Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 29 ಜನವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಷ್ಟ್ರಪತಿಗಳ ಭಾಷಣ.

2. ಇಬ್ಬರು ಐಎಎಸ್ ಅಧಿಕಾರಿಗಳನ್ನು ಖಂಡಿಸಿದ ಆಂಧ್ರಪ್ರದೇಶ ರಾಜ್ಯ ಚುನಾವಣಾ ಆಯೋಗ.

3. ನಗರ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿ) ಸುಧಾರಣೆಗಳನ್ನು ಪೂರ್ಣಗೊಳಿಸಿದ ಐದನೇ ರಾಜ್ಯವಾಗಿ ರಾಜಸ್ಥಾನ.

4. ಕೋವಿಡ್ -19 ಕಾರ್ಯಕ್ಷಮತೆ ಶ್ರೇಯಾಂಕ.

5. ಚೀನಾದೊಂದಿಗಿನ ಸಂಬಂಧಗಳ ಸುಧಾರಣೆಗೆ ವಿದೇಶಾಂಗ ಸಚಿವರ ಸಲಹೆಗಳು.

6. ವಿಶ್ವ ಚಿನ್ನ ಮಂಡಳಿ. (World Gold Council).

7. ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) / ‘ಇರಾನ್ ಪರಮಾಣು ಒಪ್ಪಂದ’.

8. ಲಸಿಕೆಯ ಜಾಗತಿಕ ವಿತರಣೆಯು ಒಂದು ಸವಾಲಾಗಿದೆ ಎಂದ WHO ಕಾರ್ಯನಿರ್ವಾಹಕ ಮಂಡಳಿ :

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು:

1. ಕಲಾ ಉತ್ಸವ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ರಾಷ್ಟ್ರಪತಿಗಳ ಭಾಷಣ:


ಸಂದರ್ಭ:

ಬಜೆಟ್ ಅಧಿವೇಶನದ ಆರಂಭದಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಾಡುವ ಭಾಷಣವನ್ನು ಬಹಿಷ್ಕರಿಸುವುದಾಗಿ  18 ವಿರೋಧ ಪಕ್ಷಗಳು ಘೋಷಿಸಿವೆ. ಮೂರು ಕೃಷಿ ಕಾನೂನುಗಳನ್ನು ವಿರೋಧಿಸುವ ರೈತರಿಗೆ ಬೆಂಬಲವಾಗಿ  ಒಗ್ಗಟ್ಟನ್ನು ಪ್ರದರ್ಶಿಸಲು ವಿರೋಧ ಪಕ್ಷಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ.

ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣ – ಸಾಂವಿಧಾನಿಕ ನಿಬಂಧನೆಗಳು:

 • ಸಂವಿಧಾನದ ವಿಧಿ 87 (1) ರ ಪ್ರಕಾರ – ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯ ನಂತರ ಮತ್ತು ಪ್ರತಿ ವರ್ಷದ ಮೊದಲ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿಗಳು ಸಂಸತ್ತಿನ ಉಭಯ ಸದನಗಳನ್ನು ಒಟ್ಟಿಗೆ ಸಂಬೋಧಿಸಬೇಕು ಮತ್ತು ಸಂಸತ್ತಿಗೆ ಜಂಟಿ ಅಧಿವೇಶನವನ್ನು ಕರೆದ ಕಾರಣಗಳನ್ನು ನೀಡಬೇಕು.

ಮೊದಲ ಸಾಂವಿಧಾನಿಕ ತಿದ್ದುಪಡಿ: ಮೂಲ, ಸಂವಿಧಾನದಲ್ಲಿ ರಾಷ್ಟ್ರಪತಿಗಳು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಪ್ರತಿ ಅಧಿವೇಶನದ” ಆರಂಭದಲ್ಲಿ ಭಾಷಣ ಮಾಡುವ ಪ್ರಾವಧಾನವನ್ನು ಸಂವಿಧಾನವು ಒದಗಿಸಿದೆ. ಈ ಸ್ಥಿತಿಯನ್ನು ಸಂವಿಧಾನದ ಮೊದಲ ತಿದ್ದುಪಡಿಯಿಂದ ಬದಲಾಯಿಸಲಾಗಿದೆ.

ಅಧ್ಯಕ್ಷರ / ರಾಷ್ಟ್ರಪತಿಗಳ ಭಾಷಣದಲ್ಲಿ ಏನಿರುತ್ತದೆ?

ರಾಷ್ಟ್ರಪತಿಗಳ ಭಾಷಣವು ಮುಖ್ಯವಾಗಿ ಮುಂಬರುವ ವರ್ಷದ ಸರ್ಕಾರದ ನೀತಿ ಆದ್ಯತೆಗಳು ಮತ್ತು ಯೋಜನೆಗಳನ್ನು ಎತ್ತಿ ತೋರಿಸುತ್ತದೆ. ಭಾಷಣದ ಕರಡು ಪ್ರತಿಯನ್ನು ಸಚಿವ ಸಂಪುಟವು ರಚಿಸುತ್ತದೆ ಮತ್ತು ಇದು ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಸಮಗ್ರ ರೂಪರೇಖೆಯನ್ನು ಪ್ರಸ್ತುತಪಡಿಸುತ್ತದೆ.

ವಂದನಾ ನಿರ್ಣಯ: (Motion of thanks):

ಅಧ್ಯಕ್ಷರ ಭಾಷಣದ ನಂತರ, ಪ್ರತಿ ಸದನದಲ್ಲಿ ಆಡಳಿತ ಪಕ್ಷದ ಸಂಸದರು ಧನ್ಯವಾದಗಳನ್ನು ಅರ್ಪಿಸುತ್ತಾರೆ. ಈ ಸಮಯದಲ್ಲಿ, ರಾಜಕೀಯ ಪಕ್ಷಗಳು ವಂದನಾ ನಿರ್ಣಯದ ಕುರಿತು ಚರ್ಚಿಸುತ್ತವೆ ಮತ್ತು ತಿದ್ದುಪಡಿಗೆ ಸಲಹೆಗಳನ್ನು ನೀಡುತ್ತವೆ.

ರಾಷ್ಟ್ರಪತಿ ಭಾಷಣಕ್ಕಾಗಿ ಅನುಸರಿಸುವ ಕಾರ್ಯವಿಧಾನಗಳು ಯಾವುವು ?

ರಾಷ್ಟ್ರಪತಿ ಅಥವಾ ರಾಜ್ಯಪಾಲರ ಭಾಷಣದ ನಂತರ, ಭಾಷಣದ ವಿಷಯದ ಬಗ್ಗೆ ಮಾತ್ರವಲ್ಲದೆ, ದೇಶದಲ್ಲಿ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ವಿಶಾಲವಾದ ಚರ್ಚೆ ನಡೆಯುತ್ತದೆ. ನಂತರ ಇದು ಬಜೆಟ್ ಕುರಿತ ಚರ್ಚೆಗೆ ದಾರಿ ಮಾಡಿಕೊಡುತ್ತದೆ.

ಅಧ್ಯಕ್ಷರು ತಮ್ಮ ಭಾಷಣದ ವಿಷಯವನ್ನು ಅಥವಾ ಪಠ್ಯವನ್ನು ಒಪ್ಪದಿದ್ದರೆ, ಅದನ್ನು ಓದಲು ಅವರು ನಿರ್ಬಂಧಿತರಾಗಿದ್ದಾರೆಯೇ?

 • ಶಾಸಕಾಂಗವನ್ನು ಉದ್ದೇಶಿಸಿ ಭಾಷಣ ಮಾಡುವ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಲು ರಾಷ್ಟ್ರಪತಿ ಅಥವಾ ರಾಜ್ಯಪಾಲರು ನಿರಾಕರಿಸಲಾಗುವುದಿಲ್ಲ. ಆದರೆ ಸರ್ಕಾರ ಸಿದ್ಧಪಡಿಸಿದ ಭಾಷಣದ ವಿಷಯ ವಸ್ತುವಿನಿಂದ ಅವರು ವಿಮುಖರಾಗುವ ಸಂದರ್ಭಗಳು ಉಂಟಾಗಬಹುದು.
 • ಇಲ್ಲಿಯವರೆಗೆ, ಯಾವುದೇ ರಾಷ್ಟ್ರಪತಿಗಳು ಇದನ್ನು ಮಾಡಿದ ಉದಾಹರಣೆಗಳಿಲ್ಲ. ಆದರೆ, ರಾಜ್ಯಪಾಲರು ಭಾಷಣದ ಒಂದು ಭಾಗವನ್ನು ವಿಧಾನಸಭೆಯಲ್ಲಿ ಬಿಟ್ಟ ಒಂದು ಸಂದರ್ಭವಿದೆ.
 • 1969 ರಲ್ಲಿ, ಪಶ್ಚಿಮ ಬಂಗಾಳ ರಾಜ್ಯಪಾಲ ಧರ್ಮ್‌ವೀರ್ ಯುನೈಟೆಡ್ ಫ್ರಂಟ್ ಸರ್ಕಾರ ಸಿದ್ಧಪಡಿಸಿದ ಭಾಷಣದ ಎರಡು ಪ್ಯಾರಾಗಳನ್ನು ಕೈಬಿಟ್ಟರು. ಭಾಷಣದ ಕೈಬಿಡಲಾದ ಭಾಗದಲ್ಲಿ, ಕಾಂಗ್ರೆಸ್ ಆಡಳಿತದ ಕೇಂದ್ರ ಸರ್ಕಾರವು ಪ್ರಥಮ ಯುನೈಟೆಡ್ ಫ್ರಂಟ್ ಸರ್ಕಾರವನ್ನು ವಜಾಗೊಳಿಸುವುದು ಅಸಂವಿಧಾನಿಕ ಎಂದು ವಿವರಿಸಲಾಗಿದೆ.

ಇತರ ದೇಶಗಳಲ್ಲಿ ಇಂತಹ ನಿಬಂಧನೆಗಳಿವೆಯೆ?

ಇತರೆ ಪ್ರಜಾಪ್ರಭುತ್ವ ದೇಶಗಳಲ್ಲಿ ಇದೇ ರೀತಿಯ ನಿಬಂಧನೆಗಳು ಅಸ್ತಿತ್ವದಲ್ಲಿವೆ.

 • ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇದನ್ನು “ಸ್ಟೇಟ್ ಆಫ್ ದಿ ಯೂನಿಯನ್ ” (ಒಕ್ಕೂಟ ವ್ಯವಸ್ಥೆಯೊಳಗಿನ ರಾಜ್ಯ) ಎಂದು ಕರೆಯಲಾಗುತ್ತದೆ. ಈ ಪದವು ಯು.ಎಸ್. ಸಂವಿಧಾನದ ಲೇಖನದಿಂದ ಬಂದಿದೆ, ಅದು ಅಧ್ಯಕ್ಷರು “ಕಾಲಕಾಲಕ್ಕೆ, ಒಕ್ಕೂಟದ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಗೆ (ಸಂಸತ್ತು) ಮಾಹಿತಿಯನ್ನು ಒದಗಿಸುತ್ತಾರೆ  ಮತ್ತು ಕಾಂಗ್ರೆಸ್ ಅಗತ್ಯ ಮತ್ತು ಸೂಕ್ತ ಎನಿಸುವಂತಹ ತ್ವರಿತ ಕ್ರಮಗಳನ್ನು ಶಿಫಾರಸು ಮಾಡುತ್ತದೆ”.
 • ಯುನೈಟೆಡ್ ಕಿಂಗ್‌ಡಂನಲ್ಲಿ, ಈ ಪ್ರಕ್ರಿಯೆಯನ್ನು ಕ್ವೀನ್ಸ್ ಸ್ಪೀಚ್’ (ರಾಣಿಯ ಭಾಷಣ) ಎಂದು ಕರೆಯಲಾಗುತ್ತದೆ ಮತ್ತು ಇದು ಸಂಸದೀಯ ವರ್ಷದ ವಿಧ್ಯುಕ್ತ ಉದ್ಘಾಟನಾ ಸಮಾರಂಭದ ಸಂಕೇತವಾಗಿದೆ.

 

ವಿಷಯಗಳು : ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಇಬ್ಬರು ಐಎಎಸ್ ಅಧಿಕಾರಿಗಳನ್ನು ಖಂಡಿಸಿದ ಆಂಧ್ರಪ್ರದೇಶ ರಾಜ್ಯ ಚುನಾವಣಾ ಆಯೋಗ :


ಸಂದರ್ಭ :

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆಗಳ ಬಗ್ಗೆ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯುಕ್ತ ಎನ್ ರಮೇಶ್ ಕುಮಾರ್ ನೀಡಿರುವ ಖಂಡನಾ ನೋಟಿಸ್‌ಗೆ ಅಥವಾ ಜ್ಞಾಪನಾ ಪತ್ರಕ್ಕೆ ಆಂಧ್ರಪ್ರದೇಶ ಸರ್ಕಾರ “ಆಕ್ಷೇಪ” ವ್ಯಕ್ತಪಡಿಸಿದೆ.

ಏನಿದು ಸಮಸ್ಯೆ?

 • ಇತ್ತೀಚೆಗೆ, ಪಂಚಾಯತಿ ರಾಜ್ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕೃಷ್ಣ ದ್ವಿವೇದಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಎಂ.ಗಿರಿಜಾ ಶಂಕರ್ ಅವರು 2021 ರ ಚುನಾವಣಾ ಪಟ್ಟಿಯನ್ನು ಪ್ರಕಟಿಸುವಲ್ಲಿ ‘ವಿಫಲರಾಗಿದ್ದಕ್ಕಾಗಿ’ ಆಂಧ್ರಪ್ರದೇಶ ರಾಜ್ಯ ಚುನಾವಣಾ ಆಯುಕ್ತರು ಆ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ‘ಖಂಡನೆ’ ಮಾಡಿದ್ದರು.
 • ಖಂಡನಾ ಪ್ರಕ್ರಿಯೆಯಲ್ಲಿ, ರಮೇಶ್ ಕುಮಾರ್ ಐಎಎಸ್ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಯನ್ನು ಶಿಫಾರಸು ಮಾಡಿದ್ದರು.

ರಾಜ್ಯ ಸರ್ಕಾರದ ನಿಲುವೇನು ?

ಈ ಅಧಿಕಾರವು ರಾಜ್ಯ ಚುನಾವಣಾ ಆಯುಕ್ತರ ಅಧಿಕಾರ ವ್ಯಾಪ್ತಿಯ ಹೊರಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ.

ಮಾರ್ಗಸೂಚಿಗಳ ಪ್ರಕಾರ, ಚುನಾವಣಾ ಆಯೋಗವು-

ಆದೇಶಗಳನ್ನು ಧಿಕ್ಕರಿಸಿದ್ದಕ್ಕಾಗಿ ಅಥವಾ ಚುನಾವಣಾ ಪಟ್ಟಿಗಳನ್ನು ತಯಾರಿಸಲು, ಚುನಾವಣಾ ಕರ್ತವ್ಯವನ್ನು ಕಡೆಗಣಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಅಥವಾ ಸಾರ್ವಜನಿಕ ವಲಯದ ಸಂಸ್ಥೆ ಅಥವಾ ಸಂಪೂರ್ಣ ಅಥವಾ ಭಾಗಶಃ ಧನಸಹಾಯ ಪಡೆದ ಯಾವುದೇ ಸ್ವಾಯತ್ತ ಸಂಸ್ಥೆ, ಅಧೀನದಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿ ಅಥವಾ ಪೊಲೀಸರನ್ನು ಅಮಾನತುಗೊಳಿಸಬಹುದು ಮತ್ತು ಶಿಸ್ತು ತೆಗೆದುಕೊಳ್ಳಲು ಸಮರ್ಥ ಪ್ರಾಧಿಕಾರಕ್ಕೆ ಶಿಫಾರಸುಗಳನ್ನು ಸಹ ಮಾಡಬಹುದು.

ಆದಾಗ್ಯೂ, ಖಂಡನೆ’ (Censure)   ಅನ್ನು ಸಣ್ಣ ದಂಡದ ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ರಾಜ್ಯದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರ ಮೇಲೆ ಹೇಳಲಾದ ಈ ‘ದಂಡವನ್ನು’ ವಿಧಿಸಲು ರಾಜ್ಯ ಸರ್ಕಾರವು ಸಮರ್ಥ ಪ್ರಾಧಿಕಾರವಾಗಿದೆ ಮತ್ತು ನಿಯಮ 10 ರ ಅಡಿಯಲ್ಲಿ ವಿಧಿಸಲಾದ ಕಾರ್ಯ ವಿಧಾನವನ್ನು ಅನುಸರಿಸುವ ಮೂಲಕ , ಇದನ್ನು ಐಎಎಸ್ (ಡಿ & ಎ) ನಿಯಮಗಳು, 1969 ರಿಂದ ನಿಯಂತ್ರಿಸಲಾಗುತ್ತದೆ.

 

ವಿಷಯಗಳು: ಒಕ್ಕೂಟ ಮತ್ತು ರಾಜ್ಯಗಳ ಕಾರ್ಯಗಳು ಮತ್ತು ಜವಾಬ್ದಾರಿಗಳು, ಸಂಯುಕ್ತ ವ್ಯವಸ್ಥೆಯ ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು, ಸ್ಥಳೀಯ ಮಟ್ಟದವರೆಗೆ ಅಧಿಕಾರ ಮತ್ತು ಹಣಕಾಸು ಹಂಚಿಕೆ ಮತ್ತು ಅದರಲ್ಲಿರುವ ಸವಾಲುಗಳು.

ನಗರ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿ) ಸುಧಾರಣೆಗಳನ್ನು ಪೂರ್ಣಗೊಳಿಸಿದ ಐದನೇ ರಾಜ್ಯವಾಗಿ ರಾಜಸ್ಥಾನ :


(Rajasthan becomes the 5th State to complete Urban Local Bodies (ULB) reforms).

ಸಂದರ್ಭ :

ನಗರ ಸ್ಥಳೀಯ ಸಂಸ್ಥೆಗಳಲ್ಲಿ (Urban Local Bodies– ULB) ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಐದನೇ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಸುಧಾರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆಂಧ್ರಪ್ರದೇಶ ಮಧ್ಯಪ್ರದೇಶ ಮಣಿಪುರ ಮತ್ತು ತೆಲಂಗಾಣ ಎಂಬ ನಾಲ್ಕು ರಾಜ್ಯಗಳ ಸಾಲಿಗೆ ರಾಜಸ್ಥಾನವು ಸೇರಿಕೊಂಡಿದೆ.

 • ಈ ಸುಧಾರಣೆಗಳನ್ನು ಹಣಕಾಸು ಸಚಿವಾಲಯದ ಅಧೀನದ ಖರ್ಚು ಇಲಾಖೆ ನಿಗದಿಪಡಿಸಿದೆ.

ಪರಿಣಾಮಗಳು:

 • ಸುಧಾರಣೆಗಳಿಗೆ ಸಂಬಂಧಿಸಿದ ಹೆಚ್ಚುವರಿ ಸಾಲ ಪಡೆಯಲು ರಾಜಸ್ಥಾನ ಅರ್ಹವಾಗಿದೆ.
 • ಅದರಂತೆ ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆಯುವ ಮೂಲಕ 2,731 ಕೋಟಿ ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ಸಂಪನ್ಮೂಲಗಳನ್ನು ಸಂಗ್ರಹಿಸಲು ರಾಜ್ಯಕ್ಕೆ ಖರ್ಚು ಇಲಾಖೆಯಿಂದ ಅವಕಾಶ ನೀಡಲಾಗಿದೆ.

ಈ ಉದ್ದೇಶಗಳನ್ನು ಸಾಧಿಸಲು ಖರ್ಚು ಇಲಾಖೆ ನಿಗದಿಪಡಿಸಿದ ಸುಧಾರಣೆಗಳು :

 • ರಾಜ್ಯಗಳು ತಿಳಿಸುವುದು
 • ಪ್ರಸ್ತುತ ಚಾಲ್ತಿಯಲ್ಲಿರುವ ವಲಯ ದರಗಳಿಗೆ (ಆಸ್ತಿ ವಹಿವಾಟಿನ ಮಾರ್ಗಸೂಚಿಗಳು) ಅನುಗುಣವಾಗಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಮೂಲ ದರಗಳು, ಮತ್ತು
 • ನೀರು ಸರಬರಾಜು, ಒಳಚರಂಡಿ, ಒಳಚರಂಡಿ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ವೆಚ್ಚ / ಹಿಂದಿನ ಹಣದುಬ್ಬರವನ್ನು ಪ್ರತಿಬಿಂಬಿಸುವ ಬಳಕೆದಾರರ ಶುಲ್ಕಗಳ ಮೂಲ ದರಗಳು.
 • ಆಸ್ತಿ ತೆರಿಗೆ / ಉಪಯುಕ್ತತೆ / ಬಳಕೆದಾರರ ಶುಲ್ಕದ ಮೂಲ ದರಗಳ ಹೆಚ್ಚಳಕ್ಕೆ ಅನುಗುಣವಾಗಿ ಆವರ್ತಕ ಹೆಚ್ಚಳಕ್ಕೆ ರಾಜ್ಯಗಳು ವ್ಯವಸ್ಥೆಯನ್ನು ರೂಪಿಸುತ್ತವೆ.

ಇದಲ್ಲದೆ, ಕೇಂದ್ರವು ಸುಧಾರಣೆಗಳಿಗಾಗಿ 4 ನಾಗರಿಕ ಕೇಂದ್ರಿತ ಪ್ರದೇಶಗಳನ್ನು ಗುರುತಿಸಿದೆ ಅವುಗಳು ಇಂತಿವೆ:

 • ಇದರ ಅಡಿಯಲ್ಲಿ, ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ( One Nation One Ration Card ) ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು.
 • ಸುಲಲಿತ ವ್ಯಾಪಾರ ಸುಧಾರಣೆಗಳು.
 • ನಗರ ಸ್ಥಳೀಯ ಸಂಸ್ಥೆಗಳಲ್ಲಿನ / ಉಪಯುಕ್ತತೆ ಸೌಲಭ್ಯಗಳಲ್ಲಿ ಸುಧಾರಣೆಗಳು.
 • ಇಂಧನ / ವಿದ್ಯುತ್ ಕ್ಷೇತ್ರದ ಸುಧಾರಣೆಗಳು.

 

ವಿಷಯಗಳು : ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು

ಕೋವಿಡ್ -19 ಕಾರ್ಯಕ್ಷಮತೆ ಶ್ರೇಯಾಂಕ :


COVID-19 performance ranking:

ಸಂದರ್ಭ :

ಇತ್ತೀಚೆಗೆ, ಆಸ್ಟ್ರೇಲಿಯಾದ ಚಿಂತಕರ ಚಾವಡಿಯಾದ (Australian think tank), ಲೋವಿ ಇನ್ಸ್ಟಿಟ್ಯೂಟ್ (Lowy Institute) COVID-19 ಕುರಿತ “ ಕಾರ್ಯಕ್ಷಮತೆ ಸೂಚ್ಯಂಕ ”   (performance index) ವನ್ನು ಬಿಡುಗಡೆ ಮಾಡಿದೆ.

ಕಾರ್ಯಕ್ಷಮತೆ ಸೂಚ್ಯಾಂಕದ ಕುರಿತು :

 • ಈ ಸೂಚ್ಯಂಕವು ‘ದೇಶಗಳ ಸಾಪೇಕ್ಷ ಕಾರ್ಯಕ್ಷಮತೆಯನ್ನು ಅಳೆಯಲು’ ಪ್ರಯತ್ನಿಸುತ್ತದೆ.
 • ಸೂಚ್ಯಂಕವು ಆರು ವಿಭಿನ್ನ ಸೂಚಕಗಳನ್ನು ಆಧರಿಸಿದೆ, ಇದರಲ್ಲಿ ಪ್ರಮಾಣೀಕೃತ / ದೃಢೀಕೃತ ಪ್ರಕರಣಗಳು ಮತ್ತು ಒಂದು ಮಿಲಿಯನ್ ಜನಸಂಖ್ಯೆಗೆ ಸಾವುಗಳು ಮತ್ತು ಪರೀಕ್ಷೆಯ ಪ್ರಮಾಣಗಳು ಸೇರಿವೆ.
 • ಈ ಸೂಚ್ಯಂಕವು ಕೋವಿಡ್ -19 ಪ್ರತಿಕ್ರಿಯೆಯಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಮತ್ತು ಹೋಲಿಸಬಹುದಾದ ಡೇಟಾವನ್ನು ಬಳಸುತ್ತದೆ.

ದೇಶಗಳಿಗೆ ಶ್ರೇಯಾಂಕ ಪ್ರಕ್ರಿಯೆ:

 • ಈ ಸೂಚ್ಯಂಕದಲ್ಲಿ, ಪ್ರದೇಶಗಳು, ರಾಜಕೀಯ ವ್ಯವಸ್ಥೆಗಳು, ಜನಸಂಖ್ಯೆಯ ಗಾತ್ರ ಮತ್ತು ಆರ್ಥಿಕ ಅಭಿವೃದ್ಧಿಯ ಆಧಾರದ ಮೇಲೆ ದೇಶಗಳನ್ನು ವಿಶಾಲ ವರ್ಗಗಳಾಗಿ ವಿಂಗಡಿಸಲಾಗಿದೆ.
 • ವಿವಿಧ ರಾಷ್ಟ್ರಗಳು ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ರೀತಿಯಲ್ಲಿ ಅಸ್ತಿತ್ವದಲ್ಲಿ ಇರಬಹುದಾದ ವ್ಯತ್ಯಾಸಗಳನ್ನು ನಿರ್ಧರಿಸಲು ಇದನ್ನು ಮಾಡಲಾಗಿದೆ.
 • ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಅಥವಾ ದತ್ತಾಂಶದ ಕೊರತೆಯಿಂದಾಗಿ ಚೀನಾವನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ವಿವಿಧ ದೇಶಗಳ ಕಾರ್ಯಕ್ಷಮತೆ:

 • ನ್ಯೂಜಿಲೆಂಡ್, ವಿಯೆಟ್ನಾಂ ಮತ್ತು ತೈವಾನ್ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.
 • ಭಾರತವು 86 ನೇ ಸ್ಥಾನದಲ್ಲಿದೆ.
 • ಶ್ರೀಲಂಕಾ, ದಕ್ಷಿಣ ಏಷ್ಯಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು 10 ನೇ ಸ್ಥಾನದಲ್ಲಿದೆ.
 • ಸೂಚ್ಯಂಕದಲ್ಲಿ ಮಾಲ್ಡೀವ್ಸ್ 25 ನೇ ಸ್ಥಾನ, ಪಾಕಿಸ್ತಾನ 69 ನೇ ಸ್ಥಾನ, ನೇಪಾಳ 70 ಮತ್ತು ಬಾಂಗ್ಲಾದೇಶ 84 ನೇ ಸ್ಥಾನದಲ್ಲಿದೆ.
 • ಬ್ರೆಜಿಲ್‌ ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದೆ.
 • ಮೆಕ್ಸಿಕೊ, ಕೊಲಂಬಿಯಾ, ಇರಾನ್ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳನ್ನು ಕಾರ್ಯಕ್ಷಮತೆಯ ದೃಷ್ಟಿಯಿಂದ ಕೆಳ ಹಂತದ ಐದು ದೇಶಗಳಲ್ಲಿ ಸೇರಿಸಲಾಗಿದೆ.

ಕೋವಿಡ್ -19 ‘ಕಾರ್ಯಕ್ಷಮತೆ ಸೂಚ್ಯಂಕ’ದ ಸಾಮಾನ್ಯ ಅವಲೋಕನ:

 • ಸೂಚ್ಯಂಕದ ಪ್ರಕಾರ, ಕೊರೊನೊವೈರಸ್ ಬಿಕ್ಕಟ್ಟನ್ನು ಕೆಲವು ದೇಶಗಳು ಇತರ ದೇಶಗಳಿಗಿಂತ ಉತ್ತಮವಾಗಿ ನಿರ್ವಹಿಸುತ್ತಿದ್ದರೂ, ಹೆಚ್ಚಿನ ದೇಶಗಳು “ ಸಾಧಾರಣ-ಕಾರ್ಯಕ್ಷಮತೆ” ಮಟ್ಟದಲ್ಲಿ ಮಾತ್ರ ಪರಸ್ಪರರನ್ನು ಹಿಂದಿಕ್ಕಿರುವುದನ್ನು ಸೂಚ್ಯಂಕ ಗಮನಿಸಿದೆ.
 • ಆರ್ಥಿಕ ಅಭಿವೃದ್ಧಿಯ ಮಟ್ಟ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳು ಕೊರೊನೊವೈರಸ್ ಪ್ರತಿಕ್ರಿಯೆಯ ಮೇಲೆ ನಿರೀಕ್ಷಿತ ಪರಿಣಾಮವನ್ನು ಬೀರಿಲ್ಲ.
 • ಸರಾಸರಿ, ಸರ್ವಾಧಿಕಾರಿ ಸಂಸ್ಥೆಗಳನ್ನು ಹೊಂದಿರುವ ದೇಶಗಳು ವೈರಸ್ ನಿಯಂತ್ರಣಕ್ಕಾಗಿ ಯಾವುದೇ ‘ದೀರ್ಘಕಾಲೀನ ಪ್ರಯೋಜನಗಳನ್ನು’ ಪಡೆದಿಲ್ಲ.
 • ಪ್ರಜಾಪ್ರಭುತ್ವ ರಾಷ್ಟ್ರಗಳು ಸಾಮಾನ್ಯವಾಗಿ ಇತರ ಸರ್ಕಾರಗಳಿಗಿಂತ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಿವೆ.
 • ಜನಸಂಖ್ಯೆಯ ಗಾತ್ರಕ್ಕೆ ಅನುಗುಣವಾಗಿ ದೇಶಗಳ ಕಾರ್ಯಕ್ಷಮತೆಯಲ್ಲಿ ‘ಬಹಳ ಕಡಿಮೆ ಅಥವಾ ಕಾಣಬಲ್ಲ ವ್ಯತ್ಯಾಸವಿದೆ’.
 • ಕೊರೊನೊವೈರಸ್ ಪ್ರತಿಕ್ರಿಯೆ ಕಾರ್ಯಕ್ಷಮತೆಯ ವಿಷಯದಲ್ಲಿ, 10 ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ದೇಶಗಳು 2020 ರಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶಗಳನ್ನು ಹಿಂದಿಕ್ಕಿದವು, ಆದರೆ ವರ್ಷದ ಅಂತ್ಯದ ವೇಳೆಗೆ ಈ ಮುನ್ನಡೆಯು ಗಮನಾರ್ಹವಾಗಿ ಕಡಿಮೆಯಾಗಿದೆ.

 

ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ  ದೇಶಗಳೊಂದಿಗಿನ ಸಂಬಂಧಗಳು

ಚೀನಾದೊಂದಿಗಿನ ಸಂಬಂಧಗಳ ಸುಧಾರಣೆಗೆ ವಿದೇಶಾಂಗ ಸಚಿವರ ಸಲಹೆಗಳು :


ಸಂದರ್ಭ :

2020 ಅನ್ನು ಗಡಿ ಬಿಕ್ಕಟ್ಟಿನಿಂದಾಗಿ  ತೀವ್ರವಾಗಿ  ತೊಂದರೆಗೀಡಾದ” (  “profoundly disturbed”) ಸಂಬಂಧದಲ್ಲಿ “ಅಸಾಧಾರಣ ಒತ್ತಡ”ದ ವರ್ಷ ಅಥವಾ ‘ತೀವ್ರ ಉದ್ವೇಗ’ವರ್ಷ (a year of “exceptional stress”) ಎಂದು ಕರೆದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಭಾರತ-ಚೀನಾ ಸಂಬಂಧಗಳನ್ನು ಸುಧಾರಿಸಲು “ಪರಸ್ಪರ ಗೌರವ, ಪರಸ್ಪರ ಸಂವೇದನೆ ಮತ್ತು ಪರಸ್ಪರ ಹಿತಾಸಕ್ತಿಗಳನ್ನು” ಗುರುತಿಸುವುದು  ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಹಿನ್ನೆಲೆ:

ಕಳೆದ ವರ್ಷದ ಮೇ ಆರಂಭದಲ್ಲಿ  ಚೀನಾವು ವಾಸ್ತವ ನಿಯಂತ್ರಣ ರೇಖೆ (LAC) ಯ ಉಲ್ಲಂಘನೆಯಂತಹ ಪ್ರಚೋದನಕಾರಿ ಕೃತ್ಯ ಮತ್ತು  ಸೈನ್ಯ ಜಮಾವಣೆಯಂತಹ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದ ನಂತರ, ಹೋದ ವರ್ಷ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಮತ್ತು ಅಪರಿಚಿತ ಸಂಖ್ಯೆಯ ಚೀನೀ ಸೈನಿಕರು ಪ್ರಾಣ ಕಳೆದುಕೊಂಡರು, ಭಾರತವು, ಚೀನಾದ ಇಂತಹ ಕ್ರಮಗಳನ್ನು ಅಂದರೆ  ಸೈನ್ಯವನ್ನು ಜಮಾವಣೆ ಮಾಡುವುದು, ಮತ್ತು ಪೂರ್ವ ಲಡಾಕ್‌ನ ಹಲವಾರು ಪ್ರದೇಶಗಳಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು (the Line of Actual Control -LAC) ಪುನರ್ ರಚಿಸುವ (redraw) ಏಕಪಕ್ಷೀಯ ಪ್ರಯತ್ನ (unilateral attempt) ಎಂದು ವಿವರಿಸಿದೆ.

ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ಚೀನಾದ ಕ್ರಮಗಳು:  

 • 2010 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಭಾರತೀಯ ನಾಗರಿಕರಿಗೆ ಸ್ಟೇಪಲ್ಡ್ ವೀಸಾಗಳ ವಿತರಣೆ ಮಾಡಿದುದು.
 • ಭಾರತದ ಕೆಲವು ಮಿಲಿಟರಿ ಸಾಂಸ್ಥಿಕ ಘಟಕಗಳೊಂದಿಗೆ (military commands) ಮಾತುಕತೆ ನಡೆಸಲು ಚೀನಾದ ಅಸಮ್ಮತಿ (ಬೀಜಿಂಗ್ ಅದೇ ವರ್ಷ ಉತ್ತರ ಸೇನಾ ಕಮಾಂಡರ್ ನ ಆತಿಥ್ಯ ವಹಿಸಲು ನಿರಾಕರಿಸಿತು).
 • ಪರಮಾಣು ಸರಬರಾಜುದಾರರ ಗುಂಪಿನ (Nuclear Suppliers Group ) ಸದಸ್ಯತ್ವ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವವನ್ನು ಪಡೆಯುವ ಭಾರತದ ಪ್ರಯತ್ನಗಳಿಗೆ ಚೀನಾ ವಿರೋಧಿಸುತ್ತಿದೆ.
 • ಪಾಕಿಸ್ತಾನದ ಭಯೋತ್ಪಾದಕರನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವುದಕ್ಕೆ ಅಡ್ಡಗಾಲು ಹಾಕುತ್ತಿದೆ.
 • ಚೀನಾದ ‘ಬೆಲ್ಟ್ ಮತ್ತು ರಸ್ತೆ’ ಉಪಕ್ರಮದ ಪ್ರಮುಖ ಯೋಜನೆಯಾದ ‘ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್’ ಯೋಜನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ.

ವಿದೇಶಾಂಗ ಸಚಿವರ ಸಲಹೆಗಳು:

ಈ ಬಿಕ್ಕಟ್ಟನ್ನು ಪರಿಹರಿಸಲು, ಸಂಬಂಧವನ್ನು ಮುಂದೆ ಸಾಗಿಸಲು ವಿದೇಶಾಂಗ  ವ್ಯವಹಾರಗಳ ಸಚಿವರು “ಮೂರು ಪರಸ್ಪರ” ಮತ್ತು “ಎಂಟು ವಿಶಾಲ ನೆಲೆಯ” ಪ್ರಸ್ತಾಪಗಳನ್ನು ಸೂಚಿಸಿದ್ದಾರೆ.

ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಿ ಮುಂದಿನ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಂಟು ಅಂಶಗಳ ತತ್ವವನ್ನು ಉಲ್ಲೇಖಿಸಿ ವಿದೇಶಾಂಗ ಸಚಿವರು ಹೀಗೆ ಹೇಳಿದರು. ಅವುಗಳೆಂದರೆ:

 • ಈಗಾಗಲೇ ಅಂತಿಮ ಹಂತ ತಲುಪಿದ ಒಪ್ಪಂದಗಳನ್ನು (ಅಕ್ಷರ ಮತ್ತು ಉತ್ಸಾಹ) (letter and spirit) ಪ್ರಾಮಾಣಿಕವಾಗಿ ಪಾಲಿಸಬೇಕು.
 • ವಾಸ್ತವ ನಿಯಂತ್ರಣ ರೇಖೆಯ ನಿರ್ವಹಣೆಗೆ ಸಂಬಂಧಿಸಿದ ಮೊದಲಿನ ಒಪ್ಪಂದಗಳನ್ನು ಸಂಪೂರ್ಣವಾಗಿ ಅನುಸರಿಸಬೇಕು.
 • ವಾಸ್ತವ ನಿಯಂತ್ರಣ ರೇಖೆಯನ್ನು ಎರಡು ದೇಶಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಗೌರವಿಸಬೇಕು. ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಏಕಪಕ್ಷೀಯ ಪ್ರಯತ್ನವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ.
 • ಗಡಿ ಪ್ರದೇಶಗಳಲ್ಲಿನ ಶಾಂತಿಪಾಲನೆಯು ಚೀನಾದೊಂದಿಗಿನ ಸಂಬಂಧಗಳ ಒಟ್ಟಾರೆ ಅಭಿವೃದ್ಧಿಗೆ ಆಧಾರವಾಗಿದೆ ಮತ್ತು ಯಾವುದೇ ಅಡ್ಡಿ ಉಂಟಾದರೆ ಅದು ನಿಸ್ಸಂದೇಹವಾಗಿ ಉಳಿದ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.
 • ಎರಡೂ ದೇಶಗಳು ಬಹು-ಧ್ರುವ ಜಗತ್ತಿಗೆ (multipolar world) ಬದ್ಧವಾಗಿವೆ ಮತ್ತು ಬಹು-ಧ್ರುವ ಏಷ್ಯಾ (multipolar asia) ಇದರ ಪ್ರಮುಖ ಘಟಕ ಫಲಿತಾಂಶವಾಗಿದೆ ಎಂದು ಎರಡೂ ದೇಶಗಳು ಒಪ್ಪಿಕೊಳ್ಳಬೇಕು.

ತೀರ್ಮಾನ:

ಸ್ವಾಭಾವಿಕವಾಗಿ, ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಆಸಕ್ತಿಗಳು, ಕಾಳಜಿಗಳು ಮತ್ತು ಆದ್ಯತೆಗಳು ಇರುತ್ತವೆ, ಆದರೆ ಭಾವನೆಗಳು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ಅಂತಿಮವಾಗಿ, ದೊಡ್ಡ ದೇಶಗಳ ನಡುವಿನ ಸಂಬಂಧಗಳು ಪರಸ್ಪರ ಪೂರಕ ಸ್ವರೂಪದಲ್ಲಿರುವುದು ಅವಶ್ಯಕ. ಎರಡು ದೇಶಗಳು ಉದಯೋನ್ಮುಖ ಶಕ್ತಿಗಳಾಗಿರುವುದರಿಂದ, ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಆಕಾಂಕ್ಷೆಗಳಿವೆ ಮತ್ತು ಅದನ್ನು ನಿರ್ಲಕ್ಷಿಸಲಾಗುವುದಿಲ್ಲ.

 

 

ವಿಷಯಗಳು : ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಏಜೆನ್ಸಿಗಳು ಮತ್ತು ವೇದಿಕೆಗಳು ಅವುಗಳ ರಚನೆ ಮತ್ತು ಆದೇಶ.

ವಿಶ್ವ ಚಿನ್ನ ಮಂಡಳಿ. (World Gold Council):


ಸಂದರ್ಭ :

ವಿಶ್ವ ಚಿನ್ನ ಮಂಡಳಿ ಯ (WGC) ಪ್ರಕಾರ, 2020 ರಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆಯು  ಕಳೆದ 25 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದೆ ಮತ್ತು ಲಾಕ್ಡೌನ್ ಮತ್ತು ಕೋವಿಡ್ -19 ಕಾರಣದಿಂದಾಗಿ ಹೆಚ್ಚಿನ ಬೆಲೆಗಳನ್ನು ದಾಖಲಿಸಿದೆ. 2019 ರಲ್ಲಿ 690.4 ಟನ್ ಇದ್ದ ಚಿನ್ನದ ಬೇಡಿಕೆಗೆ ಹೋಲಿಸಿದರೆ  2020 ರಲ್ಲಿ ಚಿನ್ನದ ಒಟ್ಟು ಬೇಡಿಕೆಯು 446.4 ಟನ್ ಆಗಿದೆ.

ಚಿನ್ನ ಮತ್ತು ಆರ್ಥಿಕತೆ: Gold & Economy:

ಕರೆನ್ಸಿಯಾಗಿ: 20 ನೇ ಶತಮಾನದಲ್ಲಿ, ಚಿನ್ನವನ್ನು ಜಾಗತಿಕ ಮೀಸಲು ಕರೆನ್ಸಿಯಾಗಿ ಹೆಚ್ಚಿನ ಅವಧಿಗೆ ಬಳಸಲಾಗುತ್ತಿತ್ತು. ಚಿನ್ನದ ಗುಣಮಟ್ಟ  (Gold Standard) ವನ್ನು  ಅಮೆರಿಕ ಸಂಯುಕ್ತ ಸಂಸ್ಥಾನವು 1971 ರವರೆಗೆ ಬಳಸುತ್ತಲೇ ಇತ್ತು.

ಹಣದುಬ್ಬರದ ವಿರುದ್ಧದ ಬೇಲಿಯಾಗಿ ( ಉಳಿತಾಯ ರೂಪದಲ್ಲಿ) : ಅಂತರ್ಗತ ಮೌಲ್ಯ ಮತ್ತು ಸೀಮಿತ ಪೂರೈಕೆಯಿಂದಾಗಿ ಹಣದುಬ್ಬರದ ಸಮಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಇದನ್ನು  ದುರ್ಬಲಗೊಳಿಸಲು ಸಾಧ್ಯವಿಲ್ಲದ ಕಾರಣ, ಚಿನ್ನವು ಇತರ ರೂಪದ ಕರೆನ್ಸಿಗಳಿಗಿಂತ ಉತ್ತಮ ಬೆಲೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ವಿತ್ತೀಯ ಸಾಮರ್ಥ್ಯ:

ಒಂದು ದೇಶವು ರಫ್ತುಗಿಂತ ಹೆಚ್ಚಿನದನ್ನು ಆಮದು ಮಾಡಿಕೊಂಡಾಗ, ಅದರ ಕರೆನ್ಸಿಯ ಮೌಲ್ಯವು ಕುಸಿಯುತ್ತದೆ. ಮತ್ತೊಂದೆಡೆ, ಒಂದು ದೇಶವು ನಿವ್ವಳ ರಫ್ತುದಾರನಾಗಿದ್ದರೆ, ಅದರ ಕರೆನ್ಸಿಯ ಮೌಲ್ಯವು ಹೆಚ್ಚಾಗುತ್ತದೆ. ಹೀಗಾಗಿ, ಚಿನ್ನವನ್ನು ರಫ್ತು ಮಾಡುವ ಅಥವಾ ಚಿನ್ನದ ಸಂಗ್ರಹವನ್ನು ಹೊಂದಿರುವ ದೇಶಗಳು, ಚಿನ್ನದ ಬೆಲೆಗಳು ಹೆಚ್ಚಾದಂತೆ ಅವುಗಳ ವಿತ್ತೀಯ ಶಕ್ತಿಯು ಹೆಚ್ಚಾಗುತ್ತದೆ, ಅವುಗಳ ಒಟ್ಟು ರಫ್ತಿನ ಮೌಲ್ಯವು ಹೆಚ್ಚಾಗುತ್ತದೆ.

ವಿಶ್ವ ಚಿನ್ನ ಮಂಡಳಿಯ ಕುರಿತು : 

 • ಇದು ಚಿನ್ನದ ಉದ್ಯಮಕ್ಕೆ ಇರುವ ಮಾರುಕಟ್ಟೆ ಅಭಿವೃದ್ಧಿ ಸಂಸ್ಥೆಯಾಗಿದೆ.
 • ಇದು ಚಿನ್ನದ ಗಣಿಗಾರಿಕೆಯಿಂದ ಹಿಡಿದು ಹೂಡಿಕೆಯವರೆಗಿನ ಉದ್ಯಮದ ಎಲ್ಲಾ ಭಾಗಗಳಲ್ಲಿ ಸೇವೆ ಸಲ್ಲಿಸುತ್ತದೆ ಮತ್ತು ಚಿನ್ನದ ಬೇಡಿಕೆಯನ್ನು ಉತ್ತೇಜಿಸುವ ಮತ್ತು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.
 • ಇದು ವಿಶ್ವದ ಪ್ರಮುಖ ಚಿನ್ನದ ಗಣಿಗಾರಿಕೆ ಕಂಪನಿಗಳನ್ನು ಒಳಗೊಂಡಿರುವ ಸಂಘವಾಗಿದೆ.
 • ಇದು ಜವಾಬ್ದಾರಿಯುತ ರೀತಿಯಲ್ಲಿ ಗಣಿಗಾರಿಕೆ ಮಾಡಲು ತನ್ನ ಸದಸ್ಯರನ್ನು ಬೆಂಬಲಿಸುತ್ತದೆ ಮತ್ತು ಸಂಘರ್ಷರಹಿತ ಚಿನ್ನದ ಮಾನದಂಡವನ್ನು ಅಭಿವೃದ್ಧಿಪಡಿಸುವಲ್ಲಿ ಕೂಡ ತನ್ನ ಸದಸ್ಯರನ್ನು ಬೆಂಬಲಿಸುತ್ತದೆ.
 • ಯುನೈಟೆಡ್ ಕಿಂಗ್‌ಡಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಶ್ವ ಚಿನ್ನ ಮಂಡಳಿಯು, ಭಾರತ, ಚೀನಾ, ಸಿಂಗಾಪುರ್, ಜಪಾನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಗಳಲ್ಲಿ ಕಚೇರಿಗಳನ್ನು ಹೊಂದಿದೆ.

 

ವಿಷಯಗಳು:   ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) / ‘ಇರಾನ್ ಪರಮಾಣು ಒಪ್ಪಂದ’:


Joint Comprehensive Plan of Action :

ಸಂದರ್ಭ :

ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ರವರು ಈಗ ನಿಷ್ಕ್ರಿಯವಾಗಿರುವ ಜಂಟಿ ಸಮಗ್ರ ಕ್ರಿಯಾಯೋಜನೆ (Joint Comprehensive Plan of Action- JCPOA ಅಥವಾ “ ಇರಾನ್ ಪರಮಾಣು ಒಪ್ಪಂದ”) ಯ, ನಿಯಮಗಳಿಗೆ  ಇರಾನ್ ಬದ್ಧವಾಗಿದ್ದರೆ ಅಮೆರಿಕ ಸಂಯುಕ್ತ ಸಂಸ್ಥಾನವು ಕೂಡ ಮತ್ತೆ ಒಪ್ಪಂದಕ್ಕೆ ಸೇರುತ್ತದೆ ಎಂದು ದೃಢಪಡಿಸಿದರು.

 • ಟ್ರಂಪ್ ಆಡಳಿತವು 2018ರಲ್ಲಿ ಒಪ್ಪಂದದಿಂದ ಹಿಂದೆ ಸರಿದಿತ್ತು.

ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಕುರಿತು :

ಇರಾನ್ ಮತ್ತು ವಿಶ್ವದ ಆರು ದೇಶಗಳಾದ ಅಮೆರಿಕ, ಚೀನಾ, ರಷ್ಯಾ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಗಳ ನಡುವೆ ಇರಾನ್ ಪರಮಾಣು ಒಪ್ಪಂದಕ್ಕೆ 2015 ರಲ್ಲಿ ಸಹಿ ಹಾಕಲಾಯಿತು.

ಈ ಒಪ್ಪಂದವು,ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುವುದಕ್ಕೆ ಪ್ರತಿಯಾಗಿ ಅದರ ಮೇಲೆ ಹೇರಲಾದ ನಿರ್ಬಂಧಗಳಿಂದ ಮುಕ್ತಿ ನೀಡಿತು.

ಈ ಒಪ್ಪಂದದ ಅಡಿಯಲ್ಲಿ :

 • ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಅಡಿಯಲ್ಲಿ, ಟೆಹ್ರಾನ್ ಮಧ್ಯಮ-ಪುಷ್ಟೀಕರಿಸಿದ ಯುರೇನಿಯಂನ ಸಂಗ್ರಹವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಕಡಿಮೆ-ಸಮೃದ್ಧ ಯುರೇನಿಯಂನ ಶೇಖರಣೆಯನ್ನು 98% ರಷ್ಟು ಕಡಿಮೆ ಮಾಡುತ್ತದೆ ಮತ್ತು ಮುಂದಿನ 13 ವರ್ಷಗಳಲ್ಲಿ ಅದರ ಮೂರನೇ ಎರಡರಷ್ಟು ಅನಿಲ ಕೇಂದ್ರಾಪಗಾಮಿಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿತು.
 • ಒಪ್ಪಂದದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಜಂಟಿ ಆಯೋಗವನ್ನು ಸ್ಥಾಪಿಸಲಾಯಿತು.

 

ವಿಷಯಗಳು : ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಏಜೆನ್ಸಿಗಳು ಮತ್ತು ವೇದಿಕೆಗಳು ಅವುಗಳ ರಚನೆ ಮತ್ತು ಆದೇಶ.

ಲಸಿಕೆಯ ಜಾಗತಿಕ ವಿತರಣೆ ಒಂದು ಸವಾಲಾಗಿದೆ ಎಂದ WHO ಕಾರ್ಯನಿರ್ವಾಹಕ ಮಂಡಳಿ :


ಸಂದರ್ಭ :

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಮತ್ತು ಭಾರತದ ಕೇಂದ್ರ ಆರೋಗ್ಯ ಸಚಿವರೂ ಆದ ಹರ್ಷ್ ವರ್ಧನ್ ರವರು ಇತ್ತೀಚೆಗೆ, 2020 ನೇ ವರ್ಷವು ಕೋವಿಡ್ -19 ಗೆ ಲಸಿಕೆಯ ಆವಿಷ್ಕಾರದ ವರ್ಷವಾಗಿದ್ದರೆ 2021 ನೇ ವರ್ಷವು ಭಾರತಕ್ಕೆ ವಿಶ್ವದಾದ್ಯಂತದ ಹೆಚ್ಚು  ಅಗತ್ಯವಿರುವ ಜನರಿಗೆ ಲಸಿಕೆಯನ್ನು ತಲುಪಿಸುವ ಸವಾಲನ್ನು ಎದುರಿಸುತ್ತಿರುವ ವರ್ಷವಾಗಿದೆ ಎಂದು ಹೇಳಿದ್ದಾರೆ.

ಏನಿದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿ ?:

ವಿಶ್ವ ಆರೋಗ್ಯ ಸಂಸ್ಥೆ ಯು (WHO) ಎರಡು ನಿರ್ಣಾಯಕ ಅಂಗಗಳನ್ನು ಹೊಂದಿದೆ; ಒಂದು ವಿಶ್ವ ಆರೋಗ್ಯ ಸಭೆ (World Health Assembly) ಮತ್ತು ಇನ್ನೊಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿ, (WHO Executive Board) ಡಬ್ಲ್ಯುಎಚ್‌ಒ ದ ಪ್ರಧಾನ ಕಚೇರಿಯು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿದೆ.

ಕಾರ್ಯನಿರ್ವಾಹಕ ಮಂಡಳಿಯ ಸಂಯೋಜನೆ:

 • WHO ಕಾರ್ಯನಿರ್ವಾಹಕ ಮಂಡಳಿಯು ಆರೋಗ್ಯ ಕ್ಷೇತ್ರದ 34 ತಜ್ಞ ಸದಸ್ಯರನ್ನು ಒಳಗೊಂಡಿದೆ, ಅವರು ವಿಶ್ವ ಆರೋಗ್ಯ ಅಸೆಂಬ್ಲಿಯ ನಿರ್ಧಾರಗಳು ಮತ್ತು ನೀತಿಗಳನ್ನು ಪರಿಣಾಮಕಾರಿಯಾಗಿ ಮಾಡುತ್ತಾರೆ.
 • ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರನ್ನು ವಿಶ್ವ ಆರೋಗ್ಯ ಸಂಸ್ಥೆಯ ಆರು ಪ್ರಾದೇಶಿಕ ಗುಂಪುಗಳಲ್ಲಿ ಒಂದಾದ ಆಫ್ರಿಕನ್ ಪ್ರದೇಶ ಅಥವಾ ವಲಯ, ಅಮೇರಿಕನ್ ಪ್ರದೇಶ, ಆಗ್ನೇಯ ಏಷ್ಯಾ ಪ್ರದೇಶ, ಯುರೋಪಿಯನ್ ಪ್ರದೇಶ, ಪೂರ್ವ ಮೆಡಿಟರೇನಿಯನ್ ಪ್ರದೇಶ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶದಿಂದ ಪರ್ಯಾಯವಾಗಿ ಆಯ್ಕೆ ಮಾಡಲಾಗುತ್ತದೆ.

ಅಧಿಕಾರಾವಧಿ:

ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.

 • ಮಂಡಳಿಯ ಕಾರ್ಯಗಳು: 
 • ಕಾರ್ಯನಿರ್ವಾಹಕ ಮಂಡಳಿಯು ವಿಶ್ವ ಆರೋಗ್ಯ ಅಸೆಂಬ್ಲಿಯ ವೇಳಾಪಟ್ಟಿಯನ್ನು ನಿರ್ಧರಿಸುತ್ತದೆ ಮತ್ತು ಸದನವು ಅಂಗೀಕರಿಸುವ ನಿರ್ಣಯಗಳನ್ನು ಸಿದ್ಧಪಡಿಸುತ್ತದೆ.
 • ಇದು ವಿಶ್ವ ಆರೋಗ್ಯ ಸಭೆಯ ನಿರ್ಧಾರಗಳು ಮತ್ತು ನೀತಿಗಳನ್ನು ಪರಿಣಾಮಕಾರಿಯಾಗಿ ಮಾಡುತ್ತದೆ.
 • ವಿಶ್ವ ಆರೋಗ್ಯ ಅಸೆಂಬ್ಲಿಗೆ ಸಲಹೆ ನೀಡುತ್ತದೆ ಮತ್ತು ಅದರ ಕೆಲಸವನ್ನು ಸುಗಮಗೊಳಿಸುತ್ತದೆ.
 • ಕಾರ್ಯನಿರ್ವಾಹಕ ಮಂಡಳಿ ಮತ್ತು ಆರೋಗ್ಯ ಅಸೆಂಬ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಸದಸ್ಯ ರಾಷ್ಟ್ರಗಳು ಎತ್ತಿರುವ ಕಳವಳಗಳನ್ನು ಪರಿಹರಿಸಲು ಒಂದು ವೇದಿಕೆಯನ್ನು ಒದಗಿಸುತ್ತವೆ.
 • ಮಂಡಳಿ ಮತ್ತು ಆರೋಗ್ಯ ಅಸೆಂಬ್ಲಿಗಳು ಮೂರು ವಿಧದ ದಾಖಲೆಗಳನ್ನು ಸಿದ್ಧಪಡಿಸುತ್ತವೆ – ಎರಡೂ ಸಂಸ್ಥೆಗಳು ಅಂಗೀಕರಿಸಿದ ನಿರ್ಣಯಗಳು ಮತ್ತು ನಿರ್ಧಾರಗಳು, ಡಬ್ಲ್ಯುಎಚ್‌ಒ ಅಧಿಕೃತ ಪ್ರಕಟಣೆಗಳಿಂದ ಪ್ರಕಟಿಸಬೇಕಾದ ಅಧಿಕೃತ ಅಂಕಿಅಂಶಗಳು ಅಥವಾ ದಾಖಲೆಗಳು ಮತ್ತು ಎರಡೂ ಸಂಸ್ಥೆಗಳ ಸಭೆ ಅಥವಾ ಅಧಿವೇಶನದಲ್ಲಿ” ಮಂಡಿಸಬೇಕಾದ ದಾಖಲೆಗಳು.

ಪ್ರಮುಖ ಸಂಗತಿಗಳು:

 • ಭಾರತವು ಜನವರಿ 12, 1948 ರಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಸಂವಿಧಾನದ ಒಂದು ಭಾಗ ಅಥವಾ ಪಕ್ಷವಾಯಿತು.
 • ಆಗ್ನೇಯ ಏಷ್ಯಾದ ಮೊದಲ ಪ್ರಾದೇಶಿಕ ನಿರ್ದೇಶಕರು 1948-1968ರ ನಡುವೆ ಸೇವೆ ಸಲ್ಲಿಸಿದ ಭಾರತೀಯರಾದ ಡಾ. ಚಂದ್ರ ಮಣಿ.
 • 2019 ರಿಂದ, ಡಾ.ಸೌಮ್ಯಾ ಸ್ವಾಮಿನಾಥನ್ ರವರು WHO ನ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕಲಾ ಉತ್ಸವ :

 • ಕಲಾ ಉತ್ಸವವು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಈಗ ಶಿಕ್ಷಣ ಸಚಿವಾಲಯ ಎಂದು ಕರೆಯಲ್ಪಡುವ) ಒಂದು ಉಪಕ್ರಮವಾಗಿದೆ.
 • ದೇಶದ ದ್ವಿತೀಯ ಹಂತದ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಪೋಷಿಸುವ ಮತ್ತು ಪ್ರದರ್ಶಿಸುವ ಮೂಲಕ ಶಿಕ್ಷಣದಲ್ಲಿ ಕಲೆಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos