Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 1 ಫೆಬ್ರವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ವೈದ್ಯಕೀಯ ಗರ್ಭಪಾತ (MTP) ತಿದ್ದುಪಡಿ ಮಸೂದೆ, 2020.

2. ಕೇಂದ್ರ ಸರ್ಕಾರವು ಜನಗಣತಿಯನ್ನು 2022 ಕ್ಕೆ ಮುಂದೂಡುವ ಸಾಧ್ಯತೆ ಇದೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೊಸದಾಗಿ 14 ಕಿರು ಅರಣ್ಯ ಉತ್ಪನ್ನಗಳ ಸೇರ್ಪಡೆ.

2. ಚಬಹಾರ್ ಬಂದರು.

3. ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2020.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ಸರೋವರವನ್ನು ಸ್ವಚ್ಛ-ಗೊಳಿಸುವ ಏಕಾಂಗಿ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಿ ಮೋದಿ.

2. ಕ್ಷಮೆ ಯಾಚಿಸಿದ ಇಂದೋರ್ ಜಿಲ್ಲಾ ಮ್ಯಾಜಿಸ್ಟ್ರೇಟ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ‘3-ಭಾಷಾ ಸೂತ್ರದ ನೀತಿಯು ಕೇಂದ್ರ ಸರ್ಕಾರದ ಕಚೇರಿಗಳಿಗೆ ಅನ್ವಯವಾಗದು’.

2. ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ. (WCCB).

3. ರಾಷ್ಟ್ರೀಯ ಪೋಲಿಯೊ ಲಸಿಕೆ ಕಾರ್ಯಕ್ರಮ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು.

ವೈದ್ಯಕೀಯ ಗರ್ಭಪಾತ (MTP) ತಿದ್ದುಪಡಿ ಮಸೂದೆ, 2020:


( Medical Termination of Pregnancy (MTP) Amendment Bill, 2020):

ಸಂದರ್ಭ:

ವೈದ್ಯಕೀಯ ಗರ್ಭಪಾತ (MTP) ತಿದ್ದುಪಡಿ ಮಸೂದೆ, 2020 ಅನ್ನು 2020 ರ ಮಾರ್ಚನಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ ಮತ್ತು ಈಗ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಅದನ್ನು ರಾಜ್ಯಸಭೆಯ ಮುಂದೆ ಅಂಗೀಕಾರಕ್ಕಾಗಿ ಮಂಡಿಸಲಾಗುವುದು.

ಈ ಮಸೂದೆಯು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಮಂಡಳಿಯ ಸ್ಥಾಪನೆಯೂ ಸೇರಿದಂತೆ ಹಲವಾರು ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ.

 • ಈ ವೈದ್ಯಕೀಯ ಮಂಡಳಿಯು, ಗರ್ಭಧಾರಣೆಯ ಅವಧಿಯು 24 ವಾರಗಳನ್ನು ಮೀರಿದ ಸಂದರ್ಭದಲ್ಲಿ, ಭ್ರೂಣದ ಅಸಹಜ ಬೆಳವಣಿಗೆಯ ಕುರಿತು ನಿರ್ಧರಿಸುತ್ತದೆ.
 • ಪ್ರತಿ ವೈದ್ಯಕೀಯ ಮಂಡಳಿಯು, ಓರ್ವ ಸ್ತ್ರೀರೋಗತಜ್ಞ (gynaecologist) ವಿಕಿರಣ ಶಾಸ್ತ್ರಜ್ಞ (radiologist ) ಅಥವಾ ಸೋನೋಲೋಜಿಸ್ಟ್ ಮತ್ತು ಒಬ್ಬ ಶಿಶುವೈದ್ಯರನ್ನು (paediatrician) ಮತ್ತು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಶಿಫಾರಸು ಮಾಡಿದ ಇತರ ಸದಸ್ಯರನ್ನು ಒಳಗೊಂಡಿರುತ್ತದೆ.

ಈಗ ಎದುರಾಗಿರುವ ಸಮಸ್ಯೆ ಏನು?

ಇತ್ತೀಚಿನ ಅಧ್ಯಯನದ ಪ್ರಕಾರ, ಈ ಮಂಡಳಿಯ ರಚನೆಯು “ಅಸಾಧ್ಯ”ವೆಂದು ತೋರುತ್ತಿದೆ ಏಕೆಂದರೆ ದೇಶದಲ್ಲಿ ಮೇಲೆ ತಿಳಿಸಿದಂತಹ ತಜ್ಞವೈದ್ಯರ ಶೇಕಡ 82 ರಷ್ಟು ಹುದ್ದೆಗಳು  ಖಾಲಿ ಇವೆ.

ತಿದ್ದುಪಡಿ ಮಸೂದೆ ಏನು ಹೇಳುತ್ತದೆ?

1971ರ ವೈದ್ಯಕೀಯ ಗರ್ಭಪಾತ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ 2018ರಲ್ಲಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ‘ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ–2018’ ಅನ್ನು ಮಂಡಿಸಿತ್ತು. ಆದರೆ, ಈ ಮಸೂದೆಗೆ ಲೋಕಸಭೆಯ ಅನುಮೋದನೆ ದೊರೆತಿರಲಿಲ್ಲ. ಈ ತಿದ್ದುಪಡಿ ಮಸೂದೆಯಲ್ಲೇ ಕೆಲವು ಬದಲಾವಣೆ ಮಾಡಿ, ಕರಡು ಮಸೂದೆಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ತಿಳಿಸಿತ್ತು. 2018ರ ಮಸೂದೆಗೂ, ಈಗ ಮಂಡಿಸಿರುವ ವೈದ್ಯಕೀಯ ಗರ್ಭಪಾತ (MTP) ತಿದ್ದುಪಡಿಗೂ ಹೆಚ್ಚಿನ ವ್ಯತ್ಯಾಸ ಇಲ್ಲ.

ಕಾನೂನು ಹೋರಾಟದ ಹಾದಿ:

1860, ಅ.6: ಗರ್ಭಪಾತವನ್ನು ಅಪರಾಧ ಎಂದು ಭಾರತೀಯ ದಂಡ ಸಂಹಿತೆ ಸೆಕ್ಷನ್ 312 ಉಲ್ಲೇಖ.

1966, ಡಿ. 30: ಗರ್ಭಪಾತ ಮತ್ತು ಸಂತಾನೋತ್ಪತ್ತಿ ಕಾನೂನುಗಳಿಗೆ ತಿದ್ದುಪಡಿ ಅಗತ್ಯ ಎಂದು ಶಾಂತಿಲಾಲ್ ಶಾ ಸಮಿತಿ ಶಿಫಾರಸು.

1971, ಆ.10: ಗರ್ಭಪಾತವನ್ನು ಕಾನೂನಾತ್ಮಕಗೊಳಿಸುವ ವೈದ್ಯಕೀಯ ಗರ್ಭಪಾತ ಕಾಯ್ದೆ (MTP) ಜಾರಿ.

2002, ಡಿ.18: ಎಂಟಿಪಿ ಕಾಯ್ದೆಗೆ ತಿದ್ದುಪಡಿ; ಅನಧಿಕೃತ ಗರ್ಭಪಾತ ಪ್ರಕರಣಗಳಿಗೆ ಮೂಗುದಾರ ಹಾಕುವ ನಿಯಮ ಸೇರ್ಪಡೆ.

2014, ಅ.29: ಗರ್ಭಪಾತದ ಗರಿಷ್ಠ ಮಿತಿಯನ್ನು 24 ವಾರಗಳಿಗೆ ವಿಸ್ತರಿಸಲು ರಾಷ್ಟ್ರೀಯ ಮಹಿಳಾ ಆಯೋಗ ಮಾಡಿದ ಶಿಫಾರಸು ಆಧರಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ MTP ಕಾಯ್ದೆ ತಿದ್ದುಪಡಿ ಪ್ರಸ್ತಾವ.

2014, ನ. 6: ಮಸೂದೆಯ ಕೆಲ ಅಂಶಗಳಿಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ (IMA) ತೀವ್ರ ವಿರೋಧ.

2017, ಆ.4: ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ಹೆಚ್ಚಿಸುವ ಪ್ರಸ್ತಾವದ ‘ಎಂಟಿಪಿ ತಿದ್ದುಪಡಿ ಮಸೂದೆ 2017’ ರಾಜ್ಯಸಭೆಯಲ್ಲಿ ಮಂಡನೆ.

2018, ಜ.22: ಮಸೂದೆ ಲೋಕಸಭೆಯಲ್ಲಿ ಮಂಡನೆ. ಮಹಿಳೆಯು ಅತ್ಯಾಚಾರ ಸಂತ್ರಸ್ತೆಯಾಗಿದ್ದಲ್ಲಿ, ಗರ್ಭಪಾತದ ಗರಿಷ್ಠ ಅವಧಿಯನ್ನು 27 ವಾರಗಳಿಗೆ ವಿಸ್ತರಿಸುವ ಹೊಸ ಪ್ರಸ್ತಾವ ಸೇರ್ಪಡೆ.

2018, ಡಿ.28: ‘ಮಹಿಳೆಯರ ಲೈಂಗಿಕತೆ, ಸಂತಾನೋತ್ಪತ್ತಿ ಹಾಗೂ ಮುಟ್ಟಿನ ಹಕ್ಕುಗಳ ಮಸೂದೆ’ ಮಂಡಿಸಿದ ಶಶಿ ತರೂರ್.

2019, ಮೇ 29: ತಿದ್ದುಪಡಿ ಮಸೂದೆಯ ಸೆಕ್ಷನ್ 3 (2)(2) ಸಂವಿಧಾನದ 14 ಮತ್ತು 21ನೇ ಕಲಂಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ.

2019, ಮೇ 28: ತಾಯಿ ಅಥವಾ ಭ್ರೂಣದ ಆರೋಗ್ಯಕ್ಕೆ ಅಪಾಯ ಇದ್ದಲ್ಲಿ ಗರ್ಭಪಾದ ಅವಧಿಯನ್ನು 4–6 ವಾರ ವಿಸ್ತರಿಸುವಂತೆ ಕೋರಿದ್ದ ಅರ್ಜಿ ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್.

2019, ಏ.24: ಗರ್ಭಪಾತದ ಗರಿಷ್ಠ ಅವಧಿ ವಿಸ್ತರಣೆ ಸಂಬಂಧ ತುರ್ತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ.

ವೈದ್ಯಕೀಯ ಗರ್ಭಪಾತ (MTP) ತಿದ್ದುಪಡಿ ಮಸೂದೆ, 2020ರ ಪ್ರಮುಖ ಅಂಶಗಳು:

 • ಈ ಮಸೂದೆಯು,ವಿಶೇಷ ಸಂದರ್ಭಗಳಲ್ಲಿ ವೈದ್ಯಕೀಯ ಗರ್ಭಪಾತದ ಗರಿಷ್ಠ ಅವಧಿಯ ಮಿತಿಯನ್ನು ಈಗಿರುವ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಲು ಪ್ರಯತ್ನಿಸುತ್ತದೆ.
 • ಅತ್ಯಾಚಾರ ಸಂತ್ರಸ್ತರು, ಲೈಂಗಿಕ ದೌರ್ಜನ್ಯದ ಬಲಿಪಶುಗಳು, ವಿಭಿನ್ನ ಸಾಮರ್ಥ್ಯದ ಬಾಲಕಿಯರು, ಅಪ್ರಾಪ್ತ ವಯಸ್ಸಿನವರನ್ನು ಒಳಗೊಂಡಂತೆ,ವಿಶೇಷ ವರ್ಗದ ಸಂತ್ರಸ್ತ ಮಹಿಳೆಯರಿಗೆ” ಈ ಮಸೂದೆಯು ಸಹಾಯ ಮಾಡುತ್ತದೆ.
 • ಗರ್ಭಧಾರಣೆಯ ನಂತರ 20 ವಾರಗಳವರೆಗಿನ ಗರ್ಭಪಾತಕ್ಕೆ ಓರ್ವ ನೋಂದಾಯಿತ ವೈದ್ಯರ (RMP) ಅಭಿಪ್ರಾಯದ ಅಗತ್ಯವನ್ನು ಮಸೂದೆ ಪ್ರಸ್ತಾಪಿಸಿದೆ.
 • 20 ರಿಂದ 24 ವಾರದೊಳಗಿನ ಭ್ರೂಣವನ್ನು ತೆಗೆಸಲು ಓರ್ವ ಮಹಿಳೆಯು ನಿರ್ಧರಿಸಿದರೆ ವೈದ್ಯಕೀಯ ವೃತ್ತಿ ಮಾಡುವ ನೊಂದಾಯಿತ ವೈದ್ಯರ (Registered Medical Practitioner) ಅಂದರೆ ಸರ್ಕಾರಿ ವೈದ್ಯ ಸೇರಿ ಇಬ್ಬರು ವೈದ್ಯರ ಅನುಮತಿ ಅಗತ್ಯ ಎಂದು ಈ ಮಸೂದೆ ತಿಳಿಸುತ್ತದೆ. ಅಲ್ಲದೆ ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯ ಹೆಸರು ಹಾಗೂ ಇತರೆ ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು ಎಂದು ಈ ತಿದ್ದುಪಡಿ ಮಸೂದೆಯು ಉಲ್ಲೇಖಿಸುತ್ತದೆ.
 • ವೈದ್ಯಕೀಯ ವಿಜ್ಞಾನ ಪ್ರಗತಿ ಹೊಂದಿದ್ದು, ಮಹಿಳೆಯ ಸಂತಾನೋತ್ಪತ್ತಿಯ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದೂ ಈ ಮಸೂದೆ ತಿಳಿಸುತ್ತದೆ.
 • ಈ ಮಸೂದೆಯ ಮೂಲಕ ‘1971 ರ ವೈದ್ಯಕೀಯ ಗರ್ಭಪಾತ ಕಾಯ್ದೆಗೆ’ ತಿದ್ದುಪಡಿತರಲು ನಿರ್ಧರಿಸಲಾಗಿದೆ.
 • ವೈದ್ಯಕೀಯ ಗರ್ಭಪಾತ (ತಿದ್ದುಪಡಿ)ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ, ಕೆಲವೊಂದು ಕಾನೂನು ಪ್ರಕ್ರಿಯೆಗಳು ಇಲ್ಲವಾಗಿ ಸಂತ್ರಸ್ತ ಮಹಿಳೆಯರು ನ್ಯಾಯಾಲಯದ ಮೊರೆ ಹೋಗದೆಯೇ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ದೊರೆಯಲಿದೆ. ಅತ್ಯಾಚಾರ ಅಥವಾ ಯಾವುದೇ ದುರ್ಘಟನೆಯಿಂದ ಘಾಸಿಗೊಂಡ ಸಂತ್ರಸ್ತೆಯು ಮತ್ತಷ್ಟು ಕಾನೂನು ಪ್ರಕ್ರಿಯೆಗಳ ಮೊರೆ ಹೋಗುವುದು ತಪ್ಪಲಿದೆ.

 ಕೂಲಂಕಷ ಪರೀಕ್ಷೆಯ ಅಗತ್ಯತೆ:

 • ಪ್ರಸ್ತುತ ಇರುವ 5 ದಶಕಗಳಷ್ಟು ಹಳೆಯದಾದ ವೈದ್ಯಕೀಯ ಗರ್ಭಪಾತದ ಕಾನೂನು, ಗರಿಷ್ಠ 20 ವಾರಗಳ ವರೆಗಿನ ಭ್ರೂಣದ ಗರ್ಭಪಾತವನ್ನು ಅನುಮತಿಸುತ್ತದೆ.
 • ಇತ್ತೀಚಿನ ವರ್ಷಗಳಲ್ಲಿ, ವೈದ್ಯಕೀಯ ಗರ್ಭಪಾತಕ್ಕೆ ಇರುವ ಭ್ರೂಣದ ಗರ್ಭಾವಸ್ಥೆಯ ಅವಧಿಯನ್ನು 20 ವಾರಗಳಿಗಿಂತ ಹೆಚ್ಚಿಗೆ ವಿಸ್ತರಿಸಬೇಕೆಂಬ ಬಲವಾದ ಬೇಡಿಕೆಗಳು ಕೇಳಿಬರುತ್ತಿವೆ.

cabinet_decision

 

ವಿಷಯಗಳು: ಜನಸಂಖ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಕೇಂದ್ರ ಸರ್ಕಾರವು ಜನಗಣತಿಯನ್ನು 2022 ಕ್ಕೆ ಮುಂದೂಡುವ ಸಾಧ್ಯತೆ ಇದೆ:


ಸಂದರ್ಭ:

COVID-19 ಸಾಂಕ್ರಾಮಿಕ ರೋಗಗಳ ನಿರಂತರ ಪ್ರಸರಣದಿಂದಾಗಿ, ಮುಂದಾಲೋಚನೆಯೊಂದಿಗೆ 2021 ರ ಜನಗಣತಿಯನ್ನು 2022 ಕ್ಕೆ ಮುಂದೂಡಲು ಕೇಂದ್ರವು ನಿರ್ಧರಿಸಿದೆ.

ಹಿನ್ನೆಲೆ:

 • 2020 ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಮನೆಗಳ ಪಟ್ಟಿ ತಯಾರಿಸುವುದು ಮತ್ತು ವಸತಿ ಗಣತಿ ಮತ್ತು 2021 ರ ಫೆಬ್ರವರಿ 9 ರಿಂದ ಫೆಬ್ರವರಿ 28 ರವರೆಗೆ, ಜನಸಂಖ್ಯೆ ಎಣಿಕೆ ಅಥವಾ ಜನಗಣತಿ, ಹೀಗೆ ಈ ಜನಗಣತಿ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಬೇಕಾಗಿತ್ತು.
 • ಆರಂಭಿಕವಾಗಿ ಜನಗಣತಿಯ ಮೊದಲ ಹಂತ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ನವೀಕರಣವನ್ನು 2020 ರ ಏಪ್ರಿಲ್ 1 ರಿಂದ ಕೆಲವು ರಾಜ್ಯಗಳಲ್ಲಿ ಪ್ರಾರಂಭಿಸಲಾಯಿತು, ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮುಂದೂಡಲಾಯಿತು.

ಜನಗಣತಿ:

ಜನಗಣತಿಯು ದೇಶದ ಜನಸಂಖ್ಯೆಯ ಗಾತ್ರ, ಜನಸಂಖ್ಯೆಯ ಹಂಚಿಕೆ ಮತ್ತು ಅದರ ಸಾಮಾಜಿಕ-ಆರ್ಥಿಕ ಸ್ಥಿತಿಗಿಗಳನ್ನು, ಜನಸಂಖ್ಯಾ ವೈವಿಧ್ಯತೆ ಮತ್ತು ಇತರ ಗುಣಲಕ್ಷಣಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

 • ಜನಗಣತಿಯನ್ನು ಮೊದಲು 1872 ರಲ್ಲಿ, ಬ್ರಿಟಿಷ್ ವೈಸರಾಯನಾದ ಲಾರ್ಡ್ ಮೇಯೋ ಅವರ ಅಧಿಕಾರ ಅವಧಿಯಲ್ಲಿ ಪ್ರಾರಂಭಿಸಲಾಯಿತು.ಇದು ಜನ ಸಮುದಾಯದಲ್ಲಿ, ಸಮಾಜವನ್ನು ಉನ್ನತೀಕರಿಸಲು ಹೊಸ ನೀತಿಗಳನ್ನು, ಸರ್ಕಾರಿ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯ ಮಾಡಿತು.
 • ಭಾರತದಲ್ಲಿ ಮೊದಲ ಪೂರ್ಣಪ್ರಮಾಣದ ಜನಗಣತಿಯನ್ನು 1881 ರಲ್ಲಿ ನಡೆಸಲಾಯಿತು. ಅಂದಿನಿಂದ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ಕಾರ್ಯಕ್ರಮವನ್ನು ತಡೆರಹಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ.

ಭಾರತದಲ್ಲಿ ಜನಗಣತಿಯನ್ನು ಯಾರು ನಡೆಸುತ್ತಾರೆ?

ಭಾರತದಲ್ಲಿ, ದಶಕದ ಜನಗಣತಿಯನ್ನು ನಡೆಸುವ ಜವಾಬ್ದಾರಿಯನ್ನು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಗೆ (Office of the Registrar General and Census Commissioner) ವಹಿಸಲಾಗಿದೆ.

ಜನಗಣತಿಯು ಈ ಕೆಳಗಿನ ವಿಷಯಗಳ ಮಾಹಿತಿಯ ಅತ್ಯಂತ ವಿಶ್ವಾಸಾರ್ಹ ಮೂಲಗಳಲ್ಲಿ ಒಂದಾಗಿದೆ:

 • ಜನಸಂಖ್ಯಾಶಾಸ್ತ್ರ.
 • ಆರ್ಥಿಕ ಚಟುವಟಿಕೆಗಳು.
 • ಸಾಕ್ಷರತೆ ಮತ್ತು ಶಿಕ್ಷಣ.
 • ವಸತಿ ಮತ್ತು ಗೃಹ ಸೌಲಭ್ಯಗಳು.
 • ನಗರೀಕರಣ, ಫಲವತ್ತತೆ ಮತ್ತು ಮರಣ.
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ.
 • ಭಾಷೆ.

ಐತಿಹಾಸಿಕ ಮಹತ್ವ:

 • ಕ್ರಿ.ಪೂ 800–600ರ ಅವಧಿಯಲ್ಲಿ ಭಾರತದಲ್ಲಿ ಕೆಲವು ರೀತಿಯ ಜನಸಂಖ್ಯಾ ಲೆಕ್ಕಾಚಾರವನ್ನು ಮಾಡಲಾಯಿತು ಎಂದು ‘ಋಗ್ವೇದ’ ವು ತಿಳಿಸುತ್ತದೆ.
 • ತೆರಿಗೆ ಸಂಗ್ರಹಿಸಲು ರಾಜ್ಯ-ನೀತಿಯ ಅಳತೆಯಾಗಿ ಜನಸಂಖ್ಯಾ ದತ್ತಾಂಶ ಸಂಗ್ರಹವನ್ನು ಕ್ರಿ.ಪೂ 3 ನೇ ಶತಮಾನದಲ್ಲಿ ಕೌಟಿಲ್ಯ ಬರೆದಿರುವ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
 • ಮೊಘಲ್ ಚಕ್ರವರ್ತಿ ಅಕ್ಬರ್ ಆಳ್ವಿಕೆಯ ಸಮಯದಲ್ಲಿ ಬರೆದ ಐನ್-ಇ-ಅಕ್ಬರಿ’, ಯು, ಜನಸಂಖ್ಯೆ, ಕೈಗಾರಿಕೆ, ಸಂಪತ್ತು ಮತ್ತು ಇತರ ಹಲವು ಗುಣಲಕ್ಷಣಗಳಿಗೆ ಸಂಬಂಧಿಸಿದ ವಿವರವಾದ ಅಂಕಿ ಅಂಶಗಳನ್ನು ಒಳಗೊಂಡಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೊಸದಾಗಿ 14 ಕಿರು ಅರಣ್ಯ ಉತ್ಪನ್ನಗಳ ಸೇರ್ಪಡೆ:


ಸಂದರ್ಭ :

ಕನಿಷ್ಠ ಬೆಂಬಲ ಬೆಲೆ ಯೋಜನೆಯ ಮೂಲಕ ಕಿರು ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡುವ ಕಾರ್ಯವಿಧಾನದಡಿಯಲ್ಲಿ 14 ಹೊಸ ಕಿರು ಅರಣ್ಯ ಉತ್ಪನ್ನಗಳನ್ನು ಸೇರಿಸಲು ಸರ್ಕಾರ ನಿರ್ಧರಿಸಿದೆ.

 • ಹೊಸದಾಗಿ ಒಳಗೊಂಡಿರುವ ವಸ್ತುಗಳು ತಾಸರ್ ಕೋಕೂನ್ (Tasar Cocoon), ಒಣ ಆನೆ ಸೇಬು (elephant apple dry), ಬಿದಿರಿನ ಚಿಗುರು (bamboo shoot), ಮಲ್ಕಂಗಣಿ ಬೀಜಗಳು (malkangani seed) ಮತ್ತು ಒಣಗಿದ ಕಾಡು ಅಣಬೆಗಳು (wild dry mushroom).

ಯೋಜನೆಯ ಕುರಿತು :

 • ಆಯ್ದ ಕಿರು ಅರಣ್ಯ ಉತ್ಪನ್ನಗಳ (MFP) ಪಟ್ಟಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು 2011 ರಲ್ಲಿ “ಕನಿಷ್ಠ ಬೆಂಬಲ ಬೆಲೆ ಮತ್ತು ಕಿರು ಅರಣ್ಯ ಉತ್ಪಾದನೆ (MFP) ಯೋಜನೆಯ ಮೌಲ್ಯ ಸರಪಳಿಯ ಅಭಿವೃದ್ಧಿ” ಮೂಲಕ ಬಿಡುಗಡೆ ಮಾಡಿತು. ಅಥವಾ
 • 2011 ರಲ್ಲಿ ಕನಿಷ್ಠ ಬೆಂಬಲ ಬೆಲೆ ಮತ್ತು ಆಯ್ದ ಕಿರು ಅರಣ್ಯ ಉತ್ಪನ್ನಗಳ (MFP) ಯೋಜನೆಯ ಮೌಲ್ಯ ಸರಪಳಿಯ ಅಭಿವೃದ್ಧಿಯ ಮೂಲಕ ಕಿರು ಅರಣ್ಯ ಉತ್ಪಾದನೆಯನ್ನು ಮಾರಾಟ ಮಾಡುವ ಕಾರ್ಯವಿಧಾನದ ಮೂಲಕ ಕಿರು ಅರಣ್ಯ ಉತ್ಪನ್ನಗಳ ಆಯ್ದ ಪಟ್ಟಿಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಪರಿಚಯಿಸಿತು.
 • ಹಿಂದುಳಿದ / ಕನಿಷ್ಠ ಸಾಮಾನ್ಯ ಹಕ್ಕುಗಳು ಇಲ್ಲದ ಅರಣ್ಯವಾಸಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಮತ್ತು ಅವರ ಸಬಲೀಕರಣಕ್ಕೆ ನೆರವು ನೀಡುವುದು ಇದರ ಉದ್ದೇಶವಾಗಿದೆ.

ಅನುಷ್ಠಾನ :

 • ಸಣ್ಣ ಅಥವಾ ಕಿರು ಅರಣ್ಯ ಉತ್ಪನ್ನಗಳನ್ನು (MFP) ಕನಿಷ್ಠ ಬೆಂಬಲ ಬೆಲೆಗೆ (MSP) ಖರೀದಿಸುವ ಜವಾಬ್ದಾರಿಯು ರಾಜ್ಯವು ನಿಗದಿಪಡಿಸಿದ ಏಜೆನ್ಸಿಗಳಿಗೆ ಇರುತ್ತದೆ.
 • ಸಣ್ಣ ಅಥವಾ ಕಿರು ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನು ಖಚಿತಪಡಿಸಿಕೊಳ್ಳಲು, ನಿಗದಿತ ಏಜೆನ್ಸಿಗಳಿಗೆ ಮಾರುಕಟ್ಟೆ ಏಜೆಂಟರನ್ನು ಬಳಸುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
 • ಈ ಯೋಜನೆಯು ಪ್ರಾಥಮಿಕ ಮೌಲ್ಯವರ್ಧನೆ ಮತ್ತು ಪೂರೈಕೆ ಸರಪಳಿ ಮೂಲಸೌಕರ್ಯಗಳಾದ ಕೋಲ್ಡ್ ಸ್ಟೋರೇಜ್, ಗೋದಾಮು ಇತ್ಯಾದಿಗಳಿಗೆ ಬೆಂಬಲವನ್ನು ನೀಡುತ್ತದೆ.
 • ಯೋಜನೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ನೋಡಲ್ ಸಚಿವಾಲಯವಾಗಿರುತ್ತದೆ. ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಒಕ್ಕೂಟ (TRIFED) ನ ತಾಂತ್ರಿಕ ಬೆಂಬಲದೊಂದಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಚಿವಾಲಯವು ನಿರ್ಧರಿಸುತ್ತದೆ.

ಕಿರು ಅರಣ್ಯ ಉತ್ಪನ್ನಗಳು ಎಂದರೇನು ?

ಅರಣ್ಯ ಹಕ್ಕುಗಳ ಕಾಯ್ದೆಯ ಸೆಕ್ಷನ್ 2 (I) ಪ್ರಕಾರ, ಸಸ್ಯಮೂಲದ ಎಲ್ಲಾ ಮರದ ದಿಮ್ಮಿಗಳಲ್ಲದ ಮತ್ತು ಬಿದಿರು, ಬ್ರಷ್‌ವುಡ್, ಸ್ಟಂಪ್, ಕ್ಯಾನ್, ಕೋಕೂನ್, ಜೇನುತುಪ್ಪ, ಮೇಣ, ಲ್ಯಾಕ್, ಟೆಂಡು / ಕೆಂಡು ಎಲೆಗಳು, ಔಷಧೀಯ ಸಸ್ಯಗಳು ಇತ್ಯಾದಿಗಳನ್ನು ಒಳಗೊಂಡಿರುವ ವಸ್ತುಗಳನ್ನು ಕಿರು ಅರಣ್ಯ ಉತ್ಪನ್ನಗಳು (MFP) ಎನ್ನುವರು.

 • ಭಾರತೀಯ ಅರಣ್ಯ ಕಾಯ್ದೆ’ 1927 ರ ಅಡಿಯಲ್ಲಿ ಬಿದಿರು ಮತ್ತು ಕಬ್ಬನ್ನು ‘ಮರಗಳು’ ಎಂದು ವರ್ಗೀಕರಿಸಲಾಗಿದೆ, ಈಗ ಮತ್ತೆ ಇವುಗಳನ್ನು ( ಬಿದಿರು ಮತ್ತು ಕಬ್ಬನ್ನು ) ‘ಸಣ್ಣ ಅರಣ್ಯ ಉತ್ಪನ್ನಗಳ’ ವ್ಯಾಖ್ಯಾನದಲ್ಲಿ ಸೇರಿಸಲು ಬದಲಾಯಿಸಲಾಗಿದೆ.

 

ವಿಷಯಗಳು : ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ – ಸಂಬಂಧಗಳು.

ಚಬಹಾರ್ ಬಂದರು: (Chabahar Port):


ಸಂದರ್ಭ :

ಇತ್ತೀಚೆಗೆ ಭಾರತ ಎರಡು ಮೊಬೈಲ್ ಹಾರ್ಬರ್ ಕ್ರೇನ್‌ಗಳನ್ನು ಇರಾನ್‌ನ ಚಬಹಾರ್ ಬಂದರಿಗೆ ಹಸ್ತಾಂತರಿಸಿದೆ. ಚಾಬಹಾರ್ ಬಂದರನ್ನು 85 ಮಿಲಿಯನ್ ಡಾಲರ್ ವೆಚ್ಚದಲ್ಲಿ  ಅಭಿವೃದ್ಧಿಪಡಿಸುವ ದ್ವಿಪಕ್ಷೀಯ ಒಪ್ಪಂದಕ್ಕೆ ಭಾರತ ಮತ್ತು ಇರಾನ್ ನಡುವೆ 2016 ರ ಮೇನಲ್ಲಿ ಸಹಿ ಹಾಕಲಾಯಿತು. ಇದು ಅದೇ ಒಪ್ಪಂದದ ಒಂದು ಭಾಗವಾಗಿದೆ.

 • ಇರಾನಿನ ಅಧಿಕಾರಿಗಳೊಂದಿಗಿನ ಮಾತುಕತೆಯ ಮಧ್ಯೆ, ಭಾರತದ ಈ ಕ್ರಮವು ಬಂದರು ಯೋಜನೆಯನ್ನು ಮುಂದುವರಿಸುವುದನ್ನು ಸಂಕೇತಿಸುತ್ತದೆ.

ಈ ಬಂದರು ಯೋಜನೆಯ ಮಹತ್ವ :

 • ಇರಾನ್ ಪರಮಾಣು ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವ ಬಗ್ಗೆ ಬಿಡೆನ್ ಆಡಳಿತವು ಅಮೇರಿಕಾದ ನೀತಿಯನ್ನು ಸ್ಪಷ್ಟಪಡಿಸಿದ ನಂತರ, ಮುಂಬರುವ ತಿಂಗಳುಗಳಲ್ಲಿ ಇರಾನ್ ಮೇಲಿನ ಅಮೆರಿಕ ಸಂಯುಕ್ತ ಸಂಸ್ಥಾನದ ನಿರ್ಬಂಧಗಳನ್ನು ಸಡಿಲಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಿರುವ ಭಾರತ ಸರ್ಕಾರವು ಬಂದರು ಯೋಜನೆಯಲ್ಲಿ ಮತ್ತಷ್ಟು ಹೂಡಿಕೆ ಮಾಡುವ ಆಶಾವಾದ ಹೊಂದಿದೆ.
 • ಬಂದರು ಯೋಜನೆಯಲ್ಲಿ ಮರುಹೂಡಿಕೆ ಮಾಡುವ ಭಾರತದ ಯೋಜನೆಯನ್ನು ಇದರ ಸೂಚಕವಾಗಿ ನೋಡಲಾಗುತ್ತಿದೆ.

ಚಬಹಾರ್ ಬಂದರು ಎಲ್ಲಿದೆ?

 • ಚಬಹಾರ್ ಬಂದರು ಒಮಾನ್ ಕೊಲ್ಲಿಯಲ್ಲಿದೆ ಮತ್ತು ಇರಾನ್‌ನ ಏಕೈಕ ಸಮುದ್ರ ಬಂದರು ಆಗಿದೆ.

ಚಬಹಾರ್ ಬಂದರು ಭಾರತಕ್ಕೆ ಏಕೆ ಅಷ್ಟೊಂದು ಮಹತ್ವದ್ದಾಗಿದೆ?

 • ಚಬಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಸಾಗಿಸಲು ಪಾಕಿಸ್ತಾನದ ಮೂಲಕ ಹಾದುಹೋಗುವ ಮಾರ್ಗವನ್ನು ಬಳಸುವ ಹೊಣೆಗಾರಿಕೆಯಿಂದ ಭಾರತವು ಮುಕ್ತವಾಗಬಹುದು.
 • ಇದು ಭಾರತ, ರಷ್ಯಾ, ಇರಾನ್, ಯುರೋಪ್ ಮತ್ತು ಮಧ್ಯ ಏಷ್ಯಾದ ನಡುವೆ ಸಮುದ್ರ, ರೈಲು ಮತ್ತು ರಸ್ತೆ ಮಾರ್ಗಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ನ (International North-South Transport Corridor) ಪ್ರಮುಖ ಗೇಟ್‌ವೇ ಆಗಿರುವ ಇರಾನ್‌ಗೆ ಭಾರತದ ಪ್ರವೇಶವನ್ನು ಹೆಚ್ಚಿಸುತ್ತದೆ.
 • ಈ ಬಂದರು, ಅರೇಬಿಯನ್ ಸಮುದ್ರದಲ್ಲಿ ಚೀನಾದ ಉಪಸ್ಥಿತಿಯನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಪಾಕಿಸ್ತಾನದ ಗ್ವಾದರ್ ಬಂದರಿನ ಮೂಲಕ ಚೀನಾ ಅರೇಬಿಯನ್ ಸಮುದ್ರದಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಗ್ಪದಾರ್ ಬಂದರು ಚಬಹಾರ್‌ನಿಂದ ರಸ್ತೆಯ ಮೂಲಕ 400 ಕಿ.ಮೀ ಮತ್ತು ಸಮುದ್ರ ಮಾರ್ಗವಾಗಿ ಕೇವಲ 100 ಕಿ.ಮೀ. ದೂರದಲ್ಲಿದೆ.
 • ಚಬಹಾರ್ ಬಂದರನ್ನು ಭಾರತ ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿರುವುದರಿಂದ, ಇರಾನ್ ಕೂಡ ಭಾರತದ ರಕ್ಷಣಾ ಮಿತ್ರನಾಗಿ ಮಾರ್ಪಟ್ಟಿದೆ.
 • ಒಂದು ವೇಳೆ ಚೀನಾ ಗ್ವದಾರ್ ಬಂದರಿನಲ್ಲಿ ಯುದ್ಧನೌಕೆಗಳನ್ನು ಇರಿಸಿ ತನ್ನ ನೌಕಾ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಹಿಂದೂಮಹಾಸಾಗರ, ಪರ್ಷಿಯನ್ ಕೊಲ್ಲಿ ಮತ್ತು ಮಧ್ಯಪ್ರಾಚ್ಯದಲ್ಲಿ ಮೇಲುಗೈ ಸಾಧಿಸಲು ಬಯಸಿದರೆ ಆ ಸಂದರ್ಭದಲ್ಲಿ ಚೀನಾವನ್ನು ಕಟ್ಟಿಹಾಕಲು ಚಬಹಾರ್ ಬಂದರು ಉಪಯುಕ್ತವಾಗಿದೆ.
 • ವ್ಯಾಪಾರ ಲಾಭಗಳು: ಚಬಹಾರ್ ಬಂದರು ಕಾರ್ಯನಿರ್ವಹಿಸುವುದರೊಂದಿಗೆ, ಭಾರತಕ್ಕೆ ಕಬ್ಬಿಣದ ಅದಿರು, ಸಕ್ಕರೆ ಮತ್ತು ಅಕ್ಕಿ ಆಮದು ಮಾಡಿಕೊಳ್ಳುವಲ್ಲಿ ಬಹಳ ಉಪಯುಕ್ತವಾಗಿರುವುದು ಕಂಡುಬರುತ್ತದೆ. ಭಾರತದ ತೈಲ ಆಮದು ವೆಚ್ಚವೂ ಗಮನಾರ್ಹವಾಗಿ ಇಳಿಯಲಿದೆ. ಅಲ್ಲದೆ ಪಶ್ಚಿಮ ದೇಶಗಳು ಇರಾನ್ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದಾಗಿನಿಂದ ಭಾರತವು ಇರಾನ್ ನಿಂದ ಕಚ್ಚಾತೈಲದ ಖರೀದಿಯನ್ನು ಈಗಾಗಲೇ ಹೆಚ್ಚಿಸಿದೆ.
 • ರಾಜತಾಂತ್ರಿಕ ದೃಷ್ಟಿಕೋನದಿಂದ, ಚಬಹಾರ್ ಬಂದರನ್ನು ಮಾನವೀಯ ಕಾರ್ಯಾಚರಣೆಗಳನ್ನು (Humanitarian Operations) ಸಂಘಟಿಸಲು ಬಳಸಬಹುದು.

 

ವಿಷಯಗಳು: ಪ್ರಜಾಪ್ರಭುತ್ವದಲ್ಲಿ ನಾಗರಿಕ ಸೇವೆಗಳ ಪಾತ್ರ.

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2020 :


(Corruption Perception Index) :

ಸಂದರ್ಭ :

ಇತ್ತೀಚೆಗೆ, ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ – (Corruption Perception Index– CPI), 2020 ಬಿಡುಗಡೆ ಮಾಡಲಾಗಿದೆ.

 • ಈ ಸೂಚ್ಯಂಕವನ್ನು ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ (Transparency International) ತಯಾರಿಸುತ್ತದೆ.

ಏನಿದು ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI)?

 • ಇದು ಭ್ರಷ್ಟಾಚಾರದ ಕ್ಷೇತ್ರದಲ್ಲಿ ವಿಶ್ವದ ದೇಶಗಳಿಗೆ ಸ್ಥಾನ ನೀಡಲು 12 ಸಮೀಕ್ಷೆಗಳ ಆಧಾರದ ಮೇಲೆ ಸಂಯೋಜಿತವಾದ ಸೂಚ್ಯಂಕವಾಗಿದೆ.
 • ಇದು ಭ್ರಷ್ಟಾಚಾರದ ಗ್ರಹಿಕೆಗಳ ಮಾನದಂಡದ ಅಳತೆಗೋಲಾಗಿದೆ ಮತ್ತು ಇದನ್ನು ವಿಶ್ಲೇಷಕರು ಮತ್ತು ಹೂಡಿಕೆದಾರರು ಬಳಸುತ್ತಾರೆ.
 • ಈ ಸೂಚ್ಯಂಕವು ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರದ ಬಗ್ಗೆ ತಜ್ಞರ ಅಭಿಪ್ರಾಯವನ್ನು ಆಧರಿಸಿದೆ ಮತ್ತು ಭ್ರಷ್ಟಾಚಾರಕ್ಕೆ ಸರ್ಕಾರಿ ನಾಯಕರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆಯೇ, ಅಥವಾ ಅವರು ಭ್ರಷ್ಟಾಚಾರಕ್ಕೆ ನೀಡುವ ಶಿಕ್ಷೆಯಿಂದ ಪಾರಾಗುತ್ತಾರೆಯೇ, ಲಂಚದ ಹರಡುವಿಕೆ ಮತ್ತು ನಾಗರಿಕರ ಅಗತ್ಯಗಳಿಗೆ ಸಾರ್ವಜನಿಕ ಸಂಸ್ಥೆಗಳ ಪ್ರತಿಕ್ರಿಯೆ ಹೇಗಿದೆ ಎಂಬ ಹಲವಾರು ಅಂಶಗಳನ್ನು ಒಳಗೊಂಡಿದೆ.

ಈ ಸೂಚ್ಯಂಕದಲ್ಲಿ ದೇಶಗಳು ಹೇಗೆ ಸ್ಥಾನ ಪಡೆದಿವೆ?

 • ‘ಭ್ರಷ್ಟಾಚಾರ ವಿರೋಧಿ ಸೂಚ್ಯಂಕ’ ದ ಅಡಿಯಲ್ಲಿ, ಸಾರ್ವಜನಿಕ ವಲಯದ ಭ್ರಷ್ಟಾಚಾರದ ಬಗ್ಗೆ ತಜ್ಞರು ಮತ್ತು ವ್ಯಾಪಾರಸ್ಥರ ಅನುಭವಗಳ ಆಧಾರದ ಮೇಲೆ ವಿಶ್ವದ 180 ದೇಶಗಳು ಸ್ಥಾನ ಪಡೆದಿವೆ.
 • ಸೂಚ್ಯಂಕವು ಶೂನ್ಯದಿಂದ 100’ ಪ್ರಮಾಣವನ್ನು ಬಳಸುತ್ತದೆ, ಅಲ್ಲಿ ಶೂನ್ಯವು ಅತ್ಯಂತ ಭ್ರಷ್ಟ ಮತ್ತು 100’ ಅತ್ಯಂತ ‘ನ್ಯಾಯೋಚಿತ’ ಅಥವಾ ಶುದ್ಧಹಸ್ತ ವಾತಾವರಣವನ್ನು ಪ್ರತಿನಿಧಿಸುತ್ತದೆ.

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ -2020 ರಲ್ಲಿ ಭಾರತದ ಸಾಧನೆ:

 • 2020 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ (ಸಿಪಿಐ) ಭಾರತ 180 ದೇಶಗಳಲ್ಲಿ ಆರು ಸ್ಥಾನಗಳಷ್ಟು ಕುಸಿದು 86 ನೇ ಸ್ಥಾನದಲ್ಲಿದೆ.
 • ಸೂಚ್ಯಂಕದಲ್ಲಿ ಭಾರತದ ಸ್ಕೋರ್ ಏಷ್ಯಾ-ಪೆಸಿಫಿಕ್ ಪ್ರದೇಶದ (31 ದೇಶಗಳು) ಸರಾಸರಿ ಸ್ಕೋರ್ ಮತ್ತು ಜಾಗತಿಕ ಸರಾಸರಿಗಿಂತ ಕಡಿಮೆಯಾಗಿದೆ.
 • ಭಾರತದ ಒಟ್ಟಾರೆ ಸ್ಕೋರ್ ಚೀನಾಕ್ಕಿಂತ 2 ಪಾಯಿಂಟ್ ಕಡಿಮೆ ಇದೆ ಹಾಗೂ ಸೂಚ್ಯಂಕದಲ್ಲಿ ಚೀನಾ 78 ನೇ ಸ್ಥಾನದಲ್ಲಿದೆ.
 • ಸೂಚ್ಯಂಕದಲ್ಲಿ ಪಾಕಿಸ್ತಾನ 144 ನೇ ಸ್ಥಾನದಲ್ಲಿದೆ.

ಒಟ್ಟಾರೆಯಾಗಿ ಸೂಚ್ಯಂಕದಲ್ಲಿ ಅತ್ಯುತ್ತಮ ಮತ್ತು ಕೆಟ್ಟ ಸಾಧನೆ:

 • ಭ್ರಷ್ಟಾಚಾರ-ವಿರೋಧಿ ಸೂಚ್ಯಂಕದಲ್ಲಿ ನ್ಯೂಜಿಲೆಂಡ್ ಮತ್ತು ಡೆನ್ಮಾರ್ಕ್ (88) ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರೆ, ಸ್ವಿಟ್ಜರ್ಲೆಂಡ್, ಫಿನ್ಲ್ಯಾಂಡ್, ಸ್ವೀಡನ್ ಮತ್ತು ಸಿಂಗಾಪುರಗಳು ತಲಾ 85 ಅಂಕಗಳನ್ನು ಪಡೆದು ನಂತರದ ಸ್ಥಾನದಲ್ಲಿವೆ.
 • ದಕ್ಷಿಣ ಸುಡಾನ್ ಮತ್ತು ಸೊಮಾಲಿಯಾ ಎರಡೂ ಜಂಟಿಯಾಗಿ ಜಾಗತಿಕ ಶ್ರೇಯಾಂಕದಲ್ಲಿ 12 ಅಂಕಗಳೊಂದಿಗೆ ಅತ್ಯಂತ ಕೆಳಗಿನ ಸ್ಥಾನದಲ್ಲಿವೆ.

ಭ್ರಷ್ಟಾಚಾರ ಮತ್ತು ಕೋವಿಡ್ -19:

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದ (CPI) ಇತ್ತೀಚಿನ ಆವೃತ್ತಿಯು ಕೋವಿಡ್ -19 ನೊಂದಿಗೆ ವ್ಯವಹರಿಸಲು ಸರ್ಕಾರದ ಪ್ರತಿಕ್ರಿಯೆಗಳ ಮೇಲೆ ಭ್ರಷ್ಟಾಚಾರದ ಪ್ರಭಾವವನ್ನು ಎತ್ತಿ ತೋರಿಸಿದೆ. ದೇಶಗಳ ಸೂಚ್ಯಂಕ ದಲ್ಲಿನ ಸಾಧನೆಯನ್ನು ಅವರ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿನ ಹೂಡಿಕೆಗೆ ಹೋಲಿಸುತ್ತದೆ ಮತ್ತು ಸಾಂಕ್ರಾಮಿಕದ ಸಮಯದಲ್ಲಿ ಪ್ರಜಾಪ್ರಭುತ್ವದ ಪ್ರಮಾಣಿತ ಸಂಸ್ಥೆಗಳು ಎಷ್ಟರಮಟ್ಟಿಗೆ ದುರ್ಬಲಗೊಂಡಿದೆ ಎಂಬುದನ್ನು ತಿಳಿಸುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 4


 

ವಿಷಯಗಳು : ವರ್ತನೆ: ವಿಷಯ, ರಚನೆ, ಕಾರ್ಯ; ಚಿಂತನೆ ಮತ್ತು ನಡವಳಿಕೆಯ ದೃಷ್ಟಿಕೋನದಲ್ಲಿ ಅದರ ಪ್ರಭಾವ ಮತ್ತು ಸಂಬಂಧ; ನೈತಿಕ ಮತ್ತು ರಾಜಕೀಯ ಆಸಕ್ತಿ; ಸಾಮಾಜಿಕ ಪ್ರಭಾವ ಮತ್ತು ಗ್ರಹಿಕೆ.

ಸರೋವರವನ್ನು ಸ್ವಚ್ಛ -ಗೊಳಿಸುವ ಏಕಾಂಗಿ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಿ ಮೋದಿ :


 ಸಂದರ್ಭ :

 • ಮೊಣಕಾಲುಗಳ ಕೆಳಗೆ ಪಾರ್ಶ್ವವಾಯುವಿಗೆ ತುತ್ತಾದ 69 ವರ್ಷದ ವ್ಯಕ್ತಿಯು ವೆಂಬನಾಡ್ ಸರೋವರವನ್ನು ನಿರಂತರವಾಗಿ ಸ್ವಚ್ಛ ಗೊಳಿಸುವ ದಣಿವರಿಯದ ಪ್ರಯತ್ನವನ್ನು ದೇಶದ ಪ್ರಧಾನಿ ಗುರುತಿಸಿದ್ದಾರೆ.
 • ಇತ್ತೀಚಿಗೆ ಪ್ರಧಾನಮಂತ್ರಿಯವರು ಮನದಮಾತು (ಮನ್ ಕಿ ಬಾತ್ ) ಆವೃತ್ತಿಯಲ್ಲಿ ಕೇರಳದ ಕೈಪುಜ್ ಮಟ್ಟು (Kaippuzhamuttu)  ಮೂಲದ  ಕೊಟ್ಟಾಯಂ ಬಳಿಯ ಕುಮಾರಕೋಂ ನ ವಿಭಿನ್ನ ಸಾಮರ್ಥ್ಯವನ್ನು (ಅಂಗವೈಕಲ್ಯತೆ) ಹೊಂದಿರುವ ಎಸ್. ರಾಜಪ್ಪನ್, ಅವರ ಬದ್ಧತೆಯನ್ನು ಪ್ರಧಾನಿ ಶ್ಲಾಘಿಸಿದರು.
 • ಐದನೇ ವಯಸ್ಸಿನಲ್ಲಿ, ಪೋಲಿಯೋ ಪೀಡಿತರಾದ   ಶ್ರೀ ರಾಜಪ್ಪನ್, ಅರ್ಪುಕ್ಕರ ಪಂಚಾಯತಿ ಪ್ರದೇಶದಲ್ಲಿ ಹಾದು ಹೋಗಿರುವ ಒಂದು ನದಿಯ ದಡದಲ್ಲಿರುವ ಸುಮಾರಾದ ಮುರುಕು ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.

 

ವಿಷಯಗಳು : ಸಾರ್ವಜನಿಕ ಆಡಳಿತದಲ್ಲಿ ಸಾರ್ವಜನಿಕ / ನಾಗರಿಕ ಸೇವಾ ಮೌಲ್ಯಗಳು ಮತ್ತು ನೈತಿಕತೆ: ಸ್ಥಿತಿ ಮತ್ತು ತೊಂದರೆಗಳು.

ಕ್ಷಮೆ ಯಾಚಿಸಿದ ಇಂದೋರ್ ಜಿಲ್ಲಾ ಮ್ಯಾಜಿಸ್ಟ್ರೇಟ್ :


ಸ೦ದರ್ಭ:

ನಿರ್ಗತಿಕ ಹಿರಿಯ ನಾಗರಿಕರನ್ನು ಶೀತ ವಾತಾವರಣದಲ್ಲಿ ನಗರದ ಹೊರಗೆ ಎಸೆದ ಇಂದೋರ್ ನ ಸ್ಥಳೀಯ ಆಡಳಿತ  ( ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ )ದ ಕ್ರಮದಿಂದ ಬೇಸರಪಟ್ಟುಕೊಂಡು ಇಂದೋರ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ಸಿಂಗ್ ರವರು ದೇವರಲ್ಲಿ ಕ್ಷಮೆಯಾಚಿಸಿದ್ದಾರೆ. ಈ ಘಟನೆಯು ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಅನೇಕ ಜನರು ಈ ಕ್ರಮವನ್ನು ಮಾನವೀಯತೆಗೆ ಕಳಂಕ” (“blot on humanity”) ಎಂದು ಕರೆದಿದ್ದಾರೆ.

ಏನಿದು ಪ್ರಕರಣ?

ಹಿರಿಯರನ್ನು ನಗರದ ಹೊರಗೆ ರಾಜ್ಯ ಹೆದ್ದಾರಿಯಲ್ಲಿ ಬಿಡುವ ಬಗ್ಗೆ ಹತ್ತಿರದ ಗ್ರಾಮಸ್ಥರು ಆಕ್ಷೇಪಣೆ ಮತ್ತು ವಿಡಿಯೋ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ತರುವಾಯ, ವೃದ್ಧರನ್ನು ಮತ್ತೆ ವಾಹನದಲ್ಲಿ ಕೂರಿಸಿ ಹಿಂದಕ್ಕೆ ಕರೆದೊಯ್ಯಲಾಯಿತು.ಈ ಕಾರ್ಯಾಚರಣೆಯಲ್ಲಿ ಬಳಸಿದ ವಾಹನವು ಅತಿಕ್ರಮಣ ತೆರವು ವಿಭಾಗಕ್ಕೆ ಸೇರಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


3-ಭಾಷಾ ಸೂತ್ರದ ನೀತಿಯು ಕೇಂದ್ರ ಸರ್ಕಾರದ ಕಚೇರಿಗಳಿಗೆ ಅನ್ವಯವಾಗದು’:

 • ತ್ರಿಭಾಷಾ ಸೂತ್ರದ ನೀತಿಯು ಕೇಂದ್ರ ಸರ್ಕಾರದ ಕಚೇರಿಗಳಿಗೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
 • 1963 ರ ಆಡಳಿತ ಭಾಷೆ ಕಾಯ್ದೆ ಹಾಗೂ 1976ಆಡಳಿತ ಭಾಷೆ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ದ್ವಿಭಾಷಾ ನೀತಿಯ ನಿಬಂಧನೆಯು ಮಾತ್ರ ಅನ್ವಯಿಸುತ್ತದೆ. ಹಾಗಾಗಿ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ತ್ರಿಭಾಷಾ ಸೂತ್ರ ಪಾಲಿಸುವ ಪ್ರಮೇಯವೇ ಉದ್ಭವಿಸದು ಎಂದು ಗೃಹಸಚಿವಾಲಯವು ಸ್ಪಷ್ಟಪಡಿಸಿದೆ.
 • ಹೀಗಾಗಿ ,ಭಾಷಾ ಅಸಮಾನತೆಗೆ ಕಾರಣವಾಗಿರುವ ಸಂವಿಧಾನದ 343 ರಿಂದ 351 ರವರೆಗಿನ ವಿಧಿಗಳ ತಿದ್ದುಪಡಿಗೆ ರಾಜ್ಯಗಳ ಸಂಸದರು ಒತ್ತಾಯಿಸಬೇಕು.

ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ. (WCCB) :

(Wildlife Crime Control Bureau): 

ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿಯು ದೇಶದಲ್ಲಿ ಸಂಘಟಿತ ವನ್ಯಜೀವಿ ಅಪರಾಧಗಳನ್ನು ನಿಭಾಯಿಸಲು ಪರಿಸರ ಮತ್ತು ಅರಣ್ಯ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರವು ಸ್ಥಾಪಿಸಿದ ಶಾಸನಬದ್ಧ ಬಹು-ಶಿಸ್ತಿನ ನಿಕಾಯವಾಗಿದೆ.

 ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972 ರ ಸೆಕ್ಷನ್ 38 (Z) ಅಡಿಯಲ್ಲಿ, ಮಂಡಳಿಯು ಈ ಕೆಳಗಿನ ಕಾರ್ಯಗಳನ್ನು ಮಾಡುವುದು ಕಡ್ಡಾಯವಾಗಿದೆ:

 • ಸಂಘಟಿತ ವನ್ಯಜೀವಿ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಪರಸ್ಪರ ವಿನಿಮಯ ಮಾಡಿಕೊಳ್ಳುವುದು.
 • ಅಪರಾಧಿಗಳನ್ನು ಬಂಧಿಸಲು ಗುಪ್ತಚರ ಮಾಹಿತಿಯನ್ನು ವಿಶ್ಲೇಷಿಸಿ ತಕ್ಷಣದ ಕ್ರಮಕ್ಕಾಗಿ ರಾಜ್ಯ ಮತ್ತು ಇತರೆ ಜಾರಿ ಸಂಸ್ಥೆಗಳಿಗೆ ರವಾನಿಸುವುದು.
 • ಕೇಂದ್ರೀಕೃತ ವನ್ಯಜೀವಿ ಅಪರಾಧ ದತ್ತಾಂಶ ಬ್ಯಾಂಕ್ ಅನ್ನು ಸ್ಥಾಪಿಸುವುದು.
 • ಕಾಯಿದೆಯ ನಿಬಂಧನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ಏಜೆನ್ಸಿಗಳು ಸಂಘಟಿತ ಕ್ರಮ ತೆಗೆದುಕೊಳ್ಳುವುದು; ವನ್ಯಜೀವಿ ಅಪರಾಧ ನಿಯಂತ್ರಣದಲ್ಲಿ ಸಮನ್ವಯ ಸಾಧಿಸಿ ಸಾಮೂಹಿಕ ಕ್ರಮಕ್ಕಾಗಿ ಸಂಬಂಧಪಟ್ಟ ವಿದೇಶಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಸಹಾಯ ಮಾಡುವುದು.

ರಾಷ್ಟ್ರೀಯ ಪೋಲಿಯೊ ಲಸಿಕೆ ಕಾರ್ಯಕ್ರಮ :

 • ಭಾರತದಲ್ಲಿ ರಾಷ್ಟ್ರೀಯ ಪೋಲಿಯೊ ರೋಗನಿರೋಧಕ ಲಸಿಕೆ ಕಾರ್ಯಕ್ರಮವು, ಜನವರಿ 31, 2021 ರಿಂದ ಪ್ರಾರಂಭವಾಯಿತು.
 • ರಾಷ್ಟ್ರೀಯ ರೋಗನಿರೋಧಕ ದಿನವನ್ನು (National Immunisation Day -NID) ಸಾಮಾನ್ಯವಾಗಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಎಂದು ಕರೆಯಲಾಗುತ್ತದೆ.
 • ಈ ಕಾರ್ಯಕ್ರಮದಡಿಯಲ್ಲಿ 0 ರಿಂದ 5 ವರ್ಷದ ಮಕ್ಕಳಿಗೆ ಪೋಲಿಯೊ ಹನಿಗಳನ್ನು ನೀಡಲಾಗುತ್ತದೆ.
 • ಪೋಲಿಯೊ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ವರ್ಷದ ಆರಂಭಿಕ ತಿಂಗಳುಗಳಲ್ಲಿ ನಡೆಸಲಾಗುತ್ತದೆ.
 • ಪಲ್ಸ್ ಪೋಲಿಯೊ ಕಾರ್ಯಕ್ರಮವು ಯಾವಾಗಲೂ ಭಾನುವಾರದಂದು ಪ್ರಾರಂಭವಾಗುತ್ತದೆ, ಆದ್ದರಿಂದ ಇದನ್ನು ಪೋಲಿಯೊ ರವಿವಾರ ಎಂದು ಕರೆಯಲಾಗುತ್ತದೆ.

polio


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos