Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 30 ಜನವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಪಠಾರುಘಾಟ್: ಮರೆತುಹೋದ 1894 ರ ಅಸ್ಸಾಂನ ರೈತ ದಂಗೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ನಿರ್ಲಕ್ಷಿತ ಉಷ್ಣವಲಯದ ರೋಗಗಳು (NTDs).

2. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ. (PM-JAY).

3. NCAVES ಇಂಡಿಯಾ ಫೋರಂ 2021.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬಾಸ್ಮತಿ ಅಕ್ಕಿಗಾಗಿ ಭೌಗೋಳಿಕ ಸೂಚಿ ಟ್ಯಾಗ್ ( GI Tag) ಪಡೆದ ಪಾಕಿಸ್ತಾನ.

2. ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ರಾಷ್ಟ್ರೀಯ ಸಾಗರ ಆಮೆ ಕ್ರಿಯಾಯೋಜನೆ.

2. ಮುಂಬೈ ಪೊಲೀಸರು ಪ್ರಾರಂಭಿಸಿದ ‘ಟಾಪ್ 25’ ಅಭಿಯಾನ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

ಪಠಾರುಘಾಟ್: ಮರೆತುಹೋದ 1894 ರ ಅಸ್ಸಾಂನ ರೈತ ದಂಗೆ:


(Patharughat: The forgotten peasant uprising of Assam in 1894)

ಸಂದರ್ಭ:

ಪಠಾರುಘಾಟ್ ರೈತ ದಂಗೆಯು, ಅಸ್ಸಾಂನಲ್ಲಿ 1894 ರ ಜನವರಿ 28 (Patharughat peasant uprising)  ರಂದು ಸಂಭವಿಸಿತು.

 • ವಸಾಹತುಶಾಹಿ ಆಡಳಿತವು ವಿಧಿಸಿದ ಭೂ ಕಂದಾಯದ ಹೆಚ್ಚಳದ ವಿರುದ್ಧ ನಿರಾಯುಧರಾದ ರೈತರು ಪ್ರತಿಭಟಿಸುತ್ತಿದ್ದ ವೇಳೆ ರೈತರ ಮೇಲೆ ಗುಂಡು ಹಾರಿಸುವ ಮೂಲಕ ಈ ದಂಗೆಗೆ ಮುನ್ನುಡಿ ಬರೆಯಿತು.

ಪಠಾರುಘಾಟ್ ರೈತ ದಂಗೆ ಸಂಭವಿಸಲು ಕಾರಣ:

 • ಬ್ರಿಟಿಷರು 1826 ರಲ್ಲಿ ಅಸ್ಸಾಂ ಅನ್ನು ವಶಪಡಿಸಿಕೊಂಡ ನಂತರ, ರಾಜ್ಯದಲ್ಲಿ ಭೂಮಿಯ ವಿವರವಾದ ಸಮೀಕ್ಷೆಯನ್ನು ಮಾಡಲು ಪ್ರಾರಂಭಿಸಲಾಯಿತು. ಈ ಸಮೀಕ್ಷೆಗಳ ಆಧಾರದ ಮೇಲೆ, ಬ್ರಿಟಿಷರು ಭೂ ತೆರಿಗೆಯನ್ನು ಜಾರಿಗೆ ತರಲು ಪ್ರಾರಂಭಿಸಿದರು, ಇದು ರೈತರಲ್ಲಿ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು.
 • ಮಾಹಿತಿಯ ಪ್ರಕಾರ, 1893 ರಲ್ಲಿ, ಕೃಷಿ ಭೂ ತೆರಿಗೆಯನ್ನು ಶೇಕಡಾ 70–80 ರಷ್ಟು ಹೆಚ್ಚಿಸಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತು. ಈ ಮೊದಲು ರೈತರು ತೆರಿಗೆಯನ್ನು ನಗದು ರೂಪದಲ್ಲಿ ಪಾವತಿಸುವ ಬದಲು ವಿವಿಧ ರೀತಿಯ ‘ಸೇವೆಗಳನ್ನು’ ತೆರಿಗೆ ರೂಪದಲ್ಲಿ ನೀಡುತ್ತಿದ್ದರು.
 • ಪಠಾರುಘಾಟ್ ನಲ್ಲಿ ನಡೆದ ಪ್ರತಿಭಟನೆಗಳು ಶಾಂತಿಯುತ ಮತ್ತು ಪ್ರಜಾಪ್ರಭುತ್ವ ಮಾದರಿ ಯವಾದವಾಗಿದ್ದವು, ಆದರೆ ಇದನ್ನು ಬ್ರಿಟಿಷ್ ಸರ್ಕಾರವು ದೇಶದ್ರೋಹವೆಂದು (“breeding grounds for sedition”) ಪರಿಗಣಿಸಿತು ಮತ್ತು ಬ್ರಿಟಿಷ್ ಪಡೆಗಳು ಪ್ರತಿಭಟನಾ ನಿರತ ರೈತರ ಮೇಲೆ ಗುಂಡು ಹಾರಿಸಲಾರಂಭಿಸಿದವು.

ಈ ಘಟನೆ ಏಕೆ ಅಷ್ಟೊಂದು ಮಹತ್ವದ್ದಾಗಿದೆ?

ಹೆಚ್ಚಿನ ಅಸ್ಸಾಮೀಸ್ ಸಮುದಾಯಕ್ಕೆ, ಸರೈಘಾಟ್ ಯುದ್ಧದ ನಂತರ ಪಠಾರುಘಾಟ್ ಕದನವು ಮಹತ್ವದ ದೃಷ್ಟಿಯಿಂದ ಎರಡನೆಯದು.ಏಕೆಂದರೆ, 1671 ರ ಸರೈಘಾಟ್ ಕದನದಲ್ಲಿ ಮೊಘಲರನ್ನು ಅಹೋಮ್ಸ್ ಗಳು ಸೋಲಿಸಿದ್ದರು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಆರೋಗ್ಯ ಸಂಬಂಧಿ ಸಮಸ್ಯೆಗಳು.

ನಿರ್ಲಕ್ಷಿತ ಉಷ್ಣವಲಯದ ರೋಗಗಳು (NTDs):


Neglected Tropical Diseases (NTDs):

ಸಂದರ್ಭ:

ನಿರ್ಲಕ್ಷಿತ ಉಷ್ಣವಲಯದ ರೋಗಗಳ ( ಕಾಯಿಲೆಗಳ) – NTDs ವಿರುದ್ಧದ ಹೋರಾಟದಲ್ಲಿ ಭಾರತವು ವಿಶ್ವದೊಂದಿಗಿನ ಪಾಲ್ಗೊಳ್ಳುವಿಕೆಯ ಸಂಕೇತವಾಗಿ ಭಾರತದ ಕುತುಬ್ ಮಿನಾರ್ ಅನ್ನು ಬೆಳಗಿಸಲಾಗುವುದು.

ಎರಡನೇ ವಾರ್ಷಿಕ ವಿಶ್ವ ನಿರ್ಲಕ್ಷಿತ ಉಷ್ಣವಲಯದ ಕಾಯಿಲೆ (ಎನ್‌ಟಿಡಿ) ದಿನವೆಂದು, ಜನವರಿ 30, 2021 ಅನ್ನು ಗುರುತಿಸಲಾಗುತ್ತದೆ.

ಉಷ್ಣವಲಯದ ಕೆಲವು ರೋಗಗಳನ್ನು “ನಿರ್ಲಕ್ಷಕ್ಕೊಳಗಾದವು”  ಎಂದು ಏಕೆ ಕರೆಯಲಾಗುತ್ತದೆ?

ಈ ಕಾಯಿಲೆಗಳಿಂದ ಹೆಚ್ಚು ಪರಿಣಾಮಕ್ಕೊಳಗಾದ ಜನರೆಂದರೆ ಅತಿ ಕಡುಬಡವರು, ದೂರದ, ಗ್ರಾಮೀಣ ಪ್ರದೇಶಗಳಲ್ಲಿ, ನಗರದ ಕೊಳಗೇರಿಗಳಲ್ಲಿ ಅಥವಾ ಸಂಘರ್ಷ ಪೀಡಿತ ವಲಯಗಳಲ್ಲಿ ವಾಸಿಸುವ ಬಡ ಜನರಾಗಿದ್ದಾರೆ.ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳು ಬಡತನದ ಪರಿಸ್ಥಿತಿಗಳಲ್ಲಿ ಹರಡುತ್ತವೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ.

ಈ ಕಾಯಿಲೆಗಳಿಗೆ ಸಂಬಂಧಿಸಿದ ಸವಾಲುಗಳು ಮತ್ತು ಕಾಳಜಿಯ ವಿಷಯಗಳು:

 • ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳಿಂದ ಬಳಲುತ್ತಿರುವ ಜನಸಂಖ್ಯೆಯು ಸಾಮಾನ್ಯವಾಗಿ ಬಲವಾದ ರಾಜಕೀಯ ಬೆಂಬಲದ ಕೊರತೆ ಅನುಭವಿಸುತ್ತಿರುತ್ತದೆ ಮತ್ತು ಸಾರ್ವಜನಿಕ ಆರೋಗ್ಯದ ಆದ್ಯತೆಗಳು ಅತ್ಯಂತ ಕಡಿಮೆ ಮಟ್ಟದಲ್ಲಿರುತ್ತದೆ.
 • ವಿಶ್ವಾಸಾರ್ಹ ದತ್ತಾಂಶದ ಕೊರತೆ ಮತ್ತು ರೋಗಗಳ ಸಂಕೀರ್ಣ (ಉಚ್ಚರಣೆ ಮಾಡಲು ಸಾಧ್ಯವಿಲ್ಲದ) ಹೆಸರುಗಳು ಈ ಜನರನ್ನು ರೋಗಗಳಿಂದ ಮುಕ್ತಗೊಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತವೆ.
 • ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳು ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತವೆ, ಅವರಲ್ಲಿ ಹೆಚ್ಚಿನವರು ಉಷ್ಣವಲಯದ ಮತ್ತು ಉಪೋಷ್ಣವಲಯದ ಹವಾಮಾನ ಪ್ರದೇಶಗಳಲ್ಲಿ ವಾಸಿಸುವ ಬಡ ಜನಸಂಖ್ಯೆಯಾಗಿದೆ.
 • ಈ ಜನರು ಸಾಮಾನ್ಯವಾಗಿ ಭೌಗೋಳಿಕವಾಗಿ ಒಟ್ಟಿಗೆ ಗುಂಪುಗಳಲ್ಲಿ ವಾಸಿಸುತ್ತಾರೆ ಮತ್ತು ಈ ಗುಂಪುಗಳಲ್ಲಿ ವಾಸಿಸುವ ವ್ಯಕ್ತಿಗಳು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಸೋಂಕಿನಿಂದ ಬಳಲುತ್ತಿರುತ್ತಾರೆ.
 • ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ ಉಪಸ್ಥಿತಿಯನ್ನು ಅಥವಾ ಇರುವಿಕೆಯನ್ನು ವರದಿ ಮಾಡುವ ದೇಶಗಳು ಮತ್ತು ಪ್ರದೇಶಗಳು 70% ಕ್ಕಿಂತ ಹೆಚ್ಚು ಕಡಿಮೆ ಆದಾಯ ಅಥವಾ ಕಡಿಮೆ ಮಧ್ಯಮ-ಆದಾಯದ ಆರ್ಥಿಕತೆಗಳಾಗಿವೆ.

ಈ ರೋಗಗಳ ಹರಡುವಿಕೆ :

 • ಕಲುಷಿತ ನೀರು, ಆವಾಸಸ್ಥಾನಗಳ ಕಳಪೆ ಸ್ಥಿತಿ ಮತ್ತು ನೈರ್ಮಲ್ಯದ ಕೊರತೆ ಈ ರೋಗಗಳ ಹರಡುವಿಕೆಗೆ ಮುಖ್ಯ ಕಾರಣಗಳಾಗಿವೆ.
 • ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳಿಗೆ ಮಕ್ಕಳೇ ಹೆಚ್ಚಾಗಿ ಅಪಾಯಕ್ಕೆ ಒಳಗಾಗುತ್ತಾರೆ, ಮತ್ತು ಈ ರೋಗಗಳು ಪ್ರತಿವರ್ಷ ಲಕ್ಷಾಂತರ ಜನರ ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುತ್ತವೆ, ಇದರ ಪರಿಣಾಮವಾಗಿ ಜೀವಿತಾವಧಿಯಲ್ಲಿ ಆಗಾಗ್ಗೆ ದೈಹಿಕ ನೋವು ಮತ್ತು ಸಾಮಾಜಿಕ ಕಳಂಕ ಉಂಟಾಗುತ್ತವೆ.

ಭಾರತದಲ್ಲಿ ನಿರ್ಲಕ್ಷಿತ ರೋಗಗಳ ಸಂಶೋಧನಾ ನೀತಿಗಳು:

 • ರಾಷ್ಟ್ರೀಯ ಆರೋಗ್ಯ ನೀತಿ (2017) ಆರೋಗ್ಯ ಅಗತ್ಯಗಳನ್ನು ಪೂರೈಸಲು ನಾವೀನ್ಯತೆಯನ್ನು ಉತ್ತೇಜಿಸುವ ಮಹತ್ಪಾಕಾಂಕ್ಷೆಯನ್ನು ಹೊಂದಿಸುತ್ತದೆ ಮತ್ತು ಹೆಚ್ಚು ಅಗತ್ಯವಿರುವ ಜನರಿಗೆ ಕೈಗೆಟುಕುವ ಹೊಸ ಔಷಧಿಗಳ ದೊರಕುವಿಕೆಯನ್ನು ಖಾತ್ರಿಗೊಳಿಸುತ್ತದೆ, ಆದರೆ ಇದು ನಿರ್ಲಕ್ಷಿತ ಕಾಯಿಲೆಗಳನ್ನು ನಿರ್ದಿಷ್ಟವಾಗಿ ನಿಭಾಯಿಸುವುದಿಲ್ಲ.
 • ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿನ ರಾಷ್ಟ್ರೀಯ ನೀತಿ (2018) ಸಾಂಕ್ರಾಮಿಕ ಉಷ್ಣವಲಯದ ಕಾಯಿಲೆಗಳನ್ನು ಒಳಗೊಳ್ಳುತ್ತದೆ ಮತ್ತು ಅಪರೂಪದ ಕಾಯಿಲೆಗಳ ಚಿಕಿತ್ಸೆಯ ಕುರಿತು ಸಂಶೋಧನೆ ನಡೆಸುವ ಅಗತ್ಯವನ್ನು ಒತ್ತಿಹೇಳುತ್ತದೆ.ಆದಾಗ್ಯೂ, ಈ ನೀತಿಯಡಿಯಲ್ಲಿ, ಸಂಶೋಧನೆಗಳ ಧನಸಹಾಯಕ್ಕಾಗಿ ರೋಗಗಳು ಮತ್ತು ಪ್ರದೇಶಗಳ ಆದ್ಯತೆಯನ್ನು ಇನ್ನೂ ನಿಗದಿಪಡಿಸಿಲ್ಲ.

 

ವಿಷಯಗಳು : ಆರೋಗ್ಯ ಸಂಬಂಧಿ ಸಮಸ್ಯೆಗಳು.

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ. (PM-JAY):


Pradhan Mantri Jan Arogya Yojana:

ಸಂದರ್ಭ:

ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ:

 • ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಕಾರ್ಯಕ್ರಮವನ್ನು ಜಾರಿಗೆ ತಂದಿರುವ ರಾಜ್ಯಗಳಲ್ಲಿ ಆರೋಗ್ಯದ ಫಲಿತಾಂಶಗಳಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ.
 • PM-JAY ಅನ್ನು ಅನುಷ್ಠಾನಗೊಳಿಸಿರುವ ರಾಜ್ಯಗಳು, ಆರೋಗ್ಯ ವಿಮೆಯ ಹೆಚ್ಚಿನ ವಿಸ್ತರಣೆ, ಶಿಶು ಮತ್ತು ಮಕ್ಕಳ ಮರಣ ಪ್ರಮಾಣದಲ್ಲಿನ ಕಡಿತ, ಕುಟುಂಬ ಯೋಜನೆ ಸೇವೆಗಳ ಬಳಕೆಯಲ್ಲಿ ಸುಧಾರಣೆ ಮತ್ತು ಎಚ್‌ಐವಿ / ಏಡ್ಸ್ ಬಗ್ಗೆ ಹೆಚ್ಚಿನ ಅರಿವನ್ನು ಪಡೆದುಕೊಂಡಿರುವುದು,ಈ ಯೋಜನೆಯಿಂದ ಹೊರಗಿರುವ ರಾಜ್ಯಗಳಿಗೆ ಹೋಲಿಸಿದರೆ ಅನುಭವ ವೇದ್ಯವಾಗಿದೆ.
 • PM-JAY ಅನುಷ್ಠಾನಗೊಳಿಸಿರುವ ರಾಜ್ಯಗಳಲ್ಲಿ ಆರೋಗ್ಯ ವಿಮೆ ಹೊಂದಿರುವ ಕುಟುಂಬಗಳ ಪ್ರಮಾಣವು 54% ಹೆಚ್ಚಾಗಿದ್ದರೆ ಈ ಯೋಜನೆಯಿಂದ ಪ್ರತ್ಯೇಕವಾಗಿ ಉಳಿದಿರುವ ರಾಜ್ಯಗಳಲ್ಲಿ ಆರೋಗ್ಯ ವಿಮೆ ಹೊಂದಿರುವ ಕುಟುಂಬಗಳ ಪ್ರಮಾಣವು 10% ರಷ್ಟು ಕುಸಿತವನ್ನು ದಾಖಲಿಸಿದೆ.

ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (Pradhan Mantri Jan Arogya Yojana) ಯ ಪ್ರಮುಖ ಲಕ್ಷಣಗಳು:

 • ಸಂಪೂರ್ಣವಾಗಿ ಸರ್ಕಾರಿ ಪುರಸ್ಕೃತ, ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ / ಭರವಸೆ ಯೋಜನೆ ಯಾಗಿದೆ.
 • ಈ ಯೋಜನೆಯು ಭಾರತದ ಸಾರ್ವಜನಿಕ ಮತ್ತು ಪಟ್ಟಿಮಾಡಿದ ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ಪ್ರತಿ ಅರ್ಹ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ಗಳ ನೆರವನ್ನು ಒದಗಿಸುತ್ತದೆ.
 • ವ್ಯಾಪ್ತಿ: 10.74 ಕೋಟಿಗೂ ಹೆಚ್ಚು ಬಡ ಮತ್ತು ಅಸಹಾಯಕ ಕುಟುಂಬಗಳು (ಅಂದಾಜು 50 ಕೋಟಿ ಫಲಾನುಭವಿಗಳು) ಈ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ.
 • ಈ ಯೋಜನೆಯಡಿ, ಆಸ್ಪತ್ರೆಗಳಲ್ಲಿ ಫಲಾನುಭವಿಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.

ಅರ್ಹತೆ:

 • ಈ ಯೋಜನೆಯಡಿ ಚಿಕಿತ್ಸೆ ನೀಡುವಾಗ ಕುಟುಂಬದ ಗಾತ್ರ, ವಯಸ್ಸು ಅಥವಾ ಲಿಂಗ ಎಂಬ ಯಾವುದೇ ಮಿತಿಯಿಲ್ಲ.
 • ಈ ಯೋಜನೆಯಡಿಯಲ್ಲಿ, ಚಿಕಿತ್ಸೆ ನೀಡುವಾಗ ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ವಿವಿಧ ವೈದ್ಯಕೀಯ ಸಮಸ್ಯೆಗಳು ಮತ್ತು ಗಂಭೀರ ಕಾಯಿಲೆಗಳನ್ನು ಮೊದಲ ದಿನದಿಂದಲೇ ಈ ಯೋಜನೆಯು ಒಳಗೊಳ್ಳುತ್ತದೆ. ಅಂದರೆ ಯೋಜನೆಗೆ ಸೇರುವ ಮೊದಲೇ ಇದ್ದಂತಹ ವೈದ್ಯಕೀಯ ಸಮಸ್ಯೆಗಳಿಗೂ ಯಾವುದೇ ಭೇದವಿಲ್ಲದೆ ಚಿಕಿತ್ಸೆಯನ್ನು ನೀಡಲಾಗುತ್ತದೆ.
 • ಈ ಯೋಜನೆಯು, ಆಸ್ಪತ್ರೆಗೆ ದಾಖಲಾಗುವ 3 ದಿನಗಳ ಮೊದಲು ಮತ್ತು ಆಸ್ಪತ್ರೆಗೆ ದಾಖಲಾದ ನಂತರದ 15 ದಿನಗಳವರೆಗಿನ ಆರೋಗ್ಯ ಚಿಕಿತ್ಸೆ ಮತ್ತು ಔಷಧಿಗಳ ಖರ್ಚುವೆಚ್ಚವನ್ನು ಒಳಗೊಂಡಿದೆ.
 • ಇದೊಂದು ಸರಳ-ಸುಲಭ (ಪೋರ್ಟಬಲ್), ಯೋಜನೆಯಾಗಿದೆ. ಅಂದರೆ ಫಲಾನುಭವಿಗಳು ದೇಶಾದ್ಯಂತದ ಯಾವುದೇ ಸಾರ್ವಜನಿಕ ಅಥವಾ ಪಟ್ಟಿಮಾಡಿದ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
 • ಈ ಯೋಜನೆಯು, ಔಷಧಗಳ ಸರಬರಾಜು, ರೋಗನಿರ್ಣಯ ಸೇವೆಗಳು, ವೈದ್ಯರ ಶುಲ್ಕಗಳು, ಕೊಠಡಿ ಶುಲ್ಕಗಳು, ಶಸ್ತ್ರಚಿಕಿತ್ಸಕರ ಶುಲ್ಕಗಳು, ಶಸ್ತ್ರ ಚಿಕಿತ್ಸಾ ಕೊಠಡಿ (OT ) ಮತ್ತು ತೀವ್ರ ಚಿಕಿತ್ಸಾ ಘಟಕಗಳ (ICU) ಶುಲ್ಕಗಳು ಸೇರಿದಂತೆ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಒಳಗೊಂಡಿರುವ ಸರಿಸುಮಾರು 1,393 ಕಾರ್ಯವಿಧಾನ ಸೇವೆಗಳನ್ನು ಒಳಗೊಂಡಿದೆ.
 • ಸಾರ್ವಜನಿಕ ಆಸ್ಪತ್ರೆಗಳಿಗೂ ಕೂಡ ನೀಡಿದ ಆರೋಗ್ಯ ಸೇವೆಗಳಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಮನಾಗಿ ಮರುಪಾವತಿ ಮಾಡಲಾಗುತ್ತದೆ.

 

ವಿಷಯಗಳು: ಭಾರತವನ್ನು ಒಳಗೊಂಡ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಒಪ್ಪಂದಗಳು ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

NCAVES ಇಂಡಿಯಾ ಫೋರಂ 2021 :


ಸಂದರ್ಭ:

ನೈಸರ್ಗಿಕ ಬಂಡವಾಳ ಲೆಕ್ಕಪತ್ರ ನಿರ್ವಹಣೆ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ಮೌಲ್ಯಮಾಪನ (Natural Capital Accounting and Valuation of the Ecosystem Services- NCAVES) ಇಂಡಿಯಾ ಫೋರಂ – 2021 ಅನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ಆಯೋಜಿಸಿದೆ.

ಏನಿದು NCAVES ಇಂಡಿಯಾ ಫೋರಂ 2021?

ನೈಸರ್ಗಿಕ ಬಂಡವಾಳ ಲೆಕ್ಕಪತ್ರ ನಿರ್ವಹಣೆ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ಮೌಲ್ಯಮಾಪನ (NCAVES ) ಇಂಡಿಯಾ ಫೋರಂ – 2021 ಇದು, ವಿಶ್ವಸಂಸ್ಥೆಯ ಅಂಕಿಅಂಶ ವಿಭಾಗದ (UNSD),NCAVES ಯೋಜನೆಯ ಒಂದು ಭಾಗವಾಗಿದೆ.

 • ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುವಾಗ ಸುಸ್ಥಿರತೆಯ ಕಳವಳಗಳನ್ನು ಬಗೆಹರಿಸಲು ಮತ್ತು ಭವಿಷ್ಯದ ಬಳಕೆಗಾಗಿ ಪರಿಸರವನ್ನು ಸಂರಕ್ಷಿಸಲು ಮತ್ತು ಉಳಿಸಿಕೊಳ್ಳಲು ಐದು ದೇಶಗಳಿಗೆ ಸಹಾಯ ಮಾಡುವುದು ಇದರ ಉದ್ದೇಶ ವಾಗಿದೆ.
 • ಈ ಯೋಜನೆಯಲ್ಲಿ ಭಾಗವಹಿಸುವ ಐದು ದೇಶಗಳಲ್ಲಿ ಭಾರತವೂ ಒಂದಾಗಿದ್ದು – ಇತರ ದೇಶಗಳೆಂದರೆ ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಮೆಕ್ಸಿಕೊ.

NCAVES ಯೋಜನೆ :

 • ‘ನೈಸರ್ಗಿಕ ಬಂಡವಾಳ ಲೆಕ್ಕಪತ್ರ ನಿರ್ವಹಣೆ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ಮೌಲ್ಯಮಾಪನ’ ಅಂದರೆ NCAVES ಯೋಜನೆಯು ಬ್ರೆಜಿಲ್, ಚೀನಾ, ಭಾರತ, ಮೆಕ್ಸಿಕೊ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪರಿಸರ ಮತ್ತು ಪರಿಸರ ವ್ಯವಸ್ಥೆಯ ಲೆಕ್ಕಪತ್ರದ ತತ್ವ,ಸಿದ್ಧಾಂತಗಳು ಮತ್ತು ವ್ಯವಸ್ಥೆಗಳನ್ನು ನವೀಕರಿಸುವ ಉದ್ದೇಶವನ್ನು ಹೊಂದಿದೆ.
 • ಈ ಯೋಜನೆಯನ್ನು ವಿಶ್ವಸಂಸ್ಥೆಯ ಅಂಕಿಅಂಶ ವಿಭಾಗ (UNSD), ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಮತ್ತು ಜೀವವೈವಿಧ್ಯತೆಯ ಸಮಾವೇಶ (CBD) ಸಚಿವಾಲಯಗಳು ಜಂಟಿಯಾಗಿ ಜಾರಿಗೊಳಿಸುತ್ತಿವೆ.
 • ಭಾಗವಹಿಸುವ ಐದು ಪಾಲುದಾರ ರಾಷ್ಟ್ರಗಳಿಗೆ, ವಿಶೇಷವಾಗಿ ಪರಿಸರ ವ್ಯವಸ್ಥೆಯ ಲೆಕ್ಕಪರಿಶೋಧನೆಯಲ್ಲಿ’ ಲಭ್ಯವಿರುವ ಮಾಹಿತಿ ಮತ್ತು ಪರಿಸರ-ಆರ್ಥಿಕ ಲೆಕ್ಕಪರಿಶೋಧನೆಯ ಕುರಿತು ಚಾಲ್ತಿಯಲ್ಲಿರುವ ಅಭ್ಯಾಸಗಳನ್ನು ನವೀಕರಿಸಲು ಅಥವಾ ಜ್ಞಾನ ಕಾರ್ಯಸೂಚಿಯನ್ನು ಮುನ್ನಡೆಸಲು ಸಹಾಯ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
 • ಈ ಯೋಜನೆಯ ಅವಧಿಯು 2021 ರಲ್ಲಿ ಕೊನೆಗೊಳ್ಳುತ್ತದೆ.

ಪ್ರಾಮುಖ್ಯತೆ:

 • ಈ ಯೋಜನೆಯಲ್ಲಿ ಭಾಗವಹಿಸುವಿಕೆಯು ವಿಶ್ವಸಂಸ್ಥೆಯ-ಪರಿಸರ-ಆರ್ಥಿಕ ಲೆಕ್ಕಪತ್ರ ವ್ಯವಸ್ಥೆಯ (UN-SEEA) ಚೌಕಟ್ಟಿನ ಅನುಸಾರ ಪರಿಸರ ಖಾತೆಗಳನ್ನು ಕಂಪೈಲ್ ಮಾಡಲು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MOSPI) ಕ್ಕೆ ಸಹಾಯ ಮಾಡುತ್ತದೆ.
 • ಈ ವೇದಿಕೆಯಲ್ಲಿ, ಪರಿಸರ ಖಾತೆಗಳ ವಿವರಗಳನ್ನು, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು, (MOSPI) ತನ್ನ ಪ್ರಕಟಣೆಯಾದ “ಎನ್‌ವಿಸ್ಟಾಟ್ಸ್ ಇಂಡಿಯಾ” ದಲ್ಲಿ 2018 ರಿಂದ ವಾರ್ಷಿಕ ಆಧಾರದ ಮೇಲೆ ಬಿಡುಗಡೆ ಮಾಡುತ್ತಿದೆ.
 • ಈ ಹಲವಾರು ಖಾತೆಗಳು ಸಾಮಾಜಿಕ ಮತ್ತು ಆರ್ಥಿಕ ಗುಣಲಕ್ಷಣಗಳೊಂದಿಗೆ ನಿಕಟ ಸಂಬಂಧ ಹೊಂದಿವೆ, ಇದು ಈ ನೀತಿಗೆ ಉಪಯುಕ್ತ ಸಾಧನವೆಂದು ಸಾಬೀತುಪಡಿಸುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಬಾಸ್ಮತಿ ಅಕ್ಕಿಗಾಗಿ ಭೌಗೋಳಿಕ ಸೂಚಿ ಟ್ಯಾಗ್ ( GI Tag) ಪಡೆದ ಪಾಕಿಸ್ತಾನ:


ಸಂದರ್ಭ:

ಪಾಕಿಸ್ತಾನ ತನ್ನ ಬಾಸ್ಮತಿ ಅಕ್ಕಿಗಾಗಿ ಭೌಗೋಳಿಕ ಸೂಚಕ-(GI TAG) ಟ್ಯಾಗ್ ಅನ್ನು ಪಡೆದುಕೊಂಡಿದೆ. ಇದು ಒಂದು ನಿರ್ದಿಷ್ಟ ಬಗೆಯ ಅಕ್ಕಿಗಾಗಿ ಸ್ಥಳೀಯ ನೋಂದಣಿಯನ್ನು ರಚಿಸಲು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾಕಿಸ್ತಾನದ ಸ್ಥಾನವನ್ನು ಬಲಪಡಿಸಲು ದಾರಿ ಮಾಡಿಕೊಡುತ್ತದೆ.

ಇದು ಭಾರತಕ್ಕೆ ಏಕೆ ಕಳವಳದ ಸಂಗತಿಯಾಗಿದೆ ?

ಕಾನೂನಿನ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನದ ನೋಂದಣಿಗೆ ಅರ್ಜಿ ಸಲ್ಲಿಸುವ ಮೊದಲು, ಆ ದೇಶದ ಭೌಗೋಳಿಕ ಸೂಚನೆ (ಜಿಐ) ಕಾನೂನುಗಳ ಅಡಿಯಲ್ಲಿ ಉತ್ಪನ್ನವನ್ನು ರಕ್ಷಿಸಬೇಕು.

 • ಬಾಸ್ಮತಿ ಅಕ್ಕಿಯನ್ನು ಭಾರತವು ತನ್ನ ಉತ್ಪನ್ನವಾಗಿ ನೋಂದಾಯಿಸಿ ಕೊಳ್ಳುವುದರ, ವಿರುದ್ಧ ಪಾಕಿಸ್ತಾನವು 27 ಸದಸ್ಯರ ಯುರೋಪಿಯನ್ ಒಕ್ಕೂಟದಲ್ಲಿ ಮೊಕದ್ದಮೆಯನ್ನು ಹೂಡುತ್ತಿದೆ.

ಪರಿಣಾಮಗಳು:

ಜಿಐ ಟ್ಯಾಗ್ ಯುರೋಪಿಯನ್ ಒಕ್ಕೂಟದಲ್ಲಿ ಪಾಕಿಸ್ತಾನದ ಸ್ಥಾನವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತವು ಬಾಸ್ಮತಿ ಅಕ್ಕಿಯ ಏಕಮಾತ್ರ ಮಾಲೀಕತ್ವವನ್ನು ಹೇಳಿಕೊಂಡು ಯುರೋಪಿಯನ್ ಒಕ್ಕೂಟಕ್ಕೆ ಅರ್ಜಿ ಸಲ್ಲಿಸಿತು. ಅರ್ಜಿ ಸಲ್ಲಿಸಿದ ನಂತರ ಬಾಸ್ಮತಿ ಅಕ್ಕಿಯನ್ನು ಪಾಕಿಸ್ತಾನದ ಉತ್ಪನ್ನವಾಗಿ ಸಂರಕ್ಷಿಸುವ ವಿಷಯವು ಮುಂಚೂಣಿಗೆ ಬಂದಿತು.

ಹಿನ್ನೆಲೆ:

2010 ರ ಮೇ ನಲ್ಲಿ, ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಬೆಳೆದ ‘ಬಾಸ್ಮತಿ’ ಗೆ ಭೌಗೋಳಿಕ ಸೂಚಕ (ಜಿಐ) ಸ್ಥಾನಮಾನ ನೀಡಲಾಯಿತು.

ಭೌಗೋಳಿಕ ಸೂಚಕ (GI) ದ ಕುರಿತು:

 • GI ಮುಖ್ಯವಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶದಿಂದ ಪಡೆಯಲಾದ, ಕೃಷಿ, ನೈಸರ್ಗಿಕ ಅಥವಾ ತಯಾರಿಸಿದ ಉತ್ಪನ್ನವಾಗಿದೆ (ಕರಕುಶಲ ವಸ್ತುಗಳು ಮತ್ತು ಕೈಗಾರಿಕಾ ವಸ್ತುಗಳು).
 • ವಿಶಿಷ್ಟವಾಗಿ, ಅಂತಹ ಹೆಸರು ಗುಣಮಟ್ಟ ಮತ್ತು ವಿಶಿಷ್ಟತೆಯ ಭರವಸೆಯನ್ನು ನೀಡುತ್ತದೆ, ಇದು ಮೂಲಭೂತವಾಗಿ ಅದರ ಮೂಲದ ಸ್ಥಳಕ್ಕೆ ಕಾರಣವಾಗಿದೆ.
 • ಒಂದು ಉತ್ಪನ್ನವನ್ನು ಅದು ಸಿದ್ಧಗೊಳ್ಳುವ ಅಥವಾ ಉತ್ಪಾದನೆ ಆಗುವ ಭೌಗೋಳಿಕ ಸ್ಥಳದಿಂದ ಗುರುತಿಸಿದರೆ, ಅದರ ಆಧಾರದ ಮೇಲೆಯೇ ಅದರ ಗುಣಮಟ್ಟವನ್ನು ನಿರ್ಧರಿಸುವುದಕ್ಕೆ ಭೌಗೋಳಿಕ ಸೂಚಿಕೆ ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್ಸ್ (GI) ಎಂದು ಕರೆಯಲಾಗುತ್ತದೆ.

ಭೌಗೋಳಿಕ ಸೂಚಕದ (ಜಿಐ ಟ್ಯಾಗ್‌) ನ ಪ್ರಯೋಜನಗಳು:

 • GI ರಕ್ಷಣೆಯನ್ನು ನೀಡಿದ ನಂತರ, ಇತರ ತಯಾರಕರು ಇದೇ ರೀತಿಯ ಉತ್ಪನ್ನಗಳನ್ನು ಇದೇ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಬೌಧ್ಧಿಕ ಹಕ್ಕನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮತ್ತು ಆ ಉತ್ಪನ್ನದ ಸತ್ಯಾಸತ್ಯತೆಯ ಬಗ್ಗೆ ಇದು ಗ್ರಾಹಕರಿಗೆ ನೆಮ್ಮದಿಯನ್ನು ಅಥವಾ ಭರವಸೆಯನ್ನು ನೀಡುತ್ತದೆ.

ಭೌಗೋಳಿಕ ಸೂಚಕದ ನೋಂದಾಯಿತ ಮಾಲೀಕರು ಯಾರು?

 • ಕಾನೂನಿನ ಮೂಲಕ ಅಥವಾ ಅಡಿಯಲ್ಲಿ ಸ್ಥಾಪಿಸಲಾದ ವ್ಯಕ್ತಿಗಳ,ತಯಾರಕರ ಯಾವುದೇ ಸಂಘ, ಸಂಘಟನೆ ಅಥವಾ ಅಧಿಕಾರದ ಯಾವುದೇ ಸಂಘವು ನೋಂದಾಯಿತ ಮಾಲೀಕರಾಗಿರಬಹುದು. ಅಥವಾ
 • ಭೌಗೋಳಿಕ ಸೂಚಿಕೆಗಳ ನೋಂದಣಿಗೆ, ಉತ್ಪಾದಕರು, ಯಾವುದೇ ವ್ಯಕ್ತಿಗಳ ಸಂಘಟನೆ, ಕಾನೂನು ರೀತ್ಯಾ ಸ್ಥಾಪಿತವಾದ ಸಂಘ ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಉತ್ಪಾದಕರ ಹಿತಾಸಕ್ತಿಯನ್ನು ಪ್ರತಿನಿಧಿಸಬೇಕು.
 • ಅರ್ಜಿ ಸಲ್ಲಿಸಿದ ಭೌಗೋಳಿಕ ಸೂಚಕಕ್ಕೆ ನೋಂದಾಯಿತ ಮಾಲೀಕರಾಗಿ ಅವರ ಹೆಸರನ್ನು ರಿಜಿಸ್ಟರ್ ಆಫ್ ಜಿಯಾಗ್ರಫಿಕಲ್ ಇಂಡಿಕೇಶನ್‌ನಲ್ಲಿ ನಮೂದಿಸಬೇಕು.

ಭೌಗೋಳಿಕ ಸೂಚಕದ ನೋಂದಣಿಯು ಎಷ್ಟು ಕಾಲ ಮಾನ್ಯವಾಗಿರುತ್ತದೆ?

 • ಭೌಗೋಳಿಕ ಸೂಚ್ಯಂಕದ ನೋಂದಣಿಯು 10 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ/ ಊರ್ಜಿತದಲ್ಲಿರುತ್ತದೆ.
 • ಪ್ರತಿ 10 ವರ್ಷಗಳ ಅವಧಿಗೆ ಇದನ್ನು ನಿಯತಕಾಲಿಕವಾಗಿ ನವೀಕರಿಸಬಹುದು. ನವೀಕರಿಸದಿದ್ದರೆ ನೋಂದಣಿ ದಾಖಲೆಯಿಂದ ತೆಗೆದು ಹಾಕಲಾಗುತ್ತದೆ.

ಭೌಗೋಳಿಕ ಸೂಚಕಗಳಿಗೆ ಸಮ್ಮತಿ ನೀಡಿ  ನಿಯಂತ್ರಿಸುವವರು ಯಾರು?

ಅಂತರರಾಷ್ಟ್ರೀಯ ಮಟ್ಟದಲ್ಲಿ :

ಬೌದ್ಧಿಕ ಆಸ್ತಿ ಹಕ್ಕುಗಳ (IPR) ಒಂದು ಅಂಶವಾಗಿ ಕೈಗಾರಿಕಾ ಆಸ್ತಿ ಸಂರಕ್ಷಣೆಗಾಗಿನ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭೌಗೋಳಿಕ ಸೂಚಕಗಳು ಒಳಗೊಂಡಿವೆ.    ವಿಶ್ವ ವ್ಯಾಪಾರ ಸಂಸ್ಥೆ (WTO) ಯ ವ್ಯಾಪಾರ-ಸಂಬಂಧಿತ ಅಂಶಗಳ ಕುರಿತು ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದ (Trade-Related Aspects of Intellectual Property Rights -TRIPS) ದಿಂದ  ಜಿಐ ಅನ್ನು ನಿಯಂತ್ರಿಸಲಾಗುತ್ತದೆ.

ಭಾರತದಲ್ಲಿ, ಭೌಗೋಳಿಕ ಸೂಚಕಗಳ ನೋಂದಣಿಯನ್ನು ಸರಕುಗಳ ಭೌಗೋಳಿಕ ಸೂಚಕಗಳ  (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ 1999, (Geographical Indications of Goods (Registration and Protection) Act, 1999) ರ ಮೂಲಕ ನಿಯಂತ್ರಿಸಲಾಗುತ್ತದೆ, ಇದು 2003 ರ ಸೆಪ್ಟೆಂಬರ್ 15ರಂದು ಜಾರಿಗೆ ಬಂದಿದೆ. ಭೌಗೋಳಿಕ ಸೂಚಿಕೆಗಳ ನೋಂದಣಿಯ ಕೇಂದ್ರ ಕಚೇರಿ, ಚೆನ್ನೈ, ತಮಿಳುನಾಡಿನಲ್ಲಿದೆ. ಭಾರತದಲ್ಲಿ  GI ಟ್ಯಾಗ್‌ ಪಡೆದ ಮೊಟ್ಟಮೊದಲ ಉತ್ಪನ್ನವೆಂದರೆ ಡಾರ್ಜಿಲಿಂಗ್ ಚಹಾ,2004-05ರಲ್ಲಿ. ಭಾರತದಲ್ಲಿ ಅತಿ ಹೆಚ್ಚು (42) ಉತ್ಪನ್ನಗಳಿಗೆ ಭೌಗೋಳಿಕ ಸೂಚಿಕೆ ಪಡೆದ ರಾಜ್ಯವೆಂದರೆ ಕರ್ನಾಟಕ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021:


(Cryptocurrency and Regulation of Official Digital Currency Bill, 2021):

ಸಂದರ್ಭ :

ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಈ ಮಸೂದೆಯನ್ನು (ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021 ) ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪರಿಗಣಿಸುವ ಸಾಧ್ಯತೆಯಿದೆ ಮತ್ತು ಇದರ ಅಡಿಯಲ್ಲಿ, ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಮತ್ತು ಭಾರತೀಯ ರಿಸರ್ವ್ ಬ್ಯಾಂಕಿಗೆ (RBI) ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.

ಈ ಕಾನೂನಿನ ಉದ್ದೇಶಗಳು:

 • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನೀಡುವ ಅಧಿಕೃತ ಡಿಜಿಟಲ್ ಕರೆನ್ಸಿಗೆ ಅನುಕೂಲಕರ ಚೌಕಟ್ಟನ್ನು ರಚಿಸುವುದು.
 • “ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು” ಸಹಾಯಕವಾಗುತ್ತದೆ.

ಈ ಮಸೂದೆಯು ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿ ಗಳನ್ನು ನಿಷೇಧಿಸಲು ಪ್ರಯತ್ನಿಸುತ್ತದೆ, ಆದಾಗ್ಯೂ, ಮಸೂದೆಯಲ್ಲಿ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಯನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಅನುಮತಿಸಲಾಗಿದೆ.

ಹಿನ್ನೆಲೆ:

ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 6 ಏಪ್ರಿಲ್ 2018 ರಂದು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ, ಕೇಂದ್ರ ಬ್ಯಾಂಕಿನಿಂದ ನಿಯಂತ್ರಿಸಲ್ಪಡುವ ಘಟಕಗಳು ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ಒದಗಿಸುವುದನ್ನು ನಿಷೇಧಿಸಲಾಗಿದೆ. ಕ್ರಿಪ್ಟೋಕರೆನ್ಸಿ ( ಡಿಜಿಟಲ್ ಕರೆನ್ಸಿ) ವಹಿವಾಟಿಗೆ ಭಾರತೀಯ ರಿಸರ್ವ್ ಬ್ಯಾಂಕ್ 2018ರಲ್ಲಿ ವಿಧಿಸಿದ್ದ ನಿಷೇಧವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ತೆರವುಗೊಳಿಸಿದೆ.

ಇದಕ್ಕೆ ನ್ಯಾಯಾಲಯದ ಪ್ರತಿಕ್ರಿಯೆ ಏನು?

 • ರಾಷ್ಟ್ರೀಕೃತ ಬ್ಯಾಂಕುಗಳು / ನಿಗದಿತ ವಾಣಿಜ್ಯ ಬ್ಯಾಂಕುಗಳು / ಸಹಕಾರಿ ಬ್ಯಾಂಕುಗಳು / NBFC (ಬ್ಯಾಂಕೇತರ ಹಣಕಾಸು ಸಂಸ್ಥೆಗಳು) ಗಳು ಮುಂತಾದ ಯಾವುದೇ ಹಣಕಾಸು ಸಂಸ್ಥೆಗಳು ವರ್ಚುವಲ್ ಕರೆನ್ಸಿಗಳ (VC s) ಕಾರಣದಿಂದಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ನಷ್ಟ ಅಥವಾ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸಿದರ ಕುರಿತ ವಿವರಗಳನ್ನು ಆರ್‌ಬಿಐ ನೀಡಿಲ್ಲ ಎಂದಿದೆ.
 • ವರ್ಚುವಲ್ ಕರೆನ್ಸಿಗಳನ್ನು ದೇಶದಲ್ಲಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟ ಪಡಿಸಿರುವುದರಿಂದ, ಆರ್‌ಬಿಐ ಹೊರಡಿಸಿರುವ ಸುತ್ತೋಲೆಯು ‘ಅಸಮಂಜಸ’ ವಾಗಿದೆ.
 • ಇದಲ್ಲದೆ, ಸುತ್ತೋಲೆ ಹೊರಡಿಸುವ ಮೊದಲು ಇತರ ಆಯ್ಕೆಗಳ ಲಭ್ಯತೆಯನ್ನು ಆರ್‌ಬಿಐ ಪರಿಗಣಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
 • ಇದಲ್ಲದೆ, ಎರಡು ಕರಡು ಮಸೂದೆಗಳು ಮತ್ತು ಹಲವಾರು ಸಮಿತಿಗಳ ಹೊರತಾಗಿಯೂ ಕೇಂದ್ರ ಸರ್ಕಾರವು ಅಧಿಕೃತ ಡಿಜಿಟಲ್ ರೂಪಾಯಿಯನ್ನು ಪರಿಚಯಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ.

ಕ್ರಿಪ್ಟೋಕರೆನ್ಸಿ’ ಎಂದರೇನು?

ಕ್ರಿಪ್ಟೋಕರೆನ್ಸಿಗಳು  (Cryptocurrencies) ಒಂದು ರೀತಿಯ ಡಿಜಿಟಲ್ ಕರೆನ್ಸಿಯಾಗಿದ್ದು, ಇದನ್ನು ಕ್ರಿಪ್ಟೋಗ್ರಫಿ ನಿಯಮಗಳ ಆಧಾರದ ಮೇಲೆ ನಿರ್ವಹಿಸಲಾಗುತ್ತದೆ ಮತ್ತು ರಚಿಸಲಾಗುತ್ತದೆ. ಕ್ರಿಪ್ಟೋಗ್ರಫಿ ಎನ್ನುವುದು ಕೋಡಿಂಗ್ ಭಾಷೆಯನ್ನು ಪರಿಹರಿಸುವ ಕಲೆ. ಇದು ಎಲೆಕ್ಟ್ರಾನಿಕ್ ನಗದು ವ್ಯವಸ್ಥೆಯಾಗಿದ್ದು, ಇದರಲ್ಲಿ ಯಾವುದೇ ಹಣಕಾಸು ಸಂಸ್ಥೆ ಇಲ್ಲದೆ ಒಂದು ಪಕ್ಷವು ಇನ್ನೊಂದು ಪಕ್ಷಕ್ಕೆ ಆನ್‌ಲೈನ್ ಪಾವತಿ ಮಾಡುತ್ತದೆ. ಅಥವಾ

ಕ್ರಿಪ್ಟೋಕರೆನ್ಸಿ ಎನ್ನುವುದು ಸದ್ಯ ಚಲಾವಣೆಯಲ್ಲಿರುವ ಸ್ವತಂತ್ರ ಡಿಜಿಟಲ್ ದುಡ್ಡುಗಳಲ್ಲಿ ಒಂದಾಗಿದ್ದು, ಈ ದುಡ್ಡಿಗೆ ಯಾವುದೇ ದೇಶದ ಕೇಂದ್ರೀಯ ಬ್ಯಾಂಕ್ ನ ಖಾತರಿ ಇರುವುದಿಲ್ಲ. ಬಳಕೆದಾರರ ಸಮುದಾಯವೇ ಇದಕ್ಕೆ ಖಾತರಿ ನೀಡುತ್ತದೆ.ಸರಳವಾಗಿ ಹೇಳುವುದಾದರೆ ಇದು ಯಾವುದೇ ಸರ್ಕಾರದ ನಿಯಂತ್ರಣದಲ್ಲಿಲ್ಲದ ಪ್ರಪಂಚದ ಯಾವುದೇ ಭಾಗದಲ್ಲಿಯೂ ಚಲಾವಣೆ ಮಾಡಬಹುದಾದ ದುಡ್ಡು ಆಗಿದೆ.

ಉದಾಹರಣೆ: ಬಿಟ್‌ಕಾಯಿನ್, ಎಥೆರಿಯಮ್  (Ethereum) ಇತ್ಯಾದಿಗಳು.

block_chain

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ರಾಷ್ಟ್ರೀಯ ಸಾಗರ ಆಮೆ ಕ್ರಿಯಾಯೋಜನೆ.

(National Marine Turtle Action Plan) :

ದೈತ್ಯ ಸಮುದ್ರ ಜೀವಿಗಳು ಮತ್ತು ಆಮೆಗಳಿಗೆ ಸಂರಕ್ಷಣಾ ಮಾದರಿಯನ್ನು ಹೊಂದುವ ಅಗತ್ಯವನ್ನು ಮನಗಂಡ  ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEF &CC) ‘ಮೆರೈನ್ ಮೆಗಾ ಫೌನಾ ಸ್ಟ್ರಾಂಡಿಂಗ್ ಗೈಡ್‌ಲೈನ್ಸ್’ ಮತ್ತು ‘ನ್ಯಾಷನಲ್ ಮೆರೈನ್ ಆಮೆ ಕ್ರಿಯಾ ಯೋಜನೆ’ ಬಿಡುಗಡೆ ಮಾಡಿದೆ. ಈ ದಾಖಲೆಗಳು ಸಂರಕ್ಷಣೆಗಾಗಿ ಅಂತರ-ವಲಯ ಕ್ರಮವನ್ನು ಉತ್ತೇಜಿಸುವ ಮಾರ್ಗಗಳನ್ನು ಮತ್ತು ವಿಧಾನಗಳನ್ನು ರೂಪಿಸುತ್ತವೆ.

ಮುಂಬೈ ಪೊಲೀಸರು ಪ್ರಾರಂಭಿಸಿದ ‘ಟಾಪ್ 25’ ಅಭಿಯಾನ:

 • ಮುಂಬೈ ಪೊಲೀಸರು ಸಾಮಾನ್ಯ ಜನರಿಗೆ ಅಪಾಯವನ್ನುಂಟುಮಾಡುವ ಸಾಮರ್ಥ್ಯವಿರುವ ಇತಿಹಾಸ ಹಾಳೆಗಳನ್ನು (ಹಳೆಯ ಪಾತಕಿಗಳನ್ನು) ಮೇಲ್ವಿಚಾರಣೆ ಮಾಡಲು ಟಾಪ್ 25’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
 • ಮುಂಬೈ ನಗರದ ಎಲ್ಲ 95 ಪೊಲೀಸ್ ಠಾಣೆಗಳಲ್ಲಿ ಅವರ ವ್ಯಾಪ್ತಿಯಲ್ಲಿರುವ ‘ಟಾಪ್ 25’ ಕ್ರಿಮಿನಲ್ ಅಂಶಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಮತ್ತು ಈ ಇತಿಹಾಸ-ಹಾಳೆಗಳಿಂದ ಉತ್ತಮ ನಡವಳಿಕೆ ಹೊಂದುವಂತೆ ಅವರಿಂದ ಬಾಂಡ್‌ಗೆ ಸಹಿ ಮಾಡಿಸಲಾಗುವುದು, ಒಂದು ವೇಳೆ ಅವರು ಅದನ್ನು ಉಲ್ಲಂಘಿಸಿದರೆ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗುವುದು.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos