನು ಪ್ರತಿಯೊಬ್ಬ ಭಾರತೀಯನಿಗೆ ಮೂಲಭೂತ ಹಕ್ಕು ಇರುವ ವಸ್ತುವಾಗಿ ಪರಿಗಣಿಸಲಾಗಿದ್ದರಿಂದ ಉಪ್ಪನ್ನು ‘ಕಾನೂನು ಅಸಹಕಾರ ಚಳವಳಿಯ’ ಆರಂಭದ ಸಂಕೇತವಾಗಿ ಆಯ್ಕೆಮಾಡಲಾಯಿತು.

gandhi

 

ವಿಷಯಗಳು: ಮಹಿಳಾ ಮತ್ತು ಮಹಿಳಾ ಸಂಘಟನೆಯ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.

ಜಿಲ್ಲಾ ವೈದ್ಯಕೀಯ ಮಂಡಳಿಗಳನ್ನು ರಚಿಸಲು ಮನವಿ:


(Plea to constitute district medical boards)

ಸಂದರ್ಭ:

ಅತ್ಯಾಚಾರಕ್ಕೆ ಒಳಗಾದವರಿಗೆ ಸಹಾಯ ಮಾಡಲು ಸ್ತ್ರೀರೋಗತಜ್ಞರು ಮತ್ತು ಮಕ್ಕಳ ವೈದ್ಯರನ್ನು ಒಳಗೊಂಡ ಜಿಲ್ಲಾ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲು ಕೋರಿ ಸಲ್ಲಿಸಿರುವ ಮನವಿಗೆ ಸ್ಪಂದಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೋರಿದೆ.

 • ಮಹಿಳೆಯು ಅತ್ಯಾಚಾರಕ್ಕೊಳಗಾಗಿದ್ದರೆ ಮತ್ತು ಗರ್ಭಿಣಿಯಾಗಿದ್ದರೆ, ಈ ಸಂದರ್ಭದಲ್ಲಿ ಮಹಿಳೆಗೆ ತನ್ನ ಕಾನೂನು ಹಕ್ಕುಗಳ ಬಗ್ಗೆ ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?

 • ಅತ್ಯಾಚಾರಕ್ಕೆ ಬಲಿಯಾದ 14 ವರ್ಷದ ಬಾಲಕಿ ಗರ್ಭಪಾತ ಕೋರಿ ಸಲ್ಲಿಸಿದ ಅರ್ಜಿಯ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
 • ಆದರೆ, ಸುಪ್ರೀಂ ಕೋರ್ಟ್ ಆಕೆಯ ಆರೋಗ್ಯದ ಕುರಿತಾಗಿ ವೈದ್ಯಕೀಯ ಮಂಡಳಿಯಿಂದ ವರದಿಯನ್ನು ಪಡೆದ ನಂತರ, ಗರ್ಭಪಾತವನ್ನು ಕೋರಿ ಸಲ್ಲಿಸಿದ್ದ ಮನವಿಯನ್ನು ಆ ಬಾಲೆ ಹಿಂತೆಗೆದುಕೊಂಡರು.

ಇದರ ಅವಶ್ಯಕತೆ:

ಈ ಪ್ರಕರಣವು ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಮಂಡಳಿಗಳನ್ನು ಸ್ಥಾಪಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ಇದು ಅತ್ಯಾಚಾರಕ್ಕೆ ಒಳಗಾದವರಿಗೆ ಆರಂಭಿಕ ವೈದ್ಯಕೀಯ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಹೆಚ್ಚಿನ  ನೋವನ್ನು ಅನುಭವಿಸದಂತೆ ಮತ್ತು ಆಘಾತಕ್ಕೆ ಒಳಗಾಗದಂತೆ ತಡೆಯುತ್ತದೆ.

 • ಮಹಿಳೆಯರಿಗೆ ಸಂತಾನೋತ್ಪತ್ತಿ ಆಯ್ಕೆ, ಅವರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ದೈಹಿಕ ಸ್ವಾಯತ್ತತೆಗೆ ತೀವ್ರ ನಿರ್ಬಂಧಗಳನ್ನು ವಿಧಿಸುವ ಕಾನೂನಿನ ವಿರುದ್ಧ ಅಗಾಧ ಒತ್ತಡ ಹೇರುತ್ತಿದೆ.
 • 1971 ರ ಈ ಕಾನೂನಿನ ವಿರುದ್ಧ, ಅತ್ಯಾಚಾರಕ್ಕೊಳಗಾದವರು ಮತ್ತು ಅನೇಕ ಪೀಡಿತ ಮಹಿಳೆಯರು ಸಹ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ.
 • ಇಲ್ಲಿಯವರೆಗೆ, ಸುಪ್ರೀಂ ಕೋರ್ಟ್ ವೈದ್ಯಕೀಯ ಗರ್ಭಪಾತಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ಪರಿಹರಿಸುತ್ತಿದೆ.

ಕಾನೂನು ಹೇಳುವುದೇನು?

 • ವೈದ್ಯಕೀಯ ಗರ್ಭಪಾತದ ಕಾಯ್ದೆ 1971 ರ ಸೆಕ್ಷನ್ 3 ರ ಪ್ರಕಾರ, ಗರ್ಭಧಾರಣೆಯ 20 ವಾರಗಳ ನಂತರ ಗರ್ಭಪಾತವನ್ನು ನಿಷೇಧಿಸಲಾಗಿದೆ.
 • ಗರ್ಭಪಾತ ಮಾಡದಿದ್ದಲ್ಲಿ ತಾಯಿಯ ಜೀವಕ್ಕೆ ಅಪಾಯವಿದೆ ಎಂದು ಸರ್ಕಾರದ ನೋಂದಾಯಿತ ವೈದ್ಯರು ನ್ಯಾಯಾಲಯದಲ್ಲಿ ಪ್ರಮಾಣೀಕರಿಸಿದರೆ, ಅಂತಹ ಸಂದರ್ಭದಲ್ಲಿ, ಕಾನೂನಿನ ಅಡಿಯಲ್ಲಿ ವಿನಾಯಿತಿ ನೀಡಲಾಗುತ್ತದೆ.

ಕಳೆದ ವರ್ಷ, 2020 ರ ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ’  (Medical Termination of Pregnancy (MTP) Amendment Bill) 2020 ಅನ್ನು ಅಂಗೀಕರಿಸಲಾಯಿತು, ಮತ್ತು ಇದು ಇನ್ನೂ ರಾಜ್ಯಸಭೆಯಲ್ಲಿ ಚರ್ಚಿಸಬೇಕಾಗಿದೆ.

 • ಈ ಮಸೂದೆಯಲ್ಲಿ, ವಿಶೇಷ ಸಂದರ್ಭಗಳಲ್ಲಿ ಗರ್ಭಪಾತವನ್ನು ಅನುಮತಿಸುವ ಮೇಲಿನ ಮಿತಿಯನ್ನು 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ಗರ್ಭಪಾತ VS ಮೂಲಭೂತ ಹಕ್ಕು:

ಸಂತಾನೋತ್ಪತ್ತಿಯ ಆಯ್ಕೆ ಅಥವಾ ಆಯ್ಕೆಯ ಹಕ್ಕು, ಆಯ್ಕೆಮಾಡುವ ಅಥವಾ ಗರ್ಭಧರಿಸುವ ಮತ್ತು ಅದನ್ನು ಪೂರ್ಣ ಅವಧಿಗೆ ಗರ್ಭಧರಿಸಬೇಕೇ ಅಥವಾ ಗರ್ಭಪಾತ ಮಾಡಿಸಿಕೊಳ್ಳಬೇಕೇ ಎಂದು ಆಯ್ಕೆ ಮಾಡುವುದು ಮಹಿಳೆಯ ಹಕ್ಕಾಗಿದೆ. ಈ ಸ್ವಾತಂತ್ರ್ಯವು ಗೌಪ್ಯತೆ, ಘನತೆ, ವೈಯಕ್ತಿಕ ಸ್ವಾಯತ್ತತೆ, ದೈಹಿಕ ಸಮಗ್ರತೆ, ಸ್ವ-ನಿರ್ಣಯ ಮತ್ತು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಗುರುತಿಸಲಾದ ಆರೋಗ್ಯದ ಹಕ್ಕಿನ ಮೂಲಭೂತ ಅಂಶವಾಗಿದೆ.

cabinet_decision

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು:ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ರಾಜ್ಯ ಚುನಾವಣಾ ಆಯುಕ್ತರು:


(State Election Commissioners)

ಸಂದರ್ಭ:

ರಾಜ್ಯ ಚುನಾವಣಾ ಆಯುಕ್ತರನ್ನಾಗಿ ಸ್ವತಂತ್ರ ವ್ಯಕ್ತಿಗಳನ್ನು ನೇಮಿಸಬೇಕೆ ಹೊರತು ಸರ್ಕಾರಿ ಅಧಿಕಾರಿಗಳನ್ನು ನೇಮಿಸುವಂತಿಲ್ಲ ಎಂದು ಭಾರತದ ವರಿಷ್ಠ ನ್ಯಾಯಾಲಯವು ತಿಳಿಸಿದೆ.

ಏನಿದು ಪ್ರಕರಣ?

ಕೆಲವು ದಿನಗಳ ಹಿಂದೆ, ಬಾಂಬೆ ಹೈಕೋರ್ಟ್‌, ಗೋವಾ ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಹೊರಡಿಸಿದ್ದ ಕೆಲವು ಅಧಿಸೂಚನೆಗಳನ್ನು ತಡೆಹಿಡಿದಿದೆ, ಇದರ ವಿರುದ್ಧ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

 • ಪುರಸಭೆಯ ಅಥವಾ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಮೀಸಲಾತಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಮತ್ತು ಮುಂದಿನ 10 ದಿನಗಳಲ್ಲಿ ಮೊರ್ಮುಗಾವೊ, ಮಡ್ಗಾಂವ್(Margao) , ಮಾಪುಸಾ, ಕ್ವಿಪೆಮ್ (Quepem) , ಮತ್ತು ಸಂಗಮ್ ಪುರಸಭೆಗಳಿಗೆ ಮೀಸಲಾತಿ ನಿಗದಿಪಡಿಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
 • ಚುನಾವಣಾ ಪ್ರಕ್ರಿಯೆಯನ್ನು ಏಪ್ರಿಲ್ 30 ರೊಳಗೆ ಪೂರ್ಣಗೊಳಿಸುವಂತೆ ನ್ಯಾಯಾಲಯ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.
 • ವರಿಷ್ಠ ನ್ಯಾಯಾಲಯದ ಈ ತೀರ್ಪು ರಾಜ್ಯ ಚುನಾವಣಾ ಆಯೋಗಗಳ ಸ್ವಾಯತ್ತತೆಯನ್ನು ಸಂರಕ್ಷಿಸುವ ಒಂದು ಮಹತ್ತರ ಕ್ರಮ ಎನ್ನಲಾಗಿದೆ ಹಾಗೂ ರಾಜ್ಯ ಚುನಾವಣಾ ಆಯೋಗದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ತಿಳಿಸುತ್ತದೆ.

ರಾಜ್ಯ ಚುನಾವಣಾ ಆಯುಕ್ತರ’ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂ ಕೋರ್ಟ್‌ನ ಪ್ರತಿಕ್ರಿಯೆಗಳು / ತೀರ್ಪುಗಳು:

 • ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಅಥವಾ ಸಂಬಂಧಿಸಿರುವ ವ್ಯಕ್ತಿಯು ರಾಜ್ಯ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ಹುದ್ದೆಗೆ ಸ್ವತಂತ್ರ ವ್ಯಕ್ತಿಗಳನ್ನು ನೇಮಿಸಬೇಕು. ಇದು ಅತ್ಯವಶ್ಯಕವಾಗಿದೆ ಏಕೆಂದರೆ ಸರ್ಕಾರಿ ನೌಕರರಿಗೆ, ರಾಜ್ಯ ಚುನಾವಣಾ ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡುವುದು ಸಂವಿಧಾನದ ಅಪಹಾಸ್ಯ’ ವಾಗಿದೆ (Mockery of the Constitution)ಅಥವಾ ‘ಸಂವಿಧಾನಕ್ಕೆ ಎಸಗುವ ಅಪಚಾರ’ವಾಗಿದೆ.
 •  ದೇಶದ ಉದ್ದಗಲಕ್ಕೂ, ರಾಜ್ಯಗಳು ಸ್ವತಂತ್ರ ವ್ಯಕ್ತಿಗಳನ್ನು ಮಾತ್ರ ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಬೇಕು.

ಅವಶ್ಯಕತೆ:

 • ರಾಜ್ಯ ಚುನಾವಣಾ ಆಯೋಗಗಳಲ್ಲಿ ಸರ್ಕಾರಿ ನೌಕರರನ್ನು ಹೆಚ್ಚುವರಿ ನೌಕರರನ್ನಾಗಿ ನೋಡುವುದು ಬೇಸರದ ಸಂಗತಿ ಎಂದು ನ್ಯಾಯಾಲಯ ಹೇಳಿದೆ.
 • ಸಂವಿಧಾನದ ಅಡಿಯಲ್ಲಿ, ರಾಜ್ಯ ಚುನಾವಣಾ ಆಯೋಗದ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸದೆ ಇರುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ.

 ‘ರಾಜ್ಯ ಚುನಾವಣಾ ಆಯೋಗದ’ ಕುರಿತು:

 • ರಾಜ್ಯ ಚುನಾವಣಾ ಆಯೋಗವನ್ನು ಭಾರತದ ಸಂವಿಧಾನದ, 243 K, ಯಿಂದ 243 ZA ವಿಧಿಗಳ ಅಡಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯ ಚುನಾವಣಾ ಆಯುಕ್ತರಿಗೆ, ಪಂಚಾಯಿತಿಗಳು ಮತ್ತು ಪುರಸಭೆಗಳ ಚುನಾವಣೆಗಳನ್ನು ನಡೆಸಲು, ಚುನಾವಣಾ ಮಾರ್ಗಸೂಚಿಗಳು, ಮತ್ತು ಚುನಾವಣಾ ಪಟ್ಟಿಗಳನ್ನು ತಯಾರಿಸಲು ಎಲ್ಲಾ ಅವಕಾಶ ಕಲ್ಪಿಸಲಾಗಿದೆ.
 • ರಾಜ್ಯ ಚುನಾವಣಾ ಆಯುಕ್ತರನ್ನು ರಾಜ್ಯಪಾಲರು ನೇಮಿಸುತ್ತಾರೆ.
 •  ಭಾರತದ ಸಂವಿಧಾನದ 243 (C 3) ಕಲಂ ಪ್ರಕಾರ, ರಾಜ್ಯ ಚುನಾವಣಾ ಆಯುಕ್ತರು (SEC) ಕೋರಿದಾಗ ರಾಜ್ಯಪಾಲರು, ಆಯೋಗದ ಇತರ ಸಿಬ್ಬಂದಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಲಭ್ಯವಾಗುವಂತೆ ಮಾಡುತ್ತಾರೆ.
 • ಸಂವಿಧಾನದ ಪ್ರಕಾರ, ಸ್ಥಳೀಯ ಸ್ವ-ಆಡಳಿತ ಮಂಡಳಿಗಳನ್ನು ಸ್ಥಾಪಿಸುವುದು ರಾಜ್ಯಗಳ ಜವಾಬ್ದಾರಿಯಾಗಿದೆ (ಏಳನೇ ಅನುಸೂಚಿ, ಪ್ರವೇಶ 5, ಪಟ್ಟಿ II).

ರಾಜ್ಯ ಚುನಾವಣಾ ಆಯುಕ್ತರ ಅಧಿಕಾರ ಮತ್ತು ಪದಚ್ಯುತಿ:

 •  ರಾಜ್ಯ ಚುನಾವಣಾ ಆಯುಕ್ತರು ಹೈಕೋರ್ಟ್‌ನ ನ್ಯಾಯಾಧೀಶರ ಸ್ಥಾನಮಾನ, ಸಂಬಳ ಮತ್ತು ಭತ್ಯೆಯನ್ನು ಹೊಂದಿದ್ದಾರೆ ಮತ್ತು ಇವರನ್ನು ಹೈಕೋರ್ಟ್‌ನ ನ್ಯಾಯಾಧೀಶರನ್ನು ಪದಚ್ಯುತಿ ಗೊಳಿಸುವ ಅದೇ ರೀತಿಯ ಆಧಾರದ ಮೇಲಲ್ಲದೆ ಅವರನ್ನು ಅನ್ಯ ಮಾರ್ಗದ ಮೂಲಕ ರಾಜ್ಯ ಚುನಾವಣಾ ಆಯುಕ್ತರ ಪದವಿಯಿಂದ ಪದಚ್ಯುತಿಗೊಳಿಸಲು ಸಾಧ್ಯವಿಲ್ಲ.

 ಭಾರತದ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗದ ಅಧಿಕಾರಗಳು :

 • ರಾಜ್ಯ ಚುನಾವಣಾ ಆಯೋಗಗಳ (SEC) ರಚನೆಗೆ ಸಂಬಂಧಿಸಿದಂತೆ ಸಂವಿಧಾನದ ಅನುಚ್ಛೇದ 243 K ಯ ನಿಬಂಧನೆಗಳು ಭಾರತದ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಸಂವಿಧಾನದ 324 ನೇ ವಿಧಿಗೆ ಹೋಲುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜ್ಯ ಚುನಾವಣಾ ಆಯೋಗವು ಭಾರತದ ಚುನಾವಣಾ ಆಯೋಗಕ್ಕೆ (Election Commission of India) ಸಮನಾದ ಸ್ಥಾನಮಾನವನ್ನು ಮತ್ತು ಅಧಿಕಾರಗಳನ್ನು ಹೊಂದಿದೆ.
 • ಕಿಶನ್ ಸಿಂಗ್ ತೋಮರ್ vs ಅಹಮದಾಬಾದ್ ನಗರ ಮುನ್ಸಿಪಲ್ ಕಾರ್ಪೊರೇಷನ್ ಪ್ರಕರಣದಲ್ಲಿ, ಸಂಸತ್ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ರಾಜ್ಯ ಸರ್ಕಾರಗಳು ಭಾರತದ ಚುನಾವಣಾ ಆಯೋಗದ (Election Commission of India) ನಿರ್ದೇಶನಗಳನ್ನು ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು, ಅದೇ ರೀತಿ ರಾಜ್ಯ ಸರ್ಕಾರಗಳು ಸಹ ರಾಜ್ಯ ಚುನಾವಣಾ ಆಯೋಗದ ಆದೇಶಗಳನ್ನು ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳ ಸಂದರ್ಭದಲ್ಲಿ (SEC) ಅನುಸರಿಸಬೇಕು ಎಂದು ನಿರ್ದೇಶಿಸಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಹಸ್ತಕ್ಷೇಪದ ಮಿತಿ:

ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ನಂತರ, ಸ್ಥಳೀಯ ಸಂಸ್ಥೆಗಳು ಮತ್ತು ಸ್ವ-ಆಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.

 • ಸಂವಿಧಾನದ 243-O ವಿಧಿಯು ರಾಜ್ಯ ಚುನಾವಣಾ ಆಯೋಗವು (SEC) ಪ್ರಾರಂಭಿಸಿದ ಚುನಾವಣಾ ವಿಷಯಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದನ್ನು ನಿಷೇಧಿಸುತ್ತದೆ.
 • ಅಂತೆಯೇ, 329 ನೇ ವಿಧಿಯು, ಚುನಾವಣಾ ಆಯೋಗವು (ECI) ಪ್ರಾರಂಭಿಸಿರುವ ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದನ್ನು ನಿಷೇಧಿಸುತ್ತದೆ.
 • ಚುನಾವಣೆ ಮುಗಿದ ನಂತರವೇ ರಾಜ್ಯ ಚುನಾವಣಾ ಆಯೋಗದ ನಿರ್ಧಾರಗಳು ಅಥವಾ ನಡವಳಿಕೆಯನ್ನು ಚುನಾವಣಾ ಅರ್ಜಿಯ ಮೂಲಕ ಪ್ರಶ್ನಿಸಬಹುದು.
 • ರಾಜ್ಯ ಚುನಾವಣಾ ಆಯೋಗದ ಅಧಿಕಾರ ಮತ್ತು ಕಾರ್ಯಗಳು ಚುನಾವಣಾ ಆಯೋಗದ ಅಧಿಕಾರ ಮತ್ತು ಕಾರ್ಯಗಳಿಗೆ ಹೋಲುತ್ತವೆ.

ಪ್ರಾಯೋಗಿಕವಾಗಿ, ‘ರಾಜ್ಯ ಚುನಾವಣಾ ಆಯೋಗ’ ಭಾರತದ ಚುನಾವಣಾ ಆಯೋಗದಂತೆ ಸ್ವತಂತ್ರವಾಗಿದೆಯೇ?

ರಾಜ್ಯ ಚುನಾವಣಾ ಆಯುಕ್ತರನ್ನು ರಾಜ್ಯಪಾಲರು ನೇಮಕ ಮಾಡಿದ್ದರೂ, ಅವರನ್ನು ದೋಷಾರೋಪಣೆಯಿಂದ ಮಾತ್ರ ತೆಗೆದುಹಾಕಬಹುದಾದರೂ, ಅನೇಕ ರಾಜ್ಯ ಚುನಾವಣಾ ಆಯುಕ್ತರು ಕಳೆದ ಎರಡು ದಶಕಗಳಲ್ಲಿ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹೆಣಗಾಡಿದ್ದಾರೆ.

 • ಈ ವಿಷಯದಲ್ಲಿ, ಮಹತ್ವದ ಘರ್ಷಣೆಯ ಪ್ರಕರಣ 2008 ರಲ್ಲಿ ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಮಾರ್ಚ್ 2008 ರಲ್ಲಿ, ಆಗಿನ ರಾಜ್ಯ ಚುನಾವಣಾ ಆಯುಕ್ತ ನಂದ್ ಲಾಲ್ ಅವರನ್ನು ಶಾಸಕಾಂಗವು ತನ್ನ ಅಧಿಕಾರವ್ಯಾಪ್ತಿ ಮತ್ತು ಅಧಿಕಾರಗಳನ್ನು ಉಲ್ಲಂಘಿಸಿದ ಮತ್ತು ಸವಲತ್ತು ಉಲ್ಲಂಘಿಸಿದ ಆರೋಪದಲ್ಲಿ ಬಂಧಿಸಿ ಎರಡು ದಿನಗಳ ಕಾಲ ಜೈಲಿಗೆ ಕಳುಹಿಸಿತ್ತು.  

  

ವಿಷಯಗಳು: ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಇ-ಆಡಳಿತ – ಅನ್ವಯಗಳು, ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಭವಿಷ್ಯದ ಪ್ರಮುಖ ಅಂಶಗಳು; ನಾಗರಿಕರ ಸನ್ನದುಗಳು, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮತ್ತು ಸಾಂಸ್ಥಿಕ ಮತ್ತು ಇತರ ಕ್ರಮಗಳು.

ಅಜಾಗರೂಕತೆಗಾಗಿ ಐವರು ಅಧಿಕಾರಿಗಳಿಗೆ ದಂಡವಿಧಿಸಿದ ರಾಜಸ್ಥಾನ ಮಾಹಿತಿ ಆಯೋಗ:


(Rajasthan Information Commission penalises five officials for negligence)

 ಸಂದರ್ಭ:

ಮಾಹಿತಿ ಹಕ್ಕು (RTI) ಕಾಯ್ದೆಯಡಿ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ರಾಜಸ್ಥಾನ ರಾಜ್ಯ ಮಾಹಿತಿ ಆಯೋಗವು ಕಠಿಣ ನಿಲುವು ತೆಗೆದುಕೊಂಡಿದೆ.

 • ಆಯೋಗವು ವಿವಿಧ ಇಲಾಖೆಗಳ ಐದು ಅಧಿಕಾರಿಗಳಿಗೆ (ಕಾರ್ಯದರ್ಶಿಗಳು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಕಾರ್ಯದರ್ಶಿಗಳು) ದಂಡ ವಿಧಿಸಿದೆ ಮತ್ತು ಅವರ ನಡವಳಿಕೆಯ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದೆ.

ಏನಿದು ಸಮಸ್ಯೆ?

ಅರ್ಜಿದಾರರಿಗೆ ಮಾಹಿತಿ ನೀಡದ ಕಾರಣ ಆಯೋಗವು ಅಧಿಕಾರಿಗಳಿಗೆ ದಂಡ ವಿಧಿಸಿದೆ. ಇದಲ್ಲದೆ, ಆಯೋಗದ ಸೂಚನೆಗಳಿಗೂ ಈ ಅಧಿಕಾರಿಗಳು ಸ್ಪಂದಿಸಿಲ್ಲ.

ಮಾಹಿತಿ ಹಕ್ಕು ಕಾಯ್ದೆ, 2005 ಕುರಿತು:

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ ಕಾಯ್ದೆ), 2005 ನಾಗರಿಕರ ಮಾಹಿತಿ ಹಕ್ಕಿಗೆ ಸಂಬಂಧಿಸಿದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ತಿಳಿಸುತ್ತದೆ.

ಇದು, ಹಿಂದಿನ ಮಾಹಿತಿ ಸ್ವಾತಂತ್ರ್ಯ ಕಾಯ್ದೆ,(Freedom of Information Act) 2002 ಅನ್ನು ಮಾಹಿತಿ ಹಕ್ಕು ಕಾಯ್ದೆ, 2005 ರಿಂದ ಬದಲಾಯಿಸಿದೆ.

 • ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಭಾರತೀಯ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕನ್ನು ಬಲಪಡಿಸಲು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಭಾರತೀಯ ಸಂವಿಧಾನದ 19 ನೇ ಪರಿಚ್ಛೇದದ ಅಡಿಯಲ್ಲಿ ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಕ್ಕಿನಲ್ಲಿ’ ಮಾಹಿತಿ ಹಕ್ಕು ‘ಪ್ರತಿಪಾದಿಸಲ್ಪಟ್ಟಿರುವುದರಿಂದ, ಇದು ಒಂದು ಅಂತರ್ಗತ ಮೂಲಭೂತ ಹಕ್ಕು ಆಗಿದೆ.

ಪ್ರಮುಖ ನಿಬಂಧನೆಗಳು :

 • ಆರ್‌ಟಿಐ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ, ಪ್ರತಿ ಸಾರ್ವಜನಿಕ ಪ್ರಾಧಿಕಾರದಿಂದ ಮಾಹಿತಿಯನ್ನು ಸ್ವಯಂ ಪ್ರಕಟಿಸಲು ಅವಕಾಶವಿದೆ.
 • ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) ರ ಅಡಿಯಲ್ಲಿ ಮಾಹಿತಿಯನ್ನು ಒದಗಿಸುವುದರ ವಿರುದ್ಧ ವಿನಾಯಿತಿ ನೀಡಿದೆ.
 • ಸೆಕ್ಷನ್ 8 (2) ರ ಪ್ರಕಾರ, ಸಾರ್ವಜನಿಕ ಹಿತಾಸಕ್ತಿಗೆ ಮಹತ್ವದ್ದಾದರೆ, 1923 ರ ಅಧಿಕೃತ ರಹಸ್ಯ ಕಾಯ್ದೆ’ (Official Secrets Act) ಅಡಿಯಲ್ಲಿ ವಿನಾಯಿತಿ ಪಡೆದ ಮಾಹಿತಿಯನ್ನು ಪ್ರಕಟಿಸಲು ಅವಕಾಶ ಕಲ್ಪಿಸಲಾಗಿದೆ.

ಮಾಹಿತಿ ಆಯುಕ್ತರು ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ (PIOs):

 • ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾಹಿತಿ ಆಯುಕ್ತರ ನೇಮಕಕ್ಕೆ ಈ ಕಾಯ್ದೆ ಅವಕಾಶ ನೀಡುತ್ತದೆ.
 • ಅದರ ಕೆಲವು ಅಧಿಕಾರಿಗಳನ್ನು ಸಾರ್ವಜನಿಕ ಅಧಿಕಾರಿಗಳು ‘ಸಾರ್ವಜನಿಕ ಮಾಹಿತಿ ಅಧಿಕಾರಿಗಳು’ (PIOs) ಗಳನ್ನಾಗಿ ನೇಮಿಸುತ್ತಾರೆ. RTI ಕಾಯ್ದೆಯಡಿ ಮಾಹಿತಿ ಪಡೆಯುವ ವ್ಯಕ್ತಿಗೆ ಮಾಹಿತಿ ನೀಡುವ ಜವಾಬ್ದಾರಿ ಈ ಅಧಿಕಾರಿಗಳ ಮೇಲಿದೆ.

ಸಮಯಮಿತಿ:

ಸಾಮಾನ್ಯವಾಗಿ, ಸಾರ್ವಜನಿಕ ಪ್ರಾಧಿಕಾರವು ಅರ್ಜಿಯನ್ನು ಸ್ವೀಕರಿಸಿದ 30 ದಿನಗಳಲ್ಲಿ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿದೆ.

 • ಕೋರಿದ ಮಾಹಿತಿಯು ವ್ಯಕ್ತಿಯ ಜೀವನ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟರೆ, ಅದನ್ನು 48 ಗಂಟೆಗಳ ಒಳಗೆ ಒದಗಿಸಲಾಗುತ್ತದೆ.
 • ಅರ್ಜಿಯನ್ನು ಸಹಾಯಕ ಸಾರ್ವಜನಿಕ ಮಾಹಿತಿ (Public Information Officer- PIO) ಅಧಿಕಾರಿ ಮೂಲಕ ಕಳುಹಿಸಿದರೆ ಅಥವಾ ತಪ್ಪಾದ ಸಾರ್ವಜನಿಕ ಪ್ರಾಧಿಕಾರಕ್ಕೆ ಕಳುಹಿಸಿದರೆ, ಮಾಹಿತಿಯನ್ನು ಒದಗಿಸಲು ನಿಗದಿತ ಮೂವತ್ತು ದಿನಗಳು ಅಥವಾ 48 ಗಂಟೆಗಳ ಅವಧಿಯಲ್ಲಿ ಐದು ದಿನಗಳ ಹೆಚ್ಚುವರಿ ಸಮಯವನ್ನು ಸೇರಿಸಲಾಗುತ್ತದೆ.

ಮಾಹಿತಿ ಹಕ್ಕು ಕಾಯ್ದೆಯ ಅನ್ವಯಿಸುವಿಕೆ:

ಖಾಸಗಿ ಸಂಸ್ಥೆಗಳು: (Private bodies)

ಖಾಸಗಿ ಸಂಸ್ಥೆಗಳು ನೇರವಾಗಿ ಮಾಹಿತಿ ಹಕ್ಕು ಕಾಯ್ದೆ’ ವ್ಯಾಪ್ತಿಗೆ ಬರುವುದಿಲ್ಲ.

 • ಸರಬ್ಜಿತ್ ರಾಯ್ vs ದೆಹಲಿ ವಿದ್ಯುತ್ ನಿಯಂತ್ರಣ ಆಯೋಗದ ತೀರ್ಪಿನಲ್ಲಿ, ಕೇಂದ್ರೀಕೃತ ಮಾಹಿತಿ ಆಯೋಗವು ಖಾಸಗೀಕರಣಗೊಂಡ ಸಾರ್ವಜನಿಕ ಉಪಯುಕ್ತತೆ ಕಂಪನಿಗಳನ್ನು (privatised public utility companies ) ಆರ್‌ಟಿಐ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ದೃಢಪಡಿಸಿತು.

ರಾಜಕೀಯ ಪಕ್ಷಗಳು:

ಕೇಂದ್ರ ಮಾಹಿತಿ ಆಯೋಗದ (CIC) ಪ್ರಕಾರ, ರಾಜಕೀಯ ಪಕ್ಷಗಳು ‘ಸಾರ್ವಜನಿಕ ಪ್ರಾಧಿಕಾರಗಳು’ ಮತ್ತು ಆರ್‌ಟಿಐ ಕಾಯ್ದೆಯಡಿ ನಾಗರಿಕರಿಗೆ ಜವಾಬ್ದಾರರಾಗಿರುತ್ತವೆ.

ಆದಾಗ್ಯೂ, ಆಗಸ್ಟ್ 2013 ರಲ್ಲಿ ಸರ್ಕಾರವು ‘ಮಾಹಿತಿ ಹಕ್ಕು (ತಿದ್ದುಪಡಿ) ಮಸೂದೆಯನ್ನು ಜಾರಿಗೆ ತಂದಿತು, ಇದು ರಾಜಕೀಯ ಪಕ್ಷಗಳನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲು ಅವಕಾಶ ನೀಡುತ್ತದೆ.

 • ಪ್ರಸ್ತುತ ಯಾವುದೇ ರಾಜಕೀಯ ಪಕ್ಷವು ಆರ್‌ಟಿಐ ಕಾಯ್ದೆಯ ವ್ಯಾಪ್ತಿಯಲ್ಲಿ ಇಲ್ಲ, ಆದರೆ ಎಲ್ಲಾ ರಾಜಕೀಯ ಪಕ್ಷಗಳನ್ನು ಆರ್‌ಟಿಐ ಕಾಯ್ದೆಯಡಿ ತರಲು ಪ್ರಕರಣ ದಾಖಲಿಸಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ:

ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಮಾಹಿತಿ ಹಕ್ಕು (RTI) ಕಾಯ್ದೆಯ ವ್ಯಾಪ್ತಿಗೆ ತರುವ ದೆಹಲಿ ಹೈಕೋರ್ಟ್‌ನ ನಿರ್ಧಾರವನ್ನು ಭಾರತದ ಸುಪ್ರೀಂ ಕೋರ್ಟ್ 2019 ರ ನವೆಂಬರ್ 13 ರಂದು ಎತ್ತಿಹಿಡಿದಿದೆ.

key_points

 

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಪೂಜಾ / ಪ್ರಾರ್ಥನಾ ಸ್ಥಳಗಳ ಕಾಯ್ದೆ:


(Places of Worship Act)

ಸಂದರ್ಭ:

1991 ರಲ್ಲಿ ಜಾರಿಗೆ ಬಂದ ಪೂಜಾ ಸ್ಥಳ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸ್ಪಂದಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೋರಿದೆ. ಈ ಕಾಯಿದೆಯಲ್ಲಿ, ಆಗಸ್ಟ್ 15, 1947 ರಂತೆ ಧಾರ್ಮಿಕ ಸ್ಥಳಗಳನ್ನು ಸ್ಥಗಿತಗೊಳಿಸಲು / ಮುಚ್ಚಲು ಅವಕಾಶ ಕಲ್ಪಿಸಲಾಗಿದೆ.

ಏನಿದು ಸಮಸ್ಯೆ?

ಪೂಜಾ ಸ್ಥಳ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಇದರಲ್ಲಿ ಶಾಸನವನ್ನು “ಅನಿಯಂತ್ರಿತ, ಅಭಾಗಲಬ್ಧ ಮತ್ತು ಪುನರಾವಲೋಕನ” ಎಂದು ವಿವರಿಸಲಾಗಿದೆ.

 • “ಮೂಲಭೂತವಾದಿ” ಅನಾಗರಿಕ ಆಕ್ರಮಣಕಾರರಿಂದ ಕಳೆದುಕೊಂಡ ತಮ್ಮ ತಮ್ಮ ಪೂಜಾ ಸ್ಥಳಗಳನ್ನು ಮರಳಿ ಪಡೆಯಲು ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರಿಗೆ ನ್ಯಾಯಕ್ಕಾಗಿ ನ್ಯಾಯಾಲಯವನ್ನು ಕೋರಲು ಆಗುತ್ತಿಲ್ಲ ಕಾರಣ, ಕಾನೂನಿನ ಪ್ರಕಾರ ಕಟ್-ಆಫ್ ದಿನಾಂಕ (ಆಗಸ್ಟ್ 15, 1947) ಆಗಿದೆ.
 •  ಕಾನೂನು ಹಕ್ಕುಗಳಿಗೆ ಸಂಬಂಧಿಸಿದ ಕಾಯಿದೆಯ ನಿಬಂಧನೆಗಳು ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾಗಿವೆ ಎಂದು ಅರ್ಜಿದಾರರು ಹೇಳುತ್ತಾರೆ.

ಕಾಯಿದೆಯ ಉದ್ದೇಶ:

 • 1947 ರ ಆಗಸ್ಟ್ 15 ರಂದು ಅಸ್ತಿತ್ವದಲ್ಲಿ ಇದ್ದಂತೆ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಸ್ಥಗಿತಗೊಳಿಸುವುದು ಈ ಕಾಯಿದೆಯ ಉದ್ದೇಶವಾಗಿತ್ತು.
 • ಅಂದಿನ ದಿನಾಂಕದಲ್ಲಿ ಅಸ್ತಿತ್ವದಲ್ಲಿದ್ದಂತೆ, ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಕಾಪಾಡಿಕೊಳ್ಳಲು ಹಾಗೂ ನಿರ್ವಹಿಸಲು ಈ ಕಾಯಿದೆಯು ಅವಕಾಶ ನೀಡುತ್ತದೆ.
 • ಯಾವುದೇ ಗುಂಪಿನ ಪೂಜಾ ಸ್ಥಳದ ಹಿಂದಿನ ಸ್ಥಿತಿಯ ಬಗ್ಗೆ ಯಾವುದೇ ಪೂರ್ವ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಆ ರಚನೆ ಅಥವಾ ಭೂಮಿಯಲ್ಲಿ ಹೊಸ ಹಕ್ಕುಗಳನ್ನು ನೀಡುವುದನ್ನು ನಿಲ್ಲಿಸುವುದು ಇದರ ಉದ್ದೇಶವಾಗಿತ್ತು.
 • ಈ ಕಾನೂನು ದೀರ್ಘಕಾಲೀನ ಕೋಮು ಸೌಹಾರ್ದತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಪ್ರಮುಖ ಲಕ್ಷಣಗಳು:

 • ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಆಗಸ್ಟ್ 15, 1947 ರಂದು ಇದ್ದಂತೆಯೇ ಇರುತ್ತದೆ ಎಂದು ಈ ಕಾಯಿದೆಯು ಘೋಷಿಸುತ್ತದೆ.
 • ಯಾವುದೇ ವ್ಯಕ್ತಿಯು ಯಾವುದೇ ಧಾರ್ಮಿಕ ಪಂಥದ ಪೂಜಾ ಸ್ಥಳವನ್ನು ಬೇರೆ ಪಂಥ ಅಥವಾ ವರ್ಗಕ್ಕೆ ಬದಲಾಯಿಸಬಾರದು ಎಂದು ಅದು ಹೇಳುತ್ತದೆ.
 • ಈ ಶಾಸನದ ಪ್ರಕಾರ, ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿರುವ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಪರಿವರ್ತಿಸುವ ಬಗ್ಗೆ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಇತರ ಪ್ರಾಧಿಕಾರದ ಮುಂದೆ ಬಾಕಿ ಇರುವ ಯಾವುದೇ ಮೊಕದ್ದಮೆ, ಮೇಲ್ಮನವಿ ಅಥವಾ ಇತರ ಕ್ರಮಗಳು ಈ ಕಾನೂನು ಜಾರಿಗೆ ಬಂದ ಕೂಡಲೇ ಬರ್ಖಾಸ್ತು ಗೊಳ್ಳುತ್ತವೆ. ನಂತರ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

ವಿನಾಯಿತಿಗಳು:

ಈ ನಿಬಂಧನೆಗಳು ಈ ಕೆಳಗಿನ ಸಂದರ್ಭಗಳಲ್ಲಿ ಅನ್ವಯಿಸುವುದಿಲ್ಲ:

 • ಪುರಾತನ ಮತ್ತು ಐತಿಹಾಸಿಕ ಸ್ಮಾರಕ ಅಥವಾ ಯಾವುದೇ ಪುರಾತತ್ತ್ವ ಶಾಸ್ತ್ರ ಸ್ಥಳಗಳು ಅಥವಾ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ, 1958 ರ ಅಡಿಯಲ್ಲಿ ಬರುವ ಯಾವುದೇ ಪೂಜಾ ಸ್ಥಳಗಳು.
 • ಈ ಕಾಯ್ದೆಯ ಪ್ರಾರಂಭದ ಮೊದಲು, ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಇತರ ಪ್ರಾಧಿಕಾರದಿಂದ ಯಾವುದೇ ವಿಷಯ, ಮೇಲ್ಮನವಿ ಅಥವಾ ಇತರ ಕ್ರಮಗಳನ್ನು ಅಂತಿಮಗೊಳಿಸಿ, ತೀರ್ಮಾನಿಸಿ ಅಥವಾ ಒಪ್ಪಿಗೆಯ ಮೂಲಕ ವಿಲೇವಾರಿ ಮಾಡಲಾದ ಯಾವುದೇ ಸ್ಥಳದ ಪರಿವರ್ತನೆ.
 • ಉತ್ತರ ಪ್ರದೇಶದ ರಾಜ್ಯದ ಅಯೋಧ್ಯೆಯಲ್ಲಿರುವ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸ್ಥಳ ಅಥವಾ ಪೂಜಾ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ಮೊಕದ್ದಮೆ, ಮೇಲ್ಮನವಿ ಅಥವಾ ಇತರ ಕ್ರಮಗಳಿಗೆ ಈ ಕಾಯಿದೆ ಅನ್ವಯಿಸುವುದಿಲ್ಲ. ಈ ಕಾಯಿದೆಯ ನಿಬಂಧನೆಗಳು ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇಲೆ ಪರಿಣಾಮ ಬೀರುತ್ತವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಇಂಧನ ಮಳಿಗೆಗಳಲ್ಲಿ ಬೆಂಜಿನ್ ಹೊರಸೂಸುವಿಕೆಯನ್ನು ತಗ್ಗಿಸಲು ತಿಳಿಸಿದ ಸಮಿತಿ:


(Bring down benzene emission at fuel outlets, says panel)

ಸಂದರ್ಭ:

ಕೇರಳದಲ್ಲಿ ವಾಯುಮಾಲಿನ್ಯವನ್ನು ಅಧ್ಯಯನ ಮಾಡಲು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನೇಮಿಸಿದ ಜಂಟಿ ಸಮಿತಿಯು ಈ ಕೆಳಗಿನ ಶಿಫಾರಸುಗಳನ್ನು ಮಾಡಿದೆ:

 • ಇಂಧನ ಕೇಂದ್ರಗಳಲ್ಲಿ ‘ಆವಿ ಚೇತರಿಕೆ ವ್ಯವಸ್ಥೆಯನ್ನು’ ಸ್ಥಾಪಿಸುವುದು.
 • ಡೀಸೆಲ್ ಚಾಲಿತ ವಾಹನಗಳಲ್ಲಿ ಕಣಗಳ ಫಿಲ್ಟರ್‌ಗಳ ರೆಟ್ರೋಫಿಟ್ಟಿಂಗ್ ಮಾಡುವುದು. (ಪ್ರಮಾಣಿಕೃತ ಎಂಜಿನ್ ಸಂರಚನೆಗಳಿಂದ ಹೊರಸೂಸುವಿಕೆ ಯನ್ನು ಕಡಿಮೆ ಮಾಡುವುದು).
 • ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸದ ಕೈಗಾರಿಕಾ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
 • ಬ್ಯಾಟರಿ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ಮತ್ತು ಡೀಸೆಲ್ ಚಾಲಿತ ಹಳೆಯ ವಾಹನಗಳನ್ನು ಹಂತಹಂತವಾಗಿ ಬಳಕೆಯಿಂದ ನಿಷೇಧಿಸುವುದು.
 • ಟ್ರಾಫಿಕ್ ಕಾರಿಡಾರ್‌ಗಳ ಉದ್ದಕ್ಕೂ ಹಸಿರು ವಲಯವನ್ನು ನಿರ್ಮಿಸುವುದು.

ಶಿಫಾರಸ್ಸು ಮಾಡಲಾದ ಅಲ್ಪಾವಧಿಯ ಕ್ರಮಗಳು:

 • ಮಾಲಿನ್ಯವನ್ನು ಹರಡುವಂತಹ ಸ್ಪಷ್ಟವಾಗಿ ಗೋಚರಿಸುವ ವಾಹನಗಳ ವಿರುದ್ಧ (ಮೋಟಾರು ವಾಹನ ಇಲಾಖೆಯಿಂದ ಪ್ರಾರಂಭಿಸಲಾಗುವುದು) ಕಠಿಣ ಕ್ರಮ ಜರುಗಿಸುವುದು.
 • ರಸ್ತೆಗಳ ಆರ್ದ್ರ / ಯಾಂತ್ರಿಕೃತ ನಿರ್ವಾತ ಗುಡಿಸುವಿಕೆಯನ್ನು ಪರಿಚಯಿಸಲಾಗುತ್ತಿದೆ. (Introduction of wet / mechanised vacuum sweeping of roads.)
 • ನಿರ್ಮಾಣ ಸ್ಥಳಗಳಲ್ಲಿ ಧೂಳು ಮಾಲಿನ್ಯವನ್ನು ನಿಯಂತ್ರಿಸುವುದು.
 • ಮುಚ್ಚಿದ ವಾಹನಗಳಲ್ಲಿ ನಿರ್ಮಾಣ ಸಾಮಗ್ರಿಗಳ ಸಾಗಣೆಯನ್ನು, ಖಾತ್ರಿಪಡಿಸಿಕೊಳ್ಳುವುದು.

ಇದರ ಅವಶ್ಯಕತೆ:

ಪೆಟ್ರೋಲ್ ಇಂಧನ ತುಂಬುವ ಕೇಂದ್ರಗಳು ಬೆಂಜೀನ್ ಹೊರಸೂಸುವಿಕೆ, ಬಾಷ್ಪಶೀಲ ಸಾವಯವ ಸಂಯುಕ್ತಗಳು ಮತ್ತು 2.5 ಕಣಗಳ ಪ್ರಮುಖ ಮೂಲವಾಗಿದೆ. ಆದ್ದರಿಂದ, ‘ಆವಿ ಚೇತರಿಕೆ/ ಮರುಪಡೆಯುವಿಕೆ ವ್ಯವಸ್ಥೆ’ ಹೇರುವುದು ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಹಂತವಾಗಿದೆ. ಸಮಿತಿಯ ಶಿಫಾರಸುಗಳ ಪ್ರಕಾರ, ಇದನ್ನು ಶೀಘ್ರದಲ್ಲೇ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ  (Petroleum and Explosives Safety Organization-PESO) ಯೊಂದಿಗೆ ಸಮನ್ವಯಗೊಳಿಸಬೇಕು.

ಬೆಂಜೀನ್ ಮೂಲಗಳು:

 • ಆಟೋಮೊಬೈಲ್ ಮತ್ತು ಪೆಟ್ರೋಲಿಯಂ ಉದ್ಯಮ.
 • ಕಲ್ಲಿದ್ದಲು ಎಣ್ಣೆ, ಪೆಟ್ರೋಲ್ ಮತ್ತು ಮರದ ಅಪೂರ್ಣ ದಹನ.
 • ಸಿಗರೆಟ್ ಹೊಗೆ ಮತ್ತು ಇದ್ದಿಲಿನಿಂದ ಬೇಯಿಸಿದ ಆಹಾರದಲ್ಲಿ ಕಂಡುಬರುತ್ತದೆ.
 • ಇದಲ್ಲದೆ, ಪಾರ್ಟಿಕಲ್ಬೋರ್ಡ್ ಪೀಠೋಪಕರಣಗಳು, ಪ್ಲೈವುಡ್, ಫೈಬರ್ಗ್ಲಾಸ್, ನೆಲದ ಅಂಟು ಉತ್ಪನ್ನಗಳು, ಬಣ್ಣಗಳು, ಮರದ ಫಲಕಗಳಲ್ಲಿಯೂ ಸಹ ಇದು ಇರುತ್ತದೆ.

 

ವಿಷಯಗಳು: ಗಡಿ ಪ್ರದೇಶಗಳಲ್ಲಿ ಭದ್ರತಾ ಸವಾಲುಗಳು ಮತ್ತು ಅವುಗಳ ನಿರ್ವಹಣೆ – ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯ ನಡುವಿನ ಸಂಬಂಧ.

ಮ್ಯಾನ್ಮಾರ್ ನಿಂದ ವಲಸೆ ಬರುವವರನ್ನು ತಡೆಯಲು ಸೂಚಿಸಿದ ಕೇಂದ್ರ:


(Stop influx from Myanmar: Centre)

ಸಂದರ್ಭ:

ಇತ್ತೀಚೆಗೆ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಭಾರತದ ಗೃಹ ಸಚಿವಾಲಯವು (MHA)  ‘ಮ್ಯಾನ್ಮಾರ್‌ನಿಂದ ಭಾರತಕ್ಕೆ ಬರುವ ಅಕ್ರಮ ವಲಸಿಗರನ್ನು ತಡೆಯಲು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ’ ಸೂಚಿಸಿದೆ.

ಹಿನ್ನೆಲೆ:

ನೆರೆಯ ದೇಶವಾದ ಮ್ಯಾನ್ಮಾರ್‌ನಲ್ಲಿ ಇತ್ತೀಚೆಗೆ ನಡೆದ ಮಿಲಿಟರಿ ದಂಗೆ ಮತ್ತು ಅದರ ಕಠಿಣ ಕ್ರಮಗಳ ಪರಿಣಾಮವಾಗಿ ಅನೇಕ ಜನರು ಅಕ್ರಮವಾಗಿ ಭಾರತವನ್ನು ಪ್ರವೇಶಿಸಲು ಆರಂಭಿಸಿದ ಕೆಲ ಸಮಯದ ನಂತರ ಈ ನಿರ್ದೇಶನಗಳು ಗೃಹ ಮಂತ್ರಾಲಯದಿಂದ ಬಂದಿವೆ.

ಕೇಂದ್ರ ಸರ್ಕಾರದ ನಿಲುವೇನು?

ಯಾವುದೇ ವಿದೇಶಿಯರಿಗೆ ನಿರಾಶ್ರಿತರ ಸ್ಥಾನಮಾನವನ್ನು ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಮತ್ತು 1951 ರ ವಿಶ್ವಸಂಸ್ಥೆಯ ನಿರಾಶ್ರಿತರ ಸಮಾವೇಶ ಮತ್ತು ಅದರ 1967 ರ ಶಿಷ್ಟಾಚಾರಕ್ಕೆ ಭಾರತ ಸಹಿ ಹಾಕಿಲ್ಲ.

 • ಫೆಬ್ರವರಿ 1 ರಂದು ನಡೆದ ದಂಗೆಯ ನಂತರ ‘ಟಾಟ್ಮಾಡಾವ್’ ಅಂದರೆ ಮ್ಯಾನ್ಮಾರ್ ಸೈನ್ಯವು ದೇಶವನ್ನು ಸ್ವಾಧೀನಪಡಿಸಿಕೊಂಡಿತು.
 • ಭಾರತ ಮತ್ತು ಮ್ಯಾನ್ಮಾರ್ 1,643 ಕಿ.ಮೀ ಗಡಿಯನ್ನು ಹೊಂದಿದ್ದು, ಎರಡೂ ಕಡೆಯ ಜನರು ಕೌಟುಂಬಿಕ ಸಂಬಂಧವನ್ನು ಹೊಂದಿದ್ದಾರೆ.

‘1951 ರ ನಿರಾಶ್ರಿತರ ಸಮಾವೇಶ’ದ ಕುರಿತು:

 • ಇದು ವಿಶ್ವಸಂಸ್ಥೆಯ ಬಹುಪಕ್ಷೀಯ ಒಪ್ಪಂದವಾಗಿದ್ದು, ಇದು ‘ನಿರಾಶ್ರಿತರನ್ನು’ ವ್ಯಾಖ್ಯಾನಿಸುತ್ತದೆ ಮತ್ತು ಆಶ್ರಯ ಪಡೆದ ವ್ಯಕ್ತಿಗಳ ಹಕ್ಕುಗಳನ್ನು ಮತ್ತು ಆಶ್ರಯ ನೀಡುವ ರಾಷ್ಟ್ರಗಳ ಜವಾಬ್ದಾರಿಯನ್ನು ತಿಳಿಸುತ್ತದೆ.
 • ಈ ಸಮಾವೇಶದಲ್ಲಿ ಜಾತಿ, ಜನಾಂಗ, ಧರ್ಮ, ರಾಷ್ಟ್ರೀಯತೆ, ನಿರ್ದಿಷ್ಟ ಸಾಮಾಜಿಕ ಗುಂಪಿನೊಂದಿಗಿನ ಸಂಬಂಧ ಅಥವಾ ರಾಜಕೀಯ ಸಿದ್ಧಾಂತದ ಕಾರಣದಿಂದಾಗಿ ಕಿರುಕುಳದಿಂದ ಪಲಾಯನ ಮಾಡುವವರಿಗೆ ಈ ಸಮಾವೇಶವು ಕೆಲವು ಹಕ್ಕುಗಳನ್ನು ನೀಡುತ್ತದೆ.
 • ಭಾರತವು ಈ ಸಮಾವೇಶದ ಸದಸ್ಯ ರಾಷ್ಟ್ರ ವಾಗಿಲ್ಲ.
 • ಯುದ್ಧಾಪರಾಧಿಗಳಂತಹ ಜನರು ನಿರಾಶ್ರಿತರ ಅರ್ಹತೆಯನ್ನು ಪಡೆಯುವುದಿಲ್ಲ ಎಂದು ಈ ಸಮಾವೇಶವು ಸ್ಪಷ್ಟವಾಗಿ ತಿಳಿಸುತ್ತದೆ.
 • ಈ ಸಮಾವೇಶದ ಅಡಿಯಲ್ಲಿ ನೀಡಲಾದ ಪ್ರಯಾಣ ದಾಖಲೆಗಳನ್ನು ಹೊಂದಿರುವವರಿಗೆ ಕೆಲವು ವೀಸಾ ಮುಕ್ತ ಪ್ರಯಾಣವನ್ನು ಸಹ ಒದಗಿಸುತ್ತದೆ.
 • ಈ ಸಮಾವೇಶವು 1948 ರ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 14 ನೇ ವಿಧಿಯನ್ನು ಆಧರಿಸಿದೆ. ಕಿರುಕುಳದಿಂದ ತಪ್ಪಿಸಿಕೊಂಡು ಇತರ ದೇಶಗಳಲ್ಲಿ ಆಶ್ರಯ ಪಡೆಯುವ ವ್ಯಕ್ತಿಗಳ ಹಕ್ಕನ್ನು ಇದು ಗುರುತಿಸುತ್ತದೆ. ನಿರಾಶ್ರಿತರು, ಸಮಾವೇಶದಿಂದ ನೀಡಲ್ಪಟ್ಟ ಹಕ್ಕುಗಳ ಜೊತೆಗೆ, ಸಂಬಂಧಪಟ್ಟ ದೇಶದಲ್ಲಿ ಚಾಲ್ತಿಯಲ್ಲಿರುವ ಹಕ್ಕುಗಳು ಮತ್ತು ಪ್ರಯೋಜನಗಳನ್ನು ಪಡೆಯುವ ಹಕ್ಕನ್ನು ಪಡೆಯಬಹುದು.
 • 1967ರ ಶಿಷ್ಟಾಚಾರವು, ಕೇವಲ ಯುರೋಪಿನ ನಿರಾಶ್ರಿತರನ್ನು ಮಾತ್ರ ಒಳಗೊಂಡ 1951 ರ ಸಮಾವೇಶಕ್ಕೆ ವಿರುದ್ಧವಾಗಿ ಎಲ್ಲಾ ದೇಶಗಳ ನಿರಾಶ್ರಿತರನ್ನು ಒಳಗೊಳ್ಳುತ್ತದೆ.

indo_mayanmar


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos